Tag: ಜನ್ ರಸೋಯಿ

  • ಒಂದು ರೂ.ಗೆ ಊಟ ನೀಡಿ ಬಡವರ ಪಾಲಿನ ಅನ್ನದಾತನಾದ ಗೌತಮ್ ಗಂಭೀರ್

    ಒಂದು ರೂ.ಗೆ ಊಟ ನೀಡಿ ಬಡವರ ಪಾಲಿನ ಅನ್ನದಾತನಾದ ಗೌತಮ್ ಗಂಭೀರ್

    ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ಆರಂಭಿಕ ಆಟಗಾರ, ಬಿಜೆಪಿ ಸಂಸದ ಗೌತಮ್ ಗಂಭೀರ್ ರಾಷ್ಟ್ರ ರಾಜಧಾನಿಯಲ್ಲಿ ಒಂದು ರೂಪಾಯಿಗೆ ಊಟ ನೀಡುವ “ಜನ್ ರಸೋಯಿ’ ಕ್ಯಾಂಟೀನ್ ಆರಂಭಿಸಿ ಬಡವರ ಪಾಲಿನ ಅನ್ನದಾತರಾಗಿ ಮೂಡಿಬಂದಿದ್ದಾರೆ.

    ಕ್ರಿಕೆಟ್‍ಗೆ ನಿವೃತ್ತಿ ನೀಡಿದ ಬಳಿಕ ರಾಜಕೀಯ ಕ್ಷೇತ್ರಕ್ಕೆ ಎಂಟ್ರಿಕೊಟ್ಟ ಗಂಭೀರ್ ಬಿಜೆಪಿಯಿಂದ ಸ್ಪರ್ಧಿಸಿ ಪೂರ್ವ ದೆಹಲಿಯ ಸಂಸದರಾಗಿ ಆಯ್ಕೆಯಾಗಿದ್ದರು. ಸಂಸದರಾದ ಬಳಿಕ ಅಲ್ಲಿನ ಬಡವರ ಹಸಿವನ್ನು ನೀಗಿಸುವ ಸಲುವಾಗಿ ಕಳೆದ ವರ್ಷ ಡಿಸೆಂಬರ್‍ನಲ್ಲಿ ಗಾಂಧಿ ನಗರ ಮಾರ್ಕೆಟ್ ಬಳಿ ಮೊದಲು ಒಂದು ಜನ್ ರಸೋಯಿ ಕ್ಯಾಂಟೀನ್ ಆರಂಭಿಸಿದ್ದರು. ಇದೀಗ ನ್ಯೂ ಅಶೋಕ್ ನಗರದಲ್ಲಿ 2ನೇ ಕ್ಯಾಂಟೀನ್ ತೆರೆಯುದರೊಂದಿಗೆ ಬಡವರ ಪಾಲಿಗೆ ಅನ್ನದಾಸೋಹಿಯಾಗಿದ್ದಾರೆ.

    ಗಾಂಧಿ ನಗರ ಮಾರ್ಕೆಟ್‍ನಲ್ಲಿರುವ ಕ್ಯಾಂಟೀನ್‍ನಲ್ಲಿ ಈಗಾಗಲೇ 50 ಸಾವಿರ ಜನರಿಗೆ ಊಟ ನೀಡಲಾಗಿದ್ದು, ನ್ಯೂ ಅಶೋಕ್ ನಗರದಲ್ಲಿ ಹೊಸದಾಗಿ ಆರಂಭವಾಗಿರುವ ಕ್ಯಾಂಟೀನ್‍ನಲ್ಲಿ ಏಕಕಾಲಕ್ಕೆ 50 ಸಾವಿರ ಜನರಿಗೆ ಊಟ ನೀಡುವ ಅಚ್ಚುಕಟ್ಟಾದ ವ್ಯವಸ್ಥೆ ರೂಪಿಸಲಾಗಿದೆ.

    ಕ್ಯಾಂಟೀನ್ ತೆರೆದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಗಂಭೀರ್, ಇದು ಬರೀ ಕ್ಯಾಂಟೀನ್ ಅಲ್ಲ. ಒಂದು ರೀತಿ ಚಳವಳಿ ಜನರ ಹಸಿವನ್ನು ನೀಗಿಸುವ ಹೋರಾಟವಾಗಿದ್ದು, ನಾನು ನಾಟಕದ ರಾಜಕೀಯ ನಾಯಕನಾಗದೆ ಬದಲಾವಣೆಯನ್ನು ತರುವ ಉದ್ದೇಶದಿಂದ ಜನರ ಸೇವೆಗಾಗಿ ಬಂದಿದ್ದೇನೆ, ಅದನ್ನೇ ಮಾಡುತ್ತಿದ್ದೇನೆ ಎಂದರು.

    ಗಂಭೀರ್ ಕ್ಯಾಂಟೀನ್‍ಗೆ ಸಂಸದೀಯ ಅನುದಾನವನ್ನು ಬಳಸದೇ ತಮ್ಮದೇ ಸ್ವಂತ ಹಣವನ್ನು ವ್ಯಯಿಸಿ ಕ್ಯಾಂಟೀನ್ ನಡೆಸುತ್ತಿದ್ದಾರೆ. ಇಲ್ಲಿನ ಆಹಾರವು ಪೌಷ್ಠಿಕತೆಯಿಂದ ಕೂಡಿದ್ದು, ನೈರ್ಮಲ್ಯಕ್ಕೆ ಹೆಚ್ಚು ಒತ್ತು ಕೊಡಲಾಗಿದೆ.

    ಈ ಹಿಂದೆ ತಮಿಳುನಾಡು, ಕೇರಳ, ಕರ್ನಾಟಕ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಈ ರೀತಿಯ ಕ್ಯಾಂಟೀನ್ ಆರಂಭವಾಗಿದ್ದು, ದೆಹಲಿಯಲ್ಲಿ ಜನ್ ರಸೋಯಿ ಕ್ಯಾಟಿಂನ್ ಆರಂಭ ಮಾಡುವ ಮೂಲಕ ಗಂಭೀರ್ ಜನನಾಯಕನಾಗಿ ಗುರುತಿಸಿಕೊಂಡಿದ್ದಾರೆ.