Tag: ಜಗದೀಪ್ ಧನಕರ್

  • ಉಪರಾಷ್ಟ್ರಪತಿ ಸ್ಥಾನಕ್ಕೆ ಸೆ.9ರಂದು ಚುನಾವಣೆ – ಚುನಾವಣಾ ಆಯೋಗ ಘೋಷಣೆ

    ಉಪರಾಷ್ಟ್ರಪತಿ ಸ್ಥಾನಕ್ಕೆ ಸೆ.9ರಂದು ಚುನಾವಣೆ – ಚುನಾವಣಾ ಆಯೋಗ ಘೋಷಣೆ

    ನವದೆಹಲಿ: ಜಗದೀಪ್‌ ಧನಕರ್‌ (Jagdeep Dhankhar) ಅವರ ರಾಜೀನಾಮೆಯಿಂದ ತೆರವಾಗಿರುವ ಉಪರಾಷ್ಟ್ರಪತಿ ಸ್ಥಾನಕ್ಕೆ ಸೆಪ್ಟೆಂಬರ್‌ 9ರಂದು ಚುನಾವಣೆ (Vice Presidential Election )ನಡೆಯಲಿದೆ.

    ಕೇಂದ್ರ ಚುನಾವಣಾ ಆಯೋಗ (Election Commission)ಉಪರಾಷ್ಟ್ರಪತಿ ಚುನಾವಣೆ ಸಂಬಂಧ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದೆ. ಇದೇ ಆಗಸ್ಟ್‌ 7ರಂದು ಅಧಿಸೂಚನೆ ಪ್ರಕಟವಾಗಲಿದೆ. ಆಗಸ್ಟ್‌ 21ರಂದು ಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ಆಗಸ್ಟ್‌ 22ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ.

    ಆಗಸ್ಟ್‌ 25ರ ಒಳಗೆ ನಾಮಪತ್ರ ಹಿಂಪಡೆಯಲು ಅವಕಾಶ ಇರಲಿದೆ. ಸೆಪ್ಟೆಂಬರ್‌ 9ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆ ವರೆಗೆ ಮತದಾನ ನಡೆಯಲಿದ್ದು, ಅಂದೇ ಫಲಿತಾಂಶ ಪ್ರಕಟವಾಗಲಿದೆ ಎಂದು ಆಯೋಗ ಪ್ರಕಟಣೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ಎಫ್‌-35 ಖರೀದಿಸಲ್ಲ ಎಂದ ಭಾರತ – ತೆರಿಗೆ ಸಮರ ಆರಂಭಿಸಿದ ಟ್ರಂಪ್‌ಗೆ ಶಾಕ್‌

    Jagdeep Dhankhar narendra modi 1

    ಜಗದೀಪ್‌ ಧನಕರ್‌ ರಾಜೀನಾಮೆ ನೀಡಿದ್ದು ಯಾಕೆ?
    74 ವರ್ಷದ ಧನಕರ್‌ ಅವರು ಅನಾರೋಗ್ಯ ಕಾರಣ ನೀಡಿ ಜುಲೈ 21ರಂದು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ರಾಜೀನಾಮೆ ಪತ್ರವನ್ನ ರಾಷ್ಟ್ರಪತಿ ದೌಪದಿ ಮುರ್ಮು ಅವರಿಗೆ ಕಳುಹಿಸಿದ್ದು, ‘ತಕ್ಷಣದಿಂದಲೇ ಜಾರಿಗೆ ಬರುವಂತೆ ರಾಜೀನಾಮೆ ನೀಡುತ್ತಿದ್ದೇನೆ’ ಎಂದು ತಿಳಿಸಿದ್ದರು. ಈ ವೇಳೆ ಅವಕಾಶಕ್ಕಾಗಿ ಪ್ರಧಾನಿ ಮೋದಿ ಅವರಿಗೆ ಧನ್ಯವಾದ ಹೇಳಿದ್ದರು.

    ಧನಕರ್ ಅವರು 2022ರ ಆಗಸ್ಟ್‌ನಲ್ಲಿ ಅಧಿಕಾರ ವಹಿಸಿಕೊಂಡಿದ್ದರು. ಅವರ ಅಧಿಕಾರಾವಧಿ 2027ರ ಆಗಸ್ಟ್ 10ರ ವರೆಗೂ ಇತ್ತು. ರಾಜ್ಯಸಭೆಯ ಸಭಾಪತಿಯೂ ಆಗಿರುವ ಅವರು ಸೋಮವಾರ ಆರಂಭವಾದ ಸಂಸತ್ತಿನ ಮುಂಗಾರು ಅಧಿವೇಶನದ ಮೊದಲ ದಿನ ಕಲಾಪದಲ್ಲಿ ಪಾಲ್ಗೊಂಡಿದ್ದರು. ಇದನ್ನೂ ಓದಿ: ಬಿಹಾರ ಸರ್ಕಾರದಿಂದ ಬಂಪರ್‌ ಗಿಫ್ಟ್‌ – ಬಿಸಿಯೂಟ ತಯಾರಕರು, ದೈಹಿಕ, ಆರೋಗ್ಯ ಶಿಕ್ಷಕರ ಗೌರವಧನ ಡಬಲ್‌

    Jagdeep Dhankhar 2

    ಜನತಾ ದಳದ ಅಭ್ಯರ್ಥಿಯಾಗಿ 1991ರಲ್ಲಿ ರಾಜಕೀಯ ಜೀವನ ಆರಂಭಸಿದ ಧನಕರ್‌ ಆ ಬಳಿಕ ಕಾಂಗ್ರೆಸ್‌ ಸೇರಿದ್ದರು. ನಂತರ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದರು. ಸುಪ್ರೀಂ ಕೋರ್ಟ್‌ನಲ್ಲಿ ಹಿರಿಯ ವಕೀಲರಾಗಿ ಕೆಲಸ ನಿರ್ವಹಿಸುತ್ತಿದ್ದಾಗಲೇ ಬಿಜೆಪಿ ನಾಯಕತ್ವದ ಗಮನ ಸೆಳೆದ ಅವರು 2019ರಲ್ಲಿ ಪಶ್ಚಿಮ ಬಂಗಾಳ ರಾಜ್ಯಪಾಲರಾಗಿ ನೇಮಕಗೊಂಡರು. 2022ರಲ್ಲಿ ಉಪರಾಷ್ಟ್ರಪತಿಯಾಗಿ ಆಯ್ಕೆಯಾದರು. ಇನ್ನು ಸರಿಸುಮಾರು 2 ವರ್ಷಗಳ ಕಾಲ ಉಪರಾಷ್ಟ್ರಪತಿ ಅವಧಿ ಬಾಕಿ ಇದ್ದರೂ ಧನಕರ್ ಆರೋಗ್ಯದ ಕಾರಣದಿಂದ ರಾಜೀನಾಮೆ ನೀಡಿದ್ದಾರೆ.

    ಉಪರಾಷ್ಟ್ರಪತಿ ಆಯ್ಕೆ ಹೇಗೆ ನಡೆಯುತ್ತದೆ?
    ಉಪರಾಷ್ಟ್ರಪತಿ ಚುನಾವಣೆಯಲ್ಲಿ, ರಾಜ್ಯಸಭೆಯ 233 ಚುನಾಯಿತ ಸಂಸದರು, ರಾಜ್ಯಸಭೆಯ 12 ನಾಮನಿರ್ದೇಶಿತ ಸಂಸದರು ಮತ್ತು ಲೋಕಸಭೆಯ 543 ಸಂಸದರು ತಮ್ಮ ಮತಗಳನ್ನು ಚಲಾಯಿಸಬಹುದು. ಈ ರೀತಿಯಾಗಿ, ಒಟ್ಟು 788 ಜನರು ಮತ ಚಲಾಯಿಸಬಹುದು. ಇದನ್ನೂ ಓದಿ: ಆ.1 ರಿಂದ ಹೊಸ UPI ನಿಯಮಗಳು ಜಾರಿಗೆ – ಏನದು ರೂಲ್ಸ್‌?

    ಪಕ್ಷಗಳ ವಿಪ್ ಅಗತ್ಯವಿಲ್ಲದೆ ಗೌಪ್ಯ ಮತಪತ್ರದ ಮೂಲಕ ಮತದಾನ ನಡೆಯುತ್ತದೆ. ರಾಷ್ಟ್ರಪತಿ ಚುನಾವಣೆಯಂತೆ ರಾಜ್ಯಗಳ ವಿಧಾನಸಭೆ ಶಾಸಕ ರಿಗೆ ಮತದಾನದ ಅವಕಾಶವಿಲ್ಲ. ಏಕಮತದಾನ ವರ್ಗಾವಣೆ ವಿಧಾನದಲ್ಲಿ ಪ್ರತಿಯೊಬ್ಬ ಮತದಾರ ಅಭ್ಯರ್ಥಿಗಳನ್ನು ಪ್ರಾಶಸ್ಯದ ಕ್ರಮದಲ್ಲಿ ಶ್ರೇಣೀಕರಿಸುತ್ತಾರೆ. ಅವರ ಪ್ರಾಶಸ್ಯವನ್ನು ಸಂಖ್ಯೆಗಳ ರೂಪದಲ್ಲಿ ಗುರುತಿಸುತ್ತಾರೆ. (ಮೊದಲ ಪ್ರಾಶಸ್ಯಕ್ಕೆ 1, 2ನೇ ಪ್ರಾಶಸ್ಯಕ್ಕೆ 2, ಇತ್ಯಾದಿ.) ಮತಪತ್ರವು ಮಾನ್ಯವಾಗಿರಲು ಮೊದಲ ಪ್ರಾಶಸ್ಯವನ್ನು ಗುರುತಿಸುವುದು ಕಡ್ಡಾಯವಾಗಿದೆ. ನಂತರದ ಆದ್ಯತೆಗಳು ಐಚ್ಛಿಕವಾಗಿರುತ್ತವೆ. ಎಣಿಕೆ ವೇಳೆ ಎಲ್ಲ ಅಭ್ಯರ್ಥಿಗಳಿಗೆ ಸಿಗುವ ಮೊದಲ ಪ್ರಾಶಸ್ಯದ ಮತಗಳನ್ನು ಆರಂಭಿಕವಾಗಿ ಎಣಿಕೆ ಮಾಡಲಾಗುತ್ತದೆ. ಮೊದಲ ಪ್ರಾಶಸ್ಯದ ಮತಗಳ ಎಣಿಕೆಯಲ್ಲಿ ಬಹುಮತ ದೊರೆಯದಿದ್ದಲ್ಲಿ 2ನೇ ಪ್ರಾಶಸ್ಯದ ಮತದಾನವನ್ನು ಪರಿಗಣಿಸಲಾಗುತ್ತದೆ. ಹೀಗೆಯೇ ಬಹುಮತ ಬರುವವರೆಗೂ ಮುಂದುವರಿಯುತ್ತದೆ.

  • ಉಪ ರಾಷ್ಟ್ರಪತಿ ಚುನಾವಣೆ| ಸಂಸತ್ತಿನಲ್ಲಿ ಎನ್‌ಡಿಎ, ವಿಪಕ್ಷಗಳ ಬಲ ಎಷ್ಟಿದೆ?

    ಉಪ ರಾಷ್ಟ್ರಪತಿ ಚುನಾವಣೆ| ಸಂಸತ್ತಿನಲ್ಲಿ ಎನ್‌ಡಿಎ, ವಿಪಕ್ಷಗಳ ಬಲ ಎಷ್ಟಿದೆ?

    ನವದೆಹಲಿ: ಉಪ ರಾಷ್ಟ್ರಪತಿ ಧನಕರ್ (Jagdeep Dhankhar) ರಾಜೀನಾಮೆ ಬೆನ್ನಲ್ಲೇ ಉತ್ತರಾಧಿಕಾರಿ ಆಯ್ಕೆ ಪ್ರಕ್ರಿಯೆ ಆರಂಭಗೊಂಡಿದೆ. ಚುನಾವಣೆಗೆ ಅಧಿಕಾರಿಗಳನ್ನು ಅಂತಿಮಗೊಳಿಸಲಾಗುತ್ತಿದ್ದು, ಶೀಘ್ರದಲ್ಲೇ ಚುನಾವಣೆಗೆ (Vice President Election) ದಿನಾಂಕ ಘೋಷಣೆಯಾಗಲಿದೆ.

    ಮೂಲಗಳ ಪ್ರಕಾರ, ಆಗಸ್ಟ್ ಅಂತ್ಯದೊಳಗೆ ಚುನಾವಣೆ ನಡೆಯುವ ಸಾಧ್ಯತೆಗಳು ಹೆಚ್ಚಿವೆ. ಮೊನ್ನೆ ರಾಜೀನಾಮೆ ನೀಡುವ ಮುನ್ನ ರಾಷ್ಟ್ರಪತಿ ಭವನಕ್ಕೆ ಅನಿರೀಕ್ಷಿತವಾಗಿ ಧನಕರ್ ಭೇಟಿ ನೀಡಿ, ಅಲ್ಲಿನ ಸಿಬ್ಬಂದಿಯನ್ನು ತಬ್ಬಿಬ್ಬುಗೊಳಿಸಿರುವುದಾಗಿ ತಿಳಿದುಬಂದಿದೆ. ರಾಷ್ಟ್ರಪತಿಗಳ ಜೊತೆ ಚರ್ಚಿಸಿದ ಬಳಿಕ ರಾಜೀನಾಮೆ ನೀಡಿರುವುದಾಗಿ ಗೊತ್ತಾಗಿದೆ.

    ಮುಂದಿನ ಬಿಹಾರ ಚುನಾವಣೆಯ (Bihar Election) ದೃಷ್ಟಿಯಿಂದ ಎನ್‌ಡಿಎ ಅಭ್ಯರ್ಥಿಯಾಗಿ ಅಚ್ಚರಿ ವ್ಯಕ್ತಿಯನ್ನು ಕಣಕ್ಕಿಳಿಸುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಭಾರತರತ್ನ ಪ್ರಶಸ್ತಿ ಪುರಸ್ಕೃತ ಕರ್ಪೂರಿ ಠಾಕೂರ್ ಅವರ ಪುತ್ರ ರಾಮ್ ನಾಥ್ ಠಾಕೂರ್ ಅವರ ಹೆಸರು ಮುಂಚೂಣಿಯಲ್ಲಿದೆ. ಅತ್ಯಂತ ಹಿಂದುಳಿದ ವರ್ಗ (ಕ್ಷೌರಿಕ) ಸಮಾಜಕ್ಕೆ ರಾಮ್‌ನಾಥ್ ಠಾಕೂರ್ ಸೇರಿದವರಾಗಿದ್ದಾರೆ. ಇದನ್ನೂ ಓದಿ: ಜಗದೀಪ್ ಧನಕರ್ ರಾಜೀನಾಮೆ ಸುತ್ತ ಅನುಮಾನದ ಹುತ್ತ- ದಿಢೀರ್‌ ರಿಸೈನ್‌ ಮಾಡಿದ್ದು ಯಾಕೆ?

     

    ಬಿಜೆಪಿ ಅಧ್ಯಕ್ಷ ನಡ್ಡಾ, ರಾಜಸ್ಥಾನದ ಮಾಜಿ ಸಿಎಂ ವಸುಂಧರಾ ರಾಜೆ, ಬಿಹಾರ ರಾಜ್ಯಪಾಲ ಮೊಹಮ್ಮದ್ ಆರಿಫ್ ಖಾನ್, ಮಾಜಿ ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಹೆಸರು ಕೂಡ ಕೇಳಿಬರುತ್ತಿದೆ. ಇದನ್ನೂ ಓದಿ: ಅಲ್-ಖೈದಾ ಸಂಘಟನೆಯೊಂದಿಗೆ ನಂಟು ಹೊಂದಿದ್ದ ನಾಲ್ವರು ಉಗ್ರರ ಬಂಧನ

    ಈ ಮಧ್ಯೆ, ಧನಕರ್ ರಾಜೀನಾಮೆ ಅನುಮಾನಸ್ಪದವಾಗಿದ್ದು, ಈ ಬಗ್ಗೆ ಪ್ರಧಾನಿ ಮೋದಿ ಉತ್ತರಿಸಬೇಕು ಅಂತ ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಒತ್ತಾಯಿಸಿದ್ದಾರೆ. ಜಗದೀಪ್ ಧನಕರ್ ಬಿಜೆಪಿ-ಆರ್‌ಎಸ್‌ಎಸ್ ಸಮರ್ಥಿಸಿಕೊಳ್ಳುತ್ತಿದ್ದರು. ಅವರ ನಿಷ್ಠೆ ಬಿಜೆಪಿ- ಆರ್‌ಎಸ್‌ಎಸ್ ಜೊತೆಗಿತ್ತು ಆದ್ರೂ, ರಾಜೀನಾಮೆ ಕೊಟ್ಟಿದ್ಯಾಕೆ ಅಂತ ಪ್ರಶ್ನೆ ಮಾಡಿದ್ದಾರೆ.

    ಸಂಸತ್ತಿನಲ್ಲಿ ಎನ್‌ಡಿಎ ಬಲ
    ಈಗಿನ ಬಲ – 782, ಬಹುಮತ: 392
    (ಲೋಕಸಭೆ 1 ಖಾಲಿ; ರಾಜ್ಯಸಭೆ- 5 ಸ್ಥಾನ ಖಾಲಿ)
    ಎನ್‌ಡಿಎ ಪರ – 427
    ಲೋಕಸಭೆ – 293
    ರಾಜ್ಯಸಭೆ – 134

    ಸಂಸತ್ತಿನಲ್ಲಿ ವಿಪಕ್ಷಗಳ ಬಲ
    ವಿಪಕ್ಷಗಳ ಪರ – 355
    ಲೋಕಸಭೆ – 249
    ರಾಜ್ಯಸಭೆ – 106

  • ಜಗದೀಪ್ ಧನಕರ್ ಆರೋಗ್ಯ ಚೆನ್ನಾಗಿದೆ, ಬಿಜೆಪಿ ಆರೋಗ್ಯವೇ ಚೆನ್ನಾಗಿಲ್ಲ: ಡಾ. ಶರಣಪ್ರಕಾಶ್ ಪಾಟೀಲ್

    ಜಗದೀಪ್ ಧನಕರ್ ಆರೋಗ್ಯ ಚೆನ್ನಾಗಿದೆ, ಬಿಜೆಪಿ ಆರೋಗ್ಯವೇ ಚೆನ್ನಾಗಿಲ್ಲ: ಡಾ. ಶರಣಪ್ರಕಾಶ್ ಪಾಟೀಲ್

    ಬೆಂಗಳೂರು: ಉಪರಾಷ್ಟ್ರಪತಿ ಜಗದೀಪ್ ಧನಕರ್ (Jagdeep Dhankhar) ಅವರ ರಾಜೀನಾಮೆ ವಿಷಯ ಭಾರೀ ವಿವಾದಕ್ಕೀಡಾಗಿದೆ. ಅನಾರೋಗ್ಯ ನೆಪವೊಡ್ಡಿ ರಾಜೀನಾಮೆ ನೀಡಿರುವುದು ಸಾಕಷ್ಟು ಊಹಾಪೋಹಗಳಿಗೆ ಕಾರಣವಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಆರ್ ಪಾಟೀಲ್ (Dr.Sharan Prakash Patil) ತಿಳಿಸಿದ್ದಾರೆ.

    ಬೆಂಗಳೂರಿನಲ್ಲಿ ಮಾತನಾಡಿದ ಅವರು, ಉಪರಾಷ್ಟ್ರಪತಿ ಅನಿರೀಕ್ಷಿತ ರಾಜೀನಾಮೆ ಎಲ್ಲರನ್ನೂ ಅಚ್ಚರಿಗೊಳಿಸಿದೆ. ಬಿಜೆಪಿ (BJP) ಆರೋಗ್ಯ ಚೆನ್ನಾಗಿಲ್ಲದಿರುವುದೇ ಇದಕ್ಕೆ ಕಾರಣ. ಬಿಜೆಪಿಯಲ್ಲಿರುವ ಸರ್ವಾಧಿಕಾರ ಧೋರಣೆಯೇ ಜಗದೀಪ್ ಧನಕರ್ ಅವರ ರಾಜೀನಾಮೆಗೆ ಪ್ರಮುಖ ಕಾರಣವಾಗಿದೆ ಎಂದು ಆರೋಪಿಸಿದರು. ಇದನ್ನೂ ಓದಿ: ತೆಲಂಗಾಣ; ಮಗಳಿಗೆ ಕಾಲಿನಿಂದ ಒದ್ದು ಹಲ್ಲೆ ನಡೆಸಿ ತಂದೆ ಕ್ರೌರ್ಯ

    ಇಡೀ ಪ್ರಕರಣವನ್ನು ಕೂಲಂಕಷವಾಗಿ ಪರಿಶೀಲಿಸಿದರೆ ಬಿಜೆಪಿಯಲ್ಲಿ ಏನೋ ಸರಿಯಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಇಡೀ ಪಕ್ಷ ಇಬ್ಬರ ಕೈಯಲ್ಲಿದೆ. ಸರ್ವಾಧಿಕಾರ ಹೆಚ್ಚಾಗಿರುವುದರಿಂದ ಬೇರೆ ಯಾವ ನಾಯಕರೂ ಮಾತನಾಡದೇ ಸುಮ್ಮನಿದ್ದಾರೆ. ಜನರಿಗೆ ಇದು ಗೊತ್ತಾಗುವುದಿಲ್ಲ ಎಂದು ಬಿಜೆಪಿಯವರು ತಿಳಿದುಕೊಂಡಿದ್ದಾರೆ. ಆದರೆ ಇಡೀ ಪ್ರಕರಣದಿಂದ ಬಿಜೆಪಿಯ ಬಣ್ಣ ಸಂಪೂರ್ಣ ಬಯಲಾಗಿದೆ ಎಂದು ದೂರಿದರು. ಇದನ್ನೂ ಓದಿ: ವಾಣಿಜ್ಯ ತೆರಿಗೆ ಉಪನಿರ್ದೇಶಕನ ಮನೆಗೆ ಲೋಕಾ ದಾಳಿ – ಅಪಾರ ಪ್ರಮಾಣದ ನಗದು, ಬಂಗಾರ, ಬೆಳ್ಳಿ ಪತ್ತೆ

    ಬಿಜೆಪಿಯಲ್ಲಿ ಪ್ರಜಾಪ್ರಭುತ್ವ, ನೀತಿ-ನಿಯಮಗಳು ಇಲ್ಲ. ಕೇಂದ್ರ ಸರ್ಕಾರ ಕೂಡ ಸಂವಿಧಾನ ಪಾಲನೆ ಮಾಡುತ್ತಿಲ್ಲ. ಸರ್ಕಾರವನ್ನು ಮುನ್ನಡೆಸುತ್ತಿರುವವರು ಇದುವರೆಗೂ ಒಂದಾದರೂ ಸುದ್ದಿಗೋಷ್ಠಿ ಮಾಡಿದ್ದಾರಾ? ಏಕಪಕ್ಷೀಯ ನಿರ್ಧಾರಗಳೇ ಹೆಚ್ಚಾಗಿ ತೆಗೆದುಕೊಳ್ಳಲಾಗುತ್ತದೆ. ಇಂಥ ಅಪಸವ್ಯಗಳಿಂದಲೇ ಬಿಜೆಪಿಯಲ್ಲಿ ಅನಾರೋಗ್ಯ ಪರಿಸ್ಥಿತಿ ಇದೆ ಎಂದು ಟೀಕಿಸಿದರು. ಇದನ್ನೂ ಓದಿ: ತಾಂತ್ರಿಕ ಸಮಸ್ಯೆಯಿಂದ ದೋಹಾಗೆ ಹೊರಟಿದ್ದ ಏರ್‌ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನ ಕ್ಯಾಲಿಕಟ್‌ಗೆ ವಾಪಸ್

  • ಜಗದೀಪ್‌ ಧನಕರ್‌ ರಾಜೀನಾಮೆ – ಉಪ ರಾಷ್ಟ್ರಪತಿ ಚುನಾವಣಾ ಪ್ರಕ್ರಿಯೆ ಆರಂಭಿಸಿದ ಚುನಾವಣಾ ಆಯೋಗ

    ಜಗದೀಪ್‌ ಧನಕರ್‌ ರಾಜೀನಾಮೆ – ಉಪ ರಾಷ್ಟ್ರಪತಿ ಚುನಾವಣಾ ಪ್ರಕ್ರಿಯೆ ಆರಂಭಿಸಿದ ಚುನಾವಣಾ ಆಯೋಗ

    ನವದೆಹಲಿ: ಅನಾರೋಗ್ಯ ಕಾರಣ ನೀಡಿ ಉಪ ರಾಷ್ಟ್ರಪತಿ ಹುದ್ದೆಗೆ ಜಗದೀಪ್ ಧನಕರ್ (Jagdeep Dhankhar) ರಾಜೀನಾಮೆ ನೀಡಿದ 2 ದಿನಗಳ ನಂತರ, ಚುನಾವಣೆ ನಡೆಸುವ ಪ್ರಕ್ರಿಯೆಯನ್ನು ಭಾರತೀಯ ಚುನಾವಣಾ ಆಯೋಗ (Election Commission) ಶುರು ಮಾಡಿದೆ. ಈ ಕುರಿತು ಅಧಿಕೃತ ಪ್ರಕಟಣೆ ಮೂಲಕ ಮಾಹಿತಿ ನೀಡಿದೆ.

    ಆಯೋಗದ ಪ್ರಕಟಣೆಯಲ್ಲಿ ಏನಿದೆ?
    ಭಾರತದ ಚುನಾವಣಾ ಆಯೋಗವು, ವಿಧಿ 324ರ ಅಡಿಯಲ್ಲಿ, ಭಾರತದ ಉಪಾಧ್ಯಕ್ಷರ ಹುದ್ದೆಗೆ ಚುನಾವಣೆ (Vice Presidential Election) ನಡೆಸುವ ಅಧಿಕಾರವನ್ನು ಹೊಂದಿದೆ. ಭಾರತದ ಉಪಾಧ್ಯಕ್ಷರ ಹುದ್ದೆಗೆ ಚುನಾವಣೆಯನ್ನು ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಚುನಾವಣಾ ಕಾಯ್ದೆ, 1952 ಮತ್ತು ಅದರ ಅಡಿಯಲ್ಲಿ ರಚಿಸಲಾದ ನಿಯಮಗಳು, ಅಂದ್ರೆ ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಚುನಾವಣಾ ನಿಯಮಗಳು, 1974ರ ಮೂಲಕ ನಿಯಂತ್ರಿಸಲಾಗುತ್ತದೆ.

    ಅದರಂತೆ ಭಾರತೀಯ ಚುನಾವಣಾ ಆಯೋಗವು 2025ರ ಉಪರಾಷ್ಟ್ರಪತಿ ಚುನಾವಣೆಗೆ ಸಂಬಂಧಿಸಿದ ಸಿದ್ಧತೆಗಳನ್ನು ಈಗಾಗಲೇ ಪ್ರಾರಂಭಿಸಿದೆ. ಈ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡ ಬಳಿಕ, ಚುನಾವಣಾ ವೇಳಾಪಟ್ಟಿಯನ್ನ ಆದಷ್ಟು ಬೇಗ ಘೋಷಿಸಲಿದೆ ಎಂದು ಚುನಾವಣಾ ಆಯೋಗ ಹೇಳಿದೆ.

    74 ವರ್ಷದ ಧನಕರ್‌ ಅವರು ಅನಾರೋಗ್ಯ ಕಾರಣ ನೀಡಿ ಸೋಮವಾರ (ಜು.21) ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ರಾಜೀನಾಮೆ ಪತ್ರವನ್ನು ರಾಷ್ಟ್ರಪತಿ ದೌಪದಿ ಮುರ್ಮು ಅವರಿಗೆ ಕಳುಹಿಸಿದ್ದು, ‘ತಕ್ಷಣದಿಂದಲೇ ಜಾರಿಗೆ ಬರುವಂತೆ ರಾಜೀನಾಮೆ ನೀಡುತ್ತಿದ್ದೇನೆ’ ಎಂದು ತಿಳಿಸಿದ್ದರು. ಈ ವೇಳೆ ಅವಕಾಶಕ್ಕಾಗಿ ಪ್ರಧಾನಿ ಮೋದಿ ಅವರಿಗೆ ಧನ್ಯವಾದ ಹೇಳಿದ್ದರು.

    ಧನಕರ್ ಅವರು 2022ರ ಆಗಸ್ಟ್‌ನಲ್ಲಿ ಅಧಿಕಾರ ವಹಿಸಿಕೊಂಡಿದ್ದರು. ಅವರ ಅಧಿಕಾರಾವಧಿ 2027ರ ಆಗಸ್ಟ್ 10ರ ವರೆಗೂ ಇತ್ತು. ರಾಜ್ಯಸಭೆಯ ಸಭಾಪತಿಯೂ ಆಗಿರುವ ಅವರು ಸೋಮವಾರ ಆರಂಭವಾದ ಸಂಸತ್ತಿನ ಮುಂಗಾರು ಅಧಿವೇಶನದ ಮೊದಲ ದಿನ ಕಲಾಪದಲ್ಲಿ ಪಾಲ್ಗೊಂಡಿದ್ದರು.

  • ಜಗದೀಪ್ ಧನಕರ್ ರಾಜೀನಾಮೆ ಸುತ್ತ ಅನುಮಾನದ ಹುತ್ತ- ದಿಢೀರ್‌ ರಿಸೈನ್‌ ಮಾಡಿದ್ದು ಯಾಕೆ?

    ಜಗದೀಪ್ ಧನಕರ್ ರಾಜೀನಾಮೆ ಸುತ್ತ ಅನುಮಾನದ ಹುತ್ತ- ದಿಢೀರ್‌ ರಿಸೈನ್‌ ಮಾಡಿದ್ದು ಯಾಕೆ?

    ನವದೆಹಲಿ: ಉಪರಾಷ್ಟ್ರಪತಿ ಜಗದೀಪ್ ಧನಕರ್ (Vice President Dhankhar) ಸೋಮವಾರ ರಾತ್ರಿ ದಿಢೀರ್ ರಾಜೀನಾಮೆ ನೀಡಿದ್ದಾರೆ. ಇನ್ನೂ ಎರಡೂವರೆ ವರ್ಷ ಸೇವಾವಧಿ ಇದ್ದರೂ ದಿಢೀರ್ ರಾಜೀನಾಮೆ(Resignation) ನೀಡಿರುವುದು ಇಡೀ ದೇಶವೇ ದಿಗ್ಭ್ರಮೆ ಒಳಗಾಗಿದೆ ಮಾತ್ರವಲ್ಲ ಹಲವು ಅನುಮಾನಗಳಿಗೆ ಕಾರಣವಾಗಿದೆ.

    ರಾಷ್ಟ್ರಪತಿ ದ್ರೌಪದಿ ಮುರ್ಮು ರಾಜೀನಾಮೆಯನ್ನು ಅಂಗೀಕರಿಸಿದ್ದು, ಗೃಹ ಸಚಿವಾಲಯಕ್ಕೆ ರವಾನಿಸಿದ್ದಾರೆ. ರಾಜೀನಾಮೆ ಅಂಗೀಕಾರವಾಗುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿ ಧನಕರ್ ಕೊಡುಗೆಯನ್ನು ಕೊಂಡಾಡಿದ್ದಾರೆ. ಧನಕರ್ ಆರೋಗ್ಯ ಚೇತರಿಕೆ ಆಗಲಿ ಅಂತಲೂ ಮೋದಿ ಹಾರೈಸಿದ್ದಾರೆ.

    ಅನಾರೋಗ್ಯದಿಂದಲೇ ರಾಜೀನಾಮೆ ನೀಡಿರುವುದಾಗಿ ಧನಕರ್ ಹೇಳಿದ್ದರೂ ಕಾಂಗ್ರೆಸ್ (Congress) ಹಲವು ಪ್ರಶ್ನೆಗಳನ್ನು ಎತ್ತಿದೆ. ಇನ್ನೂ ಎರಡೂವರೆ ವರ್ಷ ಅಧಿಕಾರ ಇದ್ದರೂ, ರಾಜೀನಾಮೆ ಕೊಟ್ಟಿರೋದ್ಯಾಕೆ ಅಂತ ಪ್ರಶ್ನೆ ಮಾಡಿದೆ. ಎಲ್ಲೋ ಏನೋ ಆಗಿದೆ ಅಂತ ರಾಜ್ಯಸಭೆಯ ಕಾಂಗ್ರೆಸ್ ಮುಖ್ಯ ಸಚೇತಕ ಜೈರಾಮ್ ರಮೇಶ್ ಅನುಮಾನ ವ್ಯಕ್ತಪಡಿಸಿದ್ದಾರೆ.

    ಕಾಂಗ್ರೆಸ್ ಆರೋಪವನ್ನು ನಡ್ಡಾ ನಿರಾಕರಿಸಿದ್ದು, ಪ್ರಮುಖ ಸಂಸದೀಯ ಸಭೆಯಲ್ಲಿ ಭಾಗಿಯಾಗಿದ್ದರಿಂದ ನಿರ್ಣಾಯಕ ವ್ಯವಹಾರ ಸಲಹಾ ಸಮಿತಿ (BAC) ಸಭೆಯಲ್ಲಿ ಭಾಗಿಯಾಗಲು ಆಗಲಿಲ್ಲ. ಉಪ ರಾಷ್ಟ್ರಪತಿಗಳಿಗೆ ಮಾಹಿತಿ ನೀಡಲಾಗಿತ್ತು ಎಂದು ಸ್ಪಷ್ಟಪಡಿಸಿದ್ದಾರೆ. ಧನಕರ್ ರಾಜೀನಾಮೆ ಬಗ್ಗೆ ಚರ್ಚೆಗೆ ವಿಪಕ್ಷಗಳು ಒತ್ತಾಯಿಸಿದ್ದರಿಂದ ರಾಜ್ಯಸಭೆ ಕಲಾಪವನ್ನು ಬುಧವಾರಕ್ಕೆ ಮುಂದೂಡಿಕೆ ಮಾಡಲಾಗಿದೆ.

    ಧನಕರ್ ರಾಜೀನಾಮೆ ಯಾಕೆ?
    ಅನುಮಾನ 1: ನಡ್ಡಾ ವಿರುದ್ಧ ಬೇಸರ
    ಮನೆಯಲ್ಲಿ ಕಂತೆ ಕಂತೆ ನೋಟು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾ.ಯಶವಂತ ವರ್ಮಾ ವಾಗ್ದಂಡನೆ ವಿಚಾರದಲ್ಲಿ ವಿಪಕ್ಷಗಳ ನೋಟಿಸ್ ಅಂಗೀಕಾರವಾಗಿತ್ತು. ಸೋಮವಾರ ಈ ವಿಚಾರದ ಬಗ್ಗೆ ಸದನದಲ್ಲಿ ಭಾರೀ ಚರ್ಚೆ ನಡೆದಿತ್ತು. ಚರ್ಚೆಯ ವೇಳೆ ಜೆಪಿ ನಡ್ಡಾ (JP Nadda) ನನ್ನ ಹೇಳಿಕೆಯಷ್ಟೇ ದಾಖಲು ಆಗಲಿದೆ. ಬೇರೆಯವರದ್ದು ದಾಖಲಾಗುವುದಿಲ್ಲ ಎಂದಿದ್ದರು. ಈ ಹೇಳಿಕೆಗೆ ಬೇಸರಗೊಂಡಿರುವ ಸಾಧ್ಯತೆಯಿದೆ.

    ಅನುಮಾನ 2: ನ್ಯಾಯಾಂಗದ ಬಗ್ಗೆ ಹೇಳಿಕೆ
    ನ್ಯಾಯಾಂಗ ಬಗ್ಗೆ ಪದೇ ಪದೇ ಧನಕರ್ ಹೇಳಿಕೆ ನೀಡಿದ್ದರು. ನ್ಯಾಯಾಂಗಕ್ಕಿಂತ ಸಂಸತ್ತೇ ದೊಡ್ಡದು ಎಂದು ಹೇಳಿಕೆ ನೀಡಿದ್ದು ದೊಡ್ಡ ಚರ್ಚೆಗೆ ಗ್ರಾಸವಾಗಿತ್ತು. ಧನಕರ್ ಹೇಳಿಕೆಯೂ ರಾಜೀನಾಮೆಗೆ ಕಾರಣ ಆಗಿರಬಹುದು.  ಇದನ್ನೂ ಓದಿ: ಆಧಾರ್, ಮತದಾರರ ಗುರುತಿನ ಚೀಟಿ, ಪಡಿತರ ಚೀಟಿಗಳು ವಿಶ್ವಾಸಾರ್ಹ ದಾಖಲೆಗಳಲ್ಲ: ಸುಪ್ರೀಂಗೆ ಚುನಾವಣಾ ಆಯೋಗ ಅಫಿಡವಿಟ್‌

     

    ಅನುಮಾನ 3: ಬಿಎಸಿ ಸಭೆಗೆ ಗೈರಾಗಿದ್ದಕ್ಕೆ ಅಸಮಾಧಾನ
    ಧನಕರ್ ಸೋಮವಾರ ಮಧ್ಯಾಹ್ನ 12:30ಕ್ಕೆ ನಿರ್ಣಾಯಕ ವ್ಯವಹಾರ ಸಲಹಾ ಸಮಿತಿ (BAC) ಸಭೆ ಕರೆದಿದ್ದರು. ಸಂಜೆ ಮತ್ತೆ ಸಭೆಗೆ ನಿರ್ಧರಿಸಲಾಗಿತ್ತು. ಸಂಜೆಯ ಸಭೆಗೆ ಕೇಂದ್ರ ಸಚಿವ ನಡ್ಡಾ, ರಿಜಿಜು ಗೈರಾಗಿದ್ದರು. ಈ ಸಭೆಗೆ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ಎಲ್. ಮುರುಗನ್ ಪ್ರತಿನಿಧಿಸಿದ್ದರು. ಮೂಲಗಳ ಪ್ರಕಾರ ತನಗೆ ತಿಳಿಸದೇ ಜೆಪಿ ನಡ್ಡಾ ಮತ್ತು ರಿಜಿಜು ಅವರು ಗೈರಾಗಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಬಿಎಸಿ ಸಭೆಯನ್ನು ಮಂಗಳವಾರಕ್ಕೆ ಮುಂದೂಡಿದ್ದರು. ಇದನ್ನೂ ಓದಿ: ಕನ್ವರ್ ಯಾತ್ರೆಯ ಮಾರ್ಗದಲ್ಲಿ ಹೋಟೆಲ್‌ಗಳಿಗೆ ಕ್ಯೂಆರ್ ಕೋಡ್ ಕಡ್ಡಾಯ ಆದೇಶ ಎತ್ತಿ ಹಿಡಿದ ಸುಪ್ರೀಂ

    ಬಿಎಸಿ ಚರ್ಚೆಗಳು ನಡೆಯುತ್ತಿರುವಾಗ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಕೊಠಡಿಯಲ್ಲಿ ಮತ್ತೊಂದು ಉನ್ನತ ಮಟ್ಟದ ಸಭೆ ನಡೆಯುತ್ತಿತ್ತು. ನಡ್ಡಾ, ಶಾ, ರಿಜಿಜು, ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಮತ್ತು ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಸೇರಿದಂತೆ ಹಿರಿಯ ಸಚಿವರು ಭಾಗವಹಿಸಿದ್ದ ಸಭೆಯಲ್ಲಿ ವಾಗ್ದಂಡನೆ ನೋಟಿಸ್‌ಗೆ ದಾಖಲೆಗೆ ಸಹಿ ಹಾಕಲು ಎನ್‌ಡಿಎ ಸಂಸದರನ್ನು ಪ್ರತ್ಯೇಕವಾಗಿ ಕರೆಯಲಾಗಿತ್ತು. ಸಭೆಯು ಸುಮಾರು ಎರಡೂವರೆ ಗಂಟೆಗಳ ಕಾಲ ನಡೆದಿತ್ತು ಮತ್ತು ಬಿಜೆಪಿ ಮಿತ್ರಪಕ್ಷಗಳು ಸಹ ಸಹಿ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದವು.

    ಈ ಸಭೆಯ ಬಳಿಕ ಗೃಹ ಸಚಿವ ಅಮಿತ್ ಶಾ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿಯಾಗಿದ್ದರು. ಇದಾದ ಸುಮಾರು ಎರಡು ಗಂಟೆಗಳ ನಂತರ ಧನಕರ್‌ ರಾಜೀನಾಮೆ ಘೋಷಣೆ ಮಾಡಿದ್ದರು.

  • ಉಪರಾಷ್ಟ್ರಪತಿ ಜಗದೀಪ್ ಧನಕರ್ ರಾಜೀನಾಮೆ ಅಂಗೀಕರಿಸಿದ ದ್ರೌಪದಿ ಮುರ್ಮು

    ಉಪರಾಷ್ಟ್ರಪತಿ ಜಗದೀಪ್ ಧನಕರ್ ರಾಜೀನಾಮೆ ಅಂಗೀಕರಿಸಿದ ದ್ರೌಪದಿ ಮುರ್ಮು

    ನವದೆಹಲಿ: ಜಗದೀಪ್ ಧನಕರ್ ಅವರು ಉಪರಾಷ್ಟ್ರಪತಿ ಹುದ್ದೆಗೆ ರಾಜೀನಾಮೆ ನೀಡಿ ಸಲ್ಲಿಸಿದ್ದ ಪತ್ರವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಗೀಕರಿಸಿದ್ದಾರೆ.

    ಅನಾರೋಗ್ಯದ ಕಾರಣ ನೀಡಿ ಜಗದೀಪ್ ಧನಕರ್ ಅವರು ಉಪರಾಷ್ಟ್ರಪತಿ ಹುದ್ದೆಗೆ ರಾಜೀನಾಮೆ ನೀಡಿ ಸಲ್ಲಿಸಿದ್ದ ಪತ್ರವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಗೀಕರಿಸಿದ್ದು, ಅವರ ಅನುಮೋದನೆಯ ನಂತರ ಗೃಹ ಸಚಿವಾಲಯವು ಜಗದೀಪ್ ಧನಕರ್ ಅವರ ರಾಜೀನಾಮೆಯನ್ನು ಅಧಿಕೃತವಾಗಿ ಘೋಷಿಸಿದೆ.ಇದನ್ನೂ ಓದಿ: ಅಹಮದಾಬಾದ್ ಏರ್‌ಪೋರ್ಟ್‌ಗೆ ಬಾಂಬ್ ಬೆದರಿಕೆ – ಪೊಲೀಸರು, ಬಾಂಬ್ ನಿಷ್ಕ್ರಿಯ ದಳದಿಂದ ಶೋಧ

    ಇಂದು ಅಧಿವೇಶನದಲ್ಲಿ ಜಗದೀಪ್ ಧನಕರ್ ಅವರು ರಾಜ್ಯಸಭಾ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳಲಿಲ್ಲ. ಹೀಗಾಗಿ ಉಪರಾಷ್ಟ್ರಪತಿಗಳ ಅಧಿಕಾರಾವಧಿಯ ಬಗ್ಗೆ ತಿಳಿಸುವ ಸಂವಿಧಾನದ 67ನೇ ವಿಧಿಯ ಅಡಿಯಲ್ಲಿ, ಹೊಸ ಉಪಾಧ್ಯಕ್ಷರ ಆಯ್ಕೆಯಾಗುವವರೆಗೂ ಉಪಸಭಾಪತಿ ಹರಿವಂಶ್ ನಾರಾಯಣ್ ಸಿಂಗ್ ಅವರು ಕಾರ್ಯನಿರ್ವಹಿಸುತ್ತಾರೆ.

    ರಾಜ್ಯಸಭಾ ಅಧ್ಯಕ್ಷರಾಗಿ ಸಂಸತ್ತಿನ ಮಳೆಗಾಲದ ಅಧಿವೇಶನದ ಮೊದಲ ದಿನದ ಅಧ್ಯಕ್ಷತೆ ವಹಿಸಿದ ನಂತರ ಸೋಮವಾರ (ಜು.21) ರಾಜೀನಾಮೆ ಘೋಷಿಸಿದ್ದರು. ದ್ರೌಪದಿ ಮುರ್ಮು ಅವರಿಗೆ ಸಲ್ಲಿಸಿದ್ದ ಪತ್ರದಲ್ಲಿ, ಆರೋಗ್ಯ ದೃಷ್ಟಿಯಿಂದ ಹಾಗೂ ವೈದ್ಯಕೀಯ ಸಲಹೆಗಳನ್ನು ಪಾಲಿಸುವ ನಿಟ್ಟಿನಲ್ಲಿ ರಾಜೀನಾಮೆ ಘೋಷಿಸಿರುವುದಾಗಿ ಉಲ್ಲೇಖಿಸಿದ್ದರು.

    ಕೆಲ ದಿನಗಳ ಹಿಂದೆ ಉತ್ತರಾಖಂಡದ ನೈನಿತಾಲ್‌ನ ಕುಮಾವೂನ್ ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವದಲ್ಲಿ ಭಾಗವಹಿಸಿದ್ದ ವೇಳೆ ಉಪರಾಷ್ಟ್ರಪತಿ ಜಗದೀಪ್ ಧನಕರ್ ಮೂರ್ಛೆ ಹೋಗಿದ್ದರು. ಸೋಮವಾರ ಬೆಳಿಗ್ಗೆ ಕೂಡ ತಮ್ಮ ಕಚೇರಿಯಲ್ಲಿ ಕುಸಿದು ಬಿದ್ದಿದ್ದರು ಎನ್ನಲಾಗಿದೆ.ಇದನ್ನೂ ಓದಿ: ತಿಂಗಳ ಬಳಿಕ ಹಾರಿದ ಬ್ರಿಟನ್‌ ಬಾನಾಡಿ – ಕೇರಳದಿಂದ ಆಸ್ಟ್ರೇಲಿಯಾಗೆ ಜಿಗಿದ F-35B ಜೆಟ್

  • ಕುಮಾವೂನ್ ವಿವಿ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಮೂರ್ಛೆ ಹೋದ ಜಗದೀಪ್ ಧನಕರ್

    ಕುಮಾವೂನ್ ವಿವಿ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಮೂರ್ಛೆ ಹೋದ ಜಗದೀಪ್ ಧನಕರ್

    ಡೆಹ್ರಾಡೂನ್: ಉತ್ತರಾಖಂಡದ (Uttarakhand) ನೈನಿತಾಲ್‌ನ ಕುಮಾವೂನ್ ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವದಲ್ಲಿ ಭಾಗವಹಿಸಿದ್ದ ವೇಳೆ ಉಪರಾಷ್ಟ್ರಪತಿ ಜಗದೀಪ್ ಧನಕರ್ (Jagdeep Dhankhar) ಮೂರ್ಛೆ ಹೋಗಿದ್ದಾರೆ.

    ನೈನಿತಾಲ್‌ನ ಕುಮಾವೂನ್ ವಿಶ್ವವಿದ್ಯಾಲಯದಲ್ಲಿ (Nainital Kumaon University) ನಡೆದ ಸುವರ್ಣ ಮಹೋತ್ಸವ ಸಮಾರಂಭದಲ್ಲಿ, ಉಪರಾಷ್ಟ್ರಪತಿ ಧನಕರ್ ಮುಖ್ಯ ಅತಿಥಿಯಾಗಿ 45 ನಿಮಿಷಗಳ ಭಾಷಣ ಮಾಡಿದರು. ಭಾಷಣದ ನಂತರ, ಉಪರಾಷ್ಟ್ರಪತಿ ವೇದಿಕೆಯಿಂದ ಇಳಿದ ತಕ್ಷಣ ಅವರ ಆರೋಗ್ಯ ಏರುಪೇರಾಗಿದ್ದು, ಅವರ ಜೊತೆ ಇದ್ದ ಮಾಜಿ ಸಂಸದ ಡಾ. ಮಹೇಂದ್ರ ಸಿಂಗ್ ಪಾಲ್ ಅವರ ಮೇಲೆಯೇ ಕುಸಿದು ಬಿದ್ದರು. ಕೂಡಲೇ ಸ್ಥಳದಲ್ಲೇ ಇದ್ದ ವೈದ್ಯರ ತಂಡ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದೆ. ಇದನ್ನೂ ಓದಿ: ಮಂಗಳೂರಲ್ಲಿ ‘ನೋಂದಣಿ’ ಗೋಲ್ಮಾಲ್ – ಕೋಟಿ ಬೆಲೆಯ ಕಾರಿಗೆ ಲಕ್ಷ ಬೆಲೆಯ ಕಾರಿನ ಮಾಡೆಲ್ ನಂಬರ್

    ನಂತರ ಅವರನ್ನು ರಾಜ್ಯಪಾಲ ಗುರ್ಮಿತ್ ಸಿಂಗ್ ಅವರೊಂದಿಗೆ ರಾಜಭವನಕ್ಕೆ ಕರೆದೊಯ್ಯಲಾಯಿತು. ನಂತರ ವೈದ್ಯರು ಉಪರಾಷ್ಟ್ರಪತಿಯವರ ಆರೋಗ್ಯ ಸ್ಥಿತಿ ಈಗ ಸ್ಥಿರವಾಗಿದೆ ಎಂದು ದೃಢಪಡಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ಗೆ ದೇಶ ಮೊದಲು, ಕೆಲವರಿಗೆ ಮೋದಿ ಮೊದಲು: ಶಶಿ ತರೂರ್‌ಗೆ ಖರ್ಗೆ ಟಾಂಗ್

  • ಸಂಸತ್ತೇ ಸರ್ವೋಚ್ಚ, ಚುನಾಯಿತ ಪ್ರತಿನಿಧಿಗಳು ಸಾಂವಿಧಾನಿಕ ವಿಷಯದ ಅಲ್ಟಿಮೇಟ್‌ ಮಾಸ್ಟರ್ಸ್‌: ಧನಕರ್‌

    ಸಂಸತ್ತೇ ಸರ್ವೋಚ್ಚ, ಚುನಾಯಿತ ಪ್ರತಿನಿಧಿಗಳು ಸಾಂವಿಧಾನಿಕ ವಿಷಯದ ಅಲ್ಟಿಮೇಟ್‌ ಮಾಸ್ಟರ್ಸ್‌: ಧನಕರ್‌

    ನವದೆಹಲಿ: ಚುನಾಯಿತ ಪ್ರತಿನಿಧಿಗಳು ಸಾಂವಿಧಾನಿಕ ವಿಷಯದ ಅಲ್ಟಿಮೇಟ್‌ ಮಾಸ್ಟರ್ಸ್‌ ಮತ್ತು ಸಂಸತ್ತಿಗಿಂತಲೂ ಮೇಲೆ ಯಾರಿಗೂ ಅಧಿಕಾರವಿಲ್ಲ ಎಂದು ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ (Vice President Jagdeep Dhankhar) ಮತ್ತೊಮ್ಮೆ ಸುಪ್ರೀಂಕೋರ್ಟ್‌ (Suprme Court) ತೀರ್ಪಿನ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಸಾರ್ವಜನಿಕ ಪ್ರತಿನಿಧಿಗಳು ಚುನಾವಣೆಗಳ ಮೂಲಕ ಕೆಲವೊಮ್ಮೆ ತೀವ್ರವಾಗಿ ಹೊಣೆಗಾರರಾಗಿರುತ್ತಾರೆ. ತುರ್ತು ಪರಿಸ್ಥಿತಿಯನ್ನು ವಿಧಿಸಿದ್ದಕ್ಕೆ ಪ್ರಧಾನ ಮಂತ್ರಿಯನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತಿತ್ತು. ಪ್ರಜಾಪ್ರಭುತ್ವವು ಜನರಿಗೆ ಮತ್ತು ಚುನಾಯಿತ ಪ್ರತಿನಿಧಿಗಳ ರಕ್ಷಣೆಯ ಭಂಡಾರವಾಗಿದೆ ಎಂದು ಅಭಿಪ್ರಾಯಪಟ್ಟರು

    ಸಂಸತ್ತನ್ನು ಮೀರಿದ ಅಧಿಕಾರದ ಬಗ್ಗೆ ಸಂವಿಧಾನದಲ್ಲಿ ಯಾವುದೇ ಉಲ್ಲೇಖವಿಲ್ಲ. ಸಂಸತ್ತು ಸರ್ವೋಚ್ಚ. ಅದು ದೇಶದ ಪ್ರತಿಯೊಬ್ಬ ವ್ಯಕ್ತಿಯಂತೆ ಸರ್ವೋಚ್ಚವಾಗಿದೆ ಎಂದು ಹೇಳಿದರು.

    ಧನಕರ್‌ ಅವರು ಈ ರೀತಿಯಾಗಿ ಹೇಳುತ್ತಿರುವುದು ಎರಡನೇ ಬಾರಿ.‌ ಈ ಹಿಂದೆ ಕೋರ್ಟ್‌ಗಳು ಸೂಪರ್ ಪಾರ್ಲಿಮೆಂಟ್‌ ಆಗಬಾರದು. ಈಗ ಕಾರ್ಯಾಂಗ ಮತ್ತು ಶಾಸಕಾಂಗದ ಜಾಗದಲ್ಲಿ ನ್ಯಾಯಾಂಗದ ಪ್ರವೇಶವಾಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು  ಅಸಮಾಧಾನ ವ್ಯಕ್ತಪಡಿಸಿದ್ದರು.  ಇದನ್ನೂ ಓದಿ: ಈಗಾಗಲೇ ಕಾರ್ಯಾಂಗವನ್ನು ಅತಿಕ್ರಮಿಸಿರುವ ಆರೋಪ ನಮ್ಮ ಮೇಲಿದೆ: ಸುಪ್ರೀಂ ಕೋರ್ಟ್‌

    ನ್ಯಾಯಾಧೀಶರು ಭಾರತದ ರಾಷ್ಟ್ರಪತಿಗಳಿಗೆ ನಿರ್ದೇಶಿಸುವ ಪರಿಸ್ಥಿತಿಯನ್ನು ನಾವು ಹೊಂದಲು ಸಾಧ್ಯವಿಲ್ಲ. ಈ ರೀತಿಯ ನಿರ್ದೇಶನವು ರಾಷ್ಟ್ರದ ಅತ್ಯುನ್ನತ ಕಚೇರಿಯ ಸಾಂವಿಧಾನಿಕ ಅಧಿಕಾರವನ್ನು ದುರ್ಬಲಗೊಳಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದರು.

    ಏನಿದು ಕೇಸ್‌?
    ಶಾಸನಸಭೆ ಅಂಗೀಕರಿಸಿದ ಮಸೂದೆಗಳಿಗೆ ಅಂಕಿತ ಹಾಕುವ ವಿಚಾರವಾಗಿ ರಾಷ್ಟ್ರಪತಿ ಹಾಗೂ ರಾಜ್ಯಪಾಲರ ಅಧಿಕಾರಕ್ಕೆ ಸುಪ್ರೀಂ ಕೋರ್ಟ್‌ (Suprme Court) ಡೆಡ್‌ಲೈನ್‌ ವಿಧಿಸಿ ತೀರ್ಪು ಪ್ರಕಟಿಸಿತ್ತು. ಪರಿಶೀಲನೆಗಾಗಿ ರಾಜ್ಯಪಾಲರಿಂದ ಬಂದ ಮಸೂದೆಗಳ ವಿಚಾರವಾಗಿ ಮೂರು ತಿಂಗಳ ಅವಧಿಯಲ್ಲಿ ತೀರ್ಮಾನ ಕೈಗೊಳ್ಳಬೇಕು ಎಂದು ರಾಷ್ಟ್ರಪತಿಯವರಿಗೆ ಸುಪ್ರೀಂ ಕೋರ್ಟ್‌ ಕಾಲಮಿತಿ ನಿಗದಿ ಮಾಡಿ ಏಪ್ರಿಲ್‌ 8 ರಂದು ಆದೇಶ ಪ್ರಕಟಿಸಿತ್ತು. ಇದನ್ನೂ ಓದಿ: ಸುಪ್ರೀಂ ಕೋರ್ಟ್‌ ಕಾನೂನು ಮಾಡಿದ್ರೆ ಸಂಸತ್ತು ಭವನವನ್ನು ಮುಚ್ಚಬೇಕು: ಬಿಜೆಪಿ ಎಂಪಿ ನಿಶಿಕಾಂತ್‌ ದುಬೆ

    ರಾಜ್ಯಪಾಲರು ರಾಷ್ಟ್ರಪತಿಯವರ ಪರಿಶೀಲನೆಗಾಗಿ ಯಾವ ದಿನಾಂಕಕ್ಕೆ ಮಸೂದೆಯನ್ನು ಕಳುಹಿಸಲಾಗಿತ್ತೋ, ಆ ದಿನಾಂಕದಿಂದ ಅನ್ವಯವಾಗುವಂತೆ ಮೂರು ತಿಂಗಳ ಅವಧಿಯಲ್ಲಿ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಕೋರ್ಟ್‌ ರಾಷ್ಟ್ರಪತಿಯವರಿಗೆ ಹೇಳಿರುವುದು ಇದೇ ಮೊದಲು. ನ್ಯಾಯಮೂರ್ತಿ ಜೆ.ಬಿ. ಪಾರ್ದಿವಾಲಾ ಮತ್ತು ನ್ಯಾಯಮೂರ್ತಿ ಮಹಾದೇವನ್ ಅವರನ್ನೊಳಗೊಂಡ ಪೀಠವು ತಮಿಳುನಾಡು ರಾಜ್ಯ ಸರ್ಕಾರ vs ರಾಜ್ಯಪಾಲ ರವಿ ವಿರುದ್ಧದ ಪ್ರಕರಣದ ವಿಚಾರಣೆ ನಡೆಸಿ ಈ ಮಹತ್ವದ ತೀರ್ಪು ಪ್ರಕಟಿಸಿತ್ತು.

  • ಜಡ್ಜ್ ಮನೆಯಲ್ಲಿ ಪತ್ತೆಯಾದ ಕಂತೆ ಕಂತೆ ಹಣದ ಬಗ್ಗೆ ಎಫ್‌ಐಆರ್ ಆಗಿಲ್ಲ ಯಾಕೆ: ಧನಕರ್ ಪ್ರಶ್ನೆ

    ಜಡ್ಜ್ ಮನೆಯಲ್ಲಿ ಪತ್ತೆಯಾದ ಕಂತೆ ಕಂತೆ ಹಣದ ಬಗ್ಗೆ ಎಫ್‌ಐಆರ್ ಆಗಿಲ್ಲ ಯಾಕೆ: ಧನಕರ್ ಪ್ರಶ್ನೆ

    ನವದೆಹಲಿ: ದೆಹಲಿ ಹೈಕೋರ್ಟ್ (Delhi High Court) ನ್ಯಾಯಮೂರ್ತಿ ಯಶವಂತ್ ವರ್ಮಾ (Yashwanth Verma) ಅವರ ನಿವಾಸದಲ್ಲಿ ಕಂತೆ ಕಂತೆ ನೋಟುಗಳು ಪತ್ತೆಯಾಗಿ 1 ತಿಂಗಳಾದರೂ ಯಾಕೆ ಎಫ್‌ಐಆರ್ ಆಗಿಲ್ಲ ಎಂದು ಸುಪ್ರೀಂಕೋರ್ಟ್ ನೇಮಿಸಿದ ಮೂವರು ನ್ಯಾಯಾಧೀಶರ ಸಮಿತಿಯನ್ನು ಉಪರಾಷ್ಟ್ರಪತಿ ಜಗದೀಪ್ ಧನಕರ್ (Vice President Jagdeep Dhankhar) ಪ್ರಶ್ನಿಸಿದರು.

    ಕಳೆದ ತಿಂಗಳು ಮಾರ್ಚ್ 14ರಂದು ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ಬಂಗಲೆಯಲ್ಲಿ ಬೆಂಕಿ ಅವಘಡ ಸಂಭವಿಸಿತ್ತು. ಈ ವೇಳೆ ಅವರ ನಿವಾಸದಲ್ಲಿ ಅರ್ಧ ಸುಟ್ಟ ಕಂತೆ ಕಂತೆ ನೋಟುಗಳು ಪತ್ತೆಯಾಗಿತ್ತು. ಈ ಘಟನೆಯ ಕುರಿತು ಸುಪ್ರೀಂಕೋರ್ಟ್ ಆಂತರಿಕ ತನಿಖೆಗೆ ಆದೇಶಿಸಿ, ನ್ಯಾ. ಯಶವಂತ್ ವರ್ಮಾ ಅವರನ್ನು ದೆಹಲಿ ಹೈಕೋರ್ಟ್ನಿಂದ ಅಲಹಾಬಾದ್ ಹೈಕೋರ್ಟ್ಗೆ ವರ್ಗಾಯಿಸಿದ್ದರು. ಇದನ್ನೂ ಓದಿ: ಜಡ್ಜ್‌ ಮನೆಯಲ್ಲಿ ಕಂತೆ ಕಂತೆ ನೋಟು – ಸಿಜೆಐ ಅನುಮತಿ ನೀಡದ ಹೊರತು ಎಫ್‌ಐಆರ್‌ ದಾಖಲಾಗಲ್ಲ: ಅಮಿತ್‌ ಶಾ

    ಈ ಪ್ರಕರಣವನ್ನು ಉಲ್ಲೇಖಿಸಿ ಮಾತನಾಡಿದ ಧನಕರ್, ಈ ಘಟನೆ ಯಾವುದಾದರೂ ಸಾಮಾನ್ಯ ವ್ಯಕ್ತಿಯ ಮನೆಯಲ್ಲಿ ನಡೆದಿದ್ದರೆ ಆಗ ತನಿಖೆಯು ರಾಕೆಟ್ ವೇಗದಲ್ಲಿ ಆಗುತ್ತಿತ್ತು. ಆದರೂ ಇದು ಈಗ ಎತ್ತಿನಗಾಡಿಯ ರೀತಿಯಲ್ಲೂ ನಡೆಯುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ರಾಷ್ಟ್ರಪತಿಗಳಿಗೆ ನಿರ್ದೇಶನ ನೀಡಲು ಸಾಧ್ಯವಿಲ್ಲ,ಕೋರ್ಟ್‌ಗಳು ಸೂಪರ್ ಪಾರ್ಲಿಮೆಂಟ್‌ ಆಗಬಾರದು: ಧನಕರ್‌ ಅಸಮಾಧಾನ

    ಪ್ರತಿಯೊಂದು ಅಪರಾಧವನ್ನು ಪೊಲೀಸರಿಗೆ ವರದಿ ಮಾಡಬೇಕು. ಅಪರಾಧವನ್ನು ವರದಿ ಮಾಡದಿರುವುದು ಅಪರಾಧ ಎಂಬುದು ದೇಶದ ಕಾನೂನು. ಇದು ಕಾನೂನಿಗೆ ಮೀರಿದ ವರ್ಗವೇ? ಅಥವಾ ವಿಚಾರಣೆಯಿಂದ ಯಾವುದಾದರೂ ವಿಶೇಷ ವಿನಾಯಿತಿ ಪಡೆದಿದೆಯೇ ಎಂದು ಗುಡುಗಿದರು. ಇದನ್ನೂ ಓದಿ: ದೆಹಲಿ ಹೈಕೋರ್ಟ್ ಜಡ್ಜ್ ಮನೆಗೆ ಬೆಂಕಿ – ನಂದಿಸಲು ಹೋದಾಗ ಸಿಕ್ಕಿದ್ದು ಕಂತೆ ಕಂತೆ ನೋಟು

    ಈ ಘಟನೆಯ ಕುರಿತು ಎಫ್‌ಐಆರ್ (FIR) ಆಗದ ಕಾರಣ ಕಾನೂನಿನ ವ್ಯಾಪ್ತಿಯಲ್ಲಿ ಯಾವುದೇ ತನಿಖೆ ನಡೆಸಲಾಗುತ್ತಿಲ್ಲ. ಈ ಪ್ರಕರಣದ ತನಿಖೆಗೆ ಸುಪ್ರೀಂಕೋರ್ಟ್ (SupremeCourt) ಮೂವರು ನ್ಯಾಯಾಧೀಶರನ್ನೊಳಗೊಂಡ ಸಮಿತಿಯನ್ನು ರಚಿಸಿತ್ತು. ಈ ತನಿಖೆಯು ಕಾರ್ಯಾಂಗದ ಕ್ಷೇತ್ರವಾಗಿದೆ, ನ್ಯಾಯಾಂಗದ್ದಲ್ಲ. ಕಾನೂನು ಮತ್ತು ಸಂವಿಧಾನದ ಯಾವುದೇ ನಿಬಂಧನೆಯ ಅಡಿಯಲ್ಲಿ ಸಮಿತಿಯನ್ನು ಸ್ಥಾಪಿಸಲಾಗಿಲ್ಲ ಎಂದು ಹೇಳಿದರು.

    ನ್ಯಾಯಮೂರ್ತಿಗಳ ವಿಚಾರದಲ್ಲಿ ಅಂತಿಮವಾಗಿ ಕ್ರಮಕೈಗೊಳ್ಳುವ ಅಧಿಕಾರವಿರುವುದು ಸಂಸತ್ತಿಗೆ ಮಾತ್ರ. ಈ ಸಮಿತಿಯ ವರದಿಗೆ ಕಾನೂನಿನ ಮಾನ್ಯತೆ ಇಲ್ಲ ಎಂದು ತಿಳಿಸಿದರು.

  • ರಾಷ್ಟ್ರಪತಿಗಳಿಗೆ ನಿರ್ದೇಶನ ನೀಡಲು ಸಾಧ್ಯವಿಲ್ಲ,ಕೋರ್ಟ್‌ಗಳು ಸೂಪರ್ ಪಾರ್ಲಿಮೆಂಟ್‌ ಆಗಬಾರದು: ಧನಕರ್‌ ಅಸಮಾಧಾನ

    ರಾಷ್ಟ್ರಪತಿಗಳಿಗೆ ನಿರ್ದೇಶನ ನೀಡಲು ಸಾಧ್ಯವಿಲ್ಲ,ಕೋರ್ಟ್‌ಗಳು ಸೂಪರ್ ಪಾರ್ಲಿಮೆಂಟ್‌ ಆಗಬಾರದು: ಧನಕರ್‌ ಅಸಮಾಧಾನ

    ನವದೆಹಲಿ: ಕೋರ್ಟ್‌ಗಳು ಸೂಪರ್ ಪಾರ್ಲಿಮೆಂಟ್‌ ಆಗಬಾರದು. ಈಗ ಕಾರ್ಯಾಂಗ ಮತ್ತು ಶಾಸಕಾಂಗದ ಜಾಗದಲ್ಲಿ ನ್ಯಾಯಾಂಗದ ಪ್ರವೇಶವಾಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಉಪರಾಷ್ಟ್ರಪತಿ ಜಗದೀಪ್ ಧನಕರ್ (Vice President Jagdeep Dhankhar) ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಉಪರಾಷ್ಟ್ರಪತಿಗಳ ಎನ್‌ಕ್ಲೇವ್‌ನಲ್ಲಿ ರಾಜ್ಯಸಭಾ ಇಂಟರ್ನ್‌ಗಳ ಆರನೇ ಬ್ಯಾಚ್ ಉದ್ದೇಶಿಸಿ ಮಾತನಾಡಿದ ಅವರು, ರಾಷ್ಟ್ರಪತಿಗಳಿಗೆ (President) ಕೋರ್ಟ್ ನಿರ್ದೇಶನ ನೀಡಲು ಸಾಧ್ಯವಿಲ್ಲ. ಆದರೆ ಇತ್ತೀಚಿನ ತೀರ್ಪಿನ ಮೂಲಕ ರಾಷ್ಟ್ರಪತಿಗಳಿಗೆ ನಿರ್ದೇಶನ ನೀಡಲಾಗಿದೆ. ನಾವು ಎಲ್ಲಿಗೆ ಹೋಗುತ್ತಿದ್ದೇವೆ? ದೇಶದಲ್ಲಿ ಏನಾಗುತ್ತಿದೆ ಎಂದು ಧನಕರ್‌ ಕಳವಳ ವ್ಯಕ್ತಪಡಿಸಿದರು.

    ನ್ಯಾಯಾಧೀಶರು ಭಾರತದ ರಾಷ್ಟ್ರಪತಿಗಳಿಗೆ ನಿರ್ದೇಶಿಸುವ ಪರಿಸ್ಥಿತಿಯನ್ನು ನಾವು ಹೊಂದಲು ಸಾಧ್ಯವಿಲ್ಲ. ಈ ರೀತಿಯ ನಿರ್ದೇಶನವು ರಾಷ್ಟ್ರದ ಅತ್ಯುನ್ನತ ಕಚೇರಿಯ ಸಾಂವಿಧಾನಿಕ ಅಧಿಕಾರವನ್ನು ದುರ್ಬಲಗೊಳಿಸುತ್ತದೆ ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: Waqf Act| ಹಿಂದೂಗಳು ಸಲ್ಲಿಸಿದಾಗ ಹೈಕೋರ್ಟ್‌ಗೆ ಹೋಗಿ ಎಂದಿತ್ತು – ಸುಪ್ರೀಂ ವಿಚಾರಣೆಗೆ ಮಾನದಂಡ ಏನು?- ವಕೀಲ ವಿಷ್ಣು ಶಂಕರ್‌ ಜೈನ್‌

     

    ಸಂವಿಧಾನವು (Constitution) ನ್ಯಾಯಾಂಗಕ್ಕೆ ವಿಧಿ 145(3) ಅಡಿಯಲ್ಲಿ ಕಾನೂನನ್ನು ವ್ಯಾಖ್ಯಾನಿಸುವ ಅಧಿಕಾರವನ್ನು ನೀಡುತ್ತದೆ. ಸಂವಿಧಾನಿಕ ಪೀಠದಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ನ್ಯಾಯಾಧೀಶರು ಇರಬೇಕಾಗುತ್ತದೆ. ಆದರೆ ನ್ಯಾಯಾಲಯಗಳು ರಾಷ್ಟ್ರಪತಿಗಳಿಗೆ ನಿರ್ದೇಶನಗಳನ್ನು ನೀಡಲು ಅಧಿಕಾರ ನೀಡುವುದಿಲ್ಲ ಎಂದು ಉಪರಾಷ್ಟ್ರಪತಿ ಹೇಳಿದರು.

    ಮಸೂದೆಗಳ ಮೇಲಿನ ನಿರ್ಧಾರಗಳು ಆಳವಾದ ಚಿಂತನೆ ಮತ್ತು ಸಮಾಲೋಚನೆಯನ್ನು ಒಳಗೊಂಡಿರುತ್ತವೆ. ಇಂತಹ ವಿಷಯಗಳಲ್ಲಿ ಗಡುವು ವಿಧಿಸುವುದು ಸರಿಯಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ವಕ್ಫ್ ಮಂಡಳಿಗೆ ಸದಸ್ಯರ ನೇಮಕ ಮಾಡುವಂತಿಲ್ಲ, ಆಸ್ತಿಗಳ ವಿಚಾರದಲ್ಲೂ ಯಥಾಸ್ಥಿತಿ ಕಾಪಾಡಿ: ಸುಪ್ರೀಂ

    ಏನಿದು ಕೇಸ್‌?
    ಶಾಸನಸಭೆ ಅಂಗೀಕರಿಸಿದ ಮಸೂದೆಗಳಿಗೆ ಅಂಕಿತ ಹಾಕುವ ವಿಚಾರವಾಗಿ ರಾಷ್ಟ್ರಪತಿ ಹಾಗೂ ರಾಜ್ಯಪಾಲರ ಅಧಿಕಾರಕ್ಕೆ ಸುಪ್ರೀಂ ಕೋರ್ಟ್‌ (Suprme Court) ಡೆಡ್‌ಲೈನ್‌ ವಿಧಿಸಿ ತೀರ್ಪು ಪ್ರಕಟಿಸಿತ್ತು. ಪರಿಶೀಲನೆಗಾಗಿ ರಾಜ್ಯಪಾಲರಿಂದ ಬಂದ ಮಸೂದೆಗಳ ವಿಚಾರವಾಗಿ ಮೂರು ತಿಂಗಳ ಅವಧಿಯಲ್ಲಿ ತೀರ್ಮಾನ ಕೈಗೊಳ್ಳಬೇಕು ಎಂದು ರಾಷ್ಟ್ರಪತಿಯವರಿಗೆ ಸುಪ್ರೀಂ ಕೋರ್ಟ್‌ ಕಾಲಮಿತಿ ನಿಗದಿ ಮಾಡಿ ಏಪ್ರಿಲ್‌ 8 ರಂದು ಆದೇಶ ಪ್ರಕಟಿಸಿತ್ತು.

    ರಾಜ್ಯಪಾಲರು ರಾಷ್ಟ್ರಪತಿಯವರ ಪರಿಶೀಲನೆಗಾಗಿ ಯಾವ ದಿನಾಂಕಕ್ಕೆ ಮಸೂದೆಯನ್ನು ಕಳುಹಿಸಲಾಗಿತ್ತೋ, ಆ ದಿನಾಂಕದಿಂದ ಅನ್ವಯವಾಗುವಂತೆ ಮೂರು ತಿಂಗಳ ಅವಧಿಯಲ್ಲಿ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಕೋರ್ಟ್‌ ರಾಷ್ಟ್ರಪತಿಯವರಿಗೆ ಹೇಳಿರುವುದು ಇದೇ ಮೊದಲು. ನ್ಯಾಯಮೂರ್ತಿ ಜೆ.ಬಿ. ಪಾರ್ದಿವಾಲಾ ಮತ್ತು ನ್ಯಾಯಮೂರ್ತಿ ಮಹಾದೇವನ್ ಅವರನ್ನೊಳಗೊಂಡ ಪೀಠವು ತಮಿಳುನಾಡು ರಾಜ್ಯ ಸರ್ಕಾರ vs ರಾಜ್ಯಪಾಲ ರವಿ ವಿರುದ್ಧದ ಪ್ರಕರಣದ ವಿಚಾರಣೆ ನಡೆಸಿ ಈ ಮಹತ್ವದ ತೀರ್ಪು ಪ್ರಕಟಿಸಿತ್ತು.