Tag: ಜನಪ್ರತಿನಿಧಿಗಳು

  • ರಿಪೇರಿ ಮಾಡಿಸದ ರಸ್ತೆಯಲ್ಲಿ ನಾಟಿ ಮಾಡಿ ಗ್ರಾಮಸ್ಥರ ಆಕ್ರೋಶ

    ರಿಪೇರಿ ಮಾಡಿಸದ ರಸ್ತೆಯಲ್ಲಿ ನಾಟಿ ಮಾಡಿ ಗ್ರಾಮಸ್ಥರ ಆಕ್ರೋಶ

    ಹಾಸನ: ಹಾಳಾಗಿ ಕೆಸರುಮಯವಾಗಿದ್ದ ರಸ್ತೆಯನ್ನು ಅಧಿಕಾರಿಗಳು ರಿಪೇರಿ ಮಾಡಿಸದ ಕಾರಣಕ್ಕೆ ಗ್ರಾಮಸ್ಥರು ರಸ್ತೆಯಲ್ಲಿಯೇ ನಾಟಿ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಜಿಲ್ಲೆಯ ಅರಕಲಗೂಡು ತಾಲೂಕಿನ ಅಲ್ಲಾಪಟ್ಟಣ ಗ್ರಾಮಸ್ಥರು ರಸ್ತೆ ಮಧ್ಯೆ ನಾಟಿ ಮಾಡಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ. ಕಳೆದ ಒಂದೂವರೆ ತಿಂಗಳ ಮಳೆಯಿಂದ ಅಲ್ಲಾಪಟ್ಟಣ ಗ್ರಾಮದ ರಸ್ತೆ ಕೆಸರಿನ ಗದ್ದೆಯಾಗಿದೆ. ಹಲವು ಬಾರಿ ಅಧಿಕಾರಿಗಳಿಗೆ ಹಾಗೂ ಶಾಸಕರಿಗೆ ಈ ಬಗ್ಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನ ಆಗಿರಲಿಲ್ಲ. ಈವರೆಗೂ ಯಾವ ಅಧಿಕಾರಿ ಅಥವಾ ಜನಪ್ರತಿನಿಧಿ ಗ್ರಾಮದ ರಸ್ತೆ ರಿಪೇರಿ ಬಗ್ಗೆ ಕ್ರಮ ತೆಗೆದುಕೊಂಡಿರಲಿಲ್ಲ.

    ಗುಂಡಿಗಳು ಬಿದ್ದು, ಕೆಸರುಮಯವಾಗಿದ್ದ ರಸ್ತೆಯಲ್ಲಿ ಓದಾಡುವಾಗ ನಾಲ್ಕೈದು ಗ್ರಾಮಸ್ಥರು ಕೈ ಕಾಲು ಮುರಿದುಕೊಂಡಿದ್ದಾರೆ. ಈ ರಸ್ತೆಯಲ್ಲಿ ಸರಿಯಾಗಿ ವಾಹನ ಚಲಾಯಿಸಲು ಆಗದೆ ಸವಾರರು ಪರದಾಡುತ್ತಿದ್ದಾರೆ.

    ಅಧಿಕಾರಿಗಳು, ಜನಪ್ರತಿನಿಧಿಗಳು ಇಂದು ರಸ್ತೆ ರಿಪೇರಿ ಮಾಡುತ್ತಾರೆ. ನಾಳೆ ಮಾಡುತ್ತಾರೆ ಎಂದು ಗ್ರಾಮಸ್ಥರು ಕಾದು ಕಾದು ಬೇಸತ್ತು ಹೋಗಿದ್ದರು. ಆದ್ದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಗ್ರಾಮದ ಅರ್ಧ ಕಿ.ಮೀ ರಸ್ತೆಗೆ ಬತ್ತದ ಪೈರು ನಾಟಿ ಮಾಡಿ ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಹರಿಹಾಯ್ದಿದ್ದಾರೆ.

  • ಕಲ್ಲು ಗಣಿಗಾರಿಕೆಗೆ ಜನ ತತ್ತರ – ನೂರಾರು ಮನೆಗಳು ಬಿರುಕು

    ಕಲ್ಲು ಗಣಿಗಾರಿಕೆಗೆ ಜನ ತತ್ತರ – ನೂರಾರು ಮನೆಗಳು ಬಿರುಕು

    ಬೆಂಗಳೂರು: ಐದು ಕ್ರಷರ್ ಗಳಿಂದ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯಿಂದ ನೆಲಮಂಗಲ ತಾಲೂಕಿನ ಗ್ರಾಮದ ಜನ ತತ್ತರಿಸಿ ಹೋಗಿದ್ದಾರೆ. ಮಾಲೀಕರ ದುರಾಸೆಯಿಂದ ನಿರ್ಮಾಣವಾಗಿರುವ ಐದು ಕಲ್ಲುಗಾಣಿಗಾರಿಕೆ ತಾಣಗಳಿಂದ, ಕ್ರಷರ್‍ಗೆ ಹೊಂದಿಕೊಂಡಿರುವ ಗ್ರಾಮದ ಜನರ ಬದುಕು ಹೇಳತೀರದಾಗಿದೆ.

    ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಗಡಿಯಂಚಿನಲ್ಲಿರುವ ಮಾಕೇನಹಳ್ಳಿಯ ಗ್ರಾಮಸ್ಥರು, ಪ್ರತಿನಿತ್ಯ ಗಣಿಗಾರಿಕೆಯ ಸ್ಫೋಟದ ಭಯಾನಕ ಶಬ್ಧ ಹಾಗೂ ಧೂಳಿನಿಂದ ಭಯಭೀತರಾಗಿದ್ದಾರೆ. ಕಲ್ಲು ಗಣಿಗಾರಿಕೆಯಿಂದ ಗ್ರಾಮದಲ್ಲಿನ ನೂರಾರು ಮನೆಗಳು ಸಹ ವಿಪರೀತ ಬಿರುಕು ಬಿಟ್ಟಿವೆ. ಯಾವಾಗ ಮನೆ ಬೀಳುತ್ತದೆಯೋ ಎಂಬ ಆತಂಕದಲ್ಲೇ ಕಾಲ ಕಳೆಯುತ್ತಿದ್ದಾರೆ.

    ನಿತ್ಯ ನೂರಾರು ಲಾರಿಗಳಲ್ಲಿ ಕಲ್ಲಿನ ಉತ್ಪನ್ನಗಳಾದ ಜಲ್ಲಿ, ಎಂ.ಸ್ಯಾಂಡ್, ಇನ್ನಿತರ ಕಲ್ಲಿನ ಉತ್ಪನ್ನಗಳನ್ನು ಸಾಗಿಸಲು ಬೆಟ್ಟದಂತಿರುವ ಕಲ್ಲು ಬಂಡೆಯನ್ನು ಕರಗಿಸುತ್ತಿದ್ದಾರೆ. ಹರ್ಷ, ಸೂರ್ಯ, ವಿನಾಯಕ, ಎಸ್.ಎಲ್.ಎನ್, ಎಸ್.ಎಲ್.ಆರ್ ಎಂಬ ಕಂಪನಿಗಳ ಗಣಿಗಾರಿಕೆ ಜೋರಾಗಿದೆ. ಈ ಗಣಿಗಾರಿಕೆಯಿಂದ ಮಾಕೇನಹಳ್ಳಿ ಗ್ರಾಮದ ನೂರಾರು ಮನೆಗಳೆಲ್ಲ ಬಿರುಕು ಬಿಟ್ಟಿದ್ದು, ಮನೆ ಬೀಳುವ ಭಯದಲ್ಲೇ ಗ್ರಾಮಸ್ಥರು ಬದುಕು ಸಾಗಿಸುತ್ತಿದ್ದಾರೆ.

    ಮನೆಯ ಗೋಡೆಗಳು ಸಂಪೂರ್ಣ ಹಾಳಾಗುವ ಪರಿಸ್ಥಿತಿಗೆ ಬಂದು ತಲುಪಿದ್ದು, ಇನ್ನೊಂದೆಡೆ ಕಲ್ಲು ಗಣಿಗಾರಿಕೆಯ ವಿಪರೀತ ಶಬ್ದದಿಂದ ರಾತ್ರಿ ವೇಳೆ ಮಲಗಲು ಸಾಧ್ಯವಾಗದೇ, ಬಾಣಂತಿ, ಚಿಕ್ಕಮಕ್ಕಳು ನಿದ್ರೆಯಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ.

    ಗ್ರಾಮ ಪಂಚಾಯತಿಯಿಂದ ಹಿಡಿದು ಮೇಲ್ಮಟ್ಟದ ಆಡಳಿತ ವ್ಯವಸ್ಥೆಯವರೆಗೆ ಎಲ್ಲ ಜನಪ್ರತಿನಿಧಿಗಳು ಕ್ರಷರ್‍ಗಳಿಂದ ಲಂಚ ತೆಗೆದುಕೊಳ್ಳುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಹ ಜಾಣ ಕುರುಡನ್ನು ಪ್ರದರ್ಶಿಸುತ್ತಿದೆ. ರಾಶಿಗಟ್ಟಲೇ ಲಾರಿ ಲೋಡ್‍ಗಳಲ್ಲಿ ಸಾಗಿಸುವ ಜಲ್ಲಿ, ಎಂ.ಸ್ಯಾಂಡ್‍ಗಳಿಗೆ ರಾಜಕಾರಣಿಗಳೇ ಶ್ರೀ ರಕ್ಷೆಯಾಗಿದ್ದಾರೆ ಎಂದು ಮಾಕೇನಹಳ್ಳಿ ಗ್ರಾಮಸ್ಥರು ಆರೋಪಿಸಿದ್ದಾರೆ.

    ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ನೆಪ ಮಾತ್ರಕ್ಕೆ ಕಾಣದ ಮರದ ಕೆಳಗೆ ಕುಳಿತು ಜಾಣ ಮೌನದಲ್ಲಿ ತೊಡಗಿರುವುದು ಅನುಮಾನ ಮೂಡಿಸಿದೆ.

  • ನಾವು ನಿಮ್ಮ ಸಿನಿಮಾ ನೋಡ್ತೀವಿ, ನಮ್ಮ ಸಮಸ್ಯೆಗೂ ಸ್ಪಂದಿಸಿ – ಬೆಳಗಾವಿ ಜನತೆ

    ನಾವು ನಿಮ್ಮ ಸಿನಿಮಾ ನೋಡ್ತೀವಿ, ನಮ್ಮ ಸಮಸ್ಯೆಗೂ ಸ್ಪಂದಿಸಿ – ಬೆಳಗಾವಿ ಜನತೆ

    ಬೆಳಗಾವಿ: ನಾವು ನಿಮ್ಮ ಸಿನಿಮಾ ನೋಡ್ತೀವಿ ನಮ್ಮ ಸಮಸ್ಯೆಗೂ ಸ್ಪಂದಿಸಿ ಎಂದು ಬೆಳಗಾವಿಯ ಪ್ರವಾಹ ಪೀಡಿತ ಜನರು ಕನ್ನಡ ಸಿನಿಮಾ ಕಲಾವಿದರಲ್ಲಿ ಮನವಿ ಮಾಡಿದ್ದಾರೆ.

    ಚಿತ್ರರಂಗದವರು ದಕ್ಷಿಣ ಕರ್ನಾಟಕದಲ್ಲಿ ಸಮಸ್ಯೆ ಆದಾಗ ಎಲ್ಲರೂ ನೆರವಾಗುತ್ತಾರೆ. ಕಾವೇರಿ ನೀರು ಸಂಬಂಧ ಎಲರೂ ಹೋರಾಡುತ್ತಾರೆ. ಆದರೆ ಉತ್ತರ ಕರ್ನಾಟಕದಲ್ಲಿ ಏನೇ ಸಮಸ್ಯೆ ಆದರೂ ಬರುವುದಿಲ್ಲ. ನಮ್ಮ ನದಿ ನೀರು ಸಂಬಂಧ ಯಾರು ಹೋರಾಟ ಮಾಡುವುದಿಲ್ಲ ಎಂದು ಹುಕ್ಕೇರಿ ತಾಲೂಕಿನ ಚಿಕಲಗುಡ ಗ್ರಾಮಸ್ಥರು ಕೂಡಲೇ ಬಂದು ಸಮಸ್ಯೆಗೆ ಸ್ಪಂದಿಸುವಂತೆ ಸಿನಿಮಾ ಮಂದಿಗೆ ಆಹ್ವಾನ ನೀಡಿದ್ದಾರೆ.

    ನಮ್ಮ ಉತ್ತರ ಕರ್ನಾಟಕದಲ್ಲಿ ಸುದೀಪ್, ದರ್ಶನ್, ಯಶ್ ಮತ್ತು ಧ್ರುವ ಸರ್ಜಾಗೆ ಬಹಳ ಮಂದಿ ಅಭಿಮಾನಿಗಳಿದ್ದಾರೆ. ನಾವು ಅವರ ಎಲ್ಲಾ ಸಿನಿಮಾಗಳನ್ನು ನೋಡುತ್ತೇವೆ. ನಮಗೆ ಈ ರೀತಿಯ ಪರಿಸ್ಥಿತಿ ಬಂದಾಗ ಅವರು ಈ ಕಡೆ ಬರಬೇಕು ನಮ್ಮ ರಕ್ಷಣೆಗೆ ನಿಲ್ಲಬೇಕು ಎಂದು ಮನವಿ ಮಾಡಿದ್ದಾರೆ. ರಾಕಿಂಗ್ ಸ್ಟಾರ್ ಅವರ ಯಶೋಮಾರ್ಗದ ಕೇವಲ ಕೊಪ್ಪಳ ಮಾತ್ರ ಸೀಮಿತ ಅಲ್ಲ. ಉತ್ತರ ಕರ್ನಾಟಕದ ಕಡೆಗೂ ಬನ್ನಿ ಎಂದು ಹೇಳಿದ್ದಾರೆ.

    ಇದೇ ವೇಳೆ ಸ್ಥಳೀಯ ಜನಪ್ರತಿನಿಧಿಗಳನ್ನು ತರಾಟೆಗೆ ತೆಗೆದುಕೊಂಡಿರುವ ಗ್ರಾಮಸ್ಥರು, ರೆಸಾರ್ಟ್ ರಾಜಕೀಯ ಮಾಡುತ್ತಾ ನಮ್ಮ ಕಡೆ ಗಮನಹರಿಸಿಲ್ಲ. ನಾವು ನಿಮಗೆ ವೋಟ್ ಹಾಕಿದ್ದೇವೆ ನಮ್ಮ ಕಡೆ ಸ್ವಲ್ಪ ನೋಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ರೆಸಾರ್ಟ್ ರಾಜಕಾರಣ ವಿರುದ್ಧ ರೈತರಿಂದ ಛೀ.. ಥೂ.. ಚಳುವಳಿ

    ರೆಸಾರ್ಟ್ ರಾಜಕಾರಣ ವಿರುದ್ಧ ರೈತರಿಂದ ಛೀ.. ಥೂ.. ಚಳುವಳಿ

    ತುಮಕೂರು: ರಾಜ್ಯದ ಜನತೆಯ ಹಿತಾಸಕ್ತಿಯನ್ನು ಮರೆತು ಅಧಿಕಾರಕೋಸ್ಕರ ರೆಸಾರ್ಟ್ ರಾಜಕಾರಣ ಮಾಡುತ್ತಿರುವ ಜನಪ್ರತಿನಿಧಿಗಳ ವಿರುದ್ಧ ರೈತರು ಛೀ…ಥೂ.. ಚಳುವಳಿ ಕೈಗೊಂಡಿದ್ದಾರೆ.

    ತುಮಕೂರು ಜಿಲ್ಲೆಯಾದ್ಯಂತ ರಾಜ್ಯ ರೈತ ಸಂಘದ ಕಾರ್ಯಕರ್ತರು ರೆಸಾರ್ಟ್ ರಾಜಕಾರಣ ಮಾಡುತಿರುವ ಜನಪ್ರತಿನಿಧಿಗಳ ಭಾವಚಿತ್ರಕ್ಕೆ ಎಲೆ ಅಡಿಕೆಯ ಎಂಜಲನ್ನು ಉಗಿದು ಛೀ…ಥೂ.. ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ತುಮಕೂರು ನಗರದ ಟೌನ್ ಹಾಲ್ ವೃತ್ತದಲ್ಲಿ ಜಿಲ್ಲಾಧ್ಯಕ್ಷ ಆನಂದ ಹುಲಿಕಟ್ಟೆ ನೇತೃತ್ವದಲ್ಲಿ ನೂರಾರು ಜನ ರೈತರು ಸೇರಿ. ಜನಪ್ರತಿನಿಧಿಗಳ ಭಾವಚಿತ್ರಕ್ಕೆ ಎಂಜಲಿನ ಮಜ್ಜನ ಮಾಡಿಸಿ, ಚಪ್ಪಲಿ ಏಟು ಕೊಟ್ಟು ಪ್ರತಿಕೃತಿ ದಹಿಸಿದ್ದಾರೆ. ರಾಜ್ಯದ ಅಭಿವೃದ್ಧಿ ಮರೆತ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

    ಕಾಂಗ್ರೆಸ್ ಹಾಗೂ ಜೆಡಿಎಸ್ ನ 13 ಮಂದಿ ಶಾಸಕರು ರಾಜೀನಾಮೆ ನೀಡಿ ಮುಂಬೈ ಹೋಟೆಲ್ ನಲ್ಲಿ ತಂಗಿದ್ದಾರೆ. ಹೀಗಾಗಿ ಅವರ ಮನವೊಲಿಸುವ ಕಾರ್ಯವನ್ನು ಕೈಗೊಂಡು ದೋಸ್ತಿಗಳು ವಿಫಲರಾದರು. ಇತ್ತ ರಿವರ್ಸ್ ಆಪರೇಷನ್ ಭಯದಿಂದ ಬಿಜೆಪಿ ಶಾಸಕರು ರಮಡ ಮತ್ತು ಸಾಯಿಲೀಲಾ ರೆಸಾರ್ಟ್ ನಲ್ಲಿ ವಾಸ್ತವ್ಯ ಮಾಡಿದ್ದಾರೆ. ಜೆಡಿಎಸ್ ನವರು ಕೂಡ ಉಳಿದ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಸಲುವಾಗಿ ನಂದಿಬೆಟ್ಟದ ಬಳಿಯಿರೋ ಪ್ರೆಸ್ಟೀಜ್ ಗಾಲ್ಫ್ ಶೈರ್ ರೆಸಾರ್ಟ್ ಸೇರಿದ್ದರೆ, ಇತ್ತ ಕಾಂಗ್ರೆಸ್ ನಾಯಕರು ತಾಜ್ ವಿವಾಂತ ರೆಸಾರ್ಟಿನಲ್ಲಿದ್ದಾರೆ.

  • ಒಂದೇ ರಸ್ತೆಗೆ ಮೂರು ಬಾರಿ ಬಿಲ್ – ಅಧಿಕಾರಿಗಳಿಂದ ಹಣ ಗುಳುಂ

    ಒಂದೇ ರಸ್ತೆಗೆ ಮೂರು ಬಾರಿ ಬಿಲ್ – ಅಧಿಕಾರಿಗಳಿಂದ ಹಣ ಗುಳುಂ

    ಚಿಕ್ಕಬಳ್ಳಾಪುರ: ಒಂದಲ್ಲ ಎರಡಲ್ಲ ಅಂತ ಅದೇ ರಸ್ತೆಗೆ ಮೂರು ಬಾರಿ ಬಿಲ್ ಮಾಡಿರೋ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಜನರ ದುಡ್ಡನ್ನು ತಿಂದು ತೇಗಿದ್ದಾರೆ. ಆದರೆ ಜನ ಮಾತ್ರ ಅದೇ ಕಲ್ಲು ಮಣ್ಣಿನ ಹಾದಿಯಲ್ಲಿ ಓಡಾಡುವಂತಾಗಿದೆ.

    ಹೌದು. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಪುಲಿಗಲ್ ಗ್ರಾಮ ಪಂಚಾಯತಿಯಿಂದ ರಾಮನಪಡಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಏಕೈಕ ರಸ್ತೆ 10-15 ವರ್ಷಗಳಿಂದ ಕಲ್ಲು ಮಣ್ಣನಿಂದ ನಿರ್ಮಾಣವಾದ ಈ ರಸ್ತೆ ಇಂದಿಗೂ ಅದೇ ಸ್ಥಿತಿಯಲ್ಲೇ ಇದೆ. ಆದರೆ ಈ ರಸ್ತೆ ಅಭಿವೃದ್ಧಿ ಹೆಸರಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮಾತ್ರ ತಿಂದು ತೇಗಿ ಅಭಿವೃದ್ಧಿಯಾಗಿದ್ದಾರೆ.

    ಅಂದಹಾಗೆ ಪುಲಿಗಲ್ ಕ್ರಾಸ್ ನಿಂದ ರಾಗಿಮಾಕಲಪಲ್ಲಿ ರಸ್ತೆ ಅಭಿವೃದ್ಧಿ ಎಂದು 2 ಲಕ್ಷ 38 ಸಾವಿರ ರೂ. ಬಿಲ್ ಮಾಡಲಾಗಿದೆ. ರಾಮನಪಡಿ ರಸ್ತೆಯಿಂದ ಊದವಾರಪಲ್ಲಿ ಕ್ರಾಸ್‍ವರೆಗೂ ರಸ್ತೆ ಅಭಿವೃದ್ಧಿ ಎಂದು 4 ಲಕ್ಷ 60 ಸಾವಿರ ರೂ. ಬಿಲ್ ಆಗಿದ್ದರೆ, ರಾಮನಪಡಿ ಹತ್ತಿರ ಶಿವಪುರಕ್ಕೆ ಹೋಗುವ ರಸ್ತೆ ಅಭಿವೃದ್ಧಿ ಎಂದು 4 ಲಕ್ಷದ 90 ಸಾವಿರ ರೂಪಾಯಿ ಬಿಲ್ ಮಾಡಲಾಗಿದೆ. ಆಸಲಿಗೆ ಈ ಮೂರೂ ರಸ್ತೆಗಳು ಸಹ ಒಂದೇ ರಸ್ತೆಯಾಗಿದ್ದು ಬೇರೆ ಬೇರೆ ಗ್ರಾಮಗಳ ಹೆಸರು ನಮೂದಿಸಿ ಬಿಲ್ ಮಾಡಲಾಗಿದೆ.

    ಪುಲಿಗಲ್ ಕ್ರಾಸ್ ನಿಂದ ರಾಮನಪಡಿ ಗ್ರಾಮದವರೆಗೂ ಸರಿಸುಮಾರು 3 ಕಿಲೋಮೀಟರ್ ದೂರದ ಈ ಮಣ್ಣಿನ ರಸ್ತೆ ಅಭಿವೃದ್ಧಿ ಮಾಡಿದ್ದೀವಿ ಎಂದು ಮೂರು ಬಾರಿ ಲಕ್ಷ ಲಕ್ಷ ಬಿಲ್ ಮಾಡಲಾಗಿದೆ. ಆದರೆ ಪ್ರತ್ಯಕ್ಷವಾಗಿ ನೋಡಿದರೆ ರಸ್ತೆಯ ಅಭಿವೃದ್ಧಿ ಅನ್ನೋದು ಇಲ್ಲ. ಇನ್ನೂ ಇದೇ ರಸ್ತೆ ಕಥೆಯಾದರೆ ವೆಂಕಟರೆಡ್ಡಿಪಲ್ಲಿ ಗ್ರಾಮದ ಸೋಮ್ಲನಾಯಕ್ ಮನೆಯಿಂದ ನಾರಾಯಣ ನಾಯಕ್ ಮನೆಯವರೆಗೂ ಚರಂಡಿ ಮಾಡಿದ್ದೀವಿ ಎಂದು 4 ಲಕ್ಷ 91 ಸಾವಿರ ರೂಪಾಯಿ ಬಿಲ್ ಮಾಡಿಕೊಳ್ಳಲಾಗಿದೆ. ಆದರೆ ಪ್ರತ್ಯಕ್ಷವಾಗಿ ಪರಿಶೀಲನೆ ನಡೆಸಿದರೆ ಅಲ್ಲಿ ಚರಂಡಿಯೇ ಇಲ್ಲ.

    ಒಟ್ಟಿನಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತ್‍ನ ಸಿಎಂಜಿಎಸ್‍ವೈ ಯೋಜನೆಯಲ್ಲಿ ಭಾರೀ ಗೋಲ್ ಮಾಲ್ ನಡೆದಿರುವ ಶಂಕೆ ವ್ಯಕ್ತವಾಗಿದ್ದು. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು, ಗುತ್ತಿಗೆದಾರರ ಜೊತೆ ಶಾಮೀಲಾಗಿ ಜನರ ಲಕ್ಷ ಲಕ್ಷ ದುಡ್ಡನ್ನು ತಿಂದು ತೇಗಿದ್ದಾರೆ.

  • ಅವಸರದಲ್ಲಿ ಭರ್ಜರಿ ಅಭಿವೃದ್ಧಿ – ರಾಯಚೂರಿನಲ್ಲಿ ಗ್ರಾಮ ವಾಸ್ತವ್ಯಕ್ಕೆ ತಯಾರಿ ಜೋರು

    ಅವಸರದಲ್ಲಿ ಭರ್ಜರಿ ಅಭಿವೃದ್ಧಿ – ರಾಯಚೂರಿನಲ್ಲಿ ಗ್ರಾಮ ವಾಸ್ತವ್ಯಕ್ಕೆ ತಯಾರಿ ಜೋರು

    ರಾಯಚೂರು: ಸಿಎಂ ಗ್ರಾಮವಾಸ್ತವ್ಯ ಮಾಡಲಿರುವ ರಾಯಚೂರಿನ ಕರೇಗುಡ್ಡ ಈಗ ಅವಸರದ ಅಭಿವೃದ್ಧಿ ಕಾಣುತ್ತಿದೆ. ಗ್ರಾಮಕ್ಕೆ ಮುಖ್ಯಮಂತ್ರಿ ಆಗಮನದ ಹಿನ್ನೆಲೆಯಲ್ಲಿ ಶರವೇಗದಲ್ಲಿ ಸಿದ್ಧತೆಗಳು ನಡೆಯುತ್ತಿವೆ.

    ಜೂನ್ 26ರಂದು ರಾಯಚೂರಿನ ಮಾನ್ವಿಯ ಕರೇಗುಡ್ಡದಲ್ಲಿ ವ್ಯಾಸ್ತವ್ಯ ಹೂಡಲಿರುವ ಹಿನ್ನೆಲೆಯಲ್ಲಿ ಭರ್ಜರಿ ಕಾಮಗಾರಿಗಳು ಆರಂಭವಾಗಿದೆ. ಜನರು ಗೋಳಾಡಿದರೂ ಸಮಸ್ಯೆಗಳ ಬಗ್ಗೆ ತಲೆಕೆಡಿಸಿಕೊಳ್ಳದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಗ್ರಾಮಕ್ಕೆ ಸಿಎಂ ಬರಲಿದ್ದಾರೆ ಎಂದು ಅವಸರದಲ್ಲಿ ಗ್ರಾಮವನ್ನು ಅಭಿವೃದ್ಧಿ ಮಾಡುತ್ತಿದ್ದಾರೆ.

    ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಂತೂ ಇತಿಹಾಸದಲ್ಲೇ ಕಾಣದಷ್ಟು ಸುಂದರವಾಗಿದೆ. ಅಚ್ಚುಕಟ್ಟಾದ ಹೈಟೆಕ್ ಶೌಚಾಲಯವೂ ಅಂತಿಮ ಹಂತಕ್ಕೆ ಬಂದಿದೆ. ಯಾರೂ ಕಿವಿಗೆ ಹಾಕಿಕೊಳ್ಳದ ರಸ್ತೆಯ ಸಮಸ್ಯೆಯೂ ತೀರಿದೆ. ವಿದ್ಯುತ್ ಸಮಸ್ಯೆ ಸದ್ಯಕ್ಕೆ ನಿಂತಿದೆ. ಗ್ರಾಮಲ್ಲಿ ಎಂದೂ ಕಾಣದ ಚರಂಡಿ ಕಾಮಗಾರಿಯೂ ಭರದಿಂದ ಸಾಗುತ್ತಿದೆ.

    ಗ್ರಾಮದ ನೀರಿನ ಸಮಸ್ಯೆ ಬಗೆಹರಿಸಲು ಮೂರು ಬೋರ್‍ವೆಲ್ ಗಳನ್ನು ಕೊರೆಯಲಾಗಿದೆ. ಇದರಲ್ಲಿ ಎರಡು ಬೋರ್‍ವೆಲ್‍ನಲ್ಲಿ ಉತ್ತಮ ನೀರು ಸಿಕ್ಕಿದೆ. ಗ್ರಾಮದಲ್ಲಿ ಸಿಸಿ ರಸ್ತೆ, ಗ್ರಾಮದ ಹೊರಗಡೆ ಡಾಂಬರ್ ರಸ್ತೆಯ ಕಾಮಗಾರಿ ನಡೆದಿದೆ. ಸಿಎಂ ಆಗಮನದ ಹಿನ್ನೆಲೆಯಲ್ಲಿ ಕೆಲವೇ ದಿನಗಳಲ್ಲಿ ಲಕ್ಷಾಂತರ ರೂಪಾಯಿ ವ್ಯಯಿಸಿ ಗ್ರಾಮದ ಚಿತ್ರಣವನ್ನೇ ಇಲ್ಲಿ ಜನಪ್ರತಿನಿಧಿಗಳು ಬದಲಿಸಿದ್ದಾರೆ.

    ಸುಮಾರು 22 ಎಕರೆ ಪ್ರದೇಶದಲ್ಲಿ ಮುಖ್ಯಮಂತ್ರಿ ಜನಸಂಪರ್ಕ ಸಭೆಗೆ ಹಾಗೂ ವೇದಿಕೆಗೆ ಸಕಲ ಸಿದ್ದತೆಗಳು ಭರದಿಂದ ಸಾಗುತ್ತಿದೆ. ಸುತ್ತಮುತ್ತಲ ಗ್ರಾಮಗಳಿಂದ ಅಹವಾಲುಗಳನ್ನ ಹಿಡಿದು ಬರುವ ಜನರಿಗಾಗಿ ಪ್ರತ್ಯೇಕ ವ್ಯವಸ್ಥೆಗಳನ್ನ ಮಾಡಲಾಗುತ್ತಿದೆ. ಸಿಎಂ ವಾಸ್ತವ್ಯ ಮಾಡಲಿರುವ ಗ್ರಾಮ ಶಾಲೆಯಂತೂ ಮಧುವಣಗಿತ್ತಿಯಂತೆ ಅಲಂಕಾರಗೊಳ್ಳುತ್ತಿದೆ. ಸಿಎಂ ಬರುವ ನೆಪದಲ್ಲಾದರೂ ಗ್ರಾಮ ಅವಸರದ ಅಭಿವೃದ್ಧಿ ಕಾಣುತ್ತಿದೆಯಲ್ಲ ಎಂದು ಗ್ರಾಮಸ್ಥರು ಖುಷಿಪಟ್ಟಿದ್ದಾರೆ.

    ಬಿಜೆಪಿ ಪಾದಯಾತ್ರೆ
    ಸಿಎಂ ವಾಸ್ತವ್ಯಕ್ಕೆ ಸಕಲ ಸಿದ್ದತೆಗಳು ಭರದಿಂದ ಸಾಗಿರುವುದು ನಿಜ. ಆದರೆ ಜ್ವಲಂತ ಸಮಸ್ಯೆಗಳ ಗೂಡಾಗಿರುವ ರಾಯಚೂರಿನಲ್ಲಿ ಮುಖ್ಯಮಂತ್ರಿಗಳಿಗೆ ಹೋರಾಟ, ಪ್ರತಿಭಟನೆಗಳ ಬಿಸಿಯೂ ಜೋರಾಗಿ ತಟ್ಟುವ ಸಾಧ್ಯತೆಯಿದೆ. ರಾಯಚೂರು ಜಿಲ್ಲೆ ಮಾನವಿ ತಾಲೂಕಿನ ಕರೇಗುಡ್ಡದಲ್ಲಿ ಗ್ರಾಮ ವಾಸ್ತವ್ಯ ಮಾಡುವ ಹಿನ್ನೆಲೆ ಬಿಜೆಪಿ ಶಾಸಕ ಶಿವನಗೌಡ ನಾಯಕ್ ಪಾದಯಾತ್ರೆ ಆರಂಭಿಸಿದ್ದಾರೆ. ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಇದುವರೆಗೂ ಪರಿಹಾರ ಸಿಕ್ಕಿಲ್ಲ, ಕನಿಷ್ಠ ಈಗಲಾದರೂ ಸಿಎಂ ಜಿಲ್ಲೆಯ ಕಡಗೆ ನೋಡಲಿ ಅಂತ ಪಾದಯಾತ್ರೆ ಕೈಗೊಂಡಿದ್ದಾರೆ.

    ಸಿಎಂ ಮಲತಾಯಿ ಧೋರಣೆ ತೋರಿಸುತ್ತಿದ್ದು ಹೈಕ ಭಾಗಕ್ಕೆ ಅನುದಾನ ನೀಡದೇ ತಾರತಮ್ಯ ಮಾಡುತ್ತಿದ್ದಾರೆ ಅಂತ ಶಿವನಗೌಡ ನಾಯಕ್ ಆರೋಪಿಸಿದ್ದಾರೆ. ದೇವದುರ್ಗದ ಗೂಗಲ್ ಗ್ರಾಮದಿಂದ ಪಾದಯಾತ್ರೆ ಆರಂಭಿಸಿ ಜೂನ್ 26 ರಂದು ಕರೇಗುಡ್ಡ ತಲುಪಲಿದ್ದಾರೆ.

    ನೂರಾರು ಜನರೊಂದಿಗೆ ಪಾದಯಾತ್ರೆಗೆ ಮುಂದಾಗಿರುವ ಶಿವನಗೌಡ ತಮ್ಮ ಕ್ಷೇತ್ರದ ಅರ್ಧಕ್ಕೆ ನಿಂತಿರುವ ಕಾಮಗಾರಿಗಳು ಪುನರಾರಂಭವಾಗಬೇಕು, ಎನ್ ಆರ್ ಬಿಸಿ ಕಾಲುವೆ ಆಧುನಿಕರಣಗೊಳ್ಳಬೇಕು ಅನ್ನೋ ಬೇಡಿಕೆ ಸೇರಿ ನಾನಾ ಸಮಸ್ಯೆಗೆ ಸಿಎಂ ಪರಿಹಾರ ಒದಗಿಸಬೇಕು ಅಂತ ಆಗ್ರಹಿಸಿದ್ದಾರೆ. ಸುಮಾರು 86 ಕಿ.ಮೀ ಪಾದಯಾತ್ರೆ ಮಾಡಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ಮನವಿಯನ್ನು ಸಲ್ಲಿಸಲಿದ್ದಾರೆ.

  • ಭೀಕರ ಬರಗಾಲಕ್ಕೆ ಜನ, ಜಾನುವಾರು ಕಂಗಾಲು- ದಿನ ಕಳೆದಂತೆ ಹೆಚ್ಚಾಗ್ತಿದೆ ನೀರಿಗಾಗಿ ಹಾಹಾಕಾರ

    ಭೀಕರ ಬರಗಾಲಕ್ಕೆ ಜನ, ಜಾನುವಾರು ಕಂಗಾಲು- ದಿನ ಕಳೆದಂತೆ ಹೆಚ್ಚಾಗ್ತಿದೆ ನೀರಿಗಾಗಿ ಹಾಹಾಕಾರ

    ಕೊಪ್ಪಳ: ರಾಜ್ಯದ ಉತ್ತರ ಭಾಗದಲ್ಲಿ ಭೀಕರ ಬರಗಾಲ ಎದುರಾಗಿದ್ದು, ಬರ ತಾಂಡವವಾಡುತ್ತಿದೆ. ಅಲ್ಲದೆ ನೀರಿಲ್ಲದೆ ಬರ ಒಂದು ಕಡೆಯಾದರೆ ಇನ್ನೊಂದೆಡೆ ಮೇವು ಇಲ್ಲದೆ ಜಾನುವಾರುಗಳೂ ಪರಿತಪಿಸುತ್ತಿವೆ.

    ಕುಷ್ಟಗಿ, ಯಲಬುರ್ಗಾ, ಕನಕಗಿರಿ ಮತ್ತು ಕೊಪ್ಪಳ ಭಾಗದಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದೆ. ಜಿಲ್ಲಾಡಳಿತ ಸಾಕಷ್ಟು ಮುಂಜಾಗ್ರತೆ ತೆಗೆದುಕೊಂಡಿದ್ದರೂ ನೀರಿನ ಸಮಸ್ಯೆ ಉಲ್ಬಣಗೊಳ್ಳುತ್ತಿದೆ. ಸಾಕಷ್ಟು ಕಡೆ ಬೋರ್ ವೇಲ್ ಕೊರೆಸಿದ್ದಾರೆ. ಟ್ಯಾಂಕರ್ ಮೂಲಕ ಗ್ರಾಮಗಳಿಗೆ ನೀರು ಸರಬರಾಜು ನಡೆಯುತ್ತಿದೆ. ಆದರೂ ಕೂಡ ಅಗತ್ಯಕ್ಕೆ ತಕ್ಕಷ್ಟು ನೀರನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ.

    ಈಗಾಗಲೇ ತುಂಗಭದ್ರಾ ಡ್ಯಾಂನಲ್ಲಿ ನೀರು ಇಲ್ಲದೆ ಬಣ ಗುಟ್ಟುತ್ತಿದೆ. ಮಳೆಗಾಲದಲ್ಲಿ ಡ್ಯಾಂ ತುಂಬಿ, 100 ಟಿಎಂಸಿ ನೀರು ಡ್ಯಾಂನಲ್ಲಿ ಸಂಗ್ರಹವಾಗಿತ್ತು. ಹೆಚ್ಚಿಗೆ ನೀರು ಹರಿದು ಬಂದಿದ್ದರಿಂದ 50 ಟಿಎಂಸಿಗೂ ಹೆಚ್ಚು ನೀರನ್ನು ನದಿಗಳ ಮೂಲಕ ಹೊರಗೆ ಹರಿಬಿಡಲಾಗಿತ್ತು. ಆದರೆ ಆಗ ನೀರನ್ನು ಸಂಗ್ರಹಿಸಲು ಪರ್ಯಾಯ ವ್ಯವಸ್ಥೆ ಮಾಡಿದ್ದರೆ, ಇಂದು ನೀರಿನ ಸಮಸ್ಯೆ ಬರುತ್ತಿಲ್ಲ. ಇವತ್ತು ಡ್ಯಾಂನಲ್ಲಿ ಕೇವಲ 3 ಟಿಎಂಸಿ ನೀರು ಇದೆ. ಇದು ಬಳ್ಳಾರಿ, ಕೊಪ್ಪಳ, ರಾಯಚೂರು ಜಿಲ್ಲೆಗಳಿಗೆ ಕುಡಿಯುವ ನೀರಿಗೆ ಮೀಸಲಿಡಲಾಗಿದ್ದು, ಇನ್ನೂ ಒಂದು ಟಿಎಂಸಿ ನೀರು ಡೆಡ್ ಸ್ಟೋರೇಜ್‍ಗೆ ಬಿಡಬೇಕಾಗಿದೆ.

    ಇಂದು ನೀರು ಸಿಗದೆ ಬೇರೆ ಬೇರೆ ಊರುಗಳಿಗೆ ಜನರು ವಲಸೆ ಹೋಗುತ್ತಿದ್ದಾರೆ. ನೀರಿಲ್ಲದೆ ಜಾನುವಾರುಗಳಿಗೆ ಮೇವು ಸಹ ಸಿಗುತ್ತಿಲ್ಲ. ಹೀಗಾಗಿ ಗುಡ್ಡ ಕಾಡು ಎನ್ನದೆ ಜಾನುವಾರುಗಳನ್ನು ರಕ್ಷಣೆ ಮಾಡಲು ರೈತರು ಮುಂದಾಗುತ್ತಿದ್ದಾರೆ. ರೈತರು ನಮ್ಮ ಸಮಸ್ಯೆ ಯಾರಿಗೆ ಹೇಳೋಣ ಎಂದು ಚಡಪಡಿಸುತ್ತಿದ್ದಾರೆ. ಅಲ್ಲದೆ ನಮ್ಮ ಸಮಸ್ಯೆಯನ್ನ ಜನಪ್ರತಿನಿಧಿಗಳೊಂದಿಗೆ ಹೇಳಿಕೊಂಡರೆ ಅವರು ಕಾರೇ ಎನ್ನುತ್ತಿಲ್ಲ ಎಂದು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ.

  • ನಾನು ಅಧ್ಯಕ್ಷೆಯಾಗಿದ್ದಾಗ ಕೊಟ್ಟಿದ್ದೀನಿ, ಈಗ ನಂಗೂ ಕಮೀಷನ್ ಕೊಡ್ಲೇಬೇಕು-ಕಾರಟಗಿ ಪುರಸಭೆಯಲ್ಲಿ ಪರ್ಸೆಂಟೇಜ್ ಲೆಕ್ಕಾಚಾರ

    ನಾನು ಅಧ್ಯಕ್ಷೆಯಾಗಿದ್ದಾಗ ಕೊಟ್ಟಿದ್ದೀನಿ, ಈಗ ನಂಗೂ ಕಮೀಷನ್ ಕೊಡ್ಲೇಬೇಕು-ಕಾರಟಗಿ ಪುರಸಭೆಯಲ್ಲಿ ಪರ್ಸೆಂಟೇಜ್ ಲೆಕ್ಕಾಚಾರ

    ಕೊಪ್ಪಳ: ಕಾಮಗಾರಿಗಳಲ್ಲಿ ತಮಗೆ ಪರ್ಸೆಂಟೇಜ್ ಕೊಟ್ಟಿಲ್ಲ ಎಂಬ ಕಾರಣಕ್ಕೆ ಸದಸ್ಯೆಯೊಬ್ಬರು ಸಾಮಾನ್ಯ ಸಭೆಯಲ್ಲಿಯೇ ಗರಂ ಆದ ಘಟನೆ ಕೊಪ್ಪಳದ ಕಾರಟಗಿ ಪುರಸಭೆಯಲ್ಲಿ ನಡೆದಿದೆ.

    ಕೊಪ್ಪಳ ಜಿಲ್ಲೆ ಕಾರಟಗಿ ಪುರಸಭೆಯ ನಿಕಟಪೂರ್ವ ಅಧ್ಯಕ್ಷೆ ಹಾಗೂ ಹಾಲಿ ಸದಸ್ಯೆ ಅನ್ನಪೂರ್ಣಮ್ಮ ತಮಗೆ ಪುರಸಭೆ ನಡೆಸಿದ ಕಾಮಗಾರಿಯಲ್ಲಿ ಕಮೀಷನ್ ನೀಡಿಲ್ಲ ಎಂದು ಸಾಮಾನ್ಯ ಸಭೆ ನಡೆಯದಂತೆ ತಡೆದು ಅಧ್ಯಕ್ಷರು ಹಾಗೂ ಸದಸ್ಯರೊಂದಿಗೆ ವಾಗ್ವಾದ ನಡೆಸಿದ್ದಾರೆ.

    ಸಂತೆ ಮಾರುಕಟ್ಟೆ ಅಭಿವೃದ್ಧಿ ಕಾಮಗಾರಿಗೆ ನೀಡಿದ್ದ ಅನುದಾನದಲ್ಲಿ ತಮಗೆ ಪರ್ಸೆಂಟೇಜ್ ಕೊಟ್ಟಿಲ್ಲ ಅಂತಾ ಅನ್ನಪೂರ್ಣಮ್ಮ ಫುಲ್ ಗರಂ ಆಗಿದ್ದಾರೆ. ಹೀಗೆ ಕಾಮಗಾರಿಯೊಂದರಲ್ಲಿ ತಮಗೆ ಪರ್ಸೆಂಟೇಜ್ ಸಿಕ್ಕಿಲ್ಲ ಅಂತಾ ಸಾಮಾನ್ಯ ಸಭೆಯಲ್ಲೇ ಅಧ್ಯಕ್ಷರು ಹಾಗೂ ಸದಸ್ಯರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ನಾನು ಅಧ್ಯಕ್ಷೆ ಆಗಿದ್ದಾಗ ನಿಮ್ಮೆಲ್ಲರಿಗೂ ಪಾಲು ಕೊಟ್ಟಿಲ್ಲವೇನು? ನೀವೆಲ್ಲ ತೆಗೆದುಕೊಂಡಿಲ್ಲವೇನು? ನನ್ನ ಪತಿಯನ್ನು ಕರೆಸುತ್ತೇನೆ, ಅವರ ಜೊತೆಯೇ ಮೀಟಿಂಗ್ ಮಾಡ್ರಿ ಅಂತಾ ಗುಟ್ಟು ರಟ್ಟು ಮಾಡಿದ್ದಾರೆ. ಪುರಸಭೆಯ 22 ಸದಸ್ಯರೂ ನಿಮ್ಮ ಪಾಲು ತೆಗೆದುಕೊಂಡಿದ್ದೀರಿ. ನಾನೇನು ಜನತೆಯಿಂದ ಆರಿಸಿ ಬಂದಿಲ್ಲವೇ? ಹಾಗಾದರೆ ನನಗೆ ಅದರಲ್ಲಿ ಯಾಕೆ ಪಾಲಿಲ್ಲ? ಪುರಸಭೆ ಹಾಲಿ ಅಧ್ಯಕ್ಷೆ ಭುವನೇಶ್ವರಿ ಪತಿ ಶಿವರೆಡ್ಡಿ, ನನ್ನ ಕಡೆಯಿಂದ ಹಣ ತಿಂದಿಲ್ವಾ ಎಂದು ಸದಸ್ಯೆ ಅನ್ನಪೂರ್ಣ ಅವರು ಬಹಿರಂಗವಾಗಿಯೇ ಅವಾಜ್ ಹಾಕಿದ್ದಾರೆ.

    ಸರ್ಕಾರಿ ಅನುದಾನ ಬಳಕೆಯಲ್ಲಿ ಸ್ಥಳೀಯ ಜನಪ್ರತಿನಿಧಿಗಳಿಗೆ ಪರ್ಸೆಂಟೇಜ್ ಕೊಡೋದು ತಗೋಳೋದು ಈವರೆಗೆ ಕದ್ದುಮುಚ್ಚಿ ನಡೆಯುತ್ತಿತ್ತು. ಆದರೆ ಅನ್ನಪೂರ್ಣಮ್ಮನ ಕೃಪೆಯಿಂದ ಈಗ ಜಾಣರ ಜಗಳ ಬೀದಿಗೆ ಬಂದಿದೆ.

    ಸಾರ್ವಜನಿಕರ ಕುಂದುಕೊರತೆ ಆಲಿಸಲು ಸ್ಥಳೀಯ ಸಂಸ್ಥೆಗಳು ಸಾಮಾನ್ಯ ಸಭೆ ನಡೆಸುತ್ತವೆ. ಆದರೆ ಇಲ್ಲಿನ ಸಾಮಾನ್ಯಸಭೆಯಲ್ಲಿ ಬರೀ ಪರ್ಸೆಂಟೇಜ್ ಲೆಕ್ಕಾಚಾರಕ್ಕೇ ಪ್ರತಿನಿಧಿಗಳು ಬರುವಂತೆ ಮಾತನಾಡುತ್ತಿದ್ದಾರೆ. ಇಷ್ಟರಲ್ಲೇ ಸ್ಥಳೀಯ ಸಂಸ್ಥೆಗಳಲ್ಲಿ ಪ್ರಜಾಪ್ರಭುತ್ವ ಅದೆಷ್ಟು ಯಶಸ್ವಿಯಾಗಿದೆ, ಸಾರ್ವಜನಿಕರ ಹಣ ಎಷ್ಟು ಸದ್ಬಳಕೆ ಆಗುತ್ತಿದೆ ಅಂತಾ ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.

    https://www.youtube.com/watch?v=DBWmTehUvSI