Tag: ಜಲಾಂತರ್ಗಾಮಿ

  • ಯುದ್ಧ ಹಡಗು, ಜಲಾಂತರ್ಗಾಮಿಗಳ ಸೂಕ್ಷ್ಮ ಮಾಹಿತಿಯನ್ನ ಪಾಕ್‌ಗೆ ರವಾನಿಸ್ತಿದ್ದ ಮೆಕ್ಯಾನಿಕಲ್ ಎಂಜಿನಿಯರ್ ಅರೆಸ್ಟ್‌!

    ಯುದ್ಧ ಹಡಗು, ಜಲಾಂತರ್ಗಾಮಿಗಳ ಸೂಕ್ಷ್ಮ ಮಾಹಿತಿಯನ್ನ ಪಾಕ್‌ಗೆ ರವಾನಿಸ್ತಿದ್ದ ಮೆಕ್ಯಾನಿಕಲ್ ಎಂಜಿನಿಯರ್ ಅರೆಸ್ಟ್‌!

    – ರೇಖಾಚಿತ್ರ, ಧ್ವನಿ ರೆಕಾರ್ಡಿಂಗ್‌ ಸಮೇತ ಮಾಹಿತಿ ಹಂಚಿಕೊಂಡಿದ್ದ‌ ಸ್ಪೈ

    ಮುಂಬೈ: ಆಪರೇಷನ್‌ ಸಿಂಧೂರ ಬಳಿಕ ದೇಶದಲ್ಲಿ ಪಾಕಿಸ್ತಾನ (Pakistan) ಪರ ಬೇಹುಗಾರಿಕೆ ನಡೆಸುತ್ತಿದ್ದವರ ಬಗ್ಗೆ ಹದ್ದಿನ ಕಣ್ಣಿಡಲಾಗಿದೆ. ಹೀಗಾಗಿ ಕಳೆದ ಎರಡು ವಾರಗಳಲ್ಲಿ ಸುಮಾರು 20 ಮಂದಿ ಬೇಹುಗಾರರ (Spying) ಹೆಡೆಮುರಿ ಕಟ್ಟಲಾಗಿದೆ. ಒಂದು ದಿನದ ಹಿಂದೆಯಷ್ಟೇ ಐಎಸ್‌ಐ ಅಧಿಕಾರಿಗಳಿಗೆ ಭಾರತದ ಸಿಮ್‌ ಕಾರ್ಡ್‌ಗಳನ್ನ ಪೂರೈಸುತ್ತಿದ್ದ ರಾಜಸ್ಥಾನದ ವ್ಯಕ್ತಿಯನ್ನ ಬಂಧಿಸಲಾಗಿತ್ತು. ಇಂದು ಥಾಣೆಯಲ್ಲಿ ಮತ್ತೊರ್ವ ವ್ಯಕ್ತಿಯನ್ನ ಬಂಧಿಸಲಾಗಿದೆ.

    ಥಾಣೆಯ ಕಲ್ವಾ ನಿವಾಸಿಯಾದ ಮೆಕ್ಯಾನಿಕಲ್ ಎಂಜಿನಿಯರ್ (Mechanical Engineer) ರವೀಂದ್ರ ವರ್ಮಾ (27) ಬಂಧಿತ ಆರೋಪಿ. ಮಹಾರಾಷ್ಟ್ರ ಪೊಲೀಸರ ಭಯೋತ್ಪಾದನಾ ನಿಗ್ರಹ ದಳ (ATS) ನಡೆಸಿದ ವಿಶೇಷ ಕಾರ್ಯಾಚರಣೆ ವೇಳೆ ರವೀಂದ್ರನನ್ನ ಬಂಧಿಸಲಾಗಿದೆ.

    ಪೊಲೀಸರ ಪ್ರಕಾರ, ಫೇಸ್‌ಬುಕ್‌ನಲ್ಲಿ ಮಹಿಳೆಯಂತೆ ಡ್ರಾಮಾ ಮಾಡ್ತಿದ್ದ ಪಾಕಿಸ್ತಾನಿ ಏಜೆಂಟ್‌ನಿಂದ (Pakistani Agent) ಹನಿಟ್ರ್ಯಾಪ್‌ಗೆ ರವೀಂದ್ರ ಒಳಗಾಗಿದ್ದ. ಬಳಿಕ ಹಣದ ಆಮಿಷ ಒಡ್ಡಿ ಆತನಿಂದ ಸೂಕ್ಷ್ಮ ಮಾಹಿತಿಗಳನ್ನ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

    ಈತ 2024 ರಿಂದ ಪಾಕಿಸ್ತಾನಿ ಏಜೆಂಟ್‌ನೊಂದಿಗೆ ಸಂಪರ್ಕದಲ್ಲಿದ್ದ. ದೇಶದ ಯುದ್ಧನೌಕೆಗಳು, ಜಲಾಂತರ್ಗಾಮಿ ನೌಕೆಗಳಿಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಯನ್ನ ಪಾಕಿಸ್ತಾನಿ ಗುಪ್ತಚರ ಅಧಿಕಾರಿಗಳಿಗೆ ನೀಡಿದ್ದ. ರೇಖಾಚಿತ್ರಗಳು ಮತ್ತು ಆಡಿಯೋ ರೆಕಾರ್ಡಿಂಗ್‌ ಸಮೇತ ಪಾಕಿಸ್ತಾನಿ ಗುಪ್ತಚರ ಆಪರೇಟಿವ್ (POI)ಗೆ ಮಾಹಿತಿ ಹಂಚಿಕೊಂಡಿದ್ದ. ಇದಕ್ಕೆ ಪ್ರತಿಯಾಗಿ ವಿದೇಶಗಳಲ್ಲಿನ ವಿವಿಧ ಬ್ಯಾಂಕ್‌ ಖಾತೆಗಳಿಂದ ಭಾರೀ ಮೊತ್ತದ ಹಣ ಪಡೆದುಕೊಂಡಿದ್ದ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ತನಿಖೆ ಸಮಯದಲ್ಲಿ ಉದ್ದೇಶಪೂರ್ವಕವಾಗಿಯೇ ರವೀಂದ್ರ ವರ್ಮಾ ಸೂಕ್ಷ್ಮ ಮಾಹಿತಿಯನ್ನ ಪಾಕ್‌ ಏಜೆಂಟ್‌ಗಳೊಂದಿಗೆ ಹಂಚಿಕೊಂಡಿದ್ದಾನೆ ಎಂಬುದೂ ಗೊತ್ತಾಗಿದೆ ಎಂದು ವರದಿಗಳು ತಿಳಿಸಿವೆ.

    ವರ್ಮಾ ರಕ್ಷಣಾ ತಂತ್ರಜ್ಞಾನ ಸಂಸ್ಥೆಯಲ್ಲಿ ಜೂನಿಯರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ. ಇದೇ ಕಾರಣದಿಂದ ದಕ್ಷಿಣ ಮುಂಬೈನಲ್ಲಿರುವ ನೇವಲ್ ಡಾಕ್‌ಯಾರ್ಡ್‌ಗೆ ಪ್ರವೇಶಿಸಲು ಅಧಿಕಾರವಿತ್ತು. ಅಲ್ಲದೇ ಈತ ನೌಕಾ ಹಡಗುಗಳು ಮತ್ತು ಜಲಾಂತರ್ಗಾಮಿ ನೌಕೆಗಳಲ್ಲಿಯೂ ಪ್ರಯಾಣಿಸುತ್ತಿದ್ದ. ಡಾರ್ಕ್‌ಯಾರ್ಡ್‌ಗೆ ಮೊಬೈಲ್‌ ಕೊಂಡೊಯ್ಯಲು ಅನುಮತಿ ಇಲ್ಲದಿದ್ದ ಕಾರಣ ರೇಖಾ ಚಿತ್ರಗಳನ್ನ ರೆಡಿ ಮಾಡಿಕೊಂಡಿದ್ದ. ಅಲ್ಲಿಂದ ಆಚೆಬಂದ ನಂತರ ವಾಯ್ಸ್‌ ರೆಕಾರ್ಡಿಂಗ್‌ ಮಾಡಿ ರೇಖಾ ಚಿತ್ರಗಳೊಂದಿಗೆ ಮಾಹಿತಿ ಹಂಚಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

    ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಎಟಿಎಸ್ ಸೋಮವಾರದ ವರೆಗೆ ಕಸ್ಟಡಿಗೆ ಪಡೆದು ವಿಚಾರಣೆ ಮುಂದುವರಿಸಿದೆ.

  • Hangor Submarines: ಪಾಕ್‌ಗೆ ಸುಧಾರಿತ ಜಲಾಂತರ್ಗಾಮಿ ನೌಕೆ ನೀಡಲು ಚೀನಾ ಗ್ರೀನ್‌ ಸಿಗ್ನಲ್‌!

    Hangor Submarines: ಪಾಕ್‌ಗೆ ಸುಧಾರಿತ ಜಲಾಂತರ್ಗಾಮಿ ನೌಕೆ ನೀಡಲು ಚೀನಾ ಗ್ರೀನ್‌ ಸಿಗ್ನಲ್‌!

    ಒಂದೆಡೆ ಆರ್ಥಿಕತೆಯಿಂದ ಬಳಲುತ್ತಿರುವ ಪಾಕಿಸ್ತಾನ (Pakistan), ಚೀನಾ ಸಹಾಯದಿಂದ ತನ್ನ ಸೇನಾ ಬಲವನ್ನು ಹೆಚ್ಚಿಸಿಕೊಳ್ಳುತ್ತಲೇ ಇದೆ. ಈ ಹಿಂದೆ ಭಾರತದ ರಫೇಲ್‌ ಯುದ್ಧ ವಿಮಾನಕ್ಕೆ ಪ್ರಸ್ಪರ್ಧಿಯಾಗಿ ನಿಲ್ಲಲು ಮಿತ್ರ ರಾಷ್ಟ್ರ ಚೀನಾ ಜೆ-10ಸಿ ಫೈಟರ್ ಜೆಟ್ ನೀಡಿತ್ತು. ಅಲ್ಲದೇ ಇತ್ತೀಚೆಗೆ ಚೀನಾದ ಆಧುನಿಕ ತಂತ್ರಜ್ಞಾನ ಹೊಂದಿರುವ ಯುದ್ಧ ವಿಮಾನಗಳನ್ನು ಖರೀದಿಸಲು ಸಕಲ ತಯಾರಿ ನಡೆಸುತ್ತಿದೆ. ಇದಕ್ಕೆ ಪ್ರತಿಯಾಗಿ ಭಾರತ ಸಹ ತನ್ನ ವಾಯುಪಡೆಯನ್ನು ಮೇಲ್ದರ್ಜೆಗೇರಿಸುವ ಪ್ರಕ್ರಿಯೆಯನ್ನು ಚುರುಕುಗೊಳಿಸುತ್ತಿದ್ದು ಅಮೆರಿಕಾದಿಂದ F-35 ಯುದ್ಧ ವಿಮಾನಗಳನ್ನು (Fighter Jets) ಖರೀದಿಸುವ ಬಗ್ಗೆ ಮಾತುಕತೆಗಳು ನಡೆಯುತ್ತಿವೆ ಎಂದು ಉನ್ನತ ಮೂಲಗಳು ತಿಳಿಸಿವೆ.

    ಈ ನಡುವೆ ಪಾಕಿಸ್ತಾನಕ್ಕಾಗಿ ಚೀನಾ ಮೊದಲ ʻಹ್ಯಾಂಗೋರ್ʼ ಜಲಾಂತರ್ಗಾಮಿ (Hangor Submarine) ನೌಕೆಯನ್ನು ನೀಡಲು ಮುಂದಾಗಿದ್ದು ವುಹಾನ್ ಹಡಗುಕಟ್ಟೆಯಲ್ಲಿ ಕೆಲಸ ಪ್ರಾರಂಭಿಸಿದೆ. 2028ರ ವೇಳೆಗೆ ತನ್ನ ನೌಕಾಪಡೆಗೆ ಸೇರಿಸಿಕೊಳ್ಳಲು ಸಜ್ಜಾಗಿರುವ 8 ಹ್ಯಾಂಗೋರ್‌ ಜಲಾಂತರ್ಗಾಮಿ ನೌಕೆಗಳಲ್ಲಿ ಇದು ಮೊದಲನೆಯದ್ದಾಗಿದೆ. ಅಷ್ಟಕ್ಕೂ ʻಹ್ಯಾಂಗೋರ್-ಕ್ಲಾಸ್ʼ ಜಲಾಂತರ್ಗಾಮಿ ಹೇಗಿದೆ? ಸಮುದ್ರದಾಳದಲ್ಲಿ ಎಷ್ಟು ನೀರಿನ ವೇಗದಲ್ಲಿ ಕೆಲಸ ಮಾಡುವ ಸಾಮರ್ಥ್ಯ ಹೊಂದಿದೆ? ಇದೆಲ್ಲವನ್ನು ತಿಳಿಯುವ ಕುತೂಹಲ ನಿಮಗಿದ್ದರೆ ಮುಂದೆ ಓದಿ…

    ಜಲಾಂತರ್ಗಾಮಿ ಎಂದರೇನು?
    ಜಲಾಂತರ್ಗಾಮಿ ನೌಕೆ ಅಂದ್ರೆ ನೀರಿನಲ್ಲಿ ಮುಳುಗಿ ಪ್ರಯಾಣ ಮಾಡಲು ಬಳಸುವ ಒಂದು ವಾಹನ. ವಿವಿಧ ದೇಶಗಳ ನೌಕಾ ದಳದಲ್ಲಿ ಜಲಾಂತರ್ಗಾಮಿ ನೌಕೆಗಳೂ ಒಂದು. 2017 ರಲ್ಲಿ ತೆರೆ ಕಂಡ ʻಗಾಝೀ ಅಟ್ಯಾಕ್‌ʼ ಸಿನಿಮಾ ಇದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ. ನೌಕಾಪಡೆ (Navy) ಯುದ್ಧಗಳಿಗೆ ಯಾವ ರೀತಿ ಜಲಾಂತರ್ಗಾಮಿಗಳನ್ನು ಬಳಸುತ್ತಾರೆ? ಸಮುದ್ರದ ಆಳಕ್ಕೆ ಹೋದಂತೆ ನೀರಿನ ವೇಗ ಎಷ್ಟಿರುತ್ತದೆ ಎಂಬುದನ್ನು ಸ್ಪಷ್ಟವಾಗಿ ಈ ಸಿನಿಮಾದಲ್ಲಿ ತೋರಿಸಲಾಗಿದೆ. ಮೊದಲ ವಿಶ್ವಯುದ್ಧದ (World War) ಸಂದರ್ಭದಲ್ಲಿ ಮೊದಲ ಬಾರಿಗೆ ಇದನ್ನು ಬಳಸಲಾಗಿತ್ತು.

    ಹ್ಯಾಂಗೋರ್‌ ಜಲಾಂತರ್ಗಾಮಿಯ ವಿಶೇಷತೆ ಏನು?
    ಹ್ಯಾಂಗೋರ್‌-ಕ್ಲಾಸ್‌ ಜಲಾಂತರ್ಗಾಮಿಯು ಚೀನಾದ ʻ039A ಯುವಾನ್ ಕ್ಲಾಸ್‌ʼ ಜಲಾಂತರ್ಗಾಮಿಯ ರೂಪಾಂತರವಾಗಿದೆ. ಸುಧಾರಿತ ಸ್ಟೆಲ್ತ್‌ ವೈಶಿಷ್ಟ್ಯಗಳನ್ನು ಹೊಂದಿರುವ ಈ ಜಲಾಂತರ್ಗಾಮಿ ಎಂತಹ ವಾತಾವರಣದಲ್ಲೂ ದಾಳಿಗಳನ್ನು ಸಮರ್ಥವಾಗಿ ಎದುರಿಸುತ್ತದೆ. ಅಲ್ಲದೇ ನಿರ್ದಿಷ್ಟ ಗುರಿಯೊಂದಿಗೆ ಶತ್ರುಗಳನ್ನು ಬಗ್ಗು ಬಡಿಯುವ ಸಾಮರ್ಥ್ಯ ಹೊಂದಿರುವ ಈ ನೌಕೆ, ಡೀಸೆಲ್‌ ಮತ್ತು ಎಲೆಕ್ಟ್ರಿಕ್‌ ಇಂಜಿನ್‌ಗಳ ವ್ಯವಸ್ಥೆಯೊಂದಿಗೆ ಕಾರ್ಯನಿರ್ವಹಿಸುತ್ತದೆ. ಈ ಜಲಾಂತರ್ಗಾಮಿಗೆ ನಿಷ್ಕ್ರಿಯಗೊಳಿಸಲಾಗಿದ್ದ ʻಪಿಎಸ್‌ಎನ್‌ ಹ್ಯಾಂಗೋರ್ʼ (PSN Hangor) ನೌಕೆಯ ಹೆಸರನ್ನೇ ಇಡಲಾಗಿದೆ. ಇದೇ ಹೆಸರಿನ ನೌಕೆ 1971ರ ಯುದ್ಧದ ಸಂದರ್ಭದಲ್ಲಿ ಭಾರತೀಯ ಯುದ್ಧನೌಕೆ ʻಐಎನ್‌ಎಸ್‌ ಖುಕ್ರಿʼಯನ್ನು ಮುಳುಗಿಸಿತ್ತು.

    ಡೀಸೆಲ್‌ ಮತ್ತು ಎಲೆಕ್ಟ್ರಿಕ್‌ ಈ ವ್ಯವಸ್ಥೆಯು ಪ್ರೊಪಲ್ಷನ್‌ ಮೋಡ್‌ ಅನ್ನು ಸೂಚಿಸುತ್ತದೆ. ಪ್ರೊಪಲ್ಷನ್ ಮೋಡ್‌ ಅಂದ್ರೆ ವಸ್ತುವಿನ ಚಲನೆಗೆ ಸಹಕರಿಸುವ ಪ್ರಕ್ರಿಯೆಯಾಗಿದೆ. ಡೀಸೆಲ್‌ ಇಂಜಿನ್‌ಗಳು ಮೇಲ್ಮುಖವಾದಾಗ ಅಥವಾ ಸ್ನಾರ್ಕ್ಲಿಂಗ್ ಮಾಡುವಾಗ (ಸ್ನಾರ್ಕ್ಲಿಂಗ್‌ ಎಂದರೆ ನೌಕೆ ಕಾರ್ಯನಿರ್ವಹಿಸಲು ಗಾಳಿಯ ಅಗತ್ಯವಿರುವಂತೆ ನೋಡಿಕೊಳ್ಳುವುದು) ಗಾಳಿಯನ್ನ ಲಿಕ್ಟಿಡ್‌ ಆಗಿ ಪರಿವರ್ತಿಸಿ ಜಲಾಂತರ್ಗಾಮಿ ನೌಕೆಗೆ ಶಕ್ತಿ ನೀಡುತ್ತದೆ. ಅಲ್ಲದೇ ಡೀಸೆಲ್‌ ಇಂಜಿನ್‌ನಿಂದ ಚಾರ್ಜ್‌ ಮಾಡಲಾದ ಬ್ಯಾಟರಿಯು ನೌಕೆ ಮುಳುಗಿದ ಸಂದರ್ಭದಲ್ಲಿ ಎಲೆಕ್ಟ್ರಿಕ್‌ ಇಂಜಿನ್‌ನೊಂದಿಗೆ ಕೆಲಸ ಮಾಡಲು ಸಹಾಯಕವಾಗುತ್ತದೆ. ಅದಕ್ಕಾಗಿಯೇ ಹ್ಯಾಂಗೋರ್‌ಗೆ 4 ಡೀಸೆಲ್‌ ಇಂಜಿನ್‌ಗಳ ವ್ಯವಸ್ಥೆ ಮಾಡಲಾಗಿದೆ. ನ್ಯೂಕ್ಲಿಯರ್‌ ನೌಕೆಗಳ ಚಲನೆಯು ಶತ್ರು ಸೇನೆಗಳಿಗೆ ಡಿಕೆಕ್ಟ್‌ ಮಾಡಲು ಸಹಾಯಕವಾಗುತ್ತದೆ. ಇದರಿಂದ ಎದರಾಳಿಗಳು ನಮ್ಮಿಂದ ಎಷ್ಟು ಅಂತರದಲ್ಲಿದ್ದಾರೆ? ಟಾರ್ಪಿಡೋ (ನೀರಿನೊಳಗೆ ಉಡಾವಣೆ ಮಾಡುವ ಮಿಸೈಲ್‌) ಲಾಂಚ್‌ ಮಾಡಿದಾಗ ಎಷ್ಟು ದೂರದಲ್ಲಿ-ಯಾವ ಕಡೆಗೆ ಬರುತ್ತಿದೆ? ಎಂಬುದನ್ನು ಡಿಟೆಕ್ಟರ್‌ ಮೂಲಕ ತಿಳಿಯಬಹುದು. ಆದ್ರೆ ಡೀಸೆಲ್‌ ಆಕ್ಸಿಜನ್‌ ಜಲಾಂತರ್ಗಾಮಿಯಲ್ಲಿ ಎದುರಾಳಿಯನ್ನು ಗುರುತಿಸಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ.

    ಈ ನೌಕೆಯಲ್ಲಿ ಟಾರ್ಪಿಡೋಗಳ ಬಳಕೆಗೆ ವಿಶೇಷವಾಗಿ ವಿನ್ಯಾಸ ಮಾಡಲಾಗಿದೆ. ಹ್ಯಾಂಗೋರ್‌ 21 ಇಂಚಿನ 6 ಟಾರ್ಪಿಡೋಗಳನ್ನು ಏಕಕಾಲಕ್ಕೆ ಉಡಾವಣೆ ಮಾಡುವ ಸಾಮರ್ಥ್ಯ ಹೊಂದಿದೆ. ಜೊತೆಗೆ ನೌಕಾ ವಿರೋಧಿ ಕ್ಷಿಪಣಿಗಳನ್ನು ಭಸ್ಮಮಾಡುವ ಶಕ್ತಿಯಿದೆ. ಅಲ್ಲದೇ 450 ಕಿಮೀ ವ್ಯಾಪ್ತಿಯ ವರೆಗೂ ಶತ್ರು ಸೇನೆಯನ್ನು ಹುಡುಕಿ ಕೊಲ್ಲುವ ಬಾಬರ್‌-3 ಸಬ್‌ಸಾನಿಕ್‌ ಕ್ರೂಸ್‌ ಕ್ಷಿಪಣಿಗಳನ್ನೂ ಒಳಗೊಂಡಿದೆ.

    ಹ್ಯಾಂಗೋರ್‌ ಸಾಮರ್ಥ್ಯ ಎಷ್ಟಿದೆ?
    ಪಾಕಿಸ್ತಾನಕ್ಕಾಗಿ ಚೀನಾ ನಿರ್ಮಿಸಿರುವ ಜಲಾಂತರ್ಗಾಮಿ ನೌಕೆಯು ಭಾರತದ ʻಕಲಾವರಿʼ ನೌಕೆಯ ಮಾದರಿಯಲ್ಲೇ ನಿರ್ಮಿಸಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಭಾರತವು ಪ್ರಸ್ತುತ 6 ಕಲಾವರಿ ಜಲಾಂತರ್ಗಾಮಿಗಳನ್ನು ನೌಕಾಪಡೆಗೆ ನಿಯೋಜಿಸಿದ್ದು, 2030ರ ವೇಳೆಗೆ ಇನ್ನೂ ಮೂರು ನೌಕೆಯನ್ನು ಸೇರ್ಪಡೆ ಮಾಡಿಕೊಳ್ಳಲಿದೆ. ಕಲಾವರಿ ಜಲಾಂತರ್ಗಾಮಿಯು 67.5 ಮೀ. ಉದ್ದದ್ದಷ್ಟಿದ್ದು, 1,775 ಟನ್‌ ತೂಕ ಸಾಗಿಸುವ ಸಾಮರ್ಥ್ಯ ಹೊಂದಿದೆ. ಆದ್ರೆ ಹ್ಯಾಂಗೋರ್ 76 ಮೀಟರ್‌ ಉದ್ದ, 8.4 ಮೀಟರ್‌ ಅಗಲವಿದ್ದು, 2,800 ಟನ್‌ಗಳಷ್ಟು ತೂಕವನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಅಲ್ಲದೇ ಗಂಟೆಗೆ 20 ನಾಟ್ಸ್‌ (37 ಕಿಮೀ) ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ.

    ಟೈಟಾನಿಕ್‌ ಅವಶೇಷ ನೋಡಲು ಹೋದವರ ಕಥೆ ಏನಾಯ್ತು?
    ಸಮುದ್ರದ ತಳಕ್ಕೆ ಹೋಗೋದು ತುಂಬಾನೇ ಕಷ್ಟ. ಏಕೆಂದರೆ, ಸಮುದ್ರದ ಆಳಕ್ಕೆ ಇಳಿದಂತೆಲ್ಲಾ ಒತ್ತಡ ಹೆಚ್ಚಾಗುತ್ತಾ ಹೋಗುತ್ತದೆ. ಹೀಗಾಗಿ, ಭಾರೀ ಪ್ರಮಾಣದ ಒತ್ತಡವನ್ನು ತಡೆದುಕೊಳ್ಳುವಂತಹ ಸುಭದ್ರ ಜಲಾಂತರ್ಗಾಮಿ ನೌಕೆಯನ್ನ ನಿರ್ಮಾಣ ಮಾಡಬೇಕು. ಇಲ್ಲವಾದ್ರೆ ಸಮುದ್ರದ ಆಳದಲ್ಲೇ ನೌಕೆ ಸ್ಫೋಟಗೊಳ್ಳುವ ಸಾಧ್ಯತೆ ಇರುತ್ತದೆ. 2023ರ ಜೂನ್‌ನಲ್ಲಿ ಒಂದು ದುರಂತ ಸಂಭವಿಸಿತ್ತು. ಅಮೆರಿಕದ ಓಷನ್‌ ಗೇಟ್ ಸಂಸ್ಥೆ ಟೈಟನ್ ಹೆಸರಿನ ಒಂದು ಸಬ್‌ಮರಿನ್ ಅಭಿವೃದ್ದಿಪಡಿಸಿತ್ತು. ಈ ನೌಕೆಯು ಟೈಟಾನಿಕ್ ಹಡಗಿನ ಅವಶೇಷವನ್ನ ನೋಡೋದಕ್ಕೆ ಪ್ರವಾಸಿಗರನ್ನು ಕರೆದೊಯ್ಯುವ ಕೆಲಸ ಮಾಡುತ್ತಿತ್ತು. ಆದರೆ, ತಾಂತ್ರಿಕ ಕಾರಣದಿಂದ ಈ ನೌಕೆ ಸಮುದ್ರದ ಆಳದಲ್ಲಿ ಸ್ಫೋಟಗೊಂಡಿತ್ತು. ಈ ನೌಕೆ ಒಳಗಿದ್ದ ಐವರು ಶ್ರೀಮಂತರೂ ಸಾವನ್ನಪ್ಪಿದ್ದರು. ಹೀಗಾಗಿ, ಈ ರೀತಿಯ ಯಾವುದೇ ಅನಾಹುತ ಸಂಭವಿಸಿದ ರೀತಿಯಲ್ಲಿ ಭಾರತದ ವಿಜ್ಞಾನಿಗಳು ನೌಕೆಯನ್ನ ಅಭಿವೃದ್ಧಿ ಮಾಡುತ್ತಿದ್ದಾರೆ.

    ಭಾರತ ಸಹ ಮಹತ್ವಾಕಾಂಕ್ಷಿ ಸಮುದ್ರಯಾನ ಯೋಜನೆ ಆರಂಭಕ್ಕೆ ಸಿದ್ಧತೆ ಶುರುವಾಗಿದೆ. ಬರೋಬ್ಬರಿ 6 ಸಾವಿರ ಮೀಟರ್ ಸಮುದ್ರದ ಆಳಕ್ಕೆ ಮೂವರು ಸಂಶೋಧಕರನ್ನ ಕಳಿಸಲು ಸಿದ್ಧತೆ ನಡೆಸುತ್ತಿದೆ. ಸದ್ಯದಲ್ಲೇ ಚೆನ್ನೈ ಕಡಲ ತೀರದಲ್ಲಿ ಬಂಗಾಳ ಕೊಲ್ಲಿಯಲ್ಲಿ ಇದರ ಪರೀಕ್ಷೆಯೂ ನಡೆಯಲಿದೆ. ಈ ಸಬ್‌ಮರಿನ್‌ ಯೋಜನೆ ಯಶಸ್ವಿಯಾದರೆ, ಈ ಸಾಧನೆ ಮಾಡಿದ ವಿಶ್ವದ 6ನೇ ದೇಶವಾಗಿ ಭಾರತ ಹೊರಹೊಮ್ಮಲಿದೆ. ಈವರೆಗೆ ಅಮೆರಿಕ, ರಷ್ಯಾ, ಜಪಾನ್, ಫ್ರಾನ್ಸ್ ಮತ್ತು ಚೀನಾ ದೇಶಗಳು ಮಾತ್ರ ಇಂತಹ ಸಾಧನೆ ಮಾಡಿವೆ.

    • ಮೋಹನ್‌ ಬನ್ನಿಕುಪ್ಪೆ

  • ಕರಾಚಿಯಲ್ಲಿ ಬೀಡುಬಿಟ್ಟ ಚೀನಾದ ಜಲಾಂತರ್ಗಾಮಿ, ಯುದ್ಧನೌಕೆ – ಭಾರತಕ್ಕೆ ಇದರ ಸಂದೇಶವೇನು?

    ಕರಾಚಿಯಲ್ಲಿ ಬೀಡುಬಿಟ್ಟ ಚೀನಾದ ಜಲಾಂತರ್ಗಾಮಿ, ಯುದ್ಧನೌಕೆ – ಭಾರತಕ್ಕೆ ಇದರ ಸಂದೇಶವೇನು?

    ಇಸ್ಲಾಮಾಬಾದ್‌: ಚೀನಾದ ಯುದ್ಧನೌಕೆಗಳು (Chinese Warships), ಜಲಾಂತರ್ಗಾಮಿಗಳು ಮತ್ತು ಸೇನಾ ಬೆಂಬಲ ವ್ಯವಸ್ಥೆಯು ಪಾಕಿಸ್ತಾನದ ಕರಾಚಿ ಬಂದರಿನಲ್ಲಿ (Karachi Port) ಬೀಡಿಬಿಟ್ಟಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.

    ಮಿಲಿಟರಿ ತರಬೇತಿ ನೆಪದಲ್ಲಿ ಚೀನಾ ತನ್ನ ಜಲಾಂತರ್ಗಾಮಿ ಮತ್ತು ಯುದ್ಧನೌಕೆಗಳನ್ನು ಪಾಕಿಸ್ತಾನದ ಕರಾಚಿ ಬಂದರಲ್ಲಿ ಬೀಡುಬಿಟ್ಟಿದೆ. ಈ ಬಗ್ಗೆ ಮಾಧ್ಯಮಗಳು ವರದಿ ಮಾಡಿವೆ. ಇದಕ್ಕೆ ಸಂಬಂಧಿಸಿದ ಸೆಟಲೈಟ್‌ (ಉಪಗ್ರಹ) ಆಧಾರಿತ ಚಿತ್ರಗಳನ್ನು ಜಾಲತಾಣದಲ್ಲಿ ಹರಿದಾಡುತ್ತಿವೆ. ಸದ್ಯ ಭಾರತ-ಚೀನಾ (India-China) ನಡುವೆ ಅರುಣಾಚಲ ಪ್ರದೇಶದ ಗಡಿವಿವಾದದ ನಡುವೆ ಕರಾಚಿಯಲ್ಲಿ ಚೀನಾದ ಯುದ್ಧನೌಕೆಗಳು ಕಂಡುಬಂದಿರುವುದು ಅನುಮಾನ ಮೂಡಿಸಿದೆ. ಇದನ್ನೂ ಓದಿ: ಅಯೋಧ್ಯೆಯಲ್ಲಿ ದೀಪದಿಂದ ಎಣ್ಣೆ ಕದ್ದ ಮಕ್ಕಳು; ವೀಡಿಯೋ ಹಂಚಿಕೊಂಡ ಅಖಿಲೇಶ್‌ ಯಾದವ್‌

    ಸೀ ಗಾರ್ಡಿಯನ್ -3 (Sea Guardian-3) ಸೇನಾ ಎಕ್ಸರ್‌ಸೈಸ್‌, ಹಿಂದೂ ಮಹಾಸಾಗರದಲ್ಲಿ ಚೀನಾ ತನ್ನ ಕಡಲ ಅಸ್ತಿತ್ವವನ್ನು ಗಮನಾರ್ಹವಾಗಿ ವಿಸ್ತರಿಸಿದ ಸಮಯದಲ್ಲಿ ಬಂದಿವೆ. ಇದು ಆಫ್ರಿಕಾದ ಹಾರ್ನ್‌ನಲ್ಲಿರುವ ಜಿಬೌಟಿಯಲ್ಲಿ ಪ್ರಮುಖ ನೆಲೆಯ ನಿರ್ಮಾಣವನ್ನೂ ಒಳಗೊಂಡಿದೆ. ಜೊತೆಗೆ ಪಾಕಿಸ್ತಾನ ನೌಕಾಪಡೆಗೆ ಇತ್ತೀಚೆಗೆ 4 ಟೈಪ್-054 A/P ಫ್ರಿಗೇಟ್‌ಗಳನ್ನು ಪ್ರಾದೇಶಿಕ ನೌಕಾಪಡೆಗಳಿಗೆ ಮಾರಾಟ ಮಾಡಿದ್ದೂ ಸಹ ಇದರಲ್ಲೇ ಸೇರಿದೆ.

    ಕಳೆದ ವರ್ಷದ ಹಿಂದೂ ಮಹಾಸಾಗರದಲ್ಲಿ ಹಲವಾರು ಚೀನಿ ಕಣ್ಗಾವಲು ಮತ್ತು ಸಾಗರ ಸಮೀಕ್ಷೆ ಹಡಗುಗಳು ಪತ್ತೆಯಾಗಿದ್ದವು. ಈ ತಿಂಗಳ ಆರಂಭದಲ್ಲಿ, ಚೀನಾದ ಸಾಗರ ಸಂಶೋಧನಾ ಹಡಗು, ಶಿಯಾನ್ 6 ಕೊಲಂಬೊದಲ್ಲಿ ಬಂದಿಳಿದಿತ್ತು. ಆದರೀಗ ವ್ಯಾಪಕವಾದ ಜಲಾಂತರ್ಗಾಮಿ ಕಾರ್ಯಾಚರಣೆಗಳನ್ನ ಸಕ್ರಿಯಗೊಳಿಸಲು ಬಂಗಾಳ ಕೊಲ್ಲಿ ಸೇರಿದಂತೆ ಹಿಂದೂ ಮಹಾಸಾಗರವನ್ನೂ ಚೀನಾ ಬಳಸಿಕೊಳ್ಳುತ್ತಿದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಸೇನೆ ಗಡಿಯಲ್ಲಿ ಹಿಮಾಲಯದಂತೆ ಅಚಲವಾಗಿ ನಿಂತಿರುವವರೆಗೂ ಭಾರತ ಸುರಕ್ಷಿತ: ಮೋದಿ

    ಕರಾಚಿಯಲ್ಲಿ ಬೀಡು ಬಿಟ್ಟಿರುವ ಯುದ್ಧ ಸಾಧನಗಳ ಪೈಕಿ ಚೀನಾದ ಟೈಪ್-039 ಡೀಸೆಲ್-ಎಲೆಕ್ಟ್ರಿಕ್ ಜಲಾಂತರ್ಗಾಮಿ ನೌಕೆ ಕೂಡ ಇದೆ. ಈ ಜಲಾಂತರ್ಗಾಮಿ ನೌಕೆಯು ನೌಕಾ ರಹಸ್ಯಗಳನ್ನು ನಿಕಟವಾಗಿ ಊಹಿಸಬಲ್ಲದು. ಅರಬ್ಬಿ ಸಮುದ್ರದಲ್ಲಿ ಹಡಗುಗಳ ಉಪಸ್ಥಿತಿಯು, ತಮ್ಮ ಹೋಮ್‌ಪೋರ್ಟ್‌ಗಳಿಂದ ಹಲವಾರು ಸಾವಿರ ಕಿಮೀ ದೂರದಲ್ಲಿರುವ ನೌಕಾ ಆಸ್ತಿಗಳನ್ನು ನಿಯಂತ್ರಿಸಲು, ಬೀಜಿಂಗ್‌ನ ವಿಶ್ವಾಸ ವೃದ್ಧಿಸಲು ಈ ಜಲಾಂತರ್ಗಾಮಿ ಕಾರಣವಾಗಿದೆ. 2013ರಿಂದೀಚೆಗೆ ಚೀನಾ ಸೇನೆಯು 8 ಬಾರಿ ಹಿಂದೂ ಮಹಾಸಾಗರದಲ್ಲಿ ಜಲಾಂತರ್ಗಾಮಿಗಳನ್ನು ನಿಯೋಜಿಸಿದೆ ಎಂದು ವರದಿಯಾಗಿದೆ.

    2015ರ ಏಪ್ರಿಲ್‌ನಲ್ಲಿ ಪಾಕಿಸ್ತಾನ ಸರ್ಕಾರವು 5 ಶತಕೋಟಿ ಡಾಲರ್‌ ಮೌಲ್ಯದ ಒಪ್ಪಂದಕ್ಕೆ ಟೈಪ್‌-039 ಜಲಾಂತರ್ಗಾಮಿ ನೌಕೆಗಳ 8 ರೂಪಾಂತರಗಳನ್ನು ಖರೀದಿಸಲು ಒಪ್ಪಿಕೊಂಡಿತ್ತು. ಸದ್ಯ 4 ಜಲಾಂತರ್ಗಾಮಿ ನೌಕೆಗಳನ್ನು ಕರಾಚಿ ಶಿಪ್‌ಯಾರ್ಡ್ ಮತ್ತು ಇಂಜಿನಿಯರಿಂಗ್ ವರ್ಕ್ಸ್ ನಿರ್ಮಿಸುವ ಸಾಧ್ಯತೆಗಳಿವೆ ಎಂಬುದಾಗಿ ತಿಳಿದುಬಂದಿದೆ. ಇದನ್ನೂ ಓದಿ: ಹೋಟೆಲಿನಲ್ಲಿ‌ ನಾಲ್ವರು ಕಾಮುಕರಿಂದ ಗ್ಯಾಂಗ್‌ರೇಪ್‌ – ಸಹಾಯಕ್ಕಾಗಿ ಕಣ್ಣೀರಿಟ್ಟ ಸಂತ್ರಸ್ತೆ, ಐವರು ಅರೆಸ್ಟ್

  • P-8I Poseidon: ಹಿಂದೂ ಮಹಾಸಾಗರದ ಕಾವಲುಗಾರ – ಬೋಯಿಂಗ್ P-8I ವಿಮಾನ

    P-8I Poseidon: ಹಿಂದೂ ಮಹಾಸಾಗರದ ಕಾವಲುಗಾರ – ಬೋಯಿಂಗ್ P-8I ವಿಮಾನ

    ಶಕ್ತಿಶಾಲಿ ರಾಷ್ಟ್ರವಾಗಿ ರೂಪುಗೊಳ್ಳುತ್ತಿರುವ ಭಾರತ ರಕ್ಷಣಾ ವಲಯಕ್ಕೆ ಹೆಚ್ಚಿನ ಮಹತ್ವ ನೀಡಿದೆ. ಅದರಂತೆ ಶತ್ರು ಸೇನೆಗಳ ವಿರುದ್ಧ ಸಮರ ಸಾರಲು ಹಿಂದೂ ಮಹಾಸಾಗರ ಪ್ರದೇಶದಲ್ಲಿ ಶಕ್ತಿಶಾಲಿ ಅಸ್ತ್ರವೊಂದನ್ನ ಭಾರತೀಯ ನೌಕಾಪಡೆ ನಿಯೋಜಿದೆ. ಇದು ಶತ್ರು ಸೇನೆ ಜಲಾಂತರ್ಗಾಮಿಯಿಂದ ನುಸುಳಿದರೂ ಅಥವಾ ಆಗಸದಲ್ಲಿ ದಾಳಿ ನಡೆಸಿದರೂ ಸಮರ್ಥವಾಗಿ ಎದುರಿಸಿ ದೇಶವನ್ನು ರಕ್ಷಣೆ ಮಾಡಲಿದೆ. ಅದೇ ಹಿಂದೂ ಮಹಾಸಾಗರದ ಕಾವಲುಗಾರ ಬೋಯಿಂಗ್ P-8I ಪೋಸೈಡನ್ (P-8I Poseidon) ವಿಮಾನ. 

    ಹೌದು. ಭಾರತೀಯ ನೌಕಾಪಡೆಯ 312 ಸ್ಕ್ವಾಡ್ರನ್ ಹಿಂದೂ ಮಹಾಸಾಗರ ಪ್ರಾಂತ್ಯದಲ್ಲಿ (IOR) ಕಣ್ಗಾವಲು ಚಟುವಟಿಕೆಗಳಿಗೆ ನಿಯೋಜನೆ ಮಾಡಿರುವ ಬೋಯಿಂಗ್ P-8I ಪೋಸೈಡನ್ ವಿಮಾನ ಅತ್ಯಂತ ಮಹತ್ವದ್ದಾಗಿದೆ. ಇಂಡೋ ಪೆಸಿಫಿಕ್ ಪ್ರದೇಶದಲ್ಲಿ ಶತ್ರುಗಳ ಮೇಲೆ ಹದ್ದಿನ ಕಣ್ಣಿಟ್ಟು ಕಾವಲು ಕಾಯುವ ಈ P-8I ತನಗೆ ಸರಿಸಾಟಿಯೇ ಇಲ್ಲವೆಂಬುದನ್ನು ಸಾಬೀತು ಮಾಡಿದೆ. ಆದ್ದರಿಂದಲೇ ಭಾರತೀಯ ನೌಕಾಪಡೆಯಲ್ಲಿ ಮಹತ್ವದ ಸ್ಥಾನ ಪಡೆದುಕೊಂಡಿದೆ.  ಇದನ್ನೂ ಓದಿ: ಜಗತ್ತಿಗೆ ಭಿಕ್ಷುಕರ ರಫ್ತಿನಲ್ಲಿ ಪಾಕಿಸ್ತಾನವೇ ಫಸ್ಟ್ – ಜೇಬುಗಳ್ಳರ ಸಂಖ್ಯೆಯಲ್ಲೂ ಪಾಕಿಸ್ತಾನಿಯರೇ ಹೆಚ್ಚು

    ಇನ್ನೂ ಸ್ಕ್ವಾಡ್ರನ್ 312 ಭಾರತದ ರಾಷ್ಟ್ರೀಯ ಹಿತಾಸಕ್ತಿಗಳನ್ನ ಕಾಪಾಡುವ ಉದ್ದೇಶ ಹೊಂದಿದೆ. ಭಾರತೀಯ ನೌಕಾ ಶಸ್ತ್ರಾಸ್ತ್ರ ಸೇವೆಯ (INAS) 312 ಕಡಲ ವಿಚಕ್ಷಣಾ ಸ್ಕ್ವಾಡ್ರನ್ ಪ್ರಸ್ತುತ 12 P-8I ವಿಮಾನಗಳ ಕಾರ್ಯಾಚರಣೆ ನಡೆಸುತ್ತಿದೆ. 

    ಬೋಯಿಂಗ್ P-8 ವಿಮಾನದ ಭಾರತೀಯ ಆವೃತ್ತಿಯನ್ನು P-8I ಎಂದು ಕರೆಯಲಾಗುತ್ತದೆ. ಅಮೆರಿಕದ ನೌಕಾಪಡೆ ಮತ್ತು ಇತರ ಸೇನಾಪಡೆಗಳು ಬಳಸುವ ಆವೃತ್ತಿಯನ್ನು P-8A ಎಂದು ಕರೆಯಲಾಗುತ್ತದೆ. ಭಾರತ ಸೇನೆ ಒಳಗೊಂಡಿರುವ ಈ 12 ವಿಮಾನಗಳಲ್ಲಿ, 8 ವಿಮಾನಗಳು ಇಂಡಿಯನ್ ನೇವಲ್ ಏರ್ ಸ್ಕ್ವಾಡ್ರನ್ 312 ಎಂದು ಕರೆಯಲಾಗುವ INS ರಾಜಾಲಿಯಲ್ಲಿರುತ್ತವೆ. ರಾಜಾಲಿ ಏರ್‌ಸ್ಟೇಷನ್‌ ಭಾರತದ ಪೂರ್ವ ಕರಾವಳಿಯಲ್ಲಿ, ತಮಿಳುನಾಡಿನ ಅರಕ್ಕೋಣಮ್‌ನಲ್ಲಿದೆ. ಇನ್ನುಳಿದ 4 ವಿಮಾನಗಳು ಗೋವಾದಲ್ಲಿ ನಿಲುಗಡೆಯಾಗಿರುವ INS (ಭಾರತೀಯ ನೌಕಾಪಡೆಯ ಹಡಗು) ಹನ್ಸಾ ಮೇಲಿದ್ದು, ಇದನ್ನು ಇಂಡಿಯನ್ ನೇವಲ್ ಏರ್ ಸ್ಕ್ವಾಡ್ರನ್ 316 ಎನ್ನಲಾಗುತ್ತದೆ. ಈ ವಿಮಾನವನ್ನು ಕಾಂಡಾರ್‌ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ. 

    ಭಾರತೀಯ ನೌಕಾಪಡೆಯ 312 ಸ್ಕ್ವಾಡ್ರನ್‌ ಲೀಡರ್ ಕಣ್ಣಿಗೆ ಬೀಳದಂತೆ ಯಾವುದೇ ಹಡಗಾಗಲಿ, ಸಬ್‌ಮರೀನ್ (ಜಲಾಂತರ್ಗಾಮಿ) ಆಗಲಿ ಹಿಂದೂ ಮಹಾಸಾಗರ ಪ್ರಾಂತ್ಯವನ್ನು ದಾಟಿ ಹೋಗಲು ಸಾಧ್ಯವಿಲ್ಲ. ಕಳೆದ 10 ವರ್ಷಗಳ ಅವಧಿಯಲ್ಲಿ, P-8I ವಿಮಾನ ಹಿಂದೂ ಮಹಾಸಾಗರ ಪ್ರಾಂತ್ಯದಲ್ಲಿ ಸಕ್ರೀಯವಾಗಿ ಕಾರ್ಯಾಚರಣೆ ನಡೆಸುತ್ತಿದ್ದು, ಗಮನಾರ್ಹವಾದ 44,000 ಹಾರಾಟ ಗಂಟೆಗಳನ್ನು ದಾಖಲಿಸಿದೆ. ಆ ಮೂಲಕ ಇದು ‘ಹಿಂದೂ ಮಹಾಸಾಗರದ ಕಾವಲುಗಾರ’ ಎಂದೇ ಖ್ಯಾತಿ ಗಳಿಸಿದೆ. ಇದನ್ನೂ ಓದಿ: ಭಾರತದ ಚಂದ್ರಯಾನ-3 ನೌಕೆ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದಿಲ್ಲ: ಚೀನಾ ವಿಜ್ಞಾನಿ

    P-8I ವಿಮಾನದ ವಿಶೇಷತೆಗಳೇನು?
    ಪಿ-8ಐ ಒಂದು ಸಮರ್ಥ ವಿಮಾನವಾಗಿದ್ದು, ಕಡಿಮೆ ಎತ್ತರದಲ್ಲೂ ಹಾರಾಟ ನಡೆಸಿ ರಕ್ಷಣಾ ಕಾರ್ಯಾಚರಣೆಗಳನ್ನ ನಡೆಸಲಿದೆ. ಇದು 41,000 ಅಡಿಗಳಷ್ಟು ಎತ್ತರದಲ್ಲಿಯೂ ಹಾರಾಟ ನಡೆಸುವ ಸಾಮರ್ಥ್ಯ ಹೊಂದಿದೆ. ಕ್ವಿಕ್ ಟ್ರಾನ್ಸಿಟ್ ಕೈಗೊಳ್ಳಲಿದೆ. ಕ್ವಿಕ್ ಟ್ರಾನ್ಸಿಟ್ ಎಂದರೆ, ಪಿ-8ಐ ವಿಮಾನ ಸಾಕಷ್ಟು ದೂರದ ಪ್ರದೇಶಗಳ ನಡುವೆ ಅತ್ಯಂತ ಕಡಿಮೆ ಸಮಯದಲ್ಲಿ ಕಾರ್ಯಾಚರಣೆ ನಡೆಸುತ್ತದೆ. ಇದರೊಂದಿಗೆ ಸಬ್‌ಮರೀನ್‌ಗಳು (ಜಲಾಂತರ್ಗಾಮಿ) (Submarine), ನೀರಿನ ಮೇಲೆ ಚಲಿಸುವ ನೌಕೆಗಳನ್ನು ಹುಡುಕುವ ಮತ್ತು ರಕ್ಷಣಾ ಕಾರ್ಯಗಳನ್ನು ನಡೆಸಲಿದೆ. ಇದನ್ನೂ ಓದಿ: ಗಗನಯಾತ್ರಿಗಳ ಮೈಕ್ರೋಮೀಟೋರಾಯ್ಡ್ ದಿರಿಸುಗಳ ಕೌತುಕ ಲೋಕದ ಬಗ್ಗೆ ನಿಮಗೆ ಗೊತ್ತಾ? 

     

    ಪಿ-8I ವಿಮಾನ ಎರಡು ಇಂಜಿನ್‌ಗಳನ್ನು ಹೊಂದಿದೆ. ಅಂದಾಜು 40 ಮೀಟರ್‌ಗಳಷ್ಟು ಉದ್ದವಿದೆ. ಇದರ ವಿಂಗ್‌ಸ್ಪ್ಯಾನ್‌ (ರೆಕ್ಕೆಗಳು) ಉದ್ದ 37.64 ಮೀಟರ್‌ಗಳಾಗಿದೆ. ಪ್ರತಿಯೊಂದು ಪಿ-8ಐ ವಿಮಾನವೂ 85,000 ಕೆಜಿ ತೂಕ ಹೊಂದಿದ್ದು, 490 ನಾಟ್ (ಪ್ರತಿ ಗಂಟೆಗೆ 789 ಕಿಲೋಮೀಟರ್) ಗರಿಷ್ಠ ವೇಗದಲ್ಲಿ ಮುನ್ನುಗ್ಗುವ ಸಾಮರ್ಥ್ಯ ಹೊಂದಿದೆ. ಇದು 9 ಸಿಬ್ಬಂದಿ  ವಿಮಾನದಲ್ಲಿ ಪ್ರಯಾಣಿಸಬಹುದು.  1,200 ನಾಟಿಕಲ್ ಮೈಲಿ (2,222 ಕಿ.ಮೀ.) ವ್ಯಾಪ್ತಿಯಲ್ಲೂ ಕಾರ್ಯಾಚರಣೆ ನಡೆಸಿ ಶತ್ರುಗಳನ್ನು ಹಿಮ್ಮೆಟಿಸಲಿದೆ.  ಆ ಮ‌ೂಲಕ ಇದು ಗರಿಷ್ಠ 4 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಬಲ್ಲದು. ಇದನ್ನೂ ಓದಿ: ನೀರಿನ ಸೆಲೆ ಇರುವ ಗ್ರಹ ಪತ್ತೆ; ಇಲ್ಲಿದ್ಯಾ ಜೀವಿಗಳ ನೆಲೆ? – ನಾಸಾ ಹೇಳೋದೇನು?

    ಪಿ-8ಐ ವಿಮಾನ ಜಗತ್ತಿನ ಅತ್ಯಾಧುನಿಕ ಆಯುಧಗಳ ವ್ಯವಸ್ಥೆ ಹೊಂದಿದೆ. ಅಂದಾಜು 25 ವರ್ಷಗಳ ಕಾರ್ಯಾಚರಣೆ ಆಯಸ್ಸು ಹೊಂದಿದೆ. ಅಂದ್ರೆ ಇದು ಕಡಲತೀರ ಪ್ರದೇಶದ ಸವಾಲಿನ ವಾತಾವರಣದಲ್ಲೂ 25,000 ಗಂಟೆಗಳ ಹಾರಾಟ ನಡೆಸಲಿದೆ. ಮಂಜುಗಡ್ಡೆಯ ವಾತಾವರಣದಲ್ಲೂ ಕಾರ್ಯಾಚರಣೆ ನಡೆಸಲಿದ್ದು, ಶೋಧ, ರಕ್ಷಣೆ, ಕಳ್ಳ ಸಾಗಾಣಿಕಾ ವಿರೋಧಿ ಕಾರ್ಯಾಚರಣೆ ಮತ್ತು ಸೇನೆಯ ಇತರ ವಿಭಾಗಗಳಿಗೆ ಬೆಂಬಲ ಸೇರಿದಂತೆ ವಿವಿಧ ಕಾರ್ಯಾಚರಣೆಗಳನ್ನು ನಡೆಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ. 

    ಭಾರತದ ಸಾಗರ ಶಕ್ತಿಯ ಹಿಂದಿನ ತಂತ್ರಜ್ಞಾನ:

    ನೌಕಾಪಡೆಯ ವ್ಯವಹಾರಗಳಲ್ಲಿ ಕ್ರಾಂತಿ ನಡೆಯುತ್ತಿರುವ (ರೆವಲ್ಯೂಷನ್ ಇನ್ ನೇವಲ್ ಅಫೇರ್ಸ್ – RNA) ಈ ಕಾಲದಲ್ಲಿ, ತಂತ್ರಜ್ಞಾನ ಯುದ್ಧ ಸಂಬಂಧಿ ಆಯುಧಗಳ ಹಿಂದಿನ ಚಾಲಕಶಕ್ತಿಯಾಗಿದೆ. ಈ ಆಯಾಮದಲ್ಲಿ, ಹಿಂದೂ ಮಹಾಸಾಗರ ಪ್ರಾಂತ್ಯದಲ್ಲಿ ಭಾರತದ ಮಹತ್ತರ ಪಾತ್ರ ಮತ್ತು ಹಿಂದೂ ಮಹಾಸಾಗರದ ಪ್ರಾಮುಖ್ಯತೆಗಳನ್ನು ಕಡೆಗಣಿಸಲು ಸಾಧ್ಯವಿಲ್ಲ. ಸಮುದ್ರದ ಮೂಲಕ ಬರುವ ಅಪಾಯಗಳನ್ನು ಎದುರಿಸುವ ಸಲುವಾಗಿ, ಭಾರತ ಸರ್ಕಾರ ಆಧುನಿಕ ವಿಚಕ್ಷಣೆ ಮತ್ತು ಸೆನ್ಸರ್‌ ವ್ಯವಸ್ಥೆಗಳಿಗಾಗಿ ಸಾಕಷ್ಟು ಹಣ ಹೂಡಿಕೆ ಮಾಡಿದೆ. ಈ ಎಲ್ಲ ಪ್ರಯತ್ನಗಳೂ ಕರಾವಳಿ ವಿಚಕ್ಷಣೆ ಮತ್ತು ಭದ್ರತಾ ಕ್ರಮಗಳನ್ನು ಹೆಚ್ಚಿಸುವ ಉದ್ದೇಶ ಹೊಂದಿವೆ. 

    P-8I ಹೇಗೆ ಕಾರ್ಯಾಚರಣೆಗೆ ಸನ್ನದ್ಧವಾಗಿದೆ? 

    ಜನವರಿ 2009ರಲ್ಲಿ, ಭಾರತವು ಬೋಯಿಂಗ್ ಸಂಸ್ಥೆಯೊಡನೆ ಒಪ್ಪಂದ ಮಾಡಿಕೊಂಡು ಪಿ-8ಐ ಖರೀದಿಸಿತು. ನಂತರ ಇದನ್ನು ಕಡಲ ಗಸ್ತು ವಿಮಾನವಾಗಿ ನಿಯೋಜನೆ ಮಾಡಲಾಯಿತು. ಪಿ-8ಐ ವಿಮಾನ ಹಲವು ರೀತಿಯ ಕಾರ್ಯಾಚರಣೆಗಳಿಗೆ ಪೂರಕವಾಗಿದ್ದು, ಆ್ಯಂಟಿ ಸಬ್‌ಮರೀನ್ ಮತ್ತು ಆ್ಯಂಟಿ ಸರ್ಫೇಸ್ ಯುದ್ಧ ಸಾಮರ್ಥ್ಯ ಹೊಂದಿದೆ. ಅದರೊಡನೆ, ಗುಪ್ತಚರ ಮತ್ತು ಕಣ್ಗಾವಲು (ISR) ಕಾರ್ಯಾಚರಣೆಗಳನ್ನ ನಡೆಸಲಿದೆ. ಭಾರತದ ವಿಶಾಲ ಸಾಗರ ಪ್ರದೇಶಗಳಲ್ಲಿ ಗಸ್ತು ತಿರುಗುತ್ತದೆ. ವಿಮಾನದ ವೇಗ, ನಂಬಿಕಾರ್ಹತೆ, ದೀರ್ಘ ಬಾಳಿಕೆ ಮತ್ತು ಹೊಂದಿಕೊಳ್ಳುವಿಕೆಯ ಕಾರಣದಿಂದ ಇದು ಭಾರತೀಯ ನೌಕಾಪಡೆಯು ಭವಿಷ್ಯದ ಅವಶ್ಯಕತೆಗಳನ್ನೂ ಪೂರೈಸುವ ವಿಶ್ವಾಸ ಗಳಿಸಿದೆ. 

    ವಿಮಾನ ಜಗತ್ತಿನಾದ್ಯಂತ ಬಿಡಿಭಾಗಗಳು ಮತ್ತು ಸೇವಾ ಜಾಲದ ವ್ಯವಸ್ಥೆಯನ್ನ ಹೊಂದಿದೆ. ಅತ್ಯಾಧುನಿಕ ಸೆನ್ಸಾರ್‌ಗಳು ಮತ್ತು ಡಿಸ್‌ಪ್ಲೇ ತಂತ್ರಜ್ಞಾನವನ್ನ ಒಳಗೊಂಡಿರುವ ಓಪನ್ ಸಿಸ್ಟಮ್ಸ್ ಆರ್ಕಿಟೆಕ್ಚರ್‌ಗಳನ್ನು ಒಳಗೊಂಡಿದೆ. ಓಪನ್ ಸಿಸ್ಟಮ್ಸ್ ಆರ್ಕಿಟೆಕ್ಚರ್‌ ಎಂದರೆ, ವಿಮಾನವನ್ನು ವಿವಿಧ ಮೂಲಗಳಿಂದ ಪಡೆದುಕೊಳ್ಳುವ ತಂತ್ರಜ್ಞಾನಗಳು ಮತ್ತು ಬಿಡಿಭಾಗಗಳೊಡನೆ ಸುಲಭವಾಗಿ ಕಾರ್ಯಾಚರಿಸುವಂತೆ ನಿರ್ಮಿಸುವುದಾಗಿದೆ. ಆ ಮೂಲಕ ವಿಮಾನವನ್ನು ಭವಿಷ್ಯದಲ್ಲಿ ಮೇಲ್ದರ್ಜೆಗೇರಿಸಲು ಸಾಧ್ಯವಾಗುತ್ತದೆ. 

    ಭಾರತೀಯ ನೌಕಾಪಡೆಯು ಪಿ-8I ವಿಮಾನವನ್ನು ಸಾಗರ ಕಾರ್ಯಾಚರಣೆಗಳಿಗೆ ಬಳಸಲಾಗುತ್ತದೆ. 2020 ಮತ್ತು 2021ರಲ್ಲಿ ಚೀನಾದೊಡನೆ ಗಡಿ ಉದ್ವಿಗ್ನತೆ ತಲೆದೋರಿದ್ದಾಗ ಇದನ್ನು ಪೂರ್ವ ಲಡಾಖ್ ಪ್ರಾಂತ್ಯದಲ್ಲಿ ಚೀನೀ ಪಡೆಗಳ ಚಲನವಲನಗಳನ್ನು ಗಮನಿಸಲು ಬಳಸಲಾಗಿತ್ತು.

    ಮಾಹಿತಿ ಸಂಗ್ರಹ: ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಟೈಟಾನಿಕ್ ಹಡಗಿನ ಅವಶೇಷ ನೋಡಲು ತೆರಳಿದ್ದ ವಿಶ್ವದ ಐವರು ಶ್ರೀಮಂತರ ದಾರುಣ ಸಾವು

    ಟೈಟಾನಿಕ್ ಹಡಗಿನ ಅವಶೇಷ ನೋಡಲು ತೆರಳಿದ್ದ ವಿಶ್ವದ ಐವರು ಶ್ರೀಮಂತರ ದಾರುಣ ಸಾವು

    – 1,600 ಅಡಿ ಆಳದಲ್ಲಿ ಸ್ಫೋಟ ಸಂಭವಿಸಿ ಸಾವು

    ವಾಷಿಂಗ್ಟನ್: ಅಟ್ಲಾಂಟಿಕ್ ಸಾಗರದಲ್ಲಿ ಮುಳುಗಿದ್ದ ಟೈಟಾನಿಕ್ (Titanic) ಹಡಗಿನ ಅವಶೇಷಗಳನ್ನ ನೋಡಲು ಸಣ್ಣ ಜಲಾಂತರ್ಗಾಮಿಯಲ್ಲಿ (Submersible) ತೆರಳಿದ್ದ ವಿಶ್ವದ ಐವರು ಶ್ರೀಮಂತರು ಮೃತಪಟ್ಟಿದ್ದಾರೆ ಎಂದು ಅಮೆರಿಕದ ಕೋಸ್ಟ್ ಗಾರ್ಡ್ ಖಚಿತಪಡಿಸಿದೆ.

    ಪ್ರವಾಸಿಗರನ್ನು ಕರೆದೊಯ್ದಿದ್ದ ಸೀಮಿತ ಪ್ರದೇಶದಲ್ಲಿ ಸಂಚರಿಸುವ ಸಣ್ಣ ಜಲಾಂತರ್ಗಾಮಿ (Submersible) ಸಾಗರದ ಒಳಗಡೆ ಸುಮಾರು 1,600 ಅಡಿ (488 ಮೀಟರ್) ಆಳದಲ್ಲಿ ಟೈಟಾನಿಕ್ ಹಡಗಿನ ಅವಶೇಷಗಳ ಬಳಿ ಸ್ಫೋಟಗೊಂಡಿದೆ. ಇದರಿಂದಾಗಿ ಐವರು ದುರಂತ ಸಾವಿಗೀಡಾಗಿದ್ದಾರೆ. ರಿಮೋಟ್ ಕಂಟ್ರೋಲ್ ಸಾಧನದಿಂದ ಇದನ್ನು ಪತ್ತೆಹೆಚ್ಚಲಾಗಿದೆ. ಜಲಾಂತರ್ಗಾಮಿ ಸಬ್‌ಮರ್ಸಿಬಲ್‌ನಲ್ಲಿ ಒಬ್ಬ ಪೈಲಟ್ ಮತ್ತು ನಾಲ್ವರು ಪ್ರಯಾಣಿಕರಿದ್ದರು ಎಂದು ಹೇಳಿದೆ.

    ಈ ಮಾಹಿತಿಯನ್ನ ತಕ್ಷಣವೇ ಸಂಬಂಧಪಟ್ಟ ಕುಟುಂಬಗಳಿಗೆ ತಿಳಿಸಲಾಗಿದೆ, ಯುಎಸ್ ಕೋಸ್ಟ್ ಗಾರ್ಡ್ (US Coast Guard) ಇದಕ್ಕೆ ಸಂತಾಪ ಸೂಚಿಸುತ್ತದೆ ಎಂದು ಅಮೆರಿಕದ ಕೋಸ್ಟ್ ಗಾರ್ಡ್ ರಿಯರ್ ಅಡ್ಮಿರಲ್ ಜಾನ್ ಮೌಗರ್ ಬೋಸ್ಟನ್‌ನಲ್ಲಿ ಹೇಳಿದ್ದಾರೆ. ಇದನ್ನೂ ಓದಿ: ಮೋದಿಗಾಗಿ ಬೃಹತ್‌ ಔತಣ ಕೂಟ – ಮುಖೇಶ್‌ ಅಂಬಾನಿ, ಸುಂದರ್‌ ಪಿಚೈ ಸೇರಿ ಹಲವು VIP ಗಣ್ಯರು ಭಾಗಿ: ಇಲ್ಲಿದೆ ಫುಲ್‌ ಲಿಸ್ಟ್‌

    ಈ ಕುರಿತು ಓಷಿಯನ್‌ಗೇಟ್ ಎಕ್ಸ್‌ಪೆಡಿಷನ್ ಸಹ ಪ್ರಕಟಣೆ ಬಿಡುಗಡೆಗೊಳಿಸಿದ್ದು, ಕಂಪನಿಯ ಸಿಇಒ ಸ್ಟಾಕ್‌ಟನ್ ರಷ್ ಸೇರಿದಂತೆ ಜಲಾಂತರ್ಗಾಮಿಯಲ್ಲಿ ಸಂಚರಿಸಿದ್ದ ಎಲ್ಲ ಐದು ಮಂದಿಯೂ ಮೃತಪಟ್ಟಿದ್ದಾರೆ ಎಂದು ತಿಳಿಸಿದೆ. ಟೈಟಾನಿಕ್ ಹಡಗಿನ ಅವಶೇಷಗಳನ್ನು ನೋಡಲು ಜಲಾಂತರ್ಗಾಮಿಯಲ್ಲಿ ತೆರಳಿದ್ದ ಒಶಿಯನ್‌ಗೇಟ್ ಸಿಇಒ ಸ್ಟಾಕ್‌ಟನ್ ರಷ್, ಬ್ರಿಟಿಷ್ ಉದ್ಯಮಿ ಹಮೀಶ್ ಹಾರ್ಡಿಂಗ್, ಪಾಲ್ ಹೆನ್ರಿ ನಾರ್ಗಿಯೊಲೆಟ್, ಪಾಕಿಸ್ತಾನದ ಉದ್ಯಮಿ ಶಹಜಾದಾ ದಾವೂದ್ ಮತ್ತು ಅವರ ಮಗ ಸುಲೇಮಾನ್ ದಾವೂದ್ ಭಾನುವಾರವಷ್ಟೇ ಕಣ್ಮರೆಯಾಗಿದ್ದರು.

    ಟೈಟಾನಿಕ್ ಹಡಗಿನ ಅವಶೇಷಗಳನ್ನ ನೋಡಲು ಸಣ್ಣ ಜಲಾಂತರ್ಗಾಮಿ ಅಟ್ಲಾಂಟಿಕ್ ಸಾಗರದಲ್ಲಿ ಕಳೆದ ನಾಲ್ಕು ದಿನಗಳ ಹಿಂದೆ ನಾಪತ್ತೆಯಾಗಿತ್ತು. ಇದಕ್ಕೆ ಯುಎಸ್ ಕೋಸ್ಟ್ ಗಾರ್ಡ್ ಸಿಬ್ಬಂದಿ ತೀವ್ರವಾಗಿ ಹುಡುಕಾಟ ನಡೆಸಿದ್ದರು. 96 ತಾಸು ಸಾಗರದಲ್ಲಿ ಸಂಚರಿಸುವಷ್ಟು ಆಮ್ಲಜನಕವನ್ನಷ್ಟೇ ಅದು ಹೊಂದಿತ್ತು. ಇದನ್ನೂ ಓದಿ: ಟೈಟಾನಿಕ್ ಅವಶೇಷ ನೋಡಲು ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಜಲಾಂತರ್ಗಾಮಿ ನಾಪತ್ತೆ

    ಟೈಟಾನಿಕ್ ದುರಂತ:
    ದೈತ್ಯ ಟೈಟಾನಿಕ್ ಹಡಗು 1912ರಲ್ಲಿ ತನ್ನ ಮೊದಲ ಪ್ರಯಾಣದಲ್ಲೇ ಮಂಜುಗಡ್ಡೆಗೆ ಡಿಕ್ಕಿ ಹೊಡೆದು ಅಟ್ಲಾಂಟಿಕ್ ಸಾಗರದಲ್ಲಿ ಮುಳುಗಿತು. ಈ ದುರಂತದಲ್ಲಿ 1,500ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು. ಈ ಹಡಗಿನ ಅವಶೇಷವನ್ನು 1985ರಲ್ಲಿ ಕಂಡುಹಿಡಿಯಲಾಯಿತು. ಅಟ್ಲಾಂಟಿಕ್‌ನ ಆಳದಲ್ಲಿರುವ ಈ ಅವಶೇಷವನ್ನು ಅಂದಿನಿಂದ ಇಂದಿನವರೆಗೂ ವ್ಯಾಪಕವಾಗಿ ಪರಿಶೋಧಿಸಲಾಗುತ್ತಿದೆ.

  • ಜಲಾಂತರ್ಗಾಮಿ ನಾಪತ್ತೆ – ಟೈಟಾನಿಕ್ ನೋಡಲು ತೆರಳಿದ್ದ ಪ್ರವಾಸಿಗರಲ್ಲಿದ್ರು ಪಾಕಿಸ್ತಾನದ ಶ್ರೀಮಂತ

    ಜಲಾಂತರ್ಗಾಮಿ ನಾಪತ್ತೆ – ಟೈಟಾನಿಕ್ ನೋಡಲು ತೆರಳಿದ್ದ ಪ್ರವಾಸಿಗರಲ್ಲಿದ್ರು ಪಾಕಿಸ್ತಾನದ ಶ್ರೀಮಂತ

    ವಾಷಿಂಗ್ಟನ್: ಉತ್ತರ ಅಟ್ಲಾಂಟಿಕ್‌ನಲ್ಲಿ ಟೈಟಾನಿಕ್ (Titanic) ಅವಶೇಷಗಳನ್ನು ವೀಕ್ಷಿಸಲು ತೆರಳಿದ್ದ ಜಲಾಂತರ್ಗಾಮಿಯೊಂದು (Submarine) ನಾಪತ್ತೆಯಾಗಿರುವ ಘಟನೆ ನಡೆದಿತ್ತು. ಇದೀಗ ನಾಪತ್ತೆಯಾಗಿರುವ ಜಲಾಂತರ್ಗಾಮಿಯಲ್ಲಿ ಪ್ರಯಾಣಿಸುತ್ತಿದ್ದ ಐವರಲ್ಲಿ ಪಾಕಿಸ್ತಾನದ ಪ್ರಮುಖ ಉದ್ಯಮಿ (Pakistani businessman) ಹಾಗೂ ಅವರ ಪುತ್ರ ಸೇರಿದ್ದರು ಎಂದು ಅವರ ಕುಟುಂಬ ಮಂಗಳವಾರ ತಿಳಿಸಿದೆ.

    ಓಷನ್‌ಗೇಟ್ ಎಕ್ಸ್‌ಪೆಂಡಿಷನ್ಸ್ ಕಂಪನಿ ನಿರ್ವಹಿಸುತ್ತಿದ್ದ ಟೂರಿಸ್ಟ್ ಕ್ರಾಫ್ಟ್ ಭಾನುವಾರ ಸಾಗರಕ್ಕಿಳಿದ 2 ಗಂಟೆಗಳಲ್ಲಿ ಸಂಪರ್ಕವನ್ನು ಕಡಿದುಕೊಂಡಿದೆ. ಅದು 96 ಗಂಟೆಗಳ ಆಮ್ಲಜನಕ ಪೂರೈಕೆ ಹೊಂದಿದೆ. ಜಲಾಂತರ್ಗಾಮಿಯೊಂದಿಗೆ ಸಂಪರ್ಕವನ್ನು ಮರುಸ್ಥಾಪಿಸಲು ಹಾಗೂ ಅದನ್ನು ಸುರಕ್ಷಿತವಾಗಿ ಕರೆತರಲು ಅನೇಕ ಸರ್ಕಾರಿ ಸಂಸ್ಥೆಗಳು ಹಾಗೂ ಕಂಪನಿಗಳು ಜಂಟಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಇದೀಗ ನಾಪತ್ತೆಯಾಗಿರುವ ಜಲಾಂತರ್ಗಾಮಿಯಲ್ಲಿ ಪ್ರಯಾಣಿಸುತ್ತಿದ್ದ ಐವರಲ್ಲಿ ಪಾಕಿಸ್ತಾನದ ಶ್ರೀಮಂತ ಉದ್ಯಮಿಗಳಲ್ಲೊಬ್ಬರಾದ ಶಹಜಾದಾ ದಾವೂದ್ (Shahzada Dawood) ಹಾಗೂ ಅವರ ಮಗ ಹುಸೇನೆ ದಾವೂದ್ ಇದ್ದರು ಎಂಬುದು ತಿಳಿದುಬಂದಿದೆ. ಶಹಜಾದಾ ದಾವೂದ್ ಖ್ಯಾತ ಎಂಗ್ರೋ ಕಂಪನಿಯ ಉಪಾಧ್ಯಕ್ಷ. ಎಂಗ್ರೋ ಇಂಧನ, ಕೃಷಿ, ಪೆಟ್ರೋಕೆಮಿಕಲ್ಸ್ ಹಾಗೂ ದೂರಸಂಪರ್ಕದಲ್ಲಿ ಹೂಡಿಕೆ ಮಾಡುವ ಸಂಸ್ಥೆಯಾಗಿದೆ. ಇದು 2022ರ ಕೊನೆಯಲ್ಲಿ 350 ಶತಕೋಟಿ ರೂ. ಆದಾಯವನ್ನು ಘೋಷಿಸಿದೆ. ಇದನ್ನೂ ಓದಿ: ಟೈಟಾನಿಕ್ ಅವಶೇಷ ನೋಡಲು ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಜಲಾಂತರ್ಗಾಮಿ ನಾಪತ್ತೆ

    ನಾಪತ್ತೆಯಾಗಿರುವ ಜಲಾಂತರ್ಗಾಮಿಯಲ್ಲಿ ಪ್ರಯಾಣಿಸುತ್ತಿದ್ದ ಮತ್ತೊಬ್ಬ ಪ್ರಯಾಣಿಕನನ್ನು ಬ್ರಿಟಿಷ್ ಉದ್ಯಮಿ ಹಮೀಶ್ ಹಾರ್ಡಿಂಗ್ ಎಂದು ಗುರುತಿಸಲಾಗಿದೆ. ಇದೀಗ ಅಮೆರಿಕ ಹಾಗೂ ಕೆನಡಾದ ಹಡಗುಗಳು ಮಾತ್ರವಲ್ಲದೇ ವಿಮಾನಗಳು ಕೂಡಾ ಜಲಾಂತರ್ಗಾಮಿ ಹುಡುಕಾಟಕ್ಕೆ ಇಳಿದಿವೆ. ಇದನ್ನೂ ಓದಿ: ಅಮೆರಿಕದಲ್ಲಿ ಎಲೋನ್‌ ಮಸ್ಕ್‌ ಭೇಟಿಯಾಗ್ತಾರೆ ಪ್ರಧಾನಿ ಮೋದಿ

  • ಟೈಟಾನಿಕ್ ಅವಶೇಷ ನೋಡಲು ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಜಲಾಂತರ್ಗಾಮಿ ನಾಪತ್ತೆ

    ಟೈಟಾನಿಕ್ ಅವಶೇಷ ನೋಡಲು ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಜಲಾಂತರ್ಗಾಮಿ ನಾಪತ್ತೆ

    ವಾಷಿಂಗ್ಟನ್: ಟೈಟಾನಿಕ್ (Titanic) ಅವಶೇಷಗಳನ್ನು ನೋಡಲು ಪ್ರವಾಸಿಗರನ್ನು ಕರೆದುಕೊಂಡು ಹೋಗುತ್ತಿದ್ದ ಸಣ್ಣ ಜಲಾಂತರ್ಗಾಮಿ (Submarine) ಅಟ್ಲಾಂಟಿಕ್ ಸಾಗರದಲ್ಲಿ ನಾಪತ್ತೆಯಾಗಿದೆ ಎಂದು ವರದಿಯಾಗಿದೆ.

    ಅಮೆರಿಕದ ಕರಾವಳಿ ಕಾವಲು ಪಡೆ ಈ ಬಗ್ಗೆ ಮಾಹಿತಿ ನೀಡಿದೆ. ಈ ಜಲಾಂತರ್ಗಾಮಿ ಒಂದು ಬಾರಿ 5 ಜನರನ್ನು ಹೊತ್ತೊಯ್ಯಬಹುದು ಎನ್ನಲಾಗಿದ್ದು ಟೈಟಾನಿಕ್ ಹಡಗು ದುರಂತದ ಅವಶೇಷಗಳನ್ನು ವೀಕ್ಷಿಸುವ ಪೂರ್ಣ ಡೈವ್ ಸುಮಾರು 8 ಗಂಟೆಗಳನ್ನು ತೆಗೆದುಕೊಳ್ಳುತ್ತದೆ ಎನ್ನಲಾಗಿದೆ.

    ನಾಪತ್ತೆಯಾಗಿರುವ ಜಲಾಂತರ್ಗಾಮಿಯಲ್ಲಿ ಓಷನ್‌ಗೇಟ್ ಎಕ್ಸ್‌ಪೆಡಿಶನ್ಸ್ ಕಂಪನಿಗೆ ಸೇರಿದ್ದು, ಅದರಲ್ಲಿ ಎಷ್ಟು ಜನರಿದ್ದರು ಎಂಬುದು ಇನ್ನು ಕೂಡಾ ಸ್ಪಷ್ಟವಾಗಿಲ್ಲ. ಸಿಬ್ಬಂದಿ ಸೇರಿ ಅದರಲ್ಲಿದ್ದ ಎಲ್ಲಾ ಪ್ರವಾಸಿಗರನ್ನು ಸುರಕ್ಷಿತವಾಗಿ ಕರೆತರಲು ಎಲ್ಲಾ ರೀತಿಯಲ್ಲೂ ಪ್ರಯತ್ನಿಸಲಾಗುತ್ತಿದೆ ಎಂದು ಕಂಪನಿ ತಿಳಿಸಿದೆ. ಇದನ್ನೂ ಓದಿ: ಏರ್‌ಬಸ್‌ ಜೊತೆ ಬರೋಬ್ಬರಿ 500 ವಿಮಾನ ಖರೀದಿಗೆ ಡೀಲ್‌ – ವಿಶ್ವದಾಖಲೆ ಬರೆದ ಇಂಡಿಗೋ

    ದೈತ್ಯ ಟೈಟಾನಿಕ್ ಹಡಗು 1912ರಲ್ಲಿ ತನ್ನ ಮೊದಲ ಪ್ರಯಾಣದಲ್ಲೇ ಮಂಜುಗಡ್ಡೆಗೆ ಡಿಕ್ಕಿ ಹೊಡೆದು ಅಟ್ಲಾಂಟಿಕ್ ಸಾಗರದಲ್ಲಿ ಮುಳುಗಿತು. ಈ ದುರಂತದಲ್ಲಿ 1,500ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು. ಈ ಹಡಗಿನ ಅವಶೇಷವನ್ನು 1985ರಲ್ಲಿ ಕಂಡುಹಿಡಿಯಲಾಯಿತು. ಅಟ್ಲಾಂಟಿಕ್‌ನ ಆಳದಲ್ಲಿರುವ ಈ ಅವಶೇಷವನ್ನು ಅಂದಿನಿಂದ ಇಂದಿನವರೆಗೂ ವ್ಯಾಪಕವಾಗಿ ಪರಿಶೋಧಿಸಲಾಗುತ್ತಿದೆ. ಇದನ್ನೂ ಓದಿ: ಶತಮಾನ ಪೂರೈಸಿದ ಗೀತಾ ಪ್ರೆಸ್‌ಗೆ ಗಾಂಧಿ ಶಾಂತಿ ಪ್ರಶಸ್ತಿ – ಸಾವರ್ಕರ್, ಗೋಡ್ಸೆಗೆ ನೀಡಿದಂತೆ ಎಂದು ಕಾಂಗ್ರೆಸ್ ಕಿಡಿ