Tag: ಜಗಳ

  • ನಾಯಿಗಾಗಿ ಬೀದಿಯಲ್ಲಿ ಕಿತ್ತಾಡಿಕೊಂಡ ಯುವಕ – ಯುವತಿ

    ನಾಯಿಗಾಗಿ ಬೀದಿಯಲ್ಲಿ ಕಿತ್ತಾಡಿಕೊಂಡ ಯುವಕ – ಯುವತಿ

    – ಉಡುಪಿಯ ಅಜ್ಜರಕಾಡು ಸಮೀಪ ಹೈಡ್ರಾಮಾ

    ಉಡುಪಿ: ಸಾಕು ನಾಯಿಗಾಗಿ ಉಡುಪಿಯಲ್ಲಿ ಯುವಕ- ಯುವತಿ ಕಿತ್ತಾಡಿಕೊಂಡ ಘಟನೆ ನಡೆದಿದೆ. ಯುವತಿಯ ಕಳವಾದ ನಾಯಿ ಪೆಟ್ ಚಾಯ್ಸ್ ನಲ್ಲಿ ಪತ್ತೆಯಾಗಿದ್ದು ನಾಯಿ ಜೊತೆಗಿದ್ದ ಯುವಕನ ಜೊತೆ ಆಕೆ ಜಗಳ ಶುರು ಮಾಡಿದ್ದಾಳೆ.

    ಉಡುಪಿ ಅಜ್ಜರಕಾಡಿನಲ್ಲಿರುವ ಪೆಟ್ ಚಾಯ್ಸ್ ಮಳಿಗೆ ಬಳಿ ಹೈಡ್ರಾಮಾ ನಡೆದಿದ್ದು, ಸಾರ್ವಜನಿಕರು ಸಾಕ್ಷಿಯಾದರು. ಯುವಕ ಕಪ್ಪು ನಾಯಿ ಜೊತೆ ಬಂದು ಖರೀದಿಯಲ್ಲಿದ್ದ. ನಾಯಿಗೆ ಬೇಕಾದ ಆಹಾರ ಖರೀದಿ ನಡೆಯುತ್ತಿದ್ದಾಗ ಯುವತಿ ಬಂದಿದ್ದಾಳೆ. ಇದು ನಾನು ಸಾಕಿದ್ದ ನಾಯಿ ಎಂದು ಜಗಳಕ್ಕಿಳಿದಿದ್ದಾಳೆ.

    ಇದು ನಾನು ಖರೀದಿ ಮಾಡಿದ ನಾಯಿ. ನನ್ನ ನಾಯಿ ಎಂದು ಯುವಕ ವಾದ ಮಾಡಿದ್ದಾನೆ. ಸಾರ್ವಜನಿಕ ಸ್ಥಳದಲ್ಲೇ ನಾಯಿಗಾಗಿ ಕಿತ್ತಾಟ ನಡೆದಿದ್ದು, ಯಾರ ಬಳಿ ಹೋಗುವುದೆಂದು ಕಪ್ಪು ನಾಯಿ ಗೊಂದಲದಲ್ಲಿತ್ತು. ಕೊನೆಗೆ ಕರೆದಾಗ ಸಣ್ಣ ವಯಸ್ಸಿನಲ್ಲೇ ಸಾಕಿ ಸಲಹಿದ ಯುವತಿ ಬಳಿಯೇ ನಾಯಿ ಓಡಿದೆ.

    ಅಷ್ಟೊತ್ತಿಗಾಗಲೇ ಪೊಲೀಸರು ಸ್ಥಳಕ್ಕಾಗಮಿಸಿದ್ದರು. ಯುವಕನನ್ನ ಪೊಲೀಸರು ವಶಕ್ಕೆ ಪಡೆದರು. ನಾಯಿಯ ಮಾಲೀಕರು ಯಾರೆಂದು ವಿಚಾರಣೆ ನಡೆಸುವ ಸಲುವಾಗಿ ಠಾಣೆಗೆ ಕರೆದೊಯ್ದರು. ನಾಯಿಯನ್ನು ಮೂಲ ಮಾಲೀಕರಿಂದ ಕದ್ದು ಯುವಕನಿಗೆ ಮಾರಿದ ಕಳ್ಳನನ್ನ ಹಿಡಿಯುವಂತೆ ಸಾರ್ವಜನಿಕರು ಮನವಿ ಮಾಡಿಕೊಂಡಿದ್ದಾರೆ.

  • ರಾಜಕೀಯ ವೈಷಮ್ಯಕ್ಕೆ ಸುಪಾರಿ – ಗ್ರಾಮ ಪಂಚಾಯತ್ ಮಾಜಿ ಸದಸ್ಯನ ಕೊಲೆ ಯತ್ನ

    ರಾಜಕೀಯ ವೈಷಮ್ಯಕ್ಕೆ ಸುಪಾರಿ – ಗ್ರಾಮ ಪಂಚಾಯತ್ ಮಾಜಿ ಸದಸ್ಯನ ಕೊಲೆ ಯತ್ನ

    – ಡೆಡ್ಲಿ ಅಟ್ಯಾಕ್ ನಿಂದ ಜಸ್ಟ್ ಮಿಸ್

    ಯಾದಗಿರಿ: ರಾಜಕೀಯ ವೈಷಮ್ಯ ಹಿನ್ನೆಲೆ ದುಷ್ಕರ್ಮಿಗಳು ಗ್ರಾಮ ಪಂಚಾಯತ್ ಮಾಜಿ ಸದಸ್ಯನನ್ನು ಚಾಕುವಿನಿಂದ ಇರಿದು ಕೊಲೆ ಮಾಡಲು ಯತ್ನಿಸಿರುವ ಘಟನೆ ಯಾದಗಿರಿ ತಾಲೂಕಿನ ಮುದ್ನಾಳ ಗ್ರಾಮದ ಸಮೀಪ ಮಂಗಳವಾರ ರಾತ್ರಿ ನಡೆದಿದೆ.

    ಬಸವಂತಪುರ ಗ್ರಾಮಪಂಚಾಯತ್ ಮಾಜಿ ಸದಸ್ಯ ಗೋವಿಂದ ಹಲ್ಲೆಗೊಳಗಾದ ವ್ಯಕ್ತಿ. ಗಂಭೀರವಾಗಿ ಗಾಯಗೊಂಡ ಗೋವಿಂದ ಸದ್ಯ ಯಾದಗಿರಿ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ನಿನ್ನೆ ತಡ ರಾತ್ರಿ ಯಾದಗಿರಿಯಿಂದ ಬಸವಂತಪುರ ಕಡೆ ಬೈಕ್ ಮೇಲೆ ಗೋವಿಂದ ಹೊರಟಿದ್ದರು. ಈ ಮುದ್ನಾಳ ಗ್ರಾಮದ ಬೆಟ್ಟದ ಬಳಿ ಮೂವರು ದುಷ್ಕರ್ಮಿಗಳು ಬೈಕ್ ಅಡ್ಡಗಟ್ಟಿದ್ದಾರೆ. ಗೋವಿಂದ ಅವರ ಹೊಟ್ಟೆ ಮತ್ತು ಕೈಗೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಲು ಯತ್ನಿಸಿದ್ದಾರೆ. ಇದೇ ವೇಳೆ ಬೇರೆ ವಾಹನ ರಸ್ತೆಯಲ್ಲಿ ಬಂದ ಕಾರಣ ಗಾಯಗೊಂಡ ಗೋವಿಂದ ಅವರನ್ನು ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾರೆ.

    ಗೋವಿಂದ ಅವರ ವಿರೋಧಿಗಳಾದ ಲಕ್ಷ್ಮಣ್, ದೇವಪ್ಪ ಎಂಬುವವರ ಜೊತೆ ನಿನ್ನೆ ಬೆಳಿಗ್ಗೆ ಗ್ರಾಮದ ಕಂಪೌಂಡ್ ನಿರ್ಮಾಣ ಮಾಡುವ ವಿಚಾರಕ್ಕೆ ಜೊತೆ ಜಗಳವಾಗಿತ್ತು. ಈ ವೇಳೆ ಗೋವಿಂದ ಅವರಿಗೆ ಜೀವಬೇದರಿಕೆ ಸಹ ಹಾಕಲಾಗಿತ್ತು ಎನ್ನಲಾಗಿದೆ. ಅಲ್ಲದೆ ಈ ಹಿಂದೆ ಗ್ರಾಮ ಪಂಚಾಯತ್ ಚುನಾವಣೆ ವಿಚಾರದಲ್ಲಿ ಗೋವಿಂದ ಹಾಗೂ ಲಕ್ಷ್ಮಣ್, ದೇವಪ್ಪನ ನಡುವೆ ಗಲಾಟೆ ನಡೆದಿತ್ತು.

    ಗೋವಿಂದ ಅವರ ಅಣ್ಣನ ಮಗಳಾದ ಲಕ್ಷ್ಮೀ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಗೆದ್ದಿದ್ದಳು. ಆಕೆ ಎದುರಾಳಿಯಾಗಿದ್ದ ಲಕ್ಷ್ಮಣ ಹೆಂಡತಿ ಶಾಂತಿ ಸೋತಿದ್ದಳು. ಗೋವಿಂದ ಅವರ ಕೊಲೆಗೆ ಬಸವಂತಪುರ ನಿವಾಸಿ ಗುರುಮಿಠಕಲ್ ಠಾಣೆಯ ಹೆಡ್ ಕಾನ್‍ಸ್ಟೇಬಲ್ ವೆಂಕಟೇಶ್ ಎಂಬುವವರು ಕುಮ್ಮಕ್ಕು ನೀಡಿ, ಕೊಲೆಗೆ ಸುಪಾರಿ ನೀಡಿದ್ದಾರೆ ಅಂತ ಗೋವಿಂದ ಕುಟುಂಬಸ್ಥರು ಆರೋಪಿಸುತ್ತಿದ್ದಾರೆ. ಈ ಬಗ್ಗೆ ಯಾದಗಿರಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಪತ್ನಿಯ ನಡತೆ ಅನುಮಾನಿಸಿ ಹೋದವ ಅನುಮಾನಾಸ್ಪದ ಸಾವು

    ಪತ್ನಿಯ ನಡತೆ ಅನುಮಾನಿಸಿ ಹೋದವ ಅನುಮಾನಾಸ್ಪದ ಸಾವು

    ಮುಂಬೈ: ಪತ್ನಿಯ ನಡತೆಯನ್ನು ಅನುಮಾನಿಸಿ ಮನೆಬಿಟ್ಟು ಹೋದ ವ್ಯಕ್ತಿ ಅನುಮಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಮಹರಾಷ್ಟ್ರದಲ್ಲಿ ನಡೆದಿದೆ.

    ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ 27 ವರ್ಷದ ಯುವಕನನ್ನು ಅಪರಿಚಿತ ವ್ಯಕ್ತಿಗಳು ಹತ್ಯೆ ಮಾಡಿ ಒಂದೆಡೆಗೆ ಎಸೆದು ಹೋಗಿದ್ದರು. ಈ ಕುರಿತಾಗಿ ವಿಚಾರಣೆ ನಡೆಸಿದಾಗ ಕೊಲೆಯಾದ ವ್ಯಕ್ತಿಯ ಸುಳಿವು ಸಿಕ್ಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಕೊಲೆಯಾದ ವ್ಯಕ್ತಿ ತನ್ನ ಪತ್ನಿಯ ನಡವಳಿಕೆಯನ್ನು ಅನುಮಾನಿಸುತ್ತಿದ್ದನಂತೆ. ದಂಪತಿ  ಆಗಾಗ್ಗೆ ಜಗಳವಾಡುತ್ತಿದ್ದರು. ಹೀಗೆ ಒಂದು ದಿನ ದಂಪತಿಯ ನಡುವೆ ಜಗಳವಾಗಿದ್ದು, ಮನೆಯಿಂದ ಆಚೆ ಹೋಗಿದ್ದಾನೆ. ನಂತರ ಈತನ ಶವ ಹಳ್ಳಿಯದಲ್ಲಿರುವ ಒಂದು ಕಲ್ಲಿನ ಮನೆಯಲ್ಲಿ ಪತ್ತೆಯಾಗಿದೆ ಎಂದು ವಾಡಾ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.

    ವ್ಯಕ್ಯಿಯನ್ನು ಹಲ್ಲೆ ಮಾಡಿ ಕೊಂದಿದ್ದಾರೆ. ದೇಹದ ತುಂಬಾ ಗಾಯಗಳಾಗಿವೆ. ಶವವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದೇವೆ. ಈ ಕುರಿತಾದ ಪ್ರಕರಣವನ್ನು ದಾಖಲಿಸಿಕೊಂಡಿದ್ದೇವೆ, ತನಿಖೆ ನಡೆಸುತ್ತೇವೆ ಎಂದು ಪೊಲೀಸರು ಹೇಳಿದ್ದಾರೆ.

  • ಯಾವ ಹೋಟೆಲ್‍ಗೆ ಹೋಗಿದ್ದೆ ಎಂದ ಪತಿಯ ಮೇಲೆ ಹಲ್ಲೆ

    ಯಾವ ಹೋಟೆಲ್‍ಗೆ ಹೋಗಿದ್ದೆ ಎಂದ ಪತಿಯ ಮೇಲೆ ಹಲ್ಲೆ

    – ಬೆರಳು ಕಚ್ಚಿ, ಇಕ್ಕಳದಿಂದ ತಲೆಗೆ ಹೊಡೆದ ಮಡದಿ

    ಅಹಮದಾಬಾದ್: ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ ಇಕ್ಕಳ ಹಾಗೂ ಅಡುಗೆ ಸಾಮಾಗ್ರಿಯಿಂದ ಹಲ್ಲೆ ನಡೆಸಿದ ಪತ್ನಿ ವಿರುದ್ಧ ನೊಂದ ಪತಿ ದೂರು ದಾಖಲಿಸಿದ್ದಾರೆ.

    ಅಹಮದಾಬಾದ್‍ನ ನರೋಡಾದಲ್ಲಿ ಘಟನೆ ನಡೆದಿದ್ದು, ರಿಯಲ್ ಎಸ್ಟೇಟ್ ಮಧ್ಯವರ್ತಿಯಾಗಿರುವ 34 ವರ್ಷದ ಅಭಯ್‍ಗೆ 26 ವರ್ಷದ ಪತ್ನಿ ಹಿಗ್ಗಾಮುಗ್ಗಾ ಥಳಿಸಿ, ಮನಬಂದಂತೆ ಹಲ್ಲೆ ಮಾಡಿದ್ದಾಳೆ. ಈ ವೇಳೆ ಇಕ್ಕಳಿನಿಂದ ತಲೆಗೆ ಬಲವಾಗಿ ಹೊಡೆದಿದ್ದಲ್ಲದೆ, ಕೋಪದಿಂದ ಪತಿಯ ಹೆಬ್ಬೆರಳನ್ನೇ ಕಚ್ಚಿದ್ದಾಳೆ.

    ಘಟನೆಗೆ ಕಾರಣವೇನು?
    ವ್ಯಕ್ತಿ ಪತ್ನಿ ಹಾಗೂ ಮೂರು ವರ್ಷದ ಮಗಳೊಂದಿಗೆ ವಾಸವಿದ್ದು, ಬುಧವಾರ ರಾತ್ರಿ 11ರ ಸುಮಾರಿಗೆ ಊಟ ಮಾಡುತ್ತಿದ್ದಾಗ ಜಗಳ ನಡೆದಿದೆ. ಊಟಕ್ಕೆ ಕುಳಿತಾಗ ಪತಿ ಸಂಜೆ ಸ್ನ್ಯಾಕ್ಸ್ ತಿನ್ನಲು ಯಾವ ಹೋಟೆಲ್‍ಗೆ ಹೋಗಿದ್ದೆ ಎಂದು ಪತ್ನಿಯನ್ನು ಪ್ರಶ್ನಿಸಿದ್ದಾನೆ. ಇದರಿಂದ ಕೋಪಕೊಂಡ ಪತ್ನಿ ಪ್ರಿಯಾಂಕಾ ಪತಿ ಅಭಯ್ ಮೇಲೆ ರೇಗಾಡಿ, ರಾದ್ಧಾಂತ ಮಾಡಿದ್ದಾಳೆ. ಇದರಿಂದ ಕೋಪಗೊಂಡ ಪತಿ ಪೊಲೀಸರಿಗೆ ದೂರು ನೀಡಿದ್ದು, ನನ್ನ ಪತ್ನಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹೊಡೆದು ಹಲ್ಲೆ ಮಾಡಿದ್ದಾಳೆ ಎಂದು ಅಭಯ್ ಆರೋಪಿಸಿದ್ದಾರೆ.

    ಕೇವಲ ಹಲ್ಲೆ ಮಾಡಿದ್ದು ಮಾತ್ರವಲ್ಲ, ವಾಗ್ವಾದ ನಡೆಯುವ ವೇಳೆ ಪ್ರಿಯಾಂಕಾ ನನ್ನ ಎಡಗೈ ಹಿಡಿದುಕೊಂಡಿದ್ದು, ಸಿಟ್ಟಿಗೆದ್ದು ಬೆರಳನ್ನೇ ಕಡಿದಿದ್ದಾಳೆ. ಕಚ್ಚುತ್ತಿದ್ದಂತೆ ತೀವ್ರ ನೋವುಂಟಾಗಿದ್ದು, ತಕ್ಷಣ ಅವಳನ್ನು ಹಿಂದಕ್ಕೆ ತಳ್ಳಿದೆ. ಇದರಿಂದ ಪ್ರಿಯಾಂಕಾ ಕೋಪಗೊಂಡು ಅಡುಗೆ ಮನೆಯಲ್ಲಿದ್ದ ಇಕ್ಕಳ ತಂದು ತೆಲೆಗೆ ಜೋರಾಗಿ ಹೊಡೆದಳು. ಇದರಿಂದ ತೀವ್ರ ರಕ್ತಸ್ರಾವವಾಯಿತು ಎಂದು ಅಭಯ್ ತನ್ನ ದೂರಿನಲ್ಲಿ ತಿಳಿಸಿದ್ದಾರೆ.

    ರಕ್ತಸ್ರಾವದಿಂದ ತೀವ್ರ ಗಾಯಗೊಂಡಿದ್ದ ಅಭಯ್‍ನನ್ನು ಹತ್ತಿರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆದ ನಂತರ ಅಭಯ್ ನರೋಡಾ ಪೆÇಲೀಸ್ ಠಾಣೆಗೆ ತೆರಳಿ ತನ್ನ ಪತ್ನಿ ವಿರುದ್ಧವೇ ದೂರು ದಾಖಲಿಸಿದ್ದಾರೆ. ಅಭಯ್ ಗುಜರಾತ್ ಮೂಲದವನಾಗಿದ್ದು ಪ್ರಿಯಾಂಕಾ ಪಶ್ಚಿಮ ಬಂಗಾಳ ಮೂಲದವರು ಎನ್ನಲಾಗಿದೆ.

  • ಗೆಳೆಯನಿಗೆ ಬೈಕ್ ಕೊಟ್ಟು ಪ್ರಾಣವನ್ನೇ ಕಳೆದುಕೊಂಡ ಯುವಕ

    ಗೆಳೆಯನಿಗೆ ಬೈಕ್ ಕೊಟ್ಟು ಪ್ರಾಣವನ್ನೇ ಕಳೆದುಕೊಂಡ ಯುವಕ

    ಹಾಸನ: ಬೈಕ್ ವಿಚಾರವಾಗಿ ಇಬ್ಬರು ಸ್ನೇಹಿತರ ನಡುವೆ ಗಲಾಟೆ ನಡೆದು ಓರ್ವನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಹಾಸನ ಹೊರವಲಯದ ದೇವೇಗೌಡ ನಗರದಲ್ಲಿ ನಡೆದಿದೆ.

    23 ವರ್ಷದ ಗವಿಗೌಡ ಕೊಲೆಯಾದ ಯುವಕ. ದೇವೇಗೌಡ ನಗರದ ಕೃಷ್ಣ ಕೊಲೆಮಾಡಿದ ಆರೋಪಿಯಾಗಿದ್ದು, ಗವಿಗೌಡ ಸತ್ತ ನಂತರ ಆತನ ಸ್ನೇಹಿತರು ಕೃಷ್ಣನಿಗೆ ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಅಕ್ಟೋಬರ್ 19ರಂದು ಕೃಷ್ಣ ತುರ್ತು ಕೆಲಸಕ್ಕಾಗಿ ಕೊಲೆಯಾದ ಗವಿಗೌಡನ ದ್ವಿಚಕ್ರ ವಾಹನವನ್ನು ತೆಗೆದುಕೊಂಡು ಹೋಗಿದ್ದ.

    ಬೈಕ್ ತೆಗೆದುಕೊಂಡು ನಾಳೆನೇ ವಾಪಸ್ ಹಿಂದಿರುಗಿಸುತ್ತೇನೆ ಎಂದಿದ್ದ ಕೃಷ್ಣ ಬೈಕ್ ವಾಪಸ್ ಕೊಟ್ಟಿರಿಲ್ಲ. ಇದರಿಂದ ಗವಿಗೌಡ ಆತನ ಮನೆಯ ಮುಂದೆ ಹೋಗಿ ಬೈಕ್ ಕೇಳಿದ್ದಾನೆ. ಹೊಸ ಬೈಕ್ ತೆಗೆದುಕೊಂಡು ಹೋಗಿ ಬೈಕನ್ನು ಬೀಳಿಸಿಕೊಂಡು ಬಂದಿದ್ದಾನೆ ಎಂಬ ವಿಚಾರ ತಿಳಿದು ಇಬ್ಬರ ನಡುವೆ ಗಲಾಟೆಯಾಗಿದೆ. ಈ ವೇಳೆ ಸಿಟ್ಟಿಗೆದ್ದ ಆರೋಪಿ ಕೃಷ್ಣ ಮನೆಯಲ್ಲಿದ್ದ ಚಾಕು ತಂದು ಗೆಳೆಯನ ಎದೆಗೆ ಚುಚ್ಚಿದ್ದಾನೆ. ಪರಿಣಾಮ ಗವಿಗೌಡ ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದಾನೆ.

    ತಕ್ಷಣ ಸ್ಥಳೀಯರು ಆತನನ್ನು ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡುವಷ್ಟರಲ್ಲಿ ಗವಿಗೌಡ ಸಾವನ್ನಪ್ಪಿದ್ದಾನೆ. ಗವಿಗೌಡ ಸಾವಿಗೀಡಾದ ಸುದ್ದಿ ತಿಳಿಯುತ್ತಿದ್ದಂತೆ ಆತನ ಸ್ನೇಹಿತರು ದೇವೇಗೌಡ ನಗರದ ಕೃಷ್ಣನ ಮನೆಗೆ ನುಗ್ಗಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ವಿಷಯ ತಿಳಿದ ಹಾಸನ ನಗರ ಪೊಲೀಸರು ಸ್ಥಳಕ್ಕಾಗಮಿಸಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಆರೋಪಿಯನ್ನು ಹಾಸನದ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ ಹೆಚ್ಚಿನ ಚಿಕಿತ್ಸೆ ಕೊಡಿಸುತ್ತಿದ್ದಾರೆ.

    ಈ ಘಟನೆ ಸಂಬಂಧ ಹಾಸನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕೊಲೆಗೈದು ತಾನೂ ಆತ್ಮಹತ್ಯೆಗೆ ಶರಣು – ಅರ್ಧಗಂಟೆಯಲ್ಲೇ ಹೋಯ್ತು 2 ಜೀವ

    ಕೊಲೆಗೈದು ತಾನೂ ಆತ್ಮಹತ್ಯೆಗೆ ಶರಣು – ಅರ್ಧಗಂಟೆಯಲ್ಲೇ ಹೋಯ್ತು 2 ಜೀವ

    ಚಿಕ್ಕಮಗಳೂರು: ಕೊಲೆಗೈದ ಬಳಿಕ ಭಯಗೊಂಡು ತಾನೂ ಕಳೆನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ಮಲ್ಲಂದೂರು ಸಮೀಪದ ಗಂಧರ್ವಗಿರಿ ಗ್ರಾಮದಲ್ಲಿ ನಡೆದಿದೆ.

    ಗಂಧರ್ವಗಿರಿ ಗ್ರಾಮದ ಕಾಫಿ ತೋಟದಲ್ಲಿ ಕೃಷ್ಣಪ್ಪ ಹಾಗೂ ಬಸಪ್ಪ ಕೂಲಿ ಕೆಲಸ ಮಾಡಿಕೊಂಡು ತೋಟದ ಲೈನ್ ಮನೆಗಳಲ್ಲಿ ವಾಸವಿದ್ದರು. ಇಬ್ಬರೂ ಕೂಡ ಮೂಲತಃ ಮಂಗಳೂರಿನವರಾಗಿದ್ದು, ಬಹಳ ವರ್ಷಗಳಿಂದ ಇಲ್ಲಿಯೇ ಬದುಕು ಕಟ್ಟಿಕೊಂಡಿದ್ದರು. ಆದರೆ ಇಬ್ಬರ ಮಧ್ಯೆ ಆಗಾಗ್ಗೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆಯುತ್ತಿತ್ತು. ಗ್ರಾಮದ ಜನ ಸಮಾಧಾನ ಮಾಡುತ್ತಿದ್ದರು. ಎರಡು ದಿನದ ಬಳಿಕ ಇಬ್ಬರೂ ಸರಿಯಾಗುತ್ತಿದ್ದರು.

    ಆದರೆ ಇಂದು ಬೆಳಗ್ಗೆ ನೀರು ತರಲು ಹೋದ ಕೃಷ್ಣಪ್ಪ ಹಾಗೂ ಕೆಲಸಕ್ಕೆ ಹೊರಟಿದ್ದ ಬಸಪ್ಪನ ಮಧ್ಯೆ ಗಲಾಟೆ ನಡೆದಿದೆ. ಆದರೆ ಇಬ್ಬರ ಮಧ್ಯೆ ನೀರಿನ ಬಾವಿ ಬಳಿ ಏನು ನಡೆಯಿತೆಂದು ಯಾರಿಗೂ ಗೊತ್ತಿಲ್ಲ. ಕೆಲಸಕ್ಕೆ ಹೊರಟಿದ್ದ ಬಸಪ್ಪ ಕೈಯಲ್ಲಿದ್ದ ಮಚ್ಚಿನಿಂದ ಕೃಷ್ಣಪ್ಪನ ಕುತ್ತಿಗೆಗೆ ಹೊಡೆದಿದ್ದಾನೆ. ತೀವ್ರವಾದ ರಕ್ತ ಸ್ರಾವದಿಂದ 45 ವರ್ಷದ ಕೃಷ್ಣಪ್ಪ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

    ಕೊಲೆ ಮಾಡಿದೆ ಎಂದು ಭಯಗೊಂಡ ಬಸಪ್ಪ ಕೆಲಸಕ್ಕೂ ಹೋಗದೆ ಮನೆಗೆ ಬಂದು ಕಳೆನಾಶಕ ಕುಡಿದು ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ. ಕ್ಷುಲ್ಲಕ ಕಾರಣಕ್ಕೆ ಅರ್ಧ ಗಂಟೆಯೊಳಗೆ ಎರಡು ಜೀವಗಳು ಹೋಗಿವೆ. ಸ್ಥಳಕ್ಕೆ ಆಗಮಿಸಿದ ಮಲ್ಲಂದೂರು ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಎಣ್ಣೆ ಮತ್ತಲ್ಲಿ ಬಡಿದಾಡಿಕೊಂಡ ಗುಂಪು- ಯುವಕನಿಗೆ ಗಂಭೀರ ಗಾಯ

    ಎಣ್ಣೆ ಮತ್ತಲ್ಲಿ ಬಡಿದಾಡಿಕೊಂಡ ಗುಂಪು- ಯುವಕನಿಗೆ ಗಂಭೀರ ಗಾಯ

    ಹುಬ್ಬಳ್ಳಿ: ಕ್ಷುಲ್ಲಕ ಕಾರಣಕ್ಕೆ ಗುಂಪು ಘರ್ಷಣೆ ನಡೆದು, ಘಟನೆಯಲ್ಲಿ ಇಬ್ಬರು ಯುವಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಹುಬ್ಬಳ್ಳಿಯ ಕೇಶ್ವಾಪುರದ ಡಾಬಾವೊಂದರಲ್ಲಿ ನಡೆದಿದೆ.

    ಎರಡು ಯುವಕರ ಗುಂಪಿನ ನಡುವೆ ನಿನ್ನೆ ಬೆಳಗ್ಗೆಯಿಂದಲೂ ಮಧ್ಯೆ ವಾಗ್ವಾದ ಏರ್ಪಟ್ಟಿತ್ತು. ಅಲ್ಲದೇ ಜಗಳ ಕೂಡ ನಡೆದಿತ್ತು. ಈ ಜಗಳ ತಾರಕಕ್ಕೆ ಏರಿದ್ದು, ಎರಡೂ ಗುಂಪಿನವರೂ ಬಡಿದಾಡಿಕೊಂಡಿದ್ದಾರೆ.

    ಘಟನೆಯಲ್ಲಿ ಇಬ್ಬರು ಯುವಕರಿಗೆ ಗಂಭೀರ ಗಾಯವಾಗಿದ್ದು, ಗಾಯಾಳನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ಸಂಬಂಧ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಆಟದ ವೇಳೆ ಜಗಳ – 4ರ ಪೋರನ ಕತ್ತು ಸೀಳಿದ 7ರ ಬಾಲಕ

    ಆಟದ ವೇಳೆ ಜಗಳ – 4ರ ಪೋರನ ಕತ್ತು ಸೀಳಿದ 7ರ ಬಾಲಕ

    ಬರೇಲಿ: ಆಟ ಆಡುವ ವೇಳೆ ನಡೆದ ಜಗಳದಲ್ಲಿ 7 ವರ್ಷದ ಬಾಲಕನೊಬ್ಬ 4 ವರ್ಷದ ಬಾಲಕ ಕತ್ತನ್ನು ಸೀಳಿದ ಘಟನೆ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ನಡೆದಿದೆ.

    ಇಬ್ಬರು ಸಂಬಂಧಿಕರಾಗಿದ್ದು ಮಕ್ಕಳ ತಂದೆ ದಿನಗೂಲಿ ಕೆಲಸ ಮಾಡುತ್ತಿದ್ದಾರೆ. ಭಾನುವಾರ ಇಬ್ಬರು ಮನೆಯ ಹೊರಗಡೆ ಆಟ ಆಡುತ್ತಿದ್ದಾಗ ಜಗಳ ನಡೆದಿದೆ.

    ಸಿಟ್ಟಾದ 7 ವರ್ಷದ ಬಾಲಕ ಮನೆಗೆ ತೆರಳಿ ಚಾಕು ತಂದು ಇರಿದಿದ್ದಾನೆ. ಬಾಲಕನ ಕಿರುಚಾಟ ಕೇಳಿ ಅಲ್ಲಿದ್ದವರು ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಆಸ್ಪತ್ರೆಯವರು ಬೇರೆ ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಿದ್ದಾರೆ.

    ಸಂತ್ರಸ್ತ ಬಾಲಕನ ತಾಯಿ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದರು. ಆದರೆ ನಂತರ ಕುಟುಂಬದ ಸದಸ್ಯರ ಮಾತುಕತೆಯ ಬಳಿಕ ದೂರನ್ನು ಹಿಂಪಡೆಯಲಾಗಿದೆ.

    ಹಿರಿಯ ಸಹೋದರ ತಪ್ಪಾಗಿ ಕಿರಿಯ ಸಹೋದರನ ಮೇಲೆ ಚಾಕು ಇರಿದಿದ್ದಾನೆ. ಈ ಸಮಸ್ಯೆಯನ್ನು ನಾವೇ ಬಗೆ ಹರಿಸಿಕೊಳ್ಳುತ್ತೇವೆ ಎಂದು ಎರಡು ಕುಟುಂಬಗಳ ಸದಸ್ಯರು ಪೊಲೀಸರಲ್ಲಿ ತಿಳಿಸಿದ್ದಾರೆ.

  • ಪತ್ನಿ ಇದ್ರೂ 2ನೇ ಮದುವೆಯಾದ- ನಂಬಿಸಿ ಸೈಟ್ ಮಾರಿಸಿ, ಹಣ ಕೊಡುವುದಾಗಿ ರಸ್ತೆಯಲ್ಲಿ ಹಿಗ್ಗಾಮುಗ್ಗಾ ಥಳಿಸಿದ

    ಪತ್ನಿ ಇದ್ರೂ 2ನೇ ಮದುವೆಯಾದ- ನಂಬಿಸಿ ಸೈಟ್ ಮಾರಿಸಿ, ಹಣ ಕೊಡುವುದಾಗಿ ರಸ್ತೆಯಲ್ಲಿ ಹಿಗ್ಗಾಮುಗ್ಗಾ ಥಳಿಸಿದ

    ಹುಬ್ಬಳ್ಳಿ: ಮೊದಲ ಪತ್ನಿ ಇರುವಾಗಲೇ ಆಕೆಗೆ ಗೊತ್ತಿಲ್ಲದಂತೆ 2ನೇ ಮದುವೆಯಾಗಿದ್ದಲ್ಲದೆ, ಎರಡನೇ ಪತ್ನಿ ಬಳಿ ಪಡೆದಿದ್ದ ಹಣ ಮರಳಿ ಕೇಳಿದ್ದಕ್ಕೆ ಅವಳನ್ನೇ ನಡು ರಸ್ತೆಯಲ್ಲೆ ಓಡಾಡಿಸಿ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಹುಬ್ಬಳ್ಳಿಯ ಅಕ್ಷಯ ಕಾಲೋನಿಯಲ್ಲಿ ನಡೆದಿದೆ.

    ಕಲಘಟಗಿ ತಾಲೂಕಿನ ಹಿರೇಹೊನಳ್ಳಿಯ ಬಸವರಾಜ ಕೇಲಗೇರಿ, ಆತನ ಮೊದಲ ಪತ್ನಿ ಹಾಗೂ ಮಕ್ಕಳು 2ನೇ ಪತ್ನಿ ಹಾಗೂ ಮಕ್ಕಳ ಮೇಲೆ ಮಾರಣಾಂತಿಕ 1ಹಲ್ಲೆ ನಡೆಸಿದ್ದಾರೆ. ಪತ್ನಿ ಇದ್ದರೂ ಬಸವರಾಜ್ ಕೆಲಗೇರಿ ಮೊದಲ ಪತ್ನಿ ಮೃತಪಟ್ಟಿದ್ದಾಳೆ ಎಂದು ಅನಿತಾ ರೇವಣಕರ್ ಬಳಿ ಹೇಳಿಕೊಂಡು, ಮಹಿಳೆಯನ್ನು ಪ್ರೀತಿಸಿ 2012ರಲ್ಲಿ ಮನೆಯಲ್ಲೇ ವಿವಾಹವಾಗಿದ್ದ. ಮದುವೆ ನಂತರ ಮೊದಲ ಪತ್ನಿಯ ಕಣ್ತಪ್ಪಿಸಿ ಕೆಲ ವರ್ಷಗಳ ಕಾಲ ಅನಿತಾಳ ಜೊತೆ ಸಂಸಾರ ನಡೆಸಿದ್ದ.

    ನಂತರ ಮೊದಲ ಪತ್ನಿಗೆ ವಂಚಿಸಿ ಅನಿತಾಳ ಜೊತೆ ಕೆಲ ವರ್ಷಗಳ ಕಾಲ ಸಂಸಾರ ನಡೆಸಿದ್ದ ಬಸವರಾಜ, 2ನೇ ಪತ್ನಿಯ ಸೈಟ್ ಮಾರಿಸಿ 28 ಲಕ್ಷ ರೂಪಾಯಿ ಹಣ ಪಡೆದಿದ್ದ. ಆ ಹಣವನ್ನು ಮರಳಿಸುವಂತೆ ಅನಿತಾ ಕೇಳಿದಕ್ಕೆ ಹಣ ಕೊಡುವುದಾಗಿ ಮನೆಗೆ ಕರೆಸಿ ಹಿಗ್ಗಾಮುಗ್ಗಾ ಹಲ್ಲೆ ಮಾಡಿದ್ದಾರೆ.

    ನಡು ಬೀದಿಯಲ್ಲಿಯೇ ಅನಿತಾ ಹಾಗೂ ಆಕೆಯ ಮಗನಿಗೆ ಬಸವರಾಜ್ ಹಾಗೂ ಆತನ ಮೊದಲ ಪತ್ನಿ, ಮಕ್ಕಳು ಹಲ್ಲೆ ನಡೆಸಿದ್ದಾರೆ. ಈ ಕುರಿತು ಅನಿತಾ ಮೊದಲು ಕಲಘಟಗಿ ಠಾಣೆಯಲ್ಲಿ ಹಾಗೂ ತಮ್ಮ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ ಬಗ್ಗೆ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆದರೆ ಬಸವರಾಜನನ್ನು ಪೊಲೀಸರು ಈ ವರೆಗೆ ಬಂಧಿಸಿಲ್ಲ ಎಂದು ಅನಿತಾ ಆರೋಪಿಸಿದ್ದಾರೆ.

  • ಪ್ರೀತಿಸಿ ಮದ್ವೆಯಾದ್ರು- ಪ್ರೀತಿಯ ಸಂಕೇತವಾದ ಮಗುವನ್ನೇ ಕೊಂದ ತಂದೆ

    ಪ್ರೀತಿಸಿ ಮದ್ವೆಯಾದ್ರು- ಪ್ರೀತಿಯ ಸಂಕೇತವಾದ ಮಗುವನ್ನೇ ಕೊಂದ ತಂದೆ

    – ಎಸೆದ ರಭಸಕ್ಕೆ ಮಗು ಸಾವು
    – ತಂದೆಯಿಂದಲೇ ಮೂರು ತಿಂಗಳ ಹೆಣ್ಣು ಮಗು ಹತ್ಯೆ

    ಬೆಂಗಳೂರು: ಪತಿ-ಪತ್ನಿ ಜಗಳದ ಮಧ್ಯೆ ಮಗು ಅತ್ತಿತೆಂದು ಎಸೆದು ತಂದೆಯೇ ತನ್ನ ಮೂರು ತಿಂಗಳ ಹೆಣ್ಣು ಮಗುವನ್ನು ಹತ್ಯೆ ಮಾಡಿದ ಹೃದಯವಿದ್ರಾವಕ ಘಟನೆ ನಡೆದಿದೆ.

    ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ಯಡವನಹಳ್ಳಿಯಲ್ಲಿ ಘಟನೆ ನಡೆದಿದ್ದು, ಜನನಿ ಮತ್ತು ಶ್ರೀನಿವಾಸ್ ದಂಪತಿಯ ಮಗು ಸ್ಪಂದನ ಸಾವನ್ನಪ್ಪಿದ ದುರ್ದೈವಿ. ಈ ದಂಪತಿ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಹೊಸೂರು ತಾಲೂಕಿನ ನಿವಾಸಿಗಳಾಗಿದ್ದು, ಎರಡು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಆದರೆ ಪ್ರತಿ ದಿನ ಜಗಳ ಮಾಡುತ್ತಿದ್ದರು. ಅದೇ ರೀತಿ ಶನಿವಾರ ರಾತ್ರಿ 11 ಘಂಟೆಯ ಸುಮಾರಿಗೆ ಇಬ್ಬರ ನಡುವೆ ಜಗಳ ನಡೆದಿದ್ದು, ಈ ವೇಳೆ ಮಗುವನ್ನು ಎತ್ತಿ ಎಸೆದು ಪಾಪಿ ತಂದೆ ಹತ್ಯೆ ಮಾಡಿದ್ದಾನೆ.

    ದಂಪತಿ ಜಗಳ ಮಾಡುವಾಗ ಮೂರು ತಿಂಗಳ ಮಗು ಜೋಳಿಗೆಯಲ್ಲಿ ಮಲಗಿತ್ತು. ಶ್ರೀನಿವಾಸ್ ತನ್ನ ಪತ್ನಿ ಜನನಿಯನ್ನು ಸಿಟ್ಟಿನಲ್ಲಿ ಜೋರಾಗಿ ನೂಕಿದ್ದ. ನಂತರ ಜನನಿ ಮಗು ಮಲಗಿದ್ದ ಜೋಳಿಗೆ ಮೇಲೆ ಬಿದ್ದಿದ್ದಳು. ಆಗ ಮಗು ಅಳಲು ಶುರುಮಾಡಿತ್ತು. ಆಗ ಇದೋಂದು ಕಾಟ ಎಂದು ಪಾಪಿ ತಂದೆ ಮಗುವನ್ನು ತೆಗೆದು ಬಿಸಾಡಿದ್ದಾನೆ. ನಂತರ ಮಗು ಪ್ರಜ್ಞೆ ತಪ್ಪಿದ್ದು, ತಕ್ಷಣವೇ ತಾಯಿ ಜನನಿ ಮಗುವನ್ನು ಕರೆದುಕೊಂಡು ಹೊಸೂರಿಗೆ ಹೋಗಿದ್ದಾಳೆ. ಆಗ ಹೊಸೂರಿನ ಆಸ್ಪತ್ರೆಯಲ್ಲಿ ಮಗು ಸಾವನಪ್ಪಿದೆ. ಪಾಪಿ ತಂದೆಯನ್ನು ಪೊಲೀಸರು ಬಂಧಿಸಿದ್ದು, ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.