Tag: ಜಲಪಾತ

  • ಜೋಗ ಜಲಪಾತದ ಬುಡದಲ್ಲಿ ಪತ್ತೆಯಾದ ಸ್ಪೈಡರ್ ಮ್ಯಾನ್ ಕೋತಿರಾಜ್

    ಜೋಗ ಜಲಪಾತದ ಬುಡದಲ್ಲಿ ಪತ್ತೆಯಾದ ಸ್ಪೈಡರ್ ಮ್ಯಾನ್ ಕೋತಿರಾಜ್

    ಶಿವಮೊಗ್ಗ: ಜೋಗ ಜಲಪಾತದ ಬುಡದಲ್ಲಿ ನಾಪತ್ತೆಯಾಗಿದ್ದ ಸ್ಪೈಡರ್ ಮ್ಯಾನ್ ಜ್ಯೋತಿರಾಜ್ ಇಂದು ಪತ್ತೆಯಾಗಿದ್ದಾರೆ.

    ಇಂದು 8 ಗಂಟೆಯಿಂದ ಜ್ಯೋತಿರಾಜ್ ಗಾಗಿ ಪತ್ತೆ ಕಾರ್ಯಾಚರಣೆ ಆರಂಭವಾಗಿತ್ತು. ಜಲಪಾತದ ಕೆಳಗೆ ಅಗ್ನಿಶಾಮಕ ದಳ ಮತ್ತು ಸಾಗರ, ಸಿದ್ದಾಪುರ ಪೊಲೀಸರು ಕಾರ್ಯಚರಣೆ ನಡೆಸುತ್ತಿದ್ದರು. ಕೋತಿರಾಜ್ ಪತ್ತೆಗೆ ಡ್ರೋನ್ ಕ್ಯಾಮೆರಾ ಕೂಡ ಬಳಸಿದ್ದರು.

    ಜ್ಯೋತಿರಾಜ್ ಪೆಟ್ಟು ಬಿದ್ದು ಜಲಪಾತದ ನಡುವಿನ ಬಂಡೆಗಳ ನಡುವೆ ಸಿಲುಕಿಕೊಂಡಿದ್ದರು. ಕೈಗೆ ಗಾಯವಾಗಿ ಬಂಡೆ ಬಳಿಯ ಪೊಟರೆಯಲ್ಲಿ ಕುಳಿತಿದ್ದರು. ಡ್ರೋನ್ ಕ್ಯಾಮೆರಾ ಮೂಲಕ ಬಂಡೆಗಳಲ್ಲಿ ಸಿಲುಕಿಕೊಂಡಿದ್ದ ಜ್ಯೋತಿರಾಜ್ ಪತ್ತೆಯಾಗಿದ್ದಾರೆ. ಅಗ್ನಿಶಾಮಕ ದಳ ಸಿಬ್ಬಂದಿ ಬಂಡೆಗಳಲ್ಲಿ ಸಿಲುಕಿಕೊಂಡಿದ್ದ ಜ್ಯೋತಿರಾಜ್ ರನ್ನು ರಕ್ಷಣೆ ಮಾಡಿ ಕರೆತಂದಿದ್ದಾರೆ. ಅಗ್ನಿಶಾಮಕ ದಳ, ಸಾಗರ ಮತ್ತು ಸಿದ್ದಾಪುರ ಪೊಲೀಸರು, ಕೋತಿ ರಾಜ್ ತಂಡದವರು ಮತ್ತು ಸ್ಥಳೀಯರು ಸೇರಿ ಐವತ್ತಕ್ಕೂ ಹೆಚ್ಚು ಜನ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಇದನ್ನು ಓದಿ: ನಾನು ಜೀವಂತವಾಗಿ ವಾಪಸ್ ಬರ್ತೀನೋ ಇಲ್ವೋ ಗೊತ್ತಿಲ್ಲ- ಜೋಗಕ್ಕೆ ತೆರಳುವ ಮುನ್ನ ಸೆಲ್ಫೀ ವಿಡಿಯೋ ಮಾಡಿದ್ದ ಕೋತಿರಾಜ್..

    ಮೂರು ದಿನಗಳ ಹಿಂದೆ ಬೆಂಗಳೂರಿನ ರಾಮಗೊಂಡನಹಳ್ಳಿಯ ಯುವಕನೊಬ್ಬ ಜೋಗ ಜಲಪಾತದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಎನ್ನಲಾಗಿತ್ತು. ಆದರೆ ಯುವಕನ ಮೃತದೇಹ ಪತ್ತೆಯಾಗಿರಲಿಲ್ಲ. ಹೀಗಾಗಿ ಯುವಕನ ಶವ ಹುಡುಕಲು ಬಂದಿದ್ದ ಜ್ಯೋತಿರಾಜ್ ಮಂಗಳವಾರ ಮಧ್ಯಾಹ್ನ ಸುಮಾರು 3 ಗಂಟೆಗೆ ಜಲಪಾತಕ್ಕೆ ಇಳಿದಿದ್ದರು. ಇದನ್ನು ಓದಿ: ಸ್ಪೈಡರ್ ಮ್ಯಾನ್ ಖ್ಯಾತಿಯ ಕೋತಿ ರಾಜ್ ಜೋಗದಲ್ಲಿ ನಾಪತ್ತೆ

     

     

  • ಕಾಲು ಜಾರಿ ಗಗನಚುಕ್ಕಿ ಜಲಪಾತದೊಳಗೆ ಬಿದ್ದು 2 ದಿನ ಬಂಡೆ ಮೇಲೆ ಕಾಲ ಕಳೆದ ವ್ಯಕ್ತಿಯ ರಕ್ಷಣೆ

    ಕಾಲು ಜಾರಿ ಗಗನಚುಕ್ಕಿ ಜಲಪಾತದೊಳಗೆ ಬಿದ್ದು 2 ದಿನ ಬಂಡೆ ಮೇಲೆ ಕಾಲ ಕಳೆದ ವ್ಯಕ್ತಿಯ ರಕ್ಷಣೆ

    ಮಂಡ್ಯ: ಪ್ರವಾಸಕ್ಕೆ ಬಂದಿದ್ದ ವೇಳೆ ಕಾಲು ಜಾರಿ ಜಲಪಾತದೊಳಗೆ ಬಿದ್ದ ವ್ಯಕ್ತಿಯೊಬ್ಬರು ಎರಡು ದಿನ ಬಂಡೆಯ ಮೇಲೆ ಕಾಲಕಳೆದಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.

     

    ಜಿಲ್ಲೆಯ ಮಳವಳ್ಳಿ ತಾಲೂಕಿನ ಗಗನಚುಕ್ಕಿ ಜಲಪಾತದಲ್ಲಿ ಈ ಘಟನೆ ನಡೆದಿದೆ. ಬೆಂಗಳೂರು ಮೂಲದ 37 ವರ್ಷದ ಖಾದರ್ ಕಳೆದ ಶನಿವಾರ ಗಗನಚುಕ್ಕಿಗೆ ಬಂದಿದ್ರು. ಈ ವೇಳೆ ಕಾಲುಜಾರಿ ಕೆಳಗೆ ಬಿದ್ದಿದ್ದಾರೆ.

    ಮೇಲಿಂದ ಬಿದ್ದ ರಭಸಕ್ಕೆ ಇವರ ಎಡಗೈ, ಕಾಲು ಮುರಿದು ಮೂರ್ಛೆ ತಪ್ಪಿದ್ದಾರೆ. ನಂತರ ಕಣ್ಣು ಬಿಟ್ಟು ನೋಡಿದಾಗ ಕತ್ತಲಾಗಿತ್ತು. ಎರಡು ದಿನ ಕೂಗಿಕೊಂಡರೂ, ಯಾರೊಬ್ಬರಿಗೂ ಇವರ ಚೀರಾಟ ಕೇಳಿಸಿಲ್ಲ.

    ಖಾದರ್ ನೀರನ್ನೇ ಕುಡಿದು ಎರಡು ದಿನ ಕಾಲ ಕಳೆದಿದ್ದಾರೆ. ಇಂದು ಪ್ರವಾಸಿಗರು ಬಂದಿರೋದನ್ನ ಗಮನಿಸಿದ ಖಾದರ್, ತಾನು ಹಾಕಿಕೊಂಡಿದ್ದ ಕೆಂಪು ಬಟ್ಟೆಯನ್ನ ತೋರಿಸಿ ಕೂಗಿಕೊಂಡಿದ್ದಾರೆ.

    ಇದನ್ನ ಗಮನಿಸಿದ ಸಾರ್ವಜನಿಕರು ಈ ಮಾಹಿತಿಯನ್ನ ಬೆಳಕವಾಡಿ ಪೊಲೀಸರಿಗೆ ನೀಡಿದ್ದಾರೆ. ನಂತರ ಸ್ಥಳಕ್ಕೆ ಬಂದ ಪೊಲೀಸರು, ನುರಿತರನ್ನು ಜಲಪಾತದ ಕೆಳಕ್ಕೆ ಇಳಿಸಿ ಸುಮಾರು ಎರಡು ಗಂಟೆ ಕಾರ್ಯಾಚರಣೆ ನಡೆಸಿ ಖಾದರ್ ಅವರನ್ನ ರಕ್ಷಣೆ ಮಾಡಿದ್ದಾರೆ.

  • ಚನ್ನಗಿರಿ ಬೆಟ್ಟದಲ್ಲಿ ಸೆಲ್ಫಿ ದುರಂತ: ಜಲಪಾತದಿಂದ ನೂರು ಅಡಿ ಆಳಕ್ಕೆ ಬಿದ್ದು ವಿದ್ಯಾರ್ಥಿ ಸಾವು

    ಚನ್ನಗಿರಿ ಬೆಟ್ಟದಲ್ಲಿ ಸೆಲ್ಫಿ ದುರಂತ: ಜಲಪಾತದಿಂದ ನೂರು ಅಡಿ ಆಳಕ್ಕೆ ಬಿದ್ದು ವಿದ್ಯಾರ್ಥಿ ಸಾವು

    ಚಿಕ್ಕಬಳ್ಳಾಪುರ: ಸೆಲ್ಫಿ ತೆಗೆಯುವಾಗ ಜಲಪಾತದಿಂದ ನೂರು ಅಡಿ ಆಳಕ್ಕೆ ಆಯತಪ್ಪಿ ಬಿದ್ದು ಕಾಲೇಜು ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕು ಬಳಿಯ ಚನ್ನಗಿರಿ ಬೆಟ್ಟದಲ್ಲಿ ನಡೆದಿದೆ.

    ವಿಶ್ವವಿಖ್ಯಾತ ನಂದಿಗಿರಿಧಾಮ ಪಕ್ಕದ ಚನ್ನಗಿರಿ ಬೆಟ್ಟದಲ್ಲಿ ಕಳೆದ ಒಂದು ತಿಂಗಳಿನಿಂದ ಜಲಪಾತ ಸೃಷ್ಟಿಯಾಗಿದ್ದು, ಜಲಪಾತ ನೋಡಲು ಬಂದಿದ್ದ ಕಾಲೇಜು ವಿದ್ಯಾರ್ಥಿಯೊಬ್ಬ ಸೆಲ್ಫಿ ಕ್ರೇಜ್ ಗೆ ಬಲಿಯಾಗಿದ್ದಾನೆ. ದೊಡ್ಡಬಳ್ಳಾಪುರ ಪ್ರಥಮ ದರ್ಜೆ ಕಾಲೇಜಿನ ಅಂತಿಮ ವರ್ಷದ ಬಿಕಾಂ ಓದುತ್ತಿದ್ದ ನವೀನ್ (23) ಮೃತ ವಿದ್ಯಾರ್ಥಿ.

    ಕಾಲೇಜು ವಿದ್ಯಾರ್ಥಿಗಳೊಂದಿಗೆ ಚನ್ನಗಿರಿ ಬೆಟ್ಟದ ಫಾಲ್ಸ್ ಗೆ ಆಗಮಿಸಿದ್ದ ನವೀನ್ ಅಲ್ಲೇ ನೀರಿನಲ್ಲಿ ಆಟವಾಡುತ್ತ, ಅರ್ಧ ಮಟ್ಟ ಏರಿ ಅಲ್ಲಿ ಸೆಲ್ಫಿ ತೆಗೆಯಲು ಮುಂದಾಗಿದ್ದಾನೆ. ಈ ವೇಳೆ ಪಾಚಿ ಕಟ್ಟಿದ ಕಲ್ಲಿನ ಮೇಲೆ ಕಾಲಿಟ್ಟ ಪರಿಣಾಮ ಆಯತಪ್ಪಿ ಜಲಪಾತದಿಂದ ನೂರು ಅಡಿ ಆಳದ ಕೆಳಕ್ಕೆ ಬಿದ್ದು ನವೀನ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

    ಈ ಸಂಬಂಧ ನಂದಿಗಿರಿಧಾಮ ಪೊಲೀಸ್ ಠಾಣಾದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನೂ ಈ ಮಳೆಗಾಲ ಆರಂಭದ ನಂತರ ಈ ಜಲಪಾತ ಆರಂಭವಾಗಿದ್ದು, ಜಲಪಾತ ನೋಡಲು ಪ್ರತಿದಿನ ನೂರಾರು ಮಂದಿ ಚನ್ನಗಿರಿ ಬೆಟ್ಟಕ್ಕೆ ಲಗ್ಗೆಯಿಡುತ್ತಿದ್ದಾರೆ. ಇದರಿಂದ ಕಳೆದ ಒಂದು ತಿಂಗಳಲ್ಲೇ 3  ಮಂದಿ ಮೃತಪಟ್ಟಿದ್ದಾರೆ ಅಂತ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದು, ಸಂಬಂಧಪಟ್ಟ ಇಲಾಖೆಯವರು ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

     

  • ಚೇಲಾವರ ಜಲಪಾತದಲ್ಲಿ ಮುಳುಗಿದ್ದ ಬೆಂಗಳೂರು ಎಂಜಿನಿಯರಿಂಗ್ ವಿದ್ಯಾರ್ಥಿಯ ಶವ ಪತ್ತೆ

    ಚೇಲಾವರ ಜಲಪಾತದಲ್ಲಿ ಮುಳುಗಿದ್ದ ಬೆಂಗಳೂರು ಎಂಜಿನಿಯರಿಂಗ್ ವಿದ್ಯಾರ್ಥಿಯ ಶವ ಪತ್ತೆ

    ಮಡಿಕೇರಿ: ಸ್ನೇಹಿತರೊಂದಿಗೆ ನರಿಯಂದಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಚೇಲಾವರ ಜಲಪಾತ ವೀಕ್ಷಣೆಗೆ ತೆರಳಿ ಸಾವನ್ನಪ್ಪಿದ್ದ ಬೆಂಗಳೂರಿನ ಎಂಜಿನಿಯರಿಂಗ್ ವಿದ್ಯಾರ್ಥಿಯ ಮೃತದೇಹ ಇಂದು ಪತ್ತೆಯಾಗಿದೆ.

    ಕೂಡಗು ಮೂಲದ ಜೆಪಿ ನಗರದಲ್ಲಿ ನೆಲೆಸಿರುವ ಕಾವೇರಪ್ಪ ಅವರ ಪುತ್ರ ದರ್ಶನ್ (22) ಜಲಪಾತದಲ್ಲಿ ಈಜಲು ಹೋಗಿ ಆಕಸ್ಮಿಕವಾಗಿ ಮೃತಪಟ್ಟಿದ್ದ. ಬೆಂಗಳೂರಿನ ಕೆಎಸ್‍ಐಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ದರ್ಶನ್ ನಾಲ್ವರು ಸ್ನೇಹಿತರೊಂದಿಗೆ ಮಡಿಕೇರಿ ದಸರಾ ವೀಕ್ಷಣೆಗೆಂದು ಕೊಡಗಿಗೆ ಬಂದು, ಭಾನುವಾರ ಮಧ್ಯಾಹ್ನ ಚೇಲಾವರ ಜಲಪಾತ ವೀಕ್ಷಣೆಗೆ ತೆರಳಿದ್ದ.

    ಜಲಪಾತದಲ್ಲಿ ಸ್ನೇಹಿತರೊಂದಿಗೆ ಈಜಲು ತೆರಳಿದ್ದ ದರ್ಶನ್ ಕಾಲುಜಾರಿ ಜಲಪಾತದ ಸುಳಿಯಲ್ಲಿ ಸಿಲುಕಿಕೊಂಡಿದ್ದ. ನೀರಿನ ರಭಸಕ್ಕೆ ಮೇಲೆ ಬಾರದೇ ಜಲಪಾತದಲ್ಲಿ ಮುಳುಗಿ ಮೃತಪಟ್ಟಿದ್ದ. ದರ್ಶನ್ ನೀರಿನಲ್ಲಿ ಮುಳುಗಿದ್ದ ಸುದ್ದಿಯನ್ನು ಸ್ನೇಹಿತರು ಗ್ರಾಮಸ್ಥರಿಗೆ ತಿಳಿಸಿದ್ದರು.

    ಸ್ಥಳಕ್ಕೆ ಆಗಮಿಸಿದ ನಾಪೋಕ್ಲು ಠಾಣೆ ಪೊಲೀಸರ ಶವಕ್ಕಾಗಿ ಭಾನುವಾರ ಹುಡುಕಾಟ ನಡೆಸಿದ್ದರು. ಆದರೆ ಜಲಪಾತದಲ್ಲಿ ನೀರಿನ ರಭಸ ಹೆಚ್ಚಿದ್ದ ಹಿನ್ನೆಲೆಯಲ್ಲಿ ಶವ ಸಿಕ್ಕಿರಲಿಲ್ಲ. ಇಂದು ಬೆಳಗ್ಗೆಯಿಂದ ಮೃತ ದೇಹಕ್ಕಾಗಿ ಗ್ರಾಮಸ್ಥರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಶೋಧ ಕಾರ್ಯ ನಡೆಸಿ ದರ್ಶನ್ ಮೃತದೇಹವನ್ನು ಹೊರಗೆ ತೆಗೆದಿದ್ದಾರೆ.

  • ವಿಡಿಯೋ: ಜಲಪಾತದಲ್ಲಿ ಈಜಲು ಹೋಗಿ ನೀರಲ್ಲಿ ಕೊಚ್ಚಿ ಹೋಗಿದ್ದ 6 ಯುವಕರ ರಕ್ಷಣೆ

    ವಿಡಿಯೋ: ಜಲಪಾತದಲ್ಲಿ ಈಜಲು ಹೋಗಿ ನೀರಲ್ಲಿ ಕೊಚ್ಚಿ ಹೋಗಿದ್ದ 6 ಯುವಕರ ರಕ್ಷಣೆ

    ರಾಯಚೂರು: ಲಿಂಗಸುಗೂರು ತಾಲೂಕಿನ ಗೋಲಪಲ್ಲಿ ಬಳಿಯ ಗುಂಡಲಬಂಡೆ ಜಲಪಾತದಲ್ಲಿ ಈಜಲು ಹೋಗಿ ನೀರಿನಲ್ಲಿ ಕೊಚ್ಚಿ ಹೋಗಿದ್ದ 6 ಜನರನ್ನ ರಕ್ಷಿಸಲಾಗಿದೆ.

    ನಾರಾಯಣಪುರ ಬಲದಂಡೆ ಕಾಲುವೆ ಬಸಿ ನೀರು ಹಳ್ಳಕ್ಕೆ ಹರಿದು ಸೃಷ್ಟಿಯಾಗಿರುವ ಜಲಪಾತ ಈಗ ಧುಮ್ಮಿಕ್ಕಿ ಹರಿಯುತ್ತಿದೆ. ನೀರಿನ ಸೆಳೆತ ಅರಿಯದೆ ಈಜಲು ಮುಂದಾಗಿದ್ದ 8 ಜನರಲ್ಲಿ 6 ಜನ ಕೊಚ್ಚಿ ಹೋಗಿದ್ದರು. ಸ್ಥಳೀಯರ ಸಮಯ ಪ್ರಜ್ಞೆಯಿಂದ ಪೊಲೀಸ್ ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ರಕ್ಷಣಾಕಾರ್ಯ ಯಶಸ್ವಿಯಾಗಿ ಮಾಡಿದ್ದಾರೆ.

    ಯಾದಗಿರಿಯ ಸುರಪುರ ತಾಲೂಕಿನ ದ್ಯಾಮನಾಳ ಗ್ರಾಮದ ನಿವಾಸಿಗಳಾದ ಯುವಕರು ಜಲಪಾತ ನೋಡಲು ಬಂದು ಅಪಾಯದಲ್ಲಿ ಸಿಲುಕಿದ್ದರು. ಮಳೆ ಹಾಗೂ ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ ಹೆಚ್ವಿನ ಪ್ರಮಾಣದ ನೀರನ್ನ ಹರಿಸಿರುವುದರಿಂದ ಜಲಪಾತದಲ್ಲಿ ನೀರು ಹೆಚ್ಚಾಗಿದೆ.

    ಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಈಗ ಜಲಪಾತ ಸುತ್ತಮುತ್ತ ಕಟ್ಟೆಚ್ಚರ ವಹಿಸಲಾಗಿದೆ.

    https://www.youtube.com/watch?v=02193KAHz_Q

  • ಬೇಸಿಗೆಯಲ್ಲೂ ಧುಮ್ಮಿಕ್ಕಿ ಹರಿಯುತ್ತಿದೆ ರಾಯಚೂರಿನ ಗುಂಡಲಬಂಡೆ ಜಲಪಾತ

    ಬೇಸಿಗೆಯಲ್ಲೂ ಧುಮ್ಮಿಕ್ಕಿ ಹರಿಯುತ್ತಿದೆ ರಾಯಚೂರಿನ ಗುಂಡಲಬಂಡೆ ಜಲಪಾತ

    ಪ್ರವಾಸಿಗರನ್ನ ಕೈಬೀಸಿ ಕರೆಯುತ್ತಿರುವ ಜಲಪಾತಕ್ಕೆ ದಾರಿಯೇ ಇಲ್ಲ

    -ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಕಾನನ ಮರೆಯಲ್ಲೇ ಉಳಿದ ಜಲಸೊಬಗು

    ವಿಜಯ್ ಜಾಗಟಗಲ್

    ರಾಯಚೂರು: ಬಿಸಿಲನಾಡು ರಾಯಚೂರಿನಲ್ಲಿ ಬೇಸಿಗೆಯ ಬಿಸಿಲ ಬೇಗೆ ಜನರನ್ನ ಆಗಲೇ ತತ್ತರಿಸುವಂತೆ ಮಾಡಿದೆ. ಕುಡಿಯುವ ನೀರಿನ ಸಮಸ್ಯೆಯಿಂದ ಜಿಲ್ಲೆಯ ಜನ ಪರದಾಡುತ್ತಿದ್ದಾರೆ. ಬರಗಾಲದಿಂದ ಹಳ್ಳ,ಕೊಳ್ಳ,ಕೆರೆಗಳು ಬತ್ತಿವೆ. ಇಷ್ಟಾದ್ರೂ ರಾಯಚೂರಿನಲ್ಲೊಂದು ಜೀವಂತ ಜಲಪಾತ ಧುಮ್ಮಿಕ್ಕಿ ಹರಿಯುವ ಮೂಲಕ ಅಚ್ಚರಿ ಮೂಡಿಸಿದೆ.

    ಕಲ್ಲು ಬಂಡೆಗಳ ಮೈಮೇಲೆ ಮೆಲ್ಲನೆ ಹರಿದು ರಮಣೀಯ ದೃಶ್ಯಕಾವ್ಯ ಸೃಷ್ಠಿಸಿರುವ ಇಲ್ಲಿನ ಜಲಸೋಬಗನ್ನ ನೋಡಿದ್ರೆ ಒಂದು ಕ್ಷಣ ಮಲೆನಾಡಿನ ಪ್ರಕೃತಿ ಸೌಂದರ್ಯದ ಚಿತ್ರಗಳು ಕಣ್ಮುಂದೆ ಬರದೇ ಇರಲ್ಲ. ಇದು ಬರಗಾಲದಿಂದ ತತ್ತರಿಸಿರುವ ಬಿರುಬೇಸಿಗೆಯ ನಾಡು ರಾಯಚೂರು ಜಿಲ್ಲೆಯ ಗುಂಡಲಬಂಡೆ ಜಲಪಾತ ಅನ್ನೋ ಸತ್ಯ ಮಾತ್ರ ನಿಜಕ್ಕೂ ಅಚ್ಚರಿ ತರಿಸುತ್ತೆ. ಲಿಂಗಸುಗೂರು ತಾಲೂಕಿನ ಗೋಲಪಲ್ಲಿ ಗ್ರಾಮದ ಬಳಿಯಿರುವ ಈ ಜಲಪಾತದ ಬಂಡೆಯೊಂದಕ್ಕೆ ಸಿಡಿಲು ಬಡಿದಿದ್ದರಿಂದ ‘ಸಿಡಿಲುಬಂಡೆ’ ಜಲಪಾತ ಅಂತಲೂ ಕರೆಯುತ್ತಾರೆ.

    ಹತ್ತು ವರ್ಷಗಳಿಂದ ಬೆಳಕಿಗೆ ಬರುತ್ತಿರುವ ಈ ಜಲಪಾತ ಮೊದಲು ಸಣ್ಣದಾಗಿ ಹರಿಯುತ್ತಿತ್ತು. ನಾರಾಯಣಪುರ ಬಲದಂಡೆ ಕಾಲುವೆಯ ಬಸಿನೀರು ಸೇರಿಕೊಂಡು ಈಗ ಜಲಪಾತ 90 ಅಡಿ ಮೇಲಿಂದ ಧುಮ್ಮಿಕ್ಕಿ ಹರಿಯುತ್ತಿದೆ. ಇಲ್ಲಿಂದ 10 ಕಿ.ಮೀ ದೂರದಲ್ಲಿ ಐದಾರು ಹಳ್ಳಗಳು ಒಂದೆಡೆ ಸೇರುವ ಸ್ಥಳದಿಂದ ಉಗಮವಾಗುವ ಜಲಪಾತದ ಮೂಲ ಪುನಃ ಹಳ್ಳಗಳ ಮೂಲಕ ಹರಿದು ಕೃಷ್ಣಾನದಿಗೆ ಸೇರುತ್ತಿದೆ. ಆದ್ರೆ ಇಲ್ಲೊಂದು ಸುಂದರ ಜಲಪಾತವಿದೆ ಅಂತ ಜಿಲ್ಲೆಯ ಎಷ್ಟೋ ಜನರಿಗೇ ಗೊತ್ತೇ ಇಲ್ಲಾ.

    ಜಲಪಾತದ ಇರುವು ಇನ್ನೂ ಪ್ರವಾಸೋದ್ಯಮ ಇಲಾಖೆ ಗಮನಕ್ಕೂ ಬಂದಿಲ್ಲ. ಕಾಡಿನ ಮಧ್ಯೆ ದುರ್ಗಮ ರಸ್ತೆಯಲ್ಲಿ ತೆರಳಿದರೆ ಸಿಗುವ ಜಲಪಾತದ ಬಳಿ ಹೋಗುವುದೇ ಒಂದು ಸಾಹಸವಾಗಿರುವುದರಿಂದ ಪ್ರವಾಸಿಗರು ಬೇಸರಗೊಂಡಿದ್ದಾರೆ. ಜಿಲ್ಲೆಯ ಏಕೈಕ ಸುಂದರ ಪ್ರವಾಸಿ ಸ್ಥಳವಾಗಿರುವ ಗುಂಡಲಬಂಡೆ ಜಲಪಾತ ಪ್ರದೇಶದ ಅಭಿವೃದ್ದಿ ಅವಶ್ಯವಾಗಿದೆ. ಅಲ್ಲದೆ ಎತ್ತರದಿಂದ ನೀರು ಧುಮ್ಮುಕ್ಕುವುದರಿಂದ ವಿದ್ಯುತ್ ಉತ್ಪಾದನೆಗೂ ಅವಕಾಶಗಳಿವೆ.

    ಭಾನುವಾರ ಹಾಗೂ ರಜಾ ದಿನಗಳಲ್ಲಿ ಕಾಲೇಜು ವಿದ್ಯಾರ್ಥಿಗಳು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಬರುತ್ತಾರೆ. ಕಾಡಿನಲ್ಲಿ ಒಂದೂವರೆ ಕಿ.ಮೀ ದುರ್ಗಮ ದಾರಿ ಬಳಿಕ ಸಿಗುವ ಈ ಜಲಪಾತ ಬಂಡೆಗಳ ಗುಡ್ಡದಲ್ಲಿ ಹರಿಯುವುದರಿಂದ ಇಲ್ಲಿನ ಕಲ್ಲುಗಳು ಜಾರುತ್ತವೆ. ಅಲ್ಲದೆ ಅಲ್ಲಲ್ಲಿ ಅಪಾಯದ ಸ್ಥಳಗಳಿವೆ, ಮೊದಲಬಾರಿ ಇಲ್ಲಿಗೆ ಬರುವವರು ಮುನ್ನೆಚ್ಚರಿಕೆಯಿಲ್ಲದೆ ಓಡಾಡಿದರೆ ಅಪಾಯ ಕಟ್ಟಿಟ್ಟಬುತ್ತಿ. ಹೀಗಾಗಿ ಪ್ರವಾಸಿಗರಿಗೆ ಇಲ್ಲಿ ಜಲಪಾತದ ಕುರಿತ ನಾಮಫಲಕಗಳನ್ನ ಅಳವಡಿಸಬೇಕಿದೆ.

    ಜಿಲ್ಲೆಯ ಶಾಸಕರು, ಸಂಸದರು ಪ್ರಸ್ತಾವನೆ ಸಲ್ಲಿಸಿದರೆ ಜಲಪಾತ ಅಭಿವೃದ್ದಿಗೆ ಮುಂದಾಗುತ್ತೇವೆ ಅಂತ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಶಿವಲಿಂಗಪ್ಪ ಹೇಳುತ್ತಿದ್ದಾರೆ. ಆದ್ರೆ ಜಿಲ್ಲೆಯ ಜನಪ್ರತಿನಿಧಿಗಳಲ್ಲಿನ ಇಚ್ಚಾಶಕ್ತಿ ಕೊರತೆಯಿಂದ ಸುಂದರ ತಾಣವೊಂದು ಜನರಿಂದ ದೂರ ಉಳಿದಿದೆ. ಕನಿಷ್ಠ ಈಗಲಾದ್ರೂ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಎಚ್ಚೆತ್ತು ಜಲಪಾತ ಅಭಿವೃದ್ದಿಗೆ ಮುಂದಾಗಬೇಕಿದೆ. ಜಿಲ್ಲೆಯ ಏಕೈಕ ಪ್ರವಾಸಿ ತಾಣವನ್ನ ಅಭಿವೃದ್ಧಿ ಪಡಿಸಬೇಕಿದೆ.