Tag: ಜಲಪಾತ

  • ಇಂದಿನಿಂದ ಜೋಗ ಜಲಪಾತ ವೀಕ್ಷಣೆಗೆ ಪ್ರವಾಸಿಗರಿಗೆ ಮುಕ್ತ ಅವಕಾಶ

    ಇಂದಿನಿಂದ ಜೋಗ ಜಲಪಾತ ವೀಕ್ಷಣೆಗೆ ಪ್ರವಾಸಿಗರಿಗೆ ಮುಕ್ತ ಅವಕಾಶ

    ಶಿವಮೊಗ್ಗ: ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ಕಳೆದ ಎರಡು ತಿಂಗಳಿಂದ ಜೋಗ ಜಲಪಾತ ವೀಕ್ಷಣೆ ಪ್ರವಾಸಿಗರಿಗೆ ಅವಕಾಶ ಇರಲಿಲ್ಲ. ಎಲ್ಲಾ ಪ್ರವಾಸಿ ತಾಣಗಳು ಬಂದ್ ಆಗಿದ್ದವು. ಇದೀಗ ವಿಶ್ವ ವಿಖ್ಯಾತ ಜೋಗ ಜಲಪಾತ ವೀಕ್ಷಣೆಗೆ ಪ್ರವಾಸಿಗರಿಗೆ ಇಂದಿನಿಂದ ಮುಕ್ತ ಅವಕಾಶ ನೀಡಲಾಗಿದೆ.

    ಕೊರೊನಾ ಸೋಂಕು ಸ್ವಲ್ಪಮಟ್ಟಿಗೆ ನಿಯಂತ್ರಣಕ್ಕೆ ಬರುತ್ತಿರುವ ಹಿನ್ನೆಲೆ ರಾಜ್ಯ ಸರ್ಕಾರ ಅನ್‍ಲಾಕ್ ಘೋಷಿಸಿದ್ದು, ಪ್ರವಾಸಿ ತಾಣಗಳನ್ನು ತೆರೆಯಲು ಅವಕಾಶ ಕಲ್ಪಿಸಿದೆ. ಹೀಗಾಗಿಯೇ ಜಿಲ್ಲೆಯ ಸಾಗರ ತಾಲೂಕಿನ ಜೋಗ ಜಲಪಾತ ವೀಕ್ಷಣೆಗೆ ಇಂದಿನಿಂದ ಅವಕಾಶ ಕಲ್ಪಿಸಿದ್ದು, ಮುಂಜಾನೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಸಮಯಾವಕಾಶ ನಿಗದಿಪಡಿಸಲಾಗಿದೆ.

    ಈಗಾಗಲೇ ಪಶ್ಚಿಮ ಘಟ್ಟದಲ್ಲಿ ಮುಂಗಾರಿನ ಅಬ್ಬರ ಆರಂಭವಾಗಿದೆ. ಮಳೆ ಹೆಚ್ಚಿರುವ ಕಾರಣ ಶರಾವತಿ ಜೋಗದಲ್ಲಿ ಮೈದುಂಬಿಕೊಂಡು ರಾಜಾ, ರಾಣಿ, ರೋರರ್, ರಾಕೆಟ್ ಆಗಿ ಧುಮಕುವ ದೃಶ್ಯ ರಮಣೀಯವಾಗಿದೆ. ಈ ಹಿನ್ನಲೆಯಲ್ಲಿ ಪ್ರವಾಸಿಗರ ಸಂಖ್ಯೆಯೂ ಸಹ ಹೆಚ್ಚಾಗಲಿದೆ. ಕೊರೊನಾದಿಂದ ಮನೆಯಲ್ಲಿಯೇ ಲಾಕ್ ಆಗಿದ್ದವರಿಗೆ ಜೋಗದ ವೈಭೋಗ ವೀಕ್ಷಿಸಲು ಒಳ್ಳೆಯ ಅವಕಾಶ ಎನ್ನಬಹುದು. ಇದನ್ನೂ ಓದಿ: ಸರ್ವ ಋತು ಪ್ರವಾಸಿ ತಾಣವಾಗಲಿದೆ ಜೋಗ ಜಲಪಾತ’

    ಜೋಗ ಜಲಪಾತ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರು ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು ಹಾಗು ಸ್ಯಾನಿಟೈಸರ್ ಬಳಸುವ ಜೊತೆಗೆ ಕಡ್ಡಾಯವಾಗಿ ಕೋವಿಡ್ ನಿಯಮ ಪಾಲಿಸುವಂತೆ ಪ್ರವಾಸೋದ್ಯಮ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ನಿಯಮ ಪಾಲಿಸದಿದ್ದರೆ ದಂಡ ವಿಧಿಸುವ ಎಚ್ಚರಿಕೆಯನ್ನು ನೀಡಿದ್ದಾರೆ.

  • ಕೊಡಗಿನ ಮಲ್ಲಳ್ಳಿ ಜಲಪಾತಕ್ಕೆ ಬಿದ್ದು ಇಬ್ಬರ ಸಾವು

    ಕೊಡಗಿನ ಮಲ್ಲಳ್ಳಿ ಜಲಪಾತಕ್ಕೆ ಬಿದ್ದು ಇಬ್ಬರ ಸಾವು

    ಮಡಿಕೇರಿ: ವಾರಂತ್ಯವಾಗಿದ ಹಿನ್ನೆಲೆ ಜಲಪಾತದ ವೀಕ್ಷಣೆಗೆ ತೆರಳಿದ್ದವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಮಲ್ಲಳ್ಳಿ ಜಲಪಾತದಲ್ಲಿ ನಡೆದಿದೆ.

    ದಿವ್ಯಾ ಮತ್ತು ಶಶಿಕುಮಾರ್ ಮೃತದುರ್ದೈವಿಗಳು. ಇಂದು ಸೋಮವಾರಪೇಟೆ ತಾಲೂಕಿನ ಸುಂಟಿಕೊಪ್ಪ ಗ್ರಾಮದ ಆರು ಜನರ ತಂಡ ಜಲಪಾತಕ್ಕೆ ಪ್ರವಾಸಕ್ಕೆ ಹೋಗಿದ್ದರು. ಹತ್ತಿರದಿಂದ ಜಲಪಾತದ ವೀಕ್ಷಣೆ ಮಾಡುವ ಸಮಯದಲ್ಲಿ ಆಕಸ್ಮಿಕವಾಗಿ ಜಲಪಾತದ ಕೆಳಗೆ ಬೀಳುತ್ತಿದ್ದ ದಿವ್ಯಾಳನ್ನು ರಕ್ಷಿಸಲು ಹೋಗಿ ಶಶಿಕುಮಾರ್ ಸಹ ನೀರಿನ ಸೆಳೆತಕ್ಕೆ ಇಬ್ಬರು ಮೃತಪಟ್ಟಿದ್ದಾರೆ. ಅನಿರೀಕ್ಷಿತ ಸಾವಿನಿಂದ ಎರಡು ಕುಟುಂಬದ ಸದಸ್ಯರ ಅಕ್ರಂದನ ಮಗಿಲು ಮುಟ್ಟಿದೆ. ಘಟನಾ ಸ್ಥಳಕ್ಕೆ ಸೋಮವಾರಪೇಟೆ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣವನ್ನು ದಾಖಲು ಮಾಡಿಕೊಂಡಿದ್ದಾರೆ.

    ಮಲ್ಲಳ್ಳಿ ಜಲಪಾತ ಎಷ್ಟು ನೈಸರ್ಗಿಕ ಸೊಬಗು ಹೊಂದಿದೆಯೋ ಅಷ್ಟೇ ಅಪಾಯವನ್ನು ಕೂಡ ತನ್ನ ಒಡಲೊಳಗೆ ಹುದುಗಿಸಿಟ್ಟುಕೊಂಡಿದೆ. ತನ್ನ ಮಡಿಲಿನವರೆಗೆ ನೋಡುಗರನ್ನು ಬರಮಾಡಿಕೊಳ್ಳುವ ಜಿಲ್ಲೆಯ ಏಕೈಕ ಜಲಪಾತ ಎಂಬ ಹೆಗ್ಗಳಿಕೆ ಮಲ್ಲಳ್ಳಿ ಫಾಲ್ಸ್ ಗೆ ಇದೆ. ಈ ಜಲಪಾತದ ಆಳ ನುರಿತ ಈಜು ತಜ್ಞರು ಮತ್ತು ಸ್ಥಳೀಯ ನಿವಾಸಿಗಳಿಗೆ ಮಾತ್ರವೆ ಅರಿವಿದೆ.

    ಹೊರ ಊರುಗಳಿಂದ ಜಿಲ್ಲೆಗೆ ಬರುವ ಪ್ರವಾಸಿಗರಿಗೆ ನೀರಿನಲ್ಲಿ ಈಜಾಡಿ ಅನುಭವ ಇದ್ದರೂ ಕೂಡ, ಮಲ್ಲಳ್ಳಿ ಜಲಪಾತದಲ್ಲಿ ಈ ಅನುಭವ ಕೆಲಸಕ್ಕೆ ಬರೋದಿಲ್ಲ. ಹೀಗಾಗಿಯೇ ಮಲ್ಲಳ್ಳಿ ಜಲಪಾತದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಜೀವ ಕಳೆದುಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಹುಟ್ಟುಹಬ್ಬದಂದು ಫೋಟೋ ತೆಗೆಯಲು ಹೋದ 6 ಮಂದಿ ದುರ್ಮರಣ

    ಜಲಪಾತಕ್ಕೆ ಪ್ರವೇಶಿಸುವ ಮೇಲ್ಭಾಗದ ಮೆಟ್ಟಿಲಿನಲ್ಲೇ ಜಲಪಾತದ ಅಪಾಯ, ಇಲ್ಲಿಯವರೆಗೆ ಜೀವತೆತ್ತವರ ಸಂಖ್ಯೆಯ ಕುರಿತು ಎಚ್ಚರಿಕೆಯ ಫಲಕಗಳನ್ನು ಅಳವಡಿಸಲಾಗಿದೆ. ಜಲಪಾತಕ್ಕೆ ಇಳಿಯದಂತೆಯೂ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಆದರೆ ಮೋಜುಮಸ್ತಿಯ ಗುಂಗಿನಲ್ಲಿ ಇಲ್ಲಿಗೆ ಬರುವ ಯುವ ಪ್ರವಾಸಿಗರು, ಎಚ್ಚರಿಕೆಯ ಫಲಕಗಳನ್ನು ನಿರ್ಲಕ್ಷಿಸಿ ನೀರಿಗೆ ಇಳಿದು ಅಪಾಯವನ್ನು ಮೈಮೇಲೆ ತಂದುಕೊಳ್ಳುತ್ತಿದ್ದಾರೆ ಎಂದು ಅಲ್ಲಿ ಗ್ರಾಮಸ್ಥರು ವಿಷಾದ ವ್ಯಕ್ತಪಡಿಸುತ್ತಾರೆ.

  • ಸ್ಯಾಂಕಿ ಕೆರೆ ಬಳಿ ನಿರ್ಮಾಣವಾಗಲಿದೆ 100 ಅಡಿ ಅಗಲದ ಜಲಪಾತ

    ಸ್ಯಾಂಕಿ ಕೆರೆ ಬಳಿ ನಿರ್ಮಾಣವಾಗಲಿದೆ 100 ಅಡಿ ಅಗಲದ ಜಲಪಾತ

    -ಜಲಪಾತ ನಿರ್ಮಾಣ ಶಿವರಾತ್ರಿ ದಿನ ಸ್ಥಳ ಪರಿಶೀಲನೆ ಮಾಡಿದ ಡಿಸಿಎಂ

    ಬೆಂಗಳೂರು: ಉದ್ಯಾನನಗರಿ ಬೆಂಗಳೂರಿನಲ್ಲಿ ಜಲಪಾತವೊಂದು ಸೃಷ್ಟಿಯಾಗಲಿದ್ದು, ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಮಹಾ ಶಿವರಾತ್ರಿ ದಿನ ಆ ಯೋಜನೆ ಕುರಿತು ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದಾರೆ.

    ಮಲ್ಲೇಶ್ವರದ ಸ್ಯಾಂಕಿ ಕೆರೆಯ ಈಜುಕೊಳದ ಪಕ್ಕದಲ್ಲಿ ಜಲಪಾತ ನಿರ್ಮಿಸುವ ಸಂಬಂಧ ಡಿಸಿಎಂ ಸ್ಥಳ ಪರಿಶೀಲನೆ ನಡೆಸಿದರು. ಈ ಮೂಲಕ ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಿಸಿಕೊಂಡು ಕೃತಕ ಜಲಪಾತವನ್ನು ನಿರ್ಮಾಣ ಮಾಡಲಾಗುತ್ತಿದೆ.

    ಕೃತಕ ಜಲಪಾತ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ ನಡೆಸಿ ಮಾಧ್ಯಮವರೊಂದಿಗೆ ಮಾತನಾಡಿದ ಅಶ್ವತ್ಥನಾರಾಯಣ ಅವರು, ಸದಾಶಿವನಗರದ ಸ್ಯಾಂಕಿ ಕೆರೆ ನವೀಕರಣ ಕಾಮಗಾರಿ ನಡೆಯುತ್ತಿದ್ದು ಹೆಚ್ಚುವರಿಯಾಗಿ ಕೆರೆ ಪಕ್ಕದ ಈಜುಕೊಳಕ್ಕೆ ಹೊಂದಿಕೊಂಡಂತೆ ಜಲಪಾತದ ಗೋಡೆ ನಿರ್ಮಿಸಲಾಗುವುದು. ವಾಟರ್ ಫಾಲ್ಸ್ ಜತೆಗೆ ಏರಿಯೇಟರ್ಸ್ ಕೂಡ ಅಳವಡಿಸಲಾಗುವುದು. ಇದರಿಂದ ಕೆರೆ ನೀರು ಸ್ವಚ್ಛ ಆಗಲಿದೆ. ಈಗಾಗಲೇ ಸರ್ವಋತುಗಳಲ್ಲಿಯೂ ನಳನಳಿಸುವ ಉದ್ಯಾನವನಗಳಿಂದ ಜಗತ್ಪ್ರಸಿದ್ಧವಾಗಿರುವ ಬೆಂಗಳೂರು ನಗರಕ್ಕೆ ಈ ಜಲಪಾತ ಮತ್ತಷ್ಟು ಮೆರಗು ನೀಡಲಿದೆ. ಮಲ್ಲೇಶ್ವರದ ಪಾರಂಪರಿಕ ವೈಭವಕ್ಕೆ ಪೂರಕವಾಗಿರಲಿದೆ. ಇದಕ್ಕೆ ಒಂದೂವರೆ ಕೋಟಿ ಖರ್ಚಾಗುವ ಅಂದಾಜಿದೆ ಎಂದು ಮಾಹಿತಿ ಹಂಚಿಕೊಂಡರು.

    12 ರಿಂದ 15 ಅಡಿ ಎತ್ತರ ಹಾಗೂ ಸುಮಾರು 100 ಅಡಿ ಅಗಲ ಇರಲಿರುವ ಈ ಜಲಪಾತ ನಗರದ ಪ್ರವಾಸೋದ್ಯಮಕ್ಕೂ ಪೂರಕವಾಗಿರಲಿದ್ದು, ಸ್ಯಾಂಕಿ ಕೆರೆಯು ಮಲ್ಲೇಶ್ವರಕ್ಕೆ ಮಾತ್ರವಲ್ಲ, ಇಡೀ ಬೆಂಗಳೂರಿಗೆ ಒಂದು ಮಹತ್ವದ ತಾಣ. ಮುಂದಿನ ದಿನಗಳಲ್ಲಿ ಕೆರೆಗೆ ಇನ್ನಷ್ಟು ಕಾಯಕಲ್ಪ ನೀಡಲಾಗುವುದು. ಪ್ರತಿಯೊಬ್ಬ ಬೆಂಗಳೂರಿಗರು ಇಲ್ಲಿಗೆ ಭೇಟಿ ನೀಡಲೇಬೇಕು. ಆ ರೀತಿಯಲ್ಲಿ ಇಲ್ಲಿ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

    ಪಾಲಿಕೆಯ ಮುಖ್ಯ ಇಂಜಿನಿಯರ್ (ಕೆರೆ) ಮೋಹನ್ ಕೃಷ್ಣ, ಪಾಲಿಕೆ ಕಾರ್ಯನಿರ್ವಾಹಕ ಇಂಜಿನಿಯರ್ ಪಾಪರೆಡ್ಡಿ, ಸಹಾಯಕ ಇಂಜಿನಿಯರ್ ಗಳಾದ ಸುಷ್ಮಾ, ಸ್ವಪ್ನಾ, ಬಿಬಿಎಂಪಿ ಮಾಜಿ ಸದಸ್ಯರಾದ ಮಂಜುನಾಥ ರಾಜು ಸೇರಿದಂತೆ ಹಲವು ಬಿಜೆಪಿ ಮುಖಂಡರು ಡಿಸಿಎಂ ಜೊತೆಗಿದ್ದರು.

  • ಸ್ನೇಹಿತರ ಜೊತೆ ಪ್ರವಾಸ – ಆಳದ ಅರಿವಿಲ್ಲದೆ ಜಲಪಾತಕ್ಕಿಳಿದ ಯುವಕ ಸಾವು

    ಸ್ನೇಹಿತರ ಜೊತೆ ಪ್ರವಾಸ – ಆಳದ ಅರಿವಿಲ್ಲದೆ ಜಲಪಾತಕ್ಕಿಳಿದ ಯುವಕ ಸಾವು

    ಚಿಕ್ಕಮಗಳೂರು: ಆಳದ ಅರಿವಿಲ್ಲದೆ ಜಲಪಾತದ ನೀರಿಗಿಳಿದ ಯುವಕ ಸಾವನಪ್ಪಿರು ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸ ಸಮೀಪದ ಅಬ್ಬುಗುಡಿಗೆ ಗ್ರಾಮದ ಸುರಮನೆ ಜಲಪಾತದಲ್ಲಿ ನಡೆದಿದೆ.

    ಮೃತ ಯುವಕನನ್ನು 16 ವರ್ಷದ ವಂಶಿತ್ ಎಂದು ಗುರುತಿಸಲಾಗಿದೆ. ಮೃತ ವಂಶಿತ್ ಮೂಲತಃ ಕಳಸದ ಸಂಸೆ ಸಮೀಪದ ಗುತ್ಯಡ್ಕ ಗ್ರಾಮದವನು. ವಂಶಿತ್ ಗ್ರಾಮದ ನಾಲ್ಕೈದು ಸ್ನೇಹಿತರೊಂದಿಗೆ ಪ್ರವಾಸಕ್ಕೆಂದು ಬಂದಿದ್ದರು. ಈ ವೇಳೆ ಆಳದ ಅರಿವಿರದ ಕಾರಣ ಜಲಪಾತದಲ್ಲಿ ಆಟವಾಡುವಾಗ ನೀರಲ್ಲಿ ಮುಳುಗಿ ವಂಶಿತ್ ಸಾವನ್ನಪ್ಪಿದ್ದಾನೆ.

    ಕಳೆದ ಎರಡ್ಮೂರು ವರ್ಷಗಳಿಂದ ಜಿಲ್ಲೆಯ ಮಲೆನಾಡು ಭಾಗದಲ್ಲಿ ಭಾರೀ ಮಳೆ ಸುರಿದಿರೋದ್ರಿಂದ ನೀರಿನ ರಭಸಕ್ಕೆ ಜಲಪಾತದ ಬಳಿ ಆಳವಾದ ನೀರಿನ ಗುಂಡಿ ನಿರ್ಮಾಣವಾಗಿರುವ ಶಂಕೆ ವ್ಯಕ್ತವಾಗಿದೆ. ಮಳೆಗಾಲದಲ್ಲಿ ನಿರ್ಮಾಣವಾಗಿರುವ ಗುಂಡಿಗಳ ಬಗ್ಗೆ ಸೂಕ್ತ ಮಾಹಿತಿ ಇಲ್ಲದೆ ಯುವಕರು ನೀರಿಗಿಳಿದಾಗ ಈ ದುರ್ಘಟನೆ ಸಂಭವಿಸಿದೆ. ಪ್ರವಾಸಿಗರಿಗೆ ಅಷ್ಟಾಗಿ ಗೊತ್ತಿಲ್ಲದ ಈ ಸುಂದರ ತಾಣ ಇತ್ತೀಚಿನ ವರ್ಷಗಳಲ್ಲಿ ಪ್ರವಾಸಿಗರಿಗೆ ತಿಳಿದು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದಾರೆ.

    ಫಾಲ್ಸ್ ಕೆಳಗೆ ಸುಮಾರು ಹತ್ತರಿಂದ ಹನ್ನೆರಡು ಅಡಿ ನೀರಿದ್ದು, ಆಳವನ್ನು ಲೆಕ್ಕಿಸದೇ ನೀರಿನಲ್ಲಿ ಇಳಿದಿದ್ದರಿಂದ ವಂಶಿತ್ ಮುಳುಗಿದ್ದಾನೆ. ಈ ವೇಳೆ ಮೇಲೆ ಬರಲು ಪ್ರಯತ್ನಿಸಿದರು ಪ್ರಯೋಜನವಾಗಿಲ್ಲ. ಸ್ನೇಹಿತರ ಕಣ್ಣೆದುರೇ ಯುವಕ ಸಾವನ್ನಪ್ಪಿದ್ದಾನೆ. ಕಳಸ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ನಿಯಂತ್ರಣ ತಪ್ಪಿ ಹೊಳೆಗೆ ಬಿದ್ದ ಕಾರು – ಯುವತಿ ಸೇರಿ ಮೂವರ ದುರ್ಮರಣ

    ನಿಯಂತ್ರಣ ತಪ್ಪಿ ಹೊಳೆಗೆ ಬಿದ್ದ ಕಾರು – ಯುವತಿ ಸೇರಿ ಮೂವರ ದುರ್ಮರಣ

    ಕಾರವಾರ: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಹೊಳೆಗೆ ಬಿದ್ದು, ಮೂವರು ಮೃತಪಟ್ಟಿರುವ ಘಟನ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕೊಡ್ನಮನೆಯಲ್ಲಿ ನಡೆದಿದೆ.

    ಕಾರಿನ ನಿಯಂತ್ರಣ ತಪ್ಪಿ ಉಂಚಳ್ಳಿ ಜಲತಾಪಕ್ಕೆ ಹೋಗಿ ವಾಪಾಸ್ ಬರುತ್ತಿದ್ದ ಇಬ್ಬರು ಯುವಕರು ಹಾಗೂ ಓರ್ವ ಯುವತಿ ಸೇರಿ ಒಟ್ಟು ಮೂವರು ಕಾರಿನ ಸಮೇತ ಹೊಳೆಗೆ ಬಿದ್ದು ಮೃತಪಟ್ಟಿದ್ದಾರೆ. ಬುಧವಾರ ಸಂಜೆಯ ವೇಳೆಗೆ ಘಟನೆ ಜರುಗಿದ್ದು, ಕಾರು ಹೊಳೆಗೆ ಬಿದ್ದ ಸಮಯದಲ್ಲಿ ಸ್ಥಳದಲ್ಲಿ ಯಾರು ಇಲ್ಲದ ಕಾರಣ ಯಾರೂ ಕಾರನ್ನು ಗಮನಿಸಿಲ್ಲ. ಇದರಿಂದ ಇಂದು ಸಂಜೆ ಈ ಘಟನೆ ಬೆಳಕಿಗೆ ಬಂದಿದೆ.

    ಕಾರು ಧಾರವಾಡದ ನೋಂದಣಿ ಸಂಖ್ಯೆಯಿದ್ದು, ಹುಬ್ಬಳ್ಳಿಯವರು ಎನ್ನಲಾಗಿದೆ. ಮೂವರೂ 25 ವರ್ಷದ ಒಳಗಿನವರಾಗಿದ್ದು, ಸಿದ್ದಾಪುರದ ಉಂಚಳ್ಳಿ ಜಲಪಾತಕ್ಕೆ ಪ್ರವಾಸಕ್ಕೆ ತೆರಳಿದ್ದರು. ಪ್ರವಾಸದಿಂದ ಹಿಂತಿರುಗಿ ಬರುವಾಗ ಕೋಡ್ನಗದ್ದೆ ಸಮೀಪದ ತಿರುವಿನಲ್ಲಿ ಆಯತಪ್ಪಿ ಕೋಡ್ನಗದ್ದೆ ಹೊಳೆಗೆ ಕಾರು ಬಿದ್ದಿದೆ. ಪರಿಣಾಮ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

  • ವಾಟ್ಸಪ್‍ನಲ್ಲಿ ಪತಿ ಬ್ಯುಸಿ – ಸೆಲ್ಫಿ ಕ್ಲಿಕ್ಕಿಸ್ತಿರೋವಾಗ್ಲೇ ನೀರಿಗೆ ಬಿದ್ದ ಮಹಿಳೆ

    ವಾಟ್ಸಪ್‍ನಲ್ಲಿ ಪತಿ ಬ್ಯುಸಿ – ಸೆಲ್ಫಿ ಕ್ಲಿಕ್ಕಿಸ್ತಿರೋವಾಗ್ಲೇ ನೀರಿಗೆ ಬಿದ್ದ ಮಹಿಳೆ

    – ಗಂಡನೊಂದಿಗೆ ಟ್ರಿಪ್ ಹೋಗಿದ್ದವಳು ವಾಪಸ್ ಬರಲೇ ಇಲ್ಲ

    ಭೋಪಾಲ್: ಮಹಿಳೆಯೊಬ್ಬಳು ಸೆಲ್ಫಿ ಕ್ಲಿಕ್ಕಿಸುವಾಗ ಕಾಲು ಜಾರಿ ಬಿದ್ದು ಮೃತಪಟ್ಟಿರುವ ಘಟನೆ ಮಧ್ಯಪ್ರದೇಶದ ಹಲಾಲಿ ಡ್ಯಾಂನಲ್ಲಿ ನಡೆದಿದೆ.

    ಹಿಮಾನಿ ಮಿಶ್ರಾ (33) ಮೃತ ಮಹಿಳೆ. ಈಕೆ ತನ್ನ ಪತಿ ಡಾ.ಉತ್ಕರ್ಶ್ ಮಿಶ್ರಾ ಜೊತೆ ಭಾನುವಾರ ಹಲಾಲಿ  ಡ್ಯಾಂಗೆ ಹೋಗಿದ್ದರು. ಈ ವೇಳೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವಾಗ ಈ ದುರಂತ ನಡೆದಿದೆ.

    ಮಧ್ಯಪ್ರದೇಶದ ನಿವಾಸಿ ಡಾ.ಉತ್ಕರ್ಶ್ ಮಿಶ್ರಾ 9 ವರ್ಷಗಳ ಹಿಂದೆ ಹಿಮಾನಿ ಅವರನ್ನು ವಿವಾಹವಾಗಿದ್ದರು. ಮಿಶ್ರಾ ಭೋಪಾಲ್‍ನ ವೀಣಾವಾದಿನಿ ಕಾಲೇಜಿನಲ್ಲಿ ಆಯುರ್ವೇದ ವೈದ್ಯರಾಗಿದ್ದು, ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಭಾನುವಾರ ದಂಪತಿ ಹಲಾಲಿ ಡ್ಯಾಂಗೆ ಹೋಗಿದ್ದಾರೆ. ತುಂಬಾ ಸಮಯದವರೆಗೂ ಇಬ್ಬರೂ ಸುತ್ತಾಡಿದ್ದಾರೆ. ಜೊತೆಗೆ ಎಲ್ಲಾ ಕಡೆ ಅನೇಕ ಫೋಟೋಗಳನ್ನು ತೆಗೆದುಕೊಂಡಿದ್ದಾರೆ.

    ದಂಪತಿ ಹಲಾಲಿ ಡ್ಯಾಂ ಕೆಳಭಾಗದಿಂದ ಮೇಲೆ ಹೋಗಲು ಪ್ರಾರಂಭಿಸಿದ್ದರು. ಪತಿ ತಮ್ಮ ಮೊಬೈಲಿನಲ್ಲಿ ವಾಟ್ಸಪ್ ನೋಡುತ್ತಿದ್ದರು. ಇತ್ತ ಹಿಮಾನಿ ಸೆಲ್ಫಿ ತೆಗೆದುಕೊಳ್ಳುವುದರಲ್ಲಿ ಬ್ಯುಸಿಯಾಗಿದ್ದರು. ಈ ವೇಳೆ ಮೇಲೆ ಹತ್ತುವಾಗ ಹಿಮಾನಿ ಕಾಲು ಜಾರಿ ಡ್ಯಾಂಗೆ ಬಿದ್ದಿದ್ದಾಳೆ. ಹೆಚ್ಚಾಗಿ ನೀರು ಇದ್ದುದ್ದರಿಂದ ಹಿಮಾನಿ ಕೊಚ್ಚಿಕೊಂಡು ಮುಂದೆ ಹೋಗಿದ್ದು, ಸ್ವಲ್ಪ ದೂರದವರೆಗೂ ಕಾಣಿಸಿಕೊಂಡಿದ್ದಾಳೆ. ನಂತರ ಹಿಮಾನಿ ಕಣ್ಮರೆಯಾಗಿದ್ದಾಳೆ.

    ತಕ್ಷಣ ಪತಿ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅವರು ಪೊಲೀಸರಿಗೆ ಫೋನ್ ಮಾಡಿ ಈ ಬಗ್ಗೆ ತಿಳಿಸಿದ್ದಾರೆ. ಮಾಹಿತಿಯ ಮೇರೆಗೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ರಾತ್ರಿಯವರೆಗೂ ಶೋಧಕಾರ್ಯ ನಡೆಸಿದ್ದಾರೆ. ಆದರೆ ಎಲ್ಲೂ ಹಿಮಾನಿ ಪತ್ತೆಯಾಗಿರಲಿಲ್ಲ. ಸತತ 16 ಗಂಟೆಗಳ ನಂತರ ಹಿಮಾನಿಯ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಹಲಾಲಿ ಡ್ಯಾಮ್ ನೋಡಲು ಹೆಚ್ಚಿನ ಸಂಖ್ಯೆಯ ಜನರು ಬರುತ್ತಾರೆ. ಆದರೆ ಇಲ್ಲಿ ಯಾವುದೇ ಭದ್ರತಾ ವ್ಯವಸ್ಥೆ ಇಲ್ಲ. ಹೀಗಾಗಿ ಇಲ್ಲಿಗೆ ಬರುವ ಜನರು ತಮಗೆ ಇಷ್ಟ ಬಂದ ಸ್ಥಳಕ್ಕೆ ಹೋಗಿ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಾರೆ. ಒಂದು ವೇಳೆ ನೀರು ತುಂಬಾ ಹೆಚ್ಚಾಗಿದ್ದರೆ ಈ ರೀತಿಯ ಅವಘಡ ಸಂಭವಿಸುತ್ತವೆ. ಕಳೆದ ವರ್ಷ ನಾಲ್ವರು ಸಾವನ್ನಪ್ಪಿದ್ದಾರೆ  ಎಂದು ಸ್ಥಳೀಯರು ಹೇಳಿದ್ದಾರೆ.

  • ಮಲೆನಾಡಲ್ಲಿ ಭಾರೀ ಮಳೆ- ಉಕ್ಕಿ ಹರಿಯುತ್ತಿದೆ ಕಲ್ಲತ್ತಿಗಿರಿ ಜಲಪಾತ

    ಮಲೆನಾಡಲ್ಲಿ ಭಾರೀ ಮಳೆ- ಉಕ್ಕಿ ಹರಿಯುತ್ತಿದೆ ಕಲ್ಲತ್ತಿಗಿರಿ ಜಲಪಾತ

    ಚಿಕ್ಕಮಗಳೂರು: ಜಿಲ್ಲೆಯಲ್ಲಿ ಇತ್ತೀಚೆಗೆ ಮತ್ತೆ ವರುಣನ ಅಬ್ಬರ ಜೋರಾಗಿದ್ದು, ಸುರಿಯುತ್ತಿರುವ ಭಾರೀ ಮಳೆಗೆ ಜಲಪಾತಗಳು ಉಕ್ಕಿ ಹರಿಯುತ್ತಿವೆ. ಕಲ್ಲತ್ತಿಗಿರಿ ಜಲಪಾತ ಮೈದುಂಬಿ ಹರಿಯುತ್ತಿದ್ದು, ಪ್ರವಾಸಿಗರನ್ನು ಸೆಳೆಯುತ್ತಿದೆ.

    ಕಾಫಿನಾಡಿನ ಗಿರಿ ಭಾಗದಲ್ಲಿ ಸುರಿಯುತ್ತಿರೋ ಧಾರಾಕಾರ ಮಳೆಗೆ ಜಿಲ್ಲೆಯ ತರೀಕೆರೆ ತಾಲೂಕಿನ ಕಲ್ಲತ್ತಿಗಿರಿ ಜಲಪಾತ ಮೈದುಂಬಿ ಹರಿಯುತ್ತಿದೆ. ಭಾರೀ ನೀರಿನಿಂದ ಉಕ್ಕಿ ಹರಿಯುತ್ತಿರುವ ಜಲಪಾತ ಪ್ರವಾಸಿಹರನ್ನು ತನ್ನತ್ತ ಸೆಳೆಯುತ್ತಿದೆ. ಹೀಗಾಗಿ ಮುಳ್ಳಯ್ಯನಗಿರಿ ಬೆಟ್ಟ ಸೇರಿದಂತೆ ಈ ಭಾಗಕ್ಕೆ ಭೇಟಿ ನೀಡಿದ ಪ್ರವಾಸಿಗರು ಜಲಪಾತದ ಬಳಿ ಆಗಮಿಸಿ ಕಣ್ತುಂಬಿಕೊಳ್ಳುತ್ತಿದ್ದಾರೆ.

    ಶನಿವಾರ ಮಧ್ಯಾಹ್ನದಿಂದ ಮುಳ್ಳಯ್ಯನ ಗಿರಿ ಹಾಗೂ ದತ್ತ ಪೀಠ ಭಾಗದಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಕಲ್ಲತ್ತಿಗಿರಿ ಜಲಪಾತಕ್ಕೆ ಅತೀ ಹೆಚ್ಚು ನೀರು ಹರಿದು ಬಂದಿದೆ. ಹೀಗಾಗಿ ಜಲಪಾತಕ್ಕೆ ಜೀವಕಳೆ ಬಂದಿದೆ. ಪ್ರವಾಸಿಗರ ದಂಡು ಮಲೆನಾಡಿಗೆ ಹೆಚ್ಚು ಆಗಮಿಸುತ್ತಿದ್ದು, ಅದರಲ್ಲೂ ಚಿಕ್ಕಮಗಳೂರಿಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗಿದೆ. ಜಲಪಾತದ ರಮಣೀಯ ದೃಶ್ಯವನ್ನು ಮೊಬೈಲ್‍ನಲ್ಲಿ ಸೆರೆ ಹಿಡಿಯುತ್ತಿದ್ದಾರೆ.

    ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಮೂಡಿಗೆರೆ, ಕೊಪ್ಪ, ಎನ್‍ಆರ್ ಪುರ, ಶೃಂಗೇರಿಯಲ್ಲಿ ಮಳೆ ಜೋರಾಗಿದೆ. ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ಬಾಳೂರು, ಕಳಸ ಸುತ್ತಮುತ್ತ ಭಾರೀ ಮಳೆಯಾಗುತ್ತಿದೆ. ಹೆಬ್ಬಾಳೆ ಸೇತುವೆ ಮುಳುಗಡೆಯಾಗಿದ್ದು, ಸೇತುವೆ ಮೇಲೆ ಎರಡು ಅಡಿಯಷ್ಟು ನೀರಿನ ಹರಿಯುತ್ತಿದೆ. ಕಳಸ-ಹೊರನಾಡು ಸಂಪರ್ಕ ಕಲ್ಪಿಸುವ ಹೆಬ್ಬಾಳೆ ಸೇತುವೆ ಈ ಬಾರಿಯೂ ಮುಳುಗಡೆಯಾಗಿದೆ. ಕಳೆದ ಬಾರಿ ಸಹ ಹೆಬ್ಬಾಳೆ ಸೇತುವೆ ಹಲವು ಬಾರಿ ಮಳುಗಡೆಯಾಗಿತ್ತು. ಭಾರೀ ಮಳೆಯಿಂದಾಗಿ ಭದ್ರಾ ಅಪಾಯ ಮಟ್ಟ ಮೀರಿ ತುಂಬಿ ಹರಿಯುತ್ತಿದೆ.

  • ಜಲಪಾತದ ಬಳಿ ಫೋಟೋ ತೆಗೆಸಿಕೊಳ್ಳಲು ಹೋದ ಯುವಕ ಸಾವು

    ಜಲಪಾತದ ಬಳಿ ಫೋಟೋ ತೆಗೆಸಿಕೊಳ್ಳಲು ಹೋದ ಯುವಕ ಸಾವು

    ಹಾಸನ: ಜಲಪಾತದ ಬಳಿ ಫೋಟೋ ತೆಗೆಸಿಕೊಳ್ಳಲು ಹೋದ ಯುವಕನೊಬ್ಬ ಕಾಲು ಜಾರಿ ಬಿದ್ದು ಮೃತಪಟ್ಟಿರುವ ಘಟನೆ ಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲಿ ನಡೆದಿದೆ.

    ಸಕಲೇಶಪುರ ತಾಲೂಕಿನ ಕಾಡುಮನೆ ಸಮೀಪ ಗುಡಾಣಕೆರೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ರತನ್ (26) ಮೃತಪಟ್ಟ ದುರ್ದೈವಿ. ರತನ್ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದನು. ಗುರುವಾರ ರಾತ್ರಿಯಷ್ಟೇ ಬೆಂಗಳೂರಿನಿಂದ ಮಹಾಲಯ ಅಮಾವಾಸ್ಯೆ ಅಂಗವಾಗಿ ಊರಿಗೆ ಬಂದಿದ್ದ ಎಂದು ತಿಳಿದುಬಂದಿದೆ.

    ತನ್ನ ಕುಟುಂಬದ ಇತರ ನಾಲ್ಕು ಜನ ಸಂಬಂಧಿಕರ ಜೊತೆ ಗುಡಾಣಕೆರೆ ಸಮೀಪವಿರುವ ಅಬ್ಬಿಗುಂಡಿ ಜಲಪಾತಕ್ಕೆ ಹೋಗಿದ್ದನು. ಈ ವೇಳೆ ಜೊತೆಯಲ್ಲಿದ್ದ ಒಬ್ಬರಿಗೆ ಮೊಬೈಲ್ ಕೊಟ್ಟು ಫೋಟೋ ತೆಗೆಸಿಕೊಳ್ಳುವಾಗ ಕಾಲು ಜಾರಿ ಮೇಲಿಂದ ಬಿದ್ದಿದ್ದಾನೆ. ಪರಿಣಾಮ ತಲೆಗೆ ತೀವ್ರವಾಗಿ ಪೆಟ್ಟಾಗಿ ನೀರಿನಲ್ಲಿ ಮುಳುಗಿ ರತನ್ ಸಾವನ್ನಪ್ಪಿದ್ದಾನೆ.

    ಮಾಹಿತಿ ಪೊಲೀಸರು ಮುಳುಗು ತಜ್ಞರ ಸಹಾಯದಿಂದ ಮೃತದೇಹವನ್ನು ಹೊರಗೆ ತೆಗೆಯಲಾಗಿದೆ. ಸಕಲೇಶಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಭಾವಿ ಪತಿಯೊಂದಿಗೆ ಜಲಪಾತದ ಬಳಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವಾಗ ಟೆಕ್ಕಿ ಸಾವು

    ಭಾವಿ ಪತಿಯೊಂದಿಗೆ ಜಲಪಾತದ ಬಳಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವಾಗ ಟೆಕ್ಕಿ ಸಾವು

    – ಎಂಜಿನಿಯರಿಂಗ್ ಮುಗಿಸಿ, ಅಮೆರಿಕದಲ್ಲಿ ಕೆಲಸ
    – ಸಂಬಂಧಿಕರನ್ನ ಭೇಟಿ ಮಾಡಿ ಬರುವಾಗ ದುರಂತ

    ಹೈದರಾಬಾದ್: ಸೆಲ್ಫಿ ಕ್ಕಿಕ್ಕಿಸಿಕೊಳ್ಳುವಾಗ ಆಕಸ್ಮಿಕವಾಗಿ ಅಮೆರಿಕದ ಜಲಪಾತದಲ್ಲಿ ಬಿದ್ದು ಆಂಧ್ರ ಪ್ರದೇಶದ ಯುವತಿಯೊಬ್ಬಳು ಮೃತಪಟ್ಟಿರುವ ಘಟನೆ ನಡೆದಿದೆ.

    ಕಮಲಾ ಮೃತ ಯುವತಿ. ಕಮಲಾ ತನಗೆ ನಿಶ್ಚಿಯವಾಗಿದ್ದ ಹುಡುಗನೊಂದಿಗೆ ಸೆಲ್ಫಿ ತೆಗೆದುಕೊಳ್ಳುವಾಗ ಇಬ್ಬರೂ ಕಾಲು ಜಾರಿಬಿದ್ದಿದ್ದಾರೆ ಎಂದು ವರದಿಯಾಗಿದೆ. ಕಮಲಾ ಅಟ್ಲಾಂಟಾದಲ್ಲಿರುವ ತನ್ನ ಸಂಬಂಧಿಕರ ಮನೆಗೆ ಹೋಗಿದ್ದಳು. ಅವರನ್ನು ಭೇಟಿ ಮಾಡಿದ ನಂತರ ತನ್ನ ಮನೆಗೆ ಹಿಂದಿರುಗುವಾಗ ಭಾವಿ ಪತಿಯ ಜೊತೆ ಬಾಲ್ಡ್ ರಿವರ್ ಫಾಲ್ಸ್‌ಗೆ ಹೋಗಿದ್ದಳು.

    ಈ ವೇಳೆ ಇಬ್ಬರು ಫಾಲ್ಸ್ ಮುಂದೆ ಸೆಲ್ಫಿ ಕ್ಲಿಕ್ಕಿಸುವಾಗ ಆಕಸ್ಮಿಕವಾಗಿ ಕಾಲು ಜಾರಿಬಿದ್ದಿದ್ದಾರೆ. ತಕ್ಷಣ ಸ್ಥಳದಲ್ಲಿದ್ದವರು ಕಮಲಾಳ ಭಾವಿ ಪತಿಯನ್ನು ರಕ್ಷಣೆ ಮಾಡಿದ್ದಾರೆ. ಆದರೆ ಕಮಲಾ ಎಲ್ಲೂ ಪತ್ತೆಯಾಗಿಲ್ಲ. ಸ್ವಲ್ಪ ಸಮಯದ ನಂತರ ಕಮಲಾ ಜಲಪಾತದಿಂದ ಸ್ವಲ್ಪ ದೂರದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡಿದೆ. ನಂತರ ಸಿಪಿಆರ್ ಸಿಬ್ಬಂದಿ ಆಕೆಯನ್ನು ಮೇಲಕ್ಕೆ ಎತ್ತಿಕೊಂಡು ಬಂದಿದ್ದಾರೆ. ಆದರೆ ಕಮಲಾ ಅಷ್ಟರಲ್ಲಿಯೇ ಮೃತಪಟ್ಟಿದಳು.

    ಸದ್ಯಕ್ಕೆ ಕಮಲಾ ಮೃತದೇಹವನ್ನು ಭಾರತಕ್ಕೆ ತೆಗೆದುಕೊಂಡು ಬರುವ  ವ್ಯವಸ್ಥೆ ಮಾಡಲಾಗುತ್ತಿದೆ. ಆದರೆ ಮಗಳ ಸಾವಿನ ಸುದ್ದಿ ತಿಳಿದು ಕಮಲಾ ಪೋಷಕರು ಆಘಾತಕ್ಕೊಳಗಾಗಿದ್ದಾರೆ. ನನ್ನ ಮಗಳು ಎಂಜಿನಿಯರಿಂಗ್ ಪದವಿ ಪಡೆದಿದ್ದು, ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಅಮೆರಿಕಾಗೆ ಹೋಗಿದ್ದಳು. ಅಲ್ಲಿಯೇ ಅವಳಿಗೆ ಉದ್ಯೋಗ ಕೂಡ ಸಿಕ್ಕಿತ್ತು ಎಂದು ತಾಯಿ ಕಣ್ಣೀರು ಹಾಕಿದರು.

    ಕಮಲಾ ಸಹೋದರಿ ಮದುವೆಯಾಗಿ ಚೆನ್ನೈನಲ್ಲಿ ನೆಲೆಸಿದ್ದಾರೆ. ಕಮಲಾ ಕುಟುಂಬವು ಕೃಷ್ಣ ಜಿಲ್ಲೆಯ ಗುಡ್ಲವಲ್ಲೇರು ಎಂಬಲ್ಲಿ ವಾಸ ಮಾಡುತ್ತಿದ್ದು, ಪದವಿ ಮುಗಿದ ನಂತರ ಕಮಲಾ ಅಮೆರಿಕಾಗೆ ಹೋಗಿ ಸಾಫ್ಟ್‌ವೇರ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು ಎಂದು ತಿಳಿದುಬಂದಿದೆ.

  • ಮಾಯದಂಥ ಮಳೆ ಬಂದು ಮದಗಾದ ಕೆರೆ ಬಳಿ ಜಲಪಾತ ಉದ್ಭವ

    ಮಾಯದಂಥ ಮಳೆ ಬಂದು ಮದಗಾದ ಕೆರೆ ಬಳಿ ಜಲಪಾತ ಉದ್ಭವ

    – ಹಸಿರ ಹೊದ್ದ ಬೆಟ್ಟ, ಗುಡ್ಡಗಳ ಮಧ್ಯೆ ಜಲಧಾರೆ
    – ತಂಡೋಪತಂಡವಾಗಿ ಭೇಟಿ ನೀಡುತ್ತಿದ್ದಾರೆ ಜನ

    ಹಾವೇರಿ: ಸುತ್ತ ಹಸಿರ ರಾಶಿ, ಗುಡ್ಡ ಬೆಟ್ಟಗಳ ಸಾಲು, ಹಸಿರು ಬೆಟ್ಟದ ನಡುವೆ ಧುಮ್ಮಿಕ್ಕಿ ಹರಿಯೋ ಜಲಧಾರೆ. ಆ ಸೌಂದರ್ಯವನ್ನ ಕಣ್ತುಂಬಿಕೊಳ್ಳೋದೆ ಕಣ್ಣಿಗೆ ಹಬ್ಬ, ಮನಸ್ಸಿಗೆ ಆನಂದ. ಇಲ್ಲಿನ ಸೌಂದರ್ಯಕ್ಕೆ ಮನಸೋತ ಜನ, ಧುಮ್ಮಿಕ್ಕುವ ಜಲಪಾತ ನೋಡಲು ಸಾಲುಗಟ್ಟಿ ಆಗಮಿಸುತ್ತಿದ್ದಾರೆ.

    ಜಿಲ್ಲೆಯ ರಟ್ಟೀಹಳ್ಳಿ ತಾಲೂಕಿನ ಮದಗಮಾಸೂರು ಕೆರೆಯ ಬಳಿ ಜಲಪಾತ ಉಂಟಾಗಿದ್ದು, ಕಣ್ತುಂಬಿಕೊಳ್ಳಲು ಸಚಿವರು ಸೇರಿದಂತೆ ಜನರು ಮುಗಿಬೀಳುತ್ತಿದ್ದಾರೆ. ಮದಗಮಾಸೂರು ಕೆರೆ ಐತಿಹಾಸಿಕವಾಗಿ ಸಾಕಷ್ಟು ಮಹತ್ವ ಪಡೆದಿದೆ. ಕೆರೆಯ ಕುರಿತು ಜಾನಪದೀಯರು ಮಾಯದಂಥಾ ಮಳೆ ಬಂತಣ್ಣ, ಮದಗದ ಕೆರೆಗೆ ಎಂದು ಹಾಡು ಕಟ್ಟಿದ್ದಾರೆ. ಅಂಥ ಮದಗಮಾಸೂರು ಕೆರೆಗೆ ಈಗ ಮಾಯದಂಥಾ ಮಳೆ ಬಂದಿದೆ. ಮಳೆಯ ಪರಿಣಾಮ ಕೆರೆ ಭರಪೂರ ತುಂಬಿಕೊಂಡಿದೆ.

    ಸಾವಿರಾರು ಎಕರೆ ವಿಶಾಲವಾದ ಪ್ರದೇಶದಲ್ಲಿ ಹರಡಿಕೊಂಡಿರೋ ಮದಗಮಾಸೂರು ಕೆರೆ ತುಂಬಿ, ಕೆರೆಗೆ ಕೋಡಿ ಬಿದ್ದು ನೀರು ಹರಿತಿದೆ. ಬೆಟ್ಟ ಗುಡ್ಡಗಳ ಸಾಲಿನ ನಡುವೆ ಹರಿತಿರೋ ಜಲಧಾರೆ ನೋಡಲು ಎರಡು ಕಣ್ಣುಗಳು ಸಾಲದು. ಕೆರೆಯ ನೀರು ಹಸಿರಿನಿಂದ ಕಂಗೊಳಿಸೋ ಬೆಟ್ಟಗಳ ಸಾಲಿನ ನಡುವೆ ಧುಮ್ಮಿಕ್ಕಿ ಹರಿತಿದೆ. ಈ ಭಾಗದಲ್ಲಿ ಮದಗಮಾಸೂರು ಫಾಲ್ಸ್ ಮಿನಿ ಜೋಗ ಪಾಲ್ಸ್ ಎಂದೇ ಫೇಮಸ್ ಆಗಿದೆ. ಕೊರೊನಾ ಭೀತಿ ಇರುವುದರಿಂದ ಅಷ್ಟೊಂದು ಪ್ರಮಾಣದಲ್ಲಿ ಜನರ ದಂಡು ಆಗಮಿಸುತ್ತಿಲ್ಲ. ಆದರೂ ಕೆಲವರು ಮಾತ್ರ ಸ್ನೇಹಿತರ ಜೊತೆ, ಕುಟುಂಬದ ಜೊತೆಗೂಡಿ ಬಂದು ಇಲ್ಲಿನ ಹಸಿರ ಸೌಂದರ್ಯ, ಜಲಧಾರೆಯನ್ನ ಕಣ್ತುಂಬಿಕೊಳ್ಳುತ್ತಿದ್ದಾರೆ.

    ಇಲ್ಲಿನ ಜಲಧಾರೆ, ಹಸಿರ ಸೌಂದರ್ಯಕ್ಕೆ ಮನಸೋತು ಹಲವರು ಫೋಟೋ ಶೂಟ್ ಹಾಗೂ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸುತ್ತಿದ್ದಾರೆ. ಕೆಲವರು ಕುಟುಂಬ ಸಮೇತ, ಕೆಲವರು ಸ್ನೇಹಿತರೊಂದಿಗೆ ಇಲ್ಲಿಗೆ ಬಂದು ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಮಳೆಗಾಲದ ಇಲ್ಲಿನ ಸೌಂದರ್ಯಕ್ಕೆ ಫುಲ್ ಫಿದಾ ಆಗಿದ್ದಾರೆ.