Tag: ಜನ ಸಂಘ

  • ದ.ಕ ಜಿಲ್ಲೆಯ ಬಿಜೆಪಿ ಭೀಷ್ಮ ಉರಿಮಜಲು ರಾಮ್ ಭಟ್ ನಿಧನ

    ದ.ಕ ಜಿಲ್ಲೆಯ ಬಿಜೆಪಿ ಭೀಷ್ಮ ಉರಿಮಜಲು ರಾಮ್ ಭಟ್ ನಿಧನ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಭೀಷ್ಮ, ಪುತ್ತೂರಿನ ಮಾಜಿ ಶಾಸಕ ಉರಿಮಜಲು ರಾಮ್ ಭಟ್(92) ನಿಧನರಾಗಿದ್ದಾರೆ.

    ವಯೋಸಹಜ ಅನಾರೋಗ್ಯಕ್ಕೆ ತುತ್ತಾಗಿ ರಾಮ್ ಭಟ್ ಅವರನ್ನು ಕೆಲ ತಿಂಗಳ ಹಿಂದೆ ಆಸ್ಪತ್ರೆಗೆ ದಾಖಲಿಸಿದ್ದರೂ ಮತ್ತೆ ಮನೆಗೆ ಕರೆ ತರಲಾಗಿತ್ತು. ಇಂದು ಮನೆಯಲ್ಲೇ ವಿಧಿವಶರಾಗಿದ್ದಾರೆ.

    ಜನಸಂಘದ ಪ್ರಭಾವಿ ನಾಯಕರಾಗಿ, ಬಿಜೆಪಿಯ ಮುಂಚೂಣಿ ನಾಯಕರಾಗಿದ್ದ ರಾಮ್ ಭಟ್ ಏಳು ಬಾರಿ‌ ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಎರಡು ಬಾರಿ ಶಾಸಕರಾಗಿದ್ದರು.

    1957ರಲ್ಲಿ ಜನಸಂಘದಿಂದ ಮೊದಲ ಸ್ಪರ್ಧೆ ಮಾಡಿದ್ದ ರಾಮ್ ಭಟ್ 2008ರಲ್ಲಿ ಶಿಷ್ಯೆ ಶಕುಂತಲಾ ಶೆಟ್ಟಿಗೆ ಬಿಜೆಪಿ ಟಿಕೆಟ್ ನಿರಾಕರಿಸಿದಾಗ ಬಂಡಾಯಕ್ಕೆ ಬೆಂಬಲ ನೀಡಿದ್ದರು. ಬಿಜೆಪಿ ವಿರುದ್ದವೇ ಸ್ವಾಭಿಮಾನಿ ವೇದಿಕೆ ಹುಟ್ಟು ಹಾಕಿದ್ದ ರಾಮ್ ಭಟ್ 2009ರಲ್ಲಿ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ವಿರುದ್ದವೇ ಸಂಸದ ಸ್ಥಾನಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ನಿಂತು ಸ್ಪರ್ಧಿಸಿದ್ದರು.

    ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಮತ್ತೆ ಬಿಜೆಪಿಗೆ ಬೆಂಬಲ ನೀಡಿದ್ದರು. 2019 ರಲ್ಲಿ ಸ್ವತಃ ಕರೆ ಮಾಡಿ ರಾಮ್ ಭಟ್ ಆರೋಗ್ಯವನ್ನು ನರೇಂದ್ರ ‌ಮೋದಿ ವಿಚಾರಿಸಿದ್ದರು.

    ಬಿಜೆಪಿಯ ಭೀಷ್ಮ ಎಂದೇ ಖ್ಯಾತರಾಗಿದ್ದ ಪುತ್ತೂರಿನ ಮಾಜಿ ಶಾಸಕರು, ಆತ್ಮೀಯರೂ ಆದ ಉರಿಮಜಲು ರಾಮಭಟ್‌ ಅವರು ದೈವಾಧೀನರಾದ ವಿಷಯ ತಿಳಿದು ಅತ್ಯಂತ ದುಃಖವಾಗಿದೆ. ಜನಸಂಘ, ನಂತರ ಬಿಜೆಪಿಯ ಪ್ರಭಾವಿ ನಾಯಕರಾಗಿ, ಶಾಸಕರಾಗಿ, ತಳಮಟ್ಟದಿಂದ ಸಂಘಟನೆ ಕಟ್ಟಿದ್ದರು. ದೇವರು ಅವರ ಆತ್ಮಕ್ಕೆ ಸದ್ಗತಿಯನ್ನು,ಕುಟುಂಬದವರಿಗೆ ದುಃಖ ಭರಿಸುವ ಶಕ್ತಿಯನ್ನು ನೀಡಲಿ ಎಂದು ಮಾಜಿ ಸಿಎಂ ಯಡಿಯೂರಪ್ಪ ಕಂಬನಿ ಮಿಡಿದಿದ್ದಾರೆ.