Tag: ಜನತಾ ಲಾಕ್ ಡೌನ್

  • ಬರೀ ಹೆಸರಿಗಷ್ಟೇ ಜನತಾ ಲಾಕ್‍ಡೌನ್- ರೇಷನ್ ಅಂಗಡಿಗಳ ಎದುರು ಜನರ ಕ್ಯೂ..!

    ಬರೀ ಹೆಸರಿಗಷ್ಟೇ ಜನತಾ ಲಾಕ್‍ಡೌನ್- ರೇಷನ್ ಅಂಗಡಿಗಳ ಎದುರು ಜನರ ಕ್ಯೂ..!

    ಬೆಂಗಳೂರು: ಜನತಾ ಲಾಕ್ ಡೌನ್ ಇದ್ದರೂ ಇಂದು ಮಾರುಕಟ್ಟೆಗಳಲ್ಲಿ ಕೊರೊನಾ ಮರೆತು ಜನ ಹೂ, ಹಣ್ಣು ಖರೀದಿಯಲ್ಲಿ ಬ್ಯುಸಿಯಾಗಿರುವುದು ಕಂಡು ಬಂತು. ಸೋಮವಾರದಿಂದ ಹೊಸ ರೂಲ್ಸ್. ಹಾಗಾಗಿ ಮನೆಯಲ್ಲಿ ನಾಳೆನೇ ದಿನಸಿ ಮುಗಿದು ಹೋಗುತ್ತೆ ಅಂತಾ ಇವತ್ತೇ ಅಗತ್ಯ ವಸ್ತು ಖರೀದಿಗೆ ನಾ ಮುಂದು ತಾ ಮುಂದು ಅಂತ ಮುಗಿಬಿದ್ದಿದ್ದಾರೆ. ಡಿಸ್ಕೌಂಟ್ ಕೊಡೋ ಸೂಪರ್ ಮಾರ್ಕೆಟ್‍ಗಳ ಎದುರು ಕಿಲೋ ಮೀಟರ್‍ಗಟ್ಟಲೇ ನಿಂತಿದ್ದಾರೆ.

    ಇನ್ನೊಂದೆಡೆ ಕೊರೊನಾ ಇರಲಿ ಮತ್ತೊಂದ್ ಇರಲಿ ನಮಗೆ ಎಣ್ಣೆ ಬೇಕು ಅಂತ ನಿಂತಿದ್ದಾರೆ. ಇನ್ನೇನು ನಾಡಿದ್ದು ಅಂದ್ರೆ ಸೋಮವಾರದಿಂದ ರಾಜ್ಯದಲ್ಲಿ ರಫ್ & ಟಫ್ ರೂಲ್ಸ್ ಜಾರಿಯಾಗ್ಬಿಡುತ್ತೆ ಅನ್ನೋ ಭಯದಲ್ಲಿ ಮಲ್ಲೇಶ್ವರಂನಲ್ಲಿ ಜನ ಇವತ್ತೇ ಎಣ್ಣೆ ಖರೀದಿಗೆ ಮುಗಿಬಿದ್ದಿದ್ದಾರೆ. ಕೊಪ್ಪಳದ ಗಂಗಾವತಿಯಲ್ಲೂ ಇಂತದ್ದೇ ದೃಶ್ಯ ಕಂಡು ಬಂತು. ಬೆಳಗ್ಗೆಯಿಂದಲೇ ವೈನ್ ಶಾಪ್‍ಗೆ ಮುಗಿಬಿದ್ದಿದ್ರು. ಲಾಕ್ ಡೌನ್ ನಲ್ಲಿ ಮದ್ಯದ ಅಂಗಡಿ ತೆರೆಯುತ್ತೆವೆ ಅಂದ್ರು ಕೇಳದ ಎಣ್ಣೆ ಬೇಕೇ ಬೇಕು ಅಂತ ಮುಗಿಬಿದ್ದಿದ್ರು.

    ಬಸ್ ಸಂಚಾರಕ್ಕೆ ಕಡಿವಾಣ ಹಾಕಿದ್ರೂ ಜನ ಮಾತ್ರ ಈ ಡಿಸ್ಕೌಂಟ್ ಲಾಕ್‍ಡೌನ್‍ನಲ್ಲೂ ಓಡಾಡ್ತಿದ್ದಾರೆ. ಯಾಕಂದ್ರೆ ರೈಲು, ವಿಮಾನ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಹೀಗಾಗಿ ಪ್ರತಿನಿತ್ಯ ಸಾವಿರಾರು ಜನ ರೈಲಿನಲ್ಲಿ ಸಂಚರಿಸ್ತಿದ್ದಾರೆ. ಬೆಂಗಳೂರಿನಿಂದ ಹಳ್ಳಿಗಳಿಗೆ ಹೋಗಿ ಹೆಮ್ಮಾರಿ ಕೊರೊನಾ ವೈರಸ್ ಹಬ್ಬಿಸ್ತಿದ್ದಾರೆ.

    ಬೆಂಗಳೂರು ಸಹವಾಸ ಬ್ಯಾಡಪ್ಪೊ ಬ್ಯಾಡ ಅಂತ ತಮ್ಮೂರಿಗೆ ಈ ಕೂಲಿ ಕಾರ್ಮಿಕ ಕುಟುಂಬವೊಂದು ಹೊರಟು ನಿಂತಿದೆ. ಪುಟ್ಟ ಪುಟ್ಟ ಮಕ್ಕಳು, ಕೈಯಲ್ಲಿ ನೀರಿನ ಬಾಟಲು, ಲಗೇಜು ಸಮೇತ ಊರಿಗೆ ಹೊರಟಿದ್ದಾರೆ. ಕೈಯಲ್ಲಿ ಕಾಸಿಲ್ಲ, ಆದ್ರೂ ನಡೆದುಕೊಂಡೇ ನೆಲಮಂಗಲದ ತುಮಕೂರು ರಸ್ತೆಯ ಜಾಸ್ ಟೋಲ್ ಮೂಲಕ ರಾಯಚೂರಿನತ್ತ ಪಯಣ ಬೆಳೆಸಿದ್ದಾರೆ. ಕೋಲಾರದಲ್ಲೂ ಇಂತಹದ್ದೇ ದೃಶ್ಯ ಕಂಡುಬಂತು.

    ಇಂದು ಸುಮ್ಮನಹಳ್ಳಿ ರಸ್ತೆಯಲ್ಲಿ ವಾಹನಗಳ ಓಡಾಟ ಹೆಚ್ಚಾಗಿತ್ತು. ಜನರನ್ನು ನೋಡಿ ಪೊಲೀಸರು ಅಸಹಾಯಕರಾಗಿದ್ರು. ಯಾವ ವಾಹನಗಳನ್ನ ತಪಾಸಣೆ ಮಾಡದೇ ಸೈಂಲೆಟ್ ಆಗಿದ್ರು. ಇತ್ತ ಅತ್ತಿಬೆಲೆ ಮೂಲಕ ಕೂಡ ತಮಿಳುನಾಡಿಗೆ ಜನ ವಾಪಸ್ ಆಗ್ತಿದ್ದಾರೆ. ಹೆಚ್ಚಿನ ಜನಸಂಖ್ಯೆಯಲ್ಲಿ ಜನ ಹೋಗ್ತಿರೋದ್ರಿಂದ ಅತ್ತಿಬೆಲೆ ಗಡಿಯಲ್ಲಿ ಸಿಕ್ಕಾಪಟ್ಟೆ ಟ್ರಾಫಿಕ್ ಜಾಮ್ ಆಗಿತ್ತು.

  • ರಾಜ್ಯದಲ್ಲಿ ಪೂರ್ಣ ಪ್ರಮಾಣದ ಲಾಕ್‍ಡೌನ್ ಇಲ್ಲ: ಬಿಎಸ್‍ವೈ ಸ್ಪಷ್ಟನೆ

    ರಾಜ್ಯದಲ್ಲಿ ಪೂರ್ಣ ಪ್ರಮಾಣದ ಲಾಕ್‍ಡೌನ್ ಇಲ್ಲ: ಬಿಎಸ್‍ವೈ ಸ್ಪಷ್ಟನೆ

    – ಚಾಮರಾಜನಗರ ದುರಂತಕ್ಕೆ ವಿಷಾದ
    – ಮಾಧ್ಯಮದವರು ಫ್ರಂಟ್‍ಲೈನ್ ವಾರಿಯರ್ಸ್ ಅಂತ ಘೋಷಣೆ

    ಬೆಂಗಳೂರು: ರಾಜ್ಯದಲ್ಲಿ ಪೂರ್ಣ ಪ್ರಮಾಣದ ಲಾಕ್ ಡೌನ್ ಇಲ್ಲ. ಹಾಲಿ ಇರುವ ಜನತಾ ಲಾಕ್ ಡೌನ್ ಮಾತ್ರ ಇರುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರತಿಯೊಬ್ಬ ಜಿಲ್ಲಾ ಉಸ್ತುವಾರಿ ಸಚಿವರು ಆಯಾ ಜಿಲ್ಲೆಗಳಲ್ಲಿ ಕೂರಬೇಕು. ಸ್ಥಳದಲ್ಲೇ ತೀರ್ಮಾನ ತೆಗೆದುಕೊಳ್ಳಬೇಕು, ಸಂಪೂರ್ಣ ಸ್ವತಂತ್ರ ಉಸ್ತುವಾರಿ ಸಚಿವರಿಗೆ ಕೊಟ್ಟಿದ್ದೇವೆ. ರಾಜ್ಯಕ್ಕೆ ಅಗತ್ಯ ಇರುವ ಆಕ್ಸಿಜನ್ ಪಡೆಯಲು ಕ್ರಮ ಕೈಗೊಳ್ಳಲಾಗುವುದು. ಜನತಾ ಕರ್ಫ್ಯೂ ಮೇ 12 ರವರೆಗೆ ಇದೆ. ಮುಂದೇನು ಮಾಡಬೇಕೆಂದು ಚರ್ಚೆ ಮಾಡಿ ನಿರ್ಧರಿಸ್ತೇವೆ ಎಂದು ತಿಳಿಸಿದರು.

    ರೆಮಿಡಿಸಿವರ್ ಔಷಧಿ ನಿರ್ವಹಣೆಗೆ, ಮಾನವಸಂಪನ್ಮೂಲ ನಿರ್ವಹಣೆಗೆ ಅಶ್ವಥನಾರಾಯಣ್ ಅವರಿಗೆ ಜವಾಬ್ದಾರಿ ಹೊರಿಸಲಾಗಿದೆ. ಬೆಡ್ ವ್ಯವಸ್ಥೆ, ಬೆಡ್ ಸಮಸ್ಯೆ ನಿರ್ವಹಣೆ ಜವಾಬ್ದಾರಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಆರ್.ಅಶೋಕ್ ಗೆ ವಹಿಸಿದ್ದೇವೆ. ವಾರ್ ರೂಂ, ಕಾಲ್ ಸೆಂಟರ್ ನಿರ್ವಹಣಾ ಜವಾಬ್ದಾರಿ ಅರವಿಂದ್ ಲಿಂಬಾವಳಿಗೆ ವಹಿಸಿರುವುದಾಗಿ ಸಿಎಂ ಮಾಹಿತಿ ನೀಡಿದರು.

    850 ಟನ್ ಹಂಚಿಕೆಗೆ ಏರಿಕೆ ಮಾಡಿದ್ದಾರೆ. ಜಿಂದಾಲ್ ನಿಂದ ಮಹಾರಾಷ್ಟ್ರಕ್ಕೆ ಹೋಗ್ತಿರುವ ಹಂಚಿಕೆಯನ್ನ ರಾಜ್ಯಕ್ಕೆ ನೀಡಲು ಮನವಿ ಮಾಡಿದ್ದೇವೆ. ಅದಕ್ಕೆ ಕೇಂದ್ರ ಸರ್ಕಾರದಿಂದ ಒಪ್ಪಿಗೆ ಸಿಕ್ಕಿದೆ. ಹೊರರಾಜ್ಯಗಳಿಂದ ಬರುತ್ತಿರುವ ಆಕ್ಸಿಜನ್ ಸರಬರಾಜು ವಿಳಂಬ ಆಗ್ತಿದೆ, ಈ ಬಗ್ಗೆ ಕೇಂದ್ರ ಸಚಿವರ ಗಮನಕ್ಕೆ ತಂದಿದ್ದೇವೆ ಎಂದು ತಿಳಿಸಿದರು.

    ಇದೇ ವೇಳೆ ಚಾಮರಾಜನಗರ ದುರಂತ ಬಗ್ಗೆ ವಿಷಾದ ವ್ಯಕ್ತಪಡಿಸಿದ ಸಿಎಂ, ಇಂತಹ ಘಟನೆ ನಡೆಯಬಾರದಿತ್ತು. ಪ್ರಕರಣಕ್ಕೆ ಕಾತಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಮುಂದೆ ಇಂತಹ ಘಟನೆ ಮರುಕಳಿಸಬಾರದು. ಆ ರೀತಿಯಲ್ಲಿ ಕ್ರಮ ತಗೋತೀವಿ ಎಂದು ಭರವಸೆ ನೀಡಿದರು.

    ಆಸ್ಪತ್ರೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಡಾಕ್ಟರ್ ಗಳು, ನರ್ಸ್ ಗಳನ್ನು ನೇಮಕ ಮಾಡಲು ಸೂಚಿಲಾಗಿದೆ. ಇನ್ನು ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರಿಗೆ ಈನಿಟ್ಡಿನಲ್ಲಿ ಸೂಚನೆ ರೆಮೆಡಿಸಿವಿರ್ ಕಾಳಸಂತೆ ಮಾರಾಟ ತಡೆಯಲು ಕ್ರಮ ಕೈಗೊಳ್ಳಲಾಗುವುದು. ಕಾಳಸಂತೆಯಲ್ಲಿ ಮಾರಾಟ ಮಾಡೋರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.

    ಮಾಧ್ಯಮದವರು ಫ್ರಂಟ್‍ಲೈನ್ ಕೊರೊನಾ ವಾರಿಯರ್ಸ್ ಎಂದು ಇದೇ ವೇಳೆ ಮುಖ್ಯಮಂತ್ರಿ ಘೋಷಣೆ ಮಾಡಿದರು. ಮಾಧ್ಯಮದವರಿಗೆ ಲಸಿಕೆ ಕೊಡಿಸಲು ಕ್ರಮವಹಿಸಲು ಸೂಚಿಸಲಾಗಿದೆ. ಒಟ್ಟಿನಲ್ಲಿ ಬಿಹಾರದಂತೆ ರಾಜ್ಯದಲ್ಲೂ ಮಾಧ್ಯಮದವರು ಫ್ರಂಟ್ ಲೈನ್ ವಾರಿಯರ್ಸ್ ಎಂದು ಸರ್ಕಾರ ಘೋಷಿಸಿದೆ.

    ಬೆಂಗಳೂರು ಸಂಸದರು ವಾರ್ ರೂಂ ನಲ್ಲಿ ಬೆಡ್ ಹಂಚಿಕೆ ಪ್ರಕರಣ ಬಯಲಿಗೆ ತಂದಿದಾರೆ. ತೇಜಸ್ವಿ ಸೂರ್ಯ ಜೊತೆ ಕೂತು ಚರ್ಚೆ ಮಾಡ್ತೇನೆ. ಬೆಡ್ ಲಾಕ್ ದಂಧೆ ನಡೆಸ್ತಿದ್ದವರ ವಿರುದ್ಧ ಕ್ರಮ ತಗೋತೇವೆ. ಅಂಥವರ ವಿರುದ್ಧ ತುರ್ತಾಗಿ ಕ್ರಮ ಕೈಗೊಳ್ಳುತ್ತೇವೆ. ಎಷ್ಟೇ ದೊಡ್ಡವರಿದ್ದರೂ ಕ್ರಮ ತಗೋತೇವೆ ತೇಜಸ್ವಿ ಸೂರ್ಯ ಬಳಿ ವಾಸ್ತವಿಕ ಮಾಹಿತಿ ಪಡೆಯುತ್ತೇನೆ ಎಂದರು.

    ಮಾಹಿತಿ ತಿಳ್ಕೊಂಡು ಕ್ರಮ ತಗೋತೇವೆ. ಚಾಮರಾಜನಗರ ದುರಂತದಲ್ಲಿ ಮಡಿದವರ ಕುಟುಂಬಕ್ಕೆ ಪರಿಹಾರ ಬಗ್ಗೆ ಚರ್ಚೆ ಮಾಡ್ತೇವೆ. ನಮ್ಮಲ್ಲಿ ಉತ್ಪಾದನೆಯಾಗುವ ಆಕ್ಸಿಜನ್ ನಾವೇ ಬಳಸುವ ವಿಚಾರ ಸಂಬಂಧ ಪ್ರತಿಕ್ರಿಯಿಸಿ, ಇದರ ಬಗ್ಗೆ ಅಮಿತ್ ಶಾ ಜೊತೆ, ಹರ್ಷವರ್ಧನ್ ಜತೆ ಚರ್ಚೆ ಮಾಡಿದ್ದೇನೆ. ನಮ್ಮಲ್ಲಿ ಉತ್ಪಾದಿಸುವ ಆಕ್ಸಿಜನ್ ನಮಗೆ ಬಳಸಲು ಅವಕಾಶ ಕೊಡಲು ಮನವಿ ಮಾಡಿದ್ದೇನೆ. ಕೇಂದ್ರ ಸಚಿವರೂ ಇದಕ್ಕೆ ಒಪ್ಕೊಂಡಿದ್ದಾರೆ ಕೇಂದ್ರ ಸರ್ಕಾರ ಇದರ ಬಗ್ಗೆ ಇವತ್ತು ಅಥವಾ ನಾಳೆ ಸ್ಪಷ್ಟಪಡಿಸಲಿದೆ ಎಂದರು.

    ಇದೇ ವೇಳೆ ಡಿಸಿಎಂ ಅಶ್ವಥನಾರಾಯಣ್, ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹಾಗೂ ಜಗದೀಶ್ ಶೆಟ್ಟರ್ ಸಿಎಂಗೆ ಸಾಥ್ ನೀಡಿದರು.