Tag: ಚೇಸ್

  • ಚೇಸ್ ಟೀಸರ್ ರಿಲೀಸ್ ಮಾಡಿದ ದಿಗ್ಗಜರು

    ಚೇಸ್ ಟೀಸರ್ ರಿಲೀಸ್ ಮಾಡಿದ ದಿಗ್ಗಜರು

    ಬೆಂಗಳೂರು: ಮಹಿಳೆಯರು ರಾತ್ರಿ ಹೊತ್ತು ಕ್ಯಾಬ್‍ಗಳಲ್ಲಿ ಪ್ರಯಾಣಿಸುವುದು ಅದೆಷ್ಟು ಸೂಕ್ತ ಎಂಬ ವಿಷಯವನ್ನಿಟ್ಟುಕೊಂಡು ಒಂದು ಸಸ್ಪೆನ್ಸ್, ಥ್ರಿಲ್ಲರ್ ಕಥಾನಕ ಹೆಣೆದಿರುವ ಚಿತ್ರ ಚೇಸ್. ವಿಲೋಕ್ ಶೆಟ್ಟಿ ಅವರ ನಿರ್ದೇಶನದಲ್ಲಿ ತಯಾರಾಗಿರುವ ಈ ಚಿತ್ರದ ಟೀಸರ್ ಅನಾವರಣ ಕಾರ್ಯಕ್ರಮ ಇತ್ತೀಚೆಗೆ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ನೆರವೇರಿತು. ಈ ಸಮಾರಂಭದಲ್ಲಿ ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕರಾದ ಎಸ್.ಕೆ. ಭಗವಾನ್, ಓಂ ಸಾಯಿಪ್ರಕಾಶ್ ಹಾಗೂ ಬರಗೂರು ರಾಮಚಂದ್ರಪ್ಪ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಯುವ ಪ್ರತಿಭೆಗಳ ಹೊಸ ಪ್ರಯತ್ನಕ್ಕೆ ಶುಭ ಹಾರೈಸಿದ್ದು ವಿಶೇಷವಾಗಿತ್ತು. ಚೇಸ್ ಚಿತ್ರತಂಡ ಈ ಮೂವರು ದಿಗ್ಗಜರನ್ನು ಆತ್ಮೀಯವಾಗಿ ಬರಮಾಡಿಕೊಂಡು ಸನ್ಮಾನಿಸಿತು. ಈಗಿನ ಕಾಲದ ಜನರಿಗೆ ಹಿಡಿಸುವಂಥ ಹೊಸ ಶೈಲಿಯಲ್ಲಿ ಚಿತ್ರವನ್ನು ನಿರ್ಮಿಸಿರುವ ಈ ಯುವ ತಂಡಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಬರಲಿ ಎಂಬ ಶುಭ ಹಾರೈಕೆಯ ಮಾತುಗಳು ದಿಗ್ಗಜರಿಂದ ಕಾಣಿಕೆಯಾಗಿ ಸಿಕ್ಕಿತು.

    ಕ್ರೈಂ, ಥ್ರಿಲ್ಲರ್, ಮಿಸ್ಟ್ರಿ ಕಥಾನಕ ಒಳಗೊಂಡ ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ರಾಧಿಕಾ ನಾರಾಯಣ್, ಅವಿನಾಶ್ ನರಸಿಂಹರಾಜು, ಶೀತಲ್ ಶೆಟ್ಟಿ, ಅರ್ಜುನ್ ಯೋಗಿ, ಅರವಿಂದರಾವ್, ಪ್ರಮೋದ್ ಶೆಟ್ಟಿ, ರಾಜೇಶ್ ನಟರಂಗ, ರೆಹಮಾನ್ ಹಾಗೂ ಬಾಲಿವುಡ್‍ನ ಎಬಿಸಿಡಿ ಚಿತ್ರದಲ್ಲಿ ನಟಿಸಿದ ಸುಶಾಂತ್ ಪೂಜಾರಿ ಸಹ ನಟಿಸಿದ್ದಾರೆ.

    ನಿರ್ದೇಶಕ ವಿಲೋಕ್ ಶೆಟ್ಟಿ ಮಾತನಾಡಿ, ಈ ಚಿತ್ರ ನಮ್ಮ ತಂಡದ 2 ವರ್ಷಗಳ ಪ್ರಯತ್ನದ ಫಲ. ನಮ್ಮ ಚಿತ್ರದ ಟೀಸರನ್ನು ಹಿರಿಯ ನಿರ್ದೇಶಕರಿಂದಲೇ ಬಿಡುಗಡೆ ಮಾಡಿಸಿದರೆ ಅರ್ಥಪೂರ್ಣವಾಗಿರುತ್ತೆ ಎಂದು ಆಹ್ವಾನಿಸಿದಾಗ ಅವರೆಲ್ಲ ಪ್ರೀತಿಯಿಂದ ಬಂದು ಹರಸಿದ್ದಾರೆ. ಬಹಳಷ್ಟು ಕಲಾವಿರು ಈ ಚಿತ್ರದಲ್ಲಿ ಅಭಿನಯಿಸಿರುವುದರಿಂದ ಅವರೆಲ್ಲರ ಡೇಟ್ಸ್ ಹೊಂದಿಸಿಕೊಂಡು ಶೂಟ್ ಮಾಡುವುದು ಸ್ವಲ್ಪ ತಡವಾಯಿತು ಎಂದು ಹೇಳಿದರು.

    ನಾಯಕಿ ರಾಧಿಕಾ ನಾರಾಯಣ್ ಮಾತನಾಡಿ, ನನ್ನ ಕೆರಿಯರ್‍ನಲ್ಲೇ ಇಂಥ ಪಾತ್ರ ಮಾಡಿಲ್ಲ, ಇದು ನನಗೆ ತುಂಬಾ ವಿಶೇಷ ಪಾತ್ರ. ಪೊಲೀಸ್ ಇನ್‍ಸ್ಪೆಕ್ಟರ್ ಟ್ರೈನಿಂಗ್ ಪಡೆಯುತ್ತಿರುವ ಯುವತಿಯಾಗಿ ನಾನು ಅಭಿನಯಿಸಿದ್ದೇನೆ ಎಂದು ಹೇಳಿದರು. ನಂತರ ನಟ ಸುಶಾಂತ್ ಪೂಜಾರಿ ಮಾತನಾಡಿ ನನ್ನ ತಾಯಿ ಉಡುಪಿಯವರು, ನಾನು ಇಲ್ಲೇ ಹುಟ್ಟಿದ್ದರೂ ಹಿಂದಿ ಚಿತ್ರರಂಗದಲ್ಲಿ ಕೆಲಸ ಮಾಡಿದ್ದೇನೆ. ನನಗೆ ತುಂಬಾ ಸ್ಪೆಷಲ್ ರೋಲ್ ಈ ಚಿತ್ರದಲ್ಲಿದೆ ಎಂದು ಹೇಳಿದರು.

    ನಟ ಅರವಿಂದರಾವ್ ಮಾತನಾಡಿ ಬರೀ ಇನ್‍ಸ್ಪೆಕ್ಟರ್ ಪಾತ್ರಗಳನ್ನೇ ಮಾಡಿ ಬೇಸತ್ತಿದ್ದ ನನಗೆ ಈ ಚಿತ್ರದಲ್ಲಿ ಒಬ್ಬ ಡಾಕ್ಟರ್ ಪಾತ್ರ ಕೊಟ್ಟಿದ್ದರು. ಕನ್ನಡದಲ್ಲಿ ಈ ಥರದ ಸಿನಿಮಾ ಬಂದಿಲ್ಲ ಎಂದು ಹೇಳಿದರು. ಈ ಚಿತ್ರಕ್ಕೆ ಕಾರ್ತಿಕ್ ಆಚಾರ್ಯ ಅವರ ಸಂಗೀತವಿದ್ದು, ಅನಂತರಾಜ ಅರಸ್ ಕ್ಯಾಮೆರಾ ವರ್ಕ್ ಮಾಡಿದ್ದಾರೆ. ಸಿಂಪ್ಲಿ ಫನ್ ಮೀಡಿಯಾ ನೆಟ್‍ವರ್ಕ್ ಮೂಲಕ ಮನೋಹರ್ ಸುವರ್ಣ, ಪ್ರದೀಪ್ ಶೆಟ್ಟಿ, ಪ್ರಶಾಂತ್ ಶೆಟ್ಟಿ ಅವರ ನಿರ್ಮಾಣದ ಚೇಸ್ ಚಿತ್ರ ರಿಲೀಸ್‍ಗೆ ರೆಡಿಯಾಗಿದ್ದು ಸದ್ಯದಲ್ಲೇ ತೆರೆಗೆ ಬರಲಿದೆ.

  • ಸಿನಿಮೀಯ ಶೈಲಿಯಲ್ಲಿ ಚೇಸ್ ಮಾಡಿ, ಗುಂಡು ಹಾರಿಸಿ ದರೋಡೆಕೋರರ ಬಂಧನ

    ಸಿನಿಮೀಯ ಶೈಲಿಯಲ್ಲಿ ಚೇಸ್ ಮಾಡಿ, ಗುಂಡು ಹಾರಿಸಿ ದರೋಡೆಕೋರರ ಬಂಧನ

    ಬೆಂಗಳೂರು: ನಗರದ ಹೊರವಲಯದ ದೇವನಹಳ್ಳಿಯ ಬಳಿ ಪೊಲೀಸರು ಸಿನಿಮೀಯ ಶೈಲಿಯಲ್ಲಿ ದರೋಡೆಕೋರರನ್ನು ಚೇಸ್ ಮಾಡಿ, ಗುಂಡು ಹಾರಿಸುವ ಮೂಲಕ ಇಬ್ಬರನ್ನೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಉದಯ ಹಾಗೂ ಪವನ್ ಬಂಧಿತ ಆರೋಪಿಗಳಾಗಿದ್ದಾರೆ. ಬುಧವಾರ ಸಂಜೆ ಇಬ್ಬರು ದರೋಡೆಕೋರರ ಖಚಿತ ಮಾಹಿತಿ ಮೇರೆಗೆ ಯಲಹಂಕ ಇನ್ಸ್ ಪೆಕ್ಟರ್ ಮಂಜೇಗೌಡ ನೇತೃತ್ವದ ತಂಡ ದಾಳಿ ನಡೆಸಿದೆ. ಈ ವೇಳೆ ಇಬ್ಬರು ಪೊಲೀಸರನ್ನು ಕಂಡು ಸ್ಥಳದಿಂದ ಪರಾರಿಯಾಗಿದ್ದಾರೆ. ಕೂಡಲೇ ಅವರನ್ನು ಚೇಸ್ ಮಾಡಿದ ಪೊಲೀಸರು, ದೇವನಹಳ್ಳಿ ಸಮೀಪದ ಅಕ್ಕುಪೇಟೆ ಬೊಮ್ಮವಾರ ಮೀಸಲು ಅರಣ್ಯ ಪ್ರದೇಶದಲ್ಲಿ ಹಿಡಿದಿದ್ದಾರೆ.

    ತಪ್ಪಿಸಿಕೊಳ್ಳಲು ದರೋಡೆಕೋರರು ಪೊಲೀಸರು ಹಾಗೂ ಅವರ ಕಾರುಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಕೂಡಲೇ ಪೊಲೀಸರು ತಮ್ಮ ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದಾರೆ. ಇದರಿಂದಾಗಿ ಇಬ್ಬರು ದರೋಡೆಕೋರರ ಕಾಲಿಗೆ ಗುಂಡು ತಗುಲಿದ್ದು, ಅವರನ್ನು ವಶಕ್ಕೆ ಪಡೆದುಕೊಂಡಿದ್ದರು. ಸದ್ಯ ಇಬ್ಬರಿಗೂ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಬಂಧಿತ ಆರೋಪಿಗಳು ಕಳೆದ ಎರಡು ದಿನಗಳ ಹಿಂದೆ ಗಣೇಶ ಹಬ್ಬದ ಚಂದಾ ವಸೂಲಿಮಾಡುತ್ತಿದ್ದ ವೃದ್ಧರೊಬ್ಬರನ್ನು ಸುಲಿಗೆ ಮಾಡಿದ್ದರು. ಈ ಸಂಬಂಧ ಯಲಹಂಕ ಠಾಣೆಯಲ್ಲಿ ದೂರು ದಾಖಲಾಗಿತ್ತು, ಖಚಿತ ಮಾಹಿತಿ ಮೇರೆಗೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮನೆಮುಂದೆ ನಿಂತಿದ್ದ ಮಹಿಳೆ ಕುತ್ತಿಗೆಗೆ ಕನ್ನ – ಚೋರನನ್ನು ಚೇಸ್ ಮಾಡಿ ಸೆರೆ ಹಿಡಿದ ಯುವಕ

    ಮನೆಮುಂದೆ ನಿಂತಿದ್ದ ಮಹಿಳೆ ಕುತ್ತಿಗೆಗೆ ಕನ್ನ – ಚೋರನನ್ನು ಚೇಸ್ ಮಾಡಿ ಸೆರೆ ಹಿಡಿದ ಯುವಕ

    ಬೆಂಗಳೂರು: ನಗರದಲ್ಲಿ ಸರಗಳ್ಳತನ ಹೆಚ್ಚುತ್ತಿದ್ದು, ಸರಗಳ್ಳನನ್ನು ಚೇಸ್ ಮಾಡಿ ಯುವಕನೊಬ್ಬ ಸೆರೆ ಹಿಡಿದಿರುವ ಘಟನೆ ಕುಮಾರಸ್ವಾಮಿ ಲೇಔಟ್ ನ ದೇವರಕೆರೆಯಲ್ಲಿ ನಡೆದಿದೆ.

    ಆರೋಪಿ ಚೇತನ್ ಶ್ವೇತಾ ಅವರ ಸುಮಾರು 70 ಗ್ರಾಂ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗುತ್ತಿದ್ದನು. ಬಳಿಕ ಯುವಕ ಶರತ್ ಆರೋಪಿಯನ್ನು ಚೇಸ್ ಮಾಡಿ ಹಿಡಿದು ಕುಮಾರಸ್ವಾಮಿ ಲೇಔಟ್ ನ ಪೊಲೀಸರಿಗೆ ಒಪ್ಪಿಸಿದ್ದಾರೆ.

    ಘಟನೆ ವಿವರ:
    ಗುರುವಾರ ಶ್ವೇತಾ ಅವರ ಬರ್ತ್ ಡೇ ಇತ್ತು. ಆದ್ದರಿಂದ ಹುಟ್ಟುಹಬ್ಬವನ್ನು ಮುಗಿಸಿ ಮನೆ ಮುಂದೆ ಸಂಬಂಧಿಕರೊಂದಿಗೆ ಮಾತನಾಡುತ್ತಾ ನಿಂತಿದ್ದರು. ಈ ವೇಳೆ ಆರೋಪಿ ವಾಕಿಂಗ್ ಮಾಡುವ ರೀತಿ ಶ್ವೇತಾ ಅವರ ಸರವನ್ನು ಎಗರಿಸಿ ಪರಾರಿಯಾಗಿದ್ದಾನೆ. ಆಗ ಶ್ವೇತಾ ಕೂಗಿಕೊಂಡಿದ್ದಾರೆ. ಇದೇ ವೇಳೆ ಸ್ಥಳದಲ್ಲಿದ್ದ ಶರತ್ ಸರಗಳ್ಳತನವನ್ನು ಗಮನಿಸಿ ತನ್ನ ಬೈಕಿನಲ್ಲಿ ಚೇಸ್ ಮಾಡಿಕೊಂಡು ಹೋಗಿದ್ದಾರೆ. ಶರತ್ ಸುಮಾರು 2 ಕಿ.ಮೀ ವರೆಗೆ ಆರೋಪಿಯನ್ನು ಚೇಸ್ ಮಾಡಿದ್ದಾರೆ.

    ಕೊನೆಗೆ ನಗರದ ಇಸ್ರೋ ಲೇಔಟ್ ನಲ್ಲಿ ಶರತ್ ಆರೋಪಿಯನ್ನು ಹಿಡಿದಿದ್ದಾರೆ. ಬಳಿಕ ಕುಮಾರಸ್ವಾಮಿ ಲೇಔಟ್ ನ ಪೊಲೀಸರಿಗೆ ಕಳ್ಳನನ್ನು ಒಪ್ಪಿಸಿದ್ದಾರೆ. ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಯುವಕ ಶರತ್ ಸಾಹಸದಿಂದ ಮತ್ತೆ ಶ್ವೇತಾ ಅವರಿಗೆ ಮರಳಿ ಅವರ 70 ಗ್ರಾಂ ಸರ ಸಿಕ್ಕಿದೆ.