Tag: ಜಯಪ್ರಕಾಶ್ ಹೆಗ್ಡೆ

  • ಪಂಚಮಸಾಲಿ ಸಮುದಾಯವನ್ನು ಪ್ರವರ್ಗ 2A ಸೇರಿಸುವ ವಿಚಾರ ನಿಷ್ಪಕ್ಷಪಾತ ವರದಿ ನೀಡುತ್ತೇನೆ: ಜಯಪ್ರಕಾಶ್ ಹೆಗ್ಡೆ

    ಪಂಚಮಸಾಲಿ ಸಮುದಾಯವನ್ನು ಪ್ರವರ್ಗ 2A ಸೇರಿಸುವ ವಿಚಾರ ನಿಷ್ಪಕ್ಷಪಾತ ವರದಿ ನೀಡುತ್ತೇನೆ: ಜಯಪ್ರಕಾಶ್ ಹೆಗ್ಡೆ

    ಬೆಂಗಳೂರು: ಪಂಚಮಸಾಲಿ ಸಮುದಾಯವನ್ನು ಪ್ರವರ್ಗ 2 ಎಗೆ ಸೇರಿಸಬೇಕು, ಸೇರಿಸಬಾರದು ಎಂಬುದರ ವಿಚಾರವಾಗಿ ಈಗಾಗಲೇ ಪರ – ವಿರೋಧ ಚರ್ಚೆಗಳು ನಡೆಯುತ್ತಿವೆ. ಈ ಕುರಿತು ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸಮಗ್ರ ಅಧ್ಯಯನ ನಡೆಸಿ ನಿಷ್ಪಕ್ಷಪಾತ ವರದಿಯನ್ನು ಸಲ್ಲಿಸಲಿದೆ ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಜಯಪ್ರಕಾಶ್ ಹೆಗ್ಡೆ ಭರವಸೆ ನೀಡಿದರು.

    ಪಂಚಮಸಾಲಿ ಸಮುದಾಯವನ್ನು ಪ್ರವರ್ಗ 2 ಎಗೆ ಸೇರಿಸಬಾರದು. ಕೇಂದ್ರ ಸರ್ಕಾರದ ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಗೆ ಕರ್ನಾಟಕದ 70 ಜಾತಿ – ಉಪಜಾತಿಗಳನ್ನು ಸೇರ್ಪಡೆಗೊಳಿಸಬೇಕು ಮತ್ತು ಸ್ಥಳೀಯ ಚುನಾವಣೆಗಳಲ್ಲಿ ಅತಿ ಹಿಂದುಳಿದ ವರ್ಗಗಳಿಗೂ ಮೀಸಲಾತಿ ನೀಡಬೇಕು ಹಾಗೂ ಹೆಚ್. ಕಾಂತರಾಜ್ ವರದಿಯನ್ನು ಜಾರಿಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ, ಕರ್ನಾಟಕ ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯಿಂದ ಮನವಿ ಸಲ್ಲಿಸಲಾಯಿತು.

    ಮನವಿ ಸ್ವೀಕರಿಸಿ ಮಾತನಾಡಿದ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಜಯಪ್ರಕಾಶ್ ಹೆಗ್ಡೆ ಅವರು, ಪ್ರವರ್ಗ 2 ಎಗೆ ಪಂಚಮಸಾಲಿ ಸಮುದಾಯವನ್ನು ಸೇರಿಸುವ ವರದಿಯನ್ನು ಈಗಾಗಲೇ ತಿರಸ್ಕರಿಸಲಾಗಿದೆ. ಈ ಬಗ್ಗೆ ಮತ್ತೆ ಪರ ವಿರೋಧ ಮಾತುಗಳು ಕೇಳಿಬರುತ್ತಿವೆ. ಎರಡು ಬಣಗಳ ಅಭಿಪ್ರಾಯಗಳನ್ನು ಸಂಗ್ರಹಿಸಿ ಪಾರದರ್ಶಕ ವರದಿಯನ್ನು ನೀಡುವುದಾಗಿ ಹೇಳಿದರು.

    ಇನ್ನು ಕರ್ನಾಟಕ ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಅಧ್ಯಕ್ಷರಾದ ಎಮ್. ಸಿ. ವೇಣುಗೋಪಾಲ್ ಮಾತನಾಡಿ, ಹಿಂದುಳಿದ ವರ್ಗಗಳ ಕೇಂದ್ರ ಸರ್ಕಾರದ ಮೀಸಲಾತಿ ಪಟ್ಟಿಗೆ ಕರ್ನಾಟಕದ 70 ಜಾತಿ- ಉಪಜಾತಿಗಳನ್ನು ಸೇರಿಸಬೇಕು ಮತ್ತು ಪಂಚಮಸಾಲಿ ಸಮುದಾಯವನ್ನು ಪ್ರವರ್ಗ 2ಎಗೆ ಸೇರಿಸಬಾರದು ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಮನವಿ ಸಲ್ಲಿಸಿದ್ದೇವೆ. ಆಯೋಗದ ಅಧ್ಯಕ್ಷರು ನಮ್ಮ ಮನವಿಗೆ ಸ್ಪಂದಿಸಿದ್ದಾರೆ. ಅಲ್ಲದೆ ಅತಿ ಹಿಂದುಳಿದ ವರ್ಗಗಳಿಗೆ ಸೂಕ್ತ ನ್ಯಾಯ ನೀಡುವ ಭರವಸೆಯನ್ನು ನೀಡಿದ್ದಾರೆ ಎಂದರು. ಇದನ್ನೂ ಓದಿ: ಅಧಿಕಾರಿಗಳು, ಗುತ್ತಿಗೆದಾರರ ನಿರ್ಲಕ್ಷ್ಯಕ್ಕೆ ಕೂಲಿಕಾರ್ಮಿಕ ಬಲಿ

    ಪಂಚಮಸಾಲಿ ಸಮುದಾಯವು ವೀರಶೈವ-ಲಿಂಗಾಯಿತದ ಉಪಜಾತಿಯಾಗಿರುವುದರಿಂದ ಅಂತಹ ಉಪಜಾತಿಯನ್ನು ಮುಖ್ಯಜಾತಿಯಿಂದ ಬೇರ್ಪಡಿಸಿ ಬೇರೊಂದು ಪ್ರವರ್ಗಕ್ಕೆ ವರ್ಗಾಯಿಸುವುದು ಸರ್ವೋಚ್ಛ ನ್ಯಾಯಲಯ ಇಂದ್ರಾ ಸಹಾನಿ ಪ್ರಕರಣದಲ್ಲಿ ನೀಡಿರುವ ತೀರ್ಪಿಗೆ ವಿರುದ್ಧವಾಗಿರುತ್ತದೆ ಎಂದರು.

    ಈ ಹಿನ್ನೆಲೆಯಲ್ಲಿ ಪಂಚಮಸಾಲಿ ಸಮುದಾಯವನ್ನು ಪ್ರವರ್ಗ 2ಎ ಗೆ ಸೇರಿಸುವುದು ಸರಿಯಲ್ಲ. ಇದರಿಂದ ಅತಿ ಹಿಂದುಳಿದ ವರ್ಗಗಳಿಗೆ ಅನ್ಯಾಯವಾಗುತ್ತದೆ. ಒಂದು ವೇಳೆ ಪಂಚಮಸಾಲಿ ಸಮುದಾಯವನ್ನು ಪ್ರವರ್ಗ 2ಎಗೆ ಸೇರಿಸಿದರೆ ರಾಜ್ಯಾದ್ಯಂತ ಹೋರಾಟ ನಡೆಸುವುದಾಗಿ ಎಮ್. ಸಿ. ವೇಣುಗೋಪಾಲ್ ಹೇಳಿದರು. ಇದನ್ನೂ ಓದಿ: ಅಧಿಕಾರಿಗಳು, ಗುತ್ತಿಗೆದಾರರ ನಿರ್ಲಕ್ಷ್ಯಕ್ಕೆ ಕೂಲಿಕಾರ್ಮಿಕ ಬಲಿ

    1992ರ ಮಂಡಲ್ ಆಯೋಗದ ವರದಿಯಂತೆ ಕರ್ನಾಟಕದ 323 ಜಾತಿ-ಉಪಜಾತಿಗಳನ್ನು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸಲಾಗಿತ್ತು. ಆನಂತರದಲ್ಲಿ 283 ಜಾತಿ-ಉಪಜಾತಿಗಳನ್ನು ಮೀಸಲಾತಿ ಪಟ್ಟಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸು ಮಾಡಲಾಯಿತು. ಆದರೂ ಸುಮಾರು 70 ಜಾತಿ ಉಪಜಾತಿಗಳು ರಾಜ್ಯ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿದ್ದರೂ, ಕೇಂದ್ರದ ಪಟ್ಟಿಯಲ್ಲಿ ಸೇರಿಸಲಾಗಿಲ್ಲ. ಹೀಗಾಗಿ ಈ ವರ್ಗಗಳ ಸರ್ವಾಂಗೀಣ ಅಭಿವೃದ್ಧಿಗೆ ಅನುಕೂಲವಾಗಲು, ಕೇಂದ್ರದ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಇವುಗಳನ್ನು ಸೇರಿಸಬೇಕು ಎಮ್. ಸಿ. ವೇಣುಗೋಪಾಲ್ ಒತ್ತಾಯಿಸಿದರು.

    ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯರು ಹಾಗೂ ಕರ್ನಾಟಕ ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಪ್ರಧಾನ ಕಾರ್ಯದರ್ಶಿ ಎಂ. ನಾಗರಾಜು, ಖಜಾಂಚಿ ಎಲ್.ಎ ಮಂಜುನಾಥ್ ಸೇರಿದಂತೆ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

  • ರಾಜ್ಯ ಹಿಂದುಳಿದ ವರ್ಗಗಳ ದನಿಯಾಗಿ ಕೆಲಸ ಮಾಡ್ತೀನಿ: ಜಯಪ್ರಕಾಶ್ ಹೆಗ್ಡೆ

    ರಾಜ್ಯ ಹಿಂದುಳಿದ ವರ್ಗಗಳ ದನಿಯಾಗಿ ಕೆಲಸ ಮಾಡ್ತೀನಿ: ಜಯಪ್ರಕಾಶ್ ಹೆಗ್ಡೆ

    ಉಡುಪಿ: ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ ನನ್ನನ್ನು ಆಯ್ಕೆ ಮಾಡಲಾಗಿದೆ. ಇದೊಂದು ರಾಜಕೀಯೇತರ ಹುದ್ದೆ. ಜವಾಬ್ದಾರಿ ನೀಡಿದ ಸಿಎಂ ಯಡಿಯೂರಪ್ಪ ನವರಿಗೆ ಧನ್ಯವಾದ ಎಂದು ಜಯಪ್ರಕಾಶ್ ಹೆಗ್ಡೆ ಹೇಳಿದರು.

    ಉಡುಪಿಯಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯನ್ನು ಭೇಟಿಯಾಗಿ ಕೆಲಕಾಲ ಮಾತುಕತೆ ಮಾಡಿ ನಂತರ ಮಾಧ್ಯಮದ ಜೊತೆ ಮಾತನಾಡಿದರು. ಸಮಿತಿಯ ಸದಸ್ಯರ ನೇಮಕಾತಿ ಮುಂದೆ ಆಗಲಿದೆ. ಈ ಹಿಂದಿನ ಎಲ್ಲಾ ವರದಿಗಳನ್ನು ಅಧ್ಯಯನ ಮಾಡುತ್ತೇನೆ. ರಾಜ್ಯಾದ್ಯಂತ ಓಡಾಡಿ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸುತ್ತೇನೆ ಎಂದರು.

    ಕಾಂಗ್ರೆಸ್ಸಿನಿಂದ ಬಿಜೆಪಿ ಸೇರಿದ ಮೇಲೆ ಜಯಪ್ರಕಾಶ್ ಹೆಗ್ಡೆಗೆ ಯಾವುದೇ ಅಧಿಕಾರ ನೀಡಿರಲಿಲ್ಲ. ಈ ಬಗ್ಗೆ ಮಾತನಾಡಿದ ಅವರು, ಅಧಿಕಾರ ಇಲ್ಲದಿದ್ದಾಗಲೂ ನಾನು ಜನರ ಜೊತೆ ಇದ್ದೆ. ಹುದ್ದೆಯಲ್ಲಿ ಇಲ್ಲದಿದ್ದರೂ ಕೆಲಸ ಮಾಡುವ ಶಕ್ತಿಯನ್ನು ಬೆಳೆಸಿಕೊಂಡಿದ್ದೇನೆ. ಜನರ ಕೆಲಸ ಮಾಡಲು ಹುದ್ದೆಯೇ ಬೇಕಾಗಿಲ್ಲ ಎಂದರು.

    ಒಂದು ಪಕ್ಷದ ಪ್ರತಿನಿಧಿಯಾಗಿ ನಾನು ನೇಮಕವಾಗಿಲ್ಲ. ಪಕ್ಷ ರಹಿತವಾಗಿ ಹಿಂದುಳಿದ ವರ್ಗಗಳ ದನಿಯಾಗಿ ಕೆಲಸ ಮಾಡುತ್ತೇನೆ. ರಾಜಕೀಯ ಕೆಲಸಗಳನ್ನು ಶಾಸಕನಾಗಿ ಮಂತ್ರಿಯಾಗಿ ಸಂಸದನಾಗಿ ಮಾಡಿದ್ದೆ. ಈಗ ರಾಜಕೀಯೇತರವಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ಹಿಂದುಳಿದ ವರ್ಗಗಳಿಗೆ ಶಕ್ತಿ ತುಂಬುವ ಕೆಲಸವನ್ನು ಮಾಡುತ್ತೇನೆ ಎಂದು ಹಿಂದುಳಿದ ವರ್ಗಗಳ ನೂತನ ಅಧ್ಯಕ್ಷ ಜಯಪ್ರಕಾಶ್ ಹಗ್ಡೆ ಹೇಳಿದರು.

  • ಉಡುಪಿ- ಚಿಕ್ಕಮಗಳೂರು ಲೋಕಸಭಾ ಟಿಕೆಟ್ ಮೀನುಗಾರ ಮುಖಂಡ ಯಶ್ ಪಾಲ್‍ಗೆ ನೀಡಿ..!

    ಉಡುಪಿ- ಚಿಕ್ಕಮಗಳೂರು ಲೋಕಸಭಾ ಟಿಕೆಟ್ ಮೀನುಗಾರ ಮುಖಂಡ ಯಶ್ ಪಾಲ್‍ಗೆ ನೀಡಿ..!

    – ಬಿಜೆಪಿ ಕಾರ್ಯಕರ್ತರ ಒತ್ತಾಯ

    ಉಡುಪಿ: ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಲೋಕಸಭಾ ಚುನಾವಣೆಗೆ ಬಿಜೆಪಿ ಪಕ್ಷದಿಂದ ಹೊಸ ಅಭ್ಯರ್ಥಿಯ ಹೆಸರು ಕೇಳಿಬಂದಿದೆ. ತೀವ್ರ ವಿರೋಧದ ನಡುವೆಯೂ ಶೋಭಾ ಕರಂದ್ಲಾಜೆ ಚುನಾವಣೆಗೆ ಸಿದ್ಧತೆ ಮಾಡಿಕೊಂಡಿದ್ದರೂ ಕೂಡ ಮೀನುಗಾರ ಸಮುದಾಯದ ಮುಖಂಡರ ಹೆಸರು ಬಿಜೆಪಿ ವಲಯದಲ್ಲಿ ಓಡಾಡುತ್ತಿದೆ.

    ಉಡುಪಿ-ಚಿಕ್ಕಮಗಳೂರಿಗೆ ಜಯಪ್ರಕಾಶ್ ಹೆಗ್ಡೆ ಅವರನ್ನು ಅಭ್ಯರ್ಥಿಯಾಗಿ ಘೋಷಿಸಬೇಕು ಎಂಬ ಒತ್ತಾಯವೂ ಇಲ್ಲಿ ಜೋರಾಗಿ ಕೇಳಿಬರುತ್ತಿದೆ. ಎರಡೂ ಬಣಗಳ ಲಾಬಿಯೂ ಜೋರಾಗಿರುವಾಗಲೇ ಯಶ್ ಪಾಲ್ ಸುವರ್ಣ ಹೆಸರು ಈ ನಡುವೇ ಪ್ರಸ್ತಾಪವಾಗುತ್ತಿದೆ. ಮೊಗವೀರ ಮುಖಂಡ ಯಶಪಾಲ್ ಸುವರ್ಣ ಅವರು ಸಂಘ ಪರಿವಾರದ ಹಿನ್ನೆಲೆ ಇರುವ ಮೀನುಗಾರಿಕಾ ಫೆಡರೇಷನ್‍ನ ನಾಯಕನಾಗಿದ್ದಾರೆ. ಹಾಗೆಯೇ ಮೀನುಗಾರ ಸಮುದಾಯದ ಮುಂಚೂಣಿ ಮುಖಂಡ ಎನಿಸಿದ್ದಾರೆ.

    ಶೋಭಾ ಕರಂದ್ಲಾಜೆ ಅವರು ರಾಜ್ಯ ರಾಜಕಾರಣಕ್ಕೆ ಮರಳಲು ಬಯಸಿದರೆ, ಯಶಪಾಲ್ ಹೆಸರನ್ನು ಮುಂಚೂಣಿಗೆ ತರಲು ಕಾರ್ಯಕರ್ತರು ಉತ್ಸುಕತೆ ತೋರಿದ್ದಾರೆ. ಆರ್.ಎಸ್.ಎಸ್ ನಾಯಕ ಬಿ.ಎಲ್.ಸಂತೋಷ್ ಅವರ ಮೂಲಕ ಒತ್ತಾಯ ಹೇರಲು ತಯಾರಿಗಳು ನಡೆಯುತ್ತಿವೆ. ಜಯಪ್ರಕಾಶ್ ಹೆಗ್ಡೆಯನ್ನು ಒಪ್ಪದ ಬಿಜೆಪಿ ಮುಖಂಡರು ಶೋಭಾ ಕರಂದ್ಲಾಜೆ ಬದಲಾಗಿ ಯಶ್ ಪಾಲ್ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಿ ಎಂದು ಜನರು ಹೇಳಿದ್ದಾರೆ. ಶೋಭಾ ಕರಂದ್ಲಾಜೆಗೆ ರಾಜ್ಯ ರಾಜಕಾರಣದಲ್ಲಿ ಉನ್ನತ ಸ್ಥಾನ ಕೊಡುವ ಮೂಲಕ ಸ್ಪರ್ಧೆಯಿಂದ ಹಿಂದಕ್ಕೆ ಸರಿಯಲು ಸೂಚಿಸುವ ಸಾಧ್ಯತೆ ಇದೆ ಎಂದು ಕರಾವಳಿಯ ಬಿಜೆಪಿ ವಲಯದಲ್ಲಿ ಚರ್ಚೆಯಾಗುತ್ತಿದೆ. ವಾಟ್ಸಾಪ್, ಫೇಸ್‍ಬುಕ್‍ನಲ್ಲಿ ಇಂತಹ ಸಂದೇಶ ಹರಿದಾಡುತ್ತಿದೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಯಶ್ ಪಾಲ್ ಸುವರ್ಣ, ನಾನೊಬ್ಬ ಬಿಜೆಪಿಯ ಸಕ್ರಿಯ ಕಾರ್ಯಕರ್ತ. ಹೋರಾಟದಿಂದ ಬಂದವನು. ಹಿಂದೂ ಸಂಘಟನೆಯಲ್ಲಿ ಗುರುತಿಸಿಕೊಂಡು ಪಕ್ಷ ಬಲವರ್ಧನೆಗೆ ಹಗಲು ರಾತ್ರಿ ದುಡಿದಿದ್ದೇನೆ. ದೇಶ ಸೇವೆ, ಜನಸೇವೆ ಮಾಡಬೇಕೆಂಬ ಉದ್ದೆಶದಿಂದ ಮದುವೆಯಾಗದೆ ಬ್ರಹ್ಮಚಾರಿಯಾಗಿದ್ದೇನೆ. ಜೀವದ ಕೊನೆಯ ಉಸಿರು ಇರೋವರೆಗೆ ಜನರ ಕಷ್ಟ ಸುಖದ ಜೊತೆ ಇರುತ್ತೇನೆ. ಪಕ್ಷ, ನಾಯಕರು ಅವಕಾಶ ಕೊಟ್ಟರೆ ಸ್ಪರ್ಧೆ ಮಾಡುತ್ತೇನೆ ಎಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಟಿಕೆಟ್‍ಗಾಗಿ ಕೃಷ್ಣ ಮುಖ್ಯಪ್ರಾಣ – ಈಶ್ವರನ ಮೊರೆ ಹೋದ ಜಯಪ್ರಕಾಶ್ ಹೆಗ್ಡೆ ಬೆಂಬಲಿಗರು

    ಟಿಕೆಟ್‍ಗಾಗಿ ಕೃಷ್ಣ ಮುಖ್ಯಪ್ರಾಣ – ಈಶ್ವರನ ಮೊರೆ ಹೋದ ಜಯಪ್ರಕಾಶ್ ಹೆಗ್ಡೆ ಬೆಂಬಲಿಗರು

    ಉಡುಪಿ: ಈ ಬಾರಿ ಉಡುಪಿ – ಚಿಕ್ಕಮಗಳೂರು ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಬಿಜೆಪಿ ಟಿಕೆಟ್ ಜಯಪ್ರಕಾಶ್ ಹೆಗ್ಡೆಗೆ ಸಿಗಲಿ ಎಂದು ಅವರ ಬೆಂಬಲಿಗರು ದೇವರ ಮೊರೆ ಹೋಗಿ, ವಿಶೇಷ ಪೂಜೆ ಸಲ್ಲಿಸಿದ್ದಾರೆ.

    ಜಿಲ್ಲೆಯ ಶ್ರೀಕೃಷ್ಣಮಠ- ಅನಂತೇಶ್ವರ ದೇವಸ್ಥಾನ ಮತ್ತು ಚಂದ್ರಮೌಳೇಶ್ವರ ದೇವಸ್ಥಾನದಲ್ಲಿ ಜಯಪ್ರಕಾಶ್ ಹೆಗ್ಡೆ ಬೆಂಬಲಿಗರು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಜಯಪ್ರಕಾಶ ಹೆಗ್ಡೆ ಜೆಡಿಎಸ್‍ಗೆ ಹೋಗಲ್ಲ. ಉಡುಪಿ ಚಿಕ್ಕಮಗಳೂರು ಕ್ಷೇತ್ರದಿಂದ ಅವರಿಗೆ ಬಿಜೆಪಿ ಟಿಕೆಟ್ ಕೊಡಿ ಎಂದು ಅವರ ನೂರಾರು ಅಭಿಮಾನಿಗಳು ಒತ್ತಾಯಿಸಿದ್ದಾರೆ. ಹಾಗೆಯೇ ಹಾಲಿ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚುನಾವಣೆ ನಂತರ ಜನರ ಜೊತೆ ಇಲ್ಲದೆ, ಆಗಾಗ ಬಂದು ಹೋಗುವ, ರಾಜ್ಯಾದ್ಯಂತ ಪ್ರವಾಸ ಮಾಡುವ, ಟಿವಿಯಲ್ಲಿ ಮಾತ್ರ ಕಾಣುವ ಸಂಸದೆ ನಮಗೆ ಬೇಡ ಎಂದು ಬಿಜೆಪಿ ಕಾರ್ಯಕರ್ತ ರಾಘವೇಂದ್ರ ಹೆಬ್ರಿ ಆಕ್ರೋಶ ವ್ಯಕ್ತಗೊಳಿಸಿದರು.

    ಉಡುಪಿ ಶ್ರೀಕೃಷ್ಣ ಪರಮಾತ್ಮ ಮುಖ್ಯಪ್ರಾಣ ದೇವರಿಗೆ ಪೂಜೆ ಸಲ್ಲಿಸಿದ್ದೇವೆ. ಮೋದಿ ಮತ್ತೆ ದೇಶದ ಪ್ರಧಾನಿ ಆಗಬೇಕು. ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಜನರೊಂದಿಗೆ ಹಾಗೂ ಕಾರ್ಯಕರ್ತರೊಂದಿಗೆ ಇರುವ ಅಭ್ಯರ್ಥಿಗೆ ಹೈಕಮಾಂಡ್ ಟಿಕೆಟ್ ನೀಡಬೇಕು. ಜನರ ಅಭಿಪ್ರಾಯ ಪರಿಗಣಿಸಬೇಕು. ಶೋಭಾ ಕರಂದ್ಲಾಜೆಗೆ ಟಿಕೆಟ್ ಕೊಡಬಾರದು ಅಂತ ಅಲ್ಲ. ಆದ್ರೆ ಹೆಗ್ಡೆಯವರಿಗೆ ಟಿಕೆಟ್ ಕೊಟ್ಟರೆ ಹೆಚ್ಚಿನ ಅಂತರದಲ್ಲಿ ಗೆಲ್ಲುತ್ತಾರೆ. ಕಾರ್ಯಕರ್ತರ ಒಕ್ಕೊರಲ ಧ್ವನಿಗೆ ಬೆಲೆ ಸಿಗುತ್ತದೆ ಎಂದು ಜಯಪ್ರಕಾಶ್ ಹೆಗ್ಡೆ ಅಭಿಮಾನಿ ಹರೀಶ್ ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಉಡುಪಿ ಬಿಜೆಪಿ ಮುಖಂಡ ರಾಘವೇಂದ್ರ ಕಿಣಿ ಮಾತನಾಡಿ, ಉಡುಪಿಯ ಕೃಷ್ಣನಾಡಿನಿಂದ ಪಾಂಚಜನ್ಯ ಮೊಳಗಿಸಿದ್ದೇವೆ. 16ನೇ ದಿನಾಂಕದಂದು ಜನರಿಗೆ ಸಿಗುವ ಹಾಗೂ ಅವರೊಂದಿಗೆ ಬೆರೆಯುವ ಅಭ್ಯರ್ಥಿ ಆಯ್ಕೆಯಾಗಬೇಕು ಎನ್ನುವುದು ನಮ್ಮ ಅಭಿಪ್ರಾಯ. ಪಕ್ಷದ ಹಿರಿಯ ನಾಯಕರಲ್ಲಿ ಜನಾಭಿಪ್ರಾಯಕ್ಕೆ ಮನ್ನಣೆ ಇದೆ. ಶೋಭಾ ಕರಂದ್ಲಾಜೆಯವರ ಸಾಧನೆ ಬಗ್ಗೆ ಯಾರಿಗೂ ನೋವು ಇಲ್ಲ. ಅವರ ಶಕ್ತಿ ಮೀರಿ ಕೆಲಸ ಮಾಡಿದ್ದಾರೆ. ಆದ್ರೆ ರಾಜ್ಯ ನಾಯಕರು ಬೇರೆ ಬೇರೆ ಹೋರಾಟದಲ್ಲಿ ತೊಡಗಿದ್ದಾಗ ಕ್ಷೇತ್ರಕ್ಕೆ ಬರುವುದು ಕಷ್ಟಸಾಧ್ಯ ಎಂದೂ ಹೇಳಿದರು.

    ಈಗಾಗಲೇ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಸಮೀಕ್ಷೆ ಆಗಿದೆ. ಸಮೀಕ್ಷೆಯ ಆಧಾರದಲ್ಲಿ ಅಭ್ಯರ್ಥಿ ಆಯ್ಕೆ ಆಗಬೇಕು. ಅಭ್ಯರ್ಥಿಯ ಆಯ್ಕೆಯ ತನಕ ಹೋರಾಟ ನಡೆಯುತ್ತೆ, ಬಳಿಕ ಅಭ್ಯರ್ಥಿ ಘೋಷಣೆಯಾದ ನಂತರ ಪಕ್ಷದ ಅಭ್ಯರ್ಥಿಯ ಪರ ಕೆಲಸ ಮಾಡುವುದಾಗಿ ಕಾರ್ಯಕರ್ತರು ಅಭಿಪ್ರಾಯವನ್ನು ಹಂಚಿಕೊಂಡರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಗಂಡಸು ಎಂಪಿಗಳಿಗೆ ಶೋಭಾ ಕರಂದ್ಲಾಜೆ ಚಾಲೆಂಜ್

    ಗಂಡಸು ಎಂಪಿಗಳಿಗೆ ಶೋಭಾ ಕರಂದ್ಲಾಜೆ ಚಾಲೆಂಜ್

    ಉಡುಪಿ: ಚಿಕ್ಕಮಗಳೂರು-ಉಡುಪಿ ಲೋಕಸಭಾ ಕ್ಷೇತ್ರದಲ್ಲಿ ಈ ಹಿಂದೆ ಆಯ್ಕೆಯಾದ ಎಲ್ಲಾ ಗಂಡಸು ಎಂಪಿಗಳಿಗೆ ಶೋಭಾ ಕರಂದ್ಲಾಜೆ ಚಾಲೆಂಜ್ ಹಾಕಿದ್ದಾರೆ. ನೀವು ಇಷ್ಟು ವರ್ಷದಲ್ಲಿ ಏನು ಮಾಡಿದ್ದೀರಿ ಲಿಸ್ಟ್ ಕೊಡಿ, ನನ್ನ ಅಭಿವೃದ್ಧಿ ಕಾರ್ಯಗಳ ಪಟ್ಟಿ ಕೊಡುತ್ತೇನೆ ಎಂದು ಸವಾಲು ಹಾಕಿದ್ದು, ಚರ್ಚೆಗೆ ಬರಲಿ ಅಂತ ಆಹ್ವಾನ ನೀಡಿದ್ದಾರೆ.

    ಗೋ ಬ್ಯಾಕ್ ಶೋಭಾ ಅಭಿಯಾನ ವಿಚಾರದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಕ್ಷೇತ್ರದ ಈ ಹಿಂದಿನ ಗಂಡಸು ಸಂಸದರಿಗೆ ನಾನು ಚಾಲೆಂಜ್ ಮಾಡುತ್ತೇನೆ. ನನಗೆ ಹಣಬಲ, ಜಾತಿ ಬಲ ಇಲ್ಲದೇ ಇರಬಹುದು. ಬಾಹುಬಲ ಇಲ್ಲ, ಬೆಂಬಲ ಕೊಡುವವರು ಇಲ್ಲದಿರಬಹುದು. ಆದರೆ ಎಲ್ಲರಿಗಿಂತ ಹೆಚ್ಚು ಕೆಲಸ ಮಾಡಿದ್ದೇನೆ ಎಂದು ಹೇಳಿದ್ದಾರೆ. ಟಿಕೆಟ್ ಕೇಳುವ ಯಾರೋ ಒಬ್ಬರು ಅವಮಾನ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ:‘ಶೋಭಕ್ಕನ ಮನೆಗೆ ಕಳ್ಸಿ, ಮೋದಿಯನ್ನ ಉಳಿಸಿ’- ಎಲೆಕ್ಷನ್ ಹೊತ್ತಲ್ಲಿ ಬಿಜೆಪಿಯಿಂದ್ಲೇ ಅಭಿಯಾನ

    ಇಷ್ಟು ವರ್ಷ ಗಂಡಸು ಎಂಪಿಗಳು ಕ್ಷೇತ್ರದಲ್ಲಿ ಏನು ಮಾಡಿದ್ದೀರಿ? ಒಬ್ಬ ಮಹಿಳೆಯಾಗಿ ನಾನು ರಾಜ್ಯಾದ್ಯಂತ ಓಡಾಡಿಕೊಂಡು ಇಷ್ಟೆಲ್ಲಾ ಮಾಡಿದ್ದೇನೆ. ನಿಮ್ಮ ಕೈಯಲ್ಲಿ ಆಗದ ಕೆಲಸ ನಾನು ಮಾಡಿದ್ದೇನೆ. ಟಿಕೆಟ್ ನ ಆಸೆಗಾಗಿ ನಾನು ಇಷ್ಟೆಲ್ಲ ಮಾಡಿದ್ದಲ್ಲ. 10-20 ಹುಡುಗರ ಗುಂಪು ಕಟ್ಟಿಕೊಂಡು ಅಪಪ್ರಚಾರ ನಡೆಯುತ್ತಿದೆ. ನಾನು ಹೆದರುವ ಪ್ರಶ್ನೆಯೇ ಇಲ್ಲ ಎಂದರು. ಇದನ್ನೂ ಓದಿ:ಬಿಎಸ್‍ವೈ ಸೇರಿದಂತೆ ಬಿಜೆಪಿ ಹೈಕಮಾಂಡ್‍ಗೆ ತಲೆನೋವಾದ ಕೇಸ್

    ಧನಿ ಎತ್ತಿದವರ ಕೊಡುಗೆಯೇನು? ನಾನು 25 ವರ್ಷದಿಂದ ಪಕ್ಷಕ್ಕೆ ಮಣ್ಣು ಹೊತ್ತಿದ್ದೇನೆ. ರಾಜ್ಯದಲ್ಲೆಲ್ಲಾ ಓಡಾಡಿದ್ದೇನೆ. ನೀವು ಬಿಜೆಪಿಗೆ ಏನು ಮಾಡಿದ್ದೀರಿ? ನನ್ನ ಜೊತೆ ಚರ್ಚೆಗೆ ಬನ್ನಿ ಆಮೇಲೆ ಟಿಕೆಟ್ ಕೇಳಿ ಎಂದು ಹೆಸರು ಹೇಳದೆ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ವಿರುದ್ಧ ಗರಂ ಆದರು.

    ಸಾಧನೆ ವಿವರಿಸಿದ ಶೋಭಾ:
    ನನ್ನ ಅವಧಿಯಲ್ಲಿ ಉಡುಪಿಗೆ ಪಾಸ್ ಪೋರ್ಟ್ ಆಫೀಸ್ ತಂದಿದ್ದೇನೆ. ರಾಜ್ಯದ ಏಕೈಕ ಸಖಿ ಸೆಂಟರ್ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿದೆ. ಎರಡು ಜಿಲ್ಲೆಯಲ್ಲಿ ಕೇಂದ್ರೀಯ ವಿದ್ಯಾಲಯ ಸ್ಥಾಪನೆಯಾಗಿದೆ. ಜಿಟಿಡಿಸಿ ಕಟ್ಟಡ, ಕೌಶಲ್ಯ ತರಬೇತಿ ಕೇಂದ್ರ, ವಜ್ರದ ಹರಳು ಮತ್ತು ಆಭರಣ ತಯಾರಿಕಾ ತರಬೇತಿ ಸಂಸ್ಥೆ ಉಡುಪಿಯಲ್ಲಿ ನಿರ್ಮಾಣವಾಗಿದೆ. ಇಲ್ಲಿನ ಸರ್ಟಿಫಿಕೇಟ್ ದೇಶಾದ್ಯಂತ ಉಪಯೋಗಕ್ಕೆ ಬರುತ್ತದೆ. ರಾಜ್ಯದಲ್ಲೇ ಅತೀ ಹೆಚ್ಚು ಸಿಆರ್ ಎಫ್ ಫಂಡ್ ನನ್ನ ಕ್ಷೇತ್ರಕ್ಕೆ ಬಂದಿದೆ. 550 ಕೋಟಿ ರೂ. ರಸ್ತೆ ನಿರ್ಮಾಣಕ್ಕೆ ಖರ್ಚಾಗಿದೆ ಎಂದು ಹೇಳಿದರು. ಎರಡು ಜಿಲ್ಲೆಯ ಎಲ್ಲಾ ರಸ್ತೆ ರಾಷ್ಟ್ರೀಯ ಹೆದ್ದಾರಿ ಆಗುತ್ತಿದೆ. ನೀವೇನು ಮಾಡಿದ್ದೀರಿ ಅಂತ ಹೆಸರು ಹೇಳದೇ ಜಯಪ್ರಕಾಶ್ ಹೆಗ್ಡೆಗೆ ಶೋಭಾ ಟಾಂಗ್ ಕೊಟ್ಟರು.

    ಯಾರೆಲ್ಲ ಗಂಡಸರು ಎಂಪಿ ಆಗಿದ್ದರು..?
    ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಈ ಹಿಂದೆ ಕಾಂಗ್ರೆಸ್ ನಿಂದ ಆಸ್ಕರ್ ಫರ್ನಾಂಡೀಸ್ ಸುದೀರ್ಘ ಸಂಸದರಾಗಿದ್ದರು. ಜಯಪ್ರಕಾಶ ಹೆಗ್ಡೆ, ವಿನಯಕುಮಾರ್ ಸೊರಕೆ, ಟಿ.ಎ ಪೈ, ಪಿ.ರಂಗನಾಥ ಶೆಣೈ, ಯು.ಎಸ್ ಮಲ್ಯ, ಸ್ವತಂತ್ರ ಪಾರ್ಟಿಯಿಂದ ಜೆ.ಎಂ ಲೋಬೋ, ಬಿಜೆಪಿಯಿಂದ ಐಎಂ ಜಯರಾಮ ಶೆಟ್ಟಿ, ಸದಾನಂದ ಗೌಡ ಅವರು ಈ ಹಿಂದೆ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಿಎಸ್‍ವೈ ಸೇರಿದಂತೆ ಬಿಜೆಪಿ ಹೈಕಮಾಂಡ್‍ಗೆ ತಲೆನೋವಾದ ಕೇಸ್

    ಬಿಎಸ್‍ವೈ ಸೇರಿದಂತೆ ಬಿಜೆಪಿ ಹೈಕಮಾಂಡ್‍ಗೆ ತಲೆನೋವಾದ ಕೇಸ್

    ಬೆಂಗಳೂರು: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಟಿಕೆಟ್ ಆಕಾಂಕ್ಷಿಗಳು ಹೈಕಮಾಂಡ್ ಮಟ್ಟದಲ್ಲಿ ಲಾಭಿ ಮಾಡಲು ಮುಂದಾಗೋದು ಸಾಮಾನ್ಯ. ಅಂತೆಯೇ ರಾಜ್ಯ ಬಿಜೆಪಿಯಲ್ಲಿಯೂ ಅಸಮಧಾನದ ಹೊಗೆ ಕಾಣಿಸಿಕೊಂದ್ದು, ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಹೈಕಮಾಂಡ್ ಗೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ತಲೆನೋವಾಗಿ ಪರಿಣಮಿಸಿದೆ.

    ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡಿರುವ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಚುನಾವಣೆಗೆ ನೀವೇ ಅಭ್ಯರ್ಥಿ ಎಂದು ಹೇಳಿ ಮಾಜಿ ಡಿಸಿಎಂ ಆರ್.ಅಶೋಕ್ ಪಕ್ಷಕ್ಕೆ ಕರೆತಂದಿದ್ದರಂತೆ. ಇದೀಗ ಜಯಪ್ರಕಾಶ್ ಹೆಗ್ಡೆ ಟಿಕೆಟ್ ನೀಡಬೇಕೆಂದು ಬಿಗಿಪಟ್ಟು ಹಿಡಿದಿದ್ದಾರಂತೆ. ಇತ್ತ ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಮಾತ್ರ ಟಿಕೆಟ್ ನನಗೆ ಬೇಕು ಎಂದು ಪಕ್ಷದ ಮುಖಂಡರ ಮುಂದೆ ಹೇಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ:‘ಶೋಭಕ್ಕನ ಮನೆಗೆ ಕಳ್ಸಿ, ಮೋದಿಯನ್ನ ಉಳಿಸಿ’- ಎಲೆಕ್ಷನ್ ಹೊತ್ತಲ್ಲಿ ಬಿಜೆಪಿಯಿಂದ್ಲೇ ಅಭಿಯಾನ

    ಹಾಲಿ ಸಂಸದರಿಗೆ ಟಿಕೆಟ್ ಅಂತಾದ್ರೆ ನನಗೂ ಟಿಕೆಟ್ ಕೊಡಲೇಬೇಕು. ಪಕ್ಷದ ವರಿಷ್ಠರಿಗೆ ಗೊತ್ತಿಲ್ಲದೇ ಆರ್.ಅಶೋಕ್ ಮಾತು ಕೊಟ್ಟಿದ್ದು ತಪ್ಪು ಎಂದು ಶೋಭಾ ಕರಂದ್ಲಾಜೆ, ರಾಜ್ಯಾಧ್ಯಕ್ಷರ ಮುಂದೆ ಆಕ್ರೋಶ ಹೊರಹಾಕಿದ್ದಾರೆ ಎನ್ನಲಾಗುತ್ತಿದೆ.

    ಸಂಸದರಾದ ಬಳಿಕ ಕ್ಷೇತ್ರವನ್ನೇ ಮರೆತಿದ್ದೀರಿ, ಚುನಾವಣೆ ಹತ್ತಿರವಾಗುತ್ತಿದ್ದಂತೆ ಪ್ರತ್ಯಕ್ಷವಾಗಿದ್ದೀರಿ ಎಂದು ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಚಿಕ್ಕಮಗಳೂರು ಜಿಲ್ಲೆ ತರೀಕೆರೆಯಲ್ಲಿ ಆಕ್ರೋಶ ವ್ಯಕ್ತವಾಗಿದೆ. ಸಂಸದೆ ಶೋಭಾ ಕರಂದ್ಲಾಜೆ ತರೀಕೆರೆಗೆ ರೈಲ್ವೆ ಫ್ಲಾಟ್ ಫಾರಂ ಮೇಲ್ದರ್ಜೆ ಸೇರಿದಂತೆ ವಿವಿಧ ಕಾಮಗಾರಿಗಳ ಉದ್ಘಾಟನೆಗೆ ಆಗಮಿಸಿದ್ದರು. ಈ ವೇಳೆ, ವಕೀಲರು ಹಾಗೂ ತರೀಕೆರೆ ಸಾರ್ವಜನಿಕರು ಹೆದ್ದಾರಿ ಅಗಲೀಕರಣ ಹಾಗೂ ದುರಸ್ತಿ ಮಾಡುವಂತೆ ಸಂಸದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು. ಗಾಂಧಿ ವೃತ್ತದಲ್ಲಿ ವಕೀಲರು ಮಾನವ ಸರಪಳಿ ನಿರ್ಮಿಸಿ ಸಂಸದರ ವಿರುದ್ಧ ಕಿಡಿಕಾರಿದ್ರು. ಒಂದು ಗಂಟೆಗೂ ಹೆಚ್ಚು ಹೊತ್ತು ರಾಷ್ಟ್ರೀಯ ಹೆದ್ದಾರಿ 206ರನ್ನ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv