Tag: ಜಮಾತ್

  • ಇಂದು ರಾಜ್ಯದಲ್ಲಿ 17 ವ್ಯಕ್ತಿಗಳಿಗೆ ಕೊರೊನಾ – 6 ಮಂದಿಗೆ ಜಮಾತ್ ನಂಟು

    ಇಂದು ರಾಜ್ಯದಲ್ಲಿ 17 ವ್ಯಕ್ತಿಗಳಿಗೆ ಕೊರೊನಾ – 6 ಮಂದಿಗೆ ಜಮಾತ್ ನಂಟು

    ಬೆಂಗಳೂರು: ಲಾಕ್‍ಡೌನ್ ನಡುವೆಯೂ ಕರ್ನಾಟಕದಲ್ಲಿ ತಬ್ಲಿಘಿಗಳಿಂದ ಕೊರೊನಾ ವೈರಸ್ ಹೆಚ್ಚಾಗುತ್ತಿದೆ.

    ದೆಹಲಿಯ ನಿಜಾಮುದ್ದೀನ್ ಧರ್ಮಸಭೆಗೆ ಹೋಗಿ ಬಂದಿದ್ದ ತಬ್ಲಿಘಿಗಳು ರಾಜ್ಯದ ಬಹುತೇಕ ಜಿಲ್ಲೆಗಳಿಗೆ ಸೋಂಕು ಹಬ್ಬಿಸಿದ್ದರು. 1,300 ಮಂದಿ ಪೈಕಿ ನಿನ್ನೆಯವರೆಗೂ 55 ಮಂದಿಗೆ ಸೋಂಕು ತಗುಲಿತ್ತು. ಆ ಸಂಖ್ಯೆ ಈಗ  ಹೆಚ್ಚಾಗಿದೆ.

    ಇಂದು ಬೆಳಕಿಗೆ ಬಂದ 17 ಸೋಂಕಿತರ ಪೈಕಿ 6 ಮಂದಿಗೆ ಜಮಾತ್ ನಂಟಿದೆ. ಕೊರೊನಾಗೆ ಬಲಿಯಾದ ಕಲಬುರಗಿಯ ವೃದ್ಧ(ರೋಗಿ ನಂಬರ್ 177)ನ ಕುಟುಂಬದಲ್ಲಿ ಮತ್ತೆ ಸೋಂಕು ಕಾಣಿಸಿಕೊಂಡಿದೆ.

    ಮೃತ ವೃದ್ಧನ ಸೊಸೆಗೆ ಕೊರೊನಾ ಪಾಸಿಟಿವ್ ಬಂದಿದೆ. ಅಲ್ಲದೇ, ಬಹಮನಿ ಆಸ್ಪತ್ರೆಯಲ್ಲಿದ್ದಾಗ ವೃದ್ಧನನ್ನು ನೋಡಿಕೊಂಡಿದ್ದ ಆಯಾಗೂ ಸೋಂಕು ವ್ಯಾಪಿಸಿದೆ. ಬೆಳಗಾವಿಯ ನಾಲ್ವರಿಗೂ ಕೂಡ ಜಮಾತ್ ನಂಟು ಇರುವುದು ಖಚಿತಪಟ್ಟಿದೆ.

    ರಾಯಭಾಗದ  ರೋಗಿ ನಂಬರ್ 150ರಿಂದ ಮೂವರಿಗೆ ಸೋಂಕು ಹಬ್ಬಿದೆ. ಕ್ವಾರಂಟೇನ್‍ನಲ್ಲಿ ಇರಬೇಕು ಅಂತಾ ಹೇಳಿದ್ದರೂ ಕೇಳದ ಈ ವ್ಯಕ್ತಿ ಸಿಹಿ ತಿಂಡಿ ಮಾರಲು ಹೋಗಿದ್ದರಿಂದ ಸೋಂಕು ಬಂದಿದೆ ಎಂದು ಹೇಳಲಾಗುತ್ತಿದೆ.

    ಇಂದಿನ ಪ್ರಕರಣ
    > ರೋಗಿ ನಂ.220 – ಕಲಬುರಗಿಯ 24 ವರ್ಷದ ಮಹಿಳೆ – ಕೇಸ್ ನಂ.177ರ ಸೊಸೆ
    > ರೋಗಿ ನಂ.222 – ಕಲಬುರಗಿಯ 38 ವರ್ಷದ ಮಹಿಳೆ – ಕೇಸ್ ನಂ.177ರ ಸಂಪರ್ಕ – ಆಸ್ಪತ್ರೆ ಆಯಾ
    > ರೋಗಿ ನಂ.223 – ಬೆಳಗಾವಿಯ ರಾಯಭಾಗದ 19 ವರ್ಷದ ಯುವಕ – ಕೇಸ್ ನಂ.150ರ ಸಂಪರ್ಕ
    > ರೋಗಿ ನಂ.224 – ಬೆಳಗಾವಿಯ ಹಿರೇಬಾಗೇವಾಡಿಯ 38 ವರ್ಷದ ಪುರುಷ – ಕೇಸ್ ನಂ.128ರ ಸಂಪರ್ಕ
    > ರೋಗಿ ನಂ.225 – ಬೆಳಗಾವಿಯ ರಾಯಭಾಗದ 55 ವರ್ಷದ ಪುರುಷ – ಕೇಸ್ ನಂ.150ರ ಸಂಪರ್ಕ
    > ರೋಗಿ ನಂ.226 – ಬೆಳಗಾವಿಯ ರಾಯಭಾಗದ 25 ವರ್ಷದ ಯುವಕ – ಕೇಸ್ ನಂ.150ರ ಸಂಪರ್ಕ

  • ನಾಪತ್ತೆಯಾಗಿರುವ ತಬ್ಲಿಘಿಗಳ ಮಾಹಿತಿ ನೀಡಿದ್ರೆ ಸಿಗುತ್ತೆ ನಗದು ಬಹುಮಾನ

    ನಾಪತ್ತೆಯಾಗಿರುವ ತಬ್ಲಿಘಿಗಳ ಮಾಹಿತಿ ನೀಡಿದ್ರೆ ಸಿಗುತ್ತೆ ನಗದು ಬಹುಮಾನ

    – ಸಿಗಲಿದೆ 5 ಸಾವಿರ ರೂ. ಬಹುಮಾನ
    – ಮಾಹಿತಿ ನೀಡಿದವರ ಹೆಸರ ಗೌಪ್ಯ

    ಲಕ್ನೋ: ತಬ್ಲಿಘಿ ಜಮಾತ್‍ಗೆ ತೆರಳಿ ಇನ್ನೂ ಪತ್ತೆಯಾಗದವರನ್ನು ಹುಡುಕಿಕೊಟ್ಟವರಿಗೆ ಬಹುಮಾನ ನೀಡಲಾಗುವುದು ಎಂದು ಉತ್ತರ ಪ್ರದೇಶದ ಪೊಲೀಸರು ಪ್ರಕಟಿಸಿದ್ದಾರೆ.

    ದೆಹಲಿಯ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ ಸದಸ್ಯರು ಕೂಡಲೇ ಆಸ್ಪತ್ರೆಗೆ ತೆರಳಿ ಪರೀಕ್ಷೆ ನಡೆಸಬೇಕೆಂದು ಎಲ್ಲ ಸರ್ಕಾರಗಳು ಸೂಚನೆ ನೀಡುತ್ತಿವೆ. ಆದರೂ ಈ ಕಾರ್ಯಕ್ರಮಕ್ಕೆ ತೆರಳಿದ ಹಲವು ಮಂದಿ ಇನ್ನೂ ಪತ್ತೆಯಾಗದ ಹಿನ್ನೆಲೆಯಲ್ಲಿ ಅಜಂಗಢದ ಪೊಲೀಸರು ನಾಪತ್ತೆಯಾದ ವ್ಯಕ್ತಿಗಳನ್ನು ಪತ್ತೆ ಮಾಡಿದವರಿಗೆ ಬಹುಮಾನ ನೀಡಲಾಗುವುದು ಎಂದು ಪ್ರಕಟಿಸಿದ್ದಾರೆ.

    ಬಹಳ ಸಂಖ್ಯೆಯಲ್ಲಿ ಜಮಾತ್ ಸದಸ್ಯರು ತಲೆ ಮರೆಸಿಕೊಂಡಿದ್ದಾರೆ. ಹೀಗಾಗಿ ಈಗಲೂ ನಾವು ಸಂಬಂಧಪಟ್ಟವರ ಮುಂದೆ ಹಾಜರಾಗಿ ಎಂದು ಮನವಿ ಮಾಡುತ್ತಿದ್ದೇವೆ. ಒಂದು ವೇಳೆ ಬೇರೆ ವ್ಯಕ್ತಿಗಳಿಂದ ಇವರ ಬಗ್ಗೆ ಮಾಹಿತಿ ಸಿಕ್ಕಿದ್ದರೆ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅಜಂಗಢದ ಎಸ್‍ಪಿ ತ್ರಿವೇಣಿ ಸಿಂಗ್ ಹೇಳಿದ್ದಾರೆ.

    ತಬ್ಲಿಘಿಗಳ ಬಗ್ಗೆ ಮಾಹಿತಿ ನೀಡಿದವರಿಗೆ 5 ಸಾವಿರ ರೂ. ನಗದು ಬಹುಮಾನ ನೀಡಲಾಗುವುದು. ಅಷ್ಟೇ ಅಲ್ಲದೆ ಮಾಹಿತಿ ತಿಳಿಸಿದ ವ್ಯಕ್ತಿಗಳ ವಿವರವನ್ನು ಗೌಪ್ಯವಾಗಿ ಇಡಲಾಗುವುದು ಎಂದು ತಿಳಿಸಿದ್ದಾರೆ. ಅಜಂಗಢದಲ್ಲಿ 4 ಪಾಸಿಟಿವ್ ಪ್ರಕರಣ ಬಂದಿದ್ದು ಎಲ್ಲ ತಬ್ಲಿಘಿ ಕಾರ್ಯಕ್ರಮಕ್ಕೆ ತೆರಳಿದವರೇ ಆಗಿದ್ದಾರೆ.

    ಶನಿವಾರದವರೆಗೆ ಒಟ್ಟು ಉತ್ತರ ಪ್ರದೇಶದಲ್ಲಿ 448 ಮಂದಿಗೆ ಕೊರೊನಾ ಬಂದಿದೆ. ಈ ಪೈಕಿ ಜಮಾತ್ ಕಾರ್ಯಕ್ರಮಕ್ಕೆ ತೆರಳಿದ 254 ಮಂದಿಗೆ ಪಾಸಿಟಿವ್ ಬಂದಿದೆ. ಇದನ್ನೂ ಓದಿ: 21 ತಬ್ಲಿಘಿಗಳನ್ನು ಪತ್ತೆಹಚ್ಚಿದ್ದ ಇನ್ಸ್‌ಪೆಕ್ಟರ್‌ಗೆ ಕೊರೊನಾ

    ಕೊರೊನಾ ವಿರುದ್ಧ ಸಮರ ಸಾರಿರುವ ಭಾರತಕ್ಕೆ ದೆಹಲಿಯ ನಿಜಾಮುದ್ದೀನ್ ಪ್ರಕರಣವೇ ಕಂಟಕವಾಗಿದೆ. ಲಾಕ್‍ಡೌನ್ ಮಧ್ಯೆಯೂ ಸೋಂಕಿತರ ಸಂಖ್ಯೆ ಏರಿಕೆಯಾಗಿದ್ದು, ತಬ್ಲಿಘಿಗಳಿಂದಲೇ ಎಲ್ಲ ಕಡೆ ವ್ಯಾಪಿಸಿದೆ. ಜಮಾತ್‍ಗೆ ಹೋಗಿ ಬಂದವರ ಪೈಕಿ ಹಲವು ಮಂದಿಯ ಸುಳಿವೇ ಸಿಕ್ಕಿಲ್ಲ. ಇವತ್ತು ಪ್ರಧಾನಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪವಾಗಿದ್ದು, ತಬ್ಲಿಘಿ ವಿರುದ್ಧ ಕಠಿಣ ಕ್ರಮಕ್ಕೆ ಮುಖ್ಯಮಂತ್ರಿಗಳು ಒತ್ತಾಯಿಸಿದ್ದಾರೆ. ತಬ್ಲಿಘಿ ಪ್ರಕರಣ ಇಲ್ಲದಿದ್ದರೆ, ಕೊರೊನಾ ಹಿಡಿತದಲ್ಲಿ ಇರುತ್ತಿತ್ತು ಅಂತಲೂ ಮುಖ್ಯಮಂತ್ರಿಗಳು ಪ್ರತಿಪಾದಿಸಿದ್ದಾರೆ.

    ಕರ್ನಾಟಕಕ್ಕೂ ಕಂಟಕ:
    ಕರ್ನಾಟಕದಿಂದ 1,300 ಮಂದಿ ಜಮಾತ್ ಕಾರ್ಯಕ್ರಮಕ್ಕೆ ತೆರಳಿದ್ದು, 50 ಮಂದಿಗೆ ಪಾಸಿಟಿವ್ ಬಂದಿದೆ. ಬೆಂಗಳೂರಿನಲ್ಲಿ 269 ಮಂದಿ, ಇತರ ಜಿಲ್ಲೆಗಳಲ್ಲಿ 472 ಮಂದಿ ಸೇರಿ ಒಟ್ಟು 801 ಮಂದಿ ಕ್ವಾರಂಟೈನ್‍ನಲ್ಲಿದ್ದು 581 ಮಂದಿ ಇನ್ನೂ ಪತ್ತೆಯಾಗಿಲ್ಲ. 50 ವಿದೇಶಿ ತಬ್ಲಿಘಿಯರ ವಿರುದ್ಧ ಪ್ರಕರಣ ದಾಖಲಾಗಿದೆ.

    ತಮಿಳುನಾಡಿನಲ್ಲಿ ಒಟ್ಟು 969 ಮಂದಿಗೆ ಸೋಂಕು ಬಂದಿದ್ದು, 833 ಮಂದಿ ಜಮಾತ್‍ಗೆ ತೆರಳಿದ್ದರು. ದೆಹಲಿಯಲ್ಲಿ 903 ಮಂದಿಗೆ ಕೊರೊನಾ ಬಂದಿದ್ದು ಈ ಪೈಕಿ 584 ಮಂದಿ ದೆಹಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

    ಈ ಸಂಬಂಧ ಶುಕ್ರವಾರ ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ಟ್ವೀಟ್ ಮಾಡಿ, ದೇಶದ ಕೊರೊನಾ ಪ್ರಕರಣಗಳ ಪೈಕಿ ಶೇ.63 ರಷ್ಟು ಪ್ರಕರಣಗಳು ತಬ್ಲಿಘಿ ಜಮಾತ್‍ಗೆ ಸಂಬಂಧಿಸಿದವು ಎಂದು ಹೇಳಿದ್ದಾರೆ.

  • ದೆಹಲಿಯಿಂದ ಬಂದ 8 ಮಂದಿಯಲ್ಲಿ ಓರ್ವನಿಗೆ ಕೊರೊನಾ ಸೋಂಕು

    ದೆಹಲಿಯಿಂದ ಬಂದ 8 ಮಂದಿಯಲ್ಲಿ ಓರ್ವನಿಗೆ ಕೊರೊನಾ ಸೋಂಕು

    ಚಿಕ್ಕಬಳ್ಳಾಪುರ: ಜಿಲ್ಲೆಯ ಗೌರಿಬಿದನೂರಿನಲ್ಲಿ ಮತ್ತೊಂದು ಹೊಸ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 11ಕ್ಕೆ ಏರಿದೆ. ಅಂದಹಾಗೆ ಈಗಾಗಲೇ ಗೌರಿಬಿದನೂರು ನಗರದ 10 ಮಂದಿಗೆ ಸೋಂಕು ದೃಢವಾಗಿ ಓರ್ವ ವೃದ್ಧೆ ಮೃತಪಟ್ಟಿದ್ದರು.

    ಈಗ ದೆಹಲಿಯಿಂದ ವಾಪಸ್ ಆದ 23 ವರ್ಷದ ಯುವಕನಿಗೆ ಕೊರೊನಾ ಸೋಂಕು ತಗುಲಿದ್ದು ಸೋಂಕಿತರ ಸಂಖ್ಯೆ 11ಕ್ಕೆ ಏರಿದೆ. ಈ ಹೊಸ ಪ್ರಕರಣದಿಂದ ಗೌರಿಬಿದನೂರಿನಲ್ಲಿ ಮತ್ತಷ್ಟು ಆತಂಕ ಹೆಚ್ಚಾಗಿದೆ. ಮಾರ್ಚ್ 6 ರಂದು ದೆಹಲಿಯ ನಿಜಾಮುದ್ದೀನ್ ನಿಂದ ರೈಲಿನ ಮೂಲಕ ಗೌರಿಬಿದನೂರು ಗಡಿಭಾಗ ಆಂಧ್ರದ ಹಿಂದೂಪುರಕ್ಕೆ ಆಗಮಿಸಿ, ಅಲ್ಲಿಂದ ಬಸ್ ಮೂಲಕ ಗೌರಿಬಿದನೂರು ನಗರಕ್ಕೆ ಆಗಮಿಸಿದ್ದಾನೆ.

    ತನ್ನ ಮನೆಗೆ ಬಂದು ತನ್ನ ತಾಯಿ ಜೊತೆ ವಾಸವಾಗಿದ್ದ ಯುವಕನ ಮನೆಗೆ ಈತನ ಅಕ್ಕ-ಬಾವ ಹಾಗೂ ಇಬ್ಬರು ಮಕ್ಕಳ ಸಹ ಬಂದು ಹೋಗಿದ್ದಾರೆ. ಮತ್ತೊಂದೆಡೆ ಈತ ತನ್ನ ಸ್ನೇಹಿತನ ಜೊತೆಗೂಡಿ ಆಂಧ್ರದ ಹಿಂದೂಪುರಕ್ಕೆ ನಾಲ್ಕೈದು ಬಾರಿ ಹೋಗಿ ಬಂದಿದ್ದಾನೆ. ದೆಹಲಿಯ ನಿಜಾಮುದ್ದೀನ್ ಪ್ರಕರಣ ಬಯಲಾದ ನಂತರ ಈತನನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿತ್ತು. ಇಂದು ಈತನ ವರದಿ ಲಭ್ಯವಾಗಿದ್ದು ಪಾಸಿಟಿವ್ ಬಂದಿದೆ.

    ಹೀಗಾಗಿ ಯುವಕನ ತಾಯಿ, ಅಕ್ಕ-ಬಾವ ಹಾಗೂ ಅವರ ಇಬ್ಬರು ಮಕ್ಕಳು ಸೇರಿದಂತೆ ಸ್ನೇಹಿತ ಹಾಗೂ ಸ್ನೇಹಿತನ ತಾಯಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಈ ಯುವಕ ಸೇರಿದಂತೆ 8 ಮಂದಿ ದೆಹಲಿಯ ಜಮಾತ್ ಗೆ ಹೋಗಿ ಬಂದಿದ್ದು, ಇವರಲ್ಲಿ ಈತನಿಗೆ ಬಿಟ್ಟು ಬೇರೆ ಯಾರಿಗೂ ಸೋಂಕು ತಗುಲಿಲ್ಲ. ಹೀಗಾಗಿ ಈತನಿಗೆ ದೆಹಲಿಯಲ್ಲೇ ಸೋಂಕು ತಗಲಿದೆಯಾ ಅಥವಾ ಹಿಂದೂಪುರದಲ್ಲಿ ಸಹ ಸಾಕಷ್ಟು ಪಾಸಿಟಿವ್ ಪ್ರಕರಣಗಳಿದ್ದು ಅಲ್ಲಿ ಏನಾದ್ರೂ ಸೋಂಕು ತಗುಲಿದೆಯಾ ಅನ್ನೋ ಅನುಮಾನ ಜಿಲ್ಲಾಡಳಿತಕ್ಕೆ ಮೂಡಿದೆ.

    ಹೀಗಾಗಿ ಪೇಷೆಂಟ್ ನಂಬರ್ 180ರ ಮತ್ತಷ್ಟು ಟ್ರಾವೆಲ್ ಹಿಸ್ಟರಿ ಕಲೆ ಹಾಕುವಲ್ಲಿ ಪೊಲೀಸರು ನಿರತರಾಗಿದ್ದು, ಅಗತ್ಯ ಮುಂಜಾಗ್ರತಾ ಕ್ರಮಗಳನ್ನ ವಹಿಸಲಾಗುತ್ತಿದೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್ ಲತಾ ತಿಳಿಸಿದ್ದಾರೆ.

  • ಜಮಾತ್‍ನಿಂದ ಮರಳಿದ್ದ ವೃದ್ಧ ಕೊರೊನಾದಿಂದ ಸಾವನ್ನಪ್ಪಿದ್ದಕ್ಕೆ ದಾಖಲೆ ಇಲ್ಲ: ಬೀದರ್ ಡಿಸಿ

    ಜಮಾತ್‍ನಿಂದ ಮರಳಿದ್ದ ವೃದ್ಧ ಕೊರೊನಾದಿಂದ ಸಾವನ್ನಪ್ಪಿದ್ದಕ್ಕೆ ದಾಖಲೆ ಇಲ್ಲ: ಬೀದರ್ ಡಿಸಿ

    ಬೀದರ್: ಜಮಾತ್‍ನಲ್ಲಿ ನಡೆದ ಸಮಾವೇಶದಲ್ಲಿ ಭಾಗಿಯಾಗಿದ್ದ ಬೀದರ್ ಮೂಲದ ವೃದ್ಧ ಕೊರೊನಾ ವೈರಸ್‍ನಿಂದ ಸಾವನ್ನಪ್ಪಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಬೀದರ್ ಡಿಸಿ ಎಚ್.ಆರ್ ಮಹಾದೇವ್ ಅವರು, ಕೊರೊನಾ ಸೋಂಕು ತಗುಲಿ ವೃದ್ಧ ಸಾವನ್ನಪ್ಪಿದ್ದಾರೆ ಎನ್ನಲು ಯಾವುದೇ ದಾಖಲೆಗಳಿಲ್ಲ ಎಂದು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು, ಈ ಬಗ್ಗೆ ನಮಗೆ ಮಾಹಿತಿ ಇಲ್ಲ. ಅವರಿಗೆ ಎರಡು ಬಾರಿ ನಾವು ಟೆಸ್ಟ್ ಮಾಡಿದ್ದೇವೆ. ಎರಡು ಬಾರಿಯೂ ನೆಗೆಟಿವ್ ಬಂದಿದೆ. ಅವರು ಕೊರೊನಾ ಪಾಸಿಟಿವ್‍ಯಿಂದ ಸಾವನ್ನಪ್ಪಿದ್ದಾರೆ ಎಂಬುದಕ್ಕೆ ನಮ್ಮಲ್ಲಿ ಯಾವುದೇ ದಾಖಲಾತಿ ಇಲ್ಲ. 28 ಜನರ ಮಾದರಿ ತಪಾಸಣೆ ಬಳಿಕವೇ 11 ಮಂದಿಗೆ ಕೊರೊನಾ ಪಾಸಿಟಿವ್ ಇರುವ ವರದಿ ಬಂದಿದೆ ಎಂದು ಮಾಹಿತಿ ನೀಡಿದರು.

    ಸೋಂಕಿತರ ಸಂರ್ಪಕದಲ್ಲಿರುವವರ ಮಾಹಿತಿ ಪಡೆಯಲಾಗುತ್ತಿದೆ. ಸೋಂಕಿತರು ಎಲ್ಲೆಲ್ಲಿ ಓಡಾಡಿದ್ದಾರೆ ಅದರ ಮಾಹಿತಿ ಕೂಡಾ ಪಡೆಯಲಾಗುತ್ತಿದೆ. ಸೋಂಕಿತರ ಸಂಪರ್ಕದಲ್ಲಿ ಇರುವವರಲ್ಲಿ ಸೋಂಕಿತ ಲಕ್ಷಣಗಳು ಕಂಡು ಬಂದಿದೆಯಾ ಎಂದು ನಮ್ಮ ತಂಡ ನಿಗಾ ವಹಿಸುತ್ತಿದೆ. ಇನ್ನು ಎರಡು ದಿನಗಳಲ್ಲಿ ಎಲ್ಲರನ್ನು ಗುರುತಿಸುವ ಕೆಲಸ ಮಾಡುತ್ತೇವೆ. ಲಕ್ಷಣಗಳು ಕಂಡು ಬಂದರೆ ಅವರ ರಕ್ತ ಹಾಗೂ ಗಂಟಲಿನ ಧ್ರವದ ಮಾದರಿಯನ್ನ ಪ್ರಯೋಗಾಲಯಕ್ಕೆ ರವಾನಿಸುತ್ತೇವೆ.

    ಬಸವಕಲ್ಯಾಣ, ಮನ್ನಾಏಖೇಳ್ಳಿ ಹಾಗೂ ಬೀದರ್ ನ ಓಲ್ಡ್ ಸಿಟಿಯನ್ನ 28 ದಿನಗಳ ಕಾಲ ಸಂಪೂರ್ಣ ಬಂದ್ ಮಾಡಲಾಗಿದೆ. ಲಾಕ್‍ಡೌನ್ ಮತ್ತಷ್ಟು ಬೀಗಿ ಮಾಡುತ್ತೇವೆ. ಆದರೆ ಅಗತ್ಯ ವಸ್ತುಗಳನ್ನ ಮನೆ ಮನೆಗೆ ತಲುಪಿಸುವ ಕೆಲಸ ಮಾಡುತ್ತೇವೆ ಎಂದು ಡಿಸಿ ಹೇಳಿದರು.

  • ಜಮಾತ್‍ಗೆ ಹೋಗಿಬಂದಿದ್ದ ದಂಪತಿ ಕ್ವಾರಂಟೈನ್ – 17 ಮಂದಿಗೆ ಕೊರೊನಾ ಟೆಸ್ಟ್

    ಜಮಾತ್‍ಗೆ ಹೋಗಿಬಂದಿದ್ದ ದಂಪತಿ ಕ್ವಾರಂಟೈನ್ – 17 ಮಂದಿಗೆ ಕೊರೊನಾ ಟೆಸ್ಟ್

    ಚಿಕ್ಕಬಳ್ಳಾಪುರ: ಜಿಲ್ಲೆಯಿಂದ ದೆಹಲಿಯ ಜಮಾತ್‍ಗೆ ಹೋಗಿ ಬಂದ 17 ಮಂದಿ ಪತ್ತೆಯಾಗಿದ್ದಾರೆ ಎಂದು ಚಿಕ್ಕಬಳ್ಳಾಪುರ ಎಸ್‍ಪಿ ಮಿಥುನ್ ಕುಮಾರ್ ಮಾಹಿತಿ ನೀಡಿದ್ದಾರೆ.

    ಮಾರ್ಚ್ 05ರಿಂದ ಮಾರ್ಚ್ 10ರ ಒಳಗಾಗಿ ಆಗ್ರಾ, ಅಜ್ಮೀರ್ ಹಾಗೂ ದೆಹಲಿ ಪ್ರವಾಸಕ್ಕೆ ತೆರಳಿ ವಾಪಸ್ಸಾಗಿದ್ದ ದಂಪತಿಯನ್ನ ಪತ್ತೆ ಮಾಡಲಾಗಿದ್ದು, ಮುಂಜಾಗ್ರತಾ ಕ್ರಮವಾಗಿ ದಂಪತಿಯನ್ನ ಹಾಸ್ಪಿಟಲ್ ಕ್ವಾರಂಟೈನ್ ಮಾಡಲಾಗಿದೆ. ಇದಲ್ಲದೇ ಫೆಬ್ರವರಿ 08ರಿಂದ ಫೆಬ್ರವರಿ 15ರ ಮಧ್ಯೆ ಜಮಾತ್‍ಗೆ ಹೋಗಿಬಂದಿದ್ದ 15 ಮಂದಿಯನ್ನ ಪತ್ತೆ ಮಾಡಲಾಗಿದೆ.

    ಈಗಾಗಲೇ ಅವರು ವಾಪಸ್ಸಾಗಿ 45 ದಿನಗಳು ಕಳೆದಿದ್ದು, ಇದುವರೆಗೂ ಯಾರಲ್ಲಿಯೂ ಕೊರೊನಾ ಸೋಂಕಿನ ಲಕ್ಷಣಗಳು ಕಂಡುಬಂದಿಲ್ಲ. ಆದರೂ ಅನುಮಾನದ ಮೇರೆಗೆ 15 ಮಂದಿಯನ್ನ ಪತ್ತೆ ಮಾಡಿ ಪರೀಕ್ಷೆಗೆ ಒಳಪಡಿಸಲಾಗಿದೆ. ಸದ್ಯ 17 ಮಂದಿಯ ಬ್ಲಡ್ ಸ್ಯಾಂಪಲ್ ಹಾಗೂ ಗಂಟಲು ದ್ರವ ಪಡೆದುಕೊಂಡು ಪರೀಕ್ಷೆಗೆ ಕಳುಹಿಸಲಾಗುತ್ತಿದೆ ಎಂದು ಎಸ್‍ಪಿ ಅವರು ತಿಳಿಸಿದರು.

  • 10 ಕುಟುಂಬಗಳಿಗೆ ಸಮುದಾಯದಿಂದ ಬಹಿಷ್ಕಾರ ಹಾಕಿ ಕಿರುಕುಳ

    10 ಕುಟುಂಬಗಳಿಗೆ ಸಮುದಾಯದಿಂದ ಬಹಿಷ್ಕಾರ ಹಾಕಿ ಕಿರುಕುಳ

    ಕಾರವಾರ: ತಮ್ಮ ಧರ್ಮದಲ್ಲಿಯೇ ಬೇರೊಬ್ಬ ಗುರುಗಳನ್ನು ಅನುಸರಿಸಿದ್ದಕ್ಕೆ 10 ಕುಟುಂಬಗಳಿಗೆ ಜಮಾತ್‍ನಿಂದ ಬಹಿಷ್ಕಾರ ಹಾಕಿ ಕಿರುಕುಳ ನೀಡುತ್ತಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದಿದೆ.

    ಇದು ಕಾರವಾರದ ಸದಾಶಿವಗಡ ಎಂಬ ಊರು. ಇಲ್ಲಿನ ಸುಮಾರು 10 ಕುಟುಂಬಗಳು ಮುಸ್ಲಿಂ ಧರ್ಮದ ಆಂಧ್ರ ಮೂಲದ ದಾವುಲ್ ಆಲಿಷಾ ಎಂಬ ಗುರುಗಳ ನಿಯಮಗಳನ್ನು ಅನುಸರಿಸುತಿದ್ದರು. ಆದರೆ ಇದಕ್ಕೆ ಜಮಾತ್ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಬೇರೊಬ್ಬ ಗುರುವನ್ನು ಅನುಸರಿಸಿದ್ದಕ್ಕೆ 25 ವರ್ಷಗಳಿಂದ ಕುಟುಂಬಗಳಿಗೆ ಬಹಿಷ್ಕಾರ ಹಾಕಿದ್ದಾರೆ. ಕುಟುಂಬಗಳ ಮನೆಗೆ, ಕಾರ್ಯಕ್ರಮಕ್ಕೆ ಯಾರೂ ಹೋಗದಂತೆ ಸಮುದಾಯದವರಿಗೆ ಫರ್ಮಾನು ಹೊರಡಿಸಿದ್ದಾರೆ.

    ಕುಟುಂಬಗಳಿಗೆ ಬಹಿಷ್ಕಾರ ಹಾಕಿದ್ದಲ್ಲದೇ ಈ ಕುಟುಂಬಗಳಲ್ಲಿ ಯಾವುದೇ ಹೆಣ್ಣುಮಕ್ಕಳನ್ನು ಬೇರೊಬ್ಬರು ಮದುವೆಯಾಗದಂತೆ ಈ ಜಮಾಯಿತ್ ಸದಸ್ಯರು ತಡೆದಿದ್ದಾರಂತೆ. ಈ ಹಿಂದೆ ಪಬ್ಲಿಕ್ ಟಿವಿಯಲ್ಲಿ ವರದಿ ಪ್ರಸಾರವಾದ ಬೆನ್ನಲ್ಲೇ ತಹಶೀಲ್ದಾರ್ ನೇತೃತ್ವದ ಸಮಿತಿ ಈ ಬಗ್ಗೆ ಆದೇಶ ಮಾಡಿತ್ತು. ಇನ್ನು ವಕ್ಫ್ ಮಂಡಳಿಗೆ ಬಹಿಷ್ಕಾರದ ಸಮಸ್ಯೆ ಬಗೆಹರಿಸಲು ಸೂಚಿಸಿದ್ದರು. 4 ಬಾರಿ ಸಭೆ ಕರೆದರೂ ಸಭೆಗೆ ಗೈರಾದ ಜಮಾತ್ ಸದಸ್ಯರು ಮತ್ತೆ ತಮ್ಮ ಹಳೇ ಚಾಳಿಯನ್ನೇ ಮುಂದುವರಿಸಿದ್ದಾರೆ. ಹೀಗಾಗಿ ಸಾಮಾಜಿಕ ಬಹಿಷ್ಕಾರದಿಂದ ಕುಟುಂಬದ ಸದಸ್ಯರು ನರಕಯಾತನೆ ಅನುಭವಿಸುತ್ತಿದ್ದಾರೆ.

    ಏನೇಯಾದರು ಸಮಾಜ ಎಷ್ಟೇ ಮುಂದುವರಿದಿದ್ದರು ಬಹಿಷ್ಕಾರದಂತ ಪದ್ದತಿ ಇನ್ನೂ ಜೀವಂತವಾಗಿದೆ. ಇನ್ನಾದರೂ ಜಿಲ್ಲಾಡಳಿತ ಹಾಗೂ ವಕ್ಫ್ ಮಂಡಳಿ ಈ ಬಗ್ಗೆ ಗಮನಹರಿಸಿ ಕಠಿಣ ಕ್ರಮ ಕೈಗೊಳ್ಳಬೇಕಿದ್ದು ಕುಟುಂಬಗಳಿಗೆ ನ್ಯಾಯ ಒದಗಿಸಿ ಕೊಡಬೇಕಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv