Tag: ಜಗಳ

  • ಹೆಂಡ್ತಿ ಬೇಕು ಹೆಂಡ್ತಿಯೆಂದು ಮೊಬೈಲ್ ಟವರ್ ಏರಿದ್ದ ಪತಿ

    ಹೆಂಡ್ತಿ ಬೇಕು ಹೆಂಡ್ತಿಯೆಂದು ಮೊಬೈಲ್ ಟವರ್ ಏರಿದ್ದ ಪತಿ

    ಚಾಮರಾಜನಗರ: ಪತಿ ಪ್ರತಿದಿನ ಕುಡಿದು ಬಂದು ಹೊಡೆದು ಬಡಿದು ಗಲಾಟೆ ಮಾಡುತ್ತಿದ್ದ ಎಂದು ಪತ್ನಿ ಆತನ ಕಿರುಕುಳ ಸಹಿಸದೆ ಪಂಚಾಯ್ತಿ ಮೊರೆ ಹೋಗಿದ್ದರು. ಆದರೆ ಪಂಚಾಯ್ತಿಯವರು ಬೇರೆ ಬೇರೆಯಾಗಿರಿ ಎಂದು ತೀರ್ಮಾನ ಕೊಟ್ಟಿದ್ದರು. ಆದರೆ ಪತಿ ತನ್ನ ಪತ್ನಿಯನ್ನು ಬಿಟ್ಟಿರಲಾರದೇ ಮೊಬೈಲ್ ಟವರ್ ಏರಿದ್ದನು.

    ಚಾಮರಾಜನಗರ ತಾಲೂಕು ವೆಂಕಟಯ್ಯನ ಛತ್ರದ ಮಹೇಶ್‍ಗೆ 11 ವರ್ಷಗಳ ಹಿಂದೆ ಅದೇ ಗ್ರಾಮದ ಜಯಲಕ್ಷ್ಮಿಯೊಂದಿಗೆ ಮದುವೆಯಾಗಿತ್ತು. ಇಬ್ಬರಿಗೆ ಒಂದು ಹೆಣ್ಣು ಮಗು ಕೂಡ ಇದೆ. ಆದರೆ ಮಹೇಶ್ ಪ್ರತಿ ದಿನ ಕುಡಿದು ಬಂದು ಪತ್ನಿಗೆ ಹೊಡೆದು, ಬಡಿದು ಜಗಳವಾಡುತ್ತಿದ್ದ. ಪತಿಯ ಕಿರುಕುಳ ತಾಳಲಾರದೆ ಪತ್ನಿ ಊರ ಪಂಚಾಯ್ತಿಗೆ ದೂರು ಕೊಟ್ಟಿದ್ದರು. ಪಂಚಾಯ್ತಿ ಮುಖಂಡರು ಇಬ್ಬರು ಬೇರೆ ಬೇರೆ ಇರುವಂತೆ ಸೂಚಿಸಿದ್ದರು. ಅದರಂತೆ ಇಬ್ಬರು ಕೆಲ ತಿಂಗಳಿಂದ ಬೇರೆ ಬೇರೆ ಇದ್ದರು.

    ಕಳೆದ ಹದಿನೈದು ದಿನಗಳಿಂದ ಬೇರೆ ಇದ್ದ ಪತಿ ಮಹೇಶ್ ಗೆ ಪತ್ನಿಯನ್ನು ಬಿಟ್ಟಿರಲಾರದೆ ತನ್ನ ಹೆಂಡ್ತಿ ಬೇಕು ಅಂತ ಹೇಳಿ ಶುಕ್ರವಾರ ಮತ್ತೆ ಕಂಠಪೂರ್ತಿ ಕುಡಿದು ಗ್ರಾಮದ ಹೊರವಲಯದಲ್ಲಿದ್ದ ಮೊಬೈಲ್ ಟವರ್ ಏರಿ ಕುಳಿತನು. ಟವರ್ ಏರಿದ್ದ ಮಹೇಶನನ್ನು ಕೆಳಗಿಳಿಯುವಂತೆ ಗ್ರಾಮಸ್ಥರು ಪರಿಪರಿಯಾಗಿ ಕೂಗಿ ಹೇಳಿದ್ರೂ ಆತ ಕೆಳಗಿಳಿಯಲೇ ಇಲ್ಲ.

    ಮಹೇಶ್ ಸುಮಾರು ಮೂರು ಗಂಟೆ ಕಾಲ ಅಲ್ಲಿಯೇ ಕುಳಿತಿದ್ದ. ಕಂಠಪೂರ್ತಿ ಕುಡಿದಿದ್ದ ಮಹೇಶ್ ಎಲ್ಲಿ ಅಲ್ಲಿಂದ ಕೆಳಗೆ ಬೀಳುತ್ತಾನೋ ಎಂಬ ಆತಂಕ ಎಲ್ಲರಿಗಿತ್ತು. ವಿಷಯ ತಿಳಿದ ಚಾಮರಾಜನಗರ ಪೂರ್ವ ಗ್ರಾಮಾಂತರ ಪೊಲೀಸರು ಹಾಗು ಅಗ್ನಿಶಾಮಕ ದಳದ ಸಿಬ್ಬಂದಿ ಟವರ್ ಏರಿ ಕುಳಿತಿದ್ದ ಪತಿ ಮಹೇಶ್‍ನನ್ನು ಕೆಳಗಿಳಿಸಲು ಹರಸಾಹಸಪಟ್ಟರು.

    ಸತತ ಎರಡು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದ ಪೊಲೀಸ್ ಹಾಗು ಅಗ್ನಿಶಾಮಕ ಸಿಬ್ಬಂದಿ ಕೊನೆಗೂ ಟವರ್ ಏರಿದ್ದ ಮಹೇಶ್‍ನನ್ನು ಸುರಕ್ಷಿತವಾಗಿ ಕೆಳಗಿಳಿಸುವಲ್ಲಿ ಸಫಲರಾದರು. ಹೆಂಡ್ತಿ ಬೇಕು ಹೆಂಡ್ತಿ ಅಂತ ಟವರ್ ಏರಿದ್ದ ಪತಿರಾಯನನ್ನು ಸುರಕ್ಷಿತವಾಗಿ ಕೆಳಗಿಳಿಸಿದಾಗ ಅಲ್ಲಿದ್ದವರೆಲ್ಲ ನಿಟ್ಟುಸಿರು ಬಿಟ್ಟರು. ಟವರ್ ಏರಿ ಎಲ್ಲರಿಗೂ ಟೆನ್ಷನ್ ಕೊಟ್ಟ ಮಹೇಶ್ ಸದ್ಯಕ್ಕೆ ಪೊಲೀಸರ ಅತಿಥಿಯಾಗಿದ್ದಾನೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಟಿವಿ ರಿಮೋಟ್ ಗಾಗಿ 7 ವರ್ಷದ ತಮ್ಮನ ಜೊತೆ ಜಗಳ- ಅಕ್ಕ ನೇಣಿಗೆ ಶರಣು

    ಟಿವಿ ರಿಮೋಟ್ ಗಾಗಿ 7 ವರ್ಷದ ತಮ್ಮನ ಜೊತೆ ಜಗಳ- ಅಕ್ಕ ನೇಣಿಗೆ ಶರಣು

    ನವದೆಹಲಿ: ಟಿವಿ ರಿಮೋಟ್ ನಿಂದ ಆರಂಭವಾದ ಅಕ್ಕ-ತಮ್ಮನ ಜಗಳ ಆತ್ಮಹತ್ಯೆ ಮಾಡಿಕೊಳ್ಳುವಲ್ಲಿ ಅಂತ್ಯವಾದ ಹೀನಾಯ ಘಟನೆ ನವದೆಹಲಿಯಲ್ಲಿ ನಡೆದಿದೆ.

    ಈ ಘಟೆನೆ ಬುಧವಾರ ದೆಹಲಿಯ ಸೀಮಾಪುರಿಯಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಬಾಲಕಿಗೆ 12 ವರ್ಷ ವಯಸ್ಸು ಎಂಬುದಾಗಿ ವರದಿಯಾಗಿದೆ.

    ಏನಿದು ಘಟನೆ?:
    ಬಾಲಕಿ ತನ್ನ 7 ವರ್ಷದ ತಮ್ಮ ಹಾಗೂ 17 ವರ್ಷದ ಅಣ್ಣನ ಜೊತೆ ಕುಳಿತು ಟಿವಿ ನೋಡುತ್ತಿದ್ದಳು. ಸ್ವಲ್ಪ ಹೊತ್ತು ಟಿವಿ ನೋಡಿದ ಅಣ್ಣ ಬಳಿಕ ಓದಲೆಂದು ತನ್ನ ಕೋಣೆಗೆ ತೆರಳಿದ್ದಾನೆ. ತಮ್ಮ ಟಿವಿ ನೋಡುತ್ತಾ ಅಪ್ಪ- ಅಮ್ಮನ ಬರುವಿಕೆಯನ್ನು ಕಾಯುತ್ತಿದ್ದನು.

    ಸಂಜೆ ಸುಮಾರು 5.5ರ ಸುಮಾರಿಗೆ ಬಾಲಕಿಯ ನೆಚ್ಚಿನ ಶೋ ಒಂದನ್ನು ನೋಡಲು ತಮ್ಮನ ಬಳಿ ರಿಮೋಟ್ ಕೇಳಿದ್ದಾಳೆ. ಆದ್ರೆ ಬಾಲಕ ರಿಮೋಟ್ ಕೊಡಲು ನಿರಾಕರಿಸಿದ್ದಾನೆ. ಶೋ 6 ಗಂಟೆಗೆ ಆರಂಭವಾಗುತ್ತದೆ ಎಂದಾಗ ಆಕೆ ಮತ್ತೆ ರಿಮೋಟ್ ಕೊಡುವಂತೆ ಕೇಳಿದ್ದಾಳೆ. ಆದ್ರೆ ಈ ವೇಳೆಯೂ ಆತ ತಾನು ಕೊಡಲ್ಲ ಅಂತ ಹೇಳಿ ತನ್ನ ಪಾಡಿಗೆ ತಾನು ಟಿವಿ ನೋಡುತ್ತಾ ಕುಳಿತಿದ್ದನು.

    ಇದರಿಂದ ಸಿಟ್ಟುಗೊಂಡ ಬಾಲಕಿ ತಮ್ಮನಿಗೆ ಸರಿಯಾಗಿ ಥಳಿಸಿ ನಂತರ ಬೆಡ್ ರೂಮಿಗೆ ತೆರಳಿ ಗಟ್ಟಿಯಾಗಿ ಬಾಗಿಲು ಹಾಕಿಕೊಂಡಿದ್ದಾಳೆ. ಈ ವೇಳೆ ಅಕ್ಕ ತನಗೆ ಹೊಡೆದಿದ್ದನ್ನು ಲೆಕ್ಕಿಸದೆ ಕೂಡಲೇ ತಮ್ಮ ಅಲ್ಲಿಗೆ ತೆರಳಿ ಬಾಗಿಲು ತೆರೆಯುವಂತೆ ಕೇಳಿಕೊಂಡಿದ್ದಾನೆ. ಹೀಗೆ ಸುಮಾರು ಹೊತ್ತು ಡೋರ್ ಓಪನ್ ಮಾಡುವಂತೆ ಕೇಳಿಕೊಂಡರೂ ಆಕೆ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ತೋರಲಿಲ್ಲ. ಇದರಿಂದ ಗಾಬರಿಗೊಂಡ ತಮ್ಮ ನೇರವಾಗಿ ಅಣ್ಣನ ಬಳಿ ಹೋಗಿ ವಿಷಯ ತಿಳಿಸಿದ್ದಾನೆ.

    ತಕ್ಷಣವೇ ರೂಮಿನ ಬಳಿ ಬಂದ ಅಣ್ಣ ಬಾಗಿಲು ಒಡೆದಿದ್ದಾನೆ. ಈ ವೇಳೆ ತಂಗಿ ಫ್ಯಾನ್ ಗೆ ನೇಣು ಬಿಗಿದುಕೊಂಡಿದ್ದಳು. ಇದರಿಂದ ಗಾಬರಿಗೊಂಡ ಅಣ್ಣ ಹಾಗೂ ತಮ್ಮ ಸೇರಿ ಬಾಲಕಿಯನ್ನು ಕುಣಿಕೆಯಿಂದ ಬಿಡಿಸಿ ಕೆಳಗಿಳಿಸಿ ಕೂಡಲೇ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲದೇ ಇತ್ತ ನಡೆದ ಘಟನೆಯನ್ನು ಹೆತ್ತವರಿಗೂ ತಿಳಿಸಿದ್ದಾರೆ.

    ಆದ್ರೆ ಬಾಲಕಿಯ ಸ್ಥಿತಿ ಗಂಭೀರವಾಗಿತ್ತು. ಭಾನುವಾರ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದಾಳೆ. ಪೊಲೀಸರು ಬಾಲಕಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ನಂತರ ಆಕೆಯ ಪೋಷಕರಿಗೆ ಒಪ್ಪಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮದ್ಯದ ಅಮಲಿನಲ್ಲಿ ವ್ಯಕ್ತಿಯನ್ನು ಕೊಲೆಗೈದ ಕುಡುಕ!

    ಮದ್ಯದ ಅಮಲಿನಲ್ಲಿ ವ್ಯಕ್ತಿಯನ್ನು ಕೊಲೆಗೈದ ಕುಡುಕ!

    ಕೋಲಾರ: ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬ ಕ್ಷುಲ್ಲಕ ಕಾರಣಕ್ಕಾಗಿ ಜಗಳಕ್ಕೆ ಇಳಿದು ಬಳಿಕ ಎಲ್ಲರೊಂದಿಗೆ ಅಸಭ್ಯವಾಗಿ ವರ್ತಿಸಿ ಬಾರ್ ನಲ್ಲಿದ್ದ ಓರ್ವನನ್ನು ಕೊಲೆ ಮಾಡಿದ ಘಟನೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕು ಟೇಕಲ್ ಗ್ರಾಮದಲ್ಲಿ ನಡೆದಿದೆ.

    ಮಾಲೂರು ತಾಲೂಕಿನ ಶೆಟ್ಟಿಹಳ್ಳಿಯ ಚಂದ್ರಪ್ಪ (35) ಮೃತ ದುರ್ದೈವಿ. ಬನಹಳ್ಳಿಯ ನಿವಾಸಿ ಅಶ್ವಥ್ ಕೊಲೆಗೈದ ಆರೋಪಿ. ಸ್ಥಳದಲ್ಲಿಯೇ ಇದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದೆ.

    ವಿಡಿಯೋದಲ್ಲಿ ಏನಿದೆ?:
    ಎಂ.ಎಸ್.ಆನಂದ್ ಎಂಬವರಿಗೆ ಸೇರಿದ ಟೇಕಲ್ ಗ್ರಾಮದ ಶ್ರೀನಿವಾಸ ಬಾರ್ ಅಂಡ್ ರೆಸ್ಟೋರೆಂಟ್ ಕೌಂಟರ್ ಗೆ ಎಂದಿನಂತೆ ಇಂದು ಮಧ್ಯಾಹ್ನ ಮದ್ಯ ಸೇವಿಸಲು ಜನರು ಬಂದಿದ್ದರು. ಚಂದ್ರಪ್ಪ, ತಿಮ್ಮರಾಯಪ್ಪ ಸೇರಿದಂತೆ ಅನೇಕರು ಬಾರ್ ನ ಒಂದು ರೂಮ್‍ನಲ್ಲಿ ಕುಳಿತು ಕುಡಿಯುತ್ತಿದ್ದರು. ಈ ವೇಳೆ ಇಲ್ಲಿಗೆ ಬಂದ ಅಶ್ವಥ್ ತಿಮ್ಮರಾಯಪ್ಪ ಅವರ ಜೊತೆಗೆ ಜಗಳಕ್ಕೆ ಇಳಿದಿದ್ದಾನೆ. ಬೀಯರ್ ಬಾಟಲ್‍ನಿಂದ ಹಲ್ಲೆಗೆ ಯತ್ನಿಸಿದ್ದ. ಅದೃಷ್ಟವಶಾತ್ ಬೀಯರ್ ಬಾಟಲ್ ಗುರಿಯಿಂದ ತಿಮ್ಮರಾಯಪ್ಪ ತಪ್ಪಿಸಿಕೊಂಡು ಭಾರೀ ಅನಾಹುತದಿಂದ ಪಾರಾದರು.

    ಅಷ್ಟಕ್ಕೆ ಜಗಳ ನಿಲ್ಲಿಸದ ಅಶ್ವತ್ ಚಂದ್ರಪ್ಪನನ್ನು ಎಳೆದುಕೊಂಡು ಬಾರ್ ಕೌಂಟರ್ ಬಳಿಗೆ ಹೋಗಿದ್ದಾನೆ. ಈ ವೇಳೆ ಹಲ್ಲೆ ಮಾಡಿ, ಹಿಂದಕ್ಕೆ ನೂಕಿದ್ದಾನೆ. ಚಂದ್ರಪ್ಪ ಹಿಂದಕ್ಕೆ ಬಿದ್ದ ಪರಿಣಾಮ ತಲೆಗೆ ಬಲವಾಗಿ ಹೊಡೆತ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

    ಈ ಕುರಿತು ಮಾಸ್ತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಅಶ್ವಥ್‍ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬೀದಿಗೆ ಬಂದ ಕಲಬುರಗಿಯ ಹೊಸಮಠದ ಜಗಳ

    ಬೀದಿಗೆ ಬಂದ ಕಲಬುರಗಿಯ ಹೊಸಮಠದ ಜಗಳ

    ಕಲಬುರಗಿ: ತೊಗರಿ ಕಣಜ ಕಲಬುರಗಿಯಲ್ಲಿ ಮಠದ ಪೀಠಕ್ಕಾಗಿ ದಶಕದ ಹಿಂದೆ ರಕ್ತದೋಕುಳಿ ಹರಿದಿದ್ದು ಇತಿಹಾಸ. ಇದೀಗ ಅದೇ ಸಾಲಿಗೆ ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ನರೋಣಾ ಗ್ರಾಮದ ಹೊಸಮಠ ಇದೀಗ ಸುದ್ದಿಯಲ್ಲಿದೆ. ಅಕ್ಟೋಬರ್ 29ರಂದು ಈ ಮಠದ ಪೀಠಾಧಿಪತಿಯಾಗಲು ಶ್ರೀ ಚೆನ್ನಮಲ್ಲದೇವರು ಸಜ್ಜಾಗಿದ್ದಾರೆ.

    ಶ್ರೀ ಚೆನ್ನಮಲ್ಲದೇವರು ಪೀಠಾಧಿಪತಿ ಆಗೋದನ್ನು ಈ ಮಠದ ಮೂಲ ಮಠವಾದ ಶ್ರೀಗುರುಬಸವೇಶ್ವರ ಬ್ರಹನ್ಮಠದ ಭಕ್ತರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಸ್ವಾಮೀಜಿಯ ಮೇಲೆ ಲೈಂಗಿಕ ಕಿರುಕುಳದ ಆರೋಪವಿದೆ. ಹೀಗಾಗಿ ಮಠದ ಪೀಠ ಸ್ವಿಕರಿಸಲು ಸ್ವಾಮೀಜಿಯನ್ನು ಬಿಡಲ್ಲ ಅಂತಿದ್ದಾರೆ.

    ಒಂದೆಡೆ ಚೆನ್ನಮಲ್ಲದೇವರು ಸ್ವಾಮೀಜಿಗೇ ವಿರೋಧವಿದ್ರೆ, ಇತ್ತ ನರೋಣಾ ಗ್ರಾಮದ ಜನ ಶ್ರೀಗಳ ಬೆನ್ನಿಗೆ ನಿಂತಿದ್ದಾರೆ. ಮೂಲ ಮಠದ ವಿರೋಧ ಕುರಿತು ಚೆನ್ನಮಲ ಸ್ವಾಮೀಜಿಯನ್ನು ಕೇಳಿದ್ರೆ, ನಾನೇ ಮೂಲ ಮಠದ ಸ್ವಾಮಿ ಆಗಬೇಕಿತ್ತು. ಆದರೆ ಷಡ್ಯಂತ್ರ ಮಾಡಿ ನನ್ನ ಮೇಲೆ ಇಲ್ಲ-ಸಲ್ಲದ ಆರೋಪ ಮಾಡಲಾಗುತ್ತಿದೆ. ಇದರ ಹಿಂದೆ ಇನ್ನಿತರ ಮಠಾಧೀಶರ ಕೈವಾಡವಿದೆ ಎಂದು ಶ್ರೀ ಚೆನ್ನಮಲ್ಲದೇವರು ಆರೋಪಿಸುತ್ತಾರೆ.

    ಮೂಲ ಮಠ ಮತ್ತು ಶಾಖಾ ಮಠದ ಜಗಳದಿಂದ ಇದೀಗ ಗ್ರಾಮದಲ್ಲಿ ಆತಂಕ ಮೂಡಿದೆ. ಈ ಎರಡು ಮಠಗಳ ಜಗಳ ತಾರಕಕೆರುವ ಮುನ್ನ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಡುರಸ್ತೆಯಲ್ಲಿಯೇ ಹೋರಿಗಳ ಮಧ್ಯೆ ಜಟಾಪಟಿ- ವಿಡಿಯೋ ನೋಡಿ

    ನಡುರಸ್ತೆಯಲ್ಲಿಯೇ ಹೋರಿಗಳ ಮಧ್ಯೆ ಜಟಾಪಟಿ- ವಿಡಿಯೋ ನೋಡಿ

    ಕೊಪ್ಪಳ: ಜಿಲ್ಲೆಯ ಮುಚಗೇರ ಓಣಿಯಲ್ಲಿ ಬೆಳ್ಳಂಬೆಳಗ್ಗೆ ಎರಡು ಬೀದಿ ಹೋರಿಗಳು ಪರಸ್ಪರ ಗುದ್ದಾಡಿಕೊಂಡಿದ್ದು, ಅವುಗಳ ಜಗಳ ಬಿಡಿಸಲು ಸ್ಥಳೀಯರು ಹರಸಾಹಸ ಪಟ್ಟಿದ್ದಾರೆ.

    ಹೋರಿಗಳ ಜಗಳದ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ. ಹೋರಿಗಳ ಮೇಲೆ ನೀರು ಎರಚಿದ್ರೂ ಅವುಗಳು ತಮ್ಮ ಗುದ್ದಾಟವನ್ನು ನಿಲ್ಲಿಸಿಲ್ಲ. ಇದರಿಂದ ಗಾಬರಿಗೊಂಡ ಸ್ಥಳೀಯರು ಕೋಲಿನಿಂದ ಬಡಿದಿದ್ದಾರೆ.

    ನಡು ರಸ್ತೆಯಲ್ಲಿ ಅರ್ಧ ಗಂಟೆಗಳ ಹೋರಿಗಳು ಗುದ್ದಾಟ ನಡೆಸುತ್ತಿದ್ದವು. ಗುದ್ದಾಟದಿಂದ ಅವುಗಳಿಗೆ ಪ್ರಾಣಾಪಾಯ ಆಗಬಾರದು ಅನ್ನೋ ಉದ್ದೇಶದಿಂದ ಕೋಲಿನಿಂದ ಹೊಡೆದು ಸ್ಥಳೀಯರು ಅವುಗಳ ಜಗಳ ಬಿಡಿಸಿದ್ದಾರೆ. ಟಗರು ಕಾಳಗದಂತೆ ಎರಡು ಬೀದಿ ಹೋರಿಗಳು ಗುದ್ದಾಟ ಮಾಡ್ತಿರೋದು ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದೆ.

    ನಡು ರಸ್ತೆಯಲ್ಲಿ ನಡೆಯುತ್ತಿದ್ದ ಹೋರಿಗಳ ಫೈಟ್ ಕೆಲ ಕಾಲ ಸ್ಥಳೀಯರಿಗೆ ಮನರಂಜನೆ ನೀಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=rdTjzzK6Uqs

  • ಸೆಕ್ಸ್ ಗೆ ಒಪ್ಪದ ಪತ್ನಿಯನ್ನು ಮಲಗಿದ್ದಲ್ಲೇ ಕೊಂದುಬಿಟ್ಟ!

    ಸೆಕ್ಸ್ ಗೆ ಒಪ್ಪದ ಪತ್ನಿಯನ್ನು ಮಲಗಿದ್ದಲ್ಲೇ ಕೊಂದುಬಿಟ್ಟ!

    ಚೆನ್ನೈ: ಗಂಡ-ಹೆಂಡತಿ ಜಗಳ ಉಂಡು ಮಲಗೋ ತನಕ ಅನ್ನೋ ಗಾದೆ ಇದೆ. ಆದ್ರೆ ಇಲ್ಲೊಬ್ಬ ಪತಿರಾಯ ತನ್ನ ಜೊತೆ ಸೆಕ್ಸ್‍ಗೆ ಒಪ್ಪುತ್ತಿಲ್ಲವೆಂದು ಸಿಟ್ಟುಗೊಂಡು ಮಲಗಿದ್ದ ಪತ್ನಿಯನ್ನೇ ಬರ್ಬರವಾಗಿ ಕೊಲೆಗೈದ ಘಟನೆ ತಮಿಳುನಾಡಿನ ತ್ರಿಚಿಯ ತಿರುವೆರಂಬುರ್ ಎಂಬಲ್ಲಿ ನಡೆದಿದೆ.

    ಈ ಘಟನೆ ಭಾನುವಾರ ನಡೆದಿದ್ದು, 34 ವರ್ಷದ ವ್ಯಕ್ತಿ ತನ್ನ 26 ವರ್ಷದ ಪತ್ನಿಯ ಕತ್ತು ಹಿಸುಕಿ ಬರ್ಬರವಾಗಿ ಕೊಲೆಗೈದಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಆರೋಪಿ ಪತಿ ಕಟ್ಟೂರಿನ ಡಿ ಶಂಕರ್ ಸಗಯರಾಜ್ ನನ್ನು ತಿರುವೆರಂಬುರ್ ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

    ಏನಿದು ಪ್ರಕರಣ?:
    ಸಗಯರಾಜ್ ಹಾಗೂ ಜೆಸಿಂತಾ ಕಳೆದ ಜನವರಿ ತಿಂಗಳಲ್ಲಿ ಮದುವೆಯಾಗಿದ್ದರು. ಬಳಿಕ ಕೆಲ ವಾರಗಳ ನಂತರ ಇಬ್ಬರ ಮಧ್ಯೆ ಜಗಳಗಳು ಆರಂಭವಾಗಿತ್ತು. ಸಗಯರಾಜ್, ಇನ್ಶುರೆನ್ಸ್ ಕಂಪನಿಯೊಂದರಲ್ಲಿ ಏಜೆಂಟ್ ಆಗಿದ್ದು, ಕೆಲಸಕ್ಕೆ ಸರಿಯಾಗಿ ಹೋಗುತ್ತಿರಲಿಲ್ಲ. ಹೀಗಾಗಿ ಮೊದಲು ಈ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ಮಧ್ಯೆ ಆಗಾಗ ಜಗಳ ಆಗುತ್ತಿತ್ತು.

    ಕೆಲ ತಿಂಗಳು ಕಳೆದ ಬಳಿಕ ಸಗಯರಾಜ್ ಪತ್ನಿಗೆ ಗೊತ್ತಿಲ್ಲದಂತೆ ಆಕೆಯ 2.5 ಪವನ್ ಚಿನ್ನವನ್ನು ಅಡವಿಟ್ಟಿದ್ದನು. ಕ್ರಮೇಣ ಈ ವಿಚಾರ ಜೆಸಿಂತಾರಿಗೆ ತಿಳಿಯುತ್ತಿದ್ದಂತೆ ಈ ಬಗ್ಗೆಯೂ ಇಬ್ಬರು ಕಿತ್ತಾಡಿಕೊಂಡರು.

    ಪತಿಯ ನಡತೆಯ ಬಗ್ಗೆ ಬೇಸರಗೊಂಡ ಪತ್ನಿ ಜೆಸಿಂತಾ ತನ್ನ ತವರು ಮನೆಗೆ ವಾಪಸ್ಸಾಗಿದ್ದರು. ತವರು ಮನೆಗೆ ಹೋದ ಪತ್ನಿ ವಾಪಸ್ಸಾಗದಿದ್ದನ್ನು ಮನಗಂಡ ಸಗಯರಾಜ್, ಸೆ.30ರಂದು ತನ್ನ ಪೋಷಕರ ಜೊತೆ ಜೆಸಿಂತಾ ಮನೆಗೆ ಹೋಗಿದ್ದಾನೆ. ಅಲ್ಲದೇ ಆಕೆಯ ಹೆತ್ತವರ ಜೊತೆ ಮಾತುಕತೆಯ ಮೂಲಕ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿ ಮಡದಿಯನ್ನು ವಾಪಸ್ ಕರೆದುಕೊಂಡು ಬಂದಿದ್ದಾನೆ.

    ಆದ್ರೆ ಶನಿವಾರ ರಾತ್ರಿ ಸೆಕ್ಸ್ ವಿಚಾರವಾಗಿ ಮತ್ತೆ ಇಬ್ಬರ ಮಧ್ಯೆ ಜಗಳ ಆರಂಭವಾಗಿದೆ. ತನ್ನ ಜೊತೆ ಸೆಕ್ಸ್ ಮಾಡಲು ಯಾಕೆ ಒಪ್ಪುತ್ತಿಲ್ಲವೆಂದು ಪತಿ, ಪತ್ನಿ ಜೊತೆ ಜಗಳ ಶುರು ಮಾಡಿದ್ದಾನೆ. ಈ ಗಲಾಟೆಯ ಬಳಿಕ ಜೆಸಿಂತಾ ನಿದ್ದೆಗೆ ಜಾರಿದ್ದರು. ಆದ್ರೆ ಪತಿರಾಯ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಪತ್ನಿಯ ಕತ್ತು ಸೀಳಿ ಕೊಲೆ ಮಾಡಿದ್ದಾನೆ ಅಂತ ತಿರುವೆರಂಬುರ್ ಪೊಲೀಸ್ ಇನ್ಸ್ ಪೆಕ್ಟರ್ ಜ್ಞಾನವೇಲನ್ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದುನಿಯಾ ವಿಜಿ, ಕಿಟ್ಟಿ ಜಗಳದ ಅಸಲಿ ಸತ್ಯ ಬಹಿರಂಗ

    ದುನಿಯಾ ವಿಜಿ, ಕಿಟ್ಟಿ ಜಗಳದ ಅಸಲಿ ಸತ್ಯ ಬಹಿರಂಗ

    ಬೆಂಗಳೂರು: ಸ್ಯಾಂಡಲ್ ವುಡ್ ನಟ ದುನಿಯಾ ವಿಜಯ್ ಮತ್ತು ಜಿಮ್ ಟ್ರೈನರ್ ಪಾನಿಪುರಿ ಕಿಟ್ಟಿ ಜಗಳದ ಅಸಲಿ ಕತೆ ಈಗ ಬಹಿರಂಗವಾಗಿದೆ.

    ದುನಿಯಾ ವಿಜಯ್ ನಟನೆಯ ಮಾಸ್ತಿಗುಡಿ ಚಿತ್ರಕ್ಕೆ ಪಾನಿಪುರಿ ಕಿಟ್ಟಿ, 40 ಲಕ್ಷ ಫೈನಾನ್ಸ್ ಮಾಡಿದ್ದರು. ಮಾಸ್ತಿಗುಡಿ ಚಿತ್ರದ ಇಬ್ಬರು ಖಳನಟರಾದ ಉದಯ್ ಮತ್ತು ಅನಿಲ್ ಮೂಲಕ ಕಿಟ್ಟಿ 40 ಲಕ್ಷ ಹಣ ಫೈನಾನ್ಸ್ ಮಾಡಿದ್ದರು. ನಂತರ ಚಿತ್ರ ಬಿಡುಗಡೆಯಾದ ಬಳಿಕ ಪಾನೀಪುರಿ ಕಿಟ್ಟಿ 40 ಲಕ್ಷ ಹಣ ವಾಪಸ್ ಕೇಳಿದರು. ಕಿಟ್ಟಿ ಫೈನಾನ್ಸ್ ಮಾಡಿದ್ದ ಹಣ ನೀಡಲು ಚಿತ್ರ ನಿರ್ಮಾಪಕ ಸುಂದರ್ ಗೌಡ ಮತ್ತು ವಿಜಯ್ ಮೀನಾ ಮೇಷ ಎಣಿಸಿದ್ದು ಕಿಟ್ಟಿ ಬೇಸರಕ್ಕೆ ಕಾರಣವಾಗಿದೆ.

    ಮಾಸ್ತಿಗುಡಿ ಚಿತ್ರದ ಖಳನಟ ಅನಿಲ್ ಮೂಲಕ 40 ಲಕ್ಷ ಫೈನಾನ್ಸ್ ಕೊಟ್ಟಿದ್ದ ಕಿಟ್ಟಿ ಬಳಿಕ ಹಣ ವಾಪಸ್ ಕೇಳಿದ್ದರು. ಈ ವೇಳೆ ಸದ್ಯಕ್ಕೆ ಹಣ ಇಲ್ಲ, ಫಿಲಂ ಲಾಸ್ ಆಗೋಯ್ತು ಅಂತಾ ವಿಜಯ್ ಮತ್ತು ನಿರ್ಮಾಪಕ ಸುಂದರ್ ಪಿ ಗೌಡ ಹೇಳಿದ್ದರು. ಅಲ್ಲದೇ ಇಂದು ಕೊಡ್ತೀವಿ, ನಾಳೆ ಕೊಡ್ತೀವಿ ಅಂತ ಹೇಳಿ ದಿನ ಕಳೆದಂತೆ ಮಾತಿನ ವರಸೆ ಬದಲಾಯಿಸಿದ್ದರು. ಹೀಗೆ ಘಟನೆ ಹಿಂದಿನ ಹಲವು ಸತ್ಯ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

    ಫೈನಾನ್ಸ್ ವಿಚಾರ ತಾರಕ್ಕೇರುತ್ತಿದ್ದಂತೆ ಅನಿಲ್‍ಗೆ ತಾನೇ ಹಣ ಕೊಟ್ಟಿದ್ದು ಅವರ ಬಳಿ ತೆಗೆದುಕೋ ಎಂದು ದುನಿಯಾ ವಿಜಿ ಹಾಗೂ ಸುಂದರ್ ಗೌಡ ಹೇಳಿದ್ದಾರೆ. ಇದೇ ವಿಚಾರದಿಂದ ಇಬ್ಬರ ನಡುವೆ ಸಣ್ಣ ಮನಸ್ತಾಪ ಹುಟ್ಟಿದ್ದು, ಆಪ್ತ ಸ್ನೇಹಿತರ ನಡುವೆ ದ್ವೇಷದ ಕಿಡಿ ಹೊತ್ತಿಸಿತ್ತು. ಅಂದಿನಿಂದ ವಿಜಯ್ ಮತ್ತು ಕಿಟ್ಟಿ ಹಾವು ಮುಂಗುಸಿಯಂತಾಗಿದ್ದು, ಕಳೆದ ಶನಿವಾರ ಅಂಬೇಡ್ಕರ್ ಭವನದಲ್ಲಿ ನಡೆದ ಬಾಡಿ ಬೀಲ್ಡಿಂಗ್ ಕಾಂಪಿಟೇಷನ್ ವೇಳೆ ಸ್ಫೋಟಗೊಂಡಿದೆ ಎನ್ನಲಾಗಿದೆ.

    ಸದ್ಯ ಈ ಬಗ್ಗೆ ಪ್ರತಿಕ್ರಿಯೆ ಕೊಟ್ಟಿರುವ ಕಿಟ್ಟಿ, ನಾನು ಯಾವುದೇ ಫೈನಾನ್ಸ್ ಮಾಡಿಲ್ಲ. ಮಾಸ್ತಿಗುಡಿಗೆ 40 ಲಕ್ಷ ಕೊಟ್ಟಿದ್ದೆ ಎನ್ನುವುದು ಸುಳ್ಳು. ಅನಿಲ್ ಹಣ ಹೂಡಿದ್ದರು ಎಂದು ಹೇಳಿದ್ದಾರೆ. ಸದ್ಯ ಪ್ರಕರಣದ ವಿಚಾರಣೆ ನಡೆಯುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರೋಗಿಗಳ ಮುಂದೆಯೇ ಜಡೆ ಜಗಳ: ನರ್ಸ್-ಫಾರ್ಮಸಿಸ್ಟ್ ನಡುವೆ ಚಕಮಕಿ

    ರೋಗಿಗಳ ಮುಂದೆಯೇ ಜಡೆ ಜಗಳ: ನರ್ಸ್-ಫಾರ್ಮಸಿಸ್ಟ್ ನಡುವೆ ಚಕಮಕಿ

    ಕೊಪ್ಪಳ: ರೋಗಿಗಳ ಮುಂದೆಯೇ ಜಿಲ್ಲೆಯ ಪ್ರಾಥಮಿಕ ಸರ್ಕಾರಿ ಆಸ್ಪತ್ರೆಯೊಂದರ ನರ್ಸ್ ಹಾಗೂ ಫಾರ್ಮಸಿಸ್ಟ್ ಜಗಳವಾಡಿದ್ದಾರೆ. ಈ ದೃಶ್ಯವನ್ನು ಸ್ಥಳೀಯರೊಬ್ಬರು ಮೊಬೈಲ್‍ನಲ್ಲಿ ಸೆರೆ ಹಿಡಿದು, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

    ಕಾರಟಗಿ ತಾಲೂಕಿನ ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇಂದು ನಡೆದಿದೆ. ಸಿಬ್ಬಂದಿಯ ಜಗಳದ ವಿಡಿಯೋ ವೈರಲ್ ಆಗುತ್ತಿದ್ದಂತೆ ಮಾಹಿತಿ ಪಡೆದ ಡಿಎಚ್‍ಒ ವಿರುಪಾಕ್ಷರೆಡ್ಡಿ ಮಾದಿನೂರು ಆಸ್ಪತ್ರೆಗೆ ಭೇಟಿ ನೀಡಿ ಇಬ್ಬರಿಗೂ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಆಗಿದ್ದೇನು? ಸಿದ್ದಾಪುರ ಪ್ರಾಥಮಿಕ ಆಸ್ಪತ್ರೆಯ ವೈದ್ಯರು ಸಭೆ ಇರುವುದರಿಂದ ಕೊಪ್ಪಳಕ್ಕೆ ಹೋಗಿದ್ದರು. ಈ ವೇಳೆ ಆಸ್ಪತ್ರೆಗೆ ಬಂದಿದ್ದ ಕೆಲ ರೋಗಿಗಳನ್ನು ತಪಾಸಣೆ ಮಾಡಿದ ನರ್ಸ್ ಗೀತಾ ಔಷಧಿ ಬರೆದುಕೊಟ್ಟಿದ್ದಾರೆ. ಆದರೆ ಫಾರ್ಮಸಿಸ್ಟ್ ಶಿಲ್ಪಾ ಔಷಧಿ ಕೊಡಲು ನಿರಾಕರಿಸಿದ್ದಾರೆ. ಒಂದು ವೇಳೆ ನೀವು ನೀಡಿದ ಔಷಧಿ ರೋಗಿಗಳ ಮೇಲೆ ದುಷ್ಪರಿಣಾಮ ಬೀರಿದರೆ ನಾನು ಹೊಣೆಯಾಗುತ್ತೇನೆ ಎಂದು ಪಟ್ಟು ಹಿಡಿದಿದ್ದರು.

    ಔಷಧ ನೀಡುವ ಕೌಂಟರ್ ಗೆ ಬಂದ ನರ್ಸ್ ಗೀತಾ, ಶಿಲ್ಪಾ ಅವರ ಮೇಲೆ ರೇಗಾಡಿದ್ದಾರೆ. ಕೆಲ ಹೊತ್ತು ಮಾತಿನ ಚಕಮಕಿ ಉಂಟಾಗಿದೆ. ಈ ವೇಳೆ ಆಸ್ಪತ್ರೆಯಲ್ಲಿದ್ದ ಸ್ಥಳೀಯರೊಬ್ಬರು ಮೊಬೈಲ್‍ನಲ್ಲಿ ಸಿಬ್ಬಂದಿಯ ಜಗಳವನ್ನು ಚಿತ್ರೀಕರಿಸಿ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ನೀರಿಗಾಗಿ 9 ತಿಂಗಳ ತುಂಬು ಗರ್ಭಿಣಿಯನ್ನು ಕಚ್ಚಿದ ಮಹಿಳೆ

    ನೀರಿಗಾಗಿ 9 ತಿಂಗಳ ತುಂಬು ಗರ್ಭಿಣಿಯನ್ನು ಕಚ್ಚಿದ ಮಹಿಳೆ

    ಬೆಂಗಳೂರು: ನೀರಿಗಾಗಿ 9 ತಿಂಗಳ ತುಂಬು ಗರ್ಭಿಣಿಯನ್ನು ಮಹಿಳೆಯೊಬ್ಬಳು ರಕ್ತ ಬರುವ ಹಾಗೆ ಕಚ್ಚಿರುವ ಪ್ರಕರಣವೊಂದು ಬೆಂಗಳೂರಿನ ರಾಜಾನುಕುಂಟೆಯಲ್ಲಿ ನಡೆದಿದೆ.

    ಅನಿತಾ(50) ನೀರಿಗಾಗಿ 9 ತಿಂಗಳ ತುಂಬು ಗರ್ಭಿಣಿಯನ್ನು ಕಚ್ಚಿದ ಮಹಿಳೆ. ಅನಿತಾ ತುಂಬು ಗರ್ಭೀಣಿ ಜಯದೇವಿ(29)ಯನ್ನು ಬಾಯಿಂದ ಕಚ್ಚಿ ಗಂಭೀರ ಗಾಯಗೊಳಿಸಿದ್ದಾಳೆ. ಇದನ್ನು ತಡೆಯಲು ಬಂದ ಜಯದೇವಿ ತಂಗಿ ಅನಿತಾ ಮಡಿವಾಳಗೂ ಆಕೆ ಕಚ್ಚಿ ಗಾಯಗೊಳಿಸಿದ್ದಾಳೆ.

    ನೀರಿಗಾಗಿ ಮಹಿಳೆಯೊಬ್ಬಳು ರಕ್ತ ಬರುವ ಹಾಗೆ ಕಚ್ಚಿ ಇಬ್ಬರು ಸಹೋದರಿಯರನ್ನು ಗಾಯಗೊಳಿಸಿದ್ದು, ಗಾಯಾಳುಗಳು ರಾಜಾನುಕುಂಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುರುವಾರ ರಾತ್ರಿ 9 ಗಂಟೆ ಸುಮಾರಿಗೆ ರಾಜಾನುಕುಂಟೆಯಲ್ಲಿ ಈ ನೀರಿನ ಜಗಳ ನಡೆದಿದೆ.

    ಅನಿತಾ ಮತ್ತು ಆಕೆಯ ಇಬ್ಬರು ಮಕ್ಕಳು ನ್ಯಾಯ ಕೇಳಲು ಬಂದ ಗರ್ಭಿಣಿಯ ಯಜಮಾನ ಶಂಕರ್ ಅವರ ಮೇಲು ಹಲ್ಲೆ ನಡೆಸಿದ್ದಾರೆ. ಶಂಕರ್ ದಂಪತಿ ಸಿಂಗನಾಯಕನಹಳ್ಳಿಯ ರಾಜಣ್ಣ ಅವರ ಮನೆಯಲ್ಲಿ ಬಾಡಿಗೆಗೆ ವಾಸಿಸುತ್ತಿದ್ದಾರೆ. ಪಕ್ಕದ ಮನೆಯವಳಾದ ಅನಿತಾ ಜಗಳ ತೆಗೆದಿದ್ದನ್ನು ಶಂಕರ್ ಪ್ರಶ್ನಿಸಿದ್ದಾರೆ.

    ಈ ಸಂಬಂಧ ಶಂಕರ್ ತನ್ನ ಪತ್ನಿ, ನಾದಿನಿ ಮತ್ತು ತನ್ನ ಮೇಲೆ ನಡೆದಿರುವ ಹಲ್ಲೆ ಖಂಡಿಸಿ ರಾಜಾನುಕುಂಟೆ ಪೊಲೀಸರಿಗೆ ದೂರು ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಪತಿಯಿಂದಲೇ ಪತ್ನಿ ಕುತ್ತಿಗೆಗೆ ಚಾಕು ಇರಿತ!

    ಪತಿಯಿಂದಲೇ ಪತ್ನಿ ಕುತ್ತಿಗೆಗೆ ಚಾಕು ಇರಿತ!

    ದಾವಣಗೆರೆ: ಪತ್ನಿಯ ಮೇಲೆ ಪತಿ ಚಾಕುವಿನಿಂದ ಇರಿದು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ಪಟ್ಟಣದ ಓಂಕಾರೇಶ್ವರಿ ಬಡಾವಣೆಯಲ್ಲಿ ನಡೆದಿದೆ.

    ದೇವಮ್ಮ(35) ಪತಿ ತಿಪ್ಪೇಸ್ವಾಮಿಯಿಂದಲೇ ಚಾಕುವಿನಿಂದ ಹಲ್ಲೆಗೊಳಗಾದ ಮಹಿಳೆ. 10 ವರ್ಷದ ಹಿಂದೆ ಇಬ್ಬರಿಗೂ ಮದುವೆಯಾಗಿದ್ದು, ಮೂರು ಜನ ಮಕ್ಕಳಿದ್ದಾರೆ.

    ಹಲ್ಲೆಗೊಳಗಾದ ಮಹಿಳೆ ಸಂಬಂಧಿಕರ ಮನೆಗೆ ಹೋಗಿ ಬಂದ ಬಳಿಕ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದದೆ. ಪತ್ನಿಯ ಮಾತುಗಳಿಂದ ಸಿಟ್ಟುಗೊಂಡ ಪತಿ, ದೇವಮ್ಮ ಅವರ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾನೆ. ಪರಿಣಾಮ ಗಂಭೀರ ಗಾಯಗೊಂಡ ದೇವಮ್ಮ ಅವರನ್ನು ಕೂಡಲೇ ಸ್ಥಳೀಯರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

    ಜಗಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv