Tag: ಜಯಂತ್

  • ನಮಗೆ ಬುರುಡೆ ಕೊಟ್ಟಿದ್ದು ಗಿರೀಶ್‌ ಮಟ್ಟಣ್ಣನವರ್‌: ಎಸ್‌ಐಟಿ ಮುಂದೆ ಜಯಂತ್‌ ಹೇಳಿಕೆ

    ನಮಗೆ ಬುರುಡೆ ಕೊಟ್ಟಿದ್ದು ಗಿರೀಶ್‌ ಮಟ್ಟಣ್ಣನವರ್‌: ಎಸ್‌ಐಟಿ ಮುಂದೆ ಜಯಂತ್‌ ಹೇಳಿಕೆ

    ಮಂಗಳೂರು: ವಿಶೇಷ ತನಿಖಾ ತಂಡದ (SIT) ತನಿಖೆಯ ವೇಳೆ ಬುರುಡೆಯನ್ನು (Skull) ನಮಗೆ ಕೊಟ್ಟಿದ್ದು ಗಿರೀಶ್‌ ಮಟ್ಟಣ್ಣನವರ್‌ (Girish Mattannavar) ಎಂದು ಜಯಂತ್‌ (Jaynath) ಹೇಳಿರುವುದಾಗಿ ಮೂಲಗಳು ತಿಳಿಸಿವೆ.

    ಧರ್ಮಸ್ಥಳ (Dharmasthala) ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ತನಿಖೆಯನ್ನು ಚುರುಕುಗೊಳಿಸಿದೆ. ಎಸ್‌ಐಟಿ ಜಯಂತ್‌ ಮತ್ತು ಯಟ್ಯೂಬರ್‌ ಅಭಿಷೇಕ್‌ನನ್ನು ವಿಚಾರಣೆಗೆ ಒಳಪಡಿಸುತ್ತಿದೆ. ಈ ವೇಳೆ ಬುರುಡೆ ಸಿಕ್ಕಿದ್ದು ಎಲ್ಲಿ ಎಂಬ ಪ್ರಶ್ನೆಗೆ ಮಟ್ಟಣ್ಣನವರ್‌ ಹೆಸರನ್ನು ಜಯಂತ್‌ ಹೇಳಿರುವುದಾಗಿ ತಿಳಿದುಬಂದಿದೆ.

    ಶವ ಹೂತ ಪ್ರಕರಣಕ್ಕೆ ಸಂಬಂಧಿಸಿಂತೆ ವಿಶೇಷ ತನಿಖಾ ತಂಡ ರಚನೆಯಾಗಲು ಕಾರಣವಾಗಿರುವ ಬುರುಡೆ ಸಿಕ್ಕಿದ್ದು ಎಲ್ಲಿ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಈ ಪ್ರಶ್ನೆಗೆ ಎಸ್‌ಐಟಿ ಉತ್ತರ ಹುಡುಕುತ್ತಿದೆ. ತಿಮರೋಡಿ ತೋಟದಿಂದ ಬುರುಡೆ ತಂದು ನ್ಯಾಯಾಲಯಕ್ಕೆ ನೀಡಿರುವ ಅನುಮಾನ ವ್ಯಕ್ತವಾಗಿತ್ತು. ಇದನ್ನೂ ಓದಿ: ಸಮೀರ್‌ ವಿಡಿಯೋದಲ್ಲಿ ಬಳಸಿದ್ದ ಒಂದು ಪದಕ್ಕೆ ಸಂಬಂಧಿಸಿದ್ದಂತೆ ಪೊಲೀಸರು ಜಪ್ತಿ ಮಾಡಿದ್ದಾರೆ: ಮಟ್ಟಣ್ಣನವರ್‌

    ನ್ಯಾಯಾಲಯಕ್ಕೆ ಹಾಜರುಪಡಿಸಿದ ಬುರುಡೆ ಜೊತೆ ಇದ್ದ ಮಣ್ಣುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಪೊಲೀಸರು ಕಳುಹಿಸಿದ್ದರು. ಎಫ್‌ಎಸ್‌ಎಲ್‌ ಲ್ಯಾಬ್‌ನಲ್ಲಿ ಧರ್ಮಸ್ಥಳದ ಅಸುಪಾಸಿನಲ್ಲಿ ಇರುವ ಮಣ್ಣಿಗೂ ಬುರುಡೆಯಲ್ಲಿರುವ ಮಣ್ಣಿನ pHಗೂ (ಪಿಹೆಚ್‌ ಎಂಬುದು ಮಣ್ಣಿನ ಆಮ್ಲೀಯತೆ ಅಥವಾ ಕ್ಷಾರೀಯತೆ ಅಳತೆಯಾಗಿದೆ) ಸಾಮ್ಯತೆ ಇಲ್ಲ ಎಂಬ ವಿಚಾರ ದೃಢಪಟ್ಟಿತ್ತು.

    ಎಫ್‌ಎಸ್‌ಎಲ್‌ನಿಂದ ಬುರುಡೆ ಸತ್ಯ ರಿವೀಲ್‌ ಆದ ಬೆನ್ನಲ್ಲೇ ಎಸ್‌ಐಟಿ ಪೊಲೀಸರು ಚಿನ್ನಯ್ಯನನ್ನು (Chinnayya) ವಿಚಾರಣೆ ನಡೆಸಿದಾಗ ಸತ್ಯ ಒಪ್ಪಿಕೊಂಡು ಷಡ್ಯಂತ್ರದ ಭಾಗವಾಗಿ ಬುರುಡೆ ತರಲಾಗಿತ್ತು ಎಂದಿದ್ದ. ಮತ್ತಷ್ಟು ವಿಚಾರಣೆ ನಡೆಸಿದಾಗ ಚಿನ್ನಯ್ಯ ತಿಮರೋಡಿ ತೋಟದಿಂದ ಬುರುಡೆ ತಂದಿರುವುದಾಗಿ ಹೇಳಿದ್ದ.   ಇದನ್ನೂ ಓದಿ:  ಸಮೀರ್‌ ವಿಡಿಯೋ ವೈರಲ್‌ ಹಿಂದೆ ಭಾರಿ ಫಂಡಿಂಗ್ ಇದೆ; 308 ಟ್ರೋಲ್ ಪೇಜಸ್‌, 50-60 ಕಟೆಂಟ್ ಕ್ರಿಯೇಟರ್ಸ್ ಇದ್ದಾರೆ: ಸುಮಂತ್‌

    ಈ ವಿಚಾರ ಬೆಳಕಿಗೆ ಬಂದ ಬೆನ್ನಲ್ಲೇ ತಿಮರೋಡಿ ನಿವಾಸಕ್ಕೆ ಮಹಜರು ಮಾಡಲು ಬಂದಿದ್ದಾಗ ಚಿನ್ನಯ್ಯ ರಬ್ಬರ್‌ ತೋಟದ ಒಂದು ಜಾಗವನ್ನು ತೋರಿಸಿ ಇಲ್ಲಿಂದ ಬುರುಡೆ ತೆಗೆದಿರುವುದಾಗಿ ತಿಳಿಸಿದ್ದ. ಈತನ ಹೇಳಿಕೆಯಂತೆ ಪೊಲೀಸರು ರಬ್ಬರ್‌ ತೋಟದಿಂದ ಮಣ್ಣುಗಳನ್ನು ತೆಗೆದು ಎಫ್‌ಎಸ್‌ಎಲ್‌ಗೆ ಕಳುಹಿಸಿದ್ದಾರೆ ಎಂದು ಮೂಲಗಳು ಪಬ್ಲಿಕ್‌ ಟಿವಿಗೆ ತಿಳಿಸಿವೆ.

    ಲ್ಯಾಬ್‌ ಪರೀಕ್ಷೆಯಲ್ಲಿ ಬುರುಡೆಯಲ್ಲಿರುವ ಮಣ್ಣಿಗೂ ತಿಮರೋಡಿ ತೋಟದಲ್ಲಿರುವ ಮಣ್ಣಿಗೂ ಸಾಮ್ಯತೆ ಕಂಡು ಬಂದರೆ ಪ್ರಕರಣಕ್ಕೆ ಮತ್ತೊಂದು ಸ್ಫೋಟಕ ತಿರುವು ಸಿಗುವ ಸಾಧ್ಯತೆಯಿದೆ.

     

    ತಿಮರೋಡಿ ತೋಟದಿಂದ ಬುರುಡೆ ತಂದದ್ದು ಸಾಬೀತಾದರೆ ಮತ್ತೆ ಹಲವು ಪ್ರಶ್ನೆಗಳು ಏಳುತ್ತದೆ. ಈ ಬುರುಡೆ ತಿಮರೋಡಿ ತೋಟದಲ್ಲಿ ಮೊದಲೇ ಇತ್ತಾ? ಮೊದಲೇ ತೋಟದಲ್ಲಿ ಇದ್ದರೆ ಹಾಗಾದರೆ ಯಾರದ್ದೂ ಎಂಬ ಪ್ರಶ್ನೆ ಏಳುತ್ತದೆ. ಒಂದು ವೇಳೆ ಪ್ರಕರಣ ಆರಂಭಿಸಲು ಲ್ಯಾಬ್‌ ಅಥವಾ ಬೇರೆ ಯಾವುದೋ ಜಾಗದಿಂದ ಬುರುಡೆ ತಂದು ಈ ಮಣ್ಣಿನಲ್ಲಿ ಹೂತು ಬಳಿಕ ಎತ್ತಿದ್ದಾರೋ ಎಂಬ ಪ್ರಶ್ನೆಯೂ ಎದ್ದಿದೆ.

    ಎಸ್‌ಐಟಿ ತನಿಖೆ ಆರಂಭಿಸುವಾಗಲೇ ಹಲವು ಕಾನೂನು ತಜ್ಞರು ತನಿಖೆಯ ರೀತಿಯನ್ನು ಪ್ರಶ್ನಿಸಿದ್ದರು. ಎಸ್‌ಐಟಿ ಮೊದಲು ಗುಂಡಿ ತೋಡಲು ಜಾಗಗಳನ್ನು ಗುರುತು ಮಾಡುವ ಮೊದಲು ಬುರುಡೆ ಸಿಕ್ಕಿದ ಜಾಗಕ್ಕೆ ಗುರುತು ಹಾಕಿ ಶೋಧ ಆರಂಭಿಸಬೇಕಿತ್ತು. ಬುರುಡೆ ಸಿಕ್ಕಿದರೆ ಅದರ ಮೂಳೆಗಳು ಸಿಗುತ್ತದೆ. ಮೊದಲು ಈ ಜಾಗದಿಂದ ಆರಂಭಿಸದೇ ಬೇರೆ ಜಾಗಗಳನ್ನು ಗುರುತು ಮಾಡಿದ್ದು ಎಷ್ಟು ಸರಿ ಎಂದು ಪ್ರಶ್ನೆ ಎತ್ತಿದ್ದರು.

  • ಜಯಂತ್ ಗಾಂಜಾ ಮಾರಾಟ ಮಾಡ್ತಿದ್ರು: ಮಹಿಳೆ ಆರೋಪ

    ಜಯಂತ್ ಗಾಂಜಾ ಮಾರಾಟ ಮಾಡ್ತಿದ್ರು: ಮಹಿಳೆ ಆರೋಪ

    ಬೆಂಗಳೂರು: ಧರ್ಮಸ್ಥಳ ಬುರುಡೆ ಪ್ರಕರಣದ ಎರಡನೇ ದೂರುದಾರ ಜಯಂತ್ (Jayanth) ಗಾಂಜಾ (Ganja) ಮಾರಾಟ ಮಾಡುತ್ತಿದ್ದರು ಎಂದು ಸ್ಥಳೀಯ ನಿವಾಸಿ ಮಹಾಲಕ್ಷ್ಮಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.

    ಬೆಂಗಳೂರಿನಲ್ಲಿ ಜಯಂತ್ ಮನೆಯ ಬಳಿಯ ನಿವಾಸಿಯಾಗಿರುವ ಮಹಾಲಕ್ಷ್ಮಿ ಜಯಂತ್ ವಿರುದ್ಧ ಗಾಂಜಾ ಮಾರಾಟದ ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತು ‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ಚಿನ್ನಯ್ಯ ಅನ್ನೋರು ಜಯಂತ್ ಮನೆಯಲ್ಲಿ ಇದ್ದದ್ದು ನಿಜ. ನಾನು ಕೂಡ ಅದೇ ಬಿಲ್ಡಿಂಗ್‌ನಲ್ಲಿ ಬಾಡಿಗೆಗೆ ಇದ್ದೆ. ಈ ವೇಳೆ ಜಯಂತ್ ಮನೆಗೆ ಸುಮಾರು ಜನ ಬಂದು ಹೋಗುತ್ತಿದ್ದರು. ಕಳೆದ ಒಂದೂವರೆ ವರ್ಷದಿಂದ ಕೂಡ ಚಿನ್ನಯ್ಯ ಇಲ್ಲಿಗೆ ಬಂದು ಹೋಗುತ್ತಿದ್ದರು ಎಂದರು. ಇದನ್ನೂ ಓದಿ: ಸೂಕ್ತ ಸಂದೇಶ ನೀಡಲು ಭಾರತ ಸಿದ್ಧ – ಚೀನಾದಲ್ಲಿ ಪುಟಿನ್ ಭೇಟಿಗೂ ಮುನ್ನ ಪ್ರಧಾನಿ ಮೋದಿಗೆ ಜೆಲೆನ್ಸ್ಕಿ ಕರೆ

    ಚಿನ್ನಯ್ಯನನ್ನ ಟಿವಿಯಲ್ಲಿ ನೋಡಿದಾಗ ನನಗೆ ಗೊತ್ತಾಯ್ತು. ಚಿನ್ನಯ್ಯ ಇಲ್ಲಿ ಬಂದು ಹೋಗುತ್ತಿದ್ದನ್ನು ನಾನೇ ನೋಡಿದ್ದೇನೆ. ಅವರ ಮನೆಯಲ್ಲಿ ಗಾಂಜಾ ಮಾರಾಟ ಮಾಡುತ್ತಾರೆ ಅಂತಾ ಅನುಮಾನ ಇತ್ತು.ಈ ಬಗ್ಗೆ ಪೊಲೀಸರಿಗೆ ಮಾಹಿತಿ ಕೊಟ್ಟಿದ್ದೆ. ಇದೇ ವಿಚಾರ ಸಂಬಂಧ ಗಲಾಟೆ ಆಗಿ ನಾನು ಬೇರೆ ಕಡೆಗೆ ಶಿಫ್ಟ್ ಆದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ದಸರಾ ದಂಗಲ್ – ಮೌನ ಮುರಿದ ರಾಜವಂಶಸ್ಥೆ ಪ್ರಮೋದಾ ದೇವಿ

    ಚಿನ್ನಯ್ಯ ತಂದಿದ್ದ ಬುರುಡೆ ಪ್ರಕರಣಕ್ಕೆ ಈಗ ಬೆಂಗಳೂರು ನಂಟು ತಳುಕುಹಾಕಿಕೊಂಡಿದೆ. ಧರ್ಮಸ್ಥಳ ವಿರುದ್ಧ ಮಹಾ ಷಡ್ಯಂತ್ರಕ್ಕೆ ಬೆಂಗಳೂರಿನಲ್ಲೇ ಸ್ಕೆಚ್ ನಡೆದಿರೋದು ಬೆಳಕಿಗೆ ಬಂದಿದೆ. ಎಸ್‌ಐಟಿ ವಿಚಾರಣೆ ವೇಳೆ ಚಿನ್ನಯ್ಯ ಜಯಂತ್ ಹೆಸರು ಬಾಯ್ಬಿಟ್ಟಿದ್ದಾನೆ. ಚಿನ್ನಯ್ಯನ ಹೇಳಿಕೆ ಆಧರಿಸಿ ಬೆಂಗಳೂರಿನ ಮಲ್ಲಸಂದ್ರದಲ್ಲಿರೋ ಜಯಂತ್ ಮನೆ ಮೇಲೆ ದಾಳಿ ನಡೆಸಿ, ಮಹಜರು ನಡೆಸಿದ್ದಾರೆ. ಇದನ್ನೂ ಓದಿ: ರಾಜ್ಯ ಪೊಲೀಸ್‌ ಮಹಾ ನಿರ್ದೇಶಕರಾಗಿ ಎಂ.ಎ ಸಲೀಂ ನೇಮಕ

    ಜಯಂತ್ ಕಳೆದ 7-8 ವರ್ಷದಿಂದ ಇಬ್ಬರು ಮಕ್ಕಳು, ಹೆಂಡತಿಯೊಂದಿಗೆ ಮಲ್ಲಸಂದ್ರದಲ್ಲಿ ವಾಸವಾಗಿದ್ದಾರೆ. ಐದಾರು ವರ್ಷಗಳಿಂದ ಮಲ್ಲಸಂದ್ರ ರಸ್ತೆಯಲ್ಲಿ ನಿಸರ್ಗ ನಿಧಿ ಕೊಬ್ಬರಿ ಎಣ್ಣೆ ಅಂಗಡಿ ನಡೆಸುತ್ತಿದ್ದಾರಂತೆ. ಇನ್ನು ಸ್ಥಳೀಯರು ಹೇಳುವ ಪ್ರಕಾರ, ಸ್ಥಳೀಯ ವಾಟ್ಸಪ್ ಗ್ರೂಪ್‌ಗಳಲ್ಲಿ ಧರ್ಮಸ್ಥಳ ವಿರುದ್ಧ ಕೆಲ ಪೋಸ್ಟ್ ಮಾಡ್ತಿದ್ರು. ಪ್ರಶ್ನೆ ಮಾಡಿದ್ದಕ್ಕೆ ನಂತರ ಪೋಸ್ಟ್ ಹಾಕೋದನ್ನು ಜಯಂತ್ ಬಿಟ್ಟಿದ್ರು. ಆಮೇಲೆ ಸ್ವಲ್ಪ ದಿನ ಜಯಂತ್ ಅವರು ನಮಗೆ ಕಾಣಲಿಲ್ಲ. ಬುರುಡೆ ಕೇಸಲ್ಲಿ ಜಯಂತ್ ಹೆಸರು ಕೇಳಿ ನಮಗೆ ಆಶ್ಚರ್ಯವಾಗಿದೆ ಅಂತಿದ್ದಾರೆ. ಇದನ್ನೂ ಓದಿ: ಬುರುಡೆ ಕೇಸ್‌ಗೆ ಬೆಂಗಳೂರು ಲಿಂಕ್ – ಚಿನ್ನಯ್ಯ ನನ್ನ ಮನೆಯಲ್ಲಿದ್ದ, ತಲೆಬುರುಡೆ ತಂದಿದ್ದ; ʻಪಬ್ಲಿಕ್ ಟಿವಿʼಗೆ ಜಯಂತ್ ಸ್ಫೋಟಕ ಹೇಳಿಕೆ

  • ಬುರುಡೆ ಕೇಸ್‌ಗೆ ಬೆಂಗಳೂರು ಲಿಂಕ್ – ಚಿನ್ನಯ್ಯ ನನ್ನ ಮನೆಯಲ್ಲಿದ್ದ, ತಲೆಬುರುಡೆ ತಂದಿದ್ದ; ʻಪಬ್ಲಿಕ್ ಟಿವಿʼಗೆ ಜಯಂತ್ ಸ್ಫೋಟಕ ಹೇಳಿಕೆ

    ಬುರುಡೆ ಕೇಸ್‌ಗೆ ಬೆಂಗಳೂರು ಲಿಂಕ್ – ಚಿನ್ನಯ್ಯ ನನ್ನ ಮನೆಯಲ್ಲಿದ್ದ, ತಲೆಬುರುಡೆ ತಂದಿದ್ದ; ʻಪಬ್ಲಿಕ್ ಟಿವಿʼಗೆ ಜಯಂತ್ ಸ್ಫೋಟಕ ಹೇಳಿಕೆ

    – 6 ತಿಂಗಳಿಂದ ಷಡ್ಯಂತ್ರ ನಡೆದಿತ್ತು ಅನ್ನೋದೆಲ್ಲ ಸುಳ್ಳು
    – 7-8 ವರ್ಷದಿಂದ ಮಲ್ಲಸಂದ್ರದಲ್ಲಿ ವಾಸವಿರುವ ಜಯಂತ್

    ಬೆಂಗಳೂರು: ಚಿನ್ನಯ್ಯ ತಂದಿದ್ದ ಬುರುಡೆ ಪ್ರಕರಣಕ್ಕೆ ಈಗ ಬೆಂಗಳೂರು (Bengaluru) ನಂಟು ತಳುಕುಹಾಕಿಕೊಂಡಿದೆ. ಧರ್ಮಸ್ಥಳ ವಿರುದ್ಧ ಮಹಾ ಷಡ್ಯಂತ್ರಕ್ಕೆ ಬೆಂಗಳೂರಿನಲ್ಲೇ ಸ್ಕೆಚ್ ನಡೆದಿರೋದು ಬೆಳಕಿಗೆ ಬಂದಿದೆ. ಎಸ್‌ಐಟಿ ವಿಚಾರಣೆ (SIT Investigation) ವೇಳೆ ಚಿನ್ನಯ್ಯ ಜಯಂತ್ ಹೆಸರು ಬಾಯ್ಬಿಟ್ಟಿದ್ದಾನೆ. ಚಿನ್ನಯ್ಯನ (Chinnayya) ಹೇಳಿಕೆ ಆಧರಿಸಿ ಬೆಂಗಳೂರಿನ ಮಲ್ಲಸಂದ್ರದಲ್ಲಿರೋ ಜಯಂತ್‌ ಮನೆ ಮೇಲೆ ದಾಳಿ ನಡೆಸಿ, ಮಹಜರು ನಡೆಸಿದ್ದಾರೆ.

    ಈ ನಡುವೆ ʻಪಬ್ಲಿಕ್‌ ಟಿವಿʼ (Public TV) ಜೊತೆಗೆ ಮಾತನಾಡಿರುವ ಮಹೇಶ್‌ ಶೆಟ್ಟಿ ತಿಮರೋಡಿ (Mahesh Shetty Thimarody) ಆಪ್ತ ಹಾಗೂ ದೂರುದಾರ ಜಯಂತ್‌, ಚಿನ್ನಯ್ಯ ಬಗ್ಗೆ ಸ್ಫೋಟಕ ಹೇಳಿಕೆ ಕೊಟ್ಟಿದ್ದಾರೆ. ನನ್ನ ಬೆಂಗಳೂರಿನ ಮನೆಗೆ ಚಿನ್ನಯ್ಯ ಬಂದಿದ್ದು ನಿಜ. ನಾನು ಅವನಿಗೆ ಆಶ್ರಯ ನೀಡಿದ್ದೆ. ಅವನೇ ಬುರುಡೆ ತಂದಿದ್ದ ಎಂದು ಹೇಳಿದ್ದಾರೆ. ಅಷ್ಟೆ ಅಲ್ಲ ತಪ್ಪಿದ್ದರೆ ನನಗೆ ಶಿಕ್ಷೆ ಆಗಲಿ ಎಂದು ಒತ್ತಾಯಿಸಿದ್ದಾರೆ.

    3ನೇ ಬಾರಿ ಬಂದಾಗ ಬುರುಡೆ ತಂದಿದ್ದ
    ಚಿನ್ನಯ್ಯನನ್ನ ನನ್ನ ಮನೆಯಲ್ಲೇ ಇರಿಸಿ ಊಟ ಹಾಕಿದ್ದೇನೆ. ಕಳೆದ ಏಪ್ರಿಲ್‌ನಲ್ಲಿ ಸ್ಯಾಟಲೈಟ್‌ ಬಸ್‌ ನಿಲ್ದಾಣಕ್ಕೆ ಬಂದಾಗ ಮನೆಗೆ ಕರೆದುಕೊಂಡು ಹೋಗಿದ್ದೆ. 2 ದಿನ ಊಟ ಹಾಕಿದ್ದೆ. ಅದಕ್ಕೆ ಮನೆಗೆ ಬಂದು ಮಹಜರು ಮಾಡಿದ್ದಾರೆ. ಏಸ್‌ಐಟಿಯವರು ಏನು ಬೇಕಾದ್ರೂ ಕೇಳಲಿ, ವಿಚಾರಣೆಗೆ ಸಹಕರಿಸಲು ಸಿದ್ಧರಿದ್ದೇವೆ ಎಂದಿದ್ದಾರೆ.

    ಮೊದಲು 2 ಬಾರಿ ಬಂದಾಗಲೂ ಬರಿಗೈನಲ್ಲಿ ಬಂದಿದ್ದ. 3ನೇ ಬಾರಿಗೆ ಬಂದಾಗ ಕಟ್ಟುವೊಂದನ್ನ (ಬ್ಯಾಗ್‌) ತಂದಿದ್ದ. ಅದರಲ್ಲಿ ತಲೆಬುರುಡೆ ಇತ್ತು, ಅದನ್ನ ಫೋಟೋ ತೆಗೆದು ಕಳಿಸಿದ್ದ. ನಂತರ ಸುಪ್ರೀಂ ಕೋರ್ಟ್‌ಗೆ ಹೋಗಲು ಸಹಾಯ ಮಾಡಿದ್ದೆ, ಅವನೊಂದಿಗೆ ನಾನೂ ಹೋಗಿದ್ದೆ. ಆಗ ನಾನು ಹಾಗೂ ಅವನು ಬುರುಡೆ ತೆಗೆದುಕೊಂಡು ಹೋಗಿದ್ದೇವೆ. ಆದ್ರೆ ಯಾವುದೇ ಕಾರಣಕ್ಕೂ ನಾನು ಷಡ್ಯಂತ್ರದಲ್ಲಿ ಭಾಗಿಯಾಗಿಲ್ಲ. ಬೇಕಿದ್ದರೆ ನನ್ನ ಹೆಂಡತಿ ಮಕ್ಕಳನ್ನು ಕೇಳಲಿ. ಸತ್ಯಕ್ಕಾಹಿ ನಾನು ಈ ಸಹಾಯ ಮಾಡಿದ್ದೇನೆ. ಷಡ್ಯಂತ್ರದಲ್ಲಿ ಮಾಡಿದ್ದೇವೆ, 6 ತಿಂಗಳಿಂದ ಪ್ಲ್ಯಾನ್‌ ನಡೆದಿತ್ತು ಅನ್ನೋದೆಲ್ಲ ಸುಳ್ಳು. ಇದು ಇಷ್ಟು ದೊಡ್ಡದಾಗುತ್ತೆ ಅಂದುಕೊಂಡಿರಲಿಲ್ಲ. ನಾನು ಸತ್ಯಕ್ಕಾಗಿ ಮಾಡಿದ ಕೆಲಸ. ಎಸ್‌ಐಟಿ ಯಾವುದೇ ವಿಚಾರಣೆ ನಾನು ಸಿದ್ಧ, ತಪ್ಪು ಮಾಡಿದ್ದರೆ, ಯಾವುದೇ ಶಿಕ್ಷೆಗೂ ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ.

    7-8 ವರ್ಷದಿಂದ ಮಲ್ಲಸಂದ್ರದಲ್ಲಿ ಜಯಂತ್ ವಾಸ
    ಜಯಂತ್ ಕಳೆದ 7-8 ವರ್ಷದಿಂದ ಇಬ್ಬರು ಮಕ್ಕಳು, ಹೆಂಡತಿಯೊಂದಿಗೆ ಮಲ್ಲಸಂದ್ರದಲ್ಲಿ ವಾಸವಾಗಿದ್ದಾರೆ. ಐದಾರು ವರ್ಷಗಳಿಂದ ಮಲ್ಲಸಂದ್ರ ರಸ್ತೆಯಲ್ಲಿ ನಿಸರ್ಗ ನಿಧಿ ಕೊಬ್ಬರಿ ಎಣ್ಣೆ ಅಂಗಡಿ ನಡೆಸುತ್ತಿದ್ದಾರಂತೆ. ಇನ್ನು ಸ್ಥಳೀಯರು ಹೇಳುವ ಪ್ರಕಾರ, ಸ್ಥಳೀಯ ವಾಟ್ಸಪ್ ಗ್ರೂಪ್‌ಗಳಲ್ಲಿ ಧರ್ಮಸ್ಥಳ ವಿರುದ್ಧ ಕೆಲ ಪೋಸ್ಟ್ ಮಾಡ್ತಿದ್ರು. ಪ್ರಶ್ನೆ ಮಾಡಿದ್ದಕ್ಕೆ ನಂತರ ಪೋಸ್ಟ್‌ ಹಾಕೋದನ್ನು ಜಯಂತ್ ಬಿಟ್ಟಿದ್ರು. ಆಮೇಲೆ ಸ್ವಲ್ಪ ದಿನ ಜಯಂತ್ ಅವರು ನಮಗೆ ಕಾಣಲಿಲ್ಲ. ಬುರುಡೆ ಕೇಸಲ್ಲಿ ಜಯಂತ್ ಹೆಸರು ಕೇಳಿ ನಮಗೆ ಆಶ್ಚರ್ಯವಾಗಿದೆ ಅಂತಿದ್ದಾರೆ.

    ಎಸ್‌ಐಟಿ ನೂರಾರು ಪ್ರಶ್ನೆ; ಚಿನ್ನಯ್ಯ ತಬ್ಬಿಬ್ಬು
    ಬುರುಡೆ ಪ್ರಕರಣದ ಷಡ್ಯಂತ್ರ ಭೇದಿಸಲು ಸಂಬಂಧ ಎಸ್‌ಐಟಿ ಟೀಂ ಚಿನ್ನಯ್ಯನಿಂದ ಚಿನ್ನಯ್ಯನ ಬಾಯಿಂದ ಸತ್ಯ ಕಕ್ಕಿಸುತ್ತಿದ್ದಾರೆ. ಎಸ್‌ಐಟಿ ಪ್ರಶ್ನೆಗಳಿಂದ ಚಿನ್ನಯ್ಯ ದಂಗಾಗಿ ಹೋಗಿದ್ದಾನೆ. ಪ್ರಶ್ನೋತ್ತರ ಹೇಗಿತ್ತು ಅಂತ ನೋಡೋದಾದ್ರೆ..

    ಎಸ್‌ಐಟಿ – ಚಿನ್ನಯ್ಯ ಪ್ರಶ್ನೋತ್ತರ ಹೀಗಿತ್ತು….
    * ಎಸ್‌ಐಟಿ: ಧರ್ಮಸ್ಥಳ ಕ್ಷೇತ್ರದಲ್ಲಿ ಎಷ್ಟು ವರ್ಷ ಕೆಲಸ ಮಾಡಿದ್ರಿ..?
    ಚಿನ್ನಯ್ಯ: ಸುಮಾರು ಇಪ್ಪತ್ತು ವರ್ಷ
    * ಎಸ್‌ಐಟಿ: ಮೃತ ದೇಹಗಳನ್ನು ಹೂತಿದ್ದು ಹೌದಾ?
    ಚಿನ್ನಯ್ಯ: ನಾನು ಬಹಳ ಮೃತ ದೇಹಗಳನ್ನು ಹೂತ್ತಿದ್ದೇನೆ
    * ಎಸ್‌ಐಟಿ: ಎಷ್ಟು ಎಂಬ ಲೆಕ್ಕ ಇದೆಯಾ?
    ಚಿನ್ನಯ್ಯ: ಸರಿಯಾದ ಲೆಕ್ಕ ಇಲ್ಲ
    * ಎಸ್‌ಐಟಿ: ನೂರಾರು.. ಮುನ್ನೂರು ಎಂದು ಹೇಗೆ ಹೇಳಿದೆ..?
    ಚಿನ್ನಯ್ಯ: ಒಂದು ಅಂದಾಜಿನಲ್ಲಿ ಲೆಕ್ಕ ಹೇಳಿದೆ
    * ಎಸ್‌ಐಟಿ: ಅಂತ್ಯಕ್ರಿಯೆ ಸ್ಥಳಕ್ಕೆ ವೈದ್ಯರು, ಪೊಲೀಸರು ಬರುತ್ತಿದ್ದರಾ..?
    ಚಿನ್ನಯ್ಯ: ವೈದ್ಯರು, ಪೊಲೀಸರು, ಪಂಚಾಯತ್, ಗ್ರಾಮಸ್ಥರು ಬರುತ್ತಿದ್ದರು
    * ಎಸ್‌ಐಟಿ: ನೂರಾರು ಅತ್ಯಾಚಾರ ಎಂಬ ದೂರು ಇದ್ಯಲ್ಲ
    ಚಿನ್ನಯ್ಯ: ಅದೆಲ್ಲ ಗೊತ್ತಿಲ್ಲ ಸ್ವಾಮಿ, ನನಗೆ ಓದು-ಬರಹ ಬರಲ್ಲ
    * ಎಸ್‌ಐಟಿ: ಕ್ಷೇತ್ರದ ವಿರುದ್ಧ ಷಡ್ಯಂತ್ರ ನಡೆದಿದೆ ನಿನಗೆ ಗೊತ್ತಾ?
    ಚಿನ್ನಯ್ಯ: ನನಗೆ ಪಿತೂರಿಗಳ ಬಗ್ಗೆ ನನಗೆ ಮಾಹಿತಿ ಇಲ್ಲ, ನಾನು ಯಾರ ವಿರುದ್ಧವಲ್ಲ.. ಯಾರ ಪರವೂ ಅಲ್ಲ
    * ಎಸ್‌ಐಟಿ: ನೀನು ಪ್ರಕರಣದಲ್ಲಿ ಆರೋಪಿ ಎಂಬ ಮಾಹಿತಿ ಇದ್ಯಾ..?
    ಚಿನ್ನಯ್ಯ: ನನಗೆ ತಿಳಿದಿರುವುದನ್ನು ಹೇಳಿದ್ದೇನೆ ದಯವಿಟ್ಟು ಬಿಟ್ಟು ಬಿಡಿ

    ಇನ್ನು ಬುರುಡೆ ಗ್ಯಾಂಗ್ ನಂಟಿನ ಬಗ್ಗೆಯೂ ಎಸ್‌ಐಟಿ ಪ್ರಶ್ನಾವಳಿ ಇಟ್ಟಿದ್ದು, ತನಿಖಾಧಿಕಾರಿಗಳ ಮುಂದೆ ಸತ್ಯ ಕಕ್ಕಿದ್ದಾನೆ.
    `ಬುರುಡೆ’ ಚಿನ್ನಯ್ಯಗೆ ಗ್ರಿಲ್

    * ಎಸ್‌ಐಟಿ: ಮಹೇಶ್ ತಿಮರೋಡಿ ಮಟ್ಟಣ್ಣ ಗೊತ್ತಾ..?
    ಚಿನ್ನಯ್ಯ: ಗೊತ್ತು ಸರ್..
    * ಎಸ್‌ಐಟಿ: ಯಾವಾಗಿನಿಂದ ಪರಿಚಯ ಇದೆ..?
    ಚಿನ್ನಯ್ಯ: ಒಂದೂವರೆ-ಎರಡು ವರ್ಷದಿಂದ ಗೊತ್ತು
    * ಎಸ್‌ಐಟಿ: ನಿನಗೆ ಹಣ ಕೊಟ್ಟು ಕರೆಸಿದ್ದಾರಾ?
    ಚಿನ್ನಯ್ಯ: ನಾನು ಆಗಾಗ ಖರ್ಚಿಗೆ ಹಣ ತೆಗೆದುಕೊಳ್ಳುತ್ತಿದ್ದೆ, ಲೆಕ್ಕ ಇಲ್ಲ
    * ಎಸ್‌ಐಟಿ: ಎಲ್ಲೆಲ್ಲಿ ಭೇಟಿಯಾಗಿದ್ದೀರಿ..?
    ಚಿನ್ನಯ್ಯ: ಉಜಿರೆ, ಮಂಗಳೂರು ಕೇರಳ, ತಮಿಳುನಾಡು
    * ಎಸ್‌ಐಟಿ: ತಿಮರೋಡಿ ಮನೆಯಲ್ಲಿ ಏನೆಲ್ಲ ಚರ್ಚೆ ನಡೆಯುತ್ತಿತ್ತು..?
    ಚಿನ್ನಯ್ಯ: ಕ್ಷೇತ್ರದಲ್ಲಿ ಏನೆಲ್ಲ ಕೆಲಸ ಮಾಡುತ್ತಿದ್ದೆ ಎಂಬುದನ್ನು ಹೇಳುತ್ತಿದ್ದೆ, ಬಹಳ ಜನ ಬಂದು ವಿಡಿಯೋ ಮಾಡುತ್ತಿದ್ದರು
    * ಎಸ್‌ಐಟಿ: ಹೀಗೆ ಹೇಳಬೇಕು ಎಂಬ ತಾಕೀತು ಏನಾದರೂ ಇತ್ತಾ..?
    ಚಿನ್ನಯ್ಯ: ಕೆಲ ವಿಚಾರವನ್ನು ಅಲ್ಲಿ ಇದ್ದವರು ಹೇಳಿಕೊಡುತ್ತಿದ್ದರು, ನಾನು ಅವರು ಹೇಳಿದಂತೆ ಹೇಳುತ್ತಿದ್ದೆ.

    500 ಪುಟಗಳ ವಿವರ ನೀಡಿದ ಮಟ್ಟಣ್ಣನವರ್
    ಇತ್ತ ಸುಳ್ಳುಕೋರ ಸಮೀರ್, ದಾಖಲೆ ಹಿಡಿದುಕೊಂಡು ಬೆಳ್ತಂಗಡಿ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿದ್ದಾನೆ. ಇತ್ತ ಗಿರೀಶ್ ಮಟ್ಟಣ್ಣನವರ್, ಎಸ್‌ಐಟಿಗೆ 500 ಪುಟಗಳ ವಿವರವಾದ ಮಾಹಿತಿ ಒಳಗೊಂಡ ದಾಖಲೆ ನೀಡಿದ್ದಾರೆ. ಧರ್ಮಸ್ಥಳದಲ್ಲಿ ಕೆಲವು ಅಸಹಜ ಸವುಗಳ ಸರಿಯಾದ ತನಿಖೆ ನಡೆದಿಲ್ಲ. ಆ ಸಾವುಗಳ ತನಿಖೆ ನಡೆಸಿ ಎಂದು ಗಿರೀಶ್ ಮಟ್ಟಣ್ಣ ಎಸ್‌ಐಟಿಗೆ ಮನವಿ ಮಾಡಿದ್ದಾರೆ.

  • ಧರ್ಮಸ್ಥಳ ಬುರುಡೆ ಕೇಸ್‌ಗೆ ಬೆಂಗಳೂರಿನ ನಂಟು – ತಿಮರೋಡಿ ಆಪ್ತ ಜಯಂತ್ ಮನೆ ಜಾಲಾಡಿದ SIT

    ಧರ್ಮಸ್ಥಳ ಬುರುಡೆ ಕೇಸ್‌ಗೆ ಬೆಂಗಳೂರಿನ ನಂಟು – ತಿಮರೋಡಿ ಆಪ್ತ ಜಯಂತ್ ಮನೆ ಜಾಲಾಡಿದ SIT

    – ಜಯಂತ್ ಮನೆಯಲ್ಲೇ 8 ದಿನಗಳ ಕಾಲ ಹೆಣೆಯಲಾಗಿತ್ತಾ ಷಡ್ಯಂತ್ರದ ಬಲೆ?

    ಮಂಗಳೂರು: ಬುರುಡೆ ಪ್ರಕರಣದಲ್ಲಿ (Dharmasthala Case) ದಿನಕ್ಕೊಂದು ಬೆಳವಣಿಗೆಗಳು ನಡೆಯುತ್ತಿದ್ದು, ಈಗ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಬುರುಡೆ ಪ್ರಕರಣದಲ್ಲಿ ರಾಜಧಾನಿ ಬೆಂಗಳೂರಿನ (Bengaluru) ನಂಟು ಬೆಸೆದುಕೊಂಡಿದೆ. ಧರ್ಮಸ್ಥಳ ಷಡ್ಯಂತ್ರಕ್ಕೆ ಬೆಂಗಳೂರಿನಲ್ಲೇ ಸ್ಕೆಚ್ ನಡೆದಿರೋದು ಬೆಳಕಿಗೆ ಬಂದಿದೆ.

    ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಆರೋಪ ಪ್ರಕರಣ ಸಂಬಂಧ ಎಸ್‌ಐಟಿ ಅಧಿಕಾರಿಗಳು (SIT Officers) ಮಾಸ್ಕ್ ಮ್ಯಾನ್ ಚಿನ್ನಯ್ಯನನ್ನು ಬೆಳ್ತಂಗಡಿಯಿಂದ ಬೆಂಗಳೂರಿಗೆ ಕರೆತಂದಿದ್ದಾರೆ. ಬೆಳ್ಳಂಬೆಳಗ್ಗೆ ಚಿನ್ನಯ್ಯನನ್ನು ಮಹಜರು ಟ್ರಾವೆಲ್‌ಗೆ ಎಸ್‌ಐಟಿ ಅಧಿಕಾರಿಗಳು ಕರೆದುಕೊಂಡು ಬಂದಿದ್ದಾರೆ. ಚಿನ್ನಯ್ಯ ಹೇಳಿಕೆಯಲ್ಲಿ ತಿಳಿಸಿರುವ ಕೆಲವು ಸ್ಥಳಗಳ ಮಹಜರಿಗೆ ಕರೆತರಲಾಗಿದೆ. ಆದರೆ ಆರಂಭದಲ್ಲಿ ತಮಿಳುನಾಡು, ಮಂಡ್ಯ ಕಡೆ ಕರೆದುಕೊಂಡು ಹೋಗುವ ಸಾಧ್ಯತೆ ಇದೆ ಎನ್ನಲಾಗಿತ್ತು. ಆದರೀಗ ಪ್ರಕರಣದಲ್ಲಿ ಅತಿದೊಡ್ಡ ರಹಸ್ಯ ರಿವೀಲ್ ಆಗಿದೆ. ಇದನ್ನೂ ಓದಿ: ಧರ್ಮಸ್ಥಳ ಕೇಸ್‌ಲ್ಲಿ SIT ತನಿಖೆಗೆ ಸಮಯ ನಿಗದಿ ಮಾಡಿಲ್ಲ: ಪರಮೇಶ್ವರ್

    ಬೆಂಗಳೂರು ಲಿಂಕ್‌
    ಧರ್ಮಸ್ಥಳ ಬರುಡೆ ಪ್ರಕರಣಕ್ಕೆ ಬೆಂಗಳೂರು ಲಿಂಕ್ ಇರೋದು ಬೆಳಕಿಗೆ ಬಂದಿದೆ. ಧರ್ಮಸ್ಥಳದ ಷಡ್ಯಂತ್ರದ ಸ್ಕೆಚ್ ಬೆಂಗಳೂರಿನಲ್ಲೇ ನಡಿದಿದ್ದು, ತಿಮರೋಡಿ ಆಪ್ತ ಜಯಂತ್ (Jayanth) ಬುರುಡೆ ಷಡ್ಯಂತ್ರದ ಸೂತ್ರಧಾರಿಯಾ ಅನ್ನೋ ಪ್ರಶ್ನೆ ಉದ್ಭವಿಸಿದೆ. ತಿಮರೋಡಿ ಆಪ್ತ ಜಯಂತ್, ಚಿನ್ನಯ್ಯನಿಗೆ ತಲೆಬುರುಡೆ ಕೊಟ್ಟಿದ್ನಾ ಅನ್ನೋ ಅನುಮಾನ ಮೂಡಿದ್ದು, ವಿಚಾರಣೆ ವೇಳೆ ಚಿನ್ನಯ್ಯ ಜಯಂತ್ ಹೆಸರು ಬಾಯ್ಬಿಟ್ಟಿದ್ದಾನೆ. ಷಡ್ಯಂತ್ರದ ಪ್ರಮುಖ ಪಾತ್ರಧಾರಿಯೇ ಜಯಂತ್ ಎನ್ನಲಾಗ್ತಿದ್ದು, ಚಿನ್ನಯ್ಯನ ಹೇಳಿಕೆ ಆಧಾರದ ಮೇಲೆ ಬೆಂಗಳೂರಿನ ಮಲ್ಲಸಂದ್ರದಲ್ಲಿರುವ ಮನೆ ಮೇಲೆ ಎಸ್‌ಐಟಿ ರೇಡ್ ಮಾಡಿದೆ. ಇದನ್ನೂ ಓದಿ: ಧರ್ಮಸ್ಥಳ ಕೇಸ್; ಎಸ್‌ಐಟಿಗೆ 500 ಪುಟಗಳ ದಾಖಲೆ ನೀಡಿದ ಗಿರೀಶ್ ಮಟ್ಟಣ್ಣನವರ್

    ಚಿನ್ನಯ್ಯ ಸಮ್ಮುಖದಲ್ಲಿ ಮಲ್ಲಸಂದ್ರದಲ್ಲಿರುವ ಜಯಂತ್ ಮನೆಯಲ್ಲಿ ಮಹಜರ್ ನಡೆದಿದ್ದು, ಎಸ್‌ಐಟಿ ಇಂಚಿಂಚೂ ಶೋಧ ನಡೆಸಿದೆ. ಬಾಡಿಗೆ ಮನೆ ಹೊಂದಿರುವ ಜಯಂತ್, ಪಿತೂರಿ ಸಾಧಕರ ಕೂಟದ ಸಭೆ ನಡೆಸಿದ್ದರು ಅನ್ನೋ ಅನುಮಾನ ಇದೆ. ಇಲ್ಲೇ ಬುರುಡೆ ಗ್ಯಾಂಗ್ ಧರ್ಮಸ್ಥಳ ವಿರುದ್ಧ ಷಡ್ಯಂತ್ರದ ಮಸಲತ್ತು ಹೆಣೆಯಲಾಗಿತ್ತಾ ಅನ್ನೋ ಶಂಕೆ ಇದ್ದು, ಮಸಲತ್ತಿನ ಸಭೆಯಲ್ಲಿ ಚಿನ್ನಯ್ಯ ಭಾಗಿಯಾಗಿದ್ದ ಅನ್ನೋ ಆಧಾರದಲ್ಲಿ ಸಾಕ್ಷಿಗಾಗಿ ಎಸ್‌ಐಟಿ ತಲಾಶ್ ನಡೆಸಿದೆ. ಕ್ರೈಂ ಸೀನ್ ಮರು ಸೃಷ್ಟಿಸಿ ಮನೆಯ ಮುಂಬಾಗಿಲಿನಿಂದಲೇ ಎಸ್‌ಐಟಿ ಮಹಜರು ನಡೆಸಿದೆ. ಇದನ್ನೂ ಓದಿ: SITಯಿಂದ ತಿಮರೋಡಿ, ಚಿನ್ನಯ್ಯ ವಿಚಾರಣೆ – ಸಮೀರ್ ಆದಾಯ ಮೂಲ ಕೆದಕಿದ ಖಾಕಿ, ಇನ್ನಷ್ಟು ರಹಸ್ಯ ಬಯಲು!

    8 ದಿನಗಳ ಕಾಲ ನಡೆದಿತ್ತಾ ಮಹಾ ಪ್ಲ್ಯಾನ್‌
    ಮಂಗಳೂರಿಗೆ ಭೇಟಿ ಕೊಡುವ ಮುನ್ನ ಧರ್ಮಸ್ಥಳ ವಿರುದ್ಧ ಷಡ್ಯಂತ್ರ ಹೆಣೆಯಲಾಗಿದೆ ಎನ್ನುವ ಅನುಮಾನ ಇದೆ. ಜಯಂತ್ ಮನೆಯಲ್ಲಿಯೇ ಕುಳಿತು ನಿರಂತರ ಪ್ಲ್ಯಾನ್ ಮಾಡಿದ್ದು, ಜಡ್ಜ್ ಮುಂದೆ ಹೇಳಿಕೆ ನೀಡಲು ಸ್ಕ್ರಿಪ್ಟ್ ನೀಡಲಾಗಿತ್ತಾ ಅನ್ನೊ ಶಂಕೆಯೂ ವ್ಯಕ್ತವಾಗಿದೆ. ಮಲ್ಲಸಂದ್ರದಲ್ಲಿರುವ ಜಯಂತ್ ಬಾಡಿಗೆ ಮನೆಯಲ್ಲಿ ಚಿನ್ನಯ್ಯ ಕಳೆದ ಏಪ್ರಿಲ್‌ನಲ್ಲಿ 8 ದಿನಗಳ ಕಾಲ ಇದ್ದ. ಇದೇ ವೇಳೆ ಬುರುಡೆ ಷಡ್ಯಂತ್ರ ಹೆಣೆಯಲಾಗಿದೆ ಎನ್ನಲಾಗ್ತಿದೆ.

    ಸುಜಾತ ಭಟ್‌ರನ್ನು ವಶಕ್ಕೆ ಪಡೆಯೋದು ಅನುಮಾನ
    ಈ ನಡುವೆ ಸುಜಾತಾ ಭಟ್‌ಗೆ ಎಸ್‌ಐಟಿಯಿಂದ ಬಿಗ್ ರಿಲೀಫ್ ಸಿಕ್ಕಿದೆ. ಸುಜಾತ ಭಟ್‌ರನ್ನು ಎಸ್‌ಐಟಿ ವಶಕ್ಕೆ ಪಡೆಯೋದು ಅನುಮಾನ ಎನ್ನಲಾಗಿದೆ. ವಯಸ್ಸು ಹಾಗೂ ಅನಾರೋಗ್ಯದ ಕಾರಣ ವಶಕ್ಕೆ ಪಡೆಯದಿರಲು ತೀರ್ಮಾನಿಸಲಾಗಿದೆ. ಸುಜಾತ ಭಟ್ ಮೇಲೆ ಇರುವುದು ತಪ್ಪು ಮಾಹಿತಿ ನೀಡಿದ ಆರೋಪ. ತಪ್ಪು ಮಾಹಿತಿಯಲ್ಲೂ ತಮ್ಮದೇ ಕಥೆ ಹೇಳಿಕೊಂಡಿದ್ದಾರೆಯೇ ಹೊರತು ನೇರವಾಗಿ, ನಿರ್ದಿಷ್ಟವಾಗಿ ಯಾರ ಮೇಲೂ ಆರೋಪ ಮಾಡುತ್ತಿಲ್ಲ. ತಮ್ಮ ಸಮಸ್ಯೆಯನ್ನು ಯಾರು ಕೇಳಿಸಿಕೊಳ್ಳದಿದ್ದಾಗ ಮಗಳ ವಿಚಾರ ಪ್ರಸ್ತಾಪ ಮಾಡಿದ್ದಾರೆ. ಆಗ ಸುಜಾತ ಭಟ್‌ರನ್ನ ತಮ್ಮ ಅನುಕೂಲಕ್ಕೆ ಬಳಸಿಕೊಳ್ಳಲು ಬುರುಡೆ ಗ್ಯಾಂಗ್ ಮುಂದಾಗಿದೆ. ಅಲ್ಲದೇ ವಿಚಾರಣೆ ಸಂದರ್ಭದಲ್ಲಿ ಧರ್ಮಸ್ಥಳಕ್ಕೆ ಇವರ ಕುಟುಂಬದ ಆಸ್ತಿ ಸೇರಿರುವುದು ಗೊತ್ತಾಗಿದೆ. ಅದರ ಲೆಕ್ಕದಲ್ಲಿ ಈಗ ನನಗೆ ಹಣ ಸಿಕ್ಕರೆ ನನ್ನ ಜೀವನ ನಿರ್ವಾಹಣೆಗೆ ಸಹಾಯ ಆಗುತ್ತದೆ ಎಂದು ಕಣ್ಣೀರಿಟ್ಟಿದ್ದಾರೆ. ತೀರ ಗಂಭೀರ ಸೆಕ್ಷನ್‌ಗಳ ಅಡಿಯಲ್ಲಿ ಬಂಧಿಸಬಹುದಾದ ಪ್ರಕರಣ ಅಲ್ಲ ಎಂಬ ಕಾರಣಕ್ಕೆ ಸಧ್ಯಕ್ಕೆ ವಶಕ್ಕೆ ಪಡೆಯುವ ಅಥವ ಬಂಧನ ಮಾಡದಿರಲು ಎಸ್‌ಐಟಿ ತೀರ್ಮಾನಿಸಿದೆ.

  • ರೊಮ್ಯಾಂಟಿಕ್ ಪ್ರಿ ವೆಡ್ಡಿಂಗ್ ವಿಡಿಯೋ ಹಂಚಿಕೊಂಡ ‘ಸೀತಾರಾಮ’ ನಟಿ

    ರೊಮ್ಯಾಂಟಿಕ್ ಪ್ರಿ ವೆಡ್ಡಿಂಗ್ ವಿಡಿಯೋ ಹಂಚಿಕೊಂಡ ‘ಸೀತಾರಾಮ’ ನಟಿ

    ‘ಸೀತಾರಾಮ’ ಸೀರಿಯಲ್‌ನಲ್ಲಿ ನಾಯಕಿ ಸೀತಾ ಪಾತ್ರಧಾರಿಯ ಸ್ನೇಹಿತೆಯಾಗಿ ಗಮನ ಸೆಳೆದಿರುವ ಮೇಘನಾ ಶಂಕರಪ್ಪ (Meghana Shankarappa) ಹಸೆಮಣೆ (Wedding) ಏರಲು ಸಜ್ಜಾಗಿದ್ದಾರೆ. ಮದುವೆ ಸಂಭ್ರಮದಲ್ಲಿರುವ ನಟಿ ಸದ್ಯ ಭಾವಿ ಪತಿ ಜೊತೆಗಿನ ಸುಂದರ ಪ್ರಿ ವೆಡ್ಡಿಂಗ್‌ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ನಿರ್ದೇಶನದತ್ತ ರಂಜನಿ ರಾಘವನ್- ಕನ್ನಡತಿಯ ಚಿತ್ರಕ್ಕೆ ಇಳಯರಾಜ ಸಾಥ್

    ಹೊಸ ವರ್ಷದಂದು ಭಾವಿ ಪತಿ ಜೊತೆಗಿನ ರೊಮ್ಯಾಂಟಿಕ್ ವಿಡಿಯೋ ಹಂಚಿಕೊಂಡಿದ್ದಾರೆ. ದೇವಸ್ಥಾನವೊಂದರಲ್ಲಿ ವಿಡಿಯೋ ಶೂಟ್ ಮಾಡಿಸಿದ್ದು, ನಟಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಬಾದಮಿ ಬಣ್ಣದ ಉಡುಗೆಯಲ್ಲಿ ಇಬ್ಬರೂ ಮಿಂಚಿದ್ದಾರೆ. ಹೊಸ ಜೋಡಿಗೆ ಫ್ಯಾನ್ಸ್ ಶುಭಕೋರಿದ್ದಾರೆ.

    ಸಾಫ್ಟ್‌ವೇರ್ ಇಂಜಿನಿಯರ್ ಜಯಂತ್ ಜೊತೆ ನಟಿಯ ಮದುವೆ ಫೆಬ್ರವರಿಯಲ್ಲಿ ಫಿಕ್ಸ್ ಆಗಿದೆ. ಇಬ್ಬರೂ ಸ್ನೇಹಿತರಾಗಿದ್ದರು. ಆ ಸ್ನೇಹ ಪ್ರೀತಿಗೆ ತಿರುಗಿ ಇದೀಗ ಗುರುಹಿರಿಯರ ಸಮ್ಮತಿಯ ಮೇರೆಗೆ ಮದುವೆಗೆ ಸಜ್ಜಾಗಿದ್ದಾರೆ.

    ಇತ್ತೀಚೆಗೆ ನಟಿ ಎಂಗೇಜ್ ಆಗಿರುವ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಅನೌನ್ಸ್ ಮಾಡಿದ್ದರು. ಭಾವಿ ಪತಿ ಜೊತೆಗಿನ ಫೋಟೋ ಶೇರ್ ಮಾಡಿ ಸಂಬಂಧದ ಬಗ್ಗೆ ಅಧಿಕೃತಪಡಿಸಿದ್ದರು.

  • ಮೂರು ವರ್ಷದ ದ್ವೇಷಕ್ಕೆ ಬೆಂಗ್ಳೂರಿನ ನಡುರಸ್ತೆಯಲ್ಲಿ ಕೊಚ್ಚಿ ಕೊಂದ್ರು!

    ಮೂರು ವರ್ಷದ ದ್ವೇಷಕ್ಕೆ ಬೆಂಗ್ಳೂರಿನ ನಡುರಸ್ತೆಯಲ್ಲಿ ಕೊಚ್ಚಿ ಕೊಂದ್ರು!

    ಬೆಂಗಳೂರು: ಕಳೆದ ಕೆಲವು ದಿನಗಳಿಂದ ಹಳೆಯ ದ್ವೇಷ ಸಾಧನೆಗಾಗಿ ರೌಡಿಶೀಟರ್ ನಡು ರಸ್ತೆಯಲ್ಲೇ ಕೊಲೆಗಳು ನಡೆಯುತ್ತಿದ್ದು, ಸಿಲಿಕಾನ್ ಸಿಟಿಯ ಜನರು ಬೆಚ್ಚಿ ಬಿದ್ದಿದ್ದಾರೆ.

    ಜೂನ್ 10ರಂದು ಬೆಂಗಳೂರಿನ ಕೋಣನಕುಂಟೆ ಕ್ರಾಸ್ ಬಳಿ ಮಧ್ಯರಾತ್ರಿ 2:30ರ ಸುಮಾರಿಗೆ ರೌಡಿಶೀಟರ್ ಜಯಂತ್ (28) ಕೊಲೆ ಮಾಡಲಾಗಿತ್ತು. ತನಿಖೆ ಕೈಗೊಂಡಿರುವ ಪೊಲೀಸರಿಗೆ ಘಟನಾ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ದೃಶ್ಯಗಳು ದೊರೆತಿದ್ದು, ಆರೋಪಿಗಳನ್ನು ಬಂಧಿಸಿದ್ದಾರೆ.

    ಮದ್ಯ ಕುಡಿದು ಬೈಕ್‍ನಲ್ಲಿ ಹೋಗುತ್ತಿದ್ದ ಜಯಂತನಿಗೆ ಕಾರಿನಿಂದ ಡಿಕ್ಕಿ ಹೊಡೆದು ತಂಡ ಕೆಳಗೆ ಬೀಳಿಸಿತ್ತು. ಹತ್ತು ಜನರ ಗುಂಪೊಂದು ತಕ್ಷಣವೇ ಆತನ ಮೇಲೆ ಹಲ್ಲೆ ನಡೆಸಿ, ಕೊಚ್ಚಿ ಕೊಲೆ ಮಾಡಿ ಪರಾರಿಯಾದ ದೃಶ್ಯಗಳು ಘಟನಾ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನು ಓದಿ: ಮಧ್ಯರಾತ್ರಿ ನಡುರಸ್ತೆಯಲ್ಲಿಯೇ ಕೊಚ್ಚಿ ರೌಡಿಶೀಟರ್ ನ ಬರ್ಬರ ಹತ್ಯೆ!

    ಕೊಲೆ ಮಾಡಿದ್ಯಾಕೆ?
    ಹಳೆಯ ದ್ವೇಷ ಸಾಧನೆಗಾಗಿ ನಡೆದ ಕೃತ್ಯವಿದೆಂದು ತಡವಾಗಿ ಬೆಳಕಿಗೆ ಬಂದಿದೆ. ಮೂರು ವರ್ಷಗಳ ಹಿಂದೆ ರೌಡಿಶೀಟರ್ ಗಣೇಶ್ ಅನ್ನು ಹತ್ಯೆ ಮಾಡಿದ್ದ ಜಯಂತ್ ಜೈಲು ಸೇರಿದ್ದನು. ಅವರ ಮೇಲೆ ಸೇಡು ತೀರಿಸಿಕೊಳ್ಳಲು ರೌಡಿಶೀಟರ್ ಗಣೇಶ್ ಆಪ್ತ ರಾಮಚಂದ್ರ ಕಾಯುತ್ತಿದ್ದನು. ಜಯಂತ್ ಎರಡು ವಾರ ಹಿಂದೆಯಷ್ಟೇ ಜೈಲಿನಿಂದ ಬಿಡುಗಡೆಯಾಗಿ ಬಂದಿದ್ದ. ಜಯಂತ್ ಕೊಲೆಗೆ ಸಂಚು ನಡೆಸಿದ್ದ ರಾಮಚಂದ್ರ ಹಾಗೂ ಆತನ ಸಹಚರರು ಜೂನ್ 10ರ ಮಧ್ಯರಾತ್ರಿ ಕೃತ್ಯ ಎಸಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ಪ್ರಕರಣದ ಪ್ರಮುಖ ರೂವಾರಿ ಆರೋಪಿ ರಾಮಚಂದ್ರ ಹಾಗೂ ಆತನ ಕೆಲವು ಸಹಚರರನ್ನು ಸುಬ್ರಮಣ್ಯಪುರ ಪೊಲೀಸರು ಬಂಧಿಸಿದ್ದಾರೆ. ಉಳಿತ ಆರೋಪಿಗಳ ಬಂಧನಕ್ಕಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

    ಮೃತ ಜಯಂತ್ ವಿರುದ್ಧ ಕೊಲೆಗೆ ಯತ್ನ, ದರೋಡೆ, ಸುಲಿಗೆ ಸೇರಿದಂತೆ ಒಟ್ಟು 8 ಪ್ರಕರಣ ದಾಖಲಾಗಿದ್ದವು. ಜಯಂತ್ ಮೇಲೆ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್ ಪಟ್ಟಿ ತೆರೆಯಲಾಗಿತ್ತು.

  • ಜೆಡಿಎಸ್ ಶಾಸಕರ ಪುತ್ರ ಯುವಕನಿಗೆ ಥಳಿಸಿದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

    ಜೆಡಿಎಸ್ ಶಾಸಕರ ಪುತ್ರ ಯುವಕನಿಗೆ ಥಳಿಸಿದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

    ಮೈಸೂರು: ದಮ್ಮಯ್ಯ ಬಿಟ್ಟುಬಿಡಿ ಅಂದ್ರೂ ಬಿಡದೇ ಯುವಕನಿಗೆ ಜೆಡಿಎಸ್ ಶಾಸಕರ ಪುತ್ರ ಥಳಿಸಿದ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದೆ.

    ಯುವಕನಿಗೆ ಥಳಿಸಿದ ಘಟನೆ ಸುಮಾರು ಒಂದೂವರೆ ವರ್ಷದ ಹಿಂದೆ ನಡೆದಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ವಿಡಿಯೋ ಕೂಡ ಹರಿದಾಡುತ್ತಿದ್ದು, ಇದೀಗ ಈ ವಿಡಿಯೋ ಪಬ್ಲಿಕ್ ಟಿವಿಗೆ ಲಭಿಸಿದೆ.

    ಈ ವಿಡಿಯೋದಲ್ಲಿ ಥಳಿತಕ್ಕೊಳಗಾದ ಚೇತನ್ ಕೆಆರ್ ನಗರದ ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಪುತ್ರ ಜಯಂತ್ ಮುಂದೆ ಚಿನ್ನದ ಸರ ಕದ್ದಿದ್ದನ್ನ ಒಪ್ಪಿಕೊಂಡಿದ್ದಾನೆ. ಹೀಗಾಗಿ ಸರಗಳ್ಳನದ ಬಗ್ಗೆ ವಿಚಾರಣೆ ಮಾಡುವ ನೆಪದಲ್ಲಿ ನಡೆದಿರುವ ಹಲ್ಲೆ ಇದಾಗಿದೆ ಎಂದು ಹೇಳಲಾಗಿದೆ.

    ಮೈಸೂರಿನ ಫುಟ್‍ವೇರ್ ಅಂಗಡಿಯೊಂದರಲ್ಲಿ ಚೇತನ್ ಸರಗಳ್ಳತನ ಮಾಡಿದ್ದ. ಹೀಗಾಗಿ ಸಿಸಿಟಿವಿ ದೃಶ್ಯ ಆಧರಿಸಿ ಶಾಸಕರ ಪುತ್ರ ಜಯಂತ್ ಕಳವುಗೈದ ಚೇತನ್‍ನನ್ನು ಕರೆತಂದು ಪ್ರಶ್ನೆ ಮಾಡಿದ್ದ ಎನ್ನಲಾಗಿದೆ.

    ವಿಚಾರಣೆಯ ವೇಳೆ ಆರೋಪಿ ಚೇತನ್ ಗೆ ಶಾಸಕರ ಪುತ್ರ ಸೇರಿ ನಾಲ್ಕೈದು ಮಂದಿ ಮುಂದೆ ಇಂತಹ ತಪ್ಪು ಮಾಡದಂತೆ ಥಳಿಸಿದ್ದಾರೆ. ಈ ವೇಳೆ ಆರೋಪಿ ದಮ್ಮಯ್ಯ ಬಿಟ್ಟುಬಿಡಿ ಎಂದು ಮನವಿ ಮಾಡಿಕೊಂಡಿದ್ದಾನೆ.

     

  • ಉಡುಪಿಯ ಹಿರಿಯ ಪತ್ರಕರ್ತ ಜಯಂತ್ ಪಡುಬಿದ್ರೆ ಇನ್ನಿಲ್ಲ

    ಉಡುಪಿಯ ಹಿರಿಯ ಪತ್ರಕರ್ತ ಜಯಂತ್ ಪಡುಬಿದ್ರೆ ಇನ್ನಿಲ್ಲ

    ಉಡುಪಿ: ಇಲ್ಲಿನ ಹಿರಿಯ ಪತ್ರಕರ್ತ, ಪರಿಸರದ ಬಗ್ಗೆ ಕಾಳಜಿಯಿದ್ದ, ಬರಹದ ಮೂಲಕ ತೀವ್ರ ಹೋರಾಟ ನೀಡುತ್ತಿದ್ದ, ಸೃಜನಶೀಲ ಲೇಖಕ ಜಯಂತ್ ಪಡುಬಿದ್ರಿ (58) ನಿಧನರಾಗಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಅನಾರೋಗ್ಯಪೀಡಿತರಾಗಿದ್ದ ಜಯಂತ್ ಪಡುಬಿದ್ರಿ ಇಲ್ಲಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

    ಉದಯವಾಣಿ ದೈನಿಕದ ಮೂಲಕ ತಮ್ಮ ಪತ್ರಕರ್ತ ವೃತ್ತಿ ಜೀವನ ಆರಂಭಿಸಿದ್ದ ಜಯಂತ್ ಪಡುಬಿದ್ರಿ ಹನ್ನೆರಡು ವರ್ಷಗಳ ಕಾಲ ಅದೇ ಸಂಸ್ಥೆಯಲ್ಲಿ ಕೆಲಸ ಮಾಡಿದ್ದರು. ಪರಿಸರ ಹೋರಾಟಕ್ಕೆ ಇಳಿದ ಬಳಿಕ ಉದಯವಾಣಿ ಪತ್ರಿಕೆಯ ಜೊತೆಗಿನ ಅವರ ವೃತ್ತಿಜೀವನ ಕೊನೆಗೊಂಡಿತ್ತು. ಬಳಿಕ ಜಯಂತ್ ಪಡುಬಿದ್ರೆ ಜನವಾಹಿನಿ, ಜಯಕಿರಣ ಪತ್ರಿಕೆಗಳಿಗಾಗಿ ವರದಿಗಾರನಾಗಿ ಸೇವೆ ಸಲ್ಲಿಸಿದ್ದರು.

    ವಸ್ತುನಿಷ್ಟ ಮತ್ತು ನಿಷ್ಟೂರ ವರದಿಗಳಿಗೆ ಪ್ರಸಿದ್ದರಾಗಿದ್ದ ಜಯಂತ್ ಪಡುಬಿದ್ರಿ ತಮ್ಮ ವರದಿಗಳು, ಲೇಖನಗಳು ಮತ್ತು ಅಂಕಣಗಳ ಮೂಲಕ ಕರಾವಳಿ ಭಾಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದರು. ತುಳು ಭಾಷೆ, ತುಳುನಾಡ್ನ ಸಂಸ್ಕೃತಿಗಳ ಬಗ್ಗೆ ವಿಶೇಷ ಆಸಕ್ತಿ ಇಟ್ಟುಕೊಂಡಿದ್ದ ಜಯಂತ್ ಈ ಕುರಿತು ಅಧ್ಯಯನ ನಡೆಸಿದ್ದರು.

    ಪತ್ರಕರ್ತನಾಗಿ ಉದಯವಾಣಿಯಲ್ಲಿ ಕೆಲಸ ಮಡುತ್ತಿರುವಾಗಲೆ ಜಯಂತ್ ಪರಿಸರ ಹೋರಾಟಗಳಲ್ಲಿ ತೊಡಗಿಸಿಕೊಂಡು ಕರಾವಳಿಗೆ ಲಗ್ಗೆ ಇಡುತ್ತಿದ್ದ ಕೈಗಾರಿಕೆಗಳ ವಿರುದ್ಧ ಹೋರಾಟ ರೂಪಿಸಿ ಸಕ್ರಿಯವಾಗಿ ಹೋರಾಟದಲ್ಲಿ ತೊಡಗಿಸಿಕೊಂಡಿದ್ದರು.

    ಮೂಲ್ಕಿ-ಮೂಡಬಿದಿರೆ ಪ್ರದೇಶದಲ್ಲಿ ಎಂಜಲ್ ಹಾರ್ಡ್ ಪೈಂಟ್ಸ್ ಕಾರ್ಖಾನೆ ಅಸ್ಥಿತ್ವಕ್ಕೆ ಬರುತ್ತದೆ ಎಂಬ ಸುದ್ದಿ ತಿಳಿದಾಗ ರೂಪುಗೊಂಡ ಜಯಂತ್ ಅವರ ಪರಿಸರವಾದಿ ಹೋರಾಟ ಬಳಿಕ ಇಂತಹ ಅನೇಕ ಬೃಹತ್ ಕೈಗಾರಿಕೆಗಳ ವಿರುದ್ಧವೂ ಮುಂದುವರಿಯಿತು. ಎಂಆರ್‍ಪಿಲ್, ಕೊಜೆಂಟ್ರಿಕ್ಸ್ ಯುಪಿಸಿಎಲ್ ಮುಂತಾದ ಪರಿಸರ ವಿರೋಧಿ ಕಂಪನಿ ವಿರುದ್ಧವೂ ಜಯಂತ್ ಹೋರಾಟ ಮಾಡಿದ್ದರು.

    ಜಯಂತ್ ಪಡುಬಿದ್ರೆ ಒಡನಾಡಿ, ಹಿರಿಯ ಪತ್ರಕರ್ತ ಸುಭಾಸ್ ಚಂದ್ರ ವಾಗ್ಳೆ ಕಂಬನಿ ಮಿಡಿದಿದ್ದು, 55ರ ಅಸುಪಾಸಿನ ಜಯಂತ್ ಅವರಿಗೆ ಇದು ಸಾಯುವ ವಯಸ್ಸಲ್ಲ. ಪತ್ರಕರ್ತರಲ್ಲಿ ಇರಬೇಕಾದ, ಅಗಾಧ ಅಧ್ಯಯನಶೀಲತೆ ಮತ್ತು ಅದ್ಭುತ ನೆನಪಿ ಶಕ್ತಿ ಇವು ಜಯಂತ್ ಅವರ ಹೆಗ್ಗಳಿಕೆಯಾಗಿತ್ತು. ತುಳುನಾಡಿನ ಬಗ್ಗೆ ಅಧಿಕಾರಯುತವಾಗಿ ಮಾತನಾಡುತ್ತಿದ್ದ ಅವರು ಭೂತಾರಾಧನೆ ಮತ್ತು ತುಳು ಸಂಸ್ಕೃತಿ-ಆಚರಣೆಗಳ ಬಗ್ಗೆ ಒಬ್ಬ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಕೆಲಕಾಲ ಲಂಕೇಶ್ ಪತ್ರಿಕೆಗೂ ವರದಿಗಳನ್ನು ಬರೆಯುತ್ತಿದ್ದರು. ಒಂದೆರಡು ಸಂಜೆ ಪತ್ರಿಕೆಗಳಿಗೆ ಅಂಕಣ ಬರಹಗಳನ್ನೂ ಬರೆದಿದ್ದರು. ಪರಿಸರಪರ ಹೋರಾಟಗಾರರೂ ಅಗಿದ್ದ ಅವರು ಅದೇ ಕಾರಣಕ್ಕೆ ಉದ್ಯೋಗ ಕಳೆದುಕೊಂಡಿದ್ದರು. ಆದರ್ಶ, ವೃತ್ತಿಪರತೆ, ಅಧ್ಯಯನ ಎಲ್ಲವೂ ಹೆಚ್ಚಾಗಿದ್ದ ಅವರಲ್ಲಿ ಸ್ವಾಭಿಮಾನವೂ ಸ್ವಲ್ವ ಹೆಚ್ಚೆ ಇತ್ತು,ಕಿರಿಯ ಪತ್ರಕರ್ತರಿಗೆ ಕಾಳಜಿಯಿಂದ ಮಾರ್ಗದರ್ಶನ ಮಾಡುತ್ತಿದ್ದ ಅವರು ಅನೇಕ ಬಾರಿ ಸಹಪತ್ರಕರ್ತರನ್ನು ಟೀಕಿಸುವುದಕ್ಕೂ ಹಿಂಜರಿಯುತ್ತಿರಲಿಲ್ಲ. ನೇರ ನಿಷ್ಟುರವಾದಿಯಾಗಿದ್ದರು, ಎಂದು ಹೇಳಿದ್ದಾರೆ.

    ಕ್ರೈಮ್, ಪೊಲೀಸ್, ರೌಡಿಸಂ, ಮಾಫಿಯಾ, ಅಂಡರ್ ವರ್ಲ್ಡ್, ರಾಜಕೀಯಗಳ ಬಗ್ಗೆ ಅಘಾದ ಜ್ಞಾಪಕ ಶಕ್ತಿ ಮತ್ತು ಆಸಕ್ತಿ ಇತ್ತು ಎಂದು ಹೇಳಿದರು.

    ಜಯಂತ್ ಪಡುಬಿದ್ರಿ ಅವರ ವೃತ್ತಿ ಮತ್ತು ಹೋರಾಟಗಳಿಂದ ಅನೇಕ ಮಂದಿ ಪ್ರಭಾವಿತರಾಗಿದ್ದರು. ಅವಿವಾಹಿತರಾಗಿರುವ ಜಯಂತ್ ಪಡುಬಿದ್ರಿ ತಮ್ಮ 58ನೆಯ ವಯಸ್ಸಿನಲ್ಲಿಯೇ ನಿಧನ ಹೊಂದಿದ್ದು ಕರಾವಳಿಯ ಮಟ್ಟಿಗೆ ತುಂಬಲಾರದ ನಷ್ಟವಾಗಿದೆ.