Tag: ಜಕಾರ್ತ

  • ಸ್ಟೆಪ್‌ಲ್ಯಾಡರ್ ಎಡವಟ್ಟು- ವಿಮಾನದಿಂದ ಇಳಿಯಲು ಯತ್ನಿಸಿ ಕೆಳಗೆ ಬಿದ್ದ ಸಿಬ್ಬಂದಿ ವೀಡಿಯೋ ವೈರಲ್‌

    ಸ್ಟೆಪ್‌ಲ್ಯಾಡರ್ ಎಡವಟ್ಟು- ವಿಮಾನದಿಂದ ಇಳಿಯಲು ಯತ್ನಿಸಿ ಕೆಳಗೆ ಬಿದ್ದ ಸಿಬ್ಬಂದಿ ವೀಡಿಯೋ ವೈರಲ್‌

    ಜಕಾರ್ತ: ವಿಮಾನದಿಂದ ಇಳಿಯುತ್ತಿದ್ದ ಸಂದರ್ಭದಲ್ಲಿ ಸ್ಟೆಪ್‌ಲ್ಯಾಡರ್ (Stepladder) ಅನ್ನು ಮುಂದಕ್ಕೆ  ತಳ್ಳಿದ ಪರಿಣಾಮ ಸಿಬ್ಬಂದಿ‌ಯೊಬ್ಬರು ವಿಮಾನದಿಂದ ಕೆಳಗೆ ಬಿದ್ದ ಘಟನೆಯೊಂದು ಇಂಡೋನೇಷ್ಯಾದ ಜಕಾರ್ತ ವಿಮಾನ ನಿಲ್ದಾಣದಲ್ಲಿ  ನಡೆದಿದೆ.

    ಸಾಮಾನ್ಯವಾಗಿ ವಿಮಾನದಿಂದ ಇಳಿಯಲು ಹಾಗೂ ಹತ್ತಲು ಕೃತಕ ಏಣಿಯನ್ನು ಬಳಸುತ್ತಾರೆ. ಅಂತೆಯೇ ಇಲ್ಲಿಯೂ ಏಣಿಯನ್ನು ಇಡಲಾಗಿದ್ದು, ಕೆಲ ಹೊತ್ತಿನ ಬಳಿಕ ಸಿಬ್ಬಂದಿ ಅಲ್ಲಿಂದ ತೆಗೆದಿದ್ದಾರೆ. ಇದನ್ನು ಗಮನಿಸದ ವಿಮಾನದ ಒಳಗಡೆ ಇದ್ದ ಸಿಬ್ಬಂದಿ ಇಳಿಯಲು ಯತ್ನಿಸಿದ್ದಾರೆ. ಮೆಟ್ಟಿಲು ಇದೆ ಎಂದು ಭಾವಿಸಿ ಕಾಲಿಟ್ಟಾಗ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ.

    ಇಂಡೋನೇಷ್ಯಾದ ಟ್ರಾನ್ಸ್‌ನುಸಾ  ವಿಮಾನದಿಂದ (Indonesia’s Transnusa plane) ವ್ಯಕ್ತಿ ಹೊರಬರುತ್ತಿದ್ದಂತೆಯೇ ಕೆಳಗಡೆ ಇದ್ದ ಇತರ ಇಬ್ಬರು ಕಾರ್ಮಿಕರು ಸ್ಟೆಪ್‌ಲ್ಯಾಡರ್ ಅನ್ನು ಮುಂದಕ್ಕೆ ತಳ್ಳಿದ್ದಾರೆ. ಪರಿಣಾಮ ಈ ದುರ್ಘಟನೆ ನಡೆದಿದೆ. ಘಟನೆಯಿಂದ ಸಿಬ್ಬಂದಿಗೆ ಯಾವುದೇ ಗಾಯಗಳಾಗಿಲ್ಲ ಎಂಬುದಾಗಿ ವರದಿಯಾಗಿದೆ.

    ಈ ಸಿಬ್ಬಂದಿ ವಿಮಾನದಿಂದ ಕೆಳಕ್ಕೆ ಬೀಳುತ್ತಿರುವ ವೀಡಿಯೋವನ್ನು ವೈಮಾನಿಕ ಸಲಹೆಗಾರ ಸಂಜಯ್ ಲಾಜರ್ ಅವರು ತಮ್ಮ X ಖಾತೆಯಲ್ಲಿ ಹಂಚಿಕೊಂಡ ಬಳಿಕ ನೆಟ್ಟಿಗರ ಗಮನಸೆಳೆಯಿತು. ಅಲ್ಲದೇ ಕೂಡಲೇ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ವೈರಲ್‌ ಆಗಿದೆ. ವಿಡಿಯೋ ನೋಡಿದ ಜನ ಬೆಚ್ಚಿಬಿದ್ದಿದ್ದಾರೆ.

    ವೈರಲ್‌ ವೀಡಿಯೋದಲ್ಲೇನಿದೆ..?: ಹಸಿರು ಜಾಕೆಟ್ ಧರಿಸಿದ ಸಿಬ್ಬಂದಿ Airbus A320 ಒಳಗಡೆ ಇದ್ದವರ ಜೊತೆ ಮಾತನಾಡಿಕೊಂಡು ಹೊರಬರಲು ಪ್ರಯತ್ನಿಸುತ್ತಿರುತ್ತಾರೆ. ಇತ್ತ ವಿಮಾನದಿಂದ ಇಳಿಯಲು ಬಳಸುವ ಏಣಿಯನ್ನು ಇಬ್ಬರು ತಳ್ಳಿಕೊಂಡು ಹೋಗುತ್ತಿದ್ದು, ಇದೇ ಸಂದರ್ಭದಲ್ಲಿ ಸಿಬ್ಬಂದಿ ಇಳಿಯಲು ಯತ್ನಿಸಿ ಕೆಳಗೆ ಬೀಳುತ್ತಿರುವುದನ್ನು ಕಾಣಬಹುದಾಗಿದೆ. ಅಲ್ಲದೇ ಸಿಬ್ಬಂದಿ ಕೈಯಲ್ಲಿದ್ದ ಪೇಪರ್‌ಗಳು ಚೆಲ್ಲಾಪಿಲ್ಲಿಯಾಗಿ ಬೀಳುವುದನ್ನು ಕೂಡ ನಾವು ವೀಡಿಯೋದಲ್ಲಿ ಕಾಣಹುದಾಗಿದೆ.

    ವಿಮಾನದ ಬಾಗಿಲು ಹಾಕದೇ ಸ್ಟೆಪ್‌ಲ್ಯಾಡರ್ ಅನ್ನು ಹೇಗೆ ತೆಗೆದರು ಎಂದು ವೀಡಿಯೋ ನೋಡಿದ ನೆಟ್ಟಿಗರು ಪ್ರಶ್ನಿಸಿದ್ದಾರೆ. ಯಾವುದೇ ಸೂಚನೆಯಿಲ್ಲದೆ ಏಣಿಯನ್ನು ತೆಗೆದುಹಾಕಲಾಗಿದೆಯೇ? ಅವರು ಸುರಕ್ಷಿತವಾಗಿದ್ದಾರೆ ಎಂದು ಭಾವಿಸುವುದಾಗಿ ಇನ್ನೊಬ್ಬ ಬಳಕೆದಾರರು ಬರೆದುಕೊಂಡಿದ್ದಾರೆ.

    TransNusa ಜಕಾರ್ತದಲ್ಲಿ ಪ್ರಧಾನ ಕಛೇರಿಯನ್ನು ಹೊಂದಿರುವ ಕಡಿಮೆ-ವೆಚ್ಚದ ವಿಮಾನವಾಗಿದೆ. ದೇಶೀಯವಾಗಿ ಜೊತೆಗೆ ಚೀನಾ, ಮಲೇಷಿಯಾ ಮತ್ತು ಸಿಂಗಾಪುರಕ್ಕೆ ವಿಮಾನಗಳನ್ನು ಹೊಂದಿದೆ.

  • ಆಸಿಯಾನ್-ಭಾರತ ಶೃಂಗಸಭೆಯ ಸಹ ಅಧ್ಯಕ್ಷತೆ ಹೆಮ್ಮೆ, ಗೌರವ ತಂದಿದೆ: ಮೋದಿ

    ಆಸಿಯಾನ್-ಭಾರತ ಶೃಂಗಸಭೆಯ ಸಹ ಅಧ್ಯಕ್ಷತೆ ಹೆಮ್ಮೆ, ಗೌರವ ತಂದಿದೆ: ಮೋದಿ

    ಜಕಾರ್ತ: ಆಸಿಯಾನ್ (ASEAN)-ಭಾರತ (INDIA) ಮತ್ತು ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಗುರುವಾರ ಬೆಳಗ್ಗೆ ಇಂಡೋನೇಷ್ಯಾಕ್ಕೆ (Indonesia) ಆಗಮಿಸಿದ್ದು, ಆಯಕಟ್ಟಿನ ಪ್ರಮುಖ ಪ್ರದೇಶದ ದೇಶಗಳೊಂದಿಗೆ ಭಾರತದ ಪಾಲುದಾರಿಕೆಯ ಭವಿಷ್ಯದ ಬಾಹ್ಯರೇಖೆಯನ್ನು ಚರ್ಚಿಸಲಿದ್ದಾರೆ.

    ಜಕಾರ್ತದಲ್ಲಿ (Jakarta) ನಡೆದ ಆಸಿಯಾನ್-ಭಾರತ ಶೃಂಗಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಳೆದ ವರ್ಷ ನಾವು ಭಾರತ-ಆಸಿಯಾನ್ ಸ್ನೇಹ ದಿನವನ್ನು ಆಚರಿಸಿದ್ದೇವೆ ಮತ್ತು ಅದಕ್ಕೆ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯ ರೂಪವನ್ನು ನೀಡಿದ್ದೇವೆ ಎಂದರು.

    ನಮ್ಮ ಪಾಲುದಾರಿಕೆಯು ನಾಲ್ಕನೇ ದಶಕವನ್ನು ತಲುಪಿದೆ. ಈ ಶೃಂಗಸಭೆಯ ಸಹ ಅಧ್ಯಕ್ಷರಾಗಿರುವುದು ನನಗೆ ಹೆಮ್ಮೆ ತಂದಿದೆ. ಈ ಶೃಂಗಸಭೆ ಆಯೋಜಿಸಿದ್ದಕ್ಕಾಗಿ ಇಂಡೋನೇಷ್ಯಾದ ಅಧ್ಯಕ್ಷ ಜೋಕೋ ವಿಡೋಡೋ ಅವರನ್ನು ನಾನು ಅಭಿನಂದಿಸುತ್ತೇನೆ. ಭಾರತ ಮತ್ತು ಆಸಿಯಾನ್ ಮಧ್ಯೆ ಉತ್ತಮ ಬಾಂಧವ್ಯವಿದೆ. ಶಿಕ್ಷಣ, ರಕ್ಷಣೆ ಮತ್ತು ಪ್ರವಾಸೋದ್ಯಮ ವಿಷಯಗಳಲ್ಲಿ ಪರಸ್ಪರ ಸಹಕಾರವನ್ನು ನೀಡಿದೆ. ಆಸಿಯಾನ್ ದೇಶದ ಅಭಿವೃದ್ಧಿಗೆ ಭಾರತ ಸಹಕರಿಸಲಿದೆ ಎಂದು ಹೇಳಿದರು.

    ಇದಕ್ಕೂ ಮೊದಲು ಪ್ರಧಾನಿ ಮೋದಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಜಕಾರ್ತದಲ್ಲಿ ಬಂದಿಳಿದಿದ್ದೇನೆ. ಆಸಿಯಾನ್ ಸಂಬಂಧಿತ ಸಭೆಗಳನ್ನು ಎದುರು ನೋಡುತ್ತಿದ್ದೇನೆ. ವಿಶ್ವವನ್ನು ಉತ್ತಮವಾಗಿಸುವ ಸಲುವಾಗಿ ವಿವಿಧ ನಾಯಕರೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ ಎಂದು ಬರೆದು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದರು. ಅಲ್ಲದೇ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಅವರು ಜಕಾರ್ತದಲ್ಲಿ ಪ್ರಧಾನಿ ಮೋದಿಯವರ ಫೋಟೋಗಳನ್ನು ತಮ್ಮ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

    ಆಸಿಯಾನ್-ಭಾರತ ಶೃಂಗಸಭೆಯ ಬಳಿಕ ಮೋದಿ 18ನೇ ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ನಂತರ ದೆಹಲಿಗೆ ಹಿಂದಿರುಗಲಿದ್ದು, ಸೆಪ್ಟೆಂಬರ್ 9 ಮತ್ತು 10ರಂದು ನಡೆಯುವ ಜಿ20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

    ಪ್ರಧಾನಿ ಇಂಡೋನೇಷ್ಯಾ ಭೇಟಿ ವೇಳೆ ಜಕಾರ್ತ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮೋದಿಗೆ ವಿಧ್ಯುಕ್ತ ಸ್ವಾಗತ ಕೋರಿದ್ದು, ಮಹಿಳಾ ಸಬಲೀಕರಣ ಮತ್ತು ಮಕ್ಕಳ ರಕ್ಷಣಾ ಸಚಿವರಾದ ಐ.ಗುಸ್ತಿ ಆಯು ಬಿಂಟಾಂಗ್ ದರ್ಮಾವತಿ ಅವರು ಪ್ರಧಾನಿಯನ್ನು ಬರಮಾಡಿಕೊಂಡರು. ಅಲ್ಲದೇ ವಿಮಾನ ನಿಲ್ದಾಣದಲ್ಲಿ ಇಂಡೋನೇಷ್ಯಾದ ಸಾಂಸ್ಕೃತಿಕ ನೃತ್ಯವನ್ನು ಪ್ರದರ್ಶಿಸಲಾಯಿತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಟೇಕಾಫ್ ಆದ ನಾಲ್ಕೇ ನಿಮಿಷದಲ್ಲಿ ಸಮುದ್ರದಲ್ಲಿ ಪತನವಾದ ವಿಮಾನ

    ಟೇಕಾಫ್ ಆದ ನಾಲ್ಕೇ ನಿಮಿಷದಲ್ಲಿ ಸಮುದ್ರದಲ್ಲಿ ಪತನವಾದ ವಿಮಾನ

    – ಪ್ರಯಾಣಿಕರು ಮೃತಪಟ್ಟಿರುವ ಶಂಕೆ
    – ಮೀನುಗಾರರಿಗೆ ದೊರೆತ ವಿಮಾನದ ಅವಶೇಷಗಳು

    ಜಕಾರ್ತ: ರಾಜಧಾನಿ ಜಕಾರ್ತದಿಂದ ಹೊರಟಿದ್ದ ಖಾಸಗಿ ವಿಮಾನ ಟೇಕ್ ಆಫ್ ಆದ 4 ನಿಮಿಷದಲ್ಲೇ ನಾಪತ್ತೆಯಾಗಿದ್ದ ಬೋಯಿಂಗ್ 737-500 ವಿಮಾನ ಸಮುದ್ರದಲ್ಲಿ ಪತನವಾಗಿದೆ.

    ವಿಮಾನ ನಿಲ್ದಾಣದಿಂದ ಹೊರಟ ವಿಮಾನವೊಂದು ಹಾರಾಟ ಆರಂಭಿಸಿದ ನಾಲ್ಕೇ ನಿಮಿಷದಲ್ಲಿ ಸಂಪರ್ಕ ಕಡಿತವಾಗಿಸಿಕೊಂಡು ನಾಪತ್ತೆಯಾಗಿತ್ತು. ಇದೀಗ ಈ ವಿಮಾನ ಸಮುದ್ರದಲ್ಲ ಪತನವಾಗಿರುವ ಬಗ್ಗೆ ವರದಿಗಳು ಪ್ರಕಟವಾಗಿವೆ.

    10 ಸಾವಿರ ಅಡಿಯಿಂದ ವಿಮಾನ ಸಮುದ್ರಕ್ಕೆ ಬಿದ್ದಿದ್ದೆ ಎಂದು ಹೇಳಲಾಗುತ್ತಿದೆ. ಈ ವಿಮಾನದಲ್ಲಿ 62 ಜನ ಪ್ರಯಾಣಿಸುತ್ತಿದ್ದರು. ಸಮುದ್ರಕ್ಕೆ ವಿಮಾನ ಬಿದ್ದಿರುವ ಹಿನ್ನೆಲೆ ಬದುಕುಳಿದಿರುವುದು ಅನುಮಾನ ಎನ್ನಲಾಗುತ್ತಿದೆ. ಆದರೆ ಈ ಘಟನೆಯ ಕುರಿತಾಗಿ ಇಂಡೋನೇಷೀಯಾ ಸರ್ಕಾರವು ಅಧಿಕೃತವಾದ ಮಾಹಿತಿಯನ್ನು ನೀಡಿಲ್ಲ.

    ಮೀನುಗಾರರಿಗೆ ವಿಮಾನದ ಅವಶೇಷಗಳು ದೊರೆತಿವೆ. ಈ ಹೀಗಾಗಿ ವಿಮಾನದಲ್ಲಿದ್ದ ಪ್ರಯಾಣಿಕರೆಲ್ಲರೂ ಮೃತಪಟ್ಟಿರುವ ಶಂಕೆ ವ್ಯಕ್ತವಾಗುತ್ತಿದೆ. ಆದರೆ ಸಿಕ್ಕಿರುವ ಅವಶೇಷಗಳು ನಾಪತ್ತೆಯಾಗಿರುವ ವಿಮಾನಕ್ಕೆ ಸೇರಿದ ವಸ್ತುಗಳಾ ಎಂಬುದಕ್ಕೆ ನಿಖರವಾದ ಮಾಹಿತಿಲ್ಲ. ಕೇಬಲ್, ಹರಿದ ಜೀನ್ಸ್ ಪ್ಯಾಂಟಿನ ತುಂಡು, ಲೋಹದ ಅವಶೇಷಗಳು, ನೀರಿನಲ್ಲಿ ತೇಲುತ್ತಿದ್ದವು. ಹೀಗಾಗಿ ಮೀನಿಗಾರರಿಗೆ ನೂರ್ಹಾಸನ್ ದ್ವೀಪದಲ್ಲಿ ಪತ್ತೆಯಾಗಿವೆ ಎಂದು ಮೂಲಗಳಿಂದ ತಿಳಿದು ಬಂದಿದೆ.

    ಮಳೆ ಇರುವ ಕಾರಣದಿಂದಾಗಿ ವಿಮಾನ ನಿಲ್ದಾಣದಿಂದ 30 ನಿಮಿಷಗಳ ಕಾಲ ವಿಳಂಬವಾಗಿ ಹೊರಟ್ಟಿತ್ತು. ಕಾಲಿಮಂತನ್ ಪ್ರಾಂತ್ಯದಿಂದ ಪಾಂಟಿಯಾನಾಕ್‍ಗೆ ಹೊರಡಲು ಟೇಕ್ ಆಫ್ ಆಗಿರುವ ಕೆಲವೆ ನಿಮಿಷಗಳಲ್ಲಿ ನಾಪತ್ತೆಯಾದೆ. ಈ ವಿಮಾನ 26 ವರ್ಷ ಹಳೆಯ ವಿಮಾನವಾಗಿತ್ತು. 2018 ರಲ್ಲಿ ನಡೆದ ಜಕಾರ್ತ ಲಯನ್ ವಿಮಾನ ಪತನವಾಗಿ 189 ಮಂದಿ ಸಾವನ್ನಪ್ಪಿದ್ದರು. 2014ರಲ್ಲಿ ಇಂಡೋನೇಷ್ಯಾದ ಸುರಬಯಾದಿಂದ ಸಿಂಗಾಪುರಕ್ಕೆ ತೆರಳಿದ್ದ ಏರ್ ಏಷ್ಯಾ ವಿಮಾನ ಸಮುದ್ರಕ್ಕೆ ಅಪ್ಪಳಿಸಿ 162 ಮಂದಿ ಸಾವಿಗೀಡಾಗಿದ್ದರು.

  • ಕ್ವಾರಂಟೈನ್ ಬೇಡ ಮನೆಗೆ ಕಳುಹಿಸಿ- ಜಕಾರ್ತದಿಂದ ಬಂದವರ ಕಿರಿಕ್

    ಕ್ವಾರಂಟೈನ್ ಬೇಡ ಮನೆಗೆ ಕಳುಹಿಸಿ- ಜಕಾರ್ತದಿಂದ ಬಂದವರ ಕಿರಿಕ್

    ಬೆಂಗಳೂರು: ತಡರಾತ್ರಿ ಇಂಡೋನೇಷ್ಯಾದ ಜಕಾರ್ತದಿಂದ ಕೇಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ 50 ಮಂದಿ ತಮಗೆ ಹೋಟೆಲ್ ಕ್ವಾರಂಟೈನ್ ಬೇಡ ಅಂತ ಕಿರಿಕ್ ನಡೆಸಿರುವ ಘಟನೆ ನಡೆದಿದೆ.

    ತಡರಾತ್ರಿ 1.40ಕ್ಕೆ ಎಐ-1311 ವಿಮಾನದಲ್ಲಿ 214 ಮಂದಿ ಆಗಮಿಸಿದ್ದಾರೆ. ಇವರಲ್ಲಿ ಬಹುತೇಕರು ಆರೋಗ್ಯ ತಪಾಸಣೆ ನಂತರ ಹೋಟೆಲ್ ಕ್ವಾರಂಟೈನ್‍ಗೆ ಒಳಗಾಗಿದ್ದರು. ಆದರೆ ಇವರಲ್ಲಿ 50 ಮಂದಿ ಮಾತ್ರ ನಮ್ಮ ಬಳಿ ದುಡ್ಡಿಲ್ಲ ಹೋಟೆಲ್ ಕ್ವಾರಂಟೈನ್ ಮಾಡಬೇಡಿ. ನಮ್ಮನ್ನು ಮನೆಗೆ ಕಳುಹಿಸಿ ಅಂತ ಪಟ್ಟುಹಿಡಿದಿದ್ದಾರೆ.

    ಕೊನೆಗೆ ಇಡೀ ರಾತ್ರಿ ವಿಮಾನ ನಿಲ್ದಾಣದಲ್ಲೇ ಹಠ ಹಿಡಿದು ಕುಳಿತಿದ್ದ 50 ಮಂದಿಯನ್ನು ಅಧಿಕಾರಿಗಳು ಮನವೊಲಿಸಿ ಬೆಳಿಗ್ಗೆ 11 ಗಂಟೆ ಸುಮಾರಿಗೆ ಬೆಂಗಳೂರಿನ ಹಜ್ ಭವನದಲ್ಲಿ ಕ್ವಾರಂಟೈನ್ ಮಾಡಲು ಶಿಫ್ಟ್ ಮಾಡಿದ್ದಾರೆ.

  • ಹೊಸ ವರ್ಷದ ಆರಂಭದಲ್ಲೇ ಪ್ರವಾಹದ ಹೊಡೆತಕ್ಕೆ ನಲುಗಿದ ಇಂಡೋನೇಷ್ಯಾ – 16 ಮಂದಿ ಸಾವು

    ಹೊಸ ವರ್ಷದ ಆರಂಭದಲ್ಲೇ ಪ್ರವಾಹದ ಹೊಡೆತಕ್ಕೆ ನಲುಗಿದ ಇಂಡೋನೇಷ್ಯಾ – 16 ಮಂದಿ ಸಾವು

    – ಹಾವು ಮೊಸಳೆಗಳು ರಸ್ತೆಯಲ್ಲಿ
    – 20 ಸಾವಿರ ಮಂದಿಗೆ ನೆರೆಯಿಂದ ಸಂಕಷ್ಟ

    ಜಕಾರ್ತ: ಇಡೀ ಜಗತ್ತು ಬುಧವಾರ ಹೊಸ ವರ್ಷದ ಸಂಭ್ರಮದಲ್ಲಿ ತೇಲಾಡಿದರೆ ದ್ವೀಪ ರಾಷ್ಟ್ರ ಇಂಡೋನೇಷ್ಯಾ ಮಾತ್ರ ಪ್ರವಾಹದ ಹೊಡೆತಕ್ಕೆ ಸಿಲುಕಿ ನಲುಗಿಹೋಗಿದೆ.

    ಇಂಡೋನೇಷ್ಯಾದಲ್ಲಿ ನೆರೆ ಆರ್ಭಟ ಮೈ ಜುಮ್ಮೆನಿಸುವಂತಿದ್ದು, ರಾಜಧಾನಿ ಜಕಾರ್ತವಂತೂ ನೀರಿನಲ್ಲಿ ಮುಳುಗಿ ಹೋಗಿದೆ. ಈವರೆಗೆ ನೆರೆ ಸಿಲುಕಿ ಸುಮಾರು 16 ಮಂದಿ ಸಾವನ್ನಪ್ಪಿದ್ದಾರೆ. 20 ಸಾವಿರಕ್ಕೂ ಹೆಚ್ಚು ಮಂದಿ ನಿರಾಶ್ರಿತರಾಗಿದ್ದಾರೆ. ಇನ್ನು ತಮ್ಮವರನ್ನು ಕಳೆದುಕೊಂಡವರ ಆಕ್ರಂದನ ಮುಗಿಲುಮುಟ್ಟಿದೆ. ಜನರ ಜೀವನವಂತೂ ಮೂರಾಬಟ್ಟೆಯಾಗಿದೆ.

    ಕೆಲವಡೆ ನೆರೆಯಿಂದ ಸಿಲುಕಿದವರನ್ನು ರಕ್ಷಣಾ ಸಿಬ್ಬಂದಿ ಬೋಟ್‍ಗಳ ಮೂಲಕ ಸುರಕ್ಷಿತ ಸ್ಥಳಕ್ಕೆ ರವಾನಿಸುತ್ತಿದ್ದಾರೆ. ರಸ್ತೆಯಲ್ಲಿ ನಿಲ್ಲಿಸಿದಂತಹ ಕಾರುಗಳಂತೂ ಪ್ರವಾಹದ ರಭಸಕ್ಕೆ ತೇಲಿಹೋಗುತ್ತಿದ್ದರೆ, ಇತ್ತ ಹಾವು, ಮೊಸಳೆಗಳು ರಸ್ತೆಗೆ ಬಂದು ಬಿಟ್ಟಿವೆ. ಇನ್ನು ಕೆಲವರು ಪ್ರವಾಹದಲ್ಲಿ ಮನೆಗೆ ಬಂದ ಮೀನುಗಳನ್ನು ಹಿಡಿಯೋ ಕೆಲಸ ಮಾಡುತ್ತಿದ್ದಾರೆ.

    https://twitter.com/seungyouncloud/status/1212566923189178368

    ಬುಧವಾರ ಹೊಸ ವರ್ಷದ ಆಚರಣೆ ಸಂಭ್ರಮದಲ್ಲಿ ಇದ್ದ ಜಕಾರ್ತ ಜನರಿಗೆ ಮಳೆರಾಯ ಶಾಕ್ ಕೊಟ್ಟಿದ್ದಾನೆ. ಎಡಬಿಡದೆ ಸುರಿದ ಮಳೆಗೆ ನೆರೆ ಉಂಟಾಗಿದ್ದು, ಜಕಾರ್ತ ನಲುಗಿಹೋಗಿದೆ. ನೆರೆಯ ಹಿನ್ನೆಲೆ ಜಕಾರ್ತದ ವಿಮಾನ ನಿಲ್ದಾಣದಿಂದ ವಿಮಾನ ಹಾರಾಟ ಸ್ಥಗಿತಗೊಂಡಿದೆ. ಇತ್ತ ಸುಮಾರು 20 ಸಾವಿರ ಮಂದಿ ನೆರೆಯಿಂದ ಪರದಾಡುತ್ತಿದ್ದಾರೆ. ಎಡಬಿಡದೆ ಸುರಿದ ಮಳೆಯಿಂದ ಇಂಡೋನೇಷ್ಯಾದ ಬಹುತೇಕ ನದಿಗಳು ತುಂಬಿ ಹರಿಯುತ್ತಿರುವ ಪರಿಣಾಮ ಜಕಾರ್ತ ಹಾಗೂ ಇನ್ನಿತರೆ ಪ್ರದೇಶಗಳಲ್ಲಿ ನೆರೆ ಉಂಟಾಗಿದೆ. ಅಲ್ಲದೆ ಜಕಾರ್ತ ಹೊರವಲಯದಲ್ಲಿ ಕೋಟಾ ಡಿಪೋಕ್ ನಗರದಲ್ಲಿ ಭೂಕುಸಿತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಪ್ರಹಾಹ ಪೀಡಿತ ಪ್ರದೇಶಗಳಲ್ಲಿ ಬರೋಬ್ಬರಿ 370 ಮಿ.ಮಿ ಮಳೆಯಾಗಿದ್ದು, ಇಂಡೋನೇಷ್ಯಾದಲ್ಲಿ ಏಪ್ರಿಲ್‍ವರೆಗೂ ಹೀಗೆ ಹಲವೆಡೆ ಪ್ರವಾಹ ಸಂಭವಿಸುವ ಸಾಧ್ಯತೆ ಇರುವ ಬಗ್ಗೆ ಹವಮಾನ ಇಲಾಖೆ ತಿಳಿಸಿದೆ ಎಂದು ಜಕಾರ್ತ ರಾಜ್ಯಪಾಲರು ತಿಳಿಸಿದ್ದಾರೆ.

    ಈಗಾಗಲೇ ಜಕಾರ್ತದಲ್ಲಿ 8 ಮಂದಿ, ಕೋಟಾ ಡಿಪೋಕ್‍ನಲ್ಲಿ 3 ಮಂದಿ ಸೇರಿದಂತೆ ಇಂಡೋನೇಷ್ಯಾದ ಇತರೆ ನೆರೆ ಪೀಡಿತ ಪ್ರದೇಶಗಳಲ್ಲಿ ಒಟ್ಟು 16 ಮಂದಿ ಪ್ರವಾಹಕ್ಕೆ ಬಲಿಯಾಗಿದ್ದಾರೆ. ಹೊಸ ವರ್ಷಾಚರಣೆಯಲ್ಲಿದ್ದ ಮಂದಿ ಮಳೆರಾಯನ ಆರ್ಭಟದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ.

  • ಫೋನ್ ಪಾಸ್‍ವರ್ಡ್ ಕೊಡ್ಲಿಲ್ಲ ಅಂತ ಪತಿಗೆ ಬೆಂಕಿ ಹಚ್ಚಿದ್ಲು ಪತ್ನಿ!

    ಫೋನ್ ಪಾಸ್‍ವರ್ಡ್ ಕೊಡ್ಲಿಲ್ಲ ಅಂತ ಪತಿಗೆ ಬೆಂಕಿ ಹಚ್ಚಿದ್ಲು ಪತ್ನಿ!

    ಜಕಾರ್ತ: ಫೋನ್ ಪಾಸ್‍ವರ್ಡ್ ಕೊಡಲಿಲ್ಲ ಅಂತ ಪತ್ನಿ ಪತಿಗೆ ಬೆಂಕಿ ಹಚ್ಚಿ ಕೊಂದ ಭಯಾನಕ ಘಟನೆ ಇಂಡೋನೇಷ್ಯಾದ ಪಶ್ಚಿಮ ನುಸಾ ಟೆಂಗ್ಗಾರ ಪ್ರಾಂತ್ಯದಲ್ಲಿ ನಡೆದಿದೆ.

    ಪೂರ್ವ ಲೊಂಬೊಕ್ ರೀಜೆನ್ಸಿ ನಿವಾಸಿಯಾದ ದೀದಿ ಪೂರ್ನಾಮ (26) ಮೃತ ದುರ್ದೈವಿ. ಇಲ್ಹಾಮ್ ಕಹ್ಯಾನಿ(25) ಕೊಲೆ ಮಾಡಿರುವ ಪತ್ನಿ. ಕಳೆದ ಶನಿವಾರ ಪೂರ್ನಾಮ ತನ್ನ ಮನೆಯ ಮೇಲ್ಛಾವಣಿಯನ್ನು ರಿಪೇರಿ ಮಾಡುತ್ತಿದ್ದನು. ಈ ವೇಳೆ ಪತ್ನಿ ಆತನ ಫೋನ್ ಪಾಸ್‍ವರ್ಡ್ ಕೇಳಿದ್ದಾಳೆ. ಆಗ ಪತಿ ಪಾಸ್‍ವರ್ಡ್ ನೀಡದೇ ಪತ್ನಿ ಜೊತೆ ಜಗಳವಾಡಿದ್ದಾನೆ. ಬಳಿಕ ಜಗಳ ತಾರಕಕ್ಕೆ ಏರಿ ಪೂರ್ನಾಮ ಪತ್ನಿಗೆ ಹೊಡೆದಿದ್ದಾನೆ.

    ಇಷ್ಟಕ್ಕೆ ಕೋಪಗೊಂಡ ಪತ್ನಿ ತಕ್ಷಣ ಪಕ್ಕದಲ್ಲೇ ಇದ್ದ ಪೆಟ್ರೋಲ್ ಬಾಟಲ್ ಎತ್ತಿಕೊಂಡು ಪತಿಯ ಮೇಲೆ ಸುರಿದು ಬೆಂಕಿ ಹಚ್ಚಿದ್ದಾಳೆ. ಬೆಂಕಿ ಹಚ್ಚಿದ ಪರಿಣಾಮ ಪೂರ್ನಾಮನ ಅರ್ಧ ದೇಹ ಸಂಪೂರ್ಣ ಸುಟ್ಟುಹೋಗಿದೆ. ಇದನ್ನು ನೋಡಿದ ಸ್ಥಳೀಯರು ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಎರಡು ದಿನದ ಬಳಿಕ ಪೂರ್ನಾಮ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾನೆ.

    ಸದ್ಯ ಪತಿಯನ್ನು ಬಲಿ ಪಡೆದ ಪತ್ನಿಯನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಇಂಡೋನೇಷ್ಯಾ ವಿಮಾನ ದುರಂತ: ಒಟ್ಟು 190 ಪ್ರಯಾಣಿಕರಲ್ಲಿ ಒಬ್ಬ ಬದುಕುಳಿದ!

    ಇಂಡೋನೇಷ್ಯಾ ವಿಮಾನ ದುರಂತ: ಒಟ್ಟು 190 ಪ್ರಯಾಣಿಕರಲ್ಲಿ ಒಬ್ಬ ಬದುಕುಳಿದ!

    ಸಾಂದರ್ಭಿಕ ಚಿತ್ರ

    ಜಕಾರ್ತ: ಇಂಡೋನೇಷ್ಯಾದ ಲಯನ್ ಏರ್‌‌ಲೈನ್ಸ್‌ ಸಂಸ್ಥೆಗೆ ಸೇರಿದ್ದ ವಿಮಾನ ಪತನವಾಗಿ 189 ಮಂದಿ ಜಲಸಮಾಧಿಯಾಗಿದ್ದರೂ, ಓರ್ವ ಪ್ರಯಾಣಿಕ ಮಾತ್ರ ಅದೃಷ್ಟವಶಾತ್ ಬದುಕುಳಿದಿದ್ದಾರೆ.

    ಹೌದು, ಸೋಮವಾರ ಬೆಳಗ್ಗೆ ಸಂಭವಿಸಿದ ದುರಂತದಲ್ಲಿ ಲಯನ್ ಏರ್‌‌ಲೈನ್ಸ್‌ನ ಜಿಟಿ 610 ವಿಮಾನದಲ್ಲಿದ್ದ 189 ಮಂದಿ ದಾರುಣವಾಗಿ ಸಾವನ್ನಪ್ಪಿದ್ದರೂ, ಓರ್ವ ಪ್ರಯಾಣಿಕ ಟ್ರಾಫಿಕ್ ಜಾಮ್‍ನಿಂದಾಗಿ ಬದುಕಿದ್ದಾರೆ.

    ಇಂಡೋನೇಷ್ಯಾದ ಹಣಕಾಸು ಸಚಿವಾಲಯದ ಅಧಿಕಾರಿ ಸೋನಿ ಸೆಟ್ಯಾವಾನ್ ಪತನಗೊಂಡ ವಿಮಾನದಲ್ಲಿ ಪಂಗ್‍ಕಲ್ ಪಿನಾಂಗ್ ದ್ವೀಪಕ್ಕೆ ತೆರಳಬೇಕಿತ್ತು. ಆದರೆ ಟ್ರಾಫಿಕ್ ಜಾಮ್ ಅವರನ್ನು ಸಾವಿನ ದವಡೆಯಿಂದ ಪಾರು ಮಾಡಿದೆ. ಇದನ್ನೂ ಓದಿ: ಇಂಡೋನೇಷ್ಯಾ ವಿಮಾನ ದುರಂತ: ಭಾರತೀಯ ಕ್ಯಾಪ್ಟನ್ ಪೈಲಟ್ ಸಾವು

    ಈ ಕುರಿತು ಪ್ರತಿಕ್ರಿಯಿಸಿರುವ ಸೆಟ್ಯಾವಾನ್, ನಾನು ವಾರಕ್ಕೊಮ್ಮೆ ನನ್ನ ಸಹೋದ್ಯೋಗಿಗಳೊಂದಿಗೆ ಪಂಗ್‍ಕಲ್ ಪಿನಾಂಗ್ ದ್ವೀಪಕ್ಕೆ ಹೋಗುತ್ತಲೇ ಇದ್ದೆ. ಎಂದಿನಿಂತೆ ಸೋಮವಾರ ಪ್ರಯಾಣಕ್ಕಾಗಿ ಲಯನ್ ಏರ್‌‌ಲೈನ್ಸ್‌ನ ವಿಮಾನವನ್ನು ಬುಕ್ ಮಾಡಿದ್ದೆ. ಇದಕ್ಕಾಗಿ ಸೋಮವಾರ ಬೆಳಗಿನ ಜಾವ 3ರ ಸುಮಾರಿಗೆ ಜಕಾರ್ತ ವಿಮಾನ ನಿಲ್ದಾಣಕ್ಕೆ ಹೊರಟಿದ್ದೆ. ಆದರೆ ವಿಮಾನ ನಿಲ್ದಾಣಕ್ಕೆ ತೆರಳುವ ರಸ್ತೆಯಲ್ಲಿ ಸಾಕಷ್ಟು ಟ್ರಾಫಿಕ್ ಜಾಮ್ ಉಂಟಾದ ಕಾರಣ ನಾನು ಬೆಳಗ್ಗೆ 6.20ರ ಸುಮಾರಿಗೆ ಏರ್‌ಪೋರ್ಟ್‌ ತಲುಪಿದೆ.

    ವಿಮಾನ ನಿಲ್ದಾಣದಲ್ಲಿ ನನ್ನ ತಪಾಸಣೆ ಮುಗಿಸುವಷ್ಟರಲ್ಲಿ, ವಿಮಾನ ಟೇಕ್ ಆಫ್ ಆಗಿತ್ತು. ಅದಾದ ನಂತರ ನಾನು ಮತ್ತೊಂದು ವಿಮಾನ ಬಳಸಿ ಪಿನಾಂಗ್ ದ್ವೀಪ ತಲುಪಿದೆ. ನಾನು ಲ್ಯಾಂಡ್ ಆಗುತ್ತಲೇ ಲಯನ್ ವಿಮಾನ ಸಮುದ್ರದಲ್ಲಿ ಪತನವಾಗಿ, ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಸಾವಿಗೀಡಾದ ಶಾಕಿಂಗ್ ಮಾಹಿತಿ ಸಿಕ್ಕಿತ್ತು. ವಿಮಾನದ ಪತನದ ಸುದ್ದಿ ಕೇಳಿ ನನಗೆ ತುಂಬಾ ಆಘಾತವಾಗಿದೆ. ಅಲ್ಲದೇ ಪತನಗೊಂಡ ವಿಮಾನದಲ್ಲಿ ನನ್ನ ಸ್ನೇಹಿತರೂ ಸಹ ಪ್ರಯಾಣಿಸುತ್ತಿದ್ದರು ಎಂದು ನೆನೆದು ಕಣ್ಣೀರು ಹಾಕಿದ್ದಾರೆ.

    ಏನಿದು ವಿಮಾನ ದುರಂತ?
    ಸೋಮವಾರ ಬೆಳಗ್ಗೆ ರಾಜಧಾನಿ ಜಕಾರ್ತದಿಂದ ಪಾಂಗ್‍ಕಲ್ ಪಿನಾಗ್ ದ್ವೀಪಕ್ಕೆ ಲಯನ್ಸ್ ಏರ್‌‌ಲೈನ್ಸ್‌ ಸಂಸ್ಥೆಗೆ ಸೇರಿದ್ದ ಜಿಟಿ 610 ವಿಮಾನ ಎಂದಿನಂತೆ 6.20ರ ಸುಮಾರಿಗೆ ಟೇಕ್ ಆಫ್ ಆಗಿ ಹೊರಟಿತ್ತು. ಸುಮಾರು 7.30ರ ಹೊತ್ತಿಗೆ ಪಾಂಗ್‍ಕಲ್ ಪಿನಾಂಗ್ ತಲುಪಬೇಕಿದ್ದ ವಿಮಾನ, ಟೇಕಾಫ್ ಆದ 13 ನಿಮಿಷಗಳ ಬಳಿಕ ಏಕಾಏಕಿ ರೇಡಾರ್ ಸಂಪರ್ಕದಿಂದ ನಾಪತ್ತೆಯಾಗಿತ್ತು. ಅಲ್ಲದೇ ಕೊನೆಯ ಬಾರಿಗೆ ವಿಮಾನವು ಬೋಯಿಂಗ್ 737 ಮ್ಯಾಕ್ಸ್ 8 ಲಯನ್ ವಿಮಾನದ ಸಂಪರ್ಕಕ್ಕೆ 6.33ರಲ್ಲಿ ಯತ್ನಿಸಿತ್ತು. ಇದಾದ ಬಳಿಕ ಪಾಂಗ್‍ಕಲ್ ದ್ವೀಪದ ಬಳಿ ಸಮುದ್ರದಲ್ಲಿ ವಿಮಾನ ಪತನಗೊಂಡು, ವಿಮಾನದಲ್ಲಿದ್ದ ಎಲ್ಲಾ 188 ಪ್ರಯಾಣಿಕರು ಮೃತಪಟ್ಟಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಇಂಡೋನೇಷ್ಯಾ ವಿಮಾನ ದುರಂತ: ಭಾರತೀಯ ಕ್ಯಾಪ್ಟನ್ ಪೈಲಟ್ ಸಾವು

    ಇಂಡೋನೇಷ್ಯಾ ವಿಮಾನ ದುರಂತ: ಭಾರತೀಯ ಕ್ಯಾಪ್ಟನ್ ಪೈಲಟ್ ಸಾವು

    ಜಕಾರ್ತ: ಇಂಡೋನೇಷ್ಯಾದ ಲಯನ್ಸ್ ಏರ್‌‌ಲೈನ್ಸ್‌ ದುರಂತದಲ್ಲಿ ವಿಮಾನದ ಮುಖ್ಯ ಕ್ಯಾಪ್ಟನ್ ಪೈಲಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಭಾರತದ ಭಾವ್ಯೆ ಸುನೆಜಾ ಮೃತಪಟ್ಟಿದ್ದಾರೆ.

    ದುರಂತ ಸಂಭವಿಸಿದ ಲಯನ್ ಏರ್‌‌ಲೈನ್ಸ್‌ ಸಂಸ್ಥೆಯ ಜಿಟಿ610 ವಿಮಾನದ ಮುಖ್ಯ ಕ್ಯಾಪ್ಟನ್ ಪೈಲಟ್ ಆಗಿದ್ದ ಭಾರತದ ಭಾವ್ಯೆ ಸುನೆಜಾ ಅವರು ಮೃತಪಟ್ಟಿರುವುದಾಗಿ ಜಕಾರ್ತದ ಭಾರತೀಯ ರಾಯಭಾರಿ ಕಚೇರಿ ಅಧಿಕೃತವಾಗಿ ತಿಳಿಸಿದೆ.

    ಮಾಹಿತಿಗಳ ಪ್ರಕಾರ ಸುನೆಜಾ 2011 ರಿಂದ ಲಯನ್ ಏರ್‌‌ಲೈನ್ಸ್‌ ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಇದಕ್ಕೂ ಮುಂಚೆ ಅವರು ಎಮಿರೇಟ್ಸ್ ವಿಮಾನ ಸಂಸ್ಥೆಯಲ್ಲಿ ತರಬೇತಿ ಪೈಲೆಟ್ ಆಗಿಯೂ ಸೇವೆ ಸಲ್ಲಿಸಿದ್ದರು. ಸುನೆಜಾರವರು ದೆಹಲಿ ಮೂಲದವರಾಗಿದ್ದು, ಪೂರ್ವ ದೆಹಲಿಯ ಮಯೂರ್ ವಿಹಾರ್ ದಲ್ಲಿನ ಅಹಲ್ಕಾನ್ ಪಬ್ಲಿಕ್ ಶಾಲೆಯಲ್ಲಿ ಶಿಕ್ಷಣ ಮುಗಿಸಿದ್ದರು.

    ಮುಖ್ಯ ಪೈಲಟ್ ಆಗಿದ್ದ ಸುನೆಜಾ ಅವರಿಗೆ 6 ಸಾವಿರ ಗಂಟೆಯ ವಿಮಾನ ಹಾರಾಟ ನಡೆಸಿದ ಅನುಭವವಿತ್ತು. ಇದಲ್ಲದೇ ಇಂಡೋನೇಷ್ಯಾದ ಹಾರ್ವಿನೋದಲ್ಲಿ ಸಹ ಪೈಲಟರ್ ಆಗಿ 5,000 ಕ್ಕೂ ಅಧಿಕ ಗಂಟೆಯ ಅನುಭವವನ್ನು ಸಹ ಹೊಂದಿದ್ದರು ಎನ್ನುವ ಮಾಹಿತಿಯನ್ನು ಲಯನ್ ಏರ್‌‌ಲೈನ್ಸ್‌ ಸಂಸ್ಥೆ ತಿಳಿಸಿದೆ.

    ಸುನೆಜಾ ಸಾವಿನ ಕುರಿತು ಜಕಾರ್ತ ಭಾರತೀಯ ರಾಯಭಾರಿ ಕಚೇರಿಯು ತನ್ನ ಟ್ವಿಟ್ಟರಿನಲ್ಲಿ, ಜಕಾರ್ತ ಬಳಿ ಲಯನ್ ಏರ್‌‌ಲೈನ್ಸ್‌ ವಿಮಾನ ದುರಂತದಲ್ಲಿ ಮೃತಪಟ್ಟವರ ಬಗ್ಗೆ ತೀವ್ರ ಸಂತಾಪವಿದೆ. ಆದರೆ ಘಟನೆಯಲ್ಲಿ ದುರದಷ್ಟಕರ ವಿಚಾರವೆಂದರೆ, ವಿಮಾನ ಚಲಾಯಿಸುತ್ತಿದ್ದ ಭಾರತೀಯ ಪೈಲಟ್ ಭವ್ಯೆ ಸುನೆಜಾ ಸಹ ದುರಂತದಲ್ಲಿ ಮೃತಪಟ್ಟಿದ್ದಾರೆ. ರಾಯಭಾರ ಕಚೇರಿಯು ರಕ್ಷಣಾ ಕೇಂದ್ರದ ಜೊತೆ ಸಂಪರ್ಕದಲ್ಲಿದ್ದು, ಎಲ್ಲಾ ರೀತಿಯ ಸಹಕಾರವನ್ನು ನೀಡುತ್ತಿದೆ ಎಂದು ಬರೆದುಕೊಂಡಿದೆ.

    ಏನಿದು ವಿಮಾನ ದುರಂತ?
    ಇಂದು ಬೆಳಗ್ಗೆ ರಾಜಧಾನಿ ಜಕಾರ್ತದಿಂದ ಪಾಂಗ್‍ಕಲ್ ಪಿನಾಗ್ ದ್ವೀಪಕ್ಕೆ ಲಯನ್ಸ್ ಏರ್‌‌ಲೈನ್ಸ್‌ ಸಂಸ್ಥೆಗೆ ಸೇರಿದ್ದ ಜಿಟಿ 610 ವಿಮಾನ ಎಂದಿನಂತೆ 6.20ರ ಸುಮಾರಿಗೆ ಟೇಕ್ ಆಫ್ ಆಗಿ ಹೊರಟಿತ್ತು. ಸುಮಾರು 7.30ರ ಹೊತ್ತಿಗೆ ಪಾಂಗ್‍ಕಲ್ ಪಿನಾಂಗ್ ತಲುಪಬೇಕಿತ್ತು. ಆದರೆ ಟೇಕಾಫ್ ಆದ 13 ನಿಮಿಷಗಳ ಬಳಿಕ ಏಕಾಏಕಿ ರೇಡಾರ್ ಸಂಪರ್ಕದಿಂದ ವಿಮಾನ ನಾಪತ್ತೆಯಾಗಿತ್ತು. ಅಲ್ಲದೇ ಕೊನೆಯ ಬಾರಿಗೆ ಜಿಟಿ610 ವಿಮಾನವು ಬೋಯಿಂಗ್ 737 ಮ್ಯಾಕ್ಸ್ 8 ಲಯನ್ ವಿಮಾನದ ಸಂಪರ್ಕಕ್ಕೆ 6.33ರಲ್ಲಿ ಯತ್ನಿಸಿತ್ತು. ಇದಾದ ಬಳಿಕ ಪಾಂಗ್‍ಕಲ್ ದ್ವೀಪದ ಬಳಿ ಸಮುದ್ರದಲ್ಲಿ ವಿಮಾನ ಪತನಗೊಂಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಇಂಡೋನೇಷ್ಯಾ ವಿಮಾನ ಪತನ: 189 ಮಂದಿ ದಾರುಣ ಸಾವು- ವಿಡಿಯೋ ನೋಡಿ

    ಇಂಡೋನೇಷ್ಯಾ ವಿಮಾನ ಪತನ: 189 ಮಂದಿ ದಾರುಣ ಸಾವು- ವಿಡಿಯೋ ನೋಡಿ

    ಸಾಂದರ್ಭಿಕ ಚಿತ್ರ

    ಜಕಾರ್ತ: ಇಂಡೋನೇಷ್ಯಾದ ಲಯನ್ ಏರ್‌‌ಲೈನ್ಸ್‌ ಸಂಸ್ಥೆಗೆ ಸೇರಿದ್ದ ವಿಮಾನವೊಂದು ಸಮುದ್ರದಲ್ಲಿ ಪತನಗೊಂಡ ಪರಿಣಾಮ 189 ಮಂದಿ ಪ್ರಯಾಣಿಕರು ದಾರುಣವಾಗಿ ಮೃತಪಟ್ಟ ಘಟನೆ ಪಾಂಗ್‍ಕಲ್ ದ್ವೀಪದ ಬಳಿ ಸಂಭವಿಸಿದೆ.

    ಇಂದು ಬೆಳಗ್ಗೆ ರಾಜಧಾನಿ ಜಕಾರ್ತದಿಂದ ಪಾಂಗ್‍ಕಲ್ ಪಿನಾಗ್ ದ್ವೀಪಕ್ಕೆ ಲಯನ್ಸ್ ಏರ್‌‌ಲೈನ್ಸ್‌ ಸಂಸ್ಥೆಗೆ ಸೇರಿದ್ದ ಜಿಟಿ610 ವಿಮಾನ ಎಂದಿನಂತೆ 6.20ರ ಸುಮಾರಿಗೆ ಟೇಕ್ ಆಫ್ ಆಗಿ ಹೊರಟಿತ್ತು. ಸುಮಾರು 7.30ರ ಹೊತ್ತಿಗೆ ಪಾಂಗ್‍ಕಲ್ ಪಿನಾಂಗ್ ತಲುಪಬೇಕಿತ್ತು. ಆದರೆ ಟೇಕಾಫ್ ಆದ 13 ನಿಮಿಷಗಳ ಬಳಿಕ ಏಕಾಏಕಿ ರೇಡಾರ್ ಸಂಪರ್ಕದಿಂದ ವಿಮಾನ ನಾಪತ್ತೆಯಾಗಿತ್ತು. ಅಲ್ಲದೇ ಕೊನೆಯ ಬಾರಿಗೆ ಜಿಟಿ610 ವಿಮಾನವು ಬೋಯಿಂಗ್ 737 ಮ್ಯಾಕ್ಸ್ 8 ಲಯನ್ ವಿಮಾನದ ಸಂಪರ್ಕಕ್ಕೆ 6.33ರಲ್ಲಿ ಯತ್ನಿಸಿತ್ತು. ಇದಾದ ಬಳಿಕ ಪಾಂಗ್‍ಕಲ್ ದ್ವೀಪದ ಬಳಿ ಸಮುದ್ರದಲ್ಲಿ ವಿಮಾನ ಪತನಗೊಂಡಿದೆ.

    ವಿಮಾನ ಬೀಳುತ್ತಿರುವ ದೃಶ್ಯವನ್ನು ಜಕಾರ್ತ ಬಂದರಿನಿಂದ ಹೊರಟಿದ್ದ ಬೋಟ್ ಸಿಬ್ಬಂದಿ ನೋಡಿದ್ದು, ಕೂಡಲೇ ರಕ್ಷಣಾ ತಂಡಗಳಿಗೆ ವಿಷಯವನ್ನು ಮುಟ್ಟಿಸಿದ್ದರು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ತೆರಳಿದ ರಕ್ಷಣಾ ತಂಡಗಳು ಪ್ರಯಾಣಿಕರಿಗಾಗಿ ತೀವ್ರ ಶೋಧ ಕಾರ್ಯ ನಡೆಸುತ್ತಿವೆ. ಅಲ್ಲದೇ ವಿಮಾನ ಪತನವಾದ ಸ್ಥಳದಲ್ಲಿ ವಿಮಾನದ ಅವಶೇಷಗಳು ಸಹ ಪತ್ತೆಯಾಗಿವೆ.

    ಸಮುದ್ರದಲ್ಲಿ ಪತನವಾದ ವಿಮಾನದಲ್ಲಿ ಸಿಬ್ಬಂದಿ ಸೇರಿದಂತೆ ಒಟ್ಟು 189 ಮಂದಿ ಪ್ರಯಾಣಿಕರು ಮೃತಪಟ್ಟಿದ್ದಾರೆ. ವಿಮಾನವು 210 ಪ್ರಯಾಣಿಕರ ಸಾಮರ್ಥ್ಯವನ್ನು ಹೊಂದಿದ್ದು, ಕೆಲವರು ಬದುಕುಳಿದರಬಹುದೆಂಬ ಶಂಕೆಯನ್ನು ರಕ್ಷಣಾ ಪಡೆಗಳು ವ್ಯಕ್ತಪಡಿಸಿವೆ.

    ಈ ಕುರಿತು ಪ್ರತಿಕ್ರಿಯಿಸಿರುವ ಲಯನ್ ಏರ್‌‌ಲೈನ್ಸ್‌ ನಿರ್ವಾಹಕ ಎಡ್ವರ್ಡ್ ಸಿರೈಟ್, ಸದ್ಯ ನಾವು ಮಾಹಿತಿಯನ್ನು ಕಲೆಹಾಕುತ್ತೀದ್ದೇವೆ. ಈ ಕ್ಷಣದಲ್ಲಿ ಯಾವುದೇ ರೀತಿಯ ಹೇಳಿಕೆಗಳನ್ನು ನೀಡಲು ಸಾಧ್ಯವಿಲ್ಲ. ಇಂದು ಸಂಜೆ ಪತ್ರಿಕಾಗೋಷ್ಠಿ ನಡೆಸಿ ಘಟನೆ ಸಂಪೂರ್ಣ ವರದಿ ನೀಡುತ್ತೇವೆ ಎಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹೆಬ್ಬಾವಿನ ಜೊತೆ ಪುಟ್ಟ ಬಾಲಕನ ತುಂಟಾಟ- ವಿಡಿಯೋ ವೈರಲ್

    ಹೆಬ್ಬಾವಿನ ಜೊತೆ ಪುಟ್ಟ ಬಾಲಕನ ತುಂಟಾಟ- ವಿಡಿಯೋ ವೈರಲ್

    ಜಕಾರ್ತ: ಪುಟ್ಟ ಬಾಲಕನೊಬ್ಬ ಹೆಬ್ಬಾವಿನ ಜೊತೆ ಆಟವಾಡುತ್ತಿರುವ ದೃಶ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಸುಮಾರು 10 ಪಟ್ಟು ದೊಡ್ಡದಾಗಿರುವ ಹೆಬ್ಬಾವಿನ ಜೊತೆ ಆಟವಾಡುತ್ತಿದ್ದಾಗ ಅವರ ಪೋಷಕರೇ ಮೊಬೈಲ್ ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದರು. ಇದೀಗ ಅದು ಸಖತ್ ವೈರಲ್ ಆಗುತ್ತಿದೆ. ಈ ರೋಮಾಂಚನವಾದ ದೃಶ್ಯ ಇಂಡೊನೆಷಿಯಾದ ಇಸ್ಟ್ ಜಾವದಲ್ಲಿ ನಡೆಯಿತು.

    ವಿಡಿಯೋದಲ್ಲಿ ಪುಟ್ಟ ಬಾಲಕನಿಗಿಂತ ಹತ್ತುಪಟ್ಟು ಗಾತ್ರದಲ್ಲಿರುವ ಹೆಬ್ಬಾವಿನ ಜೊತೆ ಬಾಲಕ ತುಂಟಾಟವನ್ನು ಆಡುತ್ತಾನೆ. ಅಷ್ಟೇ ಅಲ್ಲದೇ ಹಾವು ಕೂಡ ಅವನೊಂದಿಗೆ ಆಟವಾಡುತ್ತದೆ. ಹೆಬ್ಬಾವು ಪುಟ್ಟ ಬಾಲಕನಿಂದ ತಪ್ಪಿಸಿಕೊಂಡು ದೂರ ಹೋಗುತ್ತಿದ್ದರೆ, ಬಾಲಕ ಪುಟ್ಟ ಪುಟ್ಟ ಹೆಜ್ಜೆ ಇಡುತ್ತಾ ಮತ್ತೆ ಹಾವಿನೆಡೆಗೆ ಹೋಗುತ್ತಾನೆ. ಬಳಿಕ ಹೆಬ್ಬಾವಿನ ತಲೆ ಹಿಡಿದು ಎಳೆದು ತರುತ್ತಾನೆ.

    ಇದೇ ಮೊದಲು ಅಲ್ಲ ಈ ಹಿಂದೆಯೂ ಮೇ ತಿಂಗಳಲ್ಲಿ ಇಬ್ಬರು ಬಾಲಕಿಯರು ಹಾವಿನೊಂದಿಗೆ ಆಟವಾಡುತ್ತಿದ್ದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಹರಿದಾಡುತ್ತಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=CpIZh4NOuZY