Tag: ಜಯಂತ್ ಸಿನ್ಹಾ

  • ಸಂಸದ ಜಯಂತ್ ಸಿನ್ಹಾಗೆ ಬಿಜೆಪಿಯಿಂದ ಶೋಕಾಸ್ ನೋಟಿಸ್ ಜಾರಿ

    ಸಂಸದ ಜಯಂತ್ ಸಿನ್ಹಾಗೆ ಬಿಜೆಪಿಯಿಂದ ಶೋಕಾಸ್ ನೋಟಿಸ್ ಜಾರಿ

    ರಾಂಚಿ: ಕೇಂದ್ರದ ಮಾಜಿ ಸಚಿವ ಯಶ್ವಂತ್ ಸಿನ್ಹಾ ಪುತ್ರ, ಸಂಸದ ಜಯಂತ್‌ ಸಿನ್ಹಾಗೆ (Jayant Sinha) ಭಾರತೀಯ ಜನತಾ ಪಕ್ಷವು (ಬಿಜೆಪಿ) ಶೋಕಾಸ್ ನೋಟಿಸ್ ಜಾರಿ ಮಾಡಿದೆ.

    ಜಾರ್ಖಂಡ್‌ನ ಹಜಾರಿಬಾಗ್ (Hazaribagh) ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಮನೀಶ್ ಜೈಸ್ವಾಲ್ (Manish Jaiswal) ಅವರನ್ನು ಪಕ್ಷ ಘೋಷಣೆ ಮಾಡಿತ್ತು. ಈ ಮೂಲಕ ಲೋಕಸಭಾ ಚುನಾವಣೆಗೆ ಸಿನ್ಹಾ ಅವರಿಗೆ ಟಿಕೆಟ್‌ ನೀಡಲು ನಿರಾಕರಿಸಿತು. ಅಂದಿನಿಂದ ಜಯಂತ್‌ ಸಿನ್ಹಾ ಅವರು ಸಂಘಟನಾ ಕಾರ್ಯ ಮತ್ತು ಪ್ರಚಾರದಲ್ಲಿ ಆಸಕ್ತಿ ತೋರುತ್ತಿರಲಿಲ್ಲ. ಅಲ್ಲದೇ ಪಕ್ಷದ ಅಧಿಕೃತ ಅಭ್ಯರ್ಥಿ ಪರ ಕೆಲಸ ಮಾಡದ ಆರೋಪ ಹಾಗೂ ಈ ಬಾರಿ ಮತದಾನವನ್ನು ಕೂಡ ಮಾಡಿಲ್ಲ ಎಂಬ ಆರೋಪ ಕೇಳಿಬಂದಿತ್ತು.

    ಸಿನ್ಹಾ ನಡೆ ಪಕ್ಷದ ಹೈಕಮಾಂಡ್‌ ಗಮನಕ್ಕೆ ಬಂದಿದ್ದು, ಇದೀಗ ಶೋಕಾಸ್ ನೋಟಿಸ್ ಜಾರಿ ಮಾಡಿದೆ. 2 ದಿನದೊಳಗೆ ಉತ್ತರ ನೀಡುವಂತೆ ಸೂಚನೆ ನೀಡಿದೆ. ನಿಮ್ಮ ಹಕ್ಕನ್ನು ಚಲಾಯಿಸಲು ಸಹ ನೀವು ಮನಸ್ಸು ಮಾಡಿಲ್ಲ. ಹೀಗಾಗಿ ನಿಮ್ಮ ನಡವಳಿಕೆಯಿಂದಾಗಿ ಪಕ್ಷದ ಇಮೇಜ್‌ಗೆ ಧಕ್ಕೆಯಾಗಿದೆ ಎಂದು ಜಾರ್ಖಂಡ್ ಪ್ರಧಾನ ಕಾರ್ಯದರ್ಶಿ ಆದಿತ್ಯ ಸಾಹು (Aditya Sahu) ನೋಟಿಸ್‌ನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: 2019; ಮೋದಿ ಅಲೆಯಲ್ಲಿ ಮತ್ತೆ ಅರಳಿದ ಕಮಲ

    ಇತ್ತೀಚೆಗೆ ಸಿನ್ಹಾ ಅವರ ಪುತ್ರ ಆಶಿಶ್ ಸಿನ್ಹಾ ಅವರು ಜಾರ್ಖಂಡ್‌ನ ಬರ್ಹಿಯಲ್ಲಿ ವಿರೋಧ ಪಕ್ಷದ ಇಂಡಿಯಾ ಬ್ಲಾಕ್‌ನಲ್ಲಿ ಚುನಾವಣಾ ರ್‍ಯಾಲಿಯಲ್ಲಿ ಭಾಗವಹಿಸಿದ್ದರು. ಇದಾದ ಕೆಲವು ದಿನಗಳ ನಂತರ ಈ ಬೆಳವಣಿಗೆ ನಡೆದಿದೆ. ರ್‍ಯಾಲಿಯಲ್ಲಿ ಆಶಿಶ್ ಸಿನ್ಹಾ ಅವರು ಕಾಂಗ್ರೆಸ್ ಅಭ್ಯರ್ಥಿ ಜೆಪಿ ಪಟೇಲ್ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದರು. ಅಲ್ಲದೇ ಈ ವೇಳೆ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಕೂಡ ಭಾಗವಹಿಸಿದ್ದರು.

    ಜಯಂತ್ ಸಿನ್ಹಾ ಮತ್ತು ಅವರ ತಂದೆ ಯಶವಂತ್ ಸಿನ್ಹಾ ಅವರು 1998 ರಿಂದ 26 ವರ್ಷಗಳಿಗೂ ಹೆಚ್ಚು ಕಾಲ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.

  • ಕ್ರಿಪ್ಟೋ ಕರೆನ್ಸಿ ನಿಷೇಧದ ಬದಲು ನಿಯಂತ್ರಣ

    ಕ್ರಿಪ್ಟೋ ಕರೆನ್ಸಿ ನಿಷೇಧದ ಬದಲು ನಿಯಂತ್ರಣ

    ನವದೆಹಲಿ: ಕ್ರಿಪ್ಟೋ ಕರೆನ್ಸಿ ವಿವಾದ ಹೆಚ್ಚಾಗ್ತಿರುವಾಗಲೇ ಕೇಂದ್ರದ ಸಂಸದೀಯ ಮಂಡಳಿ ಗಂಭೀರವಾಗಿ ಪರಿಗಣಿಸಿದೆ. ಕ್ರಿಪ್ಟೋ ಕರೆನ್ಸಿ ನಿಷೇಧ ಬೇಡ. ಬದಲಿಗೆ ನಿಯಂತ್ರಣಕ್ಕೆ ಹೊಸ ನಿಯಮಾವಳಿ ತನ್ನಿ ಅಂತ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

    ಸಂಸದ ಜಯಂತ್ ಸಿನ್ಹಾ ನೇತೃತ್ವದಲ್ಲಿ ಕ್ರಿಪ್ಟೋ ಕರೆನ್ಸಿ ಸಂಬಂಧ ಮೊದಲ ಸಭೆ ನಡೀತು. ಕೈಗಾರಿಕೋದ್ಯಮಿಗಳು, ತಜ್ಞರು ಭಾಗಿಯಾಗಿದ್ದರು. ಈ ವೇಳೆ, ಡಿಜಿಟಲ್ ಕರೆನ್ಸಿಯನ್ನು ಸ್ಥಗಿತಗೊಳಿಸಲು ಆಗಲ್ಲ, ನಿಯಂತ್ರಿಸಬಹುದು ಅನ್ನೊ ಒಮ್ಮತಕ್ಕೆ ಬರಲಾಯಿತು. ಆದರೆ, ಇದನ್ನು ನಿಯಂತ್ರಿಸೋದು ಯಾರು ಅನ್ನೋದರ ಬಗ್ಗೆ ಸ್ಪಷ್ಟ ನಿಲುವು ಮೂಡಲಿಲ್ಲ. ಪತ್ರಿಕೆಗಳಲ್ಲಿ ಫುಲ್ ಪೇಜ್ ಕ್ರಿಪ್ಟೋ ಕರೆನ್ಸಿಯ ಜಾಹೀರಾತು ಪ್ರಕಟವಾಗ್ತಿದೆ ಅಂತ ಸಂಸದರೊಬ್ಬರು ಸಭೆಯಲ್ಲಿ ಆಕ್ಷೇಪಿಸಿದರು. ಇದನ್ನೂ ಓದಿ: ಬಿಜೆಪಿ ಶಾಸಕರನ್ನು ದುಡ್ಡಿಗೆ ಖರೀದಿಸಿ ಚುನಾವಣೆ ವ್ಯವಸ್ಥೆಯನ್ನು ಹಾಳು ಮಾಡಿದೆ: ಎಚ್‍ಡಿಕೆ

    ತಜ್ಞರು ಮಾತ್ರ ಕ್ರಿಪ್ಟೋ ಕರೆನ್ಸಿ ಹೂಡಿಕೆದಾರರಿಗೆ ಒಂದು ರೀತಿಯ ಪ್ರಜಾಪ್ರಭುತ್ವ ಇದ್ದಂತೆ ಅಂತ ಅಭಿಪ್ರಾಯ ಮಂಡಿಸಿದ್ರು. ಹೀಗಾಗಿ, ನಿಯಂತ್ರಣ ಕ್ರಮಗಳಿಗೆ ಮುನ್ನ ಅಧಿಕಾರಿಗಳು ಹಾಜರಾಗಿ ತಮ್ಮ ನಿರ್ಧಾರ ತಿಳಿಸಬೇಕು ಅಂತ ಕೇಂದ್ರಕ್ಕೆ ಮಂಡಳಿ ಸೂಚಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಉನ್ನತ ಮಟ್ಟದ ಸಭೆ ನಡೆಸಿ ಪರಾಮರ್ಶೆ ನಡೆಸಿದರು. ಈ ಬೆನ್ನಲ್ಲೇ ಇವತ್ತು ಹಣಕಾಸು ಇಲಾಖೆ ಮೇಲಿನ ಸಂಸದೀಯ ಮಂಡಳಿ ಸಭೆ ನಡೆಸಿದೆ. ಇದನ್ನೂ ಓದಿ: ಇಡೀ ದೇಶದಲ್ಲೇ ಕಾಂಗ್ರೆಸ್ ಅಧೋಗತಿಗೆ ತಲುಪಿದೆ – ಕಾಂಗ್ರೆಸ್ ವಿರುದ್ಧ ಅಶೋಕ್ ವಾಗ್ದಾಳಿ

  • ಆಟೋರಿಕ್ಷಾಗಿಂತ ವಿಮಾನಯಾನ ಅಗ್ಗ- ಕೇಂದ್ರ ಸಚಿವ ಜಯಂತ್ ಸಿನ್ಹಾ ಲೆಕ್ಕಾಚಾರ ಓದಿ

    ಆಟೋರಿಕ್ಷಾಗಿಂತ ವಿಮಾನಯಾನ ಅಗ್ಗ- ಕೇಂದ್ರ ಸಚಿವ ಜಯಂತ್ ಸಿನ್ಹಾ ಲೆಕ್ಕಾಚಾರ ಓದಿ

    ನವದೆಹಲಿ: ಭಾರತದಲ್ಲಿ ಆಟೋರಿಕ್ಷಾಗಳಿಗಿಂತ ವಿಮಾನಯಾನ ದರವೇ ಅಗ್ಗ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜಯಂತ್ ಸಿನ್ಹಾ ಹೇಳಿದ್ದಾರೆ.

    ಉತ್ತರ ಪ್ರದೇಶ ಗೋರಖ್‍ಪುರದಲ್ಲಿ ಮಾತನಾಡಿದ ಅವರು, ತಮ್ಮ ಹೇಳಿಕೆಗೆ ಸಮರ್ಥನೆಯನ್ನು ನೀಡಿದ್ದಾರೆ ಆಟೋ ಪ್ರಯಾಣದಲ್ಲಿ ಪ್ರತಿ ಕಿಮೀ ಗೆ ಕನಿಷ್ಟ 5 ರೂ. ತೆಗೆದುಕೊಳ್ಳಲಾಗುತ್ತದೆ. ಆದರೆ ವಿಮಾನಯಾನದಲ್ಲಿ ಪ್ರತಿ ಪ್ರಯಾಣಿಕನಿಗೆ 1 ಕಿಮೀಗೆ 4 ರೂ. ಮಾತ್ರ ತೆಗೆದುಕೊಳ್ಳಲಾಗುತ್ತದೆ ಎಂದು ವಿವರಿಸಿದರು.

    ತಮ್ಮ ಹೇಳಿಕೆ ಕುರಿತು ದೇಶಾದ್ಯಂತ ಚರ್ಚೆ ಆರಂಭವಾಗುತ್ತಿದಂತೆ ಸ್ಪಷ್ಟನೆ ನೀಡಿರುವ ಸಿನ್ಹಾ, ಭಾರತದ ವಿಮಾನಯಾನ ಸೇವೆಗಳು ಎಷ್ಟು ಅಗ್ಗ ಎಂಬುವುದನ್ನು ವಿವರಿಸಲು ಈ ಹೋಲಿಕೆ ಮಾಡಲಾಗಿದೆ. ವಿಶ್ವ ವಿಮಾನಯಾನ ಸೇವೆಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ಕಡಿಮೆ ದರ ನಿಗದಿಯಾಗಿದೆ. ಆದರೆ ನಾನು ನಿಮಗೇ ಕಡಿಮೆ ದೂರದ ಪ್ರಯಾಣಕ್ಕೆ ಈ ಸೇವೆ ಬಳಸಿ ಎಂದು ಹೇಳಿಲ್ಲ ಎಂದು ತಿಳಿಸಿದ್ದಾರೆ.

    ಭಾರತ ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆ ವ್ಯವಸ್ಥೆಯನ್ನು ಹೊಂದಿದ್ದರೂ, ವಿಮಾನಯಾನ ಸೇವೆ ಮಾತ್ರ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿಯಾಗಿಲ್ಲ. ಭಾರತದ ವಿಮಾನಯಾನ ಸಂಸ್ಥೆಗಳಾದ ಏರ್ ಇಂಡಿಯಾ ಮತ್ತು ಜೆಟ್ ಏರ್‍ವೇಸ್ ಸಂಸ್ಥೆಗಳು ನಷ್ಟ ಅನುಭವಿಸಿದ ಸಂದರ್ಭದಲ್ಲೇ ಹೇಳಿಕೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

     

  • ಹೂಹಾರ ಹಾಕಿ ಆರೋಪಿಗಳನ್ನು ಸ್ವಾಗತಿಸಿದ್ದ ಮಗನ ವಿರುದ್ಧ ಮಾಜಿ ಕೇಂದ್ರ ಸಚಿವ ಗರಂ!

    ಹೂಹಾರ ಹಾಕಿ ಆರೋಪಿಗಳನ್ನು ಸ್ವಾಗತಿಸಿದ್ದ ಮಗನ ವಿರುದ್ಧ ಮಾಜಿ ಕೇಂದ್ರ ಸಚಿವ ಗರಂ!

    ರಾಂಚಿ: ಗೋ ರಕ್ಷಣೆಯ ಹೆಸರಿನಲ್ಲಿ ಕೊಲೆಗೈದ 7 ಆರೋಪಿಗಳಿಗೆ ಹೂಹಾರ ಹಾಕಿ ಆಕ್ರೋಶಕ್ಕೆ ಒಳಗಾಗಿದ್ದ ಜಯಂತ್ ಸಿನ್ಹಾ ವಿರುದ್ಧ ಇದೀಗ ತಂದೆ, ಮಾಜಿ ಕೇಂದ್ರ ಸಚಿವ ಯಶ್ವಂತ್ ಸಿನ್ಹಾ ಗರಂ ಆಗಿದ್ದಾರೆ.

    ಈ ಕುರಿತು ಟ್ವಿಟ್ಟರ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ ಸಿನ್ಹಾ, ಮಗನ ಈ ಕಾರ್ಯವನ್ನು ಯಾವುದೇ ಕಾರಣಕ್ಕೂ ನಾನು ಒಪ್ಪಲು ಸಿದ್ಧನಿಲ್ಲ. ಈ ಹಿಂದೆ ನಾನು ಒಬ್ಬ ನಾಲಾಯಕ್ ಮಗನ ಅಪ್ಪನಾಗಿದ್ದೆ. ಆದ್ರೆ ಇದೀಗ ಪಾತ್ರಗಳು ಬದಲಾಗಿವೆ. ಇದು ಟ್ವಿಟ್ಟರ್ ಮಹಿಮೆ ಅಂತ ಹೇಳೋ ಮೂಲಕ ಮಗನ ವಿರುದ್ಧ ಕೆಂಡಾಮಂಡಲಾಗಿದ್ದಾರೆ.

    ಏನಿದು ಘಟನೆ?:
    ಕಳೆದ ವರ್ಷ ಜೂನ್ ತಿಂಗಳಲ್ಲಿ ಜಾರ್ಖಂಡ್ ನ ರಾಮ್ ಗ್ರಹ್ ನಲ್ಲಿ 55 ವರ್ಷದ ವ್ಯಕ್ತಿಯೊಬ್ಬರು ದನದ ಮಾಂಸವನ್ನು ಸಾಗಾಟ ಮಾಡುತ್ತಿದ್ದಾರೆಂದು ಆರೋಪಿಸಿ ಅವರನ್ನ ಕಾರಿನಿಂದ ಎಳೆದು ಹಲ್ಲೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಬಿಜೆಪಿ ಮುಖಂಡ ಸೇರಿ 11 ಮಂದಿ ಜೈಲು ಪಾಲಾಗಿದ್ದರು. ಇದೀಗ ಒಂದು ವರ್ಷದ ನಂತರ ಜೂನ್ 29ರಂದು ಜಾರ್ಖಂಡ್ ಹೈಕೋರ್ಟ್ 8 ಆರೋಪಿಗಳ ಜೀವಾವಧಿ ಶಿಕ್ಷೆಯನ್ನು ರದ್ದುಗೊಳಿಸಿತ್ತು.ಹೀಗಾಗಿ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾದ ಇವರೆಲ್ಲರೂ ರಾಂಚಿಯಲ್ಲಿರೋ ಜಯಂತ್ ಸಿನ್ಹಾ ಅವರ ನಿವಾಸಕ್ಕೆ ಭೇಟಿ ಕೊಟ್ಟಿದ್ದರು. ಈ ವೇಳೆ ಸಚಿವರು ಎಲ್ಲರನ್ನೂ ಹಾರ ಹಾಕಿ ಸ್ವಾಗತಿಸಿದ್ದಾರೆ.

    ಈ ಕುರಿತ ಭಾವಚಿತ್ರಗಳು ಇದೀಗ ವೈರಲ್ ಆಗಿದ್ದು, ಇದೀಗ ಮಗ ಜಯಂತ್ ಸಿನ್ಹಾ ವಿರುದ್ಧ ತಂದೆ ಯಶ್ವಂತ್ ಸಿಂಗ್ ಕಿಡಿಕಾರಿದ್ದಾರೆ.

  • ಬಳ್ಳಾರಿ ಟು ಹೈದರಾಬಾದ್ ವಿಮಾನಯಾನಕ್ಕೆ ಚಾಲನೆ ನೀಡಿದ ಕೇಂದ್ರ ಸಚಿವ ಜಯಂತ್ ಸಿನ್ಹಾ

    ಬಳ್ಳಾರಿ ಟು ಹೈದರಾಬಾದ್ ವಿಮಾನಯಾನಕ್ಕೆ ಚಾಲನೆ ನೀಡಿದ ಕೇಂದ್ರ ಸಚಿವ ಜಯಂತ್ ಸಿನ್ಹಾ

    ಬಳ್ಳಾರಿ: ಜಿಲ್ಲೆಯ ಜಿಂದಾಲ್ ವಿಮಾನ ನಿಲ್ದಾಣದಿಂದ ಹೈದರಾಬಾದ್‍ಗೆ ಉಡಾನ್ ಯೋಜನೆಯಡಿ ಇಂದಿನಿಂದ ವಿಮಾನಯಾನ ಆರಂಭವಾಗಿದ್ದು ಕೇಂದ್ರ ಸಚಿವ ಜಯಂತ್ ಸಿನ್ಹಾ ಚಾಲನೆ ನೀಡಿದರು.

    ಬಹುದಿನದ ನಿರೀಕ್ಷೆಯಂತೆ ಈ ಭಾಗದ ಜನರಿಗೆ ಅನುಕೂಲ ಕಲ್ಪಿಸಲು ಈ ಯೋಜನೆ ಜಾರಿಗೆ ತರಲಾಗಿದ್ದು, ಟ್ರೂಜೆಟ್ ಸಂಸ್ಥೆ ವಿಮಾನದ ಹಾರಾಟದ ವ್ಯವಸ್ಥೆ ಮಾಡಿದೆ.

    70 ಆಸನಗಳ ಈ ವಿಮಾನವು ಜಿಂದಾಲ್ ವಿಮಾನ ನಿಲ್ದಾಣದಿಂದ ಪ್ರತಿನಿತ್ಯ ಬೆಳಗ್ಗೆ 6.20 ಕ್ಕೆ ಹೈದ್ರಾಬಾದ್‍ನಿಂದ ಹೊರಟು ಬೆ. 7.25 ಕ್ಕೆ ಬಳ್ಳಾರಿಯ ಜಿಂದಾಲ್ ವಿಮಾನ ನಿಲ್ದಾಣಕ್ಕೆ ತಲುಪಲಿದೆ. ಪುನಃ ಇಲ್ಲಿಂದ ಬೆ. 7.55 ಕ್ಕೆ ಹೊರಟು ಬೆ. 9 ಗಂಟೆಗೆ ಹೈದರಾಬಾದ್ ತಲುಪಲಿದೆ.

    ಇದರ ಪ್ರಯಾಣ ದರ ರೂ.999 ರಿಂದ ರೂ.2500 ರೂಪಾಯಿವರೆಗೆ ಇದೆ. ಮೊದಲ ದಿನವಾದ ಇಂದು ಹೈದ್ರಾಬಾದ್‍ನಿಂದ 20 ಪ್ರಯಾಣಿಕರು ಬಳ್ಳಾರಿಗೆ ಆಗಮಿಸಿದರೆ, ಬಳ್ಳಾರಿಯಿಂದ 41 ಪ್ರಯಾಣಿಕರು ಹೈದರಾಬಾದ್ ಗೆ ಪ್ರಯಾಣ ಬೆಳಸಿದರು.

    ಈ ವೇಳೆ ಮಾತನಾಡಿದ ಸಚಿವ ಸಿನ್ಹಾ, ಬಳ್ಳಾರಿಯ ಜಿಂದಾಲ್ ವಿಮಾನ ನಿಲ್ದಾಣದಿಂದ ಹೈದರಾಬಾದ್ ನಡುವೆ ಇಂದಿನಿಂದ ಒಂದು ವಿಮಾನ ನಿರಂತರ ಹಾರಾಟ ಮಾಡಲಿದೆ. ಮುಂದಿನ ಅಕ್ಟೋಬರ್ ತಿಂಗಳಲ್ಲಿ ಬೆಂಗಳೂರು ಹಾಗೂ ಮುಂಬೈಗೆ ಇಲ್ಲಿಂದ ವಿಮಾನಗಳ ಹಾರಾಟ ವ್ಯವಸ್ಥೆ ಮಾಡಲಾಗುವುದು. ಮೊಟ್ಟ ಮೊದಲು ಮೈಸೂರಿನಲ್ಲಿ ಆರಂಭವಾದ ಈ ಸೌಲಭ್ಯ ಇಂದು ಬಳ್ಳಾರಿಯಲ್ಲೂ ಆರಂಭಿಸಲಾಗಿದೆ. ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲೂ ವಿಮಾನ ಹಾರಾಟ ಯೋಜನೆಗಳನ್ನು ಆರಂಭ ಮಾಡಲು ಚಿಂತನೆ ನಡೆಸಲಾಗಿದೆ. `ಹವಾಯ್ ಚಪ್ಪಲ್ ಸೆ ಹವಾಯ್ ಜಹಾಜ್’ ಎಂದರೆ ಶ್ರೀಸಾಮಾನ್ಯ ಕೂಡ ವಿಮಾನ ಪ್ರಯಾಣ ಮಾಡಬೇಕೆಂಬುದು ಪ್ರಧಾನಿ ಮೋದಿಯವರ ಕನಸಾಗಿದೆ. ಈ ಕನಸು ಈಗ ನನಸಾಗುತ್ತಿದೆ. ವಿಮಾನ ದರಗಳು ಮತ್ತು ಸೇವೆ ಸುಲಭವಾಗಿ ಜನಸಾಮಾನ್ಯರಿಗೆ ಲಭ್ಯವಾಗುವಂತೆ ಸರ್ಕಾರ ಕ್ರಮ ಕೈಗೊಂಡಿದೆ. ರಾಜ್ಯದ ಪ್ರಸ್ತಾಪಿತ ಎಲ್ಲ ಯೋಜನೆಗಳು ಶೀಘ್ರ ಪೂರ್ಣಗೊಳ್ಳಲಿವೆ ಎಂದರು.

    ಸಂಸದರಾದ ಶ್ರೀರಾಮುಲು, ಕರಡಿ ಸಂಗಣ್ಣ, ಸಚಿವ ಸಂತೋಷ್ ಲಾಡ್, ಶಾಸಕ ಆನಂದ್ ಸಿಂಗ್, ಎಂಎಲ್‍ಸಿ ಕೆ.ಸಿ.ಕೊಂಡಯ್ಯ, ಮಾಜಿ ಶಾಸಕ ಜಿ.ಸೋಮಶೇಖರ್ ರೆಡ್ಡಿ ಮತ್ತು ಉದ್ಯಮಿ ಸಜ್ಜನ್ ಜಿಂದಾಲ್, ಜಿಲ್ಲಾಧಿಕಾರಿ ಡಾ.ರಾಮ್ ಪ್ರಸಾತ್ ಮನೋಹರ್ ಉದ್ಘಾಟನ ಕಾರ್ಯಕ್ರಮದಲ್ಲಿ ಉಪಸ್ಥಿತಿರಿದ್ದರು.