Tag: ಜಲಾಶಯಗಳು

  • ಕೆಆರ್‌ಎಸ್‌ ಒಳಹರಿವು ಹೆಚ್ಚಳ, ಕಬಿನಿ ಭರ್ತಿಗೆ 4 ಅಡಿ ಬಾಕಿ

    ಕೆಆರ್‌ಎಸ್‌ ಒಳಹರಿವು ಹೆಚ್ಚಳ, ಕಬಿನಿ ಭರ್ತಿಗೆ 4 ಅಡಿ ಬಾಕಿ

    ಬೆಂಗಳೂರು: ಪ್ರಾರಂಭದಲ್ಲಿ ಅಷ್ಟೇನು ಮಳೆಯಾಗಿಲ್ಲದ ಕಾರಣ ಈ ಬಾರಿ ಜಲಾಶಯಗಳು ಭರ್ತಿಯಾಗುವುದಿಲ್ಲ ಎಂಬ ಆತಂಕ ರೈತರಲ್ಲಿ ಮನೆ ಮಾಡಿತ್ತು. ಆದರೆ, ಇತ್ತೀಚೆಗೆ ಮಳೆ ಅಬ್ಬರಿಸಿ ಬೊಬ್ಬಿರಿಯುತ್ತಿದ್ದು, ಕೆಆರ್‌ಎಸ್‌ ಸೇರಿದಂತೆ ಎಲ್ಲ ಜಲಾಶಯಗಳ ಒಳಹರಿವಿನಲ್ಲಿ ಹೆಚ್ಚಳವಾಗಿದೆ.

    ಕೊಡಗು, ಹಾಸನ ಸೇರಿದಂತೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಬಿರುಸುಗೊಂಡ ಹಿನ್ನೆಲೆ ಕೆಆರ್‌ಎಸ್‌ ಡ್ಯಾಂನ ಒಳಹರಿವಿನಲ್ಲಿ ಹೆಚ್ಚಳವಾಗಿದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್‌ ಡ್ಯಾಂನ ಒಳ ಹರಿವು 26,522 ಕ್ಯೂಸೆಕ್ ಏರಿಕೆಯಾಗಿದೆ. ಬೆಳಗ್ಗೆ 22,719 ಕ್ಯೂಸೆಕ್ ಇದ್ದ ಒಳ ಹರಿವು ಸಂಜೆ ಹೊತ್ತಿಗೆ 26,522 ಕ್ಯೂಸೆಕ್‍ಗೆ ತಲುಪಿದೆ. ಅಣೆಕಟ್ಟೆಯ ಗರಿಷ್ಠ ಮಟ್ಟ 124.80 ಅಡಿ ಇದ್ದು, ಇಂದು 88.60 ಅಡಿ ನೀರು ಸಂಗ್ರವಾಗಿದೆ. ಒಳ ಹರಿವು 26,522 ಕ್ಯೂಸೆಕ್ ಇದ್ದು, ಪ್ರಸ್ತುತ 15.121 ಟಿಎಂಸಿ ನೀರು ಸಂಗ್ರಹವಾಗಿದೆ.

    ಕೇರಳದ ವಯನಾಡಿನಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆ ಹೆಚ್.ಡಿ ಕೋಟೆ ತಾಲ್ಲೂಕಿನ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯದ ಒಳಹರಿವಿನಲ್ಲಿಯೂ ಹೆಚ್ಚಳವಾಗಿದ್ದು, ಭರ್ತಿಯಾಗಲು ಕೆಲವೇ ಅಡಿಗಳಷ್ಟು ಬಾಕಿ ಇದೆ. ಹೀಗಾಗಿ ಹೊರಹರಿವು ಕೂಡ ಹೆಚ್ಚಳವಾಗಿದೆ.

    ಕಬಿನಿ ಜಲಾಶಯದ ನೀರಿನ ಮಟ್ಟ 80 ಅಡಿ ತಲುಪಿದ್ದು, ಗರಿಷ್ಠ ಮಟ್ಟ 84 ಅಡಿ ಆಗಿದೆ. ಜಲಾಶಯದ ಸದ್ಯದ ಒಳಹರಿವು 23,000 ಕ್ಯೂಸೆಕ್ ಆಗಿದ್ದು, ಹೊರಹರಿವು 10,000 ಕ್ಯೂಸೆಕ್ ಇದೆ. ಜಲಾಶಯದ ಸಂಪೂರ್ಣ ಭರ್ತಿಗೆ 4 ಅಡಿಗಳು ಮಾತ್ರ ಬಾಕಿ ಇದ್ದು, ಒಳಹರಿವು ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಹಿನ್ನೆಲೆ ಮುನ್ನೆಚ್ಚರಿಕೆಯಾಗಿ ಜಲಾಶಯದಿಂದ ಹೊರಹರಿವು ಹೆಚ್ಚಳ ಮಾಡಲಾಗಿದೆ.

    ಕಪಿಲಾ ನದಿ ಪಾತ್ರದಲ್ಲಿ ವಾಸಿಸುತ್ತಿರುವ ಜನರು ನದಿಗೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಕಪಿಲಾ ನದಿಯ ಇಕ್ಕೆಲಗಳ ತಗ್ಗು ಪ್ರದೇಶದಲ್ಲಿ ವಾಸಿಸುತ್ತಿರುವ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ನೀರಾವರಿ ಇಲಾಖೆ ಅಧಿಕಾರಿಗಳು ಸೂಚಿಸಿದ್ದಾರೆ.

    ಹಾಸನ ಜಿಲ್ಲೆಯ ಗೊರೂರಿನ ಹೇಮಾವತಿ ಜಲಾಶಯ ಸಹ ಭರ್ತಿಯಾಗುತ್ತಿದ್ದು, ನೀರಿನ ಮಟ್ಟದಲ್ಲಿಯೂ ಸಹ ಹೆಚ್ಚಳವಾಗುತ್ತಿದೆ. ಜಲಾಶಯದ ಗರಿಷ್ಠ ಮಟ್ಟ 2,922 ಅಡಿ ಆಗಿದ್ದು, 2,899.77 ಅಡಿಯಷ್ಟು ಭರ್ತಿಯಾಗಿದೆ. ಜಲಾಶಯದ ಗರಿಷ್ಠ ಸಂಗ್ರಹ ಸಾಮರ್ಥ್ಯ 37.103 ಟಿಎಂಸಿಯಾಗಿದ್ದು, ಒಳಹರಿವು 28,317 ಕ್ಯೂಸೆಕ್ ಆಗಿದೆ.

  • ಅಬ್ಬರದ ಮಳೆಗೆ ಮಲೆನಾಡು ತತ್ತರ -ಕೊಡಗು, ತೀರ್ಥಹಳ್ಳಿಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ

    ಅಬ್ಬರದ ಮಳೆಗೆ ಮಲೆನಾಡು ತತ್ತರ -ಕೊಡಗು, ತೀರ್ಥಹಳ್ಳಿಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ

    – ಕೆಆರ್ ಎಸ್ ಭರ್ತಿಗೆ ಇನ್ನು 10 ಅಡಿ ಬಾಕಿ

    ಬೆಂಗಳೂರು: ಕರಾವಳಿಯಲ್ಲಿ ಮುಂಗಾರಿನ ಅಬ್ಬರ ಕಡಿಮೆಯಾಗಿದೆ. ಆದ್ರೆ ಚಿಕ್ಕಮಗಳೂರು, ಶಿವಮೊಗ್ಗ ಮಡಿಕೇರಿಯಲ್ಲಿ ವರ್ಷಧಾರೆ ನಿರಂತರವಾಗಿದೆ.

    ಇದರಿಂದ ಸಂಚಾರ ದುಸ್ತರವಾಗಿದೆ. ಹಲವು ಮನೆಗಳು ಕುಸಿದಿವೆ. ವಿದ್ಯುತ್ ಕೈಕೊಟ್ಟಿದೆ. ಹಲವು ಗ್ರಾಮಗಳ ಸಂಪರ್ಕ ಬಂದ್ ಆಗಿದೆ. ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ. ಕೊಡಗು ಶಿವಮೊಗ್ಗದ ತೀರ್ಥಹಳ್ಳಿ, ಸಾಗರ, ಹೊಸನಗರ ತಾಲೂಕಿನಲ್ಲಿ ಭಾರಿ ಮಳೆಯಾಗ್ತಿದ್ದು, ಶಾಲಾ ಕಾಲೇಜುಗಳಿಗೆ ಇವತ್ತು ರಜೆ ನೀಡಲಾಗಿದೆ.

    ಬೆಂಗಳೂರಲ್ಲಿ ರಾತ್ರಿಯಿಡಿ ಜಿಟಿಜಿಟಿ ಮಳೆಯಾಗಿದೆ. ಇನ್ನು 5 ದಿನ ರಾಜ್ಯದಲ್ಲಿ ಇದೇ ಪರಿಸ್ಥಿತಿ ಮುಂದುವರಿಯಲಿದೆ. ಇನ್ನು ಈ ಬಾರಿಯ ಮುಂಗಾರು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಮಗದೊಂದು ಸಂತಸ ಅಂದ್ರೆ ಸಾಮಾನ್ಯವಾಗಿ ಆಗಸ್ಟ್ ವೇಳೆಗೆ ಜಲಾಶಯಗಳು ಭರ್ತಿ ಆಗುತ್ತಿದ್ದವು. ಆದ್ರೆ, ತಿಂಗಳ ಮುಂಚೆಯೇ ಜುಲೈನಲ್ಲಿ ಬಹುತೇಕ ಡ್ಯಾಮ್‍ಗಳು ಭರ್ತಿಯಾಗಿವೆ.

    ಕಾವೇರಿ ಕೊಳ್ಳದಲ್ಲಿ ಭಾರಿ ಮಳೆಯಿಂದಾಗಿ ಕೆಆರ್ ಎಸ್‍ಗೆ ಒಂದೇ ದಿನ 3ಅಡಿ ನೀರು ಬಂದಿದ್ದು, ಭರ್ತಿಗೆ 10 ಅಡಿ ಬಾಕಿಯಿದೆ. ಕಬಿನಿ ಡ್ಯಾಮ್‍ನಿಂದ 35 ಸಾವಿರ ಕ್ಯೂಸೆಕ್ ಅಂದ್ರೆ 2 ಟಿಎಂಸಿಗೂ ಅಧಿಕ ನೀರು ತಮಿಳುನಾಡಿಗೆ ಹರೀತಿದೆ.

    ಇನ್ನು, ರಾಜ್ಯದ ಪ್ರಮುಖ ಡ್ಯಾಮ್‍ಗಳ ಇವತ್ತಿನ ನೀರಿನ ಮಟ್ಟ ಇಂತಿದೆ
    ಕೆಆರ್ ಎಸ್
    * ಸಂಗ್ರಹ ಸಾಮರ್ಥ್ಯ – 49.45 ಟಿಎಂಸಿ (124.80 ಅಡಿ)
    * ಇಂದಿನ ಮಟ್ಟ – 35.937 ಟಿಎಂಸಿ ( 114.00 ಅಡಿ)
    * ಒಳ ಹರಿವು – 34,757 ಕ್ಯೂಸೆಕ್
    * ಹೊರ ಹರಿವು – 3,615 ಕ್ಯೂಸೆಕ್
    ( ಕಳೆದ ವರ್ಷ ಜುಲೈ ವೇಳೆಗೆ 76 ಅಡಿ ನೀರಿನ ಮಟ್ಟ, 5-6 ವರ್ಷಗಳ ಹಿಂದೆ 112 ರ ಆಸುಪಾಸಿನಲ್ಲಿತ್ತು)

    ಹಾರಂಗಿ
    * ಸಂಗ್ರಹ ಸಾಮರ್ಥ್ಯ – 8.5 ಟಿಎಂಸಿ (2859 ಅಡಿ)
    * ಇಂದಿನ ಮಟ್ಟ – 7.8 ಟಿಎಂಸಿ (2856.79 ಅಡಿ)
    * ಒಳ ಹರಿವು – 12,168 ಕ್ಯೂಸೆಕ್
    * ಹೊರ ಹರಿವು – 13,406 ಕ್ಯೂಸೆಕ್

    ಕಬಿನಿ
    * ಸಂಗ್ರಹ ಸಾಮರ್ಥ್ಯ – 19.50 ಟಿಎಂಸಿ (2,284 ಅಡಿ)
    * ಈಗಿನ ಮಟ್ಟ – 18.31 ಟಿಎಂಸಿ (2,282.14 ಅಡಿ)
    * ಒಳ ಹರಿವು – 40,000 ಕ್ಯೂಸೆಕ್
    * ಹೊರ ಹರಿವು – 40,000 ಕ್ಯೂಸೆಕ್

    ಹೇಮಾವತಿ
    * ಸಂಗ್ರಹ ಸಾಮರ್ಥ್ಯ – 37.103 ಟಿಎಂಸಿ (2922.00 ಅಡಿ)
    * ಇಂದಿನ ಮಟ್ಟ – 27.12 ಟಿಎಂಸಿ (2910.58 ಅಡಿ)
    * ಒಳಹರಿವು – 19,847 ಕ್ಯೂಸೆಕ್
    * ಹೊರಹರಿವು – 2,350 ಕ್ಯೂಸೆಕ್

    ತುಂಗಭದ್ರಾ
    * ಸಂಗ್ರಹ ಸಾಮರ್ಥ್ಯ – 100 ಟಿಎಂಸಿ (1633 ಅಡಿ)
    * ಇಂದಿನ ಮಟ್ಟ – 46.160 ಟಿಎಂಸಿ (1615.18 ಅಡಿ)
    * ಒಳ ಹರಿವು – 38,052 ಕ್ಯೂಸೆಕ್
    * ಹೊರ ಹರಿವು – 160 ಕ್ಯೂಸೆಕ್

    ಆಲಮಟ್ಟಿ
    * ಸಂಗ್ರಹ ಸಾಮರ್ಥ್ಯ – 123.081 ಟಿಎಂಸಿ (519.6 ಮೀ.)
    * ಪ್ರಸುತ್ತ ಟಿಎಂಸಿ – 56.268 ಟಿಎಂಸಿ (514.20 ಮೀ.)
    * ಒಳಹರಿವು – 52,897 ಕ್ಯೂಸೆಕ್
    * ಹೊರಹರಿವು – 00 ಕ್ಯೂಸೆಕ್

    ಲಿಂಗನಮಕ್ಕಿ
    * ಸಂಗ್ರಹ ಸಾಮರ್ಥ್ಯ – 1,819 ಅಡಿ
    * ಇಂದಿನ ಮಟ್ಟ – 1,781 ಅಡಿ
    * ಒಳ ಹರಿವು – 41,547 ಕ್ಯೂಸೆಕ್
    * ಹೊರ ಹರಿವು – 279 ಕ್ಯೂಸೆಕ್

    ಭದ್ರಾ
    * ಸಂಗ್ರಹ ಸಾಮರ್ಥ್ಯ – 186 ಅಡಿ
    * ಇಂದಿನ ಮಟ್ಟ – 155 ಅಡಿ
    * ಒಳ ಹರಿವು – 20,079 ಕ್ಯೂಸೆಕ್
    * ಹೊರ ಹರಿವು – 230 ಕ್ಯೂಸೆಕ್

    ತುಂಗಾ
    * ಸಂಗ್ರಹ ಸಾಮರ್ಥ್ಯ – 588.24 ಮೀಟರ್
    * ಇಂದಿನ ಮಟ್ಟ – 588 ಮೀಟರ್
    * ಒಳ ಹರಿವು – 40,327 ಕ್ಯೂಸೆಕ್
    * ಹೊರ ಹರಿವು – 38,871 ಕ್ಯೂಸೆಕ್

    ಕ್ಯೂಸೆಕ್ ಮತ್ತು ಟಿಎಂಸಿ ಎಂದರೆ ಎಷ್ಟು?
    ಕ್ಯೂಸೆಕ್ ಎಂಬುದು Cubic feet per Second ಹ್ರಸ್ವರೂಪ. ಪ್ರತಿ ಸೆಕೆಂಡಿಗೆ ಒಂದು ಘನ ಅಡಿ ನೀರು ಹರಿದರೆ ಅದು ಒಂದು ಕ್ಯೂಸೆಕ್ ನೀರು ಎಂದು ಕರೆಯಲ್ಪಡುತ್ತದೆ. ಒಂದು ಘನ ಅಡಿ ನೀರನ್ನು ಲೀಟರುಗಳಿಗೆ ಪರಿವರ್ತಿಸಿದರೆ ಸುಮಾರು 28.317 ಲೀಟರುಗಳಾಗುತ್ತವೆ. 11,524 ಕ್ಯೂಸೆಕ್ ನೀರು 24 ಗಂಟೆಯ ಕಾಲ ನಿರಂತರ ಹರಿದರೆ ಒಂದು ಟಿಎಂಸಿ ಎಂದು ಕರೆಯಲಾಗುತ್ತದೆ. 10 ಸಾವಿರ ಕ್ಯೂಸೆಕ್ ನೀರು 24 ಗಂಟೆ ನಿರಂತರ ಹರಿದರೆ 0.864 ಟಿಎಂಸಿ ಅಡಿ ಆಗುತ್ತದೆ. 35.87 ಅಡಿ ಅಳದಷ್ಟು ನೀರನ್ನು ಒಂದು ಚದರ ಮೈಲಿ ಪ್ರದೇಶದಲ್ಲಿ ಸಂಗ್ರಹಿಸಿದರೆ ಒಂದು ಟಿಎಂಸಿ ಅಡಿ ಆಗುತ್ತದೆ.