Tag: ಚೆನ್ನೆ

  • ಆನ್‍ಲೈನ್ ಕ್ಲಾಸಿಗೆ ಹಾಜರಾಗಲು ಮೊಬೈಲ್ ಕದ್ದು ಸಿಕ್ಕಿಬಿದ್ದ ಬಾಲಕನಿಗೆ ಪೊಲೀಸ್ ಸರ್ಪ್ರೈಸ್ ಶಿಕ್ಷೆ

    ಆನ್‍ಲೈನ್ ಕ್ಲಾಸಿಗೆ ಹಾಜರಾಗಲು ಮೊಬೈಲ್ ಕದ್ದು ಸಿಕ್ಕಿಬಿದ್ದ ಬಾಲಕನಿಗೆ ಪೊಲೀಸ್ ಸರ್ಪ್ರೈಸ್ ಶಿಕ್ಷೆ

    ಚೆನ್ನೈ: ಕೊರೊನಾ ಮಹಾಮಾರಿ ಭಾರತಕ್ಕೆ ಕಾಲಿಟ್ಟ ಬಳಿಕ ಜನ-ಜೀವನ ಅಸ್ತವ್ಯಸ್ತವಾಗಿದೆ. ಕಳೆದ ಮಾರ್ಚ್ ತಿಂಗಳಿನಿಂದ ಕೊರೊನಾ ಭೀತಿಯಿಂದ ಲಾಕ್‍ಡೌನ್ ಹೇರಲಾದ ಬಳಿಕ ಶಾಲಾ- ಕಾಲೇಜುಗಳನ್ನು ಬಂದ್ ಮಾಡಲಾಗಿದ್ದು, ಇನ್ನೂ ಕೆಲವೆಡೆ ಶಾಲೆಗಳನ್ನು ತೆರೆಯಲು ಮುಂದಾಗಿಲ್ಲ. ಹೀಗಾಗಿ ಶಿಕ್ಷಕರು ಆನ್‍ಲೈನ್ ಕ್ಲಾಸಿನತ್ತ ಮುಖ ಮಾಡಿದ್ದಾರೆ. ಆದರೆ ಈ ಆನ್‍ಲೈನ್ ಕ್ಲಾಸ್ ಬಡ ಮಕ್ಕಳಿಗೆ ಹೊರೆಯಾಗಿದೆ.

    ಅಂತೆಯೇ ಚೆನ್ನೈ ಮೂಲದ ಬಡ ಬಾಲಕನಿಗೆ ಆನ್‍ಲೈನ್ ಕ್ಲಾಸಿಗೆ ಹಾಜರಾಗಲು ಮೊಬೈಲ್ ಖರೀದಿಸಲು ಸಾಧ್ಯವಾಗಿಲ್ಲ. ಹೀಗಾಗಿ ಆತ ಕಳ್ತನ ಮೊರೆ ಹೋಗಿದ್ದು, ಮೊಬೈಲ್ ಒಂದನ್ನು ಕದ್ದಿದ್ದಾನೆ. ಹೌದು. 13 ವರ್ಷದ ಕಾರ್ಪೋರೇಶನ್ ಶಾಲೆಯ ಬಾಲಕನ ತಂದೆ ಬಿಸ್ಕೆಟ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರೆ ತಾಯಿ, ಬೇರೆಯವರ ಮನೆಗೆ ಕೆಲಸಕ್ಕೆ ಹೋಗುತ್ತಿದ್ದಾರೆ. ಈ ಮೂಲಕ ಬದುಕಿನ ಬಂಡಿ ಸಾಗಿಸುತ್ತಿದ್ದಾರೆ. ಈ ಮಧ್ಯೆ ಶಿಕ್ಷಕರು ಆನ್‍ಲೈನ್ ಕ್ಲಾಸಿಗೆ ಹಾಜರಾಗುವಂತೆ ಒತ್ತಡ ಹೇರುತ್ತಿದ್ದರು. ಬಾಲಕ ಬಡ ಕುಟುಂಬದವನಾಗಿದ್ದರಿಂದ ಮಗನಿಗೆ ಮೊಬೈಲ್ ಕೊಡಿಸಲು ಪೋಷಕರಿಗೆ ಸಾಧ್ಯವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

    ಮೊಬೈಲ್ ತೆಗೆದುಕೊಳ್ಳಲು ಸಾಧ್ಯವಾಗದಿದ್ದರಿಂದ ಅಕ್ಕ-ಪಕ್ಕ ಮನೆಯ ಇಬ್ಬರು ತಮ್ಮ ಜೊತೆ ಕಳ್ಳತನಕ್ಕೆ ಬಂದರೆ ನಿನಗೆ ಮೊಬೈಲ್ ಕೊಡಿಸುವುದಾಗಿ ಬಾಲಕನಿಗೆ ಆಮಿಷವೊಡ್ಡಿದ್ದಾರೆ. ಇತ್ತ ಒಂದು ವೇಳೆ ಕಳ್ಳತನ ಮಾಡುವಾಗ ಸಿಕ್ಕಿಬಿದ್ದರೆ ಬಾಲಕನನ್ನೇ ಬಲಿವಶು ಮಾಡುವ ಹುನ್ನಾರ ಆ ಇಬ್ಬರು ವ್ಯಕ್ತಿಗಳದ್ದಾಗಿತ್ತು. ಇಬ್ಬರು ವ್ಯಕ್ತಿಗಳ ಮಾತು ನಂಬಿ, ತನಗೆ ಮೊಬೈಲ್ ಸಿಗುತ್ತೆ ಎಂಬ ಆಸೆಯಿಂದ ಬಾಲಕ ಅವರ ಜೊತೆ ಕಳ್ಳತನಕ್ಕೆ ಇಳಿದು, ಎಲ್ಲರೂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಇದನ್ನೂ ಓದಿ: ಆನ್‍ಲೈನ್ ಶಿಕ್ಷಣ- ನೆಟ್‍ವರ್ಕ್ ಅರಸಿ ಇಂದಿಗೂ ವಿದ್ಯಾರ್ಥಿಗಳ ಅಲೆದಾಟ

    ಬಂಧಿತರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ಬಾಲಕ ತನ್ನ ಪರಿಸ್ಥಿತಿಯ ಬಗ್ಗೆ ಪೊಲೀಸರಿಗೆ ಮನಮುಟ್ಟುವಂತೆ ಹೇಳಿದ್ದಾನೆ. ಇದರಿಂದ ಬೇಸರಗೊಂಡ ಪೊಲೀಸರು, ಆತನಿಗೆ ತಾವೇ ಖುದ್ದಾಗಿ ಹೊಸ ಮೊಬೈಲ್ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಇದನ್ನೂ ಓದಿ: ಫಿಡ್ಜ್ ಟ್ರೇ ಬಳಸಿ ಆನ್‍ಲೈನ್ ಕ್ಲಾಸ್- ಶಿಕ್ಷಕಿ ಐಡಿಯಾಕ್ಕೆ ನೆಟ್ಟಿಗರು ಫಿದಾ

  • ಕಾಲು ಕಳೆದುಕೊಂಡರೂ ಪ್ರೀತಿ ಕೈ ಹಿಡಿಯಿತು – ಆಸ್ಪತ್ರೆಯಲ್ಲೇ ಮದ್ವೆಯಾದ ಜೋಡಿ

    ಕಾಲು ಕಳೆದುಕೊಂಡರೂ ಪ್ರೀತಿ ಕೈ ಹಿಡಿಯಿತು – ಆಸ್ಪತ್ರೆಯಲ್ಲೇ ಮದ್ವೆಯಾದ ಜೋಡಿ

    ಚೆನ್ನೈ: ಪ್ರೀತಿ ಶಾಶ್ವತ ಅನ್ನೋ ಮಾತೇ ಇದೆ. ನಿಜವಾಗಿ ಪ್ರೀತಿಸಿದ್ದರೆ ಎಂತಹ ಕಠಿಣ ಸಂದರ್ಭಗಳಲ್ಲೂ ಜೋಡಿಗಳು ಒಬ್ಬರಿಗೊಬ್ಬರು ಆಸರೆ ಆಗಿರುತ್ತಾರೆ. ಇದಕ್ಕೆ ಸಾಕ್ಷಿಯಾಗಿ ಯುವ ಜೋಡಿಯೊಂದು ಕಾಲು ಕಳೆದುಕೊಂಡಿದ್ದರೂ ಆಸ್ಪತ್ರೆಯಲ್ಲಿ ಮದುವೆಯಾಗಿದ್ದಾರೆ.

    ಶಿಲ್ಪಾ ಮತ್ತು ವಿಜಯ್ ವೆಲ್ಲೋರ್ ನ ವನಿಯಂಬಾಡಿ ಸರ್ಕಾರಿ ಆಸ್ಪತ್ರೆಯಲ್ಲಿ ಶನಿವಾರ ವಿವಾಹವಾಗಿದ್ದಾರೆ. ಜನವರಿ 23ರಂದು ವಿಜಯ್ ರೈಲಿನಿಂದ ಕೆಳಕ್ಕೆ ಬಿದ್ದು ಕಾಲುಗಳನ್ನೇ ಕಳೆದುಕೊಂಡಿದ್ದರು. ಸದ್ಯ ವನಿಯಂಬಾಡಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದೇ ಆಸ್ಪತ್ರೆಯಲ್ಲಿ ಶಿಲ್ಪಾ ಹಾಗೂ ವಿಜಯ್ ವಿವಾಹ ನೆರವೇರಿದೆ.

    ನಡೆದಿದ್ದೇನು?
    ಶಿಲ್ಪಾ ಮೂಲತಃ ಊಟಿಯವರು. ಕೊಯಂಬತ್ತೂರು ಕಾಲೇಜಿನಲ್ಲಿ ಬಿಎಸ್ ಸಿ ಓದುತ್ತಿದ್ದಾಗ ವಿಜಯ್ ಪರಿಚಯವಾಗಿತ್ತು. ವಿಜಯ್ ಕೊಯಂಬತ್ತೂರಿನಲ್ಲಿ ಡೇಟಾ ಎಂಟ್ರಿ ಕೆಲಸ ಮಾಡುತ್ತಿದ್ದರು. ಶಿಲ್ಪಾ ಸಹ ಕೆಲಸ ಹುಡುಕುತ್ತಿದ್ದರು. ಬೆಂಗಳೂರಿಗೆ ಸಂದರ್ಶನಕ್ಕಾಗಿ ಬಂದಿದ್ದ ವಿಜಯ್ ವಾಪಸ್ ತೆರಳುವ ಸಂದರ್ಭದಲ್ಲಿ ಕೋಲಾರ ಜಿಲ್ಲೆಯ ಬಂಗಾರಪೇಟೆ ಸಮೀಪದಲ್ಲಿ ಆಕಸ್ಮಿಕವಾಗಿ ಟ್ರೈನ್ ನಿಂದ ಬಿದ್ದಿದ್ದಾರೆ.

    ತಕ್ಷಣ ವಿಜಯ್ ಗೆ ಕರ್ನಾಟಕದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು. ನಂತರ ವಿಜಯ್ ಅವರನ್ನು ವಾನಿಯಂಬಾಡಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಸದ್ಯ ವಿಜಯ್‍ಗೆ ಫಿಸಿಯೋಥೆರಪಿ ನಡೆಯುತ್ತಿದ್ದು, ಶೀಘ್ರದಲ್ಲೇ ವಾಕರ್ ಸಹಾಯದಿಂದ ನಡೆದಾಡಬಲ್ಲರು ಅಂತಾ ವೈದ್ಯರು ತಿಳಿಸಿದ್ದಾರೆ.

    ಈ ಅಪಘಾತದ ಬಳಿಕ ಮದುವೆಗೆ ಶಿಲ್ಪಾಳ ತಾಯಿ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಆದ್ರೆ ಪೋಷಕರ ಮಾತನ್ನು ಲೆಕ್ಕಿಸದೇ ಶಿಲ್ಪಾ ತಾನು ಮನಸಾರೆ ಪ್ರೀತಿಸಿದ ಯುವಕನನ್ನು ಆಸ್ಪತ್ರೆಯಲ್ಲೇ ವಿವಾಹವಾಗಿದ್ದಾರೆ. ಆಸ್ಪತ್ರೆಯಲ್ಲಿದ್ದ ವೈದ್ಯರು, ಸಿಬ್ಬಂದಿ ನವದಂಪತಿಗೆ ಶುಭ ಕೋರಿದ್ದಾರೆ.

    ಶಿಲ್ಪಾ ಮತ್ತು ವಿಜಯ್ ತಮ್ಮ ಶಿಕ್ಷಣ ಮುಗಿದ ಮೇಲೆ ಕುಟುಂಬದವರ ಒಪ್ಪಿಗೆ ಮೇರೆಗೆ ಮದುವೆಯಾಗಬೇಕು ಎಂದುಕೊಂಡಿದ್ದರು ಎಂದು ಶಿಲ್ಪಾಳ ಸಂಬಂಧಿಕರು ತಿಳಿಸಿದ್ದಾರೆ.