Tag: ಛೋಟಾ ಶಕೀಲ್

  • ದಾವೂದ್‌ಗೆ ಏನೂ ಆಗಿಲ್ಲ, ಆರಾಮಾಗಿದ್ದಾನೆ: ಛೋಟಾ ಶಕೀಲ್‌

    ದಾವೂದ್‌ಗೆ ಏನೂ ಆಗಿಲ್ಲ, ಆರಾಮಾಗಿದ್ದಾನೆ: ಛೋಟಾ ಶಕೀಲ್‌

    ನವದೆಹಲಿ: ಭಾರತದ ಮೋಸ್ಟ್ ವಾಂಟೆಡ್ ಭೂಗತ ಪಾತಕಿ ದಾವೂದ್ (Dawood Ibrahim) ಆರೋಗ್ಯದ ಬಗ್ಗೆ ಆತನ ಆಪ್ತ ಛೋಟಾ ಶಕೀಲ್ (Chhota Shakeel) ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾನೆ.

    ದಾವೂದ್‌ಗೆ ಯಾರೋ ವಿಷ ನೀಡಿದ್ದಾರೆ ಅನ್ನೋದು ಆಧಾರರಹಿತ ವದಂತಿಯಾಗಿದೆ. ದಾವೂದ್ ನೂರಕ್ಕೆ ನೂರಷ್ಟು ಆರೋಗ್ಯವಾಗಿದ್ದಾನೆ. ಕಾಲಕಾಲಕ್ಕೆ ದುರುದ್ದೇಶದಿಂದ ಇಂತಹ ವದಂತಿಗಳನ್ನು ಹರಡಲಾಗುತ್ತಿದೆ. ಇದೀಗ ಐಎಸ್‌ಐನ ಆಸ್ತಿಯಾಗಿರುವ ಪರಾರಿಯಾಗಿರುವ ಭೂಗತ ದೊರೆ, ತಾನು ಇತ್ತೀಚೆಗೆ ಪಾಕಿಸ್ತಾನದಲ್ಲಿ ದಾವೂದ್‌ನನ್ನು ಭೇಟಿಯಾಗಿದ್ದೆ ಮತ್ತು ಅವನು ಸಂಪೂರ್ಣವಾಗಿ ಚೆನ್ನಾಗಿದ್ದೇನೆ ಎಂದು ಛೋಟಾ ಶಕೀಲ್ ಹೇಳಿದ್ದಾನೆ.

    ದಾವೂದ್‌ಗೆ ಯಾರೋ ವಿಷ ಹಾಕಿದ್ದಾರೆ.‌ ಆತನನ್ನು ಕರಾಚಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಪರಿಸ್ಥಿತಿ ಚಿಂತಾಜನಕವಾಗಿದೆ ಎಂಬ ವದಂತಿಗಳು ಭಾರತ ಮತ್ತು ಪಾಕಿಸ್ತಾನದ ಎರಡೂ ದೇಶಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಇದರ ಬೆನ್ನಲ್ಲೇ ಆತನ ಆಪ್ತ ಛೋಟಾ ಶಕೀಲ್ ಕಡೆಯಿಂದ ಸ್ಫೋಟಕ ಮೆಸೇಜ್ ಬಂದಿದ್ದು, ಎಲ್ಲರಿಗೂ ಅಚ್ಚರಿ ಮೂಡಿಸಿದೆ. ದಾವೂದ್‌ ಆಸ್ಪತ್ರೆಗೆ ದಾಖಲಾಗಿರುವ ವಿಚಾರ ಸುದ್ದಿಯಾಗುತ್ತಿದ್ದಂತೆಯೇ ಪಾಕಿಸ್ತಾನದಲ್ಲಿ (Pakistan) ಗೂಗಲ್ ಮತ್ತು ಟ್ವಿಟ್ಟರ್ ಕೂಡ ಸ್ಥಗಿತಗೊಳಿಸಲಾಗಿತ್ತು.‌

    ಛೋಟಾ ಶಕೀಲ್‌ನನ್ನು ದಾವೂದ್‌ನ ಬಲಗೈ ಬಂಟ ಎಂದು ಕರೆಯಲಾಗುತ್ತದೆ. ದಾವೂದ್ ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದಾನೆ. ದರೋಡೆ, ಡಕಾಯಿತಿ, ಕಳ್ಳಸಾಗಣೆ, ಸುಲಿಗೆ, ಅಪಹರಣ ಮತ್ತು ಬಾಂಬ್ ಸ್ಫೋಟ ಸೇರಿದಂತೆ ಹಲವು ಪ್ರಕರಣಗಳಲ್ಲಿ ದಾವೂದ್ ಇಬ್ರಾಹಿಂ ಕೈವಾಡವಿದೆ. ಅಷ್ಟೇ ಅಲ್ಲದೆ, 1993 ರ ಮುಂಬೈ ಸ್ಫೋಟದ ಮಾಸ್ಟರ್ ಮೈಂಡ್ ಕೂಡ ಇದೇ ಪಾತಕಿ. ಈ ದಾಳಿಯಲ್ಲಿ 250ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು.

  • ಬಿಜೆಪಿ ಮಂತ್ರಿಯ ಹತ್ಯೆಗೈದಿದ್ದ ಮೋಸ್ಟ್ ವಾಂಟೆಡ್ ಉಗ್ರ ಯುಎಇಯಿಂದ ಪಾಕಿಸ್ತಾನಕ್ಕೆ ಗಡೀಪಾರು

    ಬಿಜೆಪಿ ಮಂತ್ರಿಯ ಹತ್ಯೆಗೈದಿದ್ದ ಮೋಸ್ಟ್ ವಾಂಟೆಡ್ ಉಗ್ರ ಯುಎಇಯಿಂದ ಪಾಕಿಸ್ತಾನಕ್ಕೆ ಗಡೀಪಾರು

    ಅಬುಧಾಬಿ: ದಾವುದ್ ಗ್ಯಾಂಗ್ ಸದಸ್ಯ, ಗುಜರಾತ್ ಬಿಜೆಪಿ ಮುಖಂಡ ಹರೇನ್ ಪಾಂಡ್ಯ ಕೊಲೆ, ಸೇರಿದಂತೆ ಅನೇಕ ಪ್ರಕರಣಗಳಿಗೆ ಬೇಕಾಗಿದ್ದ ಆರೋಪಿ ಫಾರೂಖ್ ದೆವ್ದಿವಾಲಾ ನನ್ನು ಯುನೈಟೆಡ್ ಅರಬ್ ಎಮಿರೇಟ್ಸ್ ಸರ್ಕಾರ ಪಾಕಿಸ್ತಾನಕ್ಕೆ ಗಡೀಪಾರು ಮಾಡಿದ್ದು, ಭಾರತದ ಅಧಿಕಾರಿಗಳಿಗೆ ಭಾರೀ ಹಿನ್ನಡೆಯಾಗಿದೆ.

    ಫಾರೂಖ್ ದುಬೈನಲ್ಲಿ ಅಡಗಿದ್ದಾನೆ ಎನ್ನುವ ಮಾಹಿತಿಯನ್ನು ಗುಜರಾತ್ ಪೊಲೀಸರು ಕೇಂದ್ರ ಭದ್ರತಾ ಸಂಸ್ಥೆಗೆ ತಿಳಿಸಿದ್ದರು. ಭಾರತದ ಅಧಿಕಾರಿಗಳು ನೀಡಿದ ಮಾಹಿತಿಯ ಮೇರೆಗೆ ಈ ವರ್ಷದ ಮೇ 12 ರಂದು ಯುಎಇ ಪೊಲೀಸರು ಫಾರೂಖ್‍ನನ್ನು ಬಂಧಿಸಿದ್ದರು.

    ಫಾರೂಖ್ ಬಂಧನದ ಬಳಿಕ ಭಾರತದ ಸರ್ಕಾರ ಆತನ ಮೂಲದ ಬಗ್ಗೆ ಗುಜರಾತ್ ಮತ್ತು ಮುಂಬೈನಲ್ಲಿ ಮಾಹಿತಿ ಕಲೆ ಹಾಕುತಿತ್ತು. ಈ ವೇಳೆ ದುಬೈ ಕಾಲೇಜ್ ಒಂದರಲ್ಲಿ ಪಾಕಿಸ್ತಾನದ ಪಾಸ್‍ಪೋರ್ಟ್ ಬಳಸಿ ಅಧ್ಯಯನ ಮಾಡುತ್ತಿದ್ದ ವಿಚಾರ ತಿಳಿದು ಬಂದಿದೆ. ಈ ವಿಚಾರವನ್ನು ಬಲವಾಗಿ ಪ್ರತಿಪಾದಿಸಿದ್ದ ಪಾಕಿಸ್ತಾನ ಅಧಿಕಾರಿಗಳು ಫಾರೂಖ್ ನಮ್ಮ ದೇಶದ ಪ್ರಜೆ, ಭಾರತದ ಪ್ರಜೆ ಅಲ್ಲ ಎಂದು ಹೇಳಿ ತಮ್ಮ ದೇಶಕ್ಕೆ ಆತನನ್ನು ಕರೆ ತರುವಲ್ಲಿ ಯಶಸ್ವಿಯಾಗಿದ್ದಾರೆ.

    ಯಾರು ಈ ಫಾರೂಖ್?
    ಫಾರೂಖ್ 17 ವರ್ಷಗಳಿಂದ ಭಾರತ ಪೊಲೀಸರ ಕಣ್ಣು ತಪ್ಪಿಸಿ ಓಡಾಡುತ್ತಿದ್ದ. ಇತನು ಐಎಸ್‍ಐ ಸೇರಿದಂತೆ ಪಾಕಿಸ್ತಾನದ ಕೆಲವು ಭಯೋತ್ಪಾಕ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದಾನೆ. ಇತ್ತೀಚೆಗೆ ಫಾರೂಖ್ ಗುಜರಾತ್‍ನಲ್ಲಿ ಡಿ-ಗ್ಯಾಂಗ್ ಆಪ್ರೇಷನ್‍ನಲ್ಲಿ ಗುರುತಿಸಿಕೊಂಡಿದ್ದನು. ಇದರೊಂದಿಗೆ ಫಾರೂಖ್ ಭೂಗತ ಪಾತಕಿಗಳಾದ ದಾವುದ್ ಹಾಗೂ ಛೋಟಾ ಶಕೀಲ್ ಜೊತೆಗೆ ಸಂಪರ್ಕ ಹೊಂದಿದ್ದಾನೆ.

    2003 ಮಾರ್ಚ್ ತಿಂಗಳಿನಲ್ಲಿ ಗುಜರಾತಿನ ಮಾಜಿ ಸಚಿವ ಹರೇನ್ ಪಾಂಡ್ಯ (43) ಅವರನ್ನು ಗುಂಡಿಕ್ಕಿ ಕೊಲೆ ಮಾಡಲಾಗಿತ್ತು. ಈ ವೇಳೆ ಪಾಂಡ್ಯ ಅವರ ದೇಹದೊಳಗೆ 5 ಗುಂಡು ಸೇರಿದ್ದವು. ಬಿಜೆಪಿ ಮುಖಂಡ ಹರೇನ್ ಪಾಂಡ್ಯ ಹತ್ಯೆ ಪ್ರಕರಣದಲ್ಲಿ ಫಾರುಕ್ ಆರೋಪಿಯಾಗಿದ್ದಾನೆ. ಅಷ್ಟೇ ಅಲ್ಲದೆ ಪಾಕಿಸ್ತಾದಲ್ಲಿ ತನ್ನ ಸಂಬಂಧಿ ಫೈಜಲ್ ಮಿರ್ಜಾ ಹಾಗೂ ಅಲ್ಲಾಹರಖಾನ್ ಮುನ್ಸುರಿ ಜೊತೆ ಸೇರಿ ಭಯೋತ್ಪಾನಾ ತರಬೇತಿ ಕೇಂದ್ರ ಪಾರಂಭಿಸಿದ್ದನು. ಸದ್ಯ ಫೈಜಲ್ ಹಾಗೂ ಮುನ್ಸುರಿಯನ್ನು ಮಹಾರಾಷ್ಟ್ರ ಎಟಿಎಸ್ ಬಂಧಿಸಿದೆ.

  • 3 ವರ್ಷಗಳಿಂದ ಬೆಳಗಾವಿಯಲ್ಲಿದ್ದ ಛೋಟಾ ಶಕೀಲನ ಬಂಟ ರಶೀದ್ ಮಲಬಾರಿ

    3 ವರ್ಷಗಳಿಂದ ಬೆಳಗಾವಿಯಲ್ಲಿದ್ದ ಛೋಟಾ ಶಕೀಲನ ಬಂಟ ರಶೀದ್ ಮಲಬಾರಿ

    – ಮಲಬಾರಿಯ 6 ಮಂದಿ ಸಹಚರರು ಪೊಲೀಸರ ವಶಕ್ಕೆ

    ಬೆಳಗಾವಿ: ಭೂಗತ ಪಾತಕಿ ಛೋಟಾ ಶಕೀಲನ ಬಂಟ ರಶೀದ್ ಮಲಬಾರಿ ಮೂರು ವರ್ಷಗಳಿಂದ ಯಾರಿಗೂ ಗೊತ್ತಿಲ್ಲದಂತೆ ಬೆಳಗಾವಿಯಲ್ಲಿ ಠಿಕಾಣಿ ಹೂಡಿದ್ದ ಅನ್ನೋ ಸ್ಫೋಟಕ ಮಾಹಿತಿ ಬಯಲಾಗಿದೆ.

    2014ರಲ್ಲಿ ಜೈಲಿನಿಂದ ಬಿಡುಗಡೆಯಾದ ಬಳಿಕ ರಷೀದ್ ದುಬೈನಲ್ಲಿ ಭೂಗತಾಗಿದ್ದ ಎಂದು ಎಲ್ಲರು ಭಾವಿಸಿದ್ದರು. ಆದರೆ ಆತ ಮಾಮು ಎಂದು ಹೆಸರು ಬದಲಿಸಿಕೊಂಡು ಬೆಳಗಾವಿ, ಮುಂಬೈನಲ್ಲಿ ಓಡಾಡಿಕೊಂಡಿದ್ದ. ಈತನಿಗೆ ಬೆಳಗಾವಿ ಜಿಪಂ ಮಾಜಿ ಅಧ್ಯಕ್ಷರೊಬ್ಬರು ಫಾರ್ಮ್ ಹೌಸ್‍ನಲ್ಲಿ ಆಶ್ರಯ ನೀಡಿರುವುದು ಬೆಳಕಿಗೆ ಬಂದಿದೆ. ರಷೀದ್ ಮಲಬಾರಿಗೆ ಸಹಕರಿಸಿದ ಆರೋಪದ ಮೇಲೆ 6 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ರಶೀದ್ ಮಲಬಾರಿಯ ಸಹಚರರಾದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ನಜೀರ್ ನದಾಫ್, ಸರ್ಫರಾಜ್, ಇಮ್ತಿಯಾಜ್ ಸೇರಿ 6 ಮಂದಿಯನ್ನು ಬೆಳಗಾವಿ ಅಪರಾಧ ದಳದ ಪೊಲೀಸರು ವಶಕ್ಕೆ ಪಡೆದಿದ್ದಾರೆ.

    2014ರ ಮಾರ್ಚ್ 14ರಂದು ಬೆಳಗಾವಿಗೆ ಬಂದು ಅಡಗಿ ಕುಳಿತಿದ್ದ ರಶೀದ್, ಪಾತಕ ಕೃತ್ಯಗಳಿಗೆ ಸ್ಥಳೀಯ ಯುವಕರನ್ನು ಪ್ರಚೋದಿಸುತ್ತಿದ್ದ. ಹುಣಸೆಹಣ್ಣು ವ್ಯಾಪಾರಿ ಸುರೇಶ ರೇಡೆಕರ್ ಪುತ್ರ ರೋಹನ ರೇಡೆಕರ್, ಬ್ಯಾಂಕ್ ಅಕೌಂಟ್ ಹ್ಯಾಕರ್ ಆಶಿಷ್ ರಂಜನ್, ಅಯಾಜ್ ಅಹ್ಮದ್ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವುದು ಬಯಲಾಗಿದೆ.

    2015ರ ಫೆಬ್ರವರಿ 18ರಂದು ರೋಹನ್ ಹತ್ಯೆ ನಡೆದಿತ್ತು. ಬೆಳಗಾವಿ ಉದ್ಯಮಿ ಮಗನಾದ ರೋಹನ್‍ನನ್ನು ಅಪಹರಿಸಿ ಹಣ ನೀಡುವುದಾಗಿ ಹೇಳಿದ್ರೂ ಬಿಡದೇ ಕೊಚ್ಚಿ ಕೊಂದಿದ್ರು. ರೋಹನ್ ಮೃತದೇಹ ಇನ್ನೂ ಪತ್ತೆಯಾಗಿಲ್ಲ.

    ಮುಂಬೈ ಮೂಲದ ಆಶಿಷ್ ಉದ್ಯಮಿಗಳಿಗೆ ಹೆದರಿಸಿ ಸುಲಿಗೆ ಮಾಡ್ತಿದ್ದ. ಇದಕ್ಕೆ ರಶೀದ್ ಮಲಬಾರಿ ಬೆಂಬಲವಿತ್ತು. ಆದ್ರೆ ಸುಳ್ಳು ಹೇಳಲು ಆರಂಭಿಸಿ ಮುಂಬೈ ಬಿಲ್ಡರ್‍ಗಳನ್ನೇ ಕೊಲ್ಲುವ ಬೆದರಿಕೆ ಹಾಕಿದ್ರಿಂದ ಮಲಬಾರಿ ಗ್ಯಾಂಗ್ ಆಶೀಷ್ ಮತ್ತು ಅವನ ಗೆಳೆಯ ಅಯಾಜ್ ಅಹ್ಮದ್‍ನನ್ನು ಉಸಿರುಗಟ್ಟಿಸಿ ಕೊಲೆ ಮಾಡಿತ್ತು. ಬಳಿಕ ಅಂಕೋಲಾ ಮತ್ತು ಯಲ್ಲಾಪೂರ ಘಾಟಿನಲ್ಲಿ ಶವವನ್ನು ಬಿಸಾಡಿ ಹೋಗಿದ್ದರು ಎಂದು ತಿಳಿದುಬಂದಿದೆ.

    ಇತ್ತೀಚಿಗೆ ಒರ್ವ ಉದ್ಯಮಿಯನ್ನ ಅಪಹರಿಸಿ ಹಲ್ಲೆ ನಡೆಸಿದ್ದು, ಹಲ್ಲೆಗೆ ಸಂಬಂಧಿಸಿದಂತೆ ಕೆಲವರನ್ನ ಬಂಧಿಸಿ ತನಿಖೆ ನಡೆಸುತ್ತಿದ್ದ ವೇಳೆ ಆಘಾತಕಾರಿ ವಿಚಾರಗಳು ಬಯಲಾಗಿದೆ. ವಿಷಯ ತಿಳಿದು ರಷೀದ್ ಬೆಳಗಾವಿಯಿಂದ ಕಾಲ್ತಿತ್ತಿದ್ದಾನೆ.