Tag: ಚೌಕಿದಾರ

  • ದೇಶಕ್ಕೆ ಚೌಕಿದಾರರು ಬೇಕೇ ಹೊರತು ರಾಜ, ಮಹಾರಾಜರಲ್ಲ: ಮೋದಿ

    ದೇಶಕ್ಕೆ ಚೌಕಿದಾರರು ಬೇಕೇ ಹೊರತು ರಾಜ, ಮಹಾರಾಜರಲ್ಲ: ಮೋದಿ

    ನವದೆಹಲಿ: ದೇಶಕ್ಕೆ ಚೌಕಿದಾರರು ಬೇಕೇ ಹೊರತು ರಾಜ ಮಹಾರಾಜರಲ್ಲ. ಚೌಕಿದಾರ ಮಾತ್ರ ದೇಶಕ್ಕೆ ಸೇವೆ ಮಾಡಬಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

    ದೆಹಲಿಯಲ್ಲಿ ನಡೆದ ‘ಮೇ ಭೀ ಚೌಕಿದಾರ್’ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, 2014 ರಲ್ಲಿ ದೇಶದ ಜನತೆ ನನ್ನ ಮೇಲೆ ನಂಬಿಕೆಯನ್ನು ಸೇವೆ ಮಾಡಲು ಅವಕಾಶವನ್ನು ನೀಡಿದರು. ನನಗೆ ಕೊಟ್ಟ ಅವಕಾಶವನ್ನು ನಾನು ಹಾಳು ಮಾಡಲಿಲ್ಲ. ಭ್ರಷ್ಟರಿಂದ ದೇಶದ ಸಂಪತ್ತನ್ನು ರಕ್ಷಿಸಲು ನಾನು ಸಾಕಷ್ಟು ಪ್ರಯತ್ನ ಪಟ್ಟಿದ್ದೇನೆ ಎಂದು ಹೇಳಿದರು.

    ಮೋದಿ ಪ್ರಮುಖ ಹೇಳಿಕೆಗಳು:
    ದೇಶದ ಪ್ರತಿಯೊಬ್ಬ ನಾಗರಿಕನೂ ಚೌಕೀದಾರರು. ಚೌಕೀದಾರ ಎನ್ನುವುದು ಒಂದು ಭಾವನೆ. ಆದರೆ ಕೆಲವರು ಬೌದ್ಧಿಕವಾಗಿ ಬೆಳವಣಿಗೆ ಆಗಿರದ ವ್ಯಕ್ತಿಗಳು ಚೌಕೀದಾರ ಎಂದರೆ ಟೋಪಿ ಹಾಕಿಕೊಂಡು ಕೋಲು ಹಿಡಿದು, ಸಿಳ್ಳೆ ಹಾಕಿಕೊಂಡು ಬರುವವರು ಎಂದು ತಿಳಿದುಕೊಂಡಿದ್ದಾರೆ.

    ಕಾಂಗ್ರೆಸ್ ಒಂದೊಂದು ಸಮಯದಲ್ಲಿ ಸುಳ್ಳು ಹೇಳಿಕೊಂಡು ಚುನಾವಣೆಗೆ ಹೋಗುತ್ತದೆ. ದೆಹಲಿ ಚುನಾವಣೆಯ ಸಮಯದಲ್ಲಿ ಅವರ ವಸ್ತು ‘ಅಸಹಿಷ್ಣುತೆ’ ಆಗಿತ್ತು. ಬಿಹಾರ ಚುನಾವಣೆಯ ಸಮಯದಲ್ಲಿ ‘ಎಲ್ಲ ಮೀಸಲಾತಿಯನ್ನು ಮೋದಿ ಸರ್ಕಾರ ತೆಗೆದು ಹಾಕುತ್ತದೆ’ ಆಗಿತ್ತು. ಇದರ ಜೊತೆ ‘ಅವಾರ್ಡ್ ವಾಪ್ಸಿ’ ಬಂದು ಹೋಯ್ತು.

    ಉಗ್ರರ ಕೇಂದ್ರ ಬಿಂದು ಎಲ್ಲಿದೆ ಎನ್ನುವುದು ಇಡಿ ವಿಶ್ವಕ್ಕೆ ಗೊತ್ತಿದೆ. ಈ ಕಾಣರಕ್ಕಾಗಿಯೇ ನಾವು ಅವರ ನೆಲಕ್ಕೆ ನುಗ್ಗಿ ದಾಳಿ ಮಾಡಿ ನೆಲೆಗಳನ್ನು ಧ್ವಂಸ ಮಾಡಿದ್ದೇವೆ. ಚುನಾವಣೆ ಇದೆ ಎನ್ನುವ ಕಾರಣಕ್ಕೆ ನಾವು ಪಾಕಿಸ್ತಾನದ ಮೇಲೆ ದಾಳಿ ಮಾಡಿಲ್ಲ. ನಮ್ಮ ದೇಶದ ಜನರು ಪಾಕಿಸ್ತಾನ ಹೇಳಿಕೆಯನ್ನು ಬೆಂಬಲಿಸುತ್ತಿರುವುದನ್ನು ನೋಡಿ ನನಗೆ ಬೇಸರವಾಗುತ್ತದೆ.

    ಬಾಲಕೋಟ್ ಮೇಲೆ ಯಶಸ್ವಿಯಾಗಿ ದಾಳಿ ಮಾಡಿದ ನಮ್ಮ ವೀರ ಯೋಧರಿಗೆ ಭಾರತ ಸೆಲ್ಯೂಟ್ ಹೊಡೆಯುತ್ತದೆ. ನನಗೆ ನಮ್ಮ ಸೇನೆಯ ಮೇಲೆ ಸಂಪೂರ್ಣ ವಿಶ್ವಾಸವಿದೆ. ಈ ಕಾರಣಕ್ಕಾಗಿಯೇ ನಾನು ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದೇನೆ.

     

     

    ಕಳೆದ ಐದು ವರ್ಷದಲ್ಲಿ ನಾವು ಏನು ಸಾಧನೆ ಮಾಡಿದ್ದೇವೋ ಅದು ಸಾಧ್ಯವಾಗಿದ್ದು ಜನರ ಭಾಗಿದಾರಿಯಿಂದ. ಜನರಿಂದಾಗಿ ಸಚ್ಛತೆ ಒಂದು ದೊಡ್ಡ ಅಭಿಯಾನವಾಗಿ ರೂಪುಗೊಂಡಿದೆ.

    ನಾನು ಸಾರ್ವಜನಿಕರ ಹಣವನ್ನು ದುರ್ಬಳಕೆ ಮಾಡಿಲ್ಲ. ಭಾರತವನ್ನು ಲೂಟಿ ಹೊಡೆಯಲು ನಾನು ಬಿಡುವುದಿಲ್ಲ. ಮಿಶನ್ ಶಕ್ತಿಯ ಮೂಲಕ ನಾವು ಈಗ ಬಾಹ್ಯಾಕಾಶದಲ್ಲಿ ಎತ್ತರಕ್ಕೆ ತಲುಪಿದ್ದೇವೆ. ಇಲ್ಲಿಯವರೆಗೆ ಕೇವಲ ಮೂರು ದೇಶಗಳು ಮಾತ್ರ ಈ ಸಾಮರ್ಥ್ಯವನ್ನು ಹೊಂದಿದ್ದವು. ವಿಜ್ಞಾನಿಗಳಿಂದಾಗಿ ಈಗ ನಾವು ಬಾಹ್ಯಾಕಾಶ ಶಕ್ತಿ ರಾಷ್ಟ್ರಗಳ ಸಾಲಿಗೆ ಸೇರಿದ್ದೇವೆ.

    ಕಳೆದ 4 ವರ್ಷಗಳಿಂದ ಒಂದು ಕುಟುಂಬ ಅದೇ ಭರವಸೆಯನ್ನು ನೀಡುತ್ತಾ ಬಂದಿದೆ. ಆದರೆ ಇಲ್ಲಿಯವರೆಗೂ ಆ ಭರವಸೆ ಈಡೇರಿಲ್ಲ. ಈಗಲೂ ಆ ಭರವಸೆ ನೀಡುತ್ತಿದ್ದು, ಜನರ ಈ ವಿಚಾರವನ್ನು ಚುನಾವಣಾ ಸಮಯದಲ್ಲಿ ಗಂಭೀರವಾಗಿ ಪರಿಗಣಿಸಬೇಕು.

  • ರಾಜ್ಯಕ್ಕೂ ಕಾಲಿಟ್ಟ ಚೌಕಿದಾರ್ ಹವಾ!

    ರಾಜ್ಯಕ್ಕೂ ಕಾಲಿಟ್ಟ ಚೌಕಿದಾರ್ ಹವಾ!

    – ಹೆಸರಿನ ಮುಂದೆ ಚೌಕಿದಾರ್ ಬರೆದ ನಾಯಕರು
    – ಅಂದು `ಚಾಯ್ ಪೇ ಚರ್ಚಾ’ ಇಂದು ‘ನಾನು ಕೂಡ ಚೌಕಿದಾರ’

    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಆರಂಭಿಸಿದ ಚೌಕಿದಾರ್ ಹವಾ ರಾಜ್ಯಕ್ಕೂ ಕಾಲಿಟ್ಟಿದೆ. ಸಾಮಾಜಿಕ ಜಾಲತಾಣದಲ್ಲಿ ರಾಜ್ಯದ ಬಿಜೆಪಿ ನಾಯಕರು, ಸಂಸದರು ತಮ್ಮ ಹೆಸರಿನ ಮೊದಲು ‘ಚೌಕಿದರ್’ ಎಂದು ಬರೆದುಕೊಂಡಿದ್ದಾರೆ.

    ಶನಿವಾರ ಪ್ರಧಾನಿ ಮೋದಿ ಅವರು ‘ನಾನೂ ಕೂಡ ಚೌಕಿದಾರ’ #MainBhiChowkidar ಎಂದು ಹೇಳಿ ವಿಡಿಯೋ ಒಂದನ್ನು ಅಪ್ಲೋಡ್ ಮಾಡಿಕೊಂಡಿದ್ದರು. ಇಂದು ಪ್ರಧಾನಿ ಮೋದಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿರುವ ಹೆಸರಿನಲ್ಲಿ ‘ಚೌಕಿದಾರ’ ಎಂದು ಬರೆದುಕೊಂಡಿದ್ದಾರೆ. ಮೋದಿ ಹೆಸರು ಬದಲಾಯಿಸಿದ ಬೆನ್ನಲ್ಲೇ ಬಿಜೆಪಿ ನಾಯಕರು ಮತ್ತು ಮೋದಿ ಅಭಿಮಾನಿಗಳು ತಮ್ಮ ಹೆಸರಿನ ಮುಂದೆ ಚೌಕಿದಾರ ಎಂದು ಸೇರಿಸಿದ್ದಾರೆ.

    ಸಂಸದ ಪ್ರತಾಪ್ ಸಿಂಹ, ಶಾಸಕ ಸಿಟಿ ರವಿ, ಅಮಿತ್ ಶಾ, ಪಿಯೂಶ್ ಗೋಯಲ್, ಜೆಪಿ ನಡ್ಡಾ ಸೇರಿದಂತೆ ಹಲವು ಮಂದಿ ತಮ್ಮ ಹೆಸರಿನ ಮುಂದುಗಡೆ ಚೌಕಿದಾರ ಎಂದು ಬರೆದುಕೊಂಡಿದ್ದಾರೆ.

    ನಾವೇಲ್ಲರೂ ನಮ್ಮ ಹೆಸರಿನ ಮುಂದೆ ಚೌಕಿದಾರ ಸೇರಿಸಿಕೊಳ್ಳಬೇಕು ಎಂದು ಪ್ರತಾಪ್ ಸಿಂಹ ಮನವಿ ಮಾಡಿಕೊಂಡಿದ್ದಾರೆ. ಜೊತೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನೀಡಿದ ತೆರಿಗೆ ವಿನಾಯತಿ ಕುರಿತು ಮಾಹಿತಿ ಸಂಚಿಕೊಂಡಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಆರಂಭಿಸಿದ್ದ ‘ನಾನೂ ಕೂಡ ಚೌಕಿದಾರ’ #MainBhiChowkidar ಆಂದೋಲನ ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ವಿಶ್ವದಲ್ಲಿ ಟ್ರೆಂಡ್ ಆಗಿತ್ತು. ಭಾರತದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಪ್ರತಿಯೊಬ್ಬರು ಚೌಕಿದಾರರೇ ಎಂದು ಮೋದಿ ಹೇಳಿದ್ದರು. ಪ್ರಧಾನಿ ಮೋದಿ ಅವರು ಮಾರ್ಚ್ 15ರಂದು ಬೆಳಗ್ಗೆ ಮಾಡಿದ್ದ ಟ್ವೀಟನ್ನು ಭಾನುವಾರ ಮಧ್ಯಾಹ್ನದ ವೇಳೆಗೆ 49 ಸಾವಿರ ಜನರು ಮಂದಿ ರೀ ಟ್ವೀಟ್ ಮಾಡಿದ್ದು, 1.3 ಲಕ್ಷಕ್ಕೂ ಅಧಿಕ ಜನರು ಲೈಕ್ ಮಾಡಿದ್ದಾರೆ.

    ಕಾಂಗ್ರೆಸ್ ಮತ್ತು ವಿರೋಧ ಪಕ್ಷಗಳ ನಾಯಕರು ಮೋದಿಯನ್ನು ವಿರೋಧಿಸುವ ಸಮಯದಲ್ಲಿ ‘ಚೌಕಿದಾರ ಚೋರ್ ಹೈ’ ಎಂದು ಹೇಳಿ ಟೀಕಿಸುತ್ತಿದ್ದರು. ಹೀಗಾಗಿ ದೇಶದಲ್ಲಿ ಚೌಕಿದಾರ ಪದ ಹೆಚ್ಚು ಚರ್ಚೆಯಾಗುತಿತ್ತು. ಈಗ ತನ್ನನ್ನು ಟೀಕಿಸಲು ಬಳಕೆ ಮಾಡುತ್ತಿದ್ದ ‘ಚೌಕಿದಾರ್’ ಪದವನ್ನೇ ಬಳಸಿ ಮೋದಿಯವರು ಅಸ್ತ್ರವನ್ನಾಗಿ ಬಳಸಿ ಪ್ರಚಾರ ಅಭಿಯಾನದಲ್ಲಿ ತೊಡಗಿದ್ದಾರೆ.

    2014ರ ಲೋಕಸಭೆ ಚುನಾವಣೆಯಲ್ಲಿ ಮಣಿ ಶಂಕರ್ ಅಯ್ಯರ್ ಯೂಥ್ ಕಾಂಗ್ರೆಸ್ ರೀತಿಯಲ್ಲೇ ಮೋದಿಯನ್ನ ‘ಚಾಯ್ ವಾಲಾ’ ಅಂತಾ ಟೀಕೆ ಮಾಡಿದ್ದರು. ಮೋದಿ ಪ್ರಧಾನಿ ಅಭ್ಯರ್ಥಿಯೇ ಅಲ್ಲ. ಚಹಾ ಮಾರುವುದಕ್ಕೆ ಸೂಕ್ತ ವ್ಯಕ್ತಿ ಎಂದಿದ್ದರು. ಇದನ್ನು ಬಳಸಿಕೊಂಡಿದ್ದ ಬಿಜೆಪಿ `ಚಾಯ್ ಪೇ ಚರ್ಚಾ’ ಅಂತಾ ಹೊಸ ಅಭಿಯಾನ ಹುಟ್ಟು ಹಾಕಿತ್ತು. ಈ ಅಭಿಯಾನ ದೊಡ್ಡಮಟ್ಟದಲ್ಲಿ ಜನ ಮಾನಸದಲ್ಲಿ ಉಳಿದುಕೊಳ್ಳುವ ಮೂಲಕ ಯಶಸ್ವಿಯಾಗಿತ್ತು.