Tag: ಜಲಪಾತ

  • ಬಚ್ಚನ್ ಹೆಸರಿನಲ್ಲೊಂದು ಫಾಲ್ಸ್- ಹೆಸರಿಟ್ಟ ಕಾರಣ ಕೇಳಿ ನಕ್ಕ ಬಿಗ್ ಬಿ

    ಬಚ್ಚನ್ ಹೆಸರಿನಲ್ಲೊಂದು ಫಾಲ್ಸ್- ಹೆಸರಿಟ್ಟ ಕಾರಣ ಕೇಳಿ ನಕ್ಕ ಬಿಗ್ ಬಿ

    ಮುಂಬೈ: ದೊಡ್ಡ ಸ್ಟಾರ್ ಕಲಾವಿದರ ನೆನಪಿಗಾಗಿ ಕೆಲ ಸ್ಥಳಗಳಿಗೆ ಅವರ ಹೆಸರನ್ನು ನಾಮಕಾರಣ ಮಾಡಲಾಗುತ್ತದೆ. ಸಿನಿಮಾ ತಾರೆಯರ ಅಭಿಮಾನಿಗಳು ತಮ್ಮ ನೆಚ್ಚಿನ ನಟರ ಮೂರ್ತಿಗಳನ್ನ ಪ್ರಮುಖ ಸ್ಥಳಗಳಲ್ಲಿ ಸ್ಥಾಪಿಸುತ್ತಾರೆ. ದೊಡ್ಡ ನಗರಗಳಲ್ಲಿ ಪ್ರಮುಖ ರಸ್ತೆಗಳಿಗೆ ನಟರ ಹೆಸರು ನಾಮಕರಣ ಮಾಡುವ ಮೂಲಕ ಸರ್ಕಾರಗಳು ಗೌರವ ಸೂಚಿಸುತ್ತವೆ. ಬಾಲಿವುಡ್ ನ ಬಿಗ್ ಬಿ ಎಂದೇ ಗುರುತಿಸಿಕೊಳ್ಳುವ ನಟ ಅಮಿತಾಬ್ ಬಚ್ಚನ್ ಹೆಸರಿನಲ್ಲೊಂದು ಫಾಲ್ಸ್ ಇದೆ. ಈ ವಿಷಯ ಬಚ್ಚನ್ ಅವರಿಗೆ ಶುಕ್ರವಾರ ತಿಳಿದಿದೆ.

    ಶುಕ್ರವಾರ ಅಮಿತಾಬ್ ಬಚ್ಚನ್ ಟ್ವೀಟ್ ಒಂದನ್ನು ರೀಟ್ವೀಟ್ ಮಾಡಿಕೊಂಡಿದ್ದರು. ಟ್ವೀಟ್ ನಲ್ಲಿ ಮೂವರು ಫಾಲ್ಸ್ ಮುಂದೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡು, ಅಮಿತಾಬ್ ಬಚ್ಚಬ್ ಒಂದು ಬಾರಿ ಈ ಸ್ಥಳಕ್ಕೆ ಭೇಟಿ ನೀಡಬೇಕೆಂದು ಬರೆದುಕೊಂಡಿದ್ದರು. ಕೆಳಗಡೆ ಸ್ಥಳ ಅಮಿತಾಬ್ ಬಚ್ಚನ್ ಫಾಲ್ಸ್ ಎಂದು ಬರೆಯಲಾಗಿತ್ತು. ಜಲಪಾತಕ್ಕೆ ತಮ್ಮ ಹೆಸರು ಇದೆಯಾ? ಇದು ನಿಜಾನಾ ಎಂದು ಬಿಗ್ ಬಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

    ಎಲ್ಲಿದೆ ಜಲಪಾತ?
    ಸಿಕ್ಕಿಂ ರಾಜ್ಯದ ಲಾಚುಂಗ್ ಪ್ರದೇಶದ ಚುಂಗ್‍ಥಾಕ್ ಮತ್ತು ಯುಮ್‍ಥಾಂಗ್ ಕಣಿವೆ ನಡುವೆ ಈ ಜಲಪಾತವಿದೆ. ಲಾಚುಂಗ್ ಪ್ರದೇಶದ 14 ಕಿ.ಮೀ. ದೂರದಲ್ಲಿ ಅಮಿತಾಬ್ ಬಚ್ಚನ್ ಫಾಲ್ಸ್ ಇದೆ. ಈ ಜಲಪಾತದ ಹೆಸರು ಭೀಮಾ ನಾಲಾ ಫಾಲ್ಸ್ ಅಂತಾ ಇದ್ದರೂ, ಅತಿ ಎತ್ತರವಾಗಿ ನೀರು ಧುಮ್ಮಿಕ್ಕಿ ಬೀಳುವದರಿಂದ ಸ್ಥಳೀಯರು ಅಮಿತಾಬ್ ಬಚ್ಚನ್ ಜಲಪಾತ ಎಂದು ಕರೆಯುತ್ತಾರೆ. ಸ್ಥಳೀಯವಾಗಿ ಈ ಜಲಪಾತವನ್ನು ಅಮಿತಾಬ್ ಬಚ್ಚನ್ ಫಾಲ್ಸ್ ಎಂದು ಕರೆಯಲಾಗುತ್ತದೆ.

  • ಕಾಫಿನಾಡಿನಲ್ಲಿದೆ ಸುಂದರ ಪ್ರವಾಸಿ ತಾಣ ಸೀತಾವನ- ವಿಶೇಷತೆ ಏನು..?

    ಕಾಫಿನಾಡಿನಲ್ಲಿದೆ ಸುಂದರ ಪ್ರವಾಸಿ ತಾಣ ಸೀತಾವನ- ವಿಶೇಷತೆ ಏನು..?

    ಚಿಕ್ಕಮಗಳೂರು: ಕಾಫಿನಾಡನಲ್ಲಿ ವಿಶಿಷ್ಟ ಜಾಗವೊಂದಿದೆ. ಅಲ್ಲಿ ಎಂದಿಗೂ ನೀರು ಹರಿಯುವುದು ನಿಂತಿಲ್ಲ. ಹಾಗೆಯೇ ಎಂತಹ ಮಳೆಗಾಲ ಬಂದ್ರೂ ಇಲ್ಲಿ ನೀರು ಜಾಸ್ತಿಯಾಗಲ್ಲ. ಅದೆಂತದ್ದೇ ಬರ ಬಂದ್ರೂ ನೀರು ಹರಿಯುವುದು ಕಡಿಮೆಯಾಗಲ್ಲ.

    ಹೌದು. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರ ಬಳಿ ಈ ವಿಶಿಷ್ಟ ಜಾಗದ ಹೆಸರೇ ಸೀತಾವನ. ನೋಡೋಕೆ ದೊಡ್ಡ ಜಲಪಾತದಂತಿಲ್ಲದಿದ್ದರು ಈ ವನ ಒಂದು ಸುಂದರ ಪ್ರವಾಸಿ ತಾಣವಾಗಿದೆ. ಯಾಕಂದ್ರೆ, ಈ ಜಾಗದಲ್ಲಿ ನೀವು ಕಲ್ಲು, ನಾಣ್ಯ ಅಥವ ಮರದ ಕೋಲು ಏನನ್ನೇ ಹಾಕಿದರೂ ನಾಲ್ಕೈದು ದಿನದಲ್ಲಿ ಅದರ ಮೇಲೆ ಸುಣ್ಣದ ಅಂಶದಂತೆ ಬೆಳೆಯುತ್ತದೆ. ಹೀಗೆ ಬೆಳೆಯೋದಕ್ಕೂ ಶತಮಾನಗಳ ಆಯಸ್ಸಿದೆ. ರಾಮಾಯಣದ ಕಾಲದಲ್ಲಿ ಸೀತೆ ವನವಾಸದಲ್ಲಿದ್ದಾಗ ಈ ಜಾಗದಲ್ಲಿ ಸ್ನಾನ ಮಾಡಿದ್ದಳು. ಆಗ ಎಲೆ-ಅಡಿಕೆ ಹಾಕಿಕೊಂಡ ಸೀತೆ ಇಲ್ಲಿ ಸುಣ್ಣವನ್ನ ಹಾಕಿದ್ದಳು. ಅಂದಿನಿಂದ ಈ ಜಾಗದಲ್ಲಿ ಏನೇ ವಸ್ತುಬಿದ್ರೂ ಅದರ ಮೇಲೆ ಸುಣ್ಣದ ಅಂಶ ಬೆಳೆಯುತ್ತೆ ಅನ್ನೋದು ಸ್ಥಳೀಯರ ನಂಬಿಕೆ. ಸುತ್ತಲೂ ಕಾಫಿತೋಟದ ಮಧ್ಯದಲ್ಲಿ ಹಂತ ಹಂತವಾಗಿ ಧುಮ್ಮಿಕ್ಕುವ ನೀರು ಘಳಿಗೆಗೊಂದು ಹೊಸ-ಹೊಸ ಸಂಗೀತ ಸೃಷ್ಠಿಸುತ್ತೆ. ಈ ಜಾಗ ಅಷ್ಟಾಗಿ ಪರಿಚಿತವಲ್ಲದಿರೋದರಿಂದ ಸ್ಥಳೀಯ ಪ್ರವಾಸಿ ಪ್ರಿಯರಷ್ಟೆ ಆಗಾಗ ಭೇಟಿ ನೀಡಿ ಎಂಜಾಯ್ ಮಾಡ್ತಾರೆ.

    ಜಯಪುರದಿಂದ ಕೊಪ್ಪ ಹೋಗುವ ಮಾರ್ಗದಲ್ಲಿ ಅಲಗೇಶ್ವರ ಎಸ್ಟೇಟ್ ಮಾರ್ಗದಲ್ಲಿ ಏಳೆಂಟು ಕಿ.ಮೀ. ಸಾಗಿದ್ರೆ ಸೀತಾವನ ಸಿಗುತ್ತದೆ. ಐದನೇ ಶತಮಾನದಲ್ಲಿ ಸೀತೆ ಸ್ನಾನ ಮಾಡಿದಾಗ ಈ ಜಾಗ ಹೇಗಿತ್ತೋ ಇಂದಿಗೂ ಹಾಗೇ ಇದೆ. ನೀರು ಹರಿಯುವ ಜಾಗದ ಸುತ್ತಲೂ ಸುಣ್ಣದಂತೆ ಭಾಸವಾಗುವ ಪಾಚಿ ಬೆಳೆದಿದ್ದು, ತೇವಾಂಶ ಎಷ್ಟೇ ಹೆಚ್ಚಿದ್ರು ಮಣ್ಣು ಜರುಗದಂತೆ ಕಲ್ಲಿನಂತಾಗಿದೆ. ಸುಣ್ಣದ ಅಂಶದಿಂದ ಗಟ್ಟಿಯಾಗಿರುವುದರಿಂದ ಸದಾ ನೀರು ಹರಿಯುತ್ತಿದ್ದರು ಇದರ ಗಾತ್ರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಇಲ್ಲಿ ನೀರು ನಿಂತಿರೋದನ್ನಾಗಲಿ ಅಥವ ಕಡಿಮೆಯಾಗಿರೋದನ್ನಾಗಲಿ ಇಲ್ಲಿವರೆಗೂ ಯಾರೂ ನೋಡಿಲ್ಲ. ವರ್ಷಪೂರ್ತಿ ನೀರು ಇಷ್ಟೇ ಪ್ರಮಾಣದಲ್ಲಿ ಹರಿಯುತ್ತದೆ. ಕಡಿಮೆಯೂ ಆಗಲ್ಲ, ಹೆಚ್ಚು ಆಗಲ್ಲ. ಆದ್ರೆ, ಈ ಜಾಗ ಅಷ್ಟಾಗಿ ಜನಮಾನಸಕ್ಕೆ ಬಂದಿಲ್ಲ. ಸ್ಥಳೀಯರಿಗಷ್ಟೆ ಗೊತ್ತು. ಅಲ್ಲದೆ ತೋಟದ ಮಾಲೀಕರು ಕೂಡ ಯಾವುದೇ ನಿರ್ಬಂಧ ಹೇರದಿರುವುದರಿಂದ ಇಲ್ಲಿ ಪ್ರವಾಸಿಗರಿಗೆ ಮುಕ್ತ ಅವಕಾಶವಿದೆ.

    ಇಲ್ಲಿ ಸೀತೆ ಸ್ನಾನ ಮಾಡಿದಳೋ ಇಲ್ಲವೋ ಗೊತ್ತಿಲ್ಲ. ಸುಣ್ಣ ಹಾಕಿದ್ದಳೋ ಇಲ್ಲವೋ ಅದೂ ಗೊತ್ತಿಲ್ಲ. ಅದನ್ನ ಕಣ್ಣಾರೆ ಕಂಡೋರು ಇಲ್ಲ. ಆದ್ರೆ ಅದೊಂದು ನೂರಾರು ವರ್ಷಗಳಿಂದ ಜನರ ನಂಬಿಕೆಯಷ್ಟೆ. ಆದ್ರೆ, ಇಲ್ಲಿ ಶತಮಾನಗಳಿಂದ ನೀರು ನಿರಂತರವಾಗಿ ಹರಿಯುತ್ತಿರೋದಂತು ಸತ್ಯ. ಸೀತೆಯ ಹೆಸರನ್ನಿಟ್ಟಿಕೊಂಡಿರೋ ಈ ಜಾಗವಂತು ಅದ್ಭುತ. ನೋಡೋಕೆ ತುಸು ಚಿಕ್ಕದಿದ್ದರೂ ಈ ಜಾಗದ ಅನುಭವವೇ ಬೇರೆ. ಹೀಗಾಗಿ ನೆಕ್ಸ್ಟ್ ಟೈಂ ಕಾಫಿನಾಡಿಗೆ ಬಂದಾಗ ಈ ತಾಣವನ್ನ ಮಿಸ್ ಮಾಡ್ಕೋಬೇಡಿ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಲ್ಲಳ್ಳಿ ಜಲಪಾತದಲ್ಲಿ ಈಜಲು ಹೋಗಿ ಬೆಂಗಳೂರಿನ ಖಾಸಗಿ ಕಂಪನಿ ಉದ್ಯೋಗಿ ಸಾವು!

    ಮಲ್ಲಳ್ಳಿ ಜಲಪಾತದಲ್ಲಿ ಈಜಲು ಹೋಗಿ ಬೆಂಗಳೂರಿನ ಖಾಸಗಿ ಕಂಪನಿ ಉದ್ಯೋಗಿ ಸಾವು!

    ಮಡಿಕೇರಿ: ಜಲಪಾತದ ಅಡಿ ಈಜಲು ಹೋಗಿ ಬೆಂಗಳೂರಿನ ಖಾಸಗಿ ಕಂಪನಿ ಉದ್ಯೋಗಿಯೊಬ್ಬ ಮೃತಪಟ್ಟ ಘಟನೆ ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನಲ್ಲಿ ನಡೆದಿದೆ.

    ಮೈಸೂರು ಮೂಲದ ಸ್ಕಂದ(24) ಮೃತ ದುರ್ದೈವಿ. ಸೋಮವಾರಪೇಟೆ ತಾಲೂಕಿನ ಮಲ್ಲಳ್ಳಿ ಜಲಪಾತದಲ್ಲಿ ಘಟನೆ ನಡೆದಿದೆ. ಮೃತ ದೇಹವನ್ನು ಪ್ರವಾಸಿ ಮಿತ್ರ ಸಿಬ್ಬಂದಿ ಪತ್ತೆ ಹಚ್ಚಿ ಜಲಪಾತದಿಂದ ಮೇಲೆ ತೆಗೆದುಕೊಂಡು ಬಂದಿದ್ದಾರೆ.

    ಮೃತ ಯುವಕ ಸ್ಕಂದ ಬೆಂಗಳೂರಿನ ಆಕ್ಸೆಂಚರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ವೀಕೆಂಡ್ ಪ್ರವಾಸಕ್ಕಾಗಿ 11 ಮಂದಿ ಸಹೋದ್ಯೋಗಿಗಳ ಜೊತೆಗೆ ಇಂದು ಮಲ್ಲಳ್ಳಿ ಫಾಲ್ಸ್ ಗೆ ಬಂದಿದ್ದ. ಈ ವೇಳೆ ಜಲಪಾತದ ಅಡಿಯಲ್ಲಿ ನಿಂತಿದ್ದ ನೀರಿಗೆ ಇಳಿದು ಈಜಲು ಹೋದಾಗ ಅಲ್ಲಿಯೇ ಮುಳುಗಿ ಸಾವನ್ನಪ್ಪಿದ್ದಾನೆ. ಇದನ್ನು ಓದಿ: ಸೆಲ್ಫಿ ತಗೆದುಕೊಳ್ಳಲು ಹೋಗಿ ಮಲ್ಲಳ್ಳಿ ಜಲಪಾತಕ್ಕೆ ಬಿದ್ದು ಜೀವ ಕಳೆದುಕೊಂಡ!

    ಫಾಲ್ಸ್ ಅಡಿಯಲ್ಲಿ ಪಾಚಿ ಬೆಳೆದಿದೆ. ಮುಂಜಾಗ್ರತಾ ಕ್ರಮವಾಗಿ ಯಾವುದೇ ಬೇಲಿ ಹಾಕಿಲ್ಲ. ಇದರಿಂದಾಗಿ ಪ್ರವಾಸಿಗರು ನೀರಿಗೆ ಇಳಿಯುತ್ತಿದ್ದಾರೆ. ಬೆಂಗಳೂರಿನ ಯುವಕರ ತಂಡ ಇಂದು ಫಾಲ್ಸ್ ಗೆ ಬಂದಿತ್ತು. ಜಲಪಾತದ ಅಡಿಯಲ್ಲಿರುವ ನೀರಿನಲ್ಲಿ ಯುವಕರು ಈಜುತ್ತಿದ್ದನ್ನು ನೋಡಿದ ಸ್ಕಂದ ಕೂಡ ನೀರಿಗೆ ಇಳಿದಿದ್ದ. ಈಜಲು ಬಾರದೆ ಗುಂಡಿಗೆ ಬಿದ್ದು ಮೃತಪಟ್ಟಿದ್ದಾನೆ ಎಂದು ಸ್ಥಳೀಯ ನಿವಾಸಿ ತಿಳಿಸಿದ್ದಾರೆ.

    ಜಲಪಾತದ ಅಡಿಯಲ್ಲಿ ಗುಂಡಿಗಳಿವೆ. ಅದರಲ್ಲಿ ಬಿದ್ದು ಈ ಹಿಂದೆ 20ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸ್ಥಳೀಯ ಗ್ರಾಮ ಪಂಚಾಯತಿ ಹಾಗೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಪ್ರವಾಸಿಗರಿಂದ ಹಣ ಪಡೆಯುತ್ತಾರೇ ಹೊರತು ಪಾರ್ಕಿಂಗ್ ವ್ಯವಸ್ಥೆ ಮಾಡಿಲ್ಲ ಎಂದು ದೂರಿದರು.

    ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತ ಯುವಕ ಸ್ಕಂದ ಜೊತೆಗೆ ಬಂದಿದ್ದ ಸಹೋದ್ಯೋಗಿಗಳಿಂದ ಮುಚ್ಚಳಿಕೆ ಪತ್ರ ಬರೆಸಿಕೊಂಡಿದ್ದಾರೆ. ಈ ಸಂಬಂಧ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಹಚ್ಚಹಸಿರಿನ ಮಧ್ಯೆ ಹಾಲ್ನೊರೆ ಸೂಸುತ್ತಾ ಜುಳು-ಜುಳು ಹರೀತಿದೆ ಇರ್ಪು ಫಾಲ್ಸ್

    ಹಚ್ಚಹಸಿರಿನ ಮಧ್ಯೆ ಹಾಲ್ನೊರೆ ಸೂಸುತ್ತಾ ಜುಳು-ಜುಳು ಹರೀತಿದೆ ಇರ್ಪು ಫಾಲ್ಸ್

    -ಇಯರ್ ಎಂಡ್‍ಗೆ ಕೊಡಗಿನಲ್ಲಿ ಪ್ರವಾಸಿಗರ ದಂಡು

    ಮಡಿಕೇರಿ: ವರ್ಷಾಂತ್ಯ, ಹೊಸ ವರ್ಷ, ರಜೆಗಳ ಮೇಲೆ ರಜೆ ಇರುವುದರಿಂದ ಪ್ರವಾಸಿಗರ ಸ್ವರ್ಗ ಕೊಡಗಿನತ್ತ ಟೂರಿಸ್ಟ್ ದಂಡೇ ಹರಿದು ಬರುತ್ತಿದೆ. ಮೂರು ನಾಲ್ಕು ತಿಂಗಳ ಕಾಲ ಕೊಡಗಿನಲ್ಲಿ ಪ್ರಕೃತಿ ವಿಕೋಪದಿಂದ ಪ್ರವಾಸಿಗರು ಜಿಲ್ಲೆಗೆ ಬರಲು ಹಿಂದೇಟು ಹಾಕುತ್ತಿದ್ದರು. ಇದೀಗ ಹಿಂದಿನ ದಿನಗಳು ಮತ್ತೆ ಬರುವ ಹಾಗೆ ಜನರು ಕೊಡಗು ಜಿಲ್ಲೆಗೆ ಆಗಮಿಸುತ್ತಿದ್ದಾರೆ.

    ಕೊಡಗು ಜಿಲ್ಲೆಯ ಸೌಂದರ್ಯಕ್ಕೆ ಮನಸೋಲದವರಿಲ್ಲ. ಅದರಲ್ಲೂ ಜಿಲ್ಲೆಯ ಹಚ್ಚ ಹರಿಸಿನ ನಡುವೆ ಹಾಲ್ನೊರೆ ಸೂಸುತ್ತಾ ಜುಳು ಜುಳು ಹರಿಯುವ ಜಲಧಾರೆಯ ಸೌಂದರ್ಯಕ್ಕೆ ಸರಿಸಾಟಿಯಿಲ್ಲ. ಅಂತಹ ಜಲಧಾರೆಯ ಕೆಳಗೆ ನಿಂತು ಎಂಜಾಯ್ ಮಾಡುವುದು ಎಲ್ಲರ ಆಸೆ ಆಗಿರುತ್ತಾರೆ. ವರ್ಷಾಂತ್ಯ ಅಂತ ಸ್ಪೆಷಲ್ ಲೊಕೇಶನ್‍ನಲ್ಲಿ ಇಲ್ಲಿಗೆ ಭೇಟಿ ಕೊಟ್ಟರೆ ಅದರ ಮಜಾವೇ ಬೇರೆ ಇರುತ್ತದೆ. ಸದ್ಯ ಇಯರ್ ಎಂಡ್ ಸೀಜನ್, ಕೊಡಗಿನ ಸೌಂದರ್ಯ ಲೋಕಕ್ಕೆ ಪ್ರವಾಸಿಗರು ಸಾಗರೋಪಾದಿಯಲ್ಲಿ ಹರಿದು ಬರುದ್ದಾರೆ. ಅದರಲ್ಲೂ ಇರ್ಪು ಫಾಲ್ಸ್ ನಲ್ಲಂತೂ ಪ್ರವಾಸಿಗರು ಸಖತ್ ಎಂಜಾಯ್ ಮಾಡುತ್ತಿದ್ದಾರೆ.

    ಮಡಿಕೇರಿಯಿಂದ 60 ಕಿ.ಮೀ ದೂರದಲ್ಲಿರೋ ಬ್ರಹ್ಮಗಿರಿತಪ್ಪಲಿನ ನಡುವಿನಿಂದ ಧುಮ್ಮಿಕ್ಕುವ ಇರ್ಪು ಫಾಲ್ಸ್ ಸೌಂದರ್ಯವನ್ನು ಎಷ್ಟು ಹೇಳಿದರೂ ಮುಗಿಯಲ್ಲ. ಮಳೆಗಾಲದಲ್ಲಿ ನೀರಿನ ಪ್ರಮಾಣ ಹೆಚ್ಚಿದ್ದು ಫಾಲ್ಸ್ ನೋಡಲು ಎಷ್ಟು ಚೆಂದವು ಈ ರುದ್ರ ರಮಣೀಯ ತಾಣ ಇರ್ಪು ಫಾಲ್ಸ್ ಅಷ್ಟೇ ಅಪಾಯವಾಗಿದೆ. ಆದರೆ ಈಗ ಮಳೆಯ ಆರ್ಭಟ ಇಲ್ಲ. ಫಾಲ್ಸ್ ನೀರು ಕೊಂಚ ಕಡಿಮೆ ಆಗಿದೆ. ಪರಿಣಾಮ ಫಾಲ್ಸ್ ನ ತಳಭಾಗಕ್ಕೆ ಹೋಗಿ ಫಾಲ್ಸ್ ನೀರಿಗೆ ಮೈಯೊಡ್ಡಿ ಎಂಜಾಯ್ ಮಾಡಬಹುದು. ಅದಕ್ಕೆ ಇಲ್ಲಿಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗಿದೆ.

    ಇರ್ಪು ಫಾಲ್ಸ್ ಸದ್ಯ ಪ್ರವಾಸಿಗರ ಹಾಟ್ ಸ್ಪಾಟ್ ಆಗಿದೆ. ದಿನ ನಿತ್ಯ ಸಹಸ್ರ ಸಂಖ್ಯೆಯ ಪ್ರವಾಸಿಗರು ಬಂದು ಹಚ್ಚ ಹಸಿರ ನಿಸರ್ಗದ ಮಡಿಲಲ್ಲಿ ಇರ್ಪುವಿನ ಸಿಂಚನಕ್ಕೆ ಮೈಯೊಡ್ಡಿ ಕೇರಳ, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶದ ಪ್ರವಾಸಿಗರು ಎಂಜಾಯ್ ಮಾಡುತ್ತಿದ್ದಾರೆ. ಪ್ರವಾಸಿಗರು ಕೊಡಗಿನ ಫಾಲ್ಸ್ ಸೇರಿದಂತೆ ವಿವಿಧ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ.

    https://www.youtube.com/watch?v=XtVggfQfhZw&feature=youtu.be

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಲುಷಿತಗೊಂಡಿದೆ ಮಾಣಿಕ್ಯಧಾರ ನೀರು- ಪವಿತ್ರ ನೀರಿನಲ್ಲಿ ಸೇರುತ್ತಿದೆ ಪ್ರವಾಸಿಗರ ಮಲ, ಮೂತ್ರ

    ಕಲುಷಿತಗೊಂಡಿದೆ ಮಾಣಿಕ್ಯಧಾರ ನೀರು- ಪವಿತ್ರ ನೀರಿನಲ್ಲಿ ಸೇರುತ್ತಿದೆ ಪ್ರವಾಸಿಗರ ಮಲ, ಮೂತ್ರ

    ಚಿಕ್ಕಮಗಳೂರು: ಪ್ರವಾಸಿಗರ ಸ್ವರ್ಗವೆನಿಸಿಕೊಂಡಿರುವ ಚಿಕ್ಕಮಗಳೂರಲ್ಲಿ ಹತ್ತಾರು ಪ್ರವಾಸಿ ತಾಣಗಳಿದ್ದು, ಅದರಲ್ಲೂ ಚಂದ್ರದ್ರೋಣ ಪರ್ವತ ಶ್ರೇಣಿಯ ಮಾಣಿಕ್ಯಧಾರ ಜಲಪಾತ ಪ್ರವಾಸಿಗರ ಫೆವರೇಟ್ ಸ್ಪಾಟ್ ಆಗಿದೆ. ನಿತ್ಯವೂ ಆಗಮಿಸುವ ನೂರಾರು ಪ್ರವಾಸಿಗರು ಇಲ್ಲಿನ ಜಲಧಾರೆಯಲ್ಲಿ ಮಿಂದೆದ್ದು, ಈ ನೀರನ್ನು ಕುಡಿದು ಪಾವನರಾಗುತ್ತೀವಿ ಎಂದುಕೊಂಡಿದ್ದಾರೆ. ಆದರೆ ಈ ನೀರು ಕುಡಿಯೋಕಲ್ಲ, ಸ್ನಾನಕ್ಕೂ ಯೋಗ್ಯವಲ್ಲದಷ್ಟು ಮಲೀನವಾಗಿದೆ.

    ಕಾಫಿನಾಡು ಚಿಕ್ಕಮಗಳೂರಿನ ಬಾಬಬುಡನ್‍ಗಿರಿಯ ಸೊಬಗನ್ನು ನೋಡುವುದಕ್ಕೆ ಪ್ರತಿದಿನ ಸಾವಿರಾರು ಪ್ರವಾಸಿಗರು ಬರುತ್ತಾರೆ. ಇಲ್ಲಿ ಇರುವ ಚಿಕ್ಕ ತೊರೆಯೇ ಮಾಣಿಕ್ಯಧಾರ. ಈ ನೀರನ್ನು ಕುಡಿದು ಅದರಲ್ಲಿ ಸ್ನಾನ ಮಾಡಿದರೆ, ಜೀವನ ಪಾವನವಾಗುತ್ತೆ ಎಂದು ಅದರಲ್ಲಿ ಸ್ನಾನ ಮಾಡುತ್ತಾರೆ. ಆದರೆ ಆ ನೀರು ಈಗ ಪವಿತ್ರವಾಗಿಲ್ಲ. ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಈ ಜಲಪಾತದ ನೀರನ್ನು ಸಂಶೋಧನೆಗೆ ಒಳಪಡಿಸಿದಾಗ, ನೀರಿನಲ್ಲಿ ಮನುಷ್ಯರ ಮಲ, ಮೂತ್ರದಂಶದ ಎಫ್-ಕೊಲಿಫಾರಂ ಪತ್ತೆಯಾಗಿದ್ದು, ಕುಡಿಯಲು ಯೋಗ್ಯವಲ್ಲ ಅಂತಾ ಹೇಳಿದೆ.

    ಈ ಮಾಣಿಕ್ಯಧಾರಕ್ಕೆ ಬರುವ ಪ್ರವಾಸಿಗರು, ಜಲಪಾತ ಹುಟ್ಟೋ ಜಾಗದಲ್ಲಿಯೇ ಮಲಮೂತ್ರ ವಿಸರ್ಜನೆ ಮಾಡುತ್ತಿದ್ದು, ಹಾಗಾಗಿ ನೀರಿನಲ್ಲಿ ಎಫ್-ಕೊಲಿಫಾರಂ ಬ್ಯಾಕ್ಟೀರಿಯಾ ಇರುವುದು ಪತ್ತೆಯಾಗಿದೆ. ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಶ್ಯಾಂಪು, ಸೋಪು ಇತ್ಯಾದಿ ರಾಸಾಯನಿಕಗಳನ್ನು ಬಳಸಿ ಸ್ನಾನ ಮಾಡೋದರ ಜೊತೆಗೆ ಬಟ್ಟೆಯನ್ನು ಬಿಸಾಡಿ ಹೋಗುವುದರಿಂದ, ನೀರು ಕಲುಷಿತಗೊಳ್ಳೋದರ ಜೊತೆ ಪರಿಸರವೂ ಹಾಳಾಗುತ್ತಿದೆ. ಈ ಬಗ್ಗೆ ಜಿಲ್ಲಾಡಳಿತದ ಗಮನಕ್ಕೆ ತಂದ್ರೂ ಯಾವುದೇ ಪ್ರಯೋಜನವಾಗಿಲ್ಲ ಅಂತ ಸ್ಥಳೀಯರು ಹೇಳಿದ್ದಾರೆ.

    ಪ್ರವಾಸಿಗರ ನೆಚ್ಚಿನ ತಾಣವಾಗಿದ್ದ ಮಾಣಿಕ್ಯಧಾರ ಇದೀಗ ಮಾಲಿನ್ಯ ಭರಿತವಾಗಿರೋದು ಜನರಲ್ಲಿ ಆತಂಕ ಮೂಡಿಸಿದೆ. ಇನ್ನಾದರೂ ಜಿಲ್ಲಾಡಳಿತ ಇತ್ತ ಗಮನ ಹರಿಸಿ ಮಾಣಿಕ್ಯಧಾರದಲ್ಲಿ ಸ್ವಚ್ಛತೆಯನ್ನು ಕಾಪಾಡುವ ಜೊತೆಗೆ ಪಾವಿತ್ರ್ಯತೆಯನ್ನು ಉಳಿಸಲು ಕ್ರಮಕೈಗೊಳ್ಳಬೇಕಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಭರಚುಕ್ಕಿ ಜಲಪಾತದಲ್ಲಿ ಕೊಚ್ಚಿ ಹೋದ ಹಸು!

    ಭರಚುಕ್ಕಿ ಜಲಪಾತದಲ್ಲಿ ಕೊಚ್ಚಿ ಹೋದ ಹಸು!

    ಚಾಮರಾಜನಗರ: ಭರಚುಕ್ಕಿ ಜಲಪಾತದಲ್ಲಿ ಹಸು ಕೊಚ್ಚಿ ಹೋಗಿರುವ ಘಟನೆ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನಲ್ಲಿ ನಡೆದಿದೆ.

    ಭರಚುಕ್ಕಿ ಜಲಪಾತದ ಬಳಿ ಹಸು ನೀರು ಕುಡಿಯಲು ತೆರಳಿತ್ತು. ನೀರಿನ ರಭಸದಲ್ಲಿ ಸಿಲುಕಿದ ಹಸು ಮೇಲಕ್ಕೆ ಬರಲಾರದೇ ನದಿಯ ಮಧ್ಯ ಭಾಗದಲ್ಲಿ ನಿಂತುಕೊಂಡಿತ್ತು. ಹಸು ತನ್ನ ಪ್ರಾಣ ರಕ್ಷಿಸಿಕೊಳ್ಳಲು ಸತತ ಎರಡು ಗಂಟೆಗಳ ಕಾಲ ಪ್ರಯತ್ನ ನಡೆಸಿದೆ. ಕೊನೆಗೆ ನೀರಿನ ರಭಸ ಹೆಚ್ಚಾಗಿದ್ದರಿಂದ ಜಲಪಾತದಲ್ಲಿ ಕೊಚ್ಚಿ ಹೋಗಿದೆ. ಈ ಎಲ್ಲ ದೃಶ್ಯಗಳು ಪ್ರವಾಸಿಗರ ಮೊಬೈಲ್‍ನಲ್ಲಿ ಸೆರೆಯಾಗಿದ್ದು, ನೀರಿನ ರಭಸ ಹೆಚ್ಚಾಗಿದ್ದರಿಂದ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಪ್ರವಾಸಿಗರು ಅಸಹಾಯಕರಾಗಿದ್ದರು.

    ಕಬಿನಿ ಹಾಗೂ ಕೆಆರ್ ಎಸ್ ಜಲಾಶಯಗಳಿಂದ ಅಧಿಕ ನೀರು ಹರಿಸಿರುವ ಹಿನ್ನೆಲೆಯಲ್ಲಿ ನದಿ ಅಪಾಯ ಮಟ್ಟಿ ಮೀರಿ ಹರಿಯುತ್ತಿವೆ. ಕಬಿನಿ ಜಲಾಶಯದಿಂದ 80 ಸಾವಿರ ಕ್ಯೂಸೆಕ್ ನೀರು ಹೊರ ನೀಡುತ್ತಿರುವ ಕಾರಣ ಎಲ್ಲೆಡೆ ಜಲಪ್ರವಾಹ ಉಂಟಾಗಿದೆ. ಕೇರಳ, ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಮೇಲೆ ಕಪಿಲಾ ನದಿ ಉಕ್ಕಿ ಹರಿಯುತ್ತಿದೆ. ಕಳೆದ ಮೂರು ದಿನಗಳಿಂದ ಮೈಸೂರು ಊಟಿ ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಕಡಿತವಾಗಿದೆ. ಹೆದ್ದಾರಿ ಸಂಪರ್ಕ ಕಡಿತದಿಂದ ವಾಹನ ಸವಾರರ ಪರದಾಡುತ್ತಿದ್ದಾರೆ.

    ಹೊಳೆ ದಾಟುವಾಗ ಆಕಸ್ಮಿಕವಾಗಿ ವೃದ್ಧ ನೀರಲ್ಲಿ ಕೊಚ್ಚಿಕೊಂಡು ಹೋಗಿರುವಂತ ಘಟನೆ ಮಂಗಳೂರಿನ ಬೆಳ್ತಂಗಡಿ ತಾಲೂಕಿನ ಮರೋಡಿಯಲ್ಲಿ ನಡೆದಿದೆ. ಬೊಮ್ಮಯ್ಯ ದಾಸ್ ನೀರಲ್ಲಿ ವೃದ್ಧ ಕೊಚ್ಚಿಹೋಗಿದ್ದು, ವೃದ್ಧನ ಮೃತದೇಹಕ್ಕಾಗಿ ಶೋಧಕಾರ್ಯ ನಡೆಯುತ್ತಿದೆ. ಈ ಸಂಬಂಧ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಮೂರು ವರ್ಷದ ಬಳಿಕ ಕರ್ನಾಟಕದ ನಯಾಗರ ಫಾಲ್ಸ್‌ನಲ್ಲಿ ಜಲಪಾತೋತ್ಸವ

    ಮೂರು ವರ್ಷದ ಬಳಿಕ ಕರ್ನಾಟಕದ ನಯಾಗರ ಫಾಲ್ಸ್‌ನಲ್ಲಿ ಜಲಪಾತೋತ್ಸವ

    ಚಾಮರಾಜನಗರ: ಕರ್ನಾಟಕದ ನಯಾಗರ ಫಾಲ್ಸ್ ಎಂದೇ ಹೆಸರು ವಾಸಿಯಾಗಿರುವ ಕೊಳ್ಳೆಗಾಲ ತಾಲೂಕಿನ ಗಗನಚುಕ್ಕಿ-ಭರಚುಕ್ಕಿ ಜಲಪಾತಗಳು ಹಾಲ್ನೊರೆಯಂತೆ ಧುಮ್ಮಿಕ್ಕುತ್ತಿರುವ ಹಿನ್ನೆಲೆಯಲ್ಲಿ  ಮೂರು ವರ್ಷದ ಬಳಿಕ ಜಲಪಾತೋತ್ಸವ ನಡೆಸಲು ಸರ್ಕಾರ ಮುಂದಾಗಿದೆ.

    ಇಂದು ಗಗನಚುಕ್ಕಿ-ಭರಚುಕ್ಕಿ ಜಲಪಾತಕ್ಕೆ ಭೇಟಿ ನೀಡಿ ಅಧಿಕಾರಿಗಳ ಸಭೆ ನಡೆಸಿದ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಜಲಪಾತೋತ್ಸವದ ದಿನಾಂಕವನ್ನು ನಿಗದಿ ಮಾಡಿದ್ದಾರೆ.

    ಆಗಸ್ಟ್ ತಿಂಗಳ 18 ಮತ್ತು 19 ರಂದು ಜಲಪಾತೋತ್ಸವ ನಡೆಯಲಿದೆ. ಜಲಪಾತದಲ್ಲಿ ನೀರಿಲ್ಲದ ಕಾರಣ ಮೂರು ವರ್ಷಗಳ ಕಾಲ ಜಲಪಾತೋತ್ಸವ ನಿಂತು ಹೋಗಿತ್ತು. ಆದರೆ ಈ ಬಾರಿ ಕಾವೇರಿ ಮತ್ತು ಕಬಿನಿ ನದಿಗಳಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಬರುತ್ತಿರುವುದರಿಂದ ಜಲಪಾತಗಳಲ್ಲಿ ಭೋರ್ಗರೆದು ನೀರು ಧುಮುಕುತ್ತಿದೆ. ಹೀಗಾಗಿ ಪ್ರವಾಸಿಗರು ಹಾಗೂ ಸ್ಥಳೀಯರು ಈ ಬಾರಿ ಜಲಪಾತೋತ್ಸವ ನಡೆಸಬೇಕೆಂದು ಒತ್ತಾಯ ಮಾಡಿದ್ದರಿಂದ ಈ ನಿರ್ಧಾರ ಕೈಗೊಂಡಿದ್ದಾಗಿ ಸಾ.ರಾ. ಮಹೇಶ್ ತಿಳಿಸಿದರು. ಇದನ್ನೂ ಓದಿ: ಭೋರ್ಗರೆದು ಹರಿಯುತ್ತಿರುವ ಕರ್ನಾಟಕದ ನಯಾಗರ ಫಾಲ್ಸ್

    ಈ ಹಿಂದಿನ ಜಲಪಾತೋತ್ಸವದ ವೇಳೆ ಆಹಾರ ಮೇಳ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿತ್ತು. ಬಾಯಲ್ಲಿ ನೀರೂರಿಸುವ ಖಾದ್ಯಗಳು ಸ್ಥಳದಲ್ಲೇ ತಯಾರಾಗುತ್ತಿದ್ದವು. ಪ್ರವಾಸಿಗರು ಅದನ್ನು ಚಪ್ಪರಿಸಿಕೊಂಡು ತಿನ್ನುತ್ತಿದ್ದರು. ಇನ್ನೂ ಸ್ಟಾರ್ ನಟರು ಹಾಗೂ ಕಲಾವಿದರನ್ನು ಆಹ್ವಾನಿಸಿ ಪ್ರತಿ ನಿತ್ಯ ರಾತ್ರಿ ಅದ್ಧೂರಿ ಕಾರ್ಯಕ್ರಮಗಳು ನಡೆಯುತಿತ್ತು.

    ಪ್ರವಾಸಿಗರು ಸಂಗೀತಕ್ಕೆ ಹುಚ್ಚೆದ್ದು ಕುಣಿಯುತ್ತಿದ್ದರು. ಭರಚುಕ್ಕಿ ಜಲಪಾತೋತ್ಸವ ಪ್ರವಾಸಿಗರಿಗೆ ಅಕ್ಷರಶಃ ಸ್ವರ್ಗವೇ ಆಗಿತ್ತು. ಸತತ ಮೂರು ವರ್ಷಗಳ ಕಾಲ ಯಶಸ್ವಿಯಾಗಿ ನಡೆದಿದ್ದ ಕಾರ್ಯಕ್ರಮವನ್ನು ಈ ವರ್ಷವೂ ಆಯೋಜಿಸಿ ಎಂದು ಪ್ರವಾಸಿಗರು ಹಾಗೂ ಜನ ಕಳೆದ ವರ್ಷ ಬೇಡಿಕೆ ಇಟ್ಟಿದ್ದರು. ಆದರೆ ಸರ್ಕಾರ ಜಲಪಾತೋತ್ಸವನ್ನು ಆಯೋಜಿಸಿರಲಿಲ್ಲ.

  • ಭೋರ್ಗರೆದು ಹರಿಯುತ್ತಿರುವ ಕರ್ನಾಟಕದ ನಯಾಗರ ಫಾಲ್ಸ್

    ಭೋರ್ಗರೆದು ಹರಿಯುತ್ತಿರುವ ಕರ್ನಾಟಕದ ನಯಾಗರ ಫಾಲ್ಸ್

    ಚಾಮರಾಜನಗರ: ಕಬಿನಿ ಜಲಾಶಯದಿಂದ 50 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರು ಬಿಟ್ಟಿರುವ ಪರಿಣಾಮ ಜಿಲ್ಲೆಯ ಕೊಳ್ಳೆಗಾಲ ತಾಲೂಕಿನ ಗಗನಚುಕ್ಕಿ-ಭರಚುಕ್ಕಿ ಹಾಗೂ ಹೊಗೆನಕಲ್ ಜಲಪಾತಗಳು ಮೈದುಂಬಿ ಭೋರ್ಗರೆಯುತ್ತಿವೆ.

    ಎರಡು ದಿನಗಳಿಂದ ಕಬಿನಿ ಜಲಾಶಯದಿಂದ ಹೊರ ಹರಿವು ಹೆಚ್ಚಾಗಿರುವ ಹಿನ್ನೆಲೆಯಲ್ಲಿ, ಕರ್ನಾಟಕದ ನಯಾಗರ ಫಾಲ್ಸ್ ಎಂದೇ ಹೆಸರುವಾಸಿಯಾಗಿರುವ ಗಗನಚುಕ್ಕಿ-ಭರಚುಕ್ಕಿ ಜಲಪಾತಗಳು ತಮ್ಮ ಸೌಂದರ್ಯವನ್ನು ಮತ್ತಷ್ಟು ಎಚ್ಚಿಸಿಕೊಂಡಿದ್ದು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ.

    ಗಗನಚುಕ್ಕಿಯಲ್ಲಂತೂ ನೀರು ಆಕಾಶದೆತ್ತರದಿಂದ ಬೀಳುವಂತೆ ಬಾಸವಾಗುತ್ತಿದೆ. ಇನ್ನೂ ಹೊಗೆನಕಲ್ ಫಾಲ್ಸ್ ಕೂಡ ಇದಕ್ಕೆ ಕಡಿಮೆ ಇಲ್ಲದಂತೆ ಧುಮ್ಮುಕ್ಕಿ ಹರಿಯುತ್ತಿದೆ. ಎತ್ತ ನೋಡಿದರೂ ನೀರು ತುಂಬಿಕೊಂಡಿದೆ. ಈ ರಮಣೀಯ ದೃಶ್ಯವನ್ನು ನೋಡಲು ಪ್ರವಾಸಿಗರ ದಂಡೆ ಈ ಜಲಪಾತಗಳ ಕಡೆ ಹರಿದು ಬರುತ್ತಿದೆ.

    ಮೈದುಂಬಿ ಹರಿಯುತ್ತಿರುವ ಕಾವೇರಿ ಮತ್ತು ಕಪಿಲಾ ನದಿಗಳಿಂದಾಗಿ ಅಕ್ಕ-ಪಕ್ಕದ ಗ್ರಾಮಗಳು ಪ್ರವಾಹದ ಭೀತಿಯಲ್ಲಿವೆ.

  • ನೂರಾರು ಅಡಿ ಎತ್ತರದಿಂದ ಬಳುಕೋ ಬಳ್ಳಿಯಂತೆ ಶ್ವೇತವರ್ಣೆಯಾಗಿ ಧುಮುಕುತ್ತಿದೆ ಜಲಕನ್ಯೆ ಮಲ್ಲಳ್ಳಿ ಜಲಪಾತ!

    ನೂರಾರು ಅಡಿ ಎತ್ತರದಿಂದ ಬಳುಕೋ ಬಳ್ಳಿಯಂತೆ ಶ್ವೇತವರ್ಣೆಯಾಗಿ ಧುಮುಕುತ್ತಿದೆ ಜಲಕನ್ಯೆ ಮಲ್ಲಳ್ಳಿ ಜಲಪಾತ!

    ಮಡಿಕೇರಿ: ಕೊಡಗಿನಲ್ಲಿ ಮಳೆಗಾಲ ಶುರುವಾದರೆ ಗಿರಿಕಾನನದ ನಡುವಿನಿಂದ ದುಮ್ಮಿಕ್ಕೋ ಜಲಧಾರೆಗಳ ವಯ್ಯಾರ ನೋಡೋಕೆ ಎರಡು ಕಣ್ಣು ಸಾಲಲ್ಲ. ಕೊಡಗಿನ ಅತಿ ಸುಂದರ ಜಲಕನ್ಯೆ ಮಲ್ಲಳ್ಳಿ ಜಲಪಾತ ಮೊದಲ ಮಳೆಗೆ ತುಂಬಿ ಹರಿಯುತ್ತಿದ್ದು ನಯನ ಮನೋಹರವಾಗಿ ಪ್ರವಾಸಿಗರ ಕೈಬೀಸಿ ಕರೆಯುತ್ತಿದೆ.

    ಸುತ್ತಲೂ ಮುಗಿಲು ಚುಂಬಿಸೋ ಗಿರಿಶಿಖರಗಳು, ಹಚ್ಚ ಹಸಿರಿನಿಂದ ಕಂಗೊಳಿಸೋ ಪುಷ್ಪಗಿರಿ ಮೀಸಲು ಅರಣ್ಯದ ನಡುವೆ ನೂರಾರು ಅಡಿ ಎತ್ತರದಿಂದ ಬಳುಕೋ ಬಳ್ಳಿಯಂತೆ ಶ್ವೇತವರ್ಣೆಯಾಗಿ ಧುಮುಕುವ ಜಲರಾಶಿ. ಅಪರೂಪದ ಜಲರಾಶಿಯನ್ನು ಕಣ್ತುಂಬಿಕೊಳ್ಳುತ್ತಿರೋ ಪ್ರವಾಸಿಗರು ಇದು ಕೊಡಗಿನ ಅತಿಸುಂದರ ಜಲಕನ್ಯೆ ಮಲ್ಲಳ್ಳಿ ಜಲಪಾತದ ವಯ್ಯಾರ.

    ಸೋಮವಾರಪೇಟೆ ತಾಲೂಕಿನ ಮಲ್ಲಳ್ಳಿಯ ಈ ಜಲಪಾತ ನೋಡಲು ಸುಂದರ ಅತಿಸುಂದರ. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ವರ್ಷಧಾರೆಗೆ ಮೈದುಂಬಿ ಹರಿಯುತ್ತಿರೋ ಜಲರಾಶಿ ನೋಡುಗರ ಕಣ್ಣು ಕೊರೈಸುತ್ತಿದೆ. ಮುಗಿಲೆತ್ತರದಿಂದ ಹಾಳ್ನೊರೆಯಂತೆ ಇಳಿಯೋ ಜಲಪಾತದ ಸೌಂದರ್ಯ ಬಣ್ಣಿ ಸಲಸದಳ, ಹಸಿರ ನಡುವಿನಿಂದ ಬೋರ್ಗರೆಯುತ್ತಾ ಕರಿಕಲ್ಲುಗಳನ್ನು ಸೀಳಿಕೊಂಡು ರುದ್ರರಮಣೀಯ ಜಲಪಾತವನ್ನು ನೋಡೋದೆ ಅಂದ.

    ಅಕ್ಷರಶಃ ಸ್ವರ್ಗಕ್ಕೆ ಕಿಚ್ಚು ಹಚ್ಚುಂತಿರೋ ಇಲ್ಲಿನ ನಿಸರ್ಗದ ಸೌಂದರ್ಯ. ಇದರ ನಡುವೆ ಪ್ರಪಾತದಲ್ಲಿ ಕಾಣೋ ಜಲರಾಶಿ ಪ್ರವಾಸಿಗರ ಮನಸ್ಸಿಗೆ ಮುದ ನೀಡುತ್ತದೆ. ಪುಷ್ಪಗಿರಿಯ ತಪ್ಪಲಿನಿಂದ ಹುಟ್ಟಿಬರೋ ಕುಮಾರಧಾರಾ ನದಿ ಸೃಷ್ಟಿಸಿರೋ ಈ ಅಪರೂಪದ ಜಲಧಾರೆಯ ಬಳುಕು ಬಿನ್ನಾಣ, ವಯ್ಯಾರದಿಂದ ಸಂಗೀತ ಲೋಕ ಸೃಷ್ಟಿಸಿ ಹರಿಯೋ ನೀರ ಝರಿ ದಣಿದ ಮನಕ್ಕೆ ನೆಮ್ಮದಿ ನೀಡುತ್ತೆ. ನೋಡಿದಷ್ಟು ಮತ್ತೆ ಮತ್ತೆ ನೋಡಬೇಕೆನಿಸೋ ಜಲಪಾತದ ಸೊಬಗು ನಯನ ಮನೋಹರವಾಗಿದೆ.

    ಈ ಜಲಪಾತದ ಸೌಂದರ್ಯವನ್ನು ಹತ್ತಿರದಿಂದ ಸವಿಯ ಬೇಕಾದರೆ ನೂರಾರು ಮೆಟ್ಟಿಲುಗಳನ್ನಿಳಿದು ಕೆಲವೇ ಕಿಲೋಮೀಟರ್ ಗಟ್ಟಲೆ ಬೆಟ್ಟವನ್ನಿಳಿಯಬೇಕು. ಇಷ್ಟು ಕಷ್ಟಪಟ್ಟು ಕೆಳಗಿಳಿದರೆ ಸ್ವರ್ಗವೇ ಕಣ್ಣೆದುರಿಗೆ ಬಂದ ಅನುಭವವಾಗುತ್ತೆ. ದುರಂತ ಅಂದ್ರೆ ಇಲ್ಲಿಗೆ ಬರುವ ಪ್ರವಾಸಿಗರು ಸೇಲ್ಫಿ ಕ್ರೇಜ್‍ನಿಂದ ಫೋಟೋ ತೆಗೆಯಲು ಹೋಗಿ ಸುಮಾರು 14 ಮಂದಿ ಈ ಜಲಪಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.

    ಒಟ್ಟಿನಲ್ಲಿ ಮಳೆಗಾಲದಲ್ಲಿ ತನ್ನ ಸೌಂದರ್ಯವನ್ನು ಇಮ್ಮಡಿಗೊಳಿಸಿಕೊಂಡು ಪ್ರಕೃತಿ ಪ್ರಿಯರ ಮನತಣಿಸೋ ನಿಸರ್ಗದ ಸೊಬಗು ನಿಜಕ್ಕೂ ಅಚ್ಚರಿ ಮೂಡಿಸುತ್ತೆ. ಮಾಮೂಲಿಯಂತೆ ಅಬ್ಬಿ ಜಲಪಾತ ನೋಡಿ ಹರ್ಷಗೊಳ್ಳೊ ಮನಕ್ಕೆ ಒಮ್ಮೆ ರುದ್ರರಮಣೀಯ ಮಲ್ಲಳ್ಳಿ ಜಲಪಾತದ ದರ್ಶನವಾದರೆ ನಿಜಕ್ಕೂ ಸಂತಸ ಉಕ್ಕಿಬರೋದಂತು ಸುಳ್ಳಲ್ಲ.

  • ಫೋಟೋ ಕ್ಲಿಕ್ಕಿಸೋ ವೇಳೆ ಕಾಲು ಜಾರಿ ಜಲಪಾತದಲ್ಲಿ ಬಿದ್ದ ಯುವಕ: ವಿಡಿಯೋ

    ಫೋಟೋ ಕ್ಲಿಕ್ಕಿಸೋ ವೇಳೆ ಕಾಲು ಜಾರಿ ಜಲಪಾತದಲ್ಲಿ ಬಿದ್ದ ಯುವಕ: ವಿಡಿಯೋ

    ಭುವನೇಶ್ವರ್: ಫೋಟೋ ತೆಗೆಸಿಕೊಳ್ಳುವಾಗ ಯುವಕನೊಬ್ಬ ಕಾಲು ಜಾರಿ ಜಲಪಾತಕ್ಕೆ ಬಿದ್ದ ಘಟನೆ ಒಡಿಶಾದ ಕೋರಾಪುತ್‍ನ ಗಲಿಗಬಾದರ್ ಜಲಪಾತದಲ್ಲಿ ನಡೆದಿದೆ.

    ಸುಬ್ರತ್ ನಾಗ್(24) ಜಲಪಾತದಲ್ಲಿ ಬಿದ್ದು ಗಾಯಗೊಂಡ ಯುವಕ. ಸುಬ್ರತ್ ತನ್ನ ಸ್ನೇಹಿತರ ಜೊತೆ ಪ್ರವಾಸಕ್ಕೆಂದು ಜಲಪಾತಕ್ಕೆ ಹೋಗಿದ್ದನು. ಆಗ ತನ್ನ ಸ್ನೇಹಿತನಿಗೆ ಹೇಳಿ ಅಲ್ಲಿ ಫೋಟೋ ತೆಗೆಸಿಕೊಳ್ಳುವಾಗ ಈ ಘಟನೆ ನಡೆದಿದೆ.

    ಜಲಪಾತದ ನೀರು ಸಾಮಾನ್ಯವಾಗಿ ಹರಿಯುತ್ತಿದ್ದು, ಸುಬ್ರತ್ ಅಲ್ಲಿ ಫೋಟೋ ತೆಗೆಸಿಕೊಳ್ಳಲೆಂದು ಹೋಗಿದ್ದನು. ಆದರೆ ಫೋಟೋಗೆ ಪೋಸ್ ಕೊಡಬೇಕಾದರೆ ಸುಬ್ರತ್ ಕಾಲು ಜಾರಿ ಕೆಳಗೆ ಬಿದಿದ್ದಾನೆ.

    ಸುಬ್ರತ್ ನಾಗ್‍ನನ್ನು ಪೋಟಂಗಿ ಕಮ್ಯೂನಿಟಿ ಹೆಲ್ತ್ ಕೇರ್ ಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ನೀಡಿ ನಂತರ ಅಲ್ಲಿಂದ ಕೋರಾಪುತ್ ಆಸ್ಪತ್ರೆಯಲ್ಲಿ ಸುಬ್ರತ್‍ನನ್ನು ದಾಖಲಿಸಿದ್ದರು. ಸದ್ಯ ಸುಬ್ರತ್ ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾನೆ ಎಂದು ವರದಿಯಾಗಿದೆ.