Tag: ಜನಪ್ರತಿನಿಧಿಗಳು

  • ಕಲ್ಯಾಣ ಕರ್ನಾಟಕ ಉತ್ಸವ- ರಾಯಚೂರಿನಲ್ಲಿ ಜನಪ್ರತಿನಿಧಿಗಳು ಗೈರು

    ಕಲ್ಯಾಣ ಕರ್ನಾಟಕ ಉತ್ಸವ- ರಾಯಚೂರಿನಲ್ಲಿ ಜನಪ್ರತಿನಿಧಿಗಳು ಗೈರು

    ರಾಯಚೂರು: ಕಲ್ಯಾಣ ಕರ್ನಾಟಕ ಉತ್ಸವ ಹಿನ್ನೆಲೆ ನಗರದ ಪೊಲೀಸ್ ಮೈದಾನದಲ್ಲಿ ರಾಷ್ಟ್ರ ಧ್ವಜಾರೋಹಣ ಮಾಡಲಾಯಿತು. ರಾಯಚೂರು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್ ಧ್ವಜಾರೋಹಣ ನೆರವೇರಿಸಿದರು. ಧ್ವಜಾರೋಹಣ ಬಳಿಕ ತೆರೆದ ಜೀಪ್‍ನಲ್ಲಿ ಗೌರವ ವಂದನೆ ಸ್ವೀಕರಿಸಿದರು.

    ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯಲ್ಲಿ ಜನಪ್ರತಿನಿಧಿಗಳ ಗೈರು ಎದ್ದು ಕಾಣುತ್ತಿತ್ತು. ಜನಪ್ರತಿನಿಧಿಗಳಿಗಾಗಿ ಮೀಸಲಿಟ್ಟಿದ್ದ ಕುರ್ಚಿಗಳು ಖಾಲಿ ಇದ್ದವು. ನೂತನ ಜಿಲ್ಲಾ ಉಸ್ತುವಾರಿ ಸಚಿವ ಆಚಾರ ಹಾಲಪ್ಪ ಬಸಪ್ಪ, ಸ್ಥಳೀಯ ಶಾಸಕ ಡಾ.ಶಿವರಾಜ್ ಪಾಟೀಲ್, ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್, ರಾಯಚೂರು ಸಂಸದ ಅಮರೇಶ್ವರ ನಾಯಕ್ ಸೇರಿದಂತೆ ಯಾವೊಬ್ಬ ಜನಪ್ರತಿನಿಧಿಗಳೂ ಕಾರ್ಯಕ್ರಮದಲ್ಲಿ ಭಾಗವಹಿಸಿರಲಿಲ್ಲ. ಇದನ್ನೂ ಓದಿ: ಹಟ್ಟಿ ಗಣಿ ಅಧ್ಯಕ್ಷ ಮಾನಪ್ಪ ವಜ್ಜಲ್ ಪುತ್ರನ ಗುಂಡಾಗಿರಿ, ಎಫ್‍ಐಆರ್ ದಾಖಲು

    ಧ್ವಜಾರೋಹಣ ಕಾರ್ಯಕ್ರಮದಲ್ಲಿ ರಾಯಚೂರು ಜಿಲ್ಲಾ ಪೊಲೀಸ್ ಅಧೀಕ್ಷಕ ಪ್ರಕಾಶ್ ನಿಕಮ್, ಜಿ.ಪಂ. ಸಿಇಓ ಶೇಖ್ ತನ್ವೀರ್ ಆಸೀಫ್ ಸೇರಿ ಇತರ ಅಧಿಕಾರಿಗಳು ಭಾಗಿಯಾಗಿದ್ದರು.

  • ಕೆಎಟಿ ತೀರ್ಪು, ಮುಂಬಡ್ತಿ ಶಿಕ್ಷಕರ ಹಿತ ಕಾಪಾಡಲು ಸಂಘದ ಆಗ್ರಹ

    ಕೆಎಟಿ ತೀರ್ಪು, ಮುಂಬಡ್ತಿ ಶಿಕ್ಷಕರ ಹಿತ ಕಾಪಾಡಲು ಸಂಘದ ಆಗ್ರಹ

    ಮಂಗಳೂರು: ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಮುಂಬಡ್ತಿ ಗೊಂದಲ ಹೊಸ ತಿರುವು ಪಡೆದುಕೊಂಡಿದೆ. ಈಗಾಗಲೇ ಮುಂಬಡ್ತಿ ಪಡೆದಿರುವ ಗ್ರೇಡ್ 2 ಪ್ರೌಢ ಶಾಲಾ ಶಿಕ್ಷಕರ ಹಿತವನ್ನು ಕಾಪಾಡಬೇಕು ಎಂಬ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಬಡ್ತಿ ಸರ್ಕಾರಿ ಪ್ರೌಢಶಾಲಾ ಶಿಕ್ಷಕರ ಸಂಘ ಅಭಿಯಾನ ಆರಂಭಿಸಿದೆ.

    ಶಿಕ್ಷಕರ ಹಿಂಬಡ್ತಿ ಆದೇಶವನ್ನು ಮರು ಪರಿಶೀಲಿಸಲು ಸರ್ಕಾರ ಮತ್ತು ಇಲಾಖೆಯ ಮೇಲೆ ಒತ್ತಡ ಹೇರಲು ಸಂಘ ಮುಂದಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಉಸ್ತುವಾರಿ ಸಚಿವರು ಮತ್ತು ಶಾಸಕರನ್ನು ಭೇಟಿ ಮಾಡಿ, ಈ ಬಗ್ಗೆ ಸಂತ್ರಸ್ತ ಶಿಕ್ಷಕರ ಅಹವಾಲವನ್ನು ಮಂಡಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮಂಗಳೂರು ದಕ್ಷಿಣ ಶಾಸಕ ಡಿ.ವೇದವ್ಯಾಸ ಕಾಮತ್, ಮಂಗಳೂರು ಶಾಸಕ ಹಾಗೂ ಮಾಜಿ ಸಚಿವ ಯು.ಟಿ.ಖಾದರ್ ಅವರಿಗೆ ಲಿಖಿತ ಮನವಿ ಸಲ್ಲಿಸಿ ಸಮಸ್ಯೆಯನ್ನು ಮನವರಿಕೆ ಮಾಡಿಕೊಡಲಾಯಿತು.

    ಸಂಘದ ಜಿಲ್ಲಾಧ್ಯಕ್ಷೆ ಶೆರ್ಲಿ ಸುಮಾಲಿನಿ ನೇತೃತ್ವದಲ್ಲಿ ಸಚಿವರು ಮತ್ತು ಶಾಸಕರಿಗೆ ಮನವಿ ಸಲ್ಲಿಸಲಾಯಿತು. ಉಪಾಧ್ಯಕ್ಷರಾದ ಪ್ರತಿಭಾ, ಜಿಲ್ಲಾ ಕಾರ್ಯದರ್ಶಿ ಪ್ರತೀಪ್, ಮಂಗಳೂರು ತಾಲೂಕು ಸಂಘದ ಅಧ್ಯಕ್ಷ ಪ್ರೇಮನಾಥ ಮರ್ಣೆ, ಸಂಘಟನಾ ಕಾರ್ಯದರ್ಶಿ ಗಣೇಶ್ ಹಾಗೂ ಇತರ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

    ಇದೇ ವೇಳೆ ಬಂದರು, ಮೀನುಗಾರಿಕೆ ಮತ್ತು ಒಳನಾಡು ಸಾರಿಗೆ ಸಚಿವ ಎಸ್.ಅಂಗಾರ ಅವರಿಗೂ ಸುಳ್ಯದಲ್ಲಿ ಮನವಿ ಸಲ್ಲಿಸಲಾಯಿತು. ಸುಳ್ಯ ತಾಲೂಕು ಬಡ್ತಿ ಶಿಕ್ಷಕರ ಸಂಘದ ಅಧ್ಯಕ್ಷರಾದ ನಾರಾಯಣ.ಬಿ, ಪದಾಧಿಕಾರಿಗಳಾದ ಉನ್ನಿಕೃಷ್ಣನ್ ಹಾಗೂ ಹಿಂಬಡ್ತಿ ಎದುರಿಸುತ್ತಿರುವ ಶಿಕ್ಷಕರು ಸಚಿವ ಅಂಗಾರ ಅವರಿಗೆ ಮನವಿ ಸಲ್ಲಿಸಿದರು. ಪುತ್ತೂರು ತಾಲೂಕು ಬಡ್ತಿ ಶಿಕ್ಷಕರ ಸಂಘದಿಂದ ಶಾಸಕ ಸಂಜೀವ ಮಠಂದೂರು ಅವರಿಗೆ ಮನವಿ ಸಲ್ಲಿಸಲಾಯಿತು.

    ಕರ್ನಾಟಕ ಆಡಳಿತ ನ್ಯಾಯ ಮಂಡಳಿಯು ಕಳೆದ ಮೇ 12ರಂದು ಮಹತ್ವದ ತೀರ್ಪು ನೀಡಿದ್ದು, 6ರಿಂದ 8ನೇ ತರಗತಿವರೆಗೆ ಬೋಧಿಸಲು ನೇಮಕಗೊಂಡ ಶಿಕ್ಷಕರು ಮಾತ್ರ ಪ್ರೌಢ ಶಾಲಾ ಶಿಕ್ಷಕರು ಗ್ರೇಡ್ 2 ಹುದ್ದೆಯನ್ನು ಹೊಂದಲು ಅರ್ಹರು ಮತ್ತು ಈ ಹಿಂದೆ ನೀಡಿರುವ ಎಲ್ಲ ಬಡ್ತಿಗಳನ್ನು ಹಿಂಪಡೆಯಬೇಕು ಎಂದು ಕೆಎಟಿ ತೀರ್ಪಿನಲ್ಲಿ ಹೇಳಿತ್ತು. ಈ ಬಗ್ಗೆ ಬಡ್ತಿ ಶಿಕ್ಷಕರ ಸಂಘ ಮೇಲ್ಮನವಿ ಸಲ್ಲಿಸಲು ಮುಂದಾಗಿದ್ದು, ಸರ್ಕಾರದ ಮೇಲೆ ಒತ್ತಡ ಹೇರಲು ಈ ಮನವಿ ಸಲ್ಲಿಸಲಾಗುತ್ತಿದೆ.

  • ಜನಪ್ರತಿನಿಧಿಗಳು, ಅಧಿಕಾರಿಗಳ ಬೇಜವಾಬ್ದಾರಿತನ – ಬೆಳಗಾವಿ ಗಡಿಯಲ್ಲಿ ಕನ್ನಡ ಮಾಯ

    ಜನಪ್ರತಿನಿಧಿಗಳು, ಅಧಿಕಾರಿಗಳ ಬೇಜವಾಬ್ದಾರಿತನ – ಬೆಳಗಾವಿ ಗಡಿಯಲ್ಲಿ ಕನ್ನಡ ಮಾಯ

    – ನಗರಸಭೆ ಅಧ್ಯಕ್ಷರ ವಾಹನದ ಫಲಕವೂ ಮರಾಠಿಮಯ

    ಬೆಳಗಾವಿ/ಚಿಕ್ಕೋಡಿ: ತಿನ್ನಲು ಕರ್ನಾಟಕದ ಅನ್ನ, ಉಸಿರಾಡಲು ಕನ್ನಡದ ಗಾಳಿ, ಕುಡಿಯಲು ಕನ್ನಡದ ನೀರು ಬೇಕು. ಆದರೆ ಕೆಲವರಿಗೆ ಕನ್ನಡ ಭಾಷೆ ಮಾತ್ರ ಬೇಡವಾಗಿದೆ.

    ನವೆಂಬರ್ 1ರಂದು ಕರ್ನಾಟಕ ರಾಜ್ಯೋತ್ಸವದ ಸಡಗರ ಸಂಭ್ರಮ ರಾಜ್ಯದೆಲ್ಲೆಡೆ ಇರುತ್ತದೆ. ಆದರೆ ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ಬೆಳಗಾವಿ ಜಿಲ್ಲೆಯ ಕೆಲ ಪ್ರದೇಶಗಳಲ್ಲಿ ರಾಜ್ಯೋತ್ಸವ ಸಂಭ್ರಮಾಚರಣೆ ಕೇವಲ ಸರ್ಕಾರದ ಕಾರ್ಯಾಲಯಕ್ಕೆ ಮಾತ್ರ ಸೀಮಿತವಾಗಿರುತ್ತದೆ. ಅದರಲ್ಲೂ ನಿಪ್ಪಾಣಿ ನಗರ ಹಾಗೂ ನಿಪ್ಪಾಣಿ ತಾಲೂಕಿನ ಬಹುತೇಕ ಕಡೆ ಕನ್ನಡವೇ ಮಾಯವಾಗಿ ಬಿಟ್ಟಿದೆ.

    ನಿಪ್ಪಾಣಿ ನಗರ ಸಂಪೂರ್ಣ ಮರಾಠಿ ಭಾಷೆಯ ಪ್ರಭಾವಕ್ಕೆ ಒಳಗಾಗಿ ಕನ್ನಡ ಭಾಷೆ ತನ್ನ ಪ್ರಭಾವ ಕಳೆದುಕೊಳ್ಳುವ ಸ್ಥಿತಿ ತಲುಪಿದೆ. ಈ ನಗರದಲ್ಲಿನ ಬಹುತೇಕ ಅಂಗಡಿಗಳ ಫಲಕಗಳು ಮರಾಠಿಮಯವಾಗಿವೆ. ಕರ್ನಾಟಕದ ಅವಿಭಾಜ್ಯ ಅಂಗವಾಗಿರುವ ನಿಪ್ಪಾಣಿ ನಗರದಲ್ಲಿ ಕನ್ನಡದ ಫಲಕಗಳು ಸಿಗುವುದೇ ಅಪರೂಪ. ಇಲ್ಲಿನ ಬೇಜವಾಬ್ದಾರಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಂದ ಇಲ್ಲಿ ಕನ್ನಡವೇ ಮಾಯವಾಗಿದೆ.

    ಶೇ.70 ರಷ್ಟು ನಾಮಫಲಕಗಳು ಕನ್ನಡದಲ್ಲಿಯೇ ಇರಬೇಕು ಎನ್ನುವ ಸರ್ಕಾರದ ಆದೇಶಕ್ಕೆ ಇಲ್ಲಿ ಕವಡೆ ಕಾಸಿನ ಕಿಮ್ಮತ್ತು ಇಲ್ಲದಂತಾಗಿದೆ. ಇಲ್ಲಿನ ನಗರಸಭೆ ಅಧ್ಯಕ್ಷರ ವಾಹನದ ಫಲಕವೂ ಮರಾಠಿ ಭಾಷೆಯಲ್ಲಿಯೇ ಬರೆಸಲಾಗಿದೆ. ಇಲ್ಲಿನ ಜನಪ್ರತಿನಿಧಿಗಳಂತೂ ಕನ್ನಡ ಭಾಷೆಯನ್ನೇ ಮರೆತು ನಿಪ್ಪಾಣಿ ಮಹಾರಾಷ್ಟ್ರ ರಾಜ್ಯದಲ್ಲಿ ಇದೆ ಎನ್ನುವಂತೆ ವರ್ತಿಸುತ್ತಿದ್ದಾರೆ. ಹೀಗಾಗಿ ಇಲ್ಲಿನ ಶಾಸಕರು ಹಾಗೂ ನಿಪ್ಪಾಣಿ ತಾಲೂಕಾಡಳಿತ ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

    ಅಂಗಡಿಗಳ ನಾಮಫಲಕಗಳನ್ನು ಕನ್ನಡ ಭಾಷೆಯಲ್ಲಿ ಬರೆಯಿಸಬೇಕು ಇಲ್ಲವಾದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ನಿಪ್ಪಾಣಿ ಚಲೋ ನಡೆಸಿ ಕನ್ನಡದ ನಾಮಫಲಕಗಳನ್ನು ಅಳವಡಿಸಲಿದೆ. ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸಿದರೆ ಅದಕ್ಕೆ ನಿಪ್ಪಾಣಿ ತಾಲೂಕಾಡಳಿತವೇ ಹೊಣೆಯಾಗಲಿದೆ ಎಂದು ಕರವೇ ಮುಖಂಡರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

  • ಕಾಂಗ್ರೆಸ್ ಬಿಟ್ಟ ವೈರಸ್ ನಮ್ಮ ಪಕ್ಷದಲ್ಲಿಯೂ ಬಂದು ಸೇರಿಕೊಂಡಿವೆ: ಬಿ.ಎಲ್ ಸಂತೋಷ್

    ಕಾಂಗ್ರೆಸ್ ಬಿಟ್ಟ ವೈರಸ್ ನಮ್ಮ ಪಕ್ಷದಲ್ಲಿಯೂ ಬಂದು ಸೇರಿಕೊಂಡಿವೆ: ಬಿ.ಎಲ್ ಸಂತೋಷ್

    – ಪಕ್ಷ, ಜನಪ್ರತಿನಿಧಿಗಳು ಜೋಡೆತ್ತುಗಳಂತೆ ಕಾರ್ಯ ನಿರ್ವಹಿಸಬೇಕಿದೆ

    ಶಿವಮೊಗ್ಗ: ಕಾಂಗ್ರೆಸ್ ಬಿಟ್ಟ ವೈರಸ್ ನಮ್ಮ ಪಕ್ಷದಲ್ಲಿಯೂ ಬಂದು ಸೇರಿಕೊಂಡಿದೆ ಎಂದು ಬಿಜೆಪಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಹೇಳಿದ್ದಾರೆ.

    ನಗರದಲ್ಲಿ ಇಂದು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಪ್ರಮುಖರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜೋಡೆತ್ತು ಪದ ಬೇರೆ ಬೇರೆ ಸಂದರ್ಭದಲ್ಲಿ ಬೇರೆ ಬೇರೆ ರೀತಿ ಉಪಯೋಗವಾಗಿವೆ. ಆದರೆ ನಾನು ಈ ಪದವನ್ನು ಇಲ್ಲಿ ಬಳಸುತ್ತಿದ್ದೇನೆ. ಪಕ್ಷ ಮತ್ತು ಜನಪ್ರತಿನಿಧಿಗಳು ಜೋಡೆತ್ತು ರೀತಿಯಲ್ಲಿ ಕಾರ್ಯ ನಿರ್ವಹಿಸಿ, ಜನರನ್ನು ಕೊಂಡೊಯ್ಯಬೇಕಿದೆ. ಜನರು ಕೂಡ ಇದನ್ನೇ ಅಪೇಕ್ಷೆ ಪಡುತ್ತಾರೆ ಎಂದರು.

    ಜನರು ಜನಪ್ರತಿನಿಧಿ ಯಾರು, ಪಕ್ಷ ಯಾರು ಎಂದು ನೋಡುವುದಿಲ್ಲ. ಬದಲಾಗಿ ಜನರಿಗೆ ಗಾಡಿ ಲಯಬದ್ಧವಾಗಿ ಮುಂದೆ ಸಾಗಬೇಕಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಜನಪ್ರತಿನಿಧಿಗಳು ಕರ್ತವ್ಯ ನಿರ್ವಹಿಸಬೇಕಿದೆ. ಮುಂಬರುವ ವಿಧಾನಸಭೆ ಚುನಾವಣೆಗಳ ಸಂದರ್ಭದಲ್ಲಿ ಈಗಿನ ಜಿಲ್ಲಾ ತಂಡ ಇರಲಿದೆಯೋ ಅಥವಾ ಬೇರೆ ತಂಡ ಬರಲಿದೆಯೋ ಗೊತ್ತಿಲ್ಲ. ಮುಂದಿನ ದಿನಗಳಲ್ಲಿ ಜಿ.ಪಂ. ಮತ್ತು ಗ್ರಾ.ಪಂ. ಚುನಾವಣೆಗಳು ಬರಲಿದೆ. ಆ ಸಂದರ್ಭದಲ್ಲಿ ಹೊಸ ತಂಡಗಳ ಜೊತೆಗೂ ಸೇರಿಕೊಂಡು ನಾವು ಚುನಾವಣೆ ಎದುರಿಸಬೇಕಿದೆ ಎಂದು ತಿಳಿಸಿದರು.

    ಕಾಂಗ್ರೆಸ್ ಪಕ್ಷ ಅನೇಕ ಸಮಸ್ಯೆಗಳನ್ನು ಒಂದು ರೀತಿಯ ವೈರಸ್ ರೀತಿಯಲ್ಲಿ ಇಂಜೆಕ್ಟ್ ಮಾಡಿಬಿಟ್ಟಿದೆ. ನೆಹರು ನಂತರ ಬಂದಂತಹ ಕಾಂಗ್ರೆಸ್ ರಾಜಕೀಯ ಪಕ್ಷಗಳಲ್ಲಿ ಅನೇಕ ವೈರಸ್ ಬಿಟ್ಟು, ನಮ್ಮ ದೇಶಕ್ಕೆ ಅತಿ ದೊಡ್ಡ ಅನ್ಯಾಯ ಮಾಡಿದೆ. ಅದು ಎಲ್ಲಾ ಪಾರ್ಟಿಗಳಲ್ಲಿಯೂ ಈಗ ಬಂದು ಸೇರಿಕೊಂಡಿವೆ. ನಮ್ಮ ಪಕ್ಷದಲ್ಲಿಯೂ ಬಂದು ಸೇರಿಕೊಂಡಿವೆ. ವ್ಯಕ್ತಿಗಳಲ್ಲ, ವೈರಸ್‍ಗಳು ಬಂದು ಸೇರಿಕೊಂಡಿವೆ. ಅವೆಲ್ಲವನ್ನು ನಿವಾರಿಸಿಕೊಂಡು ಪರ್ಯಾಯ ರಾಜಕೀಯ ನೀಡಲು ಆಗುತ್ತಾ ಎಂಬ ಪ್ರಶ್ನೆ ಇದೀಗ ಎದುರಾಗಿದ್ದು, ಇವೆಲ್ಲವನ್ನು ಸರಿದೂಗಿಸಿಕೊಂಡು ಮುನ್ನಡೆಯಬೇಕಿದೆ ಎಂದು ಮಾರ್ಮಿಕವಾಗಿ ಸಂತೋಷ್ ಹೇಳಿದರು.

  • ಕೇಳೋರಿಲ್ಲ ಗಡಿ ಗ್ರಾಮಸ್ಥರ ಸಂಕಷ್ಟ – ಮೂಲಭೂತ ಸೌಕರ್ಯವಿಲ್ಲದೆ ನರಳುತ್ತಿರುವ ಗ್ರಾಮ

    ಕೇಳೋರಿಲ್ಲ ಗಡಿ ಗ್ರಾಮಸ್ಥರ ಸಂಕಷ್ಟ – ಮೂಲಭೂತ ಸೌಕರ್ಯವಿಲ್ಲದೆ ನರಳುತ್ತಿರುವ ಗ್ರಾಮ

    ಯಾದಗಿರಿ: ಜಿಲ್ಲೆಯ ವಡಗೇರಾ ತಾಲೂಕಿನಲ್ಲಿ ಬರುವ ನಮ್ಮ ರಾಜ್ಯದ ಕೊನೆಯ ಗ್ರಾಮ ಕೊಂಗಂಡಿ, ಈ ಗ್ರಾಮದಿಂದ ಕೇವಲ ಒಂದು ಕಿಲೋಮೀಟರ್ ಹೋದರೆ ಸಾಕು ತೆಲಂಗಾಣ ರಾಜ್ಯ ಆರಂಭವಾಗುತ್ತದೆ. ಇದು ರಾಜ್ಯದ ಕೊನೆಯ ಗ್ರಾಮ ಅನ್ನೋದಕ್ಕೆ ಏನೋ ನಮ್ಮ ರಾಜ್ಯ ಸರ್ಕಾರ ಹಾಗೂ ಯಾದಗಿರಿ ಜಿಲ್ಲಾಡಳಿತ ಈ ಗ್ರಾಮವನ್ನು ಸಂಪೂರ್ಣವಾಗಿ ಮರೆತು ಬಿಟ್ಟಿದೆ. ಹೀಗಾಗಿ ಈ ಗ್ರಾಮದಲ್ಲಿ ಅಭಿವೃದ್ಧಿ ಅನ್ನೋದು ಮರಿಚಿಕೆಯಾಗಿದೆ.

    ಈ ಗ್ರಾಮ ಯಾದಗಿರಿ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುತ್ತದೆ. ಚುನಾವಣೆಯಲ್ಲಿ ಮತ ಕೇಳಲು ಈ ಗ್ರಾಮಕ್ಕೆ ಬಂದ ಬಿಜೆಪಿ ಶಾಸಕ ವೆಂಕಟರೆಡ್ಡಿ ಮುದ್ನಾಳ ಗೆದ್ದ ಮೇಲೆ ಇತ್ತ ಕಡೆ ತಲೆ ಹಾಕಿಲ್ಲ. ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಿದೆ. ಇದು ಹಳೆ ಕಾಲದ ಕಟ್ಟಡವಾದ್ದರಿಂದ ಯಾವಾಗ ಬೀಳತ್ತೋ ಗೊತ್ತಿಲ್ಲ. ಹೀಗಾಗಿ ಮಕ್ಕಳು ಜೀವ ಕೈಯಲ್ಲಿ ಹಿಡಿದು ಪಾಠ ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ.

    ಇತ್ತ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಾಮಮಾತ್ರಕ್ಕೆ ನಿರ್ಮಾಣ ಮಾಡಿದ್ದು, ಈ ಘಟಕ ಉದ್ಘಾಟನೆ ಆದಾಗಿಂದ ಇಲ್ಲಿಯತನಕ ಈ ಗ್ರಾಮಸ್ಥರು ಈ ಘಟಕದಿಂದ ಒಂದು ಹನಿ ನೀರು ಕುಡಿದಿಲ್ಲ. ಚರಂಡಿಗಳೆಲ್ಲಾ ತುಂಬಿ ತುಳುಕಿ, ವಾರ್ಡ್‍ಗಳೆಲ್ಲಾ ಗಬ್ಬೆದ್ದು ನಾರುತ್ತಿದ್ದರೂ ಜನರ ಸಮಸ್ಯೆ ಕೇಳೋರೇ ಇಲ್ಲದಂತಾಗಿದೆ. ಇಷ್ಟೇ ಅಲ್ಲದೇ ರಸ್ತೆಗಳಲ್ಲಿ ಮುಳ್ಳು, ಗಿಡ-ಗಂಟಿಗಳು ಬೆಳದ ಕಾರಣ ಈ ಗ್ರಾಮಕ್ಕೆ ಬಸ್ ಬರೋದು ಬಿಟ್ಟು ಎಷ್ಟೋ ವರ್ಷಗಳಾಗಿವೆ. ಇವೆಲ್ಲದರ ವಿದ್ಯುತ್ ಕಣ್ಣಾಮುಚ್ಚಾಲೆಗೆ ಗ್ರಾಮಸ್ಥರು ಮತ್ತು ರೈತರು ಹೈರಾಣಾಗಿದ್ದಾರೆ.

    ಇಲ್ಲಿನ ಸ್ಥಳೀಯ ಜನಪ್ರತಿನಿಧಿಗಳು ವರ್ಷಕೊಮ್ಮೆ ಇಲ್ಲಿಗೆ ಬಂದರೆ ಹೆಚ್ಚು. ಮತ ಕೇಳೋಕೆ ಬರುವ ರಾಜಕಾರಣಿಗಳು ಮತ್ತೆ ಚುನಾವಣೆ ಬಂದಾಗ ಇತ್ತಕಡೆ ಮುಖ ಹಾಕುತ್ತಾರೆ. ಹೀಗಾಗಿ ಈ ಗ್ರಾಮಸ್ಥರ ಪಾಡು ಹೇಳ ತೀರದಾಗಿದೆ. ಇನ್ನೂ ಜಿಲ್ಲಾಡಳಿತಕ್ಕೆ ಈ ಗ್ರಾಮ ಇದೆ ಅನ್ನೋ ಮಾಹಿತಿ ಇದಿಯೋ? ಇಲ್ಲವೋ? ಎಂದು ಅನುಮಾನ ಮೂಡುವಷ್ಟರ ಮಟ್ಟಿಗೆ ಅಧಿಕಾರಿಗಳು ಜಾಣ ಕುರುಡತನ ತೋರುತ್ತಿದ್ದಾರೆ.

  • ಸಿದ್ದರಾಮೇಶ್ವರ ಜಯಂತಿಗೆ ಜನಪ್ರತಿನಿಧಿಗಳು ಗೈರು – ಕಾರ್ಯಕ್ರಮ ಬಹಿಷ್ಕರಿಸಿ ಪ್ರತಿಭಟನೆ

    ಸಿದ್ದರಾಮೇಶ್ವರ ಜಯಂತಿಗೆ ಜನಪ್ರತಿನಿಧಿಗಳು ಗೈರು – ಕಾರ್ಯಕ್ರಮ ಬಹಿಷ್ಕರಿಸಿ ಪ್ರತಿಭಟನೆ

    – ಕೂಲಿ ಕೆಲಸ ಬಿಟ್ಟು ಬಂದಿದ್ದೇವೆ, ಜನಪ್ರತಿನಿಧಿಗಳು ಬಂದಿಲ್ಲ
    – ಸಮುದಾಯಕ್ಕೆ ಅವಮಾನ ಮಾಡಿದ್ದಾರೆ ಎಂದು ಆಕ್ರೋಶ

    ಮಡಿಕೇರಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆಯೋಜಿಸಲಾಗಿದ್ದ ಸಿದ್ದರಾಮೇಶ್ವರ ಜಯಂತಿಗೆ ಜಿಲ್ಲೆಯ ಯಾವುದೇ ಜನಪ್ರತಿನಿಧಿ ಹಾಜರಾಗದ ಹಿನ್ನೆಲೆ ಭೋವಿ ಜನಾಂಗದ ಜನರು ಕಾರ್ಯಕ್ರಮ ಬಹಿಷ್ಕರಿಸಿ, ಊಟ ಮಾಡದೆ ಹೊರನಡೆದ ಘಟನೆ ಮಡಿಕೇರಿಯಲ್ಲಿ ನಡೆದಿದೆ

    ಮಡಿಕೇರಿಯ ದೇವರಾಜ ಅರಸು ಭವನದಲ್ಲಿ ಇಂದು ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮಕ್ಕೆ ಸಂಸದ ಪ್ರತಾಪ್ ಸಿಂಹ, ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್, ಪರಿಷತ್ ಸದಸ್ಯರಾದ ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ ಮತ್ತು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಹರೀಶ್ ಅವರನ್ನು ಆಹ್ವಾನಿಸಲಾಗಿತ್ತು.

    ಈ ಕಾರ್ಯಕ್ರಮಕ್ಕೆ ಭೋವಿ ಜನಾಂಗದ ಮುಖಂಡರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳು ಮತ್ತು ಕಾರ್ಯಕ್ರಮದ ಭಾಷಣಕಾರರು ಹಾಜರಾಗಿದ್ದು ಬಿಟ್ಟರೆ, ಜನಪ್ರತಿನಿಧಿಯಾಗಿ ಒಬ್ಬರೂ ಭಾಗವಹಿಸಿರಲಿಲ್ಲ. ಹೀಗಾಗಿ ಕಾರ್ಯಕ್ರಮಕ್ಕೆ ಬಂದಿದ್ದ ಭೋವಿ ಜನಾಂಗದ ಜನರು ಕಾರ್ಯಕ್ರಮವನ್ನು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನಾವು ಕೂಲಿ ಕೆಲಸ ಬಿಟ್ಟು ಕಾರ್ಯಕ್ರಮಕ್ಕೆ ಬಂದಿದ್ದೇವೆ. ಆದರೆ ಜನಪ್ರತಿನಿಧಿಗಳು ಭಾಗವಹಿಸದೆ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

  • ಬಿಸಿಲನಾಡಲ್ಲಿ ಕೈ ಬೀಸಿ ಕರೆಯುತ್ತಿದೆ ಗುಂಡಲಬಂಡ ಜಲಪಾತ

    ಬಿಸಿಲನಾಡಲ್ಲಿ ಕೈ ಬೀಸಿ ಕರೆಯುತ್ತಿದೆ ಗುಂಡಲಬಂಡ ಜಲಪಾತ

    – ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಅಜ್ಞಾತವಾಗಿರುವ ಜಲಸಿರಿ

    ರಾಯಚೂರು: ಬಿಸಿಲನಾಡು ರಾಯಚೂರಿನಲ್ಲಿ ಮಲೆನಾಡು ನೆನಪಿಸುವಂತೆ ಜಲಪಾತವೊಂದು ಧುಮ್ಮಿಕ್ಕಿ ಹರಿಯುತ್ತಿದೆ. ಹೊಸ ವರ್ಷದ ಹಿನ್ನೆಲೆ ಮೈದುಂಬಿ ನೋಡುಗರನ್ನು ಕೈ ಬೀಸಿ ಕರೆಯುತ್ತಿದೆ. ಕಲ್ಲು ಬಂಡೆಗಳ ಮೈಮೇಲೆ ಮೆಲ್ಲನೆ ಹರಿದು ರಮಣೀಯ ದೃಶ್ಯಕಾವ್ಯ ಸೃಷ್ಠಿಸಿರುವ ಗುಂಡಲಬಂಡೆ ಜಲಪಾತದ ಸೋಬಗನ್ನ ನೋಡಲು ಜನ ಕಾತುರದಿಂದ ಹೋಗುತ್ತಿದ್ದಾರೆ. ಆದರೆ ಜಲಪಾತಕ್ಕೆ ಹೋಗಲು ದಾರಿಯಿಲ್ಲದೆ ಬಹಳಷ್ಟು ಪ್ರವಾಸಿಗರು ನಿರಾಸೆಗೊಂಡಿದ್ದಾರೆ. ಸಾಹಸಿಗರು ನಡೆದುಕೊಂಡೆ ಜಲಪಾತದ ಹತ್ತಿರ ಹೋಗುತ್ತಿದ್ದಾರೆ.

    ಲಿಂಗಸುಗೂರು ತಾಲೂಕಿನ ಗೋಲಪಲ್ಲಿ ಗ್ರಾಮದ ಬಳಿಯಿರುವ ಈ ಜಲಪಾತವನ್ನು ಸಿಡಿಲುಬಂಡೆ ಜಲಪಾತ ಅಂತಲೂ ಕರೆಯುತ್ತಾರೆ. ಹನ್ನೆರಡು ವರ್ಷಗಳಿಂದ ಬೆಳಕಿಗೆ ಬಂದಿರುವ ಈ ಜಲಪಾತ ಮೊದಲು ಸಣ್ಣದಾಗಿ ಹರಿಯುತ್ತಿತ್ತು. ನಾರಾಯಣಪುರ ಬಲದಂಡೆ ಕಾಲುವೆಯ ಬಸಿನೀರು ಸೇರಿಕೊಂಡು ಈಗ ಜಲಪಾತ 90 ಅಡಿ ಮೇಲಿಂದ ಧುಮ್ಮಿಕ್ಕಿ ಹರಿಯುತ್ತಿದೆ. ಇಲ್ಲಿಂದ 10 ಕಿ.ಮೀ ದೂರದಲ್ಲಿ ಐದಾರು ಹಳ್ಳಗಳು ಒಂದೆಡೆ ಸೇರುವ ಸ್ಥಳದಿಂದ ಉಗಮವಾಗುವ ಜಲಪಾತದ ಮೂಲ ಪುನಃ ಹಳ್ಳಗಳ ಮೂಲಕ ಹರಿದು ಕೃಷ್ಣಾನದಿಗೆ ಸೇರುತ್ತಿದೆ. ಆದರೆ ಇಲ್ಲೊಂದು ಸುಂದರ ಜಲಪಾತವಿದೆ ಅಂತ ಜಿಲ್ಲೆಯ ಎಷ್ಟೋ ಜನರಿಗೆ ಈಗಲೂ ಗೊತ್ತೇ ಇಲ್ಲ. ಕಾರಣ ಇಲ್ಲಿಗೆ ತೆರಳಲು ರಸ್ತೆಯಿಲ್ಲ, ಜನಪ್ರತಿನಿಧಿಗಳು ಅಧಿಕಾರಿಗಳಿಗೆ ಅಭಿವೃದ್ಧಿ ಮಾಡುವ ಮನಸ್ಸಿಲ್ಲ ಎಂಬ ಆರೋಪ ಕೇಳಿ ಬಂದಿದೆ.

    ಜಲಪಾತದ ಇರುವುದು ಇನ್ನೂ ಪ್ರವಾಸೋದ್ಯಮ ಇಲಾಖೆ ಗಮನಕ್ಕೆ ಬಂದಿಲ್ಲ. ಬಂದರೂ ಯಾವುದೇ ಅಭಿವೃದ್ಧಿ ಕೆಲಸಕ್ಕೆ ಮುಂದಾಗಿಲ್ಲ. ಕಾಡಿನ ಮಧ್ಯೆ ದುರ್ಗಮ ರಸ್ತೆಯಲ್ಲಿ ತೆರಳಿದರೆ ಸಿಗುವ ಜಲಪಾತದ ಬಳಿ ಹೋಗುವುದೇ ಒಂದು ಸಾಹಸವಾಗಿರುವುದರಿಂದ ಪ್ರವಾಸಿಗರು ಬೇಸರಗೊಂಡಿದ್ದಾರೆ. ಜಿಲ್ಲೆಯ ಏಕೈಕ ರಮಣೀಯ ಪ್ರವಾಸಿ ಸ್ಥಳವಾಗಿರುವ ಗುಂಡಲಬಂಡೆ ಜಲಪಾತ ಪ್ರದೇಶದ ಅಭಿವೃದ್ಧಿ ಅವಶ್ಯವಾಗಿದೆ. ಅಲ್ಲದೆ ಎತ್ತರದಿಂದ ನೀರು ಧುಮ್ಮುಕ್ಕುವುದರಿಂದ ವಿದ್ಯುತ್ ಉತ್ಪಾದನೆಗೂ ಅವಕಾಶಗಳಿವೆ. ಜಿಲ್ಲೆಯ ಶಾಸಕರು, ಸಂಸದರು ಪ್ರಸ್ತಾವನೆ ಸಲ್ಲಿಸಿದರೆ ಜಲಪಾತ ಅಭಿವೃದ್ಧಿಗೆ ಮುಂದಾಗುತ್ತೇವೆ ಅಂತ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಜಿಲ್ಲೆಯ ಜನಪ್ರತಿನಿಧಿಗಳಲ್ಲಿನ ಇಚ್ಛಾಶಕ್ತಿ ಕೊರತೆಯಿಂದ ಸುಂದರ ತಾಣವೊಂದು ಜನರಿಂದ ದೂರ ಉಳಿದಿದೆ ಅಂತ ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.

    ಹೊಸ ವರ್ಷಾಚರಣೆ, ರಜಾದಿನಗಳು ಬಂದ್ರೆ ಮೋಜುಮಸ್ತಿಗಾಗಿ ಯುವಕರ ದಂಡೇ ಇಲ್ಲಿಗೆ ಹರಿದು ಬರುತ್ತದೆ. ಆದರೆ ಇಲ್ಲಿ ಯಾವುದೇ ಸುರಕ್ಷತೆಗಳು ಇಲ್ಲದಿರುವುದರಿಂದ ಯುವಕರು ಅಪಾಯಕ್ಕೆ ಒಳಗಾದ ಉದಾಹರಣೆಗಳೂ ಇವೆ. ಕನಿಷ್ಠ ಈಗಲಾದರೂ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಎಚ್ಚೆತ್ತು ಜಲಪಾತ ಪ್ರದೇಶ ಅಭಿವೃದ್ಧಿಗೆ ಮುಂದಾಗಬೇಕಿದೆ. ಜಿಲ್ಲೆಯ ಏಕೈಕ ಸುಂದರ ಪ್ರವಾಸಿ ಸ್ಥಳವನ್ನ ಅಭಿವೃದ್ಧಿ ಪಡಿಸಬೇಕಿದೆ.

  • ಗುಂಡಿಗಳಾದ ರಸ್ತೆಗಳು- ಶಾಸಕರು ಮಾತ್ರ ಮೌನ

    ಗುಂಡಿಗಳಾದ ರಸ್ತೆಗಳು- ಶಾಸಕರು ಮಾತ್ರ ಮೌನ

    ಕೊಪ್ಪಳ: ಕನಕಗಿರಿ ವಿಧಾನಸಭಾ ಕ್ಷೇತ್ರದ ಗ್ರಾಮೀಣ ಭಾಗದ ಬಹುತೇಕ ರಸ್ತೆಗಳು ಹಾಳಾಗಿದ್ದು, ರಸ್ತೆ ದುಸ್ಥಿತಿ ಕಂಡು ಜನರು ಹೈರಾಣಾಗಿದ್ದಾರೆ.

    ಕನಕಗಿರಿ ಸಮೀಪದ ಹಿರೇಖೇಡ, ಚಿಕ್ಕಖೇಡ, ನಿರಲೂಟಿ, ಗುಡದೂರು, ಮಲ್ಲಿಗೆವಾಡ, ಹುಲಿಹೈದರ್, ಗೋಡಿನಾಳ, ಹೊಸಗುಡ್ಡ, ಹುಲಿಹೈದರ್, ಕಲಕೇರಿ ಗ್ರಾಮದಿಂದ ಜೀರಾಳ, ಚಿಕ್ಕಡಂಕನಕಲ್, ನವಲಿ ಹೀಗೆ ಪಟ್ಟಿ ಮಾಡುತ್ತಾ ಹೋದರೆ ಹನುಮಂತನ ಬಾಲದಂತೆ ಗ್ರಾಮಗಳ ಹದಗೆಟ್ಟ ರಸ್ತೆಗಳ ಪಟ್ಟಿ ದೊರೆಯುತ್ತದೆ. ಬಿಜೆಪಿಯ ಬಸವರಾಜ ದಡೇಸುಗೂರು ಶಾಸಕರಾಗಿ ಆಯ್ಕೆಯಾಗಿ 2 ವರ್ಷ ಸಮೀಪಿಸುತ್ತಾ ಬಂದರೂ ರಸ್ತೆಗಳ ಅಭಿವೃದ್ಧಿಗೆ ನಯಾ ಪೈಸೆ ಅನುದಾನ ಬಿಡುಗಡೆಗೊಳಿಸಿಲ್ಲ.

    ಈ ಹಿಂದೆ ಜೆಡಿಎಸ್, ಕಾಂಗ್ರೆಸ್ ದೋಸ್ತಿ ಸರ್ಕಾರದಲ್ಲಿ ಲೋಕೋಪಯೋಗಿ, ನೀರಾವರಿ, ಸಾರಿಗೆ ಸೇರಿದಂತೆ ನಾನಾ ಇಲಾಖೆಯ ಸಚಿವರನ್ನು ಭೇಟಿ ಮಾಡಿ ಸನ್ಮಾನಿಸಿದ್ದು ಬಿಟ್ಟರೆ ಶಾಸಕರಿಂದ ನಯಾ ಪೈಸೆ ಬಿಡುಗಡೆಗೊಳಿಸುವ ಕೆಲಸ ಮಾತ್ರ ಆಗಿಲ್ಲ. ಈಗ ತಮ್ಮ ಆಡಳಿತ ಪಕ್ಷ ಇದ್ದರೂ ಸಹ ಆಡಳಿತಕ್ಕೆ ಚುರುಕು ಮುಟ್ಟಿಸುತ್ತಿಲ್ಲ. ಶಾಸಕರು ಹೊರ ಯೋಜನೆ, ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಿಸಿಕೊಂಡು ಬರುತ್ತಿಲ್ಲ ಬದಲಾಗಿ ಈ ಹಿಂದೆ ಇದ್ದ ಸರ್ಕಾರದ ಕೆಲಸವನ್ನೇ ಮುಂದುವರೆಸಿಕೊಂಡು ಬರುತ್ತಿದ್ದಾರೆ ಎನ್ನುವ ಆರೋಪಗಳು ವ್ಯಾಪಕವಾಗಿ ಕೇಳಿ ಬರುತ್ತಿವೆ.

    ಕನಕಗಿರಿ ಭಾಗದ ಹಲವು ಗ್ರಾಮಗಳ ಮುಖ್ಯ ರಸ್ತೆಗಳ ಸಂಪೂರ್ಣ ಹದಗೆಟ್ಟಿದ್ದರೂ ದುರಸ್ಥಿಗೆ ಕ್ರಮಕೈಗೊಳ್ಳುತ್ತಿಲ್ಲ. ಹಿರೇಖೇಡ, ಗುಡದೂರು ಗ್ರಾಮದಿಂದ ಹುಲಿಹೈದರ್, ಗೋಡಿನಾಳ, ಜೀರಾಳ, ನವಲಿ, ಚಿಕ್ಕಡಂಕನಕಲ್, ಉಮಳಿಕಾಟಾಪುರ, ವಡಕಿ, ಚರ್ಚಿನಗುಡ್ಡತಾಂಡ ಸೇರಿದಂತೆ ಹಲವು ರಸ್ತೆಗಳಲ್ಲಿ ದೊಡ್ಡ, ದೊಡ್ಡ ಕಂದಕ ಬಿದ್ದು ರಸ್ತೆ ಸಂಪೂರ್ಣ ಹದಗೆಟ್ಟಿವೆ ಮಳೆಗಾಲದಲ್ಲಿ ರಸ್ತೆಯ ಪರಿಸ್ಥಿತಿ ಹೇಳತಿರದಂತಾಗಿದೆ. ಶಾಸಕ ಬಸವರಾಜ ದಡೇಸುಗೂರು ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ದುರಸ್ಥಿಗೆ ಕ್ರಮಕೈಗೊಳ್ಳುತ್ತಿಲ್ಲ.

    ಇತ್ತ ಹಿರೇಖೇಡ, ನಿರರ್ಲೂಟಿ, ಚಿಕ್ಕಖೇಡ ಗ್ರಾಮಕ್ಕೆ ತೆರಳುವ ರಸ್ತೆಯಲ್ಲಿ ಅಕ್ರಮ ಮರಳು ಲಾರಿ, ಟ್ರ್ಯಾಕ್ಟರ್ ಸಂಚಾರದಿಂದ ರಸ್ತೆ ಮತ್ತಷ್ಟು ಹಳ್ಳ ಹಿಡಿದಿದೆ. ಹಾಳಾಗಿರುವ ರಸ್ತೆಗಳಿಂದ ಕ್ಷೇತ್ರದ ನಾನಾ ಗ್ರಾಮೀಣ ಭಾಗಕ್ಕೆ ಬಸ್‍ಗಳ ಸಂಚಾರ ಸ್ಥಗಿತಗೊಂಡಿವೆ.

    ಕಾಟಾಪುರದಿಂದ ಮಲ್ಲಿಗೆವಾಡಕ್ಕೆ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ. ಗುಡದೂರು ಗ್ರಾಮದಿಂದ ಗೋಡಿನಾಳ ಗ್ರಾಮಕ್ಕೆ ಬರುತ್ತಿದ್ದ ಬಸ್ ಮಾರ್ಗ ಬದಲಿಸಿದೆ. ಗುಡದೂರು ಗ್ರಾಮದಿಂದ ಹೊಸಗುಡ್ಡಕ್ಕೆ ಹಾಗೂ ಲಾಯದುಣಿಸಿ, ಕರಡಿಗುಡ್ಡ ಗ್ರಾಮದ ಬಸ್ ಸಂಚಾರ ಸ್ಥಗಿತಗೊಂಡಿದೆ. ಬಹುತೇಕ ಗ್ರಾಮೀಣ ಭಾಗದ ಜನರು, ವಿದ್ಯಾರ್ಥಿಗಳು ಗಂಗಾವತಿ, ಕನಕಗಿರಿಯ ಶಾಲಾ ಕಾಲೇಜಿಗೆ ತೆರಳಬೇಕಿರುವ ಕಾರಣ ಕಾಲ್ನಡಿಗೆ ಅಥವಾ ಖಾಸಗಿ ವಾಹನವನ್ನು ಅವಲಂಬಿಸಿದ್ದಾರೆ.

  • ಕಟ್ಟಡವಿಲ್ಲದೆ ದನದ ಕೊಟ್ಟಿಗೆ ಪಕ್ಕದ ಬಾಡಿಗೆ ಮನೆಯಲ್ಲಿ ನಡೆಯುತ್ತಿದೆ ಅಂಗನವಾಡಿ

    ಕಟ್ಟಡವಿಲ್ಲದೆ ದನದ ಕೊಟ್ಟಿಗೆ ಪಕ್ಕದ ಬಾಡಿಗೆ ಮನೆಯಲ್ಲಿ ನಡೆಯುತ್ತಿದೆ ಅಂಗನವಾಡಿ

    – 12 ವರ್ಷಗಳಲ್ಲಿ 4 ಬಾರಿ ಸ್ಥಳಾಂತರ

    ಮಡಿಕೇರಿ: ಸೋಮವಾರಪೇಟೆ ತಾಲೂಕಿನ ಹೆಮ್ಮನೆ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಸ್ವಂತ ಕಟ್ಟಡವಿಲ್ಲದ ಕಾರಣ ಗ್ರಾಮದ ದನದ ಕೊಟ್ಟಿಗೆಯ ಪಕ್ಕದಲ್ಲಿರುವ ಬಾಡಿಗೆ ಮನೆಯಲ್ಲಿ ಸಿಬ್ಬಂದಿ ಅಂಗನವಾಡಿಯನ್ನು ನಡೆಸುತ್ತಿದ್ದಾರೆ.

    ದುಂಡಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹೆಮ್ಮನೆ ಗ್ರಾಮದ ಅಂಗನವಾಡಿ ಕೇಂದ್ರದ ಪರಿಸ್ಥಿತಿ ಕೇಳುವವರೆ ಇಲ್ಲದಂತಾಗಿದೆ. ಸರ್ಕಾರ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಅಂಗನವಾಡಿಯನ್ನು ದನದ ಕೊಟ್ಟಿಗೆಯ ಪಕ್ಕದಲ್ಲಿರುವ ಬಾಡಿಗೆ ಮನೆಯಲ್ಲಿ ನಡೆಸಲಾಗುತ್ತಿದೆ. ಹೆಮ್ಮನೆ ಗ್ರಾಮದಲ್ಲಿ ಹೆಚ್ಚಾಗಿ ಕೂಲಿ ಕಾರ್ಮಿಕರು ಹಾಗೂ ಬಡವರ್ಗದವರು ವಾಸಿಸುತ್ತಾರೆ. ಹೀಗಾಗಿ ಪೋಷಕರು ತಮ್ಮ ಪುಟ್ಟ ಮಕ್ಕಳನ್ನು ಅಂಗನವಾಡಿಗೆ ಸೇರಿಸುತ್ತಾರೆ. ನಂತರ ಗ್ರಾಮದಲ್ಲಿರುವ ಸರ್ಕಾರಿ ಶಾಲೆಗೆ ಸೇರಿಸುತ್ತಾರೆ.

    ಈ ಗ್ರಾಮದಲ್ಲಿ 2007ರಲ್ಲಿ ಅಂಗನವಾಡಿ ಕೇಂದ್ರವನ್ನು ಸ್ಥಾಪಿಸಲಾಗಿದೆ. ಅಂದಿನಿಂದ ಇಂದಿನವರೆಗೂ ಅಂಗನವಾಡಿ ಕೇಂದ್ರಕ್ಕೆ ಸ್ವಂತ ಕಟ್ಟಡ ಇಲ್ಲದೇ ಗ್ರಾಮದ ಪುಟ್ಟ ಬಾಡಿಗೆ ಮನೆಯಲ್ಲಿ ಕಾರ್ಯನಿರ್ವಹಿಸಬೇಕಾದ ಪರಿಸ್ಥಿತಿ ಇದೆ. ಅಂಗನವಾಡಿ ಕೇಂದ್ರಕ್ಕೆ ಸರಿಯಾದ ಕಟ್ಟಡದ ವ್ಯವಸ್ಥೆ ಇಲ್ಲದ ಹಿನ್ನೆಲೆಯಲ್ಲಿ ಕಳೆದ 12 ವರ್ಷಗಳಲ್ಲಿ 4 ಬಾರಿ ಅಂಗನವಾಡಿ ಕೇಂದ್ರವನ್ನು ಸ್ಥಳಾಂತರಿಸಲಾಗಿದೆ. ಪೋಷಕರು ಮಕ್ಕಳನ್ನು ಅಂಗನವಾಡಿಗೆ ಸೇರಿಸಲು ಆಸಕ್ತಿ ತೋರುತ್ತಿದ್ದಾರೆ. ಆದರೆ ಪ್ರತಿ ಬಾರಿಯೂ ಸ್ಥಳಾಂತರವಾಗುತ್ತಿರುವ ಅಂಗನವಾಡಿ ಕೇಂದ್ರಕ್ಕೆ ಸರಿಯಾದ ಕಟ್ಟಡ ವ್ಯವಸ್ಥೆ ಇಲ್ಲವಾಗಿದೆ. ಇಕ್ಕಟ್ಟಾದ ಕೊಠಡಿಯಲ್ಲೇ ಮಕ್ಕಳನ್ನು ಕೂರಿಸುವುದು, ಮತ್ತೊಂದು ಬದಿಯಲ್ಲಿ ಅಡುಗೆ ಮಾಡುವುದು ಇಲ್ಲಿನ ಶಿಕ್ಷಕರು, ಸಿಬ್ಬಂದಿಯ ನಿತ್ಯದ ಪರಿಪಾಠವಾಗಿದೆ.

    ಅಂಗನವಾಡಿಯಲ್ಲಿ ಮಕ್ಕಳು ಹೆಚ್ಚು ದಾಖಲಾಗುತ್ತಿದ್ದಂತೆ ಶಿಕ್ಷಕರು, ಸಹಾಯಕಿಯರು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಈ ಕುರಿತು ಹಲವಾರು ವರ್ಷಗಳಿಂದ ಅಂಗನವಾಡಿ ಶಿಕ್ಷಕಿಯರು ಸಂಬಂಧಪಟ್ಟ ಅಧಿಕಾರಿಗಳು, ಗ್ರಾಮ ಪಂಚಾಯ್ತಿಗೆ ಹಾಗೂ ಸ್ಥಳೀಯ ಜನಪ್ರತಿನಿಧಿಗಳಿಗೆ ದೂರು ಕೊಟ್ಟಿದ್ದಾರೆ. ಅಂಗನವಾಡಿ ಕೇಂದ್ರಕ್ಕೆ ಸ್ವಂತ ಕಟ್ಟಡ ನಿರ್ಮಾಣಕ್ಕಾಗಿ ಜಾಗ ಕೊಡಿಸುವಂತೆ ಮನವಿ ನೀಡುತ್ತಿದ್ದರೂ ಪ್ರಯೋಜನವಾಗುತ್ತಿಲ್ಲ ಎಂದು ಸಿಬ್ಬಂದಿ ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಅಂಗನವಾಡಿ ಕೇಂದ್ರ ನಡೆಸಲು ಸ್ವಂತ ಕಟ್ಟಡ ನಿರ್ಮಿಸಿಕೊಡಬೇಕಿದೆ.

  • 20 ವರ್ಷವಾದ್ರೂ ಪರಿಹಾರ ನೀಡದ್ದಕ್ಕೆ ರಸ್ತೆಗೆ ಬೇಲಿ ಹಾಕಿದ ರೈತರು

    20 ವರ್ಷವಾದ್ರೂ ಪರಿಹಾರ ನೀಡದ್ದಕ್ಕೆ ರಸ್ತೆಗೆ ಬೇಲಿ ಹಾಕಿದ ರೈತರು

    ಶಿವಮೊಗ್ಗ: ಜಮೀನಿನ ಮಧ್ಯೆ ರಸ್ತೆಗೆಂದು ಬಿಟ್ಟಿದ್ದ ಭೂಮಿಗೆ ಸರ್ಕಾರ ಪರಿಹಾರ ನೀಡಿಲ್ಲ ಎಂದು ಜಮೀನಿನ ಮಾಲೀಕರು ರಸ್ತೆಗೆ ಬೇಲಿ ಹಾಕಿರುವ ಘಟನೆ ಶಿವಮೊಗ್ಗದ ಗೆಜ್ಜೇನಹಳ್ಳಿ ಗ್ರಾಮದ ಬಳಿ ನಡೆದಿದೆ.

    ಗೆಜ್ಜೇನಹಳ್ಳಿ ಗ್ರಾಮದ ರೈತರಾದ ಮಹದೇವ, ಜಯನಾಯ್ಕ ಅವರು ತಮ್ಮ ಜಮೀನು ಸೇರಿದಂತೆ ಗ್ರಾಮದ ಇತರೆ ರೈತರ ಜಮೀನಿಗೆ ತೆರಳಲು ಅನುಕೂಲ ಆಗಲೆಂದು ಕಳೆದ 20 ವರ್ಷಗಳ ಹಿಂದೆ ರಸ್ತೆಗೆ ಭೂಮಿ ಬಿಟ್ಟು ಕೊಟ್ಟಿದ್ದರು. ಆದರೆ ರಸ್ತೆಗೆಂದು ಬಿಟ್ಟಿದ್ದ ಭೂಮಿಗೆ ಸರ್ಕಾರದಿಂದ ಇದುವರೆಗೂ ಯಾವುದೇ ಪರಿಹಾರ ದೊರೆತಿರಲಿಲ್ಲ. ಆದರೆ ಇಂದು ಇದೇ ರಸ್ತೆಯ ಮಾರ್ಗವಾಗಿ ಅಬ್ಬಲಗೆರೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ ಡಾಂಬರೀಕರಣ ಮಾಡಲು ಲೋಕೋಪಯೋಗಿ ಇಲಾಖೆಯಿಂದ 40 ಲಕ್ಷ ರೂ. ಹಣ ಬಿಡುಗಡೆಯಾಗಿದೆ.

    ಇಂದು ರಸ್ತೆ ಕಾಮಗಾರಿಗೆ ಚಾಲನೆ ನೀಡಲು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಆಗಮಿಸಿದ್ದರು. ಈ ವೇಳೆ ಜಮೀನಿನ ಮಾಲೀಕರು ನಮಗೆ ಪರಿಹಾರದ ಹಣ ನೀಡಿ ಕಾಮಗಾರಿ ಆರಂಭಿಸಿ ಎಂದು ತಡೆ ಹಿಡಿದಿದ್ದರು.

    ಈ ವೇಳೆ ಗುತ್ತಿಗೆದಾರ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಮಾತ್ರ ಮೊದಲು ರಸ್ತೆಗೆ ಹಾಕಿರುವ ಬೇಲಿ ತೆರವುಗೊಳಿಸಿ ನಮಗೆ ಟೆಂಡರ್ ಸಿಕ್ಕಿದೆ ನಾವು ಕೆಲಸ ಆರಂಭಿಸುತ್ತೇವೆ. ನಂತರ ಬೇಕಾದರೆ ನೀವು ಬೇಲಿ ಹಾಕಿಕೊಳ್ಳಿ. ಈಗ ಕಾಮಗಾರಿ ಸ್ಥಗಿತವಾದರೆ ನಾವು ಹಾಕಿರುವ ಬಂಡವಾಳ ನಷ್ಟವಾಗುವುದರ ಜೊತೆಗೆ ಬಂದಿರುವ ಟೆಂಡರ್ ಹಣವು ಸಹ ವಾಪಸ್ ಹೋಗಲಿದೆ. ನಾವು ಕೆಲಸ ಮಾಡಿಯೇ ತೀರುತ್ತೇವೆ ಎನ್ನುತ್ತಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.

    ಪರಿಹಾರದ ಹಣ ನೀಡುವವರೆಗೂ ರಸ್ತೆ ಕಾಮಗಾರಿ ಮಾಡಲು ಬಿಡುವುದಿಲ್ಲ. ನಮ್ಮ ಜಮೀನಿನ ಸ್ಥಳವನ್ನು ಸರ್ಕಾರಕ್ಕಾಗಿ ಬಿಟ್ಟುಕೊಟ್ಟಿದ್ದೇವೆ. ಆದರೆ ಸರ್ಕಾರ ನಮಗೆ ಹೀಗೆ ಪರಿಹಾರ ನೀಡದೆ ಅನ್ಯಾಯ ಮಾಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.