Tag: ಜಾಂಟಿ ರೋಡ್

  • `ಇಂಡಿಯಾ’ಳಿಗೆ `ಇಂಡಿಯಾ’ದಿಂದ ಹುಟ್ಟುಹಬ್ಬದ ಶುಭಕೋರಿದ ಮೋದಿ!

    `ಇಂಡಿಯಾ’ಳಿಗೆ `ಇಂಡಿಯಾ’ದಿಂದ ಹುಟ್ಟುಹಬ್ಬದ ಶುಭಕೋರಿದ ಮೋದಿ!

    ನವದೆಹಲಿ: ದಕ್ಷಿಣ ಆಫ್ರಿಕಾದ ಖ್ಯಾತ ಮಾಜಿ ಕ್ರಿಕೆಟಿಗ ಜಾಂಟಿ ರೋಡ್ಸ್ ಅವರ ಮಗಳು ಇಂಡಿಯಾಳ ದ್ವಿತೀಯ ವರ್ಷದ ಹುಟ್ಟುಬ್ಬಕ್ಕೆ ಪ್ರಧಾನಿ ನರೇಂದ್ರ ಮೋದಿ ಶುಭ ಕೋರಿದ್ದಾರೆ.

    ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಜಾಂಟಿ ರೋಡ್ಸ್, ಮುಂಬೈ ಇಂಡಿಯನ್ಸ್ ಕೋಚಿಂಗ್ ಸಿಬ್ಬಂದಿಯ ಅವಿಭಾಜ್ಯ ಅಂಗವಾಗಿರೋ ರೋಡ್ಸ್ ಭಾರತದ ಆಚರಣೆ, ಸಂಸ್ಕೃತಿಗೆ ಮನಸೋತು ತಮ್ಮ ಮಗಳಿಗೆ ಇಂಡಿಯಾ ಅಂತಾ ಹೆಸರಿಟ್ಟಿದ್ದರು.

    ಭಾನುವಾರದಂದು ಮಗಳ ಹುಟ್ಟುಹಬ್ಬಕ್ಕೆ ಟ್ವಿಟ್ಟರ್‍ನಲ್ಲಿ ವಿಶ್ ಮಾಡಿದ ರೋಡ್ಸ್ ಮಗಳ ಜೊತೆಗಿನ ಒಂದು ಫೋಟೋ ಹಾಕಿ, `ಹ್ಯಾಪಿ ಬರ್ತ್‍ಡೇ ಬೇಬಿ ಇಂಡಿಯಾ’ ಎಂದು ಟ್ವೀಟ್ ಮಾಡಿದ್ದರು.

    ಆಶ್ಚರ್ಯವೆಂಬಂತೆ ಪ್ರಧಾನಿ ಮೋದಿ ಕೂಡ ಈ ಪೋಸ್ಟ್‍ಗೆ ಪ್ರತಿಕ್ರಿಯಿಸಿ, `ಇಂಡಿಯಾಳಿಗೆ ಇಂಡಿಯಾದಿಂದ ಹುಟ್ಟುಹಬ್ಬದ ಶುಭಾಶಯ’ ಅಂತಾ ಶುಭ ಕೋರಿದ್ದಾರೆ. ಪ್ರಧಾನಿ ಮೋದಿಯ ಟ್ವೀಟ್‍ಗೆ ಪ್ರತಿಕ್ರಿಯಿಸಿದ ರೋಡ್ಸ್, ಧನ್ಯವಾದಗಳು ಮೋದಿ ಜೀ. ಭಾರತದಲ್ಲಿ ಹುಟ್ಟಿದ ಇಂಡಿಯಾ ನಿಜಕ್ಕೂ ಧನ್ಯಳು ಎಂದಿದ್ದಾರೆ.

    ರಾಷ್ಟ್ರೀಯ ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿದ ಸಂದರ್ಭದಲ್ಲಿ ರೋಡ್ಸ್, ಭಾರತದಲ್ಲಿನ ಶ್ರೀಮಂತ ಸಂಸ್ಕೃತಿ, ಪರಂಪರೆ ಹಾಗೂ ಸಂಪ್ರದಾಯಕ್ಕೆ ನಾನು ಮಸೋತಿದ್ದೇನೆ. ಭಾರತ ಒಂದು ಆಧ್ಯಾತ್ಮಿಕ ದೇಶ. ಇದೇ ವೇಳೆ ಮುಂದಾಲೋಚನೆಯುಳ್ಳ ರಾಷ್ಟ್ರವೂ ಹೌದು. ನಾವು ಪ್ರತಿದಿನ ಈ ದೇಶದ ಬಗ್ಗೆ ಹೊಸದನ್ನು ತಿಳಿದುಕೊಳ್ಳುತ್ತೇವೆ. ಮನುಷ್ಯರಾಗಿ ನಾವು ನಮ್ಮನ್ನು ಅರಿಯುವದನ್ನು ಇಷ್ಟಪಡುತ್ತೇವೆ. ಅದೇ ರೀತಿ ಮಗಳು ಇಂಡಿಯಾ ಕೂಡ ತನ್ನನ್ನು ತಾನು ಅರಿಯುತ್ತಾಳೆ ಎಂದು ಭಾವಿಸಿದ್ದೇನೆ ಎಂದು ಹೇಳಿದ್ದರು.

    ಇಂಡಿಯಾ 2015ರ ಏಪ್ರಿಲ್ 23ರಂದು ಮುಂಬೈನ ಸಾಂತಕ್ರೂಸ್‍ನ ಸೂರ್ಯ ಮದರ್ ಅಂಡ್ ಚೈಲ್ಡ್ ಕೇರ್ ಆಸ್ಪತ್ರೆಯಲ್ಲಿ ಜನಿಸಿದ್ದಳು. ಭಾರದಲ್ಲಿ ಜನಿಸಿದ್ದರಿಂದ ಆಕೆಗೆ ಇಂಡಿಯಾ ಅಂತಾ ನಾಮಕರಣ ಮಾಡಲಾಗಿತ್ತು. 2016ರಲ್ಲಿ ಜಾಂಟಿ ರೋಡ್ಸ್ ತಮ್ಮ ಮಗಳಿಗಾಗಿ ಸಾಂತಕ್ರೂಸ್‍ನಲ್ಲಿರೋ ಪೇಜಾವರ ಮಠಕ್ಕೆ ಭೇಟಿ ಕೊಟ್ಟು ಪೂಜೆ ಸಲ್ಲಿಸಿದ್ದರು.