Tag: ಜಮಖಂಡಿ

  • ಸಾರಿಗೆ ಮುಷ್ಕರವನ್ನ ಹಿಂಸಾತ್ಮಕ ಹಂತಕ್ಕೆ ಬೆಳೆಯಲು ಬಿಟ್ಟಿದ್ದು ಸರ್ಕಾರದ ಬೇಜವಾಬ್ದಾರಿತನ: ಹೆಚ್‍ಡಿಕೆ

    ಸಾರಿಗೆ ಮುಷ್ಕರವನ್ನ ಹಿಂಸಾತ್ಮಕ ಹಂತಕ್ಕೆ ಬೆಳೆಯಲು ಬಿಟ್ಟಿದ್ದು ಸರ್ಕಾರದ ಬೇಜವಾಬ್ದಾರಿತನ: ಹೆಚ್‍ಡಿಕೆ

    – ಪ್ರತಿಭಟನೆ ಎತ್ತ ಸಾಗುತ್ತಿದೆ? ಸರ್ಕಾರ ಏನು ಮಾಡುತ್ತಿದೆ?

    ಬೆಂಗಳೂರು: ಸಾರಿಗೆ ಮುಷ್ಕರವನ್ನ ಹಿಂಸಾತ್ಮಕ ಹಂತಕ್ಕೆ ಬೆಳೆಯಲು ಬಿಟ್ಟಿದ್ದು ಸರ್ಕಾರದ ಬೇಜವಾಬ್ದಾರಿತನ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಮುಷ್ಕರ ಲೆಕ್ಕಿಸದೇ, ಜನರ ಸೇವೆಗಾಗಿ ಕರ್ತವ್ಯಕ್ಕೆ ಹಾಜರಾಗಿದ್ದ ವಾಯವ್ಯ ಸಾರಿಗೆ ಸಂಸ್ಥೆ ಬಸ್ ಚಾಲಕ ನಬಿ ರಸೂಲ್ ಆವಟಿ ಅವರನ್ನು ಜಮಖಂಡಿಯಲ್ಲಿ ಕಲ್ಲಿನಿಂದ ಹೊಡೆದು ಕೊಂದ ಘಟನೆ ನನ್ನನು ದಿಗ್ಭ್ರಾಂತನನ್ನಾಗಿಸಿದೆ. ಪ್ರತಿಭಟನೆ ಎತ್ತ ಸಾಗುತ್ತಿದೆ? ಸರ್ಕಾರ ಏನು ಮಾಡುತ್ತಿದೆ ? ಎಂಬ ಪ್ರಶ್ನೆಗಳು ನನ್ನನ್ನು ತೀವ್ರವಾಗಿ ಕಾಡಿವೆ.

    ಜಮಖಂಡಿಯ ಈ ದುರ್ಘಟನೆ ಯಾವ ಸಂದೇಶ ನೀಡುತ್ತಿದೆ ಎಂಬುದರತ್ತ ಸರ್ಕಾರ ಗಂಭೀರವಾಗಿ ಯೋಚಿಸಲಿ. ಅನಿವಾರ್ಯ ಸಂದರ್ಭದಲ್ಲಿ ಜನರಿಗೆ ಸೇವೆ ನೀಡಲು ಇನ್ನು ಮುಂದೆ ಯಾವ ನೌಕರ ಮುಂದೆ ಬರುತ್ತಾನೆ ಎಂಬುದರ ಚಿಂತನೆ ಮಾಡಲಿ. ಮುಷ್ಕರವನ್ನು ಹಿಂಸಾತ್ಮಕ ಹಂತಕ್ಕೆ ಬೆಳೆಯಲು ಬಿಟ್ಟ ಸರ್ಕಾರದ ನಡೆಯಲ್ಲಿ ಬೇಜವಾಬ್ದಾರಿತನ ಸ್ಪಷ್ಟವಾಗಿ ಕಾಣಿಸುತ್ತಿದೆ.

    ಜಮಖಂಡಿ ದುರ್ಘಟನೆಯಲ್ಲಿ ಮೃತಪಟ್ಟ ಚಾಲಕ ನಬಿ ರಸೂಲ್ ಸರ್ಕಾರದ ಕರೆಗೆ ಓಗೊಟ್ಟು ಕರ್ತವ್ಯಕ್ಕೆ ಬಂದಿದ್ದವರು. ಹೀಗಾಗಿ ಅವರ ಕುಟುಂಬಕ್ಕೆ ಸರ್ಕಾರ ಗರಿಷ್ಠ ಪರಿಹಾರ ಒದಗಿಸಬೇಕು. ಕೃತ್ಯವೆಸಗಿದವರಿಗೆ ಶಿಕ್ಷೆ ಕೊಡಿಸಬೇಕು. ನೌಕರರ ಬೇಡಿಕೆ ಒಂದು ಕಡೆ ಇರಲಿ. ಅದಕ್ಕೂ ಮೊದಲು ನೌಕರರಲ್ಲು ಈಗ ಸರ್ಕಾರದ ಬಗ್ಗೆ ವಿಶ್ವಾಸ ಮೂಡಿಸುವ ಅಗತ್ಯವಿದೆ. ಇದನ್ನೂ ಓದಿ: ಸಾರಿಗೆ ಮುಷ್ಕರ- ಕಿಡಿಗೇಡಿಗಳಿಂದ ಕಲ್ಲು ತೂರಾಟ, ಬಸ್ ಚಾಲಕ ದುರ್ಮರಣ

    ಬಸ್ ಗಳ ಮೇಲೆ ದಾಳಿ ನಡೆಯುತ್ತಿರುವ ಪ್ರಸಂಗಗಳನ್ನು ಗಮನಿಸಿದ್ದೇನೆ. ಅಂಥವರನ್ನು ಕೂಡಲೇ ಬಂಧಿಸಬೇಕು. ನೌಕರರು ಈ ಕೃತ್ಯ ಮಾಡಿರಲಾರರು. ನೌಕರರ ಹೋರಾಟ ಸರ್ಕಾರದ ವಿರುದ್ಧವೇ ಹೊರತು, ಅನ್ನ ನೀಡುವ ಬಸ್ ಗಳ ವಿರುದ್ಧ ಅಲ್ಲ ಎಂಬ ನಂಬಿಕೆ ನನಗಿದೆ. ಮುಷ್ಕರ ಹಿಂಸೆ ರೂಪ ಪಡೆಯಬಾರದು. ಇಲ್ಲಿ ಯಾರ ಹಟವೂ ಗೆಲ್ಲದಿರಲಿ. ನಾಗರಿಕರಿಗೆ ಹಿತವಾಗಲಿ ಎಂದು ಹೇಳಿದ್ದಾರೆ.

     

  • ಜಮಖಂಡಿಯ ರೈತನ ಮಗನ ನೆರವಿಗೆ ನಿಂತ ಸುಧಾ ಮೂರ್ತಿ

    ಜಮಖಂಡಿಯ ರೈತನ ಮಗನ ನೆರವಿಗೆ ನಿಂತ ಸುಧಾ ಮೂರ್ತಿ

    ಬೆಂಗಳೂರು: ಇನ್ಫೋಸಿಸ್ ಸಂಸ್ಥಾಪಕಿ ಸುಧಾ ಮೂರ್ತಿಯವರು ಜಮಖಂಡಿಯ ಪ್ರತಿಭಾನ್ವಿತ ರೈತನ ಮಗನ ಓದಿಸುವ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.

    ಸುಧಾ ಮೂರ್ತಿಯವರು ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಪ್ರವಾಹದಲ್ಲಿ ಸಿಲುಕಿ ನಲುಗಿದ್ದ ಉತ್ತರ ಕರ್ನಾಟಕ ಜನರಿಗೆ ಸಹಾಯ ಮಾಡಿದ್ದರು. ಈಗ ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ ಬಡ ವಿದ್ಯಾರ್ಥಿಗಳ ನೆರವಿಗೆ ನಿಂತಿದ್ದಾರೆ.

    ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮದ ರೈತನ ಮಗ ಸಂಜು ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ 625ಕ್ಕೆ 617 ಅಂಕ ಪಡೆದುಕೊಂಡಿದ್ದಾನೆ. ಈ ಬಡಬಾಲಕ ಮುಂದಿನ ಮೂರು ವರ್ಷದ ವ್ಯಾಸಂಗದ ಖರ್ಚುನ್ನು ಇನ್ಫೋಸಿಸ್ ಸುಧಾ ಮೂರ್ತಿಯವರು ಭರಿಸಲಿದ್ದಾರೆ. ಜೊತೆಗೆ ಜಮಖಂಡಿಯ ಇನ್ನೂ ಇಬ್ಬರು ವಿದ್ಯಾರ್ಥಿಗಳಿಗೆ ಸಹಾಯ ಮಾಡಲಿದ್ದಾರೆ.

  • ಘಟಪ್ರಭಾ, ಮಲಪ್ರಭಾ ಜೊತೆಗೆ ಕೃಷ್ಣಾ ನದಿ ಪ್ರವಾಹದ ಭೀತಿ- ನಡುಗಡ್ಡೆ ಜನ ಸ್ಥಳಾಂತರ

    ಘಟಪ್ರಭಾ, ಮಲಪ್ರಭಾ ಜೊತೆಗೆ ಕೃಷ್ಣಾ ನದಿ ಪ್ರವಾಹದ ಭೀತಿ- ನಡುಗಡ್ಡೆ ಜನ ಸ್ಥಳಾಂತರ

    – ಜಮಖಂಡಿ ತಾಲೂಕಿನಲ್ಲಿ ಮೂರು ನದಿಗಳಿಂದ ಪ್ರವಾಹ ಭೀತಿ

    ಬಾಗಲಕೋಟೆ: ಉತ್ತರ ಕರ್ನಾಟಕ ಭಾಗದಲ್ಲಿ ಮಳೆ ಕೊಂಚ ಬಿಡುವು ನೀಡಿದರೂ, ಪ್ರವಾಹ ಮಾತ್ರ ತಗ್ಗುತ್ತಿಲ್ಲ. ಇದರಿಂದಾಗಿ ನಡುಗಡ್ಡೆ ಜನರು ತೀವ್ರ ಆತಂಕಗೊಂಡಿದ್ದು, ಸ್ಥಳಾಂತರ ಕಾರ್ಯ ಮುಂದುವರಿದಿದೆ.

    ಜಮಖಂಡಿ ತಾಲೂಕಿನಲ್ಲಿ ಆತಂಕ ಹೆಚ್ಚಾಗಿದ್ದು, ಮುತ್ತೂರು ನಡುಗಡ್ಡೆ ಜನರಿಗೆ ಕಳೆದ ಪ್ರವಾಹದ ಕಹಿ ನೆನಪು ಕಣ್ಮುಂದೆ ಬರುತ್ತಿದೆ. ಇಲ್ಲಿನ ಜನ ಸದ್ಯ ನಡುಗಡ್ಡೆ ತೊರೆದು ತುಬಚಿ ಗ್ರಾಮಕ್ಕೆ ಸ್ಥಳಾಂತರಗೊಂಡಿದ್ದಾರೆ. ಶೂರ್ಪಾಲಿ, ತುಬಚಿ, ಮುತ್ತೂರು ಕಂಣವಾಡಿ ಗ್ರಾಮಗಳ ಕೆಲ ಪ್ರದೇಶಗಳು ನಡುಗಡ್ಡೆಯಾಗಿವೆ. ಈ ಬಾರಿಯೂ ಪ್ರವಾಹದ ಆತಂಕ ಎದುರಾಗಿರುವ ಹಿನ್ನೆಲೆ ಜನ ಸುರಕ್ಷಿತ ಪ್ರದೇಶಗಳತ್ತ ಧಾವಿಸುತ್ತಿದ್ದಾರೆ.

    ಗಂಟು ಮೂಟೆ, ದನಕರು ಕಟ್ಟಿಕೊಂಡು ಪಯಣ ದೋಣಿಯಲ್ಲಿ ಬೇರೆ ಗ್ರಾಮಕ್ಕೆ ಸ್ಥಳಾಂತರಗೊಂಡಿದ್ದಾರೆ. ಪ್ರವಾಹದಿಂದಾಗಿ ತುಬಚಿ, ಶೂರ್ಪಾಲಿಯಿಂದ ಜಂಬಗಿ ಕಡೆ ತೆರಳುವ ಸಂಪರ್ಕ ಕಡಿತವಾಗಿದ್ದು, ಶೂರ್ಪಾಲಿಯ ಪ್ರಸಿದ್ಧ ಲಕ್ಷ್ಮೀ ನರಸಿಂಹನಿಗೂ ಪ್ರವಾಹ ಬಿಸಿ ತಟ್ಟಿದೆ. ಕೃಷ್ಣಾ ನದಿ ದೇವಸ್ಥಾನವನ್ನು ಸುತ್ತವರಿದಿದ್ದು, ಜನ ಪರದಾಡುವಂತಾಗಿದೆ. ಈ ಮೂಲಕ ಜಮಖಂಡಿ ತಾಲೂಕಿನ ಜನರಿಗೆ ಘಟಪ್ರಭಾ, ಮಲಪ್ರಭಾ ಜೊತೆಗೆ ಕೃಷ್ಣಾ ನದಿಯ ಪ್ರವಾಹ ಭೀತಿ ಸಹ ಹೆಚ್ಚಾಗಿದೆ.

  • ತೀವ್ರ ಸ್ವರೂಪ ಪಡೆದ ಜಮಖಂಡಿ ಜಿಲ್ಲಾ ಬೇಡಿಕೆ – ಇಂದು ಬಂದ್

    ತೀವ್ರ ಸ್ವರೂಪ ಪಡೆದ ಜಮಖಂಡಿ ಜಿಲ್ಲಾ ಬೇಡಿಕೆ – ಇಂದು ಬಂದ್

    ಬಾಗಲಕೋಟೆ: ಜಮಖಂಡಿ ಹೊಸ ಜಿಲ್ಲೆ ಮಾಡಬೇಕು ಎಂಬ ಹೋರಾಟ ತೀವ್ರ ಸ್ವರೂಪ ಪಡೆದಿದ್ದು, ಇಂದು ಜಮಖಂಡಿ ನಗರ ಬಂದ್‍ಗೆ ಕರೆ ನೀಡಲಾಗಿದೆ.

    ಜಮಖಂಡಿ ಜಿಲ್ಲಾ ಸಂಕಲ್ಪ ಹೋರಾಟ ಸಮಿತಿಯಿಂದ ಬಂದ್ ಗೆ ಕರೆ ನೀಡಿದ್ದು, ಅಂಗಡಿಮುಂಗಟ್ಟು ವ್ಯಾಪಾರ ವಹಿವಾಟು ಬಂದ್ ಆಗಲಿದೆ. ಇದರ ಜೊತೆಗೆ ಬಸ್ ಸಂಚಾರ ಸೇರಿದಂತೆ ಎಲ್ಲ ಸಾರಿಗೆ ವ್ಯವಸ್ಥೆ ಇಂದು ಬಂದ್ ಆಗಲಿದೆ.

    ಈ ಬಂದ್‍ನಲ್ಲಿ ಶಾಲಾ ಕಾಲೇಜು, ಸರ್ಕಾರಿ ಕಚೇರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಈ ಬಂದ್‍ನಲ್ಲಿ ಪಕ್ಷಾತೀತವಾಗಿ ಎಲ್ಲ ರಾಜಕೀಯ ಮುಖಂಡರು ಭಾಗಿಯಾಗಲಿದ್ದು, ಜಮಖಂಡಿ ಕಾಂಗ್ರೆಸ್ ಶಾಸಕ ಆನಂದ ನ್ಯಾಮಗೌಡ ಮತ್ತು ತೇರದಾಳ ಬಿಜೆಪಿ ಶಾಸಕ ಸಿದ್ದು ಸವದಿ ಭಾಗಿಯಾಗಲಿದ್ದಾರೆ.

    ಇಂದು ನಗರದಲ್ಲಿ ಬೃಹತ್ ಪ್ರತಿಭಟನೆ ರ‍್ಯಾಲಿ ನಡೆಯಲಿದ್ದು, ಹೋರಾಟದ ನೇತೃತ್ವವನ್ನು ಜಮಖಂಡಿ ಓಲೆ ಮಠದ ಚನ್ನಬಸವ ಸ್ವಾಮೀಜಿ ವಹಿಸಿದ್ದಾರೆ. ಪ್ರತಿಭಟನೆಯಲ್ಲಿ ಜಿಲ್ಲಾ ಸಂಕಲ್ಪ ಹೋರಾಟ ಸಮಿತಿ ಸದಸ್ಯರು, ಜಮಖಂಡಿ ಭಾಗದ 25ಕ್ಕೂ ಹೆಚ್ಚು ಮಠಾಧೀಶರು ಮತ್ತು ಸಾರ್ವಜನಿಕರು ಭಾಗಿಯಾಗಲಿದ್ದಾರೆ. ಬೆಳಗ್ಗೆ 10 ಗಂಟೆಗೆ ನಗರದಲ್ಲಿ ಪ್ರತಿಭಟನಾ ರ್ಯಾಲಿ ಶುರುವಾಗಲಿದ್ದು, ಹನುಮಾನ ಚೌಕದಿಂದ ದೇಸಾಯಿ ವೃತ್ತದವರೆಗೆ ಪ್ರತಿಭಟನಾ ರ‍್ಯಾಲಿ ಸಾಗಲಿದೆ.

    ಈಗಾಗಲೇ ಹೊಸ ಜಿಲ್ಲೆ ಹೋರಾಟಕ್ಕೆ ಶಾಸಕರಾದ ಆನಂದ ನ್ಯಾಮಗೌಡ ಮತ್ತು ಸಿದ್ದು ಸವದಿ ಬೆಂಬಲಿಸೋದಾಗಿ ಹೇಳಿದ್ದು, ನಾಳೆ ಜಿಲ್ಲೆಗೆ ಸಿಎಂ ಯಡಿಯೂರಪ್ಪ ಭೇಟಿ ನೀಡಲಿದ್ದಾರೆ. ಈ ಭೇಟಿ ವೇಳೆ ಹೋರಾಟಗಾರರು ಸಿಎಂಗೆ ಹೊಸ ಜಿಲ್ಲೆ ಮಾಡಬೇಕು ಎಂದು ಮನವಿ ಸಲ್ಲಿಸಲಿದ್ದಾರೆ.

  • ಬೈಕ್ ಸಮೇತ ಕೊಚ್ಚಿ ಹೋಗ್ತಿದ್ದಾತ ಸ್ಥಳೀಯರಿಂದ ರಕ್ಷಣೆ

    ಬೈಕ್ ಸಮೇತ ಕೊಚ್ಚಿ ಹೋಗ್ತಿದ್ದಾತ ಸ್ಥಳೀಯರಿಂದ ರಕ್ಷಣೆ

    ಬಾಗಲಕೋಟೆ: ಜಿಲ್ಲೆಯ ಜಮಖಂಡಿಯಲ್ಲಿ ಉಂಟಾದ ಪ್ರವಾಹದಲ್ಲಿ ಬೈಕ್ ಸಮೇತ ಕೊಚ್ಚಿ ಹೋಗುತ್ತಿದ್ದ ಸವಾರನನ್ನು ಸ್ಥಳೀಯರು ರಕ್ಷಿಸಿದ್ದಾರೆ.

    ಜಮಖಂಡಿಯ ಕಡಕೋಳ ರಸ್ತೆಯಲ್ಲಿ ವ್ಯಕ್ತಿ ಬೈಕ್‍ನಲ್ಲಿ ತೆರಳುತ್ತಿದ್ದರು. ಈ ವೇಳೆ ನೀರಿನ ಸೆಳೆತಕ್ಕೆ ಸಿಕ್ಕಿ ಬೈಕ್ ಸಮೇತ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ. ಇದನ್ನು ಗಮನಿಸಿದ ಕೆಲ ಸ್ಥಳೀಯರು ತಕ್ಷಣ ಓಡಿಹೋಗಿ ಬೈಕ್ ಸಮೇತ ಸವಾರನನ್ನು ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ.

    ಕೃಷ್ಣಾ ನದಿಯ ಪ್ರವಾಹದಿಂದ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಕಡಕೋಳ ಗ್ರಾಮ ಸಂಪೂರ್ಣ ಜಲಾವೃತವಾಗಿದ್ದು, ಈ ಗ್ರಾಮದ ಜನರನ್ನು ಸ್ಥಳಾಂತರ ಮಾಡಲಾಗುತ್ತಿದೆ. ಈ ಸ್ಥಳಾಂತರ ಕಾರ್ಯಾಚರಣೆಯನ್ನು ಖುದ್ದು ಸ್ಥಳೀಯ ಶಾಸಕ ಆನಂದ ನ್ಯಾಮಗೌಡ ನೇತೃತ್ವದಲ್ಲಿ ನಡೆಯುತ್ತಿದ್ದು, ಟ್ರ್ಯಾಕ್ಟರ್ ಮೂಲಕ ಜನರನ್ನು ಸ್ಥಳಾಂತರ ಮಾಡಲಾಗುತ್ತಿದೆ.

  • ನಮ್ಮ ತಂದೆ ಕಾಂಗ್ರೆಸ್‍ನಲ್ಲಿ ಇದ್ರೂ ನಾನು ಇರುತ್ತೇನೆ, ಕಾಂಗ್ರೆಸ್ ಬಿಡಲ್ಲ – ಆನಂದ್ ನ್ಯಾಮಗೌಡ

    ನಮ್ಮ ತಂದೆ ಕಾಂಗ್ರೆಸ್‍ನಲ್ಲಿ ಇದ್ರೂ ನಾನು ಇರುತ್ತೇನೆ, ಕಾಂಗ್ರೆಸ್ ಬಿಡಲ್ಲ – ಆನಂದ್ ನ್ಯಾಮಗೌಡ

    – ಕ್ಷೇತ್ರದ ಜನರೇ ನನಗೆ ದೇವರಿದ್ದಂತೆ

    ಬಾಗಲಕೋಟೆ: ನಮ್ಮ ತಂದೆಯೂ ಕೂಡ ಕಾಂಗ್ರೆಸ್ಸಿನಲ್ಲಿದ್ದರು. ನಾನು ಸಹ ಪಕ್ಷದಲ್ಲೇ ಇರುತ್ತೇನೆ. ಕಾಂಗ್ರೆಸ್ ಬಿಡಲ್ಲ ಎಂದು ದಿವಂಗತ ಸಿದ್ದು ನ್ಯಾಮಗೌಡ ಅವರ ಪುತ್ರ ಹಾಗೂ ಜಮಖಂಡಿ ಕೈ ಶಾಸಕ ಆನಂದ್ ನ್ಯಾಮಗೌಡ ರಾಜೀನಾಮೆ ವದಂತಿಗೆ ಸ್ಪಷ್ಟನೆ ನೀಡಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ನಾನು ಕಾಂಗ್ರೆಸ್ ಪಕ್ಷ ಬಿಟ್ಟು ಹೋಗಲ್ಲ. ಯಾವ ಆಧಾರದ ಮೇಲೆ ನನ್ನ ಹೆಸರನ್ನು ಇದರಲ್ಲಿ ಬಹಿರಂಗ ಪಡಿಸಿದ್ದಾರೆ ನನಗೆ ಗೊತ್ತಿಲ್ಲ ಎಂದು ಹೇಳಿದರು.

    ಮೂರು ದಿನಗಳಿಂದ ಬಿಜೆಪಿ ಶಾಸಕರು ನನನ್ನು ಸಂಪರ್ಕ ಮಾಡುತ್ತಿದ್ದಾರೆ. ಆದರೆ ಅವರ ಹೆಸರನ್ನು ನಾನು ಬಹಿರಂಗ ಪಡಿಸಲ್ಲ. ಜನರ ಆಶೀರ್ವಾದದಿಂದ ಮೊದಲ ಬಾರಿಯೇ ಕ್ಷೇತ್ರದ ಶಾಸಕನಾಗಿ ಆಯ್ಕೆಯಾಗಿದ್ದೇನೆ. ರಾಜೀನಾಮೆ ನೀಡಿ ಜನರ ಭಾವನೆಗೆ ಧಕ್ಕೆ ತರುವಂತಹ ಕೆಲಸ ಮಾಡಲ್ಲ ಎಂದು ತಿಳಿಸಿದರು.

    ನಮ್ನ ತಂದೆಯೂ ಕಾಂಗ್ರೆಸ್‍ನಲ್ಲಿಯೇ ಇದ್ದರು. ನಾನೂ ಕಾಂಗ್ರೆಸ್‍ನಲ್ಲಿಯೇ ಇರುತ್ತೇನೆ. ನಮ್ಮ ತಂದೆಯ ಹೆಸರು ಉಳಿಸಲು ರಾಜಕೀಯಕ್ಕೆ ಬಂದಿದ್ದೇನೆ. ಅವರ ಹೆಸರಿಗೆ ಕಪ್ಪು ಚುಕ್ಕೆ ತರಲು ಬಂದಿಲ್ಲ. ಇದರಲ್ಲಿ ಯಾವುದೇ ಸಂಶಯವಿಲ್ಲ. ನನ್ನನ್ನು ನಲವತ್ತು ಸಾವಿರ ಮತಗಳ ಅಂತರದಿಂದ ಗೆಲ್ಲಿಸಿದ್ದಾರೆ. ಕ್ಷೇತ್ರದ ಜನರೇ ನನಗೆ ದೇವರಿದ್ದಂತೆ ಎಂದು ಹೇಳಿದರು.

  • ಹಾಸ್ಟೆಲ್ ಕಟ್ಟಡದಿಂದ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆ

    ಹಾಸ್ಟೆಲ್ ಕಟ್ಟಡದಿಂದ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆ

    ಬಾಗಲಕೋಟೆ: ವಸತಿ ನಿಲಯದ ನಾಲ್ಕಂತಸ್ತಿನ ಕಟ್ಟಡದಿಂದ ಹಾರಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಜಮಖಂಡಿ ನಗರದಲ್ಲಿ ಮಂಗಳವಾರ ರಾತ್ರಿ ನಡೆದಿದೆ.

    ಪ್ರಿಯಾಂಕಾ ಮೇತ್ರಿ (17) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ. ಮೃತ ಪ್ರಿಯಾಂಕಾ ಮೇತ್ರಿ ರಾಯಲ್ ಪ್ಯಾಲೇಸ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು. ಆದರೆ ಮಂಗಳವಾರ ರಾತ್ರಿ ತನ್ನ ಸ್ನೇಹಿತರೆಲ್ಲರೂ ಮಲಗಿದ ನಂತರ ಪ್ರಿಯಾಂಕಾ ಮೇತ್ರಿ ರಾಯಲ್ ಪ್ಯಾಲೇಸ್ ಕಾಲೇಜ್ ವಸತಿ ನಿಲಯದ ಕಟ್ಟಡದಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

    ಪ್ರಿಯಾಂಕಾ ಮೇತ್ರಿ ರಬಕವಿ-ಬನಹಟ್ಟಿ ತಾಲೂಕಿನ ಚಿಮ್ಮಡ ಗ್ರಾಮದ ನಿವಾಸಿ ಎಂದು ತಿಳಿದು ಬಂದಿದೆ. ರಾಯಲ್ ಪ್ಯಾಲೇಸ್ ಕಾಲೇಜ್ ಜಮಖಂಡಿ ಶಾಸಕ ಆನಂದ ನ್ಯಾಮಗೌಡ ಒಡೆತನಕ್ಕೆ ಸೇರಿದ್ದಾಗಿದೆ. ಮಾಹಿತಿ ತಿಳಿದು ಕಾಲೇಜಿಗೆ ಬಂದ ಪ್ರಿಯಾಂಕಾ ಪೋಷಕರು, ಮಗಳ ಸಾವಿಗೆ ನಿಖರ ಕಾರಣ ತಿಳಿಯುವವರೆಗೂ ಮರಣೋತ್ತರ ಪರೀಕ್ಷಗೆ ಅವಕಾಶ ಮಾಡಿಕೊಡುವುದಿಲ್ಲ ಎಂದು ಪ್ರತಿಭಟನೆ ಮಾಡುತ್ತಿದ್ದಾರೆ.

    ಆತ್ಮಹತ್ಯೆಗೆ ಇನ್ನೂ ನಿಖರ ಕಾರಣ ತಿಳಿದು ಬಂದಿಲ್ಲ. ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಜಮಖಂಡಿ ಗ್ರಾಮಾಂತರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

  • ಶಾಲೆಗೆ ಹೋಗಿ ಶಾಸಕ ನ್ಯಾಮಗೌಡರಿಂದ ಮಕ್ಕಳಿಗೆ ಸ್ವಚ್ಛತಾ ಪಾಠ

    ಶಾಲೆಗೆ ಹೋಗಿ ಶಾಸಕ ನ್ಯಾಮಗೌಡರಿಂದ ಮಕ್ಕಳಿಗೆ ಸ್ವಚ್ಛತಾ ಪಾಠ

    ಬಾಗಲಕೋಟೆ: ಜಮಖಂಡಿ ಶಾಸಕ ಆನಂದ ನ್ಯಾಮಗೌಡ ಇಂದು ಶಾಲಾ ಮಕ್ಕಳಿಗೆ ಸ್ವಚ್ಛತೆಯ ಪಾಠ ಮಾಡಿದ್ದಾರೆ.

    ಸ್ವಚ್ಛ ಜಮಖಂಡಿ ಹಸಿರು ಜಮಖಂಡಿ ಅಭಿಯಾನವನ್ನು ಶಾಸಕ ಆನಂದ ನ್ಯಾಮಗೌಡ ಹಮ್ಮಿಕೊಂಡಿದ್ದು ನಗರದಲ್ಲಿ ಗಿಡ ನೆಡುವ ಹಾಗೂ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಕೈಗೊಂಡಿದ್ದಾರೆ.

    ಈ ಪ್ರಯುಕ್ತ ಇಂದು ನಗರದ 27, 28, 30ನೇ ವಾರ್ಡ್‍ಗೆ ತೆರಳಿದ ಆನಂದ ನ್ಯಾಮಗೌಡ ಆಯಾ ವ್ಯಾಪ್ತಿಯ ಶಾಲಾ ಮಕ್ಕಳಿಗೆ ಸ್ವಚ್ಛತಾ ಪಾಠ ಮಾಡಿದರು. ವಿದ್ಯಾರ್ಥಿಗಳಿಗೆ ತಮ್ಮ ಮನೆ, ಬೀದಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಮತ್ತು ನಗರಸಭೆಗೆ ಸಹಕರಿಸಬೇಕೆಂದು ಸಲಹೆ ನೀಡಿದರು.

    ಇದಾದ ಬಳಿಕ ಶಾಲೆ ಮೈದಾನದಲ್ಲಿ ಹಾಗೂ 27,28,30 ನೇ ವಾರ್ಡ್‍ನ ರಸ್ತೆ ಬದಿಗಳಲ್ಲಿ ನಗರಸಭೆ, ಹಾಗೂ ಅರಣ್ಯ ಇಲಾಖೆ ಸಹಯೋಗದಲ್ಲಿ ಗಿಡಗಳನ್ನು ನೆಡಲಾಯಿತು.

  • ಪಕ್ಷದ ಕಾರ್ಯಕರ್ತನ ಮೇಲೆ ಬಿಜೆಪಿ ನಾಯಕನಿಂದ್ಲೇ ಮಾರಣಾಂತಿಕ ಹಲ್ಲೆ!

    ಪಕ್ಷದ ಕಾರ್ಯಕರ್ತನ ಮೇಲೆ ಬಿಜೆಪಿ ನಾಯಕನಿಂದ್ಲೇ ಮಾರಣಾಂತಿಕ ಹಲ್ಲೆ!

    ಬಾಗಲಕೋಟೆ: ಬಿಜೆಪಿ ಕಾರ್ಯಕರ್ತರೊಬ್ಬರ ಮೇಲೆ ಸೋಮವಾರ ತಡರಾತ್ರಿ ಪಕ್ಷದ ನಗರ ಘಟಕದ ಅಧ್ಯಕ್ಷ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.

    ಜಮಖಂಡಿ ನಗರದ ಕಲೂತಿ ಪೆಟ್ರೋಲ್ ಬಂಕ್ ನಲ್ಲಿ ತಡರಾತ್ರಿ ಈ ಘಟನೆ ನಡೆದಿದೆ. ಬಿಜೆಪಿ ಕಾರ್ಯಕರ್ತ ಉಮೇಶ್ ಅಲಮೇಲಕರ್ ಮೇಲೆ ಹಲ್ಲೆ ನಡೆದಿದೆ. ಜಮಖಂಡಿ ಬಿಜೆಪಿಯ ನಗರ ಘಟಕದ ಅಧ್ಯಕ್ಷ ಶ್ರೀಧರ ಕೊಣ್ಣೂರ ಹಾಗೂ ಅವರ ಸಹಚರರು ಸೇರಿ ಕಬ್ಬಿಣದ ರಾಡ್ ಹಾಗೂ ಸೋಡಾ ಬಾಟಲ್‍ನಿಂದ ಹೊಡೆದು ಮಾರಣಾಂತಿಕ ಹಲ್ಲೆ ಮಾಡಿದ್ದಾರೆ.

    ಈ ಹಲ್ಲೆಯಿಂದ ಉಮೇಶ್ ಅವರ ತಲೆ ಹಾಗೂ ಎಡಗಣ್ಣಿಗೆ ಗಾಯವಾಗಿದ್ದು, ಗಾಯಾಳುವನ್ನು ಜಮಖಂಡಿ ಕೆ.ಎಲ್.ಇ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಜಮಖಂಡಿ ಉಪಚುನಾವಣೆ ವೇಳೆ ಇವರಿಬ್ಬರ ನಡುವೆ ಮನಸ್ತಾಪ ಶುರುವಾಗಿತ್ತು. ಸೋಮವಾರ ಈ ಬಗ್ಗೆ ಶುರುವಾದ ಜಗಳ ನಂತರ ಹಲ್ಲೆಗೆ ತಿರುಗಿತ್ತು.

    ಸದ್ಯ ಜಮಖಂಡಿ ನಗರ ಪೊಲೀಸ್ ಠಾಣೆಯಲ್ಲಿ ಉಮೇಶ್ ಅಲಮೇಲಕರ್ ಅವರು ಶ್ರೀಧರ ಕೊಣ್ಣೂರ ಅವರ ವಿರುದ್ಧ ದೂರು ನೀಡಿದ್ದು, ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

  • ಬ್ರಾಹ್ಮಣರನ್ನು ಹೀಯಾಳಿಸಿ ಕ್ಷಮೆ ಕೇಳಿದ ಶಾಸಕ ಆನಂದ್ ನ್ಯಾಮಗೌಡ

    ಬ್ರಾಹ್ಮಣರನ್ನು ಹೀಯಾಳಿಸಿ ಕ್ಷಮೆ ಕೇಳಿದ ಶಾಸಕ ಆನಂದ್ ನ್ಯಾಮಗೌಡ

    ಬಾಗಲಕೋಟೆ: ಜಮಖಂಡಿ ಕ್ಷೇತ್ರದ ನೂತನ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾದ ಆನಂದ್ ನ್ಯಾಮಗೌಡ ಅವರು ಅಲ್ಪಸಂಖ್ಯಾತರನ್ನು ಒಲೈಸಲು ಹೋಗಿ ಬ್ರ್ರಾಹ್ಮಣರನ್ನು ಹೀಯಾಳಿಸಿ ಬಳಿಕ ಕ್ಷಮೆಯಾಚಿಸಿದ ಘಟನೆ ಇಂದು ನಡೆದಿದೆ.

    ಜಮಖಂಡಿಯಲ್ಲಿ ಇಂದು ನಡೆದ ಅಲ್ಪಸಂಖ್ಯಾತ ಸಮುದಾಯದ ಅಭಿನಂದನಾ ಸಭೆಯಲ್ಲಿ ಮಾತನಾಡಿದ ಆನಂದ್ ನ್ಯಾಮಗೌಡ, 1990 ರಲ್ಲಿ ನಮ್ಮ ತಂದೆ ಸಿದ್ದು ನ್ಯಾಮಗೌಡ ಬ್ರಾಹ್ಮಣ ಸಮುದಾಯದ ರಾಮಕೃಷ್ಣ ಹೆಗಡೆ ಅವರನ್ನು ಸೋಲಿಸಿ ದೇಶಕ್ಕೆ ಚಿರಪರಿಚಿತರಾಗಿದ್ರು. ಸದ್ಯ ನಾನು ಬ್ರಾಹ್ಮಣ ವ್ಯಕ್ತಿಯನ್ನು ಸೋಲಿಸಿ ಶಾಸಕನಾಗಿದ್ದೇನೆ. ಬಿಜೆಪಿ ಅಭ್ಯರ್ಥಿ ಶ್ರೀಕಾಂತ್ ಕುಲಕರ್ಣಿ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು ಅವರನ್ನು ಸೋಲಿಸಿ ಇಂದು ಅಧಿಕಾರದಲ್ಲಿದ್ದೇನೆ ಎಂದು ವ್ಯಂಗ್ಯವಾಡಿದ್ದರು.

    ಆನಂದ್ ನ್ಯಾಮಗೌಡರ ಹೇಳಿಕೆಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಬ್ರಾಹ್ಮಣ ಸಮಾಜದವರಿಂದ ಆನಂದ್ ನ್ಯಾಮಗೌಡರ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿತ್ತು. ಈ ವಿಡಿಯೋ ಪಬ್ಲಿಕ್ ಟಿವಿಗೆ ಲಭಿಸಿದ್ದು, ಪ್ರಸಾರವಾದ ಬೆನ್ನಲ್ಲೇ ಶಾಸಕರು ಕ್ಷಮೆ ಕೋರಿದ್ದಾರೆ.

    ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಶಾಸಕರು, `ಬ್ರಾಹ್ಮಣ ಸಮುದಾಯವನ್ನು ಹೀಯಾಳಿಸುವುದು ನನ್ನ ಉದ್ದೇಶವಾಗಿರಲಿಲ್ಲ. ನನಗಿಂತ ಮೊದಲು ಭಾಷಣ ಮಾಡಿದವರು ಹೇಳಿದ ಮಾತನ್ನು ನಾನು ಮತ್ತೊಮ್ಮೆ ಹೇಳಿದ್ದೆ ಅಷ್ಟೆ. ಬ್ರಾಹ್ಮಣರನ್ನ ಸೋಲಿಸೋದು ನನ್ನ ಉದ್ದೇಶವಲ್ಲ ಚುನಾವಣೆ ಗೆಲ್ಲೋದು ನನಗೆ ಮುಖ್ಯವಾಗಿತ್ತು ಎಂದು ಸ್ಪಷ್ಟ ಪಡೆಸಲು ಆ ಮಾತು ಹೇಳಿದ್ದೆ. ಎಲ್ಲ ಸಮುದಾಯವನ್ನು ನಾವು ಸಮನಾಗಿ ನೋಡುತ್ತೇವೆ. ನನ್ನ ಹೇಳಿಕೆಯಿಂದ ಬ್ರಾಹ್ಮಣ ಸಮಾಜದವರಿಗೆ ನೋವಾಗಿದ್ದರೆ ಕ್ಷಮೆ ಕೇಳಲು ನಾನು ಸಿದ್ಧ ಎಂದು ಆನಂದ್ ನ್ಯಾಮಗೌಡ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews