Tag: ಜಲಾಶಯ

  • ಮಹಾರಾಷ್ಟ್ರ ಧನ್ನೆಗಾಂವ್ ಜಲಾಶಯದಿಂದ ನೀರು ಬಿಡುಗಡೆ ಮಾಂಜ್ರಾ ನದಿ ದಡದಲ್ಲಿ ಪ್ರವಾಹ ಭೀತಿ

    ಮಹಾರಾಷ್ಟ್ರ ಧನ್ನೆಗಾಂವ್ ಜಲಾಶಯದಿಂದ ನೀರು ಬಿಡುಗಡೆ ಮಾಂಜ್ರಾ ನದಿ ದಡದಲ್ಲಿ ಪ್ರವಾಹ ಭೀತಿ

    ಬೀದರ್: ಮಹಾರಾಷ್ಟ್ರ ಹಾಗೂ ಜಿಲ್ಲೆಯಲ್ಲಿ ಸತತ ಮಳೆ ಹಿನ್ನೆಲೆಯಲ್ಲಿ ಮಾಂಜ್ರಾ ನದಿ ದಡದಲ್ಲಿ ಪ್ರವಾಹ ಭೀತಿ ಎದುರಾಗಿದೆ. ಮಹಾರಾಷ್ಟ್ರದ ಧನ್ನೆಗಾಂವ್ ಜಲಾಶಯದಿಂದ ನಾಲ್ಕು ಗೇಟ್ ಮೂಲಕ ಬಾರಿ ಪ್ರಮಾಣದ ನೀರು ಮಾಂಜ್ರಾನದಿಗೆ ನೀರು ಬಿಡಲಾಗುತ್ತಿದೆ.

    ಧನ್ನೆಗಾಂವ್ ಜಲಾಶಯದ ಜೊತೆಗೆ ಕಾರಂಜಾ ಜಲಾಶಯದಿಂದಲ್ಲೂ 5,050 ಕ್ಯೂಸೆಕ್ ನೀರು ಬಿಡುಗಡೆಯಾದ ಪರಿಣಾಮ ಮಾಂಜ್ರಾನದಿ ದಡದಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ಭಾಲ್ಕಿ ತಾಲೂಕಿನ ಮಾಂಜ್ರಾನದಿ ದಡದಲ್ಲಿ ಸಾಯಿಗಾಂವ್, ಜೀರಗ್ಯಾಳ, ಕಾಸರ್ತೂಗಾಂವ್, ಲಖನ್ ಗಾಂವ್, ಸಂಗಮ್ ಸೇರಿದಂತೆ 20ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಆತಂಕ ಮನೆಮಾಡಿದ್ದು, ಎರಡು ಜಲಾಶಯದಿಂದ ಹೆಚ್ಚಿನ ನೀರು ಬಿಡುಗಡೆಯಾದ ಪರಿಣಾಮ ಸಾಯಿಗಾಂವ್ ಗ್ರಾಮದ ಸೇತುವೆ ಮೇಲಿಂದ ನೀರು ಹರಿಯುತ್ತಿದ್ದು ಮಾಂಜ್ರಾನದಿ ದಡದಲ್ಲಿರುವ ಜಮೀನುಗಳಿಗೆ ನೀರು ನುಗ್ಗಿ ನೂರಾರು ಎಕರೆಯಲ್ಲಿ ಬೆಳೆದಿದ್ದ ಸೋಯಾ, ಉದ್ದು, ಹೆಸರು, ತೊಗರಿ ಬೆಳೆಗಳು ಹಾನಿಯಾಗಿದೆ. ಇದನ್ನೂ ಓದಿ: ನಾಳೆಯ ಭಾರತ್ ಬಂದ್‍ಗೆ ಸ್ತಬ್ದವಾಗುತ್ತಾ ಕರುನಾಡು? – ಎಂದಿನಂತೆ ಇರಲಿದೆ KSRTC ಸೇವೆ

    ಜಲಾಶಯದಿಂದ ಹೆಚ್ಚಿನ ಪ್ರಮಾಣದಿಂದ ಮಾಂಜ್ರಾನದಿಗೆ ನೀರು ಹರಿದು ಬರುತ್ತಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕೂಡಾ ಸತತವಾಗಿ ಮಳೆಯಾಗುತ್ತಿದೆ. ಹೀಗಾಗಿ ನಾವು ಬೆಳೆದ ವಿವಿಧ ಬೆಳೆಗಳು ಹಾನಿಯಾಗಿದೆ. ನಮ್ಮ ಸಮಸ್ಯೆ ಬಗ್ಗೆ ಹೇಳಿಕೊಳ್ಳಲು ಅಧಿಕಾರಿಗಳು, ಜನಪ್ರತಿನಿಧಿಗಳು ಯಾರು ಸ್ಥಳಕ್ಕೆ ಭೇಟಿ ನೀಡುವ ಕಲಸ ಮಾಡುತ್ತಿಲ್ಲ, ಆದಷ್ಟು ಬೇಗ ಭೇಟಿ ನೀಡಿ ಪರಿಹಾರ ನೀಡುವ ಕೆಲಸ ಮಾಡಬೇಕು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಭಾರತ್ ಬಂದ್ ದಿನ ಕರ್ನಾಟಕ ಬಂದ್‍ಗೆ ಕರೆ ಕೊಟ್ಟ ರೈತರು- ಯಾರ ಬೆಂಬಲವಿದೆ, ಯಾರದ್ದು ಇಲ್ಲ..?

  • ಪಬ್ಲಿಕ್ ಟಿವಿ ಇಂಪ್ಯಾಕ್ಟ್- ಕೈಗಾ ಅಣುಸ್ಥಾವರ ಪ್ರದೇಶಕ್ಕೆ ಕೇಂದ್ರ ಭೂ ಕುಸಿತ ಅಧ್ಯಯನ ತಂಡ

    ಪಬ್ಲಿಕ್ ಟಿವಿ ಇಂಪ್ಯಾಕ್ಟ್- ಕೈಗಾ ಅಣುಸ್ಥಾವರ ಪ್ರದೇಶಕ್ಕೆ ಕೇಂದ್ರ ಭೂ ಕುಸಿತ ಅಧ್ಯಯನ ತಂಡ

    ಕಾರವಾರ: ಕಳೆದ ಜುಲೈ 26ರಲ್ಲಿ ಸುರಿದ ಮಳೆ ಭಾರೀ ಅನಾಹುತವನ್ನುಂಟು ಮಾಡಿತ್ತು. ಪಬ್ಲಿಕ್ ಟಿವಿ ವರದಿಯಿಂದ ಎಚ್ಚೆತ್ತುಕೊಂಡ ಕೇಂದ್ರ ಭೂಕುಸಿತ ಅಧ್ಯಯನ ತಂಡ ಕೈಗಾ ಅಣುಸ್ಥಾವರ ಭಾಗದಲ್ಲಿ ಸಮೀಕ್ಷೆಗೆ ಮುಂದಾಗಿದ್ದಾರೆ.

     ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಜುಲೈ 26ರಲ್ಲಿ ಸುರಿದ ಮಳೆ ಭಾರೀ ಅನಾಹುತವನ್ನು ತಂದೊಡ್ಡಿತು. ಯಲ್ಲಾಪುರ, ಕಾರವಾರ, ಅಂಕೋಲ ಭಾಗದಲ್ಲಿ ಜಲಪ್ರಳಯವೇ ಸಂಭವಿಸಿ ಹಲವು ಭಾಗದಲ್ಲಿ ಭೂ ಕುಸಿತ ಉಂಟಾಯಿತು. ಯಲ್ಲಾಪುರ ಭಾಗದ ಕಳಚೆ, ಅರೆಬೈಲ್ ಘಟ್ಟ ಪ್ರದೇಶ, ಕಾರವಾರ ಭಾಗದ ಅಣಶಿ ಘಟ್ಟದಲ್ಲಿ ಭೂ ಕುಸಿತವಾಗಿ ಹೆದ್ದಾರಿ ಬಂದ್ ಆಗಿತ್ತು. ಕಳಚೆಯಲ್ಲಿ 25 ಕ್ಕೂ ಹೆಚ್ಚು ಮನೆಗಳು 70 ಎಕರೆ ಅಡಕೆ ತೋಟ, ತೆಂಗಿನ ತೋಟ ಎಲ್ಲವೂ ಭೂ ಕುಸಿತದಿಂದ ನಾಶವಾಗಿದ್ದವು. ಆದರೆ ಇದೀಗ ಯಲ್ಲಾಪುರ, ಕಾರವಾರ ಘಟ್ಟ ಪ್ರದೇಶದ ಅರಣ್ಯದಲ್ಲಿ ಮತ್ತೆ ಭೂಮಿ ಕುಸಿಯಲು ಪ್ರಾರಂಭಿಸಿರುವ ಕುರಿತು ಪಬ್ಲಿಕ್ ಟಿವಿ ವಿಸ್ತೃತ ವರದಿ ಮಾಡಿತ್ತು. ಇದನ್ನೂ ಓದಿ: ದೊಣ್ಣೆಯಿಂದ ಹೊಡೆದು ಅಪ್ಪನನ್ನೇ ಕೊಂದ ಮಗ!

    ಕಳೆದ ತಿಂಗಳು ಸುರಿದ ಮಳೆ ಕೊಡಸಳ್ಳಿ ಅಣೆಕಟ್ಟಿನ ಭಾಗದಿಂದ ಕದ್ರಾ ಅಣೆಕಟ್ಟು ಭಾಗದ ಪ್ರದೇಶದವರೆಗೆ ಹಲವು ಭಾಗದಲ್ಲಿ ಗುಡ್ಡ ಕುಸಿದಿದ್ದವು. 2019ರಲ್ಲಿ ಕೊಡಸಳ್ಳಿ ಆಣೆಕಟ್ಟಿನ ಮೇಲ್ಭಾಗದಲ್ಲಿ ಗುಡ್ಡ ಕುಸಿತವಾಗಿತ್ತು. ಆದರೆ ಈ ಬಾರಿ ಕೆಳಭಾಗದಲ್ಲಿ ಗುಡ್ಡ ಕುಸಿತ ಕಂಡಿತ್ತು. ಇದಲ್ಲದೇ ಕೈಗಾ ಅಣು ಸ್ಥಾವರದ ಸುತ್ತಮುತ್ತಲ ಪ್ರದೇಶದ ಗುಡ್ಡವು ಸಹ ಕುಸಿತ ಕಂಡಿದೆ. ಇದಲ್ಲದೇ ನಿರಂತರ ಈ ಭಾಗದಲ್ಲಿ ಮತ್ತೆ ಮಳೆ ಬೀಳುತಿದ್ದು, ಅಲ್ಲಲ್ಲಿ ಗುಡ್ಡಗಳಲ್ಲಿ ಕುಸಿತ ಕಂಡಿದೆ. ಇದರಿಂದಾಗಿ ಕೊಡಸಳ್ಳಿ ಜಲಾಶಯ ಹಾಗೂ ಕೈಗಾ ಅಣುಸ್ಥಾವರಕ್ಕೆ ಆತಂಕ ಎದುರಾಗಿದೆ ಎಂಬ ಕುರಿತು ಪಬ್ಲಿಕ್ ಟಿವಿ ಸಾಕ್ಷಿ ಸಮೇತ ಸುದ್ದಿ ಪ್ರಕಟಮಾಡಿತ್ತು. ಇದರ ಬೆನ್ನಲ್ಲೆ ಕೇಂದ್ರದಿಂದ ನಾಲ್ಕು ಜನರ ತಂಡ ಕೈಗಾ ಮತ್ತು ಕದ್ರಾ ಭಾಗದ ಸುತ್ತಮುತ್ತ ಭೂ ಕುಸಿತವಾಗಿರುವ ಪ್ರದೇಶಕ್ಕೆ ಅಧ್ಯಯನಕ್ಕೆ ತೆರಳುತ್ತಿದೆ.

    ಕಾರವಾರದ ಘಟ್ಟ ಪ್ರದೇಶ, ಯಲ್ಲಾಪುರ ಘಟ್ಟ ಪ್ರದೇಶದ ಹಲವು ಕಡೆಯಲ್ಲಿ ಹಿಂದೆ ಬಿರುಕು ಬಿಟ್ಟಿದ್ದ ಗುಡ್ಡಗಳು ಇದೀಗ ಕುಸಿಯುತ್ತಿದೆ. ಯಲ್ಲಾಪುರದ ಹೆದ್ದಾರಿ ಭಾಗದಲ್ಲಿ ಪ್ರಯಾಣಿಸಿದರೆ ಹಲವು ಭಾಗದಲ್ಲಿ ಗುಡ್ಡ ಕುಸಿದಿರುವುದನ್ನು ಗಮನಿಸಬಹುದಾಗಿದೆ. ಕೈಗಾ ಯಲ್ಲಾಪುರಕ್ಕೆ ತೆರಳುವ ಗುಡ್ಡದ ರಸ್ತೆಯಲ್ಲಿ ನಿಂತು ನೋಡಿದರೆ ಸುತ್ತಮುತ್ತಲಿನ ಗುಡ್ಡದಲ್ಲಿ ಭೂಮಿ ಕುಸಿಯುತ್ತಿರುವುದನ್ನು ಗಮನಿಸಬಹುದಾಗಿದೆ.

     

    ಈ ಭಾಗಗಳಲ್ಲಿ ಜನ ವಸತಿ ಇಲ್ಲದ ಕಾರಣ ದೊಡ್ಡ ಹಾನಿಯಾಗುತ್ತಿದ್ದರೂ ಜನರಿಗೆ ತೊಂದರೆ ಆಗಿಲ್ಲ. ಆದರೆ ಇಲ್ಲಿರುವ ಜಲಾಶಯ ಹಾಗೂ ಕೈಗಾ ಅಣು ಸ್ಥಾವರಕ್ಕೆ ಇದೀಗ ಆತಂಕ ಎದುರಾಗಿದೆ. ಗುಡ್ಡಭಾಗದಲ್ಲಿ ನೀರಿನ ಪಸೆ ಹೆಚ್ಚಾಗಿದೆ. ಮಣ್ಣುಗಳು ಸಡಿಲವಾಗಿದ್ದು, ಅಲ್ಲಲ್ಲಿ ಭೂಮಿ ಬಾಯಿ ಬಿಟ್ಟಿದೆ. ಕೆಲವು ಕಡೆ ಮಳೆಯಿಂದ ಗುಡ್ಡದ ಮರಗಳ ಸಮೇತ ಮಣ್ಣು ಕುಸಿದು ಮರಗಳು ಬುಡಸಮೇತ ನೆಲಕ್ಕುರುಳಿವೆ.

    ಕಳಚೆ ಭಾಗದಲ್ಲಿ ಸಹ ಮತ್ತೆ ಗುಡ್ಡ ಕುಸಿತ ಕಾಣುವ ಆತಂಕ ಎದುರಾಗಿದೆ. ಕಳಚೆಯ ಸಮೀಪವೇ ಕೊಡಸಳ್ಳಿ ಜಲಾಶಯ ಸಹ ಇದ್ದು, ಈ ಜಲಾಶಯದ ಸುತ್ತಲಿನ ಗುಡ್ಡದ ಹಲವು ಭಾಗದಲ್ಲಿ ಮಣ್ಣು ಸಡಿಲವಾಗಿ ಕುಸಿಯುತ್ತಿದೆ. ಈ ಭಾಗದಲ್ಲಿ ಬಹುತೇಕ ಅರಣ್ಯವಾಗಿರುವುದರಿಂದ ಇದರ ತೀವ್ರತೆಯನ್ನು ಅರಿಯದಂತಾಗಿದೆ. ಇನ್ನು ಕಳಚೆ ಗ್ರಾಮದ ಬಹುತೇಕ ಭಾಗದಲ್ಲಿ ಭೂಮಿ ಬಿರುಕುಬಿಟ್ಟಿದ್ದರಿಂದ ಹಾಗೂ ಮಣ್ಣು ಸಡಿಲವಾಗಿರುವುದರಿಂದ ಮತ್ತೆ ಹೆಚ್ಚಿನ ಮಳೆಯಾದರೆ ದೊಡ್ಡ ಅನಾಹುತ ಕಟ್ಟಿಟ್ಟ ಬುತ್ತಿಯಂತಿದ್ದು ಇದೀಗ ಕೇಂದ್ರ ಅಧ್ಯಯನ ತಂಡ ಕೈಗಾ ಅಣುಸ್ಥಾವರದ ಭಾಗದಲ್ಲಿ ಇದರ ಸಮೀಕ್ಷೆಗೆ ಮುಂದಾಗಿದ್ದಾರೆ.

  • ಹಸಿರು ಬಣ್ಣಕ್ಕೆ ತಿರುಗಿದ ತುಂಗಭದ್ರಾ ಜಲಾಶಯದ ನೀರು- ಆತಂಕದಲ್ಲಿ ಜನ

    ಹಸಿರು ಬಣ್ಣಕ್ಕೆ ತಿರುಗಿದ ತುಂಗಭದ್ರಾ ಜಲಾಶಯದ ನೀರು- ಆತಂಕದಲ್ಲಿ ಜನ

    ವಿಜಯನಗರ: ಕಲ್ಯಾಣ ಕರ್ನಾಟಕದ ಜೀವನಾಡಿ ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಕಳೆದ ಮೂರು ವರ್ಷಗಳಿಂದ ಉತ್ತಮ ಮಳೆಯಾಗಿದ್ದು, ಈ ವರ್ಷವೂ ತುಂಗಭದ್ರಾ ಜಲಾಶಯ ಬಹುತೇಕ ಭರ್ತಿಯಾಗಿದೆ. ಜಲಾಶಯ ಭರ್ತಿಯಾದ ಕೇವಲ ಒಂದೇ ತಿಂಗಳಲ್ಲಿ ನೀರು ಹಸಿರು ಬಣ್ಣಕ್ಕೆ ತಿರುಗಿದ್ದು, ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.

    ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿರುವ ತುಂಗಭದ್ರಾ ಜಲಾಶಯದ ಗುಂಡಾ ಸಸ್ಯಧಾಮದ ಬಳಿ ನೀರು ಹಸಿರು ಬಣ್ಣಕ್ಕೆ ತಿರುಗಿದೆ. ಸದ್ಯ ಜಲಾಶಯದಲ್ಲಿ ಒಟ್ಟು ನೀರಿನ ಸಂಗ್ರಹ ಸಾಮಥ್ರ್ಯ 100.86 ಟಿಎಂಸಿಯಷ್ಟಿದ್ದು, ಸದ್ಯ 100.06 ಟಿಎಂಸಿಯಷ್ಟು ನೀರು ಸಂಗ್ರಹವಿದೆ. ಇದನ್ನೂ ಓದಿ: ಈ ಬಾರಿಯೂ ಗಣೇಶ ಹಬ್ಬವನ್ನು ಸರಳವಾಗಿ ಆಚರಿಸಬೇಕು: ಬಿಎಸ್‍ವೈ

    ನೀರಿನ ಸಂಗ್ರಹ ಕಡಿಮೆ ಇರುವಾಗ ಹಸಿರು ಬಣ್ಣಕ್ಕೆ ತಿರುಗುವುದು ಸಾಮಾನ್ಯ. ಆದರೆ ಈಗ ಜಲಾಶಯ ಸಂಪೂರ್ಣವಾಗಿ ಭರ್ತಿ ಇದ್ದರೂ ನೀರಿನ ಬಣ್ಣ ಬದಲಾವಣೆ ಆಗಿರುವುದು ಜನರಲ್ಲಿ ಆತಂಕ ಮೂಡಿದೆ. ನದಿ ನೀರಿಗೆ ಕಾರ್ಖಾನೆಗಳ ತ್ಯಾಜ್ಯ ನೇರವಾಗಿ ಸಂಗ್ರಹವಾಗುತ್ತಿರುವುದು ಡ್ಯಾಂ ನೀರು ಬಣ್ಣ ಬದಲಾವಣೆಗೆ ಪ್ರಮುಖ ಕಾರಣ ಎಂಬುದು ಪರಿಸರವಾದಿಗಳ ಅಭಿಪ್ರಾಯ. ಕೂಡಲೇ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

  • ಜಕ್ಕಲಮಡುಗು ಜಲಾಶಯ ಭರ್ತಿ – ಹತ್ತಾರು ಗ್ರಾಮಗಳ ಜನರ ಸಂಚಾರಕ್ಕೆ ಸಂಚಕಾರ

    ಜಕ್ಕಲಮಡುಗು ಜಲಾಶಯ ಭರ್ತಿ – ಹತ್ತಾರು ಗ್ರಾಮಗಳ ಜನರ ಸಂಚಾರಕ್ಕೆ ಸಂಚಕಾರ

    – ನೀಗಿತು ಚಿಕ್ಕಬಳ್ಳಾಪುರ-ದೊಡ್ಡಬಳ್ಳಾಪುರ ನಗರಗಳ ನೀರಿನ ದಾಹ

    ಚಿಕ್ಕಬಳ್ಳಾಪುರ: ಮೊನ್ನೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಗೆ ವಿಶ್ವವಿಖ್ಯಾತ ನಂದಿಬೆಟ್ಟ ಮಾರ್ಗದ ಬ್ರಹ್ಮಗಿರಿ ಬೆಟ್ಟದಲ್ಲಿ ಭೂಕುಸಿತ ಉಂಟಾಗಿ ನಂದಿಬೆಟ್ಟದ ರಸ್ತೆಯೇ ಕೊಚ್ಚಿ ಹೋಗಿತ್ತು. ಆದರೆ ಇದೇ ದಿನ ಈ ನಂದಿಬೆಟ್ಟದ ಸುತ್ತಮುತ್ತಲಿನ ಪಂಚಗಿರಿಗಳ ಸಾಲಲ್ಲಿ ಸುರಿದ ಭಾರೀ ಮಳೆಗೆ ಚಿಕ್ಕಬಳ್ಳಾಪುರ-ದೊಡ್ಡಬಳ್ಳಾಪುರ ನಗರಗಳ ಜನರ ಕುಡಿಯುವ ನೀರಿನ ದಾಹವನ್ನ ತೀರಿಸುವ ಜಕ್ಕಲಮಡುಗು ಜಲಾಶಯ ತುಂಬಿ ತುಳುಕಿದೆ. ಆದರೆ ಜಲಾಶಯದ ಹಿನ್ನೀರಿನಲ್ಲಿ ಸೇತುವೆಯೊಂದು ಮುಳುಗಿ ಹೋಗಿದ್ದು, ಇದರಿಂದ ಸ್ಥಳೀಯ ಹತ್ತಾರು ಗ್ರಾಮಗಳ ಜನರಿಗೆ ಸಂಚಾರಕ್ಕೆ ಸಂಕಷ್ಟವನ್ನೇ ತಂದೊಡ್ಡಿದೆ.

    ಏನು ಸಂಕಷ್ಟ..?: ಜಕ್ಕಲಮಡುಗು ತುಂಬಿ ತುಳುಕಿ ಕೋಡಿ ಹರಿದ ಹಿನ್ನೆಲೆಯಲ್ಲಿ ಜಲಾಶಯದ ಹಿನ್ನೀರಿನ ಸೇತುವೆ ಮೇಲೆ ಐದಾರು ಅಡಿ ನೀರು ನಿಂತಿದೆ. ಬೆಟ್ಟದ ಸಾಲುಗಳಿಂದ ಇದೇ ಸೇತುವೆ ಮೂಲಕ ಜಲಾಶಯಕ್ಕೆ ನೀರು ಹರಿದು ಬರ್ತಿದೆ. ಹೌದು ಮೊನ್ನೆ ರಾತ್ರಿ ಸುರಿದ ಒಂದೇ ಮಳೆಗೆ ಜಕ್ಕಲಮಡುಗು ಜಲಾಶಯ ತುಂಬಿ ತುಳುಕಿದ್ದು ಕೋಡಿ ಹರಿದಿದೆ. ಹೀಗಾಗಿ ಜಲಾಶಯದ ಹಿನ್ನೀರಿನಲ್ಲಿ ಚಿಕ್ಕಬಳ್ಳಾಪುರ-ದೊಡ್ಡಬಳ್ಳಾಪುರ ಮಾರ್ಗದ ಸಂಪರ್ಕ ಸೇತುವೆಯಾಗಿದ್ದ ಸೇತುವೆ ಮುಳುಗಿದೆ. ಆದರೆ ಇದೇ ಮುಳುಗಿದ ಸೇತುವೆ ಮೇಲೆ ಜನ ಈಗ ಹರಸಾಹಸ ಪಟ್ಟು ಸಂಚಾರ ಮಾಡ್ತಿದ್ದಾರೆ. ಸೇತುವೆ ಮೇಲೆ ಹರಿವ ನೀರಿನ ಜೊತೆಯೇ ವಾಹನಗಳ ಸಂಚಾರ ಜನರ ಓಡಾಟ ಆಗ್ತಿದೆ. ಹರಿವ ನೀರಿನಲ್ಲೇ ಕಾರು ಹಾಗೂ ಬೈಕ್ ಗಳು ರಭಸವಾಗಿ ಮುನ್ನುಗ್ತುತ್ತಿವೆ. ಸೇತುವೆ ಮೇಲೆ ನಿಂತ ನೀರನ್ನ ಬೇಧಿಸಿಕೊಂಡು ಹರಸಾಹಸ ಪಟ್ಟು ಕಾರು ಬೈಕ್ ಚಲಾಯಿಸ್ತಿದ್ದು. ಸೇತುವೆ ದಾಟಲು ಹೋಗಿ ಸೇತುವೆ ಮಧ್ಯ ಭಾಗದಲ್ಲಿ ಬೈಕ್ ಗಳು ಕೆಟ್ಟು ಹೋಗ್ತಿವೆ. ಬೈಕ್ ಒಂದು ಕೆಟ್ಟು ನಿಂತ ಪರಿಣಾಮ ಮಗು ಸಮೇತ ಸೇತುವೆಯ ಅರ್ಧದಲ್ಲೇ ಮಹಿಳೆ ಇಳಿದು ನೀರಿನಲ್ಲೇ ನಡೆದುಕೊಂಡು ಹೋಗಿ ಸೇತುವೆ ದಾಟಿದ್ದಾಳೆ.

    ಜಲಾಶಯ ತುಂಬಿ ತುಳುಕುತ್ತಿರುವ ಪರಿಣಾಮ, ಜಲಾಶಯದ ಹಿನ್ನೀರಿನಲ್ಲಿ ಸೇತುವೆ ಮುಳುಗಿದೆ. ಹೀಗಾಗಿ ಚಿಕ್ಕಬಳ್ಳಾಪುರದಿಂದ ದೊಡ್ಡಬಳ್ಳಾಪುರದ ಕಡೆಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯಲ್ಲಿ ಗುಂಗೀರ್ಲಹಳ್ಳಿ, ಜಕ್ಕಲಮಡುಗು ಸೇರಿದಂತೆ ಮುಂದೆ ಹತ್ತಾರು ಗ್ರಾಮಗಳಿದ್ದು ಈ ಸೇತುವೆಯೂ ಮೂಲಕವೇ ಹಾದು ಹೋಗಬೇಕಿದೆ. ಆದರೆ ಈಗ ಸೇತುವೆ ಮೇಲೆ ನೀರು ತುಂಬಿಕೊಂಡಿರುವ ಕಾರಣ ವಾಹನಸವಾರರು ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಜನ-ಜಾನುವಾರುಳು ಸಹ ಜಮೀನು, ಹೊಲ, ತೋಟಗಳಿಗೆ ಇದೇ ಸೇತುವೆಯನ್ನೇ ಅವಲಂಬಿಸಿದ್ದಾರೆ. ಇನ್ನೂ ಶಾಲೆ ಕಾಲೇಜುಗಳಿಗೆ ಚಿಕ್ಕಬಳ್ಳಾಪುರಕ್ಕೆ ಬರುವ ವಿದ್ಯಾರ್ಥಿಗಳು ಸಹ ಇದೇ ರಸ್ತೆಯನ್ನೇ ಆಶ್ರಯಿಸಿದ್ದು, ಸಾಕಷ್ಟು ಸಮಸ್ಯೆಗಳನ್ನ ಅನುಭವಿಸುವಂತಾಗಿದೆ. ಇದನ್ನೂ ಓದಿ: ಹಾರ್ದಿಕ್ ಪಾಂಡ್ಯ ಧರಿಸಿದ ವಾಚ್ ಬೆಲೆ ಕೇಳಿ ದಂಗಾದ ಅಭಿಮಾನಿಗಳು

    ಮೇಲ್ಸೇತುವೆಗೆ ಆಗ್ರಹ: ಈ ಹಿಂದೆ ಇದ್ದ ಹಳೆಯ ಜಲಾಶಯದ ಎತ್ತರವನ್ನ ಕಳೆದ 10 ವರ್ಷಗಳ ಹಿಂದೆ ಹೆಚ್ಚಳ ಮಾಡಿ ಜಲಾಶಯದಲ್ಲಿ ಹೆಚ್ಚಿನ ನೀರು ಸಂಗ್ರಹವಾಗುವಂತೆ ಮಾಡಲಾಗಿದೆ. ಜಲಾಶಯದ ಎತ್ತರವನ್ನ ಹೆಚ್ಚಳ ಮಾಡಿದ ನಂತರ ಮೂರ್ನಾಲ್ಕು ವರ್ಷಗಳ ಹಿಂದೆ ಸಹ ಜಕ್ಕಲಮಡುಗು ಜಲಾಶಯ ಭರ್ತಿಯಾದಾಗ ಇದೇ ಸಮಸ್ಯೆ ಆಗಿತ್ತು. ಮತ್ತೆ ಈಗ ಜಲಾಶಯ ತುಂಬಿದಾಗಲೂ ಮತ್ತೆ ಅದೇ ಸಮಸ್ಯೆ. ಹೀಗಾಗಿ ಈ ಸಮಸ್ಯೆಗೆ ಮೇಲ್ಸುತುವೆ ನಿರ್ಮಾಣ ಮಾಡಿ ಶಾಶ್ವತ ಪರಿಹಾರ ಮಾಡಿಕೊಡಿ ಅನ್ನೋದು ಇಲ್ಲಿನ ಹತ್ತಾರು ಗ್ರಾಮಗಳ ಜನರ ಆಗ್ರಹವಾಗಿದೆ. ಹೀಗಾಗಿ ಜಿಲ್ಲಾಢಳಿತ ಜನಪ್ರತಿನಿಧಿಗಳು ಇತ್ತ ಗಮನಹರಿಸಬೇಕಿದೆ.

    ಚಿಕ್ಕಬಳ್ಳಾಪುರ-ದೊಡ್ಡಬಳ್ಳಾಪುರ ನಗರಗಳಿಗೆ ನೀರಿನ ದಾಹ ಮಾಯ:
    ಈ ಜಲಾಶಯದಿಂದಲೇ ಚಿಕ್ಕಬಳ್ಳಾಪುರ ಹಾಗೂ ದೊಡ್ಡಬಳ್ಳಾಪುರ ನಗರಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತದೆ. ಜಲಾಶಯ ಭರ್ತಿಯಾದ ಹಿನ್ನಲೆ ಇನ್ನೂ ಒಂದು ಒಂದೂವರೆ ವರ್ಷ ಈ ಎರಡು ನಗರಗಳ ಜನರಿಗೆ ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಇರಲ್ಲ. ಚಿಕ್ಕಬಳ್ಳಾಪುರ ದೊಡ್ಡಬಳ್ಳಾಪುರ ನಗರಗಳ ಜನರ ಪಾಲಿಗೆ ಇದು ಕಾವೇರಿ ಅಂತಲೇ ಫೇಮಸ್. ಇದನ್ನೂ ಓದಿ: ಅಫ್ಘಾನ್ ಮುಸ್ಲಿಮರಿಗೆ ಭಾರತದಲ್ಲಿ ಆಶ್ರಯ ಕಲ್ಪಿಸಬಾರದು: ಪ್ರವೀಣ್ ತೊಗಾಡಿಯಾ

  • ಮಳೆರಾಯನ ಅಬ್ಬರ- ಕೃಷ್ಣಾ ನದಿ ನೀರಿನಲ್ಲಿ ಏರಿಕೆ, ಸೇತುವೆ ಜಲಾವೃತ

    ಮಳೆರಾಯನ ಅಬ್ಬರ- ಕೃಷ್ಣಾ ನದಿ ನೀರಿನಲ್ಲಿ ಏರಿಕೆ, ಸೇತುವೆ ಜಲಾವೃತ

    ಚಿಕ್ಕೋಡಿ: ಮಹಾರಾಷ್ಟ್ರದ ಘಟ್ಟ ಪ್ರದೇಶಗಳಲ್ಲಿ ಮತ್ತೆ ಮಳೆರಾಯನ ಅಬ್ಬರ ಆರಂಭವಾಗಿದೆ. ಕೃಷ್ಣಾ ನದಿಯಲ್ಲಿ ನೀರಿನ ಪ್ರಮಾಣದಲ್ಲಿ ಏರಿಕೆಯಾಗಿ ಸೇತುವೆಗಳು ಜಲಾವೃತವಾಗಿದೆ.

    ಕಳೆದ ಎರಡು ದಿನಗಳಿಂದ ಮಹಾರಾಷ್ಟ್ರದ ಕೊಂಕಣ ಘಟ್ಟ ಪ್ರದೇಶಗಳಲ್ಲಿ ಭಾರಿ ಮಳೆಯಾಗುತ್ತಿದೆ. ಈ ಹಿನ್ನೆಲೆ ಕೃಷ್ಣಾ ನದಿಯಲ್ಲಿ ಒಳಹರಿವಿನ ಪ್ರಮಾಣದಲ್ಲಿ ಹೆಚ್ಚಳವಾದ ಪರಿಣಾಮ ಚಿಕ್ಕೋಡಿ ತಾಲೂಕಿನ ಕಲ್ಲೋಳ ಗ್ರಾಮದ ಬಳಿ ಕೃಷ್ಣಾ ನದಿಯ ಕಲ್ಲೋಳ – ಯಡೂರ ಸಂಪರ್ಕ ಸೇತುವೆ ಜಲಾವೃತಗೊಂಡಿದೆ. ಸದ್ಯ 56 ಸಾವಿರ ಕ್ಯೂಸೇಕ್ ನಷ್ಟು ನೀರು ಕೃಷ್ಣಾ ನದಿಗೆ ಹರಿದು ಬರುತ್ತಿದೆ ನದಿಯಲ್ಲಿ ದಿಢೀರ್ ನೀರಿನ ಪ್ರಮಾಣ ಹೆಚ್ಚಳ ಹಿನ್ನೆಲೆ ನದಿ ತೀರದ ಜನರಲ್ಲಿ ಆತಂಕ ಉಂಟಾಗಿದ್ದು, ಇವತ್ತು ಮಹಾರಾಷ್ಟ್ರದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ ಹೈ ಅಲರ್ಟ ಜಾರಿ ಮಾಡಲಾಗಿದೆ. ಇದನ್ನೂ ಓದಿ: ದಾಸನಿಂದ ಹಲ್ಲೆ ಆರೋಪ – ಸಂದೇಶ್ ಪ್ರಿನ್ಸ್ ಹೋಟೆಲ್ ಸಿಸಿಟಿವಿ ದೃಶ್ಯ ಪರಿಶೀಲನೆ

    ಮಹಾರಾಷ್ಟ್ರದ ರಾಜಾಪೂರ ಬ್ಯಾರೆಜ್‍ನಿಂದ 44,750 ಕ್ಯೂಸೆಕ್ ನೀರು, ದೂಧಗಂಗಾ ನದಿಯಿಂದ 11,649ಕ್ಯೂಸೆಕ್ ನೀರು ಹೀಗೆ ಒಟ್ಟು 56,000 ಕ್ಯೂಸೆಕ್ ಅಧಿಕ ನೀರು ರಾಜ್ಯದ ಕೃಷ್ಣಾಗೆ ಹರಿದು ಬರುತ್ತಿದೆ. ಮಹಾರಾಷ್ಟ್ರದ ಕೊಯ್ನಾ – 23 ಮಿ.ಮೀ, ನವಜಾ – 70 ಮಿ.ಮೀ, ಮಹಾಬಲೇಶ್ವರ – 57 ಮಿ.ಮೀ, ವಾರಣಾ – 10 ಮಿ.ಮೀ, ಕಾಳಮ್ಮವಾಡಿ – 15 ಮಿ.ಮೀ, ರಾಧಾನಗರಿ – 42 ಮಿ.ಮೀ, ಪಾಟಗಾಂವ – 104 ಮಿ.ಮೀ ಮಳೆಯಾಗಿದ್ದು ವರದಿಯಾಗಿದೆ. ಕಳೆದ ಎರಡು ದಿನಗಳಿಗೆ ಹೋಲಿಸಿದರೆ ಮಹಾರಾಷ್ಟ್ರದಲ್ಲಿ ಮತ್ತೆ ಸ್ವಲ್ಪ ಪ್ರಮಾಣದಲ್ಲಿ ಮಳೆಯಾಗಿರುವ ವರದಿಯಾಗಿದೆ. ಹಿಪ್ಪರಗಿ ಬ್ಯಾರೆಜ್‍ನಿಂದ 44,750 ಹಾಗೂ ಆಲಮಟ್ಟಿ ಜಲಾಶಯದಿಂದ 43,960 ಕ್ಯೂಸೆಕ್ ನೀರು ಹೊರಗಡೆ ಬಿಡಲಾಗುತ್ತಿದೆ. ಇದನ್ನೂ ಓದಿ: ಇಂದ್ರಜಿತ್ ಜೊತೆಗಿನ ಫೋಟೋ ವೈರಲ್ – ನನ್ನ ಹೆಸರು ತಳುಕು ಹಾಕೋ ಕೆಲಸ ಮಾಡ್ಬೇಡಿ ಅಂದ್ರು ಹೆಚ್‍ಡಿಕೆ

  • ಮಂಚನಬೆಲೆ ಜಲಾಶಯದ ಹತ್ತಿರ ಜಂಗಲ್ ಲಾಡ್ಜ್ ರೆಸಾರ್ಟ್: ಸಿ.ಪಿ.ಯೋಗೇಶ್ವರ್

    ಮಂಚನಬೆಲೆ ಜಲಾಶಯದ ಹತ್ತಿರ ಜಂಗಲ್ ಲಾಡ್ಜ್ ರೆಸಾರ್ಟ್: ಸಿ.ಪಿ.ಯೋಗೇಶ್ವರ್

    ಬೆಂಗಳೂರು: ಮಂಚನಬೆಲೆ ಜಲಾಶಯದ ಸುತ್ತಮುತ್ತ ಸರ್ಕಾರಕ್ಕೆ ಸೇರಿರುವ 200 ಎಕರೆಗೂ ಹೆಚ್ಚಿನ ಸ್ಥಳವಿದ್ದು, ಪ್ರವಾಸಿಗರನ್ನು ಆಕರ್ಷಿಸಲು ಜಂಗಲ್ ಲಾಡ್ಜ್ ರೆಸಾರ್ಟ್ ಪ್ರಾರಂಭಿಸಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ಅವರು ತಿಳಿಸಿದರು.

    ಇಂದು ಜಿಲ್ಲೆಯಲ್ಲಿ ವಿವಿಧ ಪ್ರವಾಸಿ ತಾಣಗಳನ್ನು ಅಭಿವೃದ್ಧಿ ಪಡಿಸುವ ಸಂಬಂಧ ಅಧಿಕಾರಿಗಳ ತಂಡದೊಂದಿಗೆ ಸ್ಥಳ ಪರಿಶೀಲನೆ ನಡೆಸಿ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿ.ಪಿ ಯೋಗೇಶ್ವರ್ ಅವರು, ರಾಮನಗರ ಜಿಲ್ಲೆಗೆ ನಿಸರ್ಗದ ಕೊಡುಗೆಯಿದ್ದು, ಪ್ರವಾಸಿ ತಾಣಗಳಲ್ಲಿ ಮೂಲಭೂತ ವ್ಯವಸ್ಥೆಗಳನ್ನು ಕಲ್ಪಿಸಿದರೆ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಬಹುದು ರಾಮನಗರ ಜಿಲ್ಲೆಗೆ ಪ್ರವಾಸಿ ಸರ್ಕೊಟ್ ಮಾಡಲು ಯೋಜನೆ ರೂಪಿಸಲಾಗುತ್ತಿದೆ ಎಂದರು.

    ಮೂಲಭೂತ ಸೌಕರ್ಯಗಳಾದ ವಾಹನ ನಿಲುಗಡೆ, ಶೌಚಾಲಯ, ತಂಗಲು ಕೊಠಡಿಗಳನ್ನು ಮೊದಲು ಯೋಜನೆ ರೂಪಿಸಲಾಗುವುದು. ಇದಕ್ಕೆ ಹೆಚ್ಚಿನ ಅನುದಾನದ ಅವಶ್ಯಕತೆ ಇಲ್ಲ. ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆ ಇದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಸಹಭಾಗಿತ್ವದಲ್ಲಿ ಕಾರ್ಯನಿರ್ವಹಿಸಲಾಗುವುದು ಎಂದರು. ಇದನ್ನೂ ಓದಿ: ತೆರಿಗೆ ಕಟ್ಟಲು ಹಣವಿಲ್ಲ ಎಂದ ನಟ ದಳಪತಿ ವಿಜಯ್‍ಗೆ ಕೋರ್ಟ್ ಛೀಮಾರಿ

    ಎಕೋ ಟೂರಿಸ್‍ಂ :
    ಜಿಲ್ಲೆಯಲ್ಲಿ ಅರಣ್ಯ ಪ್ರದೇಶಕ್ಕೆ ದಕ್ಕೆ ಉಂಟುಮಾಡದೇ ಸಾವನದುರ್ಗದಲ್ಲಿ ಮೌಂಟ್ ಕ್ಲಂಬಿಂಗ್, ರೋಪ್ ವೇ ಮಾಡಲು ಚಿಂತಿಸಲಾಗುತ್ತಿದೆ. ಸಾವನದುರ್ಗದಲ್ಲಿ ಬರುವ ಪ್ರವಾಸಿಗರಿಗೆ ಸುರಕ್ಷತೆ ನೀಡುವ ಬಗ್ಗೆ ಬರುವ ಪ್ರವಾಸಿಗರನ್ನು ಮೌಂಟ್ ಕ್ಲಂಬಿಂಗ್ ಮಾಡಲು ಮಾರ್ಗದರ್ಶಕರನ್ನು ನೀಡುವುದು ಸೇರಿದಂತೆ ಇನ್ನಿತರ ವ್ಯವಸ್ಥೆಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. ಮಂಚನಬಲೆ ನೀರನ್ನು ಕುಡಿಯುವ ನೀರಿಗೆ ಬಳಸಲಾಗುವುದು ಆದರಿಂದ ವಾಟರ್ ಸ್ಪೋಟ್ರ್ಸ್ ಮಾಡಲು ಪರಿಶೀಲಿಸಬೇಕಿದೆ. ಶ್ರೀ ರೇವಣಸಿದ್ದೇಶ್ವರ ಸ್ವಾಮಿ ಬೆಟ್ಟಕ್ಕೆ ರೋಪ್ ವೇ ಮಾಡುವಂತೆ ಸ್ಥಳೀಯರು ಮಾನವಿ ನೀಡಿದ್ದಾರೆ. ಈ ಬಗ್ಗೆ ಸಹ ಚಿಂತಿಸಲಾಗುವುದು ಎಂದರು.

    ಕಣ್ವ ಜಲಾಶಯದಲ್ಲಿ ಈಗಾಗಲೇ ಕಾಮಗಾರಿಗಳು ಪ್ರಗತಿಯಲ್ಲಿದೆ. ಬೆಂಗಳೂರು ಮತ್ತು ಮೈಸೂರು ನಗರಗಳಿಗೆ ಹತ್ತಿರವಿರುವ ಹಿನ್ನೆಲೆಯಲ್ಲಿ ವಾಟರ್ ಸ್ಪೋಟ್ರ್ಸ್ ಪ್ರಾರಂಭಿಸಿದರೆ ಹೆಚ್ಚಿನ ಜನರು ಬರಲಿದ್ದಾರೆ. ಜಿಲ್ಲೆಯಲ್ಲಿ ಪ್ರವಾಸಿಗರು ಭೇಟಿ ನೀಡಿದರೆ ಎರಡು ಮೂರು ದಿನ ತಂಗಿ ಪ್ರವಾಸಿ ಸ್ಥಳ ವೀಕ್ಷಿಸುವ ರೀತಿ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

    ಶಾಲಾ ಮಕ್ಕಳ ಪ್ರವಾಸ:
    ಶಾಲೆಯಲ್ಲಿ ಮಕ್ಕಳು ಐತಿಹಾಸಿಕ ಸ್ಥಳಗಳ ಬಗ್ಗೆ ಪುಸ್ತಕದಲ್ಲಿ ಮಾತ್ರ ಓದುತ್ತಾರೆ. ಅವುಗಳನ್ನು ಜೀವನ ಪರ್ಯಂತ ನೋಡುವುದೇ ಇಲ್ಲ. ಮಕ್ಕಳು ಪ್ರವಾಸ ಕೈಗೊಳ್ಳಲು ಮುಂದಿನ ದಿನಗಳಲ್ಲಿ ಪ್ರೋತ್ಸಾಹಿಸಲಾಗುವುದು. ಮುಖ್ಯ ಪ್ರವಾಸಿ ಸ್ಥಳಗಲ್ಲಿ ಹೆಚ್ಚಿನ ಮಕ್ಕಳು ತಂಗಲು ತಂಗುದಾಣ ನಿರ್ಮಿಸಲಾಗುವುದು. ಮಕ್ಕಳು ವಾಸ್ತವ್ಯ ಮಾಡಿ ಎರಡು ಮೂರು ದಿನ ಸುತ್ತಮುತ್ತಲಿನ ಪ್ರವಾಸಿ ಸ್ಥಳಗಳನ್ನು ವೀಕ್ಷಿಸಬಹುದು ಎಂದರು.

    ಕೆಂಪಾಪುರ, ಸಾವನದುರ್ಗ, ಮಂಚನಬೆಲೆ ಜಲಾಶಯ ಪರಿಶೀಲನೆ ವೇಳೆ ಮಾಗಡಿ ಶಾಸಕ ಮಂಜುನಾಥ್, ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ, ಪ್ರವಾಸೋದ್ಯಮ ಇಲಾಖೆ ನಿರ್ದೇಶಕಿ ಸಿಂಧು ಬಿ.ರೂಪೇಶ್, ಜಂಗಲ್ ಲಾಡ್ಜ್ ಮತ್ತು ರೆಸಾಟ್9 ವ್ಯವಸ್ಥಾಪಕ ನಿರ್ದೇಶಕ ಕುಮಾರ್ ಪುಷ್ಕರ್, ಕೆ.ಎಸ್.ಟಿ.ಡಿ.ವ್ಯವಸ್ಥಾಪಕ ನಿರ್ದೇಶಕ ವಿಜಯ್ ಶರ್ಮ, ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್ ಕೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇಕ್ರಂ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

  • ಅಂಜನಾಪುರ ಜಲಾಶಯ ಭರ್ತಿ- ಬಾಗಿನ ಅರ್ಪಿಸಿದ ಬಿ.ವೈ.ರಾಘವೇಂದ್ರ

    ಅಂಜನಾಪುರ ಜಲಾಶಯ ಭರ್ತಿ- ಬಾಗಿನ ಅರ್ಪಿಸಿದ ಬಿ.ವೈ.ರಾಘವೇಂದ್ರ

    ಶಿವಮೊಗ್ಗ: ಜಿಲ್ಲೆಯ ಶಿಕಾರಿಪುರ ತಾಲೂಕಿನ ರೈತರ ಜೀವನಾಡಿ ಆಗಿರುವ ಅಂಜನಾಪುರ ಜಲಾಶಯ ಭರ್ತಿಯಾಗಿದ್ದು, ಸಂಸದ ಬಿ.ವೈ. ರಾಘವೇಂದ್ರ ಅವರು ಪತ್ನಿ ತೇಜಸ್ವಿನಿ ಜೊತೆ ಬಾಗಿನ ಅರ್ಪಿಸಿದ್ದಾರೆ.

    ಬಿ.ವೈ ರಾಘವೇಂದ್ರ ದಂಪತಿ ಮೊದಲು ಜಲಾಶಯದ ದಡದಲ್ಲಿರುವ ಗಂಗಾ ದೇವಿಗೆ ಪೂಜೆ ಸಲ್ಲಿಸಿದರು. ಆ ಬಳಿಕ ಬಾಗಿನ ಅರ್ಪಿಸಿದ್ದಾರೆ. ಅಂಜನಾಪುರ ಜಲಾಶಯ ಶಿಕಾರಿಪುರ ತಾಲೂಕಿನ ರೈತರ ಜೀವನಾಡಿಯಾಗಿದೆ. ಸಾಮಾನ್ಯವಾಗಿ ಈ ಜಲಾಶಯ ವಾಡಿಕೆಯಂತೆ ಆಗಸ್ಟ್ ಮೊದಲ ವಾರದಲ್ಲಿ ಭರ್ತಿ ಆಗುತಿತ್ತು. ಆದರೆ ಈ ಬಾರಿ ಜುಲೈ ತಿಂಗಳಿನಲ್ಲಿಯೇ ಈ ಜಲಾಶಯ ಭರ್ತಿಯಾಗಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಶಿಕಾರಿಪುರ ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆ, ಕೃಷಿ ಚಟುವಟಿಕೆಯ ನೀರಿಗಾಗಿ ಈ ಜಲಾಶಯ ಅವಲಂಬಿತವಾಗಿದೆ. ಇದನ್ನೂ ಓದಿ: ಆಗುಂಬೆ ಘಾಟಿಯಲ್ಲಿ ವಾಹನ ಸಂಚಾರಕ್ಕೆ ಅವಕಾಶ

    ಅಂಜನಾಪುರ ಜಲಾಶಯ 1.80 ಟಿಎಂಸಿ ನೀರು ಸಂಗ್ರಹ ಸಾಮಥ್ರ್ಯ ಹೊಂದಿದೆ. ಹೊಸನಗರ ತಾಲೂಕಿನಲ್ಲಿ ಹುಟ್ಟುವ ಕುಮದ್ವತಿ ನದಿಯು ಹರಿದು ಶಿಕಾರಿಪುರ ತಾಲೂಕಿನ ಮೂಲಕ ಹಾವೇರಿ ಜಿಲ್ಲೆಯ ಮದಗದ ಕೆರೆಗೆ ಸೇರುತ್ತದೆ. ಹೀಗೆ, ಹರಿಯುವ ಕುಮದ್ವತಿ ನದಿಗೆ ಶಿಕಾರಿಪುರ ತಾಲೂಕಿನ ಅಂಜನಾಪುರ ಗ್ರಾಮದ ಬಳಿ ಸಣ್ಣ ಬ್ಯಾರೇಜ್ ನಿರ್ಮಾಣ ಮಾಡಲಾಗಿದೆ. ಬಾಗಿನ ಅರ್ಪಣೆ ವೇಳೆ ಮಲೆನಾಡು ಅಭಿವೃದ್ದಿ ಮಂಡಳಿ ಅಧ್ಯಕ್ಷ ಕೆ.ಎಸ್. ಗುರುಮೂರ್ತಿ ಸೇರಿದಂತೆ ನೀರಾವರಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

  • ತುಂಗಾ ಜಲಾಶಯ ಭರ್ತಿ- ಬಾಗಿನ ಅರ್ಪಿಸಿದ ಈಶ್ವರಪ್ಪ

    ತುಂಗಾ ಜಲಾಶಯ ಭರ್ತಿ- ಬಾಗಿನ ಅರ್ಪಿಸಿದ ಈಶ್ವರಪ್ಪ

    ಶಿವಮೊಗ್ಗ: ಕಳೆದೊಂದು ವಾರದಿಂದ ಮಲೆನಾಡಿನ ತವರು ಶಿವಮೊಗ್ಗದಲ್ಲಿ ಒಂದೇ ಸಮನೆ ವರುಣ ಅಬ್ಬರಿಸಿದ್ದು, ಆಗಾಗ್ಗೆ ಮಳೆ ಸುರಿಯುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ತುಂಗಾ ಜಲಾಶಯ ಭರ್ತಿಯಾಗಿದ್ದು, ಜಲಾಶಯದಿಂದ ನೀರು ಹೊರಕ್ಕೆ ಬಿಡಲಾಗುತ್ತಿದೆ. ನಿರಂತರವಾಗಿ ಜಲಾಶಯಕ್ಕೆ ಒಳ ಹರಿವು ಹೆಚ್ಚಾಗುತ್ತಿದ್ದು, ಜಿಲ್ಲೆಯ ಜನರಲ್ಲಿ ಹರ್ಷ ಮನೆ ಮಾಡಿದೆ. ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ತುಂಬಿದ ತುಂಗೆಗೆ ಬಾಗಿನ ಸಮರ್ಪಿಸಿದ್ದಾರೆ.

    ಜಿಲ್ಲೆಯ ಗಾಜನೂರು ತುಂಗಾ ಜಲಾಶಯ ಪ್ರತಿ ವರ್ಷ ಬೇಗ ಭರ್ತಿಯಾಗುವ ಜಲಾಶಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕಳೆದ ಒಂದು ವಾರದಿಂದ ಮಲೆನಾಡು ಭಾಗದಲ್ಲಿ ಬಿಟ್ಟು ಬಿಡದೆ ಮಳೆಯಾಗುತ್ತಿದೆ. ಹೀಗಾಗಿ ಹಳ್ಳ-ಕೊಳ್ಳ, ನದಿಗಳು ಮೈದುಂಬಿ ಹರಿಯುತ್ತಿವೆ. ಅಂತೆಯೇ ತುಂಗಾ ನದಿ ಕೂಡ ತುಂಬಿ ಹರಿಯುತ್ತಿದ್ದು, ಗಾಜನೂರು ಜಲಾಶಯ ಭರ್ತಿಯಾಗಿದೆ. ಹೀಗಾಗಿ ಅಣೆಕಟ್ಟಿನಿಂದ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ. ಇದನ್ನೂ ಓದಿ: ಮಲೆನಾಡಲ್ಲಿ ಮುಂಗಾರು ಚುರುಕು- ಜೋಗಕ್ಕೆ ಜೀವದ ಕಳೆ

    588.24 ಮೀಟರ್ ಎತ್ತರ ಇರುವ ಗಾಜನೂರು ಜಲಾಶಯದಲ್ಲಿ ನೀರಿನ ಮಟ್ಟ 587.69 ಮೀಟರ್ ತಲುಪಿದ ಕಾರಣ ಎಲ್ಲ ಗೇಟ್ ಗಳಿಂದ ನೀರು ಹೊರ ಬಿಡಲಾಗಿದೆ. ಈ ತುಂಗಾ ಜಲಾಶಯ 3.25 ಟಿಎಂಸಿ ಸಾಮಥ್ರ್ಯದ್ದಾಗಿದೆ. ಶೃಂಗೇರಿ, ತೀರ್ಥಹಳ್ಳಿ ಭಾಗಗಳಲ್ಲಿ ಮಳೆ ಬೀಳುತ್ತಿರುವ ಕಾರಣ ಜಲಾಶಯಕ್ಕೆ ನಿರಂತರವಾಗಿ ನೀರು ಹರಿದು ಬರುತ್ತಿದೆ. ಈ ಹಿನ್ನೆಲೆಯಲ್ಲಿ, ಡ್ಯಾಂ ಭರ್ತಿಯಾಗಿ ನಳನಳಿಸುತ್ತಿದ್ದು, ಸಚಿವ ಕೆ.ಎಸ್.ಈಶ್ವರಪ್ಪ ಕುಟುಂಬ ಸಮೇತ ತುಂಗಾ ಜಲಾಶಯಕ್ಕೆ ಬಾಗಿನ ಸಮರ್ಪಿಸಿದ್ದಾರೆ.

    ಮಲೆನಾಡಿನ ತವರು ಎಂದೆನಿಸಿಕೊಳ್ಳುವ ಶಿವಮೊಗ್ಗದ ಕೇಂದ್ರ ಬಿಂದುವಾಗಿರುವ ಗಾಜನೂರು ಜಲಾಶಯ ಇದೀಗ ಸುಂದರವಾಗಿ ಕಂಗೊಳಿಸುತ್ತಿದ್ದು, ನಿರಂತರ ಮಳೆ ಹಿನ್ನೆಲೆಯಲ್ಲಿ ಡ್ಯಾಂ ನಿಂದ ನೀರು ಹೊರಕ್ಕೆ ಬಿಡುತ್ತಿರುವ ಪರಿಣಾಮ ಡ್ಯಾಂ ಗೆ ಮತ್ತಷ್ಟು ಜೀವ ಕಳೆ ಬಂದಂತಾಗಿದೆ. ತುಂಗೆಯ ಮೂಲ ಸೆಲೆಯಾಗಿರುವ ಶೃಂಗೇರಿ, ಕೊಪ್ಪ ಭಾಗದ ಪ್ರದೇಶದಲ್ಲಿ ಯಥೇಚ್ಛ ಮಳೆಯಾಗುತ್ತಿರುವ ಕಾರಣ ರಾಜ್ಯದಲ್ಲಿಯೇ ಭರ್ತಿಯಾಗಿರುವ ಪ್ರಥಮ ಜಲಾಶಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಒಟ್ಟು 22 ಕ್ರಸ್ಟ್ ಗೇಟ್ ಗಳಿದ್ದು, ಎಲ್ಲ ಗೇಟುಗಳಿಂದ ನದಿಗೆ ನೀರು ಹರಿಬಿಡಲಾಗಿದೆ. ಕೊರೊನಾ ಕಾಟದಿಂದ ಪ್ರವಾಸಿಗರಿಗೆ ಪ್ರವೇಶ ನಿಷಿದ್ಧವಾಗಿದ್ದು, ಇದರಿಂದ ಪ್ರವಾಸಿಗರಿಗೆ ನಿರಾಸೆಯಾಗಿದೆ.

    ಜಿಲ್ಲೆಯ ಮಲೆನಾಡು ಪ್ರದೇಶಗಳಾದ ಸಾಗರ, ತೀರ್ಥಹಳ್ಳಿ, ಹೊಸನಗರ, ಸೊರಬ ತಾಲೂಕಿನಾದ್ಯಂತ ಮಳೆ ಬಿರುಸಾಗಿದ್ದು, ಹಳ್ಳ-ಕೊಳ್ಳ ನದಿಗಳಿಗೆ ನೀರು ಹರಿದು ಬಂದಿದೆ. ತುಂಗಾ, ಭದ್ರಾ, ಮಾಲತಿ, ಶರಾವತಿ, ವರದಾ, ಕುಮುದ್ವತಿ ನದಿಗಳು ಸೇರಿದಂತೆ, ದೊಡ್ಡ, ದೊಡ್ಡ ಹಳ್ಳಗಳು ನೀರಿನಿಂದ ತುಂಬಿವೆ. ಹೀಗಾಗಿ ಜಿಲ್ಲೆಯ ರೈತರು ಹಾಗೂ ನಾಗರೀಕರಲ್ಲಿ ಹರ್ಷ ಮನೆ ಮಾಡಿದೆ.

  • ನುರಿತ ಈಜುಗಾರರಿಗಾಗಿ ಕಲಬುರಗಿ ಜಿಲ್ಲಾಡಳಿತದಿಂದ ಹುಡುಕಾಟ

    ನುರಿತ ಈಜುಗಾರರಿಗಾಗಿ ಕಲಬುರಗಿ ಜಿಲ್ಲಾಡಳಿತದಿಂದ ಹುಡುಕಾಟ

    ಕಲಬುರಗಿ: ಸದ್ಯ ಕೊರೊನಾ ನಂತರ ಇದೀಗ ಜಿಲ್ಲೆಯಲ್ಲಿ ಪ್ರವಾಹದ ಆತಂಕ ಎದುರಾಗಿದೆ. ಹೀಗಾಗಿ ಪ್ರವಾಹ ಬಂದ ಸಮಯದಲ್ಲಿ ನೀರಿನಲ್ಲಿ ಸಿಲುಕಿದ ಜನರ ರಕ್ಷಣೆಗಾಗಿ ಕಲಬುರಗಿ ಜಿಲ್ಲಾಧಿಕಾರಿ ವಿ ವಿ.ಜ್ಯೋತ್ಸ್ನಾ ಗ್ರಾಮದಲ್ಲಿನ ನುರಿತ ಈಜು ತಜ್ಞರ ಹುಡುಕಾಟದಲ್ಲಿ ನಿರತರಾಗಿದ್ದಾರೆ. ಇದನ್ನೂ ಓದಿ: ಬಿಜೆಪಿ ಪಕ್ಷ ಒಂದು ಕುಟುಂಬ ಇದ್ದಂತೆ : ಸಚಿವ ಕೆ.ಎಸ್ ಈಶ್ವರಪ್ಪ

    ಪ್ರವಾಹದ ನೇರವಿಗೆ ಸಂಕಷ್ಟದಲ್ಲಿರುವ ಜನರ ನೇರವಿಗಾಗಿ ಈಗಾಗಲೇ 45 ಮಾಜಿ ಸೈನಿಕರು ಕೈ ಜೋಡಿಸಿದ್ದು, ಅವರನ್ನು ಕಲಬುರಗಿ ಅಪ್ಪಾ ಕೆರೆಯಲ್ಲಿ ಎನ್‍ಡಿಆರ್‍ಎಫ್ ತಂಡದಿಂದ ಪ್ರವಾಹದಲ್ಲಿ ಸಿಲುಕಿದವರ ರಕ್ಷಣೆ ಬಗ್ಗೆ ಈಗ ತರಬೇತಿ ನೀಡಲಾಗುತ್ತಿದೆ. ಜಿಲ್ಲೆಯ ಬೆಣ್ಣೆತೋರಾ ಜಲಾಶಯದಲ್ಲಿ ನೀರಿನ ಮಟ್ಟ ಹೆಚ್ಚಾದ ಹಿನ್ನಲೆ ನದಿಗೆ ಹೆಚ್ಚಿನ ನೀರು ಬಿಡುವ ಸಾಧ್ಯತೆಯಿದೆ. ಇದರ ಪರಿಣಾಮ ಕಮಲಾಪುರ,ಚಿಂಚೋಳಿ ತಾಲೂಕಿನ ನದಿಯಂಚಿನ ಹಲವು ಗ್ರಾಮಗಳು ಮುಳುಗಡೆಯಾಗುವದ ಸಾಧ್ಯತೆಯಿದೆ. ಹೀಗಾಗಿ ಆ ಗ್ರಾಮದ ಜನರನ್ನು ಸುರಕ್ಷಿತ ಸ್ಥಳಗಳಿಗೆ ತೆರಳಲು ಜಿಲ್ಲಾಡಳಿತ ಸೂಚಿಸಿದೆ.

    ಮಹಾರಾಷ್ಟ್ರದಲ್ಲಿ ಸಹ ಹೆಚ್ಚಿನ ಮಳೆಯಾಗುತ್ತಿದ್ದು, ಅಫಜಲಪುರದ ಸೊನ್ನ ಬ್ಯಾರೇಜಗೂ ಸಹ ಜೂಲೈ ಎರಡನೇ ಅಥವಾ ಮೂರನೇ ವಾರದಲ್ಲಿ ನೀರು ಬರವಂತಹ ಸಾಧ್ಯತೆಯಿದೆ. ಹೀಗಾಗಿ ಅಲ್ಲಿವರೆಗೆ 100ಕ್ಕೂ ಅಧಿಕ ನುರಿತ ಈಜುಗಾರರ ತಂಡವನ್ನು ಕಟ್ಟಿ ಅವರಿಗೆ ಸುರಕ್ಷಿತ ಕಿಟ್ ಕೊಡಲು ಜಿಲ್ಲಾಡಳಿತ ಸಜ್ಜಾಗಿದೆ.

  • ಕೊಡಗಿನಲ್ಲಿ ಭಾರೀ ಮಳೆ- ಕೆಆರ್‍ಎಸ್ ಡ್ಯಾಂ ಒಳ ಹರಿವು ಹೆಚ್ಚಳ

    ಕೊಡಗಿನಲ್ಲಿ ಭಾರೀ ಮಳೆ- ಕೆಆರ್‍ಎಸ್ ಡ್ಯಾಂ ಒಳ ಹರಿವು ಹೆಚ್ಚಳ

    – ಕಾವೇರಿ ನದಿಗೆ 15 ಸಾವಿರ ಕ್ಯೂಸೆಕ್ ನೀರು

    ಮಂಡ್ಯ: ಕೊಡಗು ಭಾಗದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‍ಎಸ್ ಜಲಾಶಯಕ್ಕೆ 10 ಸಾವಿರ ಕ್ಯೂಸೆಕ್‍ಗೂ ಅಧಿಕ ನೀರು ಹರಿದು ಬರುತ್ತಿದೆ.

    ಕಳೆದ ತಿಂಗಳು ಸುರಿದ ಧಾರಾಕಾರ ಮಳೆಯಿಂದಾಗಿ ಕೆಆರ್‍ಎಸ್ ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಿತ್ತು. ಹೀಗಾಗಿ ಸಿಎಂ ಯಡಿಯೂರಪ್ಪನವರು ಜಲಾಶಯಕ್ಕೆ ಬಾಗೀನವನ್ನು ಅರ್ಪಿಸಿದರು. ಇದಾದ ಬಳಿಕ ಕೊಡಗು ಭಾಗದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿತ್ತು. ಇದೀಗ ಕಳೆದ ಎರಡ್ಮೂರು ದಿನಗಳಿಂದ ಮತ್ತೆ ಮಳೆ ಸುರಿಯಲು ಆರಂಭವಾಗಿದೆ. ಹೀಗಾಗಿ ಸದ್ಯ ಕೆಆರ್‍ಎಸ್ ಜಲಾಶಯಕ್ಕೆ 10,035 ಕ್ಯೂಸೆಕ್ ನೀರು ಹರಿದು ಬರುತ್ತಿದೆ.

    ಇಂದು ಹಾಗೂ ನಾಳೆ ಮಳೆಯ ಪ್ರಮಾಣ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ. ಹೀಗಾಗಿ ಪ್ರಸ್ತುತ ಕೆಆರ್‍ಎಸ್ ಜಲಾಶಯದಿಂದ ಕಾವೇರಿ ನದಿಗೆ 15 ಸಾವಿರ ಕ್ಯೂಸೆಕ್ ನೀರು ಹರಿಬಿಡಲಾಗುತ್ತಿದೆ. ಕೆಆರ್‍ಎಸ್ ಜಲಾಶಯದ ಇಂದಿನ ಮಟ್ಟ 124.65 ಅಡಿ ಇದ್ದು, ಒಳ ಹರಿವು 10,035 ಕ್ಯೂಸೆಕ್ ಇದೆ. ಹೊರ ಹರಿವು 15,681 ಕ್ಯೂಸೆಕ್ ಇದೆ. ಕೆಆರ್‍ಎಸ್ ಜಲಾಶಯದಲ್ಲಿ ಪ್ರಸ್ತುತ 49.243 ಟಿಎಂಸಿ ನೀರು ಸಂಗ್ರಹವಾಗಿದೆ.