Tag: ಛಾವಣಿ

  • ದೆಹಲಿ ಏರ್‌ಪೋರ್ಟ್‌ ಮೇಲ್ಛಾವಣಿ ಕುಸಿತ- ಮೃತನ ಕುಟುಂಬ, ಗಾಯಾಳುಗಳಿಗೆ ಪರಿಹಾರ

    ದೆಹಲಿ ಏರ್‌ಪೋರ್ಟ್‌ ಮೇಲ್ಛಾವಣಿ ಕುಸಿತ- ಮೃತನ ಕುಟುಂಬ, ಗಾಯಾಳುಗಳಿಗೆ ಪರಿಹಾರ

    ನವದೆಹಲಿ: ಇಲ್ಲಿನ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-1ರಲ್ಲಿ (Delhi Airport Terminal-1) ನಡೆದ ಛಾವಣಿ ಕುಸಿತದಲ್ಲಿ ಓರ್ವ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 6 ಮಂದಿ ಗಾಯಗೊಂಡಿದ್ದಾರೆ.

    ಘಟನಾ ಸ್ಥಳಕ್ಕೆ ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು (Ram Mohan Naidu) ಅವರು ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು. ಘಟನೆಯಲ್ಲಿ ಪ್ರಾಣ ಕಳೆದುಕೊಂಡವರಿಗೆ 20 ಲಕ್ಷ ರೂ. ಅಲ್ಲದೇ ಗಾಯಾಳುಗಳಿಗೆ 3 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಘೊಷಿಸಿದರು.

    ನಡೆದಿದ್ದೇನು..?: ರಾಷ್ಟ್ರ ರಾಜಧಾನಿ ದೇಹಲಿಯಲ್ಲಿ ಭಾರೀ ಮಳೆಯಾಗುತ್ತಿದೆ. ಈ ನಡುವೆ ಇಂದು ಮುಂಜಾನೆ 5.30ರ ಸುಮಾರಿಗೆ ಟರ್ಮಿನಲ್‌ 1 ರಲ್ಲಿ ಛಾವಣಿ ಕುಸಿದಿದೆ. ಕೂಡಲೇ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು, ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡರು. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ಚಿಕಿತ್ಸೆಗಾಗಿ ರವಾನಿಸಲಾಯಿತು. ಇದನ್ನೂ ಓದಿ: ದೆಹಲಿ ಏರ್‌ಪೋರ್ಟ್‌ನ ಟರ್ಮಿನಲ್ 1 ರಲ್ಲಿ ಛಾವಣಿ ಕುಸಿದು 6 ಮಂದಿಗೆ ಗಾಯ

    ಪ್ರಕರಣದ ಕುರಿತು ತನಿಖೆ: ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್ ಒಂದರಲ್ಲಿ ಸಂಭವಿಸಿದ ಅವಘಡದ ತನಿಖೆಗಾಗಿ ನಾಗರಿಕ ವಿಮಾನಯಾನ ಸಚಿವಾಲಯವು ತಂಡವನ್ನು ರಚಿಸಿದೆ. ಇಂದು ಬೆಳಗ್ಗೆ ಸಂಭವಿಸಿದ ಘಟನೆ ಬಗ್ಗೆ ಸ್ವತಃ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಕಣ್ಣಿಟ್ಟಿದ್ದಾರೆ. ಮೇಲ್ಛಾವಣಿ ಕುಸಿದು ಕೆಲವು ಕಾರುಗಳಿಗೂ ಹಾನಿಯಾಗಿದೆ.

    28 ವಿಮಾನಗಳ ಸಂಚಾರ ರದ್ದು: ಘಟನೆಯಿಂದಾಗಿ ದೆಹಲಿಯ ಟರ್ಮಿನಲ್ ಒಂದರ 28 ವಿಮಾನಗಳ ಸಂಚಾರ ರದ್ದಾಗಿದೆ. ದೆಹಲಿ ವಿಮಾನ ನಿಲ್ದಾಣಕ್ಕೆ ಬರುವ 12, ಹೊರಡುವ 16 ವಿಮಾನಗಳ ಸಂಚಾರ ರದ್ದು ಮಾಡಲಾಗಿದೆ. ಟರ್ಮಿನಲ್- 2 ಮತ್ತು 3 ರಲ್ಲಿ ಎಂದಿನಂತೆ ವಿಮಾನಗಳ ಸಂಚಾರ ಮುಂದುವರಿಕೆಯಾಗಿದೆ.

    ಕುಸಿದಿರುವ ಛಾವಣಿ ಭಾಗವನ್ನು 2009 ರಲ್ಲಿ ನಿರ್ಮಿಸಲಾಗಿದೆ. ಈ ವರ್ಷದ ಮಾರ್ಚ್ ನಲ್ಲಿ ನವೀಕರಣ ಮಾಡಲಾಗಿತ್ತು. ಪ್ರಧಾನಿ ನರೇಂದ್ರ ಮೋದಿಯವರು ನವೀಕರಣಗೊಂಡ ಟರ್ಮಿನಲ್ ಉದ್ಘಾಟಿಸಿದ್ದರು. ಇದಾದ ಮೂರೇ ತಿಂಗಳಿಗೆ ಮೊದಲ ಮಳೆಗೆ ಛಾವಣಿ ಕುಸಿದು ಬಿದ್ದಿದೆ.

  • ದೆಹಲಿ ಏರ್‌ಪೋರ್ಟ್‌ನ ಟರ್ಮಿನಲ್ 1 ರಲ್ಲಿ ಛಾವಣಿ ಕುಸಿದು 6 ಮಂದಿಗೆ ಗಾಯ

    ದೆಹಲಿ ಏರ್‌ಪೋರ್ಟ್‌ನ ಟರ್ಮಿನಲ್ 1 ರಲ್ಲಿ ಛಾವಣಿ ಕುಸಿದು 6 ಮಂದಿಗೆ ಗಾಯ

    ನವದೆಹಲಿ: ದೆಹಲಿ ವಿಮಾನ ನಿಲ್ದಾಣದ (Delhi Airport) ಟರ್ಮಿನಲ್ 1 ರಲ್ಲಿ ಛಾವಣಿ ಕುಸಿದು 6 ಮಂದಿ ಗಾಯಗೊಂಡ ಘಟನೆ ನಡೆದಿದೆ.

    ಇಂದು ಮುಂಜಾನೆ 5.30ಕ್ಕೆ ಈ ಅವಘಡ ಸಂಭವಿಸಿದೆ. ಭಾರೀ ಮಳೆಯ ಪರಿಣಾಮ ಈ ದುರಂತ ನಡೆದಿದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಹಾವೇರಿ ಬಳಿ ಭೀಕರ ಅಪಘಾತ- 13 ಮಂದಿ ದುರ್ಮರಣ

    ಘಟನೆ ನಡೆದ ಕೂಡಲೇ ಮೂರು ಅಗ್ನಿಶಾಮಕ ವಾಹನಗಳನ್ನು ಸ್ಥಳಕ್ಕೆ ರವಾನಿಸಲಾಯಿತು. ಘಟನೆಯಲ್ಲಿ 6 ಮಂದಿ ಗಾಯಗೊಂಡಿದ್ದು,  ಗಾಯಾಳುಗಳನ್ನು ರಕ್ಷಿಸಿ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ದೆಹಲಿ ಅಗ್ನಿಶಾಮಕ ದಳದ ಅಧಿಕಾರಿ ತಿಳಿಸಿದ್ದಾರೆ.

    ಸದ್ಯ ಅಗ್ನಿಶಾಮಕ ದಳದ ಅಧಿಕಾರಿಗಳು ಸ್ಥಳದಲ್ಲಿದ್ದಾರೆ. ಛಾವಣಿ ಕುಸಿತದಿಂದ ಟ್ಯಾಕ್ಸಿ ಸೇರಿದಂತೆ ಹಲವು ವಾಹನಗಳು ಜಖಂ ಆಗಿವೆ. ಘಟನೆಯ ಪರಿಣಾಮ ಟರ್ಮಿನಲ್ 1 ರಿಂದ ಎಲ್ಲಾ ನಿರ್ಗಮನಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಸುರಕ್ಷತಾ ಕ್ರಮವಾಗಿ ಚೆಕ್-ಇನ್ ಕೌಂಟರ್‌ಗಳನ್ನು ಮುಚ್ಚಲಾಗಿದೆ.

    ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಕಿಂಜರಾಪು ಎಕ್ಸ್‌ ಮಾಡಿ, ಟಿ1 ದೆಹಲಿ ವಿಮಾನ ನಿಲ್ದಾಣದ ಮೇಲ್ಛಾವಣಿ ಕುಸಿತದ ಘಟನೆಯ ಕುರಿತು ಮೇಲ್ವಿಚಾರಣೆ ನಡೆಸಲಾಗುತ್ತಿದೆ. ಸ್ಥಳದಲ್ಲಿ ಅಗ್ನಿಶಾಮ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ರಕ್ಷಣಾ ಕಾರ್ಯಾಚರಣೆಗಳು ಇನ್ನೂ ನಡೆಯುತ್ತಿವೆ ಎಂದು ಬರೆದುಕೊಂಡಿದ್ದಾರೆ.‌

     

  • ಅನುಮತಿ ಇಲ್ಲದೆ ಬಸ್ ಗ್ಯಾರೇಜ್ ಮಧ್ಯೆ ಪಾರ್ಕ್ ಮಾಡಲಾಗಿದ್ದ ಕಾರ್ ಗೆ ಈ ಗತಿಯಾಯ್ತು

    ಅನುಮತಿ ಇಲ್ಲದೆ ಬಸ್ ಗ್ಯಾರೇಜ್ ಮಧ್ಯೆ ಪಾರ್ಕ್ ಮಾಡಲಾಗಿದ್ದ ಕಾರ್ ಗೆ ಈ ಗತಿಯಾಯ್ತು

    ಬೀಜಿಂಗ್: ಅನುಮತಿ ಇಲ್ಲದೆ ಬಸ್ ಗ್ಯಾರೇಜ್ ಮಧ್ಯೆ ಕಾರ್ ಪಾರ್ಕ್ ಮಾಡಿ ಹೋಗಿದ್ದ ಚಾಲಕನಿಗೆ ಇಲ್ಲಿನ ಸಿಬ್ಬಂದಿ ಪಾಠ ಕಲಿಸಿದ್ದಾರೆ.

    ಫೆಬ್ರವರಿ 17ರಂದು ಚೀನಾದ ಹೂಬೇ ಪ್ರಾಂತ್ಯದ ಕ್ಸಿಶೂ ಕೌಂಟಿಯಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಬಸ್ ಗ್ಯಾರೇಜ್ ಮಧ್ಯೆ ಕಾರ್ ಪಾರ್ಕಿಂಗ್ ಮಾಡಿದ್ದನ್ನು ನೋಡಿ ಬೇಸತ್ತ ಸಿಬ್ಬಂದಿ ಕ್ರೇನ್ ಮೂಲಕ ಕಾರ್ ಮೇಲೆತ್ತಿ ಹತ್ತಿರದ ಕಟ್ಟಡವೊಂದರ ಛಾವಣಿಯ ಮೇಲೆ ಇರಿಸಿದ್ದಾರೆ.

    ಇದರ ವಿಡಿಯೋವನ್ನ ಇಲ್ಲಿನ ಮಾಧ್ಯಮವೊಂದು ಹಂಚಿಕೊಂಡಿದ್ದು, ಕಾರನ್ನ ಕ್ರೇನ್ ಮೂಲಕ ಮೇಲೆತ್ತಿ ಛಾವಣಿ ಮೇಲೆ ಇಡುತ್ತಿರೋದನ್ನ ಕಾಣಬಹುದು. ಅನಂತರ ಕಾರ್ ಚಾಲಕ ತನ್ನ ಕಾರನ್ನ ಹೇಗೆ ಕೆಳಗಿಳಿಸಿಕೊಂಡ ಎನ್ನುವ ಬಗ್ಗೆ ವರದಿಯಾಗಿಲ್ಲ.

    ಆದ್ರೆ ಚೀನಾದಲ್ಲಿ ಈ ರೀತಿ ಕಾರ್ ಮಾಲೀಕರಿಗೆ ಪಾಠ ಕಲಿಸಿರುವುದು ಇದೇ ಮೊದಲೇನಲ್ಲ. ಕಳೆದ ವರ್ಷ ಇಲ್ಲಿನ ಜನನಿವಾಸಿ ಕಟ್ಟಡದಲ್ಲಿ ಮಹಿಳೆಯೊಬ್ಬಳ ಕಾರ್ ತೆರವುಗೊಳಿಸಲು ಭದ್ರತಾ ಸಿಬ್ಬಂದಿ ಕ್ರೇನ್ ಬಳಸಿ, ಹತ್ತಿರದ ಕಟ್ಟಡವೊಂದರ ಮೇಲೆ ಕಾರು ಇರಿಸಿದ್ದರು.

    ಚೀನಾದ ಬಿಂಕ್ಸಿ ಸಿಟಿಯಲ್ಲಿ ಈ ಘಟನೆ ನಡೆದಿತ್ತು. ಮಹಿಳೆ ಕಾರ್ ಪಾರ್ಕಿಂಗ್ ಶುಲ್ಕದ ವಿಚಾರವಾಗಿ ಜಗಳ ಮಾಡಿಕೊಂಡ ನಂತರ ಭದ್ರತಾ ಠಾಣೆಯ ಬಳಿಯೇ ಕಾರ್ ಬಿಟ್ಟುಹೋಗಿದ್ದಳು. 38 ಗಂಟೆಗಳ ಬಳಿಕ ಆಕೆ ಕಾರ್ ವಾಪಸ್ ಪಡೆಯಲು ಬಂದಾಗ ಭದ್ರತಾ ಸಿಬ್ಬಂದಿಯ ಠಾಣೆಯ ಮೇಲೆ ಕಾರ್ ಪತ್ತೆಯಾಗಿತ್ತು. ಅನಂತರ ಸಮಸ್ಯೆ ಬಗ್ಗೆ ಚರ್ಚಿಸಿ ಬಗೆಹರಿಸಿಕೊಂಡಿದ್ದು, ಕಾರ್ ಕೆಳಗಿಳಿಸಲಾಗಿತ್ತು.

  • ಟ್ರೈನ್ ಛಾವಣಿಯಿಂದ ಮಳೆನೀರು ಸೋರಿಕೆ: ಛತ್ರಿ ಹಿಡ್ಕೊಂಡೇ ರೈಲು ಓಡಿಸಿದ ಚಾಲಕ- ವಿಡಿಯೋ ವೈರಲ್

    ಟ್ರೈನ್ ಛಾವಣಿಯಿಂದ ಮಳೆನೀರು ಸೋರಿಕೆ: ಛತ್ರಿ ಹಿಡ್ಕೊಂಡೇ ರೈಲು ಓಡಿಸಿದ ಚಾಲಕ- ವಿಡಿಯೋ ವೈರಲ್

    ರಾಂಚಿ: ಮಳೆ ಬಂದಾಗ ಮನೆಯ ಛಾವಣಿ ಸೋರಿಕೆಯಾಗೋದನ್ನ ಕೇಳಿರ್ತೀವಿ. ಹಾಗೇ ಕೆಲವು ಬಸ್‍ಗಳಲ್ಲೂ ಮಳೆ ನೀರು ಸೋರಿಕೆಯಾಗುತ್ತೆ. ಆದ್ರೆ ರೈಲಿನಲ್ಲಿ ಹೀಗಾದ್ರೆ ಏನ್ ಮಾಡೋದು? ಅದರಲ್ಲೂ ರೈಲು ಚಾಲನೆ ಮಾಡೋ ಚಾಲಕರೇ ಸೋರೋ ಮಳೆನೀರಿನಿಂದ ರಕ್ಷಿಸಿಕೊಳ್ಳೋಕೆ ಛತ್ರಿ ಹಿಡಿದು ಕೂತ್ರೆ? ಇಂತಹದ್ದೊಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ರೈಲು ಚಾಲಕ ಛತ್ರಿ ಹಿಡಿದು ರೈಲು ಚಾಲನೆ ಮಾಡುತ್ತಿರೋದನ್ನ ವಿಡಿಯೋದಲ್ಲಿ ಕಾಣಬಹುದು. ರೈಲಿನ ಛಾವಣಿಯಿಂದ ನೀರು ಸೋರಿಕೆಯಾಗ್ತಿದ್ದು, ಇದರಿಂದ ಕಂಟ್ರೋಲ್ ಪ್ಯಾನಲ್‍ಗೆ ಹಾನಿಯಾಗದಂತೆ ರಕ್ಷಿಸಲು ಚಾಲಕ ಛತ್ರಿ ಹಿಡಿದು ಕೂತಿದ್ದಾರೆ. ಅಲ್ಲದೆ ನೆಲದ ಮೇಲೆ ದಿನಪತ್ರಿಕೆಗಳನ್ನ ಹಾಸಲಾಗಿದ್ದು ಅವೂ ಕೂಡ ನೀರಿನಲ್ಲಿ ನೆಂದು ತೊಪ್ಪೆಯಾಗಿದೆ.

    ಇದನ್ನೂ ಓದಿ: ಈ ಸರ್ಕಾರಿ ಕಚೇರಿಯಲ್ಲಿ ಹೆಲ್ಮೆಟ್ ಕಡ್ಡಾಯ!

    ರೈಲು ಚಾಲಕ ತನ್ನ ಕರ್ತವ್ಯವನ್ನ ನಿರ್ವಹಿಸಿದ್ರೆ ಸ್ಪೀಕರ್ ಮತ್ತು ಕ್ಯಾಮೆರಾ ಹಿಂದಿದ್ದ ಮತ್ತೋರ್ವ ವ್ಯಕ್ತಿ ತಮ್ಮ ಸಂಕಷ್ಟದ ಬಗ್ಗೆ ಹೇಳಿಕೊಂಡಿದ್ದಾರೆ. ವರ್ಷಗಳಿಂದ ಈ ಸೋರಿಕೆ ಸಮಸ್ಯೆಯನ್ನ ಎದುರಿಸುತ್ತಿದ್ದೇವೆ. ಎಲ್ಲಾ ಸಮಯದಲ್ಲೂ ನಾವು ಹೆಚ್ಚಾಗೇ ಜಾಗರೂಕರಾಗಿರಬೇಕು ಅಂತ ಹೇಳಿದ್ದಾರೆ.

    ಜಾಗರೂಕತೆಯಿಂದ ಇರೋಕೆ ನಮಗೇನೂ ತೊಂದರೆಯಿಲ್ಲ. ಆದ್ರೆ ಕೆಲಸದಲ್ಲಿ ಸಾಕಷ್ಟು ಅನಾನುಕೂಲಗಳು ಹಾಗೂ ತೊಂದರೆಗಳಿವೆ ಅಂತ ಅವರು ಹೇಳಿದ್ದಾರೆ.

    ತಮ್ಮ ಸಂಕಷ್ಟದ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರಲು ಈ ವಿಡಿಯೋವನ್ನ ಸಾಧ್ಯವಾದಷ್ಟು ಹಂಚಿಕೊಳ್ಳಿ ಅಂತ ವ್ಯಕ್ತಿ ಕೇಳಿಕೊಂಡಿದ್ದಾರೆ. ಈ ವಿಡಿಯೋವನ್ನ ಜಾರ್ಖಂಡ್‍ನಲ್ಲಿ ಚಿತ್ರೀಕರಿಸಲಾಗಿದೆ ಆದ್ರೆ ಯಾವಾಗ ಚಿತ್ರೀಕರಿಸಲಾಗಿದೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ.

    ಆದ್ರೆ ಈ ವಿಡಿಯೋ ಟ್ವಿಟ್ಟರ್‍ನಲ್ಲಿ ವೈರಲ್ ಆದ ಬಳಿಕ ರೈಲ್ವೆ ಇಲಾಖೆ ಟ್ವಿಟ್ಟರ್ ಖಾತೆಯಿಂದ ಪ್ರತಿಕ್ರಿಯೆ ಬಂದಿದೆ. ನಮಗೆ ಈ ಬಗ್ಗೆ ಕಾಳಜಿ ಇದೆ. ತನಿಖೆ ಮಾಡಲಾಗಿದೆ. ಇದು ಕಾರ್ಯನಿರ್ವಹಿಸದ ಎಂಜಿನ್ ಆಗಿದ್ದು ಮುಂದಿನಿಂದ ಮತ್ತೊಂದು ಎಂಜಿನ್ ಅದನ್ನ ಎಳೆದೊಯ್ಯೋದನ್ನ ವಿಡಿಯೋದಲ್ಲಿ ಕಾಣಬಹುದು ಎಂದು ಹೇಳಿದೆ.