Tag: ಜಮಖಂಡಿ

  • ಉಪ ಚುನಾವಣೆಗೆ ಅಖಾಡ ಸಿದ್ಧ – ಇಂದು ಘಟಾನುಘಟಿ ನಾಯಕರಿಂದ ನಾಮಪತ್ರ

    ಉಪ ಚುನಾವಣೆಗೆ ಅಖಾಡ ಸಿದ್ಧ – ಇಂದು ಘಟಾನುಘಟಿ ನಾಯಕರಿಂದ ನಾಮಪತ್ರ

    – ಬಳ್ಳಾರಿ ಅಭ್ಯರ್ಥಿ ಆಯ್ಕೆ ಇನ್ನು ಕಗ್ಗಂಟು

    ಬೆಂಗಳೂರು: ಎರಡು ವಿಧಾನಸಭಾ, ಮೂರು ಲೋಕಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಉಪಕದನ ಇಂದಿನಿಂದ ರಂಗೇರಲಿದೆ. ತೀರ ಪ್ರಯಾಸದಿಂದ ಮೂರು ಪಕ್ಷಗಳು ಮಂಡ್ಯ, ಶಿವಮೊಗ್ಗ, ರಾಮನಗರ, ಜಮಖಂಡಿ ಕ್ಷೇತ್ರಗಳ ಅಭ್ಯರ್ಥಿಗಳನ್ನ ಫೈನಲ್ ಮಾಡಿದ್ದು, ಇಂದು ಕೆಲ ಘಟಾನುಘಟಿ ನಾಯಕರು ತಮ್ಮ ಉಮೇದುವಾರಿಕೆ ಸಲ್ಲಿಸಲಿದ್ದಾರೆ.

    ಗಣಿದಣಿಗಳ ಕೋಟೆ ಬಳ್ಳಾರಿಯಲ್ಲಿ ಮಾತ್ರ ಕಾಂಗ್ರೆಸ್ ಅಭ್ಯರ್ಥಿ ಇನ್ನೂ ಆಯ್ಕೆ ಆಗಿಲ್ಲ. ಸಿದ್ದರಾಮಯ್ಯ ಒಲವು ವಿಎಸ್ ಉಗ್ರಪ್ಪ ಪರ ಇದ್ದರೆ, ನಾಗೇಂದ್ರ ತಮ್ಮ ಸೋದರ ವೆಂಕಟೇಶ್ ಪ್ರಸಾದ್‍ಗೆ ಟಿಕೆಟ್ ಕೊಡಿಸಲು ಲಾಬಿ ಮಾಡುತ್ತಿದ್ದಾರೆ. ಇತ್ತ ಜಾರಕಿಹೊಳಿ ಬ್ರದರ್ಸ್ ಒಲವು ಸಂಬಂಧಿ ದೇವೇಂದ್ರಪ್ಪ ಪರ ಇದೆ. ಯಾವುದೇ ಕ್ಷಣದಲ್ಲಿ ಕೈ ಅಭ್ಯರ್ಥಿ ಹೆಸರು ಘೋಷಣೆ ಆಗೋ ಸಾಧ್ಯತೆ ಇದೆ.

    ಇತ್ತ ಬಳ್ಳಾರಿ ಬಿಜೆಪಿಯಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಜೆ ಶಾಂತಾ ಮಂಗಳವಾರ ಉಮೇದುವಾರಿಕೆ ಸಲ್ಲಿಸಿದ್ದು, ಟಿಕೆಟ್ ಆಕ್ಷಾಂಕಿಯಾಗಿದ್ದ ಡಾ. ಶ್ರೀನಿವಾಸ್ ಬಿಜೆಪಿಗೆ ರಾಜೀನಾಮೆ ನೀಡಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಯಾವ ಪಕ್ಷದಿಂದ ಯಾವ ಅಭ್ಯರ್ಥಿಗಳು ಸ್ಪರ್ಧೆ ಮಾಡುತ್ತಾರೆ ಎಂಬವುದು ಈ ಕೆಳಗಿನಂತಿದೆ.

    * ರಾಮನಗರ ವಿಧಾನಸಭಾ ಕ್ಷೇತ್ರ
    ಅನಿತಾ ಕುಮಾರಸ್ವಾಮಿ, ಜೆಡಿಎಸ್ V/S ಎಲ್.ಚಂದ್ರಶೇಖರ್, ಬಿಜೆಪಿ

    * ಶಿವಮೊಗ್ಗ ಲೋಕಸಭಾ ಕ್ಷೇತ್ರ
    ಮಧು ಬಂಗಾರಪ್ಪ, ಜೆಡಿಎಸ್ V/S ಬಿ.ವೈ ರಾಘವೇಂದ್ರ, ಬಿಜೆಪಿ

    * ಮಂಡ್ಯ ಲೋಕಸಭಾ ಕ್ಷೇತ್ರ
    ಎಲ್.ಆರ್.ಶಿವರಾಮೇಗೌಡ, ಜೆಡಿಎಸ್ V/S ಡಾ.ಸಿದ್ದರಾಮಯ್ಯ, ಬಿಜೆಪಿ

    * ಜಮಖಂಡಿ ವಿಧಾನಸಭಾ ಕ್ಷೇತ್ರ
    ಆನಂದ ನ್ಯಾಮಗೌಡ, ಕಾಂಗ್ರೆಸ್ V/S ಶ್ರೀಕಾಂತ್ ಕುಲಕರ್ಣಿ, ಬಿಜೆಪಿ

    ರಾಮನಗರದಲ್ಲಿ ಅನಿತಾ ಕುಮಾರಸ್ವಾಮಿ ಮಧ್ಯಾಹ್ನ 12 ಗಂಟೆಗೆ ನಗರಕ್ಕೆ ತಮ್ಮ ಪತಿ ಸಿಎಂ ಕುಮಾರಸ್ವಾಮಿ ಹಾಗೂ ಪುತ್ರ ನಿಖಿಲ್ ಜೊತೆ ಆಗಮಿಸಿ, ಚಾಮುಂಡೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಬಳಿಕ 1.30ಕ್ಕೆ ನಾಮಪತ್ರ ಸಲ್ಲಿಸಲಿದ್ದಾರೆ. ನಂತರ ನಗರದ ಹಳೇ ಬಸ್ ನಿಲ್ದಾಣದ ಬಳಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿ, ಪ್ರಚಾರಕ್ಕೆ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ. ಬಿಜೆಪಿಯ ಚಂದ್ರಶೇಖರ್ ಬೆಳಗ್ಗೆ 10 ಗಂಟೆಗೆ ಚಾಮುಂಡೇಶ್ವರಿ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿ 11 ಗಂಟೆಗೆ ನಾಮಪತ್ರ ಸಲ್ಲಿಸಲಿದ್ದಾರೆ. ಇವರಿಗೆ ಮಾಜಿ ಡಿಸಿಎಂ ಅಶೋಕ್, ಮಾಜಿ ಶಾಸಕ ಸಿ.ಪಿ ಯೋಗೇಶ್ವರ್ ಸಾಥ್ ನೀಡಲಿದ್ದಾರೆ.

    ಇತ್ತ ಶಿವಮೊಗ್ಗದಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀ ಬಿ. ವೈ. ರಾಘವೇಂದ್ರ ಬೆಳಗ್ಗೆ 9.15ಕ್ಕೆ ಹರಕೆರೆಥಿ ಶ್ರೀರಾಮೇಶ್ವರ ದೇವಸ್ಥಾನ, ಬೆಳಗ್ಗೆ 9.30ಕ್ಕೆ ರವೀಂದ್ರನಗರದ ಪ್ರಸನ್ನ ಗಣಪತಿ ದೇವಸ್ಥಾನ, ಬೆಳಗ್ಗೆ 9.45ಕ್ಕೆ ತಿಪ್ಪಾಜೋಯ್ಸ್ ಕಲೋನಿಯ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ತೆರಳಿ ಆಶೀರ್ವಾದ ಪಡೆಯಲಿದ್ದಾರೆ. ಬಳಿಕ ನಾಮಪತ್ರ ಸಲ್ಲಿಸಲಿದ್ದಾರೆ. ಮಧು ಬಂಗಾರಪ್ಪ ಕೂಡ ಮಧ್ಯಾಹ್ನ 12 ಗಂಟೆ ಸುಮಾರಿಗೆ ಉಮೇದುವಾರಿಕೆ ಸಲ್ಲಿಸುವ ಸಾಧ್ಯತೆ ಇದೆ.

    ತೀವ್ರ ಜಿದ್ದಾಜಿದ್ದಿನ ಕಣವಾಗಿರುವ ಮಂಡ್ಯದಲ್ಲಿ ಜೆಡಿಎಸ್‍ನ ಶಿವರಾಮೇಗೌಡ ಹಾಗೂ ಬಿಜೆಪಿ ಅಭ್ಯರ್ಥಿ ಡಾ. ಸಿದ್ದರಾಮಯ್ಯ ಬೆಳಗ್ಗೆ 9 ಗಂಟೆಗೆ ನಾಗಮಂಗಲ ತಾಲ್ಲೂಕಿನ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ, ಕಾಲಭೈರವೇಶ್ವರ ಸ್ವಾಮಿ ಕ್ಷೇತ್ರದಲ್ಲಿ ಪೂಜೆ ಸಲ್ಲಿಸಿ ನಂತರ ನಾಮಪತ್ರ ಸಲ್ಲಿಸಲಿದ್ದಾರೆ. ಶಿವರಾಮೇಗೌಡ ನಾಮಪತ್ರ ಸಲ್ಲಿಕೆ ವೇಳೆ ಸಿಎಂ ಕುಮಾರಸ್ವಾಮಿ ಆಗಮಿಸುವ ಸಾಧ್ಯತೆಯಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಜಮಖಂಡಿಯಲ್ಲಿ ಕಾಂಗ್ರೆಸ್‍ಗೆ ಬಂಡಾಯದ ಬಿಸಿ

    ಜಮಖಂಡಿಯಲ್ಲಿ ಕಾಂಗ್ರೆಸ್‍ಗೆ ಬಂಡಾಯದ ಬಿಸಿ

    ಬಾಗಲಕೋಟೆ: ಮಾಜಿ ಸಿಎಂ ಸಿದ್ದರಾಮಯ್ಯಗೆ ಪ್ರತಿಷ್ಠೆಯಾಗಿರುವ ಜಮಖಂಡಿ ಉಪಚುನಾವಣೆ ವಿಷಯದಲ್ಲಿ ಕಾಂಗ್ರೆಸ್‍ನಲ್ಲಿ ಭಿನ್ನಮತ ಭುಗಿಲೆದ್ದಿದೆ.

    ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡೋದಾಗಿ ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್ ಮುಖಂಡ ಸುಶೀಲ್ ಕುಮಾರ್ ಬೆಳಗಲಿ ಹೇಳಿದ್ದಾರೆ. ಶನಿವಾರ ಬೆಂಬಲಿಗರ ಸಭೆ ಮಾಡ್ತೇನೆ. ಒಂದು ವೇಳೆ ಬೆಂಬಲಿಗರು ಬಂಡಾಯ ಅಭ್ಯರ್ಥಿ ಆಗಿ ಸ್ಪರ್ಧೆ ಮಾಡಿ ಅಂದ್ರೆ ಎಲೆಕ್ಷನ್‍ಗೆ ನಿಲ್ಲುತ್ತೇನೆ ಅಂತ ಹೇಳಿದ್ದಾರೆ.

    ನಮ್ಮ ತಂದೆ ಕಾಲದಿಂದಲೂ ಕಾಂಗ್ರೆಸ್‍ಗಾಗಿ ದುಡಿಯುತ್ತಾ ಬಂದಿದ್ದೆ. 2008, 2013ರಲ್ಲೂ ಟಿಕೆಟ್ ಕೇಳಿದ್ದೆ. ಆದ್ರೆ ಟಿಕೆಟ್ ನೀಡಿಲ್ಲ. ಇತ್ತ, ಸಚಿವ ಡಿಕೆಶಿವಕುಮಾರ್ ಮತ್ತು ಮಾಜಿ ಸಚಿವ ಎಂಬಿ ಪಾಟೀಲ್ ದುಡುಕಬೇಡಿ ಅಂತ ಹೇಳಿದ್ದಾರೆ. ಆದ್ರೆ ಬೆಂಬಲಿಗರ ನಿರ್ಧಾರಕ್ಕೆ ತಲೆಬಾಗಬೇಕಾಗುತ್ತೇನೆ ಅಂತ ಹೇಳಿದ್ದಾರೆ.

    ಯಡಿಯೂರಪ್ಪ, ಶ್ರೀರಾಮುಲು, ಪುಟ್ಟರಾಜು ಅವರಿಂದ ತೆರವಾಗಿರುವ ಶಿವಮೊಗ್ಗ, ಬಳ್ಳಾರಿ, ಮಂಡ್ಯ ಕ್ಷೇತ್ರದ ಉಪಚುನಾವಣೆ ನವೆಂಬರ್ 3 ರಂದು ನಡೆಯಲಿದ್ದು, ನವೆಂಬರ್ 6 ರಂದು ಫಲಿತಾಂಶ ಪ್ರಕಟವಾಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಂಗೇರಿದ ಜಮಖಂಡಿ ಉಪಚುನಾವಣೆ ಕದನ – ಕೈ, ಕಮಲದಲ್ಲಿ ಬಂಡಾಯ ಭೀತಿ

    ರಂಗೇರಿದ ಜಮಖಂಡಿ ಉಪಚುನಾವಣೆ ಕದನ – ಕೈ, ಕಮಲದಲ್ಲಿ ಬಂಡಾಯ ಭೀತಿ

    ಬಾಗಲಕೋಟೆ: ಮುಂಬರುವ ಲೋಕಸಭೆ ಚುನಾವಣೆಗೆ ದಿಕ್ಸೂಚಿ ಎಂದು ಹೇಳಲಾಗುತ್ತಿರುವ ವಿಧಾನಸಭೆಯ ಉಪ ಚುನಾವಣೆಗಳ ಅಖಾಡ ರಂಗೇರುತ್ತಿದೆ. ಅದೇ ರೀತಿ ಜಮಖಂಡಿಯಲ್ಲೂ ಚುನಾವಣಾ ಜ್ವರ ಏರುತ್ತಿದ್ದು, ಅದಾಗಲೇ ಕೈ, ಕಮಲ ಪಕ್ಷಗಳ ಅಭ್ಯರ್ಥಿಗಳು ಪ್ರಚಾರದ ಅಂಗಳಕ್ಕೆ ಇಳಿದಿದ್ದಾರೆ. ಆದರೆ, ಅಭ್ಯರ್ಥಿಗಳನ್ನು ಎರಡು ಪಕ್ಷಗಳು ಫೈನಲ್ ಮಾಡುತ್ತಿದ್ದಂತೆ ಅಸಮಾಧಾನ ಹೊಗೆ ಕಾಣಿಸಿಕೊಂಡಿದೆ.

    ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಬಂಡಾಯ ಭೀತಿ ಎದುರಾದರೆ, ಬಿಜೆಪಿಯ ಪ್ರಮುಖ ನಾಯಕ ಪಕ್ಷ ತೊರೆಯುವ ಆತಂಕ ಎದುರಾಗಿದೆ. ಇದರ ನಡುವೆಯೇ ಕೈ, ಕಮಲ ಅಭ್ಯರ್ಥಿಗಳು ಪ್ರಚಾರವನ್ನು ಆರಂಭಿಸಿದ್ದಾರೆ.

    ಜಿಲ್ಲೆಯ ಜಮಖಂಡಿ ವಿಧಾನಸಭೆ ಕ್ಷೇತ್ರದ ದಿವಂಗತ ಶಾಸಕ ಸಿದ್ದು ನ್ಯಾಮಗೌಡ ಅವರ ಅಕಾಲಿಕ ನಿಧನದಿಂದ ತೆರವಾದ ಸ್ಥಾನಕ್ಕೆ ನ.3ರಂದು ಚುನಾವಣೆ ನಡೆಯಲಿದ್ದು ರಾಜಕೀಯ ಪಕ್ಷಗಳು ಭರ್ಜರಿ ಸಿದ್ಧತೆಯಲ್ಲಿ ತೊಡಗಿವೆ. ಸಿದ್ದು ನ್ಯಾಮಗೌಡ ಅವರ ಪುತ್ರ ಆನಂದ ನ್ಯಾಮಗೌಡರನ್ನ ಈ ಬಾರಿ ಕಾಂಗ್ರೆಸ್ ಅಖಾಡಕ್ಕಿಳಿಸಲಿದೆ. ಇದಕ್ಕೆ ಜೆಡಿಎಸ್ ಬೆಂಬಲ ಕೂಡ ನೀಡಿದೆ. ಆದರೆ ಜಮಖಂಡಿ ಕಾಂಗ್ರೆಸ್ ನಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಪಕ್ಷದ ಕೆಲ ಮುಖಂಡರು, ಕ್ಷೇತ್ರದಲ್ಲಿ ಹೆಚ್ಚಿನ ಮತದಾರರು ಇರುವ ಜೈನ ಸಮುದಾಯದ ಮುಖಂಡ ಸುಶೀಲಕುಮಾರ ಬೆಳಗಲಿ ಅವರಿಗೆ ಟಿಕೆಟ್ ನೀಡುವಂತೆ ರಾಜ್ಯ ನಾಯಕರಿಗೆ ಒತ್ತಡ ತಂದಿದ್ದರು. ಆದರೆ ಅವರಿಗೆ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಅ. 13ರಂದು ಕಾರ್ಯಕರ್ತರೊಂದಿಗೆ ಚರ್ಚಿಸಿ ಬಂಡಾಯವಾಗಿ ಕಣಕ್ಕಿಳಿಯುವ ಬಗ್ಗೆ ಚಿಂತನೆಯಲ್ಲಿದ್ದಾರೆ.

    ಕಾಂಗ್ರೆಸ್ ಪಕ್ಷದ ಆನಂದ ನ್ಯಾಮಗೌಡರಿಗೆ ಸಹಜವಾಗಿ ಅನುಕಂಪದ ಅಲೆ ಇದ್ದು, ತಂದೆ ಮಾಡಿದ ಅಭಿವೃದ್ಧಿ ಕಾರ್ಯಗಳು ನನಗೆ ಶ್ರೀ ರಕ್ಷೆ ಎಂದಿದ್ದಾರೆ. ಅ.16ರಂದು ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ರಾಜ್ಯ ನಾಯಕರ ನೇತೃತ್ವದಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ.

    ಬಿಜೆಪಿ ಪಕ್ಷದಲ್ಲೂ ಹಲವು ಸುತ್ತಿನ ಮಾತುಕತೆ, ಸಭೆಗಳ ಬಳಿಕ ಕೊನೆಗೂ ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿಯವರನ್ನ ಅಭ್ಯರ್ಥಿಯನ್ನಾಗಿ ಘೋಷಿಸಿದೆ. ಕಳೆದ ವಿಧಾನಸಭೆ ಚುನಾವಣೆ ವೇಳೆ ಪಕ್ಷದಲ್ಲಿ ಮಾಜಿ ಸಚಿವ ಮುರುಗೇಶ ನಿರಾಣಿ ಸಹೋದರ ಸಂಗಮೇಶ ನಿರಾಣಿ ಹಾರಿಸಿದ ಬಂಡಾಯದ ಬಾವುಟದಿಂದಾಗಿ ಶ್ರೀಕಾಂತ ಕುಲಕರ್ಣಿ ಅವರು ಕೆಲವೇ ಸಾವಿರ ಮತಗಳ ಅಂತರದಿಂದ ಸೋಲು ಅನುಭವಿಸಬೇಕಾಯಿತು. ಆದರೆ ಈ ಬಾರಿ ನಿರಾಣಿ ಕುಟುಂಬದಿಂದ ಬಂಡಾಯ ಕಾಣಿಸುತ್ತಿಲ್ಲವಾದರೂ ಬಿಜೆಪಿಯ ಸಹ ಸಂಚಾಲಕ ಬಿಎಸ್ ಸಿಂಧೂರ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಪಕ್ಷದಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ಕೊಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಜೊತೆಗೆ ಪಕ್ಷ ತೊರೆಯುವ ಬಗ್ಗೆ ಬೆಂಬಲಿಗರ ಅಭಿಪ್ರಾಯ ಸಂಗ್ರಹಕ್ಕೂ ಮುಂದಾಗಿದ್ದು, ಮಾನಸಿಕವಾಗಿ ಬಿಜೆಪಿಯಿಂದ ದೂರ ಉಳಿದಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಮಾಜಿ ಶಾಸಕ ಜಮಖಂಡಿ ಬಿಜೆಪಿ ಅಭ್ಯರ್ಥಿ ಶ್ರೀಕಾಂತ ಕುಲಕರ್ಣಿ, ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ, ಮಾಜಿ ಸಚಿವ ಮುರುಗೇಶ ನಿರಾಣಿ ತಮ್ಮ ಪರಿವಾರದಿಂದ ಯಾರೂ ಸ್ಪರ್ಧೆ ಮಾಡುವುದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ಇನ್ನುಳಿದ ಮುಖಂಡರ ಜೊತೆ ರಾಜ್ಯ ನಾಯಕರು ಮಾತನಾಡಿದ್ದಾರೆ. ಕಾಂಗ್ರೆಸ್ ಅನುಕಂಪದ ಅಲೆ ನಂಬಿ ಕುಳಿತಿದೆ. ಅದು ಪ್ರಯೋಜನಕ್ಕೆ ಬರುವುದಿಲ್ಲ. ನನ್ನ ಅನುಭವ ಕೆಲಸ ಮಾಡುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಶೀಘ್ರದಲ್ಲೇ ರಾಜ್ಯ ನಾಯಕರೊಂದಿಗೆ ಚರ್ಚಿಸಿ ನಾಮಪತ್ರ ಸಲ್ಲಿಕೆಯ ದಿನಾಂಕ ಘೋಷಿಸುವುದಾಗಿ ಹೇಳಿದ್ದಾರೆ.  ಇದನ್ನು ಓದಿ: ರಾಮನಗರ ರಾಜಕೀಯದಲ್ಲಿ ದಿಢೀರ್ ಬೆಳವಣಿಗೆ – ಕೈ ಎಂಎಲ್‍ಸಿ ಲಿಂಗಪ್ಪ ಪುತ್ರ ಬಿಜೆಪಿಗೆ ಸೇರ್ಪಡೆ

    ಜಮಖಂಡಿ ಉಪಚುನಾವಣೆಯಲ್ಲಿ ನಿರೀಕ್ಷೆಯಂತೆ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರ ಹಣಾಹಣಿ ನಡೆಯಲಿದ್ದು, ಎರಡು ಪಕ್ಷಗಳ ಕಾರ್ಯಕರ್ತರು, ಅಭ್ಯರ್ಥಿಗಳು ಭರ್ಜರಿ ತಯಾರಿಯಲ್ಲಿ ತೊಡಗಿದ್ದಾರೆ. ಇದೇ ವೇಳೆ ಎರಡು ಕಡೆಯಲ್ಲೂ ಅಸಮಾಧಾನದ ಹೊಗೆ ಕಾಣಿಸುತ್ತಿದ್ದು, ಇದು ಫಲಿತಾಂಶದ ಮೇಲೆ ಪರಿಣಾಮ ಬೀರತ್ತಾ ಎನ್ನುವ ಪ್ರಶ್ನೆಗೆ ನವೆಂಬರ್ 6 ರಂದು ಮತ ಎಣಿಕೆಯ ದಿನ ಉತ್ತರ ಸಿಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬಿಜೆಪಿ ಟಿಕೆಟ್ ಕೈ ತಪ್ಪಿದ್ದಕ್ಕೆ ಪಕ್ಷದ ಜವಾಬ್ದಾರಿಗೆ ಬಸವರಾಜ ಸಿಂಧೂರ ರಾಜೀನಾಮೆ?

    ಬಿಜೆಪಿ ಟಿಕೆಟ್ ಕೈ ತಪ್ಪಿದ್ದಕ್ಕೆ ಪಕ್ಷದ ಜವಾಬ್ದಾರಿಗೆ ಬಸವರಾಜ ಸಿಂಧೂರ ರಾಜೀನಾಮೆ?

    ಬಾಗಲಕೋಟೆ: ಜಮಖಂಡಿ ಉಪಚುನಾವಣೆ ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಶಾಸಕ ಶ್ರೀಕಾಂತ್ ಕುಲಕರ್ಣಿ ಅವರ ಹೆಸರು ಘೋಷಣೆಯಾದ ಬೆನ್ನಲ್ಲೇ, ಪಕ್ಷದಲ್ಲಿ ಅಸಮಾಧಾನ ಭುಗಿಲೆದ್ದಿದೆ. ಈ ಮೂಲಕ ಟಿಕೆಟ್ ಆಕಾಂಕ್ಷಿಯೊಬ್ಬರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ.

    ಜಮಖಂಡಿಯ ಬಿಜೆಪಿ ಮುಖಂಡ ಬಸವರಾಜ ಸಿಂಧೂರ ಅವರು, ರಾಜ್ಯ ಬಿಜೆಪಿ ಕಬ್ಬು ಬೆಳೆಗಾರರ ಪ್ರಕೋಷ್ಟದ ಸಹಸಂಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಉಪಚುನಾವಣೆ ಟಿಕೆಟ್‍ನ ಪ್ರಬಲ ಆಕಾಂಕ್ಷಿಯಾಗಿದ್ದ ಅವರಿಗೆ ಭಾರೀ ನಿರಾಸೆ ಉಂಟಾಗಿದ್ದು, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ.

    ಬಸವರಾಜ ಸಿಂಧೂರ ಅವರು ಕಳೆದ ಎರಡು ದಿನಗಳಿಂದ ಬೆಂಗಳೂರಲ್ಲಿ ಬೀಡು ಬಿಟ್ಟಿದ್ದರು. ಈ ವೇಳೆ ರಾಜ್ಯ ಬಿಜೆಪಿ ನಾಯಕರ ಮನವೊಲಿಕೆಗೆ ಪ್ರಯತ್ನಿಸಿ, ಟಿಕೆಟ್ ಗಿಟ್ಟಿಸಿಕೊಳ್ಳಲು ಯತ್ನಿಸಿದ್ದರು. ಅಷ್ಟೇ ಅಲ್ಲದೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿ, ಟಿಕೆಟ್ ನೀಡುವಂತೆ ಮನವಿ ಮಾಡಿದ್ದರು.

    ಶ್ರೀಕಾಂತ್ ಕುಲಕರ್ಣಿ ಅವರಿಗೆ ಟಿಕೆಟ್ ನೀಡಿರುವ ವಿಚಾರದಲ್ಲಿ ಬಿ.ಎಸ್.ಯಡಿಯೂರಪ್ಪ ಅವರು ಕೂಡ ಅಸಹಾಯಕರಾಗಿದ್ದಾರೆ. ಇದರಿಂದಾಗಿ ಜಮಖಂಡಿಗೆ ಮರಳಿ ಬೆಂಬಲಿಗರ ಜೊತೆ ಚರ್ಚೆ ನಡೆಸುತ್ತೇನೆ. ಅವರ ಸಲಹೆ ಹಾಗೂ ನಿರ್ಧಾರದ ಮೇಲೆ ಮುಂದಿನ ನಡೆ ಎಂದು ಬಸವರಾಜ ಸಿಂಧೂರ ಅವರು ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಿನಿಸಮರಕ್ಕೆ ಸಿದ್ಧಗೊಂಡ ಪಕ್ಷಗಳು- ಬಿಜೆಪಿ ಅಭ್ಯರ್ಥಿಗಳು ಬಹುತೇಕ ಫೈನಲ್!

    ಮಿನಿಸಮರಕ್ಕೆ ಸಿದ್ಧಗೊಂಡ ಪಕ್ಷಗಳು- ಬಿಜೆಪಿ ಅಭ್ಯರ್ಥಿಗಳು ಬಹುತೇಕ ಫೈನಲ್!

    ಬೆಂಗಳೂರು: ರಾಜ್ಯದಲ್ಲಿ ಎದುರಾಗಿರುವ ಮೂರು ಲೋಕಸಭೆ ಮತ್ತು ಎರಡು ವಿಧಾನಸಭೆ ಕ್ಷೇತ್ರಗಳಲ್ಲಿ ಯಾವ ಅಭ್ಯರ್ಥಿಗಳನ್ನು ಕಣ್ಣಕ್ಕೀಳಿಸಬೇಕೆಂದು ಮೂರು ಪಕ್ಷಗಳು ನಿರ್ಣಯಿಸಿವೆ. ಯಾವ ಕ್ಷೇತ್ರವನ್ನು ಯಾವ ಪಕ್ಷ ಹಂಚಿಕೊಳ್ಳಬೇಕು ಎಂಬುದರ ಕುರಿತಾಗಿ ದೋಸ್ತಿಗಳಲ್ಲಿ ಉಂಟಾಗಿದ್ದ ಗೊಂದಲ ಕೊನೆಗೂ ಬಗೆಹರಿದಿದೆ. ನಿರೀಕ್ಷೆಯಂತೆ ರಾಮನಗರ, ಮಂಡ್ಯ ಜೆಡಿಎಸ್‍ಗೆ ಸಿಕ್ಕಿದ್ದು, ಶಿವಮೊಗ್ಗ, ಬಳ್ಳಾರಿ ಲೋಕಸಭೆ ಕ್ಷೇತ್ರ ಮತ್ತು ಜಮಖಂಡಿ ವಿಧಾನಸಭೆ ಕ್ಷೇತ್ರ ಕಾಂಗ್ರೆಸ್‍ಗೆ ದಕ್ಕಿದೆ.

    ಮಂಗಳವಾರ ಕುಮಾರಕೃಪಾ ಅತಿಥಿ ಗೃಹದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ. ಈ ಮಿನಿ ಸಮರವನ್ನು ಜಂಟಿಯಾಗಿ ಎದುರಿಸಲು ಎರಡು ಪಕ್ಷಗಳು ನಿರ್ಧರಿಸಿವೆ. ಕಾಂಗ್ರೆಸ್-ಜೆಡಿಎಸ್ ಸಭೆ ಅಪರೂಪದ ಸನ್ನಿವೇಶಕ್ಕೆ ಸಾಕ್ಷಿಯಾಯಿತು. ಸಮ್ಮಿಶ್ರ ಸರ್ಕಾರ ಬರುವುದಕ್ಕೂ ಮೊದಲು ಬದ್ಧ ವೈರಿಗಳಂತೆ ಕರೆಯಲ್ಪಡುತ್ತಿದ್ದ, ಒಂದು ಕಾಲದ ಒಡನಾಡಿಗಳೂ ಆದ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಅಕ್ಕ ಪಕ್ಕದಲ್ಲೇ ಕುಳಿತು ಪರಸ್ಪರ ಚರ್ಚೆ ನಡೆಸಿದರು.

    ಸಭೆ ಬಳಿಕ ಮಾತನಡಿದ ಈ ಬಗ್ಗೆ ಸ್ಪಷ್ಟಪಡಿಸಿದ ಮಾಜಿ ಸಿಎಂ ಸಿದ್ದರಾಮಯ್ಯ, ಒಟ್ಟಿಗೆ ಚುನಾವಣಾ ಪ್ರಚಾರ ಮಾಡೋದಾಗಿ ಹೇಳಿದ್ರು. ಕೊಮುವಾದಿ ಪಕ್ಷವನ್ನ ಮಟ್ಟ ಹಾಕುವುದೇ ನಮ್ಮ ಉದ್ದೇಶ ಅಂತಾ ಹೇಳಿದರು. ಈ ಸಭೆಯಲ್ಲಿ ಜೆಡಿಎಸ್‍ನಿಂದ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡ್ಯಾನಿಷ್ ಅಲಿ, ಕಾಂಗ್ರೆಸ್‍ನಿಂದ ಮಾಜಿ ಸಿಎಂ ಸಿದ್ದರಾಮಯ್ಯ, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮತ್ತಿತರರು ಭಾಗವಹಿಸಿದ್ದರು.

    ಬಿಜೆಪಿಯಲ್ಲೂ ಅಭ್ಯರ್ಥಿ ಆಯ್ಕೆ ಜೋರಾಗಿದೆ. ಡಾಲರ್ಸ್ ಕಾಲೋನಿಯಾ ಯಡಿಯೂರಪ್ಪ ಅವರ ನಿವಾಸದಲ್ಲಿ ಪಕ್ಷದ ಪ್ರಮುಖರು ಸಭೆ ಸೇರಿದ್ದರು. ಕಾಂಗ್ರೆಸ್ ಸಭೆಯಲ್ಲಿ ರಾಮನಗರದ ಬಗ್ಗೆ ಚರ್ಚೆಯಾದ್ರೆ, ಬಿಜೆಪಿ ಸಭೆಯಲ್ಲಿ ಜಮಖಂಡಿ ಕ್ಷೇತ್ರದ ಅಭ್ಯರ್ಥಿ ವಿಷಯವಾಗಿ ಬಿಸಿಬಿಸಿ ಚರ್ಚೆಯಾಯ್ತು. ಕೊನೆಗೆ ಸಂಧಾನ ಸಮಾಧಾನ ನಡೆದು ಹೆಸರು ಅಂತಿಮವಾಗಿದ್ದು, ಇನ್ಮೂರು ದಿನಗಳಲ್ಲಿ ಘೋಷಿಸಲಿದ್ದಾರೆ.

    ಸಂಭಾವ್ಯ ಬಿಜೆಪಿ ಅಭ್ಯರ್ಥಿಗಳು
    * ರಾಮನಗರ ವಿಧಾನಸಭಾ ಕ್ಷೇತ್ರ – ರುದ್ರೇಶ್
    * ಜಮಖಂಡಿ ವಿಧಾನಸಭಾ ಕ್ಷೇತ್ರ – ಶ್ರೀಕಾಂತ್ ಕುಲಕರ್ಣಿ
    * ಮಂಡ್ಯ ಲೋಕಸಭಾ ಕ್ಷೇತ್ರ – ಅಶ್ವಥ್ ನಾರಾಯಣ್
    * ಶಿವಮೊಗ್ಗ ಲೋಕಸಭಾ ಕ್ಷೇತ್ರ – ಬಿ.ವೈ. ರಾಘವೇಂದ್ರ
    * ಬಳ್ಳಾರಿ ಲೋಕಸಭಾ ಕ್ಷೇತ್ರ – ಜೆ.ಶಾಂತ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಹಾ ಸಮರಕ್ಕೆ ಮುನ್ನವೇ ದೋಸ್ತಿ ಕೂಟದಲ್ಲಿ ಬಿಕ್ಕಟ್ಟು – ರಾಮನಗರ, ಶಿವಮೊಗ್ಗ ಇನ್ನು ಕಗ್ಗಂಟು

    ಮಹಾ ಸಮರಕ್ಕೆ ಮುನ್ನವೇ ದೋಸ್ತಿ ಕೂಟದಲ್ಲಿ ಬಿಕ್ಕಟ್ಟು – ರಾಮನಗರ, ಶಿವಮೊಗ್ಗ ಇನ್ನು ಕಗ್ಗಂಟು

    ಬೆಂಗಳೂರು: ಬೈ ಎಲೆಕ್ಷನ್ ಬ್ಯಾಟೆಲ್‍ಗೆ ಎರಡು ರಾಷ್ಟ್ರೀಯ ಪಕ್ಷಗಳು ಇಂದು ಅಭ್ಯರ್ಥಿಗಳನ್ನ ಅಂತಿಮಗೊಳಿಸುವ ಸಾಧ್ಯತೆ ಇದೆ.

    ಎರಡು ವಿಧಾನಸಭಾ, ಮೂರು ಲೋಕಸಭಾ ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳನ್ನ ಕಣಕ್ಕಿಳಿಸೋದು ಪಕ್ಕಾ ಆಗಿದೆ. ಜಮಖಂಡಿ ಮತ್ತು ಬಳ್ಳಾರಿ ಕ್ಷೇತ್ರದಲ್ಲಿ ಕಾಂಗ್ರೆಸ್, ರಾಮನಗರ ಹಾಗು ಮಂಡ್ಯ ಕ್ಷೇತ್ರದಲ್ಲಿ ಜೆಡಿಎಸ್ ಸ್ಪರ್ಧೆ ಮಾಡುವ ಸಾಧ್ಯತೆಗಳಿವೆ. ಆದರೆ ಶಿವಮೊಗ್ಗದಲ್ಲಿ ಬಿಜೆಪಿ ಎದುರಾಳಿ ಯಾರಾಗಬೇಕು ಅನ್ನೋದರ ಬಗ್ಗೆ ಮೈತ್ರಿ ಮಾತುಕತೆ ಅಂತಿಮವಾಗಿಲ್ಲ.

    ಈ ನಡುವೆ ಇವತ್ತು ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗಪಾಲ್ ನೇತೃತ್ವದಲ್ಲಿ ಅಭ್ಯರ್ಥಿಗಳ ಆಯ್ಕೆ ಸಂಬಂಧ ಉಪಚುನಾವಣೆ ನಡೆಯುವ ಕ್ಷೇತ್ರಗಳ ಮುಖಂಡರ ಸಭೆ ನಡೆಯಲಿದೆ. ಸಭೆಯಲ್ಲಿ ಅಭ್ಯರ್ಥಿಗಳ ಆಯ್ಕೆ ವಿಚಾರ, ಮೈತ್ರಿ ವಿಚಾರ ಪ್ರಸ್ತಾಪವಾಗಲಿದೆ. ಇನ್ನೊಂದೆಡೆ ಬಿಜೆಪಿ ಕೂಡ ಇವತ್ತೇ ಅಭ್ಯರ್ಥಿಗಳನ್ನ ಅಂತಿಮಗೊಳಿಸುವ ಸಾಧ್ಯತೆ ಇದೆ.

    ಇಂದು ಸಂಜೆ ನಾಲ್ಕು ಗಂಟೆಗೆ ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ರಾಜ್ಯ ಬಿಜೆಪಿ ಕೋರ್‍ಕಮಿಟಿ ಸಭೆ ನಡೆಯಲಿದೆ. ಬಿಎಸ್ ಯಡಿಯೂರಪ್ಪವರ ನೇತೃತ್ವದಲ್ಲಿ ನಡೆಯುವ ಕೋರ್ ಕಮಿಟಿ ಸಭೆಯಲ್ಲಿ ಅಭ್ಯರ್ಥಿಗಳನ್ನ ಅಂತಿಮಗೊಳಿಸಿ ಹೈಕಮಾಂಡ್‍ಗೆ ಹೆಸರುಗಳನ್ನ ಶಿಫಾರಸ್ಸು ಮಾಡಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮೈತ್ರಿ ಸರ್ಕಾರದ ಬೈ ಎಲೆಕ್ಷನ್ ಚಕ್ರವ್ಯೂಹ ಭೇದಿಸಲು ಬಿಜೆಪಿ ಪ್ಲಾನ್-ಹೈಕಮಾಂಡ್‍ನಿಂದ 2+1 ಫಾರ್ಮುಲಾ

    ಮೈತ್ರಿ ಸರ್ಕಾರದ ಬೈ ಎಲೆಕ್ಷನ್ ಚಕ್ರವ್ಯೂಹ ಭೇದಿಸಲು ಬಿಜೆಪಿ ಪ್ಲಾನ್-ಹೈಕಮಾಂಡ್‍ನಿಂದ 2+1 ಫಾರ್ಮುಲಾ

    ಬೆಂಗಳೂರು: ಕರ್ನಾಟಕದ ಎರಡು ವಿಧಾನಸಭೆ ಮತ್ತು ಮೂರು ಲೋಕಸಭಾ ಕ್ಷೇತ್ರಗಳ ಉಪ ಚುನಾವಣೆಗೆ ದಿನಾಂಕ ನಿಗದಿಯಾಗಿದ್ದು, ರಾಜಕೀಯ ಪಕ್ಷಗಳು ಗೆಲುವಿನ ಲೆಕ್ಕಾಚಾರದಲ್ಲಿ ನಿರತವಾಗಿವೆ. ವಿಧಾನಸಭಾ ಚುನಾವಣೆಯಲ್ಲಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಬಿಜೆಪಿ ಸರ್ಕಾರ ರಚಿಸುವಲ್ಲಿ ವಿಫಲವಾಯಿತು. ಈ ಹಿನ್ನೆಲೆಯಲ್ಲಿ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಮೈತ್ರಿ ಸರ್ಕಾರಕ್ಕೆ ತಿರುಗೇಟು ನೀಡಲು ಉಪಕದನದ ರಣತಂತ್ರಗಳನ್ನು ರಚಿಸಲು ಬಿಜೆಪಿ ಮುಂದಾಗಿದೆ.

    ಹೀಗಾಗಿ ಬಿಜೆಪಿ ಹೈಕಮಾಂಡ್ ಈಗಾಗಲೇ ರಾಜ್ಯ ನಾಯಕರಿಗೆ 2+1 ಫಾರ್ಮುಲಾ ಅನುಸರಿಸುವಂತೆ ಸೂಚಿಸಿದೆ. ಉಪ ಚುನಾವಣೆ ಇಷ್ಟವಿಲ್ಲದಿದ್ದರೂ ಬಿಜೆಪಿಗೆ ಬೈ ಎಲೆಕ್ಷನ್ ನಲ್ಲಿ ಗೆಲ್ಲುವುದು ಅನಿವಾರ್ಯವಾಗಿದೆ. 3 ಕ್ಷೇತ್ರಗಳ ಲೋಕಸಭೆ ಉಪಚುನಾವಣೆಯಲ್ಲಿ ಎರಡು ಕ್ಷೇತ್ರ ಗೆಲ್ಲೋದು, ಎರಡು ಕ್ಷೇತ್ರಗಳ ವಿಧಾನಸಭೆ ಚುನಾವಣೆಯಲ್ಲಿ 1 ಕ್ಷೇತ್ರ ಗೆಲ್ಲೋದು ಬಿಜೆಪಿಯ 2+1 ಫಾರ್ಮುಲಾ. ಚುನಾವಣೆಯ 5 ಕ್ಷೇತ್ರಗಳಲ್ಲಿ ಪ್ರಚಾರ ನಡೆಸಲು ಬಿಜೆಪಿ 5 ತಂಡಗಳನ್ನು ರಚಿಸಿದೆಯಂತೆ. ಈ ಎಲ್ಲ ಟೀಂಗಳು ಪಕ್ಷದ ಅಭ್ಯರ್ಥಿಯ ಪರ ಪ್ರಚಾರ ಮಾಡಲಿದೆ ಎಂಬ ಮಾಹಿತಿಗಳು ಲಭ್ಯವಾಗಿವೆ.

    2+1 ಬಿಜೆಪಿ ಟಾಸ್ಕ್

    ಟೀಂ ನಂಬರ್ 1:
    ಮಾಜಿ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಶಿವಮೊಗ್ಗ ಉಸ್ತುವಾರಿ
    ಯಡಿಯೂರಪ್ಪರಿಗೆ ಈಶ್ವರಪ್ಪ, ವಿಜಯೇಂದ್ರ ಸಾಥ್
    ಒಟ್ಟು ಮೂವರ ನೇತೃತ್ವದ ಟೀಂಗೆ ಸಾಥ್ ನೀಡಲು 10 ಶಾಸಕರು ಉಸ್ತುವಾರಿಗಳು

    ಟೀಂ ನಂಬರ್ 2:
    ಶಾಸಕ ಶ್ರೀ ರಾಮುಲು ನೇತೃತ್ವದಲ್ಲಿ ಬಳ್ಳಾರಿ ಉಸ್ತುವಾರಿ
    ರಾಮುಲು ಅವರಿಗೆ ಸಂಸದೆ ಶೋಭಾ, ಶಾಸಕ ಸೋಮಶೇಖರ್ ರೆಡ್ಡಿ ಸಾಥ್
    ಮೂವರ ನೇತೃತ್ವದ ಟೀಂಗೆ ಸಾಥ್ ನೀಡಲು 10 ಶಾಸಕರು ಉಸ್ತುವಾರಿಗಳು

    ಟೀಂ ನಂಬರ್ 2:
    ಮಾಜಿ ಡಿಸಿಎಂ ಆರ್.ಅಶೋಕ್ ನೇತೃತ್ವದಲ್ಲಿ ಮಂಡ್ಯ ಉಸ್ತುವಾರಿ
    ಅಶೋಕ್ ಗೆ ಪ್ರತಾಪ್ ಸಿಂಹ, ಸಿ.ಟಿ.ರವಿ ಸಾಥ್
    ಮೂವರ ಟೀಂಗೆ ಸಾಥ್ ನೀಡಲು 8 ಶಾಸಕರುಗಳ ಉಸ್ತುವಾರಿ

    ಟೀಂ ನಂಬರ್ 4:
    ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ನೇತೃತ್ವದಲ್ಲಿ ರಾಮನಗರ ವಿಧಾನಸಭಾ ಕ್ಷೇತ್ರದ ಉಸ್ತುವಾರಿ
    ಯೋಗೇಶ್ವರ್ ಅವರಿಗೆ ಪರಿಷತ್ ಸದಸ್ಯರಾದ ರವಿಕುಮಾರ್, ತೇಜಸ್ವಿನಿ ಗೌಡ ಸಾಥ್
    ಮೂವರ ಟೀಂಗೆ 5 ಮಂದಿ ಹಾಲಿ ಶಾಸಕರು, 3 ಮಂದಿ ಮಾಜಿ ಶಾಸಕರುಗಳ ಉಸ್ತುವಾರಿ

    ಟೀಂ ನಂಬರ್ 5:
    ಮಾಜಿ ಸಿಎಂ ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ಜಮಖಂಡಿ ವಿಧಾನಸಭಾ ಕ್ಷೇತ್ರದ ಉಸ್ತುವಾರಿ
    ಶೆಟ್ಟರ್ ಅವರಿಗೆ ಶಾಸಕರಾದ ಗೋವಿಂದ ಕಾರಜೋಳ, ಮುರುಗೇಶ್ ನಿರಾಣಿ ಸಾಥ್
    ಮೂವರ ಟೀಂಗೆ 10 ಮಂದಿ ಶಾಸಕರುಗಳ ಉಸ್ತುವಾರಿ

    ಇತ್ತ ಬಳ್ಳಾರಿ ಮತ್ತು ಶಿವಮೊಗ್ಗ ಎರಡು ಕ್ಷೇತ್ರಗಳು ಬಿಜೆಪಿ ಭದ್ರಕೋಟೆ ಎಂದು ಕರೆಸಿಕೊಳ್ಳುತ್ತಿವೆ. ಹೀಗಾಗಿ ಉಪ ಚುನಾವಣೆಯಲ್ಲಿ ಎರಡೂ ಕ್ಷೇತ್ರಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಕಾಂಗ್ರೆಸ್-ಜೆಡಿಎಸ್ ಸರ್ಕಾರ ನಿರ್ಧರಿಸಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಯಡಿಯೂರಪ್ಪ ಪುತ್ರ ಬಿ.ವೈ. ರಾಘವೇಂದ್ರ ಸ್ಪರ್ಧಿಸುವುದು ಖಚಿತವಾಗಿದೆ. ಬಳ್ಳಾರಿಯಲ್ಲಿ ಏಳೆಂಟು ಜನ ಆಕಾಂಕ್ಷಿಗಳಿದ್ದಾರೆ ಅಂತಾ ಶಾಸಕ ಶ್ರೀರಾಮುಲು ಹೇಳಿಕೊಂಡಿದ್ದಾರೆ. ಹಾಗಾಗಿ ಬಳ್ಳಾರಿಯಲ್ಲಿ ಯಾರಿಗೆ ಬಿಜೆಪಿ ಟಿಕೆಟ್ ಸಿಗುತ್ತೆ ಅನ್ನೋ ಕುತೂಹಲ ಮನೆ ಮಾಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನವೆಂಬರ್ 13ಕ್ಕೆ ರಾಮನಗರ, ಜಮಖಂಡಿ ಉಪಚುನಾವಣೆ?

    ನವೆಂಬರ್ 13ಕ್ಕೆ ರಾಮನಗರ, ಜಮಖಂಡಿ ಉಪಚುನಾವಣೆ?

    ಬೆಂಗಳೂರು: ರಾಮನಗರ ಹಾಗೂ ಬಾಗಲಕೋಟೆ ಜಿಲ್ಲೆಯ ಜಮಖಂಡಿ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಗೆ ಶೀಘ್ರವೇ ದಿನಾಂಕ ಪ್ರಕಟವಾಗುವ ಸಾಧ್ಯತೆಯಿದೆ.

    ನವೆಂಬರ್ 13ಕ್ಕೆ ಚುನಾವಣೆ 16ಕ್ಕೆ ಮತ ಎಣಿಕೆ ನಡೆಸಲು ಆಯೋಗ ಸಿದ್ಧತೆ ನಡೆಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ವಿಧಾನ ಸಭಾ ಉಪ ಚುನಾವಣೆಯ ಜೊತೆಗೆ ಶಿವಮೊಗ್ಗ, ಮಂಡ್ಯ ಮತ್ತು ಬಳ್ಳಾರಿ ಲೋಕಸಭೆಗೂ ಉಪಚುನಾವಣೆ ನಡೆಯುವ ಸಾಧ್ಯತೆಯಿದೆ.

    ಚುನಾವಣಾ ದಿನಾಂಕ ಅಂತಿಮಗೊಳಿಸಲು ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ಸಂಜೀವ್ ಕುಮಾರ್ ದೆಹಲಿಗೆ ತೆರಳಿದ್ದು, ಶೀಘ್ರವೇ ದಿನಾಂಕ ಪ್ರಕಟವಾಗುವ ಸಾಧ್ಯತೆಯಿದೆ.

    ಮೇ ತಿಂಗಳಲ್ಲಿ ರಾಜ್ಯ ವಿಧಾನಸಭೆಗೆ ನಡೆದಿದ್ದ ಚುನಾವಣೆಯಲ್ಲಿ ರಾಮನಗರ ಮತ್ತು ಚನ್ನಪಟ್ಟಣ ಎರಡೂ ಕ್ಷೇತ್ರಗಳಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಎರಡೂ ಕ್ಷೇತ್ರಗಳಲ್ಲೂ ಗೆದ್ದಿದ್ದ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಅವರ ರಾಜೀನಾಮೆಯಿಂದ ರಾಮನಗರ ಕ್ಷೇತ್ರ ತೆರವಾಗಿದೆ.

    ಬಾಗಲಕೋಟೆ ಜಿಲ್ಲೆಯ ಜಮಖಂಡಿಯ ವಿಧಾನಸಭೆ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಆಯ್ಕೆಯಾಗಿದ್ದ ಸಿದ್ದು ನ್ಯಾಮಗೌಡ ಅವರು, ಮೇ 28ರಂದು ಸಂಭವಿಸಿದ್ದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಅವರ ನಿಧನದ ಹಿನ್ನೆಲೆಯಲ್ಲಿ ಜಮಖಂಡಿ ಕ್ಷೇತ್ರ ತೆರವಾಗಿದೆ.

    ಸಂಸದರಾಗಿದ್ದ ಯಡಿಯೂರಪ್ಪ, ಶ್ರೀರಾಮುಲು, ಪುಟ್ಟರಾಜು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಜಯಗಳಿಸಿದ್ದರಿಂದ ಶಿವಮೊಗ್ಗ, ಬಳ್ಳಾರಿ, ಮಂಡ್ಯ ಲೋಕಸಭಾ ಕ್ಷೇತ್ರ ತೆರವಾಗಿದೆ. ಯಾವುದೇ ಕ್ಷೇತ್ರ ತೆರವಾದ 6 ತಿಂಗಳಲ್ಲಿ ಮತ್ತೊಂದು ಚುನಾವಣೆ ಪ್ರಕ್ರಿಯೆಯನ್ನು ನಡೆಸಬೇಕಾಗಿರುವುದರಿಂದ ಚುನಾವಣೆ ಆಯೋಗ ಈಗ ಉಪ ಚುನಾವಣೆಗೆ ಸಕಲ ಸಿದ್ಧತೆ ನಡೆಸುತ್ತಿದೆ.

  • ಭೂ ತಾಯಿಯ ಮಡಿಲಿನಲ್ಲಿ ಚಿರ ನಿದ್ರೆಗೆ ಜಾರಿದ  ಶಾಸಕ ಸಿದ್ದು ನ್ಯಾಮಗೌಡ

    ಭೂ ತಾಯಿಯ ಮಡಿಲಿನಲ್ಲಿ ಚಿರ ನಿದ್ರೆಗೆ ಜಾರಿದ ಶಾಸಕ ಸಿದ್ದು ನ್ಯಾಮಗೌಡ

    ಬಾಗಲಕೋಟೆ: ಕಾಂಗ್ರೆಸ್ ಶಾಸಕ ಸಿದ್ದು ನ್ಯಾಮಗೌಡ ಅಂತ್ಯಕ್ರಿಯೆಯನ್ನು ಜಮಖಂಡಿ ತಾಲೂಕಿನ ನಾಗನೂರು ಗ್ರಾಮದ ಬಳಿ ಇರುವ ಜಮಖಂಡಿ ಶುಗರ್ಸ್ ಕಾರ್ಖಾನೆಯ ಆವರಣದಲ್ಲಿ ವೀರಶೈವ ಲಿಂಗಾಯತ ವಿಧಿ ವಿಧಾನಗಳ ಮೂಲಕ ನೆರವೇರಿಸಲಾಯಿತು.

    ಮುಂದಿನ ದಿನಗಳಲ್ಲಿ ಸಿದ್ದು ನ್ಯಾಮಗೌಡರ ಪುತ್ಥಳಿ ನಿರ್ಮಿಸುವ ಉದ್ದೇಶದಿಂದ ಕಾರ್ಖಾನೆ ಮುಖ್ಯ ದ್ವಾರದ ಎದುರು ಸಮಾಧಿ ಮಾಡಲಾಗಿದೆ. ಗದಗಿನ ತೊಂಟದಾರ್ಯ ಶ್ರೀಗಳು, ಮುತ್ತಿನಕಂತಿಮಠದ ಶ್ರೀಗಳ ನೇತೃತ್ವದಲ್ಲಿ ನಡೆಯಲಿರುವ ಧಾರ್ಮಿಕ ಕ್ರಿಯಾವಿಧಿಗಳು ನೆರವೇರಿಸಿದ್ರು. ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂಜಿ ಪರಮೇಶ್ವರ ಸೇರಿದಂತೆ ರಾಜ್ಯ ನಾಯಕರು ಅಂತ್ಯ ಕ್ರಿಯೆಯಲ್ಲಿ ಭಾಗಿಯಾದ್ರು.

    ಒಬ್ಬ ಪ್ರಾಮಾಣಿಕ ಸ್ನೇಹಿತ, ಒಡನಾಟಿಯನ್ನ ಕಳೆದುಕೊಂಡಿದ್ದೇನೆ. ದೆಹಲಿಯಲ್ಲಿ ನನ್ನನ್ನ ಭೇಟಿಯಾಗಿ ಮಂತ್ರಿ ಸ್ಥಾನದ ಬಗ್ಗೆ ವಿಚಾರ ಹಂಚಿಕೊಂಡಿದ್ರು. ಮಂತ್ರಿ ಸ್ಥಾನ ನೀಡುವ ಭರವಸೆಯನ್ನ ನೀಡಲಾಗಿತ್ತು. ದೆಹಲಿಯಿಂದ ಬೆಂಗಳೂರಿಗೆ ಬರುವ ಬದಲು, ಗೋವಾಗೆ ಹೋಗಿದ್ದು ವಿಧಿ ಲಿಖಿತ. ಸರಳ ಸಜ್ಜನಿಕೆಯ ವ್ಯಕ್ತಿಯನ್ನ ಕಳೆದುಕೊಂಡಿದ್ದು ನನಗೆ ಭಾರೀ ನೋವು ಉಂಟುಮಾಡಿದೆ. ರೈತಪರ ಕಾಳಜಿ ಹೊಂದಿದ್ದ ವ್ಯಕ್ತಿ ನ್ಯಾಮಗೌಡ. ಶಾಸಕರ ಸಾವಿನ ವಿಷಯ ತಿಳಿಯುತ್ತಿದ್ದಂತೆ ಸೋನಿಯಾ, ರಾಹುಲ್ ಗಾಂಧಿ ಸಂತಾಪವನ್ನು ನನ್ನ ಎದುರು ವ್ಯಕ್ತಪಡಿಸಿದ್ರು ಎಂದು ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಹೇಳಿದ್ರು.

    ಸೋಮವಾರ ಬೆಳಗಿನ ಜಾವ ಬಾಗಲಕೋಟೆ ತಾಲೂಕಿನ ತುಳಸಿಗೇರಿ ಗ್ರಾಮದ ಬಳಿ ಶಾಸಕರ ಕಾರು ರಸ್ತೆ ಬದಿಯ ಗೋಡೆಗೆ ಡಿಕ್ಕಿ ಹೊಡೆದಿತ್ತು. ಪರಿಣಾಮ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದರಿಂದ ಮುಂಭಾಗದಲ್ಲಿ ಕುಳಿತಿದ್ದ ಶಾಸಕರು ಗಂಭೀರವಾಗಿ ಗಾಯಗೊಂಡಿದ್ರು. ಕೂಡಲೇ ಶಾಸಕರನ್ನು ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಶಾಸಕರು ಸಾವನ್ನಪ್ಪಿದ್ರು.

  • ಜಮಖಂಡಿ ಶಾಸಕ ಸಿದ್ದು ನ್ಯಾಮಗೌಡ ಇನ್ನಿಲ್ಲ

    ಜಮಖಂಡಿ ಶಾಸಕ ಸಿದ್ದು ನ್ಯಾಮಗೌಡ ಇನ್ನಿಲ್ಲ

    -ಬಾಗಲಕೋಟೆ ಬಳಿ ಸಂಭವಿಸಿದ ಅಪಘಾತದಲ್ಲಿ ಸಾವು

    ಬಾಗಲಕೋಟೆ: ಇಂದು ನಸುಕಿನ ಜಾವ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಜಮಖಂಡಿ ಶಾಸಕ ಸಿದ್ದು ನ್ಯಾಮಗೌಡ ಇಹಲೋಕ ತ್ಯಜಿಸಿದ್ದಾರೆ.

    ಬಾಗಲಕೋಟೆ ತಾಲೂಕಿನ ತುಳಸಿಗೇರಿ ಗ್ರಾಮದ ಬಳಿ ನಸುಕಿನ ಜಾವ 4.30ರ ಸುಮಾರಿಗೆ ಎದುರಿನಿಂದ ಬಂದ ಲಾರಿ ತಪ್ಪಿಸಲು ಹೋಗಿ ರಸ್ತೆ ಬದಿಯ ಪೂಲ್‍ಗೆ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮ ಕಾರಿನಲ್ಲಿದ್ದ ಸಿದ್ದುನ್ಯಾಮಗೌಡ ಸೇರಿ ಐವರು ಗಂಭೀರವಾಗಿ ಗಾಯಗೊಂಡಿದ್ರು. ಕೂಡಲೇ ಎಲ್ಲರನ್ನು ನಗರದ ಕೆರೂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

    ಶಾಸಕ 70 ವರ್ಷದ ಸಿದ್ದುನ್ಯಾಮಗೌಡ ಎದೆಗೆ ಗಂಭೀರ ಗಾಯವಾಗಿದ್ದ ಕಾರಣ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದ್ರು. ಸಂಪುಟದಲ್ಲಿ ಸ್ಥಾನ ಪಡೆಯೋ ಸಲುವಾಗಿ ಲಾಬಿ ನಡೆಸಲು ದೆಹಲಿಗೆ ತೆರಳಿದ್ದ ಶಾಸಕ ಸಿದ್ದು ನ್ಯಾಮ ಗೌಡ, ಕಳೆದ ರಾತ್ರಿ ಗೋವಾಗೆ ವಿಮಾನದಲ್ಲಿ ಬಂದು ರಸ್ತೆ ಮಾರ್ಗವಾಗಿ ಜಮಖಂಡಿಗೆ ಮರಳುತ್ತಿದ್ರು. ದೆಹಲಿಯ ನಿಜಾಮುದ್ದಿನ್ ಔಲಿಯಾ ದರ್ಗಾಕ್ಕೆ ಹೋಗಿದ್ದ ಮೌಲಾನಾ ರಿಜ್ವಿ ಮತ್ತು ಅಬ್ದುಲ್ ರಶೀದ್‍ರನ್ನ ಶಾಸಕರಾದ ಸಿದ್ದು ನ್ಯಾಮಗೌಡ ತಮ್ಮದೇ ಕಾರಿನಲ್ಲಿ ಕೂರಿಸಿಕೊಂಡು ಜಮಖಂಡಿಗೆ ಮರಳುತ್ತಿದ್ರು. ಇವರಿಬ್ರು ಸಹ ಗಂಭೀರವಾಗಿ ಗಾಯಗೊಂಡಿದ್ದಾರೆ.

    ಅಪಘಾತದಲ್ಲಿ ಚಾಲಕ ಪರಮಾನಂದ್ ಅಂಬಿ ಮತ್ತು ಅನ್ವರ್ ಮೊಮಿನ್ ಕೂಡ ಗಾಯಗೊಂಡಿದ್ದು, ಅವರಿಗೂ ಕೆರೂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗ್ತಿದೆ. ಇದೀಗ ಶಾಸಕ ಸಿದ್ದುನ್ಯಾಮಗೌಡ ಪಾರ್ಥಿವ ಶರೀರವನ್ನು ಮರಣೋತ್ತರ ಪರೀಕ್ಷೆಗಾಗಿ ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ತೆಗೆದುಕೊಂಡು ಹೋಗಲಾಗ್ತಿದೆ. ಶಾಸಕರ ಪುತ್ರ ಆನಂದ್ ನ್ಯಾಮಗೌಡ ಸೇರಿದಂತೆ ಕುಟುಂಬಸ್ಥರು ಶೋಕ ಸಾಗರದಲ್ಲಿ ಮುಳುಗಿದ್ದಾರೆ.