Tag: ಜಲಪಾತೋತ್ಸವ

  • ಬೆಳ್ಳಂಬೆಳಗ್ಗೆ ಭರಚುಕ್ಕಿ ವೀಕ್ಷಿಸಿದ ಸುರೇಶ್ ಕುಮಾರ್- ಜಲಪಾತೋತ್ಸವ ನಡೆಸಲು ಚಿಂತನೆ

    ಬೆಳ್ಳಂಬೆಳಗ್ಗೆ ಭರಚುಕ್ಕಿ ವೀಕ್ಷಿಸಿದ ಸುರೇಶ್ ಕುಮಾರ್- ಜಲಪಾತೋತ್ಸವ ನಡೆಸಲು ಚಿಂತನೆ

    ಚಾಮರಾಜನಗರ: ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಅವರು ಇಂದು ಕೊಳ್ಳೇಗಾಲ ತಾಲೂಕಿನ ಭರಚುಕ್ಕಿ ಜಲಪಾತವನ್ನು ವೀಕ್ಷಿಸಿ ಅಲ್ಲಿನ ಕುಂದು ಕೊರತೆಯನ್ನು ಪರಿಶೀಲಿಸಿದ್ದು, ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಭರಚುಕ್ಕಿ ಜಲಪಾತೋತ್ಸವ ನಡೆಸುವ ಬಗ್ಗೆ ಚಿಂತಿಸಿದ್ದಾರೆ.

    ಈ ಹಿಂದೆ ಪ್ರವಾಸೋದ್ಯಮ ಅಭಿವೃದ್ಧಿಗೆ ಭರಚುಕ್ಕಿ ಉತ್ಸವ ನಡೆಸಲು ಪ್ರವಾಸಿಗರು, ಸ್ಥಳೀಯರು ಆಗ್ರಹಿಸಿದ್ದರು. ಹೀಗಾಗಿ ಜನರ ಆಗ್ರಹದ ಬೆನ್ನಲ್ಲೇ ಸಚಿವರು ಬೆಳ್ಳಂಬೆಳಗ್ಗೆ ಜಲಪಾತ ವೀಕ್ಷಣೆ ಆಗಮಿಸಿದ್ದರು. ಕಳೆದ 3 ತಿಂಗಳಿಂದ ದುಮ್ಮಿಕ್ಕಿ ಹರಿಯುತ್ತಿರೋ ಭರಚುಕ್ಕಿ ಜಲಪಾತದ ನೀರಿನ ಪ್ರಮಾಣವನ್ನು ಸಚಿವರು ವೀಕ್ಷಿಸಿದರು. ಹಾಗೆಯೇ ಅಲ್ಲಿನ ಕುಂದು ಕೊರತೆ ಬಗ್ಗೆ ಪರಿಶಿಲನೆ ನಡೆಸಿ, ಮಾಹಿತಿ ಪಡೆದರು.

    ಜೊತೆಗೆ ಭರಚುಕ್ಕಿ ಜಲಪಾತೋತ್ಸವ ನಡೆಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸುರೇಶ್ ಕುಮಾರ್ ಸೂಚನೆ ನೀಡಿದ್ದಾರೆ. ನವೆಂಬರ್ ತಿಂಗಳಲ್ಲಿ ಜಲಪಾತೋತ್ಸವ ನಡೆಸುವಂತೆ ಸಚಿವರು ತಿಳಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಸುರೇಶ್ ಕುಮಾರ್ ಅವರು, ಬಿಜೆಪಿ ಸರ್ಕಾರಕ್ಕೆ ನೂರು ದಿನ, ಆದರೆ ಸಾಧನೆ ಶೂನ್ಯ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದರು. ಕೇವಲ ಸಿಟ್ಟು, ಸೇಡು, ಕಹಿ ಭಾವನೆಗಳೇ ತುಂಬಿರುವವರಿಂದ ನೈಜ ಮೌಲ್ಯ ಮಾಪನ ಅಸಾಧ್ಯ ಎಂದು ವಿಪಕ್ಷ ನಾಯಕನ ವಿರುದ್ಧ ಹರಿಹಾಯ್ದರು.

    100 ದಿನಗಳ ಆಡಳಿತದಲ್ಲಿ ಅನೇಕ ಸವಾಲುಗಳನ್ನು ಎದುರಿಸಿದ್ದೇವೆ. ವಿಶೇಷವಾಗಿ ನೆರೆ ಮತ್ತು ಮಳೆ ನಮಗೆ ದೊಡ್ಡ ಸವಾಲಾಗಿತ್ತು. ನೆರೆಸಂತ್ರಸ್ತರಿಗೆ ನೆರವಾಗಲು ಸಾಕಷ್ಟು ಶ್ರಮಿಸಿದ್ದೇವೆ. ನಮಗೆ ಕೊಟ್ಟಿರುವ ಖಾತೆಗಳಲ್ಲಿ ಸಾಕಷ್ಟು ಹೆಜ್ಜೆ ಮುಂದಿಟ್ಟಿದ್ದೇವೆ. ನಾವು ಏನೋ ಒಂದು ಸಾಧಿಸಿದ್ದೇವೆ ಎನ್ನುವುದಕ್ಕಿಂತ ಮುಂದಿನ ದಿನಗಳ ಸಾಧನೆಗೆ ಇದು ಸ್ಪೂರ್ತಿ ಕೊಟ್ಟಿರುವ ಅವಧಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

  • ಬಣ್ಣದ ವಿದ್ಯುತ್ ದೀಪಗಳಿಂದ ಕಂಗೊಳಿಸಿದ ಚುಂಚನಕಟ್ಟೆ ಜಲಪಾತ

    ಬಣ್ಣದ ವಿದ್ಯುತ್ ದೀಪಗಳಿಂದ ಕಂಗೊಳಿಸಿದ ಚುಂಚನಕಟ್ಟೆ ಜಲಪಾತ

    ಮೈಸೂರು: ಜಿಲ್ಲೆಯ ಕೆ.ಆರ್.ನಗರದ ಚುಂಚನಕಟ್ಟೆ ಜಲಪಾತವು ಶನಿವಾರ ರಾತ್ರಿ ಬಣ್ಣ ಬಣ್ಣದ ವಿದ್ಯುತ್ ದೀಪಗಳ ಬೆಳಕಿನಿಂದ ಕಂಗೊಳಿಸಿತು.

    ಜಲಪಾತೋತ್ಸವದ ನಿಮಿತ್ತ ಶೃಂಗಾರಗೊಂಡ ಚುಂಚನಕಟ್ಟೆ ಜಲಪಾತ ಪ್ರಿಯರಿಗೆ ಕಣ್ಣುಗಳಿಗೆ ಮುದ ನೀಡಿತು. ಕೆಂಪು, ನೀಲಿ, ಹಳದಿ, ನೇರಳೆ ಬಣ್ಣದ ಲೇಸರ್ ಬೆಳಕನ್ನು ಜಲಪಾತದ ಮೇಲೆ ಬಿಟ್ಟು, ಪ್ರವಾಸಿಗಳನ್ನು ರಂಜಿಸಲಾಯಿತು. ಜೊತೆಗೆ ಜಲಪಾತೋತ್ಸವ ವೀಕ್ಷಣೆಗೆ ಬಂದಿದ್ದ ಸಾರ್ವಜನಿಕರಿಗಾಗಿ ವಿವಿಧ ಮನರಂಜನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

    ಎಲ್ಲಿದೆ ಚುಂಚನಕಟ್ಟೆ ಜಲಪಾತ:
    ಕಾವೇರಿ ನದಿಯು ಕೃಷ್ಣರಾಜನಗರ ತಾಲೂಕಿನಲ್ಲಿ ಚುಂಚನಕಟ್ಟೆಯಲ್ಲಿ ಸುಮಾರು 65 ಅಡಿಗಳ ಎತ್ತರದಿಂದ ಧುಮ್ಮಿಕ್ಕಿ ಮೋಹಕ ಜಲಪಾತವನ್ನು ಸೃಷ್ಟಿಸಿದೆ. ಚುಂಚನಕಟ್ಟೆ ಜಲಪಾತವು ಕೃಷ್ಣರಾಜನಗರದಿಂದ 15 ಕಿ.ಮೀ ದೂರದಲ್ಲಿದ್ದು, ಇಲ್ಲಿರುವ ಕೋದಂಡರಾಮ ದೇವಾಲಯವು ಪ್ರಸಿದ್ಧವಾಗಿದೆ. ಶ್ರೀರಾಮನು ವನವಾಸಕಾಲದಲ್ಲಿ ಪತ್ನಿ ಸೀತಾದೇವಿ ಜೊತೆಗೆ ಚುಂಚನಕಟ್ಟೆ ಜಲಪಾತಕ್ಕೆ ಬಂದಿದ್ದನೆಂದು ಪುರಾಣದಲ್ಲಿ ಉಲ್ಲೇಖವಿದೆ. ಇಲ್ಲಿನ ದೇವಸ್ಥಾನದ ವಿಶೇಷವೆಂದರೆ ಶ್ರೀರಾಮನ ಬಲಬದಿಗೆ ಸೀತಾದೇವಿಯ ವಿಗ್ರಹವಿದೆ.

  • ಮೂರು ವರ್ಷದ ಬಳಿಕ ಕರ್ನಾಟಕದ ನಯಾಗರ ಫಾಲ್ಸ್‌ನಲ್ಲಿ ಜಲಪಾತೋತ್ಸವ

    ಮೂರು ವರ್ಷದ ಬಳಿಕ ಕರ್ನಾಟಕದ ನಯಾಗರ ಫಾಲ್ಸ್‌ನಲ್ಲಿ ಜಲಪಾತೋತ್ಸವ

    ಚಾಮರಾಜನಗರ: ಕರ್ನಾಟಕದ ನಯಾಗರ ಫಾಲ್ಸ್ ಎಂದೇ ಹೆಸರು ವಾಸಿಯಾಗಿರುವ ಕೊಳ್ಳೆಗಾಲ ತಾಲೂಕಿನ ಗಗನಚುಕ್ಕಿ-ಭರಚುಕ್ಕಿ ಜಲಪಾತಗಳು ಹಾಲ್ನೊರೆಯಂತೆ ಧುಮ್ಮಿಕ್ಕುತ್ತಿರುವ ಹಿನ್ನೆಲೆಯಲ್ಲಿ  ಮೂರು ವರ್ಷದ ಬಳಿಕ ಜಲಪಾತೋತ್ಸವ ನಡೆಸಲು ಸರ್ಕಾರ ಮುಂದಾಗಿದೆ.

    ಇಂದು ಗಗನಚುಕ್ಕಿ-ಭರಚುಕ್ಕಿ ಜಲಪಾತಕ್ಕೆ ಭೇಟಿ ನೀಡಿ ಅಧಿಕಾರಿಗಳ ಸಭೆ ನಡೆಸಿದ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಜಲಪಾತೋತ್ಸವದ ದಿನಾಂಕವನ್ನು ನಿಗದಿ ಮಾಡಿದ್ದಾರೆ.

    ಆಗಸ್ಟ್ ತಿಂಗಳ 18 ಮತ್ತು 19 ರಂದು ಜಲಪಾತೋತ್ಸವ ನಡೆಯಲಿದೆ. ಜಲಪಾತದಲ್ಲಿ ನೀರಿಲ್ಲದ ಕಾರಣ ಮೂರು ವರ್ಷಗಳ ಕಾಲ ಜಲಪಾತೋತ್ಸವ ನಿಂತು ಹೋಗಿತ್ತು. ಆದರೆ ಈ ಬಾರಿ ಕಾವೇರಿ ಮತ್ತು ಕಬಿನಿ ನದಿಗಳಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಬರುತ್ತಿರುವುದರಿಂದ ಜಲಪಾತಗಳಲ್ಲಿ ಭೋರ್ಗರೆದು ನೀರು ಧುಮುಕುತ್ತಿದೆ. ಹೀಗಾಗಿ ಪ್ರವಾಸಿಗರು ಹಾಗೂ ಸ್ಥಳೀಯರು ಈ ಬಾರಿ ಜಲಪಾತೋತ್ಸವ ನಡೆಸಬೇಕೆಂದು ಒತ್ತಾಯ ಮಾಡಿದ್ದರಿಂದ ಈ ನಿರ್ಧಾರ ಕೈಗೊಂಡಿದ್ದಾಗಿ ಸಾ.ರಾ. ಮಹೇಶ್ ತಿಳಿಸಿದರು. ಇದನ್ನೂ ಓದಿ: ಭೋರ್ಗರೆದು ಹರಿಯುತ್ತಿರುವ ಕರ್ನಾಟಕದ ನಯಾಗರ ಫಾಲ್ಸ್

    ಈ ಹಿಂದಿನ ಜಲಪಾತೋತ್ಸವದ ವೇಳೆ ಆಹಾರ ಮೇಳ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿತ್ತು. ಬಾಯಲ್ಲಿ ನೀರೂರಿಸುವ ಖಾದ್ಯಗಳು ಸ್ಥಳದಲ್ಲೇ ತಯಾರಾಗುತ್ತಿದ್ದವು. ಪ್ರವಾಸಿಗರು ಅದನ್ನು ಚಪ್ಪರಿಸಿಕೊಂಡು ತಿನ್ನುತ್ತಿದ್ದರು. ಇನ್ನೂ ಸ್ಟಾರ್ ನಟರು ಹಾಗೂ ಕಲಾವಿದರನ್ನು ಆಹ್ವಾನಿಸಿ ಪ್ರತಿ ನಿತ್ಯ ರಾತ್ರಿ ಅದ್ಧೂರಿ ಕಾರ್ಯಕ್ರಮಗಳು ನಡೆಯುತಿತ್ತು.

    ಪ್ರವಾಸಿಗರು ಸಂಗೀತಕ್ಕೆ ಹುಚ್ಚೆದ್ದು ಕುಣಿಯುತ್ತಿದ್ದರು. ಭರಚುಕ್ಕಿ ಜಲಪಾತೋತ್ಸವ ಪ್ರವಾಸಿಗರಿಗೆ ಅಕ್ಷರಶಃ ಸ್ವರ್ಗವೇ ಆಗಿತ್ತು. ಸತತ ಮೂರು ವರ್ಷಗಳ ಕಾಲ ಯಶಸ್ವಿಯಾಗಿ ನಡೆದಿದ್ದ ಕಾರ್ಯಕ್ರಮವನ್ನು ಈ ವರ್ಷವೂ ಆಯೋಜಿಸಿ ಎಂದು ಪ್ರವಾಸಿಗರು ಹಾಗೂ ಜನ ಕಳೆದ ವರ್ಷ ಬೇಡಿಕೆ ಇಟ್ಟಿದ್ದರು. ಆದರೆ ಸರ್ಕಾರ ಜಲಪಾತೋತ್ಸವನ್ನು ಆಯೋಜಿಸಿರಲಿಲ್ಲ.