Tag: ಜನತಾ ಪಕ್ಷ

  • 1980 ರ ಲೋಕಸಭಾ ಚುನಾವಣೆಗೆ ಮತದಾನ ನಡೆದಿದ್ದು ಕೇವಲ 4 ದಿನ

    1980 ರ ಲೋಕಸಭಾ ಚುನಾವಣೆಗೆ ಮತದಾನ ನಡೆದಿದ್ದು ಕೇವಲ 4 ದಿನ

    – ಕಾಂಗ್ರೆಸ್ಸೇತರ ಸರ್ಕಾರಕ್ಕೆ ಕೈ ಕೊಟ್ಟ ಜನ
    – ಇಂದಿರಾ ಗಾಂಧಿಗೆ ಇದು ಕೊನೆ ಚುನಾವಣೆ

    ಪಬ್ಲಿಕ್‌ ಟಿವಿ ವಿಶೇಷ
    ನತಂತ್ರ ಅಥವಾ ಸರ್ವಾಧಿಕಾರ ಎಂಬ ಸೈದ್ಧಾಂತಿಕ ನೆಲೆಯಲ್ಲಿ ಚುನಾವಣೆ ಎದುರಿಸಿ 1977 ರಲ್ಲಿ ಗೆದ್ದ ಇತಿಹಾಸ ಬರೆದಿದ್ದ ಜನತಾ ಪರಿಹಾರ ಭಿನ್ನಾಭಿಪ್ರಾಯಗಳಿಂದ ಒಡೆದ ಮನೆಯಾಯಿತು. ಕಾಂಗ್ರೆಸ್‌ ವಿರೋಧಿ ನೆಲೆಯಲ್ಲಿ ಒಂದಾಗಿ ಸರ್ಕಾರ ರಚಿಸಿದ್ದ ಒಕ್ಕೂಟ ಕನ್ನಡಿಯಂತೆ ಒಡೆದು ಚೂರಾಯಿತು. ಇದರಿಂದ ಕಾಂಗ್ರೆಸ್ಸೇತರ ಮೊದಲ ಪ್ರಧಾನಿಯಾಗಿದ್ದ ಮೊರಾರ್ಜಿ ದೇಸಾಯಿ (Morarji Desai) ಅನಿವಾರ್ಯವಾಗಿ ಅಧಿಕಾರದಿಂದ ಕೆಳಗಿಳಿಯಬೇಕಾಯಿತು. ಬಳಿಕ ಕಾಂಗ್ರೆಸ್‌ (Congress) ಬೆಂಬಲದೊಂದಿಗೆ ಚರಣ್‌ ಸಿಂಗ್‌ ದೇಶದ ಪ್ರಧಾನಿಯಾದರು. ಲೋಕಸಭೆಯಲ್ಲಿ ಬಹುಮತ ಸಾಬೀತುಪಡಿಸಬೇಕಿದ್ದ ಎರಡು ದಿನಕ್ಕೂ ಮುಂಚೆ ಕಾಂಗ್ರೆಸ್‌ ನೀಡಿದ್ದ ಬೆಂಬಲದಿಂದ ಹಿಂದೆ ಸರಿಯಿತು. ಇದರಿಂದ ಚರಣ್‌ ಸಿಂಗ್‌ ಕೂಡ ರಾಜೀನಾಮೆಗೆ ಒತ್ತಾಯಿಸಲ್ಪಟ್ಟರು. 1980 ರ ಜನವರಿಯಲ್ಲಿ (1980 Lok Sabha Elections) ಚುನಾವಣೆಗೆ ಕರೆ ನೀಡಿದರು.

    ಸರ್ವಾಧಿಕಾರ ಹಾಗೂ ಕಾಂಗ್ರೆಸ್‌ ವಿರೋಧಿ ಹೋರಾಟ, ಸಂವಿಧಾನ ರಕ್ಷಣೆ, ಪ್ರಜಾತಂತ್ರ ಹೆಸರಿನಲ್ಲಿ ನಡೆದಿದ್ದ 1977 ರ ಚುನಾವಣೆ ಭಾರತದಲ್ಲಿ ಬದಲಾವಣೆಯೊಂದಿಗೆ ಅನೇಕ ಅವಕಾಶಗಳನ್ನು ಸೃಷ್ಟಿಸಿತು. ಆದರೆ ಅಂಥ ಅವಕಾಶಗಳನ್ನು ಬಳಸಿಕೊಳ್ಳುವಲ್ಲಿ ಕಾಂಗ್ರೆಸ್ಸೇತರ ಮೈತ್ರಿ ನಾಯಕರು ವಿಫಲರಾದರು. ಕಾಂಗ್ರೆಸ್‌ಗೆ ಪರ್ಯಾಯ ರಾಜಕಾರಣ ಕನಸು ಕಂಡು ಒಂದು ಹಂತದಲ್ಲಿ ಯಶಸ್ವಿಯೂ ಆಗಿದ್ದ ಜನತಾ ಪಕ್ಷ ಅಧಿಕಾರಕ್ಕಾಗಿ ನಾಯಕರ ಕಿತ್ತಾಟದಿಂದ ಇಬ್ಭಾಗವಾಯಿತು. ನಾಯಕರ ರಾಜಕೀಯ ನಡೆಯಿಂದ ಜನ ಬೇಸತ್ತರು. ತುರ್ತು ಪರಿಸ್ಥಿತಿ ವಿರೋಧಿಸಿ ಮತ ನೀಡಿದ್ದ ಭಾರತೀಯರು ಮತ್ತೆ ಕೈ ಹಿಡಿದರು. ಇಂದಿರಾ ಗಾಂಧಿ (Indira Gandhi) ಅವರನ್ನೇ 1980 ರಲ್ಲಿ ಬಹುಮತದೊಂದಿಗೆ ಅಧಿಕಾರಕ್ಕೆ ತಂದರು. ಇದನ್ನೂ ಓದಿ: ತುರ್ತು ಪರಿಸ್ಥಿತಿಗೆ ಕಾಂಗ್ರೆಸ್ ಪತನ; ಮೊದಲ ಕಾಂಗ್ರೆಸ್ಸೇತರ ಸರ್ಕಾರ ತಂದ ಚುನಾವಣೆಯಲ್ಲಿ ಏನಾಯ್ತು?

    ಸಂಸತ್ತಿನ ವಿಶ್ವಾಸ ಪಡೆಯದ ಏಕೈಕ ಪ್ರಧಾನಿ
    ಮೊರಾರ್ಜಿ ದೇಸಾಯಿ ಬಳಿಕ ಕಾಂಗ್ರೆಸ್ಸೇತರ ಸರ್ಕಾರದ ಎರಡನೇ ಹಾಗೂ ದೇಶದ ಆರನೇ ಪ್ರಧಾನಿಯಾಗಿ ಸೇವೆ ಸಲ್ಲಿಸಿದವರು ಚರಣ್‌ ಸಿಂಗ್.‌ ಕಾಂಗ್ರೆಸ್‌ ಪಕ್ಷದ ಬೆಂಬಲದೊಂದಿಗೆ 1977 ರ ಜುಲೈ 28 ರಂದು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇವರು ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದು ಅಲ್ಪಾವಧಿಗೆ ಮಾತ್ರ. ಕಾಂಗ್ರೆಸ್‌ ಬೆಂಬಲ ಹಿಂಪಡೆದ ಕಾರಣ 1979 ರ ಆಗಸ್ಟ್‌ 20 ರಂದು ರಾಜೀನಾಮೆ ನೀಡಿದರು. ನಂತರ 1980 ರ ಜನವರಿ 14 ರ ವರೆಗೆ ಹಂಗಾಮಿ ಪ್ರಧಾನಿಯಾಗಿ ಸೇವೆ ಸಲ್ಲಿಸಿದರು. ಸಂಸತ್‌ನಲ್ಲಿ ವಿಶ್ವಾಸಮತ ಪಡೆಯಲಾಗದೇ ಅಧಿಕಾರದಿಂದ ಕೆಳಗಿಳಿದ ಏಕೈಕ ಪ್ರಧಾನಿ ಚರಣ್‌ ಸಿಂಗ್‌.

    4 ದಿನದ ಚುನಾವಣೆ
    ಸ್ವತಂತ್ರ ಭಾರತದ ಇತಿಹಾಸದಲ್ಲಿ ಅತಿ ಕಡಿಮೆ ಅವಧಿಗೆ ನಡೆದ ಚುನಾವಣೆಯೆಂದರೆ ಅದು 7ನೇ ಸಾರ್ವತ್ರಿಕ ಚುನಾವಣೆ. 1980 ರ ಚುನಾವಣೆ 4 ನಾಲ್ಕು ದಿನ ಮಾತ್ರ ನಡೆಯಿತು. ಜನವರಿಂದ 3 ರಿಂದ 6 ರ ವರೆಗೆ ಮತದಾನ ನಡೆಯಿತು.

    36 ಪಕ್ಷಗಳು ಸ್ಪರ್ಧೆ
    ರಾಷ್ಟ್ರೀಯ ಪಕ್ಷಗಳು 6, ಪ್ರಾದೇಶಿಕ ಪಕ್ಷಗಳು 19 ಸೇರಿ ಒಟ್ಟು 36 ಪಕ್ಷಗಳು ಚುನಾವಣಾ ಕಣದಲ್ಲಿದ್ದವು. ಇದನ್ನೂ ಓದಿ: ಹಲವು ಸಮಸ್ಯೆಗಳ ನಡುವೆ ಯಶಸ್ವಿಯಾಗಿ 3ನೇ ಲೋಕಸಭಾ ಚುನಾವಣೆ ನಡೆಸಿದ ಭಾರತ!

    4,629 ಅಭ್ಯರ್ಥಿಗಳು ಕಣಕ್ಕೆ
    542 ಕ್ಷೇತ್ರಗಳಿಗೆ ಒಟ್ಟು 4,629 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದರು. ಈ ಪೈಕಿ 4,486 ಪುರುಷರು ಹಾಗೂ 143 ಮಹಿಳಾ ಅಭ್ಯರ್ಥಿಗಳಿದ್ದರು.

    35 ಕೋಟಿ ಮತದಾರರು
    1980 ರ ಸಾರ್ವತ್ರಿಕ ಚುನಾವಣೆಯಲ್ಲಿ ಒಟ್ಟು 35,62,05,329 ಮತದಾರರಿದ್ದರು. ಅವರಲ್ಲಿ 20,27,52,893 ಮಂದಿ ಮತದಾರರು ಹಕ್ಕು ಚಲಾಯಿಸಿದರು. 56.9% ನಷ್ಟು ಮತ ಚಲಾವಣೆಯಾಗಿತ್ತು.

    ಮತ್ತೆ ಇಂದಿರಾ ಅಧಿಕಾರಕ್ಕೆ
    ತುರ್ತು ಪರಿಸ್ಥಿತಿ ಎಫೆಕ್ಟ್‌ನಿಂದ ಅಧಿಕಾರ ಕಳೆದುಕೊಂಡಿದ್ದ ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್‌ (ಐ) ಸರ್ಕಾರ 1980 ರಲ್ಲಿ ಮತ್ತೆ ಅಧಿಕಾರಕ್ಕೆ ಬಂದಿತು. ಕಾಂಗ್ರೆಸ್‌ (ಐ) 353, ಜನತಾ ಪಕ್ಷ (ಸೆಕ್ಯುಲರ್‌) 41, ಸಿಪಿಎಂ 37, ಜನತಾ ಪಕ್ಷ 31, ಡಿಎಂಕೆ 16, ಇತರೆ 42 ಹಾಗೂ ಪಕ್ಷೇತರರು 9 ಸ್ಥಾನ ಗೆದ್ದರು.

    ಕರ್ನಾಟಕ ಫಲಿತಾಂಶ ಏನಾಗಿತ್ತು?
    ಕಾಂಗ್ರೆಸ್‌ (ಐ) ಕರ್ನಾಟಕದಲ್ಲಿ 27 ಸ್ಥಾನಗಳಲ್ಲಿ ಜಯ ಗಳಿಸಿತು. ಜನತಾ ಪಕ್ಷ ಕೇವಲ 1 ಸ್ಥಾನದಲ್ಲಿ ಮಾತ್ರ ಗೆಲುವು ದಾಖಲಿಸಿತು. ಇದನ್ನೂ ಓದಿ: ಲೋಕಸಭೆ ಚುನಾವಣೆಗಳು ಭಾರತದಲ್ಲಿ ನಡೆದಿದ್ದೆಷ್ಟು ದಿನ..?

    ಇಂದಿರಾ ಗಾಂಧಿ ಹತ್ಯೆ
    ನಾಲ್ಕನೇ ಬಾರಿಗೆ ಪ್ರಧಾನಿಯಾಗಿ 1980 ರ ಜನವರಿ 14 ರಂದು ಇಂದಿರಾ ಗಾಂಧಿ ಪ್ರಮಾಣ ವಚನ ಸ್ವೀಕರಿಸಿದರು. 1984, ಅಕ್ಟೋಬರ್‌ 31 ರಲ್ಲಿ ಹತ್ಯೆಗೆ ಈಡಾಗುವವರೆಗೂ ಅದೇ ಸ್ಥಾನದಲ್ಲಿದ್ದರು. ಭಾರತದ ಏಕೈಕ ಮಹಿಳಾ ಪ್ರಧಾನಿ ಹಾಗೂ ವಿಶ್ವದಲ್ಲೇ ಸುದೀರ್ಘ ಕಾಲ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ಮಹಿಳಾ ಎಂಬ ಹೆಗ್ಗಳಿಕೆ ಅವರದ್ದು.

  • ಕೆ.ಎಸ್. ನಾಗರತ್ನಮ್ಮ ರಾಜ್ಯದ ಮೊದಲ ಮಹಿಳಾ ಸ್ಪೀಕರ್

    ಕೆ.ಎಸ್. ನಾಗರತ್ನಮ್ಮ ರಾಜ್ಯದ ಮೊದಲ ಮಹಿಳಾ ಸ್ಪೀಕರ್

    ಮೈಸೂರು: ರಾಜ್ಯ ವಿಧಾನಸಭೆಯಲ್ಲಿ ಮಹಿಳೆಯೊಬ್ಬರು ಸ್ಪೀಕರ್ (Speaker) ಆಗಿ ಕೆಲಸ ಮಾಡಿದ್ದಾರೆ. ಅವರೇ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾದ ಕೆ.ಎಸ್‌. ನಾಗರತ್ನಮ್ಮ .

    ಚಾಮರಾಜನಗರ (Chamarajanagar) ಜಿಲ್ಲೆಯ ಗುಂಡ್ಲುಪೇಟೆ ತಾಲೂಕು ಕಬ್ಬಹಳ್ಳಿಯ ಸಾಹುಕಾರ್ ಕೆ.ಸಿ. ಸುಬ್ಬಣ್ಣ ಅವರ ಧರ್ಮಪತ್ನಿ ನಾಗರತ್ನಮ್ಮ. 1957, 1962, 1967, 1972, 1983, 1985 ಹಾಗೂ 1989 – ಹೀಗೆ 7 ಬಾರಿ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಗುಂಡ್ಲುಪೇಟೆ (Gundlupet) ಇಂದಿರಾಗಾಂಧಿ, ಗುಂಡ್ಲುಪೇಟೆ ಅಮ್ಮ ಎಂದೇ ಹೆಸರಾಗಿದ್ದರು. 1972 ರಿಂದ 1978 ರವರೆಗೆ ರಾಜ್ಯ ವಿಧಾನಸಭೆಯ ಪ್ರಥಮ ಮಹಿಳಾ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ್ದರು. 1978ರಲ್ಲಿ ಅವರು ಎಚ್.ಕೆ. ಶಿವರುದ್ರಪ್ಪ ಅವರ ಎದುರು ಪರಾಭವಗೊಂಡಿದ್ದರು. ಇದನ್ನೂ ಓದಿ: ಶಾಸಕ ಮಹೇಶ್ ಕುಮಠಳ್ಳಿಗೆ ಟಿಕೆಟ್ ಟೆನ್ಶನ್- ವಲಸಿಗ ಶಾಸಕರಿಗೆ ಮೂಲ ಬಿಜೆಪಿಗರಿಂದ ಕಿರಿಕ್

    1985ರಲ್ಲಿ ರಾಜ್ಯದಲ್ಲಿ ರಾಮಕೃಷ್ಣ ಹೆಗಡೆ ನೇತೃತ್ವದಲ್ಲಿ ಜನತಾ ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂದಾಗ ಕೆ.ಎಸ್. ನಾಗರತ್ನಮ್ಮ ( KS Nagarathnamma) ಅವರು ರಾಜ್ಯದ ಪ್ರಥಮ ವಿರೋಧ ಪಕ್ಷದ ನಾಯಕಿಯಾಗಿಯೂ 1987 ಜ. 29 ರಿಂದ 1989 ಏ. 21 ರವರೆಗೆ ಕೆಲಸ ಮಾಡಿದ್ದರು. ಆದರೆ, ಮಂತ್ರಿಯಾಗಲು 1990ರವರೆಗೆ ಕಾಯಬೇಕಾಯಿತು. ಎಸ್. ಬಂಗಾರಪ್ಪ ಅವರ ಸಂಪುಟದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿ ಕೆಲಸ ಮಾಡಿದರು. ಮೈಸೂರು ಜಿಲ್ಲೆಯ ಪ್ರಥಮ ಮಹಿಳಾ ಉಸ್ತುವಾರಿ ಸಚಿವೆಯೂ ಆಗಿದ್ದರು. ಸಚಿವೆ ಆಗಿದ್ದಾಗಲೇ ನಿಧನರಾದರು. ಇದನ್ನೂ ಓದಿ: ಅಕ್ರಮ ಗಾಂಜಾ ಮಾರಾಟ ಯತ್ನ- ಇಬ್ಬರ ಬಂಧನ

  • ಸನ್ಯಾಸಿಯಾಗುವ ಮೊದಲು ಚುನಾವಣೆಗೆ ಸ್ಪರ್ಧಿಸಿದ್ದ ಕಾಗಿನೆಲೆ ಪೀಠದ ಸ್ವಾಮೀಜಿ!

    ಸನ್ಯಾಸಿಯಾಗುವ ಮೊದಲು ಚುನಾವಣೆಗೆ ಸ್ಪರ್ಧಿಸಿದ್ದ ಕಾಗಿನೆಲೆ ಪೀಠದ ಸ್ವಾಮೀಜಿ!

    ಮೈಸೂರು: ಕಾಗಿನೆಲೆ ಕನಕ ಗುರುಪೀಠದ (Kaginele Kanaka Guru Peetha) ಪ್ರಥಮ ಸ್ವಾಮೀಜಿಗಳಾದ ಶ್ರೀ ಬೀರೇಂದ್ರ ಕೇಶವ ತಾರಕಾನಂದಪುರಿ ಶ್ರೀಗಳು, ನಂಜನಗೂಡು ವಿಧಾನಸಭಾ ಕ್ಷೇತ್ರದಿಂದ(Nanjangud Constituency) ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು.

    1978 ರಲ್ಲಿ ಅವರ ಮೂಲನಾಮ ಪುಟ್ಟವೀರ ತಾರಕ (Puttaveera Taraka) ಎಂದಿತ್ತು. ಅವರು ಜನತಾ ಪಕ್ಷದ ಅಭ್ಯರ್ಥಿಯಾಗಿದ್ದರು. ಕಾಂಗ್ರೆಸ್‌ನ ಕೆ.ಬಿ. ಶಿವಯ್ಯ ಅವರು 19,639 ಮತಗಳನ್ನು ಗಳಿಸಿ ಆಯ್ಕೆಯಾದರು. ಪುಟ್ಟವೀರ ತಾರಕ ಅವರಿಗೆ 12,854 ಮತಗಳು ದೊರೆತಿದ್ದವು. ಈ ಚುನಾವಣೆಯಲ್ಲಿ ಮಾಜಿ ಶಾಸಕ ಹೆಜ್ಜಿಗೆ ಎಂ.ಲಿಂಗಣ್ಣ- ಪಕ್ಷೇತರ ಅಭ್ಯರ್ಥಿಯಾಗಿದ್ದರು. ಅದೇ ಪ್ರಥಮ ಬಾರಿಗೆ ರಾಜಕೀಯಕ್ಕೆ ಧುಮುಕಿದ ನಿವೃತ್ತ ಎಸ್‌ಐ ಡಿ. ಟಿ. ಜಯಕುಮಾರ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣದಲ್ಲಿದ್ದರು. ಇದನ್ನೂ ಓದಿ: ನಾಡಬಾಂಬ್ ಎಸೆದು BJP ಮುಖಂಡನ ಕೊಲೆ

    ಈ ಚುನಾವಣೆಯಲ್ಲಿ ಗೆದ್ದ ಶಿವಯ್ಯ ಅವರು ಅರಸು ಅವರ ಸಂಪುಟದಲ್ಲಿ ರೇಷ್ಮೆ ಖಾತೆಯ ಸಚಿವರಾದರೆ, ಸೋತ ಲಿಂಗಣ್ಣ ಅವರು ಮತ್ತೆ ಶಾಸಕರಾಗಲು ಸಾಧ್ಯವಾಗಲಿಲ್ಲ. ಆದರೆ ಡಿ.ಟಿ. ಜಯಕುಮಾರ್‌ ಮೂರು ಬಾರಿ ಗೆದ್ದು, ಎರಡು ಬಾರಿ ಸೋತರು. ಎರಡು ಬಾರಿ ಸಚಿವರಾಗಿದ್ದರು.

    1978ರ ಚುನಾವಣೆಯಲ್ಲಿ ಪುಟ್ಟವೀರ ತಾರಕ ಅವರು ಸೋತು, ಮನೆಯಲ್ಲಿದ್ದರು. ಕಾಗಿನೆಲೆಯಲ್ಲಿ ಕನಕಪೀಠ ಆರಂಭಿಸಿ ಸ್ವಾಮೀಜಿಗಳ ಶೋಧನೆಯಲ್ಲಿದ್ದ ಮೈಸೂರಿನವರೇ ಆದ ಮಾಜಿ ಸಚಿವ ವಿಶ್ವನಾಥ್ ಅವರು ಪುಟ್ಟವೀರ ತಾರಕರನ್ನು ಮನವೊಲಿಸಿ ಸ್ವಾಮೀಜಿಯಾಗಲು ಒಪ್ಪಿಸಿದರು. ನಂತರ ಪುಟ್ಟವೀರ ತಾರಕ ಅವರು ಶ್ರೀ ಬೀರೇಂದ್ರ ಕೇಶವಾ ಕನಕಪೀಠದ ತಾರಕಾನಂದಪುರಿ ಸ್ವಾಮೀಜಿಯಾಗಿ ಮೊದಲ ಪೀಠಾಧಿಪತಿಯಾಗಿ ಕಾರ್ಯ ನಿರ್ವಹಿಸಿದರು. ಅವರ ನಿಧನದ ಬಳಿಕ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಕಾಗಿನೆಲೆ ಪೀಠದ ಪೀಠಾಧಿಪತಿಗಳಾಗಿದ್ದಾರೆ.

  • ಜನತಾ ಪರಿವಾರದಿಂದ ಬಂದವರೇ ಹೆಚ್ಚು ಜನ ಮುಖ್ಯಮಂತ್ರಿಯಾಗಿರೋದು: ರೇವಣ್ಣ

    ಜನತಾ ಪರಿವಾರದಿಂದ ಬಂದವರೇ ಹೆಚ್ಚು ಜನ ಮುಖ್ಯಮಂತ್ರಿಯಾಗಿರೋದು: ರೇವಣ್ಣ

    ಹಾಸನ: ಜನತಾ ಪರಿವಾರದಿಂದ ಬಂದವರೇ ಹೆಚ್ಚು ಜನ ಮುಖ್ಯಮಂತ್ರಿಯಾಗಿದ್ದಾರೆ ಎಂದು ಮಾಜಿ ಸಚಿವ ಹೆಚ್‍ಡಿ ರೇವಣ್ಣ ಹೇಳಿದ್ದಾರೆ.

    ಯುವ ಮುಖಂಡ ಮುಖ್ಯಮಂತ್ರಿ ಆಗಿರುವುದು ಸಂತೋಷ. ಅವರು ಭ್ರಷ್ಟಾಚಾರ ತೆಗೆಯೋದು ನಮ್ಮಗುರಿ ಅಂದಿದ್ದಾರೆ. ಆ ನಿಟ್ಟಿನಲ್ಲಿ ಕೆಲಸ ಮಾಡಲಿ ಎಂದು ನೂತನ ಮುಖ್ಯಮಂತ್ರಿಗೆ ರೇವಣ್ಣ ಸಲಹೆ ನೀಡಿದ್ದಾರೆ.

    ಚನ್ನರಾಯಪಟ್ಟಣ ತಾಲೂಕಿನ ಉದಯಪುರದಲ್ಲಿ ಕೃಷಿ ಯಂತ್ರಧಾರೆ ಸಮಾರಂಭದಲ್ಲಿ ಪಾಲ್ಗೊಂಡ ನಂತರ ಮಾಧ್ಯನದವರೊಂದಿಗೆ ಮಾತನಾಡಿದ ಅವರು, ಹಿಂದಿನ ಎರಡು ವರ್ಷ ಸುಲಿಗೆ ನಡೆಯುತ್ತಿತ್ತು. ಈಗಿನ ಮುಖ್ಯಮಂತ್ರಿ ಒಳ್ಳೆ ಕೆಲಸ ಮಾಡಿ ಜನರ ವಿಶ್ವಾಸ ಗಳಿಸಲಿ. ಹಾಸನ ಜಿಲ್ಲೆಯ ಕೆಲಸ ತಡೆ ಹಿಡಿದದ್ದಾಗಿ ಮಾಜಿ ಮುಖ್ಯಮಂತ್ರಿ ಹೇಳಿದ್ದಾರೆ. ಈಗ ಹೊಸ ಮುಖ್ಯಮಂತ್ರಿ ಬಂದಿದ್ದಾರೆ. ಅವರು ರೈತಪರ, ಒಳ್ಳೆಯ ಕೆಲಸ ಮಾಡಲಿ. ಜನತಾ ಪರಿವಾರದಿಂದ ಬಂದವರೇ ಹೆಚ್ಚು ಜನ ಮುಖ್ಯಮಂತ್ರಿಗಳಾಗಿರುವುದು. ಆ ಭಗವಂತ ಅವರಿಗೆ ಒಳ್ಳೆಯದು ಮಾಡಲಿ ಎಂದು ರೇವಣ್ಣ ಶುಭ ಹಾರೈಸಿದ್ದಾರೆ.

    ಇದೇ ವೇಳೆ, ನಾನು ಸಂತೋಷ್ ಅವರ ಮನೆಗಾಗಲಿ, ಪ್ರಹ್ಲಾದ್ ಜೋಶಿ ಅವರ ಮನೆಗಾಗಲಿ ಹೋಗಿಲ್ಲ. ನನಗೆ ಅದರ ಅವಶ್ಯಕತೆ ಇಲ್ಲ. ಹಿಂದೆ ಗಡ್ಕರಿ ಅವರೇ ಬಂದು ಕೆಲವು ಯೋಜನೆಗಳಿಗೆ ಅಡಿಗಲ್ಲು ಹಾಕಿದ್ದರು. ಹೀಗಾಗಿ ಆ ಬಗ್ಗೆ ಮಾತಾಡಲು ದೆಹಲಿಗೆ ಹೋಗಿದ್ದೆ. ನಾನು ಯಾವುದೇ ರಾಜಕೀಯ ಕಾರಣಕ್ಕೆ ದೆಹಲಿಗೆ ಹೋಗಿರಲಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸಿಎಂ ನಿರ್ಧಾರಕ್ಕೆ ಬದ್ಧ: ಮಾಜಿ ಸಚಿವ ನಿರಾಣಿ

  • ಸಾಹಿತಿ, ಮಾಜಿ ಶಾಸಕ ಜ್ಞಾನದೇವ ದೊಡ್ಡಮೇಟಿ ನಿಧನ

    ಸಾಹಿತಿ, ಮಾಜಿ ಶಾಸಕ ಜ್ಞಾನದೇವ ದೊಡ್ಡಮೇಟಿ ನಿಧನ

    ಗದಗ: ಜಿಲ್ಲೆಯ ರೋಣ ತಾಲೂಕಿನ ಜಕ್ಜಲಿ ಗ್ರಾಮದ ಸರಳ, ಸಜ್ಜನಿ, ಮೌಲ್ಯಾಧಾರಿತ ರಾಜಕಾರಣಿ ಹಾಗೂ ಸಾಹಿತಿಯಾಗಿದ್ದ ಜ್ಞಾನದೇವ ದೊಡ್ಡಮೇಟಿ ಮಂಗಳವಾರ ತಡರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

    ಕರ್ನಾಟಕ ಏಕೀಕರಣ ಚಳವಳಿಯ ಪ್ರಮುಖರಾದ ದಿವಂಗತ ಅಂದಾನಪ್ಪ ದೊಡ್ಡಮೇಟಿ ಅವರ ಪುತ್ರರಿವರು. ಇವರು ಕೂಡಾ ಸ್ವಾತಂತ್ರ್ಯ ಹೋರಾಟ ಕಂಡಂತವರು. 1983 ಹಾಗೂ 85 ರಲ್ಲಿ ಎರಡು ಬಾರಿ ರೋಣ ಕ್ಷೇತ್ರದಿಂದ ಜನತಾಪಕ್ಷದ ಶಾಸಕರಾಗಿ ಆಯ್ಕೆಯಾಗಿದ್ದರು. ಜ್ಞಾನದೇವ ದೊಡ್ಡಮೇಟಿಯವರು ಸಾಹಿತಿ ಸಹ ಆಗಿದ್ರು. ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿ ಮತ್ತು ತಾಲೂಕು ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

    ದೊಡ್ಡಮೇಟಿ ಅವರು ನಾಲ್ವರು ಪುತ್ರರು, ಓರ್ವ ಪುತ್ರಿ ಸೇರದಂತೆ ಅಪಾರ ಬಂಧು-ಬಳಗವನ್ನ ಅಗಲಿದ್ದಾರೆ. ಇಂದು ಸಂಜೆ ಗದಗ ಜಿಲ್ಲೆಯ ಜಕ್ಕಲ್ಲಿ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ದೊಡ್ಡಮೇಟಿ ಅವರ ಅಗಲಿಕೆಯಿಂದ ರಾಜಕೀಯ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ. ಜ್ಞಾನದೇವ ದೊಡ್ಡಮೇಟಿ ಅವರಿಗೆ 86 ವರ್ಷ ವಯಸ್ಸಾಗಿತ್ತು.