Tag: ಚೆನಾಬ್ ನದಿ

  • ಪಾಕಿಸ್ತಾನದ ಬುಡಕ್ಕೆ `ಜಲ’ಬಾಂಬ್ ಹಾಕಿದ ಭಾರತ!

    ಪಾಕಿಸ್ತಾನದ ಬುಡಕ್ಕೆ `ಜಲ’ಬಾಂಬ್ ಹಾಕಿದ ಭಾರತ!

    – 2 ಡ್ಯಾಂನ ಎಲ್ಲಾ ಗೇಟ್‌ ಬಂದ್‌
    – ಚೆನಾಬ್‌ ನದಿಗೆ ನೀರು ಹರಿಸುವುದನ್ನು ನಿಲ್ಲಿಸಿದ ಭಾರತ
    – ಮೊದಲ ಬಾರಿಗೆ ನದಿಯನ್ನು ದಾಟುತ್ತಿದ್ದಾರೆ ಜನ

    ಶ್ರೀನಗರ: ಪಹಲ್ಗಾಮ್‌ ಭೀಕರ ನರಮೇಧಕ್ಕೆ (Pahalgam Terror Attack) ಪ್ರತಿಯಾಗಿ ಭಾರತ ಈಗ ಪಾಕಿಸ್ತಾನದ ಬುಡಕ್ಕೆ `ಜಲ’ಬಾಂಬ್ ಹಾಕಿದೆ. ಸಿಂಧೂ ನದಿಯ (Sindhu River) ಒಪ್ಪಂದವನ್ನು ಭಾರತ ಅಮಾನತಿನಲ್ಲಿಟ್ಟ ಬೆನ್ನಲ್ಲೇ ಚೆನಾಬ್ ನದಿಗೆ (Chenab river) ಜಲಾಶಯಗಳಿಂದ ನೀರು ಹರಿಸುವುದನ್ನೇ ನಿಲ್ಲಿಸಿದೆ.

    ಚೆನಾಬ್ ನದಿಗೆ ಅಡ್ಡಲಾಗಿ ರಾಮಬನದಲ್ಲಿ ಬಾಗ್ಲಿಹಾರ್ ಮತ್ತು ರಿಯಾಸಿಯಲ್ಲಿ ಸಲಾಲ್ ಜಲವಿದ್ಯುತ್ ಅಣೆಕಟ್ಟುಗಳನ್ನು ನಿರ್ಮಾಣ ಮಾಡಲಾಗಿದೆ. ಈಗ ಈ ಎರಡು ಅಣೆಕಟ್ಟಿನಿಂದ ನೀರು ಹರಿಸುವುದನ್ನು ನಿಲ್ಲಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರದ ಝೀಲಂ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕಿಶನ್‌ಗಂಗಾ ಅಣೆಕಟ್ಟಿನಿಂದಲೂ ನೀರು ಹರಿಸುವುದನ್ನು ನಿಲ್ಲಿಸಲು ಸರ್ಕಾರ ಸಿದ್ಧತೆ ನಡೆಸುತ್ತಿದೆ ಎಂದು ವರದಿಯಾಗಿದೆ.

    ಮಾಧ್ಯಮಕ್ಕೆ ಸ್ಥಳೀಯ ವ್ಯಕ್ತಿ ದಿನೇಶ್‌ ಪ್ರತಿಕ್ರಿಯಿಸಿ, ಸರ್ಕಾರ ಪಾಕಿಸ್ತಾನಕ್ಕೆ ನೀರು ಹರಿಯುವುದನ್ನು ನಿಲ್ಲಿಸಿದ್ದಕ್ಕೆ ನಮಗೆ ಸಂತೋಷವಾಗಿದೆ. ಪಾಕಿಸ್ತಾನದ ಪಹಲ್ಗಾಮ್‌ನಲ್ಲಿ ಅವರು ನಮ್ಮ ಪ್ರವಾಸಿಗರನ್ನು ಕೊಂದ ರೀತಿಗೆ ಸೂಕ್ತ ಉತ್ತರ ನೀಡಬೇಕು. ಸರ್ಕಾರ ತೆಗೆದುಕೊಳ್ಳುವ ಯಾವುದೇ ನಿರ್ಧಾರದಲ್ಲಿ ನಾವು ಅದರೊಂದಿಗಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ದೊಡ್ಡ ದುರಂತ ತಪ್ಪಿಸಿದ ಭಾರತೀಯ ಸೇನೆ – 5 ಜೀವಂತ ಬಾಂಬ್ ವಶಕ್ಕೆ

    ಕೆಲವು ದಿನಗಳ ಹಿಂದೆ ಬಗ್ಲಿಹಾರ್ ಜಲಾಶಯ ಮೇಲ್ಭಾಗದಲ್ಲಿ ಭಾರಿ ಮಳೆಯಾಗಿದ್ದರಿಂದ ನೀರು ಹರಿಸಲು ಗೇಟ್‌ ತಗೆಯಲಾಗಿತ್ತು. ಇದರಿಂದ ತಗ್ಗು ಪ್ರದೇಶವಾಗಿರುವ ರಿಯಾಸಿ ಮತ್ತು ಅಖ್ನೂರ್‌ನ ತಗ್ಗು ಪ್ರದೇಶಗಳಲ್ಲಿ ಪ್ರವಾಹ ನಿರ್ಮಾಣವಾಗಿತ್ತು. ಪಾಕಿಸ್ತಾನದಲ್ಲೂ ಸ್ವಲ್ಪ ಸಮಸ್ಯೆಯಾಗಿತ್ತು. ಇದನ್ನೂ ಓದಿ: ಯುದ್ಧ ಕಾರ್ಮೋಡದ ನಡುವೆ BSFಗೆ ಇನ್ನಷ್ಟು ಬಲ – 16 ಹೊಸ ಬೆಟಾಲಿಯನ್ ಸೇರ್ಪಡೆ?

    ಇಂದು ಬೆಳಗ್ಗೆ ಬಾಗ್ಲಿಹಾರ್ ಅಣೆಕಟ್ಟಿನ ಗೇಟ್‌ಗಳನ್ನು ಮುಚ್ಚಿದ್ದರಿಂದ ನೀರಿನ ಹರಿವು ಸಂಪೂರ್ಣವಾಗಿ ನಿಲ್ಲಿಸಲಾಗಿದೆ. ಇದರೊಂದಿಗೆ ರಾಮಬನ್‌ನಲ್ಲಿರುವ ಚೆನಾಬ್ ನದಿ ಪಾತ್ರ ಮತ್ತು ಜಲಾಶಯದ ಕೆಳಭಾಗದ ಸಂಪೂರ್ಣವಾಗಿ ಬತ್ತಿ ಹೋದಂತೆ ಕಾಣುತ್ತಿದೆ.

    ರಿಯಾಸಿಯಲ್ಲಿರುವ ಸಲಾಲ್ ಅಣೆಕಟ್ಟಿನಿಂದ ನೀರಿನ ಹರಿವು ಕಡಿಮೆಯಾಗಿದೆ ಮತ್ತು ಅಖ್ನೂರ್ ಮತ್ತು ಜೌರಿಯನ್‌ನಲ್ಲಿ ನೀರಿನ ಮಟ್ಟವೂ ಗಣನೀಯವಾಗಿ ಕಡಿಮೆಯಾಗಿದೆ. ಇದರಿಂದಾಗಿ ಪಾಕಿಸ್ತಾನದಲ್ಲಿ ನೀರಿನ ಬಿಕ್ಕಟ್ಟನ್ನು ಉಲ್ಬಣಗೊಳ್ಳುವ ಸಾಧ್ಯತೆಯಿದೆ.

    ಅಖ್ನೂರ್ ಪ್ರದೇಶದಲ್ಲಿ ನೀರಿನ ಮಟ್ಟ ಭಾರೀ ಇಳಿಕೆಯಾಗಿದ್ದು ಜನರು ಮೊದಲ ಬಾರಿಗೆ ನದಿಯನ್ನು ದಾಟುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

  • ಕಾಶ್ಮೀರದಲ್ಲಿ ನಿರ್ಮಾಣವಾಗ್ತಿದೆ ಐಫೆಲ್ ಟವರ್‍ಗಿಂತ ಎತ್ತರದ ಬ್ರಿಡ್ಜ್

    ಕಾಶ್ಮೀರದಲ್ಲಿ ನಿರ್ಮಾಣವಾಗ್ತಿದೆ ಐಫೆಲ್ ಟವರ್‍ಗಿಂತ ಎತ್ತರದ ಬ್ರಿಡ್ಜ್

    ನವದೆಹಲಿ: ಐಫೆಲ್ ಟವರ್‍ ಗಿಂತ ಎತ್ತರವಾದ ರೈಲ್ವೆ ಸೇತುವೆಯೊಂದು ಜಮ್ಮು ಕಾಶ್ಮೀರದ ಚೇನಾಬ್ ನದಿಗೆ ಅಡ್ಡಲಾಗಿ ಕಟ್ಟಲಾಗ್ತಿದ್ದು, 2019ರೊಳಗೆ ಸೇತುವೆ ನಿರ್ಮಾಣ ಪೂರ್ಣವಾಗಲಿದೆ. ಈ ಸೇತುವೆ ಜಗತ್ತಿನ ಅತ್ಯಂತ ಎತ್ತರದ ಸೇತುವೆ ಆಗಲಿದೆ.

    ಈ 1.3 ಕಿ.ಮೀ ಉದ್ದದ ಸೇತುವೆ ಜಮ್ಮುವಿನ ಕತ್ರಾದಲ್ಲಿರುವ ಬಕ್ಕಲ್ ಹಾಗೂ ಶ್ರೀನಗರದ ಕೌರಿ ನಡುವೆ ಸಂಪರ್ಕ ಕಲ್ಪಿಸಲಿದೆ. ಸೇತುವೆ ನಿರ್ಮಾಣಕ್ಕಾಗಿ 24,000 ಟನ್‍ಗಳಷ್ಟು ಸ್ಟೀಲ್ ಬಳಸಲಾಗ್ತಿದೆ. ಗುಮ್ಮಟದ ಆಕಾರದಲ್ಲಿ ಕಮಾನು ನಿರ್ಮಿಸಿ ಅದರ ಮೇಲೆ ಬ್ರಿಡ್ಜ್ ನಿರ್ಮಾಣವಾಗಲಿದೆ. ವಿಶೇಷವಾದ ಸ್ಫೋಟ ನಿರೋಧಕ ಸ್ಟೀಲ್‍ನಿಂದ ಈ ಸೇತುವೆ ನಿರ್ಮಾಣವಾಗ್ತಿದ್ದು, ಉಗ್ರರ ದಾಳಿಯನ್ನೂ ತಡೆದುಕೊಳ್ಳಲಿದೆ. ಅತ್ಯಂತ ಕಡಿಮೆ ಉಷ್ಣಾಂಶ ಹಾಗೂ ವೇಗವಾಗಿ ಬೀಸುವ ಗಾಳಿಯನ್ನೂ ತಡೆದುಕೊಳ್ಳಲಿದೆ. 1,110 ಕೋಟಿ. ರೂ ವೆಚ್ಚದಲ್ಲಿ ಸೇತುವೆ ನಿರ್ಮಾಣವಾಗ್ತಿದೆ.

    ಈ ಸೇತುವೆ ನಿರ್ಮಾಣ ಪೂರ್ಣವಾದ ನಂತರ ಚೀನಾದ 275 ಮೀ ಉದ್ದದ ಶೂಬೇ ರೈಲ್ವೆ ಸೇತುವೆಯ ದಾಖಲೆಯನ್ನ ಮುರಿಯಲಿದೆ. ಫ್ರಾನ್ಸ್ ನ ಪ್ಯಾರಿಸ್ ನಲ್ಲಿರುವ ಐಫೆಲ್ ಟವರ್ 324 ಮೀ(1062.99 ಅಡಿ) ಎತ್ತರವಿದ್ದು ಈ ಬ್ರಿಡ್ಜ್ ಅದಕ್ಕಿಂತ 35 ಮೀ ಎತ್ತರವಿರಲಿದೆ. ಅಂದ್ರೆ ಈ ಸೇತುವೆ ಚೇನಾಬ್ ನದಿಯಿಂದ 359 ಮೀ(1177.82 ಅಡಿ) ಎತ್ತರವಿರಲಿದೆ.

    ಬ್ರಿಡ್ಜ್ ಮತ್ತು ರೈಲ್ವೆ ಪ್ರಯಾಣಿಕರ ರಕ್ಷಣೆಗಾಗಿ ಏರಿಯಲ್ ರಿಂಗ್, ಆನ್‍ಲೈನ್ ನಿರ್ವಹಣೆ ಹಾಗೂ ಎಚ್ಚರಿಕೆಯ ವ್ಯವಸ್ಥೆಗಳು ಇರಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.