Tag: ಜಗಳ

  • ಬಾಟಲಿಯಿಂದ ಪತ್ನಿಯನ್ನು ಚುಚ್ಚಿ, ಕುತ್ತಿಗೆಯನ್ನು ಕಾಲಿನಿಂದ ತುಳಿದು ಕೊಂದ!

    ಬಾಟಲಿಯಿಂದ ಪತ್ನಿಯನ್ನು ಚುಚ್ಚಿ, ಕುತ್ತಿಗೆಯನ್ನು ಕಾಲಿನಿಂದ ತುಳಿದು ಕೊಂದ!

    ಅನೇಕಲ್: ಶೀಲ ಶಂಕಿಸಿದ ಪತಿರಾಯ ತನ್ನ ಪತ್ನಿಯನ್ನು ಬಾಟಲಿನಿಂದ ಚುಚ್ಚಿ, ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಅತ್ತಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಅತ್ತಿಬೆಲೆ ಸಮೀಪದ ಮುತ್ಸಂದ್ರ ಗ್ರಾಮದಲ್ಲಿ ಕಲಾವತಿ (24) ಕೊಲೆಯಾದ ದುರ್ದೈವಿ. ಪತಿ ನಾಗೇಶ್ ತನ್ನ ಪತ್ನಿ ಶೀಲ ಶಂಕಿಸಿ ನಿತ್ಯ ಜಗಳವಾಡುತ್ತಿದ್ದು, ಇಂದು ಬೆಳಗ್ಗೆ 11 ಗಂಟೆ ವೇಳೆಗೆ ಕುಡಿದು ಮನೆಗೆ ಬಂದು ಹೆಂಡತಿ ಜೊತೆ ಜಗಳವಾಡಿದ್ದಾನೆ. ಜಗಳ ವಿಕೋಪಕ್ಕೆ ತಿರುಗಿ ನಾಗೇಶ್ ಮದ್ಯದ ಬಾಟಲಿಯಿಂದ ಪತ್ನಿಗೆ ಚುಚ್ಚಿ, ಕುತ್ತಿಗೆಯನ್ನು ಕಾಲಿನಿಂದ ತುಳಿದುಕೊಂಡು ಉಸಿರುಗಟ್ಟಿಸಿ ಸಾಯಿಸಿದ್ದಾನೆ.

    ಈ ಕೃತ್ಯ ನಡೆಸಿದ ನಂತರ ಪತಿ ನಾಗೇಶ್ ಅತ್ತಿಬೆಲೆ ಪೊಲೀಸ್ ಠಾಣೆಗೆ ಬಂದು ತನ್ನ ಪತ್ನಿಯನ್ನು ಕೊಲೆ ಮಾಡಿರುವುದಾಗಿ ತಿಳಿಸಿ ಪೊಲೀಸರಿಗೆ ಶರಣಾಗಿದ್ದಾನೆ. ಕಲಾವತಿಗೆ ಒಂದು ಗಂಡು ಹಾಗೂ ಒಂದು ಹೆಣ್ಣು ಮಕ್ಕಳಿದ್ದಾರೆ. ತಾಯಿ ಕೊಲೆಯಾಗಿದ್ದು, ತಂದೆ ಜೈಲು ಪಾಲಾಗಿರುವುದರಿಂದ ಅಪ್ಪ ಅಮ್ಮ ಇಲ್ಲದೆ ತಬ್ಬಲಿಯಾಗಿವೆ.

  • ತನ್ನನ್ನು ಕೊಲ್ಲಲೆತ್ನಿಸಿದನೆಂದು ಪತಿಯ ಅಂಗಡಿಗೆ ಬೀಗ ಜಡಿದು ಪತ್ನಿ ಆಕ್ರೋಶ

    ತನ್ನನ್ನು ಕೊಲ್ಲಲೆತ್ನಿಸಿದನೆಂದು ಪತಿಯ ಅಂಗಡಿಗೆ ಬೀಗ ಜಡಿದು ಪತ್ನಿ ಆಕ್ರೋಶ

    ಹಾಸನ: ತನ್ನನ್ನು ಕೊಲಲ್ಲು ಪತಿ ಯತ್ನ ಮಾಡಿದ್ದಾನೆ ಎಂದು ಆರೋಪಿಸಿರುವ ಮಹಿಳೆಯೊಬ್ಬರು ಪತಿಯ ಅಂಗಡಿಗೆ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದ ಘಟನೆ ಹಾಸನದಲ್ಲಿ ನಡೆದಿದೆ.

    ಹಾಸನದ ಡಬಲ್ ಟ್ಯಾಂಕ್ ರಸ್ತೆಯಲ್ಲಿರುವ ರಾಘವೇಂದ್ರ ಹಾರ್ಡ್‍ವೇರ್ ಮಾಲಿಕ ಲೋಕೇಶ್ ಮತ್ತು ಪತ್ನಿ ದುರ್ಗಾಲಕ್ಷ್ಮಿ ಜಗಳ ಈಗ ಬೀದಿಗೆ ಬಿದ್ದಿದೆ. ಮೂರು ವರ್ಷಗಳ ಹಿಂದೆ ಮದುವೆಯಾಗಿರುವ ಲೋಕೇಶ್ ನನಗೆ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದಾನೆ ಮತ್ತು ಕೊಲೆಗೆ ಸಹ ಯತ್ನ ಮಾಡಿದ್ದಾನೆ ಎಂದು ಆರೋಪಿಸಿರುವ ದುರ್ಗಾಲಕ್ಷ್ಮಿ ದುರ್ಗೆಯ ಅವತಾರವನ್ನೇ ತಾಳಿದ್ದಾರೆ.

    ಲೋಕೇಶ್ ಮತ್ತು ದುರ್ಗಾಲಕ್ಷ್ಮಿ ಮದುವೆ ಆಗಿ ಮೂರು ವರ್ಷವಾಗಿದೆ. ಆರು ತಿಂಗಳು ಚೆನ್ನಾಗಿದ್ದ ಲೋಕೇಶ್ ಬೇರೊಬ್ಬಳೊಂದಿಗೆ ಅಕ್ರಮ ಸಂಭಂದ ಇಟ್ಟುಕೊಂಡಿದ್ದಾನೆ. ಇದನ್ನು ಪ್ರಶ್ನೆ ಮಾಡಿದ್ದಕ್ಕೆ ಈಗಾಗಲೆ ಡೈವೋರ್ಸ್ ನೋಟಿಸ್ ನೀಡಿದ್ದಾನೆ ಎಂದು ಪತ್ನಿ ಹೇಳಿದ್ದಾರೆ. ದುರ್ಗಾ ಪೋಷಕರು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮದುವೆ ಮಾಡಿ ನಂತರ ಹಾರ್ಡ್‍ವೇರ್ ಅಂಗಡಿಗೂ ಸಹ ಹಣವನ್ನು ನೀಡಿದ್ದರು ಎನ್ನಲಾಗಿದೆ.

    ಈಗ ಒಬ್ಬಳೇ ಮಗಳ ಸ್ಥಿತಿಗೆ ಪರದಾಡುವಂತಾಗಿದೆ. ಹಲವು ಬಾರಿ ರಾಜಿ ಪಂಚಾಯಿತಿ ಮಾಡಿಸಿದರೂ ಸಹ ಸರಿಯಾಗದ ಲೋಕೇಶ್ ಈಗ ಪತ್ನಿಯೇ ಬೇಡ ಎಂದು ಹೇಳುತ್ತಾನೆ. ನನಗೆ ನ್ಯಾಯ ಬೇಕು ಎಂದು ನೊಂದ ಪತ್ನಿ ತನ್ನ ಅಳಲು ತೋಡಿಕೊಂಡಿದ್ದಾರೆ.

  • ಜಿಲ್ಲಾಧ್ಯಕ್ಷರ ಎದುರೇ ಕೈ-ಕೈ ಮಿಲಾಯಿಸಿದ `ಕೈ’ ಕಾರ್ಯಕರ್ತರು!

    ಜಿಲ್ಲಾಧ್ಯಕ್ಷರ ಎದುರೇ ಕೈ-ಕೈ ಮಿಲಾಯಿಸಿದ `ಕೈ’ ಕಾರ್ಯಕರ್ತರು!

    ಚಿಕ್ಕಮಗಳೂರು: ಬ್ಲಾಕ್ ಕಾಂಗ್ರೆಸ್ ಸಭೆಯಲ್ಲಿ ಜಿಲ್ಲಾಧ್ಯಕ್ಷರೆದುರೇ ಕಾಂಗ್ರೆಸ್ ಕಾರ್ಯಕರ್ತರು ಕೈ-ಕೈ ಮಿಲಾಯಿಸಿರೋ ಘಟನೆ ಚಿಕ್ಕಮಗಳೂರು ಜಿಲ್ಲೆ ಕಡೂರಿನಲ್ಲಿ ಇಂದು ನಡೆದಿದೆ.

    ಕಡೂರಿನ ಬ್ಲಾಕ್ ಕಾಂಗ್ರೆಸ್ ಕಚೇರಿ ಉದ್ಘಾಟನೆಗೆ ಆಗಮಿಸಿದ್ದ ಜಿಲ್ಲಾಧ್ಯಕ್ಷ ಡಾ. ವಿಜಯ್ ಕುಮಾರ್ ಎದುರೇ ಕಾರ್ಯಕರ್ತರು ಹೊಡೆದಾಡಿದ್ದಾರೆ. ಸಭೆಗೆ ಕೆಪಿಸಿಸಿ ಲೀಗಲ್ ಘಟಕದ ಅಧ್ಯಕ್ಷ ಸಿ.ಎಂ. ಧನಂಜಯ್ ಆಗಮಿಸಿದ್ರು. ಧನಂಜಯ್ ಮುಂಬರೋ ಚುನಾವಣೆಗೆ ಕಡೂರು ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯೂ ಕೂಡ. ಅವರಿಗೆ ಸ್ವಾಗತ ನೀಡದ್ದಕ್ಕೆ ತೆಂಗುನಾರು ಮಂಡಳಿ ಮಾಜಿ ಅಧ್ಯಕ್ಷ ಸಿ.ನಂಜಪ್ಪ ಆಕ್ಷೇಪ ವ್ಯಕ್ತಪಡಿಸದರು

    ಕೂಡಲೇ ಆಕ್ರೋಶಕ್ಕೊಳಗಾದ ಸ್ಥಳಿಯ ಕಾಂಗ್ರೆಸ್ ಕಾರ್ಯಕರ್ತರು ಅವರು ಕಡೂರಿಗೆ ಏನೂ ಅಲ್ಲ. ಅವರಿಗ್ಯಾಕೆ ಸ್ವಾಗತ. ಚುನಾವಣೆ ಸಂದರ್ಭದಲ್ಲಿ ನಾನು ಆಕಾಂಕ್ಷಿ ಎಂದು ಹತ್ತಾರು ಜನ ಬರ್ತಾರೆ. ಪಕ್ಷಕ್ಕಾಗಿ ದುಡಿದ ಸ್ಥಳೀಯ ಕಾರ್ಯಕರ್ತರ ಏನ್ ಮಾಡಬೇಕು. ಚುನಾವಣೆ ಸಂದರ್ಭದಲ್ಲಿ ಹೊರಗಿನವರಿಗೇನು ಕೆಲಸ ಎಂದೆಲ್ಲ ಪ್ರಶ್ನಿಸಿ ಎಂದು ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಇಷ್ಟೆಲ್ಲಾ ತನ್ನ ಕಣ್ಮುಂದೆಯೇ ನಡೆಯುತ್ತಿದ್ರು ಮೂಕಪ್ರೇಕ್ಷಕರಾದ ಅಧ್ಯಕ್ಷ ವಿಜಯ್ ಕುಮಾರ್ ಅರ್ಧಕ್ಕೆ ಸಭೆಯಿಂದ ಎದ್ದು ಹೊರನಡೆದಿದರು.

    https://www.youtube.com/watch?v=evI_Gu1Md7A&feature=youtu.be

    ಇದನ್ನೂ ಓದಿ: ಗಾಂಧಿ ಜಯಂತಿ ವೇಳೆ ಸಚಿವ, ಶಾಸಕರ ಎದುರೇ ಕಾಂಗ್ರೆಸ್ ಕಾರ್ಯಕರ್ತರ ಗಲಾಟೆ

    https://www.youtube.com/watch?v=iyOiyLIam98

     

  • ಪ್ರತಿಭಟನೆ ವೇಳೆ ದೇವೇಗೌಡ್ರ ಎದುರೇ ಕೈಕೈ ಮಿಲಾಯಿಸಿದ ಜೆಡಿಎಸ್ ಕಾರ್ಯಕರ್ತರು

    ಪ್ರತಿಭಟನೆ ವೇಳೆ ದೇವೇಗೌಡ್ರ ಎದುರೇ ಕೈಕೈ ಮಿಲಾಯಿಸಿದ ಜೆಡಿಎಸ್ ಕಾರ್ಯಕರ್ತರು

    ಹಾಸನ: ನೀರಾವರಿ ಹೋರಾಟದ ಸ್ಥಳಕ್ಕೆ ಮಾಜಿ ಪ್ರಧಾನಿ ದೇವೇಗೌಡರು ಭೇಟಿ ನೀಡಿದ್ದ ವೇಳೆ ಜೆಡಿಎಸ್ ಕಾರ್ಯಕರ್ತರ ಮಧ್ಯೆ ಮಾರಾಮಾರಿ ನಡೆದಿರುವ ಘಟನೆ ಹಾಸನದಲ್ಲಿ ನಡೆದಿದೆ.

    ಬೇಲೂರು ತಾಲೂಕಿನ ರಣಘಟ್ಟ ಒಡ್ಡು ಬಳಿ ಈ ಘಟನೆ ನಡೆದಿದೆ. ಜೆಡಿಎಸ್ ಹಿರಿಯ ನಾಯಕರಾದ ದೇವೇಗೌಡರು ರಣಘಟ್ಟ ಒಡ್ಡು ಬಳಿ ನೀರಾವರಿ ಹೋರಾಟ ನಡೆಯುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿದ್ದರು. ಈ ವೇಳೆ ಸ್ಥಳದಲ್ಲಿ ಹೋರಾಟಗಾರರನ್ನು ಉದ್ದೇಶಿಸಿ ನೀರಾವರಿ ಹೋರಾಟದ ಬಗ್ಗೆ ದೇವೇಗೌಡರು ಮಾತನಾಡಿದರು.

    ಈ ಸಂದರ್ಭದಲ್ಲೊ ರೈತ ಸಂಘದ ಮುಖಂಡರೊಬ್ಬರು ಸಭೆಯಲ್ಲಿ ಅಸಭ್ಯವಾಗಿ ನಡೆದುಕೊಂಡರು ಎಂಬುದು ಜೆಡಿಎಸ್ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಯಿತು. ಇದರಿಂದ ದೇವೇಗೌಡರ ಮುಂದೆಯೇ ಜಗಳ ಶುರುವಾಗಿ ವಿಕೋಪಕ್ಕೆ ಹೋಗಿ ಕೈಕೈ ಮಿಲಾಯಿಸುವ ಮಟ್ಟಕ್ಕೆ ಬೆಳೆಯಿತು.

    ಇನ್ನು ಸ್ಥಳದಲ್ಲೇ ಇದ್ದ ಪೊಲೀಸರು ಜೆಡಿಎಸ್ ಕಾರ್ಯಕರ್ತರ ಗುಂಪನ್ನು ಚದುರಿಸಿ ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತರುವಲ್ಲಿ ಯಶಸ್ವಿಯಾದರು.

  • ಸಿಗರೇಟ್ ಸೇದೋ ವಿಚಾರದಲ್ಲಿ ಜಗಳ -ಮನೆ ಮಾಲೀಕನನ್ನು ಡ್ರ್ಯಾಗರ್‍ನಿಂದ ಇರಿದು ಕೊಲೆಗೈದ್ರು

    ಸಿಗರೇಟ್ ಸೇದೋ ವಿಚಾರದಲ್ಲಿ ಜಗಳ -ಮನೆ ಮಾಲೀಕನನ್ನು ಡ್ರ್ಯಾಗರ್‍ನಿಂದ ಇರಿದು ಕೊಲೆಗೈದ್ರು

    ಬೆಂಗಳೂರು: ಸಿಗರೇಟ್ ಸೇದುವ ವಿಚಾರದಲ್ಲಿ ನಡೆದ ಜಗಳದಲ್ಲಿ ಮನೆ ಮಾಲೀಕನನ್ನೆ ಡ್ರ್ಯಾಗರ್ ನಿಂದ ಇರಿದು ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಶಾಂತಿನಗರ ಪುಡ್ ಗೋಡೌನ್ ಬಳಿ ಶನಿವಾರ ತಡರಾತ್ರಿ ನಡೆದಿದೆ.

    ಹರೀಶ್ ಕೊಲೆಯಾದ ದುರ್ದೈವಿ. ತಡರಾತ್ರಿ 12 ಗಂಟೆ ಸುಮಾರಿಗೆ ಹರೀಶ್ ಮನೆಯ ಬಳಿ ನಾಲ್ವರ ಗುಂಪು ಸಿಗರೇಟು ಸೇದುತ್ತಾ ಕುಡಿದು ಗಲಾಟೆ ಮಾಡಿದ್ದಾರೆ. ಮನೆಯಿಂದ ಹೊರಬಂದ ಹರೀಶ್ ಎಲ್ಲರನ್ನೂ ದೂರ ಹೋಗುವಂತೆ ಹೇಳಿದ್ದಾರೆ. ಇದರಿಂದ ಕುಪಿತಗೊಂಡ ನಾಲ್ವರು ಹರೀಶ್ ಮೇಲೆ ಹಲ್ಲೆ ನಡೆಸಿದ್ದಾರೆ.

    ಮತ್ತೆ ಸುಮಾರು 20 ಜನರನ್ನು ಕರೆಸಿಕೊಂಡ ದುಷ್ಕರ್ಮಿಗಳು ಹರೀಶ್ ಕುತ್ತಿಗೆಗೆ ಡ್ರ್ಯಾಗರ್ ನಿಂದ ಇರಿದು ಕೊಲೆ ಮಾಡಿದ್ದಾರೆ. ತೀವ್ರ ರಕ್ತಸ್ರಾವದಿಂದಾಗಿ ಹರೀಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹರೀಶ್ ಕಾಂಟ್ರಾಕ್ಟರ್ ಆಗಿ ಮತ್ತು ಸ್ಥಳೀಯ ಮುಖಂಡರಾಗಿದ್ದರು.

    ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಬಸ್ ನಲ್ಲಿ ಮಹಿಳಾ ಪೇದೆ ಹಾಗೂ ಕಂಡಕ್ಟರ್ ಜಟಾಪಟಿ ವೈರಲ್ ವಿಡಿಯೋ

    ಬಸ್ ನಲ್ಲಿ ಮಹಿಳಾ ಪೇದೆ ಹಾಗೂ ಕಂಡಕ್ಟರ್ ಜಟಾಪಟಿ ವೈರಲ್ ವಿಡಿಯೋ

    ತೆಲಂಗಾಣ: ಟಿಕೆಟ್ ವಿಚಾರದಲ್ಲಿ ಮಹಿಳಾ ಪೇದೆ ಮತ್ತು ಮಹಿಳಾ ಕಂಡಕ್ಟರ್ ನಡುವೆ ಮೆಹಬೂಬ್ ನಗರದಲ್ಲಿ ನಡೆದ ಜಗಳದ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಸರ್ಕಾರಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳಾ ಪೇದೆಯೊಬ್ಬರು ನಾನು ಕರ್ತವ್ಯದಲ್ಲಿರುವ ಕಾರಣ ಉಚಿತವಾಗಿ ಪ್ರಯಾಣಿಸುತ್ತೇನೆ ಎಂದು ಹೇಳಿದ್ದಾರೆ. ಇದಕ್ಕೆ ಒಪ್ಪದ ಕಂಡಕ್ಟರ್ ಮೊದಲು ಟಿಕೆಟ್ ಪಡೆದುಕೊಳ್ಳಿ ನಂತರ ಪ್ರಯಾಣಿಸಿ ಎಂದು ತಿಳಿಸಿದ್ದಾರೆ.

    ಮಹಿಳಾ ಪೊಲೀಸ್ ಪೇದೆಗೆ 15 ರೂ. ಟಿಕೆಟ್ ಪಡೆದುಕೊಳ್ಳುವಂತೆ ಕಂಡಕ್ಟರ್ ಹೇಳಿದ್ದಾರೆ. ಇದಕ್ಕೆ ಒಪ್ಪದ ಪೇದೆ ನಾನು ಸರ್ಕಾರ ಕೆಲಸಕ್ಕೆ ಹೊರಟಿದ್ದೇನೆ. ನಮಗೆ ಉಚಿತವಾಗಿ ಪ್ರಯಾಣಿಸಲು ಅವಕಾಶವಿದೆ ಎಂದು ಹೇಳಿ ವಾದ ನಡೆಸಲು ಆರಂಭಿಸಿದ್ದಾರೆ.

    ಹಣ ನೀಡದ್ದಕ್ಕೆ ಆರಂಭದಲ್ಲಿ ಮಾತಿನಲ್ಲೇ ಇಬ್ಬರು ಚಕಮಕಿ ನಡೆಸಿದ್ದಾರೆ. ಗಲಾಟೆ ಜೋರಾಗುತ್ತಿದ್ದಂತೆ ಬಸ್ ಕಂಡಕ್ಟರ್ ಮಹಿಳಾ ಪೇದೆ ಮೇಲೆ ಕೈ ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ಪೇದೆಯೂ ಕಂಡಕ್ಟರ್ ಮೇಲೆ ಹಲ್ಲೆ ನಡೆಸಿದ್ದಾರೆ.

    ಬಸ್ಸಿನಲ್ಲಿದ್ದ ಪ್ರಯಾಣಿಕರು ಇಬ್ಬರ ಜಗಳವನ್ನು ಬಿಡಿಸಲು ಪ್ರಯತ್ನಿಸಿದ್ದಾರೆ. ಈ ಮಧ್ಯೆ ಒಬ್ಬರು ಪ್ರಯಾಣಿಕರು ಇಬ್ಬರು ಮಹಿಳಾಮಣಿಗಳ ಗಲಾಟೆಯ ದೃಶ್ಯವನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದು ವೈರಲ್ ಆಗಿದೆ.

    ಜಗಳದ ನಂತರ ಕಂಡಕ್ಟರ್, ನವಾಬಪೇಟ್ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ತನಿಖೆ ನಡೆಸುವಂತೆ ಮಹಬೂಬ್ ನಗರ ಪೊಲೀಸ್ ಅಧೀಕ್ಷಕರು ಆದೇಶಿಸಿದ್ದಾರೆ.

    https://youtu.be/uQTZ9ZsFMmQ

  • ಅಣ್ಣನನ್ನೇ ಚಾಕುವಿನಿಂದ ಇರಿದು ಕೊಂದ ತಮ್ಮ

    ಅಣ್ಣನನ್ನೇ ಚಾಕುವಿನಿಂದ ಇರಿದು ಕೊಂದ ತಮ್ಮ

    ಬೆಂಗಳೂರು: ತಡ ರಾತ್ರಿ ಅಣ್ಣ-ತಮ್ಮನ ಜಗಳದಲ್ಲಿ ತಮ್ಮ ಅಣ್ಣನನ್ನೇ ಕೊಂದಿರುವ ಘಟನೆ ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಆಸ್ಕರ್ ರೆಜಾರಿಯಾ(49) ಕೊಲೆಯಾದ ದುರ್ದೈವಿ. ತಮ್ಮ ರಾಯ್‍ಸನ್ ರೆಜಾರಿಯಾ ಮತ್ತು ಆಸ್ಕರ್ ರೆಜಾರಿಯಾ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದಿತ್ತು. ಜಗಳ ವಿಕೋಪಕ್ಕೆ ಏರಿದಾಗ ರಾಯ್‍ಸನ್ ಆಸ್ಕರ್‍ಗೆ ಚಾಕುವಿನಿಂದ ಇರಿದಿದ್ದಾನೆ.

    ಆಸ್ಕರ್ ತನ್ನ ತಾಯಿಯನ್ನು ಕರೆದುಕೊಂಡು ಆಸ್ಪತ್ರೆಗೆ ಹೋಗಿದ್ದ. ಮನೆಗೆ ಬಂದಾಗ ರಾಯ್‍ಸನ್ ಮನೆಯಲ್ಲಿ ಇರಲಿಲ್ಲ. ಅದನ್ನು ಪ್ರಶ್ನಿಸಿದ್ದಕ್ಕೆ ರಾಯ್‍ಸನ್ ಜಗಳ ತೆಗೆದಿದ್ದ. ಜಗಳ ವಿಕೋಪಕ್ಕೆ ತಿರುಗಿ ಮನೆಯಲ್ಲಿದ್ದ ಚಾಕುವಿನಿಂದ ತನ್ನ ಅಣ್ಣನನ್ನು ಇರಿದಿದ್ದಾನೆ. ಚಾಕು ಇರಿತದಿಂದ ಆಸ್ಕರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಆಸ್ಕರ್ ಕುಟುಂಬ ಮೂಲತಃ ಆಂಧ್ರಪ್ರದೇಶದವರು. ಕಳೆದ 17 ವರ್ಷದಿಂದ ಬಾಣಸವಾಡಿಯ ಕರಿಯಣ್ಣ ಲೇಔಟ್ ನಲ್ಲಿ ವಾಸವಿದ್ದರು. ರಾಯ್‍ಸನ್ ಪ್ಲಂಬರ್ ಕೆಲಸ ಮಾಡುತ್ತಿದ್ದ. ಸದ್ಯ ಆರೋಪಿ ಆಸ್ಕರ್‍ನನ್ನು ಬಾಣಸವಾಡಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಅಂಬೇಡ್ಕರ್ ಆಸ್ಪತ್ರೆಗೆ ರವಾನಿಸಿದ್ದಾರೆ.

  • ಬಿಸಿ ಸಟ್ಟುಗದಲ್ಲಿ ಅತ್ತೆಗೆ ಬರೆ- ನೆಲಕ್ಕುರುಳಿಸಿ ಒದ್ದು ಹಿಂಸೆ ನೀಡಿದ ಸೊಸೆ

    ಬಿಸಿ ಸಟ್ಟುಗದಲ್ಲಿ ಅತ್ತೆಗೆ ಬರೆ- ನೆಲಕ್ಕುರುಳಿಸಿ ಒದ್ದು ಹಿಂಸೆ ನೀಡಿದ ಸೊಸೆ

    ಉಡುಪಿ: ಅತ್ತೆ ಸೊಸೆ ಜಗಳ ಮಾವನೋ- ಗಂಡನೇ ಮಧ್ಯಪ್ರವೇಶಿಸುವ ತನಕ ಅನ್ನೋ ಮಾತಿದೆ. ಆದ್ರೆ ಉಡುಪಿಯಲ್ಲೊಬ್ಬಳು ಕ್ರೂರಿ ಸೊಸೆ ರಾಕ್ಷಸ ಪ್ರವೃತ್ತಿ ಮೆರೆದಿದ್ದಾಳೆ. ಸಿನೆಮಾ- ಸೀರಿಯಲ್‍ಗಳಲ್ಲಿ ನೋಡೋ ಅತ್ತೆ ಸೊಸೆ ಜಗಳಕ್ಕಿಂತ ವಿಪರೀತ ಇದು.

    ಮನೆಯಲ್ಲಿದ್ದ ವೃದ್ಧ ಅತ್ತೆ- ಮಾವನಿಗೆ ಸೊಸೆ ಅಶ್ವಿನಿ ಪೈ ಮನಬಂದಂತೆ ಥಳಿಸಿದ್ದಾಳೆ. ಉಡುಪಿಯ ತೆಂಕ ನಿಡಿಯೂರು ಗ್ರಾಮದ ಕೆಳಾರ್ಕಳ ಬೆಟ್ಟುವಿನಲ್ಲಿ ಈ ಕೃತ್ಯ ನಡೆದಿದೆ. ಸಟ್ಟುಗ ಬಿಸಿ ಮಾಡಿ ಮೈಮೇಲೆಲ್ಲಾ ಬರೆ ಎಳೆದಿದ್ದಾಳೆ. ನೆಲಕ್ಕುರುಳಿಸಿ ಕಾಲಿಂದ ಒದ್ದು, ಮನ ಬಂದಂತೆ ಹಲ್ಲೆ ಮಾಡಿದ್ದಾಳೆ. ಮೊದಲೇ ವಯೋವೃದ್ಧರು ಸೊಸೆಯ ರಂಪಾಟದಿಂದ ದಿಗಿಲುಗೊಂಡಿದ್ದಾರೆ.

    ವೆಂಕಟೇಶ ಪೈ ಮತ್ತು ವೀಣಾ ಪೈ ಸೊಸೆಯ ಅಟ್ಟಹಾಸದಿಂದ ಭಯಗೊಂಡು ಮಗ ಲಕ್ಷ್ಮಣ ಪೈ ಮನೆಯಿಂದ ಇನ್ನೊಬ್ಬ ಮಗ ರಮಾನಾಥ ಪೈ ಮನೆಗೆ ಶಿಫ್ಟ್ ಆಗಿದ್ದಾರೆ. ಮಲ್ಪೆ ಪೊಲೀಸ್ ಠಾಣೆಯಲ್ಲಿ ಸೊಸೆ ಅಶ್ವಿನಿ ಪೈ ಮೇಲೆ ದೂರನ್ನು ನೀಡಿದ್ದಾರೆ. ಅವಾಚ್ಯ ಶಬ್ಧಗಳಿಂದ ನಿಂದನೆ ಮತ್ತು ಕೊಲೆಯತ್ನ ದೂರನ್ನು ಪೊಲೀಸರು ದಾಖಲು ಮಾಡಿಕೊಂಡಿದ್ದಾರೆ.

    ಪ್ರಕರಣದ ದಾಖಲಾದ ಬಳಿಕ ಆರೋಪಿ ಅಶ್ವಿನಿ ಪೈ ಮತ್ತು ಪತಿ ಲಕ್ಷ್ಮಣ ಪೈ ಈಗ ಮನೆಯಿಂದ ಕಾಣೆಯಾಗಿದ್ದಾರೆ. ಪೊಲೀಸರು ಆರೋಪಿಗಾಗಿ ಹುಡುಕಾಟ ಮಾಡುತ್ತಿದ್ದಾರೆ. ಎರಡು ದಿನಗಳ ಕಾಲ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ವೆಂಕಟೇಶ್ ಪೈ ಮತ್ತು ವೀಣಾ ಪೈ ದಂಪತಿಯ ಮತ್ತಿಬ್ಬರು ಮಕ್ಕಳು ತಮ್ಮ ಜೊತೆ ಇರಿಸಿಕೊಂಡಿದ್ದಾರೆ. ಈ ಇಬ್ಬರು ವೃದ್ಧರ ಅವಸ್ಥೆಯನ್ನು ನೋಡಿದ್ರೆ ಎಂತಹವರಿಗೂ ಕರುಳು ಚುರ್ ಅನ್ನದೇ ಇರದು.

     

  • ನಡುರಸ್ತೆಯಲ್ಲೇ ಜುಟ್ಟು ಹಿಡಿದು ಫೈಟ್- ಹೆಂಡ್ತೀರ ಜಗಳಕ್ಕೆ ಗಂಡಂದಿರು ಹೈರಾಣ!

    ನಡುರಸ್ತೆಯಲ್ಲೇ ಜುಟ್ಟು ಹಿಡಿದು ಫೈಟ್- ಹೆಂಡ್ತೀರ ಜಗಳಕ್ಕೆ ಗಂಡಂದಿರು ಹೈರಾಣ!

    ತುಮಕೂರು: ಬೈಕ್ ಹಾಗೂ ಹೋಂಡಾ ಆಕ್ಟಿವಾ ನಡುವೆ ಲಘುವಾಗಿ ಡಿಕ್ಕಿ ಆಗಿದ್ದನ್ನೇ ನೆಪವಾಗಿಸಿಕೊಂಡು ಇಬ್ಬರು ಮಹಿಳೆಯರು ನಡುರಸ್ತೆಯಲ್ಲೇ ಪರಸ್ಪರ ಜಡೆ ಹಿಡಿದು ಕಿತ್ತಾಡಿಕೊಂಡ ಘಟನೆ ತುಮಕೂರಿನಲ್ಲಿ ನಡೆದಿದೆ.

    http://www.youtube.com/watch?v=p96tVIZmwnY

    ನಗರದ ಕೋತಿತೋಪಿನಲ್ಲಿ ರಸ್ತೆಯ ಹಂಪ್ಸ್ ದಾಟುವಾಗ ಪರಸ್ಪರ ಎರಡೂ ವಾಹನಗಳ ನಡುವೆ ಲಘುವಾಗಿ ಡಿಕ್ಕಿ ಸಂಭವಿಸಿದೆ. ಈ ಎರಡೂ ವಾಹನಗಳಲ್ಲಿ ದಂಪತಿಗಳೇ ಇದ್ದರು. ಆರಂಭದಲ್ಲಿ ಪುರುಷರ ನಡುವೆ ಮಾತಿನ ಚಕಮಕಿ ನಡೆದಿದೆ. ಬಳಿಕ ಮಧ್ಯಪ್ರವೇಶಿಸಿದ ಮಹಿಳೆಯರು ಇಬ್ಬರೂ ಅವಾಚ್ಯ ಶಬ್ದಗಳಿಂದ ಬೈದಾಡಿಕೊಂಡಿದ್ದಾರೆ. ಜಡೆ ಹಿಡಿದುಕೊಂಡು ಹೊಡೆದಾಟ ಮಾಡಿಕೊಂಡಿದ್ದಾರೆ.

    ಕ್ಷುಲ್ಲಕ ಕಾರಣಕ್ಕೆ ನಡೆದ ಈ ಜಗಳ ಸಾರ್ವಜನಿಕರಿಗೆ ಪುಕ್ಕಟೆ ಮನರಂಜನೆ ನೀಡಿದೆ. ಈ ವೇಳೆ ತಮ್ಮ ತಮ್ಮ ಪತ್ನಿಯರನ್ನು ಬಿಡಿಸಲು ಗಂಡಂದಿರು ಹರಸಾಹಸ ಪಟ್ಟರೂ ಸಾಧ್ಯವಾಗದೆ ಸುಸ್ತಾದ್ರು.

     

  • ತಾಯಿ ಮೇಲಿನ ಕೋಪಕ್ಕೆ ಮಗುವನ್ನು ಹತ್ಯೆಗೈದು ಸಂಪಿಗೆ ಎಸೆದನಾ ಪಕ್ಕದ ಮನೆಯ ವ್ಯಕ್ತಿ?

    ತಾಯಿ ಮೇಲಿನ ಕೋಪಕ್ಕೆ ಮಗುವನ್ನು ಹತ್ಯೆಗೈದು ಸಂಪಿಗೆ ಎಸೆದನಾ ಪಕ್ಕದ ಮನೆಯ ವ್ಯಕ್ತಿ?

    ಬೆಂಗಳೂರು: ತಾಯಿ ಮೇಲಿನ ಕೋಪಕ್ಕೆ ಪಕ್ಕದ ಮನೆಯ ವ್ಯಕ್ತಿಯೊಬ್ಬ ಮಗುವನ್ನು ಹತ್ಯೆಗೈದು ಬಳಿಕ ಸಂಪಿಗೆ ಎಸೆದ ಘಟನೆ ಬೆಂಗಳೂರಿನ ಬಿಳೇಕಹಳ್ಳಿ ಬಳಿ ನಡೆದಿದೆ.

    6 ವರ್ಷ ವಯಸ್ಸಿನ ಮನೋಜ್ ಕುಮಾರ್ ಮೃತ ಬಾಲಕ. ಸಂಪಿನಲ್ಲಿ ಬಾಲಕ ಮನೋಜ್ ಕುಮಾರ್ ಶವ ಪತ್ತೆಯಾಗಿದೆ. ಕೊಲೆ ಮಾಡಿ ಸಂಪಿಗೆ ಎಸೆದಿರುವ ಶಂಕೆ ವ್ಯಕ್ತವಾಗಿದೆ.

    ಪ್ರಕರಣ ಸಂಬಂಧ ನೆರೆ ಮನೆಯ ಮಹೇಶ್ ಎಂಬಾತನ ಮೇಲೆ ಸಂಶಯ ವ್ಯಕ್ತವಾಗುತ್ತಿದೆ. ಕ್ಷುಲ್ಲಕ ವಿಚಾರಕ್ಕೆ ಮನೋಜ್ ತಾಯಿ ಹಾಗೂ ಮಹೇಶ್ ನಡುವೆ ಜಗಳವಾಗಿತ್ತು. ಹೀಗಾಗಿ ತಾಯಿ ಮೇಲಿನ ಕೋಪಕ್ಕೆ ಮಗನ ಕೊಲೆ ಮಾಡಿರಬಹುದೆಂದು ಶಂಕೆ ವ್ಯಕ್ತವಾಗಿದೆ.

    ಇಂದು ಮುಂಜಾನೆ 8 ಗಂಟೆಯ ಸುಮಾರಿಗೆ ಈ ಘಟನೆ ಬೆಳಕಿಗೆ ಬಂದಿದೆ. ಮಗು ಆಟವಾಡುತ್ತಿದ್ದ ಸಂದರ್ಭದಲ್ಲಿ ಆರೋಪಿ ಕರೆದುಕೊಂಡು ಹೋಗಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಪಕ್ಕದಲ್ಲಿರೋ ನಿರ್ಮಾಣ ಹಂತದ ಕಟ್ಟಡದ ಖಾಲಿ ಇರೋ ಸಂಪಿಗೆ ಎಸೆದು ಹೋಗಿದ್ದಾನೆ ಎನ್ನಲಾಗಿದೆ. ಇತ್ತ ಮಗು ಕಾಣದಾಗ ಪೋಷಕರು ಹುಡುಕಾಟ ಆರಂಭಿಸಿದ್ದಾರೆ. ಈ ವೇಳೆ ಸಂಪಿನಲ್ಲಿ ಮಗನ ಶವ ಪತ್ತೆಯಾಗಿದ್ದು, ಕೂಡಲೇ ಮಗುವಿನ ತಂದೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಸ್ಥಳಕ್ಕೆ ಮೈಕೋ ಲೇಔಟ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ನೆರಮನೆಯ ಮಹೇಶ್‍ನನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈ ಸಂಬಂಧ ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    https://www.youtube.com/watch?v=UnciRuwp7GU