Tag: ಜಮ್ಮು ಮತ್ತು ಕಾಶ್ಮೀರ

  • ಜಮ್ಮು-ಕಾಶ್ಮೀರದಲ್ಲಿ ಮತ್ತೆ ಕದನ ವಿರಾಮ ಉಲ್ಲಂಘಿಸಿದ ಪಾಕ್

    ಜಮ್ಮು-ಕಾಶ್ಮೀರದಲ್ಲಿ ಮತ್ತೆ ಕದನ ವಿರಾಮ ಉಲ್ಲಂಘಿಸಿದ ಪಾಕ್

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಜೌರಿಯಲ್ಲಿ ಗಡಿ ನಿಯಂತ್ರಣ ರೇಖೆಯ(ಎಲ್‍ಒಸಿ) ಬಳಿ ಪಾಕಿಸ್ತಾನ ಸೇನೆ ಕದನ ವಿರಾಮವನ್ನು ಉಲ್ಲಂಘಿಸಿದೆ. ಎಲ್‍ಒಸಿ ಉದ್ದಕ್ಕೂ ಫಾರ್ವರ್ಡ್ ಪೋಸ್ಟ್‌ಗಳು ಮತ್ತು ಹಳ್ಳಿಗಳ ಮೇಲೆ ಪಾಕ್ ಸೇನೆ ಅಪ್ರಚೋದಿತ ಗುಂಡಿನ ದಾಳಿ ಮತ್ತು ಶೆಲ್ ದಾಳಿ ನಡೆಸಿದೆ.

    ಇಂದು ಬೆಳಗ್ಗೆ 11:30ರ ವೇಳೆಗೆ ರಜೌರಿ ಜಿಲ್ಲೆಯ ಸುಂದರ್‍ಬಾನಿ ಸೆಕ್ಟರ್ ನಲ್ಲಿ ಪಾಕಿಸ್ತಾನ ಸೇನೆ ಕದನ ವಿರಾಮ ಉಲ್ಲಂಘಿಸಿದೆ. ಸುಂದರ್‌ಬಾನಿ ವಲಯದಲ್ಲಿ ಶಸ್ತ್ರಾಸ್ತ್ರ ಮತ್ತು ಶೆಲ್ ದಾಳಿ ಮಾಡಲು ಪಾಕ್ ಆರಂಭಿಸಿತು. ಇದಕ್ಕೆ ಭಾರತೀಯ ಸೇನೆ ಕೂಡ ಪ್ರತ್ಯುತ್ತರ ನೀಡಿದೆ. ಆದರೆ ಈ ವೇಳೆ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ.

    ನ. 17ರಂದು ಅಖ್ನೂರ್ ಸೆಕ್ಟರ್ ಬಳಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡಿತ್ತು. ಈ ವೇಳೆ ಅಲ್ಲಿ ಟ್ರಕ್‍ನಲ್ಲಿ ತೆರೆಳುತ್ತಿದ್ದ ಓರ್ವ ಯೋಧ ಹುತಾತ್ಮರಾಗಿ ಇಬ್ಬರು ಯೋಧರು ಗಾಯಗೊಂಡಿದ್ದರು. ಅವರನ್ನು ಉಧಂಪುರ್ ಪ್ರದೇಶದ ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

    ಹಾಗೆಯೇ ನ.16ರಂದು ಪಾಕಿಸ್ತಾನವು ರಜೌರಿ ಜಿಲ್ಲೆಯ ನೌಶೇರಾ ಸೆಕ್ಟರ್ ನಲ್ಲಿ ಕದನ ವಿರಾಮವನ್ನು ಉಲ್ಲಂಘಿಸಿತ್ತು. ಪಾಕಿಸ್ತಾನ ಪಡೆಗಳು ಈ ಪ್ರದೇಶದ ನಾಗರಿಕರನ್ನು ಗುರಿಯಾಗಿಸಿಕೊಂಡು ನಿಯಂತ್ರಣ ರೇಖೆಯ ಉದ್ದಕ್ಕೂ ಅಪ್ರಚೋದಿತ ಶೆಲ್ ದಾಳಿ ನಡೆಸಿದ್ದವು.

  • 575 ಯುವಕರು ಸೇನೆಗೆ ಸೇರ್ಪಡೆ- ಯುನಿಫಾರ್ಮ್ ನಿಂದ ಸಿಕ್ತು ಪ್ರೇರಣೆ ಎಂದ ಕಾಶ್ಮೀರಿ ಸೈನಿಕ

    575 ಯುವಕರು ಸೇನೆಗೆ ಸೇರ್ಪಡೆ- ಯುನಿಫಾರ್ಮ್ ನಿಂದ ಸಿಕ್ತು ಪ್ರೇರಣೆ ಎಂದ ಕಾಶ್ಮೀರಿ ಸೈನಿಕ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದು ವಿಶೇಷ ಸ್ಥಾನಮಾನ ಅನುಚ್ಛೇದ 370ನ್ನು ತೆಗೆದು ಹಾಕಲಾಗಿದೆ. ಮುಂಜಾಗ್ರತ ಕ್ರಮವಾಗಿ ಕಾಶ್ಮೀರದಲ್ಲಿ ವಿಶೇಷ ಬಂದೋಬಸ್ತ್, ಕರ್ಪ್ಯೂ ವಿಧಿಸಲಾಗಿತ್ತು. ಸದ್ಯ ಕಾಶ್ಮೀರಿಗರು ಸಹಜ ಸ್ಥಿತಿಯತ್ತ ಮರಳುತ್ತಿದ್ದಾರೆ. ಆರ್ಟಿಕಲ್ 370ರ ರದ್ದು ಬಳಿಕ ಕಾಶ್ಮೀರದ 575 ಯುವಕರು ಭಾರತೀಯ ಸೇನೆ ಸೇರ್ಪಡೆಗೊಂಡಿದ್ದಾರೆ.

    ಶುಕ್ರವಾರ ರೆಜಿಮೆಂಟ್ ಸೆಂಟರ್ ನಲ್ಲಿ ಪಾಸಿಂಗ್ ಔಟ್ ಪರೇಡ್ ಅಯೋಜಿಸಲಾಗಿತ್ತು. ಈ ಪರೇಡ್‍ನಲ್ಲಿ 575 ಯುವಕರು ಭಾಗಿಯಾಗಿದ್ದು, ಎಲ್ಲರೂ ಸೆಂಟರ್ ಸೇರ್ಪಡೆಯಾಗಿದ್ದಾರೆ. ಪರೇಡ್ ನಲ್ಲಿ ಭಾಗಿಯಾಗಿದ್ದ ಕಾಶ್ಮೀರದ ವಸೀಮ್ ಅಹ್ಮದ್ ಮಾತನಾಡಿ, ನನ್ನ ತಂದೆ ಸೇನೆಯಲ್ಲಿದ್ದರು. ತಂದೆಯ ಸಮವಸ್ತ್ರದಿಂದ ಸಿಕ್ಕ ಪ್ರೇರಣೆಯಿಂದಾಗಿ ನಾನು ಸೇನೆ ಸೇರುವ ನಿರ್ಧಾರಕ್ಕೆ ಬಂದೆ. ಇಂದು ತುಂಬಾ ಖುಷಿಯಾಗಿದ್ದೇನೆ ಎಂದು ತಮ್ಮ ಸಂತೋಷವನ್ನು ಹಂಚಿಕೊಂಡರು.

    ಮಿರ್ ಎಂಬವರು ಮಾತನಾಡಿ, ನನ್ನ ತಂದೆ ಸಹ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ತಂದೆಯ ಪ್ರೇರಣೆಯಿಂದಾಗಿ ಸೇನೆ ಸೇರಿದ್ದೇನೆ. ಸೇನೆಯಲ್ಲಿ ದೈಹಿಕ ಮತ್ತು ಮಾನಸಿಕವಾಗಿ ಕಲಿಯುವ ಅವಕಾಶ ಸಿಗುತ್ತದೆ. ನಾನು ಸೇನೆ ಸೇರಿದ್ದರಿಂದ ಪೋಷಕರು ಹೆಮ್ಮೆ ಪಡುತ್ತಿದ್ದಾರೆ ಎಂದು ತಿಳಿಸಿದರು.

  • ಕಾಶ್ಮೀರದ 50ಕ್ಕೂ ಅಧಿಕ ನಾಯಕರಿಗೆ ಹೋಟೆಲ್ ಬಂಧನ

    ಕಾಶ್ಮೀರದ 50ಕ್ಕೂ ಅಧಿಕ ನಾಯಕರಿಗೆ ಹೋಟೆಲ್ ಬಂಧನ

    -ಜೈಲಾಗಿ ಬದಲಾದ ಸೆಂಟೌರ್ ಹೋಟೆಲ್

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ 50ಕ್ಕೂ ಅಧಿಕ ರಾಜಕೀಯ ಮುಖಂಡರನ್ನು ಶ್ರೀನಗರದ ಹೊರವಲಯದಲ್ಲಿರುವ ಸೆಂಟೌರ್ ಹೋಟೆಲ್ ನಲ್ಲಿ ಇರಿಸಲಾಗಿದೆ. ಹೋಟೆಲ್ ಜೈಲಾಗಿ ಬದಲಾಗಿದೆ ಎಂದು ವರದಿಯಾಗಿದೆ. ಹೋಟೆಲ್ ಬಂಧನದಲ್ಲಿರುವ ಎಲ್ಲ ನಾಯಕರಿಗೆ ಸೋಮವಾರ ತಮ್ಮ ಸಂಬಂಧಿ ಮತ್ತು ಆಪ್ತರನ್ನು ಭೇಟಿಯಾಗಲು ಅವಕಾಶ ಕಲ್ಪಿಸಲಾಗಿತ್ತು.

    ಬಟ್ಟೆ, ಹಣ್ಣು, ಆಹಾರ ಇತರೆ ಅಗತ್ಯ ವಸ್ತುಗಳೊಂದಿಗೆ ರಾಜಕೀಯ ನೇತಾರರ ಸಂಬಂಧಿಗಳು ಹೋಟೆಲ್ ಗೆ ಆಗಮಿಸಿ ಯೋಗಕ್ಷೇಮ ವಿಚಾರಿಸಿದರು. ಆಗಸ್ಟ್ 5ರಂದು ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಅನುಚ್ಛೇಧ 370 ರದ್ದುಗೊಳಿಸಲಾಗಿತ್ತು. ಆಗಸ್ಟ್ 5ರಿಂದ 50ಕ್ಕೂ ಅಧಿಕ ಸ್ಥಳೀಯ ಮುಖಂಡರನ್ನು ಹೋಟೆಲ್ ನಲ್ಲಿ ಇರಿಸಲಾಗಿದೆ.

    ಸೆಂಟೌರ್ ಹೋಟೆಲ್ ನಲ್ಲಿ ಸಜ್ಜಾದ್ ಲೋನ್, ಇಮ್ರಾನ್ ಅನ್ಸಾರಿ, ಯಾಸಿರ್ ರೆಸಿ, ಇಶ್ಫಾಕ್ ಜಬ್ಬಾರ್, ಅಶ್ರಫ್ ಮೀರ್, ಸಲ್ಮಾನ್ ಸಾಗರ್, ಮುಬಾರಕ್ ಗುಲ್, ನಯೀಂ ಅಖ್ತರ್, ಖುರ್ಷಿದ್ ಅಲಂ, ವಾಹಿದ್ ಪಾರಾ, ಶೇಖ್ ಇಮ್ರಾನ್ ಆದಿ ಸೇರಿದಂತೆ 50ಕ್ಕೂ ಅಧಿಕ ನಾಯಕರನ್ನು ಬಂಧನದಲ್ಲಿ ಇರಿಸಲಾಗಿದೆ. ನಾಯಕರನ್ನು ಭೇಟಿಯಾದ ಓರ್ವ ವೃದ್ಧ, ಹೋಟೆಲ್ ಜೈಲಿನಂತೆಯೇ ಇದೆ. ಆದ್ರೆ ನನ್ನ ಮಗ ಆರೋಗ್ಯವಾಗಿದ್ದಾನೆ ಎಂಬುವುದೇ ನನಗೆ ಖುಷಿ ಎಂದಿದ್ದಾರೆ.

    ಹೋಟೆಲ್ ಮುಂಭಾಗದ ಗ್ಯಾಲರಿಯಲ್ಲಿ ಮಗನನ್ನು ಭೇಟಿಯಾಗಲು ಅವಕಾಶ ಕಲ್ಪಿಸಲಾಗಿತ್ತು. ಮುಖಂಡರನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದು, ಹೊರಗಡೆ ಏನಾಗ್ತಿದೆ ಎಂಬುದರ ಮಾಹಿತಿ ನೀಡುತ್ತಿಲ್ಲ. ಭೇಟಿಯಾಗಲು ಬರುತ್ತಿರುವ ಸಂಬಂಧಿ ಮತ್ತು ಆಪ್ತರಿಂದಲೇ ರಾಜಕೀಯ ನಾಯಕರು ಕೆಲ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದಾರೆ. ಹೋಟೆಲ್ ನಲ್ಲಿ ಪಿಡಿಪಿ, ನ್ಯಾಶನಲ್ ಕಾಂಗ್ರೆಸ್ ಮತ್ತು ಕಾಂಗ್ರೆಸ್ ವರಿಷ್ಠ ನಾಯಕರಿದ್ದಾರೆ ಎಂದು ಹೋಟೆಲ್ ಒಳಗೆ ಹೋಗಿ ಬಂದ ವೃದ್ಧರೊಬ್ಬರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

    ಜೈಲಿನಲ್ಲಿ ಕೈದಿಗಳನ್ನು ಭೇಟಿಯಾಗಲು ಅನುಸರಿಸುವ ಕ್ರಮಗಳನ್ನು ಇಲ್ಲಿಯೂ ಪಾಲನೆ ಮಾಡಲಾಗುತ್ತಿದೆ. ಆಪ್ತರಿಗೆ ಸಿಗರೇಟ್ ಸೇರಿದಂತೆ ಯಾವುದೇ ಆರೋಗ್ಯಕ್ಕೆ ಹಾನಿಕಾರಕ ಉತ್ಪನ್ನಗಳನ್ನು ತೆಗೆದುಕೊಂಡು ಹೋಗಲು ಸಂಬಂಧಿಗಳಿಗೆ ಬಿಡುತ್ತಿಲ್ಲ. ಇನ್ನು ಹೋಟೆಲ್ ನಲ್ಲಿರುವ ಎಲ್ಲ ಟಿವಿಗಳನ್ನು ಬಂದ್ ಮಾಡಲಾಗಿದೆ. ಕೇವಲ ದಿನಪತ್ರಿಕೆಗಳ ಮೂಲಕವೇ ರಾಜಕೀಯ ನೇತಾರರು ಹೊರಗಿನ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.

    ಮಾಧ್ಯಮದ ಜೊತೆ ಮಾತನಾಡಿದ ಓರ್ವ ಭದ್ರತಾ ಸಿಬ್ಬಂದಿ, ಎಲ್ಲ ಮುಖಂಡರನ್ನು ಜೈಲಿನಲ್ಲಿರುವ ಕೈದಿಗಳ ರೀತಿಯಲ್ಲಿ ನೋಡಿಕೊಳ್ಳಲಾಗುತ್ತಿದೆ. ಹೋಟೆಲ್ ನಲ್ಲಿರುವ ಎಲ್ಲ ಟಿವಿಗಳು ಬಂದ್ ಆಗಿದ್ದು, ದಿನಪತ್ರಿಕೆ ಮತ್ತು ಕೆಲ ಪುಸ್ತಕಗಳನ್ನು ಓದಿ ನಾಯಕರು ಸಮಯ ಕಳೆಯುತ್ತಿದ್ದಾರೆ ಎಂದು ಹೇಳಿದ್ದಾರೆ.

    ನಾನು ಭಾನುವಾರ ಸಂಜೆ 6ಗಂಟೆಗೆ ಹೋಟೆಲ್ ಬಳಿ ಬಂದೆ. ಅಧಿಕಾರಿಗಳು ಪತಿಯನ್ನು ಭೇಟಿಯಾಗಲು ಅವಕಾಶ ಕಲ್ಪಿಸಲಿಲ್ಲ. ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆವರೆಗೆ ಮಾತ್ರ ಭೇಟಿಯ ಸಮಯ ನಿಗದಿಯಾಗಿದೆ ಎಂದು ಹೇಳುತ್ತಾರೆ. ನನ್ನ ಪತಿ ಎಂದೂ ಕಾನೂನಿನ ಉಲ್ಲಂಘನೆ ಮಾಡಿಲ್ಲ. ಆದ್ರೂ ಅವರನ್ನು ಬಂಧಿಸಲಾಗಿದೆ ಎಂದು ಪಿಡಿಪಿ ಶಾಸಕರೊಬ್ಬರ ಪತ್ನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಕಾಶ್ಮೀರಕ್ಕಾಗಿ ಏನು ಬೇಕಾದ್ರೂ ಮಾಡಲು ಸಿದ್ಧ – ಬಾಲ ಬಿಚ್ಚಿದ ಪಾಕ್

    ಕಾಶ್ಮೀರಕ್ಕಾಗಿ ಏನು ಬೇಕಾದ್ರೂ ಮಾಡಲು ಸಿದ್ಧ – ಬಾಲ ಬಿಚ್ಚಿದ ಪಾಕ್

    ಇಸ್ಲಾಮಾಬಾದ್: ಪಾಕಿಸ್ತಾನದ ಪ್ರಧಾನ ಮಂತ್ರಿ ಇಂದು ತಮ್ಮ ದೇಶವನ್ನು ಉದ್ದೇಶಿಸಿ ಮಾತನಾಡಿದ್ದು, ಕಾಶ್ಮೀರಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧವಿದೆ ಎಂದು ತಮ್ಮ ಮೊಂಡುತನವನ್ನ ಪ್ರದರ್ಶಿಸಿದ್ದಾರೆ.

    ಆರ್‍ಎಸ್‍ಎಸ್ ವಿಚಾರಧಾರೆಗಳಿಂದಾಗಿ ಕಾಶ್ಮೀರದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಲು ಭಾರತ ಹಿಂದೇಟು ಹಾಕುತ್ತಿದೆ. ಭಾರತವನ್ನು ಹಿಂದೂಗಳ ರಾಷ್ಟ್ರವನ್ನಾಗಿ ಮಾಡಲು ಆರ್‍ಎಸ್‍ಎಸ್ ಪ್ರಯತ್ನಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ಒಂದು ತಪ್ಪಿನಿಂದ ಕಾಶ್ಮೀರಿಗರಿಗೆ ಸ್ವಾತಂತ್ರ್ಯದ ದೊಡ್ಡ ಅವಕಾಶ ಲಭಿಸಿದೆ. ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿರುವ ನಿರ್ಧಾರದಿಂದ ಈ ವಿಚಾರ ಅಂತರಾಷ್ಟ್ರೀಯ ವಿಷಯವಾಗಿ ಬದಲಾಗಿದೆ. ಪ್ರಪಂಚದ ಎಲ್ಲ ಮುಸ್ಲಿಂ ರಾಷ್ಟ್ರಗಳು ಬೆಳವಣಿಗೆಗಳನ್ನು ಗಮನಿಸುತ್ತೇವೆ ಎಂದರು.

    ಕಾಶ್ಮೀರ ವಿಷಯ ಯುದ್ಧವಾಗಿ ಬದಲಾದರೆ, ಎರಡೂ ರಾಷ್ಟ್ರಗಳು ಪರಮಾಣು ಶಕ್ತಿಯನ್ನು ಹೊಂದಿವೆ. ಕಾಶ್ಮೀರಕ್ಕಾಗಿ ನಾವು ಯಾವ ಹಂತ ತಲುಪಲು ಸಿದ್ಧವಿದೆ. ಈ ಶುಕ್ರವಾರದಂದು ಪಾಕಿಸ್ತಾನದಾದ್ಯಂತ ಮಧ್ಯಾಹ್ನ 12ರಿಂದ 12.30ರವರೆಗೆ ಕಾಶ್ಮೀರದ ವಿಚಾರವನ್ನು ಜನರಿಗೆ ತಿಳಿಸುತ್ತೇವೆ ಎಂದು ಹೇಳಿದರು.

    ಕಾಶ್ಮೀರಿಗರು ತೊಂದರೆಯಲ್ಲಿದ್ದು, ಅವರಿಗೆ ಬೆಂಬಲವಾಗಿ ನಾವು ನಿಲ್ಲಬೇಕಿದೆ. ನಾನು ಸ್ವತಃ ಕಾಶ್ಮೀರದ ರಾಜಧೂತನಾಗಿ ಜಗತ್ತಿನಾದ್ಯಂತ ಸಂಚರಿಸಿ ಈ ವಿಷಯದ ಬಗ್ಗೆ ಮಾತನಾಡುತ್ತೇನೆ. ಸೆಪ್ಟೆಂಬರ್ 27ರಂದು ಸಂಯುಕ್ತ ರಾಷ್ಟ್ರಗಳೊಂದಿಗೆ ಈ ವಿಷಯದ ಕುರಿತಾಗಿ ಚರ್ಚೆ ನಡೆಸುತ್ತೇನೆ. ಕಾಶ್ಮೀರದ ವಿಷಯ ಕುರಿತಾಗಿ ನಾವು ಮಾತನಾಡಲಿ ಸಿದ್ಧವಿದ್ದು, ಭಾರತ ಒಪ್ಪುತ್ತಿಲ್ಲ. ಪದೇ ಪದೇ ನಮ್ಮ ಮೇಲೆ ಆರೋಪಗಳನ್ನು ಮಾಡುತ್ತಾ ಬಂದಿದ್ದು, ನಮ್ಮನ್ನು ಬ್ಲ್ಯಾಕ್ ಲಿಸ್ಟ್ ಗೆ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.

    ಟ್ರಂಪ್‍ಗೆ ಸಂದೇಶ ರವಾನಿಸಿದ ಮೋದಿ:
    ಫ್ರಾನ್ಸ್ ದೇಶದ ಬಿಯರಿಟ್ಜ್‍ನ ನಗರದಲ್ಲಿ ನಡೆಯುತ್ತಿರುವ ಜಿ7 ಶೃಂಗಸಭೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಜಂಟಿ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು. ಈ ವೇಳೆ ಮೋದಿ ಜಮ್ಮು ಕಾಶ್ಮೀರದ ಸಮಸ್ಯೆ ದ್ವಿಪಕ್ಷೀಯವಾದದ್ದು, ಇದನ್ನು ನಾವೇ ಬಗೆಹರಿಸಿಕೊಳ್ಳುತ್ತೇವೆ. ನಮಗಾಗಿ ಇತರೆ ರಾಷ್ಟ್ರಗಳು ತೊಂದರೆ ಅನುಭವಿಸುವ ಅಗತ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟಪಡಿಸಿದ್ದಾರೆ.

    ಭಾರತ ಹಾಗೂ ಪಾಕಿಸ್ತಾನ 1947ಕ್ಕೂ ಮೊದಲು ಒಂದಾಗಿತ್ತು. ಹೀಗಾಗಿ ನಮ್ಮ ಸ್ವಂತ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ನಾವು ಸಮರ್ಥರಾಗಿದ್ದೇವೆ. ಜಮ್ಮು ಕಾಶ್ಮೀರದ ವಿಚಾರವು ದ್ವಿಪಕ್ಷೀಯ ವಿಷಯವಾಗಿದೆ ಎಂದು ಒತ್ತಿ ಹೇಳುವ ಮೂಲಕ ಈ ಹಿಂದೆ ಎರಡು ಬಾರಿ ಜಮ್ಮು ಕಾಶ್ಮೀರದ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸುವ ಕುರಿತು ಹೇಳಿಕೆ ನೀಡಿದ್ದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ.

  • ಉಗ್ರ ಸಂಘಟನೆಗೆ ಯುವಕರನ್ನ ಭರ್ತಿ ಮಾಡಿಕೊಳ್ತಿದೆ ಪಾಕ್

    ಉಗ್ರ ಸಂಘಟನೆಗೆ ಯುವಕರನ್ನ ಭರ್ತಿ ಮಾಡಿಕೊಳ್ತಿದೆ ಪಾಕ್

    ನವದೆಹಲಿ: ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಗೊಳಿಸಿದ ಬೆನ್ನಲ್ಲೆ ನೆರೆಯ ಪಾಕಿಸ್ತಾನಕ್ಕೆ ಆತಂಕ ಶುರುವಾಗಿದೆ. ಗಡಿ ನಿಯಂತ್ರಣ ರೇಖೆ(ಎಲ್‍ಒಸಿ) ಬಳಿ ಒಳನುಸಳಿಸಲು ಸಂಚು ರೂಪಿಸುತ್ತಿದ್ದು, ಕಾಶ್ಮೀರದಲ್ಲಿ ಶಾಂತಿ ಕದಡುವ ಕಾರ್ಯಕ್ಕೆ ಮುಂದಾಗುವ ಪ್ರಯತ್ನಕ್ಕೆ ನೀಚ ಪಾಕಿಸ್ತಾನ ಮುಂದಾಗುತ್ತಿದೆ ಎನ್ನಲಾಗುತ್ತಿದೆ. ಇದೀಗ ಪಾಕಿಸ್ತಾನದ ಗುಪ್ತಚರ ಇಲಾಖೆ ಐಎಸ್‍ಐ (ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್) ಉಗ್ರ ಸಂಘಟನೆಗಳಿಗೆ ಯುವಕರನ್ನು ಭರ್ತಿ ಮಾಡಿಕೊಳ್ಳಲು ಆರಂಭಿಸಿದೆ ಎಂದು ಭಾರತೀಯ ಗುಪ್ತಚರ ಇಲಾಖೆ ತಿಳಿಸಿದೆ.

    ಪಾಕಿಸ್ತಾನದ ಮುಜಾಫರ್‍ಬಾದ್ ನಲ್ಲಿರುವ ಬಸನಾಡ್ ಶಿಬಿರದಲ್ಲಿ ಯುವಕರನ್ನು ಉಗ್ರ ಸಂಘಟನೆ ಸೇರ್ಪಡೆಯಾಗುವಂತೆ ಪ್ರಚೋದನೆ ನೀಡಲಾಗುತ್ತಿದೆ. ಉಗ್ರ ಸಂಘಟನೆಗಳಿಗೆ ನೇಮಕವಾದ ಯುವಕರಿಗೆ ಭಯೋತ್ಪಾದನೆ ಚಟುವಟಿಕೆ ಕುರಿತು ತರಬೇತಿಯನ್ನು ನೀಡಲಾಗುತ್ತಿದೆ. ತರಬೇತಿ ಬಳಿಕ ಉಗ್ರರನ್ನು ಐಎಸ್‍ಐ ತನ್ನ ನೇತೃತ್ವದಲ್ಲಿ ಲೀಪಾ ಮತ್ತು ಕೇರನ್ ಸೆಕ್ಟರ್ ನ ಲ್ಯಾಂಚ್ ಪ್ಯಾಡ್ ಮೂಲಕ ಜಮ್ಮು ಕಾಶ್ಮೀರ ಪ್ರವೇಶಿಸಲು ಸಂಚು ರೂಪಿಸಿದೆ ಎಂದು ಗುಪ್ತಚರ ಇಲಾಖೆಯ ಮೂಲಗಳನ್ನು ಆಧಾರಿಸಿ ಮಾಧ್ಯಮ ವರದಿ ಮಾಡಿದೆ. ಇದನ್ನೂ ಓದಿ: ಪಾಕಿಗೆ ಹರಿಯತ್ತಿರುವ ನೀರನ್ನು ನಿಲ್ಲಿಸುವ ಕೆಲಸ ಆರಂಭಗೊಂಡಿದೆ – ಕೇಂದ್ರ ಸರ್ಕಾರ

    ಗುಪ್ತಚರ ಇಲಾಖೆಯ ಮೂಲಗಳ ಪ್ರಕಾರ, ಪೇಶಾವರ ಮತ್ತು ಕ್ವೇಟ್ಟಾ ಪ್ರದೇಶಗಳ ಗುಡ್ಡುಗಾಡು ಇಲಾಖೆಯಲ್ಲಿ ಪಾಕಿಸ್ತಾನ ಭಯೋತ್ಪಾದಕ ಸಂಘಟನೆಗಳಿಗೆ ಯುವಕರನ್ನು ಭರ್ತಿ ಮಾಡಿಕೊಳ್ಳುವುದಕ್ಕೆ ಅಭಿಯಾನವನ್ನು ಆರಂಭಿಸಿದೆ. ಇತ್ತ ಪಾಕ್ ಆಕ್ರಮಿತ ಕಾಶ್ಮೀರದ ಪುಂಛ್, ಬಾಗ್ ಮತ್ತು ಕೊಟಲಿ ಭಾಗಗಳಲ್ಲಿ ಯುವಕರನ್ನು ಉಗ್ರ ಸಂಘಟನೆಗಳಿಗೆ ಭರ್ತಿ ಮಾಡಿಕೊಳ್ಳುವ ಅಭಿಯಾನವನ್ನು ಆರಂಭಿಸಿದೆ. ಆಗಸ್ಟ್ 9 ರಿಂದಲೇ ಮೀರ್‍ಪುರ ಮತ್ತು ಸಿಯಾಲ್‍ಕೋಟ್ ನಲ್ಲಿರು ಉಗ್ರ ಶಿಬಿರಗಳಲ್ಲಿ ಅಂಡರ್ ವಾಟರ್ ಟ್ರೈನಿಂಗ್ ಆರಂಭಗೊಂಡಿದೆ ಎಂಬ ಮಾಹಿತಿ ಲಭಿಸಿದೆ. ಇದನ್ನೂ ಓದಿ: 370 ಕಿತ್ತು ಹಾಕಿದ ಬಳಿಕ ಮೊದಲ ಗುಂಡಿನ ಚಕಮಕಿ – ಉಗ್ರ ಹತ್ಯೆ, ಪೊಲೀಸ್ ಅಧಿಕಾರಿ ಹುತಾತ್ಮ

    ಬಾಲಕೋಟ್ ದಾಳಿ ಬಳಿಕ ತಮ್ಮ ಕ್ಯಾಂಪ್ ಬದಲಿಸಿಕೊಂಡಿರುವ ಉಗ್ರರಿಗೆ 10 ದಿನಗಳ ಬಳಿಕವೇ ರಿಫ್ರೆಶರ್ ಟ್ರೈನಿಂಗ್ ಸಹ ಆರಂಭಗೊಂಡಿದೆ. ಪಾಕ್ ಆಕ್ರಮಿತ ಕಾಶ್ಮೀರದ ಮನಶೆರಾ, ಗುಲಪುರ ಮತ್ತು ಕೊಟಲಿ ಭಾಗಗಳಲ್ಲಿ ತರಬೇತಿ ನಡೆಯುತ್ತಿದೆ. ಗುಪ್ತಚರ ಮಾಹಿತಿ ಅನ್ವಯ ಐಎಸ್‍ಐ ಮತ್ತು ಉಗ್ರರು ಕಾಶ್ಮೀರದ ಬಿಜೆಪಿ ನಾಯಕರನ್ನು ಗುರಿಯಾಗಿಸಿಕೊಳ್ಳುವ ಪ್ರಯತ್ನಕ್ಕೆ ಮುಂದಾಗುತ್ತಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಅಭಿನಂದನ್‍ಗೆ ಹೊಡೆದು, ಗಾಯಗೊಳಿಸಿದ್ದ ಪಾಕ್ ಯೋಧನನ್ನು ಹತ್ಯೆಗೈದ ಭಾರತೀಯ ಸೇನೆ

  • ಕಾಂಗ್ರೆಸ್ಸಿಗೆ ದೇಶಕ್ಕಿಂತ ವೋಟ್ ಬ್ಯಾಂಕ್ ಮುಖ್ಯ- ಜೆಪಿ ನಡ್ಡಾ

    ಕಾಂಗ್ರೆಸ್ಸಿಗೆ ದೇಶಕ್ಕಿಂತ ವೋಟ್ ಬ್ಯಾಂಕ್ ಮುಖ್ಯ- ಜೆಪಿ ನಡ್ಡಾ

    ನವದೆಹಲಿ: ಕಾಂಗ್ರೆಸ್ ಪಕ್ಷಕ್ಕೆ ದೇಶಕ್ಕಿಂತ ವೋಟ್ ಬ್ಯಾಂಕ್ ಮುಖ್ಯ ಎಂದು ಹೇಳುವ ಮೂಲಕ ಬಿಜೆಪಿ ಕಾರ್ಯಾಧ್ಯಕ್ಷ ಜೆಪಿ ನಡ್ಡಾ ಅವರು ಕಾಂಗ್ರೆಸ್ ಮೇಲೆ ಕಿಡಿಕಾರಿದ್ದಾರೆ.

    ಭಾನುವಾರ ನಡೆದ ಬಿಜೆಪಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ನಡ್ಡಾ ಅವರು, ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370 ನೇ ವಿಧಿಯನ್ನು ರದ್ದುಪಡಿಸುವುದನ್ನು ಬೆಂಬಲಿಸದ ಕಾರಣಕ್ಕೆ ಕಾಂಗ್ರೆಸ್ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

    ಪ್ರಧಾನಿ ಮೋದಿ ಅವರು ಒಂದು ದೇಶದ ಪರಿಕಲ್ಪನೆಯನ್ನು ಅರಿತುಕೊಂಡಿದ್ದಾರೆ. ಒಂದು ದೇಶಕ್ಕೆ ಒಂದೇ ಸಂವಿಧಾನ, ಒಂದೇ ಚಿಹ್ನೆ ಎಂಬುದನ್ನು ಕಾಂಗ್ರೆಸ್‍ನವರು ಏಕೆ ವಿರೋಧ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷವೇ 370 ನೇ ವಿಧಿಯನ್ನು ತಾತ್ಕಾಲಿಕ ಎಂದು ಹೇಳುತ್ತದೆ. ಹಾಗಾದರೆ 370 ವಿಧಿ ಒಳ್ಳೆಯದೇ ಆಗಿದ್ದರೆ ಅದನ್ನು ಅವರು ಏಕೆ ಶಾಶ್ವತಗೊಳಿಸಲಿಲ್ಲ? ಕಾಂಗ್ರೆಸ್‍ನವರು ಒಂದು ಸಮಯದಲ್ಲಿ 400 ಜನ ಸಂಸದರನ್ನು ಹೊಂದಿದ್ದರು. ಅ ಸಮಯದಲ್ಲಿ ಅದನ್ನು ಏಕೆ ಶಾಶ್ವತಗೊಳಿಸಲಿಲ್ಲ ಎಂದು ಪ್ರಶ್ನೆ ಮಾಡಿದರು.

    370 ನೇ ವಿಧಿ ದೇಶಕ್ಕೆ ಮಾರಕ. ಇದು ರಾಷ್ಟ್ರೀಯ ಹಿತಾಸಕ್ತಿಯನ್ನು ಹೊಂದಿಲ್ಲ ಎಂಬುದು ಕಾಂಗ್ರೆಸ್ಸಿನವರಿಗೂ ಗೊತ್ತಿದೆ. ಆದರೆ ಅದನ್ನು ಅವರು ವೋಟ್ ಬ್ಯಾಂಕಿಗಾಗಿ ಬಳಸಿಕೊಳ್ಳುತ್ತಿದ್ದರು. ಯಾಕೆಂದರೆ ಕಾಂಗ್ರೆಸ್ ಪಕ್ಷಕ್ಕೆ ದೇಶಕ್ಕಿಂತ ವೋಟ್ ಮುಖ್ಯ ಎಂದು ಜೆಪಿ ನಡ್ಡಾ ಕಿಡಿಕಾರಿದರು.

    ಭಾರತ ಮತ್ತು ಪಾಕಿಸ್ತಾನ ವಿಭಜನೆಯಾದ ನಂತರದಲ್ಲಿ, ಪಾಕಿನಿಂದ ಹೈದರಾಬಾದ್‍ನಂತಹ ನಗರಗಳಿಗೆ ಬಂದ ಜನರು ಅಲ್ಲಿ ರಾಜಕೀಯ ನಾಯಕರಾದರು, ಉತ್ತಮ ಭವಿಷ್ಯ ಕಟ್ಟಿಕೊಂಡರು. ಆದರೆ ಜಮ್ಮು ಮತ್ತು ಕಾಶ್ಮೀರದಲ್ಲೇ ಇದ್ದ ಮೂಲ ನಿವಾಸಿಗಳು ಕೌನ್ಸಿಲರ್ ಆಗಲು ಕೂಡ ಸಾಧ್ಯವಾಗಲಿಲ್ಲ. ಅದಕ್ಕೆ ಕಾರಣ 370 ನೇ ವಿಧಿ ಎಂದು ನಡ್ಡಾ ಬೇಸರ ವ್ಯಕ್ತಪಡಿಸಿದರು.

    ಈಗ ಈ ಕೆಟ್ಟ ಪದ್ಧತಿ ರದ್ದಾಗಿದೆ ಈಗ ಯಾರು ಬೇಕಾದರೂ ಪರಿಶಿಷ್ಟ ಜಾತಿ ಮತ್ತು ಬುಡಕಟ್ಟು ಜನರಿಗೂ ಅಲ್ಲಿ ಚುನಾವಣೆಗೆ ನಿಲ್ಲಲು ಸ್ಥಾನ ಸಿಕ್ಕಿದೆ. ಭಾರತ ಮೊದಲ ಗೃಹಮಂತ್ರಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ದೇಶದ 500 ರಾಜ್ಯಗಳನ್ನು ಒಂದು ಮಾಡಿದರು. ಆದರೆ ಕಾಶ್ಮೀರ ಒಂದನ್ನು ನೆಹರೂ ಅವರಿಗೆ ಬಿಟ್ಟುಕೊಟ್ಟು ತಪ್ಪು ಮಾಡಿದರು. ಅದೂ ಈಗ ಸಮಸ್ಯೆಯಾಗಿದೆ ಎಂದರು.

    ಇದೇ ವೇಳೆ ಕೆಲವು ಟಿಡಿಪಿ ನಾಯಕರು ಬಿಜೆಪಿಗೆ ಸೇರ್ಪಡೆಯಾದ ವಿಚಾರದ ಬಗ್ಗೆ ಮಾತನಾಡಿದ ನಡ್ಡಾ, ಟಿಆರ್‍ಎಸ್ ಅಧ್ಯಕ್ಷ ಮತ್ತು ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ಸರ್ವಾಧಿಕಾರಿ ಶೈಲಿಯ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು. ರಾವ್ ಅವರು ತಮ್ಮ ಮತ್ತು ತಮ್ಮ ಕುಟುಂಬದ ಮೇಲೆ ಮಾತ್ರ ಗಮನ ಕೊಡುತ್ತಾರೆ ಎಂದು ಆರೋಪಿಸಿದ ಅವರು, ಟಿಆರ್‍ಎಸ್ ಸರ್ಕಾರವು ಎನ್‍ಡಿಎ ಸರ್ಕಾರದ ‘ಆಯುಷ್ಮಾನ್ ಭಾರತ್’ ಆರೋಗ್ಯ ಯೋಜನೆಯನ್ನು ಜಾರಿಗೆ ತಂದಿಲ್ಲ, ಇದರಿಂದ ಜನರು ಅದರ ಪ್ರಯೋಜನಗಳನ್ನು ಕಳೆದುಕೊಳ್ಳುತ್ತಾರೆ ಎಂದು ಹೇಳಿದರು.

  • ಕಾಂಗ್ರೆಸ್ಸಿನಲ್ಲೇ ಒಡಕು – ಕೇಂದ್ರದ ನಿರ್ಧಾರವನ್ನು ಬೆಂಬಲಿಸಿದ ಜ್ಯೋತಿರಾದಿತ್ಯ ಸಿಂಧಿಯಾ

    ಕಾಂಗ್ರೆಸ್ಸಿನಲ್ಲೇ ಒಡಕು – ಕೇಂದ್ರದ ನಿರ್ಧಾರವನ್ನು ಬೆಂಬಲಿಸಿದ ಜ್ಯೋತಿರಾದಿತ್ಯ ಸಿಂಧಿಯಾ

    ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸುವುದ್ದಕ್ಕೆ ಕಾಂಗ್ರೆಸ್ ಭಾರೀ ವಿರೋಧ ವ್ಯಕ್ತಪಡಿಸುತ್ತಾ ಬಂದಿದೆ. ಆದರೆ ಕಾಂಗ್ರೆಸ್‍ನ ಮಾಜಿ ಸಂಸದ ಜ್ಯೋತಿರಾದಿತ್ಯ ಸಿಂಧಿಯಾ ಅವರು ಕೇಂದ್ರ ಸರ್ಕಾರಕ್ಕೆ ತಮ್ಮ ಬೆಂಬಲ ಸೂಚಿಸಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿರುವ ಮಾಜಿ ಸಂಸದರು, ಜಮ್ಮು-ಕಾಶ್ಮೀರ ಹಾಗೂ ಲಡಾಖ್ ಪ್ರದೇಶವನ್ನು ಭಾರತದ ಒಕ್ಕೂಟಕ್ಕೆ ಸೇರಿಸುವುದಕ್ಕೆ ಬೆಂಬಲ ನೀಡುತ್ತೇನೆ. ಈ ಮೂಲಕ ಭಾರತವು ಸಂಪೂರ್ಣ ಏಕೀಕರಣವಾಗಲಿದೆ. ಆದರೆ ಸಾಂವಿಧಾನಿಕ ಪ್ರಕ್ರಿಯೆಯನ್ನು ಅನುಸರಿಸಿದ್ದರೆ ಚೆನ್ನಾಗಿರುತ್ತಿತ್ತು. ಆಗ ಯಾವುದೇ ಪ್ರಶ್ನೆಗಳನ್ನು ಎತ್ತಲು ಸಾಧ್ಯವಾಗುತ್ತಿರಲಿಲ್ಲ. ಅದೇನೇ ಇದ್ದರೂ, ಇದು ನಮ್ಮ ದೇಶದ ಹಿತಾಸಕ್ತಿ ಮತ್ತು ನಾನು ಇದನ್ನು ಬೆಂಬಲಿಸುತ್ತೇನೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    https://twitter.com/JM_Scindia/status/1158729410507182080

    ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಹೀಗಾಗಿ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಜ್ಯೋತಿರಾದಿತ್ಯ ಸಿಂಧಿಯಾ ಅವರ ಹೆಸರು ಕೇಳಿ ಬಂದಿತ್ತು. ಆದರೆ ಜ್ಯೋತಿರಾದಿತ್ಯ ಸಿಂಧಿಯಾ ಅವರು, ಅದನ್ನು ಅಲ್ಲಗಳೆದಿದ್ದರು. ಕಾಂಗ್ರೆಸ್ ಹಿರಿಯ ನಾಯಕರು, ಸಂಸದರು 370 ವಿಧಿ ರದ್ದುಗೊಳಿಸುವುದಕ್ಕೆ ಭಾರೀ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಜ್ಯೋತಿರಾದಿತ್ಯ ಸಿಂಧಿಯಾ ಅವರು ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಬೆಂಬಲ ನೀಡುವ ಮೂಲಕ ಭಾರೀ ಚರ್ಚೆಗೆ ಕಾರಣವಾಗಿದ್ದಾರೆ.

    ಇದಕ್ಕೂ ಮುನ್ನ ಟ್ವೀಟ್ ಮಾಡಿದ್ದ ರಾಹುಲ್ ಗಾಂಧಿ ಅವರು, ಏಕಪಕ್ಷೀಯವಾಗಿ ಜಮ್ಮು ಮತ್ತು ಕಾಶ್ಮೀರವನ್ನು ಇಬ್ಭಾಗ ಮಾಡುವ ನಿರ್ಧಾರ ಕೈಗೊಳ್ಳುವುದು, ಜನಪ್ರತಿನಿಧಿಗಳನ್ನು ಬಂಧಿಸುವುದು ಹಾಗೂ ಸಂವಿಧಾನವನ್ನು ಉಲ್ಲಂಘಿಸುವ ಮೂಲಕ ರಾಷ್ಟ್ರದ ಏಕೀಕರಣವನ್ನು ಹೆಚ್ಚಿಸಲು ಸಾಧ್ಯವಿಲ್ಲ. ಜನರಿಂದ ದೇಶ ನಿರ್ಮಾಣವಾಗಿದೆ. ಇದು ಕೇವಲ ತುಂಡು ಭೂಮಿಯಲ್ಲ. ಆಡಳಿತಾತ್ಮಕ ಅಧಿಕಾರದ ದುರುಪಯೋಗ ಮಾಡಿರುವುದು ರಾಷ್ಟ್ರೀಯ ಭದ್ರತೆಯ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಹೇಳಿದ್ದರು.

    ರಾಹುಲ್ ಗಾಂಧಿ ಅವರು ತಾಯಿ ಸೋನಿಯಾ ಗಾಂಧಿ ಹಾಗೂ ಕಾಂಗ್ರೆಸ್ ಸಂಸದರು ಹಾಗೂ ನಾಯಕರೊಂದಿಗೆ ನಡೆದ ಸಭೆ ಬಳಿಕ ಟ್ವೀಟ್ ಮಾಡಿ ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದರು.

    ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸುವ ಕುರಿತು ಸೋಮವಾರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯಸಭೆಯಲ್ಲಿ ಘೋಷಣೆ ಮಾಡಿದರು. ಈ ವೇಳೆ ಪಕ್ಷದ ನಾಯಕರು ವಿರೋಧ ವ್ಯಕ್ತಪಡಿಸುವಲ್ಲಿ ಎಡವಿದ್ದರಿಂದ ರಾಹುಲ್ ಗಾಂಧಿ ಚಕಾರ ಎತ್ತಿರಲಿಲ್ಲ.

    ಅಮಿತ್ ಶಾ 370ನೇ ವಿಧಿ ಹಾಗೂ 35ಎ ರದ್ದು ಪಡಿಸುವ ಘೋಷಣೆ ಕೂಗುತ್ತಿದ್ದಂತೆ ಕಾಂಗ್ರೆಸ್ ಸೇರಿದಂತೆ ವಿವಿಧ ವಿರೋಧ ಪಕ್ಷಗಳ ನಾಯಕರು ಗದ್ದಲ ಎಬ್ಬಿಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಲು ಪ್ರಾರಂಭಿಸಿದ್ದರು. ಅಲ್ಲದೆ, ಕಾಂಗ್ರೆಸ್ ನಾಯಕರು ಈ ನಿರ್ಧಾರವನ್ನು ‘ಪ್ರಜಾಪ್ರಭುತ್ವದ ಕಗ್ಗೊಲೆ’ ಎಂದು ಸಂಸತ್ ಹೊರಗಡೆ ಘೋಷಣೆ ಕೂಗಿದ್ದರು. ಇದಕ್ಕೆ ಜನಾರ್ಧನ್ ದ್ವಿವೇದಿ ಹಾಗೂ ದೀಪೇಂದರ್ ಹೂಡಾರಂತಹ ನಾಯಕರು ಸಹ ಬೆಂಬಲ ವ್ಯಕ್ತಪಡಿಸಿದ್ದರು.

    ಈ ಮಹತ್ವದ ಬೆಳವಣಿಗೆ ಹಿನ್ನೆಲೆ ತುರ್ತು ಸಭೆ ಕರೆಯುತ್ತೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ್ದ ರಾಹುಲ್ ಗಾಂಧಿ, ನಾನು ಕಾಂಗ್ರೆಸ್ ಅಧ್ಯಕ್ಷನಲ್ಲದ ಕಾರಣ ಯಾವುದೇ ಸಭೆ ಕರೆಯಲು ಸಾಧ್ಯವಿಲ್ಲ ಎಂದು ತಿಳಿಸಿದ್ದರು. ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗದ ಕಾರಣ ರಾಹುಲ್ ಗಾಂಧಿ ಅವರು ಮೇನಲ್ಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

    ಇಂದು ಬೆಳಗ್ಗೆ ಕಾಂಗ್ರೆಸ್ ವರಿಷ್ಠೆ, ರಾಹುಲ್ ಗಾಂಧಿ ಅವರ ತಾಯಿ ಸೋನಿಯಾ ಗಾಂಧಿ ಅವರು ಕೇಂದ್ರ ಸರ್ಕಾರದ ನಿರ್ಧಾರದ ಕುರಿತು ಚರ್ಚಿಸಲು ಸಭೆ ಕರೆದಿದ್ದರು. ಸಭೆಯಲ್ಲಿ ಕೇಂದ್ರ ಸರ್ಕಾರದ ಕ್ರಮವನ್ನು ವಿರೋಧಿಸಬೇಕೇ ಅಥವಾ ಬೆಂಬಲಿಸಬೇಕೇ ಎಂಬುದರ ಕುರಿತು ಚರ್ಚೆ ನಡೆಸಿದ್ದಾರೆ. ಕೇಂದ್ರ ಸರ್ಕಾರದ ನಡೆಯನ್ನು ನಾವು ವಿರೋಧಿಸುತ್ತೇವೆ. ಆದರೆ, ನಮ್ಮ ವಿರೋಧವು ಜಮ್ಮು ಮತ್ತು ಕಾಶ್ಮೀರದ ಜನತೆ ಹಾಗೂ ರಾಜ್ಯದ ವಿಧಾನಸಭೆಯನ್ನು ಸಂಪರ್ಕಿಸದಿರುವುದನ್ನು ಆಧರಿಸಿದೆ ಎಂದು ಕಾಂಗ್ರೆಸ್ ಸಂಸದರು ಹಾಗೂ ನಾಯಕರಿಗೆ ಸಭೆಯಲ್ಲಿ ಸ್ಪಷ್ಟಪಡಿಸಲಾಗಿತ್ತು.

  • ದೀರ್ಘಕಾಲದ ಬೇಡಿಕೆ ಈಡೇರಿದೆ – ಕೇಂದ್ರವನ್ನು ಹೊಗಳಿದ ಮಾಯಾವತಿ

    ದೀರ್ಘಕಾಲದ ಬೇಡಿಕೆ ಈಡೇರಿದೆ – ಕೇಂದ್ರವನ್ನು ಹೊಗಳಿದ ಮಾಯಾವತಿ

    ಲಕ್ನೋ: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ಕೇಂದ್ರ ಸರ್ಕಾರದ ನಿರ್ಧಾರವನ್ನು ಸಮಾಜವಾದಿ ಪಕ್ಷದ ವರಿಷ್ಠೆ ಮಾಯಾವತಿ ಅವರು ಬೆಂಬಲಿಸಿದ ಬೆನ್ನಲ್ಲೇ ಇದೀಗ ಕೇಂದ್ರ ಸರ್ಕಾರವನ್ನು ಹಾಡಿ ಹೊಗಳಿದ್ದಾರೆ.

    ಸಂವಿಧಾನದಲ್ಲಿ ರೂಪಿಸಲಾದ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯವನ್ನು ದೇಶಾದ್ಯಂತ ವಿಸ್ತರಿಸಬೇಕು. 370ನೇ ವಿಧಿ ಮತ್ತು 35ಎ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದು ದೀರ್ಘಕಾಲದ ಬೇಡಿಕೆಯಾಗಿತ್ತು. ಅದು ಈಗ ಈಡೇರಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

    ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ಜಮ್ಮು ಮತ್ತು ಕಾಶ್ಮೀರದ ಜನತೆ ಉತ್ತಮ ಲಾಭ ಪಡೆಯಲಿದ್ದಾರೆ ಎಂದು ಬಿಎಸ್‍ಪಿ ನಂಬಿದೆ ಎಂದು ಟ್ವೀಟ್ ಮಾಡುವ ಮೂಲಕ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

    ಅಲ್ಲದೆ, ಲಡಾಕ್‍ನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಿದ್ದ ನಿರ್ಧಾರವನ್ನು ಸಹ ಮಾಯಾವತಿ ಅವರು ಸ್ವಾಗತಿಸಿದ್ದಾರೆ. ಇದರಿಂದ ಬೌದ್ಧ ಜನರ ಹಳೆಯ ಬೇಡಿಕೆಗಳನ್ನು ಈಡೇರಿಸಿದಂತಾಗಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರ ಬೌದ್ಧ ಅನುಯಾಯಿಗಳು ದೇಶಾದ್ಯಂತ ಸಂತಸಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.

    ಸೋಮವಾರ ರಾಜ್ಯಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಪರಿಚಯಿಸಿದ 370ನೇ ವಿಧಿ ಹಾಗೂ 35ಎ ರದ್ದತಿ ಕುರಿತ ನಿರ್ಧಾರಕ್ಕೆ ಹಲವು ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ. ಆದರೆ, ಕೇಂದ್ರ ಸರ್ಕಾರದ ನಿಲುವಿಗೆ ಬಿಎಸ್‍ಪಿ ಬೆಂಬಲ ವ್ಯಕ್ತಪಡಿಸಿತ್ತು.

  • ತುಂಡು ಭೂಮಿಯಿಂದಲ್ಲ, ಜನರಿಂದ ದೇಶ ನಿರ್ಮಾಣ – ಕೇಂದ್ರದ ವಿರುದ್ಧ ರಾಹುಲ್ ಕಿಡಿ

    ತುಂಡು ಭೂಮಿಯಿಂದಲ್ಲ, ಜನರಿಂದ ದೇಶ ನಿರ್ಮಾಣ – ಕೇಂದ್ರದ ವಿರುದ್ಧ ರಾಹುಲ್ ಕಿಡಿ

    ನವದೆಹಲಿ: ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಪಡಿಸಿದ ಕೇಂದ್ರ ಸರ್ಕಾರದ ನಡೆ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಡೆಗೂ ಮೌನ ಮುರಿದಿದ್ದು, ದೇಶದ ಭದ್ರತೆ ಮೇಲೆ ಇದು ಗಂಭೀರ ಪರಿಣಾಮ ಬೀರಲಿದೆ ಎಂದು ಟ್ವೀಟ್ ಮಾಡಿದ್ದಾರೆ.

    ಏಕಪಕ್ಷೀಯವಾಗಿ ಜಮ್ಮು ಮತ್ತು ಕಾಶ್ಮೀರವನ್ನು ಇಬ್ಭಾಗ ಮಾಡುವ ನಿರ್ಧಾರ ಕೈಗೊಳ್ಳುವುದು, ಜನಪ್ರತಿನಿಧಿಗಳನ್ನು ಬಂಧಿಸುವುದು ಹಾಗೂ ಸಂವಿಧಾನವನ್ನು ಉಲ್ಲಂಘಿಸುವ ಮೂಲಕ ರಾಷ್ಟ್ರದ ಏಕೀಕರಣವನ್ನು ಹೆಚ್ಚಿಸಲು ಸಾಧ್ಯವಿಲ್ಲ. ಜನರಿಂದ ದೇಶ ನಿರ್ಮಾಣವಾಗಿದೆ. ಇದು ಕೇವಲ ತುಂಡು ಭೂಮಿಯಲ್ಲ. ಆಡಳಿತಾತ್ಮಕ ಅಧಿಕಾರದ ದುರುಪಯೋಗ ಮಾಡಿರುವುದು ರಾಷ್ಟ್ರೀಯ ಭದ್ರತೆಯ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡುವ ಮೂಲಕ ಕೇಂದ್ರ ಸರ್ಕಾರದ ನಿರ್ಧಾರದ ಕುರಿತು ಕಿಡಿ ಕಾರಿದ್ದಾರೆ.

    ರಾಹುಲ್ ಗಾಂಧಿ ಅವರು ತಾಯಿ ಸೋನಿಯಾ ಗಾಂಧಿ ಹಾಗೂ ಕಾಂಗ್ರೆಸ್ ಸಂಸದರು ಹಾಗೂ ನಾಯಕರೊಂದಿಗೆ ನಡೆದ ಸಭೆ ಬಳಿಕ ಟ್ವೀಟ್ ಮಾಡಿ ತಮ್ಮ ನಿರ್ಧಾರವನ್ನು ಪ್ರಕಟಿಸಿದರು.

    ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸುವ ಕುರಿತು ಸೋಮವಾರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯಸಭೆಯಲ್ಲಿ ಘೋಷಣೆ ಮಾಡಿದರು. ಈ ವೇಳೆ ಪಕ್ಷದ ನಾಯಕರು ವಿರೋಧ ವ್ಯಕ್ತಪಡಿಸುವಲ್ಲಿ ಎಡವಿದ್ದರಿಂದ ರಾಹುಲ್ ಗಾಂಧಿ ಚಕಾರ ಎತ್ತಿರಲಿಲ್ಲ.

    ಅಮಿತ್ ಶಾ 370ನೇ ವಿಧಿ ಹಾಗೂ 35ಎ ರದ್ದು ಪಡಿಸುವ ಘೋಷಣೆ ಕೂಗುತ್ತಿದ್ದಂತೆ ಕಾಂಗ್ರೆಸ್ ಸೇರಿದಂತೆ ವಿವಿಧ ವಿರೋಧ ಪಕ್ಷಗಳ ನಾಯಕರು ಗದ್ದಲ ಎಬ್ಬಿಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಲು ಪ್ರಾರಂಭಿಸಿದ್ದರು. ಅಲ್ಲದೆ, ಕಾಂಗ್ರೆಸ್ ನಾಯಕರು ಈ ನಿರ್ಧಾರವನ್ನು ‘ಪ್ರಜಾಪ್ರಭುತ್ವದ ಕಗ್ಗೊಲೆ’ ಎಂದು ಸಂಸತ್ ಹೊರಗಡೆ ಘೋಷಣೆ ಕೂಗಿದ್ದರು. ಇದಕ್ಕೆ ಜನಾರ್ಧನ್ ದ್ವಿವೇದಿ ಹಾಗೂ ದೀಪೇಂದರ್ ಹೂಡಾರಂತಹ ನಾಯಕರು ಸಹ ಬೆಂಬಲ ವ್ಯಕ್ತಪಡಿಸಿದ್ದರು.

    ಈ ಮಹತ್ವದ ಬೆಳವಣಿಗೆ ಹಿನ್ನೆಲೆ ತುರ್ತು ಸಭೆ ಕರೆಯುತ್ತೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ್ದ ರಾಹುಲ್ ಗಾಂಧಿ, ನಾನು ಕಾಂಗ್ರೆಸ್ ಅಧ್ಯಕ್ಷನಲ್ಲದ ಕಾರಣ ಯಾವುದೇ ಸಭೆ ಕರೆಯಲು ಸಾಧ್ಯವಿಲ್ಲ ಎಂದು ತಿಳಿಸಿದ್ದರು. ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗದ ಕಾರಣ ರಾಹುಲ್ ಗಾಂಧಿ ಅವರು ಮೇನಲ್ಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

    ಇಂದು ಬೆಳಗ್ಗೆ ಕಾಂಗ್ರೆಸ್ ವರಿಷ್ಠೆ, ರಾಹುಲ್ ಗಾಂಧಿ ಅವರ ತಾಯಿ ಸೋನಿಯಾ ಗಾಂಧಿ ಅವರು ಕೇಂದ್ರ ಸರ್ಕಾರದ ನಿರ್ಧಾರದ ಕುರಿತು ಚರ್ಚಿಸಲು ಸಭೆ ಕರೆದಿದ್ದರು. ಸಭೆಯಲ್ಲಿ ಕೇಂದ್ರ ಸರ್ಕಾರದ ಕ್ರಮವನ್ನು ವಿರೋಧಿಸಬೇಕೇ ಅಥವಾ ಬೆಂಬಲಿಸಬೇಕೇ ಎಂಬುದರ ಕುರಿತು ಚರ್ಚೆ ನಡೆಸಿದ್ದಾರೆ. ಕೇಂದ್ರ ಸರ್ಕಾರದ ನಡೆಯನ್ನು ನಾವು ವಿರೋಧಿಸುತ್ತೇವೆ. ಆದರೆ, ನಮ್ಮ ವಿರೋಧವು ಜಮ್ಮು ಮತ್ತು ಕಾಶ್ಮೀರದ ಜನತೆ ಹಾಗೂ ರಾಜ್ಯದ ವಿಧಾನಸಭೆಯನ್ನು ಸಂಪರ್ಕಿಸದಿರುವುದನ್ನು ಆಧರಿಸಿದೆ ಎಂದು ಕಾಂಗ್ರೆಸ್ ಸಂಸದರು ಹಾಗೂ ನಾಯಕರಿಗೆ ಸಭೆಯಲ್ಲಿ ಸ್ಪಷ್ಟಪಡಿಸಲಾಗಿತ್ತು.

  • 370ನೇ ವಿಧಿ ರದ್ದು ಪ್ರಜಾಪ್ರಭುತ್ವದ ಮೇಲೆ ನಡೆಸಲಾದ ದಾಳಿ – ಕಮಲ್ ಹಾಸನ್

    370ನೇ ವಿಧಿ ರದ್ದು ಪ್ರಜಾಪ್ರಭುತ್ವದ ಮೇಲೆ ನಡೆಸಲಾದ ದಾಳಿ – ಕಮಲ್ ಹಾಸನ್

    ಚೆನ್ನೈ: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಪಡಿಸಿದ್ದಕ್ಕೆ ನಟ ಹಾಗೂ ರಾಜಕಾರಣಿ ಕಮಲ್ ಹಾಸನ್ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಇದು ‘ಪ್ರಜಾಪ್ರಭುತ್ವದ ಮೇಲೆ ನಡೆಸಲಾದ ಸ್ಪಷ್ಟ ದಾಳಿ’ ಎಂದು ಕಿಡಿಕಾರಿದ್ದಾರೆ.

    ಜಮ್ಮು ಕಾಶ್ಮೀರವನ್ನು ಎರಡು ಭಾಗಗಳನ್ನಾಗಿ ವಿಂಗಡಿಸಿ, ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಘೋಷಿಸಿರುವುದು ಪ್ರಜಾಪ್ರಭುತ್ವದ ಮೇಲೆ ನಡೆದ ಸ್ಪಷ್ಟ ದಾಳಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಇದು ಅತ್ಯಂತ ಆಘಾತಕಾರಿ ಹಾಗೂ ನಿರಂಕುಶಾಧಿಕಾರತ್ವ. 370ನೇ ವಿಧಿ ಮತ್ತು 35ಎ ತನ್ನದೇ ಆದ ಮೂಲ ಹೊಂದಿವೆ. ಹೀಗಾಗಿ ಈ ಕುರಿತು ಯಾವುದೇ ಬದಲಾವಣೆ ತರಬೇಕಾದಲ್ಲಿ ಸಮಾಲೋಚನೆ ನಡೆಸಿ ನಂತರ ತೀರ್ಮಾನ ಕೈಗೊಳ್ಳಬೇಕಿತ್ತು ಎಂದು ಕಳೆದ ವರ್ಷ ಮಕ್ಕಳ್ ನಿಧಿ ಮೈಯಂ ಪಕ್ಷ (ಎಂಎನ್‍ಎಂ) ಸ್ಥಾಪಿಸಿದ್ದ ನಟ ಕಮಲ್ ಹಾಸನ್ ಅಭಿಪ್ರಾಯಪಟ್ಟಿದ್ದಾರೆ.

    ಪ್ರತಿಪಕ್ಷಗಳೊಂದಿಗೆ ಸಮಾಲೋಚನೆ ನಡೆಸದೆ ಕೇಂದ್ರ ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಮತಕ್ಕೆ ಹಾಕುವ ಮುನ್ನ ವಿರೋಧ ಪಕ್ಷಗಳೊಂದಿಗೆ ಚರ್ಚೆ ನಡೆಸಬೇಕಿತ್ತು. ಈ ಮೂಲಕ ಬಿಲ್ ಕುರಿತು ಪರಿಶೀಲನೆ ನಡೆಸಬೇಕಿತ್ತು. ಆದರೆ, ಬಲವಂತವಾಗಿ ವಿರೋಧ ಪಕ್ಷಗಳ ಬಾಯನ್ನು ಮುಚ್ಚಿಸಿ ಬಿಲ್ ಪಾಸ್ ಮಾಡಲಾಗಿದೆ ಎಂದು ಕಿಡಿಕಾರಿದ್ದಾರೆ.

    ಕೇಂದ್ರ ಸರ್ಕಾರ ಸೋಮವಾರ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸಂವಿಧಾನಿಕ ಸವಲತ್ತುನ್ನು ಹಿಂಪಡೆದಿದ್ದು, ಈ ಮೂಲಕ ಜಮ್ಮು ಕಾಶ್ಮೀರಕ್ಕೆ ನೀಡಿದ್ದ ಸ್ವಾಯತ್ತತೆಯನ್ನು ರದ್ದುಗೊಳಿಸಿದೆ. ಅಲ್ಲದೆ, ಜಮ್ಮು ಮತ್ತು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಿ, ಆದೇಶ ಹೊರಡಿಸಿದೆ.

    ಜಮ್ಮು ಕಾಶ್ಮೀರವನ್ನು ದೇಶದ ಉಳಿದ ಭಾಗಗಳೊಂದಿಗೆ ಒಟ್ಟು ಗೂಡಿಸುವುದು ಹಾಗೂ ಭಯೋತ್ಪಾದನೆಯನ್ನು ಎದುರಿಸುವುದು ನಮ್ಮ ಗುರಿಯಾಗಿದೆ ಎಂದು ಕೇಂದ್ರ ಸರ್ಕಾರ ನಿನ್ನೆಯಷ್ಟೇ ತಿಳಿಸಿತ್ತು. ಆದರೆ, ಕಾಂಗ್ರೆಸ್ ಸೇರಿದಂತೆ ವಿವಿಧ ವಿರೋಧ ಪಕ್ಷಗಳು ಈ ನಿರ್ಧಾರ ರಾಜಕೀಯವಾಗಿ ಹಾಗೂ ಸಾಮಾಜಿಕವಾಗಿ ಬಹುದೊಡ್ಡ ಪರಿಣಾಮಗಳನ್ನು ಉಂಟು ಮಾಡುತ್ತದೆ. ಅಲ್ಲದೆ, ರಾಜ್ಯದಲ್ಲಿ ಅಶಾಂತಿಯನ್ನು ಸೃಷ್ಟಿಸುತ್ತದೆ. ಕೇಂದ್ರ ಸರ್ಕಾರದ ಈ ನಿರ್ಧಾರ ‘ಪ್ರಜಾಪ್ರಭುತ್ವದ ಕಗ್ಗೊಲೆ’ ಎಂದು ಆಕ್ರೋಶ ವ್ಯಕ್ತಪಡಿಸಿವೆ.

    370ನೇ ವಿಧಿಯನ್ನು ರದ್ದುಗೊಳಿಸುವುದಕ್ಕೂ ಮುನ್ನ ಜಮ್ಮು ಕಾಶ್ಮೀರದಲ್ಲಿ ಅಶಾಂತಿ, ಸಾರ್ವಜನಿಕರಿಗೆ ತೊಂದರೆಯಾಗಬಹುದು ಎಂಬ ಕಾರಣಕ್ಕೆ ಹೆಚ್ಚು ಸೈನಿಕರನ್ನು ಸ್ಥಳಾಂತರಿಸಿ ಸಂಪೂರ್ಣ ಭದ್ರತೆಯನ್ನು ಒದಗಿಸಲಾಗಿತ್ತು. ಇದೇ ಧೈರ್ಯದಿಂದಲೇ ಗೃಹ ಸಚಿವ ಅಮಿತ್ ಶಾ ರಾಜ್ಯಸಭೆಯಲ್ಲಿ 370ನೇ ವಿಧಿಯನ್ನು ರದ್ದುಗೊಳಿಸುವ ಕುರಿತು ಘೋಷಿಸಿದರು.

    ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಕ್ಯಾಬಿನೆಟ್ ಸಭೆ ನಂತರ ಅಮಿತ್ ಶಾ ಅವರು ರಾಜ್ಯಸಭೆಯಲ್ಲಿ ‘ಭಾರತದ ಸಂಪೂರ್ಣ ಸಂವಿಧಾನ’ ಜಮ್ಮು ಕಾಶ್ಮೀರಕ್ಕೂ ಅನ್ವಯವಾಗಲಿದೆ ಎಂದು ತಿಳಿಸಿದರು.