Tag: ಜನಜಾಗೃತಿ

  • ಬೀದರ್ ವೈದ್ಯರಿಂದ ಹೈದರಾಬಾದ್‍ನಲ್ಲಿ ಉಚಿತ ಮಾಸ್ಕ್ ವಿತರಣೆ

    ಬೀದರ್ ವೈದ್ಯರಿಂದ ಹೈದರಾಬಾದ್‍ನಲ್ಲಿ ಉಚಿತ ಮಾಸ್ಕ್ ವಿತರಣೆ

    ಬೀದರ್: ತೆಲಂಗಾಣದ ಹೈದರಾಬಾದ್ ನಗರದ ಚಾರ್‍ಮೀನಾರ ಬಳಿ ಉಚಿತವಾಗಿ ಜನರಿಗೆ ಮಾಸ್ಕ್ ವಿತರಣೆ ಮಾಡುವ ಮೂಲಕ ಕೊರೊನಾ ಸೋಂಕು ಕುರಿತು ಬೀದರ್‍ನ ವೈದ್ಯರು ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ.

    ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಕುಂಟೆಸಿರ್ಸಿ ಗ್ರಾಮದ ನಿವಾಸಿಯಾಗಿರುವ ದಂತ ವೈದ್ಯ ಡಾ. ಪ್ರಭು ಜನರಿಗೆ ಉಚಿತವಾಗಿ ಮಾಸ್ಕ್ ವಿತರಿಸಿದ್ದಾರೆ. ಜೊತೆಗೆ ಕೊರೊನಾ ಸೊಂಕು ಬಗ್ಗೆ ಜನರಲ್ಲಿ ಮುಂಜಾಗ್ರತಾ ಕ್ರಮಗಳ ಕುರಿತು ಜನರಿಗೆ ಜಾಗೃತಿ ಮೂಡಿಸಿ ಸಾಮಾಜಿಕ ಕಳಕಳಿ ಮೆರೆದ್ದಾರೆ.

    ಮನೆ ಹೊರಗಡೆ ಬರುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಂಡೆ ಬರಬೇಕು. ಸ್ವಚ್ಛತೆಯಿಂದ ಇರಬೇಕೆಂದು ವೈದ್ಯರಾದ ಪ್ರಭು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಈ ಡೆಡ್ಲಿ ಮಹಾಮಾರಿ ಕೊರೊನಾ ವೈರಸ್ ಬಗ್ಗೆ ಸಂಘ ಸಂಸ್ಥೆಗಳು ಜನಜಾಗೃತಿ ಕಾರ್ಯಕ್ಕೆ ಕೈ ಜೋಡಿಸಬೇಕೆಂದು ವೈದ್ಯರು ಕೇಳಿಕೊಂಡಿದ್ದಾರೆ.

  • ಬೆಳ್ಳಂದೂರು ಕೆರೆಯೊಳಗೆ ರಶ್ಮಿಕಾ ಮಂದಣ್ಣ ಫೋಟೋಶೂಟ್!

    ಬೆಳ್ಳಂದೂರು ಕೆರೆಯೊಳಗೆ ರಶ್ಮಿಕಾ ಮಂದಣ್ಣ ಫೋಟೋಶೂಟ್!

    ಬೆಂಗಳೂರು: ಜಲ ಮಾಲಿನ್ಯದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ನಟಿ ರಶ್ಮಿಕಾ ಮಂದಣ್ಣ ಬೆಳ್ಳಂದೂರು ಕೆರೆಯೊಳಗೆ ಫೋಟೋಶೂಟ್ ಮಾಡಿಸಿದ್ದಾರೆ.

    ಸಿಲಿಕಾನ್ ಸಿಟಿಯ ಬೆಳ್ಳಂದೂರು ಕೆರೆ ಮಾಲಿನ್ಯಕ್ಕೆ ಹೆಸರುವಾಸಿ ಎನ್ನುವಾಗಿದೆ. ಈ ಪ್ರದೇಶದ ಹಲವು ಕಾರ್ಖಾನೆಗಳ ರಾಸಾಯನಿಕ ಕಲುಷಿತ ನೀರು ಹಾಗು ಇತರೇ ತ್ಯಾಜ್ಯಗಳು ಬೆಳ್ಳಂದೂರು ಕೆರೆಗೆ ಬಂದು ಸೇರುವುದರಿಂದ ಕೆರೆಯ ನೀರು ಹೆಚ್ಚು ಮಲಿನವಾಗಿದೆ. ಆದರಿಂದ ಜನರಲ್ಲಿ ಜಲ ಮಾಲಿನ್ಯದ ಕುರಿತು ಜಾಗೃತಿ ಮೂಡಿಸಲು ನಟಿ ರಶ್ಮಿಕಾ ಮಂದಣ್ಣ ಬೆಳ್ಳಂದೂರು ಕೆರೆಯಲ್ಲಿ ಅಂಡರ್‍ವಾಟರ್ ಫೋಟೋಶೂಟ್ ಮಾಡಿಸಿದ್ದಾರೆ.

    ರಶ್ಮಿಕಾ ಅವರ ಫೋಟೋಶೂಟ್ ಅನ್ನು ಸನ್ಮತಿ ಡಿ. ಪ್ರಸಾದ್ ಅವರು ನಿರ್ದೇಶಿಸಿದ್ದಾರೆ. ಅಂಡರ್ ವಾಟರ್ ಫೋಟೋಶೂಟ್ ಮಾಡಿಸುವ ಮೊದಲು ನನಗೆ ಬೆಳ್ಳಂದೂರು ಕೆರೆಯ ಪರಿಸ್ಥಿತಿ ತಿಳಿದಿರಲಿಲ್ಲ. ಈಗ ಬೆಳ್ಳಂದೂರು ಕೆರೆ ಇರುವ ಸ್ಥಿತಿಗೆ ಮುಂದೆ ಬೇರೆ ಕೆರೆಗಳು ಬರಬಹುದು ಎಂದು ರಶ್ಮಿಕಾ ತಮ್ಮ ಫೋಟೋ ಜೊತೆಗೆ ಟ್ವೀಟ್ ಮಾಡಿದ್ದಾರೆ.

    ಹೆಚ್ಚಿನ ಪ್ರಮಾಣದಲ್ಲಿ ಕಾರ್ಖಾನೆಯ ರಾಸಾಯನಿಕಗಳು ಬೆಳ್ಳಂದೂರು ಕೆರೆಗೆ ಸೇರುತ್ತಿದೆ. ಹಿಂದೆ ಇದರಿಂದಲೇ ಕೆರೆಗೆ ಬೆಂಕಿ ಹತ್ತಿಕೊಂಡಿತ್ತು.

    ಎನ್‍ಜಿಟಿಯಿಂದ ದಂಡ:
    ಬೆಳ್ಳಂದೂರು ಕೆರೆ ಮಾಲಿನ್ಯ ವಿಚಾರಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ(ಎನ್‍ಜಿಟಿ) ಡಿಸೆಂಬರ್ 6 ರಂದು ಮಾಲಿನ್ಯ ನಿಯಂತ್ರಿಸುವಲ್ಲಿ ವಿಫಲವಾದ ರಾಜ್ಯ ಸರ್ಕಾರಕ್ಕೆ 50 ಕೋಟಿ ಬಿಬಿಎಂಪಿಗೆ 25 ಕೋಟಿ ರೂಪಾಯಿ ದಂಡ ವಿಧಿಸಿ ತೀರ್ಪು ಪ್ರಕಟಿಸಿತ್ತು.

    ನ್ಯಾ. ಆದರ್ಶ ಕುಮಾರ್ ಗೊಯಲ್ ನೇತೃತ್ವದ ಪೀಠ, ರಾಜ್ಯ ಸರ್ಕಾರ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ವಿಧಿಸಿದ ದಂಡವನ್ನು ಕೇಂದ್ರ ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ನೀಡಬೇಕು. ಅಲ್ಲದೆ 500 ಕೋಟಿ ಬೆಳ್ಳಂದೂರು, ವರ್ತೂರು ಹಾಗೂ ಅಗರ ಕೆರೆ ಅಭಿವೃದ್ಧಿಗೆ ಮೀಸಲು ನಿಧಿಗೆ ನೀಡಲು ಸೂಚಿಸಿದ್ದು ಆ ಹಣವನ್ನು ಕೆರೆ ಸಂರಕ್ಷಣೆಗೆ ಬಳಸಿಕೊಳ್ಳಲು ಆದೇಶಿಸಿದೆ.

    ಇನ್ಮುಂದೆ ಕೆರೆ ಮತ್ತೆ ಕಲುಷಿತಗೊಂಡರೆ ಅದಕ್ಕೆ ಅಧಿಕಾರಿಗಳೇ ಹೊಣೆಯಾಗಲಿದ್ದಾರೆ. ಅಲ್ಲದೆ, ಆ ವಿಷಯವನ್ನು ಅಧಿಕಾರಿಗಳ ಕೆರಿಯರ್ ರೆಕಾರ್ಡ್ ನಲ್ಲಿ ಬರೆಯಲು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಆದೇಶದಲ್ಲಿ ತಿಳಿಸಿತ್ತು.

    ಬೆಳ್ಳಂದೂರು ಕೆರೆ ರಕ್ಷಣೆ ಆಗಿಲ್ಲ. ರಾಜ್ಯ ಸರ್ಕಾರ, ಬಿಬಿಎಂಪಿಯಿಂದ ನಿರ್ಲಕ್ಷ್ಯ ವಹಿಸಲಾಗುತ್ತಿದೆ. ರಾಜಕಾಲುವೆ ಅತಿಕ್ರಮಣ ತಡೆಯುವಲ್ಲಿ ವಿಫಲವಾಗಿದೆ. ಹೀಗಾಗಿ ಜಲಮಾಲಿನ್ಯ ಮಾಡುವುದು ಅಪರಾಧವಾಗಿದೆ. ಘನತ್ಯಾಜ್ಯ ನಿರ್ವಹಣೆ ಸ್ಥಳೀಯ ಆಡಳಿತದ ಕರ್ತವ್ಯವಾಗಿದೆ. ಇದನ್ನು ಸಂವಿಧಾನದಲ್ಲಿ ಕೂಡ ಹೇಳಲಾಗಿದೆ. ಹೀಗಿದ್ದರೂ ರಾಜ್ಯ ಸರ್ಕಾರ, ಬಿಬಿಎಂಪಿ ಸಂಪೂರ್ಣ ವಿಫಲವಾಗಿದೆ ಅಂತ ಅಧಿಕಾರಿಗಳ ಮೇಲೂ ಎನ್ ಜಿಟಿ ಕಿಡಿಕಾರಿತ್ತು.

    ಜವಾಬ್ದಾರಿ ನಿಭಾಯಿಸದಿದ್ದರೆ ಮುಂದೆ ಅಧಿಕಾರಿಗಳೇ ಹೊಣೆಯಾಗಲಿದ್ದಾರೆ. ಬೆಳ್ಳಂದೂರು ಕೆರೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು. ಅದಕ್ಕಾಗಿ ಉನ್ನತ ಸಮಿತಿ ನೀಡಿರುವ ಶಿಫಾರಸ್ಸು ಪಾಲಿಸಬೇಕು. ಕೆರೆ ಒತ್ತುವರಿಯನ್ನು ತೆರವುಗೊಳಿಸಬೇಕು. ಕೆರೆಗಳ ಅಭಿವೃದ್ಧಿ ಸಂಬಂಧ ಎನ್ ಜಿಟಿ ಆದೇಶ ಪಾಲನೆಗಾಗಿ ನಿವೃತ್ತಿ ನ್ಯಾ. ಸಂತೋಷ್ ಹೆಗಡೆ ನೇತೃತ್ವದ ಸಮಿತಿ ರಚನೆ ಮಾಡುವಂತೆ ಸೂಚಿಸಲಾಗಿದೆ. ವೆಬ್‍ಸೈಟ್ ರಚಿಸಲು ಸಮಿತಿಗೆ ನಿರ್ದೇಶನ ನೀಡಲಾಗಿದೆ. ಈ ಮೂಲಕ ಜನರು ವೆಬ್ ಸೈಟ್ ನಲ್ಲಿ ದೂರು, ಸಲಹೆ ನೀಡಬಹುದು ಎಂದು ಆದೇಶದಲ್ಲಿ ತಿಳಿಸಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶಾಲೆಯಲ್ಲಿ ಪಾಠ ಸ್ಟುಡಿಯೋದಲ್ಲಿ ಗಾನ – ಸ್ವಂತ ಖರ್ಚಿನಲ್ಲಿ ಜನ ಜಾಗೃತಿ!

    ಶಾಲೆಯಲ್ಲಿ ಪಾಠ ಸ್ಟುಡಿಯೋದಲ್ಲಿ ಗಾನ – ಸ್ವಂತ ಖರ್ಚಿನಲ್ಲಿ ಜನ ಜಾಗೃತಿ!

    ಕೊಪ್ಪಳ: ಶಾಲೆಯಲ್ಲಿ ಪಾಠ ಮಾಡುವುದರ ಜೊತೆಗೆ ರೈತರಲ್ಲಿ ಆತ್ಮಸ್ಥೈರ್ಯ ತುಂಬುವ ಹಲವಾರು ಗೀತೆಗಳನ್ನ ರಚಿಸಿ ಕೊಪ್ಪಳದ ವ್ಯಕ್ತಿಯೊಬ್ಬರು ಅದಕ್ಕೆ ತಾವೇ ದನಿಯಾಗಿದ್ದಾರೆ.

    ಕೆಲ ವರ್ಷ ಶಿಕ್ಷಕನಾಗಿ ಕೆಲಸ ಮಾಡಿ ಬಳಿಕ ಸಮೂಹ ಸಂಪನ್ಮೂಲ ವಿಭಾಗದ ನೌಕರನಾಗಿರುವ ಹನಮಂತಪ್ಪ ಕುರಿ ತನ್ನ ಸ್ವಂತ ಖರ್ಚಿನಲ್ಲಿ ಹಾಡು ತಯಾರಿಸಿ ಜನರಲ್ಲಿ, ಮಕ್ಕಳಲ್ಲಿ ಹಾಗೂ ವ್ಯವಸ್ಥೆಗೆ ತನ್ನದೆ ಹಾಡಿನ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ.

    ಮೂಲತಃ ಕೊಪ್ಪಳ ತಾಲೂಕಿನ ಬೋಚನಹಳ್ಳಿ ನಿವಾಸಿಯಾಗಿರುವ ಹನಮಮತಪ್ಪ ಕುರಿ ಅವರು ಜಿಲ್ಲೆಯ ಬಹದ್ದೂರ ಬಂಡಿ ಸಮೂಹ ಸಂಪನ್ಮೂಲ ವ್ಯಕ್ತಿಯಾಗಿ ಕೆಲಸ ಮಾಡುತ್ತಿದ್ದಾರೆ. ಸರ್ಕಾರಿ ನೌಕರಿ ಮಾತ್ರ ಮಾಡದೇ ಹನಮಂತಪ್ಪ ತಮ್ಮ ಹಾಡಿನ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಬಿಡುವಿನ ಸಮಯದಲ್ಲಿ ತಾವೇ ಹಾಡು ರಚಿಸಿ ಅದಕ್ಕೆ ಧ್ವನಿಯಾಗಿದ್ದಾರೆ. ಮಕ್ಕಳಿಗಾಗಿ ಜನಗಣತಿ ಗೀತೆಗಳು, ಚುನಾವಣೆ ಜಾಗೃತಿ ಗೀತೆಗಳು, ರೈತರ ಆತ್ಮಹತ್ಯೆಯುನ್ನ ತಡೆಗಟ್ಟುವ ಹಾಡು ಹೀಗೆ ಸುಮಾರು 25 ಕ್ಕೂ ಹೆಚ್ಚು ಗೀತೆಗಳನ್ನು ರಚಿಸಿ ಹಾಡಿದ್ದಾರೆ. ಅದರಲ್ಲೂ ರೈತರ ಬಗ್ಗೆ ಹಾಡು ಬರೆದು ಅದನ್ನ ವಿಡಿಯೋ ಮಾಡಿ ಸಾಮಾಜಿಕ ಜಾಲ ತಾಣದಲ್ಲಿ ಹರಿಬಿಟ್ಟಾಗ ಹನಮಂತಪ್ಪ ಕುರಿ ಅವರ ಕೆಲಸ ಜನರ ಮನಗೆದ್ದಿದೆ.

    ಹನಮಂತಪ್ಪ ಸುಮಾರು 12 ವರ್ಷಗಳಿಂದ ಶಿಕ್ಷಣ ಇಲಾಖೆಯಲ್ಲಿ ನೌಕರನಾಗಿ ಕೆಲಸ ಮಾಡುತ್ತಿದ್ದಾರೆ. ತಾಯಿ ಆಸೆಯ ಮೇರೆಗೆ ಹನಮಂತಪ್ಪ ಕುರಿ ಇಲಾಖೆಯ ತನ್ನ ಕರ್ತವ್ಯದ ಜೊತೆ ಜನಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಮಕ್ಕಳ ದಾಖಲಾತಿ ಹೆಚ್ಚಳಕ್ಕೆ ಬರೆದ ಹನಮಂತಪ್ಪರ ಗೀತೆಗಳನ್ನ ರಾಜ್ಯದ ಬೇರೆ ಬೇರೆ ಶಾಲೆಗಳಲ್ಲಿ ಬಳಸಿಕೊಳ್ಳಲಾಗುತ್ತಿದೆ.

    ತನಗೆ ಬರುವ ಸಂಬಳದಲ್ಲಿ ಸುಮಾರು 50 ಸಾವಿರ ಹಣವನ್ನು ಖರ್ಚು ಮಾಡಿ ಗೀತೆಗಳನ್ನ ರಚಿಸಿದ್ದಾರೆ. ಶಿಕ್ಷಕರಿಗೆ ಕಲಿಸಿದ ಗುರುವಿಗೆ ಹಾಡಿನ ಮೂಲಕ ಹನಮಂತಪ್ಪ ಕುರಿ ಗುರುನಮನ ಸಲ್ಲಸಿದ್ದಾರೆ. ಇದರ ಜೊತೆಗೆ ನೂತನ ಪಿಂಚಣಿ ಯೋಜನೆಯನ್ನು ರದ್ದು ಮಾಡುವಂತೆ ಆಗ್ರಹಿಸಿ ರಾಜ್ಯದ ಎಲ್ಲಾ ನೌಕರರ ಪರ ಹಾಡು ಬರೆದು ರಾಜ್ಯಾದ್ಯಂತ ಮೆಚ್ಚುಗೆ ಗಳಿಸಿದ್ದಾರೆ.

    ಶಿಕ್ಷಕ ಹಾಗೂ ಹಾಡುಗಾರನಾಗಿ ಹನಮಂತಪ್ಪ ಮೋಡಿ ಮಾಡುತ್ತಿದ್ದಾರೆ. ಸ್ವತಃ ಹಾಡು ರಚಿಸಿ ಸಿಂದನೂರಿನ ಸ್ಟುಡಿಯೋ ಒಂದರಲ್ಲಿ ತಾವೇ ಧ್ವನಿ ನೀಡಿ ರೆಕಾರ್ಡ್ ಮಾಡಿದ್ದಾರೆ. ನೌಕರಿಯ ಜೊತೆಗೆ ಇಂತಹ ಸಾಮಾಜಿಕ ಕಳಕಳಿಯಲ್ಲಿ ತೊಡಗಿರೋ ಶಿಕ್ಷಕರನ್ನ ಸರ್ಕಾರ ಗುರುತಿಸಬೇಕು ಅನ್ನೋದು ಹನಮಂತಪ್ಪ ಅವರ ಸಹುದ್ಯೋಗಿಗಳ ಅಭಿಲಾಶೆಯಾಗಿದೆ.

    ಶಿಕ್ಷಕರೆಂದರೆ ಮಕ್ಕಳಿಗೆ ಪಾಠ ಮಾಡಿ ಮನೆಗೆ ಹೋಗ್ತಾರೆ ಎನ್ನುವರ ಮಧ್ಯೆ ಹನಮಂತಪ್ಪ ಕುರಿ ಭಿನ್ನವಾಗಿದ್ದಾರೆ. ಕಡು ಬಡತನ ಕುಟಂಬದಲ್ಲಿ ಹುಟ್ಟಿ ತನ್ನ ಸಂಬಳದ ಹಣದಲ್ಲಿ ಜನರ ಜಾಗೃತಿಗಾಗಿ ಮೀಸಲಿಟ್ಟಿದ್ದು ನಿಜಕ್ಕೂ ಶ್ಲಾಘನೀಯ ಕೆಲಸವಾಗಿದೆ.

    https://www.youtube.com/watch?v=zZjQiJ8his8

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv