Tag: ಜನ್ಮದಿನ

  • ಠಾಣೆಯಲ್ಲೇ ಕೇಕ್ ಕತ್ತರಿಸಿ ಆರೋಪಿಯ ಹುಟ್ಟುಹಬ್ಬ ಆಚರಿಸಿದ ಪೊಲೀಸ್- ವಿಡಿಯೋ ವೈರಲ್

    ಠಾಣೆಯಲ್ಲೇ ಕೇಕ್ ಕತ್ತರಿಸಿ ಆರೋಪಿಯ ಹುಟ್ಟುಹಬ್ಬ ಆಚರಿಸಿದ ಪೊಲೀಸ್- ವಿಡಿಯೋ ವೈರಲ್

    ಮುಂಬೈ: ಠಾಣೆಯಲ್ಲೇ ಪೊಲೀಸರು ಆರೋಪಿಯ ಹುಟ್ಟುಹಬ್ಬ ಆಚರಿಸಿದ ಘಟನೆ ಮುಂಬೈನಲ್ಲಿ ನಡೆಸಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.

    ಅಯಾನ್ ಖಾನ್ ಪೊಲೀಸ್ ಠಾಣೆಯಲ್ಲಿ ಜನ್ಮದಿನ ಆಚರಿಸಿಕೊಂಡ ಆರೋಪಿ. ಜುಲೈ 23ರಂದು ಈ ಘಟನೆ ನಡೆದಿದ್ದು, ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಪೊಲೀಸ್ ಉಪ ಆಯುಕ್ತರು ತನಿಖೆಗೆ ಆದೇಶಿಸಿದ್ದಾರೆ.

    ಆರೋಪಿ ಅಯಾನ್ ಖಾನ್ ವಿರುದ್ಧ ಅಪಹರಣ ಹಾಗೂ ಹಲ್ಲೆ ಪ್ರಕರಣ ಸಂಬಂಧ ದೂರು ದಾಖಲಾಗಿದೆ. ಆದರೆ ಖಾನ್ ಜುಲೈ 23ರಂದು ಕೇಕ್ ಹಿಡಿದು ಠಾಣೆಗೆ ಬಂದ ಪೊಲೀಸರ ಜೊತೆಗೆ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾನೆ. ಈ ವೇಳೆ ಸಮವಸ್ತ್ರದಲ್ಲಿದ್ದ ಪೊಲೀಸ್ ಒಬ್ಬರು ಅಯಾನ್ ಖಾನ್‍ಗೆ ಕೇಕ್ ತಿನ್ನಿಸಿ ಶುಭಕೋರಿದ್ದಾರೆ.

    ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಪ್ರತಿಕ್ರಿಯೆ ನೀಡಿರುವ ಮುಂಬೈ ಠಾಣೆಯ ಪೊಲೀಸರು, ಅಯಾನ್ ಖಾನ್ ಆರೋಪಿಯಲ್ಲ. ಅವನು ನಿರಪರಾಧಿ ಎಂದು ಸಾಬೀತಾಗಿದ್ದು, ಠಾಣೆಗೆ ಮಾಹಿತಿದಾರನಾಗಿ ಕೆಲಸ ಮಾಡುತ್ತಿದ್ದಾನೆ ಎಂದು ಹೇಳಿದ್ದಾರೆ. ಆದರೆ ಘಟನೆ ಸತ್ಯಾಸತ್ಯತೆ ತಿಳಿಯುವ ಸಂಬಂಧ ಪೊಲೀಸ್ ಉಪ ಆಯುಕ್ತರು ತನಿಖೆಗೆ ಆದೇಶಿಸಿದ್ದಾರೆ. ಅಷ್ಟೇ ಅಲ್ಲದೆ ಪೊಲೀಸ್ ಠಾಣೆಯಲ್ಲಿ ಯಾರೊಬ್ಬರ ಹುಟ್ಟುಹಬ್ಬವನ್ನು ಆಚರಿಸುವಂತಿಲ್ಲ ಎಂದು ಆದೇಶ ಹೊರಡಿಸಿದ್ದಾರೆ.

     

    ಉತ್ತರ ಪ್ರದೇಶದ ನೈನಿ ಜೈಲಿನಲ್ಲಿ ಕಳೆದ ಜೂನ್ ತಿಂಗಳಲ್ಲಿ ಇಂತಹದ್ದೆ ಘಟನೆ ನಡೆದಿತ್ತು. ಉದ್ಯಮಿಯನ್ನು ಅಪಹರಿಸಿ ಚಿತ್ರಹಿಂಸೆ ನೀಡಿದ ಜೈಲು ಸೇರಿದ್ದ ಆರೋಪಿ ಅತಿಖ್ ಅಹ್ಮದ್‍ನನ್ನು ನೈನಿ ಜೈಲಿನಿಂದ ಗುಜರಾತ್‍ನ ಸಬರಮತಿ ಜೈಲಿಗೆ ವರ್ಗಾವಣೆ ಮಾಡಲಾಗಿತ್ತು. ಹೀಗಾಗಿ ಜೈಲಿನ ಎಲ್ಲ ಕೈದಿ ಹಾಗೂ ಪೊಲೀಸ್ ಸಿಬ್ಬಂದಿಗೆ ಆರೋಪಿ ಮದ್ಯದ ಪಾರ್ಟಿ ಆಯೋಜಿಸಿದ್ದ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

  • 49ನೇ ವಸಂತಕ್ಕೆ ಕಾಲಿಟ್ಟ ರಾಹುಲ್ ಗಾಂಧಿ- ಶುಭಕೋರಿದ ಗಣ್ಯರು

    49ನೇ ವಸಂತಕ್ಕೆ ಕಾಲಿಟ್ಟ ರಾಹುಲ್ ಗಾಂಧಿ- ಶುಭಕೋರಿದ ಗಣ್ಯರು

    – ಮಾಧ್ಯಮದವರಿಗೆ ಸ್ವೀಟ್ ನೀಡಿದ ‘ಕೈ’ ನಾಯಕ

    ನವದೆಹಲಿ: 49ನೇ ವಸಂತಕ್ಕೆ ಕಾಲಿಟ್ಟ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ, ಯುಪಿಎ ನಾಯಕಿ, ತಾಯಿ ಸೋನಿಯಾ ಗಾಂಧಿ ಸೇರಿದಂತೆ ಅನೇಕ ಗಣ್ಯರು ಶುಭಕೋರಿದ್ದಾರೆ.

    ಜನ್ಮದಿನದ ಸಂಭ್ರಮದಲ್ಲಿರುವ ರಾಹುಲ್ ಗಾಂಧಿ ಅವರು ಮಾಧ್ಯಮದವರಿಗೂ ಸಿಹಿ ವಿತರಣೆ ಮಾಡಿದರು. ಸ್ವತಃ ಕೈಯಲ್ಲಿ ಸ್ವೀಟ್ ಬಾಕ್ಸ್ ಹಿಡಿದು ತಗೆದುಕೊಳ್ಳಿ ಎಂದು ನಗುತ್ತಲೇ ಮಾಧ್ಯಮದವರಿಗೆ ನೀಡಿದರು.

    ರಾಹುಲ್ ಗಾಂಧಿ ಅವರಿಗೆ ಜನ್ಮದಿನದ ಶುಭಾಶಯಗಳು. ದೇವರು ನಿಮಗೆ ಆರೋಗ್ಯ ಹಾಗೂ ಸುದೀರ್ಘ ಜೀವನ ನೀಡಲಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿದ್ದಾರೆ. ಇದಕ್ಕೆ ರಾಹುಲ್ ಗಾಂಧಿ ಅವರು ಪ್ರತಿಕ್ರಿಯೆ ನೀಡಿದ್ದು, ಶುಭಕೋರಿದ ನಿಮಗೆ ಧನ್ಯವಾದಗಳು ಎಂದು ತಿಳಿಸಿದ್ದಾರೆ.

    ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಸಹೋದರಿ ಪ್ರಿಯಾಂಕ ಗಾಂಧಿ, ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನೇರವಾಗಿ ಭೇಟಿಯಾಗಿ ರಾಹುಲ್ ಗಾಂಧಿ ಅವರಿಗೆ ಶುಭಾಶಯ ತಿಳಿಸಿದ್ದಾರೆ.

    ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ರಾಹುಲ್ ಗಾಂಧಿ ಹುಟ್ಟುಹಬ್ಬದ ನಿಮಿತ್ತ ಕಚೇರಿಯಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ಬಳಿಕ ನಗರದ ಕೆ.ಸಿ.ಜನರಲ್ ಆಸ್ಪತ್ರೆಗೆ ತೆರಳಿ ರೋಗಿಗಳಿಗೆ ಹಣ್ಣು ಹಾಗೂ ತಿನಿಸು ವಿತರಿಸಿದ್ದಾರೆ.

    ಟ್ವೀಟ್ ಮೂಲಕ ಶುಭಾಶಯ ತಿಳಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು, ರಾಹುಲ್ ಗಾಂಧಿ ಅವರ ಜವಾಬ್ದಾರಿಗಳ ಬದ್ಧತೆ ಹಾಗೂ ಸಮಗ್ರ ಅಭಿವೃದ್ಧಿಯ ದೃಷ್ಟಿಕೋನ ಯಾವಾಗಲೂ ಪಕ್ಷಕ್ಕೆ ಬೆಂಬಲವಾಗಿರುತ್ತದೆ ಎಂದು ಹೇಳಿದ್ದಾರೆ.

  • ಅಭಿಮಾನಿಗಳಿಗೆ ಧನ್ಯವಾದ ತಿಳಿಸಿ ದಿಟ್ಟ ನಿರ್ಧಾರ ಬಿಚ್ಚಿಟ್ಟ ನಟ ಯಶ್

    ಅಭಿಮಾನಿಗಳಿಗೆ ಧನ್ಯವಾದ ತಿಳಿಸಿ ದಿಟ್ಟ ನಿರ್ಧಾರ ಬಿಚ್ಚಿಟ್ಟ ನಟ ಯಶ್

    ಬೆಂಗಳೂರು: ಸಿನಿಮಾ ರಂಗದಲ್ಲಿ ಅನೇಕ ದಾಖಲೆಗಳನ್ನು ಮುರಿದು, ದೇಶ ವಿದೇಶದಲ್ಲಿ ಭಾರೀ ಸದ್ದು ಮಾಡಿದ ಕೆಜಿಎಫ್ ಸಿನಿಮಾ ನಿರೀಕ್ಷೆಗೂ ಮೀರಿ ಯಶಸ್ಸು ಕಂಡಿದೆ. ಹೀಗಾಗಿ ಲೈವ್ ವಿಡಿಯೋ ಮೂಲಕ ಅಭಿಮಾನಿಗಳಿಗೆ ನಟ ರಾಕಿಂಗ್ ಸ್ಟಾರ್ ಯಶ್ ಎಲ್ಲರಿಗೂ ಧನ್ಯವಾದ ತಿಳಿಸಿ ದಿಟ್ಟ ನಿರ್ಧಾರ ಬಿಚ್ಚಿಟ್ಟಿದ್ದಾರೆ.

    ವಿಡಿಯೋವನ್ನು ಟ್ವೀಟ್ ಮಾಡಿರುವ ಯಶ್, ಜನವರಿ 8ರಂದು ನನ್ನ ಹುಟ್ಟುಹಬ್ಬ. ಕಳೆದ ಕೆಲವು ವರ್ಷಗಳಿಂದ ಅಭಿಮಾನಿಗಳು ಅದ್ಧೂರಿಯಾಗಿ ಆಚರಿಸುತ್ತಾ ಬಂದಿದ್ದಾರೆ. ಆದರೆ ಈ ವರ್ಷ ಜನ್ಮದಿನವನ್ನು ಆಚರಿಸುತ್ತಿಲ್ಲ. ಇದಕ್ಕೆ ಅಭಿಮಾನಿಗಳು ಸಹಕಾರ ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

    ನಮ್ಮ ಕುಟುಂಬದ ಹಿರಿಯರಾದ ರೆಬಲ್ ಸ್ಟಾರ್ ಅಂಬರೀಷ್ ಅವರು ಕೆಲ ದಿನಗಳ ಹಿಂದಷ್ಟೇ ನಮ್ಮನ್ನ ಅಗಲಿದ್ದಾರೆ. ಅವರಿಗೆ ಗೌರವ ಸೂಚಿಸುವ ಉದ್ದೇಶದಿಂದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ. ಯಾರು ಅನ್ಯತಾ ಭಾವಿಸಬೇಡಿ ಎಂದು ಕೇಳಿಕೊಂಡಿದ್ದಾರೆ.

    ಯಶೋ ಯಾತ್ರೆ ಮೂಲಕ ನಿಮ್ಮ ಗ್ರಾಮಗಳಿಗೆ, ನಗರಗಳಿಗೆ ಭೇಟಿ ನೀಡುತ್ತೇವೆ. ಅಲ್ಲಿಯವರೆಗೂ ಸಹಕಾರ ನೀಡಿ ಎಂದ ಅವರು, ನನ್ನ ಅಭಿಪ್ರಾಯ ಹಾಗೂ ಭಾವನೆಯನ್ನು ಗೌರವಿಸುತ್ತೀರಾ ಎಂದು ನಂಬಿರುವೆ. ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ಈ ವರ್ಷದಲ್ಲಿ ಸಾಧನೆಗಳು ನಿಮ್ಮದಾಗಲಿ ಎಂದು ಹಾರೈಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಿಷ ಬೆರೆಸಿದ್ದ ಪ್ರಸಾದ ಸೇವಿಸಿ ಹುಟ್ಟುಹಬ್ಬದಂದೇ ಪ್ರಾಣಬಿಟ್ಟ ಬಾಲಕ!

    ವಿಷ ಬೆರೆಸಿದ್ದ ಪ್ರಸಾದ ಸೇವಿಸಿ ಹುಟ್ಟುಹಬ್ಬದಂದೇ ಪ್ರಾಣಬಿಟ್ಟ ಬಾಲಕ!

    ಚಾಮರಾಜನಗರ: ಹುಟ್ಟುಹಬ್ಬ ದಿನದಂದು ಸುಳ್ವಾಡಿ ಮಾರಮ್ಮ ದೇವಿಯ ದರ್ಶನ ಪಡೆಯಲು ಹೋಗಿದ್ದ ಪುಟ್ಟ ಬಾಲಕನೊಬ್ಬ ವಿಷ ಬೆರೆಸಿದ್ದ ಪ್ರಸಾದ ಸೇವಿಸಿ ಮೃತಪಟ್ಟಿದ್ದಾನೆ.

    ಬಿದರಿಹಳ್ಳಿಯ ಪ್ರೀತಂ (12) ಮೃತ ಬಾಲಕ. ಕೆಲವೊಬ್ಬರು ತಮ್ಮ ಜನ್ಮದಿನದಂದು ಕುಟುಂಬ ಸಮೇತ, ಇಲ್ಲವೇ ಒಬ್ಬರೇ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿ ಆರೋಗ್ಯ, ಆಯಸ್ಸು ನೀಡು ಎಂದು ದೇವರಲ್ಲಿ ಬೇಡಿಕೊಳ್ಳುತ್ತಾರೆ. ಹಾಗೆಯೇ ನಿನ್ನೆಯಷ್ಟೇ 12ನೇ ವರ್ಷಕ್ಕೆ ಕಾಲಿಟ್ಟಿದ್ದ ಪ್ರೀತಂ ಕೂಡ ಮಾರಮ್ಮ ದೇವಿ ದೇವಸ್ಥಾನಕ್ಕೆ ಹೋಗಿದ್ದನು. ಜನ್ಮದಿನ ಆಚರಿಸಿಕೊಂಡು ಖುಷಿ ಖುಷಿಯಾಗಿದ್ದ ಬಾಲಕ, ದುಷ್ಕರ್ಮಿಗಳ ಕೃತ್ಯಕ್ಕೆ ಬಲಿಯಾಗಿಬಿಟ್ಟ. ದೇವರ ಪ್ರಸಾದ ಬಾಲಕನ ಜೀವಕ್ಕೆ ಕುತ್ತು ತಂದುಬಿಟ್ಟಿತು.

    ದೇವಿ ದರ್ಶನಕ್ಕೆ ಹೋಗಿದ್ದ ಪ್ರೀತಂಗೆ ಗೋಪುರ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ತಯಾರಿಸಿದ್ದ ಪ್ರಸಾದ (ತರಕಾರಿ ಬಾತ್)ವನ್ನು ಸೇವಿಸಿದ್ದಾನೆ. ವಾಸನೆ ಬಂದಿದ್ದರೂ ಪುಟ್ಟ ಬಾಲಕ ಅದನ್ನು ಎಸೆಯಬಾರದು ಅಂತ ಸೇವಿಸಿದ್ದಾನೆ. ಪರಿಣಾಮ ಆತನಿಗೆ ವಾಂತಿ ಭೇದಿ ಕಾಣಿಸಿಕೊಂಡಿದ್ದರಿಂದ ತಕ್ಷಣವೇ ಆಸ್ಪತ್ರೆಗೆ ದಾಖಲಿಸಿಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಪ್ರೀತಂ ಸಾವನ್ನಪ್ಪಿದ್ದಾನೆ.

    ಮೃತ ದೇಹವನ್ನು ಆಸ್ಪತ್ರೆಯಿಂದ ಹೊರಗೆ ತರುತ್ತಿದ್ದಂತೆಯೇ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಮಗ ಸಾವು ಕಣ್ಣಾರೆ ಕಂಡ ತಾಯಿ ತಂದೆ ಬಿಕ್ಕಳಿಸಿ ಬಿಕ್ಕಳಿಸಿ ಅತ್ತರು. ಜನ್ಮ ದಿನದಂದೇ ಪ್ರಾಣ ಬಿಟ್ಟೆಲ್ಲೋ ಅಂತಾ ಪ್ರೀತಂ ಮೃತದೇಹ ಹಿಡಿದು ತಾಯಿ ಅಳುತ್ತಿದ್ದ ದೃಶ್ಯ ಸ್ಥಳದಲ್ಲಿ ನೆರದಿದ್ದ ಜನರ ಕಣ್ಣಲ್ಲಿ ನೀರು ತರಿಸುವಂತಿತ್ತು.

    ಪ್ರೀತಂ ತಾಯಿಯ ಕಥೆ ಒಂದು ರೀತಿಯಾದರೆ 15 ವರ್ಷ ಮಕ್ಕಳಾಗದೆ ಓಂ ಶಕ್ತಿಗೆ ಹರಕೆ ಹೊತ್ತು ಪಡೆದುಕೊಂಡ ಮಗುವನ್ನು ಕಳೆದುಕೊಂಡ ತಾಯಿಯ ದುಃಖ ಮುಗಿಲು ಮುಟ್ಟಿತ್ತು. ಶಾಂತರಾಜು ದಂಪತಿಯ ಮಗನ ಸಾವಿಗೆ ಕಣ್ಣೀರಿಟ್ಟಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಅಭಿಮಾನಿಯ ಜನ್ಮದಿನ ಆಚರಿಸಿದ ಡಿ ಬಾಸ್

    ಅಭಿಮಾನಿಯ ಜನ್ಮದಿನ ಆಚರಿಸಿದ ಡಿ ಬಾಸ್

    ಬೆಂಗಳೂರು: ಬಾಲಕಿಯ ಚಿಕಿತ್ಸೆಗೆ ಹಣ ನೀಡಿದ್ದಷ್ಟೇ ಅಲ್ಲದೆ ಖುದ್ದಾಗಿ ಭೇಟಿಯಾಗಿ ಆಕೆಗೆ ಚಾಲೆಂಚಿಂಗ್ ಸ್ಟಾರ್ ದರ್ಶನ್ ಜನ್ಮದಿನದ ಶುಭಾಶಯ ತಿಳಿಸಿದ್ದಾರೆ.

    ಇಂದು ಪೂರ್ವಿಕಾ ಹುಟ್ಟುಹಬ್ಬ ದಿನ. ಹೀಗಾಗಿ ಆಕೆಯನ್ನು ಭೇಟಿ ಮಾಡಿದ ದರ್ಶನ್ ಕೇಕ್ ಕತ್ತರಿಸಿ ಜನ್ಮದಿನದ ಶುಭಾಶಯ ತಿಳಿಸಿದರು. ಖುಷಿ ಖುಷಿಯಾಗಿ ಬಾಲಕಿ ತನ್ನ ನೆಚ್ಚಿನ ನಾಯಕನ ಜೊತೆಗೆ ಕೆಲಹೊತ್ತು ಕಾಲ ಕಳೆದಳು.

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಯಾಗಿರುವ ಪೂರ್ವಿಕಾ ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದಾಳೆ. ‘ಯಜಮಾನ’ ಸಿನಿಮಾ ಶೂಟಿಂಗ್ ವೇಳೆ ಪೂರ್ವಿಕಾ ದರ್ಶನ್ ಅವರನ್ನು ಭೇಟಿಯಾಗಿದ್ದಳು. ಈ ವೇಳೆ ಆಕೆಯ ಚಿಕಿತ್ಸೆ ನೆರವು ನೀಡುವ ಭರವಸೆಯನ್ನು ಡಿ ಬಾಸ್ ಕೊಟ್ಟಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಕರ್ನಾಟಕದ ಬಾಲಕಿಗೆ ಮೋದಿಯಿಂದ ಹುಟ್ಟುಹಬ್ಬದ ಶುಭಾಶಯ

    ಕರ್ನಾಟಕದ ಬಾಲಕಿಗೆ ಮೋದಿಯಿಂದ ಹುಟ್ಟುಹಬ್ಬದ ಶುಭಾಶಯ

    ನವದೆಹಲಿ: ಹುಟ್ಟುಹುಬ್ಬದ ಸಂಭ್ರಮದಲ್ಲಿರುವ ಕರ್ನಾಟಕದ ಬಾಲಕಿಗೆ ಪ್ರಧಾನಿ ನರೇಂದ್ರ ಮೋದಿ ಶುಭಾಶಯ ಕೋರಿದ್ದಾರೆ.

    “ಇಂದು ನನ್ನ ಮಗಳು ಬೆಳಕು ಜನ್ಮದಿನ. ಹೀಗಾಗಿ ನಿನ್ನ ಜನ್ಮದಿನಕ್ಕೆ ಏನು ಉಡುಗೊರೆ ಬೇಕು ಅಂತಾ ಕೇಳಿದ್ದೆ. ಅವಳು ತಕ್ಷಣವೇ ನನಗೆ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋ ಇರುವ ಕೇಕ್ ಬೇಕೆಂದು ಬೇಡಿಕೆ ಇಟ್ಟಿದ್ದಳು. ಮೋದಿ ಅವರು ಕಳ್ಳರು. ಮಕ್ಕಳ ಮನಸ್ಸು ಕಳ್ಳರು” ಎಂದು ಬರೆದು ಬಾಲಕಿಯ ತಂದೆ ಸೆಪ್ಟೆಂಬರ್ 30 ರಂದು ಮಹೇಶ್ ವಿಕ್ರಮ್ ಹೆಗ್ಡೆ ಟ್ವೀಟ್ ಮಾಡಿದ್ದರು.

    ಮಹೇಶ್ ವಿಕ್ರಮ್ ಹೆಗ್ಡೆ ಟ್ವೀಟ್‍ಗೆ ಅಕ್ಟೋಬರ್ 2 ರಂದು ಪ್ರತಿಕ್ರಿಯೆ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಬೆಳಕು ಬಾಲಕಿಗೆ ಜನ್ಮದಿನದ ಶುಭಾಶಯ ತಿಳಿಸಿ. ಬಾಲಕಿಗೆ ಸಂತೋಷ ಹಾಗೂ ಆರೋಗ್ಯ ಸಿಗಲಿ ಅಂತಾ ಪ್ರಾರ್ಥಿಸುತ್ತೇನೆ ಎಂದು ಬರೆದು ಟ್ವೀಟ್ ಮೂಲಕ ಶುಭಕೋರಿದ್ದಾರೆ.

    ಮಹೇಶ್ ಹೆಗ್ಡೆ ಅವರ ಟ್ವೀಟ್ ಅನ್ನು 6 ಸಾವಿರಕ್ಕೂ ಹೆಚ್ಚು ಜನ ಲೈಕ್ ಮಾಡಿದ್ದು, 1800ಕ್ಕೂ ಅಧಿಕ ಮಂದಿ ರಿ ಟ್ವೀಟ್ ಮಾಡಿದ್ದರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 10 ಕೋಟಿ ರೂ. ಬೆಲೆಯ ನಾಯಿಯ ಅದ್ಧೂರಿ ಜನ್ಮದಿನಾಚರಣೆ!

    10 ಕೋಟಿ ರೂ. ಬೆಲೆಯ ನಾಯಿಯ ಅದ್ಧೂರಿ ಜನ್ಮದಿನಾಚರಣೆ!

    ಬೆಂಗಳೂರು: ಇತ್ತೀಚೆಗೆ ಪ್ರಾಣಿಗಳ ಜನ್ಮದಿನ ಆಚರಣೆ ಭಾರೀ ಸದ್ದು ಮಾಡುತ್ತಿದೆ. ಸಿಲಿಕಾನ್ ಸಿಟಿಯಲ್ಲಿ ಇಂತಹದ್ದೇ ಅಪರೂಪದ ಹಾಗೂ ಅದ್ಧೂರಿಯಾಗಿ 10 ಕೋಟಿ ಬೆಲೆಯ ನಾಯಿಯೊಂದರ ಹುಟ್ಟುಹಬ್ಬವನ್ನು ಆಚರಿಸಲಾಗಿದೆ.

    ಮರ್ಫೀ ಹೆಸರಿನ ನಾಯಿಯ ಜನ್ಮದಿನವನ್ನು ಅದರ ಮಾಲೀಕ ಸತೀಶ್ ಅದ್ಧೂರಿಯಾಗಿ ಆಚರಿಸಿದ್ದಾರೆ. ಇಂದು ನಗರದ ನ್ಯೂ ಬೇಲ್ ರೋಡ್‍ನ ಖಾಸಗಿ ಹೋಟೆಲ್‍ನಲ್ಲಿ ಮರ್ಫೀಗೆ ಟೋಪಿ ಹಾಕಿ, ಟೇಬಲ್ ಅಲಂಕಾರ ಮಾಡಿ ಕೇಕ್ ಕತ್ತರಿಸಿ ಸತೀಶ್ ಹಾಗೂ ಸಂಬಂಧಿಕರು ಸಂಭ್ರಮಿಸಿದರು.

    ಮರ್ಫೀ ವಿದೇಶಿ ಶ್ವಾನವಾಗಿದ್ದು, ಟಿಬೇಟಿಯನ್ ಮ್ಯಾಸ್ಟಿಫ್ ತಳಿಗೆ ಸೇರಿದೆ. ಇದರ ಬೆಲೆ ಬರೋಬ್ಬರಿ 10 ಕೋಟಿ ರೂ., ಸತೀಶ್ ಕಳೆದ ವರ್ಷ ಚೀನಾದ ಬೀಜಿಂಗ್‍ನಿಂದ ಆಮದು ಮಾಡಿಕೊಂಡಿದ್ದರು. ಹೀಗಾಗಿ ಮರ್ಫೀ ಮೊದಲ ವರ್ಷದ ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸಿ, ಸಂತಸ ಪಟ್ಟಿದ್ದಾರೆ.

  • ರಾಹುಲ್ ಗಾಂಧಿಗೆ ಜನ್ಮದಿನದ ಶುಭ ಕೋರಿದ ಪ್ರಧಾನಿ ಮೋದಿ

    ರಾಹುಲ್ ಗಾಂಧಿಗೆ ಜನ್ಮದಿನದ ಶುಭ ಕೋರಿದ ಪ್ರಧಾನಿ ಮೋದಿ

    ನವದೆಹಲಿ: 48ನೇ ಜನ್ಮದಿನ ಆಚರಿಸಿಕೊಳ್ಳುತ್ತಿರುವ ಎಐಸಿಸಿ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಟ್ವಿಟ್ಟರ್ ನಲ್ಲಿ ಕಳೆದ ಬಾರಿಯಂತೆ ಶುಭಕೋರಿದ್ದಾರೆ.

    ರಾಹುಲ್ ಗಾಂಧಿ ಅವರಿಗೆ ಜನ್ಮದಿನದ ಶುಭಾಶಯಗಳು. ಅವರಿಗೆ ದೀರ್ಘ ಆಯಸ್ಸು ಹಾಗೂ ಆರೋಗ್ಯ ಸಿಗಲೆಂದು ನಾನು ಪ್ರಾರ್ಥಿಸುತ್ತೇನೆ ಎಂದು ಬರೆದು ಮೋದಿ ಅವರು ಟ್ವೀಟ್ ಮಾಡಿದ್ದಾರೆ.

    2017 ರಲ್ಲಿಯೂ ನರೇಂದ್ರ ಮೋದಿ ಅವರು, ಇದೇ ಸಂದೇಶವನ್ನು ಬರೆದು ಟ್ವೀಟ್ ಮಾಡಿದ್ದರು. ಎಐಸಿಸಿ ರಾಷ್ಟ್ರಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ರಾಹುಲ್ ಗಾಂಧಿ ಅವರು ಮೊದಲ ಬಾರಿಯ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ.

    ಅರವಿಂದ್ ಕೇಜ್ರಿವಾಲ್ ಮತ್ತು ಆಮ್ ಆದ್ಮಿ ಪಾರ್ಟಿ (ಎಎಪಿ) ಮುಖಂಡರು ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಅವರ ಮನೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದನ್ನೇ ಗುರಿಯಾಗಿಸಿಕೊಂಡ ರಾಹುಲ್ ಗಾಂಧಿ, ಪ್ರಧಾನ ಮಂತ್ರಿಗಳು ಜನರನ್ನು ಅನಾಗರೀಕತೆ ಕಡೆಗೆ ಕರೆದೊಯ್ಯುತ್ತಿದ್ದಾರೆ. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ನರೇಂದ್ರ ಮೋದಿ ಅವರ ನಾಟಕೀಯ ಬೆಳವಣಿಗೆಯಿಂದ ದೆಹಲಿಯ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಬರೆದು ಟ್ವೀಟ್ ಮಾಡುವ ಮೂಲಕ ವಾಗ್ದಾಳಿ ನಡೆಸಿದ್ದರು.

    ಈ ಬೆಳವಣಿಗೆಯ ನಂತರದ ಕೆಲವೇ ಗಂಟೆಗಳಲ್ಲಿ ಪ್ರಧಾನಿ ಶುಭಕೋರಿದ್ದಾರೆ. ಕಳೆದ ವರ್ಷ ರಾಹುಲ್ ಗಾಂಧಿ ಅವರು ತಮ್ಮ ಜನ್ಮದಿನವನ್ನು ಇಟಲಿಯಲ್ಲಿರುವ ತಮ್ಮ 93 ವರ್ಷದ ಅಜ್ಜಿಯೊಂದಿಗೆ ಆಚರಿಸಿಕೊಂಡಿದ್ದರು.

  • ಗೌರಿ ಲಂಕೇಶ್ ಜನ್ಮದಿನ: ಬೆಂಗ್ಳೂರಿನಲ್ಲಿ  ಇಂದು ಗೌರಿದಿನ ಆಯೋಜನೆ

    ಗೌರಿ ಲಂಕೇಶ್ ಜನ್ಮದಿನ: ಬೆಂಗ್ಳೂರಿನಲ್ಲಿ ಇಂದು ಗೌರಿದಿನ ಆಯೋಜನೆ

    ಬೆಂಗಳೂರು: ಹಂತಕರ ಗುಂಡಿಗೆ ಬಲಿಯಾದ ಪತ್ರಕರ್ತೆ ಗೌರಿ ಲಂಕೇಶ್‍ಗೆ ಇಂದು ಜನ್ಮದಿನ. ಹೀಗಾಗಿ ಇಂದು ನಗರದ ಟೌನ್‍ಹಾಲ್‍ನಲ್ಲಿ `ಗೌರಿ ದಿನ’ ಆಯೋಜನೆ ಮಾಡಲಾಗಿದೆ.

    ಗೌರಿ ಹತ್ಯೆಗೆ ನ್ಯಾಯ ಕೇಳಿ ‘ಗೌರಿ ಸ್ಮಾರಕ’ ಇಂದು ಬೀದಿಗಿಳಿದು ಹೋರಾಟ ಮಾಡಲಿದ್ದು, ಈ ಮೂಲಕ `ನಾನು ಗೌರಿ’ ಅನ್ನೋ ಹೋರಾಟವನ್ನ ಮತ್ತೆ ಶುರುಮಾಡುತ್ತಿದ್ದಾರೆ. ಈ ಕಾರ್ಯಕ್ರಮಕ್ಕೆ ಜಿಗ್ನೇಶ್ ಮೇವಾನಿ, ಕನ್ನಯ್ಯ ಕುಮಾರ್, ದೊರೆಸ್ವಾಮಿ, ಪ್ರಕಾಶ್ ರೈ ಸೇರಿದಂತೆ ಸಾಕಷ್ಟು ಸಾಹಿತಿಗಳು ಆಗಮಿಸಲಿದ್ದಾರೆ. ಇಂದು ಗೌರಿ ಲಂಕೇಶ್ ಕುರಿತಾದ ಪುಸ್ತಕ ಕೂಡ ಬಿಡುಗಡೆಯಾಗಲಿದೆ.

    ಸೆಪ್ಟೆಂಬರ್ 5 2017 ಮಂಗಳವಾರ ರಾತ್ರಿ 7.30 ರ ಸುಮಾರಿಗೆ ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಅವರ ಮನೆಯ ಮುಂಭಾಗವೇ ಮೂವರು ದುಷ್ಕರ್ಮಿಗಳು ಬೈಕಿನಲ್ಲಿ ಬಂದು ಗುಂಡಿಟ್ಟು ಹತ್ಯೆ ಮಾಡಿದ್ದರು.

    ತನಿಖೆಯ ನಂತರ ಎಸ್‍ಐಟಿ ಗೌರಿ ಹಂತಕರ ರೇಖಾಚಿತ್ರ ಮತ್ತು ವೀಡಿಯೊವನ್ನು ಬಿಡುಗಡೆ ಮಾಡಿದ್ದು, ಸಾರ್ವಜನಿಕರಿಗೆ ಹಂತಕರ ಬಗ್ಗೆ ಸುಳಿವು ನೀಡುವಂತೆ ಮನವಿ ಕೂಡ ಮಾಡಿಕೊಂಡಿದ್ದರು. ಮೂವರು ಆರೋಪಿಗಳಲ್ಲಿ ಇಬ್ಬರು ನೋಡುವುದಕ್ಕೆ ಒಂದೇ ತರಹನಾಗಿ ಕಾಣುತ್ತಿದ್ದರು. ಆರೋಪಿಗಳು ನಗರದಲ್ಲಿ ಮೂರು ವಾರಗಳ ಕಾಲ ಉಳಿದುಕೊಂಡಿದ್ದರು ಎಂದು ಎಸ್‍ಐಟಿ ತಿಳಿಸಿತ್ತು.

    ಪ್ರಕರಣದ ಕುರಿತು ಮತ್ತಷ್ಟು ಸುಳಿವನ್ನು ಪಡೆಯುವ ಸಲುವಾಗಿ ವಿಧಿ ವಿಜ್ಞಾನ ಪ್ರಯೋಗಾಲಯದ ತಂಡ ಮತ್ತೆ ಕಾಟ್ರೇಜ್‍ಗಳ ಮರು ಪರೀಕ್ಷೆಯನ್ನು ನಡೆಸುತ್ತಿದ್ದು, ತನಿಖಾ ತಂಡ ಹಂತಕರನ್ನು ಹುಡುಕುವ ಕಾರ್ಯಾಚರಣೆ ಮಾಡುತ್ತಿದೆ. ಇದನ್ನು ಓದಿ: ಗೌರಿ ಲಂಕೇಶ್ ಹತ್ಯೆ ತನಿಖೆ ಈಗ ಎಲ್ಲಿಯವರೆಗೆ ಬಂದಿದೆ?