Tag: ಜಯಪ್ರಕಾಶ್ ಹೆಗಡೆ

  • ಹಿಂದುಳಿದ ವರ್ಗಗಳ ಎಲ್ಲಾ ಅರ್ಹ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ನೀಡಬೇಕು: ಜಯಪ್ರಕಾಶ್ ಹೆಗಡೆ

    ಹಿಂದುಳಿದ ವರ್ಗಗಳ ಎಲ್ಲಾ ಅರ್ಹ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ನೀಡಬೇಕು: ಜಯಪ್ರಕಾಶ್ ಹೆಗಡೆ

    ಶಿವಮೊಗ್ಗ: ಹಿಂದುಳಿದ ವರ್ಗಗಳ ಎಲ್ಲಾ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗಡೆ ತಿಳಿಸಿದರು.

    ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನ, ಪ್ರಗತಿ ಮತ್ತು ಜಾತಿ ಪ್ರಮಾಣ ಪತ್ರದಲ್ಲಿ ಹೆಸರು ನಮೂದಿಸುವಲ್ಲಿನ ಗೊಂದಲದ ಕುರಿತು ಅಧಿಕಾರಿಗಳ ಸಮಾಲೋಚನಾ ಸಭೆ ನಡೆಸಿದರು.

    ಕೆಲವು ಉಪಜಾತಿಗಳು ಪರಿಶಿಷ್ಠ ಜಾತಿ ಅಥವಾ ಪಂಗಡ ಮತ್ತು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿಯೂ ಇದ್ದು, ಅಂತಹ ಜಾತಿಗಳ ಪಟ್ಟಿಯನ್ನು ಸರಿಪಡಿಸಲು ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಇದರಿಂದಾಗಿ ಜಾತಿ ಪ್ರಮಾಣ ಪತ್ರ ನೀಡಲು ತೊಡಕು ಉಂಟಾಗುತ್ತಿದ್ದು, ಸರಿಯಾದ ಜಾತಿ ಪ್ರಮಾಣ ಪತ್ರ ದೊರೆಯದೆ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿರುವುದು ಆಯೋಗದ ಗಮನಕ್ಕೆ ಬಂದಿದೆ ಎಂದರು.

    ಎರಡು ಪಟ್ಟಿಯಲ್ಲಿರುವ 17 ಜಾತಿಗಳನ್ನು ಆಯೋಗ ಗುರುತಿಸಿದೆ. ಇದೇ ರೀತಿ ಉಪ ಜಾತಿಗಳ ಬಗ್ಗೆಯೂ ಕೆಲವು ಗೊಂದಲಗಳಿದ್ದು, ಈ ಕುರಿತು ಆಯೋಗ ಸುದೀರ್ಘವಾಗಿ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಿದೆ. ಕೆಲವು ಸಣ್ಣ ಜಾತಿಗಳಿಗೆ ಮೀಸಲಾತಿಯಲ್ಲಿ ಸೇರಿರುವ ಬಗ್ಗೆ ಸ್ಪಷ್ಟ ಕಲ್ಪನೆ ಇಲ್ಲದಿರುವ ಕಾರಣ ಫಲಾನುಭವವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಈ ಕುರಿತು ಅರಿವು ಮೂಡಿಸುವ ಕಾರ್ಯ ನಡೆಯಬೇಕಿದೆ. ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗದ ಸಮಸ್ಯೆ ಕುರಿತು ಚರ್ಚಿಸಲು ಪ್ರತ್ಯೇಕ ಸಭೆಯನ್ನು ಕರೆಯಲಾಗುವುದು ಎಂದು ಹೇಳಿದರು. ಇದನ್ನೂ ಓದಿ: ತಾಲಿಬಾನ್ ಉಗ್ರರಿಗಾಗಿ ಕಾಯುತ್ತಿದ್ದೇನೆ, ನನ್ನನ್ನು ಕೊಲ್ಲುತ್ತಾರೆ: ಅಫ್ಘಾನಿಸ್ತಾನದ ಮಹಿಳಾ ಮೇಯರ್

    ಜಿಲ್ಲೆಯಲ್ಲಿ 2020-21ನೇ ಸಾಲಿನಲ್ಲಿ 34918 ವಿದ್ಯಾರ್ಥಿಗಳಿಗೆ ಒಟ್ಟು 3.28 ಕೋಟಿ ರೂ. ವಿದ್ಯಾರ್ಥಿ ವೇತನ ಅವರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮಾ ಮಾಡಲಾಗಿದೆ. 10ನೇ ತರಗತಿಯ ವಿದ್ಯಾರ್ಥಿಗಳಿಗೆ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನಕ್ಕಾಗಿ 75.92 ಲಕ್ಷ ರೂ. ಬಿಡುಗಡೆಯಾಗಿದ್ದು, 7423 ವಿದ್ಯಾರ್ಥಿಗಳಿಗೆ 74.23 ಲಕ್ಷ ರೂ. ವಿದ್ಯಾರ್ಥಿ ವೇತನ ಒದಗಿಸಲಾಗಿದೆ. ಎಸ್‍ಎಸ್‍ಪಿಯಲ್ಲಿ ಸ್ವೀಕೃತವಾದ ಎಲ್ಲಾ ಅರ್ಜಿಗಳಿಗೆ ಅನುದಾನ ಮಂಜೂರು ಮಾಡಲಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಮಾಹಿತಿ ನೀಡಿದರು.

    ವಿಧಾನ ಪರಿಷತ್ ಸದಸ್ಯ ಪ್ರಸನ್ನ ಕುಮಾರ್, ಆಯೋಗದ ಸದಸ್ಯರಾದ ಕಲ್ಯಾಣ್ ಕುಮಾರ್, ಬಿ.ಎಸ್.ರಾಜಶೇಖರ್, ಕೆ.ಟಿ.ಶಿವಣ್ಣ, ಅರುಣ್ ಕುಮಾರ್, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಜಿ.ಪಂ. ಸಿಇಒ ಎಂ.ಎಲ್.ವೈಶಾಲಿ, ಅಪರ ಜಿಲ್ಲಾಧಿಕಾರಿ ನಾಗೇಂದ್ರ ಹೊನ್ನಳ್ಳಿ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

  • ಮುಂದಿನ ಬಾರಿ ಗ್ರಾಮ ಪಂಚಾಯತ್ ಟಿಕೆಟ್ ಗೆ ಪ್ರಯತ್ನಿಸುತ್ತೇನೆ: ಬ್ರಿಜೇಶ್ ಕಾಳಪ್ಪ

    ಮುಂದಿನ ಬಾರಿ ಗ್ರಾಮ ಪಂಚಾಯತ್ ಟಿಕೆಟ್ ಗೆ ಪ್ರಯತ್ನಿಸುತ್ತೇನೆ: ಬ್ರಿಜೇಶ್ ಕಾಳಪ್ಪ

    ಬೆಂಗಳೂರು: ಈ ಬಾರಿ ವಿಧಾನಸಭಾ ಚುನಾವಣಾ ಟಿಕೆಟ್ ಸಿಕ್ಕಿಲ್ಲ. ಮುಂದಿನ ಬಾರಿ ಗ್ರಾಮ ಪಂಚಾಯತ್‍ಗೆ ಪ್ರಯತ್ನಿಸುತ್ತೇನೆ ಎಂದು ಪ್ರದೇಶ ಕಾಂಗ್ರೆಸ್ ಮಾಧ್ಯಮ ಸಂಚಾಲಕ ಬ್ರಿಜೇಶ್ ಕಾಳಪ್ಪ ಫೇಸ್ ಬುಕ್ ನಲ್ಲಿ ಬರೆದುಕೊಳ್ಳುವ ಮೂಲಕ ತಮ್ಮ ಅಸಮಾಧಾನವನ್ನು ಪ್ರಕಟಿಸಿದ್ದಾರೆ.

    ಪೋಸ್ಟ್ ನಲ್ಲಿ ಏನಿದೆ?
    2009,2014 ರ ಲೋಕಸಭೆಯ ಟಿಕೆಟ್, 2014,16,18 ರ ವಿಧಾನಸಭಾ ಚುನಾವಣಾ ಟಿಕೆಟ್ ಕೈ ತಪ್ಪಿದೆ.

    2016ರಲ್ಲಿ ಪಕ್ಷ ಸೇರಿದ ವ್ಯಕ್ತಿ ಅದೇ ವರ್ಷ ವಿಧಾನ ಪರಿಷತ್ ಟಿಕೆಟ್ ಪಡೆಯುವುದರಲ್ಲಿ ಸಫಲರಾಗಿದ್ದರು. ಅದೇ ವ್ಯಕ್ತಿ ಈ ಬಾರಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಮಡಿಕೇರಿ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ನನಗೆ ಆದ ಅವಮಾನವನ್ನು ಸಹಿಸಿಕೊಳ್ಳುತ್ತೇನೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ಕಾಂಗ್ರೆಸ್ ಪಕ್ಷದಲ್ಲಿ ಒಬ್ಬ ವ್ಯಕ್ತಿಗೆ ಇಷ್ಟೆಲ್ಲ ಅವಕಾಶಗಳನ್ನು ಕೊಡುವುದಾದಲ್ಲಿ ಜಯಪ್ರಕಾಶ್ ಹೆಗಡೆ ಅಂತಹ ನಾಯಕರನ್ನು ಕಾಂಗ್ರೆಸ್ ಪಕ್ಷದಿಂದ ಹೊರಗೆ ಹೋಗಲು ಏಕೆ ಬಿಟ್ಟಿತು ಅನ್ನುವ ಪ್ರಶ್ನೆ ಏಳುತ್ತದೆ. ಲೋಕಸಭಾ ಚುನಾವಣೆಯಲ್ಲಿ ಸೋತ ನಂತರ ಜಯಪ್ರಕಾಶ್ ಹೆಗಡೆಯವರು ವಿಧಾನ ಪರಿಷತ್‍ನ ಟಿಕೆಟ್ ಆಕಾಂಕ್ಷಿಯಾಗಿದ್ದರು.

    ನನಗೆ ಯೋಗ್ಯವಾದ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ಕೇಳುವಂತೆ ಪಕ್ಷದ ಸದಸ್ಯರೊಬ್ಬರು ಹೇಳಿದರು. ನನಗಾದ ನಿರಾಶೆಗೆ ಪ್ರೀತಿಯ, ಗೌರವದ ಫೇಸ್ ಬುಕ್ ಸ್ನೇಹಿತರೆ ಕಣ್ಣೀರು ಹಾಕಬೇಡಿ ಎಂದು ಹೇಳಿದ್ದಾರೆ. ರಾಜೇಶ್ ಖನ್ನಾ ಅವರ “ಪುಷ್ಪ, ಕಣ್ಣೀರನ್ನು ನಾನು ದ್ವೇಷಿಸುತ್ತೇನೆ” ಎನ್ನುವ ಸಾಲುಗಳನ್ನು ನೆನಪಿಸುತ್ತೇನೆ ಎಂದಿದ್ದಾರೆ.

    ಇತರೆ ಪಕ್ಷಗಳಿಂದ ಕರೆಗಳು ಬಂದಿದೆ. ಕರೆಗೆ ಧನ್ಯವಾದಗಳನ್ನು ತಿಳಿಸುತ್ತೇನೆ. ನಾನು ಯಾರು ಎಂದು ಕಾಂಗ್ರೆಸ್ ಪಕ್ಷ ದೇಶದ ಜನರಿಗೆ ತಿಳಿಸಿಕೊಟ್ಟಿದೆ. ಕರ್ನಾಟಕ ಸಚಿವ ಸ್ಥಾನಮಾನವನ್ನು ಕೊಟ್ಟಿದೆ. ನನ್ನ ಕೆಲಸಕ್ಕೆ ಹೋಲಿಸದರೆ ಪಕ್ಷ ಹೆಚ್ಚೇ ಕೊಟ್ಟಿದೆ. ಕಾಂಗ್ರೆಸ್ ಪಕ್ಷಕ್ಕೆ ಮತ್ತು ಮುಂಖಂಡರಿಗೆ ಸದಾ ಅಭಾರಿಯಾಗಿದ್ದೇನೆ ಎಂದು ಬರದುಕೊಂಡಿದ್ದಾರೆ.