Tag: ಜಪ್ತಿ

  • 1 ಕೋಟಿ 5 ಲಕ್ಷ ರೂ. ಮೌಲ್ಯದ ಬೆಳ್ಳಿಯ ಆಭರಣಗಳು ಜಪ್ತಿ

    1 ಕೋಟಿ 5 ಲಕ್ಷ ರೂ. ಮೌಲ್ಯದ ಬೆಳ್ಳಿಯ ಆಭರಣಗಳು ಜಪ್ತಿ

    ಬೀದರ್: ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಅಪಾರ ಪ್ರಮಾಣದ ಬೆಳ್ಳಿ (Silver) ಆಭರಣಗಳನ್ನು ಜಪ್ತಿ (Seize) ಮಾಡಲಾಗಿದೆ.

    ಮಹಾರಾಷ್ಟ್ರ (Maharastra) ಹಾಗೂ ಬೀದರ್ ಗಡಿ ಚೆಕ್ ಪೊಸ್ಟ್ (Bidar Border Check Post) ನಲ್ಲಿ ತಪಾಸಣೆ ವೇಳೆ 142 ಕೆ.ಜಿ ಬೆಳ್ಳಿಯ ಕಾಲು ಚೈನುಗಳು ಸೇರಿ 1 ಕೋಟಿ 5 ಲಕ್ಷ ಬೆಲೆ ಬಾಳುವ ಬೆಳ್ಳಿಯ ಆಭರಣಗಳ ಜೊತೆಗೆ ಕಾರು ಕೂಡ ಜಪ್ತಿ ಮಾಡಲಾಗಿದೆ.

    ಒಟ್ಟು 8 ಬ್ಯಾಗ್ ಗಳಲ್ಲಿ 142 ಕೆಜಿ ಬೆಳ್ಳಿಯ ಆಭರಣಗಳನ್ನು ಸಾಗಾಟ ಮಾಡಲಾಗುತ್ತಿತ್ತು. ಗಜಾನನ ಎಂಬವರಿಗೆ ಸೇರಿದ ಕಾರಿನಲ್ಲಿ ಅಪಾರ ಪ್ರಮಾಣದ ಬೆಳ್ಳಿಯ ಕಾಲು ಚೈನುಗಳು ಪತ್ತೆಯಾಗಿವೆ. ಇದನ್ನೂ ಓದಿ: ದಾಖಲೆ ಇಲ್ಲದ ಹಣವನ್ನು ಸೊಂಟಕ್ಕೆ ಕಟ್ಟಿಕೊಂಡು ಬಂದ ಖತರ್ನಾಕ್ ವ್ಯಕ್ತಿಗಳು!

    ಕಾರಿನ ಮಾಲೀಕರು ನಿಖರವಾದ ದಾಖಲೆಗಳು ನೀಡದ ಹಿನ್ನೆಲೆಯಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ. ಸಾರ್ವತ್ರಿಕ ಚುನಾವಣೆ ಹಿನ್ನೆಲೆ ಮತದಾರರಿಗೆ ಹಂಚಲು ತಂದಿರುವ ಶಂಕೆ ವ್ಯಕ್ತವಾಗಿದೆ. ಈ ಕುರಿತು ಔರಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಬೆಳಗಾವಿಯಲ್ಲಿ ದಾಖಲೆ ಇಲ್ಲದ 2 ಕೋಟಿ ರೂ. ಹಣ ಜಪ್ತಿ

    ಬೆಳಗಾವಿಯಲ್ಲಿ ದಾಖಲೆ ಇಲ್ಲದ 2 ಕೋಟಿ ರೂ. ಹಣ ಜಪ್ತಿ

    ಬೆಳಗಾವಿ: ಬೆಳ್ಳಂಬೆಳಗ್ಗೆ ಬೆಳಗಾವಿ (Belagavi) ಚುನಾವಣಾ ಅಧಿಕಾರಿಗಳು ಭರ್ಜರಿ ಬೇಟೆಯಾಡಿದ್ದು, ಸೂಕ್ತ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ ಎರಡು ಕೋಟಿ ರೂ. ನಗದು ಹಣವನ್ನು ಜಪ್ತಿ ಮಾಡಿಕೊಂಡಿದ್ದಾರೆ.

    ತಾಲೂಕಿನ ರಾಷ್ಟ್ರೀಯ ಹೆದ್ದಾರಿ ಹಿರೇಬಾಗೇವಾಡಿ (Hirebagewadi) ಟೋಲ್ (Toll) ಬಳಿ ಖಾಸಗಿ ಬಸ್‌ನಲ್ಲಿ ಸಾಗಿಸುತ್ತಿದ್ದ ಕಂತೆ ಕಂತೆ ಹಣವನ್ನು ಚುನಾವಣಾ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಮುಂಬೈನಿಂದ (Mumbai) ಮಂಗಳೂರು (Mangaluru) ಕಡೆಗೆ ಹೊರಟಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ತಪಾಸಣೆ ನಡೆಸುವ ಸಂದರ್ಭದಲ್ಲಿ ಹಣದ (Money) ಬ್ಯಾಗ್ ಪತ್ತೆಯಾಗಿದೆ. ಇದನ್ನೂ ಓದಿ: ಹತ್ತು ವರ್ಷದಿಂದ ನಾಪತ್ತೆಯಾಗಿದ್ದ ನಟೋರಿಯಸ್ ರೌಡಿಶೀಟರ್‌ಗಳ ಬಂಧನ 

    ಈ ಕುರಿತು ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್, ಆದಾಯ ತೆರಿಗೆ (Income Tax) ಅಧಿಕಾರಿಗಳು ಹಾಗೂ ಚುನಾವಣಾ ಅಧಿಕಾರಿಗಳು (Election Officer) ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ವರುಣಾದಲ್ಲಿ ಸಿದ್ದು-ಬಿಎಸ್‌ವೈ ಹೊಂದಾಣಿಕೆ ಮಾಡ್ಕೊಂಡಿದ್ದಾರೆ: ಹೆಚ್‌ಡಿಡಿ ಹೊಸ ಬಾಂಬ್‌

  • ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿದ್ದ 5 ವಸತಿ ಗೃಹ ಜಪ್ತಿ

    ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿದ್ದ 5 ವಸತಿ ಗೃಹ ಜಪ್ತಿ

    ಶ್ರೀನಗರ: ಇಲ್ಲಿಯವರೆಗೆ ಉಗ್ರರಿಗೆ ಬಿಸಿ ಮುಟ್ಟಿಸುತ್ತಿದ್ದ ಪೊಲೀಸರು ಈಗ ಜನರಿಗೂ ಬಿಸಿ ಮುಟ್ಟಿಸಲು ಆರಂಭಿಸಿದ್ದಾರೆ. ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿದ್ದ ಶ್ರೀನಗರ 5 ವಸತಿ ಗೃಹವನ್ನು ಪೊಲೀಸರು ಪತ್ತೆ ಮಾಡಿ ಜಪ್ತಿ ಮಾಡಿದ್ದಾರೆ.

    ಖಚಿತ ಮಾಹಿತಿ ಮೇರೆಗೆ ಶ್ರೀನಗರ ಪೊಲೀಸರು ಭಯೋತ್ಪಾದಕರಿಗೆ ಆಶ್ರಯ ನೀಡಲು ಬಳಸಲಾಗಿದ್ದ ಐದು ವಸತಿ ಗೃಹಗಳ ಮೇಲೆ ದಾಳಿ ಮಾಡಿದ್ದಾರೆ. ನಂತರ ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆ(ಯುಎಪಿಎ) ಅಡಿ ಆ ಐದು ವಸತಿ ಗೃಹಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

    5 Houses Attached In Srinagar For 'Harbouring' Terrorists: Police

    2022 ಜೂನ್ 21ರಂದು, ಯುಎಪಿಎ ಸೆಕ್ಷನ್ 2(ಜಿ) ಮತ್ತು ಸೆಕ್ಷನ್ 25 ರ ಪ್ರಕಾರ ಭಯೋತ್ಪಾದಕರಿಗೆ ಆಶ್ರಯ ಕೊಡುತ್ತಿದ್ದ ಐದು ವಸತಿ ಮನೆಗಳನ್ನು ಜಪ್ತಿ ಮಾಡಲಾಗಿದೆ. ಈ ಮನೆಗಳನ್ನು ಭಯೋತ್ಪಾದನೆಯ ಉದ್ದೇಶಕ್ಕಾಗಿ ಬಳಸಲಾಗಿದೆ ಎಂದು ಸಾಬೀತಾಗಿದೆ. ಈ ಮನೆಗಳಲ್ಲಿ ಉಗ್ರರಿಗೆ ಆಶ್ರಯವನ್ನು ಸ್ವಯಂಪ್ರೇರಣೆಯಿಂದ ಮತ್ತು ಉದ್ದೇಶಪೂರ್ವಕವಾಗಿ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ:  ನನ್ನ ಮಗನನ್ನು ಉಳಿಸು ದೇವರೇ – ಶಿಲುಬೆ ಮುಂದೆ ಕಂದನನ್ನು ಮಲಗಿಸಿದ ದಂಪತಿ 

    ಪರಿಂಪೋರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎರಡು ಮನೆಗಳು ಸೇರಿ ನೌಹಟ್ಟಾ, ಪಂಥಾ ಚೌಕ್ ಮತ್ತು ಜಕುರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಲಾ ಒಂದು ಮನೆಯನ್ನು ಜಪ್ತಿ ಮಾಡಲಾಗಿದೆ. ಅಂತಹ ಇನ್ನೂ ಕೆಲವು ಮನೆಗಳನ್ನು ಗುರುತಿಸಲಾಗಿದೆ ಎಂದಿದ್ದಾರೆ.

    ಭಯೋತ್ಪಾದಕರಿಗೆ ಆಶ್ರಯ ನೀಡದಂತೆ ನಾಗರಿಕರಿಗೆ ಮತ್ತೊಮ್ಮೆ ನಾವು ವಿನಂತಿ ಮಾಡಿಕೊಳ್ಳುತ್ತೇವೆ. ಒಂದು ವೇಳೆ ನಾಗರಿಕರು ನಮ್ಮ ಮಾತನ್ನು ಕೇಳಲು ವಿಫಲವಾದರೆ ನಾವು ಅವರ ಮನೆಗಳನ್ನು ಜಪ್ತಿ ಮಾಡಬೇಕಾಗುತ್ತೆ ಎಂದು ಎಚ್ಚರಿಸಿದ್ದಾರೆ.

    ಯಾವುದೇ ಮನೆಗೆ ಭಯೋತ್ಪಾದಕರು ಬಲವಂತವಾಗಿ ಪ್ರವೇಶಿಸಿದರೆ ತಕ್ಷಣವೇ ಅದನ್ನು ಪೊಲೀಸರ ಗಮನಕ್ಕೆ ತರಬೇಕು ಎಂದು ಸೂಚಿಸಿದ್ದಾರೆ.

    Live Tv

  • ಸುಲಿಗೆ ಪ್ರಕರಣ: ಜಾಕ್ವೆಲಿನ್ ಫರ್ನಾಂಡಿಸ್‌ಗೆ ಸೇರಿದ 7 ಕೋಟಿ ಮೌಲ್ಯದ ಆಸ್ತಿ ಜಪ್ತಿ

    ಸುಲಿಗೆ ಪ್ರಕರಣ: ಜಾಕ್ವೆಲಿನ್ ಫರ್ನಾಂಡಿಸ್‌ಗೆ ಸೇರಿದ 7 ಕೋಟಿ ಮೌಲ್ಯದ ಆಸ್ತಿ ಜಪ್ತಿ

    ಸುಕೇಶ್ ಚಂದ್ರಶೇಖರ್ ವಿರುದ್ಧದ ಸುಲಿಗೆ ಪ್ರಕರಣದಲ್ಲಿ ಬಾಲಿವುಡ್ ತಾರೆ ಜಾಕ್ವೆಲಿನ್ ಫರ್ನಾಂಡೀಸ್ ಅವರ 7.27 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇಡಿ) ಶನಿವಾರ ಜಪ್ತಿ ಮಾಡಿದೆ. ಜಾಕ್ವೆಲಿನ್ ಕನ್ನಡದಲ್ಲೂ ನಟಿಸಿದ್ದು, ಕಿಚ್ಚ ಸುದೀಪ್ ಅಭಿನಯದ ‘ವಿಕ್ರಾಂತ್ ರೋಣ’ ಚಿತ್ರದಲ್ಲಿ  ನಟಿಸಿದ್ದಾರೆ. ಇನ್ನಷ್ಟೇ ಈ ಸಿನಿಮಾ ರಿಲೀಸ್ ಆಗಬೇಕಿದೆ.

    ಜಾಕ್ವೆಲಿನ್ ಹೆಸರಿನಲ್ಲಿ 7.12 ಕೋಟಿ ರೂಪಾಯಿ ಮೌಲ್ಯದ ಸ್ಥಿರ ಠೇವಣಿಗಳನ್ನು ಲಗತ್ತಿಸಲಾದ ಆಸ್ತಿಗಳು ಸೇರಿವೆ ಎಂದು ಮೂಲಗಳು ತಿಳಿಸಿವೆ. ಜಾಕ್ವೆಲಿನ್ ಫೆರ್ನಾಂಡಿಸ್ ಸುಲಿಗೆ ಮಾಡಿದ ಹಣದ ಫಲಾನುಭವಿಯಾಗಿದ್ದು, ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಜಪ್ತಿ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

    ಸುಕೇಶ್ ಚಂದ್ರಶೇಖರ್ ಸುಲಿಗೆ ಮಾಡಿದ ಹಣವನ್ನು ಬಳಸಿಕೊಂಡು ಜಾಕ್ವೆಲಿನ್ ಫರ್ನಾಂಡೀಸ್‌ಗೆ 5.71 ಕೋಟಿ ರೂಪಾಯಿ ಮೌಲ್ಯದ ಉಡುಗೊರೆಗಳನ್ನು ನೀಡಿದ್ದ ಎಂಬ ಪುರಾವೆಗಳು ಅಧಿಕಾರಿಗಳಿಗೆ ಸಿಕ್ಕಿವೆ. ಉಡುಗೊರೆಗಳ ಹೊರತಾಗಿ, ಅವನು ಜಾಕ್ವೆಲಿನ್ ಅವರ ಕುಟುಂಬ ಸದಸ್ಯರಿಗೆ 173,000 ಯುಎಸ್ ಡಾಲರ್ ಮತ್ತು ಸುಮಾರು 27,000 ಆಸ್ಟ್ರೇಲಿಯನ್ ಡಾಲರ್‌ಗಳನ್ನು ನೀಡಿದ್ದನು.

    ಜಾಕ್ವೆಲಿನ್ ಫರ್ನಾಂಡೀಸ್ ಅವರನ್ನು ಸುಕೇಶ್ ಚಂದ್ರಶೇಖರ್ ಜೊತೆಗಿನ ಸಂಪರ್ಕಕ್ಕಾಗಿ ಇಡಿ ಹಲವು ಬಾರಿ ಪ್ರಶ್ನಿಸಿತ್ತು. ಜಾಕ್ವೆಲಿನ್ ಸದ್ಯಕ್ಕೆ ಆರೋಪಿಯಲ್ಲ. ಆದರೆ ತನಿಖಾಧಿಕಾರಿಗಳು ಇನ್ನೂ ಜಾಕ್ವೆಲಿನ್‌ಗೆ ಕ್ಲೀನ್ ಚಿಟ್ ನೀಡಿಲ್ಲ. ಶ್ರೀಲಂಕಾ ಮೂಲದ ನಟಿಗೆ ದೇಶ ತೊರೆಯದಂತೆ ನಿಷೇಧ ಹೇರಲಾಗಿತ್ತು.

    ದೆಹಲಿಯ ಉದ್ಯಮಿಯೊಬ್ಬರ ಪತ್ನಿಯಿಂದ ಸ್ಪೂಫ್ ಕರೆಗಳ ಮೂಲಕ ಸುಕೇಶ್ ಚಂದ್ರಶೇಖರ್ 215 ಕೋಟಿ ಸುಲಿಗೆ ಮಾಡಿದ ಆರೋಪ ಎದುರಿಸುತ್ತಿದ್ದಾರೆ. ಸುಕೇಶ್ ದೆಹಲಿಯ ಜೈಲಿನಲ್ಲಿದ್ದಾಗ, ಪ್ರಧಾನಿ ಕಚೇರಿ, ಕಾನೂನು ಸಚಿವಾಲಯ ಮತ್ತು ಗೃಹ ಸಚಿವಾಲಯದ ಅಧಿಕಾರಿಯಂತೆ ನಟಿಸಿ ಸಂತ್ರಸ್ತ ಮಹಿಳೆಯಿಂದ ಹಣ ವಸೂಲಿ ಮಾಡಿದ್ದಾನೆ. ಸಂತ್ರಸ್ತೆಯ ಪತಿಗೆ ಜಾಮೀನು ದೊರಕಿಸಿಕೊಡುವುದಾಗಿ ಮತ್ತು ಅವರ ಔಷಧ ವ್ಯಾಪಾರವನ್ನು ನಡೆಸುವುದಾಗಿ ಸುಕೇಶ್ ದೂರವಾಣಿ ಕರೆಗಳಲ್ಲಿ ಹೇಳಿಕೊಂಡಿದ್ದನು.

    ರಾಜಕಾರಣಿ ಟಿಟಿವಿ ದಿನಕರನ್ ಒಳಗೊಂಡ ಐದು ವರ್ಷಗಳ ಹಿಂದಿನ ವಂಚನೆ ಪ್ರಕರಣದಲ್ಲಿ ಸುಕೇಶ್ ಕೂಡ ಭಾಗಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಏಪ್ರಿಲ್ 4 ರಂದು ಇಡಿ ಅವರನ್ನು ಬಂಧಿಸಿತ್ತು.

  • ಮತಗಟ್ಟೆ ಪ್ರವೇಶಿಸಲು ಯತ್ನಿಸಿದ ಸೋನು ಸೂದ್ ಕಾರು ಜಪ್ತಿ

    ಮತಗಟ್ಟೆ ಪ್ರವೇಶಿಸಲು ಯತ್ನಿಸಿದ ಸೋನು ಸೂದ್ ಕಾರು ಜಪ್ತಿ

    ಚಂಡೀಗಢ: ಮತಗಟ್ಟೆ ಪ್ರವೇಶಿಸಲು ಯತ್ನಿಸಿದ ಆರೋಪದ ಮೇಲೆ ಬಾಲಿವುಡ್ ನಟ ಸೋನು ಸೂದ್ ಕಾರನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

    ಪಂಜಾಬ್‍ನ ಮೋಗಾದಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಸೋನು ಸೂದ್ ಅವರ ಸಹೋದರಿ ಮಾಳವಿಕಾ ಅವರನ್ನು ಮನೆಗೆ ವಾಪಸ್ ಕರೆದುಕೊಂಡು ಹೋಗಲು ಬಂದಿದ್ದರು. ಈ ವೇಳೆ ಅವರು ಮತಗಟ್ಟೆಗೆ ಪ್ರವೇಶಿಸಲು ಯತ್ನಿಸಿದ ಆರೋಪದ ಮೇಲೆ ಅವರ ಕಾರನ್ನು ಜಪ್ತಿ ಮಾಡಲಾಗಿದೆ. ಚುನಾವಣಾ ವೀಕ್ಷಕರ ನಿರ್ದೇಶನದ ಮೇರೆಗೆ ಅವರ ವಾಹನವನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಉತ್ತರ ಪ್ರದೇಶಕ್ಕೆ 3ನೇ ಹಂತ, ಪಂಜಾಬ್ ಮತದಾನ ಇಂದು – ಅಖಿಲೇಶ್ ಯಾದವ್ ಭವಿಷ್ಯ ನಿರ್ಧಾರ

    ಮೊಗಾ ಜಿಲ್ಲೆಯ ಪಿಆರ್‍ಒ ಪ್ರದ್ಭದೀಪ್ ಸಿಂಗ್ ಪ್ರಕಾರ, ಸೋನು ಸೂದ್ ಮತಗಟ್ಟೆಗೆ ಪ್ರವೇಶಿಸಲು ಪ್ರಯತ್ನಿಸುತ್ತಿದ್ದರು. ಈ ವೇಳೆ ಅವರ ಕಾರನ್ನು ಜಪ್ತಿ ಮಾಡಿ ಅವರನ್ನು ಮನೆಗೆ ವಾಪಸ್ ಕಳುಹಿಸಲಾಗಿದೆ. ಮನೆಯಿಂದ ಹೊರಗೆ ಕಾಲಿಟ್ಟರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

    ಈ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರತಿಪಕ್ಷಗಳು, ವಿಶೇಷವಾಗಿ ಅಕಾಲಿದಳದ ಜನರು ವಿವಿಧ ಬೂತ್‍ಗಳಲ್ಲಿ ಬೆದರಿಕೆ ಕರೆಗಳ ಬಗ್ಗೆ ನನಗೆ ತಿಳಿದಿತ್ತು. ಕೆಲವು ಬೂತ್‍ಗಳಲ್ಲಿ ಹಣ ಹಂಚಲಾಗುತ್ತಿದೆ. ಆದ್ದರಿಂದ ಪರಿಶೀಲಿಸಿ ನ್ಯಾಯಯುತ ಚುನಾವಣೆಯನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ. ಅದಕ್ಕಾಗಿಯೇ ನಾವು ಹೊರಗೆ ಹೋಗಿದ್ದೆವು. ಈಗ ನಾನು ಮನೆಯಲ್ಲಿದ್ದೇನೆ. ನ್ಯಾಯಯುತ ಚುನಾವಣೆ ನಡೆಯಬೇಕು ಎಂದರು.

    ಚುನಾವಣೆಯ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಮಾಳವಿಕಾ ಸೂದ್, ಈ ಹಿಂದೆ ಪಂಜಾಬ್‍ನ ಮೋಗಾ ಕ್ಷೇತ್ರದಿಂದ ಕಾಂಗ್ರೆಸ್ ವತಿಯಿಂದ ಸ್ಪರ್ಧಿಸುತ್ತಿರುವುದಾಗಿ ಅವರು ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲುವ ಭರವಸೆ ಹೊಂದಿದ್ದೇನೆ ಅಂತ ಹೇಳಿದ್ದರು. ನಾನು ಇಂದು ಸಕಾರಾತ್ಮಕ ಭಾವನೆ ಹೊಂದಿದ್ದೇನೆ. ವಿದೇಶದಿಂದ ಬಂದವರು ಸೇರಿದಂತೆ ಬಹಳಷ್ಟು ಜನರು ಕರೆ ಮಾಡುತ್ತಿದ್ದಾರೆ. ನನ್ನ ಬೆಂಬಲಕ್ಕಾಗಿ ಹುರಿದುಂಬಿಸುತ್ತಿದ್ದಾರೆ. ಅವರಲ್ಲಿ ಹಲವರು ಇಂದು ನನಗೆ ಮತ ಹಾಕುವಂತೆ ಭರವಸೆ ನೀಡಿದ್ದಾರೆ ಎಂದರು. ಇದನ್ನೂ ಓದಿ: ಹಿಜಬ್ ಆಯ್ಕೆಯಲ್ಲ, ನಾವು ಪ್ರೀತಿಸುವ ದೇವರು ವಿಧಿಸಿರುವ ಶಿಷ್ಟಾಚಾರ: ಝೈರಾ ವಾಸಿಮ್

    ನಾನು ಜನರ ಕಲ್ಯಾಣಕ್ಕಾಗಿ ಸಾಕಷ್ಟು ಕೆಲಸ ಮಾಡಿದ್ದೇನೆ. ನಾವು ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡಿದ್ದೇವೆ. ಬೇರೆ ಯಾವುದೇ ಅಭ್ಯರ್ಥಿಗಳು ಇಷ್ಟು ಸಾಮಾಜಿಕ ಕೆಲಸ ಮಾಡಿದ್ದಾರೆ ಅಂತ ನಾನು ಭಾವಿಸುವುದಿಲ್ಲ ಎಂದರು.

    ಈ ವರ್ಷದ ಜನವರಿ 10 ರಂದು ನಟ ಸೋನು ಸೂದ್ ಅವರ ಸಹೋದರಿ ಮಾಳವಿಕಾ ಸೂದ್ ಪಂಜಾಬ್‍ನ ಮೊಗಾದಲ್ಲಿ ಕಾಂಗ್ರೆಸ್‍ಗೆ ಸೇರಿದರು. ರಾಜ್ಯದ 2.14 ಕೋಟಿ ಮತದಾರರು ಭಾನುವಾರ 117 ಕ್ಷೇತ್ರಗಳಿಂದ ಕಣದಲ್ಲಿರುವ 1304 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದೆ.

    ರಾಜ್ಯದ 117 ಕ್ಷೇತ್ರಗಳಲ್ಲಿ ಇಂದು ಬೆಳಗ್ಗೆ 7 ಗಂಟೆಯಿಂದ ಮತದಾನ ನಡೆಯುತ್ತಿದೆ. ಪಂಜಾಬ್ ಈ ಬಾರಿ ಕಾಂಗ್ರೆಸ್, ಆಮ್ ಆದ್ಮಿ ಪಕ್ಷ (ಎಎಪಿ), ಶಿರೋಮಣಿ ಅಕಾಲಿದಳ-ಬಹುಜನ ಸಮಾಜ ಪಕ್ಷದ ಮೈತ್ರಿ, ಮತ್ತು ಭಾರತೀಯ ಜನತಾ ಪಾರ್ಟಿ-ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರ ಪಂಜಾಬ್ ಲೋಕ ಕಾಂಗ್ರೆಸ್ ಪಕ್ಷದ ಒಕ್ಕೂಟದೊಂದಿಗೆ ಸ್ಪರ್ಧೆಗೆ ಸಾಕ್ಷಿಯಾಗಿದೆ.

  • ಹುಬ್ಬಳ್ಳಿಯಲ್ಲಿ 82 ಲಕ್ಷ ರೂ. ಹವಾಲಾ ಹಣ ಜಪ್ತಿ

    ಹುಬ್ಬಳ್ಳಿಯಲ್ಲಿ 82 ಲಕ್ಷ ರೂ. ಹವಾಲಾ ಹಣ ಜಪ್ತಿ

    ಹುಬ್ಬಳ್ಳಿ: ಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 82.75 ಲಕ್ಷ ರೂ. ಹಣವನ್ನು ಕೇಶ್ವಾಪುರ ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.

    ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಕೇಶ್ವಾಪುರ ಠಾಣೆ ಪೊಲೀಸರು ನಿನ್ನೆ ರಾತ್ರಿ ಭರ್ಜರಿ ಬೇಟೆಯಾಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಯೊಂದಿಗೆ ಕುಸುಗಲ್ ರಸ್ತೆಯ ಆಕ್ಸ್‍ಫರ್ಡ್ ಕಾಲೇಜ್ ಬಳಿ ದಾಳಿ ಮಾಡಿದ ಪೊಲೀಸರು, ನಗದು ಸಮೇತ ಕಾರು ವಶಡಿಸಿಕೊಂಡಿದ್ದಾರೆ.

    ವಿಜಯಪುರದಿಂದ ಹುಬ್ಬಳ್ಳಿಗೆ ಬರುತ್ತಿದ್ದ ಸ್ವಿಫ್ಟ್ ಡಿಜೈರ್ ಕಾರನ್ನು ತಡೆದು ಪರಿಶೀಲಿಸಿದಾಗ ಅಪಾರ ಪ್ರಮಾಣದ ಹಣ ಪತ್ತೆಯಾಗಿದೆ. ವಿಜಯಪುರದ ಭವಾನಿ ಟೀ ಸ್ಟಾಲ್ ಟಾಂಗಾ ಸ್ಟ್ಯಾಂಡ್ ಹತ್ತಿರದ ನಿವಾಸಿಗೆ ಸೇರಿದ ಕಾರು ಇದಾಗಿದ್ದು, ಚಾಲಕ ಗೋಕುಲರಾಮ ವೀರಾಮಾರಾಮ ರಬಾರಿ(34)ಯನ್ನು ಪೊಲೀಸರು ವಶಕ್ಕೆ ಪಡೆದು, ವಿಚಾರಣೆ ಮುಂದುವರಿಸಿದ್ದಾರೆ. ಇದನ್ನೂ ಓದಿ: ಅತ್ಯಾಚಾರ ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸರಿಗೆ ಬಹುಮಾನ ಘೋಷಿಸಿದ ಜಗ್ಗೇಶ್

    ಚಾಲಕನಿಂದ 82,75,100 ರೂಪಾಯಿ ನಗದು ಹಾಗೂ 5 ಲಕ್ಷ ರೂಪಾಯಿ ಮೌಲ್ಯದ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಜೊತೆಗೆ ಎರಡು ಮೊಬೈಲ್ ಹ್ಯಾಂಡ್ ಸೆಟ್ ಗಳನ್ನು ವಶಕ್ಕೆ ಪಡೆದಿದ್ದಾರೆ. ಇದು ಮಹಾನಗರ ಪಾಲಿಕೆ ಚುನಾವಣೆಗಾಗಿ ಸಾಗಿಸುತ್ತಿದ್ದ ಹಣವೋ ಅಥವಾ ಹವಾಲಾ ಹಣವೋ ಎಂಬುದು ತನಿಖೆಯಿಂದ ಪತ್ತೆಯಾಗಬೇಕಿದೆ.

  • ರಸ್ತೆ ಅಪಘಾತದ ಪರಿಹಾರ ನೀಡುವಲ್ಲಿ ವಿಳಂಬ- KSRTC ಕಚೇರಿ ವಸ್ತುಗಳು ಜಪ್ತಿ

    ರಸ್ತೆ ಅಪಘಾತದ ಪರಿಹಾರ ನೀಡುವಲ್ಲಿ ವಿಳಂಬ- KSRTC ಕಚೇರಿ ವಸ್ತುಗಳು ಜಪ್ತಿ

    ಗದಗ: ಅಪಘಾತದಿಂದ ಮೃತಪಟ್ಟಿದ್ದ ಬಾಲಕನ ಕುಟುಂಬಕ್ಕೆ ಪರಿಹಾರ ನೀಡುವಲ್ಲಿ ವಿಳಂಬ ಮಾಡಿದಕ್ಕೆ ವಾಯುವ್ಯ ಸಾರಿಗೆ ವಿಭಾಗೀಯ ಕಚೇರಿಯ ವಸ್ತುಗಳನ್ನು ಜಪ್ತಿ ಮಾಡಿದ ಘಟನೆ ನಗರದಲ್ಲಿ ನಡೆದಿದೆ.

    ನಗರದ ಮುಳಗುಂದ ನಾಕಾ ಬಳಿ ಇರುವ ವಾಯುವ್ಯ ಸಾರಿಗೆ ವಿಭಾಗೀಯ ಕಚೇರಿಯಲ್ಲಿನ ಕಂಪ್ಯೂಟರ್, ಮಾನಿಟರ್, ಸಿಪಿಯು ಸೇರಿದಂತೆ ಹಲವಾರು ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರಾಜಶೇಖರ್ ಪಾಟೀಲ್ ಅವರ ಆದೇಶದ ಮೇರೆಗೆ ಜಪ್ತಿ ಮಾಡಲಾಗಿದೆ.

    ಏನಿದು ಪ್ರಕರಣ?
    2009ರಲ್ಲಿ ಗದಗನ ಹೊರವಲಯದ ದಂಡಿನ ದುರ್ಗಮ್ಮ ದೇವಸ್ಥಾನದ ಬಳಿ ರಸ್ತೆ ಅಪಘಾತ ನಡೆದಿತ್ತು. ಈ ಘಟನೆಯಲ್ಲಿ ಪಾದಾಚಾರಿ ಬೆಟಗೇರಿ ನಿವಾಸಿ ಬಾಲಕ ಸಂಕಪ್ಪ ಶಿವಾನಂದ ಆಲೂರ (15) ಸ್ಥಳದಲ್ಲಿಯೇ ಮೃತಪಟ್ಟಿದ್ದ. ಹುಬ್ಬಳ್ಳಿ-ಬಾಗಲಕೋಟೆ ಬಸ್ ಹರಿದು ಸ್ಥಳದಲ್ಲಿ ಸಂಕಪ್ಪನ ಸಾವು ಸಂಭವಿಸಿತ್ತು. ಪರಿಹಾರಕ್ಕೆ ಆಗ್ರಹಿಸಿ 2009 ರಲ್ಲಿ ಮೃತ ಬಾಲಕನ ಕುಟುಂಬಸ್ಥರು ನ್ಯಾಯಾಲಯದ ಮೊರೆಹೋಗಿದ್ದರು.

    ಪ್ರಕರಣದ ಕುರಿತು ಆದೇಶ ನೀಡಿದ್ದ ನ್ಯಾಯಾಲಯ ಗದಗ ಘಟಕದಿಂದ 5 ಲಕ್ಷ ರೂ. ಪರಿಹಾರ ಘೋಷಣೆ ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ಸಾರಿಗೆ ಇಲಾಖೆಯವರು 2014ರಲ್ಲಿ ಹೈಕೋರ್ಟ್ ಮೊರೆ ಹೋಗಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ 2019ರಲ್ಲಿ ಒಟ್ಟು 8 ಲಕ್ಷ ಪರಿಹಾರ ನೀಡುವಂತೆ ಆದೇಶ ನೀಡಿತ್ತು. ಆಗ 5 ಲಕ್ಷ ಪರಿಹಾರ ನೀಡಲಾಗಿತ್ತು. ಉಳಿದ 3.16 ಲಕ್ಷ ರೂ. ಪರಿಹಾರ ನೀಡಿರಲಿಲ್ಲ. ಕಾರಣ ಈಗ ಇಲಾಖೆಯ ವಸ್ತುಗಳ ಜಪ್ತಿಗೆ ಕೋರ್ಟ್ ಆದೇಶ ನೀಡಿದೆ. ಅರ್ಜಿದಾರರ ಪರ ವಕೀಲ ಅಶೋಕ್ ಹೊಸೂರ ನೇತೃತ್ವದಲ್ಲಿ ಜಪ್ತಿ ಕಾರ್ಯ ನಡೆಯಿತು.

  • ಲಾಕ್‍ಡೌನ್ ಉಲ್ಲಂಘನೆ – 154 ವಾಹನ ಸೀಜ್

    ಲಾಕ್‍ಡೌನ್ ಉಲ್ಲಂಘನೆ – 154 ವಾಹನ ಸೀಜ್

    ಮಂಗಳೂರು: ಲಾಕ್‍ಡೌನ್ ನಿಯಮ ಉಲ್ಲಂಘಿಸಿ ರಸ್ತೆಗಿಳಿದ 154 ವಾಹನಗಳನ್ನು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಜಪ್ತಿ ಮಾಡಿದ್ದಾರೆ.

    ಈ ವಿಚಾರವಾಗಿ ಟ್ವೀಟ್ ಮಾಡಿರುವ ಮಂಗಳೂರು ಕಮಿಷನರ್ ಡಾ.ಪಿ.ಎಸ್.ಹರ್ಷ, ದಕ್ಷಿಣ ಕನ್ನಡ ಜಿಲ್ಲಾದ್ಯಂತ ಲಾಕ್‍ಡೌನ್‍ನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದ್ದು, ಮಂಗಳೂರು ನಗರ ಕಮಿಷನರ್ ವ್ಯಾಪ್ತಿಯಲ್ಲಿ ಇಂದು ಕೊರೊನಾ ಲಾಕ್‍ಡೌನ್ ಆದೇಶ ಉಲ್ಲಂಘಿಸಿದ 154 ವಾಹನಗಳನ್ನು ಸೀಜ್  ಮಾಡಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

    ಲಾಕ್ ಡೌನ್ ಹಿನ್ನಲೆಯಲ್ಲಿ ದ.ಕ. ಜಿಲ್ಲಾದ್ಯಂತ ದಿನಬಳಕೆ ವಸ್ತು ಖರೀದಿಗೆ ಅವಕಾಶ ನೀಡಲಾಗಿದ್ದು, ಬೆಳಿಗ್ಗೆ 7ರಿಂದ 12ರವರೆಗೂ ಖರೀದಿಗಾಗಿ ವಾಹನಗಳಿಗೂ ಅವಕಾಶ ನೀಡಲಾಗಿತ್ತು. ಆದರೆ ಮಧ್ಯಾಹ್ನ 12 ಗಂಟೆಯ ಬಳಿಕವೂ ಕೆಲವು ವಾಹನ ಸವಾರರು ರಸ್ತೆಯಲ್ಲಿ ಸಂಚಾರ ನಡೆಸಿ ಕೊರೊನಾ ಲಾಕ್‍ಡೌನ್ ಆದೇಶ ಉಲ್ಲಂಘನೆ ಮಾಡಿದ್ದರು. ಪೊಲೀಸ್ ಆಯುಕ್ತರು ಮೊದಲೇ ಎಚ್ಚರಿಕೆ ನೀಡಿದ್ದರೂ ಆದೇಶ ಧಿಕ್ಕರಿಸಿದ ರಸ್ತೆಗಿಳಿದ ವಾಹನಗಳನ್ನು ಕಮಿಷನರ್ ಆದೇಶದಂತೆ ಸೀಜ್ ಮಾಡಲಾಗಿದೆ.

  • ಬಲವಂತ ಸಾಲ ವಸೂಲಾತಿಗೆ ಬಂದರೆ ಕಟ್ಟಿ ಹಾಕ್ತೀವಿ: ರೈತ ಸಂಘದ ಎಚ್ಚರಿಕೆ

    ಬಲವಂತ ಸಾಲ ವಸೂಲಾತಿಗೆ ಬಂದರೆ ಕಟ್ಟಿ ಹಾಕ್ತೀವಿ: ರೈತ ಸಂಘದ ಎಚ್ಚರಿಕೆ

    ಶಿವಮೊಗ್ಗ: ಸಹಕಾರಿ ಸಂಸ್ಥೆಗಳಲ್ಲಿ ರೈತರು ಮಾಡಿರುವ ಸಾಲವನ್ನು ಬಲವಂತವಾಗಿ ವಸೂಲಿ ಮಾಡುವುದನ್ನು ನಿಲ್ಲಿಸಬೇಕು. ಇಲ್ಲವಾದಲ್ಲಿ ಸಾಲ ವಸೂಲಿಗೆ ಬರುವ ಸಹಕಾರಿ ಸಂಸ್ಥೆಗಳ ಏಜೆನ್ಸಿಯವರನ್ನು ಗ್ರಾಮದಲ್ಲಿಯೇ ಕಟ್ಟಿ ಹಾಕುತ್ತೇವೆ ಎಂದು ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಎಚ್.ಆರ್.ಬಸವರಾಜನಪ್ಪ ಎಚ್ಚರಿಕೆ ನೀಡಿದ್ದಾರೆ.

    ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ಕಾರ ಸಂಸ್ಥೆಗಳಿಂದ ರೈತರು ಪಡೆದ ಸಾಲಗಳನ್ನು ಸರ್ಕಾರ ಬಲವಂತವಾಗಿ ವಸೂಲಿ ಮಾಡಲು ಆದೇಶ ನೀಡಿದೆ. ಈ ಆದೇಶವನ್ನು ರೈತ ಸಂಘ ಖಂಡಿಸುತ್ತದೆ. ಸರ್ಕಾರ ಈ ಬಗ್ಗೆ ಸುತ್ತೋಲೆ ಹೊರಡಿಸಿರಬಹುದು. ಆದರೆ ಸಹಕಾರಿ ಸಂಸ್ಥೆಗಳು ಕಡ್ಡಾಯ ಸಾಲ ವಸೂಲಿ ಮಾಡಿದರೆ, ಸಾಲದ ಹಣಕ್ಕಾಗಿ ರೈತರ ಟ್ರ್ಯಾಕ್ಟರ್, ಟಿಲ್ಲರ್, ಜಪ್ತಿಗೆ ಬಂದರೆ ಅಂತಹವರನ್ನು ಕಟ್ಟಿ ಹಾಕುತ್ತೇವೆ. ಅಲ್ಲದೇ ಜಪ್ತಿ ಮಾಡಿದ್ದರೆ ಅದನ್ನು ಮರು ಜಪ್ತಿ ಮಾಡುತ್ತೇವೆ. ಹೀಗಾಗಿ ಸರ್ಕಾರ ಈ ಸುತ್ತೋಲೆಯನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

    ಈ ಹಿಂದೆ ಕಾಂಗ್ರೆಸ್ ಸರಕಾರ ಇದ್ದಾಗಲೂ ಸಹಕಾರಿ, ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ದೀರ್ಘಾವಧಿ ಸಾಲಗಳಿಗೆ ಅಸಲು ಪಾವತಿಸಿದರೆ ಬಡ್ಡಿ ಮನ್ನಾ ಮಾಡುವುದಾಗಿ ಆದೇಶ ಹೊರಡಿಸಿದ್ದರು. ಆದರೆ ರೈತರು ಅಸಲು ಕೂಡ ಕಟ್ಟಲು ಸಾಧ್ಯವಾಗಲಿಲ್ಲ. ನಂತರ ಎಚ್.ಡಿ.ಕುಮಾರಸ್ವಾಮಿ ಸರಕಾರ ಬಂದಾಗ 1 ಲಕ್ಷದವರೆಗಿನ ಸಾಲಮನ್ನಾ ಮಾಡಿದ್ದರು. ಆದರೆ ಈಗ ಅಸಲು ಮತ್ತು ಬಡ್ಡಿ ವಸೂಲಿಗೆ ಆದೇಶ ನೀಡಿರುವುದು ಖಂಡನೀಯ.

    ರೈತರು ಮೊದಲೇ ಒಂದೆಡೆ ಅತಿವೃಷ್ಟಿ, ಮತ್ತೊಂದೆಡೆ ಅನಾವೃಷ್ಟಿ ಎರಡರಿಂದಲೂ ತತ್ತರಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿಗಳು ಸುತ್ತೋಲೆ ಹಿಂಪಡೆದು ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ತೀವ್ರ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.

  • ಕೇರಳ ಕಸ ಕರ್ನಾಟಕಕ್ಕೆ ರವಾನೆ – 2 ಲಾರಿ ಜಪ್ತಿ

    ಕೇರಳ ಕಸ ಕರ್ನಾಟಕಕ್ಕೆ ರವಾನೆ – 2 ಲಾರಿ ಜಪ್ತಿ

    ಮಂಡ್ಯ: ಕೇರಳದ ಕಸ ಕರ್ನಾಟಕಕ್ಕೆ ರವಾನೆಯಾಗುತ್ತಿದ್ದು, ಇದರಿಂದ ಮೈಸೂರು ಮತ್ತು ಮಂಡ್ಯ ವ್ಯಾಪ್ತಿಯಲ್ಲಿ ಮಾಲಿನ್ಯ ಹೆಚ್ಚಾಗುತ್ತಿದೆ.

    ಸಕ್ಕರೆ ನಗರಿ ಮಂಡ್ಯಗೆ ಕೇರಳದಿಂದ ಅತೀ ಹೆಚ್ಚು ತ್ಯಾಜ್ಯ ರವಾನೆಯಾಗುತ್ತಿದೆ. ಮಂಡ್ಯ ಜಿಲ್ಲೆಯ ಆಲೆಮನೆಗಳಿಗೆ ಕೇರಳದ ತ್ಯಾಜ್ಯ ವಸ್ತುಗಳಾದ ರಬ್ಬರ್, ಬಟ್ಟೆ, ಪ್ಲಾಸ್ಟಿಕ್‍ಗಳು ಲಾರಿ ಮೂಲಕ ಬರುತ್ತಿದೆ. ಆಲೆಮನೆಗಳಲ್ಲಿ ಪರಿಸರಕ್ಕೆ ಮಾರಕವಾದ ತ್ಯಾಜ್ಯಗಳನ್ನು ಬಳಕೆ ಮಾಡುತ್ತಿರುವುದರಿಂದ ಹೆಚ್ಚಿನ ಮಾಲಿನ್ಯ ಉಂಟಾಗುತ್ತಿದೆ.

    ಈ ಕುರಿತು ಎಚ್ಚೆತ್ತಿರುವ ಪೊಲೀಸರು ಕೇರಳದ ತ್ಯಾಜ್ಯ ತುಂಬಿದ ಎರಡು ಲಾರಿಯನ್ನು ಜಿಲ್ಲೆಯ ಶ್ರೀರಂಗಪಟ್ಣದಲ್ಲಿ ಜಪ್ತಿ ಮಾಡಿದ್ದಾರೆ. ಕೇರಳದಿಂದ ತ್ಯಾಜ್ಯ ತುಂಬಿರುವ 25 ಕ್ಕೂ ಹೆಚ್ಚು ಲಾರಿಗಳು ಕರ್ನಾಟಕಕ್ಕೆ ಬಂದಿವೆ ಎನ್ನಲಾಗಿದೆ. ಶ್ರೀರಂಗಪಟ್ಟಣದ ಬಳಿಯ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಶ್ರೀರಂಗಪಟ್ಟಣದ ಟೌನ್ ರಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ ತ್ಯಾಜ್ಯ ತುಂಬಿದ ಲಾರಿಗಳನ್ನು ಜಪ್ತಿ ಮಾಡಿದ್ದಾರೆ.

    ಲಾರಿಯಲ್ಲಿ ತಂದ ತ್ಯಾಜ್ಯವನ್ನು ಮಂಡ್ಯ ಜಿಲ್ಲೆಯ ಆಲೆಮನೆಗಳಿಗೆ ಬಳಕೆ ಮಾಡಲಾಗುತ್ತಿದೆ ಎಂಬ ಮಾಹಿತಿ ಲಭಿಸಿದೆ. ಲಾರಿ ಚಾಲಕರಿಬ್ಬರನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಪರಿಸರ ಇಲಾಖೆ ಅಧಿಕಾರಿ ಅಶ್ವಿನಿ ಅವರು ಠಾಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂದ ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.