Tag: ಜಲಾಶಯ

  • ಮತ್ತೆ ವರುಣನ ಅಬ್ಬರ – ದಶಕದ ನಂತ್ರ ನಾರಿಹಳ್ಳ ಜಲಾಶಯ ಭರ್ತಿ

    ಮತ್ತೆ ವರುಣನ ಅಬ್ಬರ – ದಶಕದ ನಂತ್ರ ನಾರಿಹಳ್ಳ ಜಲಾಶಯ ಭರ್ತಿ

    – ಹಳ್ಳಕೊಳ್ಳಗಳು ಭರ್ತಿ, ಅಪಾರ ಪ್ರಮಾಣದ ಬೆಳೆ ನಾಶ
    – ಕೊಡಗಿನಲ್ಲಿ ಮತ್ತೆ ಪ್ರವಾಹ ಭೀತಿ

    ಮಡಿಕೇರಿ/ಧಾರವಾಡ: ರಾಜ್ಯದ ಅನೇಕ ಕಡೆ ಮತ್ತೆ ವರುಣದೇವ ಅಬ್ಬರಿಸಲು ಶುರುಮಾಡಿದ್ದು, ಮಳೆಯಿಂದ ಜನ ಜೀವನ ಅಸ್ತವ್ಯಸ್ತವಾಗಿದೆ. ಕಳೆದ ಮೂರು ದಿನಗಳಿಂದ ಜಿಲ್ಲೆಯ ಹಲವು ಭಾಗಗಳಲ್ಲಿ ಬಿಟ್ಟುಬಿಡದೆ ಸುರಿಯುತ್ತಿರುವುದರಿಂದ ಕಾವೇರಿ ನದಿ ಭೋರ್ಗರೆದು ಹರಿಯುತ್ತಿದೆ. ಇದರಿಂದ ಜನರಲ್ಲಿ ಮತ್ತೆ ಪ್ರವಾಹದ ಭೀತಿ ಎದುರಾಗಿದೆ. ಇತ್ತ ಬರೋಬ್ಬರಿ ಒಂದು ದಶಕದ ಬಳಿಕ ಸಂಡೂರಿನ ನಾರಿಹಳ್ಳ ಜಲಾಶಯ ಭರ್ತಿಯಾಗಿದೆ.

    ಕೊಡಗಿನ ಕಾವೇರಿ ಉಗಮ ಸ್ಥಾನ ತಲಕಾವೇರಿ, ಭಾಗಮಂಡಲ ಸುತ್ತಮುತ್ತ ಭಾರೀ ಮಳೆ ಸುರಿಯುತ್ತಿದೆ. ಇದರಿಂದಾಗಿ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಕಾವೇರಿ ನದಿ ನೀರಿನ ಹರಿಯುವಿಕೆಯಲ್ಲಿ ಭಾರೀ ಏರಿಕೆಯಾಗಿದ್ದು, ಸಂಗಮ ಭರ್ತಿಯಾಗಲು ಇನ್ನೆರಡು ಅಡಿಗಳು ಮಾತ್ರವೇ ಬಾಕಿ ಇದೆ. ಒಂದು ಮಳೆ ಹೀಗೆ ಮುಂದುವರಿದಲ್ಲಿ ತ್ರಿವೇಣಿ ಸಂಗಮ ಭರ್ತಿಯಾಗುವ ಸಾಧ್ಯತೆ ಇದೆ.

    ಮಡಿಕೇರಿ, ನಾಪೋಕ್ಲು, ಸುಂಟಿಕೊಪ್ಪ, ಮಾದಾಪುರ, ಗಾಳಿಬೀಡು ಸೇರಿದಂತೆ ಬಹುತೇಕ ಕಡೆಗಳಲ್ಲಿ ನಿರಂತರವಾಗಿ ಮಳೆ ಸುರಿಯುತ್ತಲೇ ಇದೆ. ಹೀಗಾಗಿ ಕೊಡಗಿನ ಜನರಲ್ಲಿ ಮತ್ತೆ ಪ್ರವಾಹ ಮತ್ತು ಭೂಕುಸಿತದ ಭೀತಿ ಎದುರಾಗಿದೆ. ವಿರಾಜಪೇಟೆ ತಾಲೂಕಿನ ಕರಡಿಗೋಡು ಗುಹ್ಯ ಬೆಟ್ಟದ ಕಾಡು ಭಾಗಗಳಲ್ಲಿ ಕಾವೇರಿ ನದಿಯ ನೀರಿನ ಪ್ರಮಾಣ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ನದಿ ಪಾತ್ರದ ಜನರಲ್ಲಿ ಆತಂಕ ಮನೆ ಮಾಡಿದೆ.

    ಕಳೆದ ರಾತ್ರಿಯಿಂದ ಬಳ್ಳಾರಿಯಲ್ಲಿ ಧಾರಾಕಾರ ಮಳೆ ಆರಂಭವಾಗಿದ್ದು, ಜಿಲ್ಲೆಯ ಬಳ್ಳಾರಿ ಸಂಡೂರು ಸೇರಿದಂತೆ ಬಹುತೇಕ ಕಡೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಇದರಿಂದ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದೆ. ಇತ್ತ ಮಳೆಯಿಂದಾಗಿ ಬರೋಬ್ಬರಿ ಒಂದು ದಶಕದ ಬಳಿಕ ಸಂಡೂರಿನ ನಾರಿಹಳ್ಳ ಜಲಾಶಯ ಭರ್ತಿಯಾಗಿದ್ದು, ಸಂಡೂರಿನ ಸೊಬಗು ಇಮ್ಮಡಿಯಾಗಿದೆ. ಸಂಡೂರು ಉತ್ತರ ಕರ್ನಾಟಕದ ಮಲೆನಾಡು ಅಂತಲೇ ಖ್ಯಾತಿ ಪಡೆದಿದ್ದು, ಗಿರಿಶೃಂಗಗಳ ಮಧ್ಯದಲ್ಲಿ ತುಂಬಿನಿಂತಿರುವ ನಾರಿಹಳ್ಳದ ದೃಶ್ಯ ಮನಮೋಹಕವಾಗಿದೆ.

    ಬಳ್ಳಾರಿ ಜಿಲ್ಲೆಯ ಬಹುತೇಕ ಹಳ್ಳಕೊಳ್ಳಗಳು ಭರ್ತಿಯಾಗಿ ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಇದರಿಂದ ಸಿರುಗುಪ್ಪ ತಾಲೂಕಿನ ಹೆಚ್.ಹೊಸಹಳ್ಳಿ ಮತ್ತು ಹಾಗಲೂರು ಗ್ರಾಮಗಳ ಸಂಪರ್ಕ ಕಡಿತವಾಗಿದೆ. ಹಳ್ಳದ ನೀರು ಹೊಲಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಹಳ್ಳದ ನೀರು ರಸ್ತೆಯ ಮೇಲೆ ಹರಿಯುತ್ತಿರುವ ಹಿನ್ನೆಲೆ ಗ್ರಾಮದ ಸಂಪರ್ಕ ಕಡಿತವಾಗಿದೆ.

    ಧಾರವಾಡದಲ್ಲಿ ರಾತ್ರಿ ಸುರಿದ ಮಳೆಗೆ ನಗರದ ಹಾಶ್ಮಿನಗರ ರಸ್ತೆಗಳಲ್ಲಿ ನೀರು ನಿಂತಿದ್ದರಿಂದ ರಸ್ತೆಗಳೆಲ್ಲ ಹಳ್ಳದಂತೆ ಆಗಿವೆ. ಬಡಾವಣೆಯ ನಿವಾಸಿಗಳು ಮನೆಯಿಂದ ಹೊರಬರಲು ಸಾಧ್ಯವಾಗದೆ ಪರದಾಡಿದ್ದಾರೆ. ರಸ್ತೆಯಲ್ಲಿ ನಿಂತ ನೀರು ಹರಿದು ಹೋಗಲು ಚರಂಡಿ ಕೂಡ ನಿರ್ಮಾಣ ಮಾಡಿಲ್ಲ. ಹೀಗಾಗಿ ಸ್ಥಳೀಯರು ರಸ್ತೆಯಲ್ಲಿ ನಿಂತ ನೀರನ್ನ ಬಕೆಟ್‍ಗಳಲ್ಲಿ ತುಂಬಿ ಹೊರ ಹಾಕಿದ್ದಾರೆ. ಪ್ರತಿ ವರ್ಷ ಮಳೆ ಬಂದಾಗ ರಸ್ತೆಗಳು ಇದೇ ಸ್ಥಿತಿಯಲ್ಲಿ ಇರುತ್ತವೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

  • ನನಗಾಗಿ ಕಾಯ್ತಿರು ಅಂತ ಹೋದ ಪ್ರೇಮಿ – ನಿಶ್ಚಿತಾರ್ಥ ಆದ ಕೆಲ ಕ್ಷಣಗಳಲ್ಲೇ ಯುವಕ ಸಾವು

    ನನಗಾಗಿ ಕಾಯ್ತಿರು ಅಂತ ಹೋದ ಪ್ರೇಮಿ – ನಿಶ್ಚಿತಾರ್ಥ ಆದ ಕೆಲ ಕ್ಷಣಗಳಲ್ಲೇ ಯುವಕ ಸಾವು

    – ಭಾವಿ ಪತ್ನಿಗೆ ಕಿಸ್ ಕೊಟ್ಟು ಹೋಗಿದ್ದ

    ಬ್ರೆಸಿಲಿಯಾ: ನಿಶ್ಚಿತಾರ್ಥವಾದ ಕೇವಲ ಐದು ನಿಮಿಷಗಳಲ್ಲೇ ಸ್ನೇಹಿತರೊಂದಿಗೆ ಈಜಲು ಹೋಗಿದ್ದ ಯುವಕ ಸಾವನ್ನಪ್ಪಿರುವ ಘಟನೆ ಬ್ರೆಜಿಲ್‍ನಲ್ಲಿ ನಡೆದಿದೆ.

    ಬ್ರೆಜಿಲ್‍ನ ಉದ್ಯಮಿ ಜೊವಾವೊ ಗಿಲ್ಹೆರ್ಮ್ ಟೊರೆಸ್ ಫಡಿನಿ (24) ಮೃತ ಯುವಕ. ಈ ಘಟನೆ ಕೆಲ ದಿನಗಳ ಹಿಂದೆ ನಡೆದಿದೆ. ಮೃತ ಫಡಿನಿ ಮತ್ತು ಭಾವಿ ಪತ್ನಿ ಲಾರಿಸ್ಸಾ ಕ್ಯಾಂಪೋಸ್ ಬ್ರೆಜಿಲ್‍ನ ಸೊರೊಕಬಾ ಪ್ರದೇಶದಲ್ಲಿರುವ ಪ್ರಖ್ಯಾತ ಇಟುಪರಾರಂಗ ಜಲಾಶಯದ ಬಳಿ ತಮ್ಮ ಸ್ನೇಹಿತರೊಂದಿಗೆ ನಿಶ್ಚಿತಾರ್ಥವನ್ನು ಆಚರಿಸಿಕೊಂಡಿದ್ದರು. ನಂತರ ಎಲ್ಲರೂ ನಿಶ್ಚಿತಾರ್ಥದ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.

    ಫೋಟೋ ತೆಗೆದ ಕೆಲವೇ ಕ್ಷಣಗಳಲ್ಲಿ ಫಡಿನಿ ತನ್ನ ಸ್ನೇಹಿತರೊಂದಿಗೆ ಸ್ವಿಮ್ಮಿಂಗ್ ರೇಸ್‍ಗೆಂದು ಡ್ಯಾಮ್‍ಗೆ ಧುಮುಕಿದನು. ಆದರೆ ಸ್ವಿಮ್ ಮಾಡುತ್ತಲೇ ಫಡಿನಿ ನೀರಿನಲ್ಲಿ ಕಣ್ಮರೆಯಾಗಿದ್ದಾನೆ. ಫಡಿನಿ ಉತ್ತಮ ಈಜುಗಾರನಾಗಿದ್ದು, ಆತ ಜಲಾಶಯಕ್ಕೆ ಧುಮುಕುವ ಮೊದಲು ಭಾವಿ ಪತ್ನಿ ಲಾರಿಸ್ಸಾ ಹಣೆಗೆ ಮುತ್ತಿಟ್ಟಿದ್ದನು.

    ಫಡಿನಿ ಕಿಸ್ ಮಾಡಿದ ನಂತರ ತನ್ನ ಶರ್ಟ್ ಬಿಚ್ಚಿ ನಮ್ಮ ಸ್ನೇಹಿತರೊಂದಿಗೆ ನೀರಿಗೆ ಜಿಗಿದನು. ನಾನು ಬೇಗ ಬರುತ್ತೇನೆ ಕಾಯುತ್ತಿರು, ನಾನು ನಿನ್ನನ್ನು ತುಂಬಾ ಪ್ರೀತಿಸುತ್ತಿದ್ದೇನೆ ಎಂದು ಹೇಳಿ ಹೋಗಿದ್ದ. ಸ್ನೇಹಿತರು ಈ ತಡದಿಂದ ಮುಂದಿನ ದಡಕ್ಕೆ ಈಜು ಸ್ಪರ್ಧೆಯನ್ನು ಪ್ರಾರಂಭಿಸಿದರು. ಆದರೆ ಫಡಿನಿ ಇದ್ದಕ್ಕಿದ್ದಂತೆ ನೀರಿನ ಕೆಳಗೆ ಕಣ್ಮರೆಯಾದನು ಎಂದು ಲಾರಿಸ್ಸಾ ಹೇಳಿದ್ದಾಳೆ.

    ಕೂಡಲೇ ಸ್ನೇಹಿತರು ಆತನಿಗಾಗಿ ಹುಡುಕಾಡಿದರೂ ಎಲ್ಲೂ ಪತ್ತೆಯಾಗಿಲ್ಲ. ನಂತರ ತುರ್ತು ಸೇವೆಗಳು ಸ್ಥಳಕ್ಕೆ ಆಗಮಿಸಿದ್ದು, ಮುಳುಗು ತಜ್ಞರು ದೋಣಿಗಳೊಂದಿಗೆ ಹುಡುಕಾಡಿದರು. ಆದರೂ ಫಡಿನಿ ಎಲ್ಲೂ ಪತ್ತೆಯಾಗಿಲ್ಲ. ಕೊನೆಗೆ ಅಗ್ನಿಶಾಮಕ ಸಿಬ್ಬಂದಿ ಬಂದ ಸುಮಾರು ಒಂದೂವರೆ ಗಂಟೆಯ ನಂತರ ಅವನ ದೇಹವನ್ನು ಪತ್ತೆಯಾಗಿದೆ.

    ಈಗಾಗಲೇ ಮದುವೆ ದಿನಾಂಕ ನಿಗದಿಯಾಗಿತ್ತು. ಆದರೆ ನಿಶ್ಚಿತಾರ್ಥದಲ್ಲಿಯೇ ಈ ದುರಂತ ಸಂಭವಿಸಿದೆ. ನಾನು ಯೋಚಿಸುವುದು ಮತ್ತು ಕನಸು ಕಾಣುವುದು ಅವನ ಬಗ್ಗೆ ಮಾತ್ರ. ಈಗ ನಾವು ಒಟ್ಟಿಗೆ ಕಳೆದ ಸುಂದರ ಕ್ಷಣಗಳ ನೆನಪು ಮಾತ್ರ ಉಳಿದುಕೊಂಡಿದೆ ಎಂದು ಲಾರಿಸ್ಸಾ ಕಣ್ಣೀರು ಹಾಕಿದ್ದಾಳೆ.

  • ಕೆಆರ್‌ಎಸ್‌ಗೆ ಐದನೇ ಬಾರಿಗೆ ಬಾಗಿನ ಅರ್ಪಣೆ ಮಾಡಲಿರುವ ಸಿಎಂ ಬಿಎಸ್‍ವೈ

    ಕೆಆರ್‌ಎಸ್‌ಗೆ ಐದನೇ ಬಾರಿಗೆ ಬಾಗಿನ ಅರ್ಪಣೆ ಮಾಡಲಿರುವ ಸಿಎಂ ಬಿಎಸ್‍ವೈ

    – ಅತೀ ಹೆಚ್ಚು ಬಾರಿ ಕಾವೇರಿ ತಾಯಿಗೆ ಬಾಗಿನ ನೀಡಿದ ಕೀರ್ತಿ ಸಿಎಂಗೆ

    ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ಜಲಾಶಯಕ್ಕೆ ಅತೀ ಹೆಚ್ಚು ಬಾರಿ ಬಾಗಿನ ಅರ್ಪಣೆ ಮಾಡಿರುವ ಕೀರ್ತಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಲ್ಲಲಿದೆ.

    ಹೀಗಾಗಲೇ ಕೆಆರ್‌ಎಸ್ ಜಲಾಶಯಕ್ಕೆ ನಾಲ್ಕು ಬಾರಿ ಬಾಗಿನ ಅರ್ಪಣೆ ಮಾಡಿರುವ ಯಡಿಯೂರಪ್ಪ ಅವರು, ಈ ಬಾರಿ ಕೆಆರ್‌ಎಸ್ ಜಲಾಶಯ ಭರ್ತಿಯಾಗಿರುವ ಹಿನ್ನೆಯಲ್ಲಿ ಇದೇ ತಿಂಗಳ 21ರಂದು ಕಾವೇರಿ ಮಾತೇಗೆ ಬಾಗಿನ ನೀಡಲಿದ್ದಾರೆ. ಈ ಮೂಲಕ ಯಡಿಯೂರಪ್ಪ ಅವರು ಕೆಆರ್‍ಎಸ್‍ಗೆ ಐದು ಬಾರಿ ಬಾಗಿನ ಅರ್ಪಣೆ ಮಾಡಿದ ರಾಜ್ಯದ ಏಕೈಕ ಸಿಎಂ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

    ತಾವು ಸಿಎಂ ಆಗಿದ್ದ ಅವಧಿಯಲ್ಲಿ ಗುಂಡುರಾವ್, ಬಂಗಾರಪ್ಪ ಹಾಗೂ ಕುಮಾರಸ್ವಾಮಿ ಅವರು ತಲಾ ಮೂರು ಬಾರಿ ಕೆಆರ್‌ಎಸ್ ಜಲಾಶಯಕ್ಕೆ ಬಾಗಿನ ಅರ್ಪಣೆ ಮಾಡಿದ್ದರು. 2019 ಆಗಸ್ಟ್ ತಿಂಗಳಿನಲ್ಲಿ ಯಡಿಯೂರಪ್ಪ ಅವರು ಕೆಆರ್‌ಎಸ್ ಜಲಾಶಯಕ್ಕೆ ಬಾಗಿನ ಅರ್ಪಣೆ ಮಾಡುವ ಮೂಲಕ ಹೆಚ್ಚು ಬಾರಿ ಕಾವೇರಿ ಮಾತೇಗೆ ಬಾಗಿನ ಅರ್ಪಣೆ ಮಾಡಿದ ಸಿಎಂ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದರು. ಇದೀಗ ಇದೇ ತಿಂಗಳ 21 ರಂದು ಕೆಆರ್‌ಎಸ್‌ಗೆ ಬಾಗಿನ ಅರ್ಪಣೆ ಮಾಡುವ ಮೂಲಕ ಐದನೇ ಬಾರಿಗೆ ಬಾಗಿನ ಅರ್ಪಿಸಿದ ಸಿಎಂ ಎಂಬ ಮೆಚ್ಚುಗೆಗೆ ಪಾತ್ರರಾಗಲಿದ್ದಾರೆ.

    124.80 ಅಡಿ ಗರಿಷ್ಠ ಮಟ್ಟ ಇರುವ ಕೆಆರ್‍ಎಸ್ ಜಲಾಶಯ ಸದ್ಯ 124.60 ಅಡಿಗಳಷ್ಟು ಭರ್ತಿಯಾಗಿದೆ. ಜಲಾಶಯಕ್ಕೆ 9,404 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಜಲಾಶಯದಿಂದ 5,318 ಕ್ಯೂಸೆಕ್ ನೀರು ಹೊರ ಹೋಗುತ್ತಿದೆ.

  • ಶಿವಮೊಗ್ಗ ಜಿಲ್ಲೆಯಲ್ಲಿ ತಗ್ಗಿದ ಮಳೆಯ ಪ್ರಮಾಣ

    ಶಿವಮೊಗ್ಗ ಜಿಲ್ಲೆಯಲ್ಲಿ ತಗ್ಗಿದ ಮಳೆಯ ಪ್ರಮಾಣ

    ಶಿವಮೊಗ್ಗ: ಕಳೆದೊಂದು ವಾರದಿಂದ ಸುರಿದಿದ್ದ ಮಳೆರಾಯ ಬಿಡುವು ನೀಡಿದ್ದಾನೆ. ಶಿವಮೊಗ್ಗ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಜಲಾಶಯಗಳ ಒಳ ಹರಿವು ಹಾಗೂ ಹೊರ ಹರಿವಿನ ಪ್ರಮಾಣ ತಗ್ಗಿದೆ.

    ಜಲಾಶಯಗಳ ನೀರಿನ ಮಟ್ಟ ಅಡಿಗಳಲ್ಲಿ ಮತ್ತು ಹರಿವು ಕ್ಯೂಸೆಕ್ಸ್ ಗಳಲ್ಲಿ ಈ ಕೆಳಗಿನಂತಿದೆ.

    1. ಲಿಂಗನಮಕ್ಕಿ ಜಲಾಶಯ
    ಗರಿಷ್ಠ ಮಟ್ಟ : 1,819 ಅಡಿ
    ಇಂದಿನ ಮಟ್ಟ : 1,795.10 ಅಡಿ
    ಒಳಹರಿವು : 29,142.00 ಕ್ಯೂಸೆಕ್
    ಹೊರಹರಿವು : 0000

    2. ಭದ್ರಾ ಜಲಾಶಯ
    ಗರಿಷ್ಠ ಮಟ್ಟ : 186 ಅಡಿ
    ಇಂದಿನ ಮಟ್ಟ : 176.50 ಅಡಿ
    ಒಳಹರಿವು : 17,300.00 ಕ್ಯೂಸೆಕ್
    ಹೊರಹರಿವು : 3,006.00 ಕ್ಯೂಸೆಕ್

    3. ತುಂಗಾ ಜಲಾಶಯ
    ಗರಿಷ್ಠ ಮಟ್ಟ : 588.24 ಅಡಿ
    ಇಂದಿನ ಮಟ್ಟ : 587.99 ಅಡಿ
    ಒಳಹರಿವು : 33,608.00 ಕ್ಯೂಸೆಕ್
    ಹೊರಹರಿವು : 31,698.00 ಕ್ಯೂಸೆಕ್

    ಕ್ಯೂಸೆಕ್ ಎಂಬುದು Cubic feet per Second ಹ್ರಸ್ವರೂಪ. ಪ್ರತಿ ಸೆಕೆಂಡಿಗೆ ಒಂದು ಘನ ಅಡಿ ನೀರು ಹರಿದರೆ ಅದು ಒಂದು ಕ್ಯೂಸೆಕ್ ನೀರು ಎಂದು ಕರೆಯಲ್ಪಡುತ್ತದೆ. ಒಂದು ಘನ ಅಡಿ ನೀರನ್ನು ಲೀಟರುಗಳಿಗೆ ಪರಿವರ್ತಿಸಿದರೆ ಸುಮಾರು 28.317 ಲೀಟರುಗಳಾಗುತ್ತವೆ. 11,524 ಕ್ಯೂಸೆಕ್ ನೀರು 24 ಗಂಟೆಯ ಕಾಲ ನಿರಂತರ ಹರಿದರೆ ಒಂದು ಟಿಎಂಸಿ ಆಗಲಿದೆ.

  • ಆಲಮಟ್ಟಿ, ನಾರಾಯಣಪುರ ಜಲಾಶಯದಿಂದ ಭಾರೀ ಪ್ರಮಾಣದಲ್ಲಿ ನೀರು ಬಿಡುಗಡೆ, ಪ್ರವಾಹ ಭೀತಿ

    ಆಲಮಟ್ಟಿ, ನಾರಾಯಣಪುರ ಜಲಾಶಯದಿಂದ ಭಾರೀ ಪ್ರಮಾಣದಲ್ಲಿ ನೀರು ಬಿಡುಗಡೆ, ಪ್ರವಾಹ ಭೀತಿ

    ವಿಜಯಪುರ/ ಯಾದಗಿರಿ: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಧಾರಾಕಾರ‌ ಮಳೆಯಿಂದ ಕೃಷ್ಣಾ ನದಿ ಉಕ್ಕಿ ಹರಿಯುತ್ತಿದೆ.ಆಲಮಟ್ಟಿ ಜಲಾಶಯಕ್ಕೆ ಭಾರಿ ಪ್ರಮಾಣದಲ್ಲಿ ಒಳಹರಿವು ಹೆಚ್ಚಳವಾಗಿದ್ದು 26 ಗೇಟ್ ಗಳ ಪೈಕಿ 22 ಗೇಟ್ ಗಳ ಮೂಲಕ ಅಪಾರ ಪ್ರಮಾಣದ ನೀರನ್ನು ಹೊರ ಬಿಡಲಾಗುತ್ತಿದೆ.

    1.47 ಲಕ್ಷ ಕ್ಯುಸೆಕ್‌ ಒಳ ಹರಿವು ದಾಖಲಾಗಿದ್ದು,1.50 ಲಕ್ಷ ಕ್ಯುಸೆಕ್‌ ನೀರನ್ನ ಹೊರಬಿಡಲಾಗುತ್ತಿದೆ. ಕ್ಷಣ ಕ್ಷಣಕ್ಕೂ ನೀರು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಜಲಾಶಯದ ಹತ್ತಿರದ ಗ್ರಾಮಗಳ ಮೀನುಗಾರರು, ಗ್ರಾಮಸ್ಥರು ನದಿಗೆ ಇಳಿಯದಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.

    123.081 ಟಿಎಂಸಿ ಸಂಗ್ರಹ ಸಮರ್ಥ್ಯ ಇರುವ ಜಲಾಶಯದಲ್ಲಿ ಈಗ 97.70 ಟಿಎಂಸಿ ನೀರು ಸಂಗ್ರಹಗೊಂಡಿದೆ. 519 ಮೀಟರ್‌ ಎತ್ತರದ ಜಲಾಶಯದಲ್ಲಿ ಈಗ 518 ಮೀಟರ್‌ ನೀರು ಸಂಗ್ರಹಗೊಂಡಿದೆ.

    ಹುಣಸಗಿ ತಾಲೂಕಿನ ನಾರಾಯಣಪುರದ ಬಸವಸಾಗರ ಜಲಾಶಯದಿಂದ ಮತ್ತೆ ಕೃಷ್ಣಾ ನದಿಗೆ ಭಾರೀ ಪ್ರಮಾಣದಲ್ಲಿ ನೀರು ಬಿಡುಗಡೆಯಾಗಿದೆ.

    ಜಲಾಶಯಕ್ಕೆ 1.50 ಲಕ್ಷ ಕ್ಯೂಸೆಕ್ ಒಳಹರಿವು ಇದ್ದು, 1,63,650 ಕ್ಯೂಸೆಕ್ ನೀರನ್ನು 10 ಗೇಟ್‌ ತೆರೆದು ಬಿಡುಗಡೆ ಮಾಡಲಾಗಿದೆ. ಜಲಾಶಯದ ಸಂಗ್ರಹ ಸಾಮರ್ಥ್ಯ 33.313 ಟಿಎಂಸಿ ಇದ್ದು, ಈಗಾಗಲೇ 29.570 ಟಿಎಂಸಿ ನೀರು ಸಂಗ್ರಹವಿದೆ. ಮಧ್ಯಾಹ್ನ ವೇಳೆಗೆ 2 ಲಕ್ಷ ಕ್ಯೂಸೆಕ್ ನೀರು ಬಿಡುಗಡೆಯಾಗುವ ಸಾಧ್ಯತೆಯಿದೆ.

    ಕ್ಯೂಸೆಕ್ ಮತ್ತು ಟಿಎಂಸಿ ಎಂದರೆ ಎಷ್ಟು?
    ಕ್ಯೂಸೆಕ್ ಎಂಬುದು Cubic feet per Second ಹ್ರಸ್ವರೂಪ. ಪ್ರತಿ ಸೆಕೆಂಡಿಗೆ ಒಂದು ಘನ ಅಡಿ ನೀರು ಹರಿದರೆ ಅದು ಒಂದು ಕ್ಯೂಸೆಕ್ ನೀರು ಎಂದು ಕರೆಯಲ್ಪಡುತ್ತದೆ. ಒಂದು ಘನ ಅಡಿ ನೀರನ್ನು ಲೀಟರುಗಳಿಗೆ ಪರಿವರ್ತಿಸಿದರೆ ಸುಮಾರು 28.317 ಲೀಟರುಗಳಾಗುತ್ತವೆ. 11,524 ಕ್ಯೂಸೆಕ್ ನೀರು 24 ಗಂಟೆಯ ಕಾಲ ನಿರಂತರ ಹರಿದರೆ ಒಂದು ಟಿಎಂಸಿ ಎಂದು ಕರೆಯಲಾಗುತ್ತದೆ. 10 ಸಾವಿರ ಕ್ಯೂಸೆಕ್ ನೀರು 24 ಗಂಟೆ ನಿರಂತರ ಹರಿದರೆ 0.864 ಟಿಎಂಸಿ ಅಡಿ ಆಗುತ್ತದೆ. 35.87 ಅಡಿ ಅಳದಷ್ಟು ನೀರನ್ನು ಒಂದು ಚದರ ಮೈಲಿ ಪ್ರದೇಶದಲ್ಲಿ ಸಂಗ್ರಹಿಸಿದರೆ ಒಂದು ಟಿಎಂಸಿ ಅಡಿ ಆಗುತ್ತದೆ.

  • ಕೊಡಗಿನಲ್ಲಿ ಮುಂದುವರಿದ ಮಳೆ ಅಬ್ಬರ – ತುಂಬಿ ಹರಿಯುತ್ತಿರೋ ನದಿಗಳು

    ಕೊಡಗಿನಲ್ಲಿ ಮುಂದುವರಿದ ಮಳೆ ಅಬ್ಬರ – ತುಂಬಿ ಹರಿಯುತ್ತಿರೋ ನದಿಗಳು

    ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಮುಂಗಾರು ಮಳೆ ಬಿರುಸು ಪಡೆದಿದೆ. ಅದರಲ್ಲೂ ಕಳೆದ 24 ಗಂಟೆಯಲ್ಲಿ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಬಿರುನಾಣಿ, ಟಿ.ಶೆಟ್ಟಿಗೇರಿ, ಶ್ರೀಮಂಗಲ, ಕುಟ್ಟ, ಬಿ.ಶೆಟ್ಟಿಗೇರಿ ಗ್ರಾ.ಪಂ.ವ್ಯಾಪ್ತಿಯ ಪ್ರದೇಶದಲ್ಲಿ ನಿರಂತರ ಮಳೆಯಾಗುತ್ತಿದೆ.

    ಬಿರುನಾಣಿ ಗ್ರಾ.ಪಂ.ವ್ಯಾಪ್ತಿಯ ಬಿರುನಾಣಿ-ನಾಟ್ ಕುಂದ್ ರಸ್ತೆ ಮೇಲೆ ನದಿ ತುಂಬಿ ಹರಿಯುತ್ತಿದ್ದು, ಗ್ರಾಮಕ್ಕೆ ಸಂಪರ್ಕ ಮಾಡುವ ಸೇತುವೆ ಮೇಲೆ 3 ಅಡಿ ಎತ್ತರ ನೀರು ಹರಿಯುತ್ತಿದೆ. ಇದರಿಂದ ಗ್ರಾಮಕ್ಕೆ ಸಂಪರ್ಕ ಕಟ್ ಆಗಿದೆ.

    ನಾಟ್ ಕುಂದ್ ಸುತ್ತ ಬ್ರಹ್ಮಗಿರಿ ಅರಣ್ಯ ಸುತ್ತುವರಿದಿದ್ದು, ಈಗ ಏಕೈಕ ರಸ್ತೆ ಮಾರ್ಗ ಕಡಿತವಾಗಿದೆ. ಕಳೆದ ವರ್ಷ ಇದೇ ಪ್ರದೇಶಕ್ಕೆ ಸಂಪರ್ಕ ಕಲ್ಪಿಸಲು ನಿರ್ಮಿಸಿದ್ದ ಕಬ್ಬಿಣದ ತೂಗು ಸೇತುವೆ ಪ್ರವಾಹಕ್ಕೆ ಕೊಚ್ಚಿ ಹೋಗಿತ್ತು. ಈ ಪ್ರದೇಶದಲ್ಲಿ ಸುಮಾರು 12 ಕುಟುಂಬವಿದ್ದು, ಸಂಪರ್ಕ ಕಡಿತದಿಂದ ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಈಗ ಇರುವ ಸೇತುವೆಯನ್ನು 10 ಅಡಿ ಎತ್ತರವಾಗಿ ನಿರ್ಮಿಸಿದರೆ, ಮಳೆಗೆ ಸೇತುವೆ ಮುಳುಗುವುದನ್ನು ತಡೆಯಬಹುದಾಗಿದೆ.

    ನಿರಂತರ ಮಳೆಯಿಂದ ಸಂಪರ್ಕ ಕಡಿತ ಹಲವು ದಿನ ಮುಂದುವರಿದರೆ, ಈ ಪ್ರದೇಶದ ವಾಸಿಸುವ ಜನರಿಗೆ ಅಗತ್ಯ ವಸ್ತುಗಳನ್ನು ಒದಗಿಸಬೇಕಾಗಿ ಗ್ರಾಮದ ನಿವಾಸಿಗಳು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ. ಪಶ್ಚಿಮ ಘಟ್ಟ ಪ್ರದೇಶದಲ್ಲಿ ನಿರಂತವಾಗಿ ಭಾರಿ ಮಳೆಯಾಗುತ್ತಿರುವುದರಿಂದ ಈ ವ್ಯಾಪ್ತಿಯ ಕಕ್ಕಟ್ ಪೆÇಳೆ ನದಿ ತುಂಬಿ ಹರಿಯುತ್ತಿದೆ. ಅಲ್ಲದೇ ಲಕ್ಷ್ಮಣ ತೀರ್ಥ, ನದಿಯಲ್ಲೂ ನೀರಿನ ಮಟ್ಟ ಏರಿಕೆಯಾಗಿದೆ.

    ಇತ್ತ ಮಡಿಕೇರಿಯಲ್ಲಿ ಕಳೆದ ರಾತ್ರಿಯಿಂದ ಮಳೆಯ ಅರ್ಭಟ ಕೊಂಚ ಕಡಿಮೆಯಾಗಿದ್ದು, ಗುಡ್ಡಗಾಡು ಪ್ರದೇಶದ ಜನರು ನಿಟ್ಟುಸಿರು ಬೀಡುವಂತೆ ಅಗಿದೆ. ಕಾವೇರಿ ನದಿ ಪಾತ್ರದ ಜನರಲ್ಲಿ ನೀರಿನ ಪ್ರಮಾಣದ ಏರಿಕೆ ಅಗುತ್ತಿರುವುದರಿಂದ ವಿರಾಜಪೇಟೆ ತಾಲೂಕಿನ ಕರಡಿಗೋಡು ಗ್ರಾಮದಲ್ಲಿ ಅತಂಕ ಹೆಚ್ಚುವಂತೆ ಅಗಿದೆ.

    ಜಿಲ್ಲೆಯಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಇತ್ತ ಸೋಮವಾರಪೇಟೆ ತಾಲೂಕಿನ ಹಾರಂಗಿ ಜಲಾಶಯದ ಒಳಹರಿವು ಹೆಚ್ಚಾಗಿದೆ. ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2859 ಅಡಿಗಳು ಅಗಿದ್ದು, ಇಂದಿನ ನೀರಿನ ಮಟ್ಟ 2853.53 ಅಡಿಗಳು ಇದೆ. ಇಂದಿನ ನೀರಿನ ಒಳಹರಿವು 5,056 ಕ್ಯೂಸೆಕ್ ಹಾಗೂ ಹೊರ ಹರಿವು ನದಿಗೆ 4,104 ಕ್ಯೂಸೆಕ್ ಬೀಡಲಾಗುತ್ತಿದೆ. ಪಕ್ಕದ ಮೈಸೂರಿನ ಕೆಆರ್‍ಎಸ್‍ಗೆ ಇದು ವರದಾನವಾಗಲಿದೆ.

  • ಕೊಡಗು ಜಿಲ್ಲೆಯಲ್ಲಿ ಎಡೆ ಬಿಡದೆ ಸುರಿಯುತ್ತಿದೆ ಮಳೆ

    ಕೊಡಗು ಜಿಲ್ಲೆಯಲ್ಲಿ ಎಡೆ ಬಿಡದೆ ಸುರಿಯುತ್ತಿದೆ ಮಳೆ

    – ನದಿ, ಜಲಾಶಯದಲ್ಲಿ ನೀರಿನ ಹರಿವು ಹೆಚ್ಚಳ

    ಮಡಿಕೇರಿ: ಕರ್ನಾಟಕದ ಕಾಶ್ಮೀರ ಕೊಡಗಿನಲ್ಲಿ ಮಳೆ ಅಬ್ಬರಿಸುತ್ತಿದ್ದು, ಬೆಳಗ್ಗೆಯಿಂದ ಬಿಡುವು ಕೊಟ್ಟಿದ್ದ ಮಳೆರಾಯ ಮಧ್ಯಾಹ್ನದ ನಂತರ ಮತ್ತೆ ಅಬ್ಬರ ಜೋರು ಮಾಡಿದ್ದಾನೆ.

    ಕಳೆದ ನಾಲ್ಕು ದಿನಗಳಿಂದ ಜಿಲ್ಲೆಯಲ್ಲಿ ಉತ್ತಮ ಮಳೆ ಆಗುತ್ತಿದೆ. ಅಲ್ಲದೆ ಬಿಡುವು ಕೊಡದೇ ಗಾಳಿ-ಮಳೆ ಆಗುತ್ತಿರುವುದರಿಂದ ನದಿ, ಹಳ್ಳ, ತೊರೆ ಮತ್ತು ಝರಿಗಳಲ್ಲಿ ನೀರಿನ ಹರಿವಿನ ಪ್ರಮಾಣ ಹೆಚ್ಚಾಗಿದೆ. ಮೈ ಕೊರೆಯುವ ಚಳಿಯ ನಡುವೆ ಜಿಲ್ಲೆಯ ಜನತೆ ಕೊಡೆಗಳನ್ನು ಹಿಡಿದು ದೈನಂದಿನ ಕೆಲಸಗಳನ್ನು ಮಾಡಿಕೊಳ್ಳುತ್ತಿದ್ದಾರೆ.

    ಬ್ರಹ್ಮಗಿರಿ, ಭಾಗಮಂಡಲ ಹಾಗೂ ತಲಕಾವೇರಿ, ವಿರಾಜಪೇಟೆ ಸೇರಿದಂತೆ ನಾಪೋಕ್ಲು ಭಾಗಗಳಲ್ಲಿ ಮಳೆಯ ಅಬ್ಬರ ತುಸು ಜೋರಾಗಿದೆ. ದಿನಗಳು ಕಳೆದಂತೆ ಕಾವೇರಿ ನದಿಯಲ್ಲೂ ನಿಧಾನವಾಗಿ ನೀರಿನ ಹರಿವು ಹೆಚ್ಚುತ್ತಿದೆ. ಸೋಮವಾರಪೇಟೆ ಭಾಗದಲ್ಲೂ ಉತ್ತಮ ಮಳೆ ಆಗುತ್ತಿರುವುದರಿಂದ ಹಾರಂಗಿ ಜಲಾಶಯದಲ್ಲೂ ನೀರಿನ ಒಳ ಹರಿವು ಹೆಚ್ಚುತ್ತಿದೆ.

    ಹಾಗೆಯೇ ಜೋಳ ಹಾಗೂ ಭತ್ತ ನಾಟಿಗೆ ರೈತರು ಭೂಮಿಯನ್ನು ಹದಗೊಳಿಸಿಕೊಂಡು ಕೃಷಿ ಚಟುವಟಿಕೆಗೆ ಉತ್ಸಾಹದಲ್ಲಿದ್ದಾರೆ. ಮತ್ತೊಂದೆಡೆ ಮಳೆ ಬರಲಿ ಆದರೆ ಪ್ರವಾಹ ಸೃಷ್ಟಿಸದಿರಲಿ ಎಂದು ಪ್ರಾರ್ಥಿಸುತ್ತಿದ್ದಾರೆ.

    ಜೊತೆಗೆ ಹಾವೇರಿ ಜಿಲ್ಲೆಯಲ್ಲಿ ಇವತ್ತು ಸಾಧಾರಣ ಮಳೆಯಾಗಿದೆ. ಜಿಲ್ಲೆಯ ಶಿಗ್ಗಾಂವಿ, ಬ್ಯಾಡಗಿ, ಹಿರೇಕೆರೂರು ಹಾಗೂ ಹಾನಗಲ್ ತಾಲೂಕು ಸೇರಿದಂತೆ ಜಿಲ್ಲೆಯಲ್ಲಿ ಸಾಧಾರಣವಾಗಿ ಮಳೆಯಾಗಿದೆ. ಯಾದಗಿರಿ ಜಿಲ್ಲೆಯಲ್ಲಿ ಒಂದು ಗಂಟೆಗೂ ಅಧಿಕ ಹೊತ್ತು ಮಳೆರಾಯ ಅಬ್ಬರ ನಡೆಸಿದ್ದು, ಹಳ್ಳಿ ಮತ್ತು ನಗರಗಳಲ್ಲಿ ಮಳೆ ಅವಾಂತರ ಸೃಷ್ಟಿ ಮಾಡಿದೆ. ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿದ್ದು, ಚರಂಡಿಗಳು ತುಂಬಿ ಹರಿದಿವೆ.

  • ಬಿಎಸ್‍ವೈ ಬಜೆಟ್ – ರೈತರಿಗೆ 5 ಬಂಪರ್, ನೀರಾವರಿಗೆ ಏನು ಕೊಡಬಹುದು? ಬಿಗ್‍ಶಾಕ್ ಏನಿರಬಹುದು?

    ಬಿಎಸ್‍ವೈ ಬಜೆಟ್ – ರೈತರಿಗೆ 5 ಬಂಪರ್, ನೀರಾವರಿಗೆ ಏನು ಕೊಡಬಹುದು? ಬಿಗ್‍ಶಾಕ್ ಏನಿರಬಹುದು?

    ಬೆಂಗಳೂರು: ತೆರಿಗೆ ಭಾರ, ಸಬ್ಸಿಡಿ ಖೋತಾ, ಮಠ ಮಾನ್ಯಗಳಿಗೆ ಅನುದಾನ ಕಟ್, ಇದು ಯಡಿಯೂರಪ್ಪ ಮಂಡಿಸಲಿರುವ ಬಜೆಟ್‍ನ ಹೈಲೈಟ್ಸ್ ಎನ್ನಲಾಗಿದೆ. ಇವತ್ತು ಬೆಳಗ್ಗೆ 11 ಗಂಟೆಗೆ ವಿಧಾನಸಭೆಯಲ್ಲಿ ಹಣಕಾಸು ಸಚಿವರಾಗಿರುವ ಸಿಎಂ ಯಡಿಯೂರಪ್ಪ ಬಜೆಟ್ ಮಂಡಿಸಲಿದ್ದಾರೆ.

    ಹಣಕಾಸು ಸಚಿವರಾಗಿ 7ನೇ ಬಜೆಟ್ ಮಂಡಿಸುತ್ತಿರುವ ಯಡಿಯೂರಪ್ಪ ಕೃಷಿ, ನೀರಾವರಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಿದ್ದು, ಕೆಲ ವಸ್ತುಗಳಿಗೆ ತೆರಿಗೆ ಹಾಕಲಿದ್ದಾರೆ. ಹಣಕಾಸು ಪರಿಸ್ಥಿತಿ ತೀರಾ ಹದಗೆಡದಿದ್ದರೂ, ಬಿಗಿ ಪರಿಸ್ಥಿತಿ ಇರುವುದನ್ನ ಯಡಿಯೂರಪ್ಪ ಹಲವು ಸಂದರ್ಭಗಳಲ್ಲಿ ಒಪ್ಪಿಕೊಂಡಿದ್ದು, ಯಡಿಯೂರಪ್ಪ ಬಜೆಟ್ ಮೊದಲಿನಂತೆ ಧಾರಾಳತನ ಇರಲ್ಲ ಎನ್ನಲಾಗಿದೆ.

    ಈ ಬಾರಿ ಮಠ ಮಾನ್ಯಗಳಿಗೆ ಪ್ರತ್ಯೇಕ ಅನುದಾನ ಇಲ್ಲ ಎನ್ನಲಾಗಿದ್ದು, ಕಾಂಗ್ರೆಸ್ ಸರ್ಕಾರ, ಸಮ್ಮಿಶ್ರ ಸರ್ಕಾರದ ಹಲವು ಹಳೆ ಯೋಜನೆಗಳು ಮುಂದುವರಿಸಲು ನಿರ್ಧಾರ ಮಾಡಿದ್ದಾರಂತೆ. ಕಳೆದ ಬಾರಿಗಿಂತ ಬಜೆಟ್ ಗಾತ್ರ 5% ರಿಂದ 7% ಮಾತ್ರ ಹೆಚ್ಚಳ ಸಾಧ್ಯತೆಯಿದ್ದು, 2 ಲಕ್ಷದ 46 ಸಾವಿರ ಕೋಟಿಗೆ ಏರಿಕೆ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.

    ರೈತರಿಗೆ 5 ಬಂಪರ್:
    > ರೈತರ ಸಾಲದ ಮೇಲಿನ ಸುಸ್ತಿಬಡ್ಡಿ ಮನ್ನಾ
    > ರೈತರಿಗೆ ಪ್ರತ್ಯೇಕವಾದ 1 ಸ್ಕೀಂ ಘೋಷಣೆ
    > ಯಶಸ್ವಿನಿ ಯೋಜನೆ ಪುನಾರಂಭಿಸುವ ಬಗ್ಗೆ ಘೋಷಣೆ
    > ಸಾವಯವ ಕೃಷಿ, ಭೂಚೇತನ ಕಾರ್ಯಕ್ರಮಕ್ಕೆ ವಿಶೇಷ ಪ್ಯಾಕೇಜ್
    > ಮೋದಿ ಕನಸಿನ ರೈತರ ಆದಾಯ ದ್ವಿಗುಣಕ್ಕೆ ಯೋಜನೆ

    ಮೇಜರ್ ಸ್ಕೀಂ ಪ್ರಕಟ:
    > ಬಡವರಿಗೆ ಒಂದು ಬಂಪರ್ ಸ್ಕೀಂ ಘೋಷಣೆ
    > ಅನ್ನಭಾಗ್ಯ ಜೊತೆ ದಿನಸಿ ಭಾಗ್ಯ ಘೋಷಣೆ
    > ಗಾರ್ಮೆಂಟ್ಸ್ ಮಹಿಳಾ ನೌಕರರಿಗೆ ಉಚಿತ ಬಸ್‍ಪಾಸ್
    > ಬಡಹೆಣ್ಣು ಮಕ್ಕಳಿಗೆ ಭಾಗ್ಯಲಕ್ಷ್ಮಿ ವಿಮೆ ಯೋಜನೆ ಸಾಧ್ಯತೆ
    > ಶಾಸಕರ ನಿಧಿಯಿಂದಲೇ ದೆಹಲಿ ಮಾದರಿಯಲ್ಲಿ ಶಾಲೆಗಳ ಅಭಿವೃದ್ಧಿ
    > ದೆಹಲಿ ಮೊಹಲ್ಲಾ ಕ್ಲಿನಿಕ್ ಮಾದರಿ ಸ್ಕೀಂ ಘೋಷಣೆ?

    ಬಜೆಟ್‍ನಲ್ಲಿ ಬಿಗ್‍ಶಾಕ್:
    > ಅಬಕಾರಿ ಸುಂಕ ಹೆಚ್ಚಳ
    > ಪೆಟ್ರೋಲ್, ಡೀಸೆಲ್ ಮಾರಾಟ ತೆರಿಗೆ ಹೆಚ್ಚಳ
    > ಅಕ್ರಮ ಭೂಒತ್ತುವರಿದಾರರಿಗೆ ಭಾರೀ ದಂಡ ಸಾಧ್ಯತೆ
    > ಹೊಸ ಮರಳು ನೀತಿ ಜಾರಿ

    ನೀರಾವರಿ ಯೋಜನೆಗೆ ಬಂಪರ್
    > ನೀರಾವರಿ ಯೋಜನೆಗೆ ಬಂಪರ್ ಘೋಷಣೆ
    > ಮಹದಾಯಿ ಯೋಜನೆಗೆ ವಿಶೇಷ ಪ್ಯಾಕೇಜ್
    > ಹೊಸ ಜಲಾಶಯಗಳ ನಿರ್ಮಾಣದ ಬಗ್ಗೆ ಘೋಷಣೆ ಸಾಧ್ಯತೆ
    > ಏತ ನೀರಾವರಿ ಯೋಜನೆಗಳ ಘೋಷಣೆ
    > ಕೆರೆ ತುಂಬಿಸುವ ಯೋಜನೆಗಳ ಘೋಷಣೆ ಸಾಧ್ಯತೆ

  • ಮಾರ್ಕಂಡೇಯ ಜಲಾಶಯ ನಿರ್ಮಾಣಕ್ಕೆ ತಡೆ ಬೇಡ – ಸುಪ್ರೀಂಕೋರ್ಟ್‍ಗೆ ರಾಜ್ಯ ಸರ್ಕಾರ ಮನವಿ

    ಮಾರ್ಕಂಡೇಯ ಜಲಾಶಯ ನಿರ್ಮಾಣಕ್ಕೆ ತಡೆ ಬೇಡ – ಸುಪ್ರೀಂಕೋರ್ಟ್‍ಗೆ ರಾಜ್ಯ ಸರ್ಕಾರ ಮನವಿ

    ನವದೆಹಲಿ: ಕೋಲಾರ ಜಿಲ್ಲೆಯಲ್ಲಿ ನಿರ್ಮಿಸಲಾಗುತ್ತಿರುವ ಮಾರ್ಕಂಡೇಯ ಜಲಾಶಯ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‍ಗೆ ರಾಜ್ಯ ಸರ್ಕಾರ ಅಫಿಡವಿಟ್ ಸಲ್ಲಿಸಿದೆ. ಇದೊಂದು ಶುದ್ಧ ಕುಡಿಯುವ ನೀರಿನ ಯೋಜನೆಯಾಗಿರುವ ಹಿನ್ನೆಲೆ ಯೋಜನೆಗೆ ಅವಕಾಶ ನೀಡುವಂತೆ ಮನವಿ ಮಾಡಿಕೊಳ್ಳಲಾಗಿದೆ.

    ದಕ್ಷಿಣ ಪೆನ್ನಾರ್ ನದಿ ಕಣಿವೆ ವ್ಯಾಪ್ತಿಯ ಕೋಲಾರ ಜಿಲ್ಲೆಯ ಯರಗೋಳ ಗ್ರಾಮದ ಬಳಿ ಮಾರ್ಕಂಡೇಯ ನದಿಗೆ ಅಡ್ಡಲಾಗಿ ರಾಜ್ಯ ಸರ್ಕಾರ ಜಲಾಶಯ ನಿರ್ಮಾಣ ಮಾಡುತ್ತಿದೆ. ಇದರಿಂದ ಪೆನ್ನಾರ್ ನದಿ ನೈಸರ್ಗಿಕ ನೀರಿನ ಹರಿವು ತಡೆಯಲಾಗುತ್ತಿದೆ ಎಂದು ಆರೋಪಿಸಿ ಸುಪ್ರೀಂನಲ್ಲಿ ತಮಿಳುನಾಡು ಅರ್ಜಿ ಸಲ್ಲಿಸಿತ್ತು. ಅರ್ಜಿ ವಿಚಾರಣೆ ನಡೆಸಿದ್ದ ಪೀಠ ಯೋಜನೆಯ ಸಂಬಂಧ ಅಫಿಡವಿಟ್ ಸಲ್ಲಿಸಲು ಸೂಚನೆ ನೀಡಿತ್ತು.

    ಈ ಸಂಬಂಧ ಅಫಿಡವಿಟ್ ಸಲ್ಲಿಸಿರುವ ರಾಜ್ಯ ಸರ್ಕಾರ, ಯೋಜನೆಯಿಂದ ಪೆನ್ನಾರ್ ನದಿಯ ನೈಸನರ್ಗಿಕ ಹರಿವಿಗೆ ತೊಂದರೆಯಾಗುವುದಿಲ್ಲ, ಮಾರ್ಕಂಡೇಯ ಜಲಾಶಯ ಶುದ್ಧ ಕುಡಿಯುವ ನೀರಿನ ಯೋಜನೆ ಇದನ್ನು ಕೃಷಿಗೆ ಬಳಕೆ ಮಾಡಿಕೊಳ್ಳುತ್ತಿಲ್ಲ. ಕೋಲಾರ, ಬಂಗಾರಪೇಟೆ, ಮಾಲೂರು ಸೇರಿ 45 ಹಳ್ಳಿಗಳ ಕುಡಿಯುವ ನೀರು ಒದಗಿಸುವ ಯೋಜನೆ ಇದಾಗಿದ್ದು, ಮೆಗ್ನೀಷಿಯಂ ಸೇರಿ ಇತರೆ ಖನಿಜಾಂಶಗಳಿಂದ ಅಂತರ್ಜಲ ಮಲೀನವಾಗಿರುವ ಪ್ರದೇಶಕ್ಕೆ ಕುಡಿಯುವ ನೀರು ನೀಡಲು ಉದ್ದೇಶಿಸಿದೆ ಎಂದು ಸ್ಪಷ್ಟನೆ ನೀಡಿದೆ.

    ಮಾರ್ಕೇಂಡೇಯ ಜಲಾಶಯ ಯೋಜನೆ 240 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗ್ತಿದೆ ಈಗಾಗಲೇ 210 ಕೋಟಿ ಖರ್ಚು ಮಾಡಿದ್ದು ಶೇ.85 ಕಾಮಗಾರಿ ಮುಗಿದಿದೆ ಈ ಹಂತದಲ್ಲಿ ಯೋಜನೆಗೆ ತಡೆ ನೀಡಿದ್ರೆ ಹಣ ಎಲ್ಲ ವ್ಯರ್ಥವಾಗಲಿದೆ. ಪೆನ್ನಾರ್ ನದಿಗೆ ತೊಂದರೆ ಆಗುವುದಿಲ್ಲ ಎಂಬುದು ಸ್ಪಷ್ಟವಾಗಿದ್ದು ತಮಿಳುನಾಡು ಸಲ್ಲಿಸಿರುವ ಅರ್ಜಿಯಲ್ಲಿ ಯಾವುದೇ ಹುರುಳಿಲ್ಲ. ಹೀಗಾಗಿ ಯೋಜನೆಗೆ ತಡೆ ಕೋರಿ ಸಲ್ಲಿಸಿರುವ ಅರ್ಜಿ ತಿರಸ್ಕರಿಸಬೇಕು ಎಂದು ಅಫಿಡವಿಟ್‍ನಲ್ಲಿ ಮನವಿ ಮಾಡಿಕೊಳ್ಳಲಾಗಿದೆ.

  • ಟಿಕ್‍ಟಾಕ್ ವಿಡಿಯೋಗಾಗಿ ವಿವಿ ಸಾಗರ ಜಲಾಶಯದಲ್ಲಿ ಯುವಕನಿಂದ ದುಸ್ಸಾಹಸ

    ಟಿಕ್‍ಟಾಕ್ ವಿಡಿಯೋಗಾಗಿ ವಿವಿ ಸಾಗರ ಜಲಾಶಯದಲ್ಲಿ ಯುವಕನಿಂದ ದುಸ್ಸಾಹಸ

    ಚಿತ್ರದುರ್ಗ: ಟಿಕ್‍ಟಾಕ್ ವಿಡಿಯೋ ಮಾಡಲು ಯುವಕನೊಬ್ಬ ವಿ.ವಿ ಸಾಗರ ಡ್ಯಾಂ ಮೇಲಿನಿಂದ ಜಿಗಿದು ನೀರಲ್ಲಿ ಈಜಾಡಿದ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನಲ್ಲಿ ನಡೆದಿದೆ.

    ಮೈಸೂರು ಅರಸರ ಕಾಲದಲ್ಲಿ ನಿರ್ಮಾಣವಾದ ವಿ.ವಿ ಪುರ ಗ್ರಾಮದ ಬಳಿ ಇರುವ ವಾಣಿ ವಿಲಾಸ ಸಾಗರ ಜಲಾಶಯ 132 ಅಡಿ ಎತ್ತರವಿದೆ. ಹೊಸ ವರ್ಷದ ದಿನವಾದ ಬುಧವಾರ ಅತಿ ಹೆಚ್ಚು ಪ್ರವಾಸಿಗರು ವಿವಿ ಸಾಗರ ಡ್ಯಾಂಗೆ ಆಗಮಿಸಿದ್ದರು.

    ಇಂದು ಬೆಳಗ್ಗೆ ವಿವಿ ಸಾಗರಕ್ಕೆ ಆಗಮಿಸಿದ ಯುವಕನೊಬ್ಬ ಜಲಾಶಯದ ಕಟ್ಟೆ ಮೇಲಿಂದ ಹಾರಿದ್ದಾನೆ. ಈ ದುಸ್ಸಾಹಸ ಕಂಡು ನೆರೆದಿದ್ದ ಪ್ರವಾಸಿಗರು ಬೆರಗಾಗಿದ್ದಾರೆ. ಈ ಯುವಕನ ದುಸ್ಸಾಹಸದಿಂದಾಗಿ ಬಾರಿ ಆತಂಕ ಸೃಷ್ಟಿಯಾಗಿದ್ದು, ಕೆಲಕಾಲ ಪ್ರವಾಸಿಗರ ವೀಕ್ಷಣೆಗೆ ಬ್ರೇಕ್ ಹಾಕಲಾಗಿತ್ತು.

    ಅದೃಷ್ಟವಶಾತ್ ಈಜಿ ದಡ ಸೇರಿರುವ ಯುವಕ ಪ್ರಾಣಪಾಯದಿಂದ ಪಾರಾಗಿದ್ದಾನೆ. ಸದ್ಯ ಈ ಯುವಕನ ದುಸ್ಸಾಹಸದ ವಿಡಿಯೋ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗಿದೆ. ಆದರೆ ಈ ವಿಡಿಯೋದಲ್ಲಿರುವ ಯುವಕ ಯಾರು ಎಂಬುದು ತಿಳಿದು ಬಂದಿಲ್ಲ.