Tag: ಜಲಪಾತ

  • ‘ಅಣಶಿ’ಯ ರುದ್ರ ರಮಣೀಯ ದೃಶ್ಯ- ನೃತ್ಯದಾಕಾರದ ಜಲಪಾತದಲ್ಲಿ ಮಿಂದೇಳಲು ಪ್ರವಾಸಿಗರ ದಂಡು

    ‘ಅಣಶಿ’ಯ ರುದ್ರ ರಮಣೀಯ ದೃಶ್ಯ- ನೃತ್ಯದಾಕಾರದ ಜಲಪಾತದಲ್ಲಿ ಮಿಂದೇಳಲು ಪ್ರವಾಸಿಗರ ದಂಡು

    – ರಸ್ತೆಯಲ್ಲೇ ಇರುವುದರಿಂದ ಪ್ರವಾಸಿಗರಿಗೆ ಹಬ್ಬ

    ಕಾರವಾರ: ಮಳೆಗಾಲ ಮುಗಿಯುತ್ತಿದ್ದಂತೆ ಉತ್ತರ ಕನ್ನಡ ಜಿಲ್ಲೆಯ ಹಸಿರು ಕಾನನಗಳ ಮಧ್ಯೆ ಜಲಪಾತಗಳಿಗೇನೂ ಕಮ್ಮಿ ಇಲ್ಲ. ಅದೇ ರೀತಿ ಇದೀಗ ಬಂಡೆಗಳನ್ನು ಸೀಳಿಕೊಂಡು ಹಾಲಿನಂತೆ ಧುಮ್ಮಕ್ಕುವ ಅಣಶಿ ಜಲಪಾದದ ನರ್ತನ ನೋಡಿ ಪ್ರವಾಸಿಗರು ಮಾರು ಹೋಗದಿದ್ದಾರೆ. ರಸ್ತೆ ಪಕ್ಕದಲ್ಲೇ ಇರುವುದರಿಂದ ಪ್ರವಾಸಿಗರಿಗೆ ಎಂಜಾಯ್ ಮಾಡಲು ಇನ್ನೂ ಅನುಕೂಲವಾಗಿದೆ.

    ಜಿಲ್ಲೆಯ ಕಾರವಾರ-ಜೋಯಿಡಾ ಘಟ್ಟ ಪ್ರದೇಶದ ಅಣಶಿ ಬಳಿ ಮಳೆ ನಿಲ್ಲುತಿದ್ದಂತೆ ಜಲಪಾತ ದುಮ್ಮಿಕ್ಕಿ ಹರಿಯುತಿದ್ದು, ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಕಾರವಾರದಿಂದ 40 ಕಿಲೊಮೀಟರ್ ನಷ್ಟು ದೂರದ ಅಣಶಿಯ ಅಭಯಾರಣ್ಯದಲ್ಲಿ ದುಮ್ಮಿಕ್ಕಿ ಹರಿಯುವ ಈ ಜಲಪಾತ ಮಳೆಗಾಲದಿಂದ ಪ್ರಾರಂಭವಾಗಿ ಬೇಸಿಗೆಯ ಒಂದು ತಿಂಗಳ ಕಾಲ ದಟ್ಟ ಕಾಡಿನ ನಡುವಿನ ಬಂಡೆಕಲ್ಲುಗಳ ಮಧ್ಯದಲ್ಲಿ ಹಾಲಿನಂತೆ ಭೋರ್ಗರೆದು ಹರಿಯುತ್ತದೆ.

    ರಸ್ತೆ ಪಕ್ಕದಲ್ಲೇ ಇರುವುದರಿಂದ ಪ್ರವಾಸಿಗರು ವಾಹನಗಳನ್ನು ನಿಲ್ಲಿಸಿ, ಜಲಪಾತ ವೀಕ್ಷಿಸಿ ಮುಂದೆ ಸಾಗುತ್ತಾರೆ. ಹೆಚ್ಚು ಸಮಯವಿದ್ದರೆ ಜಲಪಾತದಲ್ಲೇ ಮಿಂದೇಳುತ್ತಾರೆ. ಇದನ್ನು ಗಮನಿಸಿದ ಅರಣ್ಯ ಇಲಾಖೆ ಅಗತ್ಯ ಸೌಲಭ್ಯ ನೀಡುವ ಮೂಲಕ ಪ್ರವಾಸಿಗರ ವೀಕ್ಷಣೆಗಾಗಿ ವ್ಯವಸ್ಥೆ ಕಲ್ಪಿಸಿದೆ. ರಸ್ತೆಯ ಪಕ್ಕದಲ್ಲೇ ಹರಿಯುವುದರಿಂದ ಪ್ರವಾಸಿಗರ ದಂಡೇ ಹರಿದುಬರುತಿದ್ದು, ಈ ಚಿಕ್ಕ ಫಾಲ್ಸ್ ನೋಡಿ ಜನ ಎಂಜಾಯ್ ಮಾಡುತಿದ್ದಾರೆ.

  • ಜಲಪಾತ ನೋಡಲು ಹೋಗಿ ನಾಪತ್ತೆಯಾಗಿದ್ದ ತಂದೆ, ಮಗ ಶವವಾಗಿ ಪತ್ತೆ

    ಜಲಪಾತ ನೋಡಲು ಹೋಗಿ ನಾಪತ್ತೆಯಾಗಿದ್ದ ತಂದೆ, ಮಗ ಶವವಾಗಿ ಪತ್ತೆ

    ರಾಯಚೂರು: ಲಿಂಗಸೂಗೂರು ತಾಲೂಕಿನ ಗುಂಡಲಬಂಡಾ ಜಲಪಾತ ನೋಡಲು ಹೋಗಿ ನಾಪತ್ತೆಯಾಗಿದ್ದ ತಂದೆ, ಮಗ ಇಂದು ಶವವಾಗಿ ಪತ್ತೆಯಾಗಿದ್ದಾರೆ.

    ಮಹಾರಾಷ್ಟ್ರದಲ್ಲಿ ಚಿತ್ರಕಲಾ ಶಿಕ್ಷಕನಾಗಿದ್ದ 35 ವರ್ಷದ ಕೃಷ್ಣಪ್ಪ ಹಾಗೂ ಅವರ ಮಗ 5 ವರ್ಷದ ಧನುಷ್ ಶವವಾಗಿ ಪತ್ತೆಯಾಗಿದ್ದಾರೆ. ನಿನ್ನೆ ಸಂಜೆವರೆಗೂ ಕಾರ್ಯಾಚರಣೆ ನಡೆಸಲಾಗಿತ್ತು. ಆದರೆ ನೀರಿನ ಪ್ರಮಾಣ ಹೆಚ್ಚಾಗಿದ್ದರಿಂದ ಇಬ್ಬರು ಪತ್ತೆಯಾಗಿರಲಿಲ್ಲ. ಇಂದು ಬೆಳಗ್ಗೆಯಿಂದ ಹಟ್ಟಿ ಠಾಣೆ ಪೊಲೀಸ್, ಅಗ್ನಿಶಾಮಕ ದಳ, ಸ್ಥಳೀಯರು ಕಾರ್ಯಾಚರಣೆ ನಡೆಸಿ ಇಬ್ಬರ ಶವವನ್ನು ಹೊರತಂದಿದ್ದಾರೆ.

    ದೇವದುರ್ಗ ತಾಲೂಕಿನ ಮೂಡಲಗುಂಡ ಗ್ರಾಮದ ನಾಲ್ವರು ನಿನ್ನೆ ಜಲಪಾತ ನೋಡಲು ಹೋದಾಗ ಏಕಾಏಕಿ ನೀರಿನ ಪ್ರಮಾಣ ಹಾಗೂ ಸೆಳೆತ ಹೆಚ್ಚಾಗಿ ಅಪಾಯಕ್ಕೆ ಸಿಲುಕಿದ್ದರು. ಮಾಹಾಂತೇಶ್ ಹಾಗೂ ಸಿದ್ದಣ್ಣ ಎಂಬವರನ್ನು ರಕ್ಷಣೆ ಮಾಡಲಾಗಿತ್ತು. ಆದರೆ ಕಷ್ಣಪ್ಪ ಹಾಗೂ ಧನುಶ್ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದರು. ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದ ಹಳ್ಳಗಳು ತುಂಬಿ ಹರಿಯುತ್ತಿದ್ದು, ಜಲಪಾತ ಭೋರ್ಗರೆಯುತ್ತಿದೆ. ಜಲಪಾತದ ರುದ್ರ ರಮಣಿಯ ದೃಶ್ಯ ನೋಡಲು ಹೋಗಿ ತಂದೆ ಮಗ ಪ್ರಾಣ ಕಳೆದುಕೊಂಡಿದ್ದಾರೆ.

  • ಜಲಪಾತ ನೋಡಲು ಹೋದ ಮೂವರಲ್ಲಿ ತಂದೆ, ಮಗ ನಾಪತ್ತೆ

    ಜಲಪಾತ ನೋಡಲು ಹೋದ ಮೂವರಲ್ಲಿ ತಂದೆ, ಮಗ ನಾಪತ್ತೆ

    ರಾಯಚೂರು: ಲಿಂಗಸುಗೂರು ತಾಲೂಕಿನ ಗೊಲಪಲ್ಲಿ ಬಳಿಯ ಗುಂಡಲಬಂಡಾ ಜಲಪಾತ ನೋಡಲು ಹೋಗಿ ತಂದೆ, ಮಗ ಜಾರಿಬಿದ್ದು ನೀರಿನ ಸೆಳೆತಕ್ಕೆ ನಾಪತ್ತೆಯಾಗಿದ್ದಾರೆ. ಇನ್ನೋರ್ವ ಯುವಕ ಕಲ್ಲು ಬಂಡೆಯ ಆಸರೆ ಪಡೆದು ನಿಂತಿದ್ದರಿಂದ ಆತನನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಕೊನೆಗೂ ರಕ್ಷಣೆ ಮಾಡಿದ್ದಾರೆ.

    ದೇವದುರ್ಗ ತಾಲೂಕಿನ ಮೂರು ಜನ ಜಲಪಾತ ನೋಡಲು ಹೋಗಿದ್ದರು. ಆದರೆ ನೀರಿನ ಪ್ರಮಾಣ ಹಾಗೂ ಸೆಳೆತ ಹೆಚ್ಚಾಗಿದ್ದು ನೀರಿನಲ್ಲಿ ಕೊಚ್ಚಿಹೋಗಿದ್ದಾರೆ. ಅದೃಷ್ಟವಶಾತ್ 18 ವರ್ಷದ ಯುವಕ ಮಹಾಂತೇಶ್‍ನನ್ನ ರಕ್ಷಿಸಲಾಗಿದೆ. ಆದರೆ 5 ವರ್ಷದ ಧನುಷ್ ಹಾಗೂ ಅವನ ತಂದೆ 35 ವರ್ಷದ ಕೃಷ್ಣಪ್ಪ ನಾಪತ್ತೆಯಾಗಿದ್ದಾರೆ.

    ಕಲ್ಲು ಬಂಡೆಗಳೇ ಹೆಚ್ಚಾಗಿರುವುದರಿಂದ ರಕ್ಷಣಾ ಕಾರ್ಯಕ್ಕೆ ಬೋಟ್ ಬಳಸುವುದು ಅಸಾಧ್ಯವಾಗಿದೆ. ಹೀಗಾಗಿ ಹಗ್ಗದ ಮೂಲಕ ಬಂಡೆ ಮೇಲೆ ನಿಂತಿದ್ದ ಮಹಾಂತೇಶ್ ನನ್ನ ಅಗ್ನಿಶಾಮಕದಳದ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಹಗ್ಗ ಹಿಡಿದು ನೀರಿನಲ್ಲಿ ಬರಲು ಮೊದಲು ಹೆದರಿದ ಯುವಕನಿಗೆ ಧೈರ್ಯ ತುಂಬಿ ರಕ್ಷಣೆ ಮಾಡಲಾಗಿದೆ. ಆದರೆ ನೀರಿನ ರಭಸ ಹೆಚ್ಚಾಗಿರುವುದರಿಂದ ನಾಪತ್ತೆಯಾಗಿರುವ ತಂದೆ ಮಗುವಿನ ಪತ್ತೆಕಾರ್ಯ ಕಠಿಣ ಸವಾಲಾಗಿದೆ.

    ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದ ಹಳ್ಳಗಳು ತುಂಬಿ ಜಲಪಾತ ಬೋರ್ಗರೆಯುತ್ತಿದೆ. ದುರ್ಗಮ ಹಾದಿಯಲ್ಲಿರುವ ಜಲಪಾತ ನೋಡಲು ಹೋಗಿ ತಂದೆ ಮಗ ನಾಪತ್ತೆಯಾಗಿದ್ದಾರೆ. ಅಗ್ನಿಶಾಮಕ ದಳ ಹಾಗೂ ಹಟ್ಟಿ ಠಾಣೆ ಪೋಲಿಸರಿಂದ ಪತ್ತೆ ಕಾರ್ಯ ನಡೆದಿದೆ.

  • ಜಲಪಾತದಲ್ಲಿ ಗೆಳೆಯನಿಗೆ ವಿಡಿಯೋ ಕಾಲ್- ದೃಶ್ಯ ತೋರಿಸಲು ಹೋಗಿ MBBS ವಿದ್ಯಾರ್ಥಿ ದುರ್ಮರಣ

    ಜಲಪಾತದಲ್ಲಿ ಗೆಳೆಯನಿಗೆ ವಿಡಿಯೋ ಕಾಲ್- ದೃಶ್ಯ ತೋರಿಸಲು ಹೋಗಿ MBBS ವಿದ್ಯಾರ್ಥಿ ದುರ್ಮರಣ

    ಭುವನೇಶ್ವರ: ಸೆಲ್ಫಿ ಕ್ಲಿಕ್ಕಿಸಿ, ಗೆಳೆಯನಿಗೆ ವಿಡಿಯೋ ಕಾಲ್ ಮಾಡಿ ಪ್ರದೇಶದ ದೃಶ್ಯ ತೋರಿಸಲು ಹೋಗಿ 23 ವರ್ಷದ ಮೆಡಿಕಲ್ ವಿದ್ಯಾರ್ಥಿಯೊಬ್ಬ ದುರ್ಮರಣಕ್ಕೀಡಾದ ಘಟನೆ ಒಡಿಶಾದ ದಿಯೋಘರ್ ಎಂಬಲ್ಲಿ ನಡೆದಿದೆ.

    ಮೃತ ದುರ್ದೈವಿಯನ್ನು ಶುಭಂ ಪ್ರಸಾದ್ ಎಂದು ಗುರುತಿಸಲಾಗಿದ್ದು. ಈತ ಉತ್ತರಪ್ರದೇಶದ ಪ್ರಯಾಗ್‍ರಾಜ್ ನಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದ. ಪ್ರಧಾನ್‍ಪತ್ ಜಲಪಾತದಲ್ಲಿ ಸೆಲ್ಫಿ ತೆಗೆದುಕೊಳ್ಳುವ ಸಂದರ್ಭದಲ್ಲಿ ನೀರಿಗೆ ಬಿದ್ದು ಮೃತಪಟ್ಟಿದ್ದಾನೆ. ಕೂಡಲೇ ಒಡಿಆರ್ ಎಎಫ್ ತಂಡ ಸ್ಥಳಕ್ಕೆ ದೌಡಾಯಿಸಿ ಮೃತದೇಹವನ್ನು ಹೊರತೆಗೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

     

    ಮೃತ ಪ್ರಸಾದ್ ಎಂದಿನಂತೆ ಗುರುವಾರ ಬೆಳಗ್ಗೆ ವಾಕಿಂಗ್ ಹೋಗಿದ್ದಾರೆ. ಆ ಬಳಿಕ ಜಲಪಾತ ವೀಕ್ಷಿಸಿಲು ತೆರಳಿದ್ದಾರೆ. ಅಲ್ಲದೆ ಒಂದು ಹೆಜ್ಜೆ ಮುಂದೆ ಹೋಗಿ ಜಲಪಾತದ ತುತ್ತು ತುದಿಗೆ ಸೆಲ್ಫಿ ಕ್ಲಿಕ್ಕಿಸಲು ಹೋಗಿದ್ದಾರೆ. ಹೀಗೆ ಹೋದವರು ವಾಪಸ್ ಬರದೇ ಇದ್ದಾಗ ಕುಟುಂಬ ಹುಡುಕಾಟ ನಡೆಸಲು ಆರಂಭಿಸಿದೆ ಎಂದು ಅವರು ತಿಳಿಸಿದ್ದಾರೆ.

    ಇತ್ತ ಉತ್ತರಪ್ರದೇಶದಲ್ಲಿರುವ ಪ್ರಸಾದ್ ಗೆಳೆಯನೊಬ್ಬನಿಗೆ ಕರೆ ಮಾಡಿದಾಗ ಆತ, ಪ್ರಸಾದ್ ಅತಿ ಎತ್ತರ ಪ್ರದೇಶದಲಿ ನಿಂತು ವಿಡಿಯೋ ಕಾಲ್ ಮಾಡಿದ್ದ. ಈ ಮೂಲಕ ಅಲ್ಲಿನ ರಮಣೀಯ ದೃಶ್ಯಗಳನ್ನು ತೋರಿಸಿದ್ದ. ಆ ಬಳಿಕ ಆತ ಆಯತಪ್ಪಿ ನೀರಿಗೆ ಬಿದ್ದು ಮೃತಪಟ್ಟಿರಬಹುದೆಂದು ತಿಳಿಸಿದ್ದಾನೆ.

    ಕೂಡಲೆ ಕುಟುಂಬಸ್ಥರು ಹಾಗೂ ಒಡಿಆರ್ ಎಎಫ್ ತಂಡ ಸ್ಥಳಕ್ಕೆ ದೌಡಾಯಿಸಿತು. ಶುಕ್ರವಾರ ಬೆಳಗ್ಗೆ ಪ್ರಸಾದ್ ಮೃತದೇಹವನ್ನು ನೀರಿನಿಂದ ಹೊರತೆಗೆಯಲಾಯಿತು.

    ಘಟನೆ ಸಂಬಂಧ ದಿಯೋಘರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

  • ಪ್ರವಾಸಿಗರ ಹಾಟ್‍ಸ್ಪಾಟ್ ಆದ ಕಾಮೇನಹಳ್ಳಿ ಜಲಪಾತ

    ಪ್ರವಾಸಿಗರ ಹಾಟ್‍ಸ್ಪಾಟ್ ಆದ ಕಾಮೇನಹಳ್ಳಿ ಜಲಪಾತ

    ಚಿಕ್ಕಮಗಳೂರು: ಮಳೆನಾಡು ಮಲೆನಾಡಲ್ಲಿ ಮಳೆ ಬಹುತೇಕ ಕಡಿಮೆಯಾಗಿದ್ದು, ನಿಂತಲ್ಲೇ ದೇಹವನ್ನ ನಡುಗಿಸುವ ರಣಚಳಿ ಆರಂಭವಾಗಿದೆ. ಆದರೆ ವರ್ಷಪೂರ್ತಿ ನೀರನ್ನು ಹಿಡಿದಿಟ್ಟು ಹರಿಸುವ ಅರಣ್ಯದ ಶಕ್ತಿ ಶೋಲಾ ಕಾಡುಗಳಲ್ಲಿ ನೀರಿನ ಪ್ರಮಾಣ ಹಾಗೆ ಇದ್ದು ಜಲಪಾತಗಳಿಗೆ ನವ ಚೈತನ್ಯ ಬಂದಿದೆ. ಚಂದ್ರದ್ರೋಣ ಪರ್ವತಗಳ ಸೆರಗಲ್ಲಿರುವ ಕಲ್ಲತ್ತಿಗರಿ, ಡೈಮಂಡ್, ಶಬರಿ ಹಾಗೂ ಹೆಬ್ಬೆ ಜಲಪಾತಗಳ ವೈಭೋಗವನ್ನು ನೋಡಲೆರಡು ಕಣ್ಣುಗಳು ಸಾಲದಂತಾಗಿದೆ. ಅದರಲ್ಲೂ, ಚಿಕ್ಕಮಗಳೂರಿನಿಂದ ಅನತಿ ದೂರದಲ್ಲಿರುವ ಕಾಮೇನಹಳ್ಳಿ ಜಲಪಾತ ಬಂಡೆಗಳ ಹಾಲು ಸುರಿಯುತ್ತಿರುವಂತೆ ಭಾಸವಾಗುತ್ತಿದೆ.

    ಚಿಕ್ಕಮಗಳೂರು ತಾಲೂಕಿನ ಕಾಮೇನಹಳ್ಳಿ ಜಲಪಾತದಲ್ಲೀಗ ದೃಶ್ಯ ಕಾವ್ಯವೇ ಮನೆ ಮಾಡಿದೆ. ಪಶ್ಚಿಮ ಘಟ್ಟಗಳ ಸಾಲಿನಿಂದ ಹರಿದು ಬರುವ ಗಂಗಾ ಮಾತೆ ಕಾಮೇನಹಳ್ಳಿಯಲ್ಲಿ ಸುಮಾರು 70-90 ಅಡಿ ಎತ್ತರದಿಂದ ಧುಮ್ಮಿಕ್ಕುತ್ತಿದ್ದಾಳೆ. ಮೇಲಿಂದ ಶಾಂತವಾಗಿ ಹರಿದು ಬಂದು ಒಮ್ಮೆಲೇ ಎತ್ತರದಿಂದ ಧುಮ್ಮಿಕ್ತಿದ್ದು, ನೀರಿನ ಶಬ್ಧದೊಂದಿಗೆ ಹಕ್ಕಿ-ಪಕ್ಷಿಗಳ ಕಲರವ ಹೊಸದೊಂದು ಲೋಕವನ್ನೇ ಸೃಷ್ಟಿಸಿದೆ. ಇಲ್ಲಿಗೆ ಬರುತ್ತಿರುವ ಪ್ರವಾಸಿಗರು ಇಲ್ಲಿನ ರಮಣೀಯ ದೃಶ್ಯವನ್ನು ಕಂಡು ಒಬ್ಬೊಬ್ಬರು ಒಂದೊಂದು ಹೆಸರಿನಿಂದ ನಾಮಕರಣ ಮಾಡುತ್ತಿದ್ದಾರೆ. ಕೆಲವರು ಡೈಮಂಡ್ ಫಾಲ್ಸ್ ಎಂದರೆ, ಮತ್ತೆ ಕೆಲವರು ಕುಮಾರಗಿರಿ ಫಾಲ್ಸ್ ಅಂತಾರೆ. ಆದರೆ ಈ ಜಲಪಾತ ವಾಟರ್ ಫಾಲ್ಸ್ ಎಂದೇ ಖ್ಯಾತಿ. ಇದನ್ನೂ ಓದಿ: ಪ್ರವಾಸಿಗರ ಸ್ವರ್ಗ ಕಾಫಿನಾಡಿನ 9 ಗುಡ್ಡಗಳ ನಡುವಿನ ‘ಎತ್ತಿನಭುಜ’

    ಗಿರಿಶ್ರೇಣಿಗಳಲ್ಲಿ ಮಳೆ ನಿಂತರು ನಿರಂತರವಾಗಿ ಹರಿಯುತ್ತಿರುವ ನೀರಿನಿಂದ ಜಲಪಾತವೀಗ ಮೈದುಂಬಿ ಹರಿಯುತ್ತಿದ್ದು ಪ್ರವಾಸಿಗರ ಹಾಟ್‍ಸ್ಪಾಟ್ ಆಗಿ ಬದಲಾಗಿದೆ. ಗಿರಿ ಮಧ್ಯೆಯಿಂದ ಮಣ್ಣಿನ ಬಣ್ಣದಲ್ಲಿ ಹರಿದು ಬರುವ ನೀರು ಜಲಪಾತದಿಂದ ಧುಮ್ಮಿಕ್ಕುವಾಗ ಹಾಲ್ನೋರೆಯಂತೆ ಭಾಸವಾಗುತ್ತಿರುವುದು ನೋಡುಗರನ್ನು ಮಂತ್ರಮುಗ್ಧರನ್ನಾಗಿಸುತ್ತಿದೆ. ಚಿಕ್ಕಮಗಳೂರಿನಿಂದ 30 ಕಿಮೀ ದೂರದಲ್ಲಿರುವ ಈ ಜಲಪಾತಕ್ಕೆ ಸರಿಯಾದ ದಾರಿ ಇಲ್ಲ.

    ಸಖರಾಯಪಟ್ಟಣದ ಸಮೀಪ ಬರುವ ಈ ಜಲಪಾತಕ್ಕೆ ಹೋಗುವುದು ಕೂಡ ಸವಾಲೇ. ಚಿಕ್ಕಮಗಳೂರಿನಿಂದ ಮಲ್ಲೆನಹಳ್ಳಿ ಮಾರ್ಗವಾಗಿ 30 ಕಿ.ಮೀ. ಸಾಗಿ ಕಾಮೇಹಳ್ಳಿಗೆ ಎಂಟ್ರಿಯಾದರೆ ನೀರಿನ ಶಬ್ಧವೇ ನೋಡುಗರಿಗೆ ದಾರಿ ತೋರಿಸುತ್ತೆ. ಬೈಕ್ ಅಥವಾ ಕಾರು ಯಾವುದನ್ನಾದರು ನಿಲ್ಲಿಸಿ ಸುಮಾರು ಒಂದೂವರೆ ಕಿ.ಮೀ. ನಡೆದರೆ ಈ ಪ್ರಕೃತಿಯ ನೈಜ ಸೊಬಗು ಅನಾವರಣಗೊಳ್ಳುತ್ತೆ. ಇದನ್ನೂ ಓದಿ: ನಿಮಿಷಕ್ಕೊಮ್ಮೆ ಬದಲಾಗುವ ಪ್ರಕೃತಿಯನ್ನು ನೋಡಿ ಮಂತ್ರಮುಗ್ಧರಾದ ಪ್ರವಾಸಿಗರು

    ಇಲ್ಲಿನ ನೈಸರ್ಗಿಕ ಸೌಂದರ್ಯಕ್ಕೆ ಮನಸೋಲುವ ಪ್ರವಾಸಿಗರು ಜಲಧಾರೆಯಲ್ಲಿ ಮಿಂದೆದ್ದು, ತಮ್ಮದೇ ಲೋಕದಲ್ಲಿ ಸ್ವಚ್ಚಂದವಾಗಿ ಮೈ ಮರೆಯುತ್ತಾರೆ. ಬಂಡೆಗಳ ಮೇಲಿಂದ ಧುಮ್ಮಿಕ್ಕುವ ಜಲಧಾರೆಯ ಸೊಬಗನ್ನು ಕಣ್ತುಂಬಿಕೊಳ್ಳುವ ಪ್ರವಾಸಿಗರು ಇಲ್ಲಿನ ಸೌಂದರ್ಯ ಫಿದಾ ಆಗುತ್ತಿದ್ದಾರೆ. ಇಲ್ಲಿನ ಹತ್ತಾರು ಬಂಡೆಗಳು ಡೈಮಂಡ್ ಆಕೃತಿಯಲ್ಲಿರುವುದರಿಂದ ಈ ಜಲಪಾತವನ್ನು ಡೈಮಂಡ್ ಜಲಪಾತ ಎಂದು ಹೇಳುತ್ತಾರೆ. ಅಲ್ಲದೆ ಕಲ್ಲಿನ ಮೇಲೆ ನಿರಂತರವಾಗಿ ಹರಿಯುವ ನೀರು ನಾನಾ ಆಕಾರದಲ್ಲಿ ಕಲ್ಲನ್ನು ಕೊರೆದಿದೆ. ಇದು ನೋಡುಗರಿಗೆ ಮತ್ತಷ್ಟು ಮುದ ನೀಡ್ತಿದೆ.

    ಈ ಸುಂದರ ತಾಣ ಸ್ಥಳಿಯರನ್ನು ಬಿಟ್ಟರೆ ಅಷ್ಟಾಗಿ ಯಾರಿಗೂ ಗೊತ್ತಿಲ್ಲ. ಈ ಜಾಗದ ಬಗ್ಗೆ ಗೊತ್ತಿರುವವರುವೀಕೆಂಡ್‌ನಲ್ಲಿ ಬಂದು ಕೊರೆಯುವ ನೀರಿನಲ್ಲಿ ಮಿಂದೆದ್ದು ಎಂಜಾಯ್ ಮಾಡುತ್ತಿದ್ದಾರೆ. ಆದರೆ ಇಲ್ಲಿಗೆ ಹೋಗುವುದಕ್ಕೆ ಸೂಕ್ತ ಮಾರ್ಗವಿಲ್ಲ. ಸರ್ಕಾರ ಈ ತಾಣವನ್ನು ಪ್ರವಾಸೋಧ್ಯಮ ತಾಣವನ್ನಾಗಿಸಿದ್ರೆ ಪ್ರವಾಸಿಗರು ಕಾಫಿನಾಡಿನ ಸೌಂದರ್ಯವನ್ನು ಸವಿಯಬಹುದು, ಸರ್ಕಾರಕ್ಕೂ ಆದಾಯ ಬರಲಿದೆ.

  • ಬಿಸಿಲನಾಡಲ್ಲಿ ಧುಮ್ಮಿಕ್ಕುವ ಗವಿ ಸಿದ್ಧಲಿಂಗೇಶ್ವರ ಜಲಪಾತಕ್ಕೆ ಬನ್ನಿ

    ಬಿಸಿಲನಾಡಲ್ಲಿ ಧುಮ್ಮಿಕ್ಕುವ ಗವಿ ಸಿದ್ಧಲಿಂಗೇಶ್ವರ ಜಲಪಾತಕ್ಕೆ ಬನ್ನಿ

    ಯಾದಗಿರಿ: ಪ್ರಕೃತಿ ತನ್ನಲ್ಲಿರುವ ವೈಶಿಷ್ಟ್ಯತೆಯ ಗುಟ್ಟನ್ನು ಯಾರಿಗೂ ಬಿಟ್ಟುಕೊಡುವುದಿಲ್ಲ ಎನ್ನುವುದಕ್ಕೆ ಯಾದಗಿರಿ ಜಿಲ್ಲೆಯೇ ಸಾಕ್ಷಿ. ಸುಡುಬಿಸಿಲಿಗೆ ಮೈ ಒಡ್ಡಿ ನಿಂತ ಬೃಹತ್ ಕಲ್ಲುಬಂಡೆಗಳು ಒಂದು ಕಡೆಯಾದರೆ, ಮಲೆನಾಡಿನ ಚೆಂದಕ್ಕೆ ಸ್ಪರ್ಧೆಯೊಡ್ಡುವ ನಿಸರ್ಗದ ಐಸಿರಿ ಮತ್ತೊಂದೆಡೆ. ಇಲ್ಲಿರುವ ಹಚ್ಚ ಹಸಿರು ನಿಸರ್ಗ ಪ್ರೇಮಿಗಳನ್ನು ತನ್ನೆಡೆಗೆ ಕೈ ಬೀಸಿ ಕರೆಯುತ್ತಿದ್ದರೆ, ಎಲ್ಲಾ ಋತುವಿನಲ್ಲೂ ಧುಮ್ಮಿಕ್ಕಿ ಹರಿಯುವ ಜಲಪಾತದ ಕುತೂಹಲ ಮತ್ತೊಂದು ಕಡೆಯಾಗಿದೆ.

    ಈ ಜಲಧಾರೆಯನ್ನು ನೋಡಿದರೆ ಇದು ಮಲೆನಾಡು ಇರಬೇಕು ಅಂದುಕೊಂಡಿದ್ದರೆ ಖಂಡಿತ ನಿಮ್ಮ ಊಹೆ ತಪ್ಪು. ಬಿಸಿಲನಾಡು ಎಂದು ಕರೆಯಲ್ಪಡುವ ಯಾದಗಿರಿ ಜಿಲ್ಲೆಯಲ್ಲಿರುವ ಈ ಸೊಬಗ ಸಿರಿ ಮಿನಿಮಲೆನಾಡು ಎಂದೆ ಪ್ರಸಿದ್ಧಿ ಪಡೆದಿದೆ. ಜಿಲ್ಲೆಯ ಗುರುಮಠಕಲ್ ತಾಲೂಕಿನ ಚಿಂತನಹಳ್ಳಿ ಬಳಿಯ ಪ್ರಕೃತಿ ಮಾತೆಯ ಮಡಿಲಲ್ಲಿ ಗವಿ ಸಿದ್ಧಲಿಂಗೇಶ್ವರ ಜಲಪಾತವಿದೆ. ಇದು ಪ್ರಕೃತಿ ಪ್ರೇಮಿಗಳನ್ನು ಹಾಗೂ ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ. ಜಿಲ್ಲಾ ಕೇಂದ್ರದಿಂದ ಕೇವಲ 35 ಕಿಲೋ ಮೀಟರ್ ಕ್ರಮಿಸಿದರೆ ಬೆಟ್ಟ ಗುಡ್ಡಗಳ ನಡುವೆ ತನ್ನದೆ ಐಸಿರಿ ಹೊತ್ತ ಈ ವಿಶೇಷ ಜಲಪಾತ ಸಿಗುತ್ತದೆ.

    ಎಲ್ಲಾ ಋತುವಿನಲ್ಲೂ ಧುಮ್ಮಿಕ್ಕಿ ಹರಿಯುವ ಜಲಪಾತಕ್ಕೆ ಇಲ್ಲಿಯವರೆಗೂ ಬರದ ಛಾಯೆ ಆವರಿಸಿಲ್ಲ. ಇದು ಈ ಜಲಪಾತದ ಮತ್ತೊಂದು ವಿಶೇಷ. ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಅನುಭವಿಸಲೆಂದೇ ಕಲಬುರಗಿ, ರಾಯಚೂರು ಮತ್ತು ಜಿಲ್ಲೆಯ ಗಡಿಭಾಗದಲ್ಲಿರುವ ತೆಲಂಗಾಣ, ಆಂಧ್ರದಿಂದ ಪ್ರತಿದಿನ ನೂರಾರು ಪ್ರವಾಸಿಗರ ದಂಡೆ ಇಲ್ಲಿಗೆ ಬರುತ್ತದೆ. ಹಚ್ಚ ಹಸಿರಿನ ಸೊಬಗಿನ ಮಧ್ಯೆ ವಯ್ಯಾರದಿಂದ ಹರಿಯುತ್ತಿರುವ ಜಲಧಾರೆಯ ನಡುವೆ ನೆನೆದು ಪ್ರವಾಸಿಗರು ಮತ್ತು ಪುಟಾಣಿಗಳು ಗವಿಯೊಳಗೆ ಹೋಗುತ್ತಾರೆ.

    ಈ ಜಲಪಾತದ ಅಡಿಯ ಗುಹೆಯಲ್ಲಿ ಗವಿ ಸಿದ್ಧಲಿಂಗೇಶ್ವರ ದೇವಸ್ಥಾನವಿದೆ. ವಿಶಿಷ್ಟ ಎಂದರೆ ಗವಿ ಸಿದ್ಧಲಿಂಗೇಶ್ವರನ ದರ್ಶನಕ್ಕೆ ಹೋಗಬೇಕೆಂದರೆ ಜಲಪಾತದಿಂದ ಧುಮುಕುವ ನೀರಿನ ಅಡಿಯಲ್ಲೇ ಸಾಗಿ, ನೀರಿನಲ್ಲಿ ಮಿಂದ್ದೆದ್ದು ಸಿದ್ಧಲಿಂಗೇಶ್ವರನ ದರ್ಶನ ಪಡೆಯಬೇಕು.

    ಜಲಪಾತದ ನೀರಿನಿಂದ ಪವಿತ್ರರಾಗಿ ದೇವರ ದರ್ಶನ ಪಡೆದು ಕೃತಾರ್ಥರಾಗುವುದು ಒಂದೆಡೆಯಾದರೆ, ಜಲಧಾರೆಯ ಅಡಿಯಲ್ಲಿ ಮಿಂದೆದ್ದು ಹೊರ ಬರುವುದು ಮತ್ತೊಂದೆಡೆ. ಇದು ಪ್ರವಾಸಿಗರನ್ನು ಪುಳಕಿತರನ್ನಾಗಿಸುತ್ತಿದೆ. ಹೀಗಾಗಿ ಇಲ್ಲಿ ಪ್ರವಾಸಿಗರ ಜೊತೆ ಭಕ್ತರು ಸಹ ಸಾಕಷ್ಟು ಸಂಖ್ಯೆಯಲ್ಲಿ ಸೇರುತ್ತಾರೆ.

    ಆದರೆ ವಿಪರ್ಯಾಸವೆಂದರೆ ಇಂತಹ ವಿಶಿಷ್ಟ ಜಿಲ್ಲೆಯಲ್ಲಿದ್ದರೂ ಪ್ರವಾಸೋದ್ಯಮ ಇಲಾಖೆ ಮತ್ತು ಜಿಲ್ಲಾಡಳಿತ ಈ ಸ್ಥಳವನ್ನು ಅಭಿವೃದ್ಧಿ ಪಡಿಸುವಲ್ಲಿ ನಿರ್ಲಕ್ಷ್ಯ ವಹಿಸುತ್ತಿವೆ. ಇದು ಇಲ್ಲಿಗೆ ಬರುವ ಪ್ರವಾಸಿಗರಿಗೆ ಕೊಂಚ ಅಸಮಾಧಾನ ತರುತ್ತಿದೆ. ಯಾದಗಿರಿ ಅಂದರೆ ತುಂಬಾ ಬಿಸಿಲು ಎನ್ನುವವರು ನಿಮ್ಮ ಆತಂಕ ಬಿಟ್ಟು ಈ ಸ್ಥಳಕ್ಕೆ ಭೇಟಿ ನೀಡಬಹುದು. ಈ ಬಿಸಿಲು ನಾಡಿನಲ್ಲಿ ಜಲಧಾರೆಯ ಸಿರಿಯನ್ನು ಕಣ್ತುಂಬಿಕೊಳ್ಳುವುದರ ಜೊತೆಗೆ ಶ್ರೀ ಗವಿ ಸಿದ್ಧಲಿಂಗೇಶ್ವರನ ಆಶೀರ್ವಾದ ಸಹ ಸಿಗಲಿದೆ.

  • ಮಳೆ ಇಲ್ಲದಿದ್ರೂ ವಿಸ್ಮಯ ರೀತಿಯಲ್ಲಿ ಬೆಟ್ಟದಿಂದ ಹರಿಯುತ್ತಿರುವ ಝಳು ಝಳು ನೀರು

    ಮಳೆ ಇಲ್ಲದಿದ್ರೂ ವಿಸ್ಮಯ ರೀತಿಯಲ್ಲಿ ಬೆಟ್ಟದಿಂದ ಹರಿಯುತ್ತಿರುವ ಝಳು ಝಳು ನೀರು

    ಬೆಂಗಳೂರು: ಮಳೆಗಾಲ ಕಳೆದು ಬೇಸಿಗೆ ಕಾಲದ ಆರಂಭದಲ್ಲಿ ನಾನಾ ವಿಸ್ಮಯಕಾರಿ ಘಟನೆಗಳಿಗೆ ಸಾಕ್ಷಿಯಾಗಿರುವ ದಕ್ಷಿಣ ಕಾಶಿ ಎಂದು ಪ್ರಸಿದ್ಧವಾಗಿರುವ ಬೆಟ್ಟದಲ್ಲಿ ಈ ಬಾರಿ ಮತ್ತೊಂದು ಪವಾಡಕ್ಕೆ ಕಾರಣವಾಗಿದೆ.

    ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಶಿವಗಂಗೆ ಬೆಟ್ಟ, ಸಮುದ್ರ ಮಟ್ಟದಿಂದ ಸರಿಸುಮಾರು 4620 ಅಡಿ ಎತ್ತರವಿದೆ. ಈ ಬೆಟ್ಟದ ಮಧ್ಯದ ಭಾಗದಲ್ಲಿ ಬೆಳ್ಳಿಯ ಹಾಗೂ ಹಾಲಿನ ಲೇಪನ ರೀತಿಯಲ್ಲಿ ಜೋಪು ನೀರು ಹರಿಯುತ್ತಿರುವುದು ಸ್ಥಳೀಯ ಜನರಲ್ಲಿ ಸಂತಸ ಮೂಡಿಸಿದೆ. ಈ ಶಿವಗಂಗೆ ಬೆಟ್ಟ ಸಂಪೂರ್ಣ ಬೃಹತ್ ಆಕಾರದ ಕಲ್ಲು ಬಂಡೆಗಳಿಂದ ಕೂಡಿದ್ದು, ಈ ಬಂಡೆಗಳ ಮಧ್ಯೆ ಹರಿಯುತ್ತಿರುವ ಜೋಪು ನೀರನ್ನು ನೋಡಲು ಸುಂದರವಾಗಿದೆ.

    ಈ ಶಿವಗಂಗೆ ಬೆಟ್ಟ ಪುರಾತತ್ವ, ಮುಜರಾಯಿ ಇಲಾಖೆ ಹಾಗೂ ಸರ್ಕಾರದ ನಿರ್ಲಕ್ಷ್ಯಕ್ಕೆ ಕಾರಣವಾಗಿದ್ದು, ಯಾವುದೇ ಮೂಲಭೂತ ಸೌಲಭ್ಯಗಳನ್ನು ಒದಗಿಸುವಲ್ಲಿ ವಿಫಲವಾಗಿವೆ. ಹೀಗಾಗಿ ಪ್ರವಾಸಿಗರು ಹಾಗೂ ಸ್ಥಳೀಯರು ಸಹ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಈ ಸುಂದರ ರಮಣೀಯವಾಗಿರುವ ಧಾರ್ಮಿಕ ದತ್ತಿ ಹಾಗೂ ಪ್ರವಾಸಿ ತಾಣವನ್ನು ಅಭಿವೃದ್ಧಿ ಪಡಿಸುವಂತೆ ಆಗ್ರಹಿಸಿದ್ದಾರೆ.

    ರಾಜ ಮಹರಾಜರು ಆಳ್ವಿಕೆಯಲ್ಲಿ ನಾನಾ ಪವಾಡಗಳಿಗೆ ಸಾಕ್ಷಿಯಾಗಿ, ಇಂದಿಗೂ ವಿಸ್ಮಯಗಳಿಗೆ ಸಾಕ್ಷಿಯಾಗಿರುವ, ಈ ಶಿವಗಂಗೆ ಬೆಟ್ಟದ ಸುತ್ತಲೂ ಈ ನೀರಿನ ಝರಿಗಳು ಪ್ರವಾಸಿಗರನ್ನ ತನ್ನತ್ತ ಕೈಬೀಸಿ ಕರೆಯುತ್ತಿವೆ.

  • ನಿಮಿಷಕ್ಕೊಮ್ಮೆ ಬದಲಾಗುವ ಪ್ರಕೃತಿಯನ್ನು ನೋಡಿ ಮಂತ್ರಮುಗ್ಧರಾದ ಪ್ರವಾಸಿಗರು

    ನಿಮಿಷಕ್ಕೊಮ್ಮೆ ಬದಲಾಗುವ ಪ್ರಕೃತಿಯನ್ನು ನೋಡಿ ಮಂತ್ರಮುಗ್ಧರಾದ ಪ್ರವಾಸಿಗರು

    ಚಿಕ್ಕಮಗಳೂರು: ಚಳಿಗಾಲ ಆರಂಭವಾಗಿದ್ದು, ಕಾಫಿನಾಡಿನ ಫಾಲ್ಸ್‌ಗಳಿಗೆ ಜೀವಕಳೆ ಬಂದು ಗಿರಿಯ ಪ್ರಕೃತಿ ವಿಸ್ಮಯವನ್ನು ವರ್ಣಿಸುವುದಕ್ಕೆ ಪದಗಳೇ ಸಾಲದು. ನಿಮಿಷಕ್ಕೊಮ್ಮೆ ಬದಲಾಗುವ ಪ್ರಕೃತಿ ಪ್ರವಾಸಿಗರನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಚಳಿಯ ಗಾಳಿಯೊಂದಿಗಿನ ಮಂಜಿನಾಟ ನೋಡುಗರಿಗೆ ರಸದೌತಣ. ಇಲ್ಲಿನ ಮನಮೋಹಕ ತಾಣಗಳಿಗೆ ಫಿದಾ ಆಗಿರುವ ಪ್ರವಾಸಿಗರಿಗೆ ಕಾಫಿನಾಡೆಂದರೆ ಪುಣ್ಯಭೂಮಿ. ಅದರಲ್ಲೂ ಈ ಬಾರಿ ನವೆಂಬರ್ ನ ಚಳಿಯಲ್ಲೂ ಕಾಫಿನಾಡಿನ ಫಾಲ್ಸ್‌ಗಳು ಮೈದುಂಬಿ ಹರಿಯುತ್ತಿದ್ದು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.

    ಮಳೆಗಾಲದಲ್ಲಿ ಮೈದುಂಬಿ ಹರಿಯುವ ಈ ಜಲಪಾತಗಳು ನವೆಂಬರ್-ಡಿಸೆಂಬರ್ ವೇಳೆಗೆ ಶಾಂತವಾಗಿರುತ್ತವೆ. ಆದರೆ ಈ ಬಾರಿ ಗಿರಿಯಲ್ಲಿನ ನಿರಂತರ ಮಳೆಯಿಂದಾಗಿ ಮೈದುಂಬಿ ಹರಿಯುತ್ತಿವೆ. ಚಿಕ್ಕಮಗಳೂರಿನ ಹೊನ್ನಮ್ಮನ ಹಳ್ಳ, ಕಲ್ಲತ್ತಿಗರಿ, ಝರಿ ಫಾಲ್ಸ್‌ಗಳು ನವೆಂಬರ್ ನ ಚಳಿಯಲ್ಲೂ ನೋಡುಗರಿಗೆ ಸಿಕ್ಕಾಪಟ್ಟೆ ಕಿಕ್ ಕೊಡುತ್ತಿವೆ.

    ಕಾಫಿನಾಡಿನ ಗಿರಿಭಾಗದ ಯಾವುದೇ ಸ್ಥಳಕ್ಕೆ ಹೋಗಬೇಕೆಂದರೂ ಈ ಝರಿಯೇ ಜಂಕ್ಷನ್, ಮುಳ್ಳಯ್ಯನಗಿರಿ, ದತ್ತಪೀಠ, ಸೀತಾಳಯ್ಯನಗಿರಿ, ಕೆಮ್ಮಣ್ಣುಗುಂಡಿಗೆ ಭೇಟಿ ನೀಡುವ ಪ್ರವಾಸಿಗರೆಲ್ಲ ಈ ಮಿನಿ ಜಲಪಾತದಲ್ಲಿ ಮಿಂದೇಳದೆ ಮುಂದೆ ಹೋಗಲ್ಲ. ಕಾಫಿನಾಡಿನ ಪ್ರವಾಸಿ ತಾಣಗಳಿಗೆ ಆಗಮಿಸುವ ಪ್ರತಿಯೊಬ್ಬರೂ ಇಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸಿ, ನೀರಲ್ಲಿ ಆಡಿ, ಫೋಟೋ ಶೂಟ್ ಮಾಡಿಸಿಕೊಂಡೇ ಮುಂದೆ ಹೋಗುತ್ತಾರೆ.

    ಚಿಕ್ಕಮಗಳೂರಿನ ಕೈ ಮರದಿಂದ ಹೊರಟರೆ, ಹಾವು ಬಳುಕಿನ ಮೈಕಟ್ಟಿನ ರಸ್ತೆಯುದ್ದಕ್ಕೂ ಎಂಜಾಯ್ ಮಾಡುತ್ತಲೇ ಸಾಗುವ ಪ್ರವಾಸಿಗರು ಗಿರಿಭಾಗಕ್ಕೆ ಎಂಟ್ರಿ ಕೊಟ್ಟ ಕೂಡಲೇ ಹೆಜ್ಜೆ-ಹೆಜ್ಜೆಗೂ ಮಲೆನಾಡನ್ನ ಸುಖಿಸುತ್ತಾರೆ. ನಿಮಿಷಕ್ಕೊಮ್ಮೆ ಬದಲಾಗುವ ಪ್ರಕೃತಿಯನ್ನು ಕಂಡು ಮೂಕವಿಸ್ಮಿತರಾಗುತ್ತಾರೆ. ನೋಡ-ನೋಡುತ್ತಿದ್ದಂತೆಯೇ ಮೋಡ ದಾರಿಯೇ ಕಾಣದಂತೆ ಕವಿದರೆ, ಕ್ಷಣಾರ್ಧದಲ್ಲಿ ತಣ್ಣಗೆ ಬೀಸುವ ಗಾಳಿ ಪ್ರವಾಸಿಗರ ಅನುಕೂಲಕ್ಕೆಂದೇ ಇದೆ ಏನೋ ಎಂದು ಅನ್ನಿಸುತ್ತೆ.

    ಇಲ್ಲಿನ ಗಾಳಿ ಹಾಗೂ ಮೋಡದ ನಡುವಿನ ಚೆಲ್ಲಾಟ ನೋಡುಗರಿಗೆ ಇನ್ನಷ್ಟು ಖುಷಿ ನೀಡುತ್ತಿದೆ. ಮುಗಿಲೆತ್ತರದ ಬೆಟ್ಟಗುಡ್ಡಗಳ ಮೇಲೆ ನಿಂತು ಪ್ರಕೃತಿ ಸೌಂದರ್ಯ ಸವಿಯುವುದೇ ಪ್ರವಾಸಿಗರಿಗೆ ಬಲು ಪ್ರೀತಿ. ಇಂತಹ ಸಂಪದ್ಭರಿತ ನಾಡಿಗೆ ವರ್ಷಕ್ಕೆ ಮೂರ್ನಾಲ್ಕು ಬಾರಿಯಾದರೂ ಬರಬೇಕು ಎನ್ನುವುದು ಅದೆಷ್ಟೋ ಪ್ರವಾಸಿಗರ ಆಸೆಯಾಗಿದೆ. ಕಾಫಿನಾಡಲ್ಲಿ ಇಂತಹ ಅದೆಷ್ಟೋ ನೈಸರ್ಗಿಕ ತಾಣಗಳಿವೆ. ಅವುಗಳಲ್ಲಿ ಬೆಳಕಿಗೆ ಬಂದಿರುವುದು ಒಂದೆರೆಡಾದರೆ, ಬಾರದಿರೋದು ಹತ್ತಾರು ಇವೆ.

  • ಗಗನಚುಂಬಿ ಕಟ್ಟಡದಲ್ಲಿ ಜಲಪಾತ – ವಿಡಿಯೋ ನೋಡಿ

    ಗಗನಚುಂಬಿ ಕಟ್ಟಡದಲ್ಲಿ ಜಲಪಾತ – ವಿಡಿಯೋ ನೋಡಿ

    ಮುಂಬೈ: ಭಾರೀ ಮಳೆಯಿಂದಾಗಿ ನಗರದ ಗಗನಚುಂಬಿ ಕಟ್ಟಡದಿಂದ ಜಲಪಾತದಂತೆ ನೀರು ಹರಿದಿದೆ. ಇದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ದಕ್ಷಿಣ ಮುಂಬೈನಲ್ಲಿ ಈ ಘಟನೆ ನಡೆದಿದ್ದು, ವಿಡಿಯೋ ವೈಲ್ ಆಗುತ್ತಿದ್ದಂತೆಯೇ ಜನ ಕಟ್ಟಡದಿಂದ ನೀರು ಬೀಳುತ್ತಿರುವುದನ್ನು ನೋಡಲು ಮುಗಿಬಿದ್ದಿದ್ದಾರೆ.

    40 ಸೆಕೆಂಡ್ ಇರುವ ಈ ವಿಡಿಯೋವನ್ನು ಮೊದಲು ಸುದರ್ಶನ್ ಎಂಬವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ. ವಿಡಿಯೋದಲ್ಲಿ ಕಫ್ ಪರೇಡ್ ಪ್ರದೇಶದಲ್ಲಿರುವ 40 ಅಂತಸ್ತಿನ ಕಟ್ಟಡದಲ್ಲಿ ಈ ಕೃತಕ ಜಲಪಾತ ನಿರ್ಮಾಣವಾಗಿದೆ. ಜನ ಈ ದೃಶ್ಯವನ್ನು ನೋಡಿ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.

    ಇದು ಭಾರೀ ಮಳೆಯಿಂದಾಗಿ ಜಲಪಾತದಂತೆ ನೀರು ಹರಿಯುತ್ತಿಲ್ಲ. ಬದಲಾಗಿ ನೀರಿನ ಟ್ಯಾಂಕಿನಲ್ಲಿ ಬಿರುಕು ಕಾಣಿಸಿಕೊಂಡ ಪರಿಣಾಮ ಟ್ಯಾಂಕ್ ನಿಂದ ನೀರು ಜಲಪಾತದಂತೆ ಸೋರಿಕೆಯಾಗುತ್ತಿದೆ ಎಂದು ಟ್ವಿಟ್ಟರ್ ಬಳಕೆದಾರರೊಬ್ಬರು ತಿಳಿಸಿದ್ದಾರೆ.

    ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಶೇರ್ ಆಗುತ್ತಿದ್ದಂತೆಯೇ ಹಲವಾರು ಕಾಮೆಂಟ್ ಗಳು ಬಂದಿವೆ. ಈ ಕಟ್ಟಡದ ಮಾಲೀಕ ನೀರು ನೋಡಲು ಬರುವವರಿಗೆ ಹಣ ಪಡೆದುಕೊಳ್ಳುವುದು ಒಳ್ಳೆಯದು ಎಂದು ಕೆಲವರು ಸಲಹೆ ಕೂಡ ಕೊಟ್ಟಿದ್ದಾರೆ.

    ನಗರದಲ್ಲಿ ಇಂದು ಭಾರೀ ಮಳೆಯಾಗುತ್ತಿದೆ. ಗಂಟೆಗಟ್ಟಲೆ ಮಳೆ ಸುರಿದಿದ್ದರಿಂದ ಹಲವು ಪ್ರದೇಶಗಳು ಜಲಾವೃತವಾಗಿವೆ. ಮುಂದಿನ 24 ಗಂಟೆಯಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಇದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ.

    https://twitter.com/IGiveGyaan/status/1169178339786948608?ref_src=twsrc%5Etfw%7Ctwcamp%5Etweetembed%7Ctwterm%5E1169178339786948608&ref_url=https%3A%2F%2Fwww.ndtv.com%2Fmumbai-news%2Fon-camera-mumbai-skyscraper-turns-into-waterfall-amid-heavy-rain-in-cuffe-parade-2095780

  • ಸ್ನೇಹಿತನನ್ನು ರಕ್ಷಿಸಲು ಹೋಗಿ ಕರ್ನಾಟಕದ ಯುವಕ ಅಮೆರಿಕದಲ್ಲಿ ಸಾವು

    ಸ್ನೇಹಿತನನ್ನು ರಕ್ಷಿಸಲು ಹೋಗಿ ಕರ್ನಾಟಕದ ಯುವಕ ಅಮೆರಿಕದಲ್ಲಿ ಸಾವು

    ವಾಷಿಂಗ್ಟನ್: ಸ್ನೇಹತನನ್ನು ರಕ್ಷಿಸಲು ಹೋಗಿ ಜಲಪಾತದಲ್ಲಿ ಧುಮುಕಿ ರಾಯಚೂರು ಮೂಲದ ಯುವಕ ಮೃತಪಟ್ಟ ಘಟನೆ ಬುಧವಾರ ಅಮೆರಿಕದ ಟರ್ನರ್ ಫಾಲ್ಸ್ ನಲ್ಲಿ ನಡೆದಿದೆ.

    ಅಜಯ್ ಕುಮಾರ್ (24) ಮೃತಪಟ್ಟ ಯುವಕ. ಅಜಯ್ ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಶ್ರೀಪುರಂಜಂಕ್ಷನ್ ನಿವಾಸಿ. ಕಳೆದ ಎಂಟು ತಿಂಗಳ ಹಿಂದೆ ಅಜಯ್ ಅಮೇರಿಕದ ಹೂಸ್ಟನ್ ನಲ್ಲಿ ಎಂ.ಎಸ್ ಎಂಜಿನಿಯರಿಂಗ್ ಮಾಡಲು ತೆರಳಿದ್ದನು.

    ಬುಧವಾರ ಅಜಯ್ ತನ್ನ ಸ್ನೇಹಿತರ ಜೊತೆ ಟರ್ನರ್ ಫಾಲ್ಸ್‌ಗೆ ತೆರಳಿದ್ದನು. ಜಲಪಾತಕ್ಕೆ ತೆರಳಿದಾಗ ಸ್ನೇಹಿತ ಜಾರಿ ಬಿದ್ದಿದ್ದು, ಆತನನ್ನು ರಕ್ಷಿಸಲು ಅಜಯ್ ಜಲಪಾತಕ್ಕೆ ಧುಮುಕಿದ್ದನು. ಈ ವೇಳೆ ಇಬ್ಬರೂ ಜಲಪಾತದಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

    ಇಂದು ಅಜಯ್ ಮೃತದೇಹ ರಾಯಚೂರಿಗೆ ಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.