Tag: ಜಗಳ

  • ಬಸ್ ನಿಲ್ದಾಣದಲ್ಲೇ ಕಾಲೇಜು ವಿದ್ಯಾರ್ಥಿನಿಯರ ಹೊಡೆದಾಟ

    ಬಸ್ ನಿಲ್ದಾಣದಲ್ಲೇ ಕಾಲೇಜು ವಿದ್ಯಾರ್ಥಿನಿಯರ ಹೊಡೆದಾಟ

    ತುಮಕೂರು: ಕಾಲೇಜು ವಿದ್ಯಾರ್ಥಿನಿಯರಿಬ್ಬರು ಬಸ್ ನಿಲ್ದಾಣದಲ್ಲೇ ಜಗಳ ಮಾಡಿಕೊಂಡು ಬಳಿಕೊಂಡು ಪರಸ್ಪರ ಹೊಡೆದಾಡಿಕೊಂಡಿರುವ ಘಟನೆ ನಗರದ ಕೆಎಸ್‍ಆರ್ ಟಿಸಿ ಬಸ್ ನಿಲ್ದಾಣದಲ್ಲಿ ನಡೆದಿದೆ.

    ಇಂದು ಮಧ್ಯಾಹ್ನ 3:30ರ ಸುಮಾರಿಗೆ ಘಟನೆ ನಡೆದಿದ್ದು, ಸಾರ್ವಜನಿಕ ಎದುರೇ ಜಗಳವಾಡಿ ಕೊನೆಗೆ ಒಬ್ಬರಿಗೊಬ್ಬರು ಹೊಡೆದಾಡಿಕೊಂಡಿದ್ದಾರೆ. ಒಬ್ಬರಿಗೊಬ್ಬರು ಜುಟ್ಟು ಹಿಡಿದುಕೊಂಡು ನೂಕಾಟ ತಳ್ಳಾಟ ಮಾಡಿಕೊಂಡು ಕಿತ್ತಾಟ ನಡೆಸಿದ್ದು, ಈ ದೃಶ್ಯಗಳು ಸ್ಥಳೀಯರ ಮೊಬೈಲ್‍ನಲ್ಲಿ ಸೆರೆಯಾಗಿದೆ.

    ವಿಡಿಯೋ ವೈರಲ್: ವಿದ್ಯಾರ್ಥಿನಿಯರು ಜಗಳ ನಡೆಸುತ್ತಿರುವ ವಿಡಿಯೋವನ್ನು ಸ್ಥಳದಲ್ಲಿದ್ದವರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಅಲ್ಲದೇ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣ ಹಾಗೂ ವಾಟ್ಸಾಪ್ ಗಳಲ್ಲಿ ಹರಿಬಿಟ್ಟಿದ್ದು, ಸಾಕಷ್ಟು ವೈರಲ್ ಆಗಿದೆ. ‘ಏನ್ ಗುರು ನಮ್ ತುಮಕೂರಲ್ಲಾ?, ನಾವಿದ್ದಾಗ ಇಂತಹದ್ಯಾವದೂ ಕಾಣಲಿಲ್ಲ.’ ಎಂದು ಸಾಮಾಜಿಕ ಜಾಲತಾಣದಲ್ಲಿ ಕೆಲವರು ವಿಡಿಯೋ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ ವಿದ್ಯಾರ್ಥಿನಿಯರು ಯಾವ ಕಾರಣಕ್ಕೆ ಜಗಳ ಮಾಡಿಕೊಂಡಿದ್ದಾರೆ ಎಂಬುವುದು ತಿಳಿದು ಬಂದಿಲ್ಲ. ವಿದ್ಯಾರ್ಥಿನಿರ ಜಗಳ ಕಂಡ ಕೆಲ ಹಿರಿಯರು ಇಬ್ಬರಿಗೂ ಬುದ್ಧಿವಾದ ಹೇಳಿ ಸ್ಥಳದಿಂದ ಕಳುಹಿಸಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಇಬ್ಬರೂ ಒಂದೇ ಕಾಲೇಜು ವಿದ್ಯಾರ್ಥಿನಿಯರು ಎನ್ನಲಾಗಿದೆ.

  • ಜನ ಸಂಚಾರ ಕಡಿಮೆಯಾಗ್ತಿದ್ದಂತೆ ನೇಣಿಗೆ ಶರಣು- ಗೋವಾದಲ್ಲಿ ತುಮಕೂರು ಯುವಕ ಆತ್ಮಹತ್ಯೆ

    ಜನ ಸಂಚಾರ ಕಡಿಮೆಯಾಗ್ತಿದ್ದಂತೆ ನೇಣಿಗೆ ಶರಣು- ಗೋವಾದಲ್ಲಿ ತುಮಕೂರು ಯುವಕ ಆತ್ಮಹತ್ಯೆ

    ತುಮಕೂರು: ಗೋವಾದ ಕಲ್ಲೊಂಗೋಟ್ ಬೀಚಿನಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ತುಮಕೂರಿನ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

    ತುಮಕೂರು ಬೆಳಗುಂಬ ಗ್ರಾಮದ ವಡ್ಡರಹಳ್ಳಿ ನಿವಾಸಿ ವೆಂಕಟೇಶ್ (20) ಮೃತ ಯುವಕ. ಕಳೆದ ಶುಕ್ರವಾರದಂದು ತಾಯಿ ಜೊತೆ ಜಗಳಮಾಡಿಕೊಂಡು ಮನೆ ಬಿಟ್ಟು ನೇರವಾಗಿ ಗೋವಾಕ್ಕೆ ಹೋಗಿದ್ದನು. ಅಲ್ಲಿ ಶನಿವಾರ ಸಂಜೆ ಕಲ್ಲೊಂಗೋಟ್ ಬೀಚಲ್ಲಿ ಕೆಲ ಕಾಲ ಓಡಾಡಿ ನಂತರ ರಾತ್ರಿಯಾಗುತಿದ್ದಂತೆ ಜನರ ಸಂಚಾರ ಕಡಿಮೆಯಾದಾಗ ವೆಂಕಟೇಶ್ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಪಿಯುಸಿ ಓದಿದ್ದ ವೆಂಕಟೇಶ್ ಬೆಂಗಳೂರಿನಲ್ಲಿ ದ್ವಿಚಕ್ರ ವಾಹನ ಶೋ ರೂಮ್‍ವೊಂದರಲ್ಲಿ ಸೆಲ್ಸ್ ಮ್ಯಾನ್ ಆಗಿ ಕೆಲಸ ಮಾಡುತಿದ್ದ ಎನ್ನಲಾಗಿದೆ. ಕ್ಷುಲಕ ಕಾರಣಕ್ಕೆ ಮನೆಯಲ್ಲಿ ಜಗಳ ನಡೆದಿದೆ. ಇದರಿಂದಲೇ ಮೃತ ವೆಂಕಟೇಶ್ ಮನೆ ಬಿಟ್ಟು ಹೋಗಿದ್ದನು. ಸದ್ಯಕ್ಕೆ ಆತ್ಮಹತ್ಯೆ ವಿಷಯ ತಿಳಿದು ಕುಟುಂಬದವರು ಗೋವಾಕ್ಕೆ ಹೋಗಿದ್ದು, ಮೃತದೇಹವನ್ನು ತಮ್ಮ ಗ್ರಾಮಕ್ಕೆ ತರುತ್ತಿದ್ದಾರೆ.

  • ಗಂಡನ 2ನೇ ಪತ್ನಿಯ ಕತ್ತನ್ನು ಕಡಿದು ಪರಾರಿಯಾದ್ಳು!

    ಗಂಡನ 2ನೇ ಪತ್ನಿಯ ಕತ್ತನ್ನು ಕಡಿದು ಪರಾರಿಯಾದ್ಳು!

    ಮಡಿಕೇರಿ: ಇಬ್ಬರು ಪತ್ನಿಯರ ನಡುವೆ ಕಲಹ ಏರ್ಪಟ್ಟು ಮೊದಲನೆಯ ಪತ್ನಿ 2ನೇ ಪತ್ನಿಯ ಕತ್ತನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿರುವ ಘಟನೆ ಕೊಡಗು ಜಿಲೆಯ ವಿರಾಜಪೇಟೆ ತಾಲೂಕಿನ ಅರೆಕಾಡು ಗ್ರಾಮದಲ್ಲಿ ನಡೆದಿದೆ.

    ವಶಿಕಾ ದೇವಿ (27) ಕೊಲೆಯಾದ ಮಹಿಳೆ. ಮೂಲತಃ ಜಾರ್ಖಂಡ್ ರಾಜ್ಯದ ದಯಾನಂದ್‍ನ ಮೊದಲನೆಯ ಪತ್ನಿ ಆಶಿಕಾ ಗುಪ್ತ ಕೊಲೆ ಮಾಡಿ ಪರಾರಿಯಾಗಿದ್ದಾಳೆ.

    ಏನಿದು ಪ್ರಕರಣ?
    ದಯಾನಂದ್ ಕಳೆದ 7 ವರ್ಷಗಳ ಹಿಂದೆ ಆಶಿಕಾ ಗುಪ್ತಳನ್ನು ಮದುವೆಯಾಗಿದ್ದನು. ಒಂದು ವರ್ಷದ ನಂತರ ವಶಿಕಾ ದೇವಿಯನ್ನು ಪ್ರೀತಿಸಿ ವಿವಾಹವಾಗಿದ್ದಾನೆ. ಮೊದಲನೆಯ ಪತ್ನಿಗೆ ಒಂದು ಮಗು ಹಾಗೂ 2ನೇ ಪತ್ನಿಗೆ ಕೂಡ ಇಬ್ಬರು ಮಕ್ಕಳಿದ್ದಾರೆ. ಇಬ್ಬರು ಹೆಂಡತಿ ಮತ್ತು ಮೂರು ಮಕ್ಕಳೊಂದಿಗೆ ದಯಾನಂದ್ ಸಿದ್ದಾಪುರ ಸಮೀಪದ ಬಳಂಜಿಗೆರೆ ಖಾಸಗಿ ತೋಟದ ಲೈನ್ ಮನೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ವಾಸವಾಗಿದ್ದನು.

    ಮೂವರು ಜೊತೆಯಲ್ಲಿ ಕಾಫಿ ತೋಟದಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದರು. ಕೆಲ ದಿನಗಳಿಂದ ಇಬ್ಬರು ಹೆಂಡತಿಯರ ನಡುವೆ ವೈಮನಸ್ಸು ಉಂಟಾಗಿ ಸಣ್ಣ ಪುಟ್ಟ ಮಾತಿನ ಕಲಹಗಳು ಏರ್ಪಟ್ಟಿತು ಎನ್ನಲಾಗಿದೆ. ಶನಿವಾರ ಪತಿಯೊಂದಿಗೆ ಇಬ್ಬರು ತೋಟ ಕೆಲಸಕ್ಕೆ ತೆರಳಿ ಲೈನ್ ಮನೆಗೆ ಹಿಂದಿರುಗುವಾಗ ಇಬ್ಬರ ನಡುವೆ ಮಾತಿನ ಚಕಮಕಿ ಏರ್ಪಟ್ಟಿದೆ.

    ಆಗ ಆಶಿಕಾ ಗುಪ್ತ, ವಶಿಕಾ ದೇವಿಯ ಕುತ್ತಿಗೆಯನ್ನು ಕತ್ತಿಯಿಂದ ಕಡಿದು ಪರಾರಿಯಾಗಿದ್ದಾಳೆ. ತೀವ್ರ ರಕ್ತಸ್ರಾವದಿಂದ ವಶಿಕಾ ಸ್ಥಳದಲ್ಲೇ ಕುಸಿದು ಮೃತಪಟ್ಟಿದ್ದಾಳೆ. ದಯಾನಂದ್ ತೋಟದಿಂದ ಕೆಲಸ ಮುಗಿಸಿ ಮನೆಗೆ ಬಂದು ನೋಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಮಾಹಿತಿ ತಿಳಿದು ಸಿದ್ದಾಪುರ ಠಾಣಾಧಿಕಾರಿ ಬೋಜಪ್ಪ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಕುಡಿದ ಅಮಲಿನಲ್ಲಿ ಜಗಳ- ಕಲ್ಲಿನಿಂದ ಜಜ್ಜಿ ವೃದ್ಧನ ಕೊಲೆ

    ಕುಡಿದ ಅಮಲಿನಲ್ಲಿ ಜಗಳ- ಕಲ್ಲಿನಿಂದ ಜಜ್ಜಿ ವೃದ್ಧನ ಕೊಲೆ

    ಬಾಗಲಕೋಟೆ: ಕುಡಿದ ನಶೆಯಲ್ಲಿ ಜಗಳವಾಡಿ ವ್ಯಕ್ತಿಯೋರ್ವ ಕ್ಷುಲ್ಲಕ ಕಾರಣಕ್ಕಾಗಿ ಕಲ್ಲಿನಿಂದ ಜಜ್ಜಿ ವೃದ್ಧನ ಕೊಲೆ ಮಾಡಿರುವ ಭೀಕರ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.

    ಕಟ್ಟಿಗೆ ಅಡ್ಡೆಯಲ್ಲಿ ವಾಚ್ ಮನ್ ಆಗಿ ಕೆಲಸ ಮಾಡುತ್ತಿದ್ದ ನಾಗಪ್ಪ ಅಂಬಿಗೇರ(60) ಕೊಲೆಯಾದ ವ್ಯಕ್ತಿ. ಆರೋಪಿಯನ್ನು ಶಂಕರ್ ಎಂದು ಗುರುತಿಸಲಾಗಿದೆ. ನಗರದ ಹಳೆ ಬಸ್ ನಿಲ್ದಾಣದ ಹಿಂಬದಿಯ ಬುರ್ಲಿ ಕಾಂಪ್ಲೆಕ್ಸ್ ಆವರಣದಲ್ಲಿ ಈ ಘಟನೆ ನಡೆದಿದೆ. ರಾತ್ರಿ ಕುಡಿದ ಅಮಲಿನಲ್ಲಿ ಶಂಕರ್ ಹಾಗೂ ನಾಗಪ್ಪ ಮಧ್ಯೆ ಜಗಳ ನಡೆದಿತ್ತು. ಕುಡಿದ ಅಮಲಿನಲ್ಲಿ ಇಬ್ಬರು ಕೈ, ಕೈ ಮಿಲಾಯಿಸಿದ್ದರು. ಕೊನೆಗೆ ಕ್ಷುಲ್ಲಕ ಕಾರಣಕ್ಕೆ ವಾದ ವಿವಾದ ನಡೆದು, ಶಂಕರ್ ನಾಗಪ್ಪನನ್ನು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

    ಘಟನೆ ನಡೆದ ಸ್ಥಳದಿಂದ ನಾಗಪ್ಪ ಶವವನ್ನ ಸ್ವಲ್ಪ ದೂರದಲ್ಲಿ ಪತ್ತೆಯಾಗಿದೆ. ಕೊಲೆ ಮಾಡಿದ ಬಳಿಕ ಶವವನ್ನು ಆರೋಪಿ ಎಳೆದು ತಂದು ದೂರ ಬಿಸಾಡಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ. ಸ್ಥಳಕ್ಕೆ ಬಾಗಲಕೋಟೆ ಎಸ್‍ಪಿ ಲೋಕೇಶ್ ಜಗಲಾಸರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಬಾಗಲಕೊಟೆ ಶಹರ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆರೋಪಿ ಶಂಕರ್ ನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ನಾಗಪ್ಪನ ಮೃತದೇಹವನ್ನ ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

  • ಮೊಬೈಲ್‍ಗಾಗಿ ರಸ್ತೆಯಲ್ಲೆ ಪ್ರೇಮಿಗಳ ಕಿತ್ತಾಟ

    ಮೊಬೈಲ್‍ಗಾಗಿ ರಸ್ತೆಯಲ್ಲೆ ಪ್ರೇಮಿಗಳ ಕಿತ್ತಾಟ

    ಬೆಂಗಳೂರು: ಒಂದೇ ಒಂದು ಮೊಬೈಲ್‍ಗಾಗಿ ಪ್ರೇಮಿಗಳಿಬ್ಬರು ರಸ್ತೆಯಲ್ಲೆ ಕಿತ್ತಾಡಿಕೊಂಡ ಘಟನೆ ಬೆಂಗಳೂರಿನ ಆಲಿ ಆಸ್ಕರ್ ರಸ್ತೆಯಲ್ಲಿ ನಡೆದಿದೆ.

    ಪ್ರೇಮಿಗಳು ಊಟಕ್ಕೆಂದು ಹೋಟೆಲ್‍ಗೆ ತೆರಳಿದ್ದರು. ಈ ವೇಳೆ ಇಬ್ಬರ ನಡುವೆ ಗಲಾಟೆಯಾಗಿದೆ. ಯುವಕ, ಯುವತಿಗೆ ಗೊತ್ತಾಗದಂತೆ ಮೊಬೈಲಿನಲ್ಲಿ ವ್ಯವಹಾರ ನಡೆಸುತ್ತಿದ್ದನು. ಯುವತಿಗೆ ಮೊದಲಿನಿಂದಲೂ ಯುವಕನ ಮೇಲೆ ಅನುಮಾನ ಇತ್ತು. ಹಾಗಾಗಿ ಪದೇ ಪದೇ ಯುವಕನ ಮೊಬೈಲ್ ಕಿತ್ತುಕೊಳ್ಳುವ ಪ್ರಯತ್ನ ಮಾಡಿದ್ದಾಳೆ. ಆದರೆ ಮೊಬೈಲ್ ಕಸಿದುಕೊಳ್ಳಲು ಸಾಧ್ಯವಾಗಿರಲಿಲ್ಲ. ಇದನ್ನೂ ಓದಿ: ನಡು ರಸ್ತೆಯಲ್ಲೇ ಯುವಕನಿಂದ ಪ್ರಿಯತಮೆ ಮೇಲೆ ಹಲ್ಲೆ!

    ಯುವತಿಗೆ ಅನುಮಾನ ಬಂದು ಯುವಕನ ಮೊಬೈಲ್ ಕಿತ್ತುಕೊಂಡು ಹೊರಗೆ ಬಂದಿದ್ದಾಳೆ. ಯುವತಿ ಮೊಬೈಲ್ ಕಿತ್ತುಕೊಂಡು ಬಂದ ತಕ್ಷಣ ಯುವಕ ಕೋಪಗೊಂಡನು. ಬಳಿಕ ಮೊಬೈಲ್‍ಗಾಗಿ ಪ್ರೇಮಿಗಳಿಬ್ಬರು ರಸ್ತೆಯಲ್ಲೇ ಎಳೆದಾಡಿಕೊಂಡಿದ್ದಾರೆ. ಇಬ್ಬರು ಕಿತ್ತಾಡಿದ ಬಳಿಕ ಯುವಕನ ಕೈಗೆ ಮೊಬೈಲ್ ಸಿಕ್ಕಿತ್ತು. ಮೊಬೈಲ್ ಸಿಕ್ಕ ಕೂಡಲೇ ಯುವಕ ಯುವತಿಯನ್ನು ರಸ್ತೆಯಲ್ಲೇ ಬಿಟ್ಟು ಪರಾರಿಯಾಗಿದ್ದಾನೆ.

    ಯುವಕನ ಮೊಂಡುತನದಿಂದ ಬೇಸತ್ತ ಯುವತಿ ಕಣ್ಣೀರು ಹಾಕುತ್ತಿದ್ದಳು. ಈ ಬಗ್ಗೆ ಪೊಲೀಸರಿಗೆ ವಿಷಯ ತಿಳಿದಿದ್ದು, ಯುವಕ- ಯುವತಿಯ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.

  • ಕ್ಷುಲಕ ಕಾರಣಕ್ಕೆ ಜಗಳ – ಪರಸ್ಪರ ಬೆಂಕಿ ಹಚ್ಚಿಕೊಂಡು ಸಾವನ್ನಪ್ಪಿದ ಅತ್ತೆ ಸೊಸೆ

    ಕ್ಷುಲಕ ಕಾರಣಕ್ಕೆ ಜಗಳ – ಪರಸ್ಪರ ಬೆಂಕಿ ಹಚ್ಚಿಕೊಂಡು ಸಾವನ್ನಪ್ಪಿದ ಅತ್ತೆ ಸೊಸೆ

    ತುಮಕೂರು: ಕ್ಷುಲ್ಲಕ ಕಾರಣಕ್ಕೆ ಅತ್ತೆ-ಸೊಸೆ ಜಗಳ ಮಾಡಿಕೊಂಡು ಪರಸ್ಪರ ಬೆಂಕಿ ಹಚ್ಚಿಕೊಂಡು ಇಬ್ಬರೂ ಸಾವನ್ನಪ್ಪಿದ ವಿಲಕ್ಷಣ ಘಟನೆ ತುಮಕೂರು ತಾಲೂಕಿನ ಗಂಗಸದ್ರದಲ್ಲಿ ನಡೆದಿದೆ.

    ಸೊಸೆ ರಾಜೇಶ್ವರಿ (45) ಹಾಗೂ ಅತ್ತೆ ಪಾರ್ವತಮ್ಮ (75) ಮೃತರು. ಇಂದು ಕ್ಷುಲ್ಲಕ ಕಾರಣಕ್ಕೆ ಅತ್ತೆ-ಸೊಸೆ ನಡುವೆ ಜಗಳ ಆರಂಭವಾಗಿದೆ. ಜಗಳವಾಡುತ್ತಾ ತಮ್ಮ ಮನೆಯ ಬಾಗಿಲನ್ನು ಒಳಗಡೆಯಿಂದ ಲಾಕ್ ಮಾಡಿಕೊಂಡು ಮನೆಯಲ್ಲಿದ್ದ ಥಿನ್ನರ್ (ಪೈಂಟ್‍ಗೆ ಬಳಸುವ ವಸ್ತು) ಹಾಕಿಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

    ಪರಸ್ಪರ ಒಬ್ಬರಿಗೊಬ್ಬರು ಥಿನ್ನರ್ ಎರಚಿ ಬೆಂಕಿ ಹಚ್ಚಿಕೊಂಡಿದ್ದಾರೋ ಅಥವಾ ಯಾವ ರೀತಿ ಬೆಂಕಿ ಹಚ್ಚಿಕೊಂಡಿದ್ದಾರೆ ಎನ್ನುವ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ. ಈ ವೇಳೆ ಒಳಗಡೆಯಿಂದ ಇಬ್ಬರ ಕಿರುಚಾಟ, ನೋವು ಸ್ಥಳೀಯರಿಗೆ ಕೇಳಿಸಿದೆ. ಅಲ್ಲದೇ ಹೊಗೆ ಕೂಡ ಬರುತಿತ್ತು ಕಾರಣ ಬಾಗಿಲು ತೆರೆದು ನೋಡಿದಾಗ ಇಬ್ಬರೂ ಸಾವನ್ನಪ್ಪಿದ್ದಾರೆ. ಇದನ್ನು ಓದಿ: ಅತ್ತೆಯ ಜೊತೆಗೆ ಸೊಸೆಯ ಅನೈತಿಕ ಸಂಬಂಧ – ಇಬ್ಬರನ್ನು ಇರಿದು ಕೊಂದ ನಿವೃತ್ತ ಶಿಕ್ಷಕ

    ಪಾರ್ವತಮ್ಮನ ಮಗ ಶಿವಕುಮಾರ್ ಪೈಂಟ್‍ ಕೆಲಸ ಮಾಡಿಕೊಂಡಿದ್ದು, ಪತ್ನಿ ರಾಜೇಶ್ವರಿಯನ್ನು ಮದುವೆಯಾಗಿ ಗಂಗಸಂದ್ರದ ಪತ್ನಿಯ ತವರು ಮನೆಯಲ್ಲಿಯೇ ವಾಸವಿದ್ದರು. ಕಳೆದ ಆರು ತಿಂಗಳ ಹಿಂದೆ ಶಿವಕುಮಾರ್ ತಾಯಿ ಪಾರ್ವತಮ್ಮರನ್ನ ಬೀರನಕಲ್ಕು ಗ್ರಾಮದಿಂದ ಕರೆದುಕೊಂಡು ಹೋಗಿ ಜೊತೆಯಲ್ಲಿ ಇರಿಸಿಕೊಂಡಿದ್ದರು. ಶಿವಕುಮಾರ್ ತನ್ನ ತಾಯಿಯನ್ನು ಕರೆದುಕೊಂಡು ಬಂದ ಕಾರಣ ರಾಜೇಶ್ವರಿ ಪ್ರತಿನಿತ್ಯ ಕಿರಿಕ್ ಮಾಡಿ ಜಗಳವಾಡುತ್ತಿದ್ದರಂತೆ. ಅದು ಇಂದು ವಿಕೋಪಕ್ಕೆ ಹೋಗಿ ಇಬ್ಬರು ಮೃತಪಟ್ಟಿರಬಹದು ಎಂದು ಸ್ಥಳೀಯರು ಶಂಕಿಸಿದ್ದಾರೆ. ಈ ಸಂಬಂಧ ತುಮಕೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮಧ್ಯರಾತ್ರಿ ಪತಿ, ಪತ್ನಿ ನಡುವೆ ಜಗಳ – ಪತ್ನಿಯನ್ನು ಸಮಾಧಾನಿಸಲು ಹೋಗಿ ಇಬ್ರೂ ಆತ್ಮಹತ್ಯೆ

    ಮಧ್ಯರಾತ್ರಿ ಪತಿ, ಪತ್ನಿ ನಡುವೆ ಜಗಳ – ಪತ್ನಿಯನ್ನು ಸಮಾಧಾನಿಸಲು ಹೋಗಿ ಇಬ್ರೂ ಆತ್ಮಹತ್ಯೆ

    – 14 ವರ್ಷಗಳ ಹಿಂದೆ ಪ್ರೀತಿಸಿ ಮದ್ವೆಯಾಗಿದ್ದ ಜೋಡಿ

    ಚಂಢೀಗಡ್: ಕೌಟುಂಬಿಕ ಕಲಹದಿಂದ ಪತಿ-ಪತ್ನಿ ಇಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ರಾತ್ರಿ ಹರಿಯಾಣದ ಯಮುನಾನಗರದಲ್ಲಿ ನಡೆದಿದೆ.

    ನೀರಜ್(37) ಹಾಗೂ ನಿಶಾ (35) ಆತ್ಮಹತ್ಯೆ ಮಾಡಿಕೊಂಡ ದಂಪತಿ. ಬುಧವಾರ ರಾತ್ರಿ ಸುಮಾರು 12 ಗಂಟೆಗೆ ನೀರಜ್ ಹಾಗೂ ನಿಶಾ ನಡುವೆ ಜಗಳ ನಡೆದಿತ್ತು. ಬಳಿಕ ಇಬ್ಬರು ರೈಲಿನ ಮುಂದೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    14 ವರ್ಷಗಳ ಹಿಂದೆ ನೀರಜ್ ಹಾಗೂ ನಿಶಾ ಪ್ರೀತಿಸಿ ಮದುವೆಯಾಗಿದ್ದರು. ನೀರಜ್ ಫೋಟೋಗ್ರಾಫರ್ ಕೆಲಸ ಮಾಡುತ್ತಿದ್ದನು. ಮದುವೆಯಾದ ಬಳಿಕ ಇಬ್ಬರು ಯಮುನಾನಗರದಲ್ಲಿ ವಾಸಿಸುತ್ತಿದ್ದರು. ಈ ದಂಪತಿಗೆ 8 ಹಾಗೂ 14 ವರ್ಷದ ಪುತ್ರರು ಇದ್ದಾರೆ. ಪೋಷಕರ ಪ್ರಕಾರ ಇಬ್ಬರು ಯಾವಾಗಲೂ ಜಗಳವಾಡುತ್ತಿದ್ದರು.

    ಬುಧವಾರ ರಾತ್ರಿ ಕೂಡ ನೀರಜ್ ಹಾಗೂ ನಿಶಾ ನಡುವೆ ಜಗಳವಾಗಿದೆ. ಜಗಳದಿಂದ ಕೋಪಗೊಂಡು ನಿಶಾ ಯಮುನಾನಗರ ರೈಲ್ವೆ ನಿಲ್ದಾಣದ ಹಳಿಗೆ ತಲುಪಿದ್ದಳು. ಆಕೆಯನ್ನು ಸಮಾಧಾನ ಮಾಡಲು ನೀರಜ್ ಹಿಂದೆಯೇ ಹೋದನು. ಬಳಿಕ ಅಲ್ಲಿಯೂ ಇಬ್ಬರ ನಡುವೆ ಜಗಳವಾಗಿದೆ. ಈ ವೇಳೆ ಅಲ್ಲಿಗೆ ಬಂದ ಫಿರೋಜ್‍ಪುರ-ಧನ್‍ಬಾದ್ ಎಕ್ಸ್ ಪ್ರೆಸ್ ರೈಲಿನ ಎದುರು ಜಿಗಿದು ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಈ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ ನಿಶಾ ತಂದೆ ಧನಿರಾಮ್, ಇಬ್ಬರ ನಡುವೆ ಯಾವಾಗಲೂ ಜಗಳವಾಗುತ್ತಿತ್ತು. ಹಾಗಾಗಿ ಅವರಿಬ್ಬರು ಆತ್ಮಹತ್ಯೆಯ ನಿರ್ಧಾರ ತೆಗೆದುಕೊಂಡಿರಬಹುದು. ಎಂದು ಹೇಳಿದ್ದಾರೆ. ಬಳಿಕ ಮಾತನಾಡಿದ ಜಿಆರ್‌ಪಿ ಪೊಲೀಸ್ ಅಧಿಕಾರಿ ಧರ್ಮಪಾಲ್, ಈ ಘಟನೆ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಅವರ ಪೋಷಕರಿಗೆ ಮೃತದೇಹಗಳನ್ನು ರವಾನಿಸಲಾಗಿದೆ.

  • ಹುಡುಗಿಗಾಗಿ ಕಿತ್ತಾಡಿ ಸ್ನೇಹಿತನನ್ನೇ ಕೊಂದ ಯುವಕ

    ಹುಡುಗಿಗಾಗಿ ಕಿತ್ತಾಡಿ ಸ್ನೇಹಿತನನ್ನೇ ಕೊಂದ ಯುವಕ

    ಬೆಂಗಳೂರು: ಹುಡುಗಿ ವಿಚಾರಕ್ಕೆ ಇಬ್ಬರು ಸ್ನೇಹಿತರ ಮಧ್ಯೆ ಜಗಳವಾಗಿ, ಯುವಕನೋರ್ವ ಆತನ ಸ್ನೇಹಿತನನ್ನೇ ಅಮಾನುಷವಾಗಿ ಕೊಲೆ ಮಾಡಿದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

    ಬೆಂಗಳೂರಿನ ಕಾಮಾಕ್ಷಿಪಾಳ್ಯದ ಸಣ್ಣಕ್ಕಿ ಬಯಲಿನಲ್ಲಿ ಈ ಘಟನೆ ನಡೆದಿದೆ. ಪ್ರದೀಪ್(26) ಕೊಲೆಯಾದ ಯುವಕ. ಆತನ ಸ್ನೇಹಿತ ವಿಜಯ್ ಆಲಿಯಾಸ್ ವಿನೋದ್ ಕೊಲೆ ಮಾಡಿದ ಆರೋಪಿ ಎಂದು ಗುರುತಿಸಲಾಗಿದೆ.

    ಭಾನುವಾರ ರಾತ್ರಿ ಶ್ರೀನಗರದಿಂದ ವಿಜಯ್‍ನನ್ನು ನೋಡಲು ಪ್ರದೀಪ್ ಬಂದಿದ್ದನು. ಈ ವೇಳೆ ಇಬ್ಬರ ನಡುವೆ ಹುಡುಗಿ ವಿಚಾರಕ್ಕೆ ಜಗಳ ನಡೆದಿದೆ. ಮಾತಿಗೆ ಮಾತು ಬೆಳೆದು ಜಗಳ ತಾರಕ್ಕಕ್ಕೇರಿ ಕೋಪದಲ್ಲಿ ವಿಜಯ್ ಚಾಕುವಿನಿಂದ ಪ್ರದೀಪ್‍ಗೆ ಇರಿದು ಕೊಲೆ ಮಾಡಿದ್ದಾನೆ.

    ಈ ವಿಚಾರ ತಿಳಿದ ಬಳಿಕ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದು, ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

  • ಕೊಡಲಿಯಿಂದ ಕೊಚ್ಚಿ ಪತ್ನಿಯನ್ನು ಕೊಂದು ಪರಾರಿಯಾದ

    ಕೊಡಲಿಯಿಂದ ಕೊಚ್ಚಿ ಪತ್ನಿಯನ್ನು ಕೊಂದು ಪರಾರಿಯಾದ

    ಗದಗ: ಕುಟುಂಬ ಕಲಹದಿಂದಾಗಿ ಪತಿಯೇ ಪತ್ನಿಯನ್ನು ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಗದಗದಲ್ಲಿ ನಡೆದಿದೆ.

    ಗದಗ ತಾಲ್ಲೂಕಿನ ಮದಗಾನೂರ ಗ್ರಾಮದಲ್ಲಿ ಘಟನೆ ನಡೆದಿದ್ದು, ಶಂಕ್ರವ್ವ ಪೂಜಾರ(23) ಮೃತ ದುರ್ದೈವಿ. ಆರೋಪಿ ಈಶ್ವರಪ್ಪ ಪೂಜಾರ(40) ಪತ್ನಿಯನ್ನು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾನೆ.

    ಈಶ್ವರಪ್ಪ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಬಸಾಪುರ ಮೂಲದವನಾಗಿದ್ದು, ಒಂದು ವಾರದ ಹಿಂದೆ ದಂಪತಿ ನಡುವೆ ಜಗಳ ನಡೆದಿತ್ತು. ಇದೇ ಕಾರಣಕ್ಕೆ ಪತ್ನಿ ಶಂಕ್ರವ್ವ ಪತಿ ಬಿಟ್ಟು ತವರು ಮನೆಗೆ ಬಂದಿದ್ದಳು. ಇದೆಲ್ಲ ಘಟನೆ ನಡೆದ ನಂತರ ಹಿರಿಯರ ಸಮ್ಮುಖದಲ್ಲಿ ನ್ಯಾಯ ಪಂಚಾಯಿತಿ ಮಾಡುವ ಮೂಲಕ ಸರಿಪಡಿಸಲಾಗಿತ್ತು. ಆದರೂ ದ್ವೇಷ ಬಿಡದ ಪತಿ, ತವರು ಮನೆಯಲ್ಲಿದ್ದ ಪತ್ನಿಯನ್ನು ಹುಡುಕಿಕೊಂಡು ಬಂದಿದ್ದಾನೆ.

    ಮನೆಯಲ್ಲಿ ಯಾರೂ ಇಲ್ಲದ ವೇಳೆ ಈಶ್ವರಪ್ಪ ಪತ್ನಿಯನ್ನು ಕೊಲೆಗೈದು ಪರಾರಿಯಾಗಿದ್ದಾನೆ. ಘಟನಾ ಸ್ಥಳಕ್ಕೆ ಗದಗ ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗದಗ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

  • ನಡತೆ ಸರಿಯಿಲ್ಲವೆಂದು ಶಂಕಿಸಿ ಪತ್ನಿಗೆ 30ಕ್ಕೂ ಹೆಚ್ಚು ಬಾರಿ ಇರಿದ!

    ನಡತೆ ಸರಿಯಿಲ್ಲವೆಂದು ಶಂಕಿಸಿ ಪತ್ನಿಗೆ 30ಕ್ಕೂ ಹೆಚ್ಚು ಬಾರಿ ಇರಿದ!

    ಮಡಿಕೇರಿ: ಪತ್ನಿಯ ನಡತೆ ಸರಿಯಿಲ್ಲವೆಂದು ಅನುಮಾನ ಪಟ್ಟು, ಜಗಳವಾಡಿ 30ಕ್ಕೂ ಅಧಿಕ ಬಾರಿ ಚಾಕುವಿನಿಂದ ಇರಿದು ಬರ್ಬರವಾಗಿ ಪತಿಯೇ ಪತ್ನಿಯನ್ನು ಕೊಲೆಗೈದ ಘಟನೆ ಮಡಿಕೇರಿಯಲ್ಲಿ ನಡೆದಿದೆ.

    ಶನಿವಾರ ರಾತ್ರಿ ಮಡಿಕೇರಿ ನಗರದ ಹೊಸ ಬಡಾವಣೆಯಲ್ಲಿ ಈ ಭೀಕರ ಕೃತ್ಯ ನಡೆದಿದೆ. ಹೊಸ ಬಡಾವಣೆ ನಿವಾಸಿ ಜುಬೈದ(25) ಮೃತ ದುರ್ದೈವಿ. ಜುಬೈದ ಪತಿ ಶರೀಫ್(27) ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ಏಳು ವರ್ಷದಿಂದ ಸಂಸಾರ ಮಾಡಿಕೊಂಡು ಬಂದಿದ್ದ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಪತಿ ಹಾಗೂ ಮಕ್ಕಳೊಂದಿಗೆ ಜುಬೈದ ಹೊಸ ಬಡಾವಣೆಯಲ್ಲಿ ವಾಸವಾಗಿದ್ದರು. ಆದರೆ ಶರೀಫ್‌ಗೆ ಜುಬೈದಾಳ ನಡತೆ ಮೇಲೆ ಸಂಶಯವಿತ್ತು. ಹೀಗಾಗಿ ದಂಪತಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು.

    ಶನಿವಾರ ರಾತ್ರಿ ಕೂಡ ಶರೀಫ್ ಪತ್ನಿಯ ಮೇಲೆ ಅನುಮಾನ ಪಟ್ಟು, ನಿನ್ನ ನಡತೆ ಸರಿಯಿಲ್ಲ ಎಂದು ಆರೋಪಿಸಿದ್ದನು. ಆದ್ದರಿಂದ ದಂಪತಿ ನಡುವೆ ಜಗಳ ಶುರುವಾಗಿತ್ತು. ಮಾತಿಗೆ ಮಾತು ಬೆಳೆದು ಜಗಳ ತಾರಕ್ಕೇರಿ ಶರೀಫ್ ಕೋಪಗೊಂಡಿದ್ದನು. ಅದೇ ಕೋಪದಲ್ಲಿ ಚಾಕುವಿನಿಂದ ಪತ್ನಿಗೆ ಮನಬಂದಂತೆ ಇರಿದಿದ್ದಾನೆ. ಪತ್ನಿಯ ದೇಹದ 30ಕ್ಕೂ ಅಧಿಕ ಕಡೆ ಇರಿದು ಕೊಲೆಗೈದು ವಿಕೃತಿ ಮೆರೆದಿದ್ದಾನೆ

    ಸದ್ಯ ಆರೋಪಿ ಶರೀಫ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಈ ಸಂಬಂಧ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.