ಬೆಂಗಳೂರು: ಜನತಾ ದರ್ಶನದಲ್ಲಿ ರಾಮನಗರದ ವಿದ್ಯಾರ್ಥಿನಿಯ ವಿದ್ಯಾಭ್ಯಾಸಕ್ಕಾಗಿ 70 ಸಾವಿರ ರೂಪಾಯಿಯ ಚೆಕ್ ಅನ್ನು ಸಿಎಂ ಕುಮಾರಸ್ವಾಮಿಯವರು ವಿತರಿಸಿದ್ದಾರೆ.
ಕಳೆದ ವಾರದ ಹಿಂದೆ ರಾಮನಗರದ ವಿದ್ಯಾರ್ಥಿ ಕಾಂಚನಾ ಇಂಜಿನಿಯರಿಂಗ್ ಓದಲು ಆರ್ಥಿಕ ಸಮಸ್ಯೆಯನ್ನು ಎದುರಾಗಿದ್ದು ಸಹಾಯ ನೀಡುವಂತೆ ಜನತಾ ದರ್ಶನದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಬಳಿ ಕೇಳಿಕೊಂಡಿದ್ದಳು. ಈ ವೇಳೆ ಮುಖ್ಯಮಂತ್ರಿಯವರು ಯುವತಿಗೆ ಒಂದು ವಾರ ಬಿಟ್ಟು ಬರುವಂತೆ ತಿಳಿಸಿದ್ದರು.

ಇಂದು ಜೆಪಿ ನಗರದ ನಿವಾಸದಲ್ಲಿ ನಡೆದ ಜನತಾ ದರ್ಶನದಲ್ಲಿ ಕಾಂಚನಾ ಸಮಸ್ಯೆಗೆ ಸ್ಪಂದಿಸಿ ಆಕೆಯ ವಿದ್ಯಾಭ್ಯಾಸಕ್ಕಾಗಿ 70 ಸಾವಿರ ರೂಪಾಯಿಯ ಚೆಕ್ ಅನ್ನು ಮುಖ್ಯಮಂತ್ರಿ ವಿತರಿಸಿದ್ದಾರೆ. ಚೆಕ್ ಪಡೆದ ಯುವತಿಯು ನನ್ನ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಿದ ಮುಖ್ಯಮಂತ್ರಿಗಳಿಗೆ ವಂದನೆ ಸಲ್ಲಿಸಿ, ಇಂತಹ ಮುಖ್ಯಮಂತ್ರಿಗಳು ನಮಗೆ ಬೇಕು ಎಂದು ಸಂತಸ ಹಂಚಿಕೊಂಡಿದ್ದಾಳೆ.
ಡಾ. ರವೀಂದ್ರ ಭೇಟಿ:
ಕರ್ನಾಟಕ ಮೆಡಿಕಲ್ ಅಸೋಸಿಯೇಷನ್ ಅಧ್ಯಕ್ಷರಾದ ಡಾ.ರವೀಂದ್ರ ಮುಖ್ಯಮಂತ್ರಿ ಕುಮಾರಸ್ವಾಮಿಗಳನ್ನು ಜೆಪಿ ನಗರದ ನಿವಾಸದಲ್ಲಿ ಭೇಟಿ ಮಾಡಿದ್ದಾರೆ. ಕೊಪ್ಪಳ ಮೆಡಿಕಲ್ ಕಾಲೇಜಿಗೆ 150 ಸೀಟುಗಳು ಮಿಸ್ ಆದ ಕಾರಣ ಸಿಎಂ ಜತೆ ಚರ್ಚಿಸಲು ಹಾಗೂ ಯಶಸ್ವಿನಿ ಯೋಜನೆ ಮುಂದುವರಿಸುವ ಕುರಿತು ಮಾತುಕತೆ ನಡೆಸಿದ್ದಾರೆ.







