Tag: ಜಗಳ

  • ಪತ್ನಿ ಶೀಲ ಶಂಕಿಸಿ ಜಗಳವಾಡಿದ ಪತಿಗೆ ಬೆಂಕಿ ಹಚ್ಚಿದ ಪತ್ನಿ, ಮಕ್ಕಳು

    ಪತ್ನಿ ಶೀಲ ಶಂಕಿಸಿ ಜಗಳವಾಡಿದ ಪತಿಗೆ ಬೆಂಕಿ ಹಚ್ಚಿದ ಪತ್ನಿ, ಮಕ್ಕಳು

    ಕೊಪ್ಪಳ: ಪತ್ನಿ ಶೀಲ ಶಂಕಿಸಿ ಜಗಳವಾಡಿದ ಪತಿಗೆ ಆತನ ಪತ್ನಿ ಹಾಗೂ ಮಕ್ಕಳು ಸೇರಿ ಬೆಂಕಿ ಹಚ್ಚಿರೋ ಘಟನೆ ಕೊಪ್ಪಳ ದಲ್ಲಿ ನಡೆದಿದೆ.

    ಯಲಬುರ್ಗಾ ತಾಲೂಕಿನ ಹರಿಶಂಕರಬಂಡಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಪ್ರಭಯ್ಯ ಹಿರೇಮಠ್ ಎಂಬ ವ್ಯಕ್ತಿಗೆ ಪತ್ನಿ ದಾಕ್ಷಾಯಣಿ, ಮಕ್ಕಳಾದ ಕುಮಾರಸ್ವಾಮಿ, ವೀರಯ್ಯ ಹಾಗೂ ತಮ್ಮನ ಪತ್ನಿ ಸುಮಿತ್ರಾ ಎನ್ನುವವರು ಬೆಂಕಿ ಹಚ್ಚಿದ್ದಾರೆ. ಅದೃಷ್ಟವಶಾತ್ ಪ್ರಭಯ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಂಕಿ ಹಚ್ಚಿದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

    ಪ್ರಭಯ್ಯ ಮೂಲತಃ ಗದಗ ಜಿಲ್ಲೆ ರೋಣ ತಾಲೂಕಿನ ನರೇಗಲ್ ನಿವಾಸಿ. ಕಳೆದ ಐದು ವರ್ಷಗಳಿಂದ ಹರಿಶಂಕರಬಂಡಿಯಲ್ಲಿ ವಾಸವಾಗಿದ್ದರು. ಇಂದು ಮುಂಜಾನೆ ಹೆಂಡತಿಯೊಂದಿಗೆ ಜಗಳ ಮಾಡಿಕೊಂಡಿದ್ದು, ಇದರಿಂದ ರೊಚ್ಚಿಗೆದ್ದ ಪತ್ನಿ ಹಾಗೂ ಮಕ್ಕಳು ಪ್ರಭಯ್ಯನಿಗೆ ಬೆಂಕಿ ಹಚ್ಚಿದ್ದರು.

    ಸದ್ಯ ಪ್ರಭಯ್ಯನಿಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆ ಕುಕನೂರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

                                                                             ವೀರಯ್ಯ
                                                                          ಕುಮಾರಸ್ವಾಮಿ
                                                                              ದಾಕ್ಷಾಯಣಿ
                                                                            ಸುಮಿತ್ರಾ

  • ಮಂಗಳೂರು ಜೈಲಲ್ಲಿ 2 ಗುಂಪುಗಳ ಮಧ್ಯೆ ಮಾರಾಮಾರಿ: ಪೊಲೀಸರಿಂದ ಲಾಠಿಚಾರ್ಜ್

    ಮಂಗಳೂರು ಜೈಲಲ್ಲಿ 2 ಗುಂಪುಗಳ ಮಧ್ಯೆ ಮಾರಾಮಾರಿ: ಪೊಲೀಸರಿಂದ ಲಾಠಿಚಾರ್ಜ್

    ಮಂಗಳೂರು: ಕೇಂದ್ರ ಕಾರಾಗೃಹದಲ್ಲಿ 2 ಗುಂಪುಗಳ ನಡುವೆ ಮಾರಾಮಾರಿ ನಡೆದಿದ್ದು ಪೊಲೀಸರು ಲಾಠಿಚಾರ್ಜ್ ನಡೆಸಿದ್ದಾರೆ.

    ಟ್ಯೂಬ್ ಲೈಟ್, ಕಲ್ಲು, ಅಲ್ಯೂಮಿನಿಯಂ ಫ್ರೇಂ ನಿಂದ ಕೈದಿಗಳು ಬಡಿದಾಡಿಕೊಂಡಿದ್ದು, ಜಗಳ ಬಿಡಿಸಲು ಹೋದ ಪೊಲೀಸರ ಮೇಲೆಯೇ ಕೈದಿಗಳ ದಾಳಿ ನಡೆಸಿದ್ದಾರೆ. 5 ಜನ ಕೈದಿಗಳಿಗೆ ಗಂಭೀರ ಗಾಯಗೊಂಡಿದ್ದರೆ, 6 ಮಂದಿ ಪೊಲೀಸರು ಗಾಯಗೊಂಡಿದ್ದಾರೆ. ಈ ಘಟನೆಯಲ್ಲಿ ಪೊಲೀಸ್ ಸಿಬ್ಬಂದಿಯ ಕೈ ಮುರಿದಿದೆ.

    ಗಲಾಟೆ ನಿಲ್ಲಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ. ಮನವಿಗೂ ಕ್ಯಾರೇ ಎನ್ನದೇ ಕೈದಿಗಳು ಬಡಿದಾಟ ಮುಂದುವರಿಸಿದ್ದಕ್ಕೆ ಪೊಲೀಸರು ಅನಿವಾರ್ಯವಾಗಿ ಲಾಠಿಚಾರ್ಜ್ ಮಾಡಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಈ ಘಟನೆಯ ಬಳಿಕ ಜೈಲಿನೊಳಗೆ ಡಿಸಿಪಿ ಹನುಮಂತರಾಯ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿದ್ದಾರೆ.

  • ಕ್ಷುಲ್ಲಕ ಕಾರಣಕ್ಕೆ ಇಬ್ಬರು ಯುವಕರಿಗೆ ಚಾಕುವಿನಿಂದ ಎದೆಯ ಭಾಗಕ್ಕೆ ಇರಿದು ಹಲ್ಲೆ

    ಕ್ಷುಲ್ಲಕ ಕಾರಣಕ್ಕೆ ಇಬ್ಬರು ಯುವಕರಿಗೆ ಚಾಕುವಿನಿಂದ ಎದೆಯ ಭಾಗಕ್ಕೆ ಇರಿದು ಹಲ್ಲೆ

    ದಾವಣಗೆರೆ: ಕ್ಷುಲ್ಲಕ ಕಾರಣಕ್ಕೆ ಇಬ್ಬರು ಮುಸ್ಲಿಂ ಯುವಕರಿಗೆ ಚಾಕುವಿನಿಂದ ಎದೆಯ ಭಾಗಕ್ಕೆ ಇರಿದು ಹಲ್ಲೆ ಮಾಡಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ.

    ನಗರದ ಮಂಡಕ್ಕಿ ಭಟ್ಟಿ ಹಿಂಭಾಗದ ಕೊರಚರಹಟ್ಟಿಯಲ್ಲಿ ಘಟನೆ ನಡೆದಿದೆ. ಜೀಲಾನಿ(22) ಹಾಗೂ ಇಮ್ರಾನ್(18) ಇರಿತಕ್ಕೊಳಗಾದ ಯುವಕರು ಎಂದು ಗುರುತಿಸಲಾಗಿದೆ.

    ಅದೇ ಏರಿಯಾದ ದುಗ್ಗೇಶ್ ಹಾಗೂ ಆತನ ಸ್ನೇಹಿತರು ಹಲ್ಲೆಗೊಳಗಾದ ಯುವಕರ ಪಕ್ಕದ ಮನೆಯವರೊಂದಿಗೆ ಜಗಳವಾಡುತ್ತಿದ್ದರು. ಸ್ಥಳದಲ್ಲಿದ್ದ ಈ ಇಬ್ಬರು ಯುವಕರು ಜಗಳ ಬಿಡಿಸಲು ಹೋದ ಸಂದರ್ಭದಲ್ಲಿ ಅಕ್ರೋಶಗೊಂಡ ದುಗ್ಗೇಶ್ ಆತನ ಸ್ನೇಹಿತರು ಜಿಲಾನಿ ಹಾಗೂ ಇಮ್ರಾನ್ ಗೆ ಚಾಕುವಿನಿಂದ ಹಲ್ಲೆ ಮಾಡಿದ್ದಾರೆ. ಹಲ್ಲೆಗೊಳಗಾದ ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

    ಹಲ್ಲೆ ಮಾಡಿದ ದುಗ್ಗೇಶ್‍ನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಹಲ್ಲೆಯಾದ ಸ್ಥಳದಲ್ಲಿ ಬಿಗುವಿನ ವಾತವರಣವಿದೆ. ಘಟನಾ ಸ್ಥಳದಲ್ಲಿ ಜಿಲ್ಲಾಧಿಕಾರಿ ಡಿಎಸ್ ರಮೇಶ್ ಹಾಗೂ ಎಸ್‍ಪಿ ಭೀಮಾಶಂಕರ್ ಗುಳೇದ್ ಬೀಡು ಬಿಟ್ಟಿದ್ದು, ಪೊಲೀಸರು ನಗರದಾದ್ಯಂತ ಹೈ ಹಲರ್ಟ್ ಘೋಷಣೆ ಮಾಡಿದ್ದಾರೆ.

    ಹಲ್ಲೆಗೊಳಗಾದ ಯುವಕರಿಗೆ ಶಸ್ತ್ರ ಚಿಕಿತ್ಸೆ ನಡೆಯುತ್ತಿದ್ದು ಜೀವಕ್ಕೆ ಅಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಇಲ್ಲಸಲ್ಲದ ಊಹಾ ಪೋಹಗಳಿಗೆ ಕಿವಿಗೊಡಬಾರದೆಂದು ಎಸ್‍ಪಿ ಭೀಮಾಶಂಕರ್ ಗುಳೇದ್ ಮನವಿ ಮಾಡಿದ್ದಾರೆ.

  • ಪಾಪ.. ನಾಯಿಗೆ ಹೊಡಿಬೇಡ ಅಂತಾ ಹೇಳಿದ್ದ ವ್ಯಕ್ತಿ ಮೇಲೆಯೇ ಹಲ್ಲೆ

    ಪಾಪ.. ನಾಯಿಗೆ ಹೊಡಿಬೇಡ ಅಂತಾ ಹೇಳಿದ್ದ ವ್ಯಕ್ತಿ ಮೇಲೆಯೇ ಹಲ್ಲೆ

    ಯಾದಗಿರಿ: ಪಾಪ, ಆ ನಾಯಿಗೆ ಹೊಡಿಯಬೇಡ ಅಂತಾ ಹೇಳಿದ್ದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿರುವ ಘಟನೆ ಜಿಲ್ಲೆಯ ಸುರಪುರ ತಾಲೂಕಿನ ಗೆದ್ದಲಮರಿ ಗ್ರಾಮದಲ್ಲಿ ನಡೆದಿದೆ.

    ಬಸಪ್ಪ ಎಂಬವರೇ ಹಲ್ಲೆಗೊಳಾಗದ ವ್ಯಕ್ತಿ. ಗೆದ್ದಲಮರಿ ಗ್ರಾಮದ ನಿವಾಸಿ ಪರಮಣ್ಣ ಎಂಬವರ ಸಾಕು ನಾಯಿ ನೆರೆಮನೆಯ ಬಸಪ್ಪರ ಮನೆಗೆ ನಾಲ್ಕು ತಿಂಗಳಿನಿಂದ ಹೋಗುತ್ತಿತ್ತು. ಇಂದು ಸಹ ಪರಮಣ್ಣರ ನಾಯಿ ಬಸಪ್ಪರ ಮನೆಗೆ ನುಗ್ಗಿದೆ. ಇದರಿಂದ ಕೋಪಗೊಂಡ ಪರಮಣ್ಣ ಮತ್ತು ಆತನ ಮಗ ಸಾಬಣ್ಣ ನಾಯಿಗೆ ಹೊಡೆದಿದ್ದಾರೆ.

    ಈ ವೇಳೆ ಬಸಪ್ಪ ನಾಯಿಗೆ ಏತಕ್ಕೆ ಹೊಡೆಯುತ್ತೀರಿ, ಹೊಡೆಯಬೇಡಿ ಅಂತಾ ಹೇಳಿದ್ದಾರೆ. ಬುದ್ದಿಮಾತು ಹೇಳಿದಕ್ಕೆ ಕೋಪಗೊಂಡ ಪರಮಣ್ಣ ಮತ್ತು ಸಾಬಣ್ಣ ಇಬ್ಬರೂ ಸೇರಿಕೊಂಡು ಬಸಪ್ಪರ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆಗೊಳಗಾದ ಬಸಪ್ಪರನ್ನು ಕೊಡೇಕಲ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೊಡೇಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಎಣ್ಣೆ ಹೊಡೆಯುವಾಗ ಜಗಳ- ಯುವಕನ ಕತ್ತು ಕುಯ್ದು ಕೊಂದೇಬಿಟ್ರು ಸ್ನೇಹಿತರು

    ಎಣ್ಣೆ ಹೊಡೆಯುವಾಗ ಜಗಳ- ಯುವಕನ ಕತ್ತು ಕುಯ್ದು ಕೊಂದೇಬಿಟ್ರು ಸ್ನೇಹಿತರು

    ರಾಮನಗರ: ಹೊಸ ವರ್ಷ ಆಚರಣೆ ಸಂದರ್ಭದಲ್ಲಿ ಮದ್ಯಸೇವನೆ ವೇಳೆ ಉಂಟಾದ ಕ್ಷುಲ್ಲಕ ಜಗಳಕ್ಕೆ ಸ್ನೇಹಿತರೇ ಯುವಕನೋರ್ವನ ಕತ್ತು ಕುಯ್ದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರು ದಕ್ಷಿಣ ತಾಲೂಕಿನ ಗುಡಿಮಾವು ಗ್ರಾಮದಲ್ಲಿ ನಡೆದಿದೆ.

    ದೇವಗೆರೆ ಗ್ರಾಮದ ನಿವಾಸಿ ನವೀನ್(27) ಕೊಲೆಯಾದ ಯುವಕ. ಕಳೆದ ರಾತ್ರಿ ಸ್ನೇಹಿತರ ಜೊತೆ ಹೊಸ ವರ್ಷದ ಪಾರ್ಟಿ ಮಾಡಿದ್ದ ನವೀನ್ ಸ್ನೇಹಿತರಿಂದಲೇ ಹತ್ಯೆಯಾಗಿದ್ದಾನೆ. ಆನಂದ್ ಕುಮಾರ್ ಎಂಬವರಿಗೆ ಸೇರಿದ ನಿರ್ಮಾಣ ಹಂತದ ಕಟ್ಟಡದಲ್ಲಿ ಈ ಘಟನೆ ನಡೆದಿದೆ.

     

    ನಡೆದಿದ್ದೇನು?: ಮದ್ಯ ಸೇವನೆ ವೇಳೆ ಸಣ್ಣ ವಿಚಾರಕ್ಕೆ ಕಿರಿಕ್ ನಡೆದಿದೆ. ಈ ವೇಳೆ ಮಾತಿನ ಚಕಮಕಿ ಉಂಟಾಗಿ ಹೊಡೆದಾಟ ನಡೆದಿದೆ. ಈ ವೇಳೆ ನವೀನ್ ಸ್ನೇಹಿತರು ಆತನ ಕೊಲೆ ಮಾಡಿ ನಂತರ ಆರೋಪಿಗಳು ಪರಾರಿಯಾಗಿದ್ದಾರೆ.

    ಘಟನೆ ಸಂಬಂಧ ಸ್ಥಳಕ್ಕೆ ಹಾರೋಹಳ್ಳಿ ಸರ್ಕಲ್ ಇನ್ಸ್ ಪೆಕ್ಟರ್ ನಂದೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

  • ಜಗಳವಾಡಿ ಮನೆ ಬಿಟ್ಟು ಹೋಗ್ತಿದ್ದ ಹೆಂಡ್ತಿಗೆ ಚಿನ್ನದ ಒಡವೆ ಕೊಡು ಎಂದ ಪತಿ- ನಡುಬೀದಿಯಲ್ಲಿ ರಂಪಾಟ

    ಜಗಳವಾಡಿ ಮನೆ ಬಿಟ್ಟು ಹೋಗ್ತಿದ್ದ ಹೆಂಡ್ತಿಗೆ ಚಿನ್ನದ ಒಡವೆ ಕೊಡು ಎಂದ ಪತಿ- ನಡುಬೀದಿಯಲ್ಲಿ ರಂಪಾಟ

    ತುಮಕೂರು: ಒಡವೆ ವಿಚಾರವಾಗಿ ನಡು ಬೀಡಿಯಲ್ಲಿ ಗಂಡ-ಹೆಂಡತಿ ಜಗಳವಾಡಿರುವ ಘಟನೆ ಜಿಲ್ಲೆಯ ಸರಸ್ವತಿಪುರಂನಲ್ಲಿ ನಡೆದಿದೆ.

    ತುಮಕೂರು ನಗರದ ಸರಸ್ವತಿಪುರಂ ನಿವಾಸಿಗಳಾದ ವಿನೋದಾ, ರಾಜು ಬೀದಿಯಲ್ಲಿ ಜಗಳ ಮಾಡಿಕೊಂಡ ದಂಪತಿ. ವಿನೋದಾ ಪತಿಯೊಂದಿಗೆ ಜಗಳವಾಡಿಕೊಂಡು ಮನೆ ಬಿಟ್ಟು ಹೋಗುತ್ತಿದ್ದು, ಈ ಸಂದರ್ಭದಲ್ಲಿ ವಿನೋದಾ ಆಟೋ ಹತ್ತಿ ಕುಳಿತ್ತಿದ್ದಾರೆ. ಆದರೆ ಪತ್ನಿಯನ್ನ ತಡೆಯಲು ರಾಜು ಮುಂದಾಗಿದ್ದು, ತಾನು ಆಟೋ ಹತ್ತಿ ಕುಳಿತ್ತಿದ್ದಾರೆ.

    ಈ ವೇಳೆ ರಾಜು ವಿನೋದಾ ಧರಿಸಿದ್ದ ಚಿನ್ನದ ಒಡವೆಗಳನ್ನು ಬಿಚ್ಚಿ ಕೊಡುವಂತೆ ಕೇಳಿದ್ದಾರೆ. ಇದರಿಂದ ಕುಪಿತಗೊಂಡ ವಿನೋದಾ ನಡು ಬೀದಿ ಎಂದು ನೋಡದೇ ಪತಿಗೆ ಮನಸೋ ಇಚ್ಛೆ ಬೈದು, ಥಳಿಸಿದ್ದಾರೆ. ಕೊನೆಗೆ ತಾನೇ ಆಟೋದಿಂದ ಇಳಿದು ವಿನೋದಾ ಹೊರಟಿದ್ದಾರೆ. ಅದೇ ಆಟೋ ಹತ್ತಿ ಪತಿ ಅಲ್ಲಿಂದ ಹೋಗಿದ್ದಾರೆ. ಈ ಗಂಡ ಹೆಂಡತಿ ಜಗಳವನ್ನು ಸುತ್ತಾಮುತ್ತಾ ಜನ ನೋಡಿಕೊಂಡು ಸುಮ್ಮನಾಗಿದ್ದಾರೆ.

  • ಹಾಸನದಲ್ಲಿ ಬ್ಯೂಟಿಪಾರ್ಲರ್ ಯುವತಿಯರ ಕಿತ್ತಾಟ – ನಡುಬೀದಿಯಲ್ಲಿ ಜಡೆ ಜಗಳ ಬಿಡಿಸಲು ಹರಸಾಹಸ

    ಹಾಸನದಲ್ಲಿ ಬ್ಯೂಟಿಪಾರ್ಲರ್ ಯುವತಿಯರ ಕಿತ್ತಾಟ – ನಡುಬೀದಿಯಲ್ಲಿ ಜಡೆ ಜಗಳ ಬಿಡಿಸಲು ಹರಸಾಹಸ

    ಹಾಸನ: ಇಬ್ಬರು ಯುವತಿಯರು ನಡುರಸ್ತೆಯಲ್ಲೇ ಪರಸ್ಪರ ಕೊರಳಪಟ್ಟಿ ಹಿಡಿದು ಜಗಳವಾಡಿದ ಘಟನೆ ಹಾಸನದಲ್ಲಿ ನಡೆದಿದೆ.

    ನಗರದ ಪ್ರತಿಷ್ಠಿತ ಎವಿಕೆ ಕಾಲೇಜು ಎದುರಿನ ರಸ್ತೆಯಲ್ಲೇ ಈ ಜಡೆ ಜಗಳ ನಡೆದಿದ್ದು, ಕಾರಣ ಏನೆಂಬುದು ತಿಳಿದುಬಂದಿಲ್ಲ. ಈ ಇಬ್ಬರು ಯುವತಿಯರು ಬ್ಯೂಟಿ ಪಾರ್ಲರ್ ವೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ. ಹಣಕಾಸು ಇಲ್ಲವೇ ಬೇರಾವುದೋ ವೈಯಕ್ತಿಕ ಕಾರಣಕ್ಕೆ ಈ ಜಗಳ ನಡೆದಿರಬಹುದು ಎಂದು ಹೇಳಲಾಗಿದೆ.

    ಯಾರು ಎಷ್ಟೇ ಬುದ್ಧಿವಾದ ಹೇಳಿದ್ರೂ ಕೇಳದೇ ಯುವತಿಯರು ಪರಸ್ಪರ ನಿಂದಿಸುವ ಮೂಲಕ ಕೈ ಕೈ ಮಿಲಾಯಿಸುವ ಹಂತಕ್ಕೂ ಹೋಗಿದ್ರು. ಕೊನೆಗೆ ಮಹಿಳೆಯೊಬ್ಬರು ಮಧ್ಯಪ್ರವೇಶಿಸಿ, ನೀವು ಹೆಣ್ಣಾಗಿ ಹೀಗೆ ಕಚ್ಚಾಡುವುದು ಸರಿಯೇ ಎಂದು ಮಂಗಳಾರತಿ ಮಾಡಿ, ಆಟೋ ಹತ್ತಿಸಿ ಪೊಲೀಸ್ ಠಾಣೆಗೆ ಕಳಿಸಿದರು. ಮಹಿಳಾ ಮಣಿಯರ ವಾಕ್ಸಮರದ ದೃಶ್ಯ ನೆರೆದಿದ್ದವರಿಗೆ ಪುಕ್ಕಟೆ ಮನರಂಜನೆ ನೀಡಿತು.

  • ಬೇಕೇ ಬೇಕು ಗಂಡ ಬೇಕೆಂದು ಪ್ರತಿಭಟನೆ ಕುಳಿತ ಪತ್ನಿ

    ಬೇಕೇ ಬೇಕು ಗಂಡ ಬೇಕೆಂದು ಪ್ರತಿಭಟನೆ ಕುಳಿತ ಪತ್ನಿ

    ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಶೆಟ್ಟಿಹಳ್ಳಿ ಗ್ರಾಮದಲ್ಲಿ ಗೃಹಿಣಿಯೊಬ್ಬರು ಗಂಡ ಬೇಕೆಂದು ಪತಿಯ ಮನೆಯ ಮುಂದೆ ಧರಣಿ ಕುಳಿತಿದ್ದಾರೆ.

    ವೇದ ಎಂಬವರೇ ಪತಿ ಮನೆಯ ಮುಂದೆ ಧರಣಿ ಕುಳಿತ ಗೃಹಿಣಿ. ಹೊಳೆಗೆರೆ ಗ್ರಾಮದ ವೇದರನ್ನು ಒಂದೂವರೆ ವರ್ಷದ ಹಿಂದೆ ಶೆಟ್ಟಿಹಳ್ಳಿ ಗ್ರಾಮದ ಮಂಜುನಾಥ್ ಅವರೊಂದಿಗೆ ಮದುವೆ ಮಾಡಿಕೊಡಲಾಗಿತ್ತು. ಮದುವೆ ಕೂಡ ಎರಡೂ ಗ್ರಾಮಸ್ಥರ ಗುರು-ಹಿರಿಯರ ಸಮ್ಮುಖದಲ್ಲಿಯೇ ನಡೆದಿತ್ತು.

    ಆದರೆ ಮದುವೆಯಾದ 3 ತಿಂಗಳ ನಂತರ ಪತಿ ಮಂಜುನಾಥ್ ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ತವರು ಮನೆ ಸೇರಿದ್ದರು. ಈ ಸಂಬಂಧ ಹಿರಿಯರ ಸಮ್ಮುಖದಲ್ಲಿ ನ್ಯಾಯ ಪಂಚಾಯ್ತಿ ಮಾಡಿದರೂ ಸಂಸಾರ ಸರಿಯಾಗಿರಲಿಲ್ಲ. ಇನ್ನು ವರದಕ್ಷಿಣೆ ತರಲು ಸಾಧ್ಯವಾಗದೇ ಇದ್ದಲ್ಲಿ ವಿಚ್ಛೇದನ ಪತ್ರಕ್ಕೆ ಸಹಿ ಹಾಕುವಂತೆ ಬೆದರಿಕೆ ಹಾಕಲಾಗುತ್ತಿದೆ. ಈ ಸಂಬಂಧ ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ, ನನ್ನ ಪತಿಯೊಂದಿಗೆ ಸಂಸಾರ ನಡೆಸಲು ಅವಕಾಶ ಕಲ್ಪಿಸಬೇಕೆಂದು ದೂರು ದಾಖಲಿಸಿದ್ದೇನೆ. ಇದೂವರೆಗೂ ಪೊಲೀಸರು ಮಾತ್ರ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ವೇದ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

    ಸದ್ಯ ನನಗೆ ನನ್ನ ಗಂಡ ಬೇಕೆಂದು ವೇದ ಪತಿ ಮಂಜುನಾಥ್ ಮನೆಯ ಮುಂದೆ ಧರಣಿ ಕುಳಿತಿದ್ದಾರೆ.

  • ಕಂಠಪೂರ್ತಿ ಕುಡಿದು ಕಚೇರಿಯಲ್ಲೇ ರಂಪಾಟ ನಡೆಸಿದ ಸರ್ಕಾರಿ ನೌಕರ

    ಕಂಠಪೂರ್ತಿ ಕುಡಿದು ಕಚೇರಿಯಲ್ಲೇ ರಂಪಾಟ ನಡೆಸಿದ ಸರ್ಕಾರಿ ನೌಕರ

    ನೆಲಮಂಗಲ: ನಗರದ ಹೊರವಲಯ ನೆಲಮಂಗಲ ಪಟ್ಟಣ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಕಂಠ ಪೂರ್ತಿ ಕುಡಿದು ಬಂದ ಸರ್ಕಾರಿ ನೌಕರನೊಬ್ಬ ಮದ್ಯದ ಅಮಲಿನಲ್ಲಿ ಮತ್ತೊಬ್ಬ ನೌಕರನ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ.

    ಸುರೇಶ್ ಎಂಬವರ ವಿರುದ್ಧವೇ ಕುಡಿದು ಬಂದು ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಸುರೇಶ್ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಸಹಾಯಕನಾಗಿ ಕೆಲಸ ನಿರ್ವಹಿಸುತ್ತಿದ್ದು, ಕ್ಷುಲಕ ವಿಚಾರಕ್ಕೆ ಮತೊಬ್ಬ ನೌಕರ ಉಮೇಶ್ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಹೇಳಲಾಗಿದೆ.

    ಸುರೇಶ್ ಗೆ ಕೆಲಸ ನಿರ್ವಹಿಸಲು ಸೂಚಿಸಿದಾಗ, ನನಗೆ ಕೆಲಸ ಹೇಳಲು ನೀನು ಯಾರು? ನನಗೆ ನನ್ನ ಅಧಿಕಾರಿಗಳೇ ಕೆಲಸ ಮಾಡಲು ಹೇಳಲ್ಲ. ನನಗೆ ನೀನು ಕೆಲಸ ಹೇಳುತ್ತೀಯ ಎಂದು ಗಲಾಟೆ ಮಾಡಿದ್ದಾರೆ. ಇಷ್ಟಲ್ಲದೇ ಉಮೇಶ್ ಅವರಿಗೆ ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿದ್ದಾರೆ.

    ಘಟನೆ ವೇಳೆ ಕಚೇರಿಯ ಉನ್ನತ ಅಧಿಕಾರಿಗಳು ಮಾತನಾಡುವ ಗೋಜಿಗೆ ಬರಲಿಲ್ಲ ಎನ್ನಲಾಗಿದೆ. ನಂತರ ನೆಲಮಂಗಲ ಪಟ್ಟಣ ಪೊಲೀಸರು ಘಟನಾ ಸ್ಥಳಕ್ಕೆ ದಾವಿಸಿ ಕುಡುಕನಿಗೆ ವಾರ್ನ್ ಮಾಡಿ ಕಳುಹಿಸಿದ್ದಾರೆ. ಇನ್ನೂ ಕುಡಿತದ ಮತ್ತಿನಲ್ಲಿದ ನೌಕರ ಸುರೇಶ್ ಮಾಧ್ಯಮಗಳ ಮುಂದೆ ನಾನು ಕುಡಿದಿಲ್ಲ, ಸುಮ್ಮನೆ ಮಾತನಾಡಿಸಲು ಬಂದಿದ್ದೆ ಎಂಬ ಹಾರಿಕೆ ಉತ್ತರ ನೀಡಿ ಜಾರಿಕೊಳ್ಳುವ ಪ್ರಯತ್ನವನ್ನು ನಡೆಸಿದ್ದಾನೆ.

  • ಬೀದಿಗೆ ಬಂದ ಮೇಲುಕೋಟೆ ಯೋಗಾನರಸಿಂಹಸ್ವಾಮಿ ದೇವಾಲಯದ ಅರ್ಚಕರ ಜಗಳ

    ಬೀದಿಗೆ ಬಂದ ಮೇಲುಕೋಟೆ ಯೋಗಾನರಸಿಂಹಸ್ವಾಮಿ ದೇವಾಲಯದ ಅರ್ಚಕರ ಜಗಳ

    ಮಂಡ್ಯ: ಜಿಲ್ಲೆಯ ಪಾಂಡವಪುರ ತಾಲೂಕಿನ ಪ್ರಸಿದ್ಧ ಮೇಲುಕೋಟೆಯ ಯೋಗಾನರಸಿಂಹಸ್ವಾಮಿ ದೇವಾಲಯದ ಅರ್ಚಕರ ಜಗಳ ಬೀದಿಗೆ ಬಂದಿದೆ.

    ಸರ್ಕಾರ ಬೆಟ್ಟದ ಯೋಗಾನರಸಿಂಹಸ್ವಾಮಿಗೆ ಪೂಜೆ ಸಲ್ಲಿಸಲು ಅರ್ಚಕ ನಾರಾಯಣ ಭಟ್ ಅವರನ್ನ ನೇಮಿಸಿತ್ತು. ಆದರೆ ನಾರಾಯಣ ಭಟ್ ತಮ್ಮ ಅನುಪಸ್ಥಿತಿಯಲ್ಲಿ ರಾಮಪ್ರಿಯ ಅವರಿಂದ ಪೂಜೆ ಮಾಡಿಸುತ್ತಿದ್ದರು. ರಾಮಪ್ರಿಯ ಪೂಜೆ ಮಾಡುವುದಕ್ಕೆ ತೀವ್ರವಾಗಿ ವಿರೋಧ ವ್ಯಕ್ತವಾಗಿತ್ತು. ಆದ್ದರಿಂದ ಸರ್ಕಾರ ನಾರಾಯಣ ಭಟ್ ಅರ್ಚಕರ ಅನುಪಸ್ಥಿತಿಯಲ್ಲಿ ಭಾಷ್ಯಂ ಸ್ವಾಮೀಜಿಗೆ ಪೂಜೆ ಸಲ್ಲಿಸಲು ಆದೇಶ ಹೊರಡಿಸಿತ್ತು.

    ಸರ್ಕಾರದ ಆದೇಶದಂತೆ ಸಾಂಕೇತಿಕವಾಗಿ ಸೋಮವಾರ ಸಂಜೆ ಪೂಜೆ ಸಲ್ಲಿಸಲು ಭಾಷ್ಯಂ ಸ್ವಾಮೀಜಿ ಬಂದಿದ್ದರು. ಆದರೆ ನಾರಾಯಣ ಭಟ್ ಅರ್ಚಕರ ಸಾಂಕೇತಿಕ ಪೂಜೆಗೆ ಅವಕಾಶ ನೀಡಲಿಲ್ಲ. ಸರ್ಕಾರ ನನ್ನ ಅನುಪಸ್ಥಿತಿಯಲ್ಲಿ ಪೂಜೆ ಸಲ್ಲಿಸಲು ಆದೇಶ ನೀಡಿದೆ. ಆದರೆ ನಾನಿರುವಾಗಲೇ ಪೂಜೆ ಸಲ್ಲಿಸಲು ಅವಕಾಶ ನೀಡುವುದಿಲ್ಲವೆಂದು ಅರ್ಚಕ ನಾರಾಯಣ ಭಟ್ ಪಟ್ಟು ಹಿಡಿದಿದ್ದಾರೆ. ದೇವಾಲಯದ ಮುಖ್ಯ ಗುಮಾಸ್ಥರು, ಪಾರುಪತ್ತೆದಾರು ಭಾಷ್ಯಂ ಸ್ವಾಮೀಜಿಗೆ ಸಾಂಕೇತಿಕವಾಗಿ ಪೂಜೆ ಸಲ್ಲಿಸಲು ಅವಕಾಶ ಕೊಡಲು ಮನವಿ ಸಲ್ಲಿಸಿದ್ದಾರೆ. ಆದರೆ ಅರ್ಚಕ ನಾರಾಯಣ ಭಟ್ ಅವಕಾಶ ನೀಡಲು ನಿರಾಕರಿಸಿದ್ದಾರೆ.

    ಈ ಹಿನ್ನೆಲೆಯಲ್ಲಿ ಭಕ್ತಾದಿಗಳ ಮುಂದೆಯೇ ಹೈಡ್ರಾಮಾ ನಡೆದಿದ್ದು, ಗರ್ಭಗುಡಿಯ ತೆರೆ ಎಳೆದು ಅರ್ಚಕರ ನಡುವೆ ವಾದ ವಿವಾದ ನಡೆದಿದೆ.ಇದರಿಂದ ಪೂಜೆಗೆ ಆಗಮಿಸಿದ ಭಕ್ತಾದಿಗಳಿಗೂ ತೊಂದರೆ ಆಗಿದೆ. ಹೀಗಾಗಿ ಭಾಷ್ಯಂ ಸ್ವಾಮೀಜಿ ಇಂದು ಪೊಲೀಸ್ ಭದ್ರತೆಯಲ್ಲಿ ಪೂಜೆ ಸಲ್ಲಿಸಲು ಆಗಮಿಸುತ್ತಿದ್ದಾರೆ.