Tag: ಜನತಾದರ್ಶನ

  • ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಇಂದು ಜನತಾದರ್ಶನ

    ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಇಂದು ಜನತಾದರ್ಶನ

    ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಇಂದು ಜನಸ್ಪಂದನ ಹೆಸರಿನಲ್ಲಿ ಜನತಾದರ್ಶನ (Janatadarshan) ನಡೆಸುತ್ತಿದ್ದು, ಮೊದಲಿಗೆ ವಿಶೇಷ ಚೇತನರ ಮತ್ತು ಹಿರಿಯ ನಾಗರಿಕರ ಅಹವಾಲನ್ನು (Report) ಸ್ವೀಕರಿಸಿದ್ದಾರೆ.

    ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಜನತಾದರ್ಶನವನ್ನು ಆಯೋಜಿಸಲಾಗಿದೆ. ಸಾವಿರಾರು ಸಂಖ್ಯೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ರೈತರು, ಮಹಿಳೆಯರು ಜನತಾ ದರ್ಶನಕ್ಕೆ ಆಗಮಿಸಿದ್ದು, ಸಿಎಂ ಜನತಾದರ್ಶನಕ್ಕೆ ಬಿಗಿ ಪೊಲೀಸ್ ಕಾವಲು ನೇಮಿಸಲಾಗಿದೆ. ಅಹವಾಲು ಸ್ವೀಕಾರ ಮತ್ತು ಪರಿಶೀಲನೆಗೆ ಎಲ್ಲಾ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ, ಇತರೇ ಸಹಾಯಕ ಸಿಬ್ಬಂದಿ ಸೇರಿ ಒಟ್ಟು 1,000 ಅಧಿಕಾರಿ ಮತ್ತು ಸಿಬ್ಬಂದಿ ಕರ್ತವ್ಯದಲ್ಲಿ ಹಾಜರಿದ್ದಾರೆ. ಸಿದ್ದರಾಮಯ್ಯ ಎರಡನೇ ಬಾರಿ ಮುಖ್ಯಮಂತ್ರಿ ಆದ ಬಳಿಕ ನಡೆಯುತ್ತಿರುವ ಮೊದಲ ಪೂರ್ಣಾವಧಿ ಜನತಾ ದರ್ಶನ ಇದಾಗಿದೆ. ಇದನ್ನೂ ಓದಿ: ರೈತ ಬಂಧು ಯೋಜನೆ ಮುಂದೂಡುವಂತೆ ತೆಲಂಗಾಣ ಸರ್ಕಾರಕ್ಕೆ ಚು.ಆಯೋಗ ಸೂಚನೆ

    ಜನತಾ ದರ್ಶನದಲ್ಲಿ 20 ಕೌಂಟರ್‌ಗಳು ಹಾಗೂ ನೂರಕ್ಕೂ ಹೆಚ್ಚು ಅಧಿಕಾರಿಗಳ ಉಪಸ್ಥಿತಿಯಿದ್ದು, ವಿಶೇಷ ಚೇತನರು ಮತ್ತು ಹಿರಿಯ ನಾಗರಿಕರಿಗೆ ಪ್ರತ್ಯೇಕ ಎರಡು ಕೌಂಟರ್‌ಗಳನ್ನು ಮೀಸಲಿರಿಸಲಾಗಿದೆ. ಅಹವಾಲುಗಳ ದಾಖಲೀಕರಣಕ್ಕೆ ಅಧಿಕಾರಿಗಳು ಮತ್ತು ಸಿಬ್ಬಂದಿ ಹಲವು ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸ್ವೀಕರಿಸಿದ ಅಹವಾಲುಗಳನ್ನು ಇಲಾಖಾವಾರು ವಿಂಗಡಿಸಿ ತಂತ್ರಾಂಶದಲ್ಲಿ ದಾಖಲಿಸಲಾಗುತ್ತದೆ. ಬಳಿಕ ಅರ್ಜಿದಾರರಿಗೆ ಸ್ವೀಕೃತಿ ಪತ್ರ ನೀಡಿದ ನಂತರ ಮುಖ್ಯಮಂತ್ರಿಯವರು ಅವರ ಅಹವಾಲುಗಳನ್ನು ಆಲಿಸಿ ಪರಿಹಾರ ಸೂಚಿಸಲಿದ್ದಾರೆ. ಇದನ್ನೂ ಓದಿ: ಕುಮಾರಸ್ವಾಮಿ, ವಿಜಯೇಂದ್ರ ನನ್ನನ್ನು ಸೋಲಿಸಲು ಸಾಧ್ಯವಿಲ್ಲ: ಡಿ.ಕೆ ಸುರೇಶ್

    ಆನ್‌ಲೈನ್‌ನಲ್ಲೂ ಜನರು ದೂರು ಸಲ್ಲಿಸಬಹುದು. ಅಲ್ಲದೇ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿಯೂ ಸಹ ಸಾರ್ವಜನಿಕರು ದೂರುಗಳನ್ನ ನೇರವಾಗಿ ಸಲ್ಲಿಸಬಹುದಾಗಿದೆ. ಸಿದ್ದರಾಮಯ್ಯ ಖುದ್ದು ಸಮಸ್ಯೆಗಳನ್ನು ಆಲಿಸಿ ಪರಿಹಾರಕ್ಕೆ ಅಧಿಕಾರಿಗಳಿಗೆ ಸ್ಥಳದಲ್ಲೇ ಖಡಕ್ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಬಿಜೆಪಿಯ ರಾಜಕೀಯ ನಿರ್ಣಯಕ್ಕೆ ನಮ್ಮ ಸರ್ಕಾರ ರಾಜಕೀಯ ಉತ್ತರ ನೀಡಿದೆ- ಡಿಕೆ ಸುರೇಶ್ ಗುಡುಗು

  • 12 ವರ್ಷಗಳ ಹಿಂದಿದ್ದ ಶಕ್ತಿ ಈಗಿಲ್ಲ, ವಯಸ್ಸಾಗ್ತಿದೆ ಶಕ್ತಿ ಕುಂದುತ್ತಿದೆ: ಸಿಎಂ

    12 ವರ್ಷಗಳ ಹಿಂದಿದ್ದ ಶಕ್ತಿ ಈಗಿಲ್ಲ, ವಯಸ್ಸಾಗ್ತಿದೆ ಶಕ್ತಿ ಕುಂದುತ್ತಿದೆ: ಸಿಎಂ

    – ನನ್ನ ಕೆಲಸಕ್ಕೆ ತಕ್ಕ ಗೌರವ ಸಿಕ್ತಿಲ್ಲವೆಂಬ ನೋವಿದೆ
    – ಸ್ವಕ್ಷೇತ್ರದಲ್ಲಿ 2 ದಿನಗಳ ಜನತಾದರ್ಶನ ಮುಗಿಸಿದ ಸಿಎಂ

    ರಾಮನಗರ: 12 ವರ್ಷಗಳ ಹಿಂದೆ ಇದ್ದ ಶಕ್ತಿ ಈಗ ನನ್ನ ದೇಹದಲ್ಲಿಲ್ಲ. ವಯಸ್ಸಾಗುತ್ತಿದೆ, ಹೀಗಾಗಿ ಶಕ್ತಿ ಕುಂದುತ್ತಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

    ಚನ್ನಪಟ್ಟಣದಲ್ಲಿ ನಡೆದ ಜನತಾದರ್ಶನವನ್ನು ಉದ್ದೇಶಿಸಿ ಮಾತನಾಡಿದ ಅವರು, ನನ್ನ ಕೆಲಸಕ್ಕೆ ತಕ್ಕ ಗೌರವ ಸಿಗುತ್ತಿಲ್ಲ ಎಂಬ ನೋವಿದೆ. ನನಗೆ ಸಮಯಾವಕಾಶ ಕೊಡಿ ನಿಮ್ಮ ಕೆಲಸ ಮಾಡಿಕೊಡುತ್ತೇವೆ ಎಂದು ಸ್ವಕ್ಷೇತ್ರದ ಜನತೆಯಲ್ಲಿ ಮನವಿ ಮಾಡಿಕೊಂಡರು.

    ಚನ್ನಪಟ್ಟಣದ ಗ್ರಾಮೀಣ ಅಭಿವೃದ್ಧಿಗೆ ಅಷ್ಟೇ ಅಲ್ಲ ನಗರದ ಅಭಿವೃದ್ಧಿಗೂ ಬದ್ಧನಾಗಿದ್ದೇನೆ. ಬಡ ಕುಟುಂಬದವರು ನಗರದಲ್ಲಿ ಮನೆಗಾಗಿ ಬೇಡಿಕೆ ಇಟ್ಟಿದ್ದೀರಿ. ಈ ನಿಟ್ಟಿನಲ್ಲಿ 80 ಕೋಟಿ ರೂ. ವೆಚ್ಚದಲ್ಲಿ ಗುಂಪು ಮನೆಗಳನ್ನು ನಿರ್ಮಿಸಿ ನೀಡಲಾಗುವುದು. ಸ್ಪೋಟ್ರ್ಸ್ ಕಾಂಪ್ಲೆಕ್ಸ್ ನಿರ್ಮಾಣಕ್ಕೆ 60 ಕೋಟಿ ರೂ. ನೀಡುತ್ತೇನೆ. ಕುಡಿಯುವ ನೀರು ಪೂರೈಕೆಗಾಗಿ ರಾಮನಗರ, ಚನ್ನಪಟ್ಟಣಕ್ಕೆ ಪ್ರತ್ಯೇಕ ಪೈಪ್ ಲೈನ್ ವ್ಯವಸ್ಥೆ ಮಾಡಲಾಗುವುದು. ತಿರುಪತಿ ದೇವಾಲಯ ನಿರ್ಮಾಣಕ್ಕೆ ಜಾಗ ಹುಡುಕಲಾಗುತ್ತಿದೆ ಎಂದು ಜನತೆಗೆ ತಿಳಿಸಿದರು.

    ಕೆರೆಗೆ ನೀರು ತುಂಬಿಸುವ ವಿವರವನ್ನ ತೆಗೆದುಕೊಂಡಿದ್ದೇನೆ. 2015ರಲ್ಲಿ ನಾನು ಕ್ಷೇತ್ರದ ಶಾಸಕನಾದ ಬಳಿಕ 86 ಕೆರೆಗೆ ಸಂಪೂರ್ಣವಾಗಿ ನೀರು ತುಂಬಿಸಿದ್ದೇವೆ. ಯಾಕೆ ನನ್ನ ಬಗ್ಗೆ ಅಪಪ್ರಚಾರ ಮಾಡುತ್ತೀರಿ. ಕೆಲವರು ಸರ್ಕಾರ ಉರುಳಿಸಲು ಕಸರತ್ತು ನಡೆಸುತ್ತಿದ್ದಾರೆ. ಸರ್ಕಾರ ಬಹಳ ಬೇಗ ಹೋಗಲ್ಲ, ಇನ್ನೂ ನಾಲ್ಕು ವರ್ಷ ಸರ್ಕಾರವನ್ನು ಹೇಗೆ ನಡೆಸಬೇಕು ಅಂತ ಗೊತ್ತಿದೆ ಎಂದು ಪರೋಕ್ಷವಾಗಿ ಬಿಜೆಪಿ ಮುಖಂಡ ಸಿ.ಪಿ.ಯೋಗೇಶ್ವರ್ ಅವರ ವಿರುದ್ಧ ಗುಡುಗಿದರು.

    ಸಿಎಂ ಅವರು ಸ್ವಕ್ಷೇತ್ರದಲ್ಲಿ ಕೈಗೊಂಡ ಎರಡು ದಿನಗಳ ಜನತಾದರ್ಶನವನ್ನು ಭಾನುವಾರ ಮುಗಿಸಿದ್ದಾರೆ. ಮೊದಲ ದಿನ ಅಕ್ಕೂರು, ಕೋಡಂಬಳ್ಳಿ ಹಾಗೂ ಹೊಂಗನೂರು ಜಿಲ್ಲಾ ಪಂಚಾಯ್ತಿಗಳಲ್ಲಿ ಜನತಾದರ್ಶನ ನಡೆಸಿದ್ದ ಸಿಎಂ, ಎರಡನೇ ದಿನಗ ಬೇವೂರು, ಮಳೂರು ಜಿಲ್ಲಾ ಪಂಚಾಯತ್ ಹಾಗೂ ಚನ್ನಪಟ್ಟಣ ಟೌನ್‍ನಲ್ಲಿ ಜನತಾದರ್ಶನ ನಡೆಸಿದರು.

    ಮೊದಲಿಗೆ ಬೇವೂರಿನಲ್ಲಿ ನಡೆದ ಜನತಾದರ್ಶನದಲ್ಲಿ ಕಳೆದ ಮೂರು ತಿಂಗಳ ಹಿಂದೆ ವಿದ್ಯುತ್ ಶಾಕ್‍ನಿಂದ ಮೃತಪಟ್ಟಿದ್ದ ರಾಜು ಎಂಬವರ ಪತ್ನಿಗೆ ಬೆಸ್ಕಾಂ ಇಲಾಖೆಯ ವತಿಯಿಂದ 5 ಲಕ್ಷ ರೂ. ಪರಿಹಾರ ಚೆಕ್ ವಿತರಣೆ ಮಾಡಿದರು.

    ಬೇವೂರು, ಬೈರಾಪಟ್ಟಣ ಹಾಗೂ ಚನ್ನಪಟ್ಟಣ ಟೌನ್‍ನಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ 4 ಸಾವಿರಕ್ಕೂ ಹೆಚ್ಚು ಅಹವಾಲುಗಳ ಅರ್ಜಿಗಳನ್ನು ಸ್ವೀಕರಿಸಲಾಯಿತು. ಪ್ರತಿ ಜನತಾದರ್ಶನದ ಸ್ಥಳಗಳಲ್ಲಿ ಸಾಲಮನ್ನಾ ಪಲಾನುಭವಿಗಳಿಗೆ ಋಣಮುಕ್ತ ಪತ್ರವನ್ನ ನೀಡಲಾಯಿತು. ಮೊದಲ ದಿನದಂತೆಯೇ ಕೆಲವರು ಸಿಎಂ ಎದುರು ಸೆಲ್ಫಿ ತೆಗೆದುಕೊಳ್ಳಲು ಮುಂದಾದರೆ, ಕೆಲವರು ಅಧಿಕಾರಿಗಳ ಜೊತೆ ಮಾತಿನ ಚಕಮಕಿ ನಡೆಸಿ ಸಿಎಂಗೆ ಮನವಿ ಪತ್ರ ನೀಡಿದರು.

    ಮಳೂರು ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯಲ್ಲಿ ನಡೆದ ಜನತಾದರ್ಶನದಲ್ಲಿ ಭೈರಾಪಟ್ಟಣ ಗ್ರಾಮದ ಎಂಬ ಪದ್ಮ ಎಂಬ ಮಹಿಳೆ ತನ್ನ ಒಂದೂವರೆ ವರ್ಷದ ಗಂಡು ಮಗುವಿನ ಜೊತೆ ಬಂದು ಸಿಎಂ ಎದುರು ಕಣ್ಣೀರು ಹಾಕಿದರು. ಮಗು ಮೆದುಳು ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದೆ. ಚಿಕಿತ್ಸೆಗೆ 5 ಲಕ್ಷ ರೂ. ತಗಲುತ್ತದೆ ಅಂತ ವೈದ್ಯರು ತಿಳಿಸಿದ್ದಾರೆ ಎಂದು ಕಣ್ಣೀರು ಹಾಕಿದರು.

    ಕೆಲವರಂತೂ ಸಿಎಂ ಕಾಲಿಗೆ ಎರಗಿ ತಮ್ಮ ಸಮಸ್ಯೆಗಳನ್ನು ತೋಡಿಕೊಂಡರು. ಈ ಮಧ್ಯೆ ಸಿಎಂ ಭಾಷಣ ಮಾಡುತ್ತಿದ್ದಾಗ ಮಹಿಳೆಯೊಬ್ಬಳು ಕುಸಿದು ಬಿದ್ದರು. ಕಣ್ಣೆದುರೇ ನಡೆದ ಘಟನೆಯನ್ನು ನೋಡಿದ ಸಿಎಂ ಯಾಕಮ್ಮಾ, ಏನಾಯ್ತು, ಯಾರು ನೋಡ್ರಪ್ಪಾ, ಅವರಿಗೆ ನೀರು ಕುಡಿಸಿ, ಪಾಪಾ ಮಗುವನ್ನ ಎತ್ತಿಕೊಂಡಿದ್ದಾರೆ ಎಂದು ಮರುಕ ವ್ಯಕ್ತಪಡಿಸಿದರು.

  • ಸಿಎಂ ಕುಮಾರಸ್ವಾಮಿಗೆ ಜ್ವರ – ಕಲಬುರಗಿಯ ಜನತಾದರ್ಶನ ರದ್ದು

    ಸಿಎಂ ಕುಮಾರಸ್ವಾಮಿಗೆ ಜ್ವರ – ಕಲಬುರಗಿಯ ಜನತಾದರ್ಶನ ರದ್ದು

    ಬೆಂಗಳೂರು: ರಾಜ್ಯ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾದ ಬಳಿಕ ನಿರಂತರವಾಗಿ ಚಟುವಟಿಕೆಯಿಂದ ಇರುವ ಸಿಎಂ ಎಚ್‍ಡಿ ಕುಮಾರಸ್ವಾಮಿ ಅವರು ಸದ್ಯ ಜ್ವರದಿಂದ ಬಳಲುತ್ತಿದ್ದು, ಸದ್ಯ ಬೆಂಗಳೂರಿನ ತಮ್ಮ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.

    ಮುಖ್ಯಮಂತ್ರಿಗಳ ಪೂರ್ವ ನಿಯೋಜಿತ ವೇಳಾಪಟ್ಟಿಯಂತೆ ಸೋಮವಾರ ಕಲಬುರಗಿ ಪ್ರವಾಸ ಕೈಗೊಂಡು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕಿತ್ತು. ಆದರೆ ಈಗ ಕಲಬುರಗಿಯಲ್ಲಿ ನಡೆಯಬೇಕಿದ್ದ ಜನತಾದರ್ಶನ ಕಾರ್ಯಕ್ರಮ ಇರುವುದಿಲ್ಲ ಎಂದು ಸಿಎಂ ಕಚೇರಿ ಅಧಿಕೃತ ಪತ್ರಿಕಾ ಪ್ರಕಟಣೆ ಹೊರಡಿಸಿದೆ.

    ಇದೇ ವೇಳೆ ಆಪರೇಷನ್ ಕಮಲದ ಭೀತಿಯಲ್ಲಿರುವ ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಡಿಕೆ ಶಿವಕುಮಾರ್ ಇಂದು ಕಲಬುರಗಿಯ ಗಾಣಗಾಪುರದಲ್ಲಿರುವ ದತ್ತಾತ್ರೆಯ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈ ದೇವಾಲಯಕ್ಕೆ ನಾಳೆ ಸಿಎಂ ಹೆಚ್‍ಡಿಕೆ ಕೂಡ ಭೇಟಿ ನೀಡುವ ಕಾರ್ಯಕ್ರಮ ನಿಗದಿಯಾಗಿದೆ.

    ಇತ್ತ ವಿದೇಶಿ ಪ್ರವಾಸದಿಂದ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಬರುತ್ತಿದಂತೆ ರಾಜ್ಯ ರಾಜಕೀಯ ಮತ್ತೆ ಬಿರುಸುಗೊಂಡಿದೆ. ಇಂದು ಬೆಳಗ್ಗೆಯೇ ವೇಣುಗೋಪಾಲ್ ಸೇರಿದಂತೆ ಹಲವರು ಸಿದ್ದರಾಮಯ್ಯ ಭೇಟಿಯಾಗಿ ಚರ್ಚಿಸಿದರು. ಸಭೆ ಬಳಿಕ ಮಾತನಾಡಿದ ಕೆಪಿಸಿಸಿ ಉಸ್ತುವಾರಿ ವೇಣುಗೋಪಾಲ್, ಕಾಂಗ್ರೆಸ್‍ನಲ್ಲಿ ಎಲ್ಲವೂ ಸರಿ ಇದೆ. ಜಾರಕಿಹೊಳಿ ಬ್ರದರ್ಸ್ ಬಂಡಾಯ ಅದೊಂದು ಸಮಸ್ಯೆಯೇ ಅಲ್ಲ. ಬಿಜೆಪಿ ಕಪ್ಪು ಹಣದ ಮೂಲಕ ಸರ್ಕಾರವನ್ನು ಕೆಡವಲು ಪ್ಲಾನ್ ಮಾಡ್ತಿದೆ ಅಂತ ಆರೋಪಿಸಿದರು. ಬಳಿಕ ಮಾತಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಬಿಜೆಪಿಯವರು ನೀತಿಗೆಟ್ಟ ರಾಜಕಾರಣ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಬೀಳಿಸಲು ಯತ್ನಿಸ್ತಿಲ್ಲ. ಅವರ ವಿರುದ್ಧ ಸುಮ್ಮನೇ ಆರೋಪ ಮಾಡುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಿಎಂ ಜನತಾ ದರ್ಶನ ಸಿಬ್ಬಂದಿ ನಾಪತ್ತೆ: ಭೇಟಿಗಾಗಿ ಪರದಾಡುತ್ತಿರುವ ಅಂಗವಿಕಲರು!

    ಸಿಎಂ ಜನತಾ ದರ್ಶನ ಸಿಬ್ಬಂದಿ ನಾಪತ್ತೆ: ಭೇಟಿಗಾಗಿ ಪರದಾಡುತ್ತಿರುವ ಅಂಗವಿಕಲರು!

    ಬೆಂಗಳೂರು: ಮುಖ್ಯಮಂತ್ರಿ ಕುಮಾರಸ್ವಾಮಿಯವರ ಜನತಾ ದರ್ಶನದ ಸರಿಯಾದ ಮಾಹಿತಿ ಸಿಗದೆ ಇಬ್ಬರು ಅಂಗವಿಕಲರು ಪರದಾಡುತ್ತಿರುವ ಘಟನೆ ಸಿಎಂ ನಿವಾಸದ ಬಳಿ ನಡೆದಿದೆ.

    ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಮಂಜುನಾಥ್ ಎಂಬ ಎರಡು ಕಾಲುಗಳಿಲ್ಲದ ಅಂಗವಿಕಲ ಸಿಎಂರ ಜನತಾ ದರ್ಶನಕ್ಕೆ ಬಂದಿದ್ದಾರೆ. ಮುಖ್ಯಮಂತ್ರಿಯವರ ಜೆಪಿ ನಗರದ ನಿವಾಸಕ್ಕೆ ಬಂದಾಗ ಪೊಲೀಸರು ಗೃಹ ಕಚೇರಿ ಕೃಷ್ಣಾಕ್ಕೆ ತೆರಳುವಂತೆ ಹೇಳಿದ್ದಾರೆ.

    ಜನತಾ ದರ್ಶನದ ಮಾಹಿತಿ ನೀಡುವ ಯಾವೊಬ್ಬ ಅಧಿಕಾರಿಯೂ ಸ್ಥಳದಲ್ಲಿ ಇಲ್ಲ. ಅಂಗವಿಕಲರ ವಾಹನಕ್ಕೆ ಮನವಿ ಸಲ್ಲಿಸಲು ಬಂದ್ದಿದ್ದು, ರಾತ್ರಿಯಿಡಿ ಪ್ರಯಾಣ ಮಾಡಿ ಮೆಜೆಸ್ಟಿಕ್‍ನಿಂದ ಜೆಪಿ ನಗರದ ಸಿಎಂ ನಿವಾಸಕ್ಕೆ 350 ರೂ. ಆಟೋ ಚಾರ್ಜ್ ನೀಡಿ ಬಂದಿದ್ದೇನೆ. ಆದರೆ ಇಲ್ಲಿ ಸಿಎಂ ಕುಮಾರಸ್ವಾಮಿ ಆಗಲಿ ಅಥವಾ ಜನತಾ ದರ್ಶನದ ಸಿಬ್ಬಂದಿಯಾಗಲಿ ಇಲ್ಲ. ಈಗ ಪೊಲೀಸರು ಗೃಹ ಕಚೇರಿ ಕೃಷ್ಣಾಕ್ಕೆ ಹೋಗುವಂತೆ ಹೇಳುತ್ತಿದ್ದಾರೆ. ಆದರೆ ಆಟೋಕ್ಕೆ ಹೋಗಲು ನನ್ನ ಬಳಿ ಹಣವಿಲ್ಲ. ಅಂಗವಿಕಲನಾದ ನಾನು ಎರಡು ಬಸ್ ಬದಲಿಸಿ ಹೋಗುವ ಪರಿಸ್ಥಿತಿ ಎದುರಾಗಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.

    ಅಲ್ಲದೇ ಎರಡು ದಿನಗಳಿಂದ ಮತ್ತೊಬ್ಬ ಅಂಗವಿಕಲರು ಸಿಎಂ ದರ್ಶನ ಪಡೆಯಲು ಅಲೆದಾಡುತ್ತಿದ್ದಾರೆ. ಯಾವುದೇ ಅಧಿಕಾರಿಗಳು ಸರಿಯಾದ ಮಾಹಿತಿ ನೀಡುತ್ತಿಲ್ಲ. ಪೊಲೀಸರು ಗೃಹ ಕಚೇರಿ ಕೃಷ್ಣಾಕ್ಕೆ ಹೋಗಲು ಹೇಳುತ್ತಿದ್ದಾರೆ. ನನಗೆ ಗೃಹ ಕಚೇರಿ ಎಲ್ಲಿದೆ ಎಂಬುದು ಗೊತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು.

    ಸಿಎಂ ಜನತಾ ದರ್ಶನದ ಸಿಬ್ಬಂದಿಯು ನಾಪತ್ತೆಯಾಗಿದ್ದು, ಸರಿಯಾದ ಮಾಹಿತಿ ಸಿಗದೆ ಮುಖ್ಯಮಂತ್ರಿ ಕುಮಾರಸ್ವಾಮಿಯವರ ನಿವಾಸ ಮತ್ತು ಗೃಹ ಕಚೇರಿ ಕೃಷ್ಣಾಕ್ಕೆ ಸಾರ್ವಜನಿಕರು ಅಲೆದಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.