Tag: ಜಮ್ಮು ಮತ್ತು ಕಾಶ್ಮೀರ

  • ಭಾರತಕ್ಕೆ ಕೊರೊನಾ ಸೋಂಕಿತರನ್ನ ಕಳಿಸ್ತಿದೆಯಾ ಪಾಕಿಸ್ತಾನ?

    ಭಾರತಕ್ಕೆ ಕೊರೊನಾ ಸೋಂಕಿತರನ್ನ ಕಳಿಸ್ತಿದೆಯಾ ಪಾಕಿಸ್ತಾನ?

    -ಸೈನಿಕರ ಗುಂಡೇಟಿಗೆ ಬಲಿಯಾದ ಇಬ್ಬರಿಗೆ ಕೊರೊನಾ

    ಶ್ರೀನಗರ: ನೆರೆಯ ವೈರಿ ರಾಷ್ಟ್ರ ಪಾಕಿಸ್ತಾನ ಕೊರೊನಾ ಸೋಂಕಿತರನ್ನ ಭಾರತಕ್ಕೆ ರಹಸ್ಯವಾಗಿ ಕಳಿಸ್ತಿದೆಯಾ ಎಂಬ ಅನುಮಾನ ಹುಟ್ಟಿಕೊಂಡಿದೆ. ಶನಿವಾರ ಸೈನಿಕರ ಗುಂಡಿಗೆ ಬಲಿಯಾದ ಇಬ್ಬರು ಉಗ್ರರಿಗೆ ಕೊರೊನಾ ಸೋಂಕು ತಗುಲಿರೋದು ಖಚಿತವಾಗಿದೆ.

    ಇಬ್ಬರು ಉಗ್ರರು ಸಾವನ್ನಪ್ಪಿದ ಬಳಿಕ ಮೃತದೇಹಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇಂದು ಬಂದ ವರದಿಯಲ್ಲಿ ಇಬ್ಬರು ಕೊರೊನಾ ಸೋಂಕಿತರು ಎಂಬ ವಿಚಾರ ಬೆಳಕಿಗೆ ಬಂದಿದೆ. ಕೊರೊನಾ ಸೋಂಕಿತರನ್ನು ಭಾರತದೊಳಗೆ ಕಳಿಸಲು ಪಾಕ್ ಪ್ರಯತ್ನಿಸುತ್ತಿದೆ ಅನ್ನೋ ಅನುಮಾನಗಳು ದಟ್ಟವಾಗುತ್ತಿವೆ.

    ಈ ಕುರಿತು ಮಾಹಿತಿ ನೀಡಿರುವ ಜಮ್ಮು-ಕಾಶ್ಮೀರ ಪೊಲೀಸರು, ದಕ್ಷಿಣ ಕಾಶ್ಮೀರದ ಕುಲ್‍ಗಾಮ್ ಮತ್ತು ಆರಾ ಗ್ರಾಮದ ಬಳಿ ನಡೆದ ಎನ್‍ಕೌಂಟರ್ ನಲ್ಲಿ ಇಬ್ಬರು ಸಾವನ್ನಪ್ಪಿದ್ದರು. ಮೃತದೇಹಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಿದಾಗ ಪಾಸಿಟಿವ್ ಬಂದಿದೆ ಎಂದು ಹೇಳಿದ್ದಾರೆ.

    ದಕ್ಷಿಣ ಕಾಶ್ಮೀರದ ಕುಲಗಾಮ್ ಮತ್ತು ಆರಾ ಗ್ರಾಮದ ವ್ಯಾಪ್ತಿಯಲ್ಲಿ ಇಬ್ಬರು ಅಡಗಿರೋ ವಿಷಯ ಸೇನೆಗೆ ಲಭ್ಯವಾಗಿತ್ತು. ಸ್ಥಳಕ್ಕೆ ತೆರಳಿದ್ದ ಸೇನಾ ಅಧಿಕಾರಿಗಳು ಇಬ್ಬರಿಗೂ ಶರಣಾಗುವಂತೆ ಹೇಳಿದ್ದರು. ಆದ್ರೆ ಇಬ್ಬರು ಗುಂಡಿನ ದಾಳಿ ನಡೆಸಲು ಆರಂಭಿಸಿದ್ದರು. ಇತ್ತ ಪ್ರತ್ಯುತ್ತರವಾಗಿ ಸೇನೆ ಉತ್ತರ ನೀಡಿದೆ. ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರನ್ನು ಸೇನೆ ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿತ್ತು.

    ಸಾವನ್ನಪ್ಪಿದ ಓರ್ವನ ಹೆಸರು ಅಲಿ ಹೈದರ್ ಎಂದು ತಿಳಿದು ಬಂದಿದ್ದು, ಮತ್ತೋರ್ವನ ಗುರುತು ಪತ್ತೆಯಾಗಿಲ್ಲ. ಮೃತರಿಬ್ಬರು ನಿಷೇಧಿತ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆ ಸೇರಿದವರಾಗಿದ್ದಾರೆ. ಗುಂಡಿನ ಚಕಮಕಿಯಲ್ಲಿ ಸೈನಿಕರೊಬ್ಬರು ಗಾಯಗೊಂಡಿದ್ದು, ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

  • ಉಗ್ರರ ಗುಂಡಿಗೆ ಬಲಿಯಾದ ಅಜ್ಜನ ಶವದ ಮೇಲೆ ಕುಳಿತ ಮೊಮ್ಮಗನ ರಕ್ಷಣೆ

    ಉಗ್ರರ ಗುಂಡಿಗೆ ಬಲಿಯಾದ ಅಜ್ಜನ ಶವದ ಮೇಲೆ ಕುಳಿತ ಮೊಮ್ಮಗನ ರಕ್ಷಣೆ

    -ಎದ್ದೇಳು ಅಜ್ಜ, ತಿಂಡಿ ಕೊಡಿಸು

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಗುಂಡಿನ ಚಕಮಕಿ ನಡೆಯುತ್ತಲೇ ಇರುತ್ತದೆ. ಉಗ್ರರ ದಾಳಿಗೆ ನಾಗರಿಕೊಬ್ಬರು ಬಲಿಯಾಗಿದ್ದು, ಇದನ್ನಾವುದು ತಿಳಿಯದ ಮೂರು ವರ್ಷದ ಕಂದಮ್ಮ ಅಜ್ಜನ ಎದೆ ಮೇಲೆ ಕುಳಿತು ಎದ್ದೇಳು ಎಂದು ಹೇಳುತ್ತಿರುವ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಭದ್ರತಾ ಸಿಬ್ಬಂದಿ ಮಗುವನ್ನು ರಕ್ಷಣೆ ಮಾಡಿದ್ದು, ಪೋಷಕರ ಮಡಿಲಿಗೆ ಸೇರಿಸಿದ್ದಾರೆ.

    ಉಗ್ರರು ರಸ್ತೆಯಲ್ಲಿ ಹೋಗುತ್ತಿದ್ದ ವ್ಯಕ್ತಿಯ ಮೇಲೆ ದಾಳಿ ನಡೆಸಿದ್ದಾರೆ. ಗುಂಡಿನ ದಾಳಿಗೆ ಬಲಿಯಾದ ವ್ಯಕ್ತಿ ರಸ್ತೆಯಲ್ಲೇ ಸಾವನ್ನಪ್ಪಿದ್ದಾರೆ. ಆತನ ಜೊತೆಯಲ್ಲಿದ್ದ ಮಗು ಮಾತ್ರ ಅಜ್ಜನನ್ನು ಬಿಟ್ಟು ಕದಲಿಲ್ಲ. ಕೊನೆಗೆ ಸೈನಿಕರು ಮಗುವನ್ನು ತಮ್ಮ ಬಳಿ ಕರೆದುಕೊಂಡು ಬಂದು ರಕ್ಷಣೆ ಮಾಡಿದ್ದರೆ.

    ಸೊಪೊರದಲ್ಲಿ ಉಗ್ರರು ಮತ್ತು ಸಿಆರ್ ಪಿಎಫ್ ನಡುವೆ ಗುಂಡಿನ ಚಕಮಕಿ ನಡೆಯುತ್ತಿದೆ. ಈ ಗುಂಡಿನ ಘರ್ಷಣೆಯಲ್ಲಿ ಓರ್ವ ಯೋಧ ಹುತಾತ್ಮರಾಗಿದ್ರೆ, ಸ್ಥಳೀಯ ವ್ಯಕ್ತಿ ಸಾವನ್ನಪ್ಪಿದ್ದಾರೆ. ಸಾವನ್ನಪ್ಪಿರುವ ವ್ಯಕ್ತಿ ಮೊಮ್ಮಗನಿಗೆ ತಿಂಡಿ ಕೊಡಿಸಲು ಕರೆದುಕೊಂಡು ಹೋಗುತ್ತಿದ್ದರು. ಈ ವೇಳೆ ಉಗ್ರರ ದಾಳಿಗೆ ಬಲಿಯಾಗಿದ್ದಾರೆ.

  • ಅಕ್ರಮ ಗಡಿ ನುಸುಳಲು ಪ್ರಯತ್ನ – 24 ಗಂಟೆಯಲ್ಲಿ ಐವರು ಉಗ್ರರು ಮಟಾಶ್

    ಅಕ್ರಮ ಗಡಿ ನುಸುಳಲು ಪ್ರಯತ್ನ – 24 ಗಂಟೆಯಲ್ಲಿ ಐವರು ಉಗ್ರರು ಮಟಾಶ್

    ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಅನಂತ್‍ನಾಗ್ ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ಅಕ್ರಮವಾಗಿ ಗಡಿ ನುಸುಳಲು ಪ್ರಯತ್ನಿಸಿದ ಐವರು ಭಯೋತ್ಪಾದಕರು ಹತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಅನಂತ್‍ನಾಗ್‍ನ ವಾಘಮಾ ಪ್ರದೇಶದಲ್ಲಿ ಇಂದು ನಡೆದ ಎನ್‍ಕೌಂಟರ್ ನಲ್ಲಿ ಇಬ್ಬರು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ. ಕಳೆದ 24 ಗಂಟೆಗಳಲ್ಲಿ ಅನಂತ್‍ನಾಗ್ ಪೊಲೀಸರು ಮತ್ತು ಭದ್ರತಾ ಪಡೆಗಳು ಐದು ಭಯೋತ್ಪಾದಕರನ್ನು ಹೊಡೆದುರುಳಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ವಿಜಯ್ ಕುಮಾರ್ ತಿಳಿಸಿದ್ದಾರೆ.

    ಮೂವರು ಉಗ್ರರ ಬಗ್ಗೆ ಮಾಹಿತಿ ಇತ್ತು. ಅವರಲ್ಲಿ ಒಬ್ಬರು ಜೆಕೆಐಎಫ್‍ನ ಕಮಾಂಡರ್ ಮತ್ತೊಬ್ಬ ಉಗ್ರ ಜಹೀದ್ ದಾರ್ ಭಾರತದ ಒಳಗೆ ನುಸುಳಲು ಯಶಸ್ವಿಯಾಗಿದ್ದರು. ಜಮ್ಮು ಕಾಶ್ಮೀರ ಪೊಲೀಸರು, ಭಾರತೀಯ ಸೇನೆ ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆ ಸಿಬ್ಬಂದಿ ಈ ಪ್ರದೇಶವನ್ನು ಸುತ್ತುವರೆದಿದ್ದು ದಾಳಿ ಮಾಡಲಾಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

  • ಕಥುವಾದಲ್ಲಿ 13ರ ಬಾಲೆಯನ್ನ ಅತ್ಯಾಚಾರಗೈದ 50 ವರ್ಷದ ವ್ಯಕ್ತಿ

    ಕಥುವಾದಲ್ಲಿ 13ರ ಬಾಲೆಯನ್ನ ಅತ್ಯಾಚಾರಗೈದ 50 ವರ್ಷದ ವ್ಯಕ್ತಿ

    ಶ್ರೀನಗರ: 50 ವರ್ಷದ ವ್ಯಕ್ತಿ 13 ವರ್ಷದ ಬಾಲಕಿಯ ಮೇಲೆ ಅತ್ಯಾಚಾರಗೈದಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ನಡೆದಿದೆ.

    ಬಾಲಕಿಯ ಜಾನುವಾರಗಳನ್ನು ಮೇಯಿಸಲು ಅರಣ್ಯ ಪ್ರದೇಶಕ್ಕೆ ತೆರಳಿದಾಗ ಘಟನೆ ನಡೆದಿದೆ. 50 ವರ್ಷದ ಕಾಮುಕ ಸ್ಥಳೀಯ ರೈತ ಎಂದು ವರದಿಯಾಗಿದೆ. ಈ ಸಂಬಂಧ ರಾಜಭಾಗ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ವಶಕ್ಕೆ ಪಡೆದಿರೋ ಪೊಲೀಸರು ಆತನನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

    2018ರಲ್ಲಿ ಜಾನುವಾರುಗಳನ್ನು ಮೇಯಿಸಲು ಅರಣ್ಯ ಪ್ರದೇಶಕ್ಕೆ ತೆರಳಿದ್ದ ಬಾಲಕಿಯನ್ನು ಅತ್ಯಾಚಾರಗೈದು ಕೊಲೆ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅಪರಾಧಿಗಳಿಹೆ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತೆ ಮೂವರಿಗೆ ಐದು ವರ್ಷ ಜೈಲು ಶಿಕ್ಷೆಯನ್ನು ವಿಧಿಸಿ ತೀರ್ಪು ನೀಡಿದೆ.

  • ಜಮ್ಮು, ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ – ಓರ್ವ ಉಗ್ರನನ್ನು ಸದೆಬಡಿದ ಸೇನೆ

    ಜಮ್ಮು, ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ – ಓರ್ವ ಉಗ್ರನನ್ನು ಸದೆಬಡಿದ ಸೇನೆ

    ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ ಮುಂದುವರೆದಿದ್ದು, ಪುಲ್ವಾಮಾ ಜಿಲ್ಲೆಯ ಆವಂತಿಪುರದಲ್ಲಿ ಜಂಟಿ ಕಾರ್ಯಚರಣೆ ವೇಳೆ ನಡೆದ ಎನ್‍ಕೌಂಟರ್ ನಲ್ಲಿ ಹಿಜ್ಬುಲ್‍ನ ಓರ್ವ ಉಗ್ರನನ್ನು ಸದೆಬಡಿಯಲಾಗಿದೆ.

    ಆವಂತಿಪುರದಲ್ಲಿ ಭಾರತೀಯ ಸೇನೆ, ಸಿಆರ್‌ಪಿಎಫ್ ಸಿಬ್ಬಂದಿ ಹಾಗೂ ಜಮ್ಮು ಕಾಶ್ಮೀರದ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಓರ್ವ ಉಗ್ರನನ್ನು ಎನ್‍ಕೌಂಟರ್ ಮಾಡಲಾಗಿದೆ. ಎನ್‍ಕೌಂಟರ್ ನಲ್ಲಿ ಹತ್ಯೆಯಾದ ಉಗ್ರನನ್ನು ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಕಮಾಂಡರ್ ರಿಯಾಜ್ ನಾಯ್ಕು ಎಂದು ಗುರುತಿಸಲಾಗಿದೆ.

    ಪುಲ್ವಾಮಾದ ಶರ್ಸಾಲಿ ಗ್ರಾಮದಲ್ಲಿ ಇನ್ನಷ್ಟು ಉಗ್ರರು ಅಡಗಿರುವ ಮಾಹಿತಿ ಲಭ್ಯವಾದ ಹಿನ್ನೆಲೆ ಸೇನಾ ಪಡೆ ಕಾರ್ಯಾಚರಣೆಯನ್ನು ಮುಂದುವರೆಸಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಗ್ರಾಮದ ಸುತ್ತಮುತ್ತಲಿನ 12ರಿಂದ 15 ಮನೆಗಳ ಜನರನ್ನು ಬೇರೆ ಜಾಗಕ್ಕೆ ಸ್ಥಳಾಂತರ ಮಾಡಲಾಗಿದ್ದು, ಉಗ್ರನನ್ನು ಸದೆಬಡಿದ ಸ್ಥಳದಲ್ಲಿ ಒಂದು ಎಕೆ-56 ರೈಫಲ್ ಅನ್ನು ವಶಕ್ಕೆ ಪಡೆಯಲಾಗಿದೆ.

    ಇಂದು ಮುಂಜಾನೆ ವೇಳೆಗೆ ಉಗ್ರರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದು, ಇದಕ್ಕೆ ಪ್ರತಿಯಾಗಿ ಸೇನಾಪಡೆ ಕೂಡ ಪ್ರತಿದಾಳಿ ನಡೆಸಿದೆ. ಈ ವೇಳೆ ಗುಂಡೇಟಿಗೆ ಉಗ್ರ ಸಾವನ್ನಪ್ಪಿದ್ದಾನೆ.

    2 ದಿನಗಳ ಹಿಂದೆ ಜಮ್ಮು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಉಗ್ರರು ನಡೆಸಿದ್ದ ದಾಳಿಯಿಂದ ಮೂವರು ಸಿಆರ್‌ಪಿಎಫ್ ಯೋಧರು ಹುತಾತ್ಮರಾಗಿದ್ದರು. ಅಲ್ಲದೇ ಭಾನುವಾರ ಹಂದ್ವಾರದಲ್ಲಿ ನಡೆದ ದಾಳಿಯಲ್ಲಿ ಐವರು ಭದ್ರತಾ ಪಡೆಯ ಸಿಬ್ಬಂದಿ ಉಗ್ರರ ಗುಂಡೇಟಿಗೆ ಹುತಾತ್ಮರಾಗಿದ್ದರು.

  • ಗಡಿಯಲ್ಲಿ ಮತ್ತೆ ಉಗ್ರರ ಪುಂಡಾಟ- ಕರ್ನಲ್, ಮೇಜರ್ ಸೇರಿ ಐವರು ಯೋಧರು ಹುತಾತ್ಮ

    ಗಡಿಯಲ್ಲಿ ಮತ್ತೆ ಉಗ್ರರ ಪುಂಡಾಟ- ಕರ್ನಲ್, ಮೇಜರ್ ಸೇರಿ ಐವರು ಯೋಧರು ಹುತಾತ್ಮ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಹಂದ್ವಾರದಲ್ಲಿ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ಇಬ್ಬರು ಹಿರಿಯ ಸೇನಾಧಿಕಾರಿಗಳು ಸೇರಿದಂತೆ ಐವರು ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ.

    ಕರ್ನಲ್ ಆಶುತೋಷ್ ಶರ್ಮಾ, ಮೇಜರ್ ಅಂಜು, ಓರ್ವ ಲ್ಯಾನ್ಸ್ ನಾಯ್ಕ್, ರೈಫಲ್ ಮ್ಯಾನ್ ಹಾಗೂ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹುತಾತ್ಮರಾದವರು. ಉಗ್ರರು ಭಾರತೀಯ ಯೋಧರ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದ ಪರಿಣಾಮ ಘಟನೆ ನಡೆದಿದೆ. ಇದನ್ನೂ ಓದಿ: ಎನ್‌ಕೌಂಟರ್‌ನಲ್ಲಿ ಇಬ್ಬರು ಉಗ್ರರು, ಓರ್ವ ಸಹಚರನನ್ನು ಸದೆಬಡಿದ ಸೇನೆ

    ಶ್ರೀನಗರದಿಂದ 70 ಕಿ.ಮೀ ದೂರದಲ್ಲಿರುವ ಉತ್ತರ ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಹಂದ್ವಾರದ ಚಂಜ್‍ಮುಲ್ಲಾ ಪ್ರದೇಶದಲ್ಲಿ ಶನಿವಾರ ರಾತ್ರಿ ಉಗ್ರರು ಗುಂಡಿ ದಾಳಿ ನಡೆಸಿದರು. ಈ ವೇಳೆ ಭದ್ರತಾ ಸಿಬ್ಬಂದಿ ಅಲ್ಲಿನ ನಾಗರಿಕರ ರಕ್ಷಣೆಗೆ ಮುಂದಾಗಿತ್ತು. ಆದರೆ ಗುಂಡು ತಗುಲಿ ಗಂಭೀರವಾಗಿ ಗಾಯಗೊಂಡ ಐವರು ಭದ್ರತಾ ಸಿಬ್ಬಂದಿ ಕೊನೆಯುಸಿರೆಳೆದಿದ್ದಾರೆ.

    ಕುಪ್ವಾರಾ ಜಿಲ್ಲೆಯ ಚಂದಿಮುಲ್ಲಾದಲ್ಲಿರುವ ಜನರನ್ನು ಒತ್ತೆಯಾಳು ಮಾಡಿಕೊಳ್ಳಲು ಉಗ್ರರು ಕರೆದೊಯ್ಯುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿತ್ತು. ಹೀಗಾಗಿ ಭಾರತೀಯ ಸೇನೆ ಮತ್ತು ಜಮ್ಮು-ಕಾಶ್ಮೀರ ಪೊಲೀಸರು ಜಂಟಿ ಕಾರ್ಯಾಚರಣೆ ಆರಂಭಿಸಿದರು. ಸೇನೆ ಮತ್ತು ಜಮ್ಮು-ಕಾಶ್ಮೀರ ಪೊಲೀಸರ ತಂಡವು ಚಂದಿಮುಲ್ಲಾ ಪ್ರದೇಶದಿಂದ ನಾಗರಿಕನನ್ನು ಯಶಸ್ವಿಯಾಗಿ ಹೊರಹಾಕಿತು. ಆದರೆ ಕಾರ್ಯಾಚರಣೆಯಲ್ಲಿ ಕರ್ನಲ್ ಆಶುತೋಷ್ ಶರ್ಮಾ, ಮೇಜರ್ ಅಂಜು ಸೇರಿದಂತೆ ಐವರು ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ ಎಂದು ವರದಿಯಾಗಿದೆ.

    ಆಶುತೋಷ್ ಶರ್ಮಾ ಅವರು 21 ರಾಷ್ಟ್ರೀಯ ರೈಫಲ್‍ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅವರು ಗಡಿಯಲ್ಲಿ ಒಳನುಸುಳುತ್ತಿರುವ ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆಯಲ್ಲಿ ಹೀರೋ ಎಂದು ಗುರುತಿಸಿಕೊಂಡಿದ್ದರು. ಈ ಹಿಂದೆ ನಡೆದ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಆಶುತೋಷ್ ಶರ್ಮಾ ಅವರ ಕೂಡುಗೆ ಮಹತ್ವದ್ದಾಗಿತ್ತು.

  • ಎನ್‌ಕೌಂಟರ್‌ನಲ್ಲಿ ಇಬ್ಬರು ಉಗ್ರರು, ಓರ್ವ ಸಹಚರನನ್ನು ಸದೆಬಡಿದ ಸೇನೆ

    ಎನ್‌ಕೌಂಟರ್‌ನಲ್ಲಿ ಇಬ್ಬರು ಉಗ್ರರು, ಓರ್ವ ಸಹಚರನನ್ನು ಸದೆಬಡಿದ ಸೇನೆ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ಇಂದು ಇಬ್ಬರು ಉಗ್ರರು ಹಾಗೂ ಓರ್ವ ಸಹಚರನನ್ನು ಭಾರತೀಯ ಸೇನಾಪಡೆ ಎನ್‌ಕೌಂಟರ್‌ನಲ್ಲಿ ಹೊಡೆದುರುಳಿಸಿದೆ.

    ಪುಲ್ವಾಮಾ ಜಿಲ್ಲೆಯ ಅವಂತಿಪೋರಾದ ಗೋರಿಪೋರಾ ಪ್ರದೇಶದಲ್ಲಿ ಈ ಎನ್‍ಕೌಂಟರ್ ಮಾಡಲಾಗಿದೆ. ಗೋರಿಪೋರಾದಲ್ಲಿ ಉಗ್ರರು ಅಡಗಿ ಕುಳಿತಿರುವ ಬಗ್ಗೆ ಮಾಹಿತಿ ಲಭ್ಯವಾದ ಹಿನ್ನೆಲೆ ಸೇನಾಪಡೆಗಳು ಇಂದು ಬೆಳಗಿನ ಜಾವ ಕಾರ್ಯಾಚರಣೆ ಆರಂಭಿಸಿತ್ತು. ಈ ಬಗ್ಗೆ ತಿಳಿದ ಉಗ್ರರು ಸೇನಾಪಡೆಗಳ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಲು ಆರಂಭಿಸಿದ್ದು, ಇದಕ್ಕೆ ಪ್ರತ್ಯುತ್ತರವಾಗಿ ಸೇನಾಪಡೆಗಳು ಕೂಡ ದಾಳಿ ನಡೆಸಿದೆ.

    ಈ ವೇಳೆ ಕಾರ್ಯಾಚರಣೆಯನ್ನು ಎನ್‍ಕೌಂಟರ್ ಆಗಿ ಸೇನಾಪಡೆಗಳು ಮಾರ್ಪಡಿಸಿ ಇಬ್ಬರು ಉಗ್ರರು, ಓರ್ವ ಸಹಚರ ಸೇರಿದಂತೆ ಮೂವರಿಗೆ ಗುಂಡಿಕ್ಕಿ ಹೊಡೆದುರುಳಿಸಿದೆ. ಅಲ್ಲದೇ ದಾಳಿ ನಡೆದ ಸ್ಥಳದಲ್ಲಿ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಮತ್ತಷ್ಟು ಉಗ್ರರು ಅಡಗಿ ಕುಳಿತಿರುವ ಶಂಕೆ ವ್ಯಕ್ತವಾಗಿದ್ದು, ಸೇನಾಪಡೆ ಕಾರ್ಯಾಚರಣೆ ಮುಂದುವರಿಸಿದೆ.

    ಕೊರೊನಾ ಭೀತಿಗೆ ಇಡೀ ದೇಶವನ್ನೆ ಲಾಕ್‍ಡೌನ್ ಮಾಡಲಾಗಿದೆ. ಆದರೆ ಈ ಮಧ್ಯೆ ಉಗ್ರರ ಅಟ್ಟಹಾಸ ಮಾತ್ರ ಕಡಿಮೆ ಆಗಿಲ್ಲ. ಲಾಕ್‍ಡೌನ್ ಅವಧಿಯಲ್ಲಿ ಸಾಕಷ್ಟು ಭಾರಿ ಉಗ್ರರು ಭಾರತೀಯ ಸೇನೆ ಮೇಲೆ ದಾಳಿ ನಡೆಸಿದೆ. ಈ ದಾಳಿಯಲ್ಲಿ ಹಲವು ಉಗ್ರರನ್ನು ಸದೆಬಡಿಯಲಾಗಿದೆ.

    ಅಲ್ಲದೇ ಕೆಲ ದಿನಗಳ ಹಿಂದೆ ಸೊಪೋರ್ ನಲ್ಲಿ ನಡೆದ ಗುಂಡಿನ ಕಾಳಗದಲ್ಲಿ 23 ವರ್ಷದ ಜೈಷ್-ಇ-ಮೊಹ್ಮದ್ ಉಗ್ರ ಸಂಘಟನೆಯ ಕಮಾಂಡರ್ ಸೇನೆಯ ಗುಂಡೇಟಿಗೆ ಹತನಾಗಿದ್ದನು. ಈತ 2018ರಿಂದ ಭಯೋತ್ಪಾದನೆಯಲ್ಲಿ ಸಕ್ರಿಯನಾಗಿದ್ದ ಎಂದು ಪೊಲೀಸರು ತಿಳಿಸಿದ್ದರು.

  • ಭದ್ರತಾ ಪಡೆಯೊಂದಿಗೆ ಗುಂಡಿನ ಚಕಮಕಿ – ಇಬ್ಬರು ಉಗ್ರರು ಮಟಾಶ್

    ಭದ್ರತಾ ಪಡೆಯೊಂದಿಗೆ ಗುಂಡಿನ ಚಕಮಕಿ – ಇಬ್ಬರು ಉಗ್ರರು ಮಟಾಶ್

    ಶ್ರೀನಗರ: ದಕ್ಷಿಣ ಕಾಶ್ಮೀರ ಜಿಲ್ಲೆಯ ಶೋಪಿಯಾನ್‍ನಲ್ಲಿ ಇಂದು ಮುಂಜಾನೆ ಭಾರತೀಯ ಭದ್ರತಾ ಪಡೆ ಹಾಗೂ ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಸೇನೆಯ ಗುಂಡೇಟಿಗೆ ಇಬ್ಬರು ಉಗ್ರರು ಹತರಾಗಿದ್ದಾರೆ.

    ಶೋಪಿಯಾನ್‍ನಲ್ಲಿ ಉಗ್ರರು ಅಡಗಿ ಕೂತಿರುವ ಬಗ್ಗೆ ಭಾರತೀಯ ಸೇನೆಗೆ ಮಾಹಿತಿ ಲಭ್ಯವಾಗಿತ್ತು. ಇದನ್ನು ಆಧರಿಸಿ ಜಮ್ಮು-ಕಾಶ್ಮೀರ ಪೊಲೀಸರು, ಸೇನೆ ಮತ್ತು ಸಿಆರ್‌ಪಿಎಫ್‌ನ ವಿಶೇಷ ಕಾರ್ಯಾಚರಣೆ ತಂಡ(ಎಸ್‍ಒಜಿ) ಶೋಪಿಯಾನ್‍ನ ಪ್ರದೇಶದಲ್ಲಿ ಜಂಟಿ ಶೋಧಕಾರ್ಯಾಚರಣೆ ನಡೆಸಿ ಇಬ್ಬರು ಉಗ್ರರನ್ನು ಸದೆಬಡೆದಿದ್ದಾರೆ.

    ಭದ್ರತಾ ಪಡೆಗಳನ್ನು ಕಂಡ ತಕ್ಷಣ ಉಗ್ರರು ಸ್ವಯಂಚಾಲಿತ ಶಸ್ತ್ರಾಸ್ತ್ರಗಳಿಂದ ಗುಂಡಿನ ದಾಳಿ ಆರಂಭಿಸಿದರು. ಇದಕ್ಕೆ ಭದ್ರತಾ ಪಡೆಗಳು ಕೂಡ ಪ್ರತ್ಯುತ್ತರ ನೀಡಿದ್ದು, ಉಗ್ರರು ಹಾಗೂ ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿದೆ.

    ಘಟನಾ ಸ್ಥಳಕ್ಕೆ ಹೆಚ್ಚುವರಿ ಭದ್ರತಾ ಪಡೆಗಳು ಧಾವಿಸಿದ್ದು, ಈ ಪ್ರದೇಶದ ಅಕ್ಕಪಕ್ಕದ ಗ್ರಾಮಗಳನ್ನು ಸುತ್ತುವರೆದು ಜಂಟಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಕಳೆದ 21 ದಿನಗಳ ಲಾಕ್‍ಡೌನ್ ಅವಧಿಯಲ್ಲಿ ಉಗ್ರರು ಸಾಕಷ್ಟು ಬಾರಿ ಸೇನೆಯ ಮೇಲೆ ದಾಳಿ ನಡೆಸಿದ್ದಾರೆ. ಈ ದಾಳಿಗಳಲ್ಲಿ ಹಲವು ಉಗ್ರರನ್ನು ಸೇನೆ ಸದೆಬಡೆದಿದೆ.

    ಅಲ್ಲದೇ ಕೆಲ ದಿನಗಳ ಹಿಂದೆ ಸೊಪೋರ್‍ನಲ್ಲಿ ನಡೆದ ಗುಂಡಿನ ಕಾಳಗದಲ್ಲಿ 23 ವರ್ಷದ ಜೈಷ್-ಇ-ಮೊಹ್ಮದ್ ಉಗ್ರ ಸಂಘಟನೆಯ ಕಮಾಂಡರ್ ಸೇನೆಯ ಗುಂಡೇಟಿಗೆ ಹತನಾಗಿದ್ದಾನೆ. ಈತ 2018ರಿಂದ ಭಯೋತ್ಪಾದನೆಯಲ್ಲಿ ಸಕ್ರಿಯನಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

  • ಕೊರೊನಾಗೆ ಜಮ್ಮು-ಕಾಶ್ಮೀರದಲ್ಲಿ ಮೊದಲ ಬಲಿ, ದೇಶದಲ್ಲಿ ಸಾವಿನ ಸಂಖ್ಯೆ 12ಕ್ಕೆ ಏರಿಕೆ

    ಕೊರೊನಾಗೆ ಜಮ್ಮು-ಕಾಶ್ಮೀರದಲ್ಲಿ ಮೊದಲ ಬಲಿ, ದೇಶದಲ್ಲಿ ಸಾವಿನ ಸಂಖ್ಯೆ 12ಕ್ಕೆ ಏರಿಕೆ

    ಶ್ರೀನಗರ: ಮಹಾಮಾರಿ ಕೊರೊನಾ ವೈರಸ್‍ಗೆ ಜಮ್ಮು-ಕಾಶ್ಮೀರದಲ್ಲಿ ಮೊದಲ ಬಲಿಯಾಗಿದೆ. ಈ ಮೂಲಕ ದೇಶದಲ್ಲಿ ಸಾವಿನ ಸಂಖ್ಯೆ 12ಕ್ಕೆ ಏರಿಕೆಯಾಗಿದೆ.

    ಸಿಂಗಪುರ್‌ನ ಹೈದರ್‌ಪೊರಾದಿಂದ ಬಂದಿದ್ದ 65 ವರ್ಷದ ಕೊರೊನಾ ಸೋಂಕಿತ ವೃದ್ಧ ಇಂದು ಮೃತಪಟ್ಟಿದ್ದಾರೆ. ಅಷ್ಟೇ ಅಲ್ಲದೆ ಅವರ ಜೊತೆಗೆ ಸಂಪರ್ಕ ಹೊಂದಿದ್ದ ನಾಲ್ವರಿಗೆ ಕೊರೊನಾ ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ.

    ತಮಿಳುನಾಡಿ ರಾಜ್ಯದ ಮಧುರೈನ ರಾಜಾಜಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಕೊರೊನಾ ಸೋಂಕಿತ ರೋಗಿ ಬುಧವಾರ ನಿಧನರಾಗಿದ್ದರು. ಈ ಸಂಬಂಧ ಪ್ರತಿಕ್ರಿಯೆ ನೀಡಿದ್ದ ತಮಿಳುನಾಡಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಸಚಿವ ಡಾ. ಸಿ.ವಿಜಯಬಾಸ್ಕರ್, ಮೃತ ವ್ಯಕ್ತಿಯು ಶ್ವಾಸಕೋಶ ಸಂಬಂಧಿ ಕಾಯಿಲೆ, ಅಧಿಕ ರಕ್ತದೊತ್ತಡ, ಮಧುಮೇಹದಿಂದಾಗಿ ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ತಿಳಿಸಿದ್ದರು.

    ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿ ಏಪ್ರಿಲ್ 14ರವರೆಗೂ ಲಾಕ್‍ಡೌನ್ ಘೋಷಿಸಿದ್ದಾರೆ. ಆದರೆ ಕೆಲವರು ಲಾಕ್‍ಡೌನ್ ಉಲ್ಲಂಘಿಸಿ ಉದ್ಧಟತನ ಮೆರೆಯುತ್ತಿದ್ದಾರೆ. ಹೀಗಾಗಿ ಕೊರೊನಾ ದೇಶದಲ್ಲಿ ಮತ್ತಷ್ಟು ಆತಂಕ ಹೆಚ್ಚಿಸುತ್ತಿದೆ. ಭಾರತ ಲಾಕ್‍ಡೌನ್ ಮೊದಲ ದಿನವೇ 70 ಹೊಸ ಪ್ರಕರಣಗಳು ಪತ್ತೆಯಾಗಿವೆ.

    ಗುರುವಾರ ಬೆಳಗ್ಗೆ 9:30 ಗಂಟೆಯ ಮಾಹಿತಿ ಪ್ರಕಾರ ದೇಶದಲ್ಲಿ 664 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಅವರಲ್ಲಿ 12 ಜನರ ಮೃತಪಟ್ಟಿದ್ದಾರೆ. ಉಳಿದಂತೆ 609 ಜನ ಜನ ಚಿಕಿತ್ಸೆ ಪಡೆಯುತ್ತಿದ್ದು, 43 ಮಂದಿ ಗುಣಮುಖರಾಗಿದ್ದಾರೆ.

  • 8 ತಿಂಗಳ ಬಳಿಕ ಒಮರ್ ಅಬ್ದುಲ್ಲಾಗೆ ಗೃಹಬಂಧನದಿಂದ ಮುಕ್ತಿ

    8 ತಿಂಗಳ ಬಳಿಕ ಒಮರ್ ಅಬ್ದುಲ್ಲಾಗೆ ಗೃಹಬಂಧನದಿಂದ ಮುಕ್ತಿ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಎಂಟು ತಿಂಗಳ ಬಳಿಕ ಗೃಹಬಂಧನದಿಂದ ಮುಕ್ತರಾಗಿದ್ದಾರೆ.

    ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನ 370 ವಿಧಿಯನ್ನು ತೆಗೆದುಹಾಕುವುದಕ್ಕೂ ಮುನ್ನ ಅಂದ್ರೆ 2019ರ ಆಗಸ್ಟ್ 4ರಂದು ರಾತ್ರಿ ಒಮರ್ ಅವರನ್ನು ಗೃಹಬಂಧನದಲ್ಲಿ ಇರಿಸಲಾಗಿತ್ತು. ಬಳಿಕ 2020ರ ಫೆಬ್ರವರಿ 5ರಿಂದ ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿ ಅವರನ್ನು ಗೃಹಬಂಧನದಲ್ಲೇ ಮುಂದುವರಿಸಲಾಗಿತ್ತು.

    ಈ ಮೂಲಕ ಒಮರ್ ಅಬ್ದುಲ್ ಅವರು 232 ದಿನ ಕಾಲ ಗೃಹ ಬಂಧನದಲ್ಲಿ ಕಾಲ ಕಳೆದು ಇಂದು ಬಿಡುಗಡೆಯಾಗಿದ್ದಾರೆ. ಆದರೆ ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ಸೇರಿದಂತೆ ಹಲವಾರು ನಾಯಕರು ಇನ್ನೂ ಗೃಹಬಂಧನದಲ್ಲಿದ್ದಾರೆ.

    ನಮ್ಮ ಸಹೋದರ ಒಮರ್ ಅವರನ್ನು ಬಿಡುಗಡೆ ಮಾಡಲು ಯೋಚಿಸಿದ್ದೀರಾ ಎಂದು ಸಾರಾ ಪೈಲಟ್ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಈ ಕುರಿತು ಸುಪ್ರೀಂ ಕೋರ್ಟ್ ಕಳೆದ ವಾರ ಕೇಂದ್ರ ಸರ್ಕಾರದಿಂದ ಉತ್ತರ ಕೋರಿತ್ತು. ಈಗ ಕಾಶ್ಮೀರದಲ್ಲಿ ವಾತಾವರಣ ಉತ್ತಮಗೊಂಡಿದೆ. ಒಮರ್ ಬಿಡುಗಡೆಗೆ ಸಂಬಂಧಿಸಿದಂತೆ ನಿಮ್ಮ ಸೂಚನೆಗಳೇನು? ಶೀಘ್ರದಲ್ಲೇ ಉತ್ತರ ನೀಡದಿದ್ದರೆ ಸಾರಾ ಪೈಲಟ್ ಅವರ ಅರ್ಜಿ ವಿಚಾರಣೆ ಆಲಿಸಲಾಗುತ್ತದೆ ಎಂದು ಕೋರ್ಟ್ ಕೇಳಿತ್ತು.

    ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರನ್ನು ಮಾರ್ಚ್ 13 ರಂದು ಗೃಹಬಂಧನದಿಂದ ಬಿಡುಗಡೆ ಮಾಡಲಾಗಿತ್ತು. ಬಿಡುಗಡೆಯಾದ ಮರುದಿನವೇ ಅವರು ತಮ್ಮ ಮಗ ಒಮರ್ ಅಬ್ದುಲ್ಲಾ ಅವರನ್ನು ಭೇಟಿಯಾಗಿದ್ದರು. ಕಳೆದ ಏಳು ತಿಂಗಳಲ್ಲಿ ಮೊದಲ ಬಾರಿಗೆ ತಂದೆ ಮತ್ತು ಮಗ ಮಾತನಾಡಿದ್ದರು.

    ಬಿಡುಗಡೆಯ ನಂತರ ಮಗನನ್ನು ನೋಡುವ ಇಚ್ಛೆಯನ್ನು ಫಾರೂಕ್ ವ್ಯಕ್ತಪಡಿಸಿದ್ದರು. ಹೀಗಾಗಿ ಜಮ್ಮು ಮತ್ತು ಕಾಶ್ಮೀರ ಆಡಳಿತಾಧಿಕಾರಿಗಳು ಶ್ರೀನಗರದ ಉಪ ಜೈಲಿನಲ್ಲಿ ಒಮರ್ ಅವರನ್ನು ಭೇಟಿಯಾಗಲು ಅವಕಾಶ ಮಾಡಿಕೊಟ್ಟಿದ್ದರು. ಸುಮಾರು ಒಂದು ಗಂಟೆ ಇಬ್ಬರೂ ಮಾತುಕತೆ ನಡೆಸಿದ್ದರು.