Tag: ಜಯಪ್ರಕಾಶ್ ಹೆಗ್ಡೆ

  • ಜಾತಿಗಣತಿ ಶಿಫಾರಸು: ಓಬಿಸಿ, ಮುಸ್ಲಿಂ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡುತ್ತಾ ಸರ್ಕಾರ?

    ಜಾತಿಗಣತಿ ಶಿಫಾರಸು: ಓಬಿಸಿ, ಮುಸ್ಲಿಂ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡುತ್ತಾ ಸರ್ಕಾರ?

    ಬೆಂಗಳೂರು: ಜಾತಿಗಣತಿ ವರದಿ (Caste Census Report) ಮಂಡನೆ ಬೆನ್ನಲ್ಲೇ ಮೀಸಲಾತಿ ಹೆಚ್ಚಳದ ಬಗ್ಗೆಯೂ ಚರ್ಚೆ ಜೋರಾಗಿದೆ. ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಳಕ್ಕೆ ಆಯೋಗ ಶಿಫಾರಸು ಮಾಡಿದೆ. ಹಿಂದುಳಿದ ವರ್ಗಗಳ ಮೀಸಲಾತಿ ಹೆಚ್ಚಳಕ್ಕೆ ಶಿಫಾರಸು ಮಾಡಿದರೆ, ಎಸ್‌ಸಿ-ಎಸ್‌ಟಿ ಮೀಸಲಾತಿ ಯಥಾಸ್ಥಿತಿಗೆ ವರದಿಯಲ್ಲಿ ಉಲ್ಲೇಖ ಇದೆ ಎನ್ನಲಾಗಿದೆ.

    ನಿನ್ನೆಯಷ್ಟೇ ಜಾತಿಗಣತಿ ವರದಿ ಕ್ಯಾಬಿನೆಟ್‌ನಲ್ಲಿ ಮಂಡನೆಯಾಗಿದೆ. ಆದರೆ ಯಾವ ಜಾತಿ ಎಷ್ಟು? ವರದಿಯಲ್ಲಿ ಏನಿದೆ ಅನ್ನೋದನ್ನ ಸರ್ಕಾರ ಬಿಡುಗಡೆ ಮಾಡಿಲ್ಲ. ಏಪ್ರಿಲ್ 17ರ ಕ್ಯಾಬಿನೆಟ್‌ನಲ್ಲಿ ವರದಿ ಅಂಗೀಕಾರದ ಬಳಿಕ ಅಧಿಕೃತ ದತ್ತಾಂಶ ರಿಲೀಸ್ ಆಗುವ ಸಾಧ್ಯತೆ ಇದೆ. ಇದನ್ನೂ ಓದಿ: ಭಾರತದ ಗಡಿಯಲ್ಲಿ ಗುಂಡಿನ ಚಕಮಕಿ – ಪಾಕ್ ನುಸುಳುಕೋರರನ್ನು ಹಿಮ್ಮೆಟ್ಟಿಸುವ ಪ್ರಯತ್ನದಲ್ಲಿ ಓರ್ವ ಯೋಧ ಹುತಾತ್ಮ

    ಆದರೆ ಜಯಪ್ರಕಾಶ್ ಹೆಗ್ಡೆ (Jayaprakash Hegde) ನೇತೃತ್ವದ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಕೆಲ ಶಿಫಾರಸುಗಳು ಗೊತ್ತಾಗಿವೆ. ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು 51% ಹೆಚ್ಚಳಕ್ಕೆ ಆಯೋಗ ಶಿಫಾರಸ್ಸು ಮಾಡಿದೆ. ರಾಜ್ಯದಲ್ಲಿ ಹಿಂದುಳಿದ ವರ್ಗಗಳಿಗೆ ಈಗ 32% ಹಾಗೂ ಪರಿಶಿಷ್ಟ ಜಾತಿ-ಪಂಗಡದವರಿಗೆ 24.1% ಮೀಸಲಾತಿ ಇದೆ. ಇದನ್ನೂ ಓದಿ: ಒಬಿಸಿ ಮೀಸಲಾತಿ ಪ್ರಮಾಣವನ್ನು 32% ರಿಂದ 51%ಕ್ಕೆ ಏರಿಸಿ – ಆಯೋಗದ ಶಿಫಾರಸು ಏನು? ಯಾವ ಜಾತಿಗೆ ಎಷ್ಟು ಮೀಸಲಾತಿ ಏರಿಕೆ?

    ಈಗಿರುವ ಕಾನೂನಿನಂತೆ ಒಟ್ಟು ಮೀಸಲಾತಿ 50% ಮೀರುವಂತಿಲ್ಲ. ಹಿಂದುಳಿದವರ ಮೀಸಲು ಪ್ರಮಾಣವನ್ನು ಹೆಚ್ಚಿಸುವ ಶಿಫಾರಸು ಜಾರಿಯಾಗಬೇಕಾದರೆ ಕೇಂದ್ರ ಸರ್ಕಾರವು ಸಂವಿಧಾನದ ಒಂಬತ್ತನೇ ಪರಿಚ್ಛೇದಕ್ಕೆ ತಿದ್ದುಪಡಿ ತರಬೇಕು ಎಂದು ಆಯೋಗ ಶಿಫಾರಸು ಮಾಡಿದೆ. ಇದನ್ನೂ ಓದಿ: ಧರ್ಮದ ಹೆಸರಿನಲ್ಲಿ ಅನ್ಯಾಯದ ವರ್ತನೆಯಲ್ಲಿ ತೊಡಗಬೇಡಿ: ಪ್ರತಿಭಟನಾಕಾರರಿಗೆ ಮಮತಾ ಬ್ಯಾನರ್ಜಿ ಮನವಿ

    ಜಯಪ್ರಕಾಶ್ ಹೆಗ್ಡೆ ಆಯೋಗದ ಶಿಫಾರಸಿನಂತೆ ಒಟ್ಟಾರೆ ಮೀಸಲಾತಿ ಪ್ರಮಾಣ 85% ತಲುಪಲಿದ್ದು, ಸಾಮಾನ್ಯ ವರ್ಗಕ್ಕೆ 15% ಮೀಸಲಾತಿ ದೊರಕಲಿದೆ. ಆದರೆ ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ರಾಜ್ಯ ಸರ್ಕಾರದ ತೀರ್ಮಾನ ಕುತೂಹಲ ಮೂಡಿಸಿದೆ.

    ಮೀಸಲಾತಿ ಹೆಚ್ಚಳ ಶಿಫಾರಸು
    * ಪರಿಶಿಷ್ಟ ಜಾತಿ/ಪಂಗಡಗಳ ಮೀಸಲಾತಿ ಯಥಾಸ್ಥಿತಿ.
    * ಪರಿಶಿಷ್ಟ ಜಾತಿ 17.15%, ಪರಿಶಿಷ್ಟ ಪಂಗಡಕ್ಕೆ 6.95% ಮೀಸಲಾತಿ.
    * ಹಿಂದುಳಿದ ವರ್ಗ 1ಎ ಮೀಸಲಾತಿ 6% ಹೆಚ್ಚಿಸಬೇಕು.
    * ಹಿಂದುಳಿದ ವರ್ಗ 1ಬಿ ಸೃಷ್ಟಿ, 12% ಮೀಸಲಾತಿ ಕೊಡಬೇಕು.
    * ಹಿಂದುಳಿದ ವರ್ಗ 2ಎ 10% ಮೀಸಲಾತಿ ಕೊಡಬೇಕು.
    * ಮುಸ್ಲಿಂ ಮೀಸಲಾತಿಯನ್ನು 4%ನಿಂದ 8%ಕ್ಕೆ ಏರಿಸಬೇಕು.
    * ಲಿಂಗಾಯತ, ಉಪಜಾತಿಗಳ 3ಬಿ ಮೀಸಲಾತಿ 5%ನಿಂದ 8%ಕ್ಕೆ ಏರಿಸಬೇಕು.
    * ಒಕ್ಕಲಿಗ, ಉಪಜಾತಿಗಳ 3ಎ ಮೀಸಲಾತಿ 4%ನಿಂದ 7%ಕ್ಕೆ ಏರಿಸಬೇಕು.

  • ಒಬಿಸಿ ಮೀಸಲಾತಿ ಪ್ರಮಾಣವನ್ನು 32% ರಿಂದ 51%ಕ್ಕೆ ಏರಿಸಿ – ಆಯೋಗದ ಶಿಫಾರಸು ಏನು? ಯಾವ ಜಾತಿಗೆ ಎಷ್ಟು ಮೀಸಲಾತಿ ಏರಿಕೆ?

    ಒಬಿಸಿ ಮೀಸಲಾತಿ ಪ್ರಮಾಣವನ್ನು 32% ರಿಂದ 51%ಕ್ಕೆ ಏರಿಸಿ – ಆಯೋಗದ ಶಿಫಾರಸು ಏನು? ಯಾವ ಜಾತಿಗೆ ಎಷ್ಟು ಮೀಸಲಾತಿ ಏರಿಕೆ?

    – ಮುಸ್ಲಿಂ ಮೀಸಲಾತಿಯನ್ನು4% ರಿಂದ 8% ಹೆಚ್ಚಿಸಿ
    – ಲಿಂಗಾಯತ, ಒಕ್ಕಲಿಗರಿಗೆ ಕ್ರಮವಾಗಿ 8%,7% ಮೀಸಲಾತಿ
    – ಎಸ್‌ಸಿ, ಎಸ್‌ಟಿ ಮೀಸಲಾತಿ ಯಥಾಸ್ಥಿತಿಯಲ್ಲಿ ಮುಂದುವರಿಕೆ

    ಬೆಂಗಳೂರು: ಹಿಂದುಳಿದ ಜಾತಿಗಳ (ಒಬಿಸಿ) ಮೀಸಲಾತಿ (Reservation) ಪ್ರಮಾಣವನ್ನು 32% ರಿಂದ 51% ಏರಿಕೆ ಮಾಡುವಂತೆ ಕೆ. ಜಯಪ‍್ರಕಾಶ್ ಹೆಗ್ಡೆ (Jayaprakash Hegde) ಅಧ್ಯಕ್ಷತೆಯ ಆಯೋಗ ಸರ್ಕಾರಕ್ಕೆ ಶಿಫಾರಸು ಮಾಡಿದೆ.

    ಲಿಂಗಾಯತರು, ಒಕ್ಕಲಿಗರು, ಮುಸ್ಲಿಮರು, ಹಿಂದುಳಿದ ತಳ ಸಮುದಾಯಗಳೂ ಸೇರಿಕೊಂಡಂತೆ ಇತರೇ ಹಿಂದುಳಿದ ಜಾತಿಗಳ (ಒಬಿಸಿ) ಪಟ್ಟಿಯಲ್ಲಿರುವ ವಿವಿಧ ಜಾತಿಗಳ ಮೀಸಲಾತಿಯನ್ನು ಮರುವರ್ಗೀಕರಿಸಿ ಆಯಾ ಜಾತಿಯವರ ಜನಸಂಖ್ಯೆಗೆ ಅನುಗುಣಗವಾಗಿ ಮೀಸಲಾತಿ ನೀಡಬೇಕೆಂದು ಶಿಫಾರಸಿನಲ್ಲಿ ಉಲ್ಲೇಖಿಸಿದೆ.

    ಶುಕ್ರವಾರ ಸಿಎಂ ಸಿದ್ದರಾಮಯ್ಯ (CM Siddaramaiah) ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ (Cabinet Meeting) ಹೆಚ್.ಕಾಂತರಾಜ ನೇತೃತ್ವದ ಆಯೋಗ ನಡೆಸಿದ್ದ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯನ್ನು (ಜಾತಿ ಜನಗಣತಿ) ಆಧರಿಸಿ ಹೆಗ್ಡೆ ನೇತೃತ್ವದ ಆಯೋಗವು 2024ರ ಫೆಬ್ರುವರಿಯಲ್ಲಿ ಸಲ್ಲಿಸಿದ್ದ ‘2015ರ ದತ್ತಾಂಶಗಳ ಅಧ್ಯಯನ ವರದಿ 2024’ರ ಶಿಫಾರಸು ಹಾಗೂ ಮುಖ್ಯಾಂಶಗಳನ್ನು ಮಂಡಿಸಲಾಯಿತು. ಅದರ ವಿವರಗಳು ಪಬ್ಲಿಕ್‌ ಟಿವಿಗೆ  ಲಭ್ಯವಾಗಿದೆ.

    ಶಿಫಾರಸ್ಸಿನಲ್ಲಿ ಏನಿದೆ?
    ಒಟ್ಟು ರಾಜ್ಯದಲ್ಲಿ 6.35 ಕೋಟಿ ಜನಸಂಖ್ಯೆಯಿದ್ದು ಇದರಲ್ಲಿ 5.98 ಕೋಟಿ ಜರನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ. ಸದ್ಯ ರಾಜ್ಯದಲ್ಲಿ ಹಿಂದುಳಿದ ವರ್ಗಗಳಿಗೆ 32% , ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ 24.1% ಮೀಸಲಾತಿ ಇದೆ. ಈಗ ಹಿಂದುಳಿದ ವರ್ಗಗಳ ಮೀಸಲಾತಿಯನ್ನು 51% ಏರಿಕೆ ಮಾಡಬೇಕು.

    ಮುಸ್ಲಿಂ (Muslims) ಸಮುದಾಯದವರ ಮೀಸಲಾತಿ ಪ್ರಮಾಣವನ್ನು ಈಗಿರುವ 4% ನಿಂದ 8% ಏರಿಕೆ ಮಾಡಬೇಕು. ಮುಸ್ಲಿಂ ಸಮುದಾಯದ ಜನಸಂಖ್ಯೆ 75.27 ಲಕ್ಷದಷ್ಟಿದೆ. ಪರಿಶಿಷ್ಟ ಜಾತಿ ಬಳಿಕ ಮುಸ್ಲಿಂ ಸಮುದಾಯದವರ ಸಂಖ್ಯೆ ಹೆಚ್ಚಿರುವ ಕಾರಣ ಮೀಸಲಾತಿ ಕಲ್ಪಿಸಬೇಕು.

    ‘3 ಬಿ’ ಪಟ್ಟಿಯಲ್ಲಿರುವ ಲಿಂಗಾಯತ (Lingayat) ಹಾಗೂ ಅದರ ಉಪ ಜಾತಿಗಳ ಒಟ್ಟು ಜನಸಂಖ್ಯೆ 81 ಲಕ್ಷ ಇದೆ. ಅದರಲ್ಲಿ ಲಿಂಗಾಯತರ ಸಂಖ್ಯೆ 66 ಲಕ್ಷದಷ್ಟಿದೆ. ಸದ್ಯ ಮೀಸಲಾತಿ ಪ್ರಮಾಣ 5% ರಷ್ಟಿದೆ. ಜನಸಂಖ್ಯೆಗೆ ಅನುಗುಣವಾಗಿ 8%ಕ್ಕೆ ಏರಿಸಬೇಕು.

    ‘3 ಎ’ ಪಟ್ಟಿಯಲ್ಲಿರುವ ಒಕ್ಕಲಿಗ (Vokkaliga) ಮತ್ತು ಅದರ ಉಪ ಜಾತಿಗಳ ಒಟ್ಟು ಜನಸಂಖ್ಯೆ 72 ಲಕ್ಷದಷ್ಟಿದೆ. ಒಕ್ಕಲಿಗರು 61.50 ಲಕ್ಷದಷ್ಟಿದ್ದು, ಒಟ್ಟು ಮೀಸಲಾತಿ 4%ರಷ್ಟಿದೆ, ಅದನ್ನು 7% ಹೆಚ್ಚಿಸಬೇಕು. ಇದನ್ನೂ ಓದಿ: ಜಾತಿಗಣತಿ ವರದಿ ಸೀಲ್ ಓಪನ್… ಕ್ಯಾಬಿನೆಟ್‌ನಲ್ಲಿ ಮಂಡನೆ; ಮುಂದಿನ‌ ಕ್ಯಾಬಿನೆಟ್‌ಗೆ ಕ್ಲೈಮ್ಯಾಕ್ಸ್!

    ಎಸ್‌ಸಿ, ಎಸ್‌ಟಿ (SS, ST) ಒಟ್ಟಾರೆ ಜನಸಂಖ್ಯೆ 1.60 ಕೋಟಿಗೂ ಅಧಿಕ ಇದ್ದು ಸದ್ಯ ಪರಿಶಿಷ್ಟ ಜಾತಿಗೆ 17.15%, ಪರಿಶಿಷ್ಟ ಪಂಗಡಕ್ಕೆ 6.95% ಮೀಸಲಾತಿ ಇದೆ. ಈ ಮೀಸಲಾತಿ ಯಥಾಸ್ಥಿತಿಯಲ್ಲಿ ಮುಂದುವರಿಯಬೇಕು.

    ಪ್ರವರ್ಗ 1ಕ್ಕೆ ಇದ್ದ ಮೀಸಲಾತಿಯನ್ನು 4% ರಿಂದ 6%ಕ್ಕೆ ಹೆಚ್ಚಿಸುವಂತೆ ಶಿಫಾರಸು ಮಾಡಲಾಗಿದೆ. 2 ಎಗೆ 15% ರಷ್ಟಿದ್ದ ಮೀಸಲಾತಿಯನ್ನು ‘1 ಬಿ’ ಹಾಗೂ ‘2 ಎ’ಗೆ ಮರು ಹಂಚಿಕೆ ಮಾಡಲಾಗಿದೆ. ಇದರಿಂದಾಗಿ ‘1 ಬಿ’ಗೆ 12% ಹಾಗೂ ‘2 ಎ’ಗೆ 10%ರಷ್ಟು ಹಂಚಿಕೆ ಮಾಡಲಾಗಿದೆ. ಇದರಿಂದಾಗಿ ಹಿಂದುಳಿದ ಜಾತಿಯವರಿಗೆ (2ಎ)ಇದ್ದ 15% ಮೀಸಲಾತಿ 22% ರಷ್ಟು ಏರಿಕೆಯಾಗಿದೆ.

    ಶಿಫಾರಸಿನಲ್ಲಿರುವ ಮೀಸಲಾತಿ ಪ್ರಮಾಣ ಎಷ್ಟು?
    ಆವರಣದ ಒಳಗಡೆ ಇರುವುದು ಹಾಲಿ ಮೀಸಲಾತಿ ಪ್ರಮಾಣ

    ಪ್ರವರ್ಗ 1ಎ – 35 ಲಕ್ಷ ಜನಸಂಖ್ಯೆ – 6% ಮೀಸಲಾತಿ (4%)
    ಪ್ರವರ್ಗ 1ಬಿ – 73.94 ಲಕ್ಷ ಜನಸಂಖ್ಯೆ – 12% ಮೀಸಲಾತಿ
    2ಎ – 77.78 ಲಕ್ಷ ಜನಸಂಖ್ಯೆ – 10% ಮೀಸಲಾತಿ(15%)
    2ಬಿ – 75.27 ಲಕ್ಷ ಜನಸಂಖ್ಯೆ – 8% ಮೀಸಲಾತಿ(4%)
    3ಎ – 72 ಲಕ್ಷ ಜನಸಂಖ್ಯೆ – 7% ಮೀಸಲಾತಿ (4%)
    3ಬಿ – 81 ಲಕ್ಷ ಜನಸಂಖ್ಯೆ – 8% ಮೀಸಲಾತಿ(5%)

    ಮೀಸಲಾತಿ ಸಾಧ್ಯವೇ?
    ರಾಜ್ಯದಲ್ಲಿ ಸದ್ಯ ಹಿಂದುಳಿದ ವರ್ಗಗಳಿಗೆ ಈವರೆಗೆ 32% ಹಾಗೂ ಪರಿಶಿಷ್ಟ ಜಾತಿ–ಪಂಗಡದವರಿಗೆ 24.1%ರಷ್ಟು ಮೀಸಲಾತಿ ಇದೆ. ಹಿಂದುಳಿದವರ ಮೀಸಲಾತಿಯನ್ನು 51%ಕ್ಕೆ ಏರಿಸುವಂತೆ ಆಯೋಗ ತನ್ನ ಶಿಫಾರಸಿನಲ್ಲಿ ಹೇಳಿದೆ. ಈಗಿರುವ ಕಾನೂನಿನಂತೆ ಒಟ್ಟು ಮೀಸಲಾತಿ ಪ್ರಮಾಣ 50% ಮೀರುವಂತಿಲ್ಲ. ಈ ಶಿಫಾರಸಿನ ಅನ್ವಯ ಮೀಸಲಾತಿ ಏರಿಕೆ ಮಾಡಿದರೆ 75.1% ಹೋಗುತ್ತದೆ. ಇದರೆ ಜೊತೆ ಸದ್ಯ ಆರ್ಥಿಕವಾಗಿರುವ ದುರ್ಬಲ ವರ್ಗಕ್ಕೆ 10% ಮೀಸಲಾತಿಯೂ ಇದೆ. ಎಲ್ಲವನ್ನು ಸೇರಿಸಿದಾಗ ಒಟ್ಟು ಮೀಸಲಾತಿ ಪ್ರಮಾಣ 85.1% ಏರಿಕೆಯಾಗುತ್ತದೆ. ಸಾಮಾನ್ಯ ವರ್ಗಕ್ಕೆ 14.9% ಮೀಸಲಾತಿ ಲಭ್ಯವಾಗುತ್ತದೆ. ಹಿಂದುಳಿದವರ ಮೀಸಲು ಪ್ರಮಾಣವನ್ನು ಹೆಚ್ಚಿಸಬೇಕಾದರೆ ಕೇಂದ್ರ ಸರ್ಕಾರವು ಸಂವಿಧಾನದ 9ನೇ ಪರಿಚ್ಛೇದಕ್ಕೆ ತಿದ್ದುಪಡಿ ತಂದ ಬಳಿಕ ಮೀಸಲಾತಿ ಹೆಚ್ಚಿಸಬೇಕಾಗುತ್ತದೆ.

    ಜಾತಿ ಗಣತಿ ಉದ್ದೇಶ ಏನು?
    1931ರ ಜನಗಣತಿಯ ನಂತರ ಯಾವುದೇ ಜನಗಣತಿ ದಾಖಲೆಗಳಿಂದ ಜಾತಿ / ಸಮುದಾಯವಾರು ಜನಸಂಖ್ಯೆಯ ಅಂಕಿ-ಅಂಶಗಳು ಖಚಿತವಾಗಿ ದೊರೆಯುತ್ತಿಲ್ಲ. ಜಾತಿವಾರು ಜನಗಣತಿ ಅಂಕಿ-ಅಂಶಗಳು ಲಭ್ಯವಿಲ್ಲದೇ ಇರುವುದರಿಂದ ಕಾರ್ಯಕ್ರಮಗಳ ಮುಖಾಂತರ ಸೌಲಭ್ಯಗಳನ್ನು ಸಾಮಾಜಿಕ ನ್ಯಾಯ ತತ್ವದ ಆಧಾರದ ಮೇಲೆ ಒದಗಿಸುವುದು ಸರ್ಕಾರಕ್ಕೆ ಕಷ್ಟವಾಗುತ್ತಿತ್ತು.

    ಸಮುದಾಯಗಳ ಈಗಿರುವ ಸ್ಥಿತಿಗಳಿಗೆ ಸಂಬಂಧಿಸಿದಂತೆ ವೈಜ್ಞಾನಿಕವಾದ ವಿಶ್ಲೇಷಣೆ ನಡೆಸುವುದು, ಜನಸಂಖ್ಯೆಯ ಪ್ರಮಾಣವನ್ನು ತಿಳಿಯುವುದು ಅಗತ್ಯವಾಗಿದೆ ಎಂಬ ಉದ್ದೇಶಕ್ಕಾಗಿ ಆಗಿನ ಸಿದ್ದರಾಮಯ್ಯ ಸರ್ಕಾರ ಸಮೀಕ್ಷೆಗೆ ಆದೇಶಿಸಿತ್ತು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ಜಾತಿಗಳು ಹಾಗೂ ಇತರ ಜಾತಿಗಳನ್ನೊಳಗೊಂಡಂತೆ ರಾಜ್ಯದ ಪ್ರತಿಯೊಂದು ಕುಟುಂಬದ ಸಮಗ್ರ ಸಮೀಕ್ಷೆಯನ್ನು ಕೈಗೊಂಡು ವಿವಿಧ ಜಾತಿಗಳ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗತಿಗಳ ಬಗ್ಗೆ ವಿಶ್ಲೇಷಣೆ ಮಾಡಿ, ಹಿಂದುಳಿದ ವರ್ಗಗಳ ಪಟ್ಟಿಯನ್ನು ಪರಿಷ್ಕರಿಸುವ ಕುರಿತು ಸರ್ಕಾರಕ್ಕೆ ಶಿಫಾರಸ್ಸು ಮಾಡುವ ಜವಾಬ್ದಾರಿಯನ್ನು ಆಯೋಗಕ್ಕೆ ‌ನೀಡಲಾಗಿತ್ತು. ರಾಜ್ಯದ ಎಲ್ಲ ವರ್ಗಗಳ / ಜಾತಿಗಳ ಸಾಮಾಜಿಕ, ಶೈಕ್ಷಣಿಕ ಮತ್ತು ಔದ್ಯೋಗಿಕ ಸ್ಥಿತಿಗತಿಗಳ ಕುರಿತು ಸಮೀಕ್ಷೆ ಮುಖಾಂತರ ಸಮಗ್ರ ಅಂಕಿ-ಅಂಶಗಳನ್ನು ಸಂಗ್ರಹಣೆಗೆ ಸೂಚಿಸಲಾಗಿತ್ತು.

     

    ರಾಜ್ಯದ ಎಲ್ಲ ಕುಟುಂಬಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಯನ್ನು ಅರಿಯಲು 158.47 ಕೋಟಿ ರೂ. ವೆಚ್ಚದಲ್ಲಿ ಹೆಚ್‌. ಕಾಂತರಾಜ (Kantharaju) ನೇತೃತ್ವದ ಹಿಂದುಳಿದ ವರ್ಗಗಳ ಆಯೋಗವು 2015ರಲ್ಲಿ ಸಮೀಕ್ಷೆ (Socio-Economic Survey) ನಡೆಸಿತ್ತು. ಈ ಆಯೋಗದ ಅವಧಿ ಮುಕ್ತಾಯದ ಸಂದರ್ಭದಲ್ಲಿ ವರದಿಯನ್ನು ಅಧಿಕೃತವಾಗಿ ಸರ್ಕಾರಕ್ಕೆ ಸಲ್ಲಿಸಿರಲಿಲ್ಲ. ಕಳೆದ ವರ್ಷ ಕೆ. ಜಯಪ್ರಕಾಶ್‌ ಹೆಗ್ಡೆ (Jayaprakash Hegde) ಅಧ್ಯಕ್ಷತೆಯ ಈಗಿನ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ವಿವಿಧ ವಿಷಯಕ್ಕೆ ಸಂಬಂಧಿಸಿದ ಟಿಪ್ಪಣಿಗಳೊಂದಿಗೆ 2015ರ ಸಮೀಕ್ಷಾ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಲ್ಲಿಸಿತ್ತು.

    ಕಳೆದ ವರ್ಷದ ಫೆಬ್ರವರಿ 14ರಂದು ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಜಾತಿ ಗಣತಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಿದ್ದರು. ಒಂದು ವರ್ಷದಿಂದಲೂ ವರದಿಯನ್ನು ಮುಟ್ಟದೇ ರಾಜ್ಯ ಸರ್ಕಾರ ಸುಮ್ಮನಿತ್ತು. ಕಳೆದ ವರ್ಷ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕ್ಯಾಬಿನೆಟ್‌ಗೆ ವರದಿ ತರಲು ಹಿಂದೇಟು ಹಾಕಿತ್ತು. ಆದರೆ ಈಗ ಕ್ಯಾಬಿನೆಟ್ ಮುಂದೆ ವರದಿಯನ್ನು ಮಂಡಿಸಿದೆ.

  • ಆರು ತಿಂಗಳಲ್ಲಿ ಹಿಂದಿ ಮಾತನಾಡಲು ಕಲಿಯುತ್ತೇನೆ: ಕೋಟಾ

    ಆರು ತಿಂಗಳಲ್ಲಿ ಹಿಂದಿ ಮಾತನಾಡಲು ಕಲಿಯುತ್ತೇನೆ: ಕೋಟಾ

    – ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಕೋಟಾಗೆ ಗೆಲುವು

    ಉಡುಪಿ: ಇನ್ನು ಆರು ತಿಂಗಳಲ್ಲಿ ಹಿಂದಿ ಮಾತನಾಡಲು ಕಲಿಯುತ್ತೇನೆ ಎಂದು ಕೋಟಾ ಶ್ರೀನಿವಾಸ ಪೂಜಾರಿ (Kota Srinivas Poojary) ಹೇಳಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನಾನು ಸಾಮಾನ್ಯ ಮನುಷ್ಯ ಹಿಂದಿ ಗೊತ್ತಿಲ್ಲ ಎಂದಿದ್ದೆ. ಲೆಕ್ಕ ಇಟ್ಟುಕೊಳ್ಳಿ ಆರು ತಿಂಗಳು ಅವಧಿ ಇದೆ. ಹಿಂದಿ ಮಾತನಾಡೋದನ್ನು ಕಲಿಯಲು ಇವತ್ತಿನಿಂದಲೇ ಶುರು ಮಾಡುತ್ತೇನೆ ಎಂದರು.

    ಬಿಜೆಪಿ ನನ್ನಂಥ ಸಾಮಾನ್ಯ ಕಾರ್ಯಕರ್ತನಿಗೆ ಅವಕಾಶ ಕೊಟ್ಟದ್ದೇ ಆಶ್ಚರ್ಯ. ಎರಡು ಜಿಲ್ಲೆಯ ನಾಯಕರ ಅವಿಶ್ರಾಂತ ದುಡಿಮೆ ಈ ಗೆಲುವಿಗೆ ಕಾರಣ. ಇದು ಕಾರ್ಯಕರ್ತರ ಗೆಲುವು ಎಂದು ಭಾವಿಸಿದ್ದೇನೆ. ಪಕ್ಷ ಮತ್ತು ಎನ್‍ಡಿಎ ಒಕ್ಕೂಟಕ್ಕೆ ಗೆಲುವನ್ನು ಸಮರ್ಪಿಸುತ್ತೇನೆ ಎಂದು ಹೇಳಿದರು.

    ಪಂಚಾಯತ್ ನಿಂದ ಪಾರ್ಲಿಮೆಂಟ್‍ವರೆಗೆ ಎಂಬ ಘೋಷಣೆ ಇಂದು ಸಾಬೀತಾಯಿತು. ನಾವು 1 ಲಕ್ಷ ಸುಮಾರು ಅಂತರದ ಗೆಲುವು ಪಡೆಯಬಹುದು ಎಂದು ನಿರೀಕ್ಷಿಸಲಾಗಿತ್ತು. ಕಾರ್ಯಕರ್ತರು ನಾಯಕರ ಪರಿಶ್ರಮ ನನ್ನ ಮೇಲಿನ ಪ್ರೀತಿ ಈ ಸಂಖ್ಯೆಗೆ ಕಾರಣ. ನರೇಂದ್ರ ಮೋದಿ ಅವರಿಂದ ಭಾರತಕ್ಕೆ ಗೌರವ ಎಂಬುದು ಸತ್ಯ. ರಾಷ್ಟ್ರೀಯ ಭದ್ರತೆ, ರಾಮಮಂದಿರ -370, ಇಂತಹ ಬಹುದೊಡ್ಡ ಸವಾಲುಗಳಿಂದ ನಾವು ಗೆದ್ದಿದ್ದೇವೆ ಎಂದು ತಿಳಿಸಿದರು.

    ಬಡವರ ಮನೆಗೆ ಒಂದು ಲಕ್ಷ ಎಂದು ಇಂಡಿಯಾ ಕೂಟ ಹೇಳಿತ್ತು. ಎನ್ ಡಿ ಎ ಕೇಂದ್ರದಲ್ಲಿ ಅಧಿಕಾರ ಮಾಡುವುದರಲ್ಲಿ ಸಂಶಯ ಇಲ್ಲ. ನಾನು ಸಾಮಾನ್ಯ ಮನುಷ್ಯ ಹಿಂದಿ ಗೊತ್ತಿಲ್ಲ ಎಂದಿದ್ದೆ. ಲೆಕ್ಕ ಇಟ್ಟುಕೊಳ್ಳಿ ಇನ್ನು ಮುಂದೆ ಆರು ತಿಂಗಳು ಅವಧಿ ಇದೆ ಎಂದು ನುಡಿದರು.

    ಲೋಕಸಭಾ ಚುನಾವಣಾ ಫಲಿತಾಂಶದಲ್ಲಿ ಈ ಬಾರಿ ಹೊಸ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ಅವರನ್ನು ಕಣಕ್ಕಿಳಿಸಿದ್ದರು. ಇದೀ ಕೋಟಾ ಅವರು ಕಾಂಗ್ರೆಸ್‍ನ ಜಯಪ್ರಕಾಶ್ ಹೆಗ್ಡೆ ವಿರುದ್ಧ ಎರಡೂವರೆ ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ತನ್ನದಾಗಿಸಿಕೊಂಡಿದ್ದಾರೆ.

    ಇವಿಎಂ ಮತ್ತು ಅಂಚೆ ಮತಗಳ ಲೆಕ್ಕಚಾರ: ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿಗೆ 731408 ಮತಗಳು ಬಿದ್ದರೆ, ಕಾಂಗ್ರೆಸ್‌ನ ಜಯಪ್ರಕಾಶ್ ಹೆಗ್ಡೆಯವರಿಗೆ 4,72,505 ಮತಗಳು ಬಿದ್ದಿವೆ. ಈ ಮೂಲಕ 2,58,903 ಮತಗಳ ಅಂತರದಿಂದ ಕೋಟಾ ಅವರಿಗೆ ಪಾರ್ಲಿಮೆಂಟ್‌ ಪ್ರವೇಶ ಮಾಡುವ ಅವಕಾಶ ದಕ್ಕಿದೆ.

  • ದೈವಕೋಲದ ವೇಳೆ ಸಾರ್ವಜನಿಕ ಸಭೆ – ಜಯಪ್ರಕಾಶ್ ಹೆಗ್ಡೆ ವಿರುದ್ಧ ಕೇಸ್

    ದೈವಕೋಲದ ವೇಳೆ ಸಾರ್ವಜನಿಕ ಸಭೆ – ಜಯಪ್ರಕಾಶ್ ಹೆಗ್ಡೆ ವಿರುದ್ಧ ಕೇಸ್

    ಉಡುಪಿ: ದೈವಕೋಲದ ವೇಳೆ ಸಭೆ ನಡೆಸಿದ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ (Udupi Chikmagalur Lok Sabha constituency) ಕಾಂಗ್ರೆಸ್ (Congress) ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ (Jayaprakash Hegde) ವಿರುದ್ಧ ಕೇಸ್ ದಾಖಲಾಗಿದೆ.

    ಜಾರಾಂದಾಯ ದೈವಸ್ಥಾನದ ಜಾತ್ರೆಗೆ ತೆರಳಿದ್ದ ಜಯಪ್ರಕಾಶ್ ಹೆಗ್ಡೆ, ಸಾರ್ವಜನಿಕರೊಂದಿಗೆ ಚುನಾವಣಾ ಸಭೆ ನಡೆಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಕಾಪು ಫ್ಲೈಯಿಂಗ್ ಸ್ಕಾಡ್‍ಗೆ ಮಾಹಿತಿ ಬಂದಿತ್ತು. ಧಾರ್ಮಿಕ ಸ್ಥಳದಲ್ಲಿ ಚುನಾವಣಾ ಕಾರ್ಯಕ್ರಮ ನಡೆಸಿ ಸಾರ್ವಜನಿಕರ ಮೇಲೆ ಪ್ರಭಾವ ಬೀರಿದ್ದಾರೆ ಎಂದು ಅಧಿಕಾರಿಗಳು ಆರೋಪಿಸಿದ್ದಾರೆ. ಇದನ್ನೂ ಓದಿ: ದೋಸ್ತಿಗಳ ಮೊದಲ ಸಮ್ಮಿಲನ ಸಭೆ – ದೇಶದಲ್ಲಿ ಮೋದಿಯಂತ ನಾಯಕರು ಮತ್ತೊಬ್ಬರಿಲ್ಲ ಎಂದ ಹೆಚ್‌ಡಿಡಿ

    ಈ ಸಂಬಂಧ ಶಿರ್ವ ಪೊಲೀಸ್ ಠಾಣೆಯಲ್ಲಿ ನೀತಿ ಸಂಹಿತೆ (Model code of conduct) ಉಲ್ಲಂಘನೆ ಪ್ರಕರಣ ದಾಖಲಾಗಿದೆ.

    ಬಿಜೆಪಿ ಭದ್ರಕೋಟೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಲೋಕಸಭಾ ಚುನಾವಣೆ ರಂಗೇರಿದೆ. 2002ರಲ್ಲಿ ಡಿಲಿಮಿಟೇಶನ್ ಕಮಿಷನ್ ಆಫ್ ಇಂಡಿಯಾದ ಶಿಫಾರಸಿನ ಆಧಾರದ ಮೇಲೆ 2008 ರಲ್ಲಿ ಈ ಕ್ಷೇತ್ರ ರಚನೆಯಾಯಿತು. 2009ರಲ್ಲಿ ಕ್ಷೇತ್ರದಲ್ಲಿ ಮೊದಲ ಚುನಾವಣೆ ನಡೆಯಿತು. ಅದರ ಮೊದಲ ಸದಸ್ಯರಾಗಿ ಬಿಜೆಪಿಯ ಡಿ.ವಿ.ಸದಾನಂದ ಗೌಡ ಆಯ್ಕೆಯಾಗಿ ಸಂಸತ್ ಪ್ರವೇಶಿಸಿದರು. ಬಳಿಕ 2014 ಮತ್ತು 2019ರಲ್ಲಿ ಅಖಾಡಕ್ಕಿಳಿದಿದ್ದ ಶೋಭಾ ಕರಂದ್ಲಾಜೆ ಮೋದಿ ಹೆಸರಲ್ಲಿ ಪ್ರಚಂಡ ಬಹುಮತದಿಂದ ಗೆದ್ದು ಬೀಗಿದ್ದರು.

    ಈ ಬಾರಿ ಬಿಜೆಪಿಯಿಂದ ಕೋಟಾ ಶ್ರೀನಿವಾಸ್ ಪೂಜಾರಿ (Kota Srinivas Poojary) ಕಣಕ್ಕಿಳಿದಿದ್ದು, ಕಾಂಗ್ರೆಸ್‍ನಿಂದ ಜಯಪ್ರಕಾಶ್ ಹೆಗ್ಡೆಯವರಿಗೆ ಟಿಕೆಟ್ ನೀಡಲಾಗಿದೆ. ಇದನ್ನೂ ಓದಿ: ಪಕ್ಷ ಸೇರುವಂತೆ ಬಿವೈವಿ ಆಹ್ವಾನ – ಬೆಂಬಲಿಗರ ಜೊತೆ ಚರ್ಚಿಸಿ ನಿರ್ಧಾರ ಎಂದ ಸುಮಲತಾ

  • ಕಾಂಗ್ರೆಸ್ ಸೇರಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಸ್ಪರ್ಧಿಸ್ತಾರಾ ಜಯಪ್ರಕಾಶ್ ಹೆಗ್ಡೆ?

    ಕಾಂಗ್ರೆಸ್ ಸೇರಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಸ್ಪರ್ಧಿಸ್ತಾರಾ ಜಯಪ್ರಕಾಶ್ ಹೆಗ್ಡೆ?

    ಉಡುಪಿ\ಚಿಕ್ಕಮಗಳೂರು: ದಿನದಿಂದ ದಿನಕ್ಕೆ ಲೋಕಸಭಾ ಚುನಾವಣೆ ಕಣ ರಂಗೇರುತ್ತಿದೆ. ಮೋದಿ 3.0ಗೆ ಬಿಜೆಪಿ ತುದಿಗಾಲಲ್ಲಿದ್ರೆ ಕಾಂಗ್ರೆಸ್ ಕೂಡ ಸರ್ಕಾರ ರಚನೆಗೆ ಕಸರತ್ತು ನಡೆಸ್ತಿದೆ. ಈ ಮಧ್ಯೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಗೋಬ್ಯಾಕ್ ಶೋಭಕ್ಕ ಅಭಿಯಾನದ ಮಧ್ಯೆಯೂ ಶೋಭಕ್ಕ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಆದರೆ ಆಕಾಂಕ್ಷಿಗಳಿದ್ದರೂ ಕಾಂಗ್ರೆಸ್ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆಗೆ ಮಣೆ ಹಾಕೋದು ನಿಚ್ಚಳವಾಗಿದೆ.

    2012ರ ಉಪಚುನಾವಣೆಯಲ್ಲಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಗೆದ್ದಿದ್ದ ಜಯಪ್ರಕಾಶ್ ಹೆಗ್ಡೆ ಬಿಜೆಪಿ ಸೇರಿ, ಪ್ರಸ್ತುತ ಬಿಜೆಪಿಯಲ್ಲಿದ್ದಾರೆ. ಬಿಜೆಪಿ ಸರ್ಕಾರ ಅವರನ್ನ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರನ್ನಾಗಿಸಿತ್ತು. ಬದಲಾದ ಸರ್ಕಾರದಲ್ಲಿ ಸಿಎಂ ಸಿದ್ದು ಆಪ್ತರೂ ಆಗಿದ್ದ ಹೆಗ್ಡೆಯನ್ನ ಸಿದ್ದರಾಮಯ್ಯ ಅಧ್ಯಕ್ಷರಾಗಿ ಮುಂದುವರಿಸಿದ್ರು. ಇದೀಗ ಲೋಕಸಭಾ ಚುನಾವಣೆ ಹೊತ್ತಿನಲ್ಲಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಶೋಭಾ ಕರಂದ್ಲಾಜೆಯನ್ನ ಎದುರಿಸಲು ಜಯಪ್ರಕಾಶ್ ಹೆಗ್ಡೆಯೇ ಸೂಕ್ತ ಅಭ್ಯರ್ಥಿ ಎಂದು ಕಾಂಗ್ರೆಸ್ ಹೆಗ್ಡೆಗೆ ಗಾಳ ಹಾಕಿದೆ.

    ಸರ್ಕಾರಕ್ಕೆ ಜಾತಿ ಜನ ಗಣತಿ ವರದಿ (Caste Cencus Report) ಸಲ್ಲಿಸಿರುವ ಜಯಪ್ರಕಾಶ್ ಹೆಗ್ಡೆ (Jayaprakash Hegde) ಸದ್ಯದಲ್ಲೇ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಅಭ್ಯರ್ಥಿಯಾಗಲಿದ್ದಾರೆ ಎಂದು ಕಾಂಗ್ರೆಸ್ ವಲಯವೇ ಗುಸು-ಗುಸು ಅಂತಿದೆ. ಹೆಗ್ಡೆ ಮಾರ್ಚ್ 3ರಂದು ಚಿಕ್ಕಮಗಳೂರಿನಲ್ಲಿ ನಡೆಯಲಿರುವ ಗ್ಯಾರಂಟಿ ಸಮಾವೇಶದಲ್ಲಿ ಸಿದ್ದರಾಮಯ್ಯ-ಡಿಕೆಶಿ ನೇತೃತ್ವದಲ್ಲಿ ಕಾಂಗ್ರೆಸ್ ಸೇರಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಇದನ್ನೂ ಓದಿ: ಬಿಜೆಪಿಗೆ ಶಾಕ್- ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಪುತ್ತಿಲ ಕಣಕ್ಕೆ

    ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿ ಬಿಜೆಪಿ ಸೇರಿದ್ದ ಜೆಪಿಗೆ, ಬಿಜೆಪಿ ಟಿಕೆಟ್ ನೀಡಿಲ್ಲ. ಎರಡನೇ ಬಾರಿ ಶೋಭಾ ಕರಂದ್ಲಾಜೆಗೆ ಟಿಕೆಟ್ ನೀಡಿತ್ತು. ಇದೀಗ 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನೀಡದಿದ್ದರೆ ಮತ್ತೆ ಕಾಂಗ್ರೆಸ್ಸಿಗೆ ಸೇರುವ ಎಲ್ಲಾ ಸಾಧ್ಯತೆಗಳು ಕಂಡುಬರುತ್ತಿದೆ. ಬೇಗ ನಿರ್ಧಾರ ತೆಗೆದುಕೊಳ್ಳಿ ಎನ್ನುತ್ತಿದೆ ಉಡುಪಿ ಜಿಲ್ಲಾ ಕಾಂಗ್ರೆಸ್.

    ಒಟ್ಟಿನಲ್ಲಿ ಉಡುಪಿ-ಚಿಕ್ಕಮಗಳೂರು ಎರಡು ಜಿಲ್ಲೆಗಳು ಹಿಂದುತ್ವದ ಜಿಲ್ಲೆಗಳು. ವಿಧಾನಸಭಾ ಚುನಾವಣೆಯಲ್ಲಿ ಉಡುಪಿಯಲ್ಲಿ ಐದಕ್ಕೆ ಐದು ಬಿಜೆಪಿ ಗೆದ್ದಿದ್ರೆ, ಚಿಕ್ಕಮಗಳೂರಲ್ಲಿ ಐದಕ್ಕೆ ಐದು ಕಾಂಗ್ರೆಸ್ ಸೇರಿದೆ. ಬಿಜೆಪಿಯ ಶೋಭಾ ಕರಂದ್ಲಾಜೆಗೆ ಬಿಜೆಪಿಗರೇ ಮಾಡ್ತಿರೋ ಗೋ ಬ್ಯಾಕ್ ಶೋಭಕ್ಕ ಅಭಿಯಾನವನ್ನ ಕಾಂಗ್ರೆಸ್ಸಿಗೆ ಪ್ಲಸ್ ಮಾಡಿಕೊಳ್ಳೋ ಉತ್ಸುಕದಲ್ಲಿದ್ದಾರೆ.

  • ಎಲೆಕ್ಷನ್ ಹೊತ್ತಲ್ಲಿ ಜಾತಿಗಣತಿ ಜ್ವಾಲೆಯಲ್ಲಿ ಸರ್ಕಾರ –  ವರದಿಯಲ್ಲಿ ಏನಿದೆ? ಮುಂದೇನು?

    ಎಲೆಕ್ಷನ್ ಹೊತ್ತಲ್ಲಿ ಜಾತಿಗಣತಿ ಜ್ವಾಲೆಯಲ್ಲಿ ಸರ್ಕಾರ – ವರದಿಯಲ್ಲಿ ಏನಿದೆ? ಮುಂದೇನು?

    – 5.98 ಕೋಟಿ ಜನರ ಸಮೀಕ್ಷೆ, 32 ಲಕ್ಷ ಹೊರಕ್ಕೆ

    ಬೆಂಗಳೂರು: ಲೋಕಸಭೆ ಚುನಾವಣೆ (Lok Sabh Election) ಹೊಸ್ತಿಲಲ್ಲಿ ರಾಜ್ಯದಲ್ಲಿ ಜಾತಿಯ ಜ್ವಾಲೆ ಹೆಚ್ಚಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಒಕ್ಕಲಿಗ, ವೀರಶೈವ ಲಿಂಗಾಯತರ ತೀವ್ರ ವಿರೋಧದ ನಡುವೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಜಾತಿ ಜನಗಣತಿ (Caste Census) ವರದಿಯನ್ನು ಸ್ವೀಕರಿಸಿದ್ದಾರೆ.

    ಬಹು ವಿವಾದಿತ, ಬಹು ಚರ್ಚಿತ ಸಾಮಾಜಿಕ, ಶೈಕ್ಷಣಿಕ ಸಮೀಕ್ಷಾ (Socio-Economic Survey) 2015ರ ದತ್ತಾಂಶಗಳ ಅಧ್ಯಯನ ವರದಿ-2024 ಅನ್ನು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆಯವರು (Jayaprakash Hegde) ಸಿಎಂಗೆ ಸಲ್ಲಿಸಿದ್ದಾರೆ. ವರದಿ ಪ್ರಕಾರ ರಾಜ್ಯದಲ್ಲಿ ದಲಿತರೇ ಹೆಚ್ಚು ಎನ್ನಲಾಗುತ್ತಿದೆ.

    ವರದಿಯಲ್ಲಿ ಏನಿದೆ?
    ಪಬ್ಲಿಕ್‌ ಟಿವಿಗೆ (PUBLiC TV) ಸಿಕ್ಕಿರುವ ದತ್ತಾಂಶಗಳ ಪ್ರಕಾರ ವರದಿ ಒಟ್ಟು 200 ಪುಟ, 48 ಸಂಪುಟವನ್ನು ಹೊಂದಿದೆ. ಒಟ್ಟು 5.98 ಕೋಟಿ ಜನ ಸಮೀಕ್ಷೆಯಲ್ಲಿ ಭಾಗಿಯಾಗಿದ್ದರೆ 32 ಲಕ್ಷ ಮಂದಿ ಭಾಗಿಯಾಗಿಲ್ಲ. ಇದನ್ನೂ ಓದಿ: ಗೃಹಲಕ್ಷ್ಮಿ ಹಣ 2,000 ಅಲ್ಲ, 4 ಸಾವಿರ ರೂ. ಕೊಡಬಹುದು: ಡಿ.ಕೆ ಸುರೇಶ್ ಹೀಗಂದಿದ್ದೇಕೆ?

    ಒಟ್ಟು 5.98 ಕೋಟಿ ಜನರ ಪೈಕಿ ಅಹಿಂದ (AHINDA) ವರ್ಗದ ಸಂಖ್ಯೆಯೇ 3.96 ಕೋಟಿ ಇದೆ ಎನ್ನಲಾಗುತ್ತಿದೆ. ಒಕ್ಕಲಿಗ, ಲಿಂಗಾಯಿತ, ಬ್ರಾಹ್ಮಣ, ಇತರರ ಸಂಖ್ಯೆ 1.87 ಕೋಟಿ ಇದ್ದು ಒಟ್ಟು 816 ಇತರೆ ಹಿಂದುಳಿದ ಜಾತಿಗಳೆಂದು ಗುರುತಿಸಲಾಗಿದೆ.

    ಒಟ್ಟು 1,351 ಜಾತಿಗಳನ್ನು ಸಮೀಕ್ಷೆಯಡಿ ಪರಿಗಣನೆ ಮಾಡಲಾಗಿದ್ದು, ಹೊಸದಾಗಿ 192 ಜಾತಿಗಳನ್ನು ದಾಖಲಿಸಲಾಗಿದೆ. ಸುಮಾರು 30 ಜಾತಿಗಳು ಅತ್ಯಂತ ಹಿಂದುಳಿದ ಜಾತಿ ವರ್ಗದಡಿ ಸೇರ್ಪಡೆ ಮಾಡಲಾಗಿದೆ.

    ವರದಿ ಸ್ವೀಕಾರ ಮುಂದೇನು?
    ಲೋಕಸಭೆ ಚುನಾವಣೆ ಬಳಿಕವಷ್ಟೇ ಜಾತಿಗಣತಿ ವರದಿ ಬಹಿರಂಗವಾಗುವ ಸಾಧ್ಯತೆಯಿದೆ. ಜಾತಿ ಗಣತಿ ವರದಿ ಅಧ್ಯಯನಕ್ಕೆ ಸಂಪುಟ ಉಪಸಮಿತಿ ರಚನೆಯಾಗಲಿದೆ. ಸಂಪುಟ ಸಭೆಯಲ್ಲಿ ಚರ್ಚಿಸಿದ ಬಳಿಕ ಸಂಪುಟ ಉಪಸಮಿತಿ ರಚನೆಯಾಗಲಿದ್ದು ವರದಿ ಅಧ್ಯಯನಕ್ಕೆ ಉಪಸಮಿತಿಗೆ 3-5 ತಿಂಗಳ ಕಾಲಾವಕಾಶ ನೀಡುವ ಸಾಧ್ಯತೆಯಿದೆ. ಇದನ್ನೂ ಓದಿ: ಯಾವನಾದ್ರೂ ಪಾಕ್‍ನಲ್ಲಿ ಹಿಂದೂಸ್ಥಾನ್ ಜಿಂದಾಬಾದ್ ಅಂದಿದ್ರೆ ಅಲ್ಲೇ ಶೂಟ್ ಮಾಡಿ ಹಾಕ್ತಿದ್ರು: ಬಿ.ವೈ ವಿಜಯೇಂದ್ರ

  • ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ವರದಿ ಸರ್ಕಾರಕ್ಕೆ ಅಧಿಕೃತ ಸಲ್ಲಿಕೆ

    ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ವರದಿ ಸರ್ಕಾರಕ್ಕೆ ಅಧಿಕೃತ ಸಲ್ಲಿಕೆ

    ಬೆಂಗಳೂರು: ರಾಜ್ಯ ಹಿಂದುಳಿದ ವರ್ಗಗಳ ಆಯೋಗವು 2015ರಲ್ಲಿ ನಡೆಸಿದ್ದ ‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ’ (ಜಾತಿವಾರು ಜನಗಣತಿ) ವರದಿ ರಾಜ್ಯ ಸರ್ಕಾರಕ್ಕೆ ಅಧಿಕೃತವಾಗಿ ಸಲ್ಲಿಕೆಯಾಗಿದೆ.

    ರಾಜ್ಯದ ಎಲ್ಲ ಕುಟುಂಬಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಯನ್ನು ಅರಿಯಲು 158.47 ಕೋಟಿ ರೂ. ವೆಚ್ಚದಲ್ಲಿ ಹೆಚ್‌. ಕಾಂತರಾಜ (Kantharaju) ನೇತೃತ್ವದ ಹಿಂದುಳಿದ ವರ್ಗಗಳ ಆಯೋಗವು 2015ರಲ್ಲಿ ಸಮೀಕ್ಷೆ (Socio-Economic Survey) ನಡೆಸಿತ್ತು. ಈ ಆಯೋಗದ ಅವಧಿ ಮುಕ್ತಾಯದ ಸಂದರ್ಭದಲ್ಲಿ ವರದಿಯನ್ನು ಅಧಿಕೃತವಾಗಿ ಸರ್ಕಾರಕ್ಕೆ ಸಲ್ಲಿಸಿರಲಿಲ್ಲ.

    ಕೆ. ಜಯಪ್ರಕಾಶ್‌ ಹೆಗ್ಡೆ (Jayaprakash Hegde) ಅಧ್ಯಕ್ಷತೆಯ ಈಗಿನ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ವಿವಿಧ ವಿಷಯಕ್ಕೆ ಸಂಬಂಧಿಸಿದ ಟಿಪ್ಪಣಿಗಳೊಂದಿಗೆ 2015ರ ಸಮೀಕ್ಷಾ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ (CM Siddaramaiah) ಸಲ್ಲಿಸಿದೆ.  ಇದನ್ನೂ ಓದಿ: BBMP Budget 2024: ಆಟದ ಮೈದಾನದ ಕೆಳಗೆ ಬರಲಿದೆ ಅಂಡರ್‌ಗ್ರೌಂಡ್‌ ಪಾರ್ಕಿಂಗ್!‌

     

    ಜಾತಿ ಗಣತಿ ಉದ್ದೇಶ ಏನು?
    1931ರ ಜನಗಣತಿಯ ನಂತರ ಯಾವುದೇ ಜನಗಣತಿ ದಾಖಲೆಗಳಿಂದ ಜಾತಿ / ಸಮುದಾಯವಾರು ಜನಸಂಖ್ಯೆಯ ಅಂಕಿ-ಅಂಶಗಳು ಖಚಿತವಾಗಿ ದೊರೆಯುತ್ತಿಲ್ಲ. ಜಾತಿವಾರು ಜನಗಣತಿ ಅಂಕಿ-ಅಂಶಗಳು ಲಭ್ಯವಿಲ್ಲದೇ ಇರುವುದರಿಂದ ಕಾರ್ಯಕ್ರಮಗಳ ಮುಖಾಂತರ ಸೌಲಭ್ಯಗಳನ್ನು ಸಾಮಾಜಿಕ ನ್ಯಾಯ ತತ್ವದ ಆಧಾರದ ಮೇಲೆ ಒದಗಿಸುವುದು ಸರ್ಕಾರಕ್ಕೆ ಕಷ್ಟವಾಗುತ್ತಿತ್ತು.

    ಸಮುದಾಯಗಳ ಈಗಿರುವ ಸ್ಥಿತಿಗಳಿಗೆ ಸಂಬಂಧಿಸಿದಂತೆ ವೈಜ್ಞಾನಿಕವಾದ ವಿಶ್ಲೇಷಣೆ ನಡೆಸುವುದು, ಜನಸಂಖ್ಯೆಯ ಪ್ರಮಾಣವನ್ನು ತಿಳಿಯುವುದು ಅಗತ್ಯವಾಗಿದೆ ಎಂಬ ಉದ್ದೇಶಕ್ಕಾಗಿ ಆಗಿನ ಸಿದ್ದರಾಮಯ್ಯ ಸರ್ಕಾರ ಸಮೀಕ್ಷೆಗೆ ಆದೇಶಿಸಿತ್ತು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ಜಾತಿಗಳು ಹಾಗೂ ಇತರ ಜಾತಿಗಳನ್ನೊಳಗೊಂಡಂತೆ ರಾಜ್ಯದ ಪ್ರತಿಯೊಂದು ಕುಟುಂಬದ ಸಮಗ್ರ ಸಮೀಕ್ಷೆಯನ್ನು ಕೈಗೊಂಡು ವಿವಿಧ ಜಾತಿಗಳ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗತಿಗಳ ಬಗ್ಗೆ ವಿಶ್ಲೇಷಣೆ ಮಾಡಿ, ಹಿಂದುಳಿದ ವರ್ಗಗಳ ಪಟ್ಟಿಯನ್ನು ಪರಿಷ್ಕರಿಸುವ ಕುರಿತು ಸರ್ಕಾರಕ್ಕೆ ಶಿಫಾರಸ್ಸು ಮಾಡುವ ಜವಾಬ್ದಾರಿಯನ್ನು ಆಯೋಗಕ್ಕೆ ‌ನೀಡಲಾಗಿತ್ತು. ರಾಜ್ಯದ ಎಲ್ಲ ವರ್ಗಗಳ / ಜಾತಿಗಳ ಸಾಮಾಜಿಕ, ಶೈಕ್ಷಣಿಕ ಮತ್ತು ಔದ್ಯೋಗಿಕ ಸ್ಥಿತಿಗತಿಗಳ ಕುರಿತು ಸಮೀಕ್ಷೆ ಮುಖಾಂತರ ಸಮಗ್ರ ಅಂಕಿ-ಅಂಶಗಳನ್ನು ಸಂಗ್ರಹಣೆಗೆ ಸೂಚಿಸಲಾಗಿತ್ತು.

  • ತಿಂಗಳ ಅಂತ್ಯದಲ್ಲಿ ಜಾತಿ ಜನಗಣತಿ ವರದಿ ಸರ್ಕಾರಕ್ಕೆ ಕೊಡುತ್ತೇವೆ: ಜಯಪ್ರಕಾಶ್ ಹೆಗ್ಡೆ

    ತಿಂಗಳ ಅಂತ್ಯದಲ್ಲಿ ಜಾತಿ ಜನಗಣತಿ ವರದಿ ಸರ್ಕಾರಕ್ಕೆ ಕೊಡುತ್ತೇವೆ: ಜಯಪ್ರಕಾಶ್ ಹೆಗ್ಡೆ

    ಬೆಂಗಳೂರು: ಈ ತಿಂಗಳ ಅಂತ್ಯದೊಳಗೆ ಜಾತಿ ಜನಗಣತಿ (caste Census) ವರದಿ ಸರ್ಕಾರಕ್ಕೆ ಸಲ್ಲಿಸುವುದಾಗಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ (Jayaprakash Hegde) ತಿಳಿಸಿದ್ದಾರೆ.

    ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ನಮ್ಮ ಅವಧಿ ಮುಗಿಯುವುದರ ಒಳಗಾಗಿ ವರದಿ ನೀಡುತ್ತೇವೆ. ಸರ್ಕಾರ ಯಾವಾಗ ತೆಗೆದುಕೊಳ್ಳುತ್ತದೋ ಆಗ ಕೊಡುತ್ತೇವೆ. ವರದಿ ಫೈನಲ್ ಆಗಿದೆ ಎಂದರು. ಸರ್ಕಾರ ಮತ್ತು ನಮ್ಮ ಮಧ್ಯೆ ಚರ್ಚೆ ಆಗಿದ್ದನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ. ಅವಧಿ ಮುಗಿಯುವುದರ ಒಳಗೆ ನಾವು ಸಲ್ಲಿಕೆ ಮಾಡುತ್ತೇವೆ. ಡೇಟಾ ವಿಶ್ಲೇಷಣೆ ಮಾಡಿ ವರದಿ ಸಿದ್ಧಪಡಿಸಬೇಕಿತ್ತು. ಅದಕ್ಕಾಗಿ ಸಮಯಾವಕಾಶ ಪಡೆದುಕೊಂಡೆವು. ವರದಿ ಮುಗಿಯುತ್ತಾ ಬಂದಿದೆ ಎಂದು ಹೇಳಿದರು. ಇದನ್ನೂ ಓದಿ: ಬಿಜೆಪಿಯವರು ರಾಮನನ್ನು ಸೀತೆಯಿಂದ ಬೇರ್ಪಡಿಸಿದ್ದಾರೆ: ಸಿದ್ದರಾಮಯ್ಯ

    ಇದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಸಮೀಕ್ಷೆ ವರದಿ ಆಗಿರುತ್ತದೆ. ಕಾಂತರಾಜು ವರದಿಯೂ ಅಲ್ಲ, ಹೆಗ್ಡೆ ವರದಿಯೂ ಅಲ್ಲ. ಇಲ್ಲಿ ವ್ಯಕ್ತಿ ಮುಖ್ಯ ಅಲ್ಲ, ದತ್ತಾಂಶಗಳ ವರದಿ ಇದು. ಹಿಂದುಳಿದ ವರ್ಗಗಳ ವರದಿ. ವರದಿ ಕೊಡುವುದು ಮಾತ್ರ ನಮ್ಮ ಕೆಲಸ. ಸಮುದಾಯಗಳ ಬೇಡಿಕೆ ಈಡೇರಿಸುವುದು ಸರ್ಕಾರದ ಕೆಲಸ, ನಮ್ಮದಲ್ಲ. ಸಿಎಂ ಬಳಿ ಸಮಯ ಕೇಳಿದ್ದೇವೆ. ಬಜೆಟ್ ಸಿದ್ಧತೆಯಲ್ಲಿ ಅವರು ಬ್ಯುಸಿ ಇದ್ದಾರೆ ಎಂದರು. ಇದನ್ನೂ ಓದಿ: ತಮಿಳುನಾಡಿಗೆ ಎಷ್ಟು ನೀರು ಕೊಡಬೇಕೊ ಅದನ್ನ ಕೊಡಲಿಕ್ಕೆ ನಾವು ಬದ್ಧರಿದ್ದೇವೆ: ಡಿ.ಕೆ.ಶಿವಕುಮಾರ್

    ವರದಿ ಕೊಡುವ ಮೊದಲೇ, ಡೇಟಾ ಕೊಡುವ ಮೊದಲೇ ಚರ್ಚೆಗಳು ನಡೆಯುತ್ತಿವೆ. ಪರ ವಿರೋಧದ ಚರ್ಚೆ ಪಬ್ಲಿಕ್ ಡೊಮೇನ್‌ನಲ್ಲಿ ವರದಿ ಬಹಿರಂಗವಾದ ಬಳಿಕ ನಡೆದರೆ ಒಳ್ಳೆಯದು. ಸರ್ಕಾರಕ್ಕೆ ನಾವು ವರದಿ ಕೊಡುತ್ತೇವೆ. ವರದಿಯನ್ನು ಸರ್ಕಾರ ಕ್ಯಾಬಿನೆಟ್ ಮುಂದೆ ಇಡುತ್ತದೆ. ಡೇಟಾ ಸಂಗ್ರಹ ಮಾಡಿದ ಮೇಲೆ 6 ವರ್ಷಗಳಾಗಿದೆ. ಸರ್ವೆ ಮಾಡಿದಾಗ ಪ್ರತಿ ಮನೆಗೂ ಭೇಟಿ ಕೊಟ್ಟಿದ್ದಾರೆ. ಆಗ ಎಲ್ಲರೂ ಅವರವರ ಜಾತಿಯನ್ನು ಉಲ್ಲೇಖ ಮಾಡಲೇಬೇಕು. ವರದಿಯನ್ನು ವಿರೋಧ ಮಾಡುತ್ತಿರುವವರ ಬಗ್ಗೆ ನಾನು ಹೇಳಲು ಸಾಧ್ಯವಿಲ್ಲ. ಅವರನ್ನೇ ಕೇಳಬೇಕು ಎಂದರು. ಇದನ್ನೂ ಓದಿ: ಇಂಡಿಯಾ ಒಕ್ಕೂಟ ಛಿದ್ರವಾಗಲಿದೆ – ಮಮತಾ ಬಳಿಕ ಮತ್ತಷ್ಟು ನಾಯಕರು ಹೊರಕ್ಕೆ: ಬೊಮ್ಮಾಯಿ

  • ಹಿಂದುಳಿದ ವರ್ಗದ ಆಯೋಗದ ಅವಧಿ ವಿಸ್ತರಣೆ ಅಧಿಕೃತ ಮಾಹಿತಿ ಬಂದಿಲ್ಲ: ಜಯಪ್ರಕಾಶ್ ಹೆಗ್ಡೆ

    ಹಿಂದುಳಿದ ವರ್ಗದ ಆಯೋಗದ ಅವಧಿ ವಿಸ್ತರಣೆ ಅಧಿಕೃತ ಮಾಹಿತಿ ಬಂದಿಲ್ಲ: ಜಯಪ್ರಕಾಶ್ ಹೆಗ್ಡೆ

    ಬೆಂಗಳೂರು: ಹಿಂದುಳಿದ ವರ್ಗಗಳ ಆಯೋಗದ ಅವಧಿ ವಿಸ್ತರಣೆ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಬಂದಿಲ್ಲ ಎಂದು ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.

    ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳೇ ಹೇಳಿದ್ದಾರೆ ಎಂದರೆ ಅವಧಿ ವಿಸ್ತರಣೆ ಆಗಬಹುದು. ಇದುವರೆಗೂ ಈ ಬಗ್ಗೆ ನಮಗೆ ಅಧಿಕೃತ ಮಾಹಿತಿ ಬಂದಿಲ್ಲ. ನಮಗೆ ಸಮಯ ಕೊಟ್ಟರೆ ಕ್ರಾಸ್ ಚೆಕ್ ಮಾಡಿ ವರದಿ ಕೊಡುತ್ತೇವೆ. ಮುಖ್ಯಮಂತ್ರಿಗಳೇ ಆಯೋಗದ ಅವಧಿ ಬಗ್ಗೆ ಹೇಳಿದ ಮೇಲೆ ಒಳ್ಳೆಯದಾಯ್ತು, ಇನ್ನೂ ಸಮಯ ಸಿಗುತ್ತದೆ. ಜನವರಿಯಷ್ಟು ಸಮಯ ಬೇಕಾಗಿಲ್ಲ ಬೇಗನೆ ವರದಿ ಕೊಡುತ್ತೇವೆ. ವರದಿ ಕೊನೆಯ ಹಂತದಲ್ಲಿದೆ. ಡಿಸೆಂಬರ್‌ನಲ್ಲಿ ವರದಿ ಕೊಡುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: 2025 ರೊಳಗೆ ರಕ್ತಹೀನತೆ ಮುಕ್ತ ಆರೋಗ್ಯ ಕರ್ನಾಟಕ ರೂಪಿಸುವ ಗುರಿ: ದಿನೇಶ್ ಗುಂಡೂರಾವ್

    ಪೂರ್ತಿ ಆಯೋಗವೇ ಮುಂದುವರಿಯಲಿದೆ. ಮುಖ್ಯಮಂತ್ರಿಗಳು ಇದರ ಬಗ್ಗೆ ತೀರ್ಮಾನ ಮಾಡುತ್ತಾರೆ. ಈ ವರದಿ ಆಯೋಗದ ವರದಿ ಆಗಿರುತ್ತದೆಯೇ ಹೊರತು ಕಾಂತರಾಜು, ಜಯಪ್ರಕಾಶ್ ಮುಖ್ಯ ಅಲ್ಲ. ವರದಿ ಯಾವುದೇ ರೀತಿಯಲ್ಲಿಯೂ ಲೀಕ್ ಆಗಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಬೆಂಗಳೂರು ರಸ್ತೆ ಅಗಲೀಕರಣ ಕಾಮಗಾರಿ ತ್ವರಿತಗೊಳಿಸಿ.. ಸಂಚಾರ ದಟ್ಟಣೆ ನಿವಾರಿಸಿ: ಡಿಸಿಎಂಗೆ ಲೆಹರ್‌ ಸಿಂಗ್‌ ಪತ್ರ

  • ಕಾಂತರಾಜು ಕಮಿಟಿ ವರದಿ ವರ್ಕ್ ಶೀಟ್‍ನ ಮೂಲ ಪ್ರತಿ ಇಲ್ಲ ಅಷ್ಟೆ: ಜಯಪ್ರಕಾಶ್ ಹೆಗ್ಡೆ

    ಕಾಂತರಾಜು ಕಮಿಟಿ ವರದಿ ವರ್ಕ್ ಶೀಟ್‍ನ ಮೂಲ ಪ್ರತಿ ಇಲ್ಲ ಅಷ್ಟೆ: ಜಯಪ್ರಕಾಶ್ ಹೆಗ್ಡೆ

    ಬೆಂಗಳೂರು: ಕಾಂತರಾಜು ಕಮಿಟಿ (Kantharaju Report) ವರದಿಯ ಮೂಲ ಪ್ರತಿ ಕಾಣೆಯಾಗಿದೆ ಎಂಬ ಆರೋಪಕ್ಕೆ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜೈ ಪ್ರಕಾಶ್ ಹೆಗ್ಡೆ (Jaiprakash Hegde) ಆ ರೀತಿ ಆಗಿಲ್ಲ ಎಂಬ ಸ್ಪಷ್ಟನೆ ನೀಡಿದ್ದಾರೆ.

    ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕಾಂತರಾಜು ಕಮಿಟಿ ವರದಿಯ ವರ್ಕ್ ಶೀಟ್ ನ ಮೂಲ ಪ್ರತಿ ಇಲ್ಲಾ ಅಷ್ಟೆ. ಯಾವುದೇ ದಾಖಲೆ ಕಳೆದು ಹೋಗಿಲ್ಲ. ಡೆಟಾ ಎಲ್ಲವೂ ಇದೆ, ಯಾವುದು ಮಿಸ್ ಅಗಿಲ್ಲ. ಸಾಫ್ಟ್‍ವೇರ್‍ನಲ್ಲೂ ಇದೆ. ಪ್ರತಿ ಜಿಲ್ಲಾಧಿಕಾರಿಗಳ ಬಳಿಯೂ ಡೇಟಾ ಇದೆ. ಹಿಂದೆ ಸಿದ್ಧಪಡಿಸಿದ್ದ ವರದಿಯ ವರ್ಕ್ ಶೀಟ್ ಮೂಲ ಪ್ರತಿ ಇಲ್ಲಾ ಅಷ್ಟೆ. ಅದು ವಿಷಯನೇ ಅಲ್ಲಾ, ವಿವಾದವೂ ಅಲ್ಲಾ ಎಂದಿದ್ದಾರೆ.

    ಡೇಟಾ ಆಧರಿಸಿ ನಾವು ವರದಿ ಸಿದ್ಧಪಡಿಸುತ್ತೇವೆ. ಸಿದ್ಧಪಡಿಸುವ ಪ್ರಕ್ರಿಯೆ ಈಗಲೂ ನಡೆಯುತ್ತಿದೆ. ಕಾಂತರಾಜು ಕಮಿಟಿ ವರದಿ ಸಿದ್ಧಪಡಿಸಿದ ವರ್ಕ್ ಶೀಟ್ ಇಲ್ಲಾ ಹಾಗೂ ಮೆಂಬರ್ ಸೆಕ್ರೆಟರಿ ಸಹಿ ಇಲ್ಲ ಎಂಬುದರ ಬಗ್ಗೆ 2021 ರಲ್ಲಿ ಪತ್ರ ಬರೆದಿದ್ದ ಬಗ್ಗೆಯೂ ಸ್ಪಷ್ಟನೆ ನೀಡಿರುವ ಅವರು, 2021ರ ಅಕ್ಟೋಬರ್ ಸರ್ಕಾರಕ್ಕೆ ಮಾಹಿತಿ ನೀಡಿ ಪತ್ರ ಬರೆಯಲಾಗಿದೆ. ಹಿಂದೆ ಸಿದ್ಧಪಡಿಸಿದ್ದ ವರದಿಯ ವರ್ಕ್ ಶೀಟ್ ಮೂಲ ಪ್ರತಿ ಇಲ್ಲಾ ಎಂಬುದನ್ನು ಪತ್ರದಲ್ಲಿ ತಳಿಸಿಲಾಗಿದೆ. ಅಂದಿನ ಮೆಂಬರ್ ಸೆಕ್ರೆಟರಿ ಸಹಿ ಇರಲಿಲ್ಲ. ಈಗಿನ ಮೆಂಬರ್ ಸೆಕ್ರೆಟರಿ ಇರುವುದರಿಂದ ಈಗ ವರದಿ ಕೊಡಲು ಯಾವುದೇ ಸಮಸ್ಯೆ ಇಲ್ಲಾ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: 2025 ರೊಳಗೆ ರಕ್ತಹೀನತೆ ಮುಕ್ತ ಆರೋಗ್ಯ ಕರ್ನಾಟಕ ರೂಪಿಸುವ ಗುರಿ: ದಿನೇಶ್ ಗುಂಡೂರಾವ್