Tag: ಜಮ್ಮು-ಕಾಶ್ಮೀರ ಸರ್ಕಾರ

  • ಶ್ರೀನಗರದಿಂದ ರಾಹುಲ್ ಗಾಂಧಿ, ವಿಪಕ್ಷ ನಾಯಕರು ವಾಪಸ್

    ಶ್ರೀನಗರದಿಂದ ರಾಹುಲ್ ಗಾಂಧಿ, ವಿಪಕ್ಷ ನಾಯಕರು ವಾಪಸ್

    ಶ್ರೀನಗರ: ಜಮ್ಮು-ಕಾಶ್ಮೀರದ ಶ್ರೀನಗರ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹಾಗೂ 11 ಜನ ವಿಪಕ್ಷ ನಾಯಕರನ್ನು ದೆಹಲಿಗೆ ವಾಪಸ್ ಕಳುಹಿಸಲಾಗಿದೆ.

    ಜಮ್ಮು-ಕಾಶ್ಮೀರದ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಚರ್ಚೆ ಮಾಡಲು ಕಾಂಗ್ರೆಸ್‍ನ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಒಟ್ಟು 11 ಜನ ವಿಪಕ್ಷ ಮುಖಂಡರು ಕಾಶ್ಮೀರಕ್ಕೆ ಆಗಮಿಸಿದ್ದರು. ಈ ನಿಯೋಗದಲ್ಲಿ ಗುಲಾಮ್ ನಬಿ ಆಝಾದ್, ಆನಂದ್ ಶರ್ಮಾ, ಕೆ.ಸಿ.ವೇಣುಗೋಪಾಲ್, ಸಿಪಿಐನ ಡಿ.ರಾಜಾ, ಸಿಪಿಐ(ಎಂ)ನ ಸೀತಾರಾಮ್ ಯಚೂರಿ, ಡಿಎಂಕೆಯ ತಿರುಚಿ ಶಿವಾ, ಆರ್‍ಜೆಡಿಯ ಮನೀಜ್ ಝಾ, ಟಿಎಂಸಿಯ ದಿನೇಶ್ ತ್ರಿವೇದಿ, ಎನ್‍ಸಿಪಿಯ ಮಜೀದ್ ಮೆನನ್ ಹಾಗೂ ಜೆಡಿಎಸ್‍ನ ಕುಪೇಂದ್ರ ರೆಡ್ಡಿ ಇದ್ದರು.

    ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಜಮ್ಮು-ಕಾಶ್ಮೀರದ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರು, ಯಾವುದೇ ಕಾರಣಕ್ಕೂ ಜಮ್ಮು ಕಾಶ್ಮೀರದ ಕಣಿವೆಯಲ್ಲಿ ಶಾಂತಿ ಕದಡುವ ಪ್ರಯತ್ನ ಮಾಡಬೇಡಿ. ದಯವಿಟ್ಟು ಇಲ್ಲಿಂದ ವಾಪಸ್ ಹೋಗಿ ಎಂದು ಮನವಿ ಮಾಡಿಕೊಂಡಿದ್ದರು.

    ಗಡಿಯಾಚೆಗಿನ ಭಯೋತ್ಪಾದನೆ ಹಾಗೂ ಇತರ ಬೆದರಿಕೆಗಳಿಂದ ಜನರನ್ನು ರಕ್ಷಿಸಲು ಪ್ರಯತ್ನಿಸಲಾಗುತ್ತಿದೆ. ಇನ್ನೊಂದೆಡೆ ಜನಸಾಮಾನ್ಯರ ಜೀವನ ಕ್ರಮೇಣ ಪುನಃಸ್ಥಾಪನೆಯಾಗುತ್ತಿದೆ. ಇದಕ್ಕೆ ವಿರೋಧ ಪಕ್ಷಗಳು ಭಂಗ ತರುವ ಪ್ರಯತ್ನಗಳನ್ನು ಹಿರಿಯ ರಾಜಕೀಯ ಮುಖಂಡರು ಮಾಡಬಾರದು. ಒಂದು ವೇಳೆ ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಿದಲ್ಲಿ ಅದು ನಿರ್ಬಂಧಗಳನ್ನು ಉಲ್ಲಂಘಿಸಿದಂತೆ. ಅಲ್ಲದೆ ಜನರನ್ನು ಅನಾನುಕೂಲತೆಗೆ ತಳ್ಳಿದಂತೆ ಎಂದು ಜಮ್ಮು ಕಾಶ್ಮೀರ ಸರ್ಕಾರ ಟ್ವೀಟ್ ಮಾಡಿತ್ತು.

    ನೀವು ಭೇಟಿ ನೀಡುವ ಮೂಲಕ ಜನಸಾಮಾನ್ಯರನ್ನು ಅನಾನುಕೂಲತೆಗೆ ದೂಡುತ್ತೀರಿ. ಹೀಗಾಗಿ ರಾಜಕೀಯ ಮುಖಂಡರು ಸಹಕಾರ ನೀಡಬೇಕು. ಶ್ರೀನಗರಕ್ಕೆ ಭೇಟಿ ನೀಡಬಾರದು. ನೀವು ಭೇಟಿ ನೀಡುತ್ತಿರುವ ಅನೇಕ ಸ್ಥಳಗಳಲ್ಲಿ ನಿರ್ಬಂಧ ಹೇರಲಾಗಿದೆ. ಹೀಗಾಗಿ ಶಾಂತಿ, ಸುವ್ಯವಸ್ಥೆ ಕಾಪಾಡಲು ಮತ್ತು ಸಾವು ನೋವು ತಡೆಗಟ್ಟಲು ಮುನ್ನೆಚ್ಚರಿಕಾ ಕ್ರಮ ವಹಿಸಬೇಕು ಎಂದು ಜಮ್ಮು ಕಾಶ್ಮೀರ ಸರ್ಕಾರ ತಿಳಿಸಿದೆ.

    ಭೇಟಿಯ ಹಿನ್ನೆಲೆ:
    ಜಮ್ಮು-ಕಾಶ್ಮೀರದಲ್ಲಿ ಶಾಂತಿ ಸುವ್ಯವಸ್ಥೆ ಹದಗೆಟ್ಟಿದೆ ಎಂದು ರಾಹುಲ್ ಗಾಂಧಿ ಅವರು ಇತ್ತೀಚೆಗೆ ಟೀಕಿಸಿದ್ದರು. ಇದಕ್ಕೆ ಜಮ್ಮು ಕಾಶ್ಮೀರ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರು ಪ್ರತಿಕ್ರಿಯಿಸಿ, ರಾಹುಲ್ ಗಾಂಧಿ ಅವರಿಗೆ ವಿಮಾನದ ವ್ಯವಸ್ಥೆ ಮಾಡುತ್ತೇನೆ ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಿ, ಇಲ್ಲಿನ ಸ್ಥತಿಗತಿ ಅರಿತು ನಂತರ ಮಾತನಾಡಲಿ ಎಂದು ತಿರುಗೇಟು ನೀಡಿದ್ದರು. ಇದಕ್ಕೆ ರಾಹುಲ್ ಪ್ರತಿಕ್ರಿಯಿಸಿ, ಭೇಟಿ ನೀಡಲು ವಿಮಾನ ವ್ಯವಸ್ಥೆ ಅಗತ್ಯವಿಲ್ಲ ನಾವು ಭೇಟಿ ನೀಡಲು ಸೂಕ್ತ ವಾತಾವರಣ ಕಲ್ಪಿಸಿಕೊಟ್ಟರೆ ಅಷ್ಟೇ ಸಾಕು ಎಂದು ಹೇಳಿದ್ದರು. ಹೀಗಾಗಿ ರಾಜ್ಯಪಾಲರು ಹಾಗೂ ರಾಹುಲ್ ಗಾಂಧಿ ಮಧ್ಯೆ ವಾಗ್ವಾದ ನಡೆದಿತ್ತು. ಅಷ್ಟೇ ಅಲ್ಲದೆ ಎರಡು ಬಾರಿ ಗುಲಾಮ್ ನಬಿ ಆಝಾದ್ ಅವರು ಭೇಟಿ ನೀಡಲು ಯತ್ನಿಸಿದಾಗ ಅವರನ್ನು ವಿಮಾನ ನಿಲ್ದಾಣದಲ್ಲಿಯೇ ತಡೆದು ಮರಳಿ ದೆಹಲಿಗೆ ಕಳುಹಿಸಲಾಗಿತ್ತು.