Tag: ಜನೌಷಧಿ ಕೇಂದ್ರ

  • ಜನೌಷಧಿ ಕೇಂದ್ರಗಳನ್ನು ಮುಚ್ಚಿಸಿಲ್ಲ, ಸರ್ಕಾರಿ ಆಸ್ಪತ್ರೆ ಆವರಣಗಳಲ್ಲಿ ಮಾತ್ರ ನಿರ್ಬಂಧಿಸಲು ನಿರ್ಧಾರ: ದಿನೇಶ್ ಗುಂಡೂರಾವ್

    ಜನೌಷಧಿ ಕೇಂದ್ರಗಳನ್ನು ಮುಚ್ಚಿಸಿಲ್ಲ, ಸರ್ಕಾರಿ ಆಸ್ಪತ್ರೆ ಆವರಣಗಳಲ್ಲಿ ಮಾತ್ರ ನಿರ್ಬಂಧಿಸಲು ನಿರ್ಧಾರ: ದಿನೇಶ್ ಗುಂಡೂರಾವ್

    – ಕೇಂದ್ರ ಆರೋಗ್ಯ ಸಚಿವ ಜೆ.ಪಿ ನಡ್ಡಾಗೆ ಪತ್ರದ ಮುಖೇನ ಸ್ಪಷ್ಟನೆ

    ಬೆಂಗಳೂರು: ರಾಜ್ಯದಲ್ಲಿ ಜನೌಷಧಿ ಕೇಂದ್ರಗಳನ್ನು (Janaushadhi Center) ಮುಚ್ಚಿಸಿಲ್ಲ. ಸರ್ಕಾರಿ ಆಸ್ಪತ್ರೆ ಆವರಣಗಳಲ್ಲಿ ಮಾತ್ರ ನಿರ್ಬಂಧಿಸಲು ನಿರ್ಧರಿಸಲಾಗಿದೆ ಎಂದು ಸಚಿವ ದಿನೇಶ್‌ ಗುಂಡೂರಾವ್‌ (Dinesh Gundu Rao) ಸ್ಪಷ್ಟಪಡಿಸಿದ್ದಾರೆ.

    ಜನೌಷಧಿ ಕೇಂದ್ರಗಳನ್ನು ತೆರವುಗೊಳಿಸುವ ರಾಜ್ಯ ಸರ್ಕಾರದ ನಿರ್ಧಾರ ಕುರಿತು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದ ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಅವರಿಗೆ ಸ್ಪಷ್ಟನೆ ನೀಡಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ರಾಜ್ಯದಲ್ಲಿ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಮಾತ್ರ ಜನೌಷಧಿ ಕೇಂದ್ರಗಳನ್ನ ನಿರ್ಬಂಧಿಸಲು ನಿರ್ಧರಿಸಲಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಜನಸಾಮಾನ್ಯರಿಗೆ ಉಚಿತ ಔಷಧಿಗಳನ್ನು ನಿರಾಕರಿಸುವ ಸಾಧ್ಯತೆಗಳನ್ನು ತಡೆಯುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ದೇಶದಲ್ಲಿಯೇ ಕರ್ನಾಟಕ ಜನೌಷಧಿ ಕೇಂದ್ರಗಳನ್ನು ಹೊಂದಿರುವ ರಾಜ್ಯಗಳಲ್ಲಿ ಅಗ್ರಸ್ಥಾನದಲ್ಲಿದೆ. ರಾಜ್ಯದಲ್ಲಿ 1,417 ಕ್ಕೂ ಹೆಚ್ಚು ಜನೌಷಧಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಕರ್ನಾಟಕ ದೇಶದಲ್ಲಿಯೇ ಅಗ್ರಸ್ಥಾನದಲ್ಲಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಜನೌಷಧಿ ಕೇಂದ್ರಗಳನ್ನು ಮುಚ್ಚುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಹೈಕೋರ್ಟ್ ತಾತ್ಕಾಲಿಕ ತಡೆ

    ಸಾರ್ವಜನಿಕರಿಗೆ ಕೈಗೆಟುಕುವ ದರದಲ್ಲಿ ಗುಣಮಟ್ಟದ ಔಷಧಿಗಳು ಲಭ್ಯವಾಗುವಂತೆ ಮಾಡುವ ನಿಮ್ಮ ಕಾಳಜಿಯನ್ನು ನಾನು ಶ್ಲಾಘಿಸುತ್ತೇನೆ.‌ ಕರ್ನಾಟಕ ಸರ್ಕಾರವು ಎಲ್ಲಾ ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಅಗತ್ಯ ಔಷಧಗಳ ಪಟ್ಟಿಯ (EML) ಪ್ರಕಾರ ಎಲ್ಲಾ ಅಗತ್ಯ ಔಷಧಿಗಳನ್ನು ಉಚಿತವಾಗಿ ಪೂರೈಸುತ್ತಿದೆ ಎಂಬುದನ್ನು ನಾನು ಗೌರವಪೂರ್ವಕವಾಗಿ ಸ್ಪಷ್ಟಪಡಿಸಲು ಬಯಸುತ್ತೇನೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

    ಸಾರ್ವಜನಿಕ ಆರೋಗ್ಯ ಸೇವೆಗಳನ್ನು ಸರಳಗೊಳಿಸಲು ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಉಚಿತವಾಗಿ ಸಿಗುವ ಔಷಧಿಗಳನ್ನು ನಿರಾಕರಿಸುವ ಯಾವುದೇ ಸಾಧ್ಯತೆಯನ್ನು ತಪ್ಪಿಸಲು, ರಾಜ್ಯ ಸರ್ಕಾರವು ಸರ್ಕಾರಿ ವೈದ್ಯರು ಸರ್ಕಾರಿ ಆಸ್ಪತ್ರೆಗಳಿಗೆ ಪೂರೈಸುವ ಔಷಧಿಗಳಿಗೆ ಮಾತ್ರ ಪ್ರಿಸ್ಕ್ರಿಪ್ಷನ್‌ಗಳನ್ನು ಸೀಮಿತಗೊಳಿಸುವಂತೆ ನಿರ್ದೇಶಿಸಿದೆ. ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ರೋಗಿಗಳನ್ನು ಔಷಧಿಗಳನ್ನು ಖರೀದಿಸಲು ವಾಣಿಜ್ಯ ಮಳಿಗೆಗಳಿಗೆ ಕಳುಹಿಸುವ ಮತ್ತು ಅವರಿಗೆ ಉಚಿತವಾಗಿ ಪೂರೈಸಲಾಗುವ ಔಷಧಿಗಳನ್ನು ನಿರಾಕರಿಸುವ ಯಾವುದೇ ಸಾಧ್ಯತೆಗಳನ್ನು ತಡೆಯುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಔಷಧಾಲಯಗಳಿಂದ ಔಷಧಿಗಳನ್ನು ಖರೀದಿಸಲು ರೋಗಿಗಳು ಭರಿಸುವ ವೆಚ್ಚವನ್ನು ಕಡಿಮೆ ಮಾಡುವುದು ಸರ್ಕಾರದ ನಿರ್ಧಾರವಾಗಿದೆ. ಇದು ಸರ್ಕಾರಿ ಆಸ್ಪತ್ರೆಗಳಲ್ಲಿ ಆರೋಗ್ಯ ಸೇವೆಗಳನ್ನು ಪಡೆಯುವ ಬಡ ಮತ್ತು ಹಿಂದುಳಿದ ರೋಗಿಗಳಿಗೆ ಅನುಕೂಲಕರವಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧ ಮಾರಾಟ ಸರಿಯಲ್ಲ – ಜನೌಷಧಿ ಕೇಂದ್ರಗಳ ಸ್ಥಗಿತದ ಹಿಂದೆ ರಾಜಕೀಯ ಉದ್ದೇಶವಿಲ್ಲ – ಗುಂಡೂರಾವ್

    ಈ ಆದೇಶವು ಸರ್ಕಾರಿ ಆಸ್ಪತ್ರೆಗಳ ಆವರಣಗಳ ಹೊರಗೆ ಜನೌಷಧಿ ಕೇಂದ್ರಗಳ ಕಾರ್ಯನಿರ್ವಹಣೆಯನ್ನು ನಿರ್ಬಂಧಿಸುವುದಿಲ್ಲ. ರಾಜ್ಯದಲ್ಲಿ 1417 ಜನೌಷಧಿ ಕೇಂದ್ರಗಳಲ್ಲಿ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ 184 ಜನೌಷಧಿ ಕೇಂದ್ರಗಳಿವೆ. ಉಳಿದವು ಸರ್ಕಾರಿ ಆಸ್ಪತ್ರೆಗಳ ಆವರಣದ ಹೊರಗೆ ಕಾರ್ಯನಿರ್ವಹಿಸುತ್ತಿವೆ. ಮತ್ತು ನಾಗರಿಕರು ತಮ್ಮ ಆಯ್ಕೆಯಂತೆ ಖಾಸಗಿ ವಲಯದಲ್ಲಿ ಅವುಗಳನ್ನು ಪ್ರವೇಶಿಸಲು ಸ್ವತಂತ್ರರಾಗಿದ್ದಾರೆ. ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮಿತದ ಮೂಲಕ ಎಲ್ಲಾ ಅಗತ್ಯ ಔಷಧಿಗಳನ್ನು ಸರ್ಕಾರಿ ಆಸ್ಪತ್ರೆಗಳಿಗೆ ನಿಯಮಿತವಾಗಿ ಪೂರೈಸಲಾಗುತ್ತಿದೆ. ಇದರ ಜೊತೆಗೆ, ಆಸ್ಪತ್ರೆಗಳಿಗೆ ಸಾಕಷ್ಟು ಅನುದಾನವನ್ನು ಒದಗಿಸಲಾಗಿದ್ದು, ಯಾವುದೇ ಔಷಧಿಗಳ ಕೊರತೆ ಉಂಟಾದಲ್ಲಿ ಆ ಅನುದಾನವನ್ನು ಸ್ಥಳೀಯವಾಗಿ ಔಷಧಿಗಳನ್ನು ಖರೀದಿಸಲು ಬಳಸಿಕೊಳ್ಳುವಂತೆ ಅಗತ್ಯ ಸೂಚನೆಗಳನ್ನು ನೀಡಲಾಗಿದೆ. ಸರ್ಕಾರಿ ಸೌಲಭ್ಯಗಳಿಗೆ ಭೇಟಿ ನೀಡುವ ರೋಗಿಗಳಿಗೆ ಅಗತ್ಯ ಔಷಧಿಗಳು ಸಂಪೂರ್ಣವಾಗಿ ಉಚಿತವಾಗಿ ಲಭ್ಯವಾಗುವಂತೆ ಮಾಡುವುದು ಈ ಪ್ರಯತ್ನದ ಉದ್ದೇಶವಾಗಿದೆ ಎಂದು ಹೇಳಿದ್ದಾರೆ.

    ಗೌರವಾನ್ವಿತ ದೆಹಲಿ ಹೈಕೋರ್ಟ್‌ನ W.P.C 3903/2017 ರಲ್ಲಿ ಉಲ್ಲೇಖಿಸಲಾದ ನಿರ್ದೇಶನಗಳು GNCTD ಮತ್ತು AIIMS ನವದೆಹಲಿಗೆ ಸಂಬಂಧಿಸಿವೆ ಎಂದು ಸಹ ಗಮನಿಸಲಾಗಿದೆ. ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನಾ (PMBJP) ಯೋಜನೆಯ ಪ್ರಕಾರ, ಜನೌಷಧಿ ಔಷಧಿಗಳ ಬೆಲೆಗಳು ಮುಕ್ತ ಮಾರುಕಟ್ಟೆಯಲ್ಲಿ ಲಭ್ಯವಿರುವ ಬ್ರಾಂಡ್ ಔಷಧಿಗಳ ಬೆಲೆಗಳಿಗಿಂತ 50%-80% ಕಡಿಮೆ ಇವೆ. ಈ ಯೋಜನೆಯನ್ನು ಸೊಸೈಟೀಸ್ ರಿಜಿಸ್ಟ್ರೇಷನ್ ಆಕ್ಟ್ ಅಡಿಯಲ್ಲಿ ನೋಂದಾಯಿಸಲಾದ ಸಂಸ್ಥೆಯಾದ ಫಾರ್ಮಾ ಮತ್ತು ಮೆಡಿಕಲ್ ಬ್ಯೂರೋ ಆಫ್ ಇಂಡಿಯಾ (PMBI) (ಬ್ಯೂರೋ ಆಫ್ ಫಾರ್ಮಾ PSUs ಆಫ್ ಇಂಡಿಯಾ (BPPI)) ಕಾರ್ಯಗತಗೊಳಿಸುತ್ತಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಜನೌಷಧಿ ಕೇಂದ್ರಗಳ ಪುನರಾರಂಭಕ್ಕೆ ಸಂಸದ ಕಾರಜೋಳ ಆಗ್ರಹ

    ಈ ಔಷಧಿಗಳನ್ನು ಜನೌಷಧಿ ಕೇಂದ್ರಗಳಿಗೆ ಪೂರೈಸುವ ದರದಲ್ಲಿಯೇ ರಾಜ್ಯ ಆರೋಗ್ಯ ಇಲಾಖೆಗೆ ಪೂರೈಸುವಂತೆ ಅವರಿಗೆ ನಿರ್ದೇಶನ ನೀಡಬೇಕೆಂದು ಕೋರಲಾಗಿದೆ. ಇದು ಕರ್ನಾಟಕ ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಔಷಧ ಪೂರೈಕೆಗೆ ಬಹಳಷ್ಟು ಸಹಾಯ ಮಾಡುತ್ತದೆ. ಕರ್ನಾಟಕದ ಎಲ್ಲಾ ನಾಗರಿಕರಿಗೆ ಕೈಗೆಟುಕುವ ಮತ್ತು ಗುಣಮಟ್ಟದ ಆರೋಗ್ಯ ಸೇವೆಗಳು ಲಭ್ಯವಾಗುವಂತೆ ಮಾಡಲು ನಾವು ಬದ್ಧರಾಗಿದ್ದೇವೆ. ಸಾರ್ವಜನಿಕ ವ್ಯವಸ್ಥೆಯಲ್ಲಿ ನಮ್ಮ ಪೂರೈಕೆ ಸರಪಳಿ, ಲಭ್ಯತೆ ಮತ್ತು ಔಷಧಿಗಳ ವೈಜ್ಞಾನಿಕ ಬಳಕೆಯನ್ನು ನಿರಂತರವಾಗಿ ಬಲಪಡಿಸುತ್ತಿದ್ದೇವೆ. ಸಾರ್ವಜನಿಕ ಆರೋಗ್ಯದ ಕುರಿತಾದ ನಿಮ್ಮ ಕಾಳಜಿಯನ್ನು ನಾವು ಸಂಪೂರ್ಣವಾಗಿ ಗೌರವಿಸುತ್ತೇವೆ. ಜನರ ಒಳಿತಿಗಾಗಿ ನಮ್ಮ ಸಮಾನ ಬದ್ಧತೆಯನ್ನು ಮತ್ತೆ ಸ್ಪಷ್ಟಪಡಿಸುತ್ತೇವೆ ಎಂದಿದ್ದಾರೆ.

  • ಖಾಸಗಿ ಮೆಡಿಕಲ್ ಲಾಬಿಗೆ ಮಣಿದ ಸರ್ಕಾರ, ಹೈಕೋರ್ಟ್ ಆದೇಶ ಸ್ವಾಗತಾರ್ಹ: ಆರ್ ಅಶೋಕ್

    ಖಾಸಗಿ ಮೆಡಿಕಲ್ ಲಾಬಿಗೆ ಮಣಿದ ಸರ್ಕಾರ, ಹೈಕೋರ್ಟ್ ಆದೇಶ ಸ್ವಾಗತಾರ್ಹ: ಆರ್ ಅಶೋಕ್

    ಬೆಂಗಳೂರು: ಜನೌಷಧಿ (Jan Aushadhi) ಕೇಂದ್ರಗಳ ಸ್ಥಗಿತ ಕುರಿತು ಹೈಕೋರ್ಟ್ (High Court) ನೀಡಿದ ಮಧ್ಯಂತರ ತಡೆ ಆದೇಶವನ್ನು ಸ್ವಾಗತಿಸುತ್ತೇನೆ. ಖಾಸಗಿ ಲಾಬಿಗೆ ಮಣಿದ ಸರ್ಕಾರಕ್ಕೆ ಈಗ ಹಿನ್ನಡೆಯಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ (R Ashok) ಹೇಳಿದರು.

    ಬೆಂಗಳೂರಿನಲ್ಲಿ ಮಾತನಾಡಿದ ಅವರು, ಜನೌಷಧಿ ಕೇಂದ್ರಗಳ ಸ್ಥಗಿತದ ಬಗ್ಗೆ ಹೈಕೋರ್ಟ್ ಮಧ್ಯಂತರ ತಡೆ ಆದೇಶ ನೀಡಿದೆ. ಈ ಕುರಿತು ಬಿಜೆಪಿಯಿಂದ ಹೋರಾಟ ಮಾಡಲಾಗಿತ್ತು. ಖಾಸಗಿ ಮೆಡಿಕಲ್ ಫಾರ್ಮಾಗಳಿಗೆ ಅನುಕೂಲ ಮಾಡಿಕೊಡಲು ಸರ್ಕಾರ ಜನೌಷಧಿ ಕೇಂದ್ರಗಳನ್ನು ಮುಚ್ಚಿತ್ತು. ಖಾಸಗಿ ಲಾಬಿಗೆ ಮಣಿದ ಸರ್ಕಾರಕ್ಕೆ ಈಗ ಹಿನ್ನಡೆಯಾಗಿದೆ. ಇನ್ನಾದರೂ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರು ಜನರಿಗೆ ಏನು ಬೇಕೆಂದು ಅರಿತು ಕೆಲಸ ಮಾಡಬೇಕಿದೆ ಎಂದು ಆಗ್ರಹಿಸಿದರು. ಇದನ್ನೂ ಓದಿ: ಸಿಎಂ ಬದಲಾವಣೆ ವಿಚಾರದಲ್ಲಿ ಗೊಂದಲ ಏಕೆ? ಹೈಕಮಾಂಡ್ ಏನೂ ಇಲ್ಲ ಅಂದಿದೆ: ಸತೀಶ್ ಜಾರಕಿಹೊಳಿ

    ಸರ್ಕಾರಿ ಆಸ್ಪತ್ರೆಗಳಲ್ಲಿ 260-270 ಔಷಧಿಗಳನ್ನು ನೀಡಬೇಕಾಗುತ್ತದೆ. ಆದರೆ ಅಷ್ಟೊಂದು ಔಷಧಿ ಇಲ್ಲ. ಔಷಧಿಗಳು ಜನೌಷಧಿ ಕೇಂದ್ರಗಳಲ್ಲಿ ರಿಯಾಯಿತಿ ದರದಲ್ಲಿ ಲಭ್ಯವಿದೆ. ಇತ್ತೀಚೆಗೆ ಹಾಸನ ಆಸ್ಪತ್ರೆಗೆ ಹೋದಾಗ ಒಬ್ಬರೇ ಹೃದ್ರೋಗ ತಜ್ಞ ವೈದ್ಯರು ಇರುವುದು ಕಂಡುಬಂತು. ಹೃದಯ ಸಂಬಂಧಿ ರೋಗದ ತುರ್ತು ಪರಿಸ್ಥಿತಿಯಲ್ಲಿ ಅವರು ಇಂಜೆಕ್ಷನ್ ಕೊಟ್ಟು ಬೆಂಗಳೂರಿಗೆ ಕಳಿಸುತ್ತಾರೆ. ಇಂತಹ ಸ್ಥಿತಿಯಲ್ಲಿ ಜನೌಷಧಿ ಕೇಂದ್ರಗಳನ್ನು ಮುಚ್ಚಿದರೆ ಬಹಳ ಸಮಸ್ಯೆಯಾಗುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ರೈಲ್ವೆ ಹಳಿ ಮೇಲೆ ಮರಿಗೆ ಜನ್ಮ ನೀಡಿದ ಕಾಡಾನೆ; 2 ಗಂಟೆ ನಿಂತ ರೈಲು – Video ನೋಡಿ..

  • ಜನೌಷಧಿ ಕೇಂದ್ರಗಳನ್ನು ಮುಚ್ಚುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಹೈಕೋರ್ಟ್ ತಾತ್ಕಾಲಿಕ ತಡೆ

    ಜನೌಷಧಿ ಕೇಂದ್ರಗಳನ್ನು ಮುಚ್ಚುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಹೈಕೋರ್ಟ್ ತಾತ್ಕಾಲಿಕ ತಡೆ

    – ಜನವಿರೋಧಿ ರಾಜ್ಯ ಸರ್ಕಾರಕ್ಕೆ ಮುಖಭಂಗ, ಸಾಮಾನ್ಯ ಜನತೆಗೆ ಸಂದ ಜಯ: ಸಂಸದ ತೇಜಸ್ವಿ ಸೂರ್ಯ

    ಬೆಂಗಳೂರು: ರಾಜ್ಯದಲ್ಲಿ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಜನೌಷಧಿ ಕೇಂದ್ರಗಳನ್ನು (Jan Aushadhi Center) ಮುಚ್ಚುವ ರಾಜ್ಯ ಸರ್ಕಾರದ ಆದೇಶಕ್ಕೆ ಹೈಕೋರ್ಟ್‌ (High Court) ತಾತ್ಕಾಲಿಕ ತಡೆ ನೀಡಿದೆ. ಸಂಸದ ತೇಜಸ್ವಿ ಸೂರ್ಯ ಅವರ ಕಚೇರಿ & ಇತರರು ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿರುವ ಕೋರ್ಟ್, ಮುಂದಿನ ವಿಚಾರಣೆವರೆಗೂ ಕೇಂದ್ರಗಳನ್ನು ಸ್ಥಗಿತಗೊಳಿಸದಂತೆ ಮಧ್ಯಂತರ ಆದೇಶ ಹೊರಡಿಸಿದೆ.

    ರಾಜ್ಯ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು, ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿರುವ ಜನೌಷಧಿ ಕೇಂದ್ರಗಳನ್ನು ಮುಚ್ಚಲು ಆದೇಶ ಹೊರಡಿಸಿತ್ತು. ಈ ನಿರ್ಧಾರವು ರಾಜ್ಯಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ವಿಶೇಷವಾಗಿ ಬಡವರು ಮತ್ತು ಮಧ್ಯಮ ವರ್ಗದವರಿಗೆ ಕಡಿಮೆ ಬೆಲೆಯಲ್ಲಿ ಗುಣಮಟ್ಟದ ಔಷಧಿಗಳನ್ನು ಒದಗಿಸುತ್ತಿದ್ದ ಈ ಕೇಂದ್ರಗಳು ಸ್ಥಗಿತಗೊಂಡರೆ, ಜನಸಾಮಾನ್ಯರಿಗೆ ತೀವ್ರ ತೊಂದರೆಯಾಗಲಿದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧ ಮಾರಾಟ ಸರಿಯಲ್ಲ – ಜನೌಷಧಿ ಕೇಂದ್ರಗಳ ಸ್ಥಗಿತದ ಹಿಂದೆ ರಾಜಕೀಯ ಉದ್ದೇಶವಿಲ್ಲ – ಗುಂಡೂರಾವ್

    ಸರ್ಕಾರದ ಆದೇಶವನ್ನು ಪ್ರಶ್ನಿಸಿ, ಸಂಸದ ತೇಜಸ್ವಿ ಸೂರ್ಯ ಮತ್ತು ಹಲವು ಜನೌಷಧಿ ಕೇಂದ್ರಗಳ ಮಾಲೀಕರು ನ್ಯಾಯಾಲಯದ ಮೊರೆ ಹೋಗಿದ್ದರು. ಈ ತಡೆಯಾಜ್ಞೆಯಿಂದಾಗಿ ಸಾರ್ವಜನಿಕರಿಗೆ ಕಡಿಮೆ ದರದಲ್ಲಿ ಔಷಧಿಗಳು ಲಭ್ಯವಾಗುವ ಸೌಲಭ್ಯ ಮುಂದುವರೆಯಲಿದ್ದು, ಜನಸಾಮಾನ್ಯರಿಗೆ ತಾತ್ಕಾಲಿಕವಾಗಿ ನಿರಾಳವಾಗಿದೆ.

    ನ್ಯಾಯಾಲಯದ ಕ್ರಮವನ್ನು ಸ್ವಾಗತಿಸಿರುವ ಸಂಸದ ತೇಜಸ್ವಿ ಸೂರ್ಯ, ಕೇಂದ್ರ ಸರ್ಕಾರದ ಜನಪರ ಕಾರ್ಯಗಳನ್ನು ವಿರೋಧಿಸುವ ಏಕೈಕ ಉದ್ದೇಶದಿಂದ ರಾಜ್ಯದ ಸಾರ್ವಜನಿಕರಿಗೆ ಸಂಕಷ್ಟ ನೀಗಿಸುವುದಕ್ಕಾಗಿ ಕೇಂದ್ರ ಸರ್ಕಾರದ ವಿರುದ್ಧ ವ್ಯತಿರಿಕ್ತ ಅಭಿಪ್ರಾಯ ರೂಪಿಸುವ ಕಾರಣದಿಂದ ಕಾಂಗ್ರೆಸ್ ಸರ್ಕಾರ ಜನೌಷಧಿ ಕೇಂದ್ರಗಳನ್ನು ಮುಚ್ಚುವ ನಿರ್ಧಾರಕ್ಕೆ ಬಂದಿದ್ದು, ಅದರ ಜನವಿರೋಧಿ ನೀತಿಯನ್ನು ವ್ಯಕ್ತಪಡಿಸುತ್ತದೆ. ನ್ಯಾಯಾಲಯದ ಕ್ರಮವು ರಾಜ್ಯ ಸರ್ಕಾರಕ್ಕೆ ದೊಡ್ಡ ಮುಖಭಂಗವಾಗಿದ್ದು, ಜನವಿರೋಧಿ ಕ್ರಮಗಳಿಗೆ ತಡೆ ನೀಡುವ ವಿಕೃತ ಮನೋಭಾವಕ್ಕೆ ಚಾಟಿ ಏಟು ಕೊಟ್ಟಂತಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಜನೌಷಧಿ ಕೇಂದ್ರಗಳ ಪುನರಾರಂಭಕ್ಕೆ ಸಂಸದ ಕಾರಜೋಳ ಆಗ್ರಹ

    ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನೆ (PMBJP) ಅಡಿಯಲ್ಲಿ ಜನೌಷಧಿ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಕಡಿಮೆ ಬೆಲೆಯಲ್ಲಿ ಗುಣಮಟ್ಟದ ಜೆನೆರಿಕ್ ಔಷಧಿಗಳನ್ನು ಒದಗಿಸುವ ಗುರಿ ಹೊಂದಿದೆ. ಕರ್ನಾಟಕದಲ್ಲಿ ನೂರಾರು ಜನೌಷಧಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಸಾವಿರಾರು ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಅನುಕೂಲ ಕಲ್ಪಿಸಿವೆ.

  • ಸರ್ಕಾರಿ ಆಸ್ಪತ್ರೆಗಳಲ್ಲಿ ಹೊಸ ಜನೌಷಧಿ ಕೇಂದ್ರಕ್ಕೆ ಅನುಮತಿ ನೀಡಲ್ಲ:  ಶರಣ ಪ್ರಕಾಶ್‌ ಪಾಟೀಲ್‌

    ಸರ್ಕಾರಿ ಆಸ್ಪತ್ರೆಗಳಲ್ಲಿ ಹೊಸ ಜನೌಷಧಿ ಕೇಂದ್ರಕ್ಕೆ ಅನುಮತಿ ನೀಡಲ್ಲ: ಶರಣ ಪ್ರಕಾಶ್‌ ಪಾಟೀಲ್‌

    ಬೆಂಗಳೂರು: ಕಡಿಮೆ ಬೆಲೆಯ ಜನೌಷಧಿ (Janaushadhi) ಕೇಂದ್ರದ ವಿಚಾರದಲ್ಲಿ ರಾಜಕೀಯ ಆರಂಭವಾಯಿತೇ? ಮೋದಿ ವಿರೋಧಿಸೋ ಸಲುವಾಗಿಯೇ ಜನೌಷಧಿ ಕೇಂದ್ರಕ್ಕೆ ಸರ್ಕಾರ ಬ್ರೇಕ್‌ ಹಾಕಲು ಮುಂದಾಯಿತೇ ಎಂಬ ಪ್ರಶ್ನೆ ಎದ್ದಿದೆ.

    ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್‌ ಪಾಟೀಲ್‌ (Sharan Prakash Patil) ಅವರು ನೀಡಿದ ಒಂದು ಹೇಳಿಕೆಯಿಂದ ಈ ಪ್ರಶ್ನೆ ಈಗ ಎದ್ದಿದೆ. ಇನ್ಮುಂದೆ ಸರ್ಕಾರಿ ಆಸ್ಪತ್ರೆಗಳಲ್ಲಿ (Government Hospital) ಹೊಸ ಪ್ರಧಾನ ಮಂತ್ರಿ ಜನೌಷಧಿ ಕೇಂದ್ರ ತೆರೆಯಲು ಅವಕಾಶ ನೀಡುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

    ಪಬ್ಲಿಕ್‌ ಟಿವಿಗೆ ಪ್ರತಿಕ್ರಿಯೆ ನೀಡಿದ ಅವರು, ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿಗಳು ಉಚಿತವಾಗಿ ಸಿಗುವಾಗ ಜನೌಷಧಿ ಕೇಂದ್ರ ಯಾಕೆ ಬೇಕು? ಇದರಿಂದ ಆಸ್ಪತ್ರೆಯ ಒಳಗಡೆ ವರ್ತುಲ  ಸೃಷ್ಟಿಯಾಗುತ್ತದೆ. ಹಿಂದೆ ಯಾರು ಅನುಮತಿ ಕೊಟ್ಟಿದ್ದಾರೋ ಗೊತ್ತಿಲ್ಲ. ನಾನು ಹೊಸ ಜನೌಷಧಿ ಕೇಂದ್ರ ತೆರೆಯಲು ಅವಕಾಶ ನೀಡುವುದಿಲ್ಲ ಎಂದು ಖಡಕ್‌ ಆಗಿಯೇ ಹೇಳಿದ್ದಾರೆ.

    ಸರ್ಕಾರಿ ಆಸ್ಪತ್ರೆಗಳಲ್ಲೇ ಉಚಿತವಾಗಿ ಮಾತ್ರೆ ಕೊಡುತ್ತೇವೆ. ಹೀಗಾಗಿ ಜನರು ದುಡ್ಡು ನೀಡಿ ಮಾತ್ರೆ ಖರೀದಿ ಮಾಡುವುದು ಯಾಕೆ ಎಂದು ಸಚಿವರು ಪ್ರಶ್ನೆ ಮಾಡಿದ್ದಾರೆ.

    ಸರ್ಕಾರದಿಂದ ಔಷಧಿಗಳು, ಮಾತ್ರೆಗಳು ಉಚಿತ ಬರುತ್ತದೆ ಹೌದು. ಆದರೆ ಎಲ್ಲಾ ಮಾತ್ರೆಗಳು ಸಿಗುವುದಿಲ್ಲ. ಹೀಗಾಗಿ ಸರ್ಕಾರಿ ಆಸ್ಪತ್ರೆಯ ಬಳಿ ಜನೌಷಧಿ ಕೇಂದ್ರ ತೆರೆದರೆ ನಿಮಗೆ ಏನು ಕಷ್ಟ ಎಂದು ಜನರು ಈಗ ಸರ್ಕಾರಕ್ಕೆ ಪ್ರಶ್ನೆ ಮಾಡುತ್ತಿದ್ದಾರೆ. ಇದನ್ನೂ ಓದಿ: ತರಬೇತಿ ವೈದ್ಯೆ ಮೇಲೆ ಅತ್ಯಾಚಾರ ಕೇಸ್‌ – ಅವಮಾನ ಸಹಿಸಲಾರದೇ ಪ್ರಾಂಶುಪಾಲ ರಾಜೀನಾಮೆ

    ಯಾವ ಮಾತ್ರೆಗೆ ಎಷ್ಟೆಷ್ಟು ದರ?
    > ಡೋಲೋ ಮಾತ್ರೆ
    ಮೆಡಿಕಲ್ ಸ್ಟೋರ್- 30 ರೂ. (ಒಂದು ಶೀಟ್‌ಗೆ)
    ಜನೌಷಧಿ ಕೇಂದ್ರ- 15 ರೂ. (ಒಂದು ಶೀಟ್‌ಗೆ)

    ಡಯಾಬಿಟೀಸ್ ಮಾತ್ರೆ
    ಮೆಡಿಕಲ್ ಸ್ಟೋರ್- 20 ರೂ. (ಒಂದು ಶೀಟ್‌ಗೆ)
    ಜನೌಷಧಿ ಕೇಂದ್ರ- 6 ರೂ. (ಒಂದು ಶೀಟ್‌ಗೆ)

    ಬಿಪಿ ಮಾತ್ರೆ (ಟೆಲ್ಮಾ)
    ಮೆಡಿಕಲ್ ಸ್ಟೋರ್- 30 ರೂ. (10 ಮಾತ್ರೆ)
    ಜನೌಷಧಿ ಕೇಂದ್ರ- 12 ರೂ.

    ಕೊಲೆಸ್ಟ್ರಾಲ್‌ ಮಾತ್ರೆ (ಅಟೋರ್ವಾ)
    ಮೆಡಿಕಲ್ ಸ್ಟೋರ್- 30 ರೂ.

    ಕ್ರೇಪ್ ಬ್ಯಾಂಡೇಜ್
    ಮೆಡಿಕಲ್ ಸ್ಟೋರ್- 150 ರೂ.
    ಜನೌಷಧಿ ಕೇಂದ್ರ- 36 ರೂ.

    ಪ್ಯಾರಸೆಟ್‌ಮಲ್
    ಜನೌಷಧಿ ಕೇಂದ್ರ- 25-30 ರೂ.
    ಮೆಡಿಕಲ್ ಸ್ಟೋರ್-120

    ಕೆಮ್ಮಿನ ಔಷಧಿ
    ಜನೌಷಧಿ ಕೇಂದ್ರ- 54 ರೂ.
    ಮೆಡಿಕಲ್ ಸ್ಟೋರ್- 150 ರೂ.

     

  • ಜನೌಷಧಿ ಕೇಂದ್ರಗಳನ್ನು 25 ಸಾವಿರಕ್ಕೆ ಹೆಚ್ಚಿಸಲು ನಿರ್ಧಾರ: ಪ್ರಧಾನಿ ಮೋದಿ

    ಜನೌಷಧಿ ಕೇಂದ್ರಗಳನ್ನು 25 ಸಾವಿರಕ್ಕೆ ಹೆಚ್ಚಿಸಲು ನಿರ್ಧಾರ: ಪ್ರಧಾನಿ ಮೋದಿ

    ನವದೆಹಲಿ: ಜನೌಷಧಿ ಕೇಂದ್ರಗಳ (Jan Aushadhi Kendra) ಸಂಖ್ಯೆಯನ್ನು 10,000 ದಿಂದ 25,000ಕ್ಕೆ ಹೆಚ್ಚಿಸಲು ನಿರ್ಧರಿಸಿದ್ದು, ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದ್ದಾರೆ.

    ಮಂಗಳವಾರ ದೆಹಲಿಯ (Delhi) ಕೆಂಪುಕೋಟೆಯಲ್ಲಿ (Red Fort) 77ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಜನೌಷಧಿ ಕೇಂದ್ರಗಳು ಜನರಿಗೆ ಶಕ್ತಿಯನ್ನು ನೀಡಿದೆ. ಅದರಲ್ಲೂ ಮಧ್ಯಮ ವರ್ಗದ ಜನರಿಗೆ ಹೊಸ ಶಕ್ತಿಯನ್ನು ನೀಡಿದೆ. ಯಾರಿಗಾದರೂ ಮಧುಮೇಹವಿದ್ದರೆ ಮಾಸಿಕ 3,000 ರೂ. ಬಿಲ್ ಬರುತ್ತದೆ. ಜನೌಷಧಿ ಕೇಂದ್ರಗಳ ಮೂಲಕ 100 ರೂ. ಬೆಲೆಯ ಔಷಧಿಗಳನ್ನು ಕೇವಲ 10ರಿಂದ 15 ರೂ.ಗೆ ನೀಡುತ್ತಿದ್ದೇವೆ ಎಂದರು. ಇದನ್ನೂ ಓದಿ: ಮನೆಯಲ್ಲಿ ಧ್ವಜಾರೋಹಣ ಮಾಡ್ತಾರೆ: ಮುಂದಿನ ವರ್ಷ ಕೆಂಪು ಕೋಟೆಯಲ್ಲಿ ಮತ್ತೆ ಸಿಗೋಣ ಎಂದಿದ್ದ ಮೋದಿಗೆ ಖರ್ಗೆ ಟಾಂಗ್‌

    ಇದೀಗ ಜನೌಷಧಿ ಕೇಂದ್ರಗಳನ್ನು 10,000 ದಿಂದ 25,000ಕ್ಕೆ ಹೆಚ್ಚಿಸಲು ಸರ್ಕಾರ ಯೋಜನೆ ರೂಪಿಸಿದೆ. ಎಲ್ಲರಿಗೂ ಕೈಗೆಟಕುವ ದರದಲ್ಲಿ ಜೆನೆರಿಕ್ ಔಷಧಗಳು ಲಭ್ಯವಾಗುವಂತೆ ಮಾಡಲು ಜನೌಷಧಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಕೋವಿಡ್ (Covid) ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತದ ಸಾಮರ್ಥ್ಯವನ್ನು ಜಗತ್ತು ಕಂಡಿದೆ. ಇತರೆ ದೇಶಗಳ ಪೂರೈಕೆ ಸರಪಳಿಗಳು ಅಡ್ಡಿಪಡಿಸಿದಾಗ ನಾವು ಪ್ರಪಂಚದ ಪ್ರಗತಿಯನ್ನು ಖಚಿತಪಡಿಸಿಕೊಳ್ಳಲು ಮಾನವ ಕೇಂದ್ರಿತ ವಿಧಾನವನ್ನು ಪ್ರತಿಪಾದಿಸಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಕೆಂಪು ಕೋಟೆಯಲ್ಲಿ ಮೋದಿ ಭಾಷಣದ ವೇಳೆ ಖಾಲಿ ಕುರ್ಚಿಯಲ್ಲಿ ಸಂದೇಶ – ಏನಿತ್ತು?

    ನಮ್ಮ ಬದ್ಧತೆಯಿಂದಾಗಿ ಜಗತ್ತು ಈಗ ನಮ್ಮನ್ನು ನೋಡುತ್ತಿದೆ. ಕೋವಿಡ್ ಬಳಿಕ ಭಾರತ ವಿಶ್ವಮಿತ್ರವಾಗಿ ಹೊರಹೊಮ್ಮಿದೆ. ಕೋವಿಡ್ ನಂತರ ಭಾರತ ದೇಶವು ಒಂದು ಭೂಮಿ, ಒಂದು ಆರೋಗ್ಯ ವಿಧಾನವನ್ನು ಪ್ರತಿಪಾದಿಸಿದೆ. ರೋಗಕ್ಕೆ ಸಂಬಂಧಿಸಿದಂತೆ ಮನುಷ್ಯರು, ಪ್ರಾಣಿಗಳು ಮತ್ತು ಸಸ್ಯಗಳನ್ನು ಸಮಾನವಾಗಿ ಕಂಡಾಗ ಮಾತ್ರ ಸಮಸ್ಯೆಗಳು ಬಗೆಹರಿಯುತ್ತದೆ ಎಂದರು. ಇದನ್ನೂ ಓದಿ: ನಾವು ತೆಗೆದುಕೊಳ್ಳುವ ನಿರ್ಧಾರ ಮುಂದಿನ 1,000 ವರ್ಷ ಭಾರತಕ್ಕೆ ದಿಕ್ಕು ತೋರಲಿದೆ: ಮೋದಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪ್ರಧಾನಮಂತ್ರಿ ಭಾರತೀಯ ಜನೌಷಧಿ ಯೋಜನೆಯಲ್ಲಿ ಕರ್ನಾಟಕಕ್ಕೆ ಎರಡನೇ ಸ್ಥಾನ

    ಪ್ರಧಾನಮಂತ್ರಿ ಭಾರತೀಯ ಜನೌಷಧಿ ಯೋಜನೆಯಲ್ಲಿ ಕರ್ನಾಟಕಕ್ಕೆ ಎರಡನೇ ಸ್ಥಾನ

    ಬೆಂಗಳೂರು: ಪ್ರಧಾನಮಂತ್ರಿ ಭಾರತೀಯ ಜನೌಷಧಿ ಯೋಜನೆಯಲ್ಲಿ (Pradhan Mantri Bhartiya Jan Aushadhi Kendra) ಅತೀ ಹೆಚ್ಚು ಜನೌಷಧಿ ಕೇಂದ್ರ ತೆರೆದ ಪಟ್ಟಿಯಲ್ಲಿ ಕರ್ನಾಟಕ (Karnataka) ಎರಡನೇ ಸ್ಥಾನದಲ್ಲಿದ್ದು, ರಾಜ್ಯಾದ್ಯಂತ 540 ಹೊಸ ಮಳಿಗೆಗಳನ್ನು ಸ್ಥಾಪಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ (Dr K Sudhakar) ತಿಳಿಸಿದ್ದಾರೆ.

    ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಡವರು, ಹಿಂದುಳಿದ ಮತ್ತು ಮಧ್ಯಮವರ್ಗದವರಿಗೆ ರಿಯಾಯಿತಿ ದರದಲ್ಲಿ ಔಷಧಗಳು ಮತ್ತು ಶಸ್ತ್ರಚಿಕಿತ್ಸೆಯ ಪರಿಕರಗಳನ್ನು ಒದಗಿಸುವಲ್ಲಿ ಪ್ರಧಾನಮಂತ್ರಿ ಜನೌಷಧಿ ಕಾರ್ಯಕ್ರಮ ಯಶಸ್ವಿಯಾಗಿದೆ. ರಾಜ್ಯದಲ್ಲಿ ಉತ್ತಮವಾಗಿ ಕಾರ್ಯಕ್ರಮವನ್ನು ಜಾರಿಗೊಳಿಸಲಾಗಿದ್ದು, ಈವರೆಗೆ 1,052 ಜನೌಷಧಿ ಕೇಂದ್ರಗಳನ್ನು ತೆರೆಯಲಾಗಿದೆ. ಇಡೀ ದೇಶದಲ್ಲಿ ಅತೀ ಹೆಚ್ಚು ಜನೌಷಧಿ ಕೇಂದ್ರ ತೆರೆದ ಪಟ್ಟಿಯಲ್ಲಿ ಉತ್ತರ ಪ್ರದೇಶದ ಮೊದಲ ಸ್ಥಾನದಲ್ಲಿದ್ದರೆ, ನಂತರದ ಸ್ಥಾನ ಕರ್ನಾಟಕಕ್ಕೆ ಸಿಕ್ಕಿದೆ. ಕೇರಳ ಮೂರನೇ ಸ್ಥಾನದಲ್ಲಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಕೋಲಾರ ಎಂಟ್ರಿ ಬೆನ್ನಲ್ಲೇ ಗುಂಪು ರಾಜಕೀಯ- ಸಿದ್ದರಾಮಯ್ಯ ಮೇಲೆ ಮುನಿಯಪ್ಪ ಮುನಿಸು

    ಸಾರ್ವಜನಿಕರು ಆರೋಗ್ಯಕ್ಕಾಗಿ ಮಾಡುತ್ತಿರುವ ವೆಚ್ಚ ಜನೌಷಧಿ ಮಳಿಗೆಗಳಿಂದ ಗಣನೀಯವಾಗಿ ಕಡಿಮೆಯಾಗುತ್ತಿದೆ. ರಾಜ್ಯದಲ್ಲಿ ಹೊಸದಾಗಿ ಮತ್ತೆ 500 ಮಳಿಗೆಗಳನ್ನು ತೆರೆಯುವ ಉದ್ದೇಶ ಹೊಂದಲಾಗಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ಸುಮಾರು 40 ಹೊಸ ಮಳಿಗೆಗಳಿಗೆ ಅನುಮತಿ ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಮಳಿಗೆಗಳನ್ನು ತೆರೆಯಲು ಸರ್ಕಾರ ಮುಂದಾಗಿದೆ. ಈ ವರ್ಷ ಫೆಬ್ರವರಿ ಬಳಿಕ ಸುಮಾರು 300 ಜನೌಷಧಿ ಕೇಂದ್ರಗಳನ್ನು ಆರಂಭಿಸಿದ್ದೇವೆ. ರಾಜ್ಯದಲ್ಲಿ ಜನೌಷಧಿಗಳು ಬ್ರಾಂಡೆಡ್ ಆಗಿದ್ದು, ಮಾರುಕಟ್ಟೆಗಿಂತ ಶೇ.50 ರಿಂದ 80 ರಷ್ಟು ಅಗ್ಗದ ದರದಲ್ಲಿ ದೊರೆಯುತ್ತಿವೆ. ಒಟ್ಟು 1,451 ಔಷಧಗಳು ಮತ್ತು 240 ಶಸ್ತ್ರಚಿಕಿತ್ಸೆ ಪರಿಕರಗಳು, ದುಬಾರಿ ವೆಚ್ಚದ ಕ್ಯಾನ್ಸರ್ ಔಷಧಗಳು ಸಹ ಇಲ್ಲಿ ಸಿಗುತ್ತಿದೆ. ಹೀಗಾಗಿ, ಉತ್ತರ ಕರ್ನಾಟಕ, ಹಳೆ ಮೈಸೂರು ಭಾಗದಿಂದಲೂ ಜನೌಷಧಿ ಮಳಿಗೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ತೆರೆಯಲು ಒತ್ತಡವಿದೆ. ಮಂಡ್ಯ ಜಿಲ್ಲೆಯ ಕೆ.ಎಂ.ದೊಡ್ಡಿ ಎಂಬ ಗ್ರಾಮದಲ್ಲೂ ಜನೌಷಧಿ ಮಳಿಗೆ ತೆರೆದಿರುವುದು ವಿಶೇಷವಾಗಿದ್ದು, ಬೇಡಿಕೆಗೆ ಅನುಗುಣವಾಗಿ ಹೊಸ ಮಳಿಗೆಗಳಿಗೆ ಮಂಜೂರಾತಿ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರಾಜಕೀಯ ಸ್ವರೂಪ ಪಡೆದುಕೊಳ್ಳುತ್ತಿದೆ ವಿವೇಕ ಶಾಲೆಗಳ ಬಣ್ಣ

    Live Tv
    [brid partner=56869869 player=32851 video=960834 autoplay=true]

  • ಖಾಸಗಿಯವರ ಪಾಲಾಗಿದೆ ಜನ ಔಷಧಿ ಕೇಂದ್ರ- ಔಷಧಗಳು ನೋ ಸ್ಟಾಕ್!

    ಖಾಸಗಿಯವರ ಪಾಲಾಗಿದೆ ಜನ ಔಷಧಿ ಕೇಂದ್ರ- ಔಷಧಗಳು ನೋ ಸ್ಟಾಕ್!

    ಕಾರವಾರ: ಜನಸಾಮಾನ್ಯರಿಗೆ ಅಗ್ಗದ ದರದಲ್ಲಿ ಔಷಧಗಳು ದೊರೆಯಲಿ ಅನ್ನೋ ಸದುದ್ದೇಶದಿಂದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪ್ರಧಾನಮಂತ್ರಿ ಜನ ಔಷಧಿ ಎನ್ನುವ ಯೋಜನೆಯನ್ನು ಜಾರಿಗೆ ತಂದಿದ್ದರು. ಆದರೆ ಈ ಕೇಂದ್ರಗಳಲ್ಲಿ ಜನರಿಗೆ ಅಗ್ಗದ ದರದಲ್ಲಿ ಔಷಧಗಳು ದೊರೆಯುತ್ತಿಲ್ಲ ಅನ್ನೋದಕ್ಕೆ ಜಿಲ್ಲೆಯ ಹಲವಾರು ಕೇಂದ್ರಗಳು ಸಾಕ್ಷಿಯಾಗಿವೆ.

    ಜಿಲ್ಲೆಯ ಪ್ರತಿ ತಾಲೂಕಿನಲ್ಲೂ ಕೂಡ ಜನ ಔಷಧಿ ಕೇಂದ್ರಗಳನ್ನ ತೆರೆಯಲಾಗಿದೆ. ಈ ಕೇಂದ್ರಗಳೆಲ್ಲ ಖಾಸಗಿಯವರ ಸಹಭಾಗಿತ್ವದಲ್ಲಿ ನಡೆಸಲ್ಪಡುತ್ತಿವೆ. ಈ ಕೇಂದ್ರಗಳಲ್ಲಿ ಜನ ಔಷಧಿ ಮಾರ್ಕಿನ ಔಷಧಗಳು ದೊರೆಯುತ್ತಿಲ್ಲ ಅನ್ನೋದು ಈಗ ಚರ್ಚೆಗೆ ಗ್ರಾಸವಾಗಿರೋ ವಿಷಯ. ಕೇಂದ್ರ ಸರ್ಕಾರ ಬಡವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಔಷಧಗಳನ್ನ ಅಗ್ಗದ ದರದಲ್ಲಿ ನೀಡುವುದಕ್ಕಾಗಿ ಜನ ಔಷಧಿ ಎನ್ನುವ ಮಾರ್ಕಿನ ಔಷಧಗಳನ್ನ ಪರಿಚಯಿಸಿತು. ಆದರೆ ಇದರಲ್ಲಿ ಹಲವಾರು ಔಷಧಗಳು ದೊರೆಯದೇ ‘ನೋ ಸ್ಟಾಕ್’ ಬೋರ್ಡ್ ಬಿದ್ದ ಕಾರಣದಿಂದ ಜೆನೆರಿಕ್ ಔಷಧಗಳನ್ನ ಮಾರಾಟ ಮಾಡೋಕೆ ಅನುಮತಿ ನೀಡಲಾಯಿತು.

     

    ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾತ್ರ ಜನ ಔಷಧಿ ಕೇಂದ್ರಗಳಲ್ಲಿ ನೋ ಸ್ಟಾಕ್ ಎಂಬ ಪದ ಕೇಳಿ ಬರುತ್ತದೆ. ಬೇರೆ ಜಿಲ್ಲೆಗಳಲ್ಲಿ ಈ ಔಷಧಿಗಳು ಲಭ್ಯವಾಗುತ್ತಿದ್ದರೂ, ನಮ್ಮಲ್ಲಿ ಯಾಕೆ ಇಲ್ಲ ಎಂದು ಸಾರ್ವಜನಿರಕು ಪ್ರಶ್ನಿಸುತ್ತಿದ್ದಾರೆ. ಲಭ್ಯವಿರದ ಈ ಜನೌಷಧಿಗಳ ಬದಲಾಗಿ ತಮ್ಮದೇ ಸ್ವಂತ ಬ್ರಾಂಡ್ ನ ಜೆನೆರಿಕ್ ಔಷಧಗಳನ್ನ ನೀಡ್ತಾರೆ ಅನ್ನೋ ದೂರು ಶಿರಸಿ ಭಾಗದ ಸಾರ್ವಜನಿಕ ವಲಯಗಳಿಂದ ಕೇಳಿ ಬಂದಿದೆ.

    ಒಟ್ಟಿನಲ್ಲಿ ಬಡಜನರಿಗೆ ಉಪಯೋಗವಾಗಬೇಕಿದ್ದ ಒಂದು ಯೋಜನೆ, ಖಾಸಗಿಯವರ ಲಾಭಕ್ಕಾಗಿ ದುರ್ಬಳಕೆ ಆಗುತ್ತಿರುವ ಬಗ್ಗೆ ಅನುಮಾನಗಳು ಹುಟ್ಟಿಕೊಂಡಿವೆ. ಇದರ ಬಗ್ಗೆ ಸಂಬಂಧಿಸಿದ ಇಲಾಖೆ ಗಮನಹರಿಸಿ ಸಾರ್ವಜನಿಕರಿಗೆ ಆಗುತ್ತಿರೋ ತೊಂದರೆಗಳನ್ನ ಶೀಘ್ರವಾಗಿ ಬಗೆಹರಿಸಬೇಕಿದೆ.

  • ಇಂದಿನಿಂದ ಜನೌಷಧ ಕೇಂದ್ರಗಳಲ್ಲಿ ಸ್ಯಾನಿಟರಿ ಪ್ಯಾಡ್‍ಗಳು 1 ರೂ.ಗೆ ಲಭ್ಯ

    ಇಂದಿನಿಂದ ಜನೌಷಧ ಕೇಂದ್ರಗಳಲ್ಲಿ ಸ್ಯಾನಿಟರಿ ಪ್ಯಾಡ್‍ಗಳು 1 ರೂ.ಗೆ ಲಭ್ಯ

    ನವದೆಹಲಿ: ಮಹಿಳೆಯರ ಆರೋಗ್ಯ, ಶುಚಿತ್ವ ವಿಚಾರದಲ್ಲಿ ಹೊಸ ಹೆಜ್ಜೆ ಇಟ್ಟಿರುವ ಕೇಂದ್ರ ಸರ್ಕಾರ, ಜನೌಷಧ ಕೇಂದ್ರಗಳಲ್ಲಿ ಕೇವಲ 1 ರೂಪಾಯಿಗೆ ಸ್ಯಾನಿಟರಿ ಪ್ಯಾಡ್‍ಗಳನ್ನು ಒದಗಿಸಲು ಮುಂದಾಗಿದೆ.

    ಈ ಹಿಂದೆ ಜನೌಷಧ ಕೇಂದ್ರಗಳಲ್ಲಿ 2.50 ರೂ.ಗೆ ಮಾರಲಾಗುತ್ತಿದ್ದ ಸ್ಯಾನಿಟರಿ ಪ್ಯಾಡ್‍ಗಳು ಇಂದಿನಿಂದ ಕೇವಲ 1 ರೂ.ಗೆ ದೊರೆಯಲಿವೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಮನ್‍ಸುಖ್ ಮಾಂಡವೀಯ ತಿಳಿಸಿದ್ದಾರೆ. ಮಣ್ಣಿನಲ್ಲಿ ಕರಗಬಲ್ಲ(ಬಯೋಡಿಗ್ರೆಡೆಬಲ್) ‘ಸುವಿಧಾ’ ನ್ಯಾಪ್‍ಕಿನ್‍ಗಳನ್ನು ಕಡಿಮೆ ದರದಲ್ಲಿ ನೀಡಲಾಗುವುದು ಎಂದು ಹೇಳಿದರು.ಇದನ್ನೂ ಓದಿ: ವಿಶ್ವ ಪರಿಸರ ದಿನಾಚರಣೆಯಂದು ಮಹಿಳೆಯರಿಗೆ ಭರ್ಜರಿ ಗಿಫ್ಟ್- ಕಡಿಮೆ ಬೆಲೆಯ ನ್ಯಾಪ್‍ಕಿನ್ ಬಿಡುಗಡೆ

    ಈ ಹಿಂದೆ 4 ಸ್ಯಾನಿಟರಿ ಪ್ಯಾಡ್‍ಗಳುಳ್ಳ ಪ್ಯಾಕಿಗೆ 10 ರೂ. ಇತ್ತು. ಆದರೆ ಇಂದಿನಿಂದ ಅದೇ ಪ್ಯಾಡ್‍ಗಳ ಬೆಲೆ 4 ರೂ.ಗೆ ಇಳಿದಿದೆ. ಹೀಗೆ ದರದಲ್ಲಿ 60% ಕಡಿತ ಮಾಡುವ ಮೂಲಕ ಮೋದಿ ನೇತೃತ್ವದ ಸರ್ಕಾರವು 2019ರ ಚುನಾವಣೆ ವೇಳೆ ನೀಡಿದ್ದ ಭರವಸೆಯನ್ನು ಈಡೇರಿಸಿದೆ ಎಂದು ಸಚಿವರು ತಿಳಿಸಿದರು.

    ಸದ್ಯ ತಯಾರಕರು ಉತ್ಪಾದನಾ ವೆಚ್ಚ ಎಷ್ಟಾಗುತ್ತದೋ ಅದೇ ಬೆಲೆಯಲ್ಲಿ ಸ್ಯಾನಿಟರಿ ಪ್ಯಾಡ್‍ಗಳನ್ನು ಪೂರೈಕೆ ಮಾಡುತ್ತಿದ್ದಾರೆ. ಆದರೆ ನಾವು ಅದಕ್ಕೆ ಸಬ್ಸಿಡಿ ನೀಡಿ ಅದರ ಮಾರಾಟ ದರವನ್ನು ಕಡಿಮೆಗೊಳಿಸಿದ್ದೇವೆ. ಮಾರಾಟದ ಪ್ರಮಾಣದ ಮೇಲೆ ಸಬ್ಸಿಡಿಯ ವಾರ್ಷಿಕ ವೆಚ್ಚ ಅವಲಂಭಿಸಿದೆ ಎಂದರು.

    ಸುವಿಧಾ ನ್ಯಾಪ್‍ಕಿನ್ಸ್ ಯೋಜನೆಯನ್ನು 2018ರ ಮಾರ್ಚ್‍ನಲ್ಲಿ ಘೋಷಿಸಲಾಗಿತ್ತು. ಅದೇ ವರ್ಷ ಮೇ ತಿಂಗಳಿನಿಂದ ಈ ಯೋಜನೆ ಜನೌಷಧ ಕೇಂದ್ರಗಳಲ್ಲಿ ಲಭ್ಯವಾಗಿತ್ತು. ಕಳೆದ 1 ವರ್ಷದ ಅವಧಿಯಲ್ಲಿ ಸುಮಾರು 5,500 ಜನೌಷಧ ಕೇಂದ್ರಗಳಲ್ಲಿ 2.2 ಕೋಟಿ ನ್ಯಾಪ್‍ಕಿನ್‍ಗಳು ಮಾರಾಟವಾಗಿವೆ ಎಂದು ವರದಿಯಾಗಿದೆ. ಈಗ ದರ ಇಳಿಕೆ ಮಾಡಿರುವುದರಿಂದ ಸುವಿಧಾ ನ್ಯಾಪ್‍ಕಿನ್ಸ್ ಮಾರಾಟ ಪ್ರಮಾಣ ದ್ವಿಗುಣಗೊಳ್ಳುವ ನಿರೀಕ್ಷೆ ಇದೆ ಎಂದು ಮನ್‍ಸುಖ್ ಮಾಂಡವೀಯ ಅಭಿಪ್ರಾಯ ವ್ಯಕ್ತಪಡಿಸಿದರು.