Tag: ಜಲ ವಿವಾದ

  • ಜಲ ವಿವಾದ ಬಗೆಹರಿಸಲು ಪಾಕಿಸ್ತಾನದ ನಿಯೋಗ ಭಾರತಕ್ಕೆ ಭೇಟಿ

    ಇಸ್ಲಾಮಾಬಾದ್: ಉಭಯ ದೇಶಗಳ ನಡುವಿನ ಜಲ ವಿವಾದದ ಕುರಿತು ಮಾತುಕತೆ ನಡೆಸಲು ಪಾಕಿಸ್ತಾನ ನಿಯೋಗದ 5 ಸದಸ್ಯರು ಮೇ 30-31 ರಂದು ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ವರದಿಗಳು ತಿಳಿಸಿವೆ.

    ಸಿಂಧೂ ನದಿ ವಿವಾದವನ್ನು ಬಗೆಹರಿಸುವ ಬಗ್ಗೆ ಮೇ 30 ಹಾಗೂ 31ರಂದು ನವದೆಹಲಿಯಲ್ಲಿ ಮಾತುಕತೆ ನಡೆಯಲಿದೆ ಎಂದು ಪಾಕಿಸ್ತಾನದ ಕಮಿಷನರ್ ಸೈಯದ್ ಮಹಮ್ಮದ್ ಮೆಹರ್ ಅಲಿ ಷಾ ತಿಳಿಸಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಓಮಿಕ್ರಾನ್ ಹೊಸ ತಳಿ ಪ್ರಕರಣ ಪತ್ತೆ – 7 ಪಾಸಿಟಿವ್

    ಪಾಕಿಸ್ತಾನದ ನಿಯೋಗ ವಾಘಾ ಗಡಿ ಮೂಲಕ ಭಾರತಕ್ಕೆ ಪ್ರವಾಸ ಮಾಡಲಿದ್ದು, ಭಾರತದೊಂದಿಗಿನ ಮಾತುಕತೆಯಲ್ಲಿ ಪ್ರವಾಹ ಮುನ್ಸೂಚನೆಯ ದತ್ತಾಂಶವನ್ನು ಹಂಚಿಕೊಳ್ಳುವ ಬಗ್ಗೆ ಹಾಗೂ ಪಿಸಿಐಡಬ್ಲ್ಯು(ಸಿಂಧೂ ನೀರಿನ ಪಾಕಿಸ್ತಾನದ ಆಯುಕ್ತ)ವಿನ ವಾರ್ಷಿಕ ವರದಿಯನ್ನು ಚರ್ಚಿಸಲಾಗುವುದು ಎಂದು ಹೇಳಿದ್ದಾರೆ. ಇದನ್ನೂ ಓದಿ: ನಾಲ್ಕೈದು ದಿನ ತಿರುಪತಿ ಭೇಟಿಯನ್ನು ಮುಂದೂಡಿ: ಟಿಟಿಡಿ ಮನವಿ

    ಮಾರ್ಚ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ ಸಿಂಧೂ ಜಲ ಒಪ್ಪಂದವನ್ನು ಅದರ ನೈಜ ಸ್ಫೂರ್ತಿಯೊಂದಿಗೆ ಕಾರ್ಯಗತಗೊಳಿಸುವ ಬದ್ಧತೆ ಬಗ್ಗೆ ಮತ್ತೆ ಪ್ರಸ್ತಾಪ ನಡೆಸಿತ್ತು. ಈ ಬಗ್ಗೆ ಖಾಯಂ ಸಿಂಧೂ ಆಯೋಗ ಮುಂದಿನ ಸಭೆಯನ್ನು ಭಾರತದಲ್ಲಿ ನಡೆಸುವ ಬಗ್ಗೆ ಭರವಸೆ ನೀಡಿತ್ತು.

  • ಜಲ ವಿವಾದದಲ್ಲಿ ಬಿಜೆಪಿ ರಾಜಕೀಯ: 8 ವಕೀಲರನ್ನು ಕೈಬಿಟ್ಟು ಬೆಂಗ್ಳೂರಿನಿಂದ ಇಬ್ಬರ ನೇಮಕ

    ಜಲ ವಿವಾದದಲ್ಲಿ ಬಿಜೆಪಿ ರಾಜಕೀಯ: 8 ವಕೀಲರನ್ನು ಕೈಬಿಟ್ಟು ಬೆಂಗ್ಳೂರಿನಿಂದ ಇಬ್ಬರ ನೇಮಕ

    – ಕೃಷ್ಣಾ ವ್ಯಾಜ್ಯದ ಅಂತಿಮ ವಿಚಾರಣೆಯಲ್ಲಿ ಬದಲಾವಣೆ
    – ಹಿರಿಯ ವಕೀಲರಿಂದ ಅಸಮಾಧಾನ

    ನವದೆಹಲಿ: ರಾಜ್ಯ ಬಿಜೆಪಿ ಸರ್ಕಾರಕ್ಕೆ ನದಿ ನೀರಿನ ವಿಚಾರದಲ್ಲೂ ರಾಜಕೀಯ ಬೇಕಿತ್ತಾ? ನೆಲ-ಜಲಕ್ಕಿಂತ ಬಿಜೆಪಿ ಸರ್ಕಾರಕ್ಕೆ ರಾಜಕೀಯ ಮುಖ್ಯವಾಯಿತೇ ಎನ್ನುವ ಪ್ರಶ್ನೆ ಈಗ ಎದ್ದಿದೆ.

    ಹೌದು. ಜಲ ವಿವಾದ ಸಂಬಂಧ ಹಲವು ವರ್ಷಗಳಿಂದ ಕರ್ನಾಟಕ ಪರ ವಾದ ಮಂಡಿಸುತ್ತಿದ್ದ 8 ವಕೀಲರನ್ನು ರಾಜ್ಯ ಸರ್ಕಾರ ಕೈಬಿಟ್ಟಿರುವ ನಡೆಯಿಂದಾಗಿ ಈ ಪ್ರಶ್ನೆ ಎದ್ದಿದೆ.

    ಕೃಷ್ಣಾ, ಮಹದಾಯಿ ಹಾಗೂ ಕಾವೇರಿ ವಿವಾದದಲ್ಲಿ ರಾಜ್ಯದ ಪರ ವರ್ಷಗಳಿಂದ ವಾದ ಮಂಡಿಸುತ್ತಿದ್ದ ವಕೀಲರನ್ನು ಎತ್ತಂಗಡಿ ಮಾಡಲಾಗಿದೆ. ಯಾವುದೇ ಚರ್ಚೆ ನಡೆಸದೇ 8 ಜನ ವಕೀಲರನ್ನು ಕೈಬಿಟ್ಟು ಬೆಂಗಳೂರಿಂದ ಇಬ್ಬರು ವಕೀಲರ ನೇಮಕ ಮಾಡಲಾಗಿದೆ. ರಾಜ್ಯದ ಸರ್ಕಾರದ ಈ ನಡೆ ಈಗ ಚರ್ಚೆಗೆ ಗ್ರಾಸವಾಗಿದೆ.

    ಹಿರಿಯ ಸುಪ್ರೀಂ ಕೋರ್ಟ್ ವಕೀಲರಾದ ಶಾಮ್ ದಿವಾನ್, ಮೋಹನ್ ಕಾತರಕಿ ಹಾಗೂ ಫಾಲಿ ನಾರಿಮನ್ ಅವರನ್ನು ಮಾತ್ರ ಮುಂದುವರಿಸಲಾಗಿದೆ. ಆದರೆ ಸರ್ಕಾರ ದೀಢಿರ್ ಎಂಬಂತೆ ವಕೀಲರನ್ನು ಬದಲಿಸಿ, ಬೆಂಗಳೂರಿನ ಅಶ್ವಿನ್ ಚಿಕ್ಕಮಠ, ರಾಜೇಶ್ವರ್ ಅವರಿಗೆ ಹೊಸ ಜವಾಬ್ದಾರಿ ನೀಡಿದೆ.

    ಈ ಹಂತದಲ್ಲಿ ವಕೀಲರ ಬದಲಾವಣೆ ಬೇಕಿತ್ತಾ? ಜಲ ವಿವಾದದಲ್ಲಿ ವಕೀಲರ ಬದಲಾವಣೆ ಪ್ರಯೋಗ ಬೇಕಿತ್ತಾ? ಹಾಗೂ ಯಾರೊಂದಿಗೂ ಚರ್ಚಿಸದೇ ಸರ್ಕಾರ ನಿರ್ಧಾರ ಸರೀನಾ ಎನ್ನುವ ಪ್ರಶ್ನೆ ಶುರುವಾಗಿದೆ.

    ಯಾರಿಗೆ ಕೊಕ್?:
    ಕೃಷ್ಣಾ ನದಿ ವ್ಯಾಜ್ಯದಲ್ಲಿ ವಾದ ಮಂಡಿಸುತ್ತಿದ್ದ ವಕೀಲರಾದ ಕನ್ನಡಿಗರಾದ ಶರತ್ ಜವಳಿ, ಉತ್ತರ ಭಾರತ ಮೂಲದ ಅಂಕೋಲೆಕರ್, ಅಜೀಂ ಕಾಳೆಬುದ್ದಿ ಹಾಗೂ ರಣವೀರ್ ಸಿಂಗ್ ಅವರಿಗೆ ಕೊಕ್ ನೀಡಲಾಗಿದೆ. ಮಹದಾಯಿ ವ್ಯಾಜ್ಯದಲ್ಲಿ ರಾಜ್ಯದ ಪರ ವಾದ ಮಂಡಿಸುತ್ತಿದ್ದ ವಕೀಲರಾದ ಬೆಳಗಾವಿ ಮೂಲದ ಎಂ.ಬಿ ಜಿರಳಿ, ಮಂಗಳೂರು ಮೂಲದ ಅನಿತಾ ಶಣೈ ಮತ್ತು ಉತ್ತರ ಭಾರತ ಮೂಲದ ಥಾಸಿ ವಿಶ್ವೇಶ್ವರ್ ಅವರಿಗೆ ಗೇಟ್‍ಪಾಸ್ ನೀಡಲಾಗಿದೆ.

    ಕಾವೇರಿ ವ್ಯಾಜ್ಯದಲ್ಲಿ ವಾದ ಮಂಡಿಸುತ್ತಿದ್ದ ಕೊಡಗು ಮೂಲದ ಹಿರಿಯ ವಕೀಲ ಬ್ರಿಜೇಶ್ ಕಾಳಪ್ಪ, ವಕೀಲರಾದ ಕನ್ನಡಿಗ ಶರತ್ ಜವಳಿ, ಉತ್ತರಭಾರತ ಮೂಲದ ಅಜೀಂ ಕಾಳೆಬುದ್ದಿ ಅವರನ್ನು ರಾಜ್ಯ ಸರ್ಕಾರ ಕೈಬಿಟ್ಟಿದೆ.

    ರಾಜ್ಯ ಸರ್ಕಾರದ ನಿರ್ಧಾರಕ್ಕೆ ವಕೀಲರು ಬೇಸರ ವ್ಯಕ್ತಪಡಿಸಿದ್ದಾರೆ. ಕೃಷ್ಣಾ ವ್ಯಾಜ್ಯದ ಅಂತಿಮ ವಿಚಾರಣೆ ವೇಳೆ ರಾಜ್ಯ ಸರ್ಕಾರ ನಿರ್ಧಾರ ಸರಿಯಲ್ಲ. ಕೃಷ್ಣಾ ನದಿ ನೀರು ಹಂಚಿಕೆ ವಿವಾದದ ವಿಚಾರಣೆ ಸುಪ್ರೀಂಕೋರ್ಟ್ ನಲ್ಲಿ ನವೆಂಬರ್ 15ಕ್ಕೆ ನಡೆಯಲಿದೆ. ಹಲವು ವರ್ಷಗಳಿಂದ ಕೆಲಸ ಮಾಡಿದರೂ ಏಕಾಏಕಿ ತೆಗೆದರೆ ಅಂತಿಮ ವಿಚಾರಣೆಗೆ ತೊಂದರೆ ಆಗಬಹುದು. ಮುಖ್ಯಮಂತ್ರಿ, ಜಲ ಸಂಪನ್ಮೂಲ ಇಲಾಖೆಯಿಂದ ಯಾವುದೇ ಸಭೆಗಳನ್ನು ಮಾಡುತ್ತಿಲ್ಲ. ಹೀಗಾಗಿ ಪೂರ್ಣ ಬೆಂಬಲ ಸಿಗುತ್ತಿಲ್ಲ ಎಂದು ಹಿರಿಯ ವಕೀಲರು ಅಸಮಾಧಾನ ಹೊರ ಹಾಕಿದ್ದಾರೆ.

    ಕಿರಿಯ ವಕೀಲರ ಕೈಬಿಟ್ಟ ವಿಚಾರವಾಗಿ ಜಲಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಕೇಶ್ ಸಿಂಗ್ ಪ್ರತಿಕ್ರಿಯಿಸಿ, ಜಲವಾದಕ್ಕೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆ ಇಲ್ಲ. ಹಿರಿಯ ವಕೀಲರಾದ ಶಾಮ್ ದಿವಾನ್, ಮೋಹನ್ ಕಾತರಕಿ ಹಾಗೂ ಫಾಲಿ ನಾರಿಮನ್ ಮುಂದುವರಿಯಲಿದ್ದಾರೆ. ಹಾಗಾಗಿ ಯಾವುದೇ ಸಮಸ್ಯೆ ಆಗುವುದಿಲ್ಲ. ನದಿ ವಿಚಾರಕ್ಕೆ ಸಂಬಂಧಿಸಿದಂತೆ ಎಂದಿನಂತೆ ಕರ್ನಾಟಕದ ವಾದ ಮುಂದುವರಿಯಲಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

  • ತಮಿಳುನಾಡು ಕರ್ನಾಟಕ ಜಲವಿವಾದ ತಡೆಗೆ ನಿತಿನ್ ಗಡ್ಕರಿ ಪ್ಲಾನ್

    ತಮಿಳುನಾಡು ಕರ್ನಾಟಕ ಜಲವಿವಾದ ತಡೆಗೆ ನಿತಿನ್ ಗಡ್ಕರಿ ಪ್ಲಾನ್

    ಹಾಸನ: ಕರ್ನಾಟಕ ಹಾಗೂ ತಮಿಳುನಾಡು ನಡುವಿನ ಜಲವಿವಾದ ಮುಗಿಸೋಕೆ ಕೇಂದ್ರ ಸರ್ಕಾರ ಸಜ್ಜಾಗುತ್ತಿದೆ. ಇದರ ಮುನ್ಸೂಚನೆಯನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ನೀಡಿದ್ದಾರೆ.

    ನಗರದ ಎಸ್‍ಆರ್ ಟಿಸಿ ಬಸ್ ನಿಲ್ದಾಣದ ಬಳಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ಮಾಡಿ ಮಾತನಾಡಿದ ಸಚಿವರು, ಗೋದಾವರಿಯ 11,000 ಟಿಎಂಸಿ ನೀರು ಸಮುದ್ರ ಸೇರುತ್ತಿದೆ. ಆದರೆ ದುರದೃಷ್ಟದ ಸಂಗತಿ ಎಂದರೆ ಕರ್ನಾಟಕ ಹಾಗೂ ತಮಿಳುನಾಡು ಕೇವಲ 60 ರಿಂದ 70 ಟಿಎಂಸಿ ನೀರಿಗಾಗಿ ಪ್ರತಿ ವರ್ಷವೂ ಹೋರಾಟ ಮಾಡುತ್ತಿವೆ. ಪೋಲಾವರಂ ಬಳಿ ಡ್ಯಾಂ ಕಟ್ಟಿದರೆ ಸಮಸ್ಯೆಗೆ ಪರಿಹಾರ ಸಿಗಲಿದೆ. ಈ ಬಗ್ಗೆ ಡಿಪಿಆರ್ ತಯಾರಿಕೆ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ ಎಂದರು.

    ಸಚಿವರ ಪ್ಲಾನ್ ಏನು?:
    ಗೋದಾವರಿ 11,000 ಟಿಎಂಸಿ ನೀರು ಸಮುದ್ರ ಸೇರುತ್ತಿದೆ. ಇದನ್ನು ತಡೆಯುವ ಉದ್ದೇಶದಿಂದ ಆಂಧ್ರ ಪ್ರದೇಶದ ಪೋಲಾವರಂನಲ್ಲಿ ಡ್ಯಾಂ ನಿರ್ಮಾಣ ಮಾಡಿ, ಹಿನ್ನೀರನ್ನು ಕೃಷ್ಣಾಗೆ ಹರಿಸಲಾಗುತ್ತದೆ. ಈ ನಿಟ್ಟಿನಲ್ಲಿ ಡ್ಯಾಂ ನಿರ್ಮಾಣಕ್ಕೆ 60 ಸಾವಿರ ಕೋಟಿ ವೆಚ್ಚ ಮಾಡಲಾಗುತ್ತಿದ್ದು, ಕೇಂದ್ರ ಸರ್ಕಾರವು ಹಣ ನೀಡಲು ಒಪ್ಪಿಗೆ ಸೂಚಿಸಿದೆ ಎಂದರು.

    ಕೃಷ್ಣಾಗೆ ಹರಿಬಿಟ್ಟ ನೀರನ್ನು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪೆನ್ನಾ ನದಿಗೆ ಸೇರಿಸಲಾಗುತ್ತದೆ. ಪೆನ್ನಾ ನದಿಯಿಂದ ಕಾವೇರಿಗೆ ನೀರನ್ನು ಹರಿಬಿಡಲಾಗುತ್ತದೆ. ಮಹತ್ವದ ಯೋಜನೆಯಿಂದಾಗಿ ಕರ್ನಾಟಕ ಹಾಗೂ ತಮಿಳುನಾಡಿಗೆ 450 ಟಿಎಂಸಿ ನೀರು ಸಿಗಲಿದ್ದು, ಜಲ ವಿವಾದಕ್ಕೆ ತೆರೆ ಬೀಳುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಸಚಿವರು, ಈ ಯೋಜನೆ ಜಾರಿ ತಮಗೂ ಕೂಡ ಖುಷಿಯ ವಿಚಾರವಾಗಿದೆ. ನಾನು ರೈತರ ಪರವಾಗಿ ಕೆಲಸ ಮಾಡುತ್ತಿರುವೆ ಎಂದರು.

    ಯಾವ ರಸ್ತೆಗಳಿಗೆ ಶಂಕು ಸ್ಥಾಪನೆ?:
    ಬಾಣಾವರ-ಹುಳಿಯಾರ್ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 234ರ ದ್ವಿಪಥ ಮತ್ತು ಪೇವ್ಡ್ ಶೋಲ್ಡರ್ ಅಗಲೀಕರಣ ಕಾಮಗಾರಿಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ನೆರವೇರಿಸಿದರು. ಈ ರಸ್ತೆಯು 48.2 ಕಿ.ಮೀ. ಉದ್ದವಿದ್ದು ಕಾಮಗಾರಿಗೆ 191.6 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಇದೇ ವೇಳೆ ಬೇಲೂರು-ಬಿಳಿಕೆರೆ ರಾಷ್ಟ್ರೀಯ ಹೆದ್ದಾರಿ 373ರ ದ್ವಿಪಥ ಮತ್ತು ಪೇವ್ಡ್ ಶೋಲ್ಡರ್ ಅಗಲೀಕರಣ ಕಾಮಗಾರಿಗೆ ಶಂಕು ಸ್ಥಾಪನೆ ನೆರವೇರಿಸಲಾಯಿತು. ಈ ರಸ್ತೆಯು ಒಟ್ಟು 128.35 ಕಿ.ಮೀ. ಉದ್ದವಿದ್ದು, ಕಾಮಗಾರಿಗೆ 849.39 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ.

    ಚನ್ನರಾಯಪಟ್ಟಣ ಹಾಗೂ ಹಾಸನ ಬೈಪಾಸ್‍ಗಳಲ್ಲಿ ದ್ವಿಪಥದಿಂದ ಚತುಷ್ಪಥಕ್ಕೆ ಉನ್ನತೀಕರಣ ಯೋಜನೆಗೆ ಶಂಕು ಸ್ಥಾಪನೆ ನೆರವೇರಿತು. ಈ ರಸ್ತೆಯು 20.71 ಕಿ.ಮೀ. ಉದ್ದವಿದ್ದು, ಕಾಮಗಾರಿಗೆ 823.4 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv