Tag: ಜನಾರ್ದನ ಪೂಜಾರಿ

  • ಸಿದ್ದರಾಮಯ್ಯ ಬಂದ್ಮೇಲೆ ಕಾಂಗ್ರೆಸ್ ಬಲಿಷ್ಠವಾಗಿದೆ – ಜನಾರ್ದನ ಪೂಜಾರಿಗೆ ಜಮೀರ್ ತಿರುಗೇಟು

    ಸಿದ್ದರಾಮಯ್ಯ ಬಂದ್ಮೇಲೆ ಕಾಂಗ್ರೆಸ್ ಬಲಿಷ್ಠವಾಗಿದೆ – ಜನಾರ್ದನ ಪೂಜಾರಿಗೆ ಜಮೀರ್ ತಿರುಗೇಟು

    ಹಾವೇರಿ: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕಾಂಗ್ರೆಸ್‍ಗೆ ಬಂದ ಮೇಲೆ ಪಕ್ಷ ಬಲಿಷ್ಠವಾಗಿದೆ ಎಂದು ಅಲ್ಪಸಂಖ್ಯಾತ ಕಲ್ಯಾಣ ಮತ್ತು ವಕ್ಫ್ ಬೋರ್ಡ್ ಸಚಿವ ಜಮೀರ್ ಅಹ್ಮದ್ ಹೇಳಿದ್ದಾರೆ.

    ಇಂದು ಹಾವೇರಿ ನಗರದಲ್ಲಿ ಏರ್ಪಡಿಸಲಾಗಿದ್ದ ಉದ್ಯೋಗ ಮೇಳ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಜನಾರ್ದನ ಪೂಜಾರಿ ಹೇಳಿಕೆಗೆ ತಿರುಗೇಟು ನೀಡಿದರು. ಅವರು ಪಕ್ಷದ ಅಧ್ಯಕ್ಷರಾಗಿದ್ದವರು. ಅವರಿದ್ದಾಗ ಪಕ್ಷ ಹೇಗಿತ್ತು ಎನ್ನುವುದು ಗೊತ್ತಿದೆ. ಸಿದ್ದರಾಮಯ್ಯ ಅವರ ಶಕ್ತಿ ಪಕ್ಷ ಕಾರ್ಯಕರ್ತರಿಗೆ ಗೊತ್ತಿದೆ. ಆದರೆ ಪಾಪ ಜನಾರ್ದನ ಪೂಜಾರಿ ಅವರಿಗೆ ಗೊತ್ತಿಲ್ಲ ಎಂದರು.

    ಕಾಂಗ್ರೆಸ್ ಪಕ್ಷವನ್ನು ಯಾರು ಮುಗಿಸಿದ್ದಾರೆ ಎನ್ನುವುದು ಕೂಡ ತಿಳಿದಿದ್ದು, ಸಿದ್ದರಾಮಯ್ಯ ಅವರು ಪಕ್ಷಕ್ಕೆ ಬಂದ ಕಾಲದಿಂದಲೂ ಅದನ್ನೇ ಹೇಳಿಕೊಂಡು ಬರುತ್ತಿದ್ದಾರೆ. ಆದರೆ ಅಂದಿನಿಂದಲೂ ಕೂಡ ಪಕ್ಷ ಮತ್ತಷ್ಟು ಬಲಿಷ್ಠ ಆಗುತ್ತಾ ಬರುತ್ತಿದೆ. ಎಲ್ಲವನ್ನ ಪಕ್ಷದ ಕಾರ್ಯಕರ್ತರು ನಿರ್ಧಾರ ಮಾಡುತ್ತಾರೆ ಎಂದು ಹೇಳಿ ಟಾಂಗ್ ನೀಡಿದರು.

    ಮಂಗಳೂರಿನಲ್ಲಿ ಗುರುವಾರ ಮಾತನಾಡಿದ್ದ ಜನಾರ್ದನ ಪೂಜಾರಿ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ರಾಜ್ಯದಲ್ಲಿ ಕಾಂಗ್ರೆಸ್ ಮುಗಿಸುವುದಕ್ಕೆ ಪಕ್ಷ ಸೇರಿಕೊಂಡರು. ಸಿದ್ದರಾಮಯ್ಯನವರಿಂದ ಇಂದು ಸಮ್ಮಿಶ್ರ ಸರ್ಕಾರ ರಚನೆಯಾಗಿಲ್ಲ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಮತ್ತು ಸಿಎಂ ಕುಮಾರಸ್ವಾಮಿ ಅವರಿಂದ ಮೈತ್ರಿ ಸರ್ಕಾರ ಉಳಿದುಕೊಂಡಿದೆ. ಸರ್ಕಾರ ಉಳಿಯುವಲ್ಲಿ ದೊಡ್ಡ ಗೌಡರದ್ದು ಮಹತ್ವದ ಪಾತ್ರವಿದೆ. ದೇವೇಗೌಡರನ್ನು ಯಾರು ಲಘುವಾಗಿ ತೆಗೆದುಕೊಳ್ಳಬಾರದು ಎಂದು ಕಾಂಗ್ರೆಸ್ ಹಿರಿಯ ಮುಖಂಡ ಜನಾರ್ದನ ಪೂಜಾರಿ ಹೇಳಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಾಂಗ್ರೆಸ್ ಮುಗಿಸೋದಕ್ಕೆ ಸಿದ್ದರಾಮಯ್ಯ ಪಕ್ಷಕ್ಕೆ ಬಂದ್ರು: ಜನಾರ್ದನ ಪೂಜಾರಿ

    ಕಾಂಗ್ರೆಸ್ ಮುಗಿಸೋದಕ್ಕೆ ಸಿದ್ದರಾಮಯ್ಯ ಪಕ್ಷಕ್ಕೆ ಬಂದ್ರು: ಜನಾರ್ದನ ಪೂಜಾರಿ

    – ಮುಂದಿನ ದಿನಗಳಲ್ಲಿ ಮೋದಿಗೆ ನಿದ್ದೆ ಬರಲ್ಲ

    ಮಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ರಾಜ್ಯದಲ್ಲಿ ಕಾಂಗ್ರೆಸ್ ಮುಗಿಸೋದಕ್ಕೆ ಪಕ್ಷ ಸೇರಿಕೊಂಡರು. ಸಿದ್ದರಾಮಯ್ಯನವರಿಂದ ಇಂದು ಸರ್ಕಾರ ರಚನೆಯಾಗಿಲ್ಲ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಮತ್ತು ಸಿಎಂ ಕುಮಾರಸ್ವಾಮಿ ಅವರಿಂದ ಮೈತ್ರಿ ಸರ್ಕಾರ ಉಳಿದುಕೊಂಡಿದೆ. ಸರ್ಕಾರ ಉಳಿಯುವಲ್ಲಿ ದೊಡ್ಡ ಗೌಡರದ್ದು ಮಹತ್ವದ ಪಾತ್ರವಿದೆ. ದೇವೇಗೌಡರನ್ನು ಯಾರು ಲಘುವಾಗಿ ತೆಗೆದುಕೊಳ್ಳಬಾರದು ಎಂದು ಕಾಂಗ್ರೆಸ್ ಹಿರಿಯ ಮುಖಂಡ ಜನಾರ್ದನ ಪೂಜಾರಿ ಹೇಳಿದ್ದಾರೆ.

    ಮಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ, ಕರ್ನಾಟಕದಲ್ಲಿ ರಾಜಕೀಯ ತುಂಬಾನೇ ಕೊಳಕಾಗಿದೆ. ಎಲ್ಲರಿಗೂ ನಾನು ಮಾಡಿದ್ದೇ ಸರಿ ಎಂಬ ಭಾವನೆ ಬಂದಿದೆ. ಅದಕ್ಕೆ ದಾರಿಯಲ್ಲಿ ಪೆಟ್ಟು ತಿಂದಿದ್ದಾರೆ. ಮುಂದಿನ ದಿನಗಳಲ್ಲಿ ಜನ ಪೆಟ್ಟು ಕೊಡವುದು ಬಾಕಿ ಇದೆ ಎಂದು ಪರೋಕ್ಷವಾಗಿ ಶಾಸಕರಾದ ಆನಂದ್ ಸಿಂಗ್ ಮತ್ತು ಗಣೇಶ್ ಗಲಾಟೆಗೆ ಬೇಸರ ವ್ಯಕ್ತಪಡಿಸಿದರು.

    ಪ್ರಿಯಾಂಕಾ ಗಾಂಧಿ ನೆಹರು ಕುಟುಂಬದ ಕುಡಿ. ಪ್ರಿಯಾಂಕಾ ಆಗಮನದಿಂದ ಕಾಂಗ್ರೆಸಿಗೆ ದೊಡ್ಡ ಶಕ್ತಿ ಸಿಕ್ಕಂತಾಗಿದೆ. ಇಷ್ಟು ದಿನ ಕಾಂಗ್ರೆಸ್ಸಿಗೆ ಸಿಗದ ಹೊಸ ಶಕ್ತಿ ಲಭ್ಯವಾಗಿದ್ದು, ಮುಂದಿನ ದಿನಗಳಲ್ಲಿ ಪ್ರಧಾನಿ ಮೋದಿಗೆ ನಿದ್ದೆ ಬಾರದ ರೀತಿ ಆಗಲಿದೆ. ಪ್ರಿಯಾಂಕಾ ಪತಿ ರಾಬರ್ಟ್ ವಾದ್ರಾ ಅವರ ಮೇಲಿನ ಪ್ರಕರಣ ತನಿಖೆಯಾಗಿಲಿ. ಆ ಒಂದು ಪ್ರಕರಣದಿಂದ ಯಾವುದೇ ತೊಂದರೆಯಾಗಲ್ಲ. ಲೋಕಸಭೆಯಲ್ಲಿ ಏನಾಗುತ್ತೆ ಎಂಬುದನ್ನು ಕಾದು ನೋಡಿ ಎಂದು ಜನಾರ್ದನ ಪೂಜಾರಿ ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಜನಾರ್ದನ ಪೂಜಾರಿಯನ್ನು ಎನ್‌ಕೌಂಟರ್‌ ಮಾಡಿ- ಕೈ ಅಲ್ಪಸಂಖ್ಯಾತ ಮುಖಂಡ ಕಿಡಿ

    ಜನಾರ್ದನ ಪೂಜಾರಿಯನ್ನು ಎನ್‌ಕೌಂಟರ್‌ ಮಾಡಿ- ಕೈ ಅಲ್ಪಸಂಖ್ಯಾತ ಮುಖಂಡ ಕಿಡಿ

    – ರಾಮಮಂದಿರ ಪರ ಮಾತನಾಡಿದ್ದಕ್ಕೆ ಸ್ವಪಕ್ಷಿಯನಿಂದಲೇ ಕಿಡಿ ನುಡಿ

    ಮಂಗಳೂರು: ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಮುಖಂಡನೊಬ್ಬ ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿಯವರನ್ನು ಎನ್ ಕೌಂಟರ್ ಮಾಡಿ ಹತ್ಯೆ ಮಾಡಬೇಕೆಂದು ಹೇಳಿರುವ ಆಡಿಯೋ ಈಗ ವೈರಲ್ ಆಗಿದೆ.

    ಭಾನುವಾರ ರಾಮ ಮಂದಿರ ನಿರ್ಮಾಣದ ಪರವಾಗಿ ಜನಾರ್ದನ ಪೂಜಾರಿ ಮಾಧ್ಯಮಗಳ ಜೊತೆ ಮಾತನಾಡಿದ್ದರು. ಪೂಜಾರಿ ಮಾತನ್ನು ಟೀಕಿಸಿ, ಆಡಿಯೋ ಬಿಡುಗಡೆ ಮಾಡಿರುವ ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತ ಮುಖಂಡನೊಬ್ಬ, ಪೂಜಾರಿ ಆರೆಸ್ಸೆಸ್ ಜೊತೆಗೆ ನಂಟು ಹೊಂದಿದ್ದಾರೆ. ಅವರು ಕಾಂಗ್ರೆಸಿನಲ್ಲಿ ಸೋಲಲು ಇದೇ ವರ್ತನೆ ಕಾರಣವಾಗಿದೆ. ರಾಮ ಮಂದಿರ ಪರವಾಗಿ ಮಾತನಾಡಿ ಬಿಜೆಪಿ ಮತ್ತು ಆರ್ ಎಸ್ ಎಸ್ ಜೊತೆಗಿನ ನಂಟನ್ನು ಬಹಿರಂಗಪಡಿಸಿದ್ದಾರೆ. ಇಂಥಹ ವ್ಯಕ್ತಿಯನ್ನು ದೇಶದಲ್ಲಿ ಬದುಕಲು ಬಿಡಬಾರದು. ಎನ್ ಕೌಂಟರ್ ನಡೆಸಿ ಸಾಯಿಸಬೇಕು. ಜೊತೆಗೆ ರಾಮ ಮಂದಿರದ ಪರವಾಗಿ ಮಾತನಾಡುವವರನ್ನು ಕೊಲ್ಲಬೇಕು. ಜನಾರ್ದನ ಪೂಜಾರಿಯನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಚಾಟನೆ ಮಾಡಬೇಕು ಅಂತಾ ಹೇಳಿಕೊಂಡಿದ್ದಾನೆ.

    ಸದ್ಯ ಈ ವ್ಯಕ್ತಿ ಯಾರೆಂದು ತಿಳಿದುಬಂದಿಲ್ಲ. ಆದ್ರೆ ಮಂಗಳೂರು ಅಥವಾ ಬಂಟ್ವಾಳ ತಾಲೂಕಿನ ಮುಸ್ಲಿಂ ವ್ಯಕ್ತಿ ಎನ್ನುವುದು ಗೊತ್ತಾಗಿದೆ. ಆಡಿಯೋ ವೈರಲ್ ಆಗಿದ್ದು ಜನಾರ್ದನ ಪೂಜಾರಿ ವಿರುದ್ಧ ಮಾತನಾಡಿದ ವ್ಯಕ್ತಿಯ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ.

    ಆಡಿಯೋದಲ್ಲೇನಿದೆ?:
    ದಕ್ಷಿಣ ಕನ್ನಡ ಜಿಲ್ಲೆಯ ಮಾಜಿ ಸಂಸದ ಜನಾರ್ದನ ಪೂಜಾರಿಯವರು ಆರ್‍ಎಸ್‍ಎಸ್‍ನವರಿಗೆ ಹುಟ್ಟಿದ್ದು. ಆರ್‍ಎಸ್‍ಎಸ್‍ನವರೊಂದಿಗೆ ಹೊಂದಾಣಿಕೆ ಇದ್ದಾರೆಂದು ಹೇಳಿ ಕಳೆದ 10 ವರ್ಷದಿಂದ ನಾನು ಹೇಳಿಕೆ ಕೊಡುತ್ತಿರುವಾಗ ಯಾರೂ ನಂಬುತ್ತಿರಲಿಲ್ಲ. ಕಾಂಗ್ರೆಸ್ ಪಕ್ಷದವರೇ ನನಗೆ ಬೈಯುತ್ತಿದ್ದರು. ಈಗೀಗ ಎಲ್ಲರಿಗೂ ಗೊತ್ತಾಗುತ್ತಿದೆ. ಇದನ್ನೂ ಓದಿ: ಕುದ್ರೋಳಿಯಲ್ಲಿ ಮನಸ್ಸಿನ ನೋವನ್ನು ರಾಹುಲ್ ಬಳಿ ತೋಡಿಕೊಂಡ ಪೂಜಾರಿ!

    ಆರ್‍ಎಸ್‍ಎಸ್‍ನೊಂದಿಗೆ ಹೊಂದಾಣಿಕೆ ಆಗಿದ್ದಾರೆ. ಇವರ ಪುಸ್ತಕ ಬಿಡುಗಡೆ ಮಾಡುವ ಸಂದರ್ಭದಲ್ಲಿ ಕರ್ನಾಟಕದ ರಾಜ್ಯದ ಮುಖ್ಯಮಂತ್ರಿ ಇರುವಾಗ ಅವರನ್ನು ಕರಿಯುತ್ತಿರಲಿಲ್ಲ. ಆರ್‍ಎಸ್‍ಎಸ್ ಪ್ರಭಾಕರ ಭಟ್ಟ, ಅದರ ಮುಖ್ಯಸ್ಥರನ್ನು ತರಿಸಿ ಉದ್ಘಾಟನೆ ಮಾಡಿಸುವಾಗಲೇ ಪ್ರತಿಯೊಬ್ಬ ನಮ್ಮ ದಕ್ಷಿಣ ಕನ್ನಡ ಜಿಲ್ಲೆಯ ಪ್ರಜೆಯೂ ಆಲೋಚನೆ ಮಾಡಬೇಕಿತ್ತು. ಇವರು ಕೋಮುವಾದಿ ಪ್ರಭಾಕರ್ ಭಟ್ಟನೊಂದಿಗೆ ಹೊಂದಾಣಿಕೆ, ಆರ್‍ಎಸ್‍ಎಸ್‍ನೊಂದಿಗೆ ಹೊಂದಾಣಿಕೆ ಆಗಿ ಇರುವಂತಹ ಜನಾರ್ದನ ಪೂಜಾರಿಯನ್ನು ಯಾವತ್ತೂ ಕಾಂಗ್ರೆಸ್ ಪಕ್ಷದಿಂದ ಉಚ್ಚಾಟನೆ ಮಾಡುವುದಿಲ್ಲ. ಅಷ್ಟರ ತನಕ ಕಾಂಗ್ರೆಸ್ ಪಕ್ಷಕ್ಕೆ ಪ್ರತಿಯೊಬ್ಬ ಮುಸ್ಲಿಮರು ಬೆಂಬಲ ಕೊಡಬಾರದು. ಇಂತಹ ನಾಲಾಯಕ್ ಬಿಜೆಪಿ, ಆರ್‍ಎಸ್‍ಎಸ್ ಒಟ್ಟಿಗೆ ಹೊಂದಾಣಿಕೆ ಇರುವ ಜನಾರ್ದನ ಪೂಜಾರಿಯನ್ನು ಯಾವ ಕಾರಣಕ್ಕೆ ಕಾಂಗ್ರೆಸ್ ಪಕ್ಷದಲ್ಲಿ ಇಟ್ಟಿದ್ದೀರಿ ಎಂದು ಬಹಿರಂಗವಾಗಿ ಕಾಂಗ್ರೆಸ್‍ನವರು ಹೇಳಿಕೆ ಕೊಡಬೇಕು.

    ಇಂತಹ ಕೊಳಕು ಮನುಷ್ಯನಿಗೆ ದೇವರು ಇಷ್ಟು ಆಯಸ್ಸು ಕೊಟ್ಟಿದ್ದೇ ದೊಡ್ಡ ದುರಂತ. ಇಂತಹ ಮನುಷ್ಯನಿಗೆ ನಮ್ಮ ದೇಶದಲ್ಲಿ ಇರಲು ಬಿಡಬಾರದು. ಇವನನ್ನು ಎನ್‍ಕೌಂಟರ್ ಮಾಡಿ ಕೊಲ್ಲಬೇಕು. ನಮ್ಮ ಸಂವಿಧಾನ ವಿರೋಧಿ ಹೇಳಿಕೆ ಕೊಡುತ್ತಿದ್ದಾರೆ. ಸುಪ್ರ್ರಿಂ ಕೋರ್ಟ್ ನಲ್ಲಿ ಒಂದು ಕೇಸ್ ಪೆಂಡಿಗ್ ಇರುವಾಗ ನಾನು ಇಲ್ಲಿ ರಾಮ ಮಂದಿರ ಕಟ್ಟಿಯೇ ತೀರುತ್ತೇನೆ ಎಂದು ಯಾರೆಲ್ಲ ಹೇಳಿಕೆ ಕೊಡುತ್ತಾರೋ ಅವರನ್ನು ಎನ್‍ಕೌಂಟರ್ ಮಾಡಬೇಕು. ಎನ್‍ಕೌಂಟರ್ ಮಾಡಿ ದೇಶದಿಂದ ಶೂಟ್ ಮಾಡಿ ಕೊಲ್ಲಬೇಕು. ಇಲ್ಲದಿದ್ದರೆ ದೇಶದಿಂದ ಗಡೀಪಾರು ಮಾಡಬೇಕು. ಇಂತಹ ಆರ್‍ಎಸ್‍ಎಸ್‍ಗೆ ಹುಟ್ಟಿದಂತಹ ಜನಾರ್ದನ ಪೂಜಾರಿ ಸಮೇತ ಯಾವ ಕಾರಣಕ್ಕೂ ನಮ್ಮ ಜಿಲ್ಲೆಯಲ್ಲಿ ಇವರನ್ನು ಇಡಬಾರದು. ನಮ್ಮ ದೇಶದಲ್ಲಿ ಇಡಬಾರದು. ಯಾವ ಕಾರಣಕ್ಕೂ ಕಾಂಗ್ರೆಸ್ ಪಕ್ಷದಲ್ಲಿ ಇಡಬಾರದು. ಇದನ್ನೂ ಓದಿ: ಮುಸ್ಲಿಂ, ಕ್ರಿಶ್ಚಿಯನ್ನರೂ ರಾಮಮಂದಿರವನ್ನು ಬಯಸುತ್ತಾರೆ- ಜನಾರ್ದನ ಪೂಜಾರಿ

    ಕಾಂಗ್ರೆಸ್ ಪಕ್ಷದ ಪ್ರತಿಯೊಬ್ಬ ನಾಯಕರಿಗೂ ಹೇಳೋದು ನಾನು ಒಂದೇ. ಈ ಆರ್‍ಎಸ್‍ಎಸ್ ಮುಖವಾಡದ ಜನಾರ್ದನ ಪೂಜಾರಿಯನ್ನು ತಕ್ಷಣ ಕಾಂಗ್ರೆಸ್ ಪಕ್ಷದಿಂದ ಉಚ್ಚಾಟನೆ ಮಾಡಬೇಕು. ಮಾಡುವುದಿಲ್ಲವಾದ್ರೆ ನಾನು ಬಹಿರಂಗವಾಗಿ ನಾಳೆ ನಾನು ವಿಡಿಯೋ ಕಳಿಸ್ತೇನೆ ಕಾಂಗ್ರೆಸ್ ಪಕ್ಷಕ್ಕೆ ಧಿಕ್ಕಾರ ಹಾಕ್ತೇನೆ. ಈ ನಾಲಾಯಕನಿಂದ ಕಳೆದ ಮೂವತ್ತು ವರ್ಷದಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಸೋಲಲು ಕಾರಣ. ಇವರು ಸಿದ್ದರಾಮಯ್ಯರ ವಿರುದ್ಧ ಹೇಳಿಕೆ ಕೊಡುವಾಗಲೇ ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಹಾಗೂ ನಾಯಕರುಗಳು ಆಲೋಚನೆ ಮಾಡಬೇಕಿತ್ತು.

    ಸಿದ್ದರಾಮಯ್ಯನವರಂತಹ ನಾಯಕರ ಟೀಕೆ ಮಾಡೋದಾದ್ರೆ ಅರ್ಥ ಮಾಡಿಕೊಳ್ಳಬೇಕಿತ್ತು. ಇದೇ ಆರ್‍ಎಸ್‍ಎಸ್‍ನವರು ಹೇಳಿಕೆ ಕೊಟ್ಟದ್ದನ್ನು ಹೇಳ್ತಾ ಇದ್ದದ್ದು ಹೊರತು ಬೇರೇನು ಅಲ್ಲ. ಎಲ್ಲಾ ಕಾಂಗ್ರೆಸ್ ಪಕ್ಷವನ್ನು ನಾಶ ಮಾಡಿ ಇವರು ಸಾಯುವುದಾದರೆ ಏನು ಇವರದ್ದು ಕೊಡುಗೆ ಕಾಂಗ್ರೆಸ್ ಪಕ್ಷಕ್ಕೆ? ಇವರದ್ದು ಇದೇ ಕೊಡುಗೆನಾ? ಮುಸ್ಲಿಮರ ಬಗ್ಗೆ ಇಷ್ಟು ಕೀಳಾಗಿ ಮಾತನಾಡುವಂತಹ ನಾಲಾಯಕ ಜನಾರ್ದನ ಪೂಜಾರಿ ನಿನಗೆ ಧಿಕ್ಕಾರ. ನಿನಗೆ ದೇವರು ತುಂಬಾ ಆಯಸ್ಸು ಕೊಡಲ್ಲ. ಇಷ್ಟು ಸಮಯ ನಿನ್ನನ್ನು ಬದುಕಿಸಿ ಇಟ್ಟಿದ್ದು ದುರಂತ.

    https://www.youtube.com/watch?v=44mqtl83rSI&feature=youtu.be

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ದುರಹಂಕಾರಿ ಮನೋಭಾವ ಬದಲಿಸದಿದ್ದರೆ ಸಿಎಂ ಸೋಲ್ತಾರೆ- ಜನಾರ್ದನ ಪೂಜಾರಿ

    ದುರಹಂಕಾರಿ ಮನೋಭಾವ ಬದಲಿಸದಿದ್ದರೆ ಸಿಎಂ ಸೋಲ್ತಾರೆ- ಜನಾರ್ದನ ಪೂಜಾರಿ

    ಮಂಗಳೂರು: ಕಾಂಗ್ರೆಸ್ ನಾಯಕರ ವಿರುದ್ಧ ಪ್ರತೀ ಬಾರಿಯೂ ಗುಡುಗುತ್ತಿರುವ ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಅವರು ಈ ಬಾರಿಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ.

    ನಗರದ ಕಾಂಗ್ರೆಸ್ ಚುನಾವಣಾ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯರಿಗೆ ಸಲಹೆಗಳನ್ನು ಕೊಟ್ಟಿದ್ದು ಹೌದು. ದುರಹಂಕಾರಿ ಮನೋಭಾವ ಬದಲಿಸದಿದ್ದರೆ ಸೋಲ್ತಾರೆ ಎಂದಿದ್ದೆ. ಪಕ್ಷಕ್ಕಿಂತ ತಾನೇ ದೊಡ್ಡವನೆಂದು ನಡೆದುಕೊಂಡರೆ ಉಳಿಗಾಲವಿಲ್ಲ. ಈಗಲೂ ಹೇಳ್ತೇನೆ, ದುರಹಂಕಾರ ಬಿಟ್ಟರೆ ಸಿದ್ದರಾಮಯ್ಯ ಉಳೀತಾರೆ. ಇಲ್ಲಾಂದ್ರೆ ಸೋಲುತ್ತಾರೆ, ಸಲಹೆ ಕೊಟ್ಟಿದ್ದು ಕಾಂಗ್ರೆಸ್ ಉಳಿವಿಗೆ. ಆದರೆ, ಸಿದ್ದರಾಮಯ್ಯ ಆಡಳಿತವನ್ನು ಒಳ್ಳೆದಾಗಿ ನಡೆಸಿದ್ದಾರೆ. ಮುಂದೇನು ಸಿದ್ರಾಮಯ್ಯರೇ ಸಿಎಂ ಆಗ್ತಾರೆ ಅಂತ ಹೇಳಿದ್ದಾರೆ.

    ಇದೇ ವೇಳೆ ಜೆ.ಆರ್ ಲೋಬೋ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ. ಲೋಬೋ ಬಂಟ ಸಮಾಜದ ವಿರೋಧಿಯೆಂದು ಹೇಳುತ್ತಿದ್ದಾರೆ. ಅಲೋಶಿಯಸ್ ಕಾಲೇಜು ರಸ್ತೆಗೆ ಸುಂದರರಾಮ್ ಶೆಟ್ಟಿ ಹೆಸರಿಡುವ ವಿಚಾರದಲ್ಲಿ ಬಂಟರನ್ನು ಎತ್ತಿಕಟ್ಟುತ್ತಿದ್ದಾರೆ. ಬಂಟರಿಗೆ ಕಾಂಗ್ರೆಸ್ಸಿನಲ್ಲಿ ಸಾಕಷ್ಟು ಅವಕಾಶ ನೀಡಲಾಗಿದೆ. ವಿಜಯಾ ಬ್ಯಾಂಕಿನಲ್ಲಿ ಎಷ್ಟು ಮಂದಿ ಬಂಟರು ಅಧ್ಯಕ್ಷರಾಗಿಲ್ಲ. ಇಂಥ ಅಪಪ್ರಚಾರ ಏನಿದ್ದರೂ ಲೋಬೋ ಈ ಬಾರಿ ಗೆಲ್ತಾರೆ. ರಾಜ್ಯದಲ್ಲಿ ಮತ್ತೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬರುತ್ತದೆ ಅಂತ ಅವರು ತಿಳಿಸಿದ್ರು.

    ಪೂಜಾರಿ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದಂತೆಯೇ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಎದ್ದು ಹೋಗಿದ್ದು, ಹರೀಶ್ ಕುಮಾರ್ ವಿರುದ್ಧ ಜನಾರ್ದನ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದರು. ಹರೀಶ್ ಕುಮಾರ್ ಯಾಕೆ ಎದ್ದು ಹೋದ್ರು? ನನಗಿಂತ ಚಿದಂಬರಂ ಮುಖ್ಯ ಆಯ್ತಾ? ಚಿದಂಬರಂ ಚುನಾವಣಾ ಸಮಯದಲ್ಲಿ ಮಾತ್ರ ಬರ್ತಾರೆ. ಚಿದಂಬರಂ ಮಾಡಿದ್ದನ್ನು ಬಿಜೆಪಿಯವರು ಹೇಳಿದ್ರೆ ಕಾಂಗ್ರೆಸ್ ಸರ್ವನಾಶ ಆಗ್ಬಹುದು. ಚಿದಂಬರಂ ಏನೆಲ್ಲ ಮಾಡಿಟ್ಟಿದ್ದಾರೆ ನಿಮಗೆ ಗೊತ್ತಾ? ಹರೀಶ್ ಕುಮಾರ್ ಯಾಕೆ ಇಲ್ಲಿ ಆಟ ಆಡೋಕೆ ಬಂದಿದ್ದಾ ಅಂತ ತುಳು ಭಾಷೆಯಲ್ಲೇ ಕಾಂಗ್ರೆಸ್ ಮುಖಂಡರನ್ನು ಗದರಿಸಿದ್ರು.

    https://www.youtube.com/watch?v=aZPVzgALjqk

  • ಬಂಟ್ವಾಳದಲ್ಲಿ ರಾಹುಲ್ ಗಾಂಧಿ, ಸಿಎಂಗಿಂತ ಪೂಜಾರಿಗೆ ಹೆಚ್ಚು ಜೈಕಾರ!

    ಬಂಟ್ವಾಳದಲ್ಲಿ ರಾಹುಲ್ ಗಾಂಧಿ, ಸಿಎಂಗಿಂತ ಪೂಜಾರಿಗೆ ಹೆಚ್ಚು ಜೈಕಾರ!

    ಮಂಗಳೂರು: ರಾಹುಲ್ ಗಾಂಧಿ ಕಳೆದ ಎರಡು ದಿನದಿಂದ ಕರಾವಳಿ ಪ್ರವಾಸದಲ್ಲಿದ್ದಾರೆ. ದಕ್ಷಿಣ ಕನ್ನಡದ ಬಂಟ್ವಾಳದಲ್ಲಿ ಬೃಹತ್ ಸಮಾವೇಶ ಮಾಡಿದ್ದಾರೆ. ಆದರೆ ಸಮಾವೇಶದಲ್ಲಿ ಶೈನ್ ಆಗಿದ್ದು ಸಿಎಂ ಅಲ್ಲ, ರಾಗಾ ಅಲ್ಲ ಬದಲಾಗಿ ಜನಾರ್ದನ ಪೂಜಾರಿ.

    ದಕ್ಷಿಣ ಕನ್ನಡ ಜಿಲ್ಲೆಯ ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಅವರ ಮನೆಯ ವಠಾರದಲ್ಲೇ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಅನಾರೋಗ್ಯದಿಂದಾಗ ಪೂಜಾರಿ ಸಮಾವೇಶಕ್ಕೆ ಬರ್ತಾರೋ ಇಲ್ವೋ ಎಂಬ ಸಂಶಯ ಇತ್ತು. ಆದರೆ ರಾಹುಲ್ ಭಾಷಣ ಮುಗಿಯುತ್ತಿದ್ದಂತೆ, ಅನಾರೋಗ್ಯದ ಹೊರತಾಗಿಯೂ ಪೂಜಾರಿ ನಿಧಾನವಾಗಿ ನಡೆದು ಬಂದು ವೇದಿಕೆ ಹತ್ತಿದರು.

    ಈ ವೇಳೆ ಕೇಳಿ ಬಂದ ಜಯಘೋಷಕ್ಕೆ ಸಿಎಂ ಸಿದ್ದರಾಮಯ್ಯ ಕೆಲಕಾಲ ಭಾಷಣ ಸ್ಥಗಿತಗೊಳಿಸಬೇಕಾಯ್ತು. ಸಿಎಂ , ರಾಹುಲ್ ಗಾಂಧಿ ಗಿಂತ ಜಾಸ್ತಿ ಜನಾರ್ದನ ಪೂಜಾರಿಗೆ ಬಂಟ್ವಾಳದಲ್ಲಿ ಜೈಕಾರ ಬಿದ್ದಿದೆ. ಪೂಜಾರಿಗೆ ವ್ಯಕ್ತವಾದ ಜನಬೆಂಬಲಕ್ಕೆ ಕೆಲಕಾಲ ಸಿಎಂ ಕೂಡಾ ಕಕ್ಕಾಬಿಕ್ಕಿಯಾದರು.

    ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ರಾಹುಲ್ ಪ್ರವಾಸ ನಮಾಜ್ ವಿಚಾರಕ್ಕೂ ಗಮನ ಸೆಳೆಯಿತು. ಅತೀ ಹೆಚ್ಚು ಮುಸ್ಲಿಂ ಮತದಾರರನ್ನು ಹೊಂದಿರುವ ಈ ಕ್ಷೇತ್ರದಲ್ಲಿ ಶುಕ್ರವಾರದ ದಿನ ಸಮಾವೇಶ ಹಮ್ಮಿಕೊಂಡ ಕಾರಣ ಕಾಂಗ್ರೇಸ್ ಪಕ್ಷ ತರಾತುರಿಯ ಕಾರ್ಯಕ್ರಮ ನಡೆಸಿತು.

    ಸರಿಯಾದ ಸಮಯಕ್ಕ ಆರಂಭವಾದ ಸಮಾವೇಶದಲ್ಲಿ ವೇದಿಕೆ ಏರುತ್ತಿದ್ದಂತೆ ರಾಹುಲ್ ಗಾಂಧಿ ಭಾಷಣ ಆರಂಭಿಸಿದರು. ಈ ಮೂಲಕ ಮಧ್ಯಾಹ್ನದ ನಮಾಝ್ ಗೂ ಮುನ್ನ ಸಮಾವೇಶ ಮುಗಿಸಲು ಪ್ರಯತ್ನಿಸಲಾಯ್ತು. ಸಿಎಂ ಸಿದ್ದರಾಮಯ್ಯ ಕೂಡಾ ತಮ್ಮ ಭಾಷಣಕ್ಕೂ ಮುನ್ನ, ನಮಾಜ್ ಗೆ ಅಡ್ಡಿಯಾಗದಂತೆ ಶೀಘ್ರ ಭಾಷಣೆ ಮುಗಿಸುವ ಭರವಸೆ ನೀಡಿ ಭಾಷಣ ಮುಗಿಸಿದರು.

  • ಇದ್ದಕ್ಕಿದ್ದಂತೆ ಜನಾರ್ದನ ಪೂಜಾರಿ ಮೇಲೆ ಪ್ರೀತಿ – ಕಾಲಿಗೆ ಬಿದ್ದ ಕೈ ನಾಯಕರು!

    ಇದ್ದಕ್ಕಿದ್ದಂತೆ ಜನಾರ್ದನ ಪೂಜಾರಿ ಮೇಲೆ ಪ್ರೀತಿ – ಕಾಲಿಗೆ ಬಿದ್ದ ಕೈ ನಾಯಕರು!

    ಮಂಗಳೂರು: ಕೈ ನಾಯಕರ ವಿರುದ್ಧ ನೇರವಾಗಿ ಗುಡುಗುತ್ತಿದ್ದ ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿಯವರ ಮೇಲೆ ಕಾಂಗ್ರೆಸ್ ನಾಯಕರಿಗೆ ಈಗ ಪ್ರೀತಿ ಉಕ್ಕಿ ಹರಿದಿದೆ.

    ನಗರದ ಟಿಎಂಎಪೈ ಹಾಲ್ ನಲ್ಲಿ ನಡೆದ ಚುನಾವಣಾ ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮದ ವೇಳೆ ಆಗಮಿಸಿದ್ದ ಪೂಜಾರಿ ಅವರ ಕಾಲು ಮುಟ್ಟಿ ಮುಖಂಡರು ನಮಸ್ಕರಿಸಿದ್ದಾರೆ. ಈ ಮೂಲಕ ಕಾಂಗ್ರೆಸ್ ಬಿಲ್ಲವ ಮತಗಳ ಮೇಲೆ ಕಣ್ಣಿಟ್ಟಿದೆಯಾ ಎಂಬ ಪ್ರಶ್ನೆಯೊಂದು ರಾಜಕೀಯ ವಲಯದಲ್ಲಿ ಇದೀಗ ಉದ್ಭವಿಸಿದೆ.

    ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಕೂಡ ಪೂಜಾರಿ ಕಾಲಿಗೆ ಬಿದ್ದರು. ಇನ್ನು ರಾಹುಲ್ ಗಾಂಧಿ ಕೂಡ ಕಾರ್ಯಕ್ರಮ ಮುಗಿಯೋವರೆಗೂ ಪೂಜಾರಿ ಜೊತೆಗಿದ್ದರು. ಇದನ್ನೂ ಓದಿ: ಕಾಂಗ್ರೆಸ್‍ನಿಂದ ಚುನಾವಣಾ ಪ್ರಣಾಳಿಕೆ ರಿಲೀಸ್ – ರಾಜ್ಯದ ಜನತೆಗೆ ಭರವಸೆಗಳ ಮಹಾಪೂರ

    ಸರಣಿ ಟೀಕೆಗಳ ಪರಿಣಾಮವಾಗಿ ಪಕ್ಷದ ಚಟುವಟಿಕೆಗಳಿಂದಲೇ ಹಿರಿಯ ನಾಯಕ ಜನಾರ್ದನ ಪೂಜಾರಿಯನ್ನು ಕಾಂಗ್ರೆಸ್ ನಾಯಕರು ದೂರ ಇರಿಸಿದ್ದರು. ಜಿಲ್ಲಾ ಕಾಂಗ್ರೆಸ್ ಕಚೇರಿಯನ್ನು ಪ್ರೆಸ್‍ಮೀಟ್‍ಗೆ ಬಳಸಿಕೊಳ್ಳಲು ಸಹ ಅವಕಾಶ ನೀಡಿರಲಿಲ್ಲ. ಆದ್ರೆ ಈಗ ಚುನಾವಣೆ ಬಂದ ಕಾರಣ ಕಾಂಗ್ರೆಸ್ ನಾಯಕರು ಪೂಜಾರಿಗೆ ಎಲ್ಲಿಲ್ಲದ ಗೌರವ ನೀಡಿದ್ದು ವಿಶೇಷವಾಗಿತ್ತು.

  • ಜನಾರ್ದನ ಪೂಜಾರಿಯವರ ಕಾಲು ಮುಟ್ಟಿ ಆಶೀರ್ವಾದ ಕೋರಿದ ರಮಾನಾಥ ರೈ

    ಜನಾರ್ದನ ಪೂಜಾರಿಯವರ ಕಾಲು ಮುಟ್ಟಿ ಆಶೀರ್ವಾದ ಕೋರಿದ ರಮಾನಾಥ ರೈ

    ಮಂಗಳೂರು: ಬಂಟ್ವಾಳ ಕ್ಷೇತ್ರದ ಶಾಸಕರು ಹಾಗೂ ಈ ಬಾರಿ ಅಭ್ಯರ್ಥಿಯೂ ಆಗಿರುವ ಸಚಿವ ರಮಾನಾಥ ರೈ ಅವರು ಇಂದು ಹಿರಿಯ ಕಾಂಗ್ರೆಸಿಗ ಜನಾರ್ದನ ಪೂಜಾರಿ ಅವರ ಮನೆಗೆ ಭೇಟಿ ನೀಡಿದ್ದರು.

    ನಾಳೆ ನಾಮಪತ್ರ ಸಲ್ಲಿಸಲಿರುವ ಸಚಿವರು ಅದಕ್ಕೂ ಮುನ್ನ ಜನಾರ್ದನ ಪೂಜಾರಿ ಅವರ ಆಶೀರ್ವಾದ ಪಡೆದರು. ರಮಾನಾಥ ರೈ ತಮ್ಮನ್ನು ನಿಂದಿಸಿದರೆಂದು ಸಾರ್ವಜನಿಕ ಕಾರ್ಯಕ್ರಮದಲ್ಲಿ ಜನಾರ್ದನ ಪೂಜಾರಿ ಅತ್ತಿದ್ದರು. ಇದೇ ವಿಚಾರವಾಗಿ ಕ್ಷೇತ್ರದ ಬಿಲ್ಲವ ಮತದಾರರಲ್ಲಿ ರೈ ವಿರುದ್ಧ ಆಕ್ರೋಶ ಮೂಡುವಂತಾಗಿತ್ತು.

    ಪೂಜಾರಿಯವರನ್ನು ಪಕ್ಷದಲ್ಲಿ ಮೂಲೆಗುಂಪು ಮಾಡಿದ್ದೇ ರಮಾನಾಥ ರೈ ಎಂಬ ಆರೋಪವೂ ಕೇಳಿಬಂದಿತ್ತು. ಆ ನಂತರ ಒಂದು ವರ್ಷ ಕಾಲ ಜನಾರ್ದನ ಪೂಜಾರಿ ಮತ್ತು ರಮಾನಾಥ ರೈ ನಡುವೆ ಅಂತರ ಕಂಡುಬಂದಿತ್ತು.

    ಚುನಾವಣೆ ಹೊಸ್ತಿಲಲ್ಲಿ ಸಚಿವ ರಮಾನಾಥ ರೈಯವರು ಜನಾರ್ದನ ಪೂಜಾರಿಯವರ ಕಾಲು ಮುಟ್ಟಿ ಆಶೀರ್ವಾದ ಕೋರಿದ್ದಾರೆ. ವೈಮನಸ್ಸು ಏನಿದ್ದರೂ, ಪೂಜಾರಿಯವರು ರಮಾನಾಥ ರೈ ಭೇಟಿ ಸಂದರ್ಭ ತೋರಿಸಿಕೊಂಡಿಲ್ಲ. ಬೆಂಬಲಿಗರ ಜೊತೆ ಮನೆಗೆ ಬಂದ ರೈ ಅವರನ್ನು ವಾಹನದ ವರೆಗೂ ಬಂದು ಬೀಳ್ಕೊಟ್ಟಿದ್ದಾರೆ.

  • ಬಿಜೆಪಿ ಹಿಂದುತ್ವ ಅಸ್ತ್ರಕ್ಕೆ ಕಾಂಗ್ರೆಸ್ ಪ್ರತ್ಯಸ್ತ್ರ – ಜನಾರ್ದನ ಪೂಜಾರಿ ಸದ್ಬಳಕೆಗೆ ಮೆಗಾ ಪ್ಲಾನ್

    ಬಿಜೆಪಿ ಹಿಂದುತ್ವ ಅಸ್ತ್ರಕ್ಕೆ ಕಾಂಗ್ರೆಸ್ ಪ್ರತ್ಯಸ್ತ್ರ – ಜನಾರ್ದನ ಪೂಜಾರಿ ಸದ್ಬಳಕೆಗೆ ಮೆಗಾ ಪ್ಲಾನ್

    ಮಂಗಳೂರು: 2018ರ ವಿಧಾನಸಭಾ ಚುನಾವಣೆಯು ಕಾಂಗ್ರೆಸ್ ಹಾಗೂ ಬಿಜೆಪಿ ಪಾಲಿಗೆ ಮಾಡು ಇಲ್ಲವೆ ಮಡಿ ಚುನಾವಣೆಯಾಗಲಿದ್ದು, ಕರಾವಳಿಯಲ್ಲಿ ಬಿಜೆಪಿ ಹಿಂದುತ್ವದ ಪ್ರಬಲ ಅಸ್ತ್ರ ಪ್ರಯೋಗಿಸಿದೆ. ಬಿಜೆಪಿಯ ಈ ಅಸ್ತ್ರಕ್ಕೆ ಕೌಂಟರ್ ಕೊಡಲು ಮುಂದಾಗಿರುವ ಕಾಂಗ್ರೆಸ್, ತನ್ನ ಬತ್ತಳಿಕೆಯಲ್ಲಿರುವ ಹಳೆಯ ಪ್ರಬಲ ಅಸ್ತ್ರ ಬಳಕೆಗೆ ನಿರ್ಧರಿಸಿದೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

    2 ದಿನಗಳ ಹಿಂದೆಯಷ್ಟೆ ಮಂಗಳೂರಿಗೆ ಬಂದಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪಕ್ಷದ ಆ ಹಳೆಯ ಅಸ್ತ್ರಕ್ಕೆ ಹೊಳಪು ನೀಡುವ ಕೆಲಸ ಮಾಡಿದ್ದಾರೆ. ಕರಾವಳಿಯಲ್ಲಿ ಪಕ್ಷ ಗೆಲ್ಲಿಸಲು ಅದೇ ಪ್ರಬಲ ಅಸ್ತ್ರ ಅನಿವಾರ್ಯ ಎಂದು ಸಿಎಂ ಸಿದ್ದರಾಮಯ್ಯ ಅವರು ಕೂಡ ರಾಹುಲ್ ಗಾಂಧಿ ಬಳಿ ಒಪ್ಪಿಕೊಂಡಿದ್ದಾರೆ. ಹೀಗೆ ಬಿಜೆಪಿಗೆ ಎದುರಾಗಿ ಕಾಂಗ್ರೆಸ್ ಹಿರಿಯ ನಾಯಕ ಜನಾರ್ದನ ಪೂಜಾರಿ ಅವರನ್ನು ಬಳಸಲು ಮುಂದಾಗಿದೆ. ಇದನ್ನೂ ಓದಿ:  ಕುದ್ರೋಳಿಯಲ್ಲಿ ಮನಸ್ಸಿನ ನೋವನ್ನು ರಾಹುಲ್ ಬಳಿ ತೋಡಿಕೊಂಡ ಪೂಜಾರಿ!

    ದಕ್ಷಿಣ ಕನ್ನಡ ಜಿಲ್ಲೆಯ 8 ಕ್ಷೇತ್ರದಲ್ಲಿ 2013 ರ ಚುನಾವಣೆ ಯಲ್ಲಿ ಕಾಂಗ್ರೆಸ್ 7 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಆದರೆ 2018 ರ ಚುನಾವಣೆಯಲ್ಲಿ 2 ಸ್ಥಾನ ಗೆದ್ದರೆ ಹೆಚ್ಚು ಎಂಬ ಸ್ಥಿತಿ ಇದೆ ಎಂಬುದು ಕಾಂಗ್ರೆಸ್ ಸಮೀಕ್ಷೆಯಿಂದ ತಿಳಿದು ಬಂದಿದೆ. ಆದ್ದರಿಂದ ಗೆಲುವಿಗಾಗಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಜನಾರ್ದನ ಪೂಜಾರಿಯವರ ಮೊರೆ ಹೋಗಿದೆ ಎಂದು ಹೇಳಲಾಗ್ತಿದೆ.

    ದಕ್ಷಿಣ ಕನ್ನಡ ಜಿಲ್ಲೆಯ ಹಿರಿಯ ನಾಯಕ ಜನಾರ್ದನ ಪೂಜಾರಿ ಬಿಲ್ಲವ ಸಮುದಾಯಕ್ಕೆ ಸೇರಿದವರಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಲ್ಲವ ಮತದಾರರೇ ನಿರ್ಣಾಯಕ. ಇನ್ನೊಂದೆಡೆ ರಾಜ್ಯ ನಾಯಕರ ವಿರುದ್ಧ ಜನಾರ್ದನ ಪೂಜಾರಿ ಕೂಡ ಅಸಮಧಾನ ಹೊಂದಿದ್ದರು. ಹಿರಿಯ ನಾಯಕನ ಮನವೊಲಿಕೆ ಜೊತೆಗೆ ಪಕ್ಷದ ಗೆಲುವಿನ ಹೊಣೆಯನ್ನು ಜನಾರ್ದನ ಪೂಜಾರಿ ಹೆಗಲಿಗೆ ರಾಹುಲ್ ಗಾಂಧಿ ಹೊರಿಸಿದ್ದಾರೆ.

    ಜಿಲ್ಲೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುವ ಜವಬ್ದಾರಿ ಜನಾರ್ದನ ಪೂಜಾರಿ ಅವರದ್ದಾಗಿದೆ. ಆ ಮೂಲಕ ಬಿಲ್ಲವ ಸಮುದಾಯದ ಮತವನ್ನು ಸೆಳೆದಂತಾಯ್ತು. ಅಲ್ಲದೆ 80 ವರ್ಷದ ಹಿರಿಯ ನಾಯಕನ ಸತತ ಸೋಲಿನ ಸಿಂಪತಿ ಪಕ್ಷಕ್ಕೆ ಮತವಾಗಿ ಪರಿವರ್ತನೆ ಆಗಬಹುದು ಎಂಬುದು ಕಾಂಗ್ರೆಸ್ ನಾಯಕರ ಲೆಕ್ಕಾಚಾರವಾಗಿದೆ. ಒಟ್ಟಿನಲ್ಲಿ ಜನಾರ್ದನ ಪೂಜಾರಿ ಎಂಬ ಹಿರಿಯ ನಾಯಕನಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಟ್ಟ ಕಟ್ಟಿ ಗೆಲುವಿನ ದಡ ಸೇರುವ ಕಾಂಗ್ರೆಸ್ ನ ಯತ್ನ ಸಫಲವಾಗುತ್ತಾ ಎಂಬುದೇ ಸದ್ಯದ ಕುತೂಹಲ.

  • ಜನಾರ್ದನ ಪೂಜಾರಿ ಪ್ಯಾಂಟ್ ಒಳಗೆ RSSನ ಚಡ್ಡಿ ಇದೆ: ಮಧು ಬಂಗಾರಪ್ಪ ಲೇವಡಿ

    ಜನಾರ್ದನ ಪೂಜಾರಿ ಪ್ಯಾಂಟ್ ಒಳಗೆ RSSನ ಚಡ್ಡಿ ಇದೆ: ಮಧು ಬಂಗಾರಪ್ಪ ಲೇವಡಿ

    – ಬಿಜೆಪಿಯವರು ಅನಂತ್ ಕುಮಾರ್ ಹೆಗಡೆಗೆ ಗೋಮೂತ್ರದಿಂದ ಸ್ನಾನ ಮಾಡಿಸಲಿ

    ಮಂಗಳೂರು: ಕಾಂಗ್ರೆಸ್ ಹಿರಿಯ ಮುಖಂಡ ಜನಾರ್ದನ್ ಪೂಜಾರಿಯವರ ಪ್ಯಾಂಟ್ ಒಳಗೆ ಆರ್ ಎಸ್‍ಎಸ್ ಚಡ್ಡಿ ಹಾಕಿಕೊಳ್ಳುತ್ತಾರೆ ಎಂದು ಜೆಡಿಎಸ್ ಶಾಸಕ ಮಧು ಬಂಗಾರಪ್ಪ ಲೇವಡಿ ಮಾಡಿದ್ದಾರೆ.

    ಕೆಲವು ದಿನಗಳ ಹಿಂದೆ ಪ್ರಕಾಶ್ ರೈ ಭಾಗಿಯಾಗದ್ದ ಕಾರ್ಯಕ್ರಮದ ವೇದಿಕೆಯನ್ನು ಬಿಜೆಪಿ ಅವರು ಗೋ ಮೂತ್ರದಿಂದ ಶುದ್ಧಿ ಮಾಡುತ್ತಾರೆ. ಇಂದು ಅದೇ ಬಿಜೆಪಿಯವರು ಗೋ ಮೂತ್ರದಿಂದ ಕೇಂದ್ರ ಸಚಿವ ಅನಂತಕುಮಾರ್ ಹೆಗ್ಡೆ ಅವರಿಗೆ ಸ್ನಾನ ಮಾಡಿಸಿ ಎಂದು ಮಧು ಬಂಗಾರಪ್ಪ ಸಲಹೆ ನೀಡಿದ್ರು. ಇದನ್ನೂ ಓದಿ: ಪ್ರಕಾಶ್ ರೈ ಭಾಗವಹಿಸಿದ್ದ ಕಾರ್ಯಕ್ರಮದ ವೇದಿಕೆಯನ್ನು ಶುದ್ಧಗೊಳಿಸಿದ ಬಿಜೆಪಿ

    ಕಾಂಗ್ರೆಸ್ ಹಿರಿಯ ಮುಖಂಡ ಜನಾರ್ದನ ಪೂಜಾರಿ ತನ್ನ ಆತ್ಮಕಥೆ ಬಿಡುಗಡೆಯಂದು ಕಲ್ಲಡ್ಕ ಪ್ರಭಾಕರ್ ಭಟ್‍ರನ್ನು ಕರೆಸಿಕೊಂಡಿದ್ದಾರೆ. ಕರಾವಳಿಯ ಗಲಭೆಗಳಿಗೆ ಕಾರಣಕರ್ತರಾದ ಭಟ್ ಜೊತೆಗೆನೇ ಪೂಜಾರಿ ಕೈ ಜೋಡಿಸಿರೋದು ಅವರ ಚಾಳಿಯನ್ನು ತೋರಿಸುತ್ತದೆ. ಪೂಜಾರಿಯ ಅಂತಹ ನಾಯಕರಿಂದ ಕರಾವಳಿಯಲ್ಲಿ ಗಲಾಟೆಗಳು ನಡೆಯುತ್ತಿವೆ ಎಂದು ಆರೋಪಿಸಿದರು. ಇದನ್ನೂ ಓದಿ: ಪೂಜಾರಿ ಆತ್ಮಕತೆ ಸುಳ್ಳಿನಕಂತೆ, ಬಂಗಾರಪ್ಪ ಇಂದಿರಾಗಾಂಧಿಗೆ ಹೊಡೆಯಲು ಯತ್ನಿಸಿದ್ದು ಸುಳ್ಳು: ಮಧು ಬಂಗಾರಪ್ಪ

    ಜನಾರ್ದನ ಪೂಜಾರಿ ವಯಸ್ಸಿಗೆ ಗೌರವ ಹೊರತು ವ್ಯಕ್ತಿಗೆ ಕೊಡಲ್ಲ. ಜನಾರ್ದನ ಪೂಜಾರಿಯವರದ್ದು ಆತ್ಮಚರಿತ್ರೆ ಅಲ್ಲ, ಅದು ಪೂಜಾರಿಯ ಪಾಪದ ಕೊಡವಾಗಿದೆ. ಬಂಗಾರಪ್ಪನವರು ಇಂದಿರಾಗಾಂಧಿ ಗೆ ಹೊಡೆದಿದ್ದಾರೆ ಎಂದು ಪೂಜಾರಿ ಸುಳ್ಳನ್ನು ಹೇಳಿದ್ದಾರೆ. ಇಂತಹ ಸುಳ್ಳಿನ ಆತ್ಮಕಥೆಯನ್ನು ಯಾರೂ ಓದಬೇಡಿ ಎಂದು ಹೇಳಿದ್ದಾರೆ.

  • ಪೂಜಾರಿ ಆತ್ಮಕತೆ ಸುಳ್ಳಿನಕಂತೆ, ಬಂಗಾರಪ್ಪ ಇಂದಿರಾಗಾಂಧಿಗೆ ಹೊಡೆಯಲು ಯತ್ನಿಸಿದ್ದು ಸುಳ್ಳು: ಮಧು ಬಂಗಾರಪ್ಪ

    ಪೂಜಾರಿ ಆತ್ಮಕತೆ ಸುಳ್ಳಿನಕಂತೆ, ಬಂಗಾರಪ್ಪ ಇಂದಿರಾಗಾಂಧಿಗೆ ಹೊಡೆಯಲು ಯತ್ನಿಸಿದ್ದು ಸುಳ್ಳು: ಮಧು ಬಂಗಾರಪ್ಪ

    ಶಿವಮೊಗ್ಗ: ಮಾಜಿ ಸಂಸದ, ಮಾಜಿ ಸಚಿವ, ಕಾಂಗ್ರೆಸ್ ನಾಯಕ ಜನಾರ್ದನ ಪೂಜಾರಿ ಅವರ ಆತ್ಮಕತೆ ಸಾಲ ಮೇಳದ ಸಂಗ್ರಾಮ ಆತ್ಮಕತೆಯಲ್ಲ ಅದೊಂದು ಸುಳ್ಳಿನ ಕಂತೆ ಎಂದು ಮಾಜಿ ಸಿಎಂ ಬಂಗಾರಪ್ಪ ಪುತ್ರ, ಜೆಡಿಎಸ್ ಶಾಸಕ ಮಧು ಬಂಗಾರಪ್ಪ ಟೀಕಿಸಿದ್ದಾರೆ.

    ಕೃತಿಯಲ್ಲಿ ಬಂಗಾರಪ್ಪ ಅವರು, ಇಂದಿರಾಗಾಂಧಿ ಅವರಿಗೆ ಅವಾಚ್ಯವಾಗಿ ಮಾತನಾಡಿದ್ದರು, ಒಮ್ಮೆ ಇಂದಿರಾಗಾಂಧಿ ಅವರ ಮೇಲೆ ಹಲ್ಲೆಗೂ ಯತ್ನಿಸಿದ್ದರು ಎಂದು ಬರೆದಿದ್ದಾರೆ. ಇದು ನಿಜವಾಗಿದ್ದರೆ ರಾಜೀವ್ ಗಾಂಧಿ ಬಂಗಾರಪ್ಪ ಅವರನ್ನು ಸಿಎಂ ಮಾಡುತ್ತಿರಲಿಲ್ಲ. ಇದು ಆತ್ಮಕತೆಯಲ್ಲ- ಸುಳ್ಳಿನ ಕಂತೆ. ಅದು ಆಟೋಬಯೋಗ್ರಫಿ ಅಲ್ಲ. ಅವರ ಪಾಪದ ಕೊಡ ಎಂದು ಮಧು ಹೇಳಿದ್ದಾರೆ.

    ಬಂಗಾರಪ್ಪ ಅವರಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ:
    ಶಿವಮೊಗ್ಗದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ, ಪೂಜಾರಿ ತಮ್ಮ ಆತ್ಮಕತೆಯಲ್ಲಿ ಬಂಗಾರಪ್ಪ ಅವರ ಬಗ್ಗೆ ಬರೆದಿರುವ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಅಲ್ಲದೆ ಇದರಿಂದ ಬಂಗಾರಪ್ಪ ಅಭಿಮಾನಿಗಳಿಗೆ ನೋವಾಗಿದೆ. ಜನಾರ್ದನ ಪೂಜಾರಿ ಈಗ ಯಾವ ಸ್ಥಿತಿಯಲ್ಲಿ ಇದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಅರಳು ಮರಳಾಗಿರಬಹುದು ಅಥವಾ ಅವರಿಗೆ ತಲೆಕೆಟ್ಟಿದೆ ಎಂದು ನಾನು ಹೇಳುವುದಿಲ್ಲ. ಬಂಗಾರಪ್ಪ ಅಧಿಕಾರದಿಂದ ಇಳಿದ ಮೇಲೆ ಕಾಂಗ್ರೆಸ್ಸಿಗರೇ ಅವರ ವಿರುದ್ದ ಕ್ಲಾಸಿಕ್ ಕಂಪ್ಯೂಟರ್ ಸೇರಿ ಮೂರು ಪ್ರಕರಣ ದಾಖಲಿಸಿದ್ದರು. ಈ ಎಲ್ಲಾ ಪ್ರಕರಣಗಳಲ್ಲೂ ಬಂಗಾರಪ್ಪ ನಿರ್ದೋಷಿ ಎಂದು ಕೋರ್ಟ್ ಖುಲಾಸೆಗೊಳಿಸಲಾಗಿದೆ. ಆದರೆ ಪೂಜಾರಿ ಬಂಗಾರಪ್ಪ ಭ್ರಷ್ಟಾಚಾರಿ ಎಂದು ಹೇಳಿದ್ದಾರೆ. ಇದು ನ್ಯಾಯಾಂಗ ನಿಂದನೆ ಆಗಲಿದೆ. ತಮ್ಮ ಕ್ಷೇತ್ರದಲ್ಲಿ ಕೋಮುಗಲಭೆ ತಡೆಯಲು ಯಾಕೆ ಸಾಧ್ಯವಾಗಿಲ್ಲ ಏಕೆ ಎಂಬುದನ್ನು ಮೊದಲು ಬರೆಯಿರಿ. ಅವರ ಪಕ್ಷದಲ್ಲಿ ಅವರಿಗೇ ಗೌರವ ಇಲ್ಲ. ಬೇರೆಯವರ ಮೇಲಿರುವ ಗೌರವಕ್ಕೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ. ಮಾನನಷ್ಟ ಮೊಕದ್ದಮೆ ಹಾಕುವುದಿಲ್ಲ. ಬಂಗಾರಪ್ಪ ಅವರಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದರು

    ಸಾಲ ಮೇಳದ ಸಂಗ್ರಾಮದಲ್ಲಿ ಏನಿದೆ?:
    ನಾನೊಮ್ಮೆ ಬಂಗಾರಪ್ಪ ಅವರನ್ನು ಇಂದಿರಾಗಾಂಧಿಯವರಿಗೆ ಪರಿಚಯ ಮಾಡುವ ಸಂದರ್ಭ ಇಂದಿರಾಗಾಂಧಿ ‘ಹೂ ಈಸ್ ದ್ಯಾಟ್ ಬಂಗಾರಪ್ಪ’ ಎಂದು ಕೇಳಿದ್ದರು. ಅವರು ‘ದೇವರಾಜ ಅರಸರ ಕ್ಯಾಬಿನೆಟ್ನಲ್ಲಿದ್ದಾರೆ’ ಎಂದು ಹೇಳಿ ಪರಿಚಯಿಸಿದ್ದೆ. ಇದಾದ ಬಳಿಕ 1980ರ ಕಾಲಘಟ್ಟದಲ್ಲಿ ಚುನಾವಣೆಗಿಂತ ಮೊದಲು ಗುಂಡೂರಾಯರನ್ನು ರಾಜ್ಯಕ್ಕೆ ಎಲೆಕ್ಷನ್ ಕಮಿಟಿ ಚೇರ್ಮನ್ ಆಗಿ ನೇಮಿಸಿ ಪ್ರಕಟಣೆ ಮಾಡಿದರು. ಅಷ್ಟರವರೆಗೆ ಬಂಗಾರಪ್ಪಗೆ ಮುಖ್ಯಮಂತ್ರಿಯಾಗುವ ಕನಸಿತ್ತು. ಈಗ ಗುಂಡೂರಾಯರನ್ನು ನೇಮಕ ಮಾಡಿದ್ದು ಅವರಿಗೆ ಶಾಕ್ ಹೊಡೆದಂತಾಯಿತು. ಈ ಸಂದರ್ಭ ಇಂದಿರಾಗಾಂಧಿಯನ್ನು ಕೆಟ್ಟಮಾತುಗಳಿಂದ ಬೈದರು.

    ಆ ವೇಳೆ ಸಮಾಧಾನ ಹೇಳಿ ಸ್ವಲ್ಪ ದಿನ ಬಿಟ್ಟು ನಾನೊಮ್ಮೆ ಇಂದಿರಾಗಾಂಧಿ ಬಳಿ ಬಂಗಾರಪ್ಪ ಅವರನ್ನು ಕರೆದುಕೊಂಡು ಹೋದೆ. ಹೋದ ಕೂಡಲೇ ಬಂಗಾರಪ್ಪನವರು ಆರ್ಭಟ ಮಾಡಿದ್ದು, ನನಗೆ ಬಹಳ ಬೇಸರವಾಯಿತು. ಈ ಸಂದರ್ಭ ಇಂದಿರಾಗಾಂಧಿಯವರಿಗೆ ಹೊಡೆಯಲು ಹೋದರು. ನನಗೆ ಆಘಾತವಾಯಿತು. ಕೂಡಲೇ ಬಂಗಾರಪ್ಪರನ್ನು ಹಿಡಿದು ಹಿಂದಕ್ಕೆ ಎಳೆದೆ. ಇಂದಿರಾ ಹೆದರಿ ನಡುಗುತ್ತಿದ್ದರು. ಏನಾಗಿದೆ ನಿಮಗೆ? ತಲೆ ಸರಿ ಉಂಟಾ? ಹೋಗಿ ಹೊರಗೆ ನಿಲ್ಲಿ ಎಂದು ಹೇಳಿದೆ. ಆ ಬಳಿಕ ಇಂದಿರಾಗಾಂಧಿ ನನ್ನಲ್ಲಿ ‘ನನ್ನ ಮಕ್ಕಳು ಕೂಡಾ ಈ ರೀತಿ ಮಾಡಲಿಲ್ಲ. ಈ ರೀತಿ ಮಾಡಬಾರದಿತ್ತು,’ ಎಂದು ನೊಂದುಕೊಂಡರು ಅಂತಾ ಬರೆಯಲಾಗಿದೆ.