ಕೊಪ್ಪಳ ತಾಲೂಕಿನ ಮುನಿರಾಬಾದ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮಂಗಳವಾರ ಎಡದಂಡೆ ಮೇಲ್ಮಟ್ಟದ ಕಾಲುವೆಯ ಗೇಟ್ ಕಿತ್ತು ಹೋಗಿದೆ. ಹೀಗಾಗಿ ನಿನ್ನೆಯಿಂದ ಕಾಲುವೆ ಗೇಟ್ ರಿಪೇರಿ ಕಾರ್ಯವನ್ನು ಜಲಾಶಯದ ಅಧಿಕಾರಿಗಳು ಮಾಡುತ್ತಿದ್ದಾರೆ. ಆದರೆ ನೀರಿನ ರಭಸದ ಹಿನ್ನಲೆಯಲ್ಲಿ ರಿಪೇರಿಗೆ ಅಡ್ಡಿಯಾಗುತ್ತಿದೆ. ಪರಿಣಾಮ ಕಾಲುವೆಯ ಗೇಟ್ ಇನ್ನೂ ರಿಪೇರಿ ಆಗಿಲ್ಲ.
ಈ ಹಿನ್ನೆಲೆಯಲ್ಲಿ ಜಲಾಶಯದಿಂದ ಕಾಲುವೆ ಮೂಲಕ ಅಪಾರ ಪ್ರಮಾಣದ ನೀರು ಹೊರ ಬರುತ್ತಿದ್ದು, ಪಂಪಾವನ ಜಲಾವೃತಗೊಂಡಿದೆ. ಅಲ್ಲದೆ ಮುನಿರಾಬಾದ್ ನ ಹಲವು ಪ್ರದೇಶಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದೆ. ಡಾರ್ಮೆಟರಿ, ರೈಲ್ವೆ ಕ್ವಾಟ್ರಾಸ್, ಉಸ್ಮಾನ್ ಶೇಖ್ ಕ್ಯಾಂಪ್ ಸೇರಿದಂತೆ ಅನೇಕ ಪ್ರದೇಶಕ್ಕೆ ನೀರು ನುಗ್ಗಿದ ಪರಿಣಾಮ ಗ್ರಾಮಸ್ಥರು ಸಂಕಷ್ಟದಲ್ಲಿದ್ದಾರೆ.
ಕೊಪ್ಪಳ ತಾಲೂಕಿನ ಮಟ್ಟಿ ಮುದ್ಲಾಪುರ ಗ್ರಾಮದ ಬಳಿಯ ನೂರಾರು ಎಕರೆ ಜಮೀನು ಕೂಡ ನೀರಿನಲ್ಲಿ ಮುಳುಗಿದೆ. ಹೀಗಾಗಿ ನಾಟಿ ಮಾಡಿದ್ದ ಭತ್ತ ಸಂಪೂರ್ಣ ಹಾನಿಗೀಡಾಗಿದೆ. ಸುಮಾರು 300ಕ್ಕೂ ಹೆಚ್ಚು ಎಕರೆ ಜಮೀನು ಜಲಾವೃತವಾಗಿದ್ದರಿಂದ ರೈತರು ಕಂಗಾಲಾಗಿದ್ದಾರೆ.
ಮಂಡ್ಯ: ಕಳೆದ ನಾಲ್ಕು ದಿನದಲ್ಲಿ ದಾಖಲೆಯ ಪ್ರಮಾಣದ ನೀರು ಹರಿದು ಬಂದಿದ್ದರಿಂದ ಕೆಆರ್‌ಎಸ್ ಜಲಾಶಯ ಮಂಗಳವಾರ ಭರ್ತಿಯಾಗಿದೆ.
ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್ ಜಲಾಶಯದ ಗರಿಷ್ಟ ಮಟ್ಟ 124.80 ಅಡಿ ಆಗಿದ್ದು ಈಗ 124.30 ಅಡಿ ನೀರು ಸಂಗ್ರಹಗೊಂಡಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾದ ಪರಿಣಾಮ ಎರಡು ದಿನಗಳ ಹಿಂದೆ 2 ಲಕ್ಷ ಕ್ಯೂಸೆಕ್ ಅಧಿಕ ನೀರು ಬರುತಿತ್ತು. ಈಗ ಮಳೆ ಪ್ರಮಾಣ ತಗ್ಗಿದ್ದು, 50 ಸಾವಿರಕ್ಕೂ ಅಧಿಕ ಕ್ಯೂಸೆಕ್ ನೀರು ಹರಿದು ಬರುತ್ತಿದೆ.
ಈಗ ಒಳಹರಿವು 54,496 ಕ್ಯೂಸೆಕ್ ಇದ್ದು, 43,093 ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ. ಸದ್ಯ ಈಗ ಒಟ್ಟು 48.754 ಟಿಎಂಸಿ ನೀರು ಸಂಗ್ರಹಗೊಂಡಿದೆ.
ಕಾವೇರಿ ಜಲಾನಯನ ಪ್ರದೇಶ ಮತ್ತು ಮಲೆನಾಡಿನಲ್ಲಿ ಭಾರೀ ಮಳೆಯಾದ ಹಿನ್ನೆಲೆಯಲ್ಲಿ ಹೇಮಾವತಿ ಮತ್ತು ಹಾರಂಗಿ ಜಲಾಶಯದಿಂದ ಭಾರೀ ಪ್ರಮಾಣದ ನೀರನ್ನು ನದಿಗೆ ಬಿಡಲಾಗುತಿತ್ತು. ಪರಿಣಾಮ ಭಾನುವಾರ ಸಂಜೆ 2,05,852 ಕ್ಯುಸೆಕ್ ಇದ್ದ ಒಳ ಹರಿವಿನ ಪ್ರಮಾಣ ಸೋಮವಾರ ಬೆಳಗ್ಗೆ 2.04 ಲಕ್ಷ ಕ್ಯುಸೆಕ್ ಇತ್ತು.
ಸೋಮವಾರ ಬೆಳಗ್ಗೆ 122.40 ಅಡಿ ಇದ್ದ ನೀರಿನ ಮಟ್ಟವು ಹೊರ ಹರಿವಿನಿಂದ ಹೆಚ್ಚಳದಿಂದಾಗಿ ಸಂಜೆ ವೇಳೆಗೆ 121.80 ಅಡಿಗೆ ಇಳಿದಿತ್ತು. ಸೋಮವಾರ ಬೆಳಿಗ್ಗೆಯಿಂದ 1.64 ಲಕ್ಷ ಕ್ಯೂಸೆಕ್ ನೀರು ಬಿಡಲಾಗುತ್ತಿತ್ತು. ನಂತರ ಒಳ ಹರಿವು ಕಡಿಮೆಯಾದ ಹಿನ್ನೆಲೆಯಲ್ಲಿ ಹೊರ ಹರಿವನ್ನು 50 ಸಾವಿರಕ್ಕೆ ಇಳಿಸಲಾಗಿತ್ತು. ಇದೀಗ ಒಳ ಹರಿವಿಗೆ ತಕ್ಕಂತೆ ಹೊರ ಹರಿವನ್ನು ತಗ್ಗಿಸಿದ್ದು 43,093 ಕ್ಯೂಸೆಕ್ ನೀರನ್ನು ಜಲಾಶಯದಿಂದ ಹೊರ ಬಿಡಲಾಗುತ್ತಿದೆ.
2012 ರಿಂದ 2017ರವರೆಗೆ ಬರ ಬಂದಿದ್ದರಿಂದ ಜಲಾಶಯ ಭರ್ತಿಯಾಗಿರಲಿಲ್ಲ. ಕಳೆದ ವರ್ಷ ಜುಲೈ 15 ರಂದು ಕೆಆರ್‌ಎಸ್ ಭರ್ತಿಯಾಗಿತ್ತು. ಈ ಮೂಲಕ ದಶಕದ ಬಳಿಕ ಕೆಆರ್‌ಎಸ್ ಅವಧಿಗೂ ಮುನ್ನವೇ ಭರ್ತಿಯಾಗಿತ್ತು. ಈ ಹಿಂದೆ 2007ರಲ್ಲಿ ಕೆಆರ್‌ಎಸ್ ಜುಲೈ ತಿಂಗಳಿನಲ್ಲಿ ಭರ್ತಿಯಾಗಿತ್ತು.
ಬೆಂಗಳೂರು: ಕಳೆದ ನಾಲ್ಕು ದಶಕಗಳಲ್ಲಿ ಹಿಂದೆಂದೂ ಕರ್ನಾಟಕ ಇಂತಹ ಪರಿಸ್ಥಿತಿಯನ್ನು ಎದುರಿಸಿರಲಿಲ್ಲ. ಪ್ರಕೃತಿ ಶಾಂತವಾಗಿಲ್ಲ. ಒಂದ್ಕಡೆ ಮಳೆರಾಯ ಜಲರಕ್ಕಸನ ಅವತಾರವೆತ್ತಿ ಅಬ್ಬರಿಸಿ ಬೊಬ್ಬಿರಿಯುತ್ತಿದ್ದರೆ ನಾನು ಏನೂ ಕಮ್ಮಿ ಇಲ್ಲ ಎಂಬಂತೆ ಭೂ ತಾಯಿ ಬಾಯ್ಬಿಟ್ಟು ಒಂದೊಂದಾಗಿ ಎಲ್ಲವನ್ನೂ ಆಹುತಿ ಪಡೆಯುತ್ತಿದ್ದಾಳೆ.
ಬರೋಬ್ಬರಿ 16 ಜಿಲ್ಲೆಗಳ 80 ತಾಲೂಕುಗಳ 840 ಗ್ರಾಮಗಳು ಜಲದಿಗ್ಬಂಧನದಲ್ಲಿ ಸಿಲುಕಿವೆ. ಲಕ್ಷಾಂತರ ಮಂದಿ ಬದುಕು ಕಳೆದುಕೊಂಡಿದ್ದಾರೆ. ಒಂದು ವಾರದಲ್ಲಿ 33 ಮಂದಿ ಸಾವನ್ನಪ್ಪಿದ್ದಾರೆ. ಪ್ರವಾಹದಲ್ಲಿ ಸಿಲುಕಿದ್ದ ಎರಡೂವರೆ ಲಕ್ಷ ಮಂದಿಯನ್ನು ರಕ್ಷಿಸಲಾಗಿದೆ. 624 ಪರಿಹಾರ ಕೇಂದ್ರ ತೆರೆಯಲಾಗಿದ್ದು, 1.57 ಲಕ್ಷ ಸಂತ್ರಸ್ತರಿಗೆ ಪುನರ್ವಸತಿ ಕೇಂದ್ರಗಳಲ್ಲಿ ಆಶ್ರಯ ನೀಡಲಾಗಿದೆ. ನೂರಾರು ಮಂದಿ ಕಣ್ಮರೆಯಾಗಿದ್ದಾರೆ. ಅವರಿಗಾಗಿ ಶೋಧ ಕಾರ್ಯ ನಡೆದಿದೆ.
ಪ್ರವಾಹ ಪೀಡಿತ ಪ್ರದೇಶಗಳ 12,651 ಮನೆಗಳು ಸಂಪೂರ್ಣ ಹಾನಿಯಾಗಿವೆ. 3.22 ಲಕ್ಷ ಹೆಕ್ಟೇರ್ ಜಮೀನು ಮುಳುಗಡೆಯಾಗಿದೆ. ಉತ್ತರ ಕರ್ನಾಟಕ ಭಾಗದ ಬೆಳಗಾವಿ, ಬಾಗಲಕೋಟೆ, ಚಿಕ್ಕೋಡಿಯಲ್ಲಿ ಪ್ರವಾಹ ಮುಂದುವರಿದ್ದು, ಮಲೆನಾಡಿನಲ್ಲಿ ನದಿಗಳ ನೀರಿನ ಮಟ್ಟ ಹೆಚ್ಚುತ್ತಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಜಿಲ್ಲೆಗಳಲ್ಲಿ ಪ್ರವಾಹದ ಭೀತಿ ಹೆಚ್ಚಿದೆ. ಈ ವರ್ಷವೂ ಕೊಡಗು ಜಿಲ್ಲೆ ಪ್ರವಾಹದ ಹೊಡೆತಕ್ಕೆ ಸಿಲುಕಿದೆ. ಭೂಕುಸಿತ ಹೆಚ್ಚಾಗಿದೆ. ಸೇನಾಪಡೆ, ನೌಕಾಪಡೆ, ವಾಯುಪಡೆಗಳಿಂದ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಉತ್ತರದ ಜಲಾಶಯಗಳೆಲ್ಲಾ ತುಂಬಿದ್ದು, ದಕ್ಷಿಣ ಭಾಗದ ಡ್ಯಾಂಗಳೂ ಬಹುತೇಕ ತುಂಬುವ ಹಂತಕ್ಕೆ ಬಂದಿವೆ. ಆದರೆ ಪ್ರವಾಹ ಆವರಿಸಿರುವ ಬಹುತೇಕ ಕಡೆ ಕುಡಿಯುವ ನೀರು ಸಿಗುತ್ತಿಲ್ಲ. ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿ ಎದುರಾಗಿದೆ. ಕೆಲವೆಡೆ ಹೆಲಿಕಾಪ್ಟರ್‍ಗಳ ಮೂಲಕ ಆಹಾರ ವಿತರಣೆ ಮಾಡಲಾಗುತ್ತಿದೆ.
ಸಾವು-ನೋವು:
ರಣ ಮಳೆ ಮತ್ತು ರಣಭೀಕರ ಪ್ರವಾಹ ಕರ್ನಾಟಕಕ್ಕೆ ಸಾವಾಗಿ ಕಾಡುತ್ತಿದೆ. ಕಳೆದೊಂದು ವಾರದಲ್ಲಿ 33 ಮಂದಿ ಮಳೆ, ಪ್ರವಾಹದ ಅವಘಡಗಳಿಗೆ ಬಲಿಯಾಗಿದ್ದಾರೆ. ಇವತ್ತು ಮಲಪ್ರಭಾ ನದಿ ಅಬ್ಬರಕ್ಕೆ ಮಹಿಳೆಯೊಬ್ಬರು ಕೊಚ್ಚಿ ಹೋಗಿದ್ದಾರೆ. ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸುನ್ನಾಳ ಗ್ರಾಮದ ಮನೆಯಲ್ಲಿ ಮಲಗಿದ್ದ ಮಹಿಳೆ ಕಳೆದ ರಾತ್ರಿ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು. ಬೆಳಗಾವಿಯ ಬಳ್ಳಾರಿ ನಾಲೆಗೆ ಎಮ್ಮೆ ಮೇಯಿಸಲು ಹೋಗಿದ್ದ ರೈತ ರಾಜಾರಾಮ್ ಪ್ರವಾಹಕ್ಕೆ ಬಲಿಯಾಗಿದ್ದಾರೆ. ಚಿಕ್ಕಮಗಳೂರಿನ ಮೂಡಿಗೆರೆ ತಾಲ್ಲೂಕಿನ ಜಾವಳಿ ಬಳಿ ಹಳ್ಳ ದಾಟುತ್ತಿದ್ದ ಸಂತೋಷ್ ಎಂಬ ಯುವಕ ನೀರುಪಾಲಾಗಿದ್ದಾನೆ. ಕುದವಳ್ಳಿಯಲ್ಲಿ ರೈತ ಚಂದ್ರೇಗೌಡ ಎಂಬುವರು ಕೊಚ್ಚಿ ಹೋಗಿದ್ದಾರೆ. ಬಾಳೂರು ಹೊರಟ್ಟಿ ಬಳಿಯ ಕಾಫಿ ತೋಟದಲ್ಲಿ ಕೆಲಸ ಮಾಡ್ತಿದ್ದ ತಾಯಿ ಮಗ ಗುಡ್ಡ ಕುಸಿದು ಸಾವನ್ನಪ್ಪಿದ್ದಾರೆ. ಶುಕ್ರವಾರ ಮಡಿಕೇರಿಯಲ್ಲಿ ಏಳು ಮಂದಿ ಭೂಸಮಾಧಿಯಾಗಿದ್ದರು. ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಮಹಿಸವಾಡಗಿ ಗ್ರಾಮದಲ್ಲಿ ಇಂಥಾದ್ದೇ ಅನಾಹುತ ಸಂಭವಿಸುವುದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಕೃಷ್ಣೆಯ ಪ್ರವಾಹಕ್ಕೆ ಸಿಲುಕಿ ಸಾವಿನಂಚಿನಲ್ಲಿದ್ದ 8 ಮಂದಿಯನ್ನು ಎನ್‍ಡಿಆರ್ ಎಫ್ ಪಡೆಗಳು ರಕ್ಷಿಸಿವೆ.
ಜಲಸ್ಫೋಟ:
ಪಶ್ಚಿಮ ಘಟ್ಟದ ಚಾರ್ಮಾಡಿ ಘಾಟ್ ಮಧ್ಯೆ ಜಲಸ್ಫೋಟ ಆಗಿದೆ. ಚಾರ್ಮಾಡಿ ಘಾಟ್ ಬಳಿಯ ಬಂಜಾರುಮಲೆ ಎಂಬ ಗ್ರಾಮದಲ್ಲಿ ಕೊಡಗಿನ ಜೋಡುಪಾಲದ ಮಾದರಿ ಜಲಸ್ಫೋಟ ಆಗಿದ್ದು ಭೀಕರ ಸನ್ನಿವೇಶ ಎದುರಾಗಿದೆ. ಬೃಹತ್ ಮರಗಳು ಛಿದ್ರವಾಗಿ ಕೆಸರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದು, ಹೆದ್ದಾರಿಗೆ ಅಡ್ಡಲಾಗಿ ಕಟ್ಟಿದ್ದ ಸೇತುವೆ ಕೊಚ್ಚಿ ಹೋಗಿದೆ. ಬಂಜಾರುಮಲೆ ಗ್ರಾಮದಲ್ಲಿ 50ಕ್ಕು ಹೆಚ್ಚು ಮನೆಗಳಿದ್ದು, ಎನ್‍ಡಿಆರ್ ಎಫ್ ತಂಡ ಹರಸಾಹಸ ಮಾಡಿ 85 ಮಂದಿಯನ್ನು ಪಾರು ಮಾಡಿದೆ. ಈ ಪೈಕಿ ಇಬ್ಬರು ಗರ್ಭಿಣಿಯರು ಮತ್ತು ಹಸುಗೂಸುಗಳನ್ನು ಹಗ್ಗದ ಮೂಲಕ ನದಿಯಿಂದ ಇನ್ನೊಂದು ಬದಿಗೆ ದಾಟಿಸಿದ್ದು ಅದ್ಭುತವಾಗಿತ್ತು. ಜೋಡುಪಾಲ ಮಾದರಿಯಲ್ಲಿ ಎನ್ ಡಿಆರ್ ಎಫ್ ತಂಡ ಬಂಜಾರುಮಲೆಯಲ್ಲಿ ಠಿಕಾಣಿ ಹೂಡಿದ್ದು, ಬೆಟ್ಟದ ಮೇಲಿನ ಜನರನ್ನು ಕರೆತರುವ ಪ್ರಯತ್ನ ಮಾಡುತ್ತಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ಬಂಟ್ವಾಳ ಮತ್ತು ಮಂಗಳೂರಿನಲ್ಲಿ ನೆರೆ ಉಂಟಾಗಿದೆ. ಪಶ್ಚಿಮ ಘಟ್ಟದಲ್ಲಿ ಬಿದ್ದ ಮಳೆಯಿಂದಾಗಿ ನೇತ್ರಾವತಿ, ಕುಮಾರಧಾರಾ ನದಿಗಳು ತುಂಬಿಹರಿಯುತ್ತಿವೆ. ಇಪ್ಪತ್ತಕ್ಕೂ ಹೆಚ್ಚು ಗ್ರಾಮಗಳು ಜಲಾವೃತ ಆಗಿದೆ. ಬಂಟ್ವಾಳ, ನಾವೂರ, ಜಕ್ರಿಬೆಟ್ಟು, ಬಡ್ಡಕಟ್ಟೆ, ಸರಪಾಡಿ, ಅಜಿಲಮೊಗರು ವ್ಯಾಪ್ತಿಯಲ್ಲಿ 60ಕ್ಕೂ ಹೆಚ್ಚು ಮನೆಗಳು ಮುಳುಗಡೆಯಾಗಿವೆ. ಪರಿಸ್ಥಿತಿ ಶೋಚನೀಯವಾಗಿದೆ. ಬಿ.ಸಿ.ರೋಡ್ ಬಳಿಯ ಜನಾರ್ದನ ಪೂಜಾರಿ ಅವರ ಮನೆ ಜಲಾವೃತವಾಗಿದ್ದು, ಅವರನ್ನು ಎನ್‍ಡಿಆರ್‍ಎಫ್ ರಕ್ಷಿಸಿದೆ. ಉಳ್ಳಾಲದ ಕಲ್ಲಾಪು ಎಂಬಲ್ಲಿ ವಯೋವೃದ್ಧೆಯನ್ನು ಯುಟಿ ಖಾದರ್ ದೋಣಿ ಮೂಲಕ ರಕ್ಷಿಸಿದ್ದಾರೆ. ಮೂಲ್ಕಿಯ ನಂದಿನಿ ನದಿಯಲ್ಲಿ ಪ್ರವಾಹ ಉಂಟಾಗಿ, ಮೂಲ್ಕಿ, ಕಿನ್ನಿಗೋಳಿ ಜಲಾವೃತವಾಗಿವೆ. ಅಗ್ನಿಶಾಮಕ ಸಿಬ್ಬಂದಿ ವೃದ್ಧರೊಬ್ಬರನ್ನು ತಲೆ ಮೇಲೆ ಹೊತ್ತು ತಂದು ಸುರಕ್ಷಿತ ಸ್ಥಳದಲ್ಲಿ ಬಿಟ್ಟಿದ್ದಾರೆ. ಜಪ್ಪಿನಮೊಗರು, ಉಳ್ಳಾಲ ಕೂಡ ಜಲಾವೃತವಾಗಿವೆ.
ದೇಶದಲ್ಲಿ ಮಳೆ:
ಕರ್ನಾಟಕ, ಕೇರಳ, ತಮಿಳುನಾಡು, ಮಹಾರಾಷ್ಟ್ರ ಮಾತ್ರವಲ್ಲ ಮಧ್ಯಪ್ರದೇಶ, ಗುಜರಾತ್, ಉತ್ತರಾಖಂಡ್‍ನಲ್ಲೂ ಪ್ರವಾಹ ನಿಲ್ತಿಲ್ಲ. ಅಲ್ಲೂ ಪ್ರಳಯ ಮಳೆ ಸೃಷ್ಟಿರುವ ಅನಾಹುತಗಳು ಒಂದೆರಡಲ್ಲ. ಕೇರಳ ರಾಜ್ಯದ ಮಲಪ್ಪುರಂನಲ್ಲಿ ಗುಡ್ಡ ಕುಸಿದು ಅಪ್ಪಳಿಸಿ ಮೂವರು ಸಾವನ್ನಪ್ಪಿದ್ದಾರೆ. ಮಗನೊಂದಿಗೆ ಇದ್ದ ತಾಯಿ ಮಣ್ಣಿನ ರಾಶಿಯಲ್ಲಿ ಕೊಚ್ಚಿಕೊಂಡು ಹೋದ್ರೆ, ಮಗ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಧ್ಯಪ್ರದೇಶದ ಧರ್‍ನಲ್ಲಿ ಸಿಮೆಂಟ್ ಸಾಗಿಸ್ತಿದ್ದ ಟ್ರಕ್ ಪ್ರವಾಹದಲ್ಲಿ ಮಕ್ಕಳಾಟಿಕೆ ರೀತಿಯಲ್ಲಿ ಕೊಚ್ಚಿಕೊಂಡು ಹೋಗಿದೆ. ಪ್ರವಾಹದಲ್ಲಿ ಟಿಕ್‍ಟಾಕ್ ಮಾಡಲು ಹೋಗಿ ನೀರಿನ ಸೆಳೆತಕ್ಕೆ ಸಿಲುಕಿದ್ದವನನ್ನ ಗೆಳೆಯರು ರಕ್ಷಿಸಿದ್ದಾರೆ. ಇನ್ನು ಉಜ್ಜೈನಿಯಲ್ಲಿ ಶಿಪ್ರ ನದಿ ಅಪಾಯದ ಮಟ್ಟ ಮೀರಿ ಹರೀತಿದೆ. ಪ್ರವಾಹದಲ್ಲಿ ವ್ಯಕ್ತಿಯೋರ್ವ ಬೈಕ್ ಓಡಿಸಲು ಹೋಗಿ ಕೊಚ್ಚಿಕೊಂಡು ಹೋಗಿದ್ದಾನೆ. ಉತ್ತರಾಖಂಡ್‍ನ ಮೇಘಸ್ಫೋಟದಿಂದಾಗಿ ಬದುಕು ಮೂರಾಬಟ್ಟೆ ಆಗಿದೆ. ಕಳೆದ ರಾತ್ರಿಸುರಿದ ಭಾರೀ ಮಳೆಗೆ ಜೀವನ ಸಾಗಾಟಕ್ಕಿದ್ದ ಅಂಗಡಿ, ಮನೆಗಳು ಅಲಕಾನಂದ ನದಿಯ ಪಾಲಾಗಿದೆ.
ಬೆಂಗಳೂರು: ರಾಜ್ಯದ ಹಲವೆಡೆ ಭೀಕರ ಮಳೆಯಾಗುತ್ತಿದ್ದು, ಅಪಾರ ಬೆಳೆ ಹಾನಿ ಸಾವು ನೋವುಗಳು ಸಂಭವಿಸಿವೆ.
ಈ ಮಳೆಯಿಂದಾಗಿ ಕರ್ನಾಟಕದ ಬಹುತೇಕ ಎಲ್ಲಾ ಜಲಾಶಯಗಳು ಭರ್ತಿಯಾಗಿದ್ದು, ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಗುಡ್ಡಗಳು ಕುಸಿದು ಹೆದ್ದಾರಿಗಳು ಬಂದ್ ಆಗಿವೆ. ಜನರು ಪ್ರಾಣ ಕಳೆದುಕೊಂಡಿದ್ದಾರೆ. ಕರ್ನಾಟಕದಲ್ಲಿ ಈವರೆಗೆ ಈ ಮಹಾಮಳೆಗೆ 16 ಮಂದಿ ಸಾವನ್ನಪ್ಪಿದ್ದಾರೆ. 205 ಜಾನುವಾರುಗಳು ಮೃತಪಟ್ಟಿವೆ. 68 ತಾಲೂಕುಗಳಿಗೆ ಹಾನಿ ಆಗಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.
ಮಳೆಯಿಂದ ಉಂಟಾದ ಪ್ರವಾಹಕ್ಕೆ 874 ಹಳ್ಳಿಗಳು ಸಂಪೂರ್ಣ ಜಲಾವೃತವಾಗಿವೆ. ಸುಮಾರು 2,07,212 ಜನರನ್ನು ಸ್ಥಳಾಂತರ ಮಾಡಲಾಗಿದೆ. ಪ್ರವಾಹ ಪೀಡಿತ ಪ್ರದೇಶದಲ್ಲಿ ಜನರಿಗೆ ಸಹಾಯವಾಗಲಿ ಎಂದು 576 ಗಂಜಿ ಕೇಂದ್ರಗಳನ್ನು ತೆರೆಯಲಾಗಿದೆ. ಈ ಕೇಂದ್ರಗಳಲ್ಲಿ 1,41,683 ಜನ ಆಶ್ರಯ ಪಡೆದಿದ್ದಾರೆ. ಈ ಪ್ರವಾಹದಿಂದ ಸುಮಾರು 2,59,753 ಎಕ್ರೆ ಬೆಳೆ ನಾಶವಾಗಿದೆ.
ಪ್ರವಾಹದಲ್ಲಿ ಸಿಲುಕಿ ಹಾಕಿಕೊಂಡ 44,002 ಸಾವಿರ ಪ್ರಾಣಿಗಳನ್ನು ರಕ್ಷಣೆ ಮಾಡಲಾಗಿದೆ. ಈ ಪ್ರಾಣಿಗಳ ಪೈಕಿ 26,750 ಪ್ರಾಣಿಗಳಿಗೆ ಕ್ಯಾಪ್‍ಗಳಲ್ಲಿ ಆಶ್ರಯ ನೀಡಲಾಗಿದೆ. ಈ ಮಹಾಮಳೆಗೆ 11,879 ಮನೆಗಳು ನೆಲಸಮವಾಗಿದೆ.
ಮಂಡ್ಯ: ಕಾವೇರಿ ಜಲಾನಯನ ವ್ಯಾಪ್ತಿಯಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೆಆರ್‍ಎಸ್ ಜಲಾಶಯದಲ್ಲಿ ನೀರಿನ ಮಟ್ಟ 100 ಅಡಿ ದಾಟಿದೆ. ಒಂದೂವರೆ ದಿನದಲ್ಲಿ 10 ಅಡಿ ಏರಿಕೆಯಾಗಿದೆ.
124.80 ಅಡಿ ಗರಿಷ್ಠ ಎತ್ತರದ ಡ್ಯಾಂನಲ್ಲಿ ಪ್ರಸ್ತುತ 100.30 ಅಡಿ ನೀರು ಸಂಗ್ರಹಗೊಂಡಿದೆ. ಗುರುವಾರ ಬೆಳಗ್ಗೆ ಜಲಾಶಯದಲ್ಲಿ 91 ಅಡಿ ನೀರು ಸಂಗ್ರಹಗೊಂಡಿತ್ತು. ಕೊಡಗಿನಲ್ಲಿ ನಿರಂತರ ಮಳೆ ಜೊತೆಗೆ ಹೇಮಾವತಿ ಜಲಾಶಯದಿಂದ ನೀರನ್ನು ಹೊರಬಿಟ್ಟ ಪರಿಣಾಮ ಜಲಾಶಯಕ್ಕೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ.
ಇಂದು ಮಧ್ಯಾಹ್ನ 12 ಗಂಟೆಯಲ್ಲಿ 60 ಸಾವಿರ ಕ್ಯೂಸೆಕ್ ಒಳ ಹರಿವು ಇದ್ದರೆ ಮಧ್ಯಾಹ್ನ 2 ಗಂಟೆ ವೇಳೆಗೆ 63,211 ಕ್ಯೂಸೆಕ್‍ಗೆ ಏರಿಕೆಯಾಗಿತ್ತು. ಸಂಜೆಯೊಳಗೆ 80 ಸಾವಿರ ಕ್ಯೂಸೆಕ್ ಏರಿಕೆಯಾಗುವ ಸಾಧ್ಯತೆಯಿದೆ. ಸದ್ಯ 443 ಕ್ಯೂಸೆಕ್ ನೀರನ್ನು ಹೊಡಬಿಡಲಾಗುತ್ತಿದೆ.
ಪಶ್ಚಿಮ ಘಟ್ಟ, ಮಲೆನಾಡು, ಕೊಡಗಿನಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಾರಂಗಿ ಮತ್ತು ಹೇಮಾವತಿ ಜಲಾಶಯದಿಂದ ನೀರನ್ನು ನದಿಗೆ ಹರಿಸಲಾಗುತ್ತಿದೆ. ಹಾರಂಗಿಯಿಂದ 30 ಸಾವಿರಕ್ಕೂ ಹೆಚ್ಚು, ಹೇಮಾವತಿಯಿಂದ 5 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಪರಿಣಾಮ ಕೆಆರ್‍ಎಸ್ ನೀರಿನ ಮಟ್ಟ 100 ಅಡಿ ದಾಟಿದೆ.
ರಾಯಚೂರು: ಗಂಜಿ ಕೇಂದ್ರದಲ್ಲಿ ಅರೆ ಬೆಂದ ಅನ್ನವನ್ನು ನೀಡಲು ಮುಂದಾದ ಸಿಬ್ಬಂದಿಗೆ ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ ತರಾಟೆಗೆ ತೆಗೆದುಕೊಂಡಿದ್ದಾರೆ.
ರಾಯಚೂರಿನ 270 ಜನರಿಗೆ 3 ಪರಿಹಾರ ಕೇಂದ್ರ ಸ್ಥಾಪಿಸಲಾಗಿದೆ. ಆದರೆ ಗುರ್ಜಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತೆರೆಯಲಾದ ಪರಿಹಾರ ಕೇಂದ್ರದಲ್ಲಿ ಅವ್ಯವಸ್ಥೆ ಕಂಡು ಬಂದಿದೆ. ನಿರಾಶ್ರಿತರಿಗೆ ಸಿಬ್ಬಂದಿ ಅರೆ ಬೆಂದ ಅನ್ನವನ್ನು ನೀಡಲು ಮುಂದಾಗಿದ್ದರು.
ಸಿಬ್ಬಂದಿ ಮಕ್ಕಳಿಗೆ ಅರೆಬೆಂದ ಅನ್ನ ಸಾಂಬರ್ ನೀಡಲು ಮುಂದಾದಾಗ ಶಾಸಕ ಬಸನಗೌಡ ದದ್ದಲ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ ಮತ್ತೊಮ್ಮೆ ಅಡುಗೆ ಮಾಡಿ ಊಟ ಬಡಿಸಲು ಸೂಚನೆ ನೀಡಿದ್ದಾರೆ. ಈ ವೇಳೆ ಶಾಲಾ ಬಿಸಿಯೂಟ ಸಿಬ್ಬಂದಿಯಿಂದಲೇ ಅಡುಗೆ ಮಾಡಿಸುತ್ತಿರುವುದ್ದನ್ನು ನೋಡಿ ಬಸನಗೌಡ ಅವರು ಅಧಿಕಾರಿಗಳ ವಿರುದ್ಧ ಗರಂ ಆದರು.
ಕೃಷ್ಣ ನದಿಯಲ್ಲಿ ಪ್ರವಾಹ ಹೆಚ್ಚಳ ಹಿನ್ನೆಲೆಯಲ್ಲಿ ನಾರಾಯಣಪುರ ಜಲಾಶಯದಿಂದ 4,51,000ಕ್ಕೂ ಹೆಚ್ಚು ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಇದರಿಂದ ಜಿಲ್ಲೆಯ ನದಿ ತೀರದ ಹಲವು ದೇವಾಲಯಗಳು ಜಲಾವೃತವಾಗಿವೆ. ನೀರು ಹೆಚ್ಚಳ ಹಿನ್ನೆಲೆ ದೇವದುರ್ಗದ ಹೀರೆರಾಯಕುಂಪಿ ಗ್ರಾಮಕ್ಕೂ ನೀರು ನುಗ್ಗುವ ಭೀತಿಯಿದೆ. ಈಗಾಗಲೇ ಗ್ರಾಮದ ಜಮೀನುಗಳು ಜಲಾವೃತವಾಗಿವೆ. ಹೀಗಾಗಿ ಗ್ರಾಮದ 40 ಮನೆಗಳ ಸ್ಥಳಾಂತರಕ್ಕೆ ಜಿಲ್ಲಾಡಳಿತ ಮುಂದಾಗಿದೆ. ಜಮೀನಿನಲ್ಲಿನ ಬೆಳೆ ಕಳೆದುಕೊಂಡ ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದಾರೆ.
ರಾಯಚೂರು/ಯಾದಗಿರಿ: ಮಹಾರಾಷ್ಟ್ರದಲ್ಲಿ ಕಳೆದ 15 ದಿನಗಳಿಂದ ಎಡೆಬಿಡದೆ ಮಳೆ ಸುರಿಯುತ್ತಿದ್ದು, ಈ ಹಿನ್ನೆಲೆ ಕೃಷ್ಣ ನದಿಯ ನೀರಿನ ಪ್ರಮಾಣದಲ್ಲಿ ಅಪಾರ ಏರಿಕೆಯಾಗುತ್ತಿದೆ. ಹೀಗಾಗಿ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಿಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ಕೃಷ್ಣ ನದಿಯಲ್ಲಿ ನೀರಿನ ಪ್ರಮಾಣ ತೀವ್ರ ಹೆಚ್ಚಳವಾಗಿದ್ದು, ಭಾರೀ ಪ್ರವಾಹ ಸಾಧ್ಯತೆ ಇದೆ. ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯಗಳಿಂದಲೂ ಅಧಿಕ ಪ್ರಮಾಣದ ನೀರನ್ನು ಹರಿಬಿಡಲಾಗುತ್ತಿದ್ದು, ರಾಯಚೂರು, ಯಾದಗಿರಿ ಜಿಲ್ಲೆಯಲ್ಲಿ ಜಿಲ್ಲಾಡಳಿತ ಹೈ ಅಲರ್ಟ್ ಘೊಷಿಸಿದೆ. ಮುಂಬೈನಲ್ಲಿ ಮಳೆಯಾಗುತ್ತಿದ್ದು, ಇತ್ತ ರಾಜ್ಯದ ಗಡಿ ಜಿಲ್ಲೆ ಬೆಳಗಾವಿಯಲ್ಲೂ ಸಹ ನಿರಂತರ ಮಳೆಯಾಗುತ್ತಿದೆ. ಹೀಗಾಗಿ ಹೆಚ್ಚಿನ ಪ್ರಮಾಣದ ನೀರು ಜಲಾಶಯಗಳಿಗೆ ಹರಿದು ಬರುತ್ತಿದ್ದು, ಹಿಪ್ಪರಗಿ ಜಲಾಶಯದಿಂದ ಆಲಮಟ್ಟಿ ಜಲಾಶಯಕ್ಕೆ ಭಾರೀ ಪ್ರಮಾಣದ ನೀರು ಹರಿ ಬಿಡಲಾಗುತ್ತಿದೆ.
ಇಂದು ರಾತ್ರಿ ಆಲಮಟ್ಟಿಯಿಂದ ನಾರಾಯಣಪುರಕ್ಕೆ 3 ಲಕ್ಷ ಕ್ಯೂಸೆಕ್ಸ್, ನಂತರ ನಾರಾಯಣಪುರ ಜಲಾಶಯದಿಂದ ಕೃಷ್ಣ ನದಿಗೆ 3 ಲಕ್ಷ ಕ್ಯೂಸೆಕ್ಸ್ ನೀರು ಹರಿಬಿಡುವ ಸಾಧ್ಯತೆ ಇದ್ದು, ಇಷ್ಟೊಂದು ಪ್ರಮಾಣದ ನೀರು ಬಿಟ್ಟರೆ ರಾಯಚೂರು ಜಿಲ್ಲೆಯ ಸಾವಿರಾರು ಎಕರೆ ಕೃಷಿ ಭೂಮಿಗೆ ಭಾರೀ ಪ್ರಮಾಣದಲ್ಲಿ ನೀರು ನುಗ್ಗುವ ಸಾಧ್ಯತೆ ಇದೆ. ಹೀಗಾಗಿ ನದಿ ಪಕ್ಕದ ಪಂಪ್‍ಸೆಟ್‍ಗಳನ್ನು ತೆಗೆಯಲು ರೈತರಿಗೆ ಜಿಲ್ಲಾಡಳಿತ ಸೂಚನೆ ನೀಡಿದ್ದು, ನಾರಾಯಣಪುರ ಜಲಾಶಯದಿಂದ ಕೃಷ್ಣ ನದಿಗೆ ಹೆಚ್ಚಿನ ಪ್ರಮಾಣದ ನೀರು ಬಿಡುತ್ತಿರುವ ಹಿನ್ನೆಲೆ ಪ್ರವಾಹದ ಮುನ್ನೆಚ್ಚರಿಕೆಯಿಂದ ರೈತರು ಕೃಷ್ಣ ನದಿ ಬಳಿ ಹಾಕಿರುವ ಪಂಪ್ ಸೆಟ್ ಗಳನ್ನು ತೆರವುಗೊಳಿಸುತ್ತಿದ್ದಾರೆ.
ರಾಯಚೂರು, ಲಿಂಗಸ್ಗೂರು, ದೇವದುರ್ಗ ತಾಲೂಕಿನಲ್ಲಿ ಪ್ರವಾಹ ಭೀತಿ ಎದುರಾಗಿದೆ. ಹೀಗಾಗಿ ನದಿ ಬಳಿ ತೆರಳದಂತೆ ನದಿ ಪಾತ್ರದ ಗ್ರಾಮಸ್ಥರಿಗೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.
ಇತ್ತ ಯಾದಗಿರಿ ಜಿಲ್ಲೆಯ ನಾರಾಯಣಪುರ ಡ್ಯಾಂನಲ್ಲಿಯೂ ಸಹ ಒಳಹರಿವು ಹೆಚ್ಚಾದ ಹಿನ್ನೆಲೆ 24 ಗೇಟ್‍ಗಳ ಮೂಲಕ ಕೃಷ್ಣಾ ನದಿಗೆ 2.25 ಲಕ್ಷ ಕ್ಯೂಸೆಕ್ಸ್ ನೀರು ಹರಿಬಿಡಲಾಗುತ್ತಿದ್ದು, ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚುತ್ತಿದ್ದಂತೆ ನಾರಾಯಣಪುರದ ಛಾಯಾ ಭಗವತಿ ದೇವಸ್ಥಾನಕ್ಕೆ ನೀರು ನುಗ್ಗಿದ್ದು, ಸಮುದ್ರದ ಅಲೆಗಳಂತೆ ಬೃಹತ್ ಗಾತ್ರದ ಅಲೆಗಳು ದೇವಸ್ಥಾನಕ್ಕೆ ಅಪ್ಪಳಿಸುತ್ತಿವೆ. ಕೃಷ್ಣ ನದಿ ತಟದಲ್ಲೇ ಈ ದೇವಸ್ಥಾನವಿದ್ದು, ಅರ್ಚಕರನ್ನು ಸುರಕ್ಷಿತವಾಗಿ ದೇವಸ್ಥಾನದಿಂದ ಹೊರ ಕರೆತರಲಾಗಿದೆ.
ಬೆಂಗಳೂರು: ಮಹಾರಾಷ್ಟ್ರದಲ್ಲಿ ಆಗುತ್ತಿರುವ ಮಹಾಮಳೆ ಉತ್ತರ ಕರ್ನಾಟಕದಲ್ಲಿ ಪ್ರವಾಹ ಸೃಷ್ಟಿಸಿದೆ. ನದಿ ಪಾತ್ರದ ಗ್ರಾಮಗಳು ಮುಳುಗಡೆಯಾಗಿವೆ. ಜಮೀನುಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.
ಮಹಾರಾಷ್ಟ್ರದಲ್ಲಿ ಕುಂಭದ್ರೋಣ ಮಳೆ ಮುಂದುವರಿದಿದ್ದು ಅದರ ಎಫೆಕ್ಟ್ ಉತ್ತರ ಕರ್ನಾಟಕದ ಮೇಲೆ ಬಡಿದಿದೆ. ಬೆಳಗಾವಿ, ಚಿಕ್ಕೋಡಿ, ವಿಜಯಪುರ, ಬಾಗಲಕೋಟೆ, ರಾಯಚೂರಿನಲ್ಲಿ ಪ್ರವಾಹ ಪರಿಸ್ಥಿತಿ ತಲೆದೂರಿದೆ. ನದಿ ಪಾತ್ರದ ಗ್ರಾಮಗಳು, ಜಮೀನುಗಳು ಜಲಾವೃತವಾಗಿವೆ. ಸೇತುವೆಗಳು ಮುಳುಗಡೆಯಾಗಿದ್ದು ರಸ್ತೆ ಸಂಪರ್ಕ ಕಡಿತಗೊಂಡಿದೆ.
ಬೆಳಗಾವಿಯ ಪೀರನವಾಡಿ, ಲಕ್ಷ್ಮಿಗಲ್ಲಿ, ಉದ್ಯಮ್ ಬಾಗ್‍ನ ಸುಮಾರು 50 ಮನೆಗಳಿಗೆ ನೀರು ನುಗ್ಗಿದ ಪರಿಣಾಮ ನಿವಾಸಿಗಳು ಪರದಾಡಿದರು. ಬಳ್ಳಾರಿ ನಾಲೆಯಿಂದ ನೀರು ಉಕ್ಕಿ ಬಂದಿದ್ದರಿಂದ ಓಂನಗರ ಬಡಾವಣೆ ಸಂಪೂರ್ಣ ಜಲಾವೃತವಾಗಿತ್ತು. ಖಾನಾಪುರದ ಭಂಕಿ ಗ್ರಾಮದ ಸೇತುವೆ ಮುಳುಗಡೆಯಾಗಿದೆ. ಪ್ರಾಣದ ಹಂಗು ತೊರೆದು ಸೇತುವೆ ಮೇಲೆಯೇ ಜನ ಸಂಚರಿಸುತ್ತಿದ್ದಾರೆ. ತಾಲೂಕಿನ ಹಲವು ಗ್ರಾಮಗಳಲ್ಲಿ ಮನೆಗಳು ಕುಸಿತವಾಗಿವೆ. ಕೃಷ್ಣಾ ನದಿಯ ಅಬ್ಬರಕ್ಕೆ ರಾಯಬಾಗ ತಾಲೂಕಿನ 8 ಸೇತುವೆಗಳು ಮುಳುಗಡೆಯಾಗಿವೆ.
ಮಹಾರಾಷ್ಟ್ರದಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಿರುವ ಕೊಯ್ನಾ ಡ್ಯಾಂ ಬಳಿ ಲಘು ಭೂಕಂಪನ ಸಂಭವಿಸಿದ್ದು ಡ್ಯಾಂಗೆ ಧಕ್ಕೆಯಾದರೆ ಕರ್ನಾಟಕಕ್ಕೆ ಅಪಾಯವಾಗುತ್ತದೆ. ಏಕಾಏಕಿ ಹೆಚ್ಚುವರಿ ನೀರು ಹರಿದರೆ ರಾಜ್ಯದಲ್ಲಿ ಪ್ರವಾಹ ಸೃಷ್ಟಿಯಾಗುತ್ತದೆ. ಭೂಕಂಪವಾಗಿರುವುದರಿಂದ ಹೆಚ್ಚಿನ ನೀರು ಬಿಡುಗಡೆ ಮಾಡುವ ಸಾಧ್ಯತೆ ಇದ್ದು ಚಿಕ್ಕೋಡಿ ತಾಲೂಕಿನ ನದಿಪಾತ್ರದ ಗ್ರಾಮಗಳ ಜನರಿಗೆ ಎಚ್ಚರಿಕೆ ಘೋಷಿಸಲಾಗಿದೆ.
ಬಾಗಲಕೋಟೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಘಟಪ್ರಭಾ ನದಿ ಉಕ್ಕಿ ಹರಿಯುತ್ತಿದೆ. ಮುಧೋಳ ತಾಲೂಕಿನ ಮಾಚಕನೂರು ಗ್ರಾಮದ ಹೊಳೆಬಸವೇಶ್ವರ ದೇವಸ್ಥಾನ ಜಲಾವೃತವಾಗಿದೆ. ದೇಗುಲದ ಸುತ್ತಲೂ ನೀರು ಆವರಿಸಿದ್ದು ದೇಗುಲಕ್ಕೆ ತೆರಳಲು ಭಕ್ತರು ಹರಸಾಹಸ ಪಟ್ಟರು. ಆಲಮಟ್ಟಿ ಡ್ಯಾಂ ಭರ್ತಿಯಾಗಿದ್ದು, ನಾರಾಯಣಪುರ ಡ್ಯಾಂಗೆ ನೀರು ಬಿಟ್ಟ ಪರಿಣಾಮ ವಿಜಯಪುರ ಜಿಲ್ಲೆಯ ಯಲಗೂರು, ಮುದೂರ, ಕಾಳಗಿ ಸೇರಿ ಹಲವು ಗ್ರಾಮಗಳ ಜಮೀನಿಗೆ ನೀರು ನುಗ್ಗಿದೆ. ಅಪಾರ ಪ್ರಮಾಣದ ತೊಗರಿ, ಸಜ್ಜೆ, ಕಬ್ಬು ಬೆಳೆ ನಾಶವಾಗಿದೆ.
ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಬಿಟ್ಟಿದ್ದರಿಂದ ರಾಯಚೂರಿನ ಹೂವಿನಹೆಡಗಿ ಸೇತುವೆ ಸಂಚಾರ ಬಂದ್ ಆಗಿದೆ. ನಗರಗುಂಡಾ, ನಿಲುವಂಜಿ ಸೇರಿ ವಿವಿಧ ಗ್ರಾಮಗಳ ಜಮೀನುಗಳಿಗೆ ನೀರು ನುಗ್ಗಿದೆ. ಸುಮಾರು 500 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಭತ್ತದ ಬೆಳೆ ಹಾನಿಯಾಗಿದೆ. ನದಿ ಪಾತ್ರದ ಜನರಿಗೆ ಎಚ್ಚರದಿಂದಿರುವಂತೆ ಸೂಚಿಸಲಾಗಿದೆ. ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶದಲ್ಲಿ ಎರಡ್ಮೂರು ದಿನ ಭಾರೀ ಮಳೆಯಾಗುವ ಮುನ್ಸೂಚನೆ ಇದ್ದು ಉತ್ತರ ಕರ್ನಾಟಕದಲ್ಲಿ ಭಾರೀ ಅನಾಹುತ ಸೃಷ್ಟಿಸುವ ಸಾಧ್ಯತೆ ಇದೆ.
ವಿಜಯಪುರ: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ವಿಜಯಪುರದ ಆಲಮಟ್ಟಿ ಲಾಲಬಾಹ್ದೂರ ಶಾಸ್ತ್ರಿ ಜಲಾಶಯಕ್ಕೆ 2 ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ಹರಿದು ಬರುತ್ತಿದೆ.
ಅಧಿಕ ನೀರು ಹರಿದು ಬಂದ ಕಾರಣ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, 2 ಲಕ್ಷ ಕ್ಯೂಸೆಕ್ ನೀರನ್ನು ನಾರಾಯಣಪುರ ಬಸವ ಸಾಗರ ಜಲಾಶಯಕ್ಕೆ ಹೊರಬಿಡಲಾಗುತ್ತಿದೆ. ಇದರಿಂದ ನಾರಾಯಣಪುರ ಜಲಾಶಯದ ಹಿನ್ನೀರು ವಿಜಯಪುರ ಜಿಲ್ಲೆಯ ರೈತರ ಜಮೀನಿಗೆ ನುಗ್ಗಿದೆ. ಇದರಿಂದ ಅಪಾರ ಪ್ರಮಾಣದ ರೈತರ ಬೆಳೆ ನೀರು ಪಾಲಾಗಿದೆ.
ಜಿಲ್ಲೆಯ ಯಲಗೂರ, ಮುದೂರ, ಕಾಳಗಿ, ಬಳಬಟ್ಟಿ, ವಡವಡಗಿ, ಯಲ್ಲಮ್ಮನಬೂದಿಹಾಳ, ಮಸೂತಿ, ಕಾಶಿನಕುಂಟಿ, ಅರಳದಿನ್ನಿಯ ಗ್ರಾಮಗಳ ನದಿ ಪಕ್ಕದ ಜಮೀನಿಗೆ ಹಿನ್ನೀರು ನುಗ್ಗಿದೆ. ಜಮೀನಿನಲ್ಲಿ ಬಿತ್ತನೆ ಮಾಡಲಾಗಿದ್ದ ತೊಗರಿ, ಸಜ್ಜೆ, ಕಬ್ಬು ಬೆಳೆ ಸಂಪೂರ್ಣ ಹಾನಿಯಾಗಿದೆ.
ಮಳೆ ಇಲ್ಲದೆ ಕಂಗೆಟ್ಟಿದ್ದ ರೈತರು ಅಲ್ಪ ಸ್ವಲ್ಪ ಬೆಳೆದಿದ್ದ ಬೆಳೆ ಕೂಡ ನೀರು ಪಾಲಾಗಿರುವುದರಿಂದ ಕಂಗಾಲಾಗಿದ್ದಾರೆ. ಬೆಳೆ ಹಾನಿಯಾಗಿರುವ ಕಾರಣ ರೈತರು ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸುತ್ತಿದ್ದಾರೆ.
ಮಡಿಕೇರಿ: ಉತ್ತರ ಕರ್ನಾಟಕದಲ್ಲಿ ಪ್ರವಾಹ ಭೀತಿ ಎದುರಾಗಿದ್ರೆ, ಇತ್ತ ಕಳೆದ ಬಾರಿ ಪ್ರವಾಹ ಸೃಷ್ಟಿಯಾಗಿದ್ದ ಮಡಿಕೇರಿಯಲ್ಲಿ ಮಳೆ ಇಲ್ಲದೆ ಭಾಗಮಂಡಲದ ಭಗಂಡೇಶ್ವರನ ಸನ್ನಿಧಿಯಲ್ಲಿ ಮಳೆಗಾಗಿ ಪೊಲಿಂಕಾನ ಉತ್ಸವ ನಡೆಯಿತು. ಉತ್ತಮ ಮಳೆಯಾಗಲಿ, ಆದರೆ ಕಳೆದ ಬಾರಿಯಂತೆ ಪ್ರಕೃತಿ ವಿಕೋಪ ಸಂಭವಿಸದೆ ಇರಲಿ ಎಂದು ಪ್ರಾರ್ಥಿಸಲಾಯಿತು.
ಪ್ರತಿ ವರ್ಷ ಮಳೆ ಸುರಿದು ತ್ರಿವೇಣಿ ಸಂಗಮ ಭರ್ತಿಯಾದ ನಂತರದ ಕರ್ಕಟಕ ಅಮವಾಸ್ಯೆಯಂದು ಪೊಲಿಂಕಾನ ಅಥವಾ ಬಾಗಿನ ಅರ್ಪಿಸುವ ಕಾರ್ಯಕ್ರಮ ನಡೆಯುತ್ತೆ. ಆದರೆ ಈ ಬಾರಿ ಕೊಡಗಿನಲ್ಲಿ ಉತ್ತಮ ಮಳೆಯಾಗಿಲ್ಲ. ಇಷ್ಟೋತ್ತಿಗೆ ಮಳೆಯಾಗಿ ತ್ರಿವೇಣಿ ಸಂಗಮ ಭರ್ತಿಯಾಗುತ್ತಿತ್ತು. ಉತ್ತಮ ಮಳೆಯಾಗದ ಹಿನ್ನೆಲೆಯಲ್ಲಿ ಈ ಭಾಗದ ರೈತರು ಕಂಗಾಲಾಗಿದ್ದಾರೆ.
ವಾಡಿಕೆ ಮಳೆ ಬಂದು ಕಾವೇರಿ ಜಲಾಶಯ ಭಾಗದ ರೈತರ ಬದುಕು ಹಸನಾಗಬೇಕು. ಜೀವನಾಡಿ ಕಾವೇರಿ ಭರ್ತಿಯಾಗಬೇಕು ಎನ್ನುವ ಉದ್ದೇಶದಿಂದ ಕೊಡಗಿನ ಪ್ರಸಿದ್ಧ ಪುಣ್ಯಕ್ಷೇತ್ರ ಭಾಗಮಂಡಲದ ಭಗಂಡೇಶ್ವರನ ಸನ್ನಿಧಿಯಲ್ಲಿ ಯಶಸ್ವಿಯಾಗಿ ಪೊಲಿಂಕಾನ ಉತ್ಸವನ್ನು ಅದ್ಧೂರಿಯಾಗಿ ನಡೆಸಿ, ಉತ್ತಮ ಮಳೆಯಾಗಿ ಕಳೆದ ಬಾರಿಯಂತೆ ಪ್ರಕೃತಿ ವಿಕೋಪ ಸಂಭವಿಸದೆ ಇರಲಿ ಎಂದು ಪ್ರಾರ್ಥನೆ ಸಲ್ಲಿಸಲಾಗಿದೆ.
ಭಗಂಡೇಶ್ವರ ದೇವಾಲಯದಲ್ಲಿ ಬೆಳಗ್ಗೆಯಿಂದ ವಿಶೇಷ ಪೂಜಾ ಕೈಂಕರ್ಯ ನೆರವೇರಿತು. ಪೂಜೆ ನಂತರ ಬಾಳೆಕಂಬದಿಂದ ವಿಶೇಷವಾಗಿ ಸಿದ್ಧಗೊಳಿಸಿದ ಉತ್ಸವ ಮಂಟಪದಲ್ಲಿ ಮುತ್ತೈದೆಯರಿಗೆ ನೀಡುವ ಬಳೆ, ಬಿಚ್ಚೋಲೆ, ಅರಿಶಿಣ ಕುಂಕುಮ, ಸೀರೆ, ಕರಿಮಣಿ ಮುಂತಾದವನ್ನು ಇಟ್ಟು ತ್ರಿವೇಣಿ ಸಂಗಮದಲ್ಲಿ ಕಾವೇರಿ ಮಾತೆಗೆ ಅರ್ಪಣೆ ಮಾಡಲಾಯಿತು. ಅಲ್ಲದೆ ಇದೇ ಮಂಟಪಕ್ಕೆ ಚಿನ್ನ ಹಾಗೂ ಬೆಳ್ಳಿಯನ್ನೂ ತೊಟ್ಟಿಲಲ್ಲಿ ಹಾಕಿ ನೀರಿನಲ್ಲಿ ಬಿಡಲಾಗುತ್ತದೆ.
ಉತ್ತಮ ಮಳೆ ಸುರಿಸಿ ಕೃಷಿ ಚಟುವಟಿಕೆ ಸುಭೀಕ್ಷೆಯಾಗಿ ನಡೆಯಲು ಅನುವು ಮಾಡಿಕೊಡಲು ಕಾವೇರಿಗೆ ವಂದಿಸೋದು, ಜೊತೆಗೆ ಮುಂದೆ ಪ್ರವಾಹ ಬಾರದಂತೆ ಬೇಡಿಕೊಳ್ಳುವುದು ಈ ಉತ್ಸವದ ಪ್ರಮುಖ ಉದ್ದೇಶವಾಗಿದೆ.
ನೂರಾರು ಸಂಖ್ಯೆಯಲ್ಲಿ ಆಗಮಿಸುವ ಭಕ್ತರು ಶ್ರದ್ಧಾಭಕ್ತಿಯಿಂದ ಪೊಲಿಂಕಾನ ಉತ್ಸವದಲ್ಲಿ ಭಾಗಿಯಾಗಿದರು. ಹಿಂದಿನಿಂದಲೂ ಕೂಡ ಮಳೆ ಹೆಚ್ಚಾದಾಗ ಕಾವೇರಿಯ ಮಡಿಲು ಭಾಗಮಂಡಲದಲ್ಲಿ ಪೊಲಿಂಕಾನ ಉತ್ಸವ ಆಚರಿಸಿಕೊಂಡು ಬರಲಾಗುತ್ತಿದ್ದು, ಪೊಲಿಂಕಾನ ಉತ್ಸವ ಮಹತ್ವವನ್ನು ಕೂಡ ಪಡೆದುಕೊಂಡಿದೆ.