Tag: ಚೋರ್

  • ಜನರು ಪಾಠ ಕಲಿಸಿದ್ರೂ ಚೋರ್ ಪದ ಬಳಕೆ ಬಿಡುತ್ತಿಲ್ಲ: ರಾಹುಲ್‍ಗೆ ಸೀತಾರಾಮನ್ ತಿರುಗೇಟು

    ಜನರು ಪಾಠ ಕಲಿಸಿದ್ರೂ ಚೋರ್ ಪದ ಬಳಕೆ ಬಿಡುತ್ತಿಲ್ಲ: ರಾಹುಲ್‍ಗೆ ಸೀತಾರಾಮನ್ ತಿರುಗೇಟು

    ನವದೆಹಲಿ: ದೇಶದ ಜನರು ಸೂಕ್ತ ಪಾಠ ಕಲಿಸಿದರೂ ರಾಹುಲ್ ಗಾಂಧಿ ಅವರು ‘ಚೋರ್, ಚೋರಿ’ ಎನ್ನುವುದನ್ನು ಬಿಡುತ್ತಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗುಡುಗಿದ್ದಾರೆ.

    ಆರ್‌ಬಿಐ ಕುರಿತು ರಾಹುಲ್ ಗಾಂಧಿ ಅವರ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ನಿರ್ಮಲಾ ಸೀತಾರಾಮನ್ ಅವರು, ‘ಚೋರ್, ಚೋರಿ’ ಎಂದು ಆರೋಪಿಸಲು ಪ್ರಯತ್ನಿಸಿದಾಗಲೆಲ್ಲ ಸಾರ್ವಜನಿಕರು ರಾಹುಲ್ ಗಾಂಧಿ ಅವರಿಗೆ ಸೂಕ್ತ ಉತ್ತರ ನೀಡಿದ್ದಾರೆ. ಆದರೂ ಅವರು ಮತ್ತೆ ಅದೇ ಪದಗಳನ್ನು ಬಳಸುತ್ತಿದ್ದಾರೆ. ಮತ್ತೆ ಮತ್ತೆ ಚೋರ್, ಚೋರಿ ಅಂತ ಹೇಳುವುದರಲ್ಲಿ ಅರ್ಥವೇನಿದೆ ಎಂದು ಪ್ರಶ್ನಿಸಿ ಕಿಡಿಕಾರಿದರು. ಇದನ್ನೂ ಓದಿ: ಚೌಕಿದಾರ್ ಚೋರ್ ಹೈ – ಕೊನೆಗೂ ಸುಪ್ರೀಂನಲ್ಲಿ ರಾಹುಲ್ ಬೇಷರತ್ ಕ್ಷಮೆಯಾಚನೆ

    ದೇಶದಲ್ಲಿ ಆರ್ಥಿಕ ಹಿಂಜರಿತ ವ್ಯಾಪಕ ಚರ್ಚೆಯಾಗುತ್ತಿದೆ. ಡಾಲರ್ ಎದುರು ರೂಪಾಯಿ ಮೌಲ್ಯ 72ಕ್ಕೆ ಕುಸಿತವಾಗುತ್ತಿದೆ. ಮುನ್ನೆಚ್ಚರಿಕೆಯಾಗಿ ಅರ್ಥವ್ಯವಸ್ಥೆಗೆ ಉತ್ತೇಜನ ನೀಡಲು ಕೆಲ ದಿನಗಳ ಹಿಂದಷ್ಟೇ ಕೇಂದ್ರ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿತ್ತು. ಅದರಲ್ಲೂ ಬ್ಯಾಂಕ್‍ಗಳಿಗೆ 70 ಸಾವಿರ ಕೋಟಿ ರೂ. ಘೋಷಿಸಲಾಗಿತ್ತು. ಇದರ ಬೆನ್ನಲ್ಲೇ ಆರ್‌ಬಿಐ ಗೌರ್ನರ್ ಶಕ್ತಿಕಾಂತ್ ದಾಸ್ ಅವರು ಕೇಂದ್ರ ಸರ್ಕಾರಕ್ಕೆ ದಾಖಲೆಯ 1.76 ಲಕ್ಷ ಕೋಟಿ ರೂ. ಹೆಚ್ಚುವರಿ ಹಣವನ್ನು ರಿಲೀಸ್ ಮಾಡಿದ್ದಾರೆ. ಇದು ಕಳೆದ 3 ವರ್ಷಗಳಲ್ಲೇ ಅತ್ಯಧಿಕವಾಗಿದೆ.

    ಈ ವಿಚಾರವಾಗಿ ಟ್ವೀಟ್ ಮಾಡಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು, ಆರ್‌ಬಿಐ ನಿಂದ ಲೂಟಿ ಮಾಡಲಾಗಿದೆ. ಆರ್‌ಬಿಐ ನಿಂದ ಹಣ ಕಿತ್ತುಕೊಂಡರೆ ಎದುರಾಗುತ್ತಿರುವ ಆರ್ಥಿಕ ವಿಪತ್ತನ್ನು ಪರಿಹರಿಸಲ ಸಾಧ್ಯವಿಲ್ಲ. ಇದು ಗುಂಡೇಟಿನ ಗಾಯಕ್ಕೆ ಔಷಧಾಲಯದಿಂದ ಕದ್ದ ಬ್ಯಾಂಡೇಜ್ ಅಂಟಿಸಿದಂತೆ ಎಂದು ಪ್ರಧಾನಿ ನರೇಂದ್ರ ಮೋದಿ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ತಿವಿದಿದ್ದರು.

    ಆರ್‌ಬಿಐಯನ್ನ ಇದೇ ರೀತಿ ಲೂಟಿ ಮಾಡಿದರೆ ದೇಶದ ಆರ್ಥಿಕತೆ ಮತ್ತಷ್ಟು ಕ್ಷೀಣಿಸುತ್ತದೆ ಎಂದು ರಾಹುಲ್ ಗಾಂಧಿ ಎಚ್ಚರಿಕೆಯನ್ನೂ ನೀಡಿದ್ದಾರೆ.

    ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಹಗರಣ ನಡೆದಿದೆ ಎಂಬ ರಾಹುಲ್ ಗಾಂಧಿ ಆರೋಪಿಸಿದ್ದರು. ಇದೇ ಅಸ್ತ್ರವನ್ನು ಲೋಕಸಭಾ ಚುನಾವಣೆಯಲ್ಲಿ ಪ್ರಯೋಗಿಸಿ, ಚೌಕಿದಾರ್ ಚೋರ್ ಹೈ ಎಂದು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಅಷ್ಟೇ ಅಲ್ಲದೆ ಕೋರ್ಟ್ ಮೋದಿ ಚೋರ್ ಎಂದು ಹೇಳಿದೆ ಅಂತ ಹೇಳಿಕೆ ನೀಡಿ ಇಕ್ಕಟ್ಟಿಗೆ ಸಿಲುಕಿದ್ದರು.